ಶನಿವಾರ, ಜುಲೈ 16, 2016

ನಿರ್ಧರಿಸುವ ಸಾಮರ್ಥ್ಯ

೧೬ ಜೂನ್ ೨೦೧೬
(ಲಂಡನ್ನಿನ ಹೌಸ್ ಆಫ್ ಕಾಮನ್ಸ್‌ನಲ್ಲಿ ಜೂನ್ ೧೬, ೨೦೧೬ರಂದು ಗುರುದೇವ ಶ್ರೀ ಶ್ರೀ ರವಿಶಂಕರ ಅವರು ನೀಡಿರುವ ಭಾಷಣ ಕೆಳಕಂಡಂತಿದೆ)

ನ್ನನ್ನು ಹೌಸ್ ಆಫ್ ಕಾಮನ್ಸಿಗೆ ಆಮಂತ್ರಿಸಿದ್ದಕ್ಕಾಗಿ ಸನ್ಮಾನ್ಯ ಮ್ಯಾಥ್ಯೂ ಅವರಿಗೆ ಧನ್ಯವಾದಗಳು! ಇಡೀ ಪ್ರಪಂಚಕ್ಕೆ ಒಂದಕ್ಕಿಂತ ಹೆಚ್ಚು ರೀತಿಯಲ್ಲಿ ಕೊಡುಗೆಯನ್ನು ನೀಡಿರುವ ಈ ಕಟ್ಟಡದಲ್ಲಿ ನಿಮ್ಮೆಲ್ಲರೊಂದಿಗಿರುವುದು ಅಷ್ಟೊಂದು ಸಂತಸದ ವಿಷಯವಾಗಿದೆ.

ಇವತ್ತು ನಾವು, ಸೀಮೆಗಳು ಅಷ್ಟೊಂದು ದೊಡ್ಡ ವಿಷಯವಾಗಿಲ್ಲದೇ ಇರುವಂತಹ ಒಂದು ಯುಗದಲ್ಲಿ ಜೀವಿಸುತ್ತಿದ್ದೇವೆ; ಇದೊಂದು ಜಾಗತಿಕ ಗ್ರಾಮವಾಗಿದ್ದು, ಹಲವಾರು ದಶಕಗಳಷ್ಟು ಮೊದಲಿಗೆ ಹೋಲಿಸಿದರೆ ಸಂಪರ್ಕವು ಅನೇಕ ಪಟ್ಟುಗಳಷ್ಟು ಹೆಚ್ಚಾಗಿದೆ. ತಂತ್ರಜ್ಞಾನದಲ್ಲಿನ ಪ್ರಗತಿಯ ಈ ಯುಗದಲ್ಲಿ ನಾವು ಹಲವಾರು ಸವಾಲುಗಳನ್ನುಕೂಡಾ ಎದುರಿಸುತ್ತಿದ್ದು, ಅವುಗಳನ್ನು ಎದುರಿಸುವಷ್ಟು ನಾವು ಸಶಕ್ತರಾಗಿದ್ದೇವೆಯೇ ಎಂದು ನಾವು ನಮ್ಮಲ್ಲಿ ಕೇಳಿಕೊಳ್ಳಬೇಕು. ಇಂಗ್ಲೆಂಡಿನಂತಹ ಒಂದು ಬಹುಸಂಸ್ಕೃತಿ ಸಮಾಜದಲ್ಲಿ ಕೂಡಾ, ಜನರು ಪ್ರತ್ಯೇಕವಾಗಿ ವಾಸಿಸುವುದು ಅಥವಾ ತಮ್ಮ ಸಮುದಾಯಗಳೊಳಗೆ ಮಾತ್ರ ಪರಸ್ಪರ ಮಾತನಾಡುವುದು, ಇತರರನ್ನು ತಲುಪದೇ ಇರುವುದು ಇಂತಹ ಸಮಸ್ಯೆಗಳು ನಮಗೆ ಕಂಡುಬರುತ್ತವೆ.  

ನಾನೆಲ್ಲೇ ಹೋದರೂ ನನ್ನನ್ನು ನಾನೇ ಕೇಳಿಕೊಳ್ಳುತ್ತೇನೆ, ಸಮಾಜಕ್ಕೆ ನಾನು ಹೇಗೆ ಕೊಡುಗೆಯನ್ನು ನೀಡಬಹುದು, ನಾನು ಯಾವ ರೀತಿ ಪ್ರಯೋಜನಕಾರಿಯಾಗಬಹುದು? ಪರಿಸ್ಥಿತಿಯನ್ನು ಸುಧಾರಿಸಲು ನಾನು ಏನು ಮಾಡಬಹುದು? ಈ ಸಭಾಂಗಣಕ್ಕೆ ನಡೆದುಬರುತ್ತಿರಬೇಕಾದರೆ, ಸಮುದಾಯಗಳನ್ನುಒಂದುಗೂಡಿಸಲು, ತಡೆಗಳನ್ನು ಇಲ್ಲದಾಗಿಸಲು ಮತ್ತು ನಾವೆಲ್ಲರೂ ಜಾಗತಿಕ ನಾಗರಿಕರು ಎಂಬುದನ್ನು ಜನರಿಗೆ ತಿಳಿಯಪಡಿಸಲು ನಾವು ಏನನ್ನು ಮಾಡಬಹುದು ಎಂಬುದನ್ನು ತಿಳಿಯಲು ನಾನು ಮ್ಯಾಥ್ಯೂ ಅವರೊಂದಿಗೆ ವಿಚಾರ ವಿನಿಮಯ ಮಾಡುತ್ತಿದ್ದೆ.

ನಾವು ಎರಡು ವಿಷಯಗಳ ಬಗ್ಗೆ ಗಮನ ಹರಿಸಬೇಕು:

೧. ಜನರ ನಡುವಣ ಸಂಪರ್ಕವನ್ನು ಸುಧಾರಿಸುವುದು.
೨. ಹತಾಶೆ ಮತ್ತು ಒತ್ತಡದ ಮಟ್ಟಗಳನ್ನು ಕಡಿಮೆ ಮಾಡುವುದು.

ಸಮಾಜದಲ್ಲಿ ಅಸಹಿಷ್ಣುತೆ, ಅಪರಾಧ ಮತ್ತು ಹಿಂಸಾಚಾರಗಳನ್ನು ತರುವುದು ಯಾವುದೆಂದರೆ, ಹೆಚ್ಚಿನ ಮಟ್ಟದ ಒತ್ತಡ ಮತ್ತು ಹತಾಶೆಗಳಾಗಿವೆ. ಅಪರಾಧವು ಹೆಚ್ಚಾಗಿದ್ದರೆ ಅದು ಯಾಕೆಂದರೆ, ಮೂಲ ಕಾರಣಕ್ಕೆ ನಾವು ಗಮನ ಹರಿಸಿಲ್ಲ. ಅಂದರೆ, ವ್ಯಕ್ತಿಗಳ ಒತ್ತಡ ಮಟ್ಟ. ಒತ್ತಡ ಮಟ್ಟಗಳನ್ನು ಕಡಿಮೆ ಮಾಡಲು ಸಹಾಯ ಮಾಡುವ ತಂತ್ರಗಳನ್ನು ನಾವು ನೀಡುವುದು ಇಲ್ಲೇ.
ಇಲ್ಲಿ ಲಂಡನ್ನಿನಲ್ಲಿ ಥೇಮ್‌ಸೈಡ್ ಕಾರಾಗೃಹದಲ್ಲಿ ನಾವು ಶಿಬಿರಗಳನ್ನು ನಡೆಸಿದಾಗ, ಕೈದಿಗಳಿಂದ ಬಂದ ಪ್ರತಿಕ್ರಿಯೆಯು ಬಹಳ ಪ್ರೋತ್ಸಾಹದಾಯಕವಾಗಿತ್ತು. ತಾವು ಸರಳುಗಳ ಹಿಂದೆ ಸ್ವಾತಂತ್ರ್ಯವನ್ನು ಪಡೆದುದಾಗಿ ಅವರು ಹೇಳಿದರು.

ಮಾನವರು ಹೆಚ್ಚಾಗಿ ತಮ್ಮದೇ ನಕಾರಾತ್ಮಕ ಭಾವನೆಗಳಿಗೆ ಬಲಿಪಶುಗಳಾಗಿಬಿಡುತ್ತಾರೆ. ಶಾಲೆಯಲ್ಲಾಗಲೀ ಮನೆಯಲ್ಲಾಗಲೀ ನಮ್ಮ ನಕಾರಾತ್ಮಕ ಭಾವನೆಗಳನ್ನು ಹೇಗೆ ನಿರ್ವಹಿಸುವುದೆಂದು ನಾವು ಕಲಿತಿಲ್ಲ. ಕೋಪ ಮತ್ತು ಮತ್ಸರಗಳಂತಹ ಭಾವನೆಗಳು ಬರುವುದು ಸಾಮಾನ್ಯ, ಆದರೆ ಈ ಭಾವನೆಗಳ ಪ್ರಭಾವವನ್ನು ನಿರ್ವಹಿಸಲು ಅಥವಾ ಹೋಗಲಾಡಿಸಲು ನಮಗೆ ತರಬೇತಿ ನೀಡಲಾಗಿಲ್ಲ ಅಥವಾ ಕಲಿಸಲಾಗಿಲ್ಲ.

ಉಸಿರಾಟವನ್ನುಪಯೋಗಿಸಿ ಮನಸ್ಸನ್ನು ಶಾಂತಗೊಳಿಸಲು ಮತ್ತು ಒಳಗಿನಿಂದ ಪ್ರಸನ್ನವಾಗಿರಲು, ಜನರನ್ನು ತಲುಪಿ ನಕಾರಾತ್ಮಕ ಭಾವನೆಗಳನ್ನು ಹೇಗೆ ನಿರ್ವಹಿಸುವುದೆಂದು ಅವರಿಗೆ ಕಲಿಸಲು ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ೩೫ ವರ್ಷಗಳ ಹಿಂದೆ ಕಾರ್ಯಕ್ರಮಗಳನ್ನು ಪ್ರಾರಂಭಿಸಿತು. ಒಮ್ಮೆ ನಿಮಗೆ ಆಂತರಿಕ ಶಾಂತಿಯ ಅನುಭವವಾದಾಗ, ನಿಮಗೆ ವಿಶ್ವಾಸ ಹೆಚ್ಚಿದ ಅನುಭವವಾಗುತ್ತದೆ ಮತ್ತು ನಿಮಗೆ ನಿಮ್ಮ ಮೇಲಿನ ವಿಶ್ವಾಸ ಹೆಚ್ಚಾದಾಗ ಜೀವನದಲ್ಲಿ ಭಯವು ಮಾಯವಾಗುತ್ತದೆ. ಮತ್ತು ಭಯವಿಲ್ಲದಿರುವಾಗ, ಅಲ್ಲಿ ಹೆಚ್ಚಿನ ಸ್ವಾತಂತ್ರ್ಯವಿರುತ್ತದೆ. ಸ್ವಾತಂತ್ರ್ಯವಿರುವಾಗ, ನಿಮಗೆ ಜನರನ್ನು ತಲುಪಲು ಸಾಧ್ಯವಾಗುತ್ತದೆ; ನಿಮ್ಮ ಸಂವಹನ, ಅಭಿವ್ಯಕ್ತಿ ಮತ್ತು ಗ್ರಹಣ ಶಕ್ತಿ ಉತ್ತಮವಾಗುತ್ತವೆ. ಒಬ್ಬ ವ್ಯಕ್ತಿಯಲ್ಲಿನ ಗ್ರಹಣ ಶಕ್ತಿ, ಅವಲೋಕನೆ ಮತ್ತು ಅಭಿವ್ಯಕ್ತಿಯ ಸುಧಾರಣೆಯು ಅವನ ಜೀವನದಲ್ಲಿ ಒಂದು ದೊಡ್ಡ ಪರಿಣಾಮವನ್ನು ಬೀರಬಲ್ಲದು - ಪ್ರಪಂಚದಾದ್ಯಂತ ೧೫೫ ದೇಶಗಳಲ್ಲಿನ ನಮ್ಮ ಕೆಲಸದಲ್ಲಿ ಇದನ್ನೇ ನಾವು ಕಂಡುಕೊಂಡದ್ದು. ಸಮಾಜವನ್ನು ಪರಿವರ್ತಿಸಲು ಮತ್ತು ಹಿಂಸಾಚಾರ ಮುಕ್ತವಾದ ಒಂದು ಮಾದರಿ ಸಮಾಜವನ್ನು ಸೃಷ್ಟಿಸಲು ಒಂದು ಉತ್ಸಾಹದೊಂದಿಗೆ ಈ ಎಲ್ಲಾ ವರ್ಷಗಳೂ ಕೆಲಸ ಮಾಡುತ್ತಿರುವ ನಮ್ಮೆಲ್ಲಾ ಉತ್ತಮ ಅರ್ಹ ಶಿಕ್ಷಕರಿಗೆ ಇದರ ಶ್ರೇಯ ಸಲ್ಲುತ್ತದೆ. ನಾನು ನಿಜಕ್ಕೂ ಅವರನ್ನು ಅಭಿನಂದಿಸುತ್ತೇನೆ. ನಾನು ಅವರ ಪರವಾಗಿ ಶ್ರೇಯಸ್ಸನ್ನು ತೆಗೆದುಕೊಳ್ಳುವುದು ಮಾತ್ರ, ನಿಜವಾದ ಕೆಲಸವು ಮಾಡಲ್ಪಡುವುದು ಅವರಿಂದ. ಈ ಎಲ್ಲಾ ಕೆಲಸವನ್ನು ಮಾಡುತ್ತಾ ಬಂದಿರುವ ನೂರಾರು ಸಾವಿರಾರು ಸ್ವಯಂಸೇವಕರನ್ನು ನೀವು ಅಭಿನಂದಿಸಬೇಕು.

ಅದನ್ನು ಹೇಳಿದ ಮೇಲೆ ನಾನು ಹೇಳುವುದೇನೆಂದರೆ, ಸಂಸತ್ ಸದಸ್ಯರಾಗಿ ಅಥವಾ ಹಲವಾರು ಕ್ಷೇತ್ರಗಳಲ್ಲಿನ ಸಮಾಜದ ನಾಯಕರಾಗಿ, ಜವಾಬ್ದಾರಿ ತೆಗೆದುಕೊಳ್ಳದವರಲ್ಲಿ ಜವಾಬ್ದಾರಿಯನ್ನು ತರುವಂತಹ ಜವಾಬ್ದಾರಿಯು ನಮ್ಮೆಲ್ಲರ ಮೇಲಿದೆ! ನಾವು ಜನರನ್ನು ಎಚ್ಚರಿಸಿ, ಶಾಂತಿಯ ಬಗ್ಗೆ, ಉತ್ಸಾಹದಿಂದ ಸವಾಲುಗಳನ್ನು ಎದುರಿಸುವುದರಲ್ಲಿ ಮತ್ತು ಒಂದು ಮುಗುಳ್ನಗೆಯೊಂದಿಗೆ ನಿರ್ವಹಿಸುವುದರಲ್ಲಿ ಅವರಿಗೆ ಶಿಕ್ಷಣ ನೀಡಬೇಕು; ಇದು ಬಹಳ ಮುಖ್ಯ! ಇದು ನಮ್ಮ ಸಮಾಜವನ್ನು ಒಂದು ಹೆಚ್ಚು ಸಂತೋಷಕರವಾದ, ಶಾಂತಿಯುತವಾದ ಮತ್ತು ಸಮೃದ್ಧಕರವಾದ ಸಮಾಜವನ್ನಾಗಿಸುವುದರ ಕಡೆಗಿನ ಸುದೀರ್ಘ ದಾರಿಯಲ್ಲಿ ಒಯ್ಯುತ್ತದೆ.

ಕಡೆಗೆ, ಎಲ್ಲರೂ ಸಂತೋಷವಾಗಿರಲು ಬಯಸುತ್ತಾರೆ. ಒಬ್ಬನು ಏನೇ ಮಾಡುತ್ತಿದ್ದರೂ, ಅವನು ಮಾಡುವುದು ಸಂತೋಷವಾಗಿರುವುದಕ್ಕಾಗಿ. ನೀವು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿರುವಿರೇ ಎಂದು ನೀವು ನಿಮ್ಮನ್ನೇ ಕೇಳಿಕೊಳ್ಳಬೇಕು.

ಹಲವು ಸಲ ಬರುವ ಉತ್ತರ, ಇಲ್ಲ! ನಮ್ಮ ಸುತ್ತಲೂ ಸಂತೋಷವನ್ನು ಸೃಷ್ಟಿಸುವ ಈ ಉದ್ದೇಶಕ್ಕೆ ಒಂದು ಪ್ರೇರಣೆ ಕೊಡಲು ನಾವೇನು ಮಾಡಬಹುದು? ಅಲ್ಲೇ ನಾವು ಕುಳಿತುಕೊಂಡು ಯೋಚಿಸಬೇಕಾಗಿರುವುದು - ನಾವೇನು ಮಾಡಬಹುದು, ಭಾಗೀದಾರರು ಯಾರು? ಸಮಾಜವನ್ನು ನಾವು ಹೇಗೆ ಸುಧಾರಿಸಬಹುದು?

ಇಲ್ಲಿನ ಮತ್ತು ಇತರ ಹಲವಾರು ಜಾಗಗಳಲ್ಲಿನ ನಮ್ಮ ಪ್ರಮುಖರ ಜೊತೆಯಲ್ಲಿ ಕೆಲವು ಭೇಟಿಗಳಲ್ಲಿ ನಾನು ಈ ಪ್ರಶ್ನೆಗಳ ಮೇಲೆ ವಿಮರ್ಶಿಸುತ್ತಿದ್ದೆ ಮತ್ತು ಮಕ್ಕಳಿಗಾಗಿ ಕೆಲವು, ಯುವಕರಿಗಾಗಿ ಕೆಲವು ಹಾಗೂ ಮಕ್ಕಳನ್ನು ಚೆನ್ನಾಗಿ ತಿಳಿಯಲು ಹೆತ್ತವರಿಗಾಗಿ ಕೆಲವು ಹೀಗೆ ೫೨ ವಿವಿಧ ಕಾರ್ಯಾಗಾರಗಳು ಮತ್ತು ಕೋರ್ಸುಗಳನ್ನು ತಯಾರು ಮಾಡಿದೆವು. ನಮ್ಮಲ್ಲಿ, "ನಿಮ್ಮ ಮಕ್ಕಳನ್ನು ತಿಳಿಯಿರಿ" ಮತ್ತು "ನಿಮ್ಮ ಹದಿಹರೆಯದವರನ್ನು ತಿಳಿಯಿರಿ" ಎಂಬ ಕಾರ್ಯಕ್ರಮಗಳಿವೆ. ಹೆತ್ತವರು ಮತ್ತು ಯುವಕರ ನಡುವೆ ಹೆಚ್ಚುತ್ತಿರುವ ಪೀಳಿಗೆಯ ಅಂತರವನ್ನು ಸರಿಯಾದ ಸಂವಹನದೊಂದಿಗೆ ಜೋಡಿಸಬಹುದು. ಪೀಳಿಗೆಗಳ ನಡುವೆ ಸಂಪರ್ಕವು ಮುರಿದುಬೀಳುತ್ತಿರುವುದನ್ನು ನಾವೆಲ್ಲರೂ ನೋಡುತ್ತಿದ್ದೇವೆ, ಅಲ್ಲವೇ?  ಹಲವು ಸಮುದಾಯಗಳಲ್ಲಿನ ದೊಡ್ಡ ಸಮಸ್ಯೆಗಳೆಂದರೆ, ಯುವಜನಜನತೆಯಲ್ಲಿರುವ ಒತ್ತಡ ಮತ್ತು ಚಡಪಡಿಕೆ. ಯುವ ಹಾಗೂ ಉನ್ನತ ಶಿಕ್ಷಣವನ್ನು ಪಡೆದ ಜನರು ಐಸಿಸ್‌ನ್ನು ಸೇರಿ ಏನಾಗುತ್ತಿದೆಯೆಂಬುದನ್ನು ನೋಡುವಾಗ ಗಾಬರಿಯಾಗುತ್ತದೆ.

ಒಂದು ಜಾಗತಿಕ ಕುಟುಂಬ ಮತ್ತು ಜಾಗತಿಕ ನಾಗರಿಕರಾಗಿರುವ ಕಲ್ಪನೆಯ ಕಡೆಗೆ ನಾವು ಜನರನ್ನು ನಡೆಸಬೇಕಾಗಿದೆ. ನಾವು ಜಗತ್ತಿನ ಪ್ರತಿಯೊಂದು ಸಂಸ್ಕೃತಿ, ಪ್ರತಿಯೊಂದು ಭಾಗದಿಂದಲೂ ಏನನ್ನಾದರೂ ಕಲಿಯಬೇಕು. ಒಂದು ಬಹು-ಸಂಸ್ಕೃತಿ ಮತ್ತು ಒಂದು ಬಹು-ಧರ್ಮೀಯ ಸಮಾಜದ ಕಡೆಗೆ ಒಬ್ಬನ ಅರಿವನ್ನು ವಿಶಾಲಗೊಳಿಸುವುದು ಮುಂದಿನ ಶತಮಾನದಲ್ಲಿ ಸಾಮರಸ್ಯದಿಂದ ಬಾಳುವುದಕ್ಕೆ ನಮ್ಮನ್ನು ಹಾಗೂ ನಮ್ಮ ಮಕ್ಕಳನ್ನು ಸಿದ್ಧಪಡಿಸಬಹುದು. ಜಗತ್ತಿನ ಒಂದು ಚಿಕ್ಕ ಭಾಗ ಕೂಡಾ, "ನಾನು ಮಾತ್ರ ಸ್ವರ್ಗಕ್ಕೆ ಹೋಗುವುದು" ಎಂದು ಯೋಚಿಸಿದರೆ, ಉಳಿದವರೆಲ್ಲರೂ ನರಕಕ್ಕೆ ಹೋಗುತ್ತಾರೆ ಯಾಕೆಂದರೆ, ಆ ಚಿಕ್ಕ ಗುಂಪಿನ ಜನರು ಉಳಿದವರೆಲ್ಲರಿಗೂ ನರಕವನ್ನು ಸೃಷ್ಟಿಸುತ್ತಾರೆ, ಮತ್ತು ಅವರದನ್ನು ಈಗಾಗಲೇ ಮಾಡುತ್ತಿದ್ದಾರೆ! ಒಬ್ಬ ಜಾಗತಿಕ ಪ್ರಜೆಯ ಈ ವಿಶಾಲ ದೃಷ್ಟಿಕೋನವನ್ನು ನಾವು ತರಬೇಕಾಗಿದೆ.

ಯುರೋಪಿಯನ್ ಯೂನಿಯನ್‌ನಲ್ಲಿ ಇರಬೇಕೇ ಅಥವಾ ಅದರಿಂದ ಹೊರಬರಬೇಕೇ ಎಂಬುದರ ಬಗ್ಗೆ ಇಲ್ಲಿ ಬ್ರಿಟನ್‌ನಲ್ಲಿ ಒಂದು ದೊಡ್ಡ ವಾಗ್ವಾದ ನಡೆಯುತ್ತಿದೆಯೆಂದು ನನಗೆ ಗೊತ್ತು. ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಬೇಕಿದ್ದರೂ, ಮುಖ್ಯವಾದುದೇನೆಂದರೆ, ನಮ್ಮಲ್ಲೇ ವಿಶ್ವಾಸ ಹೊಂದಿರುವುದು. ಭಯ ಮತ್ತು ಅನಿಶ್ಚಿತತೆಗಳು ನಮ್ಮನ್ನು ನಾವು ಇಷ್ಟಪಡುವ ಸಾಧ್ಯತೆಯಿಲ್ಲದ ಅಥವಾ ಯಾವುದು ನಮಗೆ ರುಚಿಸದಿರುವ ಸಾಧ್ಯತೆಯಿದೆಯೋ ಆ ದಿಕ್ಕಿನಲ್ಲಿ ಕೊಂಡೊಯ್ಯಬಹುದು.

ನಮ್ಮಲ್ಲಿ ಮತ್ತು ನಮ್ಮ ಒಳ್ಳೆಯತನದಲ್ಲಿರುವ ವಿಶ್ವಾಸವೇ ನಮಗೆ ಅಪಾಯಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯವನ್ನು ನೀಡುವುದು. ಮತ್ತೆ, ಅಪಾಯ ಅಂದರೇನು? ಎಲ್ಲಿ ಲಾಭ ಮತ್ತು ನಷ್ಟಕ್ಕೆ ಅವಕಾಶವಿದೆಯೋ ಅದು ಅಪಾಯ. ನಾವು ನಮ್ಮ ಆಂತರಿಕ ಕ್ಷಮತೆಗಳನ್ನು ಅಭಿವೃದ್ಧಿಪಡಿಸಲು ತೊಡಗುವಾಗ, ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲಿರುವ ಈ ಸಾಮರ್ಥ್ಯ ಅಥವಾ ಅಂತರ್ಬೋಧ ಕೂಡಾ ಬರಬಲ್ಲದು. ಈ ಕ್ಷಮತೆಗಳನ್ನು ಸಕ್ಷಮಗೊಳಿಸಲು ಸಹಾಯ ಮಾಡುವ ಕೆಲವು ಸಲಕರಣೆಗಳಾಗಿವೆ ಧ್ಯಾನ ಮತ್ತು ಉಸಿರಾಟದ ತಂತ್ರಗಳು.

ನಾವು ಜನರನ್ನು ಎಚ್ಚರಿಸಿ, ಶಾಂತಿಯ ಬಗ್ಗೆ, ಸವಾಲುಗಳನ್ನು ಉತ್ಸಾಹದೊಂದಿಗೆ ಎದುರಿಸುವುದು ಹಾಗೂ ಒಂದು ಮುಗುಳ್ನಗೆಯೊಂದಿಗೆ ನಿರ್ವಹಿಸುವುದರ ಬಗ್ಗೆ ಅವರಿಗೆ ಶಿಕ್ಷಣ ನೀಡಬೇಕು; ಇದು ಬಹಳ ಮುಖ್ಯ!

ಜಾಗತಿಕ ಪ್ರಜೆಗಳಾಗಿ, ತಂಡದಲ್ಲಿದ್ದು ಕಾರ್ಯ ನಿರ್ವಹಿಸುವುದನ್ನು ಜಪಾನಿನಿಂದ, ನಿಖರತೆಯನ್ನು ಜರ್ಮನಿಯವರಿಂದ (ಜರ್ಮನಿಯ ಯಂತ್ರಗಳಲ್ಲಿ ನಿಮಗೆ ತಪ್ಪು ಸಿಗಲಾರದು), ಪ್ರಚಾರ ತಂತ್ರಗಳನ್ನು ಅಮೇರಿಕದಿಂದ (ಅಮಾವಾಸ್ಯೆಯ ದಿನದಂದು ಅವರು ಚಂದ್ರನನ್ನು ಮಾರಬಲ್ಲರು), ಶಿಷ್ಟಾಚಾರ ಮತ್ತು ಸಭ್ಯತೆಗಳನ್ನು ಬ್ರಿಟಿಷರಿಂದ (ವಿವಿಧ ಸಂಸ್ಕೃತಿಗಳನ್ನು ಹೇಗೆ ಸೇರಿಸಿಕೊಳ್ಳುವುದೆಂದು ಅವರು ಜಗತ್ತಿಗೆ ತೋರಿಸಿದ್ದಾರೆ)ಮತ್ತು ಮಾನವೀಯ ಹಾಗೂ ಆಧ್ಯಾತ್ಮಿಕ ಮೌಲ್ಯಗಳನ್ನು ಭಾರತದಿಂದ ನಾವು ಕಲಿಯಬೇಕು. ನೀವು ಭಾರತದಲ್ಲಿ ಅತ್ಯಂತ ಹೊರಗೆ ದೂರದ ಭಾಗಕ್ಕೆ ಹೋದರೆ; ಬಡವರಲ್ಲಿ ಕಡುಬಡವರಲ್ಲಿಗೆ ಹೋದರೆ; ಅವರ ಬಳಿ ಕೇವಲ ಒಂದು ಲೋಟ ಮಜ್ಜಿಗೆಯಿರಬಹುದು, ಆದರೂ ಅವರು ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಾರೆ. ಕೊಡುವ ಮತ್ತು ಹಂಚುವ ಆ ಭಾವವನ್ನು ಭಾರತದ ಹಳ್ಳಿಗಳಲ್ಲಿ ನಾನು ನೋಡಿದ್ದೇನೆ. ಖಂಡಿತಾ, ನಗರಗಳು ಪ್ರಪಂಚದಾದ್ಯಂತ ಇವತ್ತು ಒಂದೇ ರೀತಿ ಆಗಿವೆ; ಹೆಚ್ಚುತ್ತಿರುವ ಅಪರಾಧದ ಪ್ರಮಾಣ, ವಾಹನ ಸಂಚಾರ ಮತ್ತು ಎಲ್ಲದರ ಸಮಸ್ಯೆಗಳು ಒಂದೇ ರೀತಿ ಇವೆ.  ಹೇಗಾದರೂ, ಗ್ರಾಮೀಣ ಭಾರತದಲ್ಲಿ ನಿಮಗೆ ಸಿಗುವ ಮೌಲ್ಯಗಳು ನಿಮ್ಮ ಹೃದಯವನ್ನು ತಟ್ಟುವಂಥದ್ದು. ಹೀಗೆ, ಜಗತ್ತಿನಲ್ಲಿ ಎಲ್ಲೆಡೆಯಿಂದ ನಾವು ಏನನ್ನಾದರೂ ಆಯ್ದುಕೊಳ್ಳಬಹುದು. ಇದೇ ಕಾರಣಕ್ಕೆ ನಾವು ವರ್ಲ್ಡ್ ಕಲ್ಚರ್ ಫೆಸ್ಟಿವಲ್ (ವಿಶ್ವ ಸಾಂಸ್ಕೃತಿಕ ಹಬ್ಬ)‌ನ್ನು ಆಯೋಜಿಸಿದುದು. ಅಲ್ಲಿ ೧೫೫ ದೇಶಗಳ ಜನರು ತಮ್ಮ ಸಂಸ್ಕೃತಿಗಳನ್ನು, ೭ ಎಕರೆಗಳಷ್ಟು ವ್ಯಾಪಿಸಿದ ಒಂದೇ ರಂಗಸ್ಥಳದ ಮೇಲೆ ಪ್ರದರ್ಶಿಸಿದರು. ಅದರ ಮೇಲೆ ೩೬,೦೦೦ ಕಲಾವಿದರು ಪ್ರದರ್ಶನ ನೀಡಿದರು. ಇಡಿಯ ಜಗತ್ತಿನೊಂದಿಗೆ ಕೆಲವು ವಿಚಾರಗಳನ್ನು ಮತ್ತು ಯೋಜನೆಗಳನ್ನು ಹಂಚಿಕೊಳ್ಳಲು ಮ್ಯಾಥ್ಯೂ ಅವರು ಅಲ್ಲಿದ್ದುದು ನಮಗೆ ಬಹಳ ಸಂತೋಷವಾಯಿತು; ಇಲ್ಲದಿದ್ದರೆ ಅದು ಅಷ್ಟು ಸಂಪೂರ್ಣವಾಗಿರುತ್ತಿರಲಿಲ್ಲ.

೨೦೧೧ ರ ಜುಲೈಯ ಆರಂಭದಲ್ಲಿ ಬರ್ಲಿನ್‌ನಲ್ಲಿ ನಾವು ವಿಶ್ವ ಸಾಂಸ್ಕೃತಿಕ ಹಬ್ಬವನ್ನು ಆಯೋಜಿಸಿದಾಗ, ಅದು ೭೫ ವರ್ಷಗಳ ಹಿಂದೆ ಹಿಟ್ಲರ್‌ನಿಂದ ಕಟ್ಟಿಸಲ್ಪಟ್ಟ ಒಂದು ಕ್ರೀಡಾಂಗಣದಲ್ಲಾಗಿತ್ತು; ಎಲ್ಲಿಂದ ಜಾಗತಿಕ ಯುದ್ಧವನ್ನು ಘೋಷಿಸಲಾಗಿತ್ತೋ ಆ ಜಾಗ. ಒಂದು ಶಾಂತಿಯ ಕರೆಯೊಂದಿಗೆ ಆ ಜಾಗವನ್ನು ಶುದ್ಧೀಕರಿಸುವ ಅಗತ್ಯವಿದೆಯೆಂದು ನನಗನ್ನಿಸಿತು, ಅದಕ್ಕಾಗಿಯೇ ನಾವು ವಿಶ್ವ ಸಾಂಸ್ಕೃತಿಕ ಹಬ್ಬವನ್ನು ಅಲ್ಲಿ ಆಚರಿಸಿದುದು. ವಾತಾವರಣವನ್ನು ಶುದ್ಧೀಕರಿಸಲು ಮತ್ತು ಶಾಂತಿ ಹಾಗೂ ಸಂತೋಷದ ಅಲೆಗಳನ್ನು ಹರಡಲು ನಾವು ಅಲ್ಲೊಂದು ಧ್ಯಾನ ಮಾಡಿದೆವು. ಈ ವರ್ಷ ನಾವದನ್ನು ಭಾರತದಲ್ಲಿ ಆಚರಿಸಿದೆವು. ೫ ವರ್ಷಗಳ ಬಳಿಕ, ಮುಂದಿನ ವಿಶ್ವ ಸಾಂಸ್ಕೃತಿಕ ಹಬ್ಬವನ್ನು ಆಸ್ಟ್ರೇಲಿಯಾದ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಿರ್ವಹಿಸಲು ನಮಗೊಂದು ಆಮಂತ್ರಣವಿದೆ. ಈ ರೀತಿಯಲ್ಲಿ, ಬಹುಸಾಂಸ್ಕೃತಿಕ ಚಟುವಟಿಕೆಗಳು ಜನರನ್ನು ಒಂದುಗೂಡಿಸಬಲ್ಲವೆಂದು ನನಗನ್ನಿಸುತ್ತದೆ.

ಉತ್ಸವಕ್ಕಾಗಿ ಭಾರತಕ್ಕೆ ಬಂದ ದೊಡ್ಡ ಸಂಖ್ಯೆಯ ಪಾಕಿಸ್ತಾನೀಯರನ್ನು ನೋಡಿ ಜನರಿಗೆ ಬಹಳ ಅಚ್ಚರಿಯಾಯಿತು; ಅಷ್ಟೊಂದು ದೊಡ್ಡ ರೀತಿಯಲ್ಲಿ ಒಂದು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾರತ ಮತ್ತು ಪಾಕಿಸ್ತಾನ ಭಾಗವಹಿಸುತ್ತಿರುವುದಕ್ಕೆ ಅಲ್ಲಿ ಅಷ್ಟೊಂದು ಒಳ್ಳೆಯ ಭಾವನೆಯಿತ್ತು. ರಾಜಕಾರಣವನ್ನು ಹೊರತುಪಡಿಸಿ, ಜನರಿಂದ ಜನರಿಗಿರುವ ಸಂಪರ್ಕ ಹೆಚ್ಚಾದಾಗ, ಸಮುದಾಯಗಳ ನಡುವೆ ನಂಬಿಕೆ ಮತ್ತು ಆತ್ಮೀಯತೆಗಳ ಭಾವವು ಹೆಚ್ಚುತ್ತದೆ. ಒಂದು ರೀತಿಯಲ್ಲಿ ಇದು ಸಮಾಜದಲ್ಲಿ ಒಂದು ಬದಲಾವಣೆಯನ್ನು ತರಬಲ್ಲದೆಂದು ನನಗನ್ನಿಸುತ್ತದೆ. ನಿಮಗೇನನ್ನಿಸುತ್ತದೆ? ಯಾಕೆಂದರೆ, ಜನರನ್ನು "ಇತರರು" ಎಂದು ಯೋಚಿಸುವುದರಿಂದ ಭಯವುಂಟಾಗುತ್ತದೆ. ದೂರವು ಅನಿಶ್ಚಿತತೆ ಮತ್ತು ಭಯಗಳನ್ನು ಉಂಟುಮಾಡುತ್ತದೆ. ನಿಮ್ಮ ಮನೆಯೊಳಗೇ ಅಂತಹ ಒಂದು ವಾತಾವರಣವನ್ನು ಹೊಂದಿರುವುದು ಸಾಧ್ಯವಿಲ್ಲ. ಒಂದು ದೇಶದ ಅಥವಾ ಸಮಾಜದ ಸದಸ್ಯರು ಒಬ್ಬರನ್ನೊಬ್ಬರು ನಂಬದೇ ಇರುವಾಗ ಅಥವಾ ಪರಸ್ಪರರಲ್ಲಿ ಸಂಬಂಧವಿಲ್ಲದೇ ಇರುವಾಗ ಎಲ್ಲರೂ ಯಾತನೆಯನ್ನನುಭವಿಸುತ್ತಾರೆ.

ಇಲ್ಲಿ ನಾನು ಹೇಳಲು ಬಯಸುವ ಒಂದು ಕೊನೆಯ ವಿಷಯವೆಂದರೆ, ವಲಸೆಯ ಸಮಸ್ಯೆ. ಜನರು ವಿವಿಧ ಸ್ಥಳಗಳಿಂದ ಯಾವುದೇ ಒಂದು ದೇಶಕ್ಕೆ ಬರುವಾಗ, ಆ ನೆಲದ ಸಮಾಜ ಮತ್ತು ಸಂಸ್ಕೃತಿಯೊಂದಿಗೆ ಬೆರೆಯುವುದು ಹೇಗೆ ಎಂಬುದನ್ನು ಅವರಿಗೆ ಕಲಿಸಬೇಕು. ಅವರು ತಮ್ಮದೇ ಆದ ಪ್ರತ್ಯೇಕ ಸಂಸ್ಕೃತಿಯಲ್ಲಿ ಉಳಿಯಲು ಸಾಧ್ಯವಿಲ್ಲ; ಅವರು ತಮ್ಮ ಧರ್ಮ ಮತ್ತು ಸಂಸ್ಕೃತಿಗಳನ್ನು ಹೊಂದಿರಬಹುದು, ಆದರೆ ಎಲ್ಲೋ ಅವರು ತಾವು ವಾಸಿಸುತ್ತಿರುವ ನೆಲ ಹಾಗೂ ಸಂಸ್ಕೃತಿಗಳೊಂದಿಗೆ ಸಂಬಂಧವನ್ನು ಹೊಂದಿರಬೇಕಾಗುತ್ತದೆ. ಇದಕ್ಕೊಂದು ಸೌಮ್ಯವಾದ ನಿರ್ದೇಶನ, ಜನರನ್ನು ಸೌಮ್ಯವಾಗಿ ತಲಪುವಿಕೆ ಬೇಕಾಗುತ್ತದೆ. ಇಂಗ್ಲೇಂಡಿನಲ್ಲಿದ್ದುಕೊಂಡು ಎಲ್ಲರೂ ಇಂಗ್ಲೀಷನ್ನು ಕಲಿಯಬೇಕು, ಅದು ಕಡ್ಡಾಯವಾಗಿರಬೇಕು; ಅವರು ತಮ್ಮ ಮಾತೃಭಾಷೆಯನ್ನು ಮನೆಯಲ್ಲಿ ಮಾತನಾಡಬಹುದು, ಆದರೆ ಅವರು ಸಮಾಜದ ಶಿಷ್ಟಾಚಾರವನ್ನು ಅನುಸರಿಸಬೇಕು. ಲಿಂಗ ಸಮಾನತೆ, ಎಲ್ಲರಿಗೂ ಸಮಾನ ಅವಕಾಶ, ವಿವಿಧತೆಯನ್ನು ಗೌರವಿಸುವುದು, ಈ ಎಲ್ಲಾ ಸಾಮಾನ್ಯವಾಗಿ ಹಂಚಿಕೊಂಡ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಈ ಸಾಮಾನ್ಯ ಶಿಕ್ಷಣವನ್ನು ಜನರಿಗೆ ನೀಡಬೇಕಾಗಿದೆ. ಇದಿಲ್ಲದೆ ನಾವು ನಮ್ಮ ಮೇಲೆ ಸಮಸ್ಯೆಗಳನ್ನು ತಂದುಕೊಳ್ಳುವೆವು.    

ನೀವೆಲ್ಲಾ ನಿರ್ಣಾಯಕರೊಂದಿಗೆ ಈ ಕೆಲವು ಮಾತುಗಳನ್ನಾಡುವುದರೊಂದಿಗೆ, ಪ್ರತಿದಿನವೂ ಕುಳಿತುಕೊಂಡು ವಿಶ್ರಾಮ ಮಾಡಿಕೊಂಡು ನಿಮ್ಮದೇ ಮನಸ್ಸನ್ನು ಅವಲೋಕಿಸಿಕೊಳ್ಳಲು ನೀವು ಕೆಲವು ನಿಮಿಷಗಳನ್ನು ತೆಗೆದುಕೊಳ್ಳಬೇಕೆಂದು ನಾನು ಶಿಫಾರಸು ಮಾಡುತ್ತೇನೆ. ಇದು ಯಾಕೆಂದರೆ ನೀವು ಸಮಾಜಕ್ಕೆ ಬಹಳ ಮುಖ್ಯವಾದವರು, ಹಾಗೂ ನೀವೊಂದು ಸಂತೋಷಕರವಾದ, ಆರೋಗ್ಯಕರವಾದ, ಶಾಂತವಾದ ಹಾಗೂ ಕೇಂದ್ರೀಕೃತವಾದ ಮನಃಸ್ಥಿತಿಯನ್ನು ಹೊಂದಿರುವಾಗ ನೀವು ಸಮಾಜಕ್ಕೆ ಬಹಳಷ್ಟು ಒಳ್ಳೆಯದನ್ನು ಮಾಡಬಹುದು.