ಗುರುವಾರ, ಅಕ್ಟೋಬರ್ 17, 2013

ಮಂತ್ರ ಮಹತ್ವಪೂರ್ಣ, ಮನೋಲ್ಲಾಸಕರ

ಅಕ್ಟೋಬರ್ ೧೭, ೨೦೧೩
ಬೆಂಗಳೂರು, ಭಾರತ

ಪ್ರಶ್ನೆ: ಗುರುದೇವ, ಒಂದು ಮಂತ್ರವನ್ನು ಗುಟ್ಟಾಗಿ; ಅಷ್ಟೊಂದು ರಹಸ್ಯವಾಗಿ ಯಾಕೆ ಕೊಡಲಾಗುವುದು? ಎಲ್ಲರ ಎದುರಿನಲ್ಲಿ ಕೊಟ್ಟರೆ ಮಂತ್ರವು ತನ್ನ ಶಕ್ತಿಯನ್ನು ಕಳೆದುಕೊಳ್ಳುವುದೇ?

ಶ್ರೀ ಶ್ರೀ ರವಿ ಶಂಕರ್: ಮನಃಶಾಸ್ತ್ರವು ಏನೆಂದು ಹೇಳುವುದೆಂದು ನಿಮಗೆ ಗೊತ್ತಾ, ನಿಮಗೆ ತೊಂದರೆ ನೀಡುವ ಯಾವುದಾದರೂ ವಿಷಯವು ನಿಮ್ಮ ಮನಸ್ಸಿನಲ್ಲಿದ್ದರೆ, ಅದನ್ನು ಮಾತನಾಡಿ ಎಂದು. ಅದನ್ನು ಅಭಿವ್ಯಕ್ತಿಯ ಕ್ಷೇತ್ರಕ್ಕೆ ತನ್ನಿ. ಆಗ ನೀವು ಅದರಿಂದ ಮುಕ್ತರಾಗುತ್ತೀರಿ.

ಮಂತ್ರವು ಒಳಗೆ ಉಳಿಯಬೇಕೆಂದು ನಾವು ಬಯಸುತ್ತೇವೆ. ಅದು ಅಭಿವ್ಯಕ್ತಿಯ ಕ್ಷೇತ್ರದಲ್ಲಿರಬೇಕೆಂದು ನಾವು ಬಯಸುವುದಿಲ್ಲ. ಆ ಮಂತ್ರವು ಮನಸ್ಸಿನಲ್ಲುಳಿದು, ಮನಸ್ಸನ್ನು ಆಳಕ್ಕೆ ತೆಗೆದುಕೊಂಡು ಹೋಗಬೇಕೆಂದು ನಾವು ಬಯಸುತ್ತೇವೆ. ಹಾಗಾಗಿ ನಿಮ್ಮ ಮನಸ್ಸು ಆಳಕ್ಕೆ ಹೋಗಲು, ಅಭಿವ್ಯಕ್ತಿಯ ಕ್ಷೇತ್ರದಲ್ಲಿರದ; ರಹಸ್ಯವಾಗಿರುವ ಒಂದು ಮಂತ್ರವನ್ನು ನೀವು ಹೊಂದಿರಬೇಕು. ಅದಕ್ಕಾಗಿಯೇ ಅದನ್ನು ರಹಸ್ಯವಾಗಿ ನೀಡಲಾಗುವುದು. ಒಂದು ರಹಸ್ಯವು ನಿಮ್ಮ ಹೃದಯದಾಳದಲ್ಲಿ, ನಿಮ್ಮ ಚೇತನದ ಆಳದಲ್ಲಿ ಉಳಿಯುತ್ತದೆ.

ಹೀಗೆ ಮನಸ್ಸು ಚೇತನದಲ್ಲಿ ಇನ್ನೂ ಆಳಕ್ಕೆ ಹೋಗಲು ಮಂತ್ರವು ಒಂದು ವಾಹನವಾಗಿದೆ. ಅದಕ್ಕಾಗಿಯೇ ಅದನ್ನು ರಹಸ್ಯವಾಗಿ ಕೊಡಬೇಕಾಗಿರುವುದು. ನನಗೆ ನೀಡಲಾಗಿರುವ ಮಂತ್ರವು ಒಂದು ಬಹಳ ಸಾಮಾನ್ಯ ಮಂತ್ರವಾಗಿರಲೂಬಹುದು, ಆದರೆ, ಧ್ಯಾನದಲ್ಲಿ ಇನ್ನೂ ಆಳಕ್ಕೆ ಹೋಗಲು ಸಾಧ್ಯವಾಗುವುದಕ್ಕಾಗಿ ನನ್ನ ಮಂತ್ರವನ್ನು ನಾನೊಂದು ರಹಸ್ಯವಾಗಿ ಇಟ್ಟುಕೊಳ್ಳುತ್ತೇನೆ. ಪ್ರಾಚೀನ ಕಾಲದಿಂದಲೂ ಇರುವ ಕಲ್ಪನೆಯಾಗಿದೆ ಇದು. ಇದು ಬಹಳ ವೈಜ್ಞಾನಿಕವಾಗಿದೆ.

ಎಲ್ಲರೂ ಗಟ್ಟಿಯಾಗಿ ಪಠಿಸಬಹುದಾದಂತಹ ಮಹಾಮಂತ್ರಗಳಿವೆ. ಆದರೆ ಒಂದು ವೈಯಕ್ತಿಕ ಮಂತ್ರವನ್ನು ಒಬ್ಬನು ರಹಸ್ಯವಾಗಿಟ್ಟುಕೊಳ್ಳಬೇಕಾದುದು. ಅದನ್ನೇ ನಾವು ನಿಮಗೆ ಧ್ಯಾನದ ಶಿಬಿರದಲ್ಲಿ ನೀಡುವುದು, ಅಂದರೆ, ಸಹಜ ಮಂತ್ರ. ನೀವದನ್ನು ನಿಮ್ಮಲ್ಲಿಯೇ ಇಟ್ಟುಕೊಳ್ಳಿ ಮತ್ತು ಅದನ್ನು ಅಭಿವ್ಯಕ್ತಿಯ ಕ್ಷೇತ್ರಕ್ಕೆ ತರಬೇಡಿ. ಆದರೆ, ’ಓಂ ನಮಃ ಶಿವಾಯ’ ಮತ್ತು ’ಓಂ’ ಗಳಂತಹ ಮಂತ್ರಗಳನ್ನು ಗಟ್ಟಿಯಾಗಿ ಜಪಿಸಬಹುದು. ಅವುಗಳು ಕಂಪನಗಳನ್ನು ವೃದ್ಧಿಸುತ್ತವೆ.

ಪ್ರಶ್ನೆ: ಗುರುದೇವ, ಗೀತೆಯಲ್ಲಿ ಶ್ರೀಕೃಷ್ಣ ಪರಮಾತ್ಮನು ಸ್ವಧರ್ಮ ಮತ್ತು ಪರಧರ್ಮದ ಬಗ್ಗೆ ಮಾತನಾಡುತ್ತಾನೆ. ಆದರೆ ಮಹಾಭಾರತದ ಕಾಲಾವಧಿಯಲ್ಲಿ ಸನಾತನ ಧರ್ಮವಲ್ಲದೆ ಬೇರೆ ಧರ್ಮವಿರಲಿಲ್ಲ. ದಯವಿಟ್ಟು ನೀವು ಇದನ್ನು ವಿವರಿಸಬಲ್ಲಿರಾ?

ಶ್ರೀ ಶ್ರೀ ರವಿ ಶಂಕರ್: ಮತ ಮತ್ತು ಸಂಪ್ರದಾಯಗಳು ಬೇರೆ ಹಾಗೂ ಧರ್ಮವು ಬೇರೆ. ನೀನು ಇವುಗಳೆರಡರ ನಡುವೆ ಗೊಂದಲಗೊಂಡಿರುವೆ. ಸಂಪ್ರದಾಯವೆಂದರೆ ಪದ್ಧತಿಗಳು. ಧರ್ಮವನ್ನು ಬೇರೆ ಯಾವ ಭಾಷೆಗೂ ಅನುವಾದಿಸಲು ಸಾಧ್ಯವಿಲ್ಲ. ಅದು ವ್ಯಕ್ತಿಯ ಸ್ವಭಾವವಾಗಿದೆ. ಒಬ್ಬರು ಅನುವಾದಿಸಲೇ ಬೇಕಿದ್ದರೆ, ಅತ್ಯಂತ ಸಮಂಜಸವಾದ ಅನುವಾದವೆಂದರೆ, ಒಬ್ಬನ ಸದಾಚಾರ ಸ್ವಭಾವ ಎಂಬುದಾಗಿ. ಹಾಗಾಗಿ ಧರ್ಮವು ನಿಮ್ಮ ಸಹಜ ಪ್ರವೃತ್ತಿಗಳಾಗಿವೆ, ನಿಮ್ಮ ಜನ್ಮಜಾತ ಗುಣಗಳಾಗಿವೆ.

ಹಾಗಾಗಿ ಶ್ರೀಕೃಷ್ಣ ಪರಮಾತ್ಮನು, ’ಸ್ವಧರ್ಮೇ ನಿಧನಂ ಶ್ರೇಯಃ’ ಎಂದು ಹೇಳುವಾಗ ಅವನು ಹೇಳುತ್ತಿರುವುದು, ನಿಮ್ಮ ಜನ್ಮಜಾತ ಪ್ರವೃತ್ತಿಗಳು ಮತ್ತು ಜನ್ಮಜಾತ ಗುಣಗಳೊಂದಿಗಿರಿ ಮತ್ತು ಕೇವಲ ಇತರರನ್ನು ಅನುಕರಣೆ ಮಾಡಿಕೊಂಡಲ್ಲ ಎಂದು. ಸಹಜವಾಗಿರುವುದು, ನಿಮ್ಮದೇ ಸ್ವಭಾವದಲ್ಲಿರುವುದು ಸ್ವಧರ್ಮವಾಗಿದೆ.

ಪ್ರಶ್ನೆ: ಗುರುದೇವ, ಆತ್ಮ ಮತ್ತು ಪರಮಾತ್ಮ ಎಂದರೇನು ಹಾಗೂ ಇವುಗಳೆರಡರ ನಡುವಿರುವ ಸಂಬಂಧವೇನು? ಮತ್ತು ಬ್ರಹ್ಮ, ವಿಷ್ಣು ಮತ್ತು ಶಿವ ಇವರು ಯಾರು?

ಶ್ರೀ ಶ್ರೀ ರವಿ ಶಂಕರ್: ಆರಂಭದಲ್ಲಿ ಕೇವಲ ಚೈತನ್ಯ ಮಾತ್ರ ಇತ್ತು ಎಂದು ಹೇಳಲಾಗುತ್ತದೆ. ಆ ಒಂದು ಶಕ್ತಿ, ಆ ಒಂದು ದೈವಿಕ ಪ್ರಕಾಶವು, ನಾನು ಒಬ್ಬಂಟಿಯಾಗಿರುವೆನು, ನಾನು ಹಲವಾರಾಗಿ ವೃದ್ಧಿಸೋಣ ಎಂದು ಯೋಚಿಸಿತು. ಏಕೋಹಂ ಬಹುಸ್ಯಂ (ನಾನು ಒಂದು, ನಾನು ಹಲವಾಗಲಿ), ಮತ್ತು ಅದು ಪರಾಶಕ್ತಿಯ ರೂಪವನ್ನು ಧಾರಣೆ ಮಾಡಿತು. ನಂತರ ಅದರಿಂದ ಮೂರು ಶಕ್ತಿಗಳು ಹೊರಬಂದವು, ಅಂದರೆ ಬ್ರಹ್ಮ, ವಿಷ್ಣು ಮತ್ತು ಮಹೇಶ. ಸೃಜನಶೀಲ ಉತ್ತೇಜನೆ, ರಕ್ಷಣಾತ್ಮಕ ಉತ್ತೇಜನೆ ಮತ್ತು ಪರಿವರ್ತಕ ಅಥವಾ ವಿನಾಶಕಾರಿ ಉತ್ತೇಜನೆ. ಹೀಗೆ ಶಕ್ತಿಯ ಮೂರು ವಾಹಿನಿಗಳು ಬ್ರಹ್ಮ, ವಿಷ್ಣು ಮತ್ತು ಮಹೇಶ ಎಂದು ಕರೆಯಲ್ಪಡುತ್ತವೆ. ಅದಕ್ಕಾಗಿಯೇ, ಆರಂಭದಲ್ಲಿ ಕೇವಲ ಒಂದು ಓಂಕಾರ ಮಾತ್ರವಿತ್ತು ಎಂದು ಹೇಳಲಾಗಿರುವುದು. ಮತ್ತು ಓಂಕಾರವು ’ಆ’, ’ಊ’ ಮತ್ತು ’ಮ’ ಆಯಿತು. ನಾವು ಯೋಚಿಸುವುದೇನೆಂದರೆ, ಆ’, ’ಊ’ ಮತ್ತು ’ಮ’ ಇವುಗಳು ಜೊತೆಯಲ್ಲಿ ಓಂಕಾರವನ್ನು ಮಾಡಿದುವು ಎಂದು. ಅಲ್ಲ! ಓಂ ಎಂಬುದು ಆರಂಭವಾಗಿತ್ತು ಮತ್ತು ಈ ಒಂದು ಉತ್ತೇಜನೆಯು ಮೂರು ವಿವಿಧ ಉತ್ತೇಜನೆಗಳು ಅಥವಾ ದೇವತೆಗಳಾಗಿ ವಿಸ್ತಾರಗೊಂಡಿತು.

ಹೀಗೆ ಒಬ್ಬ ಪರಮಾತ್ಮ ಅಥವಾ ಒಂದು ದೈವತ್ವವು ಹಲವಾಗಿ ವೃದ್ಧಿಸಿತು; ಈ ವೈವಿಧ್ಯಮಯ ಸೃಷ್ಟಿಯು ಅಸ್ತಿತ್ವಕ್ಕೆ ಬರಲೆಂದು.

ಆರಂಭದಲ್ಲಿ ಒಂದೇ ಒಂದು ಅಮೀಬಿಯಾಸಿಸ್ ಇತ್ತು ಎಂದು ಎಲ್ಲಾ ವಿಜ್ಞಾನಿಗಳು ಹೇಳುತ್ತಾರೆ. ಒಂದು ಅಮೀಬಿಯಾಸಿಸ್‌ನಿಂದ ವಿಶ್ವದಲ್ಲಿರುವ ಎಲ್ಲಾ ಬಗೆಯ ಜೀವಿಗಳು ಅಂಕುರಗೊಂಡಿವೆ.

ಪ್ರಶ್ನೆ: ಗುರುದೇವ, ಈ ಪ್ರಪಂಚದಲ್ಲಿ ಎಲ್ಲವೂ ಬದಲಾಗುತ್ತದೆಯೆಂದು ನೀವು ಹೇಳಿರುವಿರಿ. ಕಾಲದಿಂದ ಕಾಲಕ್ಕೆ ಜ್ಞಾನ ಕೂಡಾ ಬದಲಾಗುತ್ತದೆಯೇ ಎಂದು ನಾನು ತಿಳಿಯಲು ಬಯಸುತ್ತೇನೆ. ಹಲವಾರು ವರ್ಷಗಳಿಂದ ನಾವು ಅದೇ ಭಗವದ್ಗೀತೆಯನ್ನು ಓದುತ್ತಿದ್ದೇವೆ. ಅದು ಇನ್ನೂ ಪ್ರಸ್ತುತವೇ?

ಶ್ರೀ ಶ್ರೀ ರವಿ ಶಂಕರ್: ಜ್ಞಾನದಲ್ಲಿ ವಿವಿಧ ಹಂತಗಳ ತಿಳುವಳಿಕೆಯಿದೆ. ಚೇತನದ ಬೇರೆ ಬೇರೆ ಸ್ಥಿತಿಗಳಲ್ಲಿ ಜ್ಞಾನವು ಒಂದು ಬೇರೆಯ ಮಗ್ಗುಲನ್ನು ತೆರೆಯುತ್ತದೆ. ಜ್ಞಾನವು ಬದಲಾಗುವುದಿಲ್ಲ, ಅದಲ್ಲಿದೆ, ಆದರೆ ನಿಮ್ಮ ಚೇತನವು ತೆರೆಯುವಾಗ; ನಿಮ್ಮ ಚೇತನವು ಅರಳುವಾಗ ಅದು ನಿಮಗೊಂದು ಹೆಚ್ಚಿನ ಅರ್ಥವನ್ನು ನೀಡುತ್ತದೆ.

ಪ್ರಶ್ನೆ: ಗುರುದೇವ, ಇಂದಿನ ಪ್ರಪಂಚದಲ್ಲಿ ಅಮೇರಿಕಾವು ಒಂದು ಆರ್ಥಿಕ ವಿಕ್ಷೇಪದ ಮೂಲಕ ಹಾದುಹೋಗುತ್ತಿದೆ, ಅದು ಹಲವಾರು ಇತರ ದೇಶಗಳ ಮೇಲೆ ಪ್ರಭಾವ ಬೀರುತ್ತಿದೆ. ದೇಶಗಳ ಮೇಲೆ ಒಟ್ಟಾಗಿ ಪ್ರಭಾವ ಬೀರುವಂತಹ ಯಾವುದಾದರೂ ಕರ್ಮ ಕೂಡಾ ಇದೆಯೇ?

ಶ್ರೀ ಶ್ರೀ ರವಿ ಶಂಕರ್: ಅಮೇರಿಕಾವು ಇರಾಕಿನೊಂದಿಗೆ ಯುದ್ಧ ಮಾಡಲು ಹೋದಾಗ ಅದೊಂದು ಬಹಳ ತಪ್ಪಾದ ಹೆಜ್ಜೆಯನ್ನು ತೆಗೆದುಕೊಂಡಿತು. ಹಲವಾರು ವರ್ಷಗಳವರೆಗೆ ಅದು ಪ್ರತಿದಿನವೂ ಒಂದು ಬಿಲಿಯನ್ ಡಾಲರ್‌ಗಳನ್ನು ವ್ಯಯಿಸಿತು. ಐದರಿಂದ ಆರು ವರ್ಷಗಳವರೆಗೆ ಅಮೇರಿಕಾವು ಪ್ರತಿದಿನವೂ ಒಂದು ಬಿಲಿಯನ್ ಡಾಲರ್‌ಗಳನ್ನು ಖರ್ಚು ಮಾಡುತ್ತಾ ಹೋಯಿತು. ನೀವು ಊಹಿಸಬಲ್ಲಿರೇ, ಇರಾಕಿನೊಂದಿಗಿನ ಈ ಯುದ್ಧದಲ್ಲಿ, ಯಾವತ್ತೂ ಇಲ್ಲದೇ ಇದ್ದ ಸಮೂಹ ನಾಶಕ ಶಸ್ತ್ರವನ್ನು ಕಂಡುಹಿಡಿಯುವುದಕ್ಕಾಗಿ ಟ್ರಿಲಿಯನ್‌ಗಟ್ಟಲೆ ಡಾಲರ್‌ಗಳನ್ನು ಖರ್ಚು ಮಾಡಲಾಯಿತೆಂಬುದನ್ನು? ಹೀಗಾಗಿ ಅದು ತನ್ನಲ್ಲಿದ್ದ ಬಹಳಷ್ಟು ಸಂಪನ್ಮೂಲಗಳನ್ನು ತಾನಾಗಿಯೇ ಬರಿದಾಗಿಸಿಕೊಂಡಿತು. ಸ್ವಾಭಾವಿಕವಾಗಿಯೇ ಈಗ ಒಂದು ದೊಡ್ಡ ವಿಷಮಸ್ಥಿತಿಯಿದೆ.

ಆದರೆ ನಾನು ನಿಮಗೆ ಭರವಸೆ ನೀಡಲು ಬಯಸುತ್ತೇನೆ, ಅಮೇರಿಕವು ಈ ಬಿಕ್ಕಟ್ಟಿನಿಂದ ಹೊರಬರುವುದು. ಇದರ ಬಗ್ಗೆ ನಾವು ಅತಿಯಾಗಿ ಚಿಂತಿಸುವುದಾಗಲೀ ಅಥವಾ ಕಾಳಜಿ ವಹಿಸುವುದಾಗಲೀ ಬೇಕಿಲ್ಲ.

ಒಂದೇ ವಿಷಯವೆಂದರೆ, ಅಮೇರಿಕವು ಎಲ್ಲಾದರೂ ಇನ್ನೊಂದು ಯುದ್ಧ ಮಾಡುವ ಸಾಹಸಕ್ಕೆ ಕೈಹಾಕಬಾರದು. ನೋಡಿ, ಇರುವ ದಾರಿಯು ಮಾತುಕತೆಯಾಗಿದೆ. ಇರಾಕ್ ಕೆಟ್ಟ ಸ್ಥಿತಿಯಿಂದ ಅತ್ಯಂತ ಕೆಟ್ಟ ಸ್ಥಿತಿಗೆ ಹೋಗಿದೆ. ಇವತ್ತು ಇರಾಕ್ ಅಂತಹ ಒಂದು ಕೆಟ್ಟ ಪರಿಸ್ಥಿತಿಯಲ್ಲಿದೆ. ಪ್ರತಿದಿನವೂ ಅಲ್ಲಿ ಬಾಂಬ್ ಸ್ಫೋಟವಾಗುತ್ತಿದೆ. ಪ್ರತಿದಿನವೂ ಜನರು ಕೊಲ್ಲಲ್ಪಡುತ್ತಿದ್ದಾರೆ. ಇದು ಪ್ರಜಾಪ್ರಭುತ್ವವೇ? ಯಾರಾದರೂ ಸ್ವಾಗತಿಸಿದ್ದಿರಬಹುದಾದ ಅಥವಾ ಇಷ್ಟಪಟ್ಟಿದ್ದಿರಬಹುದಾದ ಒಂದು ಹೊಸ ಬದಲಾವಣೆಯೇ ಇದು? ಇದು ಪಾಠಗಳಾಗಿವೆ. ಇವುಗಳು ನಾವು ಪರಿಶೀಲಿಸಬೇಕಾದ ದೊಡ್ಡ ಪ್ರಶ್ನೆಗಳಾಗಿವೆ.

ಅಮೇರಿಕಾವು ಹಲವಾರು ಸೈನಿಕರನ್ನು ಕಳೆದುಕೊಂಡಿತು ಮತ್ತು ಯುದ್ಧದಲ್ಲಿದ್ದ ಹಲವಾರು ಸೈನಿಕರು ಬಹಳಷ್ಟು ಆಘಾತಕ್ಕೊಳಗಾಗಿದ್ದಾರೆ. ಈ ಯುದ್ಧದಿಂದ ಯಾರಿಗೂ ಲಾಭವಾಗಿಲ್ಲ. ಪ್ರಪಂಚಕ್ಕೆ ಲಾಭವಾಗಿಲ್ಲ. ಅಮೇರಿಕಾಕ್ಕೆ ಲಾಭವಾಗಿಲ್ಲ. ಈ ಯುದ್ಧದಿಂದಾಗಿ ಇರಾಕಿಗಂತೂ ಖಂಡಿತವಾಗಿಯೂ ಏನೂ ಲಾಭವಾಗಿಲ್ಲ. ಬದಲಾಗಿ ಅಲ್ಲೊಂದು ಮಾತುಕತೆ ನಡೆದಿರುತ್ತಿದ್ದರೆ, ಭಾರತದಂತಹ ದೇಶಗಳು ಒಂದು ದೊಡ್ಡ ಮಧ್ಯಸ್ಥಿಕೆಯ ಪಾತ್ರವನ್ನು ವಹಿಸಲು ಸಾಧ್ಯವಾಗುತ್ತಿತ್ತು. ಹಲವಾರು ಅಪಾರ್ಥಗಳನ್ನು ತಿಳಿಗೊಳಿಸುವ ಸಾಧ್ಯತೆಯಿತ್ತು. ಹೇಗಿದ್ದರೂ ಅದು ಆಗಿಹೋದ ವಿಚಾರ.

ಆದರೆ ಈ ಆಗಿಹೋದ ತಪ್ಪಿನಿಂದ ಕಲಿಯಿರಿ. ಭವಿಷ್ಯದಲ್ಲಿ, ಶಾಂತಿಗೆ ಶಸ್ತ್ರಗಳು ಅಥವಾ ಯುದ್ಧವು ಒಂದು ಉತ್ತರವಲ್ಲ ಎಂಬುದನ್ನು ತಿಳಿಯಿರಿ. ವಾಸ್ತವವಾಗಿ, ಯುದ್ಧದ ಉದ್ದೇಶವೆಂದರೆ ಶಾಂತಿಯನ್ನು ತರುವುದು. ಆದರೆ ಅದು ಸಂಪೂರ್ಣವಾಗಿ ವಿರುದ್ಧವಾಗುತ್ತದೆ.

ಪ್ರಶ್ನೆ: ಗುರುದೇವ, ಕೆಲವು ಧಾರ್ಮಿಕ ಬೋಧನೆಗಳು ಆತ್ಮ ಮತ್ತು ಚೇತನಗಳ ನಡುವೆ ಭೇದವನ್ನು ಕಲ್ಪಿಸುತ್ತವೆ. ವ್ಯಕ್ತಿಯು ಸಾಯುವಾಗ ಆತ್ಮವು ಹೊರದೂಡಲ್ಪಡುತ್ತದೆ ಮತ್ತು ಕೇವಲ ಚೇತನ ಮಾತ್ರ ಅವತರಿಸುತ್ತದೆ ಎಂದು ಹೇಳಲಾಗಿದೆ. ಅಹಂಕಾರವಿರುವ ಮನುಷ್ಯರಿಗೆ ಮಾತ್ರ ಪುನರ್ಜನ್ಮವಿರುವುದು. ವೈದಿಕ ವ್ಯಾಖ್ಯಾನವೇನು?

ಶ್ರೀ ಶ್ರೀ ರವಿ ಶಂಕರ್: ವೈದಿಕ ಕಲ್ಪನೆಯು ವಿಜ್ಞಾನದ ಉಷ್ಣಬಲ (ಥರ್ಮೋಡೈನಮಿಕ್ಸ್) ಸಿದ್ಧಾಂತಕ್ಕೆ ಬಹಳ ಸಮೀಪವಾಗಿದೆ. ಅಂದರೆ, ಶಕ್ತಿಯನ್ನು ಸೃಷ್ಟಿಸಲೂ ಸಾಧ್ಯವಿಲ್ಲ ನಾಶಪಡಿಸಲೂ ಸಾಧ್ಯವಿಲ್ಲ. ಶರೀರವು ಪಂಚಭೂತಗಳಾಗಿ ಭೂಮಿಗೆ ಮರಳಿಹೋಗುತ್ತದೆ. ಶಕ್ತಿಯಾಗಿರುವ ಆತ್ಮವು, ಆಧ್ಯಾತ್ಮಿಕ ಶರೀರದೊಂದಿಗೆ ಉಳಿಯುತ್ತದೆ. ಆತ್ಮವು, ನಂತರ ಪುನಃ, ತಾನು ಬಿಟ್ಟ ಶರೀರದ ಸಂಸ್ಕಾರಗಳಿಂದಾಗಿ, ಹಿಂದಿರುಗಿ ಬರುತ್ತದೆ. ಅದೊಂದು ಸೂಕ್ತವಾದ ಶರೀರವನ್ನು ಕಂಡುಕೊಳ್ಳುತ್ತದೆ ಮತ್ತು ಹಿಂದಿರುಗಿ ಬರುತ್ತದೆ.

ಇವತ್ತು ಪುನರ್ಜನ್ಮದ ಪ್ರಶ್ನೆಯು ಯಾವುದೇ ಅನುಮಾನವನ್ನು ಮೀರಿ ಸ್ಥಾಪನೆಯಾಗಿದೆ. ಇವತ್ತು ಪ್ರಪಂಚದಲ್ಲಿನ ಹಲವಾರು ಆಸ್ಪತ್ರೆಗಳು, ಜನರನ್ನು ಗುಣಪಡಿಸಲು ಮತ್ತು ಜನರಿಗೆ ಕ್ಷೇಮವನ್ನು ತರಲು ಕಳೆದ ಜನ್ಮದ ಪ್ರತಿಗಮನವನ್ನು (ಪಾಸ್ಟ್ ಲೈಫ್ ರಿಗ್ರೆಶನ್) ಒಂದು ಚಿಕಿತ್ಸೆಯಾಗಿ ಬಳಸುತ್ತಿವೆ. ಹೀಗಾಗಿ, ಪುನರ್ಜನ್ಮವಿದೆಯೇ ಅಥವಾ ಇಲ್ಲವೇ ಎಂಬ ಈ ಪ್ರಶ್ನೆಯನ್ನು ಅನುಮಾನವನ್ನು ಮೀರಿ ಸಾಬೀತುಪಡಿಸಲಾಗಿದೆ. ನಾನು ನಿಮಗೆ ಹೇಳುತ್ತೇನೆ ಕೇಳಿ, ಅದು ಇದೆ. ಅದು ಇದೆಯೆಂಬುದು ನನಗೆ ತಿಳಿದಿದೆ, ಆದುದರಿಂದ ನಾನು ನಿಮಗೆ ಅಧಿಕಾರಯುತವಾಗಿ ಹೇಳುತ್ತೇನೆ. ಅದನ್ನು ಸಾಬೀತುಪಡಿಸಿ ಎಂದು ನೀವು ನನ್ನಲ್ಲಿ ಕೇಳಿದರೆ, ನಾನದನ್ನು ನಿಮಗೆ ಸಾಬೀತುಪಡಿಸಲು ಸಾಧ್ಯವಿಲ್ಲ, ಆದರೆ ಅದು ಇದೆಯೆಂದು ನಾನು ನಿಮಗೆ ಹೇಳುತ್ತೇನೆ.

ಪ್ರಶ್ನೆ: ಗುರುದೇವ, ಮಂತ್ರವನ್ನು ೧೦೮ ಸಲ ಜಪಿಸುವುದರ ಮಹತ್ವವೇನು? ಒಂದು ಮಂತ್ರವನ್ನು ವೇಗವಾಗಿ ೧೦೮ ಸಲ ಜಪಿಸುವುದಕ್ಕಿಂತ ಅದನ್ನು ೧೦ ಸಲ ಗಮನವಿರಿಸಿ ಜಪಿಸುವುದು ಉತ್ತಮವೇ?

ಶ್ರೀ ಶ್ರೀ ರವಿ ಶಂಕರ್: ನೀನಿದನ್ನು ಈಗಾಗಲೇ ತಿಳಿದಿರುವೆ! ನಿನಗದನ್ನು ನಿಧಾನವಾಗಿ ಮತ್ತು ಗಮನವಿರಿಸಿ ಮಾಡಲು ಸಾಧ್ಯವಾದರೆ, ಅದು ಉತ್ತಮ. ನೀನದನ್ನು ವೇಗವಾಗಿ ಮಾಡಿದರೂ ಕೂಡಾ ಆಗಲೂ ಅದು ಒಳ್ಳೆಯದು. ಕಡಿಮೆಪಕ್ಷ ನೀನದನ್ನು ಮಾಡುತ್ತಿರುವೆ. ಹೇಗಾದರೂ ಮಾಡು.

ಈಗ, ೧೦೮ ಸಲ ಯಾಕೆ? ಯಾಕೆಂದರೆ ಒಂಭತ್ತು ಗ್ರಹಗಳು ಮತ್ತು ಹನ್ನೆರಡು ನಕ್ಷತ್ರಪುಂಜಗಳಿವೆ. ಒಂಭತ್ತು ಗ್ರಹಗಳು ಹನ್ನೆರಡು ನಕ್ಷತ್ರಪುಂಜಗಳ ಸುತ್ತಲೂ ತಿರುಗುವಾಗ, ಅದು ೧೦೮ ರೀತಿಯ ಬದಲಾವಣೆಗಳನ್ನು ತರುತ್ತದೆ. ಈ ಬದಲಾವಣೆಗಳಲ್ಲಿ ಯಾವುದಾದರೂ ದೋಷವಿದ್ದರೆ, ಅದನ್ನು ಮಂತ್ರಗಳ ಧನಾತ್ಮಕ ಶಕ್ತಿಯೊಂದಿಗೆ ಸರಿಪಡಿಸಬಹುದು.

ಪ್ರಶ್ನೆ: ಗುರುದೇವ, ಕೊನೆಯಲ್ಲಿ ಎರಡು ಪ್ರಶ್ನೆಗಳನ್ನು ಕೇಳಲಾಗುವುದು: ನಾವು ಎಷ್ಟು ಪ್ರೀತಿಯನ್ನು ನೀಡಿದೆವು ಮತ್ತು ನಾವು ಎಷ್ಟು ಜ್ಞಾನವನ್ನು ತೆಗೆದುಕೊಂಡೆವು, ಎಂದು ನೀವು ಹೇಳುತ್ತೀರಿ. ನಾನು ಯಾವಾಗಲೂ ಪ್ರೀತಿಯನ್ನು ಪಡಕೊಂಡಿರುವೆನು ಮತ್ತು ಜ್ಞಾನವನ್ನು ನೀಡಿರುವೆನು. ಈಗ ನನ್ನ ವಿಧಿಯೇನಾಗುವುದು?

ಶ್ರೀ ಶ್ರೀ ರವಿ ಶಂಕರ್: ಕಡಿಮೆಪಕ್ಷ ನೀನು ಇಷ್ಟನ್ನು ಅರ್ಥಮಾಡಿಕೊಂಡಿರುವೆ!

ಇಲ್ಲಿಯವರೆಗೂ ನೀನು ಜ್ಞಾನವನ್ನು ನೀಡುವುದನ್ನು ಆನಂದಿಸಿರುವೆ, ಈಗ ಜ್ಞಾನವನ್ನು ಪಡಕೊಳ್ಳುವುದನ್ನು ಮತ್ತು ಪ್ರೀತಿಯನ್ನು ನೀಡುವುದನ್ನು ಆರಂಭಿಸು. ನೀನು ಎಷ್ಟು ಪ್ರೀತಿಯನ್ನು ಪಡೆಯುವೆಯೋ ಅದಕ್ಕಿಂತ ಹೆಚ್ಚನ್ನು ಇತರರಿಗೆ ನೀಡು ಮತ್ತು ಆಗ ಮುಗಿಯಿತು. ಆಗ ಕಾರು ಒಂದು 'U' ತಿರುವು ತೆಗೆದುಕೊಂಡಂತೆ. ಅದು ತಪ್ಪಾದ ದಿಕ್ಕಿನಲ್ಲಿ ಚಲಿಸುತ್ತಿತ್ತು, ಚಾಲಕನು ತನ್ನ ತಪ್ಪನ್ನು ಅರಿತುಕೊಂಡು ದಿಕ್ಕನ್ನು ಬದಲಾಯಿಸಿದನು.

ಅದರರ್ಥ ನಾವು ಜ್ಞಾನವನ್ನು ಹಂಚುವುದನ್ನು ನಿಲ್ಲಿಸಬೇಕೆಂದೇ? ಅಲ್ಲ, ನಿಲ್ಲಿಸುವ ಅಗತ್ಯವಿಲ್ಲ. ಜ್ಞಾನವನ್ನು ಕೊಡುವುದನ್ನು ಮುಂದುವರಿಸು. ನೀನು ಏನನ್ನೆಲ್ಲಾ ಪಡೆಯುವೆಯೋ, ಅದನ್ನು ನೀನು ನೀಡು ಮತ್ತು ಆ ಜ್ಞಾನವನ್ನು ಪ್ರೀತಿಯಿಂದ ನೀಡು. ಅದನ್ನು ನಿನ್ನ ಅಹಂಕಾರವನ್ನು ಹಿಗ್ಗಿಸಲು ನೀಡಬೇಡ. ಆ ವ್ಯಕ್ತಿಗೆ ಈ ಜ್ಞಾನದ ಅಗತ್ಯವಿದೆ, ಈ ಉದ್ದೇಶದೊಂದಿಗೆ ಜ್ಞಾನವನ್ನು ಹಂಚು.

ಚಲಿಸುವ ಚಿತ್ರಗಳ ರೂಪದಲ್ಲಿ ಇದನ್ನು ನೋಡಲು ಲಿಂಕ್: 

'Mantra' illuminates our heart