ಶುಕ್ರವಾರ, ಜನವರಿ 29, 2016

ನಿಮ್ಮ ಒಳ್ಳೆಯ ಗುಣವು ಪ್ರಕಟವಾಗಲಿ

೨೯ ಜನವರಿ ೨೦೧೬
ಬೆಂಗಳೂರು

ಪ್ರಶ್ನೆ: ಜಾಗತಿಕ ಶಾಂತಿಯು ವೈಯಕ್ತಿಕ ಶಾಂತಿಯನ್ನು ಅವಲಂಬಿಸಿದೆಯೇ?

ಶ್ರೀ ಶ್ರೀ ರವಿ ಶಂಕರ್: ವೈಯಕ್ತಿಕ ಶಾಂತಿಯಿಲ್ಲದೆ ಜಾಗತಿಕ ಶಾಂತಿಯನ್ನು ಹೊಂದುವುದು ಅಸಾಧ್ಯ. ವೈಯಕ್ತಿಕ ಸಂತೋಷವು ಸಾಮೂಹಿಕ ಸಂತೋಷವನ್ನು ತರುತ್ತದೆ. ವ್ಯಕ್ತಿಯನ್ನು ಹೊರತುಪಡಿಸಿದ ಸಮಾಜವಿರುವುದು ಅಸಾಧ್ಯ.

ಶಾಂತಿಯು ವ್ಯಕ್ತಿಯ ಒಳಗಿರುತ್ತದೆ, ಒಬ್ಬನ ಮನಸ್ಸಿನಲ್ಲಿ ಮತ್ತು ಒಬ್ಬನ ಹೃದಯದಲ್ಲಿ. ಒಬ್ಬ ವ್ಯಕ್ತಿಯು ಶಾಂತಿಯುತವಾಗಿಲ್ಲದಿದ್ದರೆ ಆ ಕುಟುಂಬದಲ್ಲಿ ಶಾಂತಿಯಿರಲು ಅಸಾಧ್ಯ ಮತ್ತು ಕುಟುಂಬಗಳು ಸಾಮರಸ್ಯದಲ್ಲಿರದಿದ್ದರೆ ಅಥವಾ ಶಾಂತಿಯುತವಾಗಿರದಿದ್ದರೆ ಸಮಾಜದಲ್ಲಿ ಶಾಂತಿಯಿರುವುದು ಅಸಾಧ್ಯ. ಪ್ರತಿಯೊಂದು ಕುಟುಂಬದಲ್ಲಿ ಶಾಂತಿಯಿಲ್ಲದಿದ್ದರೆ ಸಮಾಜದಲ್ಲಿ ಶಾಂತಿಯಿರುವುದು ಅಸಾಧ್ಯ, ಮತ್ತು ಸಮಾಜಗಳು ಪ್ರಪಂಚವನ್ನು ನಿರ್ಮಿಸುತ್ತವೆ. ಆದ್ದರಿಂದ ಜಾಗತಿಕ ಶಾಂತಿಯ ಮೂಲ ಘಟಕವು ವೈಯಕ್ತಿಕ ಶಾಂತಿಯಾಗಿದೆ. ವ್ಯಕ್ತಿಗೆ ಶಾಂತಿಯನ್ನು ತರುವುದು ಜ್ಞಾನವಾಗಿದೆ. ಎಲ್ಲಾ ಸೌಲಭ್ಯಗಳನ್ನು, ಉಪಕರಣಗಳನ್ನು, ಆಹಾರವನ್ನು, ಮನೋರಂಜನೆಯನ್ನು, ಸೌಕರ್ಯಗಳನ್ನು ಹೊಂದಿರುವ ಹೊರತಾಗಿಯೂ ಜ್ಞಾನವಿಲ್ಲದೇ ಇದ್ದರೆ ಒಬ್ಬ ವ್ಯಕ್ತಿಯಲ್ಲಿ ಯಾವುದೇ ಶಾಂತಿಯಿರುವುದಿಲ್ಲ. ಇವುಗಳೆಲ್ಲಾ ನಿಜವಾಗಿಯೂ ಶಾಂತಿಯನ್ನು ತರುವುದಿಲ್ಲ. ಶಾಂತಿಯನ್ನು ತರುವುದು ಯಾವುದೆಂದರೆ ವಿಶಾಲ ದೃಷ್ಟಿಕೋನ ಮತ್ತು ಜೀವನವನ್ನು ವ್ಯಾಪಕವಾದ ವಿಶ್ವದ ಹಿನ್ನೆಲೆಯಲ್ಲಿ ನೋಡುವ ಜ್ಞಾನ.

ತಮಾಷೆಯ ವಿಷಯವೆಂದರೆ, ಭೂಮಿಯ ಮೇಲಿರುವ ಜನರಲ್ಲಿ ಬಹಳ ಕಡಿಮೆ ಶೇಕಡಾದಷ್ಟು ಜನರು ಕೂಡಾ ನಿಜಕ್ಕೂ ಶಾಂತವಾಗಿದ್ದರೆ ಅವರು ಶಾಂತಿಸ್ಥಾಪಕರಾಗುತ್ತಾರೆ. ಶೀತ ಅಥವಾ ಕೆಮ್ಮಿನಂತಹ ಯಾವುದೇ ಸಾಂಕ್ರಾಮಿಕ ರೋಗದಷ್ಟೇ ಸಾಂಕ್ರಾಮಿಕವಾಗಿದೆ ಶಾಂತಿ. ಶಾಂತಿಯು ವೈರಲ್ ಆಗಿದೆ! ನಿಜವಾದ ಶಾಂತಿ ಮತ್ತು ಜ್ಞಾನವು ಸಾಂಕ್ರಾಮಿಕವಾಗಿದೆಯೆಂದು ನಾನು ಹೇಳುತ್ತೇನೆ.

ಪ್ರಶ್ನೆ: ಪ್ರಜ್ಞೆಯನ್ನು ಉನ್ನತಿಗೇರಿಸುವಲ್ಲಿ ಸಂಗೀತವು ಯಾವ ಪಾತ್ರವನ್ನು ವಹಿಸಬಲ್ಲದು?

ಶ್ರೀ ಶ್ರೀ ರವಿ ಶಂಕರ್: ಸಂಗೀತವು ಸಾಮರಸ್ಯಪೂರ್ಣವಾದ ಧ್ವನಿಯಾಗಿದೆ. ಒಳಗಡೆ ಸಾಮರಸ್ಯವಿದ್ದಲ್ಲಿ ಆಗ ಸಂಗೀತವು ಒಂದು ಹೊರೆಯಾಗಿದೆ, ಆದರೆ ಒಳಗಡೆ ಸಾಮರಸ್ಯವಿಲ್ಲದಿರುವಾಗ ಖಂಡಿತವಾಗಿಯೂ ಸಂಗೀತದ ಬಾಹ್ಯ ಸಾಮರಸ್ಯವು ಆಂತರಿಕ ಶಾಂತಿಯನ್ನು ಮತ್ತು ಸಾಮರಸ್ಯವನ್ನು ಸೃಷ್ಟಿಸಬಲ್ಲದು.

ಒಬ್ಬ ಧ್ಯಾನ ಮಾಡುವವನಿಗೆ, ಒಬ್ಬ ಯೋಗಿಗೆ ಸಂಗೀತವು ಸ್ವಲ್ಪ ಕರ್ಕಶವಾಗಿ ಅನಿಸುತ್ತದೆ, ಯಾಕೆಂದರೆ ಅವನು ಅಥವಾ ಅವಳು ಸಂಗೀತದ ಸಮರಸಕ್ಕಿಂತ ಹೆಚ್ಚು ಉತ್ತಮವಾದ ಒಂದರ ರುಚಿ ನೋಡಿರುತ್ತಾನೆ ಅಥವಾ ನೋಡಿರುತ್ತಾಳೆ - ಅದುವೇ ಮೌನದ ತಾಳ. ಅದನ್ನೇ ಪ್ರಾಚೀನ ಯೋಗಿಗಳು "ಒಂದು ಕೈಯ ಚಪ್ಪಾಳೆ" ಎಂದು ಕರೆದುದು. ಬ್ರಹ್ಮಾಂಡದ ಅನುಕಂಪನ, ಆದಿ ಧ್ವನಿ - ಈ ಎಲ್ಲಾ ಹೆಸರುಗಳನ್ನು ನೀಡಲಾಗಿರುವುದು ಆಳದಲ್ಲಿರುವ ಆ ಸಮರಸತೆಗೆ; ಮೂಲಭೂತವಾಗಿ ಅದು ಮೌನವೇ ಆಗಿದೆ.

ಪ್ರಶ್ನೆ: ಜೀವನವು ಮೊದಲಿಗಿಂತ ಅಷ್ಟೊಂದು ವ್ಯತ್ಯಸ್ತವಾಗಿರುವುದನ್ನು ಪರಿಗಣಿಸಿದಾಗ, ಇವತ್ತು ಸಂಸ್ಕೃತಿಯು ಎಷ್ಟು ಪ್ರಸ್ತುತ?

ಶ್ರೀ ಶ್ರೀ ರವಿ ಶಂಕರ್: ಈ ವಿಷಯಗಳನ್ನು ಯಾವತ್ತೂ ನೀವು ಸಾರ್ವತ್ರೀಕರಣಗೊಳಿಸಲು ಸಾಧ್ಯವಿಲ್ಲ. ಪ್ರಪಂಚದಲ್ಲಿ ಎಲ್ಲಾ ರೀತಿಯ ಪರಿಸ್ಥಿತಿಗಳಿರುತ್ತವೆ, ಎಲ್ಲಾ ರೀತಿಯ ಜನರಿರುತ್ತಾರೆ, ಎಲ್ಲಾ ರೀತಿಯ ಸಂಸ್ಕೃತಿಗಳಿರುತ್ತವೆ. ಸಂಸ್ಕೃತಿಯಿಲ್ಲದೆ ಜೀವಿಸಲು ಜನರಿಗೆ ಸಾಧ್ಯವಿಲ್ಲ. ಸಂಸ್ಕೃತಿ ಬದಲಾಗಲೂಬಹುದು, ಆದರೆ ಒಂದು ಸಂಸ್ಕೃತಿಯಿಲ್ಲದೆ ಒಂದು ಸಮಾಜದಲ್ಲಿ ಬದುಕಲು ನಿಮಗೆ ಸಾಧ್ಯವಿಲ್ಲ. "ನಮ್ಮದು ಸಂಸ್ಕೃತಿಯಿಲ್ಲದ ಒಂದು ಸಮಾಜ" ಎಂದು ಯಾವುದಾದರೂ ಸಮಾಜವು ಹೇಳಿಕೊಂಡರೆ, ನಾನು ನಿಮಗೆ ಹೇಳುವುದೇನೆಂದರೆ, ಅದುವೇ ಒಂದು ಸಂಸ್ಕೃತಿಯೆಂದು. ಮತ್ತು ಪ್ರಪಂಚದಲ್ಲಿನ ಎಲ್ಲಾ ವಿವಿಧ ಸಂಸ್ಕೃತಿಗಳನ್ನು ಕಾಪಾಡುವುದು ನಮ್ಮ ಕರ್ತವ್ಯ ಯಾಕೆಂದರೆ, ಅವುಗಳು ಪ್ರಪಂಚದ ಪರಂಪರೆಯಾಗಿದೆ.

ಪ್ರಶ್ನೆ: ಸೇವೆಯು ತೃಪ್ತಿಯನ್ನು ತರುತ್ತದೆ, ಪ್ರತಿಯೊಬ್ಬರೂ ಅದನ್ನು ಯಾಕೆ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದಿಲ್ಲ? ಅದು ಯಾಕೆ ಎಲ್ಲರಿಗೂ ಸಹಜವಾಗಿ ಬರುವುದಿಲ್ಲ?

ಶ್ರೀ ಶ್ರೀ ರವಿ ಶಂಕರ್: ಸೇವೆಯನ್ನು ಮಾಡದಿರುವವನೊಬ್ಬನು ಒತ್ತಡದಲ್ಲಿರುವವನಾಗಿರುವುದು, ಅಸುರಕ್ಷಿತ, ಸ್ವಾರ್ಥಪರ ಅಥವಾ ಜ್ಞಾನವಿಲ್ಲದಿರುವವನಾಗಿರುವುದು ಸ್ವಾಭಾವಿಕವೇ. ಸ್ವಲ್ಪವಾದರೂ ಜ್ಞಾನವಿದ್ದರೆ, ಸೇವೆಯು ಸಹಜವಾಗಿರುತ್ತದೆ. ನೀವು ಸುಸಂಸ್ಕೃತರೂ ನಾಗರಿಕರೂ ಆಗಿದ್ದರೆ, ಆಗ ಸೇವೆಯು ಸಹಜವಾಗಿರುತ್ತದೆ. ಸೇವೆ ಮಾಡುವುದನ್ನು ಯಾರೂ ನಿಮಗೆ ಕಲಿಸಬೇಕಾಗಿಲ್ಲ. ಯಾವುದಾದರೂ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಯಾರೂ ನಿಮಗೆ ಹೇಳಬೇಕಾಗಿಲ್ಲ.
ಚೆನ್ನೈ ಪ್ರವಾಹದ ಸಂದರ್ಭದಲ್ಲಿ ಏನಾಯಿತು ನೋಡಿ? "ನೀವೆಲ್ಲಾ ಬಂದು ಸಹಾಯ ಮಾಡಿ" ಎಂದು ಯಾರೂ ಜನರನ್ನು ಆಹ್ವಾನಿಸಲಿಲ್ಲ. ಚೆನ್ನೈಯ ಇಡೀ ಯುವಕರು, ಯುವಕರು ಮಾತ್ರವಲ್ಲ, ಚೆನ್ನೈಯ ಜನರೆಲ್ಲಾ ಒಟ್ಟು ಸೇರಿ ಪರಸ್ಪರ ಸಹಾಯ ಮಾಡಿದರು. ಈ ದುರಂತಗಳು ಯಾವುದೋ ವಿಚಿತ್ರವಾದ ರೀತಿಯಲ್ಲಿ ಜನರನ್ನು ಒಂದುಗೂಡಿಸುತ್ತವೆ, ಶತ್ರುಗಳನ್ನು ಒಂದುಗೂಡಿಸುತ್ತವೆ. ತಮ್ಮ ಸಹಜವಾದ ಮಾನವೀಯ ಮೌಲ್ಯಗಳನ್ನು ಅರಿತುಕೊಳ್ಳಲು ದುರಂತಗಳು ಜನರನ್ನು ವಿವಶರಾಗಿಸುತ್ತವೆ. ನೀವು ಬುದ್ಧಿವಂತರಾಗಿದ್ದರೆ, ನಿಮ್ಮ ಅತ್ಯಂತ ಒಳ್ಳೆಯ ಗುಣವನ್ನು ಹೊರತರುವುದಕ್ಕಾಗಿ ನೀವೊಂದು ದುರಂತಕ್ಕಾಗಿ ಕಾಯುವುದಿಲ್ಲ.  

ಪ್ರಶ್ನೆ: ಜೀವನದಲ್ಲಿ ನಾವೊಂದು ಒಳ್ಳೆಯ ಹಾಸ್ಯಪ್ರಜ್ಞೆಯನ್ನು ಹೊಂದಿರುವುದು ಹೇಗೆ?

ಶ್ರೀ ಶ್ರೀ ರವಿ ಶಂಕರ್: ನೀನಿದರ ಬಗ್ಗೆ ಮರೆತುಬಿಡಬೇಕೆಂದು ನನಗನಿಸುತ್ತದೆ. ಹಾಸ್ಯವಿರಬೇಕೆಂದು ಬಯಸುವುದೇ ಹಾಸ್ಯವಿರುವುದಕ್ಕೆ ಒಂದು ತಡೆಯಾಗಿದೆ. ಅದು ಹೇಗೆಂದರೆ ಒಬ್ಬರು, "ನಾನು ನಿದ್ರಿಸಲು ಬಯಸುತ್ತೇನೆ, ನಾನು ನಿದ್ರಿಸಲು ಬಯಸುತ್ತೇನೆ, ನಾನು ನಿದ್ರಿಸಲು ಬಯಸುತ್ತೇನೆ" ಎಂದು ಹೇಳುವಂತೆ. ನಿದ್ರಿಸಲು ಬಯಸುವ ಆ ಜ್ವರತೆಯೇ ಒಂದು ತಡೆಯಾಗುತ್ತದೆ. ನೀವೊಂದು ಚಿಕ್ಕ ನಿದ್ರೆ ಮಾಡುವ ಆತುರದಲ್ಲಿದ್ದರೆ, ಅದು ಸಾಧ್ಯವಾಗದು. ಅದೇ ರೀತಿ, "ನಾನು ಹಾಸ್ಯಮಯವಾಗಿರಲು ಬಯಸುತ್ತೇನೆ" ಎಂದು ಯೋಚಿಸುವುದು; ಅದು ಸಾಧ್ಯವಾಗದು! ಸುಮ್ಮನೆ ಆರಾಮವಾಗಿರಿ ಮತ್ತು ಇತರರಿಗೆ ನಿಮ್ಮ ಮೇಲಿರುವ ಅಭಿಪ್ರಾಯದ ಬಗ್ಗೆ ಚಿಂತಿಸಬೇಡಿ. ಸೂತ್ರವೇನೆಂದರೆ, ನಿಮ್ಮ ಬಗ್ಗೆ ಇತರರು ಏನನ್ನು ಯೋಚಿಸುವರು ಎಂಬುದರ ಬಗ್ಗೆ ಚಿಂತಿಸಬೇಡಿ.

ಪ್ರಶ್ನೆ: ಬ್ರಹ್ಮಚರ್ಯವೆಂದರೇನು? ಹಲವಾರು ವಿಚಲನೆಗಳಿರುವಾಗ ನಾನು ಬ್ರಹ್ಮಚರ್ಯವನ್ನು ಅನುಸರಿಸುವುದು ಹೇಗೆ?

ಶ್ರೀ ಶ್ರೀ ರವಿ ಶಂಕರ್: "ಬ್ರಹ್ಮ" ಅಂದರೆ ಅನಂತತೆ. "ಚರ್ಯ" ಅಂದರೆ ಅನಂತತೆಯಲ್ಲಿ ಚಲಿಸುವುದು. ಅಂದರೆ, ಸಂಪೂರ್ಣ (ಅನಂತತೆ)ದ ಮೇಲೆ ಕೇಂದ್ರೀಕೃತವಾದ ಮನಸ್ಸಿನ ಸ್ಥಿತಿ - ಅಂತಹ ಒಂದು ಮನಸ್ಸಿನಲ್ಲಿ ಯಾವುದೇ ಸ್ವಾಧೀನತೆಯ ಭಾವವಿಲ್ಲ, ಯಾವುದೇ ಕಾಮುಕತೆಯಿಲ್ಲ, ಯಾವುದೇ ಲೋಭವಿಲ್ಲ; ಈ ನಕಾರಾತ್ಮಕ ಧಾರಣೆಗಳಲ್ಲಿ ಯಾವುದೂ ಮನಸ್ಸನ್ನು ಮಸುಕಾಗಿಸುವುದಿಲ್ಲ. ಇದುವೇ ಅದರ ಸರಿಯಾದ ಅರ್ಥ. ಇಂದ್ರಿಯ ನಿಗ್ರಹವು ಇದರ ಒಂದು ಫಲಿತಾಂಶವಾಗಿದೆ; ಅದು ಇದರ ಒಂದು ಭಾಗವಾಗಿದೆ.

ನೋಡಿ, ನಿಮಗೊಂದು ಪರೀಕ್ಷೆ ಅಥವಾ ಏನಾದರೂ ಮುಖ್ಯವಾದ ಕಾರ್ಯ ಮಾಡಲಿರುವಾಗ; ನಿಮ್ಮ ಮನಸ್ಸು ಅದರಲ್ಲಿರುವಾಗ, ಆಗ ಮನಸ್ಸು ಶರೀರದ ಯಾವುದೇ ಅಂಗದ ಕಡೆಗೂ ಹೋಗುವುದಿಲ್ಲ ಅಥವಾ ಯಾವುದಾದರೂ ಆಕರ್ಷಣೆ ಅಥವಾ ಲೈಂಗಿಕತೆಯ ಕಡೆಗೆ ಗಮನ ನೀಡುವುದಿಲ್ಲ. ನೀವು ವ್ಯಸ್ತರಾಗಿರುತ್ತೀರಿ. ನಿಮ್ಮ ಮನಸ್ಸು ಒಂದು ದೊಡ್ಡದರ ಕಡೆಗೆ ಸಾಗುತ್ತಿರುತ್ತದೆ. ಅದಲ್ಲವೇ ಒಬ್ಬರ ಅನುಭವ? ಆಗ ನೀವು ಬ್ರಹ್ಮಚರ್ಯದ ಕ್ಷಣಗಳನ್ನು ಅನುಭವಿಸುತ್ತೀರಿ. ನೀವು ಯಾವುದರಲ್ಲಾದರೂ ತೊಡಗಿದ್ದರೆ, ಅಥವಾ ನೀವು ಆಳವಾದ ಪ್ರೇಮದಲ್ಲಿರುವಾಗ ಕೂಡಾ ಇದು ತನ್ನಿಂತಾನೇ ಆಗುತ್ತದೆ. ಆದ್ದರಿಂದ ಬ್ರಹ್ಮಚರ್ಯವು ಒಂದು ಆಗುವಿಕೆಯಾಗಿದೆ, ಅದುವೇ ಒಂದು ಅಭ್ಯಾಸವಲ್ಲ. ನಿಮ್ಮ ಪ್ರಜ್ಞೆಯು ವಿಸ್ತರಿಸುವಾಗ ಆಗುವುದು ಅದು.

ಪ್ರಶ್ನೆ: ಋಗ್ವೇದದಲ್ಲಿ ಅಗ್ನಿ ಸೂಕ್ತವು ಹೀಗೆಂದು ಹೇಳುತ್ತದೆ, "ಅಗ್ನಿಯು ನಮ್ಮನ್ನು ಜ್ಞಾನದ ಕಡೆಗೆ ಕೊಂಡೊಯ್ಯಬೇಕು". ಇದರ ಅರ್ಥವೇನು?

ಶ್ರೀ ಶ್ರೀ ರವಿ ಶಂಕರ್: ಅಗ್ನಿ ಅಂದರೆ ಸಂಪೂರ್ಣ ವಿಶ್ವವನ್ನು ಆವರಿಸಿರುವ ಆ ಪ್ರಜ್ಞೆ, ಆ ಶಕ್ತಿ - ಆ ಪ್ರಜ್ಞೆಯಿಂದ ನೀವು ಮಾಡಲ್ಪಟ್ಟಿದ್ದೀರಿ, ಅದರಿಂದಲೇ ಎಲ್ಲವೂ ಮಾಡಲ್ಪಟ್ಟಿದೆ. ಹಲವು ಸಲ ಜನರು, "ಆತ್ಮದಲ್ಲಿರುವ ಅಗ್ನಿ" ಎಂದು ಹೇಳುತ್ತಾರೆ. ಈ ಅಗ್ನಿಯು ಒಂದು ಮರ್ತ್ಯ ಅಗ್ನಿಯಲ್ಲ, ನಿಮ್ಮ ಜೀವನವೇ ಅಗ್ನಿಯಾಗಿದೆ. ಪ್ರಜ್ಞೆಯು ಅಗ್ನಿಯಾಗಿದೆ. ಜ್ವಾಲೆಯು ಆಮ್ಲಜನಕದಿಂದಾಗಿ ಅಸ್ತಿತ್ವದಲ್ಲಿರುತ್ತದೆ, ಹಾಗೆಯೇ ನಿಮ್ಮ ಜೀವನವೂ ಆಮ್ಲಜನಕದಿಂದ ಅಸ್ತಿತ್ವದಲ್ಲಿದೆ. ನೀವೊಂದು ಗಾಜಿನಿಂದ ಮುಚ್ಚಲ್ಪಟ್ಟಿದ್ದೀರಿ ಎಂದು ಊಹಿಸಿಕೊಳ್ಳಿ, ಅದರಲ್ಲಿ ಆಮ್ಲಜನಕ ಇರುವಷ್ಟು ಕಾಲ ಮಾತ್ರ ನೀವು ಜೀವಂತವಾಗಿರುವಿರಿ. ಆದ್ದರಿಂದ ನಿಮ್ಮ ಪ್ರಾಣಶಕ್ತಿಯು ಬೆಂಕಿಗೆ ಸಮಾನವಾಗಿದೆ.

ಆ ಮಂತ್ರವು ಒಂದು ಸುಂದರವಾದ ಪ್ರಾರ್ಥನೆಯಾಗಿದೆ. ಅದು ಹೀಗೆಂದು ಹೇಳುತ್ತದೆ, "ನನ್ನನ್ನು ಒಂದು ಹೊಸ ಪಥದೊಳಕ್ಕೆ ಕೊಂಡೊಯ್ಯು. ಪ್ರಪಂಚದಲ್ಲಿರುವ ಜನರಿಗೆ ನಾನು ಒಳ್ಳೆಯದನ್ನು ಮಾಡುವಂತಾಗಲಿ. ವಿಶ್ವದಲ್ಲಿನ ಎಲ್ಲಾ ದೈವಿಕ ಶಕ್ತಿಗಳು ನನಗೆ ಸಹಾಯ ಮಾಡಲಿ, ನನ್ನನ್ನು ಜೊತೆಯಲ್ಲಿ ಕರೆದೊಯ್ಯು". ಇದು ಎಷ್ಟೊಂದು ಸುಂದರವಾದ ಪ್ರಾರ್ಥನೆ! ಪ್ರಾಚೀನ ಜನರಲ್ಲಿ ಅಂತಹ ಆಳವಾದ ಜ್ಞಾನವಿತ್ತು. ಪ್ರಾಥನೆಗಳಲ್ಲಿ ಕೂಡಾ ಅವರು ಎಲ್ಲರನ್ನೂ ಸೇರಿಸಿಕೊಂಡಿದ್ದರು. ಎಲ್ಲಾ ಮಂತ್ರಗಳ ತಾಯಿಯೆಂದು ಪರಿಗಣಿಸಲಾಗಿರುವ ಗಾಯತ್ರಿ ಮಂತ್ರ ಕೂಡಾ ಹೀಗೆಂದು ಹೇಳುತ್ತದೆ, "ದೈವಿಕತೆಯು ನನ್ನ ಬುದ್ಧಿಶಕ್ತಿಗೆ ಸ್ಫೂರ್ತಿ ನೀಡಲಿ ಮತ್ತು ನನ್ನ ಜೀವನಕ್ಕೆ ಸ್ಫೂರ್ತಿ ನೀಡಲಿ", ಯಾಕೆಂದರೆ ನಿಮ್ಮ ಜೀವನವು ಚಿಂತನೆಯ ಮೇಲೆ ಆಧರಿತವಾಗಿದೆ. ಚಿಂತನಾ ಪ್ರಕ್ರಿಯೆಯು ದೈವಿಕತೆಯಿಂದ ಸ್ಫೂರ್ತಿ ಪಡೆದರೆ, ಆಗ ಅಲ್ಲಿ ಯಾವುದೇ ತಪ್ಪುಗಳಾಗಲು ಸಾಧ್ಯವಿಲ್ಲ, ಅಲ್ಲಿ ಯಾವುದೇ ವಿಷಾದಗಳಿರಲು ಸಾಧ್ಯವಿಲ್ಲ. ಯಾವುದೇ ದುಃಖವಿರುವುದಿಲ್ಲ.

ಪ್ರಶ್ನೆ: ನನ್ನಲ್ಲೊಂದು ವೈಜ್ಞಾನಿಕ ಮನೋಧರ್ಮ ಮತ್ತು ವಿಧಾನವಿರುವಾಗ ವಿಶ್ವದಲ್ಲಿನ ದೇವತೆಗಳಲ್ಲಿ ನಾನು ವಿಶ್ವಾಸವಿರಿಸಲು ಹೇಗೆ ಸಾಧ್ಯ?

ಶ್ರೀ ಶ್ರೀ ರವಿ ಶಂಕರ್: ಈ ಗ್ರಹದ ಮೇಲೆ ವಿವಿಧ ತರಂಗಾಂತರಗಳು ಮತ್ತು ಕಂಪನಗಳು ಇವೆಯೆಂಬುದನ್ನು ಒಂದು ವೈಜ್ಞಾನಿಕ ವಿಧಾನದದೊಂದಿಗೆ ಮಾತ್ರ ನಿಮಗೆ ನೋಡಲು ಸಾಧ್ಯ. ನೀವು ಯಾರು? ನೀವು ಕೇವಲ ಒಂದು ಆವರ್ತನ ವಿಶ್ಲೇಷಕ (ಫ್ರೀಕ್ವೆನ್ಸಿ ಅನಲೈಸರ್). ನಿಮ್ಮ ಮೆದುಳು ಒಂದು ಆವರ್ತನ ವಿಶ್ಲೇಷಕವಾಗಿದೆ. ಕೇವಲ ನಿರ್ದಿಷ್ಟವಾದ ಆವರ್ತನಗಳನ್ನು ಮಾತ್ರ ಹಿಡಿಯಲು ಅದು ಸಮರ್ಥವಾಗಿದೆ, ಅಲ್ಲವೇ? ನಿಮ್ಮ ಗ್ರಹಣ ಶಕ್ತಿಯು ಒಂದು ನಿರ್ದಿಷ್ಟವಾದ ಆವರ್ತನ ಶ್ರೇಣಿ (ಬ್ಯಾಂಡ್ ವಿಡ್ತ್)ಗೆ ಸೀಮಿತವಾಗಿದೆ. ಅದರಿಂದಾಚೆಗೆ ಹೋಗಲು ಅದಕ್ಕೆ ಸಾಧ್ಯವಿಲ್ಲ. ನಿಮ್ಮ ಗ್ರಹಣಾತ್ಮಕ ಸಾಮರ್ಥ್ಯವನ್ನು ಮೀರಿ ಗ್ರಹಿಸುವ ಸಾಮರ್ಥ್ಯವು ನಿಮಗೆ ಸಿಗುತ್ತದೆ ಎಂದು ಊಹಿಸೋಣ; ಇಲ್ಲದಿದ್ದರೆ ನೀವು ನೋಡದಿರುವ ಅನೇಕ ವಿಷಯಗಳನ್ನು ನೀವು ನೋಡಬಹುದು. ನೋಡಿ, ಯಾವುದು ನಿಮಗೆ ಕತ್ತಲೆಯಾಗಿದೆಯೋ ಅದು ಒಂದು ಬೆಕ್ಕು ಅಥವಾ ಒಂದು ಗೂಬೆಗೆ ಕತ್ತಲಲ್ಲ. ಒಂದು ಗೂಬೆಯ ಆವರ್ತನ ಶ್ರೇಣಿಯು ನಿಮ್ಮದಕ್ಕಿಂತ ದೊಡ್ಡದು. ಒಂದು ಗೂಬೆಯು ನಿಮಗಿಂತ ಹೆಚ್ಚು ನೋಡಬಲ್ಲದು. ದೇವತೆಗಳೆಂದರೆ ಕಿರೀಟವನ್ನು ಧರಿಸಿಕೊಂಡು ಮೇಲೆ ಸ್ವರ್ಗದಲ್ಲಿ ಕುಳಿತಿರುವ ಯಾವುದೋ ಜನರಲ್ಲ, ಅವರು ಪ್ರಜ್ಞೆಯ ಒಂದು ಅಭಿವ್ಯಕ್ತಿ - ಸೂರ್ಯನ ಬೆಳಕಿನಲ್ಲಿ ಏಳು ಬಣ್ಣಗಳಿರುವಂತೆಯೇ. ಸೂರ್ಯನ ಕಿರಣಗಳಲ್ಲಿ ಒಂದೇ ಒಂದು ಬಣ್ಣವಿರುತ್ತದೆ, ಆದರೆ ನೀವು ಸೂರ್ಯನ ಕಿರಣಗಳನ್ನು ಚದುರಿಸಿದಾಗ, ನಿಮಗೆ ಏಳು ಬೇರೆ ಬೇರೆ ಬಣ್ಣಗಳು ಸಿಗುತ್ತವೆ. ಅದೇ ರೀತಿಯಲ್ಲಿ, ನಿಮ್ಮ ಪ್ರಜ್ಞೆಯು ಹಲವಾರು ಸಾಮರ್ಥ್ಯಗಳನ್ನು, ಹಲವಾರು ರೂಪಗಳನ್ನು ಮತ್ತು ಹಲವಾರು ಜಟಿಲತೆಗಳನ್ನು ಹೊಂದಿದೆ. ಪ್ರಜ್ಞೆಯ ಈ ಸಂಕೀರ್ಣವಾದ ಪ್ರಕ್ರಿಯೆಗಳು ವಿವಿಧ ದೇವತೆಗಳೆಂದು ಕರೆಯಲ್ಪಡುತ್ತವೆ.

ಆಧ್ಯಾತ್ಮ ವಿಜ್ಞಾನದಲ್ಲಿ ನೀವು ಆಳವಾಗಿ ಹೋದಂತೆ ಅದು ಮನಸ್ಸನ್ನು ಆಶ್ಚರ್ಯಚಕಿತಗೊಳಿಸುತ್ತದೆ. ನಿಮ್ಮಲ್ಲೊಂದು ವೈಜ್ಞಾನಿಕ ಮನೋಧರ್ಮವಿರಲೇಬೇಕು, ಆಗ ಮಾತ್ರ ನಿಮಗೆ ಅದರೊಳಕ್ಕೆ ಹೋಗಲು ಸಾಧ್ಯ. ಕೇವಲ ನಂಬಿಕೆಯು ಕೆಲಸ ಮಾಡದು. ಕೊಲೊರಾಡೊದಿಂದ ಇಲ್ಲಿಗೆ ಒಬ್ಬ ವಿಜ್ಞಾನಿ ಬಂದಿದ್ದನು. ಅವನಲ್ಲೊಂದು ಟೈಟಾನಿಯಂ ರೇಡಾರ್ ಇತ್ತು. ಅದರಿಂದ ಶಕ್ತಿಯ ಮಟ್ಟವನ್ನು ಅಳೆಯಲು ಅವನಿಗೆ ಸಾಧ್ಯವಿತ್ತು. ನವರಾತ್ರಿಯ ಸಂದರ್ಭದಲ್ಲಿ ವಿವಿಧ ಮಂತ್ರೋಚ್ಛಾರಗಳು ಮತ್ತು ವಿವಿಧ ಆವಾಹನೆಗಳು ನಡೆಯುತ್ತಿದ್ದ ಸಮಯದಲ್ಲಿ ಅವನು ಶಕ್ತಿಯ ಮಟ್ಟಗಳನ್ನು ಅಳತೆ ಮಾಡಿದನು. ವಿವಿಧ ಮಂತ್ರೋಚ್ಛಾರಗಳನ್ನು ಮಾಡುತ್ತಿದ್ದಾಗ ಆಕಾಶದಲ್ಲಿ ಶಕ್ತಿಯು ಮೂಡುತ್ತಿದ್ದುದನ್ನು ವರ್ಣಮಯವಾದ ಚಿತ್ರಗಳೊಂದಿಗೆ ಅವನು ನಮಗೆ ತೋರಿಸಿದನು. ಒಂದು ಮಂತ್ರೋಚ್ಛಾರದಿಂದ ಇನ್ನೊಂದಕ್ಕೆ ಹೋದಂತೆ ಬಹಳ ವಿಶಿಷ್ಟವಾದ ವಿನ್ಯಾಸಗಳು ಕಂಡವು. ಅದು ನಿಜಕ್ಕೂ ಆಕರ್ಷಕವಾಗಿತ್ತು. ಕರ್ಲಿಯನ್ ಛಾಯಾಗ್ರಾಹಕರು ಕೆಲವು ಚಿತ್ರಗಳನ್ನು ತೆಗೆದರು. ವಿವಿಧ ದೇವತೆಗಳನ್ನು ಆಹ್ವಾನಿಸಿದಾಗ ಸಭಾಂಗಣದಲ್ಲಿನ ಇಡೀ ಬಣ್ಣ ಬದಲಾಯಿತು. ಆದ್ದರಿಂದ ಕೇವಲ ನಂಬಿಕೆಯ ಮೂಲಕ ಮಾಡುವುದಕ್ಕಿಂತ, ಒಂದು ವೈಜ್ಞಾನಿಕ ವಿಧಾನದಲ್ಲಿ ನೀವು ನಿಜಕ್ಕೂ ಎಷ್ಟೋ ಹೆಚ್ಚು ಅನ್ವೇಷಿಸಬಹುದು ಹಾಗೂ ಅರಿತುಕೊಳ್ಳಬಹುದು. 

ಭಾನುವಾರ, ಜನವರಿ 10, 2016

ಅಂತರ್ಮುಖಿ ಸದಾ ಸುಖಿ

೧೦ ಜನವರಿ ೨೦೧೬
ಬಾದ್ ಅಂತೋಗಸ್ತ್, ಜರ್ಮನಿ

ಮ್ಮ ಆತ್ಮದ ನಿಜವಾದ ಗುಣವು ಮೂರು ವಿಷಯಗಳಿಂದ ಮಂಕಾಗುತ್ತದೆ:

೧. ಬಯಕೆ: ಅದು ಯಾವುದೇ ಬಯಕೆಯಾಗಿರಬಹುದು. "ನನ್ನಲ್ಲಿ ಯಾವುದೇ ಬಯಕೆಯಿರುವುದು ಬೇಡ", ಎಂಬುದು ಕೂಡಾ ಒಂದು ಬಯಕೆ.
೨. ಬುದ್ಧಿಶಕ್ತಿ: ಅಂದರೆ ನಮ್ಮಲ್ಲಿರುವ ನಿರ್ಣಯಿಸುವ, ವಿವೇಚಿಸುವ, ತಿಳಿಯುವ ಕ್ಷಮತೆ.
೩. ಅಹಂ: "ನಾನು ಯಾರೋ ಒಬ್ಬ" ಎಂಬುದು ಅಹಂ.

ಈ ಮೂರು ವಿಷಯಗಳು ಆತ್ಮವನ್ನು ಮಸುಕಾಗಿಸುತ್ತವೆ, ಮತ್ತು ಧ್ಯಾನವೆಂದರೆ, ಎಲ್ಲಿ ನೀವು ಈ ಮೂರು ವಿಷಯಗಳನ್ನು ಕೆಲವು ಕ್ಷಣಗಳವರೆಗೆ ಹಾಗೇ ಸ್ತಬ್ಧಗೊಳಿಸುತ್ತೀರೋ ಅದು -  ಬುದ್ಧಿ, ಅಹಂ ಮತ್ತು ಬಯಕೆಗಳನ್ನು ಸ್ತಬ್ಧಗೊಳಿಸುವುದು. ಅದು ಸ್ವಲ್ಪ ಸಮಯದವರೆಗೆ ಮಾತ್ರ, ಆದ್ದರಿಂದ ಹೆದರಬೇಡಿ. ಆನಂತರ ನೀವು ಎಷ್ಟು ಬಯಕೆಗಳನ್ನು ಬೇಕಾದರೂ ಹೊಂದಬಹುದು.

ಎಲ್ಲಾ ಬಯಕೆಗಳೂ ಕೆಟ್ಟವೆಂದಲ್ಲ, ಕೆಲವು ಬಯಕೆಗಳು ಒಳ್ಳೆಯವು, ಕೆಲವು ಬಯಕೆಗಳು ಪರವಾಗಿಲ್ಲ ಮತ್ತು ಇತರ ಕೆಲವು ನಿಜಕ್ಕೂ ಕೆಟ್ಟವು. ಎಲ್ಲಾ ರೀತಿಯವೂ ಇವೆ, ಆದರೆ ನೀವು ಅವುಗಳನ್ನು ಸ್ತಬ್ಧವಾಗಿರಿಸಲು ಕಲಿತರೆ, ಆಗ ಸ್ಥಿರತೆಯು ಉದಯಿಸುತ್ತದೆ ಮತ್ತು ಅದುವೇ ಸಮಾಧಿ.

ಮಕ್ಕಳಲ್ಲಿ ಎಲ್ಲಾ ಮೂರು ವಿಷಯಗಳು ಇರುತ್ತವೆ, ಆದರೂ ಅವರು ಅವುಗಳನ್ನು ಬಹಳ ಸುಲಭವಾಗಿ ಸ್ತಬ್ಧಗೊಳಿಸುತ್ತಾರೆ. ಅದಕ್ಕಾಗಿಯೇ ನೀವು ಮಕ್ಕಳಲ್ಲಿ, "ನಿನಗೇನು ಬೇಕು?" ಎಂದು ಕೇಳಿದಾಗ ಅವರು, "ಏನೂ ಬೇಡ" ಎಂದು ಹೇಳುವುದು. ನೀವಿದನ್ನು ಗಮನಿಸಿದ್ದೀರಾ? ಅವರು ಯಾವುದರ ಬಗ್ಗೆಯೂ ಧಾರಣೆಯನ್ನು ಹೊಂದಿರುವುದಿಲ್ಲ. ಮಕ್ಕಳಲ್ಲಿ, ಆತ್ಮವನ್ನು ಮಂಕುಗೊಳಿಸುವಷ್ಟು ಅಹಂ ಪ್ರಮುಖವಾಗಿರುವುದಿಲ್ಲ, ಬುದ್ಧಿಯು ಪ್ರೌಢವಾಗಿರುವುದಿಲ್ಲ ಮತ್ತು ಅವರ ಬಯಕೆಗಳು ಸಾಕಷ್ಟು ಬಲವಾಗಿರುವುದಿಲ್ಲ.

ಇದು ಒಳ್ಳೆಯ ಜ್ಞಾನ. ಬೇರೆ ಯಾವಾಗಲಾದರೂ ನಾವು ಇದರ ಬಗ್ಗೆ ಆಳಕ್ಕೆ ಹೋಗೋಣ.

ಪ್ರಶ್ನೆ: ಬಯಕೆಗಳಿಗೂ ಅದೃಷ್ಟಕ್ಕೂ ಸಂಬಂಧವಿದೆಯೇ?

ಶ್ರೀ ಶ್ರೀ ರವಿ ಶಂಕರ್: ಯಾವುದನ್ನು ಬದಲಾಯಿಸಲು ನಿಮಗೆ ಸಾಧ್ಯವಿಲ್ಲವೆಂದು ನೀವು ಯೋಚಿಸುವಿರೋ ಅದನ್ನು ನೀವು ಅದೃಷ್ಟವೆಂದು ಕರೆಯುತ್ತೀರಿ, ಅಲ್ಲವೇ? ಈಗ, ಪ್ರಾಚೀನ ಕಾಲದ ಕೆಲವು ಗುರುಗಳು ಏನು ಮಾಡುತ್ತಿದ್ದರೆಂದರೆ, ಅವರು ನಿಮ್ಮ ಬಯಕೆಗಳನ್ನು ಕತ್ತರಿಸಿಹಾಕುತ್ತಿದ್ದರು. ನೋಡಿ, ಎರಡು ಮಾರ್ಗಗಳಿವೆ:

೧. ನೀವು ಬಯಕೆಗಳನ್ನು ಪೂರೈಸಿ.
೨. ನೀವದನ್ನು ಸಂಪೂರ್ಣವಾಗಿ ಕತ್ತರಿಸಿಹಾಕಿ.

ಆರ್ಟ್ ಆಫ್ ಲಿವಿಂಗ್‌ನಲ್ಲಿ ನಾವು, "ಸರಿ, ಸ್ವಲ್ಪ ಮಾತ್ರವೇ ಬಯಕೆ, ಅದು ಈಡೇರಲಿ" ಎಂದು ಹೇಳುತ್ತೇವೆ. ಆದರೆ ನೀವು ಹಿಂದಿನ ಪೀಳಿಗೆಯ ಗುರುಗಳನ್ನು ನೋಡಿದರೆ, ಅವರು ನಿಮ್ಮ ಬಯಕೆಗಳನ್ನು ಕತ್ತರಿಸಿಹಾಕುತ್ತಿದ್ದರು. ಉದಾಹರಣೆಗೆ ಮಹಾಋಷಿಯವರೊಂದಿಗೆ, ನೀವೇನಾದರೂ ಮಾಡಲು ಬಯಸುತ್ತೀರೆಂದು ನೀವು ಹೇಳಿದರೆ; ಉದಾಹರಣೆಗೆ, ಮಿಲಾನೋಕ್ಕೆ ಹೋಗಬೇಕೆಂಬ ಒಂದು ಬಯಕೆಯನ್ನು ವ್ಯಕ್ತಪಡಿಸಿದರೆ, ನೀವು ಅಲ್ಲಿಗೆ ಯಾವತ್ತೂ ಹೋಗಲು ಸಾಧ್ಯವಾಗದಂತೆ ಅವರು ನೋಡಿಕೊಳ್ಳುತ್ತಿದ್ದರು.

ಹೆಚ್ಚಿನವರೊಂದಿಗೆ, ಈಡೇರುವುದಕ್ಕಾಗಿ, ತಮ್ಮೆಲ್ಲಾ ಬಯಕೆಗಳನ್ನು ಅವರು ಬಿಟ್ಟುಬಿಡಬೇಕೆಂದು ಅವರು ಹೇಳುತ್ತಿದ್ದರು, ಆದರೆ ನಿಜವಾದ ಶಿಷ್ಯರೊಂದಿಗೆ, ಅವರು ಅವುಗಳನ್ನು ಬಿಟ್ಟುಬಿಡಲು ಕಲಿಯಲೆಂದು, ಅವರ ಬಯಕೆಗಳು ಯಾವತ್ತೂ ನೆರವೇರದಂತೆ ನೋಡಿಕೊಳ್ಳುತ್ತಿದ್ದರು. ನಿಮ್ಮಲ್ಲಿ ಕೋಪ ಮತ್ತು ದುಃಖಗಳನ್ನು ಸೃಷ್ಟಿಸುವುದು ಬಯಕೆಗಳಾಗಿವೆ ಮತ್ತು ನೀವು ಅವುಗಳನ್ನು ಗಟ್ಟಿಯಾಗಿ ಹಿಡಿದುಕೊಳ್ಳುವಂತೆ ನಿಮ್ಮ ಮೇಲೆ ಒತ್ತಡ ಹಾಕುತ್ತವೆ. ನಿಮಗೆ ಗೊತ್ತಾ, ಕೆಲವು ಮಕ್ಕಳಿಗೆ ನೀವು ಏನನ್ನಾದರೂ ಕೊಟ್ಟರೆ ಅವರು ಅದನ್ನು ಎಷ್ಟು ಗಟ್ಟಿಯಾಗಿ ಹಿಡಿದುಕೊಳ್ಳುತ್ತಾರೆಂದರೆ, ಅದನ್ನು ಅವರಿಂದ ಬಿಡಿಸಲು ನೀವು ಅವರಿಗೆ ಬೇರೆ ಏನನ್ನಾದರೂ ಕೊಡಬೇಕಾಗುತ್ತದೆ, ಅಲ್ಲವೇ? ಇಲ್ಲದಿದ್ದರೆ ಅವರು ದೊಡ್ಡ ಗಲಾಟೆ ಮಾಡುತ್ತಾರೆ. ಆದ್ದರಿಂದ, ಮುಂಚಿನ ಪೀಳಿಗೆಯ ಗುರುಗಳು ನೀವು ನಿಮ್ಮ ಬಯಕೆಗಳನ್ನು ಬಿಟ್ಟುಬಿಡುವಂತೆ ನೋಡಿಕೊಳ್ಳುತ್ತಿದ್ದರು. "ನಾನು ಇದನ್ನು ಇಷ್ಟಪಡುತ್ತೇನೆ ಅಥವಾ ನಾನು ಅದನ್ನು ಇಷ್ಟಪಡುತ್ತೇನೆ" ಎಂದು ನೀವು ಹೇಳಲು ಸಾಧ್ಯವಿಲ್ಲ. ನೀವು ಹಾಗೆ ಹೇಳಿದರೆ ಮತ್ತೆ ಮುಗಿಯಿತು, ನೀವದನ್ನು ಎಂದಿಗೂ ಪಡೆಯಲಾರಿರಿ. ನೀವದನ್ನು ಬಿಟ್ಟುಬಿಡಲೇಬೇಕಾಗುತ್ತದೆ ಯಾಕೆಂದರೆ, ಯಾವುದೇ ಬಯಕೆ, ಅದು ಈಡೇರಿದ ಬಳಿಕವೂ, ಅದು ಏಳುವ ಮೊದಲು ನೀವು ಯಾವ ಜಾಗದಲ್ಲಿದ್ದಿರೋ ಅದೇ ಜಾಗದಲ್ಲಿ ನಿಮ್ಮನ್ನು ಬಿಡುತ್ತದೆ.

ಆದ್ದರಿಂದ ನೀವು ಗುರುಗಳ ಬಳಿಗೆ ಹೋಗಿ, "ಆ ವ್ಯಕ್ತಿಯು ನನ್ನನ್ನು ದೂಷಿಸುತ್ತಿದ್ದಾನೆ" ಎಂದು ಹೇಳಿದರೆ, ಅವರು, "ಒಳ್ಳೆಯದು, ಅವರು ನಿನ್ನನ್ನು ಇನ್ನೂ ದೂಷಿಸಲಿ" ಎಂದು ಹೇಳುತ್ತಿದ್ದರು. ನಾನು ಕೂಡಾ ಹೀಗೆ ಮಾಡುತ್ತೇನೆ. "ಈ ವ್ಯಕ್ತಿಯು ನನಗೆ ತೊಂದರೆ ಕೊಡುತ್ತಿದ್ದಾನೆ" ಎಂದು ಯಾರಾದರೂ ಹೇಳುತ್ತಾರೆಂದಿಟ್ಟುಕೊಳ್ಳಿ, ನಾನು, "ಅವರು ನಿನಗೆ ಇನ್ನೂ ಹೆಚ್ಚು ತೊಂದರೆ ಕೊಡಲು ನಾನು ಅವರಲ್ಲಿ ಹೇಳುತ್ತೇನೆ" ಎಂದು ಹೇಳುತ್ತೇನೆ. ಯಾಕೆ? ನೀವು ನಿಮ್ಮ ಅಹಂನ್ನು ತೊಲಗಿಸುವುದು ಹಾಗೆಯೇ.
ಒಂದು ಅಂಶವೆಂದರೆ, ನಿಮ್ಮ ಅಹಂನ್ನು ಇನ್ನೂ ದೊಡ್ಡದಾಗಿಸುವುದು ಮತ್ತು ಇನ್ನೊಂದು ಅಂಶವೆಂದರೆ, ನಿಮ್ಮ ಅಹಂನ್ನು ಮುರಿಯುವುದು. "ನೀನು ತುಂಬಾ ಮಹಾನ್" ಎಂದು ನಾನು ಹೇಳಿ ನಿನ್ನನ್ನು ಹೊಗಳುವಾಗ, ನಿನ್ನ ಅಹಂ ಉಬ್ಬಿ ದೊಡ್ಡದಾಗುತ್ತದೆ. ಆದರೆ ನಾನು, "ನೀನು ದೊಡ್ಡ ಮೂರ್ಖ" ಎಂದು ಹೇಳಿ, ಹಲವು ಜನರು ನಿನ್ನನ್ನು ನೋಡಿ ನಕ್ಕರೆ, ಆಗ ನಿನ್ನ ಅಹಂ ಮುರಿಯುತ್ತದೆ. ಅವಮಾನ ಮತ್ತು ನಗೆಯು ನಿನ್ನ ಅಹಂನ್ನು ನುಚ್ಚುನೂರಾಗಿಸುತ್ತದೆ. ಒಂದು ಹೊಗಳುವ ಮೂಲಕ, ಇನ್ನೊಂದು ಅಹಂನ್ನು ಮುರಿಯುವುದರ ಮೂಲಕ. ಹೀಗಾಗಿ, ಅವರು ಹೀಗೆ ಮಾಡುತ್ತಿದ್ದುದರಿಂದಾಗಿ ಆ ದಿನಗಳಲ್ಲಿ ಇದೊಂದು ಕಷ್ಟಕರವಾದ ಪಥವಾಗಿತ್ತು.

ಯಾವುದಾದರೂ ಕಾರ್ಯಕ್ರಮಕ್ಕೆ ೧೦,೦೦೦ ಜನರನ್ನು ನಾಮಾಂಕನ ಮಾಡುವಂತೆ ಮಹಾಋಷಿಯವರು ಯಾರಲ್ಲಾದರೂ ಹೇಳುತ್ತಿದ್ದರು ಮತ್ತು ಅವರು ಹೋಗಿ ನಾಮಾಂಕನ ಮಾಡುತ್ತಿದ್ದರು. ಒಂದು ತಿಂಗಳಿನ ಬಳಿಕ ಅವರು, "ನಾನು ೧೦,೦೦೦ ಜನರನ್ನು ನಾಮಾಂಕನ ಮಾಡಿದ್ದೇನೆ" ಎಂದು ಹೇಳುತ್ತಿದ್ದರು ಮತ್ತು ಆಗ ಮಹಾಋಷಿಯವರು, "ಹಾಗೆ ಮಾಡಲು ನಿನ್ನಲ್ಲಿ ಯಾರು ಹೇಳಿದರು?" ಎಂದು ಕೇಳುತ್ತಿದ್ದರು. ಈ ಸಮಯದಲ್ಲಿ ಒಬ್ಬರಿಗೆ, "ಓ ಮಹಾಋಷಿ, ಹಾಗೆ ಮಾಡಲು ನೀವೇ ನನಗೆ ಹೇಳಿದ್ದು" ಎಂದು ಹೇಳಲು ಸಾಧ್ಯವಿಲ್ಲ. ಯಾವುದೇ ವಿವರಣೆಯನ್ನು ಕೊಡಲು ಒಬ್ಬರಿಗೆ ಸಾಧ್ಯವೇ ಇಲ್ಲ.

೧೦,೦೦೦ ನಿರ್ವಾಹಕರನ್ನು ನಾಮಾಂಕನಗೊಳಿಸಲು ಈ ವ್ಯಕ್ತಿಯು ಅಷ್ಟೊಂದು ಕೆಲಸ ಮಾಡಿದ್ದನು; ಅವರಿಗೆ ಹಣವನ್ನು, ಭೂಮಿಯ ಮೇಲೆ ಸ್ವರ್ಗವನ್ನು ಮತ್ತು ಎಲ್ಲದರ ಭರವಸೆ ನೀಡಿದ್ದನು; ಮತ್ತು ಇದ್ದಕ್ಕಿದ್ದಂತೆ ಅವನ ಅಹಂಗೆ ಏನಾಯಿತು? ಅದು ಸಂಪೂರ್ಣವಾಗಿ ಚೂರುಚೂರಾಯಿತು. ಈಗ ಅವನಿಗೆ ಏನನ್ನೂ ಹೇಳಲು ಸಾಧ್ಯವಿಲ್ಲ, ಅವನು ದೂರುವಂತಿಲ್ಲ, "ಆ ಜನರನ್ನು ನಾನು ಹೇಗೆ ಎದುರಿಸಲಿ" ಎಂದು ಅವನು ಹೇಳುವಂತಿಲ್ಲ, ಯಾಕೆಂದರೆ ಗುರುಗಳು, "ಅದು ನಿನ್ನ ಸಮಸ್ಯೆ, ನೀನು ಅವರನ್ನು ಎದುರಿಸು, ಅದು ನನ್ನ ಸಮಸ್ಯೆಯಲ್ಲ" ಎಂದು ಹೇಳುವರು.

ಯಾವುದರ ಬಗ್ಗೆಯೂ ನೀವು ಗುರುಗಳಲ್ಲಿ ದೂರುವಂತಿಲ್ಲ. ಅದು ಕೆಲವೊಮ್ಮೆ ಸಂಪೂರ್ಣವಾಗಿ ಹುಚ್ಚುತನದಿಂದ ಕೂಡಿರುತ್ತದೆ. ಆದರೆ ಇದು, ಯಾವತ್ತೂ ನೀವು ಚಿಕ್ಕ ಚಿಕ್ಕ ವಿಷಯಗಳಿಗೆ ಅಳುವ ಒಬ್ಬ ಬಲಹೀನ ವ್ಯಕ್ತಿಯಾಗದಂತೆ ನಿಮಗೊಂದು ಒಳ್ಳೆಯ ಗಟ್ಟಿಯಾದ ತರಬೇತಿಯನ್ನು ಕೊಡುತ್ತದೆ.

ಡಿ.ಎಸ್.ಎನ್. ಕೋರ್ಸ್‌ನಲ್ಲಿರುವಂತೆ (ಭಾಗವಹಿಸುವವರು ವೈಯಕ್ತಿಕ ತಡೆಗಳನ್ನು ಮತ್ತು ಗಡಿಗಳನ್ನು ಮೀರಿ, ಆಂತರಿಕ ಸ್ಥಿರತೆ ಮತ್ತು ಶಕ್ತಿಯನ್ನು ಹೊಂದಲು ಬಲವನ್ನು ನೀಡುವ ಒಂದು ಕಠಿಣವಾದ ಪರಿವರ್ತನಾ ತರಬೇತಿ) ನೀವು ಮಾಡಬೇಕಾಗಿರುವುದು ಇದನ್ನು ಎಂದು  ನಿಮಗೆ ಮೊದಲೇ ಹೇಳಲಾಗಿದ್ದರೆ, ಆಗ ಅದು ಬೀರುವ ಪ್ರಭಾವವು ಕಡಿಮೆಯೆಂದು ನನಗನಿಸುತ್ತದೆ. ಆದರೆ ಒಬ್ಬ ವ್ಯಕ್ತಿಗೆ ಗೊತ್ತಿಲ್ಲದಿರುವಾಗ, ಮತ್ತು ನಿಮಗೆ ಕೂಡಾ ಗೊತ್ತಿಲ್ಲದಿರುವಾಗ ಹಾಗೂ ಇಂತಹ ರೀತಿಯಲ್ಲಿ ವಿಷಯ ನಡೆಯುವಾಗ (ಮೇಲಿನ ಉದಾಹರಣೆಯಲ್ಲಿ ನಡೆದಂತೆ ), ಆಗ ಅದು ಬಹಳ ಶಕ್ತಿಶಾಲಿ. ಅವರು ಯಾವುದೋ ಉದ್ದೇಶದೊಂದಿಗೆ ಮಾಡುತ್ತಿದ್ದಾರೆಂದು ಹೇಳಲು ನಿಮಗೆ ಸಾಧ್ಯವಿಲ್ಲ. ನಿಮ್ಮ ಬದಿಯಿಂದಲೂ, ನಿಮಗೆ ಅದರ ಅರಿವೂ ಇಲ್ಲ, ಮತ್ತು ಹೀಗಾಗಿ ನೀವು ಸಂಪೂರ್ಣವಾಗಿ ಛಿದ್ರವಾಗುತ್ತೀರಿ, ಹಾಗೂ ಅದು ನಿಮ್ಮ ವ್ಯಕ್ತಿತ್ವವನ್ನು ಬಲವಾಗಿಯೂ, ಹೊಂದಿಕೊಳ್ಳುವಂತಹದ್ದನ್ನಾಗಿಯೂ ಮಾಡುತ್ತದೆ.

ನೋಡಿ, ಯಾವುದು ನಿಮ್ಮನ್ನು ನಿಮ್ಮ ಸಮತೋಲನದಿಂದ ದೂರ ತಳ್ಳುವುದೋ ಅದು ಅಹಂ ಆಗಿದೆ. ಹಲವಾರು ವಿಷಯಗಳು ಮುರಿಯುವುದು ಹಾಗೂ ಹಲವಾರು ವಿಷಯಗಳು ಮಾಡಲ್ಪಡುವುದಕ್ಕೆ ಅಹಂ ಕಾರಣವಾಗಿದೆ. ನೀವು ಒಬ್ಬರ ಅಹಂನ್ನು ಉತ್ತೇಜಿಸಿದರೆ, ಅವರು ಏನಾದರೂ ಒಳ್ಳೆಯ ಕೆಲಸವನ್ನು ಮಾಡಬಹುದು ಮತ್ತು ನೀವು ಒಬ್ಬರ ಅಹಂನ್ನು ಚೂರುಚೂರು ಮಾಡಿದರೆ ಅವರು ಇತರ ವಿಷಯಗಳನ್ನು ಕೂಡಾ ಮುರಿಯಬಹುದು. ಅಹಂ ಹಾನಿಯನ್ನು ಸೃಷ್ಟಿಸಬಲ್ಲದು. ಅದು ಮುರಿಯಬಲ್ಲದು ಮತ್ತು ಅದು ನಿರ್ಮಿಸಬಲ್ಲದು. ನಿಮ್ಮ ಅಹಂನ್ನು ಹಿಟ್ಟಿನಂತೆ ಚೆನ್ನಾಗಿ ನಾದಿದಾಗ, ಅದು ಪದರದ ಮೇಲೆ ಪದರದೊಂದಿಗೆ ಒಂದು ಕ್ರಾಯಿಸೆಂಟ್‌ನಂತೆ (ಒಂದು ಖಾದ್ಯ)ಇರುತ್ತದೆ. ಕ್ರಾಯಿಸೆಂಟ್ ಹೇಗೆ ಮಾಡಲ್ಪಡುತ್ತದೆ ಮತ್ತು ಅದರಲ್ಲಿ ಪದರಗಳು ಹೇಗೆ ಬರುತ್ತವೆಂದು ನಿಮಗೆ ಗೊತ್ತಾ? ನೀವದನ್ನು ಮತ್ತೆ ಮತ್ತೆ ನಾದಿದಾಗ ಪದರಗಳು ಬರುತ್ತವೆ ಮತ್ತು ಅಹಂ ಪರಿವರ್ತಿತವಾಗುವುದು ಹಾಗೆಯೇ (ಅದನ್ನು ನಾದುವುದರಿಂದ).

ನನಗೆ ನೆನಪಿದೆ, ನಾವು ಸಾಲ್ಟ್ಸ್‌ಬರ್ಗ್‌ನಲ್ಲಿದ್ದಾಗ, ನಾನು ೨೦-೨೧ ವರ್ಷ ವಯಸ್ಸಿನವನಾಗಿದ್ದೆ. ಒಬ್ಬರು ಬಂದು ಮಹಾಋಷಿಯವರಲ್ಲಿ, ಇಂತಿಂತವರೊಬ್ಬರು ಹೀಗೆ ಮಾಡಿದರೆಂದು ದೂರಿದರು. ಅವರು ಇಡೀ ವಿಷಯವನ್ನು ತಿರುಗಿಸಿ ಅದನ್ನು ಈ ವ್ಯಕ್ತಿಯ ಮೇಲೆ ಹಾಕುತ್ತಾ ಹೀಗೆಂದರು, "ನೀನೂ ಅವನೊಂದಿಗೆ ಸೇರಿಕೊಂಡಿರುವೆ ಮತ್ತು ನೀನು ಇದೆಲ್ಲದರ ಭಾಗವಾಗಿರುವೆ". ಆ ವ್ಯಕ್ತಿಗೆ ಏನನ್ನೂ ಹೇಳಲು ಸಾಧ್ಯವಾಗಲಿಲ್ಲ. ಮಹಾಋಷಿಯವರು ಹೀಗೆಂದರು, "ನೀನು ಬಂದು ನನ್ನಲ್ಲಿ ದೂರು ಹೇಳಲು ಸಾಧ್ಯವಾಗುವುದಕ್ಕಾಗಿ, ಆ ವ್ಯಕ್ತಿಯು ಒಂದು ತಪ್ಪು ಮಾಡುವಲ್ಲಿವರೆಗೆ ನೀನು ಕಾಯುತ್ತಿದ್ದೆ. ಹೀಗಾಗಿ ನೀನು ಕೂಡಾ ಅದರ ಒಂದು ಭಾಗವಾಗಿರುವೆ". ಆ ವ್ಯಕ್ತಿಯು ಬಹಳಷ್ಟು ನಲುಗಿಹೋದನು ಮತ್ತು ಸಂಪೂರ್ಣವಾಗಿ ಗಾಬರಿಗೊಂಡನು. ಅದು ಆಘಾತ ಚಿಕಿತ್ಸೆಯಂತೆ ಇತ್ತು. ಅಹಂ, ಬಯಕೆ ಮತ್ತು ಬುದ್ಧಿಶಕ್ತಿಗಳೊಂದಿಗೆ ಆ ರೀತಿಯಲ್ಲಿ ವ್ಯವಹರಿಸಲಾಗುತ್ತಿತ್ತು.  

ಬುದ್ಧಿಶಕ್ತಿಯ ಬಗ್ಗೆ ಬಂದಾಗ, ಈ ಎಲ್ಲಾ ನೋಬೆಲ್ ವಿಜ್ಞಾನಿಗಳು ಮತ್ತು ಬುದ್ಧಿಜೀವಿಗಳು ಅಲ್ಲಿರುತ್ತಿದ್ದರು ಮತ್ತು ಮಹಾಋಷಿಯವರು ಯಾವುದಾದರೂ ವಿಷಯದ ಬಗ್ಗೆ ಮಾತನಾಡುತ್ತಿದ್ದರು. ಅದು ಯಾರಿಗೂ ಅರ್ಥವಾಗುತ್ತಿರಲಿಲ್ಲ. ಅವರು ಹೀಗೆ ಹೇಳುತ್ತಿದ್ದರು, ""ಆ" ಎಂಬುದು "ಗಾ" ಆಯಿತು ಮತ್ತು "ಗಾ" ಎಂಬುದು "ನಾ" ಆಯಿತು ಮತ್ತು "ನಾ" ಎಂಬುದು "ಯಾ" ಆಯಿತು". ಅವರು ಇಂತಹ ಕೆಲವು ವಿಷಯವನ್ನು ಹೇಳುತ್ತಿದ್ದರು ಮತ್ತು ಯಾರಿಗೂ ಅದು ಅರ್ಥವಾಗುತ್ತಿರಲಿಲ್ಲ. ವೈದಿಕ ಪಂಡಿತರನ್ನು ಒಳಗೊಂಡಂತೆ, ನಾವು ಸುಮ್ಮನೆ ಕುಳಿತಿರಬೇಕಾಗುತ್ತಿತ್ತು. ತಾನು ತೆಗೆದುಕೊಳ್ಳುವ ಸ್ಥಿತಿಯನ್ನು ಸುಮ್ಮನೆ ಬಿಟ್ಟುಬಿಡುವುದು ಬುದ್ಧಿಶಕ್ತಿಗೆ ಅಂತಹ ಒಂದು ಪರಿಶ್ರಮವಾಗಿತ್ತು.

ಪ್ರಶ್ನೆ: ತಮ್ಮ ಭಾವನೆಗಳ ಮೇಲೆ ನಿಜಕ್ಕೂ ಒಬ್ಬರು ನಿಗಾ ಇಡುವುದು ಮತ್ತು ಜಾಗೃತರಾಗಿರುವುದು ಹೇಗೆ? ಮತ್ತು ಒಬ್ಬರ ಭಾವನೆಗಳು ಅಲುಗಾಡಿದಾಗ ಏನು ಮಾಡುವುದು?

ಶ್ರೀ ಶ್ರೀ ರವಿ ಶಂಕರ್: ಹೌದು, ನಿಮ್ಮ ಭಾವನೆಗಳು ಅಲುಗಾಡಿದರೆ, ಅದು ಎಷ್ಟು ಸಾಧ್ಯವೋ ಅಷ್ಟು ಅಲುಗಾಡಲಿ. ನಿಮಗೆ ಗೊತ್ತಾ, ಇಲ್ಲಿ ಕರುಣೆಯೆಂದು ಕರೆಯಲ್ಪಡುವುದು ಏನೂ ಇಲ್ಲ. ಉನ್ನತ ಜ್ಞಾನದಲ್ಲಿ, ಕರುಣೆಯೆಂಬುದು ಮೂರ್ಖತನ. ಯಾಕೆ? ನೀವು ಬೇರೊಬ್ಬರಿಗೆ ಮಾತ್ರ ಕರುಣೆಯನ್ನು ತೋರಬಲ್ಲಿರಿ; ಯಾರು ನೀವಲ್ಲವೋ ಅವರಿಗೆ. ನಿಮ್ಮ ಕೈಗೆ ನೋವಾಯಿತೆಂದಿಟ್ಟುಕೊಳ್ಳೋಣ. "ನಾನು ನನ್ನ ಕೈಯ ಕಡೆಗೆ ಬಹಳ ಕರುಣೆಯನ್ನು ಹೊಂದಿದ್ದೇನೆ" ಎಂದು ನೀವು ಹೇಳುವುದಿಲ್ಲ. ನೀವು ಯಾವತ್ತಾದರೂ ಹಾಗೆ ಹೇಳುತ್ತೀರಾ? ಎಲ್ಲವೂ ನಿಮ್ಮ ಭಾಗವಾಗಿರುವರೆಂದು ನೀವು ಹೇಳುವಾಗ, ಅಲ್ಲಿ ಕರುಣೆಯೆಲ್ಲಿ ಬಂತು? ಸರಿ, ನಿಮಗೆ ನೋವಾಯಿತು, ನಿಮಗೆ ನೋವಾದುದು ನಿಮ್ಮದೇ ಮೂರ್ಖತನದಿಂದ. ಅದಕ್ಕೆ ಸ್ವಲ್ಪ ಮುಲಾಮು ಹಚ್ಚಿ ಮತ್ತು ಅದರ ಬಗ್ಗೆ ಮರೆತುಬಿಡಿ. ನಿಮಗೆ ನೋವಾಗುವಾಗ, ಅದು ನಿಮ್ಮ ಕರ್ಮ. ನೀವು ಯಾರಿಗೋ ಯಾವಾಗಲೋ ನೋವುಂಟುಮಾಡಿರಬೇಕು ಮತ್ತು ಅದಕ್ಕಾಗಿ ನೀವದನ್ನು ಈಗ ಹಿಂದಕ್ಕೆ ಪಡೆದಿದ್ದೀರಿ. ಒಂದು ಕಾರಣವಿಲ್ಲದೆ ಏನೂ ನಡೆಯುವುದಿಲ್ಲ. ಇದು ಅತ್ಯಂತ ಉನ್ನತ ಜ್ಞಾನ.

ಆದ್ದರಿಂದ, ನೀವು ಕಷ್ಟವನ್ನು ಅನುಭವಿಸುತ್ತಿದ್ದರೆ, ಅದು ಬೇರೊಬ್ಬರ ಕಾರಣದಿಂದ ಅಲ್ಲ, ಅದು ನಿಮ್ಮಿಂದಾಗಿಯೇ ಎಂದು ಕೆಲವು ಗುರುಗಳು ಯಾವತ್ತೂ ಹೇಳುವರು. ನೀವು ಆ ಕಷ್ಟವನ್ನು ಅನುಭವಿಸಿ ಅದನ್ನು ತೊಡೆದುಹಾಕುವುದು ಒಳ್ಳೆಯದು. ಅದಕ್ಕೆ ಬದಲಾಗಿ ನೀವು, "ನನ್ನ ಕಷ್ಟಕ್ಕೆ ಆ ವ್ಯಕ್ತಿ ಹೊಣೆಗಾರ" ಎಂದು ಹೇಳಿದರೆ, ಆಗ ನೀವು ಇನ್ನೂ ಹೆಚ್ಚು ಕರ್ಮವನ್ನು ಮಾಡುತ್ತೀರಿ ಮತ್ತು ಮುಂದಿನ ಜನ್ಮಕ್ಕೆ ಅದನ್ನು ಹೊತ್ತೊಯ್ಯುತ್ತೀರಿ. ಆದರೆ ನೀವು, "ನಾನು ದುಃಖ ಅನುಭವಿಸುತ್ತಿರುವುದು ನನ್ನಿಂದಾಗಿಯೇ, ಮತ್ತು ನಾನು ಕರ್ಮದ ಸ್ವಾಮಿತ್ವವನ್ನು ತೆಗೆದುಕೊಳ್ಳುತ್ತೇನೆ" ಎಂದು ಹೇಳಿದರೆ, ಆಗ ನೀವು ಮುಕ್ತರಾಗುತ್ತೀರಿ.

"ನಾನು ಕಷ್ಟವನ್ನು ಅನುಭವಿಸುತ್ತಿರುವುದು ಆ ವ್ಯಕ್ತಿಯಿಂದಾಗಿ" ಎಂದು ಹೇಳುವುದು ಕರ್ಮವನ್ನು ಮುಂದುವರಿಸುತ್ತದೆ ಯಾಕೆಂದರೆ, ನಿಮ್ಮ ಮನಸ್ಸಿನಲ್ಲಿ ಆ ಅಚ್ಚು ಇರುತ್ತದೆ. ನೀವು ಒಳಗಡೆ ಯಾಕೆ ನೋಡುವುದಿಲ್ಲ? ನೀವು ಯಾಕೆ ಮುಂದೆ ಸಾಗುವುದಿಲ್ಲ? ಹಿಂದೆ ನಡೆದುಹೋದ ಒಂದು ಘಟನೆಯನ್ನು ಹಿಡಿದುಕೊಂಡು, ನಿಮ್ಮ ಕರ್ಮಕ್ಕೆ ಇನ್ನೊಬ್ಬ ವ್ಯಕ್ತಿಯನ್ನು ಯಾಕೆ ನೀವು ದೂಷಿಸುತ್ತೀರಿ? ನೀವು ಹೀಗೆ ಮಾಡಿದರೆ, ನೀವು ದುಃಖಿತರಾಗಿರುವುದು ಮುಂದುವರಿಯುತ್ತದೆ.  

ಪ್ರಶ್ನೆ: ಗುರುದೇವ, ನನ್ನ ಮುಂದೆ ಯಾವುದೇ ದಾರಿಯಿಲ್ಲದಂತೆ ನನಗನಿಸುತ್ತದೆ ಮತ್ತು ಅದು ಬಹಳ ಹತಾಶೆಯನ್ನುಂಟುಮಾಡುತ್ತದೆ. ನಾನೇನು ಮಾಡಬೇಕು?

ಶ್ರೀ ಶ್ರೀ ರವಿ ಶಂಕರ್: ಅದು ನಿನ್ನ ಕರ್ಮ, ಯಾರಿಂದಲೂ ನಿನಗೆ ಸಹಾಯ ಮಾಡಲು ಸಾಧ್ಯವಿಲ್ಲ. ಕೇವಲ ಇದನ್ನು ತಿಳಿದುಕೋ, (ಪ್ರಾಚೀನ ಕಾಲದ ಗುರುಗಳು ತಮ್ಮ ಶಿಷ್ಯಂದಿರೊಂದಿಗೆ ವ್ಯವಹರಿಸುತ್ತಿದ್ದ ರೀತಿಯನ್ನು ಸೂಚಿಸುತ್ತಾ, ತಾವೂ ಅದೇ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾ..)ಯಾರಿಂದಲೂ ಸಹಾಯ ಮಾಡಲು ಸಾಧ್ಯವಿಲ್ಲ, ಮುಗಿಯಿತು. ನೀನು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವೆ, ಆದರೆ ಯಾವುದೇ ಮಾರ್ಗವಿಲ್ಲ. ನಾನು ನಿನಗೆ ಹೇಳಲಾರೆ. ನಾನು ಯಾಕೆ ನಿನಗೆ ಹೇಳಬೇಕು?

ಯಾವುದೇ ದಾರಿಯಿಲ್ಲವೆಂದು ನೀನು ಈಗಾಗಲೇ ಹೇಳಿದೆ, ಆದ್ದರಿಂದ ಸತ್ತಂತಿರು ಮತ್ತು ಯಾತನೆಯನ್ನನುಭವಿಸು! ಒಬ್ಬರು ಗುರುಗಳು ಅಂತಹ ಒಂದು ರೀತಿಯಲ್ಲಿ ಪ್ರತಿಕ್ರಿಯಿಸುವಾಗ ಏನಾಗುತ್ತದೆ ನೋಡು: ಇದ್ದಕ್ಕಿದ್ದಂತೆ ಸ್ವಾತಂತ್ರ್ಯವು ಉದ್ಭವಿಸುತ್ತದೆ ಮತ್ತು ನೀನೊಂದು "ವಾಹ್" ಎಂಬ ಜಾಗವನ್ನು ತಲಪುವೆ. ಎಲ್ಲಿ ಮಾಡುವುದೇನೂ ಇರುವುದಿಲ್ಲವೋ ಅಂತಹ ಒಂದು ಸಂಪೂರ್ಣ ಸ್ವಾತಂತ್ರ್ಯವನ್ನು ಹೊಂದಿದ ಜಾಗ. ಅಲ್ಲಿ ಕರ್ತೃತ್ವವಿಲ್ಲ, ಅಲ್ಲಿ ಅಹಂ ಇಲ್ಲ, ಅಲ್ಲಿ ಯಾವುದೇ ಬಯಕೆಯಿಲ್ಲ ಮತ್ತು ಹೊರಹೋಗುವ ದಾರಿಯನ್ನು ಕಂಡುಹುಡುಕಲು ಪ್ರಯತ್ನಿಸುತ್ತಿರುವ ಬುದ್ಧಿಶಕ್ತಿ ಕೂಡಾ ಸ್ತಬ್ಧವಾಗಿರುತ್ತದೆ.

ಅವರು (ಹಿಂದಿನ ಪೀಳಿಗೆಯ ಗುರುಗಳು)ಇದನ್ನು ಪ್ರಜ್ಞಾಪೂರ್ವಕವಾಗಿ ಮಾಡಿದರೋ ಇಲ್ಲವೋ ಎಂದು ನನಗೆ ಗೊತ್ತಿಲ್ಲ, ಆದರೆ ಅವರು ಯಾವಾಗಲೂ ಇದನ್ನು ಈ ರೀತಿ ಮಾಡುತ್ತಿದ್ದರು. ನೀವು ನಿಮ್ಮ ಬುದ್ಧಿಶಕ್ತಿಗೆ ಬೀಗ ಹಾಕಿ ಇಟ್ಟಿರಬೇಕಾಗುತ್ತಿತ್ತು. ಅವರು ಇದನ್ನು ಹಿಂದಿಯಲ್ಲಿ ಕೂಡಾ ಹಲವು ಸಲ ಹೇಳುತ್ತಿದ್ದರು, "ನಿಮ್ಮ ಬುದ್ಧಿಶಕ್ತಿಗೆ ಬೀಗ ಹಾಕಿ ಕುಳಿತುಕೊಳ್ಳಿ. ನಿಮ್ಮ ಬುದ್ಧಿಶಕ್ತಿಯು ಹೊರಬಂದು ಅಲ್ಲಾಡಲು ಬಿಡಬೇಡಿ". ನಾನು ನಿಮಗೆ ಹೇಳುತ್ತೇನೆ ಕೇಳಿ, ಅಂತಹ ಒಂದು ವಾತಾವರಣದಲ್ಲಿ ನೀವು ಬದುಕಲಾರಿರಿ. ಒಂದು ದಿನ ಬದುಕಿರುವುದು ಕೂಡಾ ನಿಜಕ್ಕೂ ಕಷ್ಟಕರ. ಆ ಪೀಳಿಗೆಯವರು ಯಾರೂ ಈಗ ನಮ್ಮೊಂದಿಗಿಲ್ಲ. ಅವರೆಲ್ಲರೂ ಹಳೆಯ ಪೀಳಿಗೆಯವರು, ಮತ್ತು ಒಬ್ಬರಿಗೆ ಅವರನ್ನು ಅರ್ಥಮಾಡಿಕೊಳ್ಳಲೂ ಸಾಧ್ಯವಾಗುತ್ತಿರಲಿಲ್ಲ. ಅದನ್ನೇ ನನ್ನಲ್ಲಿ ದೀಪಕ್ ಚೋಪ್ರಾ ಅವರು ಹೇಳುತ್ತಿದ್ದರು, "ಓ, ಈ ವ್ಯಕ್ತಿಯನ್ನು ನಾನು ಅರ್ಥಮಾಡಿಕೊಳ್ಳಲಾರೆ, ಅವರಲ್ಲಿ ಕರುಣೆಯೇ ಇಲ್ಲ. ಕರುಣೆಯ ಒಂದು ಹನಿಯೂ ಇಲ್ಲವೇ?"

ನಾನಂದೆ, "ಈ ವ್ಯಕ್ತಿಯಲ್ಲಿ ಕರುಣೆಯಿಲ್ಲವೇನೋ ಎಂಬ ರೀತಿಯಲ್ಲಿ ನೋಡಬೇಡ, ಇಲ್ಲದಿದ್ದರೆ ನಿನ್ನ ಮನಸ್ಸಿಗೆ ಹುಚ್ಚುಹಿಡಿದೀತು. ಕನಿಷ್ಠಪಕ್ಷ ನೀನು ನಿನ್ನ ಮನಸ್ಸನ್ನಾದರೂ ಕಾಪಾಡು".

ದೀಪಕ್ ಚೋಪ್ರಾ ಅವರು ನನ್ನಲ್ಲಿ ಒಂದು ಘಟನೆಯ ಬಗ್ಗೆ ಹೇಳುತ್ತಿದ್ದರು. ಅವರು ಮಹಾಋಷಿಯವರೊಂದಿಗೆ ಕುಳಿತಿದ್ದರು ಮತ್ತು ಅವರೊಂದಿಗೆ ಇನ್ನೊಬ್ಬ ವ್ಯಕ್ತಿ ಕೂಡಾ ಕುಳಿತಿದ್ದರು. ಸ್ವಲ್ಪ ಸಮಯದ ಬಳಿಕ ಈ ವ್ಯಕ್ತಿಯು ಎದ್ದು ಹೊರಟುಹೋದರು. ಅವರು ಹೋಗಿ ಕೆಲವೇ ನಿಮಿಷಗಳ ಬಳಿಕ ಯಾರೋ ಒಬ್ಬರು ಬಂದು ಮಹಾಋಷಿಯವರಲ್ಲಿ, ಮಾರ್ಗ ದಾಟುತ್ತಿದ್ದ ವೇಳೆ ಆ ವ್ಯಕ್ತಿಗೆ ಒಂದು ಲಾರಿ ಬಂದು ಹೊಡೆದು ಅವರು ಸ್ಥಳದಲ್ಲಿಯೇ ಮೃತಪಟ್ಟಿರುವುದಾಗಿ ತಿಳಿಸಿದರು. ಮಹಾಋಷಿಯವರಿಗೆ ಆ ಸುದ್ದಿ ಬಂದಾಗ, ಅವರು ಐದು ಸೆಕೆಂಡುಗಳ ಕಾಲ ಸುಮ್ಮನೆ ಮೌನವಾಗಿ ಕುಳಿತರು ಮತ್ತು ನಂತರ ತಮ್ಮ ಕೆಲಸ ಮಾಡಲುತೊಡಗಿದರು. ಅವರು ಹೊರಗೆ ಹೋಗಿ ನೋಡಲಿಲ್ಲ ಅಥವಾ ಏನಾಯಿತೆಂದು ಕೇಳಲಿಲ್ಲ, ಏನೂ ಇಲ್ಲ. ಅವರು ತಮ್ಮದೇ ಕೆಲಸವನ್ನು ಮುಂದುವರಿಸಲುತೊಡಗಿದರು. ಈ ಘಟನೆಯಿಂದ ತಾನು ಬಹಳ ಆಘಾತಗೊಂಡೆನೆಂದು ದೀಪಕ್ ಹೇಳಿದರು.

ನಾನು ಅವರಲ್ಲಿ ಹೇಳಿದೆ, "ನೋಡು, ಒಬ್ಬ ವ್ಯಕ್ತಿಯಲ್ಲಿ ಕರುಣೆಯಿಲ್ಲವೆಂದು ನೀನು ತೀರ್ಮಾನಿಸಬೇಕಾಗಿಲ್ಲ. ಅಲ್ಲಿ ಕರುಣೆ ಯಾಕಿರಬೇಕು? ನಿನ್ನ ಉಗುರುಗಳನ್ನು ಕತ್ತರಿಸುವಾಗ ನೀನು, "ಓ ನಾನು ನನ್ನ ಉಗುರುಗಳನ್ನು ಕತ್ತರಿಸುತ್ತಿದ್ದೇನೆ" ಎಂದು ಹೇಳುವುದಿಲ್ಲ. ಹಾಗೆಯೇ, ಪ್ರತಿದಿನವೂ ಇಲ್ಲಿ ಹಲವಾರು ಜನರು ಹುಟ್ಟುತ್ತಿದ್ದಾರೆ ಮತ್ತು ಪ್ರತಿದಿನವೂ ಹಲವರು ಸಾಯುತ್ತಿದ್ದಾರೆ. ಮತ್ತು ನಾವಿಲ್ಲಿಗೆ ಸಾವಿರಾರು ಬಾರಿ ಬಂದಿದ್ದೇವೆ ಹಾಗೂ ನಾವು ಹಲವಾರು ವಿಷಯಗಳನ್ನು ಮಾಡಿದ್ದೇವೆ. ಜೀವನವನ್ನೊಂದು ವಿಶಾಲವಾದ ದೃಷ್ಟಿಕೋನದಿಂದ ನೋಡು, ಆಗ ನಿನಗೊಂದು ಪೂರ್ತಿಯಾಗಿ ಭಿನ್ನವಾದ ಚಿತ್ರವು ಕಾಣಿಸುತ್ತದೆ".

ಇಲ್ಲಿಗೆ ಬರುವ ಸ್ವಲ್ಪ ಮೊದಲು, ಆಗತಾನೇ ತನ್ನ ಗಂಡನನ್ನು ಕಳಕೊಂಡ ಒಬ್ಬಳು ಆರ್ಟ್ ಆಫ್ ಲಿವಿಂಗ್ ಶಿಕ್ಷಕಿಯೊಡನೆ ನಾನು ಮಾತನಾಡಿದೆ. ಅವಳ ಗಂಡ ಕೂಡಾ ಒಬ್ಬ ಆರ್ಟ್ ಆಫ್ ಲಿವಿಂಗ್ ಶಿಕ್ಷಕನಾಗಿದ್ದ. ಅವಳೊಂದಿಗೆ ಮಾತನಾಡಲು ನಾನು ಒಂದು ದಿನ ಕಾದೆ ಮತ್ತು ಜನರೆಂದರು, "ಗುರುದೇವ, ಅವಳೊಂದಿಗೆ ಮಾತನಾಡಿ, ಅವಳೊಂದಿಗೆ ಮಾತನಾಡಿ".

ನಾನಂದೆ, "ಇಲ್ಲ, ಅವಳು ಒಂದು ದಿನ ದುಃಖದಲ್ಲಿರಲಿ, ಅವಳು ಅಂತ್ಯಸಂಸ್ಕಾರ ಮಾಡಲಿ ಮತ್ತು ನಂತರ ನಾನು ಅವಳೊಂದಿಗೆ ಮಾತನಾಡುವೆ". ಹಾಗೆ, ಇವತ್ತು ನಾನು ಅವಳೊಂದಿಗೆ ಮಾತನಾಡಿದೆ. ನಿಮಗೆ ಗೊತ್ತಾ, "ನನಗೆ ಯಾಕೆ ಹೀಗಾಯಿತು" ಮುಂತಾದ ಯಾವುದೇ ಗೋಳಾಟವಿಲ್ಲದೆ ಅವಳು ಅಷ್ಟೊಂದು ಗಟ್ಟಿಯಾಗಿದ್ದಾಳೆ. ಅವಳು ಬಹಳ ಸಾಮಾನ್ಯವಾಗಿ ಮಾತನಾಡುತ್ತಿದ್ದಳು ಮತ್ತು ಅವಳಂದಳು, "ನಾನು ಬಂದು ನಿಮ್ಮನ್ನು ನೋಡಲು ಬಯಸುತ್ತೇನೆ ಗುರುದೇವ". ನಾನಂದೆ, "ಸರಿ, ಬಾ". ಈ ಪಥದಲ್ಲಿನ ಸೌಂದರ್ಯ ಅದು. ಪಥವು ನಿಮಗೆ ಎಷ್ಟೊಂದು ಆಂತರಿಕ ಬಲವನ್ನು ಕೊಡುತ್ತದೆಯೆಂದರೆ, ನಿಮಗೆ ನಿರ್ವಹಿಸಲು ಸಾಧ್ಯವಾಗುತ್ತದೆ. ದುಃಖವು ಎಲ್ಲರಿಗೂ ಬರುತ್ತದೆಯೆಂದಲ್ಲ, ಅಲ್ಲ! ಅದು ಹಾಗಲ್ಲ. ಇಲ್ಲಿ, ಆರ್ಟ್ ಆಫ್ ಲಿವಿಂಗ್‌ನಲ್ಲಿ ನಿಮ್ಮೆಲ್ಲಾ ಬಯಕೆಗಳು ಈಡೇರುತ್ತವೆ, ಅಲ್ಲವೇ? ನೀವು ಏನನ್ನೇ ಬಯಸಿದರೂ ಅದು ಈಡೇರುತ್ತದೆ. ನೀವು ಏನನ್ನೇ ಯೋಚಿಸಿದರೂ ಅದು ಬಹುತೇಕ ತಕ್ಷಣವೇ ಆಗುತ್ತದೆ. ಕೆಲವು ಕಡೆಗಳಲ್ಲಿ ವಿಷಯವು ಹಾಗಿಲ್ಲ. ಈ ಅರ್ಥದಲ್ಲಿ, ನಾವು ನಮ್ಮ ಸ್ವಂತ ಮಂದಿಯನ್ನು ಬಲಹೀನರನ್ನಾಗಿಯೂ, ಹೆಚ್ಚು ಲೋಭಿಗಳನ್ನಾಗಿಯೂ ಮಾಡುತ್ತಿರುವೆವೋ ಏನೋ ಎಂದು ಕೆಲವೊಮ್ಮೆ ನನಗೆ ಅನಿಸುತ್ತದೆ.

ಪ್ರಶ್ನೆ: ನಿಮ್ಮ ನಿಜವಾದ ಶಿಷ್ಯ ಯಾರೆಂಬುದು ನಿಮಗೆ ತಿಳಿಯುವುದು ಹೇಗೆ?

ಶ್ರೀ ಶ್ರೀ ರವಿ ಶಂಕರ್: ನನಗೆ ಅದರ ಬಗ್ಗೆ ಚಿಂತೆಯಿಲ್ಲ. ಒಬ್ಬರು ನಿಜವಾದವರೇ ಅಲ್ಲವೇ ಎಂದು ನಾನು ಯಾಕೆ ತಿಳಿಯಬೇಕು? ಅವರು ಪ್ರಾಮಾಣಿಕರಾಗಿದ್ದರೆ, ಅವರು ಮೇಲಕ್ಕೇರುವರು. ಅವರು ಪ್ರಾಮಾಣಿಕರಲ್ಲವಾಗಿದ್ದರೆ, ಅವರು ಕೆಳಕ್ಕೆ ಬೀಳುವರು ಯಾಕೆಂದರೆ ಯಾರೊಬ್ಬರ ಬುದ್ಧಿಶಕ್ತಿಯೂ ಅವರ ನಿಯಂತ್ರಣದಲ್ಲಿಲ್ಲ.

ಒಬ್ಬರು ನಿಜವಾದವರೇ ಅಥವಾ ಅಲ್ಲವೇ ಎಂದು ಯಾರಾದರೂ ಯಾರ ಬಗ್ಗೆಯಾದರೂ ಯಾಕೆ ಸಂಶಯಪಡಬೇಕು? ನನ್ನ ಕಣ್ಣುಗಳಲ್ಲಿ, ಎಲ್ಲರೂ ಒಳ್ಳೆಯವರು, ಮತ್ತು ಅವರು ಏನಾದರೂ ತಪ್ಪು ಮಾಡಿದರೆ ಅವರು ಖಂಡಿತವಾಗಿಯೂ ಕೆಳಕ್ಕಿಳಿಯುತ್ತಾರೆ, ಆದರೆ ಅವರು ಮತ್ತೆ ಮೇಲಕ್ಕೆ ಬರುತ್ತಾರೆ. ಇದು ಬಹಳ ಸರಳವಾದ ಗಣಿತ.

ನನಗೆ ಯಾವುದೇ ಶಿಷ್ಯರಿಂದಲೂ ಏನೂ ಬೇಕಾಗಿಲ್ಲ. ಅವರು ಮೇಲಕ್ಕೆ ಸಾಗಿದರೆ ಬಹಳ ಒಳ್ಳೆಯದು. ಇಲ್ಲದಿದ್ದರೆ, ಅವರು ಅಹಿತಕರ ಫಲಿತಾಂಶವನ್ನು ಎದುರಿಸಲಿ. ನೋಡಿ, ಅಹಿತಕರ ಫಲಿತಾಂಶವನ್ನು ಎದುರಿಸುವುದು ಕೂಡಾ ಅವರನ್ನು ಒಳ್ಳೆಯವರನ್ನಾಗಿ ಮತ್ತು ಬಲಶಾಲಿಗಳನ್ನಾಗಿ ಮಾಡುತ್ತದೆ. ನಿಮಗೆ ಗೊತ್ತಾ, ನಾನು, "ಓ, ಅಯ್ಯೋ ಪಾಪ" ಎಂದು ಯಾರನ್ನೂ ಸಾಂತ್ವನಪಡಿಸಲು ಹೋಗುವುದಿಲ್ಲ. ನಿನಗೊಂದು ಸಮಸ್ಯೆಯಿದೆಯೇ? ಸರಿ, ಒಳ್ಳೆಯದು, ಅದನ್ನು ನಿಭಾಯಿಸಿಕೋ! ಇದು ಆತ್ಮೀಯವಾದ ಜ್ಞಾನ, ಜನಸಮೂಹದೊಂದಿಗೆ ಮಾತನಾಡುವಂತಹದ್ದಲ್ಲ. ಜ್ಞಾನದಲ್ಲಿ ಸಾಗುವುದು ಹೇಗೆ ಮತ್ತು ಪಥದಲ್ಲಿ ಸಾಗುವುದು ಹೇಗೆ ಎಂಬುದನ್ನು ಒಬ್ಬರಿಗೆ ಅರ್ಥಪಡಿಸಲಿಕ್ಕಾಗಿ ಇರುವುದು ಇದು. ಹೀಗೆ ಹಲವಾರು ವಿಧಾನಗಳಿವೆ.