ಸೋಮವಾರ, ಮೇ 5, 2014

ಇತರರ ಅಭಿಪ್ರಾಯಗಳ ಕಾಲ್ಚೆಂಡಾಗಬೇಡಿ

ಮೇ ೫, ೨೦೧೪
ಬಹರೈನ್

ಲ್ಲಿರುವ ನನ್ನ ಪ್ರೀತಿಪಾತ್ರರೇ, ಇದನ್ನೇ ನಾವು ಮಾಡಬೇಕಾಗಿರುವುದು: ಪ್ರಪಂಚದಲ್ಲಿ ಆನಂದದ ಅಲೆಗಳನ್ನು ಸೃಷ್ಟಿಸುವುದು.
ನೀವೆಲ್ಲರೂ ನಾನು ಹೇಳುತ್ತಿರುವುದನ್ನು ಒಪ್ಪುತ್ತೀರಿ ಎಂದು ನನಗೆ ಖಾತ್ರಿಯಿದೆ.
ಇಂದಿನ ಪ್ರಪಂಚದಲ್ಲಿ ಬಹಳಷ್ಟು ಸಂಘರ್ಷವಿದೆ. ಒಂದು ಟೋಪಿ ಬೀಳುವಷ್ಟರಲ್ಲಿ ಜನರು ಜಗಳವಾಡಲು ತೊಡಗುತ್ತಾರೆ. ಒಂದೇ ರೀತಿಯ ಮನೋಭಾವವುಳ್ಳವರು, ಒಳ್ಳೆಯ ಹೃದಯವಂತ ಜನರು ಒಟ್ಟುಸೇರಿ ಆನಂದದ ಒಂದು ಅಲೆಯನ್ನು ಸೃಷ್ಟಿಸುವ ಸಮಯ ಬಂದಿದೆ. ಜೀವನವನ್ನೊಂದು ವಿಶಾಲ ದೃಷ್ಟಿಕೋನದಿಂದ ನೋಡಿ.

ಜೀವನವು ಬಹಳ ಚಿಕ್ಕದಾಗಿದೆ! ನಾವು ೬೦ರಿಂದ ೯೦ ವರ್ಷಗಳವರೆಗೆ ಬದುಕುತ್ತೇವೆ. ಇವತ್ತು ಜನರು ಇನ್ನೂ ಬಹಳ ಬೇಗ ಸಾಯುತ್ತಿದ್ದಾರೆ. ೫೦ ಅಥವಾ ೬೦ ವರ್ಷಗಳಲ್ಲಿ ಜನರು ಹೋಗಿಯಾಯಿತು. ಈ ಅಲ್ಪಾವಧಿಯ ಜೀವನದಲ್ಲಿ ಸಂತೋಷವಾಗಿರಲು ಸಾಕಷ್ಟು ಸಮಯವಿಲ್ಲ. ಹಾಗಾದರೆ ಅಷ್ಟೊಂದು ಸಂಘರ್ಷ, ಅಷ್ಟೊಂದು ಜಗಳ, ಅಷ್ಟೊಂದು ಯಾತನೆ ಮತ್ತು ದುಃಖ ಯಾಕಿದೆ? ನಾವು ಇದರ ಬಗ್ಗೆ ಚಿಂತನೆ ಮಾಡಬೇಕು.

ಇಲ್ಲಿರಲು ನನಗೆ ಬಹಳ ಸಂತೋಷವಾಗುತ್ತಿದೆ. ಬಹರೈನ್ ಎಂಬುದು ಅರಬ್ ದೇಶಗಳಿಗಿರುವ ಪ್ರವೇಶದ್ವಾರ ಎಂದು ನನಗೆ ಹೇಳಲಾಯಿತು. ಮತ್ತು ಈಗ ನಾನು ಅರಬ್‌ನ ಪ್ರವೇಶದ್ವಾರದಲ್ಲಿದ್ದೇನೆ, ನಿಮ್ಮೆಲ್ಲರೊಂದಿಗೆ ಇಲ್ಲಿರಲು ನನಗೆ ಸಂತೋಷವಾಗುತ್ತಿದೆ.

ಮಹಾಮಹಿಮರಾದ ಡಾ.ಮುಸ್ತಫಾ ಅವರೊಂದಿಗೆ ನಾನು ಮಾತನಾಡುತ್ತಿದ್ದಾಗ ಅವರು ನನ್ನಲ್ಲಿ, ನಾವು ಹಳೆಯದನ್ನು ಮತ್ತು ಹೊಸದನ್ನು ಎರಡನ್ನೂ ಹೊಂದಿರುವ ಆವಶ್ಯಕತೆಯಿದೆಯೆಂದು ಹೇಳುತ್ತಿದ್ದರು. ಪ್ರತಿಯೊಂದು ಸಂಪ್ರದಾಯವೂ, ಪ್ರತಿಯೊಂದು ಧರ್ಮವೂ ಆಧುನಿಕ ಮಾರ್ಗವನ್ನು ತನ್ನದಾಗಿಸಿಕೊಳ್ಳಲು ಆರಂಭಿಸಬೇಕು. ನಮ್ಮಲ್ಲಿ ಈ ಹೊಂದಿಕೊಳ್ಳುವ ಸಾಮರ್ಥ್ಯವಿರಬೇಕು. ಸಂಗೀತವು ಇಸ್ಲಾಮಿನದ್ದಲ್ಲವೆಂದು ಪರಿಗಣಿಸಲಾಗುತ್ತಿದೆಯೇ, ಅದನ್ನು ಅನುಮತಿಸಲಾಗುತ್ತದೆಯೇ ಎಂದು ನಾನು ಅವರಲ್ಲಿ ಕೇಳಿದೆ. ಅವರಂದರು, ಅದನ್ನು ಅನುಮತಿಸಲಾಗುವುದಿಲ್ಲವೆಂದು ಕೆಲವು ಜನರು ಈಗಲೂ ಯೋಚಿಸುತ್ತಾರೆ. ಆದರೆ ಸಂಗೀತವು ಪ್ರಪಂಚದಲ್ಲಿರುವುದು ಮುಂದುವರಿಯುತ್ತದೆ. ನಿಮಗೆ ಗೊತ್ತಾ, ಹಲವಾರು ಪಂಥಗಳಿವೆ!
ಹೇಗೆ ನಾವು ಪ್ರಗತಿಪರರೂ, ಹೊಂದಿಕೊಳ್ಳುವವರೂ, ಸಹಕಾರ ಮನೋಭಾವ ಹೊಂದಿರುವವರೂ ಆಗಿರಬೇಕು ಮತ್ತು ಎಲ್ಲರನ್ನೂ ನಮ್ಮೊಂದಿಗೆ ಕರೆದುಕೊಂಡು ಮುಂದೆ ಸಾಗಬೇಕು ಎಂಬುದನ್ನು ಅವರು ನನ್ನೊಂದಿಗೆ ಹಂಚಿಕೊಳ್ಳುತ್ತಿದ್ದರು. ನಾನು ಅವರು ಹೇಳುವುದನ್ನು ಸಂಪೂರ್ಣವಾಗಿ ಒಪ್ಪುತ್ತೇನೆ.

ಜೀವನವೊಂದು ಮರವಿದ್ದಂತೆ, ಅದಕ್ಕೆ ಸ್ವಲ್ಪ ಬೇರುಗಳು ಹಾಗೂ ಸ್ವಲ್ಪ ಶಾಖೆಗಳಿವೆ. ನಾವು ಹಳೆಯ ಬೇರುಗಳನ್ನು ಹೊಂದಿರಬೇಕು ಮತ್ತು ಅದೇ ಸಮಯದಲ್ಲಿ, ಶಾಖೆಗಳು ಹೊಸದಾಗಿರಬೇಕು.

ಇವತ್ತು ಬೆಳಗ್ಗೆ ನಾನು ಮಹಾಮಹಿಮರಾದ, ಬಹರೈನ್‌ನ ರಾಜರೊಂದಿಗಿದ್ದೆ. ಅವರು ಕೂಡಾ ಅದನ್ನೇ ಹೇಳಿದರು. ಅತ್ಯಂತ ತೆರೆದ ಹಾಗೂ ಇತರ ನಾಗರೀಕತೆ, ಸಂಸ್ಕೃತಿಗಳನ್ನು ಸ್ವೀಕರಿಸುವ ನಾಗರೀಕತೆಯಾಗಿದೆ ಬಹರೈನ್, ಹಾಗೂ ಜಗತ್ತಿಗೆ ಸಾಮರಸ್ಯದ ಉದಾಹರಣೆಯನ್ನು ನೀಡುತ್ತಿದೆ. ಇದೇ ಸಂದೇಶವು ಪ್ರತಿಯೊಂದು ಪ್ರಾಂತ್ಯಕ್ಕೂ, ಪ್ರತಿಯೊಂದು ದೇಶಕ್ಕೂ ಮತ್ತು ಪ್ರಪಂಚದ ಪ್ರತಿಯೊಂದು ಮೂಲೆ ಮೂಲೆಗೂ ಹೋಗಬೇಕೆಂದು ನಾನು ಆಶಿಸುತ್ತೇನೆ.

ನಾವೆಲ್ಲರೂ ಈ ಪ್ರಪಂಚವನ್ನು ಒಂದು ಕುಟುಂಬವಾಗಿ ಪರಿಗಣಿಸಬೇಕು. ಪ್ರಪಂಚವು ಒಂದು ಕುಟುಂಬವಾಗಿದೆ ಮತ್ತು ಅದುವೇ ಆರ್ಟ್ ಆಫ್ ಲಿವಿಂಗ್ ಆಗಿರುವುದು. ಒಂದು ವಿಶ್ವ ಕುಟುಂಬ.

ಇವತ್ತು ಬೆಳಗ್ಗಿನ ಸಭೆಯಲ್ಲಿ, ಆರಬ್ ಪ್ರದೇಶದ ಮಹಾನ್ ನಾಯಕರಿದ್ದರು ಮತ್ತು ಶಾಂತಿಯು ನಮ್ಮ ಭಾಷೆಯಾಗಿರಬೇಕೆಂಬುದು ಎಲ್ಲರ ಅಭಿಪ್ರಾಯವಾಗಿತ್ತು. ಒಂದೇ ವ್ಯಕ್ತ ಅಥವಾ ಅವ್ಯಕ್ತ ಮೂಲಭೂತ ವೈಚಾರಿಕ ಮೌಲ್ಯಗಳು ನಮ್ಮ ಮಾನದಂಡಗಳಾಗಿವೆ. ಎಲ್ಲಾ ಲಿಂಗ, ಸಂಪ್ರದಾಯ, ಧರ್ಮ, ಸಂಸ್ಕೃತಿಗಳ ಜನರನ್ನು ಒಂದು ಮಾನವೀಯ ಮೌಲ್ಯವಾಗಿ, ಒಂದು ಮಾನವೀಯತೆಯಾಗಿ, ಒಂದು ಮಾನವ ಕುಟುಂಬವಾಗಿ ಒಗ್ಗೂಡಿಸುವುದು ಅತ್ಯಗತ್ಯವಾಗಿದೆ.
ಕಳೆದ ಮೂವತ್ತೈದು ವರ್ಷಗಳಿಂದ ಆರ್ಟ್ ಆಫ್ ಲಿವಿಂಗ್‌ನಲ್ಲಿ ನಮ್ಮ ಕನಸು ಇದಾಗಿದೆ. ನಾವು ನಮ್ಮ ಮಧ್ಯೆ ಕೃತಕವಾಗಿ ನಿರ್ಮಿಸಿರುವ ಗೋಡೆಗಳನ್ನು ಜನರು ತೊಡೆದು ಹಾಕುವುದನ್ನು ನೋಡಲು ನಾವು ಬಯಸಿದ್ದೆವು, ಯಾಕೆಂದರೆ ಇರುವುದು ಒಂದು ದೈವತ್ವ, ಒಬ್ಬ ದೇವರು ಮತ್ತು ನಾವೆಲ್ಲರೂ ಆ ಒಂದು ದೈವತ್ವದ ಭಾಗವಾಗಿದ್ದೇವೆ; ಒಂದೇ ದೇವರ ಮಕ್ಕಳು.
ಆದುದರಿಂದ ನಾವು ಭೇದಭಾವಗಳ ಗೋಡೆಗಳನ್ನು ಉರುಳಿಸಬೇಕು, ಹೀಗಿದ್ದರೂ ನಮ್ಮ ಅನನ್ಯತೆಯನ್ನು ಕಾಪಾಡಿಕೊಳ್ಳಬೇಕು. ಪ್ರತಿಯೊಬ್ಬರೂ ತಮ್ಮ ಅನನ್ಯತೆಯನ್ನು ಕಾಪಾಡಿಕೊಳ್ಳಬೇಕು. ಬಹರೈನ್‌ಗೆ ತನ್ನದೇ ಆದ ವಿಶಿಷ್ಟತೆಯಿದೆ, ಪಾಕಿಸ್ತಾನಕ್ಕೆ ತನ್ನದೇ ಆದ ವಿಶಿಷ್ಟತೆಯಿದೆ, ಭಾರತಕ್ಕೆ ತನ್ನದೇ ಆದ ವಿಶಿಷ್ಟತೆಯಿದೆ. ಅದನ್ನೊಂದು ವಿವಾದದ ಅಂಶವಾಗಿಸುವ ಬದಲಾಗಿ, ನಾವು ನಮ್ಮೆಲ್ಲಾ ವಿಶಿಷ್ಟವಾದ ವಿಭಿನ್ನತೆಗಳನ್ನು ಕಾಪಾಡಿಕೊಳ್ಳಬೇಕು ಮತ್ತು ಅದನ್ನು ಆಚರಿಸಬೇಕು.

ಪ್ರಪಂಚಕ್ಕೆ ಬೇಕಾಗಿರುವುದೇನೆಂದರೆ, ವೈವಿಧ್ಯತೆಯಲ್ಲಿ ಸಾಮರಸ್ಯತೆ ಅಥವಾ ವೈವಿಧ್ಯತೆಯಲ್ಲಿ ಆಚರಣೆ.
ಈಗ, ಒಬ್ಬ ವ್ಯಕ್ತಿಯು ಒತ್ತಡದಲ್ಲಿದ್ದರೆ, ಕೋಪಗೊಂಡಿದ್ದರೆ ಅಥವಾ ಉದ್ವಿಗ್ನನಾಗಿದ್ದರೆ ಇದಾಗಲು ಹೇಗೆ ಸಾಧ್ಯ? ಅದು ಸಾಧ್ಯವಿಲ್ಲ. ಹೀಗಾಗಿ ಮೊದಲಿಗೆ ನಾವು ನಮ್ಮೊಳಗೆಯೇ ಶಾಂತಿಯನ್ನು ಕಂಡುಕೊಳ್ಳಬೇಕು. ಮನಸ್ಸನ್ನು ಪ್ರಶಾಂತಗೊಳಿಸಬೇಕು ಮತ್ತು ಎಲ್ಲರೊಂದಿಗೂ ಒಂದೆಂದು ಭಾವಿಸಿಕೊಳ್ಳಬೇಕು. ನಾವು ಈ ಇಡೀ ವಿಶ್ವದ ಭಾಗವಾಗಿದ್ದೇವೆ. ಮಕ್ಕಳಾಗಿ ನಾವು ಈ ಪ್ರಪಂಚಕ್ಕೆ ಬಂದಾಗ ನಾವು ಹೇಗಿದ್ದೆವು? ನಾವು ದಿನವೊಂದಕ್ಕೆ ನಾನ್ನೂರು ಸಲ ನಗುತ್ತಿದ್ದೆವು. ಪ್ರತಿಯೊಂದು ಮಗುವೂ ದಿನವೊಂದರಲ್ಲಿ ನಾನ್ನೂರು ಸಲ ನಗುತ್ತದೆ. ಒಬ್ಬ ಹದಿಹರೆಯದವನು ಕೇವಲ ಹದಿನೇಳು ಸಲ ಮಾತ್ರ ನಗುತ್ತಾನೆ. ಒಬ್ಬ ವಯಸ್ಕನು ನಗುವುದೇ ಇಲ್ಲ ಅಥವಾ ಕೆಲವೊಮ್ಮೆ ಮಾತ್ರ ನಗುತ್ತಾನೆ.

ಒಂದು ಮುಗುಳ್ನಗೆಯು ನಮ್ಮ ಭಾಷೆಯಾಗಿರಬೇಕು. ನಮ್ಮೆಲ್ಲರನ್ನೂ ಒಗ್ಗೂಡಿಸಬಲ್ಲ ಆ ಏನೋ ಒಂದು ಮುಗುಳ್ನಗೆಯಾಗಿದೆ.
ನಾನು ನಿಮಗೊಂದು ಕಥೆಯನ್ನು ಹೇಳಲು ಬಯಸುತ್ತೇನೆ.

ಒಬ್ಬರು ಜ್ಞಾನಿ ವ್ಯಕ್ತಿಯು ಮೌನದಲ್ಲಿದ್ದರು. ಇಬ್ಬರು ವ್ಯಕ್ತಿಗಳು ಅವರನ್ನು ಸಮೀಪಿಸಿದರು ಮತ್ತು ಅವರಲ್ಲಿ, "ನಮಗೆ ಏನಾದರೂ ಸಂದೇಶವನ್ನು ನೀಡಿ" ಎಂದು ಕೇಳಿಕೊಂಡರು. ಜ್ಞಾನಿ ವ್ಯಕ್ತಿಯು ಕೇವಲ ತಮ್ಮ ತೋರುಬೆರಳನ್ನು ತೋರಿಸಿ, ನಂತರ ತಮ್ಮ ಮುಷ್ಠಿಯನ್ನು ತೋರಿಸಿದರು, ಯಾಕೆಂದರೆ ಅವರು ಮೌನದಲ್ಲಿದ್ದರು.

ಒಬ್ಬ ವ್ಯಕ್ತಿಯು ಹೀಗಂದನು, "ಅವರು, ನಾವು ಒಗ್ಗಟ್ಟಾಗಿರಬೇಕೆಂದು ಹೇಳುತ್ತಿದ್ದಾರೆ."

ಇನ್ನೊಬ್ಬ ವ್ಯಕ್ತಿಯು ಹೀಗಂದನು, "ಅವರು, ನಾವು ಜಗಳವಾಡಬೇಕೆಂದು, ಇತರರನ್ನು ಹೊಡೆಯಬೇಕೆಂದು ಹೇಳುತ್ತಿದ್ದಾರೆ."
ನೀವು ನಿಮ್ಮ ಮುಷ್ಠಿಯನ್ನು ತೋರಿಸಿದರೆ, ಒಬ್ಬರು ಅದನ್ನು, ’ಎಲ್ಲರೂ ಒಂದುಗೂಡಿ ಬನ್ನಿ’ ಎಂದು ಅರ್ಥೈಸಬಹುದು ಅಥವಾ ಅದನ್ನು, ’ಹೋಗಿ ಇತರರನ್ನು ಹೊಡೆಯಿರಿ’ ಎಂಬುದಾಗಿ ಅರ್ಥೈಸಿಕೊಳ್ಳಬಹುದು.

ಹೊಡೆಯುವುದರ ಬಗ್ಗೆ ನೀವು ಯಾಕೆ ಯೋಚಿಸುವಿರಿ? ಅದು ಯಾಕೆಂದರೆ, ನೀವು ಸೌಖ್ಯವಾಗಿಲ್ಲ, ನೀವು ರೋಗಿಷ್ಠರಾಗಿರುವಿರಿ, ನೀವು ಬಲಹೀನರಾಗಿರುವಿರಿ ಮತ್ತು ಅಭದ್ರರಾಗಿರುವಿರಿ. ಎಲ್ಲೋ ನೀವು ಭಯಭೀತರಾಗಿರುವಿರಿ, ಆದುದರಿಂದ ನೀವು ಹೋಗಿ ಇತರರನ್ನು ಹೊಡೆಯಲು ಬಯಸುತ್ತೀರಿ. ಹಿಂಸೆಯು ಆಂತರಿಕ ಬಲಹೀನತೆಯ ಒಂದು ಲಕ್ಷಣವಾಗಿದೆ.

ಇದು ಹೇಗೆ ಹೋಗಲು ಸಾಧ್ಯ? ನೀವು ಆರೋಗ್ಯವಂತರಾಗಿರುವಾಗ ಮತ್ತು ಎಲ್ಲರೊಂದಿಗೂ ಒಂದೇ ಮನೆಯವರಂತಿದ್ದಾಗ.
ನೀವು ಜೀವನವನ್ನು ಒಂದು ವಿಶಾಲ ದೃಷ್ಟಿಕೋನದಿಂದ ನೋಡುವಾಗ ಆಂತರಿಕ ಶಕ್ತಿಯು ಬರುತ್ತದೆ. ಆಗ ಹಿಂಸೆಯು ಸುಮ್ಮನೇ ಬಿಟ್ಟುಹೋಗುತ್ತದೆ.

ಹೀಗಾಗಿ, ಇವತ್ತು ನಾವು ಮಾಡಬೇಕಾಗಿರುವುದು ಇದನ್ನೇ: ಆನಂದದ ಅಲೆಗಳನ್ನು ಸೃಷ್ಟಿಸುವುದು. ನಿಮ್ಮಲ್ಲಿ ಎಷ್ಟು ಮಂದಿ ನಾನು ಹೇಳುವುದನ್ನು ಒಪ್ಪುತ್ತೀರಿ? ನಾವೆಲ್ಲರೂ, ನಾವೆಲ್ಲೇ ಇದ್ದರೂ ಆನಂದದ ಅಲೆಗಳನ್ನು ಸೃಷ್ಟಿಸಬೇಕಾಗಿದೆ.

"ಹೇ, ಚಿಂತಿಸಬೇಡ, ನಾವು ನಿಮ್ಮೊಂದಿಗಿದ್ದೇವೆ. ಪ್ರಪಂಚದಲ್ಲಿ ಸಾಕಷ್ಟು ಮಾನವೀಯತೆಯಿದೆ. ನಾವೆಲ್ಲರೂ ಒಂದು ಸಮಾಜದ, ಒಂದು ಪ್ರಪಂಚದ ಭಾಗವಾಗಿದ್ದೇವೆ" ಎಂದು ಜನರಿಗೆ ಹೇಳಿ.

ಸಾಂಸಾರಿಕ ಹಿಂಸೆ, ಸಾಮಾಜಿಕ ಹಿಂಸೆ ಮತ್ತು ಆತ್ಮಹತ್ಯೆಗಳಿವೆ. ಇದು ಕೇವಲ ತಿಳುವಳಿಕೆಯ ಕೊರತೆಯಿಂದಾಗಿ, ಜ್ಞಾನದ ಕೊರತೆಯಿಂದಾಗಿ, ನಿಕಟತೆಯ ಕೊರತೆಯಿಂದಾಗಿ ಮತ್ತು ನಮ್ಮ ಜೀವನದಲ್ಲಿನ ಒತ್ತಡ ಹಾಗೂ ಚಿಂತೆಗಳನ್ನು ಹೇಗೆ ಹೋಗಲಾಡಿಸುವುದು ಎಂಬ ಅರಿವಿನ ಕೊರತೆಯಿಂದಾಗಿ.

ನಾನು ಇಸ್ಲಾಮಿನ ಹಲವು ಪಂಡಿತರುಗಳು ಹೇಳುವುದನ್ನು ಕೇಳಿದ್ದೇನೆ. "ಪೂರ್ವದಿಂದ ನನಗೆ ತಂಪಾದ ಗಾಳಿಯು ಬರುತ್ತಿದೆ" ಎಂಬುದಾಗಿ ಪ್ರವಾದಿ ಮೊಹಮ್ಮದರು ಹೇಳಿದ್ದರೆಂದು ಅವರು ಹೇಳುತ್ತಾರೆ. ಮರುಭೂಮಿಯಲ್ಲಿ, ತಂಪಾದ ಗಾಳಿ ಬೀಸುವುದೆಂದರೆ ಬಹಳಷ್ಟು ಸುಖ ಮತ್ತು ಸಂತೋಷವೆಂದು ಅರ್ಥ. ತನಗೆ ಪೂರ್ವದಿಂದ ತಂಪಾದ ಗಾಳಿಯು ಬರುತ್ತಿರುವುದಾಗಿ ಅವರು ಹೇಳಿದಾಗ, ಆ ತಂಪಾದ ಗಾಳಿಯೆಂದರೆ, ಸಾಮರಸ್ಯ. ಬಹರೈನ್ ಕೂಡಾ ಪೂರ್ವದ ಭಾಗವೇ ಆಗಿದೆ. ನಾವೆಲ್ಲರೂ ಪೂರ್ವದವರು.

ಇವತ್ತು ಪೂರ್ವ ಪೂರ್ವವಾಗಿ, ಪಶ್ಚಿಮ ಪಶ್ಚಿಮವಾಗಿ ಉಳಿದಿಲ್ಲ. ನಾವೆಲ್ಲರೂ ಒಂದಾಗಿದ್ದೇವೆ, ಎಲ್ಲೆಡೆಯೂ ಬಹುತೇಕ ಒಂದೇ ರೀತಿ. ಆದರೆ ಅದೇನೇ ಇದ್ದರೂ, ಸಾಮರಸ್ಯದ ಈ ಸಂದೇಶವು ಪ್ರಪಂಚದ ಮೂಲೆ ಮೂಲೆಯನ್ನೂ ತಲುಪಬೇಕು.
ಎಲ್ಲೆಡೆಯೂ ಬಾಂಬ್ ಸ್ಫೋಟಗಳು ನಡೆಯುತ್ತಿವೆ ಮತ್ತು ಜನರು ಸಾಯುತ್ತಿದ್ದಾರೆ ಎಂಬುದನ್ನು ಕೇಳುವಾಗ ನನಗೆ ಬಹಳ ನೋವಾಗುತ್ತದೆ. ಸಿರಿಯಾ ಮತ್ತು ಈಜಿಪ್ಟ್‌ಗಳಲ್ಲಿ ಏನು ನಡೆಯುತ್ತಿರುವುದೋ ಅದನ್ನು ಕೇಳುವಾಗ ನನಗೆ ನೋವಾಗುತ್ತದೆ.
ಇವತ್ತು ಬೆಳಗ್ಗೆ ನಾವು ಪ್ರಪಂಚದ ಪರಿಸ್ಥಿತಿಯ ಬಗ್ಗೆ ಚರ್ಚಿಸುತ್ತಿದ್ದೆವು, ಮತ್ತು ನಾನು ಹೇಳುತ್ತೇನೆ ಕೇಳಿ, ಪ್ರತಿಯೊಬ್ಬರೂ ಚಿಂತೆಗೊಳಗಾಗಿದ್ದಾರೆ ಹಾಗೂ ಕಾಳಜಿಯನ್ನು ಹೊಂದಿದ್ದಾರೆ. ಅಂತಿಮವಾಗಿ ದೇವರು ನೋಡಿಕೊಳ್ಳಲಿದ್ದಾರೆಂದು ಖಂಡಿತವಾಗಿಯೂ ನಮಗೆ ತಿಳಿದಿದೆ. ಆದರೆ ನಮಗೆಲ್ಲರಿಗೂ ಮಾಡಲು ಕರ್ತವ್ಯವಿದೆ, ಮಾಡಲು ನಮ್ಮ ಕೆಲಸವಿದೆ. ನಮ್ಮ ಕೆಲಸವೆಂದರೆ ಜನರನ್ನು ಹತ್ತಿರಕ್ಕೆ ತರುವುದು, ಅವರನ್ನು ಒಂದುಗೂಡಿಸುವುದು. ’ನೋಡು ನಿನ್ನೊಳಗೆ, ಎಂತಹ ಸುಂದರವಾದ ನೀನಿರುವೆ. ನಿನ್ನೊಳಗೆ ಬಹಳಷ್ಟು ಒಳ್ಳೆಯದಾದ ಶಕ್ತಿಯಿದೆ’ ಎಂಬುದನ್ನು ಅವರು ತಿಳಿಯುವಂತೆ ಮಾಡುವುದು.

ಸಕಾರಾತ್ಮಕ ಶಕ್ತಿಯನ್ನು ನಮ್ಮೊಳಗೆ ಮತ್ತು ನಮ್ಮ ಸುತ್ತಲೂ ಬೆಳಗಿಸೋಣ ಹಾಗೂ ಎಲ್ಲರ ಮುಖದ ಮೇಲೂ ಮುಗುಳ್ನಗೆಯಿರುವ, ನಮ್ಮ ಕನಸಿನ ಪ್ರಪಂಚವನ್ನು ನಾವು ಖಂಡಿತವಾಗಿಯೂ ಕಾಣಬಹುದು. ನಾವು ಪುನಃ ಮಕ್ಕಳಂತೆ ಆಗುತ್ತೇವೆ ಮತ್ತು ವರ್ತಮಾನದ ಕ್ಷಣದಲ್ಲಿ ಜೀವಿಸಲು ತೊಡಗುತ್ತೇವೆ.

ಆರ್ಟ್ ಆಫ್ ಲಿವಿಂಗ್‌ನಲ್ಲಿರುವುದು ಕೇವಲ ಐದು ಮೂಲ ತತ್ವಗಳು.

೧. ಜೀವನದಲ್ಲಿ ಏಳುಬೀಳುಗಳಿವೆಯೆಂಬುದು ನಿಮಗೆ ಗೊತ್ತು. ಹಿತಕರವಾದ ವಿಷಯಗಳು ಸಂಭವಿಸುತ್ತವೆ, ಅಹಿತಕರವಾದ ವಿಷಯಗಳು ಸಂಭವಿಸುತ್ತವೆ. ಮೊದಲನೆಯ ತತ್ವವೆಂದರೆ: ಎಲ್ಲಾ ಪರಿಸ್ಥಿತಿಗಳಲ್ಲೂ, ಮನಸ್ಸಿನ ಸಂತುಲನವನ್ನು ಇಟ್ಟುಕೊಳ್ಳಿ.
ಹೆಚ್ಚಾಗಿ ಏನಾಗುತ್ತದೆಯೆಂದರೆ, ವಿಷಯಗಳು ನಾವಂದುಕೊಂಡಂತೆ ನಡೆಯುವಾಗ ನಮಗೆ ಬಹಳ ಸಂತೋಷವಾಗುತ್ತದೆ. ಆದರೆ ವಿಷಯಗಳು ನಾವಂದುಕೊಂಡಂತೆ ನಡೆಯದಿರುವಾಗ ನಾವು ಖಿನ್ನರಾಗುತ್ತೇವೆ ಮತ್ತು ಕೋಪಗೊಳ್ಳುತ್ತೇವೆ. ಸಮಚಿತ್ತತೆಯನ್ನು ಕಾಪಾಡಿಕೊಳ್ಳುವುದು ಮೊದಲನೆಯ ತತ್ವವಾಗಿದೆ.

೨. ಮುಂದಿನ ತತ್ವವೆಂದರೆ, ಜನರನ್ನು ಅವರಿರುವಂತೆಯೇ ಸ್ವೀಕರಿಸುವುದು. ಭಿನ್ನತೆಯನ್ನು ಸ್ವೀಕರಿಸಿ; ಅದು ಸ್ವಭಾವ, ವಿಚಾರಧಾರೆಯಾಗಿರಬಹುದು, ಏನೇ ಆಗಿರಬಹುದು. ಅವರಿರುವಂತೆಯೇ ಅವರನ್ನು ಸ್ವೀಕರಿಸಿ. ಒಂದು ಬಹಳ ಮುಖ್ಯವಾದ ತತ್ವ.

೩. ಮೂರನೆಯ ತತ್ವವೆಂದರೆ, ಇತರರ ಅಭಿಪ್ರಾಯಗಳ ಒಂದು ಕಾಲ್ಚೆಂಡಾಗಬೇಡಿ. ಇತರರು ನಿಮ್ಮ ಬಗ್ಗೆ ಏನು ಯೋಚಿಸುತ್ತಿರುವರೆಂಬುದಾಗಿ ಚಿಂತಿಸಬೇಡಿ. ವಾಸ್ತವವಾಗಿ, ನಿಮ್ಮ ಬಗ್ಗೆ ಯೋಚಿಸಲು ಯಾರಿಗೂ ಸಮಯವಿಲ್ಲ. ನಿಮ್ಮೊಳಗೆ ನೋಡಿ ಮತ್ತು ನಿಮಗೆ ಯಾವುದು ಸರಿ, ಯಾವುದು ಸರಿಯಲ್ಲ ಎಂಬುದನ್ನು ನೀವೇ ನೋಡಿ.

೪. ಮುಂದಿನ ಅಂಶವೆಂದರೆ, ಇತರರ ತಪ್ಪುಗಳ ಹಿಂದೆ ಉದ್ದೇಶವನ್ನು ಹುಡುಕಬೇಡಿ. ಬಹಳ ಮುಖ್ಯ. ಪ್ರತಿಯೊಬ್ಬ ದೋಷಿಯ ಒಳಗೂ ಸಹಾಯಕ್ಕಾಗಿ ಕೂಗುವ ಒಬ್ಬ ಪೀಡಿತನಿರುತ್ತಾನೆ. ಅದನ್ನು ಗುರುತಿಸುವುದು.

೫. ಹಾಗೂ, ವರ್ತಮಾನದ ಕ್ಷಣದಲ್ಲಿ ಜೀವಿಸಿ.

ಇವುಗಳು ನಾವು ಮನಸ್ಸಿನಲ್ಲಿಟ್ಟುಕೊಳ್ಳಬೇಕಾದ ಐದು ಮೂಲ ತತ್ವಗಳಾಗಿವೆ. ಈ ಮೂಲ ತತ್ವಗಳಿಂದ ಏನಾಗುತ್ತದೆ? ಮೂರು ಸಂಗತಿಗಳಾಗುತ್ತವೆ. ಹೃದಯದ ಶುದ್ಧತೆ, ಮನಸ್ಸಿನ ಸ್ಪಷ್ಟತೆ ಮತ್ತು ಕಾರ್ಯದಲ್ಲಿ ಪ್ರಾಮಾಣಿಕತೆ. ಅಷ್ಟೇ.

ಮನವನ್ನು ನಿಯಂತ್ರಿಸಿ

೫ ಮೇ ೨೦೧೪
ಬಹರೈನ್

ಪ್ರಶ್ನೆ: ಗುರುದೇವ, ಸಂಕಟಕಾಲದಲ್ಲಿ ಭಾವನೆಗಳನ್ನು ನಿಯಂತ್ರಿಸುವುದು ಹೇಗೆ?

ಶ್ರೀ ಶ್ರೀ ರವಿ ಶಂಕರ್: ಉಸಿರಾಡುವುದು, ಉಸಿರಾಡುವುದು ಮತ್ತು ಉಸಿರಾಡುವುದು.
ಉಸಿರಾಟವೆಂಬುದು ಪ್ರಕೃತಿಯು ನಿಮ್ಮಲ್ಲಿ ಹಾಕಿರುವ ಅತ್ಯಂತ ದೊಡ್ದ ರಹಸ್ಯವಾಗಿದೆ. ಅದು ನಿಮ್ಮ ಭಾವನೆಗಳೊಂದಿಗೆ ಸಂಬಂಧ ಹೊಂದಿದೆ. ಉಸಿರಾಟದ ಅಭ್ಯಾಸದ ತಂತ್ರದ ಮೂಲಕ ನೀವು ನಿಮ್ಮ ಭಾವನೆಗಳನ್ನು ನಿಯಂತ್ರಿಸಬಹುದು. ನಿಮ್ಮಲ್ಲಿ ಹಲವರು ಇದನ್ನು ಅನುಭವಿಸಿರುವಿರಿ ಎಂದು ನನಗನಿಸುತ್ತದೆ, ಅಲ್ಲವೇ?

(ಹಲವರು ತಮ್ಮ ಕೈಗಳನ್ನು ಮೇಲೆತ್ತುತ್ತಾರೆ)

ಯಾರು ಇದನ್ನು ಅನುಭವಿಸಿಲ್ಲವೋ ಅವರು ನಿಯಮಿತವಾಗಿ ಸ್ವಲ್ಪ ಉಸಿರಾಟದ ಅಭ್ಯಾಸಗಳನ್ನು ಮಾಡಬೇಕು. ಆಗ ನಿಮಗೆ ನಿಮ್ಮ ಮನಸ್ಸಿನ ಮೇಲೆ ಹೆಚ್ಚಿನ ಹಿಡಿತವಿರುವುದು.

ಪ್ರಶ್ನೆ: ಯಾರಾದರೊಬ್ಬರ ಮೇಲೆ ನಿಮಗೆ ಕಡೆಯ ಸಲ ಕೋಪ ಬಂದಿದ್ದು ಯಾವಾಗ?

ಶ್ರೀ ಶ್ರೀ ರವಿ ಶಂಕರ್: ನನಗೆ ನೆನಪು ಕೂಡಾ ಇಲ್ಲ! ನಿನಗೆ ಯಾರಾದರೊಬ್ಬರ ಮೇಲೆ ಕೋಪ ಬಂತೆಂದು ಇಟ್ಟುಕೊಳ್ಳೋಣ, ಅದರ ಬಗ್ಗೆ ವಿಷಾದಿಸಲು ತೊಡಗಬೇಡ.  ವಿಷಾದವು ನೀವು ಮತ್ತೊಮ್ಮೆ ಕೋಪಗೊಳ್ಳುವಂತೆ ಮಾಡುತ್ತದೆ. ನನ್ನ ಬಗ್ಗೆ ಹೇಳುವುದಾದರೆ, ನಾನು ಎಷ್ಟು ಸಲ ಕೋಪಗೊಂಡಿರುವೆನೆಂಬುದನ್ನು ನಾನು ನನ್ನ ಬೆರಳುಗಳಲ್ಲಿ ಲೆಕ್ಕ ಹಾಕಬಲ್ಲೆನು. ಅದು ನನ್ನ ಸ್ವಭಾವದಲ್ಲಿಲ್ಲ.

ಕೋಪಗೊಳ್ಳದಿರಲು ನಾನು ವಿಶೇಷವಾದುದೇನನ್ನೂ ಮಾಡಿಲ್ಲ. ಹೇಗೋ ನಾನು ಈ ರೀತಿ ಮಾಡಲ್ಪಟ್ಟಿದ್ದೇನೆ, ಅದಕ್ಕಾಗಿ ನಾನು ಯಾವುದೇ ಶ್ಲಾಘನೆಯನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ಈ ಎಲ್ಲಾ ವರ್ಷಗಳಲ್ಲಿ ಯಾರಿಗೂ ನಾನು ಒಂದೇ ಒಂದು ಕೆಟ್ಟ ಪದವನ್ನೂ ಹೇಳಿಲ್ಲ. ಅದು ಯಾವತ್ತೂ ಆಗಲಿಲ್ಲ. ನಾನು ಯಾರನ್ನೂ ಯಾವತ್ತೂ ದೂಷಿಸಿಲ್ಲ, ಶಪಿಸಿಲ್ಲ ಅಥವಾ ಯಾವುದೇ ಕೆಟ್ಟ ಪದವನ್ನು ಹೇಳಿಲ್ಲ.

ಪ್ರಶ್ನೆ: ಅದೇ ಮರುಕಳಿಸುವ ಯೋಚನೆಯನ್ನು ನಾವು ಹೇಗೆ ನಿಲ್ಲಿಸಬಹುದು?

ಶ್ರೀ ಶ್ರೀ ರವಿ ಶಂಕರ್: ಯಾವುದೇ ದಾರಿಯಿಲ್ಲ, ಯಾಕೆಂದರೆ ಯೋಚನೆಗಳು ಅದಾಗಲೇ ಬಂದ ಬಳಿಕ ಮಾತ್ರವಷ್ಟೇ ನೀವು ಅವುಗಳನ್ನು ಗುರುತಿಸುವಿರಿ, ಅಲ್ಲವೇ? ಅವುಗಳು ಬರುತ್ತವೆ ಮತ್ತು ನಂತರ ನೀವು ಅವುಗಳನ್ನು ಗುರುತಿಸುತ್ತೀರಿ. ಹೀಗಾಗಿ, ನೀವದನ್ನು ಗುರುತಿಸುವಾಗ, ಕಾರ್ಯಪ್ರವೃತ್ತರಾಗಿ. ನೀವು ಸುಮ್ಮನೆ ಕುಳಿತರೆ, ನೀವು ಬಹಳಷ್ಟು ಯೋಚಿಸುತ್ತಾ ಇರುವಿರಿ. ನೀವು ಕಾರ್ಯಪ್ರವೃತ್ತರಾಗಿದ್ದರೆ, ನೀವು ಆಗು ಹೋಗುಗಳೊಂದಿಗೆ ಒಂದಾಗಿ ಹರಿಯುತ್ತಿರುವುದು ನಿಮಗೆ ಭಾಸವಾಗುವುದು.

ಪ್ರಶ್ನೆ: ಈ ದಿನಗಳಲ್ಲಿ ಆಕ್ರಮಣಶೀಲತೆಯನ್ನು ಶಕ್ತಿಯ ಒಂದು ಚಿಹ್ನೆಯಾಗಿ ಪರಿಗಣಿಸಲಾಗುತ್ತದೆ. ಇದನ್ನು ಬದಲಾಯಿಸುವುದು ಹೇಗೆ?

ಶ್ರೀ ಶ್ರೀ ರವಿ ಶಂಕರ್: ಆಕ್ರಮಣಶೀಲತೆಯೆಂಬುದು ಸಕಾರಾತ್ಮಕ ಬದಲಾವಣೆಯನ್ನು ತರುವ ಶಕ್ತಿಯಾಗಿದ್ದರೆ, ಪ್ರಪಂಚದ ಹಲವು ಭಾಗಗಳಲ್ಲಿ ಆಗಿರುವ ಮತ್ತು ಈಗ ಆಗುತ್ತಿರುವ ಎಲ್ಲಾ ಆಕ್ರಮಣಶೀಲತೆಯ ಮೂಲಕ, ಪ್ರಪಂಚವು ಬಹಳಷ್ಟು ಬದಲಾಗಿರುತ್ತಿತ್ತು. ಆದರೆ ನಾವು ನೋಡುತ್ತಿರುವುದು ಅದನ್ನಲ್ಲ. ಎಲ್ಲಿ ಆಕ್ರಮಣಶೀಲತೆಯಿರುವುದೋ ಅಲ್ಲಿ ಯಾತನೆಯಿರುತ್ತದೆ. ಅಲ್ಲಿ ಹೆಚ್ಚಿನ ವಿವಾದಗಳು, ಹೆಚ್ಚಿನ ಸಮಸ್ಯೆಗಳು ಮತ್ತು ಹೆಚ್ಚಿನ ಬಡತನಗಳಿರುತ್ತವೆ. ಆಕ್ರಮಣಶೀಲತೆಯೊಂದಿಗೆ ನಾವು ಹಿಂದಕ್ಕೆ ಚಲಿಸುತ್ತೇವೆ. ಎಲ್ಲೆಲ್ಲಾ ಆಕ್ರಮಣಶೀಲತೆಯಿರುವುದೋ, ಅಲ್ಲೆಲ್ಲಾ ಜನರು; ಹೆಚ್ಚಲ್ಲದಿದ್ದರೂ ಕಡಿಮೆಪಕ್ಷ ಹದಿನೈದರಿಂದ ಇಪ್ಪತ್ತು ವರ್ಷಗಳಷ್ಟು ಹಿಂದಕ್ಕೆ ಚಲಿಸಿರುವುದನ್ನು ನೀವು ಕಾಣುತ್ತೀರಿ. ಸಹಕಾರವು ಪ್ರಮುಖವಾಗಿದೆ.

ಉತ್ತಮ ಫಲಿತಾಂಶವನ್ನು ನೀಡದೇ ಇದ್ದ ಹಲವಾರು ಆಕ್ರಮಣಶೀಲತೆಗಳನ್ನು ಪ್ರಪಂಚವು ನೋಡಿದೆ. ಯುದ್ದವು ನಿಯಮಗಳನ್ನು ಬದಲಾಯಿಸಬಲ್ಲದಾದುದರಿಂದ ಅದು ಬಹಳ ಒಳ್ಳೆಯದೆಂದು ಕೆಲವೊಮ್ಮೆ ಜನರು ಯೋಚಿಸುತ್ತಾರೆ. ಮೊದಲೇ ಇದ್ದುದನ್ನು ನಾಶಪಡಿಸಿ, ನಿಯಮದಲ್ಲಿ ಒಂದು ಬದಲಾವಣೆಯನ್ನು ಯುದ್ಧವು ತರಬಲ್ಲದೆಂದು ಅವರು ಯೋಚಿಸುತ್ತಾರೆ. ಆದರೆ ನಿಮಗೆ ಗೊತ್ತಾ, ಹಾಗಾಗುವುದಕ್ಕೆ ಹಲವಾರು ಪೀಳಿಗೆಗಳು ಯಾತನೆಯನ್ನನುಭವಿಸುತ್ತವೆ.
ಮಾಹಿತಿ ಮತ್ತು ತಂತ್ರಜ್ಞಾನದ ಈ ಯುಗದಲ್ಲಿ ಜನರು ಬುದ್ಧಿವಂತರೆಂದು ನನಗನಿಸುತ್ತದೆ. ನಾವು ಆ ಯಾತನೆಯ ಮೂಲಕ ಹಾದುಹೋಗಬೇಕಾಗಿಲ್ಲ. ನಾವು ಎಷ್ಟೋ ಹೆಚ್ಚು ಬುದ್ಧಿವಂತರು ಹಾಗೂ ಎಷ್ಟೋ ಹೆಚ್ಚು ಮಾಹಿತಿ ಹೊಂದಿದವರು, ಹಾಗಾಗಿ ನಮಗೆ ಯುದ್ಧದ ಅಗತ್ಯವಿಲ್ಲವೆಂದು ನನಗನಿಸುತ್ತದೆ. ನಮಗೆ ಬೇಕಾದುದೆಂದರೆ ಅರಿವು ಮಾತ್ರ.

ಪ್ರಶ್ನೆ: ಸಮಾಜ ಸೇವೆ, ವ್ಯವಹಾರ ಮತ್ತು ಮನೆಯಲ್ಲಿನ ಜವಾಬ್ದಾರಿಗಳ ನಡುವೆ ಒಬ್ಬನು ಜೀವನವನ್ನು ಸಮತೋಲನದಲ್ಲಿಟ್ಟುಕೊಳ್ಳಬೇಕಾದುದು ಹೇಗೆ?

ಶ್ರೀ ಶ್ರೀ ರವಿ ಶಂಕರ್: ಇಲ್ಲಿ ಬಹರೈನ್‌ನಲ್ಲಿ ನೀವೆಲ್ಲರೂ ಕಾರು ಚಲಾಯಿಸುತ್ತೀರಾ? ಹೌದು! ನೀವು ಕಾರು ಚಲಾಯಿಸುವಾಗ ನೀವೇನು ಮಾಡುವಿರಿ? ನೀವು ಬದಿಗಳಲ್ಲಿರುವ ಕನ್ನಡಿಗಳನ್ನು, ಹಿಂದಿನದನ್ನು ನೋಡಲಿರುವ ಕನ್ನಡಿಯನ್ನು ಮತ್ತು ಮುಂದಿನ ಗಾಜನ್ನು ಕೂಡಾ ನೋಡುತ್ತೀರಿ. ಈ ಎಲ್ಲಾ ಮೂರನ್ನು ನೀವು ಹೇಗೆ ಸಮತೋಲನ ಮಾಡುವಿರಿ?

"ನಾನು ಕೇವಲ ಹಿಂದಿನದನ್ನು ನೋಡುವ ಕನ್ನಡಿಯನ್ನು ಮಾತ್ರ ನೋಡುವೆನು" ಅಥವಾ "ನಾನು ಕೇವಲ ಮುಂದೆ ಮಾತ್ರ ನೋಡುತ್ತೇನೆ" ಅಥವಾ "ನಾನು ಕೇವಲ ಬದಿಗಳನ್ನು ಮಾತ್ರ ನೋಡುತ್ತೇನೆ" ಎಂದು ನೀವು ಹೇಳಲು ಸಾಧ್ಯವಿಲ್ಲ. ನೀವು ಏಕಕಾಲದಲ್ಲಿ ಎಲ್ಲಾ ಮೂರನ್ನು ಮಾಡಬೇಕು ಮತ್ತು ನೀವದನ್ನು ಮಾಡುತ್ತೀರಿ.

ಸರಿಯಾಗಿ ಅದೇ ರೀತಿಯಲ್ಲಿ!

ಹಿಂದಿನದನ್ನು ನೋಡುವ ಕನ್ನಡಿಯು ಭೂತಕಾಲವನ್ನು ತಿಳಿಯುವಂತೆ. ನಿಮಗೆ ಭೂತಕಾಲದ ಬಗ್ಗೆ ಸ್ವಲ್ಪ ನೆನಪಿರಬೇಕು. ನೀವು ಯಾವುದಾದರೂ ತಪ್ಪನ್ನು ಮಾಡಿದ್ದರೆ, ಅದು ಪುನರಾವರ್ತನೆಯಾಗಬಾರದು. ಮುಂದಿರುವ ಗಾಜು, ಮುಂದಿನ ಜೀವನದ ದೃಷ್ಟಿ ಇದ್ದಂತೆ. ಅದಕ್ಕಾಗಿಯೇ ಮುಂದಿರುವ ಗಾಜು (ವಿಂಡ್‌ಶೀಲ್ಡ್) ಬಹಳ ದೊಡ್ಡದು ಮತ್ತು ಹಿಂದಿರುವುದನ್ನು ನೋಡುವ ಕನ್ನಡಿಯು ಬಹಳ ಚಿಕ್ಕದಾಗಿರುವುದು. ನಂತರ ಅಲ್ಲಿ ಬದಿಯ ಕನ್ನಡಿಗಳಿರುತ್ತವೆ, ಇವುಗಳಿರುವುದು ಸದಾಕಾಲವೂ ನಿಮ್ಮ ಸುತ್ತಲೂ ಏನಾಗುತ್ತಿದೆಯೆಂಬುದರ ಬಗ್ಗೆ ನಿಮಗೆ ಅರಿವು ಇರುವುದಕ್ಕಾಗಿ. ಹೀಗೆ ಈ ಎಲ್ಲಾ ಮೂರನ್ನು ನೀವು ಹೇಗೆ ಬಳಸುತ್ತೀರಿ? ಸರಿಯಾಗಿ ಅದೇ ರೀತಿಯಲ್ಲಿ!

ಪ್ರಶ್ನೆ: ನಾನು ಯಾವಾಗಲೂ ಸಂತೋಷವಾಗಿರುವುದು ಹಾಗೂ ಶರೀರ, ಮನಸ್ಸು ಮತ್ತು ಯೋಚನೆಗಳಿಂದ ನಿರ್ಧಾರಿತವಾದ ಗಡಿಗಳಿಂದ ಸಿಕ್ಕಿಹಾಕಿಕೊಳ್ಳದಿರುವುದು ಹೇಗೆ?

ಶ್ರೀ ಶ್ರೀ ರವಿ ಶಂಕರ್: ನೀನು ಈ ಯಾವಾಗಲೂ ಎಂಬುದನ್ನು ಬಿಟ್ಟುಬಿಟ್ಟರೆ, ನೀನು ಸಂತೋಷವಾಗಿರುವೆ. ಸ್ವಲ್ಪ ಹೊತ್ತು ನೀನು ಅಸಂತೋಷವಾಗಿದ್ದರೆ ಚಿಂತಿಸಬೇಡ, ಹಾಗಾದರೇನಂತೆ? ನಾನು ಯಾವತ್ತೂ ದುಃಖಿತನಾಗಿರಬಾರದು ಎಂದು ನೀನು ಯೋಚಿಸಿದರೆ, ಆಗ ಅದುವೇ ದುಃಖಕ್ಕೆ ಒಂದು ಕಾರಣವಾಗುತ್ತದೆ. 

ಭಾನುವಾರ, ಮೇ 4, 2014

ನಿಮ್ಮನ್ನೇ ನೀವು ಅರಿಯುವ ಅಗತ್ಯವಿದೆ

ಮೇ ೪, ೨೦೧೪
ರೋಮ್, ಇಟಲಿ

ಪ್ರಶ್ನೆ: ಭಾರತದಲ್ಲಿ ನಾವು ದೇವರ ಮೇಲೆ ಬಹಳವಾಗಿ ಕೇಂದ್ರಿತವಾದಂತೆ ತೋರುತ್ತದೆ ಮತ್ತು ಕೆಲವು ಜನರು ಅಂಧರಾಗಿ ಧರ್ಮನಿಷ್ಠರಾಗಿದ್ದಾರೆ. ದೇವರಲ್ಲಿ ನಂಬಿಕೆಯನ್ನಿರಿಸದೆಯೇ ಸಂತೋಷವಾಗಿರಲು ಸಾಧ್ಯವೇ? ಕೆಲವೊಮ್ಮೆ ನಾವು ಜೀವನದಲ್ಲಿ ದೇವರನ್ನಿರಿಸಿದಾಗ, ಅದು ಸಮಸ್ಯೆಯನ್ನು ಸೃಷ್ಟಿಸುತ್ತದೆ.  

ಶ್ರೀ ಶ್ರೀ ರವಿ ಶಂಕರ್: ನಿನಗೆ ಗೊತ್ತಾ, ದೇವರ ಯಾವುದೇ ಪರಿಕಲ್ಪನೆಯೂ ಇಲ್ಲದೆಯೇ ಆಧ್ಯಾತ್ಮವು ಗೌರವಿಸಲ್ಪಟ್ಟ ಏಕಮಾತ್ರ ದೇಶವೆಂದರೆ ಭಾರತ.

ಜೈನ ಪಂಥದಲ್ಲಿ, ದೇವರು ಹೊರಗೆಲ್ಲೋ ಕುಳಿತಿರುವ ಯಾವುದೇ ಪರಿಕಲ್ಪನೆಯಿಲ್ಲ, ಮತ್ತು ಬೌದ್ಧ ಧರ್ಮದಲ್ಲಿ ಕೂಡಾ ಹಾಗೆಯೇ. ಹೀಗಾಗಿ, ದೇವರೆಂದರೇನು ಅಥವಾ ದೇವರೆಲ್ಲಿರುವರು ಎಂದು ನಿಮಗೆ ಗೊತ್ತಿಲ್ಲದಿದ್ದರೆ ಪರವಾಗಿಲ್ಲ. ದೇವರಲ್ಲಿ ವಿಶ್ವಾಸವಿರಿಸಬೇಕಾಗಿಲ್ಲ, ಕನಿಷ್ಠಪಕ್ಷ ನೀನು ನಿನ್ನಲ್ಲೇ ವಿಶ್ವಾಸವನ್ನಿಡು. ಆಗ ನಿನಗೆ ನೀನು ಯಾರೆಂಬುದು ತಿಳಿಯುವುದು. ನೀನು ಯಾರು? ನೀನು ಶರೀರವೇ? ನೀನು ಮನಸ್ಸೇ? ನೀನು ಯೋಚನೆಯೇ? ನೀನು ಯಾರು! ನೀನು ಯಾರೆಂಬುದನ್ನು ತಿಳಿ, ಅಷ್ಟು ಸಾಕು.

ನೀನು ಯಾರೆಂಬುದನ್ನು ತಿಳಿಯಲು ಬಯಸುವ ಪಥದಲ್ಲಿ, ನಿನ್ನ ಅಖಂಡತೆ, ನಿನ್ನ ಪ್ರಾಮಾಣಿಕತೆ, ಎಲ್ಲರ ಕಡೆಗಿರುವ ನಿನ್ನ ಕರುಣೆ ಹಾಗೂ ಪ್ರೇಮ, ನಿನ್ನ ಸಂವೇದನಾಶೀಲತೆ ಇವೆಲ್ಲವೂ ಬರುತ್ತವೆ, ಮತ್ತು ಇದುವೇ ಧರ್ಮಶ್ರದ್ಧೆ!

ಭಾರತದಲ್ಲಿ, ಉಪನಿಷತ್ತುಗಳಲ್ಲಿ, ಮೊದಲು ದೇವರನ್ನು ನಂಬುವಂತೆ ಹೇಳಲಾಗಿಲ್ಲ. ’ನಿನ್ನನ್ನೇ ತಿಳಿ’ ಎಂದು ಉಪನಿಷತ್ತುಗಳು ಹೇಳುತ್ತವೆ. ಇದನ್ನೇ ಒತ್ತಿ ಹೇಳಲಾಗಿರುವುದು.

ನಾನು ಯಾವುದನ್ನೂ ನಂಬುವುದಿಲ್ಲ, ನಾನೊಬ್ಬ ನಾಸ್ತಿಕ ಎಂದು ನೀವು ಹೇಳಿದರೆ, ಆಗ ನಿಮಗೆ ಗೊತ್ತಾ, ನಾಸ್ತಿಕರಲ್ಲೊಂದು ಬಹಳ ದೊಡ್ಡ ಸಮಸ್ಯೆಯಿದೆ. ಅವರೊಳಗೆ ಭಯವಿದೆ.

ಎರಡು ರೀತಿಯ ಜನರಿದ್ದಾರೆ, ಒಂದು ದೇವರನ್ನು ನಂಬುವವರು ಮತ್ತು ಒಂದು, ದೇವರನ್ನು ನಂಬದೇ ಇದ್ದು, ತಮಗೇನಾಗಲಿದೆಯೆಂದು ತಿಳಿದಿಲ್ಲವಾದ್ದರಿಂದ ಭಯಾನಕವಾದ ಭಯವನ್ನು ಹೊಂದಿರುವವರು. ವಿಶ್ವಾಸದ ಕೊರತೆ, ಕರುಣೆಯ ಕೊರತೆ, ಇವುಗಳೆಲ್ಲವೂ ಬರುತ್ತವೆ.

ನಾನು ಹೇಳುವುದೇನೆಂದರೆ, ನೀನು ದೇವರನ್ನು ನಂಬುವೆಯೋ ಇಲ್ಲವೋ ಎಂಬುದು ಅಪ್ರಸ್ತುತ. ನೀನು ತಿಳಿಯಬೇಕಾಗಿರುವುದೇನೆಂದರೆ, ನೀನು ಯಾರೆಂಬುದು. ನೀನು ಯಾರೆಂಬುದನ್ನು ತಿಳಿಯಲು ನಿನಗೆ ಯಾವುದಾದರೂ ಆಧ್ಯಾತ್ಮಿಕ ಅಭ್ಯಾಸದ, ಯಾವುದಾದರೂ ದಾರಿಯ ಅಗತ್ಯವಿದೆ.

ನಿಮಗೆ ಯಾವುದರಲ್ಲೂ ನಂಬಿಕೆಯಿಲ್ಲವೆಂದು ನೀವು ಹೇಳುವುದಾದರೆ, ಕನಿಷ್ಠಪಕ್ಷ ನೀವು ಹೇಳುತ್ತಿರುವುದರ ಮೇಲಾದರೂ ನೀವು ನಂಬಿಕೆಯನ್ನಿಡಿ, ಸರಿಯಾ? ನೀವು ಹೇಳಬೇಕಾದುದು ಏನೆಂದರೆ, "ನನ್ನನ್ನು ಹೊರತುಪಡಿಸಿ ಬೇರೆ ಯಾವುದರಲ್ಲೂ ನನಗೆ ವಿಶ್ವಾಸವಿಲ್ಲ" ಎಂದು.

"ನನಗೆ ಯಾವುದರಲ್ಲೂ ನಂಬಿಕೆಯಿಲ್ಲ" ಎಂದು ನೀವು ಹೇಳಲು ಸಾಧ್ಯವಿಲ್ಲ, ಆಗ ನೀವು, ನೀವು ಹೇಳುತ್ತಿರುವ ಶಬ್ದಗಳನ್ನು ಕೂಡಾ ನಂಬುವುದಿಲ್ಲ!

ನಾನು ಹೇಳುವುದೇನೆಂದರೆ, ಧರ್ಮ ಅಥವಾ ದೇವರ ಒಂದು ಪರಿಕಲ್ಪನೆಗೆ ತನ್ನದೇ ಆದ ಬೆಲೆಯಿದೆ. ಅದು ದುಃಖದಲ್ಲಿರುವ ಜನರಿಗೆ ಸಹಾಯ ಮಾಡುತ್ತದೆ, ಅದು ಜನರ ಉತ್ಸಾಹವನ್ನು ಮೇಲೆತ್ತುತ್ತದೆ ಮತ್ತು ಅದು ನೈತಿಕ ಹೊಣೆಗಾರಿಕೆಯನ್ನು ಕಾಪಾಡುತ್ತದೆ. ಆದರೆ ಒಬ್ಬ ಒಳ್ಳೆಯ ಮನುಷ್ಯನಾಗಲು ಅಥವಾ ಆಧ್ಯಾತ್ಮದಲ್ಲಿ ಮುಂದುವರಿಯಲು ಇದು ಅತ್ಯಗತ್ಯವೆಂದು ನನಗೆ ಅನ್ನಿಸುತ್ತಿಲ್ಲ. ಅದು ತನ್ನಿಂತಾನೇ ಬರುವುದು.

ಪ್ರಶ್ನೆ: ಒಬ್ಬ ಉತ್ತಮ ವ್ಯಾಪಾರಿಯಾಗಲು ಆಧ್ಯಾತ್ಮಿಕತೆಯು ನನಗೆ ಹೇಗೆ ಸಹಾಯ ಮಾಡಬಲ್ಲದು? ಆಧ್ಯಾತ್ಮಿಕತೆಯು ವ್ಯಾಪಾರಕ್ಕಿಂತ ಭಿನ್ನವಾದುದೇ?

ಶ್ರೀ ಶ್ರೀ ರವಿ ಶಂಕರ್: ವ್ಯಾಪಾರವು ನಿನ್ನಿಂದ ಭಿನ್ನವಾದುದೇ? ನೀನು ಕೊಂಡಿಯಾಗಿರುವೆ. ನೀನು ಚೆನ್ನಾಗಿದ್ದು, ನೀನು ಸಂತೋಷವಾಗಿದ್ದರೆ, ನೀನು ಬುದ್ಧಿಶಾಲಿಯಾಗಿದ್ದು, ಅಂತರ್ಜ್ಞಾನ ಹೊಂದಿದವನಾಗಿದ್ದರೆ, ಆಗ ನೀನು ಒಳ್ಳೆಯ ವ್ಯಾಪಾರವನ್ನು ಮಾಡಬಹುದು.

ನನಗೆ ಹೇಳು, ವ್ಯಾಪಾರಕ್ಕೆ ನಿನಗೆ ಯಾವುದರ ಅಗತ್ಯವಿದೆ? ನಿನಗೆ ಅಂತರ್ಜ್ಞಾನ ಬೇಕು, ನಿನ್ನಲ್ಲಿ ನಾವೀನ್ಯತೆಯಿರಬೇಕು ಮತ್ತು ನಿನಗೆ ಸ್ಫೂರ್ತಿ ಬೇಕು. ಯಾವುದೇ ಸ್ಪರ್ಧೆಯಿಲ್ಲದಿದ್ದರೆ ನೀನು ಹೇಗೆ ಮುಂದೆ ಸಾಗುವೆ? ಸ್ಪರ್ಧೆಯು ನಿನಗೆ ಸ್ಫೂರ್ತಿ ನೀಡುತ್ತದೆ.

ಹೀಗಾಗಿ, ಅಂತರ್ಜ್ಞಾನ, ನಾವೀನ್ಯತೆ ಮತ್ತು ಸ್ಫೂರ್ತಿ, ಈ ಎಲ್ಲಾ ಮೂರು ವಿಷಯಗಳು ಆಧ್ಯಾತ್ಮಿಕತೆಯಿಂದ ಬರುತ್ತವೆ.
ಆಧ್ಯಾತ್ಮಿಕತೆಯೆಂದರೇನು? ನಿಮ್ಮನ್ನೇ ಶಾಂತಗೊಳಿಸುವುದು, ನಿಮ್ಮನ್ನೇ ಕೇಂದ್ರೀಕೃತರಾಗಿಸುವುದು ಮತ್ತು ಜೀವನವನ್ನೊಂದು ವಿಶಾಲ ದೃಷ್ಟಿಕೋನದಿಂದ ನೋಡುವುದು. ಇದುವೇ ನಿಮ್ಮ ಸುತ್ತಲೂ ಒಂದು ಹಿತಕರವಾದ ವಾತಾವರಣವನ್ನು ಉಂಟುಮಾಡುವುದು. ಆಧ್ಯಾತ್ಮಿಕತೆಯೊಂದಿಗೆ, ನಿಮ್ಮ ಸಂಪರ್ಕದ ಗುಣಮಟ್ಟ ಕೂಡಾ ಸುಧಾರಿಸುತ್ತದೆ.

ಜನರೊಂದಿಗೆ ನೀವು ಉತ್ತಮ ಸಂಪರ್ಕವನ್ನು ಬಯಸುವುದಿಲ್ಲವೇ? ಸಂಪರ್ಕ, ಕರುಣೆ, ಒಳ್ಳೆಯ ನಡತೆ, ಸ್ಥಿರತೆ - ಇವುಗಳೆಲ್ಲವೂ ಆಧ್ಯಾತ್ಮಿಕತೆಯ ಉಡುಗೊರೆಗಳಾಗಿವೆ.

ಆದುದರಿಂದ, ನೇರವಾಗಿ ಅಲ್ಲ, ಆದರೆ ಪರೋಕ್ಷವಾಗಿ ಈ ಅಂಶಗಳು ನಿಮ್ಮ ಜೀವನವನ್ನು ಸಮೃದ್ಧಗೊಳಿಸುತ್ತವೆ. ನಿಮ್ಮ ಜೀವನವು ಸಮೃದ್ಧಗೊಂಡಾಗ, ನೀವೊಬ್ಬ ಉತ್ತಮ ಸಂರ್ಕಶಾಲಿಯಾಗುತ್ತೀರಿ, ಉತ್ತಮ ವ್ಯಾಪಾರೀ ಸಮಾಲೋಚಕರಾಗುತ್ತೀರಿ, ನಿಮ್ಮ ಅಂತರ್ಜ್ಞಾನವು ಉತ್ತಮವಾಗಿ ಕೆಲಸ ಮಾಡುತ್ತದೆ, ನೀವು ಇನ್ನೂ ಹೆಚ್ಚು ಹೊಸತನವನ್ನು ತರುವವರಾಗುತ್ತೀರಿ ಮತ್ತು ನೀವು ಇತರರಿಗೆ ಒಂದು ಪ್ರೇರಣೆಯಾಗುವಿರಿ. ಹೀಗೆ, ಈ ವಿಧಾನಗಳಲ್ಲಿ ಆಧ್ಯಾತ್ಮಿಕತೆಯು ನಿಮಗೆ ವ್ಯಾಪಾರದಲ್ಲಿ ಸಹಾಯ ಮಾಡುತ್ತದೆ.

ಇನ್ನೊಂದು ವಿಷಯವೆಂದರೆ ನೈತಿಕತೆ. ಆಧ್ಯಾತ್ಮಿಕತೆಯು ವ್ಯಾಪಾರದಲ್ಲಿ ನೈತಿಕತೆಯನ್ನು ಕೂಡಾ ತರುತ್ತದೆ. ಇತರರು ತಮ್ಮ ಕಡೆಗೆ ಅನೈತಿಕವಾಗಿರಬೇಕೆಂದು ಯಾರೂ ಬಯಸುವುದಿಲ್ಲ. ನಿಮ್ಮ ಗ್ರಾಹಕರು ನಿಮ್ಮ ಕಡೆಗೆ ಅನೈತಿಕರಾಗಿರಬೇಕೆಂದು ನೀವು ಬಯಸುವಿರಾ? ಇಲ್ಲ!

ಇತರರು ನಿಮಗೆ ಯಾವುದನ್ನು ಮಾಡುವುದನ್ನು ನೀವು ಬಯಸುವುದಿಲ್ಲವೋ ಅದನ್ನು ನೀವು ಮಾಡದಿರುವುದು ನೈತಿಕತೆಯಾಗಿದೆ, ಹಾಗೂ ವ್ಯಾಪಾರದಲ್ಲಿ ನೈತಿಕತೆಗೆ ಪುಷ್ಟಿಯನ್ನು ಕೊಡುವುದು ಆಧ್ಯಾತ್ಮಿಕತೆಯಾಗಿದೆ.
ವ್ಯಾಪಾರವೂ ಯಾವಾಗಲೂ ಮೇಲೆ ಕೆಳಗೆ ಹೋಗುತ್ತದೆ. ವ್ಯಾಪಾರದಲ್ಲೊಂದು ಇಳಿಮುಖವಿರುವಾಗ, ಸಂಭಾಳಿಸಿಕೊಂಡು ಮುಂದಕ್ಕೆ ಸಾಗಲು  ನಿಮಗೆ ಅಪಾರ ಶಕ್ತಿಯನ್ನು ಕೊಡುವುದು ಆಧ್ಯಾತ್ಮಿಕತೆಯಾಗಿದೆ.

ಪ್ರಶ್ನೆ: ಒತ್ತಡವನ್ನು ಬಿಟ್ಟುಬಿಡುವುದು ಹೇಗೆ? ನಿಜವಾದ ಸಂತೋಷವನ್ನು ನೀವು ಹೇಗೆ ವ್ಯಾಖ್ಯಾನಿಸುತ್ತೀರಿ?

ಶ್ರೀ ಶ್ರೀ ರವಿ ಶಂಕರ್: ಒತ್ತಡವನ್ನು ಬಿಟ್ಟುಬಿಡಲು ಸ್ವಲ್ಪ ಧ್ಯಾನ, ಸ್ವಲ್ಪ ಉಸಿರಾಟದ ಅಭ್ಯಾಸಗಳು ಮತ್ತು ಪ್ರಾಣಾಯಾಮಗಳನ್ನು ಮಾಡು; ಇದು ಮೊದಲನೆಯದು.

ಎರಡನೆಯದು, ಹಿಂದೆ ತಿರುಗಿ ನೋಡು, ಭೂತಕಾಲದಲ್ಲೂ ನೀನು ಕೆಲವು ಸವಾಲುಗಳನ್ನು ಹೊಂದಿರಲಿಲ್ಲವೇ? ನೀನು ಹೊಂದಿದ್ದೆ, ಅಲ್ಲವೇ? ಇವತ್ತು ನೀನು ಆತಂಕಗೊಂಡಿದ್ದರೆ (ಯಾವುದಾದರೂ ಕಾರಣಕ್ಕಾಗಿ), ಹಿಂದೆ ಕೂಡಾ ನೀನು ಅದೇ ಪರಿಸ್ಥಿತಿಯನ್ನು ಎದುರಿಸಿದ್ದೆ, ಅಲ್ಲವೇ? ಇದು ಮೊದಲ ಸಲವಲ್ಲ. ಮತ್ತು ಆ ಪರಿಸ್ಥಿತಿಯನ್ನು ನೀನು ಜಯಿಸಿರುವೆ. ಹೀಗೆ, ಭೂತಕಾಲದಲ್ಲಿ ನಿನಗೆ ಜಯಿಸಲು ಸಾಧ್ಯವಾಗಿದ್ದ ಒಂದು ಒತ್ತಡಕಾರಿ ಪರಿಸ್ಥಿತಿಯ ಸ್ಮರಣೆಯು, ಈಗ ಒತ್ತಡವನ್ನು ಬಿಟ್ಟುಬಿಡಲಿರುವ ವಿಶ್ವಾಸವನ್ನು ನಿನಗೆ ನೀಡುವುದು.

ಮೂರನೆಯದು ವಿಶ್ವಾಸ; ನನಗೆ ಸಹಾಯ ಮಾಡಲು ಒಂದು ಹೆಚ್ಚಿನ ಶಕ್ತಿಯಿದೆ, ನಾನು ಒಬ್ಬಂಟಿಯಲ್ಲ ಎಂಬ ವಿಶ್ವಾಸ. ಮತ್ತು ಈ ಒತ್ತಡಕಾರಿ ಪರಿಸ್ಥಿತಿಯು ಏನೂ ಅಲ್ಲ, ಇದು ಹೊರಟುಹೋಗಲಿದೆ.

ನಾಲ್ಕನೆಯ ಆಯ್ಕೆಯೆಂದರೆ, ಸುತ್ತಲೂ ನೋಡು ಮತ್ತು ನಿನಗಿಂತ ಹೆಚ್ಚು ಒತ್ತಡವಿರುವ ಜನರನ್ನು ನೋಡು! ನಿಮಗೊಂದು ನಷ್ಟವಾಗಿದ್ದರೆ ಮತ್ತು ಒಬ್ಬರಿಗೆ ನಿಮಗಿಂತ ಒಂದು ದೊಡ್ಡ ನಷ್ಟವಾಗಿದ್ದರೆ, ನಿಮಗೆ ಒಂದು ರೀತಿಯ ಸಮಾಧಾನ ಸಿಗುತ್ತದೆ! ನಾನು ಹೇಳುವುದೆಂದರೆ, ನಿಮ್ಮನ್ನೇ ಸಮಾಧಾನಪಡಿಸಲು ಇದು ಕಡೆಯ ಆಯ್ಕೆಯಾಗಿದೆ.

ನಿಮ್ಮ ಪ್ರದೇಶದಲ್ಲಿ ಯಾವುದೇ ಸಮಸ್ಯೆಯಾಗುತ್ತಿದೆಯೆಂದಿಟ್ಟುಕೊಳ್ಳೋಣ. ಆಗ ನೀವು, ಈಜಿಪ್ಟ್‌ನಲ್ಲಿ ಏನಾಗುತ್ತಿದೆಯೆಂಬುದನ್ನು ನೆನಪಿಸಿಕೊಳ್ಳಿ! ಕಡಿಮೆಪಕ್ಷ ನಿಮ್ಮ ಪರಿಸ್ಥಿತಿಯು ಅವರದ್ದಕ್ಕಿಂತ ಉತ್ತಮವಾಗಿದೆಯೆಂದು ನಿಮಗನ್ನಿಸುವುದು.

ಮನೆಯಲ್ಲಿ ಬಹಳಷ್ಟು ಸೋಲನ್ನನುಭವಿಸುವವರು ಅಥವಾ ಯಾರಾದರೂ ತಮಗೆ ತೊಂದರೆಯನ್ನು ನೀಡುವಾಗ ಅಂತಹವರು ಹೆಚ್ಚಾಗಿ ಇದನ್ನು ಮಾಡುತ್ತಾರೆ. ತಮಗಾಗುವುದನ್ನು ಸಮರ್ಥಿಸಿಕೊಳ್ಳಲು ಅವರು ಇತರರ ವೈಫಲ್ಯಗಳನ್ನು ಎಣಿಸಲು ತೊಡಗುತ್ತಾರೆ.

ಹೀಗೆ, ಈ ರೀತಿಗಳಲ್ಲಿ ನಾವು ಒತ್ತಡವನ್ನು ತೊಡೆದುಹಾಕಬಹುದು.

ಯೋಗಸೂತ್ರಗಳಲ್ಲಿ ಪತಂಜಲಿಯು ಹೀಗೆಂದು ಹೇಳಿದ್ದಾರೆ, ’ಸಂತೋಷ ಅನುತ್ತಮಃ ಸುಖ ಲಾಭಃ’. ’ಏನೇ ಆಗಲಿ ನಾನು ನನ್ನ ಮುಗುಳ್ನಗೆಯನ್ನು ಕಳೆದುಕೊಳ್ಳೆನು’  ಎಂಬ ಒಂದು ಸಂಕಲ್ಪವು ನಿಮಗೆ ಸಹಾಯ ಮಾಡುವುದು. ನೀವದನ್ನು ಕಳೆದುಕೊಳ್ಳಲೂಬಹುದು, ಆದರೆ ನೀವದನ್ನು ಕಳೆದುಕೊಳ್ಳದೇ ಇರುವ ಒಂದು ಸಮಯವು ಬರುವುದು.

ಪ್ರಶ್ನೆ: ಪ್ರತಿದಿನವೂ ಅದೇ ಕೆಲಸವನ್ನು ಮಾಡಲು ನನ್ನನ್ನು ನಾನು ಗಮನವಿಟ್ಟುಕೊಳ್ಳುವಂತೆ ಮಾಡುವುದು ಮತ್ತು ಪ್ರೇರೇಪಿತನಾಗಿಟ್ಟುಕೊಳ್ಳುವುದು ಹೇಗೆಂದು ನಾನು ತಿಳಿಯಲು ಬಯಸುತ್ತೇನೆ. 

ಶ್ರೀ ಶ್ರೀ ರವಿ ಶಂಕರ್: ನನಗೆ ಹೇಳು, ನೀನು ಯಾಕೆ ಗಮನವಿಟ್ಟು ಮಾಡಲು ಬಯಸುವೆ?

(ಉತ್ತರ: ಇದು ನನ್ನ ನೌಕರಿ ಮತ್ತು ಜೀವನೋಪಾಯದ ಪ್ರಶ್ನೆ!)

ಅಷ್ಟೇ! ಇದೊಂದು ನಿನ್ನ ಜೀವನೋಪಾಯದ ಪ್ರಶ್ನೆಯೆಂಬ ಈ ಅರಿವೇ ಸಾಕು ನೀನು ಗಮನವಿಡುವಂತೆ ಮಾಡಲು!
ನೋಡು, ಗಮನ ಬೇಕಾಗಿರುವುದು ಅಲ್ಲಿ ಯಾವುದೇ ಪ್ರೇಮ ಮತ್ತು ಅನುರಾಗವಿಲ್ಲದಿರುವಾಗ. ನಿನಗೆ ಯಾವುದರ ಕಡೆಗಾದರೂ ಒಂದು ಅನುರಾಗವಿದ್ದರೆ, ಆಗ ನೀನು ಅದರ ಮೇಲೆ ಗಮನ ನೀಡಬೇಕಾದ ಅಗತ್ಯವಿಲ್ಲ. ಇದು ಮೊದಲನೆಯದು.

ಎರಡನೆಯದಾಗಿ, ಅದನ್ನು ಸ್ವಂತದ್ದಾಗಿಸಿಕೊಳ್ಳುವುದರಿಂದ, ’ಇದು ನನ್ನದೇ ವ್ಯವಹಾರ’ ಎಂದು ಯೋಚಿಸುವುದರಿಂದ, ಗಮನವು ತನ್ನಿಂತಾನೇ ಬರುತ್ತದೆ. ಅದು ಒಬ್ಬ ಮಾವನ ವ್ಯವಹಾರವಾಗಿದ್ದರೆ ಅಥವಾ ನಿನ್ನ ತಂದೆಯ ವ್ಯವಹಾರವಾಗಿದ್ದರೆ, ಆಗ ಗಮನವು ಕಡಿಮೆಯಾಗಿರುತ್ತದೆ! ಆದರೆ ಅದು ನಿನ್ನ ಸ್ವಂತದ್ದಾಗಿದ್ದರೆ, ಆಗ ನೀನು ಗಮನ ಕೊಡಬೇಕಾಗಿಯೇ ಇಲ್ಲ. ಗಮನವು ಅದರಷ್ಟಕ್ಕೆ ಬರುತ್ತದೆ.