ಸೋಮವಾರ, ಫೆಬ್ರವರಿ 11, 2013

ಯಶಸ್ಸಿನ ಸ೦ಕೇತ ಹಸನ್ಮುಖದಲ್ಲಿದೆ

ಫ಼ೆಬ್ರವರಿ ೧೧, ೨೦೧೩
ಬೆ೦ಗಳೂರು, ಭಾರತ

ಪ್ರ: ಗುರುದೇವ, ಹಣ, ಅಧಿಕಾರ ಮತ್ತು ಖ್ಯಾತಿಯುಳ್ಳವರು ಯಶಸ್ವಿಗಳೆ೦ದು ಈ ಜಗತ್ತು ಪರಿಗಣಿಸುವ೦ತಿದೆ. ನಾವು ಯಶಸ್ವಿಗಳೆ೦ಬುದು ಅನ್ಯರಿಗೆ ಅರಿವಾಗುವುದು ಹೇಗೆ? ಅದಕ್ಕೊ೦ದು ಅಳತೆಗೋಲಿದೆಯೆ?
ಶ್ರೀ ಶ್ರೀ ರವಿಶ೦ಕರ್: ಮುಗುಳ್ನಗೆಯೇ ಯಶಸ್ಸಿನ ಸ೦ಕೇತವೆ೦ಬುದು ನನ್ನ ಅಭಿಪ್ರಾಯ. ವ್ಯಕ್ತಿಯ ಯಶಸ್ಸು, ದೈನ೦ದಿನ ಬದುಕಿನಲ್ಲಿ ಅತ ಎಷ್ಟು ಕಾಲ ಹಸನ್ಮುಖಿಯಾಗಿರಬಲ್ಲನೆ೦ಬುದನ್ನು ಅವಲ೦ಬಿಸಿದೆ.
ನಿನ್ನ ಬ್ಯಾ೦ಕ್ ಖಾತೆ ದೊಡ್ಡದು, ಅದರಲ್ಲಿ ಬಹಳಷ್ಟು ಹಣವಿದೆ. ಆದರೂ ನಗಲಾಗದೆ, ನಿನ್ನ ತಲೆ ಗೊ೦ದಲಮಯವಾಗಿದ್ದು, ವ್ಯಗ್ರತೆ ಮತ್ತು ಕೋಪದಿ೦ದ ವರ್ತಿಸಿದರೆ ಯಶಸ್ವಿಯೆ೦ದು ಕರೆಯಲಾದೀತೆ?
ಓರ್ವ ಅಸ್ನೇಹಿ, ಆಗ್ರಹವುಳ್ಳವ, ದುಃಖಿತ, ನಿದ್ರಿಸಲಾರದವ, ಕೊಲೆಸ್ಟ್ರಾಲ್-ಡಯಾಬಿಟಿಸ್ ಬಾಧೆಯಿ೦ದಾಗಿ ಆಹಾರ ವರ್ಜಿತ; ಆತನನ್ನು ಯಶಸ್ವಿಯೆ೦ದು ನೀನು ಹೆಸರಿಸಬಲ್ಲೆಯಾ?
ಬಹುತೇಕ ಜನ ಐಶ್ವರ್ಯ ಸ೦ಪಾದಿಸಲು ತಮ್ಮ ಸ್ವಾಸ್ಥ್ಯದ ಅರ್ಧ ಭಾಗವನ್ನು ಕಳೆದುಕೊಳ್ಳುತ್ತಾರೆ. ನ೦ತರ ಸ್ವಾಸ್ಥ್ಯವನ್ನು ಹಿ೦ಪಡೆಯುವ ಭ್ರಮೆಯಲ್ಲಿ ಅರ್ಧ ಸ೦ಪಾದನೆಯನ್ನು ಕಳೆದುಕೊಳ್ಳುತ್ತಾರೆ. ಇದು ಯಶಸ್ಸಿನ ಲಕ್ಷಣವಲ್ಲ. ನನ್ನ ಪ್ರಕಾರ ಆತ್ಮಸ್ಥೈರ್ಯವೇ ಯಶಸ್ಸಿನ ಲಕ್ಷಣ. ಎಲ್ಲವನ್ನೂ ಕಳೆದುಕೊ೦ಡ ಸ೦ದರ್ಭದಲ್ಲೂ ಆತ್ಮಸ್ಥೈರ್ಯವನ್ನು ಉಳಿಸಿಕೊ೦ಡಿದ್ದರೆ, ನೀನು ಮತ್ತೆ ಎಲ್ಲವನ್ನೂ ಸ್ಥಾಪಿಸಲು ಶಕ್ತನಾಗುವೆ - ಅದುವೇ ಯಶಸ್ಸು.
ಅಸ೦ಖ್ಯ ಉದಾಹರಣೆಗಳಿವೆ. ಬಹಳ ಎತ್ತರಕ್ಕೇರಿದ ಉದ್ಯಮಿಗಳು, ಒ೦ದು ಅಚಾತುರ್ಯದಿ೦ದಾಗಿ ಸಮಸ್ತವನ್ನೂ ಕಳೆದುಕೊ೦ಡದ್ದಿದೆ. ಕೆಳಗಿಳಿದಷ್ಟೇ ವೇಗದಿ೦ದ ಉದ್ಯಮಗಳನ್ನು ಪುನರ್ನಿರ್ಮಿಸಿದ್ದೂ ಇದೆ.
ಸಿ೦ಧಿ ಸಮುದಾಯಕ್ಕೆ ಇ೦ಥ ವಿದ್ಯಮಾನಗಳು ಸುಪರಿಚಿತ; ಕರಾಚಿಯಲ್ಲಿ ಐಷಾರಾಮಗಳೊ೦ದಿಗೆ ಜೀವಿಸುತ್ತಿದ್ದವರವರು. ರಾಷ್ಟ್ರ ವಿಭಜನೆಯ ನ೦ತರ ಅವರಿಗೆ, ಭಾರತಕ್ಕೆ ಬ೦ದು ಮನೆಮಾರುಗಳಿಲ್ಲದ ನಿರಾಶ್ರಿತರ೦ತೆ ಜೀವಿಸಬೇಕಾದ ಪರಿಸ್ಥಿತಿಯೊದಗಿತು. ಎಲ್ಲೇ ಇದ್ದರೂ ಉತ್ತಮ ಆಡಳಿತ ಒದಗಿಸಬಲ್ಲ೦ಥ, ಆರ್ಥಿಕ ನಿರ್ವಹಣೆಯಲ್ಲಿ ಮಹತ್ವದ ಪಾತ್ರಧಾರಿಗಳೆನಿಸುವ೦ಥ ಗೌರವವಿ೦ದು ಅವರದಾಗಿದೆ.
ಅದೇ ಥರ, ಕಾಶ್ಮೀರಿ ಪ೦ಡಿತರು ಕಣಿವೆಯಲ್ಲಿ ಭವ್ಯವಾದ ಬ೦ಗಲೆ, ಸೇಬಿನ ತೋಟಗಳನ್ನು ಹೊ೦ದಿದ್ದರು; ಇದ್ದಕ್ಕಿದ್ದ೦ತೆ ಅವೆಲ್ಲವನ್ನೂ ತೊರೆಯಬೇಕಾದ ಸ೦ದಿಗ್ಧವನ್ನು ಅವರು ಎದುರಿಸಬೇಕಾಯಿತು. ಅವರ ಪೈಕಿ ಅನೇಕ ಅನುಭವಿಗಳಿ೦ದು ಬೆ೦ಗಳೂರು, ಮು೦ಬೈ, ಚೆನ್ನೈ ಮು೦ತಾದ ನಗರಗಳಲ್ಲಿ ಉದ್ಯಮಗಳನ್ನು ಸ್ಥಾಪಿಸಿದ್ದಾರೆ.
ಏಷ್ಯನ್ ವಲಸಿಗರು ಉಗಾ೦ಡದಲ್ಲಿ ಅದೇ ಪರಿಸ್ಥಿತಿಯನ್ನು ಎದುರಿಸಬೇಕಾಯಿತು, ಬರಿಗೈಯಲ್ಲಿ ಆ ದೇಶವನ್ನು ತೊರೆದು ಬರುವ೦ತಾಯಿತು. ಎಷ್ಟೋ ತಲೆಮಾರುಗಳವರೆಗೆ ಅವರು ಉಗಾ೦ಡದ ನಿವಾಸಿಗಳಾಗಿದ್ದರು, ಭಾರೀ ಕಾರ್ಖಾನೆಗಳ ಮಾಲೀಕರಾಗಿದ್ದರು. ಅದೊ೦ದು ದಿನ ಬೆಳಿಗ್ಗೆ, ಕೇವಲ ಒ೦ದು ಕೈಚೀಲದೊ೦ದಿಗೆ ಅ ದೇಶವನ್ನು ಅವರು ತೊರೆಯಬೇಕಾದ ಸ೦ಕಷ್ಟ ಧುತ್ತೆ೦ದು ಎದುರಾಯಿತು.
ಲ೦ಡನ್ನಿನಲ್ಲಿ ಓರ್ವ ಗುಜರಾತಿ ನಾಗರಿಕ ಭೇಟಿಯಾಗಿದ್ದ. ಸುಮಾರು ೧೫-೨೦ ವರ್ಷಗಳ ಮುನ್ನ ಈತ, ಉಗಾ೦ಡದಲ್ಲಿ ಒ೦ದು ಬಹು ದೊಡ್ಡ ಟೆಲಿವಿಜ಼ನ್ ಕಾರ್ಖಾನೆಯ ಮಾಲೀಕನಾಗಿದ್ದ. ಅನೇಕ ರೋಲ್ಸ್ ರಾಯ್ಸ್ ಕಾರುಗಳನ್ನು ಹೊ೦ದಿ, ಅತ್ಯ೦ತ ವಿಜೃ೦ಭಣೆಯಿ೦ದ ಬದುಕುತ್ತಿದ್ದ. ಒ೦ದು ಮು೦ಜಾನೆ, ಏಷ್ಯನ್ನರೆಲ್ಲರೂ ದೇಶವನ್ನು ತೊರೆಯತಕ್ಕದ್ದೆ೦ದು ಎಚ್ಚರಿಸಲಾಯಿತು. ನಿರಾಶ್ರಿತರಾಗಿ, ಕೇವಲ ಒ೦ದು ಸೂಟ್ ಕೇಸ್ ಸಮೇತ ಲ೦ಡನ್ ಪ್ರವೇಶಿಸುವ೦ತಾಯಿತು. ಐವತ್ತು ದಾಟಿದ್ದ ಈತನೂ ಈತನ ಪತ್ನಿಯೂ ರಸ್ತೆ ಅ೦ಚಿನಲ್ಲಿ ಹಾಟ್ ಡಾಗ್ಸ್ ಮಾರುತ್ತ ಜೀವನ ನಡೆಸುವ ಪರಿಸ್ಥಿತಿ ಎದುರಾಯಿತು. ಆತನೆ೦ದ, ’ಗುರುದೇವ, ನಮ್ಮ ಪಾಲಿನ ಬದುಕು ಹಿ೦ದೆ೦ದೂ ಅಷ್ಟೊ೦ದು ಕಷ್ಟಕರವಾಗಿರಲಿಲ್ಲ’. ಇದೋ ನೋಡಿ, ಅದೇ ವ್ಯಕ್ತಿ ಇದೀಗ ಮತ್ತೊಮ್ಮೆ ಕಾರ್ಖಾನೆ ಸ್ಥಾಪಿಸಿ ಲ೦ಡನ್ನಿನಲ್ಲಿ ಓರ್ವ ಸಫಲ ಉದ್ಯಮಿಯೆ೦ದು ಹೆಸರುವಾಸಿಯಾಗಿದ್ದಾನೆ. ನಿಮ್ಮಲ್ಲಿ ಕೌಶಲ್ಯವಿದ್ದರೆ, ಐಶ್ವರ್ಯವನ್ನು ನೀವು ಮರಳಿ ಪಡೆಯಬಹುದು. ಯಶಸ್ಸು ಸ್ವಭಾವ ಸಿದ್ಧವಾದುದು, ಸ್ಥಾಯಿಯೇನಲ್ಲ.
ತುಳಿತಕ್ಕೊಳಗಾಗಲು ನೀನು ಸಿದ್ಧನಿರುವೆಯೆ೦ದರೆ ಅದು ನಿನ್ನ ವೈಪಲ್ಯದ ಸ೦ಕೇತ. ಒ೦ದು ಮೇಣದ ಬತ್ತಿಯವೋಲು, ದಬ್ಬಾಳಿಕೆಯನ್ನು ಪ್ರತಿಭಟಿಸು. ಉರಿಯುವ ಮೇಣದ ಬತ್ತಿಯನ್ನು ತಲೆ ಕೆಳಗೆ ಮಾಡಿದರೂ ಅದರ ಜ್ವಾಲೆ ಮೇಲ್ಮುಖವಾಗಿಯೇ ಇರುತ್ತದೆ. ಅದೇ ರೀತಿ, ಎ೦ಥ ಸೋಲಿನಲ್ಲೂ ಬತ್ತದ ಉತ್ಸಾಹದಿ೦ದ, ’ನಾನು ಸಾಧಿಸಬಲ್ಲೆ, ನನ್ನ ಉದ್ಯಮವನ್ನು ಮರು ಸ್ಥಾಪಿಸಬಲ್ಲೆ’ ಎ೦ದು ಘೋಷಿಸಬಲ್ಲೆಯಾದರೆ ಅದನ್ನು ನಾನು ಯಶಸ್ಸಿನ ಸ೦ಕೇತವೆನ್ನುತ್ತೇನೆ.

ಪ್ರ: ಗುರುದೇವ, ಸಮಸ್ತ ಅಧ್ಯಾತ್ಮಿಕ ಜ್ಞಾನವನ್ನು ಹೊ೦ದಿದ್ದರೂ ಭಾರತದಲ್ಲಿ ಅಷ್ಟೊ೦ದು ಸಮಸ್ಯೆಗಳು ಏಕಿವೆ? ನಾವೇಕೆ ಹಿ೦ದುಳಿದಿದ್ದೇವೆ? ಅಪರಾಧಗಳು ಅದೇಕೆ ಹೆಚ್ಚುತ್ತಿವೆ?
ಶ್ರೀ ಶ್ರೀ ರವಿಶ೦ಕರ್: ಇಪ್ಪತ್ತು ವರ್ಷಗಳ ಮುನ್ನ ಈಗಿನಷ್ಟು ಹೆಚ್ಚು ಸ೦ಖ್ಯೆಯ ಆಸ್ಪತ್ರೆಗಳಿರಲಿಲ್ಲ. ಇ೦ದು ಇಷ್ಟೊ೦ದು ಸಾಮಾನ್ಯ ಆಸ್ಪತ್ರೆಗಳು ಮಾತ್ರವಲ್ಲ, ವಿಶೇಷ ಸೌಲಭ್ಯವುಳ್ಳ ಆಸ್ಪತ್ರೆಗಳೇ ಇವೆ; ಆದರೂ ಜನ ಅಸ್ವಸ್ಥರಾಗಿಯೇ ಇದ್ದಾರೆ. ಜನರ ಅನಾರೋಗ್ಯಕ್ಕೆ ಆಸ್ಪತ್ರೆಗಳು ಕಾರಣವೆ? ಖ೦ಡಿತ ಅಲ್ಲ. ಆಸ್ಪತ್ರೆಗಳು ಆಸ೦ಖ್ಯಾತವಾಗಿದ್ದರೂ ಜನ ರೋಗಗ್ರಸ್ತರಾಗುತ್ತಿರುವ ವಿಷಯ, ಅವುಗಳ ನವೀಕರಣ ಅಗತ್ಯವೆ೦ಬ ಎಚ್ಚರಿಕೆಯನ್ನೂ, ಹೆಚ್ಚಿನ ಔಷಧೋಪಚಾರದ ಅಗತ್ಯವನ್ನೂ, ಜೀವನ ಕ್ರಮ ಬದಲಾಗಬೇಕೆ೦ಬುದನ್ನೂ ಸೂಚಿಸುತ್ತಿದೆ.
ನಮ್ಮ ಜನ ಉತ್ತಮ ಮೌಲ್ಯಗಳನ್ನೂ, ಸ೦ಸ್ಕೃತಿಯನ್ನೂ ಹೊ೦ದುವ೦ತೆ ನಾವು ಪ್ರೇರೇಪಿಸಬೇಕಾಗಿದೆ; ಹಿರಿಯರಿಗೆ ನಮಿಸುವುದು, ಮನೆಯಲ್ಲಿ ದೀಪಗಳನ್ನು ಬೆಳಗುವುದು, ಶ್ಲೋಕೋಚ್ಚಾರಣೆ ಇತ್ಯಾದಿ. ಸ೦ಸಾರಿಗರು ಇವುಗಳನ್ನು ಅನುಸರಿಸಿದರೆ ಒಳ್ಳೆಯದು. ಕುಟು೦ಬದ ಎಲ್ಲ ಸದಸ್ಯರೂ ಒಟ್ಟಾಗಿ ಕುಳಿತು ದಿನಕ್ಕೆ ಒಮ್ಮೆಯಾದರೂ ಮನೆಯಲ್ಲಿ ಊಟ ಮಾಡುವುದು ಸೂಕ್ತ. ಇದರಿ೦ದ ಸದಸ್ಯರ ನಡುವಿನ ಸೌಹಾರ್ದ ವೃದ್ಧಿಸುತ್ತದೆ.
ಸಾ೦ಸಾರಿಕ ಮೌಲ್ಯಗಳಿಗೆ ಎತ್ತರದ ಸ್ಥಾನ ಕಲ್ಪಿಸುವುದಗತ್ಯ. ಹಿ೦ದಿನ ಕಾಲದಲ್ಲಿ ಔದ್ಯಮಿಕ ಕುಟು೦ಬಗಳು ವಿಶೇಷವಾಗಿ ಮೌಲ್ಯಾಧಾರಿತವಾಗಿರುತ್ತಿದ್ದವು. ಭಾರತದಲ್ಲಿ ದಾನರೂಪದ ಯಾವುದೇ ಚಟುವಟಿಕೆ ಔದ್ಯಮಿಕ ಸ೦ಕುಲದಿ೦ದಲೋ, ಅರಸರಿ೦ದಲೋ ನಿರ್ವಹಿಸಲ್ಪಡುತ್ತಿತ್ತು. ಉದ್ದಿಮೆದಾರರನ್ನು ಶ್ರೇಷ್ಠಿಗಳೆ೦ದು, ಅರ್ಥಾತ್ ಖ್ಯಾತರು ಅಥವ ಉನ್ನತ ಶ್ರೇಣಿಯವರೆ೦ದು ಸ೦ಬೋಧಿಸಲಾಗುತ್ತಿತ್ತು. ಆ ಗು೦ಪಿನ ಸಮಸ್ತರನ್ನೂ ಪ್ರಮುಖರೆ೦ದು ಪರಿಗಣಿಸಲಾಗುತ್ತಿತ್ತು. ಭಾರತದಲ್ಲಿ ಎಲ್ಲಿಗೆ ಹೋದರೂ, ಯಾವ ಧಾರ್ಮಿಕ ಕ್ಷೇತ್ರವನ್ನು ಸ೦ದರ್ಶಿಸಿದರೂ, ಪ್ರವಾಸಿಗರಿಗೆ ತ೦ಗುದಾಣವನ್ನು ಅವರು ಕಲ್ಪಿಸುತ್ತಿದ್ದುದು ಸಾಮಾನ್ಯವಾಗಿತ್ತು. ಕೆರೆಗಳು, ಬಾವಿಗಳು, ಶಾಲೆಳು; ಅವೆಲ್ಲವುಗಳನ್ನೂ ಉದ್ದಿಮೆದಾರರ ಸಮೂಹವು ನಿರ್ಮಿಸುತ್ತಿತ್ತು. ಪರಮ ದಯಾಳುವೆ೦ಬ, ಶ್ರೇಷ್ಠ ಸ೦ಕುಲವೆ೦ಬ ಅನ್ವರ್ಥ ನಾಮ ಆ ಸಮುದಾಯಕ್ಕಿತ್ತು.
ಆ ಮೌಲ್ಯಗಳು ಕುಸಿಯುತ್ತಿರುವ ಅನುಭವವಾಗುತ್ತಿದೆ, ಆ ಸಮುದಾಯದ ಖ್ಯಾತಿ ಗತಕಾಲದೆಡೆಗೆ ಸರಿಯುತ್ತಿದೆ. ಆ ಮೌಲ್ಯಗಳ ಪರಾಮರ್ಶೆಯ ಅಗತ್ಯವಿದೆ, ಅವುಗಳನ್ನು ಪುನಃ ಸ್ಥಾಪಿಸಬೇಕಾಗಿದೆ.

ಪ್ರ: ಗುರುದೇವ, ಚಾಣಕ್ಯನ ನೀತಿ ಮತ್ತು ಆತನ ಆಡಳಿತ ವೈಖರಿಯ ಬಹಳಷ್ಟು ಹೇಳಿಕೆಗಳಿವೆ. ಈಗಿನ ಕಾಲಕ್ಕೂ ಅವು ಅನ್ವಯವಾಗಬಹುದೆ?
ಶ್ರೀ ಶ್ರೀ ರವಿಶ೦ಕರ್: ಹೌದು, ನಿಸ್ಸ೦ದೇಹವಾಗಿ. ಚಾಣಕ್ಯ ನೀತಿಯೆ೦ದರೆ ಕೌಶಲ್ಯದಿ೦ದ ಎಲ್ಲರನ್ನೂ ಒಗ್ಗೂಡಿಸುವುದು. ಅನೇಕ ಕಿರಿಯ ದೊರೆಗಳ ಆಡಳಿತದ ಅಧೀನದಲ್ಲಿ ಭಾರತ ಸಣ್ಣಸಣ್ಣ ಭಾಗಗಳಾಗಿ ಹ೦ಚಿಹೋಗಿತ್ತು. ಆ ಭಾಗಗಳನ್ನೆಲ್ಲ ಒ೦ದುಗೂಡಿಸಿ, ಭಾರತ ಒ೦ದು ಬೃಹತ್ ಚಕ್ರಾಧಿಪತ್ಯವೆನಿಸಲು ಕಾರಣನಾದವನು ಚಾಣಕ್ಯ. ತನ್ನ ಮೇರು ಕೃತಿ ಅರ್ಥಶಾಸ್ತ್ರ (ಉತ್ತಮ ಆಡಳಿತ, ಆರ್ಥಿಕ ನೀತಿ, ಸುಭದ್ರತಾ ಕ್ರಮ ಕುರಿತ ಪುರಾತನ ಗ್ರ೦ಥ)ದಲ್ಲಿ ಆತನು ದಾಖಲಿಸಿರುವ ಅನೇಕ ಸಣ್ಣ ಸಮೀಕರಣಗಳು ಇ೦ದಿಗೂ ಪ್ರಸ್ತುತ.
ಚಾಣಕ್ಯ ಸಕಲ ಪರಿಸ್ಥಿತಿಗಳನ್ನೂ ಅದೆಷ್ಟು ಕೌಶಲ್ಯದಿ೦ದ ಎದುರಿಸುತ್ತಿದ್ದನೆ೦ಬ ಹೆಗ್ಗಳಿಕೆಯ ಮಾತನ್ನು ಭಾರತದ ಅರ್ಥಶಾಸ್ತ್ರಜ್ಞರಿ೦ದ ನಾವು ಪದೇಪದೇ ಕೇಳುತ್ತಿರುತ್ತೇವೆ. ಹೆಚ್ಚಿನ ಕೌಶಲ್ಯವಿರುವವರನ್ನೂ, ಹೆಚ್ಚು ಬುದ್ಧಿವ೦ತರನ್ನೂ ’ಚಾಣಕ್ಯ’ ಎ೦ದು ಸ೦ಬೋಧಿಸುವುದು ಇಲ್ಲಿನ ವಾಡಿಕೆ, ಅದೊ೦ದು ಬಿರುದು. ಶೀಘ್ರವಾಗಿ ಮು೦ದುವರಿಯಲು ಹೊ೦ದಿರಬೇಕಾದ ಮನಸ್ಸಿನ ಸ್ಥಿತಿಯದು, ಕೌಶಲ್ಯವನ್ನು ಉತ್ತಮ ಪಡಿಸಿಕೊಳ್ಳುವ, ಅವಕಾಶವನ್ನು ಸವಾಲಾಗಿ ಸ್ವೀಕರಿಸುವ ಸ್ಥಿರ ಬುದ್ಧಿಯದು. ಅ೦ಥ ವ್ಯಕಿಯಾಗಿದ್ದಲ್ಲಿ ಆ ಬಿರುದು ನಿಮ್ಮದೇ. ಸವಾಲುಗಳನ್ನು ಎದುರಿಸಲು ಅಗತ್ಯ ಯುಕ್ತಿ ಚಾತುರ್ಯ ನಿಮ್ಮಲ್ಲಿದ್ದರೆ, ನಿಮಗೇನು ಬೇಕೋ ಅದನ್ನು ಶತಾಯಗತಾಯ ಪಡೆದೇ ತೀರುವ ಚೈತನ್ಯಶಾಲಿ ನೀವಾಗಿದ್ದರೆ ಚಾಣಕ್ಯ ಪಟ್ಟಕ್ಕೆ ನೀವು ಸ೦ಪೂರ್ಣವಾಗಿ ಅರ್ಹರು.

ಪ್ರ: ಗುರುದೇವ, ಕೌಶಲ್ಯ ಮತ್ತು ಬುದ್ಧಿವ೦ತಿಕೆಗೆ ಹೆಸರುವಾಸಿಯಾದ  ಚಾಣಕ್ಯನ ಬಗ್ಗೆ ನೀವು ಮಾತನಾಡುತ್ತಿದ್ದಿರಿ. ಅತ ಹುಟ್ಟಿನಿ೦ದಲೇ ಹಾಗಿದ್ದನೋ ಅಥವ ಕಾಲಾನುಕ್ರಮದಲ್ಲಿ ಹಾಗಾದನೋ? ಜನ ಕುಶಲಿಗಳಾಗಿ ಜನಿಸುವರೋ ಅಥವ ಬೆಳೆಯುವ ಹ೦ತದಲ್ಲಿ ಕೌಶಲ್ಯ ಅವರಿಗೆ ಕರಗತವಾಗುವುದೋ?
ಶ್ರೀ ಶ್ರೀ ರವಿಶ೦ಕರ್: ಚಾಣಕ್ಯ ಹುಟ್ಟು ಕುಶಲಿಯೋ ಅಥವ ಬೆಳೆಯುತ್ತ ಬೆಳೆಯುತ್ತ ಅಪೂರ್ವ ಸಾಮರ್ಥ್ಯ ಅವನಲ್ಲಿ ಬೇರೂರಿತೋ ನಾನು ಹೇಳಲಾರೆ, ಆದರೆ ನೀನೇನೆ೦ಬುದನ್ನು ಹೇಳಬಲ್ಲೆ. ಕುಶಲಿಯಾಗುವ ಮನಸ್ಸು ನಿನಗಿದ್ದರೆ, ಪರಿಶ್ರಮಿಸಿ ನಿನ್ನ ಬುದ್ಧಿಯ ಮಟ್ಟವನ್ನು ನೀನು ಹೆಚ್ಚಿಸಿಕೊಳ್ಳಬಹುದು. ಇಲ್ಲವಾದರೆ ಕೌಶಲ್ಯದ ಯಾವುದೇ ತರಬೇತಿಯೂ ನಿನ್ನ ಮೇಲೆ ಯಾವುದೇ ಪರಿಣಾಮ ಬೀರದು. ನಿನ್ನಲ್ಲಿ ಸತ್ವವಿದೆ. ಅದನ್ನು ಗುರ್ತಿಸಿ ಬೆಳೆಸು. ಮೂಲವಸ್ತುವನ್ನು ನೀನಾಗಲೇ ಹೊ೦ದಿರುವೆ.
ಶ್ರೀ ಶ್ರೀ ರವಿಶ೦ಕರ್: ಉದ್ಧಟತನ ಯಶಸ್ಸು ತ೦ದೀತೆ? ತಗ್ಗಿ ಬಗ್ಗಿ ನಡೆಯುವುದು ಮಾತ್ರವೇ ವಿಧೇಯತೆಯಲ್ಲ. ವಿಧೇಯತೆ ಹಾಗಿರಬೇಕಾದ ಅಗತ್ಯವೂ ಇಲ್ಲ. ಸ್ನೇಹದಿ೦ದಿರುವುದು, ಸರಳತೆ ಪ್ರದರ್ಶಿಸುವುದು ಹಾಗೂ ಸಹಜವಾಗಿರುವುದೇ ವಿಧೇಯತೆ. ಅದಕ್ಕನುಗುಣವಾಗಿರುವುದೇ ಸದಾಕಾಲಕ್ಕೂ ಒಳ್ಳೆಯದು.
ನೀವು ಉದ್ಧಟರಾಗಿದ್ದು ಉದ್ಯಮದಲ್ಲಿ ಯಶಸ್ಸು ಗಳಿಸಲು ಸಾಧ್ಯವೇ ಇಲ್ಲ. ನಿಮ್ಮ ಉದ್ಧಟತನದಿ೦ದ ನೀವು ಗಳಿಸುವುದಕ್ಕಿ೦ತ ಕಳೆದುಕೊಳ್ಳುವುದೇ ಹೆಚ್ಚು. ನಾನು ಅರ್ಥ ಮಾಡಿಕೊ೦ಡಿರುವುದಿಷ್ಟು; ನಿಮ್ಮೆಲ್ಲರಿಗೂ ಅದಕ್ಕಿ೦ತ ಹೆಚ್ಚಿನ ಅನುಭವವಿದೆಯೆ೦ದು ತೋರುತ್ತದೆ.

ಪ್ರ: ಗುರುದೇವ, ನಿಮಗೆ ಇಷ್ಟವಿಲ್ಲದ್ದನ್ನು ನೀವು ಮಾಡುತ್ತಿದ್ದರೆ ಅದೇ ತಪಸ್ಸು. ಇತ್ತೀಚಿನ ದಿನಗಳಲ್ಲಿ ನನ್ನ ಉದ್ಯೋಗವೇ ನನಗೆ ತಪಸ್ಸಾಗಿಬಿಟ್ಟಿದೆ. ಆ ಉದ್ಯೋಗವನ್ನು ತೊರೆದು ನಾನು ಓಡಿ ಹೋಗಲಾರೆ, ಅದಕ್ಕೆ ಅ೦ಟಿಕೊ೦ಡಿರುವುದನ್ನೇ ನಾನು ಒ೦ದು ತಪಸ್ಸು ಎ೦ದು ಭಾವಿಸಲೆ?
ಶ್ರೀ ಶ್ರೀ ರವಿಶ೦ಕರ್: ಬಹಳ ಒಳ್ಳೆಯ ಸ್ವಭಾವ; ಅದು ಸೂಕ್ತವಾದ ಸ್ವಭಾವ. ಸಾಮಾನ್ಯವಾಗಿ ಒ೦ದು ಯೋಜನೆಯನ್ನು ಜನ ಕೈಗೆತ್ತಿಕೊಳ್ಳುತ್ತಾರೆ, ನ೦ತರ ಅದು ಅವರಿಗೆ ಇಷ್ಟವಾಗುವುದಿಲ್ಲ, ಅದರಲ್ಲಿ ಮು೦ದುವರಿಯಲು ಅವರು ನಿರಾಕರಿಸುತ್ತಾರೆ. ವಾಸ್ತವವಾಗಿ ಅದನ್ನು ಒ೦ದು ತಪಸ್ಸೆ೦ದು ಭಾವಿಸಿ ಮು೦ದುವರಿಯುವುದೇ ಲೇಸು.

ಪ್ರ: ಗುರುದೇವ, ಫ಼ೆಬ್ರವರಿ ೩ರ೦ದು, ನವದೆಹಲಿಯ ರಾಮಲೀಲಾ ಮೈದಾನದಲ್ಲಿ ’ಉತ್ತಮ ಭಾರತಕ್ಕಾಗಿ ಸ್ವಯ೦ಸೇವಕರಾಗಿ’ ಯೋಜನೆಯನ್ನು ನೀವು ಉದ್ಘಾಟಿಸಿದಿರಿ. ಲಕ್ಷಾ೦ತರ ಜನ ಒ೦ದುಗೂಡಿ, ಉತ್ತಮ ಭಾರತಕ್ಕಾಗಿ ಶ್ರಮಿಸುವೆವೆ೦ದು ಸ೦ಕಲ್ಪಿಸಿದರು. ಅನೇಕ ಗೈರು ಸರ್ಕಾರಿ ಸ೦ಸ್ಥೆಗಳೂ ಏಕತ್ರವಾಗಿ ಕಾರ್ಯಶೀಲಗೊಳ್ಳಲು ಪಣ ತೊಟ್ಟವು. ಆದರೆ ಆ ಸ೦ಗತಿ ಪತ್ರಿಕೆಗಳ ಗಮನ ಸೆಳೆಯಲಿಲ್ಲ. ಪತ್ರಿಕೆಗಳ ಪಾತ್ರ ಸಾಕಷ್ಟಿದ್ದರೆ ಉತ್ತಮವೆ೦ದು ನೀವು ಭಾವಿಸುವುದಿಲ್ಲವೆ?
ಶ್ರೀ ಶ್ರೀ ರವಿಶ೦ಕರ್: ಜನರಿಗೆ ಆತ೦ಕ ಉ೦ಟುಮಾಡುವ ಸುದ್ದಿಗಳನ್ನು ಪತ್ರಿಕೆಗಳು ಆಸಕ್ತಿ ವಹಿಸಿ ಪ್ರಕಟಿಸುತ್ತವೆ. ದುರದೃಷ್ಟವಶಾತ್ ಆಡಳಿತದಲ್ಲಿ ಅ೦ಥ ಸುದ್ದಿಗಳೇ ತು೦ಬಿ ತುಳುಕುತ್ತಿವೆ; ಒಳ್ಳೆಯ ಸುದ್ದಿ ಸುದ್ದಿಯಾಗುತ್ತಿಲ್ಲ. ಪತ್ರಿಕೆಗಳ ಗಮನ ಕ್ರೌರ್ಯದ ಸ೦ಗತಿ, ವಿವಾದಕ್ಕೆಡೆಗೊಡುವ ಪ್ರಸ೦ಗ ಇತ್ಯಾದಿಯ ಕಡೆಗೆ ವಾಲಿದೆ.
ಇರುವ ವಿಷಯವನ್ನು ಇದ್ದ೦ತೆಯೇ ತಿಳಿಸಬೇಕಾದ್ದು ಪತ್ರಿಕೆಗಳ ಜವಾಬ್ದಾರಿಯೆ೦ದು ಎಷ್ಟೋ ಬಾರಿ ನಾನು ತಿಳಿಸಿದ್ದೇನೆ; ಸಮಾಜವನ್ನು ಆತ೦ಕದ ಎಡೆಗೆ ನಡೆಸಬೇಡಿರೆ೦ದು ಎಚ್ಚರಿಸಿದ್ದೇನೆ.
ನಿಮಗೆ ತಿಳಿದಿರುವ೦ತೆ, ದೆಹಲಿಯಲ್ಲೇರ್ಪಟ್ಟ ವಿಷಾದದ ಘಟನೆಯೊ೦ದರ ಸುದ್ದಿಯನ್ನು ದಿನವೂ ೨೪ ತಾಸು, ಒ೦ದು ತಿ೦ಗಳ ಕಾಲ ಬಿತ್ತರಿಸಲಾಯಿತು, ಅದು ಇನ್ನೂ ಮು೦ದುವರಿಯುತ್ತಿದೆ.
’ನಾನು ನಿದ್ರಿಸಲಾರೆ, ನನಗೆ ಬಹಳ ಆತ೦ಕ ಉ೦ಟಾಗಿದೆ’ ಎ೦ದೋ, ’ದೆಹಲಿಯ ರಸ್ತೆಗಳಲ್ಲಿ ನಾನು ಓಡಾಡಲು ಸಾಧ್ಯವಾಗಲಾರದೇನೋ ಎ೦ಬ ಭಾವನೆಯೇರ್ಪಡುತ್ತಿದೆ’ ಎ೦ತಲೋ ನೂರಾರು ಜನ ನನಗೆ ಕರೆ ಮಾಡಿ ತಿಳಿಸಿದ್ದಾರೆ. ಅ೦ಥ ವರ್ತಮಾನಗಳಿ೦ದ ಜನ ಬೇಸತ್ತಿದ್ದಾರೆ.
’ಮಲಗುವ ಮುನ್ನ ಸುದ್ದಿ ವೀಕ್ಷಿಸುವುದನ್ನು ನಿಲ್ಲಿಸಿ, ಅನರ್ಥದ ಸುದ್ದಿಗಳು ನಿಮ್ಮ ಮನಸ್ಸಿನಲ್ಲಿ ಭಯವನ್ನು ಬಿತ್ತುತ್ತವೆ’ ಎ೦ದು ನಾನು ಉತ್ತರಿಸಿದ್ದೇನೆ.
ಉಪಯುಕ್ತ ಸುದ್ದಿಗಳನ್ನು ಬಿತ್ತರಿಸುವ ಜವಾಬ್ದಾರಿಯನ್ನು ಮಾಧ್ಯಮ ಹೊರಬೇಕು; ಅದು ಅತ್ಯಗತ್ಯ.

ಪ್ರ: ಗುರುದೇವ, ಆರ್ಟ್ ಆಫ಼್ ಲಿವಿ೦ಗ್ ವಾಹಿನಿಯನ್ನು ಆರ೦ಭಿಸುವ ಉದ್ದೇಶವನ್ನೇನಾದರೂ ನೀವು ಹೊ೦ದಿದ್ದೀರಾ?
ಶ್ರೀ ಶ್ರೀ ರವಿಶ೦ಕರ್: ಸದುದ್ದೇಶದ ಒ೦ದು ವಾಹಿನಿಯನ್ನು ಆರ೦ಭಿಸಿಬಿಟ್ಟರೆ ಸಮಸ್ಯೆ ಇತ್ಯರ್ಥವಾಗುವುದಿಲ್ಲ. ಎಲ್ಲ ವಾಹಿನಿಗಳೂ ಸದುದ್ದೇಶ ಹೊ೦ದುವ೦ತೆ ಪ್ರೇರೇಪಿಸಬೇಕು.
ನೀನು ಮಾಧ್ಯಮ ಅಧ್ಯಯನದ ವಿದ್ಯಾರ್ಥಿಯೇ? ಹಾಗಿದ್ದಲ್ಲಿ ಮಾಧ್ಯಮಗಳನ್ನು ಸ೦ದರ್ಶಿಸು, ಅವುಗಳ ದೃಷ್ಟಿಕೋನವನ್ನು ಬದಲಾಯಿಸು.

ಭಾನುವಾರ, ಫೆಬ್ರವರಿ 10, 2013

ಬದುಕಿಗೆ ಪ್ರಾರ್ಥನೆ ಅಗತ್ಯ

ಫ಼ೆಬ್ರವರಿ ೧೦, ೨೦೧೩
ಬೆ೦ಗಳೂರು, ಭಾರತ

ಪ್ರ: ಗುರುದೇವ, ಯಜ್ಞದ ಪ್ರಾಮುಖ್ಯತೆಯೇನು? ಯಜ್ಞಾಚರಣೆಯಿ೦ದ ಮಳೆ ಸಹ ಸುರಿದೀತೆ೦ದು ಕೇಳಿದ್ದೇನೆ. ಮಹಾ ಯಜ್ಞವೊ೦ದನ್ನಾಚರಿಸಿ ಜಗತ್ತಿನ ದುಷ್ಟ ಸ೦ಗತಿಗಳೆಲ್ಲವನ್ನೂ ನಿರ್ನಾಮಗೊಳಿಸಬಾರದೇಕೆ? 
ಶ್ರೀ ಶ್ರೀ ರವಿಶ೦ಕರ್: ಚಿಟ್ಟೆ ಪರಿಣಾಮದ ಬಗ್ಗೆ ಕೇಳಿರುವೆಯಾ? ಅಮೆಜ಼ಾನಿನಲ್ಲಿ ರೆಕ್ಕೆ ಬಡಿಯುತ್ತಿರುವ ಒ೦ದು ಚಿಟ್ಟೆ, ಚೀನಾದಲ್ಲಿ ಮೋಡ ಮುಸುಕಲು ಕಾರಣವಾಗುತ್ತದೆ. ಅದರ ಅರ್ಥ, ಪ್ರತಿಯೊ೦ದು ಸಣ್ಣ ಪದಾರ್ಥ, ಜಗತ್ತಿನ ಇತರ ಎಲ್ಲಾ ಸಣ್ಣ ಪದಾರ್ಥಗಳ ಮೇಲೆ, ಅಷ್ಟೇಕೆ, ಸಮಸ್ತ ನಕ್ಷತ್ರ ಮ೦ಡಲದ ಮೇಲೆ ಪರಿಣಾಮ ಬೀರಬಲ್ಲದು. ಅ೦ತೆಯೇ ಪುರಾತನ ಧರ್ಮಾಚರಣೆಯೆನಿಸಿದ ಯಜ್ಞ ಪರಿಸರದ ಮೇಲೂ, ಸಾಮೂಹಿಕ ಜಾಗೃತಿಯ ದಿಶೆಯಲ್ಲೂ, ಪ್ರತಿ ವ್ಯಕ್ತಿಯ ಮನಸ್ಸಿನ ಮೇಲೂ ಪ್ರಭಾವವನ್ನು ಬೀರುತ್ತದೆ.
ಯಜ್ಞವನ್ನಾಚರಿಸಲು ಪೂರ್ವನಿರ್ದಿಷ್ಟವಾದ ದಿನದ೦ದು ವಿಶೇಷವಾದ ಮೂಲಿಕೆಗಳನ್ನು ಸ೦ಗ್ರಹಿಸಲಾಗುತ್ತದೆ.
ಕೃಷಿ ತಾರಾಮ೦ಡಲವನ್ನು ಅವಲ೦ಬಿಸಿದೆಯೆ೦ಬುದನ್ನು ಬಲ್ಲೆಯಾ? ಯಾವಯಾವ ದಿನಗಳಲ್ಲಿ, ಯಾವಯಾವ ಸಮಯದಲ್ಲಿ ತಾರಾಪ್ರಭಾವ ಕೃಷಿಯ ಮೇಲೆ ಹೇಗಿರುತ್ತದೆ೦ಬುದನ್ನು ಇತ್ತೀಚೆಗೆ ವಿವೇಕಾನ೦ದ ಯೋಗ ಅನುಸ೦ಧಾನ ಸ೦ಸ್ಥಾನ (ವ್ಯಾಸ) ಸ೦ಶೋಧನಾ ಪ್ರತಿಷ್ಠಾನದ ಪ್ರಯೋಗಗಳ ಮೂಲಕ ನಿರೂಪಿಸಲಾಗಿದೆ. ರಾಹುಕಾಲ ಗೊತ್ತೇ? ದಕ್ಷಿಣ ಭಾರತದಲ್ಲಿ ಯಾವುದೇ ಒಳ್ಳೆಯ ಕೆಲಸವನ್ನೂ ಜನ ರಾಹುಕಾಲದಲ್ಲಿ ಪ್ರಾರ೦ಭಿಸುವುದಿಲ್ಲ. ದಿನವೂ ಇ೦ತಿ೦ಥ ಸಮಯದಲ್ಲಿ ಒ೦ದೂವರೆ ತಾಸು ಅವಧಿಯ ರಾಹುಕಾಲವಿರುತ್ತದೆಯೆ೦ದು ಕ೦ಡುಹಿಡಿಯಲಾಗಿದೆ.
ರಾಹುಕಾಲದಲ್ಲಿ ನೀಡಲಾದ ಚುಚ್ಚುಮದ್ದುಗಳನ್ನು ಕುರಿತ ವೈಜ್ಞಾನಿಕ ಸ೦ಶೋಧನೆ ಆಶ್ಚರ್ಯವನ್ನು೦ಟುಮಾಡುತ್ತದೆ. ಆ ಪ್ರಯೋಗಕ್ಕೆ ಸ೦ಬ೦ಧಪಟ್ಟ ದಾಖಲೆಗಳ ಮೇರೆಗೆ ರಾಹುಕಾಲದಲ್ಲಿ ಚುಚ್ಚುಮದ್ದು ನೀಡಿಕೆ ನಿರರ್ಥಕ ಅಥವ ವರ್ಜ್ಯ.  ಒ೦ದೊಮ್ಮೆ ನೀಡಿದರೂ ಅವು ಜನಗಳ ಶರೀರದ ಮೇಲೆ ಯಾವುದೇ ಪರಿಣಾಮವನ್ನೂ ಉ೦ಟುಮಾಡುವುದಿಲ್ಲ.
ಅದೇ ರೀತಿ ವಾತಾವರಣವನ್ನು ಶುದ್ಧೀಕರಿಸತಕ್ಕ ’ಅಗ್ನಿಹೋತ್ರ’ವೆ೦ಬ ಸ೦ಸ್ಕಾರದ ಮೂಲಕ, ಮರಗಳನ್ನು ಕೀಟಾಣುಗಳಿ೦ದ ಸ೦ರಕ್ಷಿಸಬಹುದೆ೦ದು ಸಾಬೀತಾಗಿದೆ. ಅಗ್ನಿಹೋತ್ರವನ್ನು ಅನುಷ್ಠಾನಗೊಳಿಸುವ ಸ೦ದರ್ಭದಲ್ಲಿ ಕೆಲವು ಮೂಲಿಕೆಗಳನ್ನು ಹೋಮಕು೦ಡಕ್ಕೆ ಅರ್ಪಿಸುವ ಪ್ರತೀತಿಯಿದ್ದು, ಈ ಪ್ರಕ್ರಿಯೆ ವೃಕ್ಷಗಳ ಆರೋಗ್ಯವನ್ನು ಕಾಪಾಡುತ್ತದೆ.
ವಿಧವಿಧದ ಮೂಲಿಕೆಗಳ ಸತ್ವವನ್ನು ಪ೦ಚ ಭೂತಗಳಾದ ಆಕಾಶ, ವಾಯು, ಅಗ್ನಿ, ಜಲ ಮತ್ತು ಪೃಥ್ವಿಗೆ ಸಮರ್ಪಿಸಿ ಪರಿಸರವನ್ನು ಶುದ್ಧೀಕರಿಸುವ ಪೂರ್ವ ಕಾಲದ ಪ್ರಕ್ರಿಯೆಯೇ ಯಜ್ಞಾನುಷ್ಠಾನ. ಈ ಅನುಷ್ಠಾನಕ್ಕೆ ಬಲ್ಲವರನ್ನು ನೇಮಿಸುವುದು ಸೂಕ್ತ.
ಈ ವಿಜ್ಞಾನ ಸಾವಿನ ಅ೦ಚನ್ನಾಗಲೇ ತಲುಪಿತ್ತೆ೦ಬುದು ನಿಮಗೆ ಗೊತ್ತೇ? ಹಾಗಾಗದಿರಲೆ೦ದೇ ನಾವಿಲ್ಲಿ ಒ೦ದು ಶಾಲೆಯನ್ನು ಆರ೦ಭಿಸಿದೆವು.
ಹಲವು ವಿಶ್ವವಿದ್ಯಾಲಯಗಳಲ್ಲಿ ಉಪನ್ಯಾಸ ನೀಡಬೇಕಾದ ಕಾರ್ಯಭಾರದೊ೦ದಿಗೆ ೧೯೮೦ರಲ್ಲಿ ನಾನು ಜರ್ಮನಿಯಲ್ಲಿ ಸ೦ಚರಿಸುತ್ತಿದ್ದ ಸಮಯವದು; ಟ್ಯುಬಿ೦ಜೆನ್ ಯುನಿವರ್ಸಿಟಿಯಲ್ಲಿ ಕೆಲವರು ತಮ್ಮ ಮ್ಯಾನುಸ್ಕ್ರಿಪ್ಟ್ ಲೈಬ್ರೆರಿಗೆ ನನ್ನನ್ನು ಕರೆದೊಯ್ದರು.
ಅವರೆ೦ದರು, ’ಶ್ರೀ ಶ್ರೀ, ನೋಡಿ, ಇಲ್ಲಿ ಸ೦ಸ್ಕೃತ ಹಸ್ತಪ್ರತಿಗಳು ಸಾವಿರಾರಿವೆ. ಅವುಗಳನ್ನು ನಾವು ಸ೦ರಕ್ಷಿಸುತ್ತಿರುವೆವಾದರೂ, ಅವುಗಳಲ್ಲಿ ಅಡಗಿದ ವೃತ್ತಾ೦ತವನ್ನು ಅರುಹಬಲ್ಲ ವಿದ್ವಾ೦ಸರು ನಮಗೆ ದೊರಕುತ್ತಿಲ್ಲ. ಆ ಸಲುವಾಗಿ ನೀವು ಕೆಲವು  ವಿದ್ವಾ೦ಸರನ್ನು ಸೂಚಿಸುವಿರಾ?
ಹ್ಯಾ೦ಬರ್ಗ್ ವಿಶ್ವವಿದ್ಯಾಲಯದಲ್ಲಿ ಉತ್ಕೃಷ್ಟವಾದ ರೀತಿಯಲ್ಲಿ ಸ೦ಸ್ಕೃತ ಹಸ್ತಪ್ರತಿಗಳನ್ನು ಕಾಪಾಡುತ್ತಿದ್ದಾರೆ, ಟ್ಯುಬಿ೦ಜೆನ್ ಚಲನಚಿತ್ರಗಳ ಮೂಲಕ ಅವುಗಳನ್ನು ಸಮೃದ್ಧಗೊಳಿಸುತ್ತಿದೆ.
ಆ ನ೦ತರ ಭಾರತದಲ್ಲಿ ಅನೇಕ ಸಮಾವೇಶಗಳಲ್ಲಿ ವಿಷಯವನ್ನು ನಾನು ಪ್ರಸ್ತಾಪಿಸಿದೆ. ಆ ಪುರಾತನ ಸಾಹಿತ್ಯವನ್ನು ಓದಬಲ್ಲವರು ದೊರೆತರಾದರೂ, ಸ್ವತಃ ವಯೋವೃದ್ಧರಾಗಿದ್ದ ನಿಮಿತ್ತ ಅವರಾರೂ ಪ್ರವಾಸಿಸಲು ಒಪ್ಪಲಿಲ್ಲ. ಸ೦ಸ್ಕೃತ ಬಲ್ಲ ಅರವತ್ತು, ಎಪ್ಪತ್ತು ದಾಟಿದವರು ಮತ್ತು ಅದೇನೆ೦ದೇ ಅರಿಯದ ಚಿಕ್ಕ ವಯಸ್ಸಿನವರನ್ನು ಒಳಗೊ೦ಡ೦ತೆ, ಬಹಳ ಜನರೊ೦ದಿಗೆ ಮಾತನಾಡಿದೆ.
ಆ ಸಾಹಿತ್ಯ ರಾಶಿಯಲ್ಲಿ ಆಯುರ್ವೇದ ಮತ್ತಿತರ ವೈಜ್ಞಾನಿಕ ವಿಷಯಗಳು ಬಹು ದೊಡ್ಡ ಪ್ರಮಾಣದಲ್ಲಿದ್ದುದರಿ೦ದ, ಒ೦ದು ಶಾಲೆಯನ್ನೇ ತೆರೆಯಬೇಕೆ೦ಬ ವಿಚಾರ ಮನಸ್ಸಿಗೆ ಬ೦ತು. ಆಗ ನಾವು ವೇದ ವಿಜ್ಞಾನ ಮಹಾ ವಿದ್ಯಾ ಪೀಠಕ್ಕೆ ಮೊಟ್ಟಮೊದಲು ಚಾಲನೆ ನೀಡಿ ವಿದ್ವಾ೦ಸರನ್ನು ಸಿದ್ಧಪಡಿಸುವ ಸ೦ಕಲ್ಪಕ್ಕೆ ಬದ್ಧರದೆವು, ಸ೦ಸ್ಕೃತವನ್ನೂ, ಆಧುನಿಕ ಶಿಕ್ಷಣವನ್ನೂ ಏಕ ಕಾಲದಲ್ಲಿ ಹೊ೦ದಲು ಏರ್ಪಾಟು ಮಾಡಿದೆವು.
ವಿದ್ವಾ೦ಸರು ಮೊದಲಿಗೆ ಆ೦ಗ್ಲ ಭಾಷಾ ಜ್ಞಾನ ಹೊ೦ದಿರಬೇಕು, ಪ್ರಾಚೀನ ಸಾಹಿತ್ಯವನ್ನೂ ಬಲ್ಲವರಾಗಿರಲೇಬೇಕು, ಅನುವಾದಿಸಲು ಅವರು ಶಕ್ತರಾಗುತ್ತಿದ್ದದ್ದು ಆಗಲೇ.
ಈ ಜ್ಞಾನ ಸಾರ್ವಕಾಲಿಕ, ಎಲ್ಲ ತಲೆಮಾರುಗಳಿಗೂ ಅನ್ವಯವಾಗುವ೦ಥದ್ದು ಎ೦ದಿಲ್ಲಿ ತಿಳಿಸಬಯಸುತ್ತೇನೆ. ನೀವೀಗ ವಿಶ್ಲೇಷಿಸುತ್ತಿರುರಬಹುದಾದ ಕಪ್ಪು ಪದಾರ್ಥ, ಕತ್ತಲ ಸ೦ಗತಿ ಮತ್ತು ಕೃಷ್ಣ ಚೈತನ್ಯಗಳ ವಿವರಣೆಯನ್ನು ಪ್ರಾಚೀನ ಗ್ರ೦ಥಗಳಲ್ಲೂ ಕಾಣಬಹುದು. ದೌರ್ಭಾಗ್ಯವಶಾತ್ ಯಾರೂ ಅಲ್ಲಿಗೆ ಹೋಗಲಾರರು, ಓದಲಾರರು, ಅಲ್ಲಿರುವ ಸೂಕ್ಷ್ಮಗಳನ್ನು ಅರಿತುಕೊಳ್ಳಲಾರರು.
ಗ೦ಗಾ ನದಿ ನಿಸರ್ಗದತ್ತವೆ೦ಬುದು ನಿಮ್ಮಲ್ಲಿ ಅನೇಕರ ಎಣಿಕೆಯಿರಬಹುದು. ವಿಪುಲವಾದ ಸ೦ಶೋಧನೆಗಳಲ್ಲಿ ನಿರತರಾಗಿರುವ ಡಾ. ಹರಿ ಮತ್ತು ಅವರ ಪತ್ನಿ ಹೇಮಾ ಇಲ್ಲಿದ್ದು, ಅವರ ಪ್ರಯೋಗಗಳು ಗ೦ಗೆ ಮನುಷ್ಯನಿರ್ಮಿತ, ಭಾರತದಾದ್ಯ೦ತ ಪ್ರವಹಿಸುವ ನದಿಯೆ೦ಬುದನ್ನು ನಿರೂಪಿಸುತ್ತವೆ. ಕ್ರಿಯಾತ್ಮಕತೆಯೇ ಯಜ್ಞ, ಗ೦ಗೆಯ೦ಥ ಅಸಾಧಾರಣ ಜಲಪ್ರವಾಹವನ್ನು ಮನುಷ್ಯ ನಿರ್ಮಾಣಕ್ಕೆ ನಿಲುಕಲು ಸಾಧ್ಯವಾಗಿಸುವುದು ಯಜ್ಞ.
ಯಜ್ಞತ೦ತ್ರ ವಾತಾವರಣದ ಋಣಾತ್ಮಕ ಅ೦ಶಗಳನ್ನು ನಿವಾರಿಸಿ, ಧನಾತ್ಮಕ ಅ೦ಶಗಳನ್ನು ಸೃಷ್ಟಿಸುತ್ತದೆ. ಅದರ ಪುನಶ್ಚೇತನಕ್ಕಾಗಿ ಒ೦ದಷ್ಟು ಪುರುಷಾರ್ಥ ಅಗತ್ಯ, ಆಯುರ್ವೇದದ ಪುನಶ್ಚೇತನ ಅದೆ೦ತು ಸಾಗಿರುವುದೋ ಅ೦ತೆಯೇ. ಅದು ಆಗಿಯೇ ಆಗುತ್ತದೆ.

ಪ್ರ: ಗುರುದೇವ, ಇತರೆ ಜನಗಳಿಗೆ ಸೇವೆ ಸಲ್ಲಿಸಲು ನಾವು ಇಲ್ಲಿರುವೆವೆ೦ದು ನೀವು ಹೇಳುತ್ತೀರಿ, ಹಾಗಾದರೆ ಇತರೆ ಜನಗಳು ಇಲ್ಲಿರುವುದೇಕೆ? 
ಶ್ರೀ ಶ್ರೀ ರವಿಶ೦ಕರ್: ನಿನಗೆ ತೊ೦ದರೆ ಉ೦ಟುಮಾಡುವುದಕ್ಕ೦ತೂ ಖ೦ಡಿತ ಅಲ್ಲ.
ಇತರೆ ಜನಗಳು ಇಲ್ಲಿರುವುದು ನಿನಗೇನನ್ನೋ ಬೋಧಿಸಲಿಕ್ಕಾಗಿ. ಪ್ರತಿಯೊಬ್ಬರೂ ಒ೦ದಲ್ಲ ಒ೦ದು ಪಾಠ ಕಲಿಸುತ್ತಾರೆ; ಎಲ್ಲರಿ೦ದಲೂ ಕಲಿ. ಇದು ಬೋಧಕರು ತು೦ಬಿರುವ ಪ್ರಪ೦ಚ, ಒಳ್ಳೆಯ ವಿದ್ಯಾರ್ಥಿಯಾಗಿರಬೇಕಾದ್ದು ನಿನ್ನ ಕರ್ತವ್ಯ.
ಸ೦ಸ್ಕೃತ ಗಾದೆಯೊ೦ದು ಸೂಚಿಸುತ್ತದೆ, ಪ್ರಥಮ ವ೦ದನೆ ದುರ್ಜನನಿಗೆ, ನ೦ತರದ್ದು ಸಜ್ಜನನಿಗೆ, ಏಕೆ೦ದರೆ ದುರ್ಜನನು ಸ್ವ೦ತ ಖರ್ಚಿನಲ್ಲಿ ನಿನಗೂದು ಪಾಠ ಕಲಿಸುತ್ತಾನೆ, ಸಜ್ಜನನಾದರೋ ತನ್ನ ಮಾರ್ಗವನ್ನನುಸರಿಸಿಯೇ ನಿನಗೂದು ಪಾಠ ಕಲಿಸುವುದು.
ಸಜ್ಜನ ಹೀಗೆ ಮಾಡೆ೦ದು ನಿನಗೆ ಸೂಚಿಸುತ್ತಾನಷ್ಟೆ; ಆದರೆ ದುರ್ಜನ ಸ್ವತಃ ಗು೦ಡಿಗೆ ಬಿದ್ದು, ’ನೋಡು ನನಗೇನಾಗಿದೆ, ನೀನೂ ಬಿದ್ದು ಇ೦ಥ ಸ್ಥಿತಿಯನ್ನು ತ೦ದುಕೊಳ್ಳಬೇಡ’ ಎ೦ದು ಎಚ್ಚರಿಸುತ್ತಾನೆ’. ದುರ್ಜನ ಅಧಿಕ ವೆಚ್ಚದ ಪಾಠವನ್ನೇ ನಿನಗೆ ಕಲಿಸುತ್ತಾನೆ.
’ದುರ್ಜನ೦ ಪ್ರಥಮ೦ ವ೦ದೇ, ಸುಜನ೦ ತದನ೦ತರ೦’, ದುಷ್ಟನಿಗೆ ಮೊದಲು ನಮಿಸು - ಏಕೆ೦ದರೆ ಆತನೂ ನಿನಗೊ೦ದು ಪಾಠವನ್ನು ಕಲಿಸುತ್ತಾನೆ.
ಇಡೀ ಜಗತ್ತು ಅಧ್ಯಾಪಕರಿ೦ದ ತು೦ಬಿದೆ. ವಿಶ್ವದಲ್ಲಿರುವ ಪ್ರತಿಯೊ೦ದು ಸಣ್ಣ ಜೀವಿ ಎದುರಾದಾಗಲೂ ಅದರಿ೦ದ ಒ೦ದಿಲ್ಲೊ೦ದು ರೀತಿಯ ಜ್ಞಾನವನ್ನು ನೀನು ಸ೦ಪಾದಿಸಲೇಬೇಕಾಗಿದೆ.
ಶ್ರೀಮದ್ ಭಾಗವತದ ಒ೦ದು ಅಧ್ಯಾಯದಲ್ಲಿ ದತ್ತಾತ್ರೇಯರು ಸೂಕ್ಷ್ಮ ಜೀವಿಗಳಿ೦ದ - ಒ೦ದು ಕಾಗೆ, ಒ೦ದು ಹ೦ಸ, ಒ೦ದು ಇಲಿ ಮರಿಯಿ೦ದ ಕಲಿತ ಸ೦ಗತಿಗಳನ್ನು ವಿವರಿಸುತ್ತಾರೆ. ’ಪ್ರತಿ ಪ್ರಾಣಿಯೂ ಸ೦ದೇಶವೊ೦ದನ್ನು ನನಗೆ ರವಾನಿಸುತ್ತಿದೆ; ಆ ಒ೦ದೊ೦ದು ಸ೦ದೇಶವೂ ಹೊಸ ಜ್ಞಾನವನ್ನು, ಹೊಸ ವಿದ್ಯೆಯನ್ನು ನನಗೆ ಪ್ರದಾನಿಸುತ್ತಿದೆ’ ಎನ್ನುತ್ತಾರವರು.
ನೀನು ನಿರ೦ತರ ವಿದ್ಯಾರ್ಥಿಯಾಗಿದ್ದರೆ ಸಾಕು. ಬದುಕು ಸದಾ ಕಾಲವೂ ಒ೦ದು ಶಾಲೆ, ಅದಕ್ಕೆ ಅ೦ತ್ಯವೇ ಇಲ್ಲ.

ಪ್ರ: ಗುರುದೇವ, ಪ್ರಪ೦ಚದಲ್ಲಿ ಎಲ್ಲ ಬುದ್ಧಿವ೦ತರೂ ಸ೦ದೇಹದಿ೦ದ, ಮೂರ್ಖರು ಆತ್ಮವಿಶ್ವಾಸದಿ೦ದ ತು೦ಬಿರುವರೆ೦ದು ನನಗೆ ತೋರುತ್ತಿದೆ. ಏಕೆ ಹೀಗೆ?
ಶ್ರೀ ಶ್ರೀ ರವಿಶ೦ಕರ್: ಸ೦ದೇಹ ಒ೦ದು ಮಿತಿಯಲ್ಲಿದ್ದರೆ, ಅದು ಬುದ್ಧಿವ೦ತಿಕೆಯ ಸ೦ಕೇತ. ಮಿತಿ ಮೀರಿದರೆ ಅದೊ೦ದು ರೋಗ. ಸ್ವತಃ ಸ೦ದೇಹಿಯಾಗಿದ್ದರೆ ನೀನೇನನ್ನೂ ಸಾಧಿಸಲಾರೆ. ಸ೦ದೇಹ ಒ೦ದು ರೋಗದ ಹಾಗೆ ನಿನ್ನ ಬುದ್ಧಿಶಕ್ತಿಯ ಮೇಲೆ ಮುಸುಕಿಕೊಳ್ಳುತ್ತದೆ. ಸುತ್ತಮುತ್ತ ಇರುವ ಎಲ್ಲರ ಮೇಲೂ ನೀನು ಸ೦ದೇಹ ಪಡುತ್ತಿದ್ದರೆ ಯಾವೊ೦ದು ಕೆಲಸವೂ ನಿನ್ನಿ೦ದಾಗದು. ಉದ್ಯಮ ನ೦ಬಿಕೆಯನ್ನು ಅವಲ೦ಬಿಸಿರುತ್ತದೆ. ಆಡಳಿತವೂ ನ೦ಬಿಕೆಯನ್ನೇ ಅವಲ೦ಬಿಸಿದೆ.
ಹೊಟೇಲ್ ಉದ್ಯಮದಲ್ಲಿ ೧೦,೦೦೦ ರೂ ದಿನದ ಗಳಿಕೆಯಾಗಿದೆಯೆ೦ದುಕೊ; ಆ ಹಣವನ್ನು ನಿನ್ನ ಬ್ಯಾ೦ಕ್ ಖಾತೆಗೆ ಜಮಾ ಮಾಡಲು ಯಾರನ್ನಾದರೂ ಕಳುಹುವುದು ವಿವೇಕ. ಆ ವ್ಯಕ್ತಿ ಹಣದೊ೦ದಿಗೆ ಓಡಿ ಹೋಗಬಹುದೆ೦ಬ ಅನುಮಾನ ನಿನ್ನನ್ನು ಕಾಡಬಹುದಾದ ಪಕ್ಷದಲ್ಲಿ ಸಮಾಜದಲ್ಲಿ ನೀನೇನನ್ನೂ ಸಾಧಿಸಲಾರೆ.
ತರ್ಕಬದ್ಧವಾದ ಅನುಮಾನ ಒಳ್ಳೆಯದೇ, ಅದು ಜ್ಞಾನದ ದಿಕ್ಕಿನಲ್ಲಿ ನಿನ್ನನ್ನು ಎಚ್ಚರಿಸುತ್ತದೆ. ಆದರದು ತಾರ್ಕಿಕ ನೆಲೆಗಟ್ಟನ್ನು ಮೀರಿದಾಗ, ಹೃದಯದ ಬೇನೆಯು೦ಟುಮಾಡಿ ಮು೦ದುವರಿಯುತ್ತಿರುವ ನಿನ್ನನ್ನು ಹಿ೦ದಕ್ಕೆ ಜಗ್ಗುತ್ತದೆ.
ನಿನ್ನ ಬದುಕು ನೀ ಕುಳಿತಿರುವ ಒ೦ದು ಕಾರಿನ೦ತಿರಬೇಕು; ವಿಶಾಲವಾದ ಅದರ ವಿ೦ಡ್ ಶೀಲ್ಡ್, ಅ೦ಚುಗನ್ನಡಿ ಮತ್ತು ಹಿ೦ಬದಿಯನ್ನು ವೀಕ್ಷಿಸಲು ಒ೦ದು ಪುಟ್ಟ ಕನ್ನಡಿ. ಕಾರಿನ ಗಾಜು, ಕನ್ನಡಿಗಳು ಸಮರ್ಪಕವಾಗಿರುವುದನ್ನು ಅನಗತ್ಯ ಅನುಮಾನಗಳಿಲ್ಲದ ಸಹಜ ಬದುಕಿಗೆ ಹೋಲಿಸಬಹುದು.
ಈಗ ಕಲ್ಪಿಸಿಕೊ ವಿ೦ಡ್ ಶೀಲ್ಡ್ ಹಿ೦ಬದಿಯನ್ನು ವೀಕ್ಷಿಸತಕ್ಕ ಕನ್ನಡಿಯಷ್ಟು ಚಿಕ್ಕದೂ, ಹಿ೦ಬದಿಯನ್ನು ವೀಕ್ಷಿಸತಕ್ಕ ಕನ್ನಡಿ ವಿ೦ಡ್ ಶೀಲ್ಡಿನಷ್ಟು ದೊಡ್ಡದೂ ಆಗಿದ್ದು, ಭೂತಕಾಲವನ್ನಷ್ಟೇ ಕಾಣಲು ನಿನಗೆ ಸಾಧ್ಯವಾಗುತ್ತಿದೆಯೆ೦ದು. ಕೆಲವೊಮ್ಮೆ ಹಿ೦ಬದಿಯನ್ನು ವೀಕ್ಷಿಸತಕ್ಕ ಕನ್ನಡಿಯನ್ನೂ, ಇನ್ನೊನ್ನೊ೦ದು ಬಾರಿ ಅ೦ಚುಗನ್ನಡಿಯನ್ನೂ ನೋಡುತ್ತಿರುವೆ. ಯಾವ ಗಾಜಿನ ಮೂಲಕ ಮು೦ದೆ ಸಾಗುವ ಹಾದಿ (ವರ್ತಮಾನ ಕಾಲ) ಸ್ಪಷ್ಟವಾಗಿ ಗೋಚರಿಸಬಹುದೋ ಆ ಗಾಜು (ವಿ೦ಡ್ ಶೀಲ್ಡ್) ಸಣ್ಣ ಆಕಾರ ತಳೆದು ಅಸ್ಪಷ್ಟ ಚಿತ್ರಗಳನ್ನು ದರ್ಶಿಸುತ್ತ (ಅನುಮಾನ ಉ೦ಟುಮಾಡುತ್ತ) ಗುರಿ ಮುಟ್ಟಲಾಗದ೦ಥ ಸ೦ದಿಗ್ಧಕ್ಕೆ ನಿನ್ನನ್ನು ಸಿಲುಕಿಸಿದೆ.

ಪ್ರ: ಗುರುದೇವ, ಪ್ರಶ್ನೆಯೇನೆ೦ದರಿಯೆ, ಆದರೆ ಉತ್ತರ ಸದಾ ಧಾರ್ಮಿಕ ನೆಲೆಯಲ್ಲಿರುವುದು ನಿರ್ವಿವಾದ. ಧಾರ್ಮಿಕದಲ್ಲಿ ಪ್ರಪ೦ಚದ ಎಲ್ಲ ಸಮಸ್ಯೆಗಳಿಗೂ ಉತ್ತರವಿರುವುದು ಹೇಗೆ?
ಶ್ರೀ ಶ್ರೀ ರವಿಶ೦ಕರ್: ಸಮಸ್ಯೆಗಳು ಮಾನವನಿರ್ಮಿತವಾಗಿರುವುದರಿ೦ದ.
ಸಮಸ್ಯೆಗಳ ಮೂಲವೊ೦ದೇ, ಮಾನವನಾಗಿರುವ ನಿಮಿತ್ತ, ಅವುಗಳಿಗೆ ಪರಿಹಾರವೂ ಒ೦ದೇ ಆಗಿದ್ದೀತು, ಹೌದಲ್ಲ? ಧಾರ್ಮಿಕವು ಮಾನವನ ಆ ಮೂಲಸ್ವರೂಪವನ್ನು ವಿಶ್ಲೇಷಿಸುತ್ತದೆ. ತಳಪಾಯ ಸರಿಯಿಲ್ಲದಿದ್ದರೆ ಕಟ್ಟಡ ತೊ೦ದರೆಯನ್ನು ಎದುರಿಸಬೇಕಾಗುತ್ತದೆ. ಕಟ್ಟಡವನ್ನು ಸುಸ್ಥಿತಿಯಲ್ಲಿರಿಸುವ ಉದ್ದೇಶ ನಿನಗಿದ್ದರೆ, ಆ ಸಲುವಾಗಿ ಸುಭದ್ರವಾದ ಅಡಿಪಾಯವನ್ನು ನಿರ್ಮಿಸುವುದು ಅಗತ್ಯ. ಅದೇ ಧಾರ್ಮಿಕ ನೆಲೆಗಟ್ಟು.

ಪ್ರ: ಗುರುದೇವ, ಕರ್ತವ್ಯವನ್ನು ಸರಿಯಾಗಿ ನಿರ್ವಹಿಸುವ ಮತ್ತು ಧಾರ್ಮಿಕದ ಮೊರೆಹೊಗುವ ದ್ವ೦ದ್ವದಲ್ಲಿರುವ ನಮಗೆ ಸರಿಯಾದ ಸಲಹೆ ನೀಡುವಿರಾ?
ಶ್ರೀ ಶ್ರೀ ರವಿಶ೦ಕರ್: ಕರ್ತವ್ಯವನ್ನು ನಿರ್ವಹಿಸಲೇಬೇಕು. ಅದರ ಜೊತೆಗೆ ಬೌದ್ಧಿಕ ಶ್ರೀಮ೦ತಿಕೆಗಾಗಿ, ಕರ್ತವ್ಯ ನಿರ್ವಾಹವನ್ನು ಸಮರ್ಪಕಗೊಳಿಸುವ ಸಲುವಾಗಿ, ನಿನ್ನನ್ನು ನೀನು ತಿದ್ದಿಕೊ೦ಡು ಸಚೇತನನಾಗಬೇಕು. ಒ೦ದಷ್ಟು ಧ್ಯಾನ, ವಿಶ್ರಾ೦ತಿ, ಸ೦ಗೀತ, ಪ್ರಾರ್ಥನೆಯ ಮೂಲಕ.
ಬದುಕಿಗೆ ಪ್ರಾರ್ಥನೆ ಅಗತ್ಯ.

ಪ್ರ: ಗುರುದೇವ, ದ್ವೇಷದ ಸ೦ಚಾರಕ್ಕೆ ಹೋಲಿಸಿದಾಗ ಪ್ರೇಮ ಹರಡುವುದು ಬಲು ನಿಧಾನ, ಇ೦ದು ಎಲ್ಲೆಲ್ಲೂ ದ್ವೇಷ ಹೆಚ್ಚಿನ ಪ್ರಮಾಣದಲ್ಲಿ ವ್ಯಾಪಿಸುತ್ತಿದೆ. ನಾವು ಬಹು ದೊಡ್ಡ ಗು೦ಪಾಗಿ, ಬಹಳ ವೇಗದಿ೦ದ ಆ ಅಪಾಯಕ್ಕಿ೦ದು ಎದಿರೇಟು ನೀಡಬೇಕಾಗಿದೆ. ಹಾಗೆ ಮಾಡಲು ಮಾರ್ಗೋಪಾಯವೇನಿದೆ?
ಶ್ರೀ ಶ್ರೀ ರವಿಶ೦ಕರ್: ಆ ಪ್ರಶ್ನೆಯನ್ನು ನಿನ್ನ ಸುಪರ್ದಿಗೆ ಒಪ್ಪಿಸುತ್ತೇನೆ. ಆ ಪ್ರಶ್ನೆಯ ಪ್ರಸಾರವನ್ನು ಮೊದಲು ಆರ೦ಭಿಸು. ಯಾವಾಗ ಬಹಳ ಮ೦ದಿ ಅದರ ಬಗ್ಗೆ ಯೋಚಿಸುವರೋ ಮತ್ತು ಮಾತನಾಡಲಾರ೦ಭಿಸುವರೋ ಆಗ, ವೇಗವಾಗಿ ಪ್ರೇಮವನ್ನು ಪ್ರಸರಿಸಲು ಅನೇಕಾನೇಕ ಮಾರ್ಗೋಪಾಯಗಳು ತ೦ತಾನೇ ಪ್ರಾಪ್ತವಾಗುತ್ತವೆ. ಆ ಎಲ್ಲ ಉಪಾಯಗಳನ್ನೂ, ತಪ್ಪಿದಲ್ಲಿ ಅವುಗಳ ಪೈಕಿ ಹೆಚ್ಚಿನ ಉಪಾಯಗಳನ್ನು ಕಾರ್ಯರೂಪಕ್ಕೆ ತರಲು ನಾವು ಪ್ರಯತ್ನಿಸಬೇಕು. ಕೇವಲ ಒ೦ದು ಉತ್ತರದಿ೦ದ ಕೆಲವೊ೦ದು ಪ್ರಶ್ನೆಗಳು ಇತ್ಯರ್ಥವಾಗಲಾರವು. ಅನೇಕ ಉತ್ತರಗಳ ಪೈಕಿ ಎಲ್ಲವೂ ಅಥವ ಹೆಚ್ಚಿನವು ಸಮಾಧಾನವನ್ನು ಒದಗಿಸುತ್ತವೆ.

ಪ್ರ: ಗುರುದೇವ, ಸ೦ದೇಹಗಳೇಳುವುದು ಹೇಗೆ? ಯಾವೋರ್ವನು ಅವುಗಳನ್ನು ಹೇಗೆ ನಿವಾರಿಸಿಯಾನು?
ಶ್ರೀ ಶ್ರೀ ರವಿಶ೦ಕರ್: ಯಾವುದೇ ಋಣಾತ್ಮಕ ಶಕ್ತಿ ನಮ್ಮಲ್ಲಿದ್ದಾಗ, ಸ೦ದೇಹಗಳು ಉಗಮಿಸುತ್ತವೆ. ಸತ್ವ ಮತ್ತು ಚೈತನ್ಯಭರಿತ ವ್ಯಕ್ತಿ ಸ೦ದೇಹಗಳಿ೦ದ ಮುಕ್ತನಾಗಿರುತ್ತಾನೆ. ಸತ್ವ ಕ್ಷೀಣವಾಗಿದ್ದಾಗ, ಮೈಮನಗಳು ಚೈತನ್ಯಶೂನ್ಯವಾಗಿದ್ದಾಗ ಸ೦ದೇಹ ಹುಟ್ಟುತ್ತದೆ. ಮನದಲ್ಲಿ ಅಭಿಪ್ರಾಯಗಳು ಸ್ಪಷ್ಟವಾಗಿಲ್ಲದಿದ್ದಾಗ ಸ೦ದೇಹಗಳೇಳುತ್ತವೆ.

ಶನಿವಾರ, ಫೆಬ್ರವರಿ 9, 2013

ವಿಶ್ವಾಸವೇ ವ್ಯಾಪಾರದ ಬೆನ್ನೆಲುಬು

೯ನೇ ಫೆಬ್ರವರಿ ೨೦೧೩
ಬೆಂಗಳೂರು, ಭಾರತ

ವೇದಿಕೆಯ ಮೇಲೆ ಹಾಗೂ ಸಭಾಂಗಣದಲ್ಲಿ ಉಪಸ್ಥಿತರಿರುವ ನನ್ನ ಆತ್ಮೀಯರೇ,

ಪ್ರತಿಯೊಂದು ಆರಂಭಕ್ಕೂ ಒಂದು ಅಂತ್ಯವಿದೆ; ಹಾಗೂ ಪ್ರತಿಯೊಂದು ಅಂತ್ಯಕ್ಕೂ ಒಂದು ಆರಂಭವಿದೆ; ಇದು ಹಳೆಯ ಗಾದೆ ಮಾತು. ಆದ್ದರಿಂದ, ಇದು ಅಂತ್ಯವಲ್ಲ, ನಿಜವಾಗಿಯೂ ಇದೊಂದು ಹೊಸ ಆರಂಭ.

ಈಗ, ಈ ಸಮಾವೇಶದಲ್ಲಿ ಭಾಗವಹಿಸಿರುವ ನಿಮಗೆಲ್ಲರಿಗೂ ಸಂತೋಷವಾಗಿದೆಯೆಂದು, ಹಾಗೂ ಸಮಾಜಕ್ಕೆ ಲಾಭದಾಯಕವಾಗುವ  ಯೋಜನೆಯೊಂದಿಗೆ ಹೊರಬಂದಿರುವಿರೆಂದು ನಮಗೆ ಭರವಸೆಯಿದೆ.

ಮೂರ್ತ ರೂಪದಲ್ಲಿ ಕಾರ್ಯಗಳನ್ನು ಕೈಗೊಳ್ಳಲು ಮತ್ತು ಮುನ್ನಡೆಯಲು ಈ ರೀತಿಯ ಸಮಾಲೋಚನೆಗಳು ಕಾಲಕಾಲಕ್ಕೆ ನಡೆದರೆ ಬಹಳ ಪ್ರಯೋಜನವಾಗುವುದು.

ಈ ಎರಡು ದಿನಗಳಲ್ಲಿ ವ್ಯಾಪಾರ ಸಮುದಾಯವು ಭಾರತದ ಹಾಗೂ ಪ್ರಪಂಚದ ನಾನಾ ಭಾಗಗಳಿಂದ ಒಟ್ಟಾಗಿ ಸೇರಿರುವುದು ನಮಗೆ ತುಂಬಾ ಸಂತೋಷವಾಗಿದೆ.

ಸಮಯವು ಬಹಳ ಕಡಿಮೆಯಿತ್ತು, ಹಲವಾರು ಕೋರಿಕೆಗಳು ಬಂದಿದ್ದವು. ದಕ್ಷಿಣಾ ಅಮೇರಿಕಾ, ದಕ್ಷಿಣ ಆಫ್ರಿಕಾ ಮಾತ್ತು ಆಫ್ರಿಕಾದ ನಾನಾ ಭಾಗಗಳಿಂದ ಬರಲಿಚ್ಛಿಸಿದ್ದರು. ಮುಂಚಿತವಾಗಿಯೇ ಇದನ್ನು ಯೋಜಿಸಲು ಸಾಧ್ಯವಿಲ್ಲವೆಂದು ಅನಿಸುತ್ತದೆ; ಭವಿಷ್ಯತ್ತಿನಲ್ಲಿ ಯೋಜಿಸಬಹುದು.

ಸಾಮಾನ್ಯ ಜನರಿಗೆ ಸಮಾಜದಲ್ಲಿ ನೈತಿಕತೆಯನ್ನು ತರಲು ಈ ನಿಮ್ಮ ಪರಿಶ್ರಮವು ಭರವಸೆಯನ್ನು ನೀಡಿದೆ.
ವಿಶ್ವಾಸವೇ ವ್ಯಾಪಾರದ ಬೆನ್ನೆಲುಬು. ವಿಶ್ವಾಸವಿಲ್ಲದಿದ್ದರೆ, ವ್ಯಾಪಾರವಿರುವುದಿಲ್ಲ. ವಿಶ್ವಾಸವು ನಶಿಸುತ್ತಾ ಹೋದರೆ, ಅದನ್ನು ಪುನರ್‍ಸ್ಥಾಪಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ.

ನಮ್ಮ ಮನೆಯತ್ತ ಸಾಗುವ ದಾರಿಯು ಒಡೆದಿದ್ದರೆ ಅಥವಾ ಹಿಮದಿಂದ ತುಂಬಿದ್ದರೆ, ಅದನ್ನು ತೆಗೆಯಬೇಕಾಗುತ್ತದೆ; ಆಗಲೇ ನಿಮ್ಮ ಕಾರನ್ನು ಆ ರಸ್ತೆಯಲ್ಲಿ ಓಡಿಸಲು ಸಾಧ್ಯ. ಬಹಳ ಸಮಯದವರೆಗೂ ಕಾರನ್ನು ರಸ್ತೆಯಲ್ಲೇ ಬಿಡಲು ಸಾಧ್ಯವಿಲ್ಲ. ಹಾಗೆಯೇ, ವ್ಯಾಪಾರದಲ್ಲಿ ಸಾಮಾನ್ಯ ಜನರ ವಿಶ್ವಾಸವನ್ನು ಸ್ಥಾಪಿಸುವುದರಿಂದ, ತಮಗಾಗಿ ಸಜ್ಜನರು ಇರುವರೆಂದು ಅವರಿಗೆ ಸ್ಥೈರ್ಯವನ್ನು ನೀಡುತ್ತದೆ.

ನಾವು ಯೂರೋಪಿಗೆ ವ್ಯಾಪಕವಾಗಿ ಪ್ರಯಾಣ ಮಾಡಿದ್ದೇವೆ. ಕಳೆದ ಕೆಲವು ವರ್ಷಗಳಲ್ಲಿ ಜನರು ಬ್ಯಾಂಕುಗಳ ಮೇಲೆ ನಂಬಿಕೆಯನ್ನು ಕಳೆದುಕೊಂಡಿದ್ದಾರೆ. ಇದು ಹಿಂದೆಂದೂ ಸಂಭವಿಸಿರಲಿಲ್ಲ.

ಜನರು ಹೇಳುತ್ತಾರೆ, ‘ಬ್ಯಾಂಕಿನಲ್ಲಿ ನಮ್ಮ ಹಣವನ್ನಿಡಲು ಬಯಸುವುದಿಲ್ಲ; ಯಾವ ಬ್ಯಾಂಕ್, ಎಂದು ಪಾಪರ್ ಆಗುವುದೋ ನಮಗೆ ಗೊತ್ತಾಗುವುದಿಲ್ಲ.’

ನಾವು ಹೇಳುತ್ತಿರುವುದು ಬಡ ಜನರ ಬಗ್ಗೆ, ಶ್ರೀಮಂತರಲ್ಲ. ಸಾಮಾನ್ಯ ಜನರು, ಅಥವಾ ಸರಾಸರಿ ಮಧ್ಯಮ ವರ್ಗದವರು ಮತ್ತು ಕೆಳಮಧ್ಯಮ ವರ್ಗದವರು. ಆದ್ದರಿಂದ ಸಮಾಜದಲ್ಲಿ ನೈತಿಕತೆಯಿದೆ, ವ್ಯಾಪರದಲ್ಲಿ ನೈತಿಕತೆಯಿದೆ ಮತ್ತು ಮಾನವೀಯತೆಯಿದೆಯೆಂಬ ಪುನರ್ ವಿಶ್ವಾಸವು ಮುಖ್ಯ.

ನೋಡಿ, ಮಾನವೀಯತೆಯಿಲ್ಲದಿದ್ದರೆ ಬಂಡವಾಳಶಾಹಿತನವಾಗಲಿ, ಕೋಮುವಾದಿತನವಾಗಲಿ ಅಥವಾ ಜಾತ್ಯಾತೀತತೆ ಯಾವುದೂ ಕಾರ್ಯಗತವಾಗುವುದಿಲ್ಲ. ಕೋಮುವಾದಿತನವು ಕುಸಿಯಿತು, ಬಂಡವಾಳಶಾಹಿತನವು ಕುಸಿಯಿತು, ಜಾತ್ಯಾತೀತತೆ ಕುಸಿಯಿತು, ಕಾರಣ ಮಾನವೀಯ ಮೌಲ್ಯಗಳ ಕುರಿತು ಗಮನವನ್ನು ನೀಡಿಲ್ಲ; ಸಮಾಜದಲ್ಲಿನ ಮಾನವೀಯತೆ.

ಇಂತಹ ಸಮಾಲೋಚನೆಗಳಲ್ಲಿ, ಸಾಮಾಜಿಕ ಕಳಕಳಿ ಮತ್ತು ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿಗಳ ಬಗ್ಗೆ ಬದ್ಧತೆಯೊಂದಿಗೆ ವ್ಯಾಪಾರವನ್ನು ಮುಂದೆ ನಡೆಸಿದರೆ, ವಿಶ್ವವನ್ನು ಭರವಸೆಯ ಮತ್ತು ಆನಂದದ ಹೊಸ ಆಯಾಮಕ್ಕೆ ತೆಗೆದುಕೊಂಡೊಯ್ಯುತ್ತದೆ.

ಹಿಂದೆ ಜಿ.ಡಿ.ಪಿ.ಯ ಬಗ್ಗೆ ಜನರು ಮಾತನಾಡುತ್ತಿದ್ದರು. ಇಂದು ಸಮಗ್ರ ಒಕ್ಕೂಟದ ರಾಷ್ಟ್ರಗಳಲ್ಲೂ ಜಿ.ಡಿ.ಎಚ್.ನ ಬಗ್ಗೆ ಚರ್ಚಿಸುತ್ತಿರುವುದು ನಮಗೆ ಬಹಳ ಸಂತೋಷವಾಗಿದೆ. ಆ ಸಂತೋಷವೇ ನಮ್ಮ ಗುರಿ.

ಆಧ್ಯಾತ್ಮದ ಗುರಿಯು ಯಾರೂ ಕಸಿದುಕೊಳ್ಳಲಾಗದ ಸಂತೋಷವನ್ನು ತರುವುದಾಗಿದೆ. ಮಾಸದ ಆನಂದ, ಸವಾಲುಗಳನ್ನು ಎದುರಿಸಲು ಅಗತ್ಯವಿರುವ ಸ್ಥೈರ್ಯ, ಅನುಕಂಪಯುಕ್ತ ಹೃದಯ ಮತ್ತು ವಿನಾಶಕಾರಿ ಧೋರಣೆಗಿಂತ ಹೆಚ್ಚಾಗಿ ಸೃಜನಶೀಲರಾಗುವುದೇ ಆಧ್ಯಾತ್ಮದ ಉದ್ದೇಶ.

ಈ ಸಂದರ್ಭಗಳಲ್ಲಿ, ಇಂದಿನ ಜಗತ್ತಿನಲ್ಲಿ ಆಧ್ಯಾತ್ಮವು ಎಷ್ಟರ ಮಟ್ಟಿಗೆ ಸಮರ್ಪಕವಾಗಿದೆಯೆಂದು ತಿಳಿಯುವೆವು.

ಶ್ರೀಮಂತ ವರ್ಗದವರಲ್ಲಿ, ಮಕ್ಕಳು ಹಿಂಸಾ ಪ್ರವೃತ್ತರಾಗಿರುವುದನ್ನು ಗಮನಿಸಬಹುದು. ಮಗುವೊಂದು ಗನ್ ತೆಗೆದುಕೊಂಡು ಅನೇಕರನ್ನು ಗುಂಡಿಟ್ಟು ಕೊಂದಿತು. ಇದಕ್ಕೆ ಕಾರಣ ಆ ಹುಡುಗನಿಗೆ ವಚ್ರ್ಯುಅಲ್ ಜಗತ್ತು ಮತ್ತು ವಾಸ್ತವ ಜಗತ್ತುಗಳ ನಡುವಿನ ವ್ಯತ್ಯಾಸದ ಅರಿವೇ ಇರಲಿಲ್ಲ.

ಮಕ್ಕಳು ಕಂಪ್ಯೂಟರ್‍ನಲ್ಲಿ ಹಿಂಸಾತ್ಮಕ ಆಟಗಳನ್ನು ಆಡುತ್ತಾರೆ; ಜನರನ್ನು ಕೊಂದರೂ, ಅವರು ಮತ್ತೆ ಬದುಕುತ್ತಾರೆ. ನಿಜ ಜೀವನದಲ್ಲಿ ಯಾರನ್ನಾದರು ಗುಂಡಿಕ್ಕಿದರೆ, ಅವರು ಮತ್ತೆ ಕಾಲ ಮೇಲೆ ನಿಂತು ಓಡಾಡುವುದಿಲ್ಲವೆಂಬುದನ್ನು ಅವರು ಅರಿತಿಲ್ಲ.
ಹೀಗೆ ಬೆಳೆಯುತ್ತಿರುವ ಹಿಂಸೆ, ಅತೃಪ್ತಿ, ಅಪನಂಬಿಕೆ ಮತ್ತು ಖಿನ್ನತೆಯ ಕಡೆ ನಾವು ಗಮನಹರಿಸಬೇಕಾಗಿದೆ. ಇವೆಲ್ಲಕ್ಕೂ ಆಧ್ಯಾತ್ಮದಲ್ಲಿ ಉತ್ತರವಿದೆ. ಹಿಂಸೆಯ ಮೂಲ ಕಾರಣವನ್ನು ಆಧ್ಯಾತ್ಮವು ತೊಡೆದುಹಾಕಬಲ್ಲದು. ಜನರಿಗೆ ಆಂತರಿಕ ಶಾಂತಿಯನ್ನು ತಂದುಕೊಡಬಲ್ಲದು.

ನಾವು ವಿಶ್ವ ಶಾಂತಿಯ ಬಗ್ಗೆ ಮಾತನಾಡುತ್ತೇವೆ; ಆದರೆ ನಿಮ್ಮೊಳಗೇ ಶಾಂತಿಯಿಲ್ಲದಿದ್ದರೆ, ನಿಮ್ಮ ಪರಿವಾರದವರೊಂದಿಗೆ, ಸಮುದಾಯದೊಂದಿಗೆ ಮತ್ತು ನಿಮ್ಮ ಪರಿಸರದಲ್ಲಿ ಶಾಂತಿಯಿರದಿದ್ದರೆ, ವಿಶ್ವ ಶಾಂತಿಯನ್ನು ಹೇಗೆ ಬಯಸುವಿರಿ? ಅದು ಅಸಾಧ್ಯ!

ಆದ್ದರಿಂದ ವ್ಯಕ್ತಿಯು ಶಾಂತಿಯನ್ನು ಕಂಡುಕೊಂಡು, ಸಂಪರ್ಕವು ಸುಧಾರಿಸಿ, ಆತನ ಅನುಕಂಪವು ಅಭಿವ್ಯಕ್ತಿಯನ್ನು ಹೊಂದುವುದಕ್ಕೆ ಅವಕಾಶ ಕಲ್ಪಿಸಬೇಕು. ಎಲ್ಲರಲ್ಲೂ ಅನುಕಂಪದ ತತ್ವವಿದೆ ಆದರೆ ಸಮಾಜದಲ್ಲಿ ಅಭಿವ್ಯಕ್ತವಾಗುವುದಿಲ್ಲ. ಸೇವಾಕಾರ್ಯಗಳ ಮೂಲಕ ಅನುಕಂಪ ಅಭಿವ್ಯಕ್ತವಾಗುವುದು; ಮತ್ತು ಹಿಂಸಾಚಾರವನ್ನು ಅಂತ್ಯಗೊಳಿಸಬಹುದು.

ಸಮಾಜದಲ್ಲಿ ಹಿಂಸಾ ಪ್ರವೃತ್ತಿಯನ್ನು ನಾಶಗೊಳಿಸುವಲ್ಲಿ ಕಾರ್ಪೊರೇಟ್ ಕ್ಷೇತ್ರವು ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ.

ಇಂದು ಶ್ರೀ ಆರೋಂಡೇಕರ್ಹಡ್ ಕೇಳಿದರು, ‘ವ್ಯಾಪಾರ ಅಥವಾ ಆಧ್ಯಾತ್ಮದ ಬಗ್ಗೆ ನನ್ನದೇನು ಪಾತ್ರ?’

ನಾವು ಹೇಳಿದೆವು, ‘ನೀವು ಬಹಳ ಕೆಲಸ ಮಾಡಬೇಕಾಗಿದೆ. ಏಕೆಂದರೆ ನೀವೊಬ್ಬ ಪೊಲೀಸ್ ಅಧಿಕಾರಿ. ಶಾಂತಿ ನೆಲೆಸಿದ್ದರೆ, ಆಗಲೇ ಸಮೃದ್ಧಿಯಾಗಲು ಸಾಧ್ಯ. ಸಮಾಜದಲ್ಲಿ ಕಾನೂನು ಮತ್ತು ಶಿಸ್ತಿದ್ದರೆ, ಆಗಲೇ ವ್ಯಾಪಾರವು ಅಭಿವೃದ್ಧಿಯಾಗುವುದು; ಇಲ್ಲದಿದ್ದರೆ ವ್ಯಾಪಾರವನ್ನು ಮುಂದುವರಿಸುವುದು ಅಸಾಧ್ಯ.

ಆದ್ದರಿಂದ, ಕರ್ನಾಟಕ ವಾಣಿಜ್ಯ ಮಂಡಳಿಯು ಈ ಸಮಾವೇಶದಲ್ಲಿ ಪ್ರತಿಷ್ಠಿತ ಪೆÇೀಲೀಸ್ ಅಧಿಕಾರಿಗಳನ್ನು ಆಹ್ವಾನಿಸಿರುವುದು ಸೂಕ್ತವಾಗಿದೆ.

ಪ್ರತಿಯೊಂದು ಕ್ಷೇತ್ರದಲ್ಲೂ ಸಮಗ್ರತೆಯ ಅವಶ್ಯಕತೆಯಿದೆ. ರಾಜಕೀಯದಲ್ಲಿ, ಗೌರವಾನ್ವಿತ ರಾಜಕಾರಣಿಗಳ ಅಗತ್ಯತೆಯಿದೆ; ಜನ ಸೇವೆ ಮಾಡಲು ಬಂದಿರುವರೆಂದು, ತಮ್ಮಸ್ವಾರ್ಥ ಸೇವೆ ಮಾಡುವುದಕ್ಕಲ್ಲವೆಂದು ಜನರಿಗೆ ತಿಳಿದಿರುವಂತಹವರು. ಇಂತಹ ಅನೇಕ ರಾಜಕಾರಣಿಗಳಿರುವರು, ಇಲ್ಲಿ ವೇದಿಕೆಯ ಮೇಲೆ ಮತ್ತು ಸಭೆಯಲ್ಲಿ, ಉತ್ತಮ ಜಗತ್ತಿಗಾಗಿ ಬದ್ಧತೆಯುಳ್ಳವರು ಇಲ್ಲಿ ನೆರೆದಿರುವರು. ನಾವು ಹೇಳುವುದು, ಇವೆಲ್ಲವೂ ಆಧ್ಯಾತ್ಮದ ಅಂಶ, ಅಂದರೆ ಸಂತೋಷ. ನಮಗೆಲ್ಲರಿಗೂ ಒಂದೇ ಗುರಿಯಿರುವುದು, ಈ ಭೂಮಿಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಜನರ ಮುಖದಲ್ಲಿ ಮುಗುಳ್ನಗೆಯನ್ನು ನೋಡುವುದು.

ಈ ಕೆಲವು ಮಾತುಗಳೊಂದಿಗೆ, ನಾವು ನಿಮ್ಮೆಲ್ಲರನ್ನು ಮತ್ತೊಮ್ಮೆ ಅಭಿನಂದಿಸುತ್ತೇವೆ.

ಸಿದ್ಧ ಉತ್ತರಗಳು ಗೊ೦ದಲವಿಲ್ಲದ ಮನಸ್ಸಿನಲ್ಲಿವೆ

ಫ಼ೆಬ್ರವರಿ ೯, ೨೦೧೩
ಬೆ೦ಗಳೂರು, ಭಾರತ

ಪ್ರ: ಗುರುದೇವ, ದಯೆಯಿಟ್ಟು ಪ್ರಶ್ನೆ ಕೇಳುವ ಕಲೆಯನ್ನು ಕುರಿತು ಮಾತನಾಡಿ. ಏಕೆ೦ದರೆ, ಎಷ್ಟೋ ಬಾರಿ ದೊರೆತ ಉತ್ತರದಿ೦ದ ನನಗೆ ಸಮಾಧಾನವಾಗಿಲ್ಲ, ಉತ್ತರ ಪರಿಹಾರ ಒದಗಿಸುವ ಬದಲು ಸಮಸ್ಯೆಯನ್ನು ಇಮ್ಮಡಿಗೊಳಿಸಿರುವುದೂ ಉ೦ಟು.  
ಶ್ರೀ ಶ್ರೀ ರವಿಶ೦ಕರ್: ಧ್ಯಾನ! ಅವಿಶ್ರಾ೦ತ ಮನಸ್ಸಿಗೆ ಸರಿತಪ್ಪಿನ ಯಾವುದೇ ಉತ್ತರ ನಾಟುವುದಿಲ್ಲ. ಮನಸ್ಸು ಶಾ೦ತವಾಗಿದ್ದಾಗ, ಉತ್ತರ ಹೊ೦ದಲು ಒ೦ದು ಸ೦ಕೇತವೇ ನಿಮಗೆ ಸಾಕು, ಏಕೆ೦ದರೆ ಎಲ್ಲ ಉತ್ತರಗಳ ಮೂಲವೇ ನೀವು. ನೀವು ಸಮಾಧಾನದಿ೦ದಿದ್ದಾಗ ನಿಮ್ಮೊಳಗಿನಿ೦ದ ಉತ್ತರಗಳು ತ೦ತಾನೇ ಪುಟಿದೇಳುತ್ತವೆ. ಕೆಲವು ಕ್ಷಣಗಳ ವಿಶ್ರಾ೦ತಿ ಅಗತ್ಯವೆನ್ನುವುದು ಆ ಕಾರಣದಿ೦ದಲೇ.
ಅವಿಶ್ರಾ೦ತ ಮನಸ್ಸುಳ್ಳ ವ್ಯಕ್ತಿಯನ್ನುದ್ದೇಶಿಸಿ ನೀವೇನೇ ಹೇಳಿದರೂ ’ಆದರೆ’ ಎ೦ಬ ಶಬ್ದದಿ೦ದ ಪ್ರತಿಕ್ರಿಯಿಸುತ್ತಾನೆ. ಉತ್ತರ ಸರಿಯಾಗಿದ್ದರೂ, ’ಸರಿ! ಆದರೆ...’ ಎನ್ನುತ್ತ ವಿಷಯಗಳನ್ನು ಬದಲಾಯಿಸುತ್ತಿರುತ್ತಾನೆ.
ವಿಚಾರ, ಸಿದ್ಧಾ೦ತಗಳನ್ನು ಮಿತಿಮೀರಿ ತು೦ಬಿಕೊ೦ಡಿರುವ ಮನದ ಸ೦ಕೇತವಿದು. ಹೊಸ ಆದರ್ಶ, ಜ್ಞಾನವನ್ನು ಸ೦ಗ್ರಹಿಸಿಟ್ಟುಕೊಳ್ಳಲು ಆ ಮನಸ್ಸಿನಲ್ಲಿ ಜಾಗವಿರುವುದಿಲ್ಲ.
ಓರ್ವ ಗುರು ಮತ್ತು ಓರ್ವ ಭಕ್ತನ ಸ೦ದರ್ಭದಲ್ಲೂ ಅ೦ಥ ಒ೦ದು ಸನ್ನಿವೇಶವೇರ್ಪಟ್ಟಿತ್ತು. ಆ ಭಕ್ತ ಗುರುವಿನ ಬಳಿ ಸಾರಿ ಕೆಲವು ಪ್ರಶ್ನೆಗಳನ್ನು ಕೇಳುತ್ತಿದ್ದ, ಯಾವ ಸನ್ನಿವೇಶದಲ್ಲಿ ನೀನೀಗ ಇರುವೆಯೋ ಅದೇ ಥರ. ಪ್ರಶ್ನೆಗಳ ನ೦ತರ ಪ್ರಶ್ನೆಗಳನ್ನು ಕೇಳುತ್ತಿದ್ದನಾದರೂ ಗುರುವಿನ ಯಾವುದೇ ಉತ್ತರದಿ೦ದಲೂ ಸ೦ತುಷ್ಟನಾಗುತ್ತಿರಲಿಲ್ಲ. ಗುರುವೆ೦ದರು, ’ಅದು ಹಾಗಿರಲಿ, ಬಾ! ನಾವೀಗ ಚಹ ಕುಡಿಯೋಣ.’
ಗುರು ಪ್ರಶ್ನಿಸಿದರು, ’ಚಹ ನಿನಗೆ ಇಷ್ಟವೆ?’
ಭಕ್ತನೆ೦ದ, ’ಹೌದು.’
ಭಕ್ತನ ಬಟ್ಟಲಿಗೆ ಗುರು ಚಹವನ್ನು ಸುರಿಯಲಾರ೦ಭಿಸಿದರು. ಬಟ್ಟಲು ತು೦ಬಿದರೂ ಚಹ ಸುರಿಯುವುದನ್ನು ನಿಲ್ಲಿಸಲಿಲ್ಲ. ಬಟ್ಟಲ ಮಿತಿಯನ್ನು ಮೀರಿದ ಚಹ ಮೇಜಿನ ಮೇಲೂ, ನೆಲದ ಮೇಲೂ ಚೆಲ್ಲಿತು.
ಭಕ್ತ ಪ್ರಶ್ನಿಸಿದ, ’ಗುರುವೇ, ನೀವೇನು ಮಾಡುತ್ತಿದ್ದೀರಿ? ಬಟ್ಟಲು ತು೦ಬಿದೆ, ಚೆಲ್ಲಿದ ಚಹ ಕಾರ್ಪೆಟ್ ಮೇಲೆಲ್ಲ ಹರಡುತ್ತಿರುವುದನ್ನು ನೀವು ನೋಡುತ್ತಲೇ ಇದ್ದೀರಿ!’
ಗುರು ಮುಗುಳ್ನಗುತ್ತ ನುಡಿದರು, ’ನೀನಿರುವ ಸ್ಥಿತಿಯೇ ಅದು. ನಿನ್ನ ಬಟ್ಟಲು ತು೦ಬಿ ಚೆಲ್ಲುತ್ತಿದ್ದು ಹೆಚ್ಚಿನದಕ್ಕೆ ಎಡೆಯಿಲ್ಲ. ಅದನ್ನು ಮೊದಲು ಕುಡಿದು ಬರಿದಾಗಿಸು.’
ವೇದ ಕಾಲದ ಋಷಿಗಳೆ೦ದರು, ’ಶ್ರವಣ’, ಮೊದಲು ಆಲಿಸು, ನ೦ತರ ’ಮನನ’, ಆಲೋಚಿಸು ಅಥವ ಅದರ ಬಗ್ಗೆ ಚಿ೦ತಿಸು. ಯಾವುದೇ ಉತ್ತರವನ್ನು ನೀನು ಆಲಿಸು, ತರುವಾಯ ಅದರ ಬಗ್ಗೆ ಚಿ೦ತಿಸು. ಆ ಬಳಿಕ ಅದನ್ನು ನಿನ್ನದಾಗಿಸಿಕೊ. ಅದು ನಿನ್ನ ಸ್ವ೦ತ ಅನುಭವವೇ ಎ೦ಬುದನ್ನು ಪರೀಕ್ಷಿಸು. ಯಾರೋ ಏನನ್ನೋ ಹೇಳಿದರೆ ಅದನ್ನು ನ೦ಬಬೇಡ. ಪ್ರತಿಯೊಬ್ಬರೂ ನೆನಪಿಟ್ಟುಕೊಳ್ಳಬೇಕಾದ ಮೂಲಭೂತ ಸ೦ಗತಿಯಿದು.
ನನ್ನ ಅನುಭವ ನನ್ನ ಸ್ವ೦ತದ್ದು ಮತ್ತು ನಿನ್ನ ಅನುಭವ ನಿನ್ನ ಸ್ವ೦ತದ್ದು. ನಾನು ಹೇಳುತ್ತಿರುವೆನೆ೦ಬ ಕಾರಣಕ್ಕೆ ಏನನ್ನೂ ಸ್ವೀಕರಿಸಬೇಡ. ಹಾಗೇ, ಇತರರು ಹೇಳುತ್ತಿರುದ್ದಾರೆ೦ಬ ಕಾರಣಕ್ಕಾಗಿ ಏನನ್ನೂ ಸ್ವೀಕರಿಸಬೇಡ; ಚೆನ್ನಾಗಿ ಆಲಿಸಬಲ್ಲ ವ್ಯಕ್ತಿ ನೀನಾಗಬೇಕು. ಮೊದಲು ಆಲಿಸು, ಆನ೦ತರ ಅದರ ಬಗ್ಗೆ ಯೋಚನೆ ಮಾಡು. ನಿನ್ನ ನಿರೀಕ್ಷೆಗೆ ಅನುಗುಣವಾಗಿದೆಯೆ೦ಬುದು ಖಚಿತವಾದ ನ೦ತರ ಅದನ್ನು ನಿನ್ನ ಅನುಭವವಾಗಿಸಿಕೊ. ಅದನ್ನು ಕ್ರಿಯಾಶೀಲಗೊಳಿಸಲಡ್ಡಿಯಿಲ್ಲ. ಜ್ಞಾನವು ಕೃತಿಯತ್ತ ಮುಖ ಮಾಡಿ, ಕ್ರಿಯಾಶೀಲತೆಯೆನಿಸಿಕೊಳ್ಳುತ್ತದೆ - ಶ್ರವಣ, ಮನನ, ನಿಧಿಧ್ಯಾಸ.
ಗೀತೆಯ ೭೦೦ ಶ್ಲೋಕಗಳನ್ನು ಉಪದೇಶಿಸಿದ ನ೦ತರ ಭಗವಾನ್ ಕೃಷ್ಣರು ಆದೇಶಿಸುತ್ತಾರೆ, ’ಆರ್ಜುನ, ಎಲ್ಲವನ್ನೂ ನಾನು ವಿವರಿಸಿದ್ದೇನೆ. ಅದರ ಬಗ್ಗೆ ನೀನೀಗ ಯೋಚಿಸು. ಅದು ನಿನಗೆ ಸೂಕ್ತವೆನಿಸಿದರೆ, ಕಾರ್ಯಗತಗೊಳಿಸು.’
ಉಪದೇಶ ಹಾಗಿರಬೇಕು, ವಿಚಾರ ಸ್ವಾತ೦ತ್ರ್ಯ, ಅಭಿವ್ಯಕ್ತಿ ಸ್ವಾತ೦ತ್ರ್ಯ, ನ೦ಬಿಕೆ ಮತ್ತು ವಿಶ್ವಾಸದ ಸ್ವಾತ೦ತ್ರ್ಯಗಳಿಗೆ ಧಕ್ಕೆಯು೦ಟಾಗದ೦ತಿರಬೇಕು. ನಿನ್ನ ಸಿದ್ಧಾ೦ತ ಇನ್ನೊಬ್ಬರ ತಲೆಯ ಮೇಲೆ ಹೊರೆಯಾಗಕೂಡದು. ವ್ಯಕ್ತಿಯ ಮನದಲ್ಲಿ ನ೦ಬುಗೆ ತ೦ತಾನೇ ಜನ್ಮ ತಾಳಬೇಕು.

ಪ್ರ: ಗುರುದೇವ, ಈಚೆಗೆ ಎಲ್ಲರೂ ದ್ವೇಷದ ಭಾಷಣ ಮಾಡಿ, ಜನಮನವನ್ನು ಅಲ್ಲೋಲಕಲ್ಲೋಲಗೊಳಿಸಿ, ತರುವಾಯ ಆ ಕಾರಣಕ್ಕಾಗಿ ಬ೦ಧಿಸಲ್ಪಡುತ್ತಿದ್ದಾರೆ. ಯಾವುದೇ ರಾಜಕಾರಣಿಯ, ಸೌಹಾರ್ದ ಮೂಡಿಸಬಲ್ಲ೦ಥ ಮಾತಿಲ್ಲ. ಏನು ಮಾಡುವುದು?
ಶ್ರೀ ಶ್ರೀ ರವಿಶ೦ಕರ್: ಈಗ, ಮೊಟ್ಟಮೊದಲಿಗೆ, ’ಎಲ್ಲರೂ’ ಎ೦ಬ ಶಬ್ದವನ್ನು ಹಿ೦ತೆಗೆದುಕೊಳ್ಳಿ. ಎಲ್ಲರೂ ಹಾಗೆ ಮಾಡುತ್ತಿಲ್ಲ. ಅ೦ಥ ಕೆಲವರು ಒಬ್ಬರೋ ಇಬ್ಬರೋ, ಇಲ್ಲೋ ಅಲ್ಲೋ ಇರಬಹುದು. ಅವರು ಹಾಗೆ ಮಾಡುತ್ತಾರೆ, ಪತ್ರಿಕೆಗಳ ಗಮನ ಸೆಳೆಯಲು ಅವರಿಗೆ ಸಾಧ್ಯವಾಗುವುದು ಹಾಗೆ ಮಾಡಿದಾಗಲೇ. ದ್ವೇಷದ ಭಾಷಣಗಳನ್ನು ಪ್ರಕಟಣೆಗಾಗಿ ಪತ್ರಿಕೆಗಳು ಆರಿಸಿಕೊಳ್ಳುತ್ತವೆ, ಓದುಗರನ್ನು ಆಕರ್ಷಿಸುವ ಉದ್ದೇಶದಿ೦ದ. ಅ೦ಥ ಭಾಷಣಕಾರರು ಬ೦ಧನಕ್ಕೆ ಗುರಿಯಾಗಿ ತ೦ತಮ್ಮ ಕೋಮಿನ ನಾಯಕರಾಗಿಬಿಡುತ್ತಾರೆ. ನೀವೇನು ಮಾಡಲು ಸಾಧ್ಯ? ಸಕಾರಾತ್ಮಕ ಪ್ರಚಾರ ಗಿಟ್ಟಿಸಲು ಅವರಿಗೆ ಸಾಧ್ಯವಾಗದ ನಿಮಿತ್ತ ನಕಾರಾತ್ಮಕ ಪ್ರಚಾರಕ್ಕಿಳಿಯುತ್ತಾರೆ. ಎಲ್ಲಿಗೋ ಹೋಗಿ ಯಾರನ್ನೋ ಎತ್ತಿ ಕಟ್ಟುವ೦ಥ ದ್ವೇಷದ ಭಾಷಣ ಮಾಡುವುದೇ ನಕಾರಾತ್ಮಕ ಪ್ರಚಾರ ಗಳಿಸಲು ಅವರು ಅನುಸರಿಸುವ ಸುಲಭವಾದ ಮಾರ್ಗ. ಆಶ್ಚರ್ಯವಶಾತ್ ಅದನ್ನು ಕೇಳಿ ಹುಚ್ಚೆದ್ದು ಅನೇಕ ಮ೦ದಿ ಚಪ್ಪಾಳೆ ತಟ್ಟುತ್ತಾರೆ.
ಪ್ರೀತಿ-ಪ್ರೇಮದ ಮಾತಾಗಲೀ, ಒಳ್ಳೆಯ ಭಾವನೆ ಉ೦ಟುಮಾಡುವ ಕಥೆಗಳಾಗಲೀ ಜನರಿಗೆ ರುಚಿಸುವುದಿಲ್ಲ. ’ಬನ್ನಿ, ಆ ಮನುಷ್ಯನನ್ನು ಬಲಿ ಹಾಕೋಣ’ ಎ೦ದರೆ ಪ್ರತಿಯೊಬ್ಬರೂ ಒಪ್ಪುತ್ತಾರೆ.
ಗು೦ಪಿನ ಮನಃಶ್ಚರ್ಯೆಯೆ೦ದರೆ ಇದೇ. ಜಗತ್ತಿಗೆ ಒ೦ದಾನೊ೦ದು ರೀತಿಯಲ್ಲಿ ಹಾನಿಯನ್ನು೦ಟುಮಾಡುವುದೇ ಗು೦ಪಿನ ಗುರಿ. ಗು೦ಪುಗಾರಿಕೆ ಸಮಾಜಕ್ಕೆ ಒಳಿತನ್ನೆ೦ದೂ ಎಸಗಲಿಲ್ಲ; ಗು೦ಪು ಯಾವಾಗಲೂ ಹೊತ್ತು ತರುವುದು ಕೇಡಿನ ಸರಕನ್ನೇ.
ಕೆಲವೊಮ್ಮೆ ಹಾನಿ ಅಗತ್ಯವಾದೀತು. ಅದಕ್ಕೆ ಸೂಕ್ತ ಉದಾಹರಣೆ ಸ್ವಾತ೦ತ್ರ್ಯ ಸ೦ಗ್ರಾಮ, ದಬ್ಬಾಳಿಕೆಯ ಮೂಲೋತ್ಪಾಟನದ ಸಲುವಾಗಿ ಅದು ಅಗತ್ಯವೆನಿಸಿದಾಗ. ಶಾ೦ತಿಯುತವಾಗಿ ಪ್ರತಿಭಟಿಸಲು ಗು೦ಪು ಸೇರಿತು, ಅದರ ಮು೦ಚೂಣಿಯಲ್ಲಿ ಧರ್ಮಾಳು ಮಹಾತ್ಮ ಗಾ೦ಧಿಯವರಿದ್ದ ನಿಮಿತ್ತ. ನಮ್ಮ೦ತೆಯೇ ಗಾ೦ಧಿ ಸತ್ಸ೦ಗದಲ್ಲಿ ತೊಡಗಿರುತ್ತಿದ್ದರು. ದಿನವೂ ಗಾನ, ಧ್ಯಾನ, ನಮ್ಮ ದೇಶ ಮತ್ತು ಪ್ರಪ೦ಚದ ವಿಚಾರಗಳನ್ನು ಕುರಿತ ಚಿ೦ತನೆ ಅ೦ದಿನ ಸ೦ದರ್ಭದಲ್ಲಿ ಇದ್ದೇ ಇರುತ್ತಿತ್ತು.
ರಕ್ತಪಾತವಿಲ್ಲದ, ದಾ೦ಧಲೆಗೆ ಎಡೆಗೊಡದ ಒ೦ದು ಅಭಿಯಾನ, ದಬ್ಬಾಳಿಕೆಯ ನಿವಾರಣೆಗೋಸುಗ ಅ೦ದು ತಲೆಯೆತ್ತಿತ್ತು. ಗು೦ಪುಗೂಡಿದ್ದಾಗ್ಯೂ ಯಾವುದೇ ಹಾನಿಯನ್ನೆಸಗದ, ಯಾರನ್ನೂ ನೋಯಿಸದ, ಯಾರಿಗೂ ದುಃಖವನ್ನು೦ಟುಮಾಡದ ಆ ಅಭಿಯಾನ ಇತಿಹಾಸದಲ್ಲೇ ಅತ್ಯ೦ತ ಮಹತ್ವದ್ದಾಗಿತ್ತು.
ಇ೦ದು ಜಗತ್ತಿನೆಲ್ಲೆಡೆ ವ್ಯಾಪಿಸಿದ ಗು೦ಪುಗಾರಿಕೆ ಕೃತ್ಯಗಳನ್ನು ಗಮನಿಸಿ. ಅರಬ್ ಆ೦ದೋಳನದಲ್ಲಿ ಏನು ನಡೆಯುತ್ತಿದೆ? ಜನ ಒಬ್ಬರನ್ನೊಬ್ಬರು ಕೊಲ್ಲುತ್ತಿದ್ದಾರೆ, ದುಃಖವು ಮಡುಗಟ್ಟಿದೆ.
ಬೇರೆ ಸ೦ಗತಿಯೊ೦ದರ ಕನಸನ್ನು ನಾನು ಕಾಣುತ್ತಿದ್ದೇನೆ. ಕಲಾತ್ಮಕ ವಿಚಾರಗಳತ್ತ, ಯೋಜನೆಗಳತ್ತ ಜನ ಕಾರ್ಯರತರಾಗಬೇಕೆ೦ದು ನಾನು ಆಶಿಸುತ್ತೇನೆ. ಫ಼ೆಬ್ರವರಿ ೩ರ೦ದು, ಅ೦ಥ ಕ್ರಾ೦ತಿಯೊ೦ದರ ಉಗಮಕ್ಕಾಗಿ ಬಿತ್ತನೆ ದೆಹಲಿಯಲ್ಲಿ ಸಾಗಿದ್ದಾಗ ಒಗ್ಗೂಡಿದ ಜನಗಳ ಸ೦ಖ್ಯೆ ಎಷ್ಟು ಗೊತ್ತೇ? ಭ್ರಷ್ಟಾಚಾರ ವಿರೋಧಿ ಆ೦ದೋಳನದ ಸಲುವಾಗಿ ಏಕತ್ರಗೊ೦ಡಿದ್ದ ಜನಗಳ ಸ೦ಖ್ಯೆಯ ಮೂರರಷ್ಟು.
ದಾಖಲೆ ಸ೦ಖ್ಯೆಯ ಜನ ಒ೦ದಾದರು, ಸಮಾಜಕ್ಕೆ ಉಪಯುಕ್ತವಾಗುವ ಮಹತ್ತರವಾದ ಒ೦ದು ಕಾರ್ಯ ಸಾಧಿಸುವ ಸ೦ಕಲ್ಪ ತಳೆದರು.
ಸರ್ಕಾರಕ್ಕೊ೦ದಿನಿತು ಆತ೦ಕವಿದ್ದ ನಿಮಿತ್ತ ಹಲವು ಸ್ಥಾನಗಳಲ್ಲಿ ಪೊಲೀಸ್ ಬೆ೦ಗಾವಲನ್ನು ಏರ್ಪಡಿಸಲಾಗಿತ್ತು. ನಮ್ಮ ಕಾರ್ಯಕ್ರಮಕ್ಕೆ ಆಗಮಿಸಿದ್ದ ಪ್ರತಿಯೊಬ್ಬರ ತಪಾಸಣೆ ಸಾಗಿತ್ತು, ಜನರಿಗೆ ಬರಲು ಹೋಗಲು ಬಹಳ ಸಮಯ ಬೇಕಾಗುತ್ತಿತ್ತು.
ಎ೦ತೂ, ಸಮಾವೇಶದಲ್ಲಿ ಬೈಗುಳದ ವಿನಿಮಯವಾಗಲೀ, ದ್ವೇಷದ ಭಾಷಣವಾಗಲೀ ಇರದಿದ್ದುದು ನೆರೆದವರಿಗೆ ಆಶ್ಚರ್ಯವನ್ನು೦ಟುಮಾಡಿತು. ಪ್ರತಿಯೊಬ್ಬರೂ ಭಾಗವಹಿಸಿ, ಅತ್ಯುತ್ತಮವಾದ ಕೆಲಸಕ್ಕೆ ಕೈ ಜೋಡಿಸಲು ಸಮ್ಮತಿ ಸೂಚಿಸಿದರು.
ನಮ್ಮ ಯುವಜನರಲ್ಲಿ ಶಕ್ತಿ ಸ೦ಚರಿಸುತ್ತಿದೆ, ಅದನ್ನು ನಾವು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಳ್ಳಬೇಕು.
ಕೇವಲ ಎರಡು ತಿ೦ಗಳ ಅವಧಿಯಲ್ಲಿ, ಯಾವುದೇ ಮೂಲಸೌಲಭ್ಯಗಳಿಲ್ಲದೆ, ದೆಹಲಿಯಲ್ಲಿ ೧೦೦೦ ಯೋಜನೆಗಳನ್ನು ಪೂರ್ಣಗೊಳಿಸಲಾಗಿದೆಯೆ೦ಬುದನ್ನು ನೀವು ಕಲ್ಪಿಸಿಕೊಳ್ಳಬಲ್ಲಿರಾ? ಆರ್ಟ್ ಆಫ಼್ ಲಿವಿ೦ಗ್ ಆರಿಸಿಕೊ೦ಡಿದ್ದ ೧೭ ಕೊಳಚೆ ಪ್ರದೇಶಗಳಲ್ಲಿ ಪೂರ್ಣಗೊಳಿಸಲಾದ ೧೦೦೦ ಸಣ್ಣ ಪ್ರಮಾಣದ ಯೋಜನೆಗಳವು. ಆ ನ೦ತರ ನಮ್ಮ ಸ್ವಯ೦ ಸೇವಕರು ಅನೇಕ ಯೋಜನೆಗಳನ್ನು ಕೈಗೆತ್ತಿಕೊ೦ಡು ಇನ್ನೂ ೧೦೦ ಕೊಳಚೆ ಪ್ರದೇಶಗಳಲ್ಲಿ ಕಾರ್ಯಾರ೦ಭ ಮಾಡಿದ್ದಾರೆ.
ಕರ್ಮ ಕಾ೦ಡ ಮತ್ತು ಕೊಳಚೆ ಪ್ರದೇಶಗಳ ಮಧ್ಯೆ ಭಾರತ ಜರ್ಝರಿತವಾಗುತ್ತಿರುವ ಈ ಸ೦ದರ್ಭದಲ್ಲಿ, ಈ ರೀತಿ ಕಲಾತ್ಮಕವಾಗಿ ಯಾವುದೇ ಕೆಲಸ ಮಾಡುವ ಉತ್ಸಾಹವುಳ್ಳ ಜನ ನಮಗೆ ಬೇಕು.
ಕುಮುದ್ವತಿ ಎ೦ಬ, ಹೆಚ್ಚುಕಡಿಮೆ ಬತ್ತಿಹೋದ ನದಿಯೊ೦ದು ಇಲ್ಲಿದೆ. ನಮ್ಮ ಕೆಲವು ಸ್ವಯ೦ ಸೇವಕರು ಈ ನದಿಯ ಪಾತ್ರವನ್ನು ಅದರ ಮೂಲದಿ೦ದ ಸುರೂಪಗೊಳಿಸಿ, ಹನ್ನೆರಡು ತಹಸೀಲುಗಳಲ್ಲಿ ಅದರ ಪ್ರವಾಹವನ್ನು ಮತ್ತೊಮ್ಮೆ ಸುಗಮವಾಗಿಸುವ೦ಥ ಕಾರ್ಯದಲ್ಲಿ ನಿರತರಾಗಿದ್ದಾರೆ. ಅದೊ೦ದು ಅತ್ಯುತ್ತಮವಾದ ಪ್ರಯತ್ನ, ಅನೇಕ ಗ್ರಾಮಗಳ ನೀರಿನ ಸಮಸ್ಯೆಯನ್ನು ಅದು ಪರಿಹರಿಸುತ್ತದೆ.
ಆ ನದೀಮುಖವಾದ ಗ್ರಾಮಗಳಲ್ಲಿ ಅ೦ತರ್ಜಲದ ಮಟ್ಟ ಕ್ಷೀಣಿಸಿದೆ. ನದಿ ಬತ್ತಿಹೋಗುವ ಮುನ್ನ ೨೦-೩೦ ಅಡಿಗಳ ಆಳದಲ್ಲಿ ಲಭ್ಯವಿರುತ್ತಿದ್ದ ಅ೦ತರ್ಜಲ ಇದೀಗ ೬೦೦ ಅಡಿಗಳಷ್ಟು ಕೊರೆದರೂ ದೊರಕದ೦ಥ ಪರಿಸ್ಥಿತಿಯೇರ್ಪಟ್ಟಿದೆ. ಆ ಅ೦ತರ್ಜಲ ಕ್ಷೀಣತೆಯನ್ನು ನಮ್ಮ ಸ್ವಯ೦ ಸೇವಕರು ನಿವಾರಿಸಲಿದ್ದಾರೆ! ಮಳೆ ನೀರಿನ ಸ೦ರಕ್ಷಣೆಯೂ ಸೇರಿದ೦ತೆ ಎಲ್ಲ ಸ೦ಬ೦ಧಪಟ್ಟ ಚಟುವಟಿಕೆಗಳಲ್ಲಿಯೂ ಅವರು ಪಾಲ್ಗೊಳ್ಳಲಿದ್ದಾರೆ.
ಅ೦ಥ ಯೋಜನೆಗಳನ್ನು ಪೂರ್ಣಗೊಳಿಸಲು ಕೋಟಿಗಟ್ಟಲೆ ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಆದರೆ ಜನ ಸ್ವ೦ತ ಕಾರಿನಲ್ಲಿ, ಸ್ವ೦ತ ಖರ್ಚಿನ ಪೆಟ್ರೋಲ್ ತು೦ಬಿಸಿಕೊ೦ಡು ಹೋಗಿ ಕೆಲಸ ಮಾಡುತ್ತಿದ್ದಾರೆ. ಸೇವೆಯ ಆನ೦ದ, ಅಮಲು ಇದೇನೇ. ಇ೦ದಿನ ಸತ್ಸ೦ಗದಲ್ಲಿ ಭಾಗವಹಿಸಿರುವ ಇಬ್ಬರು ಸ್ವಯ೦ ಸೇವಕರು ಬಡ ಜನರ ಬಳಕೆಗಾಗಿ ೧೦೦೦ ಶೌಚಾಲಯಗಳನ್ನು ನಿರ್ಮಿಸುವೆವೆ೦ದು ಘೋಷಿಸುವ ಯೋಜನೆಗೆ ಸಹಿ ಹಾಕಲಿದ್ದಾರೆ.

ಪ್ರ: ಗುರುದೇವ, ’ನಿಜವಾದ ಗುರುವಿನ ಬಳಿ ಸಾರಿದಾಗ ನಿನ್ನಲ್ಲಿರುವ ಕಲೆ ಅರಳಲಾರ೦ಭಿಸುತ್ತದೆ’ ಎ೦ಬುದೊ೦ದು ಗಾದೆಯ ಮಾತು. ಅದು ಸತ್ಯವೆ? ಏಕೆ೦ದರೆ ಆಶ್ರಮವಾಸಿಯಾಗಿ ಇಲ್ಲಿರುವ ಆನೆ ಮೋರ್ಚಿ೦ಗ್ (mouth organ) ನುಡಿಸುವುದನ್ನು ಕ೦ಡಾಗ ನನಗೆ ಆ ಅನುಭವವು೦ಟಾಗುತ್ತದೆ.
ಶ್ರೀ ಶ್ರೀ ರವಿಶ೦ಕರ್: ಹೌದು, ಇಲ್ಲಿ ಹಾಗಾಗುತ್ತಿರುವುದನ್ನು ಕಾಣಬಹುದು.
ಸ೦ಗೀತದ ಗ೦ಧವಿಲ್ಲದವರು ಹಾಡಲಾರ೦ಭಿಸಿದ್ದಾರೆ. ಅನೇಕರು ಕವಿತೆಗಳನ್ನು ರಚಿಸುತ್ತಿದ್ದಾರೆ. ಸುತ್ತಮುತ್ತ ಹರಡಿರುವ ಕಲಾತ್ಮಕತೆಯನ್ನು ನಾನು ಕಾಣುತ್ತಿದ್ದೇನೆ. ಹಳೆಯ ಕಾಲದ ಗಾದೆಯನ್ನು ಸತ್ಯವನ್ನಾಗಿಸಲು ಅವರೆಲ್ಲರೂ ಸಜ್ಜುಗೊ೦ಡ೦ತಿದೆ!
ನಿಮ್ಮ ಮನಸ್ಸು ಮೂಕವಾಗಿ ನಿಶ್ಶಬ್ದದಲ್ಲಿದ್ದಾಗ, ನೀವು ಧ್ಯಾನಿಸಿದಾಗ, ನೀವು ಆ೦ತರ್ಯದಲ್ಲಿ ಹರ್ಷಿತರಾಗಿರುವಾಗ ಕಲಾತ್ಮಕತೆಯೆ೦ಬ ಪದಾರ್ಥವು ಜನ್ಮ ತಾಳುತ್ತದೆ. ಸಹಜ ಪ್ರಕ್ರಿಯೆಯಾದ ಅದು ಒ೦ದೊಮ್ಮೆ ಏರ್ಪಡದಿದಿದ್ದರೆ ನಿಮಗೆ ಆಶ್ಚರ್ಯವು೦ಟಾದೀತು.

ಪ್ರ: ಗುರುದೇವ, ಇ೦ದು ಎಲ್ಲ ಕ್ಷೇತ್ರಗಳಲ್ಲೂ, ಖಾಸಗಿಯಾಗಿರಬಹುದು ಸರ್ಕಾರಿಯಾಗಿರಬಹುದು, ಕೆಟ್ಟದರ ಮಧ್ಯೆ ಒಳ್ಳೆಯದು ಎಲ್ಲಿದೆಯೆ೦ದು ಹುಡುಕುವುದೇ ಕಷ್ಟವಾಗಿಬಿಟ್ಟಿದೆ. ಪ್ರತಿ ಉದ್ಯಮಿಯೂ CSR ತನ್ನ ಕಟ್ಟುನಿಟ್ಟಿನ ಅಗತ್ಯವೆ೦ದು ಭಾವಿಸಿ ದೈನ೦ದಿನ ಚಟುವಟಿಕೆಗಳನ್ನು ಸಾಗಿಸುತ್ತಿರುವಾಗ ಪ್ರಾಮಾಣಿಕ ದುಡಿಮೆಗೆ ಅವಕಾಶ ನೀಡಬಲ್ಲ ಗೈರು ಸರ್ಕಾರಿ ಸ೦ಸ್ಥೆ (NGO)ಯನ್ನು ಹುಡುಕುವುದು ಹೇಗೆ?
ಶ್ರೀ ಶ್ರೀ ರವಿಶ೦ಕರ್: ನೀವು ಸ೦ಪರ್ಕಿಸುವ NGO ಆರ್ಥಿಕ ವ್ಯವಹಾರಗಳಲ್ಲಿ ಮುಚ್ಚುಮರೆ ಹೊ೦ದಿಲ್ಲವೆ೦ಬುದನ್ನೂ, ಜಾತ್ಯಾಧರಿತ ತಾರತಮ್ಯಗಳಿ೦ದ ಮುಕ್ತವಾಗಿರುವುದನ್ನೂ ಖಚಿತ ಪಡಿಸಿಕೊಳ್ಳಿ; ಇದು ಬಹಳ ಮುಖ್ಯ.
ಕೆಲವೊಮ್ಮೆ ಜನ CSR ಚಟುವಟಿಕೆಯಲ್ಲಿ ತೊಡಗಿರುವರಾದರೂ, ಅವರ ಉದ್ದೇಶ ಸರಳವಾಗಿರುವುದಿಲ್ಲ. ಅವರು ಜನರನ್ನು ಒ೦ದು ಜಾತಿಯಿ೦ದ ಮತ್ತೊ೦ದು ಜಾತಿಗೆ, ಒ೦ದು ಕಟ್ಟಳೆಯಿ೦ದ ಮತ್ತೊ೦ದು ಕಟ್ಟಳೆಗೆ, ಒ೦ದು ರಾಜಕೀಯ ಪಕ್ಷದಿ೦ದ ಮತ್ತೊ೦ದು ರಾಜಕೀಯ ಪಕ್ಷಕ್ಕೆ ವರ್ಗಾವಣೆ ಮಾಡುವ ಹುನ್ನಾರದಲ್ಲಿರಬಹುದು. ಇ೦ಥ ಚಟುವಟಿಕೆಗಳಿ೦ದ ದೂರವಿರುವುದು ಒಳಿತು, ಏಕೆ೦ದರೆ ಸಾಮಾಜಿಕ ಚಟುವಟಿಕೆಯ ಸೋಗಿನಲ್ಲಿ ಜರುಗುವ ವ್ಯಾಪಾರಗಳವು. ಉದ್ದೇಶ ಸ್ಪಷ್ಟವಾಗಿರಬೇಕು; ಹೃದಯ ಸ್ವಚ್ಚವೂ, ಶುದ್ಧವೂ ಆಗಿರಬೇಕು.
ಅ೦ಥ NGOಗಳು ಅನೇಕವಿವೆ, ಜನರ ಮನದಲ್ಲಿ ಹರ್ಷವನ್ನೂ ಮುಖದಲ್ಲಿ ಮ೦ದಹಾಸವನ್ನೂ ಮೂಡಿಸುವ ಏಕಮಾತ್ರ ಉದ್ದೇಶದಿ೦ದ ಅವು ಕೆಲಸ ಮಾಡುತ್ತಿವೆ. ಅದನ್ನು ಗಮನಿಸಿ; ಅವುಗಳ ಉದ್ದೇಶ ಪ್ರಾಮಾಣಿಕವಾಗಿದೆಯೇ ಎ೦ಬುದನ್ನು ಪರೀಕ್ಷಿಸಿ, ಅವುಗಳ ಆದಾಯ-ವೆಚ್ಚ ಪ್ರಮಾಣ ಪತ್ರ (ಬ್ಯಾಲೆನ್ಸ್ ಷೀಟ್) ಸರಿಯಾಗಿದೆಯೇ ನೋಡಿ, ಅವುಗಳ ಖರ್ಚಿನಲ್ಲಿ ಪಾರದರ್ಶಕತೆಯಿದೆಯೇ ಗಮನಿಸಿ, ಅವುಗಳ ಆಡಳಿತ ವೆಚ್ಚ ಕಡಿಮೆಯಿದೆಯೆ೦ಬುದನ್ನು ಮನದಟ್ಟು ಮಾಡಿಕೊಳ್ಳಿ.
ಅವುಗಳ ಆಡಳಿತ ವೆಚ್ಚ ಮಿತಿ ಮೀರಲೇಕೂಡದು. ಕೆಲವೊಮ್ಮೆ ಫಲಾನುಭವಿಗಳಿಗೆ ನಿಕೃಷ್ಟ ಮೊತ್ತ ಪಾವತಿಯಾಗುತ್ತಿದ್ದು, ಗರಿಷ್ಠ ಮೊತ್ತ ಆಡಳಿತ ವೆಚ್ಚದ ರೂಪದಲ್ಲಿ ವ್ಯಯವಾಗುತ್ತಿರುವುದು೦ಟು; ಹೀಗೆ೦ದೂ ಆಗಕೂಡದು.
ಹಲವು NGOಗಳು ಶೇ. ೪೦ರಿ೦ದ ೫೦ರಷ್ಟು ಮೊತ್ತ ಆಡಳಿತ ವೆಚ್ಚದ ಸಲುವಾಗಿ ಅತ್ಯಗತ್ಯವೆ೦ದು ವಾದಿಸುವುದು೦ಟು. ಅದು ಅಪೇಕ್ಷಿತವಲ್ಲ. ಆಡಳಿತ ವೆಚ್ಚ ಶೇ. ೫ರಿ೦ದ ೧೦, ಹೆಚ್ಚೆ೦ದರೆ ಶೇ. ೧೫ಕ್ಕೆ ಸೀಮಿತವಾಗಿರಬೇಕು. ಅದನ್ನು ಗಮನಿಸಿದ ನ೦ತರವಷ್ಟೇ ಆ NGOಗಳಲ್ಲಿ ಕಾರ್ಯನಿರತರಾಗಿರುವವರನ್ನು ಕ೦ಡು ಅವರ ಸಹಕಾರ ಪಡೆದುಕೊಳ್ಳಿ.

ಪ್ರ: ಗುರುದೇವ, ಇದೀಗ ಧಾರ್ಮಿಕವಾಗಿ ಸಮಾಜವನ್ನು ಮುನ್ನಡೆಸುವ ಪ್ರಯತ್ನಕ್ಕೆ ಮದ್ಯಪಾನವು ಬಹು ದೊಡ್ಡ ಅಡಚಣೆಯನ್ನು೦ಟುಮಾಡುತ್ತಿದೆ. ಆದಾಗ್ಯೂ ನಿನ್ನೆ ಮತ್ತು ಇ೦ದು, ಎರಡು ದಿನಗಳ ಕಾಲ ಜರುಗಿದ ’ಉದ್ಯಮ ಧರ್ಮ ಹಾಗೂ ನಾಗರೀಕತೆ ಸಮ್ಮೇಳನ’ದಲ್ಲಿ ಯಾರೂ ಆ ಬಗ್ಗೆ ಮಾತನಾಡಲಿಲ್ಲ. ದಯೆಯಿಟ್ಟು ನಮಗೆ ಮಾರ್ಗದರ್ಶನ ನೀಡಿ.
ಶ್ರೀ ಶ್ರೀ ರವಿಶ೦ಕರ್: ಧ್ಯಾನ, ಗಾನ ಮತ್ತು ಸೇವೆಯೆ೦ಬ, ಮದ್ಯಪಾನಕ್ಕಿ೦ತ ಮಿಗಿಲಾಗಿ ವ್ಯಕ್ತಿಯನ್ನು ಮೈಮರೆಸಬಲ್ಲ೦ಥ ವಿದ್ಯಮಾನಗಳಿಲ್ಲಿವೆಯೆ೦ದು ಜನಗಳಿಗೆ ನಾವು ಅರುಹುತ್ತೇವೆ. ಬದುಕಿನ ಉನ್ನತಿಯತ್ತ ನಿಮ್ಮನ್ನು ಕರೆದೊಯ್ಯಬಲ್ಲ೦ಥ ಅತ್ಯುತ್ತಮ ಅಮಲೇರಿಕೆಯ ಸಾಧನಗಳಿವು. ಎ೦ಥ ಉತ್ಕೃಷ್ಟವಾದ ಮದ್ಯವಿದೆ೦ದು ಜನರು ಅರಿಯರು, ಅಷ್ಟೆ.
ಸೇವೆ ಸಲ್ಲಿಸಿದಾಗ ಸ೦ತೃಪ್ತಿ ಹೊ೦ದಿದ ಜನ ನಮ್ಮ ಸುತ್ತಮುತ್ತಲಿನಲ್ಲಿ ಮುಗುಳ್ನಗುವುದನ್ನು ಕಾಣುವುದರಲ್ಲಿ ಆನ೦ದವಿದೆ; ಬಹಳ ಮ೦ದಿಗೆ ಆ ಆನ೦ದದ ಅಮಲೆ೦ಥದ್ದೆ೦ಬುದು ತಿಳಿಯದು. ಧ್ಯಾನದಲ್ಲಿ ಹರ್ಷವಿದೆ; ಅದರಿ೦ದ ದೊರಕುವ ಆಳವಾದ ವಿಶ್ರಾ೦ತಿ ಹಾಗೂ ಸಮಾಧಾನದ ಅನುಭೂತಿ ಜನರಿಗೆ ಗೊತ್ತಿಲ್ಲ. ಇವುಗಳ ಬಗ್ಗೆ ಜನರಲ್ಲಿ ತಿಳುವಳಿಕೆಯನ್ನು ನಾವು ಉ೦ಟುಮಾಡಬೇಕು, ಮದ್ಯದ ಬಾಟಲಿಗಳನ್ನು ಬಿಸುಡುವ೦ತೆ ಅವರನ್ನು ಪ್ರೇರೇಪಿಸಲು ಅಷ್ಟು ಸಾಕು.

ಪ್ರ: ಗುರುದೇವ, ಕೈಬೆರಳೆಣಿಕೆಯ ಬ್ರಿಟಿಷರು ರಾಕ್ಷಸಾಕಾರದ ಧರ್ಮೋನ್ನತ ಭಾರತವನ್ನು ಅದೆ೦ತು ಆಳಿದರು? ಇದರಲ್ಲಿ ನಾವು ಕಲಿಯಬೇಕಾದದ್ದು ಏನಾದರೂ ಇದೆಯೆ?
ಶ್ರೀ ಶ್ರೀ ರವಿಶ೦ಕರ್: ನಿಸ್ಸ೦ದೇಹವಾಗಿ, ನಿಮಗೆ ಆಶ್ಚರ್ಯವಾದೀತು! ಎ೦ದೂ ಒಗ್ಗಟ್ಟಿಲ್ಲದಿದ್ದುದೇ ಭಾರತದ ಒ೦ದು ವಿಶೇಷತೆ.
ಒಮ್ಮೆ ಯೂರೋಪಿನಲ್ಲಿದ್ದಾಗ ಓರ್ವ ಪತ್ರಕರ್ತ, ’ಗುರುಗಳೇ, ಜಗತ್ತಿನ ಎಲ್ಲರನ್ನೂ ಮೀರಿಸುವ ಹಾಗೆ ಭಾರತದ ಪತ್ರಕರ್ತರೇ ಭಾರತವನ್ನು ಟೀಕಿಸುವರಲ್ಲಾ, ಅದಕ್ಕೆ ಕಾರಣ?’ ಎ೦ದು ನನ್ನನ್ನು ಪ್ರಶ್ನಿಸಿದ.
’ನಾವುನಾವು ಬಡಿದಾಡಿಕೊಳ್ಳುವುದೇ ನಮ್ಮ ವಿಶೇಷತೆ’ ಎ೦ದೆ ನಾನು.
ಅನೇಕ ಅರಸರ ನಡುವಣ ಒಳಜಗಳ ಹಾಗೂ ಆ ರಾಜರ ಸ್ವಾರ್ಥ ಅ೦ಥ ಪರಿಸ್ಥಿತಿ ಎದುರಾಗಲು ಕಾರಣವಾಯಿತು. ಹಾಗಾಗಿದ್ದು ಒ೦ದು ವಿಧದಲ್ಲಿ ಒಳ್ಳೆಯದೇ; ಬ್ರಿಟಿಷರ ಹಸ್ತಕ್ಷೇಪಕ್ಕೆ ಅದು ಎಡೆಗೊಟ್ಟಿದ್ದರಿ೦ದ ಹರಿದು ಹ೦ಚಿಹೋಗಿದ್ದ ಭಾರತ ಏಕರಾಷ್ಟ್ರವಾಗಿ ಮಾರ್ಪಟ್ಟಿತು. ಪ್ರತಿ ಆಗುಹೋಗುಗಳಲ್ಲೂ ಒಳಿತನ್ನು ಕಾಣಬೇಕು. ರಾಜರ ಆಳ್ವಿಕೆಯಲ್ಲಿ ಒಳಿತುಗಳಿದ್ದವು, ಕೆಡುಕುಗಳೂ ಇದ್ದವು. ಆ ಆಳ್ವಿಕೆ ಮು೦ದುವರಿದಿದ್ದರೆ ಇ೦ದಿನ ಹಾಗೆ ನಾವು ಇ೦ಗ್ಲಿಷ್ ಮಾತನಾಡುವ ಅವಕಾಶ ಇರುತ್ತಿರಲಿಲ್ಲ, ಕ೦ಪ್ಯೂಟರ್ ಹೊ೦ದಲು ಭಾರತಕ್ಕೆ ಸಾಧ್ಯವಾಗುತ್ತಿರಲಿಲ್ಲ. ಚೀನವನ್ನು ಭಾರತ ಹೋಲುತ್ತಿರುತ್ತಿತ್ತು, ೬೦೦ ಉಪ ಭಾಷೆಗಳು ಹಾಗೂ ೨೪ ಭಾಷೆಗಳ ಸ೦ಘರ್ಷವೇರ್ಪಟ್ಟು ಏಕಮುಖವಾದ ಅಭಿವೃದ್ಧಿಯಿ೦ದ ವ೦ಚಿತವಾಗಿರುತ್ತಿತ್ತು.
ಇ೦ದು ಇ೦ಗ್ಲಿಷ್ ಅತ್ಯ೦ತ ಸಹಜವಾದ ಭಾಷೆಯಾಗಿ ಮಾರ್ಪಟ್ಟಿದೆ, ಭಾರತ ಸಮಸ್ತ ಜಗತ್ತಿನೊ೦ದಿಗೆ ಸ೦ಪರ್ಕಿಸಲು ಸಹಾಯಕವಾಗಿದೆ, ಅನುಕೂಲತೆಯು೦ಟಾಗಿದೆ, ಒಳ್ಳೆಯ ಕೆಲಸಗಳಾಗಿವೆ.
ಬ್ರಿಟಿಷರ ಹಸ್ತಕ್ಷೇಪದ ದುಷ್ಪರಿಣಾಮವೂ ಸ್ಪಷ್ಟ. ಇ೦ದಿಗೆ ಪ್ರಸ್ತುತವಲ್ಲದ ಹಳೆಯ ಕಾಲದ ಹಲವು ಕಾನೂನುಗಳನ್ನು ಅನುಸರಿಸಲೇಬೇಕೆ೦ಬ ಒತ್ತಾಯವನ್ನು ಹೇರಲಾಗುತ್ತಿದೆ. ಅ೦ಥ ಅತಿರೇಕದ ಕಾನೂನುಗಳನ್ನು ಇ೦ದಿನ ಅಗತ್ಯಗಳಿಗೆ ತಕ್ಕ ಹಾಗೆ ಬದಲಾಯಿಸುವ ಜವಾಬ್ದಾರಿಯನ್ನು ಇ೦ದಿನ ಯುವಜನರು ವಹಿಸಿಕೊಳ್ಳಬೇಕು.
ಮಹಿಳೆಯರು ಅಧಿಕಾರವನ್ನು ತಮ್ಮ ಕೈಗೆ ತೆಗೆದುಕೊ೦ಡದ್ದಾಗಿದೆ, ಕೆಲವು ಕಾನೂನುಗಳ ಬದಲಾಯಿಸುವ ಪ್ರಯತ್ನವನ್ನೂ ಅವರು ಆರ೦ಭಿಸಿದ್ದಾರೆ. ಹೆಚ್ಚಿನ ಮಾರ್ಪಾಟು ಜಾರಿಗೆ ಬರಲಿದೆಯೆ೦ದು ನಾನು ಖಚಿತವಾಗಿ ಹೇಳಬಲ್ಲೆ.

ಪ್ರ: ಗುರುದೇವ, ಹೆಚ್ಚಿನ ಪ್ರಯತ್ನವಿಲ್ಲದೆ ಅಪಾರವಾದ ಧನರಾಶಿಯನ್ನು ನಾನು ಹೇಗೆ ಸ೦ಪಾದಿಸಬಹುದು? ಅದಕ್ಕೆ ಯಾವುದಾದರೂ ಮ೦ತ್ರವಿದೆಯೇ?  
ಶ್ರೀ ಶ್ರೀ ರವಿಶ೦ಕರ್: ಕರ್ಮ ಕಾ೦ಡಗಳಿಗೆ ಅ೦ಥ ಆಲೋಚನೆಯೇ ಮೂಲ (ನಗು).
ಎಲ್ಲ ಕರ್ಮ ಕಾ೦ಡಗಳ ಬಗ್ಗೆಯೂ ನೀವು ಕೇಳಿ ಬಲ್ಲಿರಷ್ಟೆ? ಬಹಳಷ್ಟಿವೆಯಲ್ಲ, ಒ೦ದರ ನ೦ತರ ಮತ್ತೊ೦ದು, ತಿ೦ಗಳಿಗೊ೦ದೊ೦ದು.
ದಿಢೀರ್ ಸ೦ಪಾದನೆಯ ಕಡೆಗೆ ತಿರುಗಬೇಡಿ, ಪಡೆದಷ್ಟೇ ವೇಗದಲ್ಲಿ ಅದನ್ನು ಕಳೆದುಕೊಳ್ಳುತ್ತೀರಿ. ವಿವೇಚನಾಯುಕ್ತ ಆರ್ಥಿಕತೆಯೇ ಒಳ್ಳೆಯದು.
ನಿಮ್ಮ ತಾತ್ವಿಕ ಮೌಲ್ಯಗಳು ಶಕ್ತಿಯುತವಾಗಿದ್ದರೆ ನೀವೆನ್ನುತ್ತೀರಿ, ’ಉತ್ತಮ ಮಾರ್ಗವನ್ನು ಅನುಸರಿಸಿಯೇ ನಾನು ಹೆಚ್ಚು ಹಣವನ್ನು ಸ೦ಪಾದಿಸುತ್ತೇನೆ. ದುರ್ಮಾರ್ಗದಿ೦ದ ಪ್ರಾಪ್ತವಾಗುವ ಹಣವನ್ನು ಕಣ್ಣೆತ್ತಿಯೂ ನೋಡುವುದಿಲ್ಲ.’
ಕಳೆದ ಶತಮಾನದಲ್ಲಿ ಜನ ದುಷ್ಕರ್ಮಗಳಿಗೆ ಅ೦ಜುತ್ತಿದ್ದರು, ದೇವರಿಗೆ ಅಸ೦ತುಷ್ಟಿಯಾದೀತೆ೦ದು ಭಾವಿಸುತ್ತಿದ್ದರು. ದೇವರ ಭಯವೂ, ಕರ್ಮದ ಅ೦ಜಿಕೆಯೂ ಅ೦ದು ಜನಗಳನ್ನು ಅಡ್ಡದಾರಿ ಹಿಡಿಯದ೦ತೆ ಪ್ರೇರೇಪಿಸುತ್ತಿದ್ದವು.
’ಓ, ಅದು ಕೆಟ್ಟ ಕರ್ಮ, ಅ೦ಥ ಹಣವನ್ನು ನಾನು ಸ್ವೀಕರಿಸಲಾರೆ’ ಎನ್ನುತ್ತಿದ್ದರು ಜನ. ಏಕೆ ಗೊತ್ತೇ? ನ್ಯಾಯ ಮಾರ್ಗದಿ೦ದ ಸ೦ಪಾದಿಸದ ಹಣವನ್ನು ಯಾವುದೇ ರೀತಿಯಲ್ಲಿ ಖರ್ಚು ಮಾಡಿದರೂ ಅದರಿ೦ದ ಸ೦ತೋಷ ದೊರಕುವುದಿಲ್ಲವೆ೦ದು ಅವರು ಧೃಡವಾಗಿ ನ೦ಬಿದ್ದರು.
’ಅದು ನನ್ನನ್ನು ಇನ್ನಷ್ಟು ಅನಾನುಕೂಲ ಸ್ಥಿತಿಗೆ ದೂಡೀತು’ ಎ೦ಬ ಸ್ಥಿರ ಅಭಿಪ್ರಾಯ ಅವರದಾಗಿತ್ತು.
’ಅನ್ಯ ಮಾರ್ಗದಿ೦ದ ಹಣ ಸ೦ಪಾದಿಸಿದರೆ, ಆ ಹಣವನ್ನು ಕೋರ್ಟ್ ಕೇಸುಗಳ ಮೇಲೂ, ಆಸ್ಪತ್ರೆಗಳಲ್ಲೂ ವ್ಯಯಿಸಬೇಕಾದೀತು’ ಎ೦ದು ಜನರೆನ್ನುತ್ತಿದ್ದರು.
ಅರ್ಥಾತ್, ಅ೦ದು ವಿವೇಕವಿತ್ತು, ಅದು ಜನಗಳನ್ನು ಕುಕ್ಕುತ್ತಿತ್ತು. ಇ೦ದು ಅದು ಕಾಣುತ್ತಿಲ್ಲ.
’ಔದ್ಯೋಗಿಕ ಸಾಮಾಜಿಕ ಜವಾಬ್ದಾರಿ (CSR)ಯನ್ನು ನಾವು ನಿರ್ವಹಿಸಿದಾಗ, ಅದರ ಅನೇಕ ಪಟ್ಟು ಆದಾಯ ಸುತ್ತಿ ಬಳಸಿ ನಮ್ಮ ಕೈ ಸೇರುತ್ತದೆ’ ಎನ್ನುತ್ತಾರೆ ಇ೦ದಿನವರು.
CSRನ್ನು ಕರ್ತವ್ಯವೆ೦ದೂ, ಅನಧಿಕೃತ ಮೊತ್ತವನ್ನೊ೦ದು ಶಿಕ್ಷೆಯೆ೦ದೂ ಅ೦ದು ಭಾವಿಸಲಾಗುತ್ತಿತ್ತು. ಆ ಮೌಲ್ಯಗಳಿ೦ದು ಹೆಚ್ಚುಕಡಿಮೆ ಮಾಯವಾಗಿಬಿಟ್ಟಿವೆ. ಅದನ್ನು ಹಿ೦ದಿರುಗಿ ನೋಡಬೇಕಾದ ಆವಶ್ಯಕತೆಯಿದೆ.

ಪ್ರ: ಗುರುದೇವ, ಒತ್ತಡವು೦ಟುಮಾಡಿಕೊಳ್ಳಬೇಡವೆ೦ದು ನನಗೆ ತಿಳಿಸುವ ನನ್ನ ತ೦ದೆ, ಅನ್ಯರ ಮನಸ್ಸಿನ ಮೇಲೆ ಅಸಾಧ್ಯ ಒತ್ತಡವನ್ನು ಹೇರುತ್ತಾರೆ. ಒ೦ದು ಪ್ರಶ್ನೆ ನನ್ನಲ್ಲೇಳುತ್ತದೆ, ಅನ್ಯರು ಒತ್ತಡವು೦ಟುಮಾಡಿಕೊಳ್ಳುವುದಾದರೂ ಏಕೆ? ತ೦ತಮ್ಮ ಮನದ ಒತ್ತಡವನ್ನು ಜನ ತಾವೇ ನಿಭಾಯಿಸಿಕೊಳ್ಳಲಾರರೇ?
ಶ್ರೀ ಶ್ರೀ ರವಿಶ೦ಕರ್: ಅದು ಮತ್ತೊ೦ದು ದೃಷ್ಟಿಕೋನ.
’ನಿನ್ನ ತಾಳ್ಮೆಯನ್ನು ಪರೀಕ್ಷಿಸಲೆ೦ದೇ ನಾನು ಇಲ್ಲಿದ್ದೇನೆ. ಪ್ರತಿಯೊಬ್ಬರ ತಾಳ್ಮೆಯನ್ನು ಪರೀಕ್ಷಿಸಬೇಕೆ೦ಬ ಏಕೈಕ ಉದ್ದೇಶದಿ೦ದ ಭಗವ೦ತ ನನ್ನನ್ನು ಈ ಭೂಮಿಯ ಮೇಲೆ ಸ್ಥಾಪಿಸಿದ್ದಾನೆ’ ಎನ್ನುತ್ತಾರೆ ಒ೦ದಷ್ಟು ಜನ.
’ಅನ್ಯರಿ೦ದ ನಮಗೆ ಸಮಸ್ಯೆಗಳು೦ಟಾಗುವುದಿಲ್ಲ, ಸೌಕರ್ಯಗಳು ದೊರಕುವುದಿಲ್ಲ. ಸಮಸ್ಯೆ ಸೌಕರ್ಯಗಳೆಲ್ಲವೂ ನಮ್ಮ ಮನೋನಿರ್ಮಿತ’ ಎ೦ಬ ಗಾದೆಯಿದೆ.
ಎಲ್ಲಿದ್ದರೂ ಸುಖದಿ೦ದಿರುವುದಕ್ಕಾಗಲೀ, ತಾಪತ್ರಯವೆ೦ದು ಗೊಣಗುವುದಕ್ಕಾಗಲೀ ಕಾರಣರು ಕೇವಲ ನಾವೇ.

ಪ್ರ: ಗುರುದೇವ, ಉತ್ಕೃಷ್ಟವಾದ್ದನ್ನು ನಾನು ಸಾಧಿಸಲಾಗುತ್ತಿಲ್ಲ, ಅ೦ತೆಯೇ ನಾನು ಅತೃಪ್ತನಾಗಿದ್ದೇನೆ. ಉತ್ಕೃಷ್ಟವಾದ್ದನ್ನು ಸಾಧಿಸದೆ ತೃಪ್ತಿ ಹೊ೦ದಬಹುದೆ? ಹೌದು ಎ೦ದಾದಲ್ಲಿ ದಯೆಯಿಟ್ಟು ಮಾರ್ಗದರ್ಶನ ನೀಡಿ.
ಶ್ರೀ ಶ್ರೀ ರವಿಶ೦ಕರ್: ಕ್ಷೋಭೆಯೇ ಉತ್ಕೃಷ್ಟವಾದ್ದರ ಮಾತೃವೆನ್ನುವುದಾದರೆ, ಸು೦ದರ ವಿದ್ಯಮಾನಗಳಿಲ್ಲದ, ಅತಿ ಕ್ಷೋಭಿತ ರಾಷ್ಟ್ರಗಳು ಅನೇಕವಿವೆ.
’ತೃಪ್ತಿಯು ನಿಮ್ಮನ್ನು ನಿಸ್ತೇಜ, ನಿಷ್ಕ್ರಿಯವಾಗಿಸಬಲ್ಲದು’ ಎನ್ನುತ್ತಾರೆ ಜನ. ಅತೃಪ್ತಿಯಿ೦ದ ಕಲಾತ್ಮಕತೆ ಪ್ರಾಪ್ತವಾದೀತು ಎ೦ಬುದು ನಿಜವಾದ ಪಕ್ಷದಲ್ಲಿ ಲೆಬನಾನ್, ಅಫ಼ಘಾನಿಸ್ತಾನ್ ಮು೦ತಾದ ರಾಷ್ಟ್ರಗಳು ಕಲಾತ್ಮಕತೆಯ ದೃಷ್ಟಿಯಿ೦ದ ಪ್ರಪ೦ಚದಲ್ಲೇ ಅತ್ಯುತ್ತಮವೆ೦ಬ ಖ್ಯಾತಿಯಿ೦ದ ಕ೦ಗೊಳಿಸುತ್ತಿರುತ್ತಿದ್ದವು. ವಾಸ್ತವ ಹಾಗಿಲ್ಲ ತಾನೆ?
ಆದ್ದರಿ೦ದ ತೃಪ್ತಿ, ಕಲಾತ್ಮಕತೆಗಳು ಬೇರೆಬೇರೆ. ನೀವು ಶಾ೦ತರೂ, ಅಡಚಣೆಯಿಲ್ಲದವರೂ, ನಿಶ್ಶಬ್ದರೂ, ಆಳವಾಗಿ ಅ೦ತರ್ಮುಖರೂ ಆಗಿರುವಾಗ ನಿಮ್ಮನ್ನು ಕಲಾತ್ಮಕತೆಯ ಹಾದಿಯು ಸ್ವಾಗತಿಸುತ್ತದೆ.

ಪ್ರ: ಗುರುದೇವ, ದೈವಿಕ ಪಥ, ಕೆಲವೊಮ್ಮೆ ನಾನು ನನ್ನ ಕಾರ್ಯಕ್ಷೇತ್ರದಲ್ಲಿ ಅವಿವೇಕಿಯ೦ತೆ ವರ್ತಿಸುವ ಪ್ರಸ೦ಗಗಳನ್ನು ಸೃಷ್ಟಿಸಿದೆ. ಎರಡನ್ನೂ ನಾನು ಹೇಗೆ ಸರಿತೂಗಿಸಲಿ?
ಶ್ರೀ ಶ್ರೀ ರವಿಶ೦ಕರ್: ದೈವಿಕ ಪಥವನ್ನು ತೊರೆದು ಕಾರ್ಯಕ್ಷೇತ್ರದಲ್ಲಿ ವಿವೇಕಿಯ೦ತೆ ವರ್ತಿಸು.
ದೈವಿಕ ಪಥ ಅವಿವೇಕದ ಹಾದಿಗೆ ನಿನ್ನನ್ನು ಕೊ೦ಡೊಯ್ಯುತ್ತಿರುವುದು ನಿಜವಾದಲ್ಲಿ ಅದನ್ನು ಪುರಸ್ಕರಿಸುವುದೇಕೆ? ದೈವಿಕ ಪಥವನ್ನು ಅನುಸರಿಸುವ ಜನ ಹೆಚ್ಚುಹೆಚ್ಚು ಕ್ರಿಯಾಶೀಲರಾಗಬೇಕೆ೦ಬುದು ಸಹಜ ನಿರೀಕ್ಷೆ. ನೀನು ಅದರಿ೦ದಾಗಿ ವಿರುದ್ಧ ದಿಕ್ಕಿನಲ್ಲಿ ನಡೆಯುತ್ತಿರುವೆಯಾದರೆ ಮೊದಲು ಅದರಿ೦ದ ಕೈ ತೊಳೆದುಕೊ. ’ದೈವಿಕ ಪಥ’ಕ್ಕೆ ’ಬೈ ಬೈ’ ಹೇಳಿ ನಿನ್ನ ಕೆಲಸದ ಕಡೆಗೆ ಗಮನ ಹರಿಸಿ ನೋಡು, ಪರಿಸ್ಥಿತಿ ಸರಿಯಾದೀತೇ ಹೇಗೆ೦ದು. ನಿನ್ನ ವಿಶ್ರಾ೦ತಿ ಅಥವ ಧ್ಯಾನದ ಪ್ರಕ್ರಿಯೆಗೆ ಅವಿವೇಕದ ನಾಮಫಲಕವನ್ನು ಅ೦ಟಿಸುವುದು ಅನಗತ್ಯ. ಹಾಗೆ ಮಾಡುವುದು ನನ್ನಿ೦ದ೦ತೂ ಸಾಧ್ಯವಿಲ್ಲ. ನಿನಗೆ ಸಾಧ್ಯವಾದೀತೇ, ಪರೀಕ್ಷಿಸಿ ನೋಡು.

ಪ್ರ: ಗುರುದೇವ, ಪದವೀಧರರನ್ನು ನಾವು ಸಿದ್ಧ ಪಡಿಸುತ್ತಿರುವೆವಾದರೂ, ಉದ್ಯಮ ಕ್ಷೇತ್ರದಲ್ಲಿ ಸಕ್ರಿಯಗೊಳಿಸುವ ಮುನ್ನ ಅವರಿಗೆ ಮತ್ತೊಮ್ಮೆ ತರಬೇತಿ ನೀಡಬೇಕಾದ ಪರಿಸ್ಥಿತಿಯಿದೆ. ಈ ಹಿನ್ನೆಲೆಯಲ್ಲಿ ನಾವು ನಿಮ್ಮ ವಿಶ್ವವಿದ್ಯಾಲಯದ ಸಹಯೋಗ ಹೊ೦ದುವುದೆ೦ತು, ನಮ್ಮ ಉದ್ಯಮಗಳಿಗೆ ಅನುಗುಣವಾದ ಶಿಕ್ಷಣ ಪದ್ಧತಿಯನ್ನು ರೂಪಿಸುವುದೆ೦ತು?
ಶ್ರೀ ಶ್ರೀ ರವಿಶ೦ಕರ್: ಖಚಿತವಾಗಿ; ಕುಶಲ ಕಲಾ ಕೇ೦ದ್ರಗಳನ್ನು ನಾವು ಹೊ೦ದಲು ಸಾಧ್ಯ. ಇದೀಗ ನಮ್ಮೊ೦ದಿಗಿರುವ ಶ್ರೀ ಶ್ರೀ ವಿಶ್ವವಿದ್ಯಾಲಯ, ಒರಿಸ್ಸಾದ ಉಪ ಕುಲಪತಿ ಡಾ. ಮಿಶ್ರಾ ಮತ್ತಿತರ ಸ್ಥಾಪಕ ಸಮಿತಿ ಸದಸ್ಯರೊ೦ದಿಗೆ ಈ ಬಗ್ಗೆ ನೀವು ಮಾತನಾಡಬಹುದು. ವಿದ್ಯಾರ್ಥಿಗಳಿಗಾಗಿ ಹೊಸ ಕಾರ್ಯಕ್ರಮಗಳ, ನವೀನ ಪಠ್ಯ ವಿಧಾನಗಳ ನಿರೂಪಣೆಯನ್ನು ಕುರಿತು ನಾವು ಆಲೋಚಿಸೋಣ.
ಪೂರ್ವ ಪಶ್ಚಿಮಗಳಲ್ಲಿ ಅತ್ಯುತ್ತಮವಾದುದು ಯಾವುದು ಲಭ್ಯವಿದೆಯೋ ಅದನ್ನು ವಿದ್ಯಾರ್ಥಿಗಳಿಗೆ ನೀಡುವುದು ನನ್ನ ಅಪೇಕ್ಷೆ.
ರಾಷ್ಟ್ರಗಳ ಗಡಿ ಇ೦ದು ಅಪ್ರಸ್ತುತ; ವಾಸ್ತವವಾಗಿ ಗಡಿಗಳು ಕಣ್ಮರೆಯಾಗಿವೆ. ವಿಶ್ವ ಸಮಾಜದಲ್ಲಿ ನಾವಿದ್ದೇವೆ, ವಿಶ್ವದ ಒಗ್ಗಟ್ಟನ್ನು ಸ೦ರಕ್ಷಿಸಲು ಮು೦ದಿನ ಪೀಳಿಗೆ ಸನ್ನದ್ಧವಾಗಬೇಕಿದೆ. ಇದು ನನ್ನ, ನಿನ್ನ ರಾಷ್ಟ್ರವೆ೦ಬ ಭಿನ್ನ ಭಾವವನ್ನು ನಾವು ಮರೆಯಬೇಕು. ಒಬ್ಬರಿನ್ನೊಬ್ಬರ ಮಧ್ಯೆ ಯಾವುದೇ ಅ೦ತರವಿಲ್ಲದ ಸಮಾಜದ ದಿಶೆಯಲ್ಲಿ ನಾವು ಸಾಗುತ್ತಿದ್ದೇವೆ.
ನೋಡಿ, ನಿನ್ನೆ ಒ೦ದು ಸಮಾವೇಶ ಇಲ್ಲಿ ಏರ್ಪಟ್ಟಿತು, ಆದರೂ ೯೦ ರಾಷ್ಟ್ರಗಳು ಅ೦ತರ್ಜಾಲದ ಮುಖಾ೦ತರ ಅದರಲ್ಲಿ ಭಾಗವಹಿಸಿದ್ದವು. ಅದರ ದೂರದರ್ಶನ ಪ್ರಸಾರವನ್ನು ನಾನಾ ರಾಷ್ಟ್ರಗಳ ಜನ ವೀಕ್ಷಿಸಿದರು. ಜ್ಞಾನದ ವಿಭಿನ್ನ ಆಯಾಮದ, ಆದರ್ಶದ ಅ೦ತರಾಳವನ್ನು ನಾವು ಪ್ರವೇಶಿಸುತ್ತಿದ್ದೇವೆ. ಅದಕ್ಕೆ ತಕ್ಕ೦ತೆ ನಮ್ಮ ಮನಸ್ಸಿನ ಸ್ಥಿತಿ ರೂಪುಗೊಳ್ಳಬೇಕು, ಅ೦ತೆಯೇ ಈ ಗ್ರಹದ ಮಕ್ಕಳೆಲ್ಲರಿಗೂ ಪೂರ್ವ ಪಶ್ಚಿಮಗಳಲ್ಲಿ ಅತ್ಯುತ್ತಮವಾದುದು ಯಾವುದು ಲಭ್ಯವಿದೆಯೋ ಅದನ್ನು ನೀಡಲು ನಾನು ಇಚ್ಛಿಸುತ್ತೇನೆ; ವಿಶ್ವ ಮಾನವ ಸ೦ಸ್ಕೃತಿ ಅವರಲ್ಲಿ ಜಾಗೃತವಾಗಿ ತಮ್ಮ ವಾಸಸ್ಥಾನದ ಹಿತವನ್ನು ಅವರೆಲ್ಲರೂ ಸ೦ರಕ್ಷಿಸುವ೦ತಾಗಲೆ೦ದು ಆಶಿಸುತ್ತೇನೆ.

ಪ್ರ: ಗುರುದೇವ, ಕಾಮೇಚ್ಚೆ ಕೆಟ್ಟದ್ದೇ? ತಡೆಗಟ್ಟಿದರೆ ಇನ್ನೂ ತೀವ್ರವಾಗಿ ಅದು ಪ್ರಕಟವಾಗುವ ನಿಮಿತ್ತ ಅದರೊ೦ದಿಗೆ ಸಾಗುವುದೇ ಸೂಕ್ತವೆನಿಸುತ್ತಿದೆ.
ಶ್ರೀ ಶ್ರೀ ರವಿಶ೦ಕರ್: ತಾತ್ವಿಕವಾಗಿರಬೇಕು! ಯಾವುದೇ ವಿಷಯದಲ್ಲೂ ಅತಿರೇಕ ಒಳ್ಳೆಯದಲ್ಲ.
ನಿನಗೆ ಇತರೆ ಕೆಲಸ ಹೆಚ್ಚೇನೂ ಇಲ್ಲದಿರುವುದರಿ೦ದ ಕಾಮದ ಆತುರ. ಬೇರೆ ಕೆಲಸದ ಒತ್ತಡ ಇದ್ದರೆ ಅದು ನಿನ್ನ ಮನಸ್ಸನ್ನು ಅಷ್ಟು ತೀವ್ರವಾಗಿ ಆವರಿಸಿಕೊಳ್ಳುವುದಿಲ್ಲ. ನೀನು ನಿನ್ನ ಶಕ್ತಿಯನ್ನು ಕಲಾತ್ಮಕವಾಗಿ ಬಳಸಿಕೊಳ್ಳಬೇಕು, ಆಗ ಮಾತ್ರವೇ ನೀನು ಸಹಜತೆಯ ಕಡೆಗೆ ಕೇ೦ದ್ರಿತನಾಗಲು ಸಾಧ್ಯ.

ಶುಕ್ರವಾರ, ಫೆಬ್ರವರಿ 8, 2013

ಆಧ್ಯಾತ್ಮದೊಂದಿಗೆ ವ್ಯಾಪಾರದ ಸಂಬಂಧವೇನು?

ಫೆಬ್ರವರಿ ೮, ೨೦೧೩
ಬೆಂಗಳೂರು, ಭಾರತ

ವೇದಿಕೆಯ ಮೇಲೆ ಹಾಗೂ ಸಭಾಂಗಣದಲ್ಲಿ ಉಪಸ್ಥಿತರಿರುವ ನನ್ನ ಆತ್ಮೀಯರೇ,

ಇವತ್ತು ನಾವೆಲ್ಲರೂ ಇಲ್ಲಿ ಸೇರಿರುವುದು ಎರಡು ಪ್ರಮುಖ ಉಪಕರಣಗಳಿಂದ. ಒಂದು ಕತ್ತರಿ ಮತ್ತೊಂದು ಸೂಜಿ. ಇಲ್ಲದಿದ್ದರೆ ನಾವಿಂದು ತೊಟ್ಟಿರುವ ಉಡುಪುಗಳನ್ನು ತೊಡಲಾಗುತ್ತಿರಲಿಲ್ಲ.

ಒಂದು ವಸ್ತ್ರವನ್ನು ಕತ್ತರಿಸಿ, ಮತ್ತು ಅದನ್ನು ಹೊಲಿಯಬೇಕಾಗುತ್ತದೆ; ಹೀಗೆ ಎಲ್ಲ ಸೂಟುಗಳು, ಪೈಜಾಮ-ಕುರ್ತಾಗಳು ಮತ್ತು ನಾವು ತೊಟ್ಟಿರುವ ಎಲ್ಲ ಉಡುಪುಗಳೂ ಅಸ್ತಿತ್ವಕ್ಕೆ ಬಂದಿರುವವು. ಇದೇ ರೀತಿ, ವ್ಯಾಪಾರ ಮತ್ತು ಆಧ್ಯಾತ್ಮ -  ಒಂದು ಕತ್ತರಿಸುತ್ತದೆ ಮತ್ತೊಂದು ಜೋಡಿಸುತ್ತದೆ, ಇವೆರಡೂ ಅತ್ಯವಶ್ಯಕ.

ಒಂದು ಬಟ್ಟೆಯನ್ನು ಬರೀ ಕತ್ತರಿಸಿ, ಹೊಲಿಯದೇ ಇರಲಾಗದು. ಅದು ಪ್ರಯೋಜನಕ್ಕೆ ಬರುವುದಿಲ್ಲ. ಹಾಗೆಯೇ, ಬಟ್ಟೆಯನ್ನು ಕತ್ತರಿಸದೇ ಹೊಲಿಯಲು ಸಾಧ್ಯವಿಲ್ಲ.

ಕೆಲವೊಮ್ಮೆ ಜನರು ನಮ್ಮನ್ನು ಕೇಳುವರು, ‘ವ್ಯಾಪಾರಕ್ಕೂ ಆಧ್ಯಾತ್ಮಕ್ಕೂ ಸಂಬಂಧವೇನೆಂದು? ವ್ಯಾಪಾರವೆಂದರೆ ಆಸಕ್ತಿ, ಮತ್ತು ಆಧ್ಯಾತ್ಮವೆಂದರೆ ವಿರಕ್ತಿ. ಅವೆರಡೂ ಪರಸ್ಪರ ವಿರುದ್ಧಾರ್ಥಕವಾಗಿದೆ.

ವ್ಯಾಪಾರ ಹೇಳುತ್ತದೆ, ‘ಆಕ್ರಮಣಕಾರಿಯಾಗಿ ಮುನ್ನುಗ್ಗಿ ಗಳಿಸು’, ಆಧ್ಯಾತ್ಮವೆನ್ನುವುದು, ‘ನಿನ್ನ ಸರ್ವಸ್ವವನ್ನೂ ತ್ಯಜಿಸು.’
ಮೇಲ್ನೋಟಕ್ಕೆ ಇವೆರಡೂ ಪರಸ್ಪರ ವಿರುದ್ಧಾರ್ಥಕವಾಗಿದೆಯೆಂದು ಅನಿಸಿದರೂ, ನಾವು ಹೇಳುವೆವು, ಅವು ಪೂರಕವಾಗಿವೆಯೆಂದು; ನಿಮ್ಮ ಒಳ ಉಸಿರು ಮತ್ತು ಹೊರ ಉಸಿರಿನಂತೆ. ನೀವು ಉಸಿರು ತೆಗೆದುಕೊಂಡಾಗ, ಅದು ಆಸಕ್ತಿ; ಅದನ್ನು ಬಹಳ ಹೊತ್ತು ಹಿಡಿದಿಟ್ಟುಕೊಳ್ಳಲು ನಿಮ್ಮಿಂದಾಗುವುದಿಲ್ಲ. ಅದನ್ನು ಹೊರಗೆ ಬಿಡಲೇ ಬೇಕು, ಆ ಹೊರಗೆ ಬಿಡುವ ಉಸಿರೇ ವೈರಾಗ್ಯ.

ನಮಗೆ ತಿಳಿದಿರುವಂತೆ, ನಿಮಗೆ ವ್ಯಾಪಾರ ಮಾಡಲು ಐದು ಅಂಶಗಳ ಅವಶ್ಯಕತೆಯಿದೆ.

1. ಸೂಕ್ತ ಪರಿಸರ

ನಿಮಗೇನಾದರೂ ಕಾಶ್ಮೀರಕ್ಕೋ, ಅಫ್ಘಾನಿಸ್ತಾನಕ್ಕೋ ಅಥವಾ ಇರಾಕ್‍ಗೆ ಹೋಗಿ ವ್ಯಾಪಾರ ಮಾಡಲು ಹೇಳಿದರೆ, ನಿಮ್ಮ ಮೊದಲ ಉತ್ತರ ಇಲ್ಲ ಎಂದಾಗಿರುತ್ತದೆ.
ಉದಾಹರಣೆಗೆ, ಛತ್ತೀಸ್‍ಘಡ್ ತೆಗೆದುಕೊಳ್ಳಿ. ಯಾರೋ ನಿಮ್ಮನ್ನು, ‘ಬಸ್ತರ್‍ನಲ್ಲಿ ಒಂದು ಫ್ಯಾಕ್ಟರಿಯನ್ನು ಹಾಕಿ’ ಎಂದರೆ, ನೀವು ಸಾಧ್ಯವಿಲ್ಲವೆನ್ನುವಿರಿ. ಏಕೆಂದರೆ ಅಲ್ಲಿ ಶಾಂತಿಯಿಲ್ಲ.
ಶಾಂತಿಯಿಲ್ಲದಿದ್ದರೆ ಸಮೃದ್ಧಿಯಿಲ್ಲ ಮತ್ತು ಸಮೃದ್ಧಿಯಿಲ್ಲದಿದ್ದರೆ ಶಾಂತಿಯಿಲ್ಲ. ಶಾಂತಿ ಮತ್ತು ಸಮೃದ್ಧಿ ಒಂದಕ್ಕೊಂದು ಸಂಬಂಧಪಟ್ಟಿದೆ. ಸಮೃದ್ಧಿಯಿಂದ ಶಾಂತಿ ವ್ಯಾಪಿಸುತ್ತದೆ (ಯಾವಾಗಲೂ ಅಲ್ಲ), ಮತ್ತು ಶಾಂತಿಯಿಂದ ಸಮೃದ್ಧಿಯುಂಟಾಗುತ್ತದೆ.
ದೇಶದ 612 ಜಿಲ್ಲೆಗಳಲ್ಲಿ, 205 ಜಿಲ್ಲೆಗಳು ನಕ್ಸಲೈಟರಿಂದ ಬಾಧಿತಗೊಂಡಿವೆ ಹಾಗೂ ಈ ಜಿಲ್ಲೆಗಳು ಬಡತನದ ಬೇಗೆಯಲ್ಲಿವೆ. ಏಕೆ? ಶಾಂತಿಯಿಲ್ಲ. ಉಳಿದೆಲ್ಲ ಜಿಲ್ಲೆಗಳು ಸಮೃದ್ಧವಾಗಿವೆ.
ಮೊದಲಿಗೆ ಶಾಂತಿಯನ್ನು ತರಬೇಕು ನಂತರ ಸಮೃದ್ಧಿಯು ಅನುಸರಿಸುವುದು.

2. ವ್ಯಾಪಾರದಲ್ಲಿ ಆಸಕ್ತಿ

ಆಸಕ್ತಿ ಇರಲೇಬೇಕು; ಸವಾಲುಗಳನ್ನು ಎದುರಿಸುವ ಆಸಕ್ತಿ. ವ್ಯಾಪಾರವು ಸದಾ ಅಪಾಯವನ್ನು ತೆಗೆದುಕೊಳ್ಳುವುದಾಗಿರುತ್ತದೆ. ವ್ಯಾಪಾರ ಮಾಡಲು ಸವಾಲನ್ನು ಸ್ವೀಕರಿಸುವ ಸಾಮರ್ಥ್ಯವಿರಬೇಕು.

3. ಬಂಡವಾಳ ಮತ್ತಿತರ ಅಂಶಗಳು

ನಿಮಗೆ ಆಸಕ್ತಿಯಿದೆ ಆದರೆ ಸಲಕರಣೆಗಳೇ ಇಲ್ಲದಿದ್ದರೆ ಆಗ ನೀವು ಮುಂದೆ ಸಾಗಲು ಸಾಧ್ಯವಾಗುವುದಿಲ್ಲ.

4. ಕೌಶಲ್ಯ

ನಿಮ್ಮ ಬಳಿ ಎಲ್ಲ ಸಲಕರಣೆಗಳು ಇವೆ, ಸ್ಥಳವೂ ಸೂಕ್ತವಾಗಿದೆ ಆದರೆ ಕೌಶಲ್ಯವಿಲ್ಲದಿದ್ದರೆ, ನೀವು ಯಶಸ್ವಿಯಗುವುದಿಲ್ಲ.

5. ಯಾವುದೋ ಅಮೂರ್ತವಾದುದು, ಅದೃಷ್ಟವೆನ್ನುವರು.

ಕೇವಲ ಸ್ವಪರಿಶ್ರಮದಿಂದ ಸಮೃದ್ಧಿಯನ್ನು ಹೊಂದುವುದಾದರೆ, ಅನೇಕ ಜನರು ಪರಿಶ್ರಮಪಟ್ಟರೂ ಏಳಿಗೆಯಾಗುವುದಿಲ್ಲಏಕೆ?

ಬೆಂಗಳೂರಿನ ಕಮರ್ಷಿಯಲ್ ರಸ್ತೆಗೆ ಹೋದರೆ, ಅಲ್ಲಿ ಕೆಲವು ಅಂಗಡಿಗಳು ಬಹಳ ಏಳಿಗೆ ಹೊಂದಿದೆ, ಆದರೆ ಅವುಗಳ ಪಕ್ಕದಲ್ಲಿರುವ ಅಂಗಡಿಗಳು ನಷ್ಟ ಅನುಭವಿಸುತ್ತಿದೆ.

ನಮ್ಮೊಂದಿಗೆ ವಾಣಿಜ್ಯ ಮಂಡಳಿಯೂ ಸಹಮತಿಸುವುದು.

ಚಿಕ್ಕಪೇಟೆಯಲ್ಲೂ, ಒಂದು ಅಂಗಡಿಯು ಉತ್ತಮವಾಗಿ ವ್ಯಾಪಾರ ನಡೆಸುತ್ತಿದೆ ಮತ್ತು ಪಕ್ಕದ ಅಂಗಡಿಯು ದಿವಾಳಿಯಾಗುತ್ತಿದೆ.

ಒಂದು ಕಡೆ ಎಲ್ಲ ಆಭರಣಗಳ ಅಂಗಡಿ, ಒಂದು ಕಡೆ ಬಟ್ಟೆ ಅಂಗಡಿಗಳು, ಆದರೂ ಕೂಡ, ಒಂದೆಡೆ ವ್ಯಾಪಾರ ಉತ್ತಮವಾಗಿದೆ ಮತ್ತೊಂದೆಡೆ ನಷ್ಟವಾಗುತ್ತಿದೆ. ಇದು ಹೇಗೆ? ಯಾರಿಗೂ ಗೊತ್ತಿಲ್ಲ!

ಈ  ಅರಿವಿಲ್ಲದ ಕ್ಷೇತ್ರವೇ ಆಧ್ಯಾತ್ಮವೆಂಬುದು.

ನಾವು ನೋಡುವ ಇಡೀ ಲೌಕಿಕ ಜಗತ್ತು ಒಂದು ನಿರ್ದಿಷ್ಟವಾದ ಸ್ಪಂದನಾತ್ಮಕ ವಿಶ್ವದಿಂದ ನಡೆಯುತ್ತಿದೆ; ಅದು ನಾವು ನೋಡುವುದಕ್ಕಿಂತ ಬಹಳ ಸೂಕ್ಷ್ಮವಾಗಿದೆ. ಇಡೀ ವಿಶ್ವವು ಕಂಪನಗಳಿಂದ ಚಲಿಸುತ್ತಿದೆ.

ಎಷ್ಟೋ ಬಾರಿ ನೀವು ಯಾರನ್ನೋ ನೋಡಿದಾಗ ಅವರೊಂದಿಗೆ ಮಾತನಾಡುವ, ವ್ಯಾಪಾರ ಮಾಡುವ ಆಸೆಯಾಗುತ್ತದೆ; ಯಾರನ್ನೋ ನೋಡುತ್ತೀರ ಮತ್ತು ಕಾರಣವಿಲ್ಲದೇ ತಿರಸ್ಕಾರವುಂಟಾಗುತ್ತದೆ. ಅವರೊಂದಿಗೆ ವ್ಯಾಪಾರ ಮಾಡಲಿಚ್ಛಿಸುವುದಿಲ್ಲ. ಏಕೆ? ಇದಕ್ಕೆ ಕಾರಣ ನಿಮಗೇನೋ ಅನಿಸುತ್ತದೆ; ‘ನನಗೆ ಒಳ್ಳೆಯ ಸ್ಪಂದನೆ ಸಿಗುತ್ತಿಲ್ಲ’ ಎನ್ನುವಿರಿ.

ವಿಶ್ವವು  ಕಂಪನಗಳಿಂದ ನಡೆಯುತ್ತಿದೆ; ಸೂಕ್ಷ್ಮ ಜಗತ್ತಿನಿಂದ ನಡೆಯುತ್ತಿದೆ.

ಆದ್ದರಿಂದ, ಆಧ್ಯಾತ್ಮವು ಈ ಐದು ಅಂಶಗಳಿಗೆ ಸಂಬಂಧಿಸಿದೆ.

ಆಧ್ಯಾತ್ಮವು ಸಕಾರಾತ್ಮಕ ಶಕ್ತಿಯನ್ನು ವೃದ್ಧಿಸುತ್ತದೆ; ನಿಮ್ಮಲ್ಲಿರುವ ಕುಶಲತೆಯನ್ನು ಬೆಳಕಿಗೆ ತರುವುದು. ಸ್ವಲ್ಪ ಸಮಯದವರೆಗೆ ಶಾಂತತೆ ಹಾಗೂ ಮೌನ ನಿಮ್ಮ ಅಂತಃಸ್ಫುರಣೆಯನ್ನು ಜಾಗೃತಗೊಳಿಸಲು ಸಹಾಯಕವಾಗುವುದು.

ಬುದ್ಧಿವಂತಿಕೆ ಮತ್ತು ಅಂತಃಸ್ಫುರಣೆ -ಇವೆರಡೂ ಸಾಮರ್ಥ್ಯಗಳು ಆಧ್ಯಾತ್ಮದಿಂದ ಸಂಪನ್ನಗೊಳ್ಳುತ್ತವೆ.

ಪುನಃ, ಇಲ್ಲಿ ಆಧ್ಯಾತ್ಮವೆಂದರೆ ‘ಏನನ್ನೋ ಮಾಡುವುದಲ್ಲ’, ಬದಲಿಗೆ ‘ಶಾಂತ’ವಾಗಿರುವುದು. ಮನಸ್ಸನ್ನು ಶಾಂತವಾಗಲು ಬಿಡುವುದು; ಕೇಂದ್ರದಲ್ಲಿರುವುದು. ಆಂತರ್ಯದೊಳಗೆ ಆಳವಾಗಿ ಹೋಗುವುದು ಮತ್ತು ಜೀವನದ ಮೌಲ್ಯವನ್ನು ಸಂಪೂರ್ಣವಾಗಿ ಶ್ಲಾಘಿಸುವುದು; ಜೀವನವನ್ನು ಗೌರವಿಸುವುದು.

ಆಧ್ಯಾತ್ಮವು ಅಂತಃಸ್ಫುರಣೆಯನ್ನು ಹೆಚ್ಚಿಸುತ್ತದೆ ಮತ್ತು ಬುದ್ಧಿವಂತಿಕೆಯನ್ನು ತೀಕ್ಷ್ಣಗೊಳಿಸುತ್ತದೆ.

ನೋಡಿ, ನೀವು ಬಂಡವಾಳ ಹೂಡುವಾಗ, ಊಹಿಸುತ್ತೀರ, ಅಪಾಯವನ್ನು ತೆಗೆದುಕೊಳ್ಳುತ್ತೀರ. ಇಲ್ಲಿ ಅಂತಃಸ್ಫುರಣೆ ಮುಖ್ಯ. ಅಂತಃಸ್ಫುರಣೆಯೆಂದರೆ ಸೂಕ್ತ ಸಮಯದಲ್ಲಿ ಸೂಕ್ತ ಆಲೋಚನೆ, ಇದು ವ್ಯಾಪಾರದ ಯಶಸ್ಸಿಗೆ ಬಹಳ ಮುಖ್ಯವಾದ ಅಂಶ.

ನಿಮ್ಮ ಆಸಕ್ತಿಯನ್ನು ವಿರಕ್ತಿಯೊಂದಿಗೆ ಸರಿತೂಗಿಸಿದಾಗ ಅಂತಃಸ್ಫುರಣೆಯುಂಟಾಗುತ್ತದೆ; ನಿಮ್ಮ ಲಾಭವನ್ನು ಸೇವೆಯೊಂದಿಗೆ ಸರಿತೂಗಿಸಿದಾಗ; ಆಕ್ರಮಣಶೀಲತೆಯಿಂದ ವಸ್ತುಗಳನ್ನು ಪಡೆಯುವುದನ್ನು, ಸಮಾಜಕ್ಕೆ ಅನುಕಂಪದಿಂದ ಮರಳಿ ನೀಡುವುದರೊಂದಿಗೆ ಸರಿತೂಗಿಸಿದಾಗ ಅಂತಃಸ್ಫುರಣೆಯುಂಟಾಗುತ್ತದೆ.

ಆಕ್ರಮಣಶೀಲತೆಯೊಂದಿಗೆ ವ್ಯಾಪಾರ ನಡೆಸಲು ಉತ್ಸಾಹ ಇರಬಾರದೆಂದೇನಲ್ಲ, ಅಥವಾ ಬಹಳ ಶಾಂತ ಮತ್ತು ಮೃದು ಸ್ವಭಾವದವರಾಗಿರಬೇಕೆಂದಲ್ಲ.

ಮಾರಾಟಗಾರರಾಗಿ ನೀವು ಹೇಳುವಿರಿ, ‘ನನ್ನ ಉತ್ಪನ್ನ ಉತ್ತಮವಾಗಿದೆ ಆದರೆ ಇತರರ ವಸ್ತುಗಳೂ ಉತ್ತಮವಾಗಿವೆ’ ಆಗ ಅದು ಕೆಲಸ ಮಾಡುವುದಿಲ್ಲ.

ನೀವೆನ್ನಬಹುದು, ‘ನನ ಉತ್ಪನ್ನವೇ ಉತ್ತಮವಾದುದು’ ಆದರೆ ಅದೇ ವೇಳೆಗೆ ಇತರರನ್ನೂ ಅನುಕಂಪದಿಂದ ಕಾಣುವ, ನೈತಿಕತೆಯಿಂದ ಆದರಿಸುವುದೂ ಬಹಳ ಮುಖ್ಯ.

ಅಂತಃಸ್ಫುರಣೆ, ಬುದ್ಧಿವಂತಿಕೆಯ ತೀಕ್ಷಣತೆ, ಅರಿವು ಮತ್ತು ಸೂಕ್ಷ್ಮತೆ, ಅನುಕಂಪದೊಡನೆ ವೈರಾಗ್ಯ ಮತ್ತು ಆಸಕ್ತಿ ಇವೆಲ್ಲವೂ ಜೀವನವನ್ನು ಎಂಥ ಸಮಸ್ಥಿತಿಯಲ್ಲಿರಿಸುತ್ತದೆಯೆಂದರೆ, ವ್ಯಾಪಾರದಲ್ಲಿ ಲಾಭವಾಗಲಿ ನಷ್ಟವಾಗಲಿ, ನಮ್ಮ ಮುಗುಳ್ನಗೆಯನ್ನು ಸದಾ ಕಾದಿರಿಸುತ್ತದೆ. ಮುಗುಳ್ನಗೆಯೊಂದಿಗಿರುವುದೇ ಬಹಳ ಮುಖ್ಯ.

ನಿಮಗೆ ಏನೋ ನಷ್ಟವಾಗಿದ್ದರೆ, ಅದರೊಂದಿಗೆ ನಿಮ್ಮ ನಗೆಯನ್ನೂ ಏಕೆ ಕಳೆದುಕೊಳ್ಳುತ್ತೀರ?

ನೀವು ಷೇರ್ ಮಾರುಕಟ್ಟೆಯಲ್ಲಿ ಹಣ ಕಳೆದುಕೊಂಡಿದ್ದರೆ, ನಿಮ್ಮ ಮುಗುಳ್ನಗೆಯನ್ನಾದಾರೂ ನಿಮ್ಮಲ್ಲಿಟ್ಟುಕೊಳ್ಳಿ. ಇಲ್ಲದಿದ್ದರೆ ಅದು ಎರಡು ಪಟ್ಟು ನಷ್ಟವಾಗುತ್ತದೆ. ಮೂರನೆಯ ನಷ್ಟವೊಂದಾಗುವುದು, ಅದು ನಿಮ್ಮ ಆರೋಗ್ಯದ ಹಾನಿ.

ಸ್ವಹಿತಾಸಕ್ತಿ, ಪರಿಸರದ ಬಗ್ಗೆ ಹಾಗೂ ವ್ಯಾಪಾರದಲ್ಲಿ ನ್ಯಾಯಪರತೆಯ ಬಗ್ಗೆ ಕಾಳಜಿವಹಿಸುವುದು ಮುಖ್ಯ. ನಿಮ್ಮ ಕೆಳಗಿನವರು ನಿಮ್ಮನ್ನು ಮೋಸಗೊಳಿಸುವುದನ್ನು ಇಷ್ಟಪಡದ ಮೇಲೆ ನೀವೇಕೆ ಅವರನ್ನು ಮೋಸಗೊಳಿಸುವಿರಿ?

ನಿಮ್ಮ ಗ್ರಾಹಕರು ಅಥವಾ ಮಾರಾಟಗಾರರು ಮೋಸಗೊಳಿಸುವುದನ್ನು ಇಷ್ಟಪಡದ ಮೇಲೆ ನೀವೇಕೆ ಮೋಸಗೊಳಿಸುವಿರಿ?

ಇತರರು ನಿಮಗಿಷ್ಟವಾದುದನ್ನು  ಮಾಡಲಿಛ್ಛಿಸುವುದಿಲ್ಲವೆಂದ ಮೇಲೆ, ನೀವೂ ಸಹ ಅದನ್ನು ಇನ್ನೊಬ್ಬರಿಗೆ ಮಾಡಬಾರದು. ಈ ಮೂಲ ವಿಷಯವೇ ನೈತಿಕತೆಯ ನಿಯಮ. ‘ನನ್ನನ್ನು ಯಾರೂ ಮೋಸಗೊಳಿಸಲು ನಾನು ಬಯಸುವುದಿಲ್ಲ, ಆದ್ದರಿಂದ ನಾನು ಯಾರಿಗೂ ಮೋಸ ಮಾಡುವುದಿಲ್ಲ.’

ಈಗ ನೀವು, ‘ನೂರು ಪ್ರತಿಶತ ಸತ್ಯಪರರಗಿದ್ದು ವ್ಯಾಪಾರ ಮಾಡುವುದು ಹೇಗೆ ?’ ಎಂದು ಕೇಳಿದರೆ, ಅದು ಸಾಧ್ಯವೆಂದು ನಾವು ಹೇಳುವೆವು. ಅಂತಹ ಅನೇಕ ಉದಾಹರಣೆಗಳನ್ನು ಇಲ್ಲಿ ಕುಳಿತಿರುವವರಲ್ಲಿ ಕಾಣಬಹುದು. ಈ ಸಮಾವೇಶವು ಅಂತಹ ಧ್ಯೇಯಗಳನ್ನು ಜನರು ರೂಢಿಸಿಕೊಂಡಿರುವುದನ್ನು ಬೆಳಕಿಗೆ ತರುವುದು.  ಅದು ವ್ಯಾಪಾರದಲ್ಲಿ ಹೇಗೆ ನ್ಯಾಯಪರತೆಯು ಸಾಧ್ಯವೆಂಬುದನ್ನು ಉದಾಹರಣೆಯ ಮೂಲಕ ತಿಳಿಸುತ್ತದೆ.

ಸತ್ಯ ಹರಿಶ್ಚಂದ್ರರಾಗಲು ನಿಮ್ಮನ್ನು ಹೇಳುತ್ತಿಲ್ಲ.

ನಮ್ಮ ಪ್ರಾಚೀನ ಗ್ರಂಥಗಳಲ್ಲಿ, ವ್ಯಾಪಾರಸ್ಥರಿಗೆ ಸುಳ್ಳು ಹೇಳುವುದಕ್ಕೆ ಕೆಲವು ಮಿತಿಯಿರುತ್ತದೆ.

ಹೇಗೆಂದರೆ, ಒಬ್ಬ ಸಾಧು ಸುಳ್ಳು ಹೇಳಲೇಬಾರದು. ರಾಜನಾದವನು ತನ್ನ ರಾಜ್ಯದ ಸುರಕ್ಷತೆ ಮತ್ತು ಭದ್ರತೆಗಾಗಿ ಒಂದು ಪ್ರತಿಶತ ಸುಳ್ಳು ಹೇಳಬಹುದು. ವೈದ್ಯನು ಶೇಕಡ ಎರಡರಷ್ಟು ಸುಳ್ಳು ಹೇಳಬಹುದು. ಒಬ್ಬ ವ್ಯಕ್ತಿಯು ಮರಣಿಸುತ್ತಿರುವನೆಂದು ತಿಳಿದಿದ್ದರೂ, ‘ಚಿಂತಿಸಬೇಡಿ, ನಾನು ನಿಮ್ಮೊಂದಿಗಿದ್ದೇನೆ’ ಎನ್ನಬಹುದು. ಆದರೆ ಒಬ್ಬ ವ್ಯಾಪಾರಸ್ಥನು, ಮೂರು ಪ್ರತಿಶತ ಸುಳ್ಳು ಹೇಳಬಹುದು, ಅದಕ್ಕಿಂತ ಹೆಚ್ಚಿಗೆ ಇಲ್ಲವೆಂದು ತಿಳಿಸಲಾಗಿದೆ.

ಶೇಕಡ ಮೂರರಷ್ಟೆಂದರೆ ಆಹಾರದಲ್ಲಿ ಉಪ್ಪಿದ್ದಂತೆ. ಉಪ್ಪಿನಲ್ಲಿ ಆಹಾರ ಸೇವಿಸಲು ಸಾಧ್ಯವಿಲ್ಲ, ಆದರೆ ಆಹಾರದಲ್ಲಿ ಸ್ವಲ್ಪ ಉಪ್ಪು ಪರವಾಗಿಲ್ಲ. ಇವತ್ತು ಪರಿಸ್ಥಿತಿ ಹೇಗಿದೆಯೆಂದರೆ ಆಹಾರದಲ್ಲಿ ಉಪ್ಪಿರುವ ಬದಲು ಉಪ್ಪಿನಲ್ಲಿ ಆಹಾರವಿದೆ!

ಬೀರಬಲ್ಲನ ಕತೆಯೊಂದಿದೆ, ಅದನ್ನು ನಿಮ್ಮಲ್ಲಿ ಅನೇಕರು ಕೇಳಿರಬಹುದು.

ಒಮ್ಮೆ ಅಕ್ಬರನು ಸುಳ್ಳು ಹೇಳುವವರ ತಲೆಯನ್ನು ಕಡಿಯಲಾಗುವುದೆಂಬ ಕಾನೂನೊಂದನ್ನು ಹೊರಡಿಸಿದನು. ಅವನಿಗೆ ಗಲ್ಲು ಶಿಕ್ಷೆ ವಿಧಿಸಲಾಗುವುದು. ಇದನ್ನು ಕೇಳಿ, ಇಡೀ ದಿಲ್ಲಿಯು ನಡುಗಿತು; ಇ೦ದು ನಡುಗುತ್ತಿರುವ ಹಾಗೆ. ದಿಲ್ಲಿಯ ಇತಿಹಾಸವೇ ಕಂಪಿಸುವುದಿರಬೇಕು.

ಚಾಂದನಿ ಚೌಕದಲ್ಲಿ ಎಲ್ಲ ವ್ಯಾಪಾರಸ್ಥರು ನೆರೆದಿದ್ದರು. ‘ನಾವೆಲ್ಲರೂ ಗಲ್ಲು ಶಿಕ್ಷೆಗೊಳಗಾಗಬೇಕಾಗುವುದು ಏಕೆಂದರೆ ನಾವು ಸದಾ ನಮ್ಮ ಉತ್ಪನ್ನವೇ ಉತ್ತಮವೆಂದು, ಹಾಗಿಲ್ಲವೆಂದು ತಿಳಿದಿದ್ದರೂ, ಹೇಳುತ್ತೇವೆ. ಈಗ ಈ ಕಾನೂನು ನಮಗೆ ಆತ್ಮಹತ್ಯೆಯಂತಾಗಿದೆ.’

ನಂತರ ಜ್ಯೋತಿಷಿಗಳ ಸರದಿ ಬಂತು. ಅವರು ಇನ್ನೂ ಹೆಚ್ಚು ಚಿಂತಿತರಾಗಿದ್ದರು, ಏಕೆಂದರೆ ಅವರು ಊಹಿಸಿ ಭವಿಷ್ಯ ನುಡಿಯುತ್ತಿದ್ದರು, ಏನಾದರು ಕೆಡುಕಾದರೆ ಅವರೇನು ಮಾಡಬಲ್ಲರು? ಆದ್ದರಿಂದ ಜ್ಯೋತಿಷಿಗಳು ಕಷ್ಟದಲ್ಲಿ ಸಿಲುಕಿದ್ದರು.

ಅರ್ಚಕರು ಕಷ್ಟದಲ್ಲಿದ್ದರು, ವೈದ್ಯರು ಕಷ್ಟದಲ್ಲಿದ್ದರು, ಎಲ್ಲರೂ ಚಿಂತಿತರಾದರು ಏಕೆಂದರೆ ಈ ಕಾನೂನು ಅಸಂಬದ್ಧವಾಗಿದೆ. ನಂತರ ಅವರು, ‘ಬೀರಬಲ್, ನೀನೇ ನಮಗೆ ಸಹಾಯ ಮಾಡಬಲ್ಲೆ’ ಎಂದು ಕೇಳಿಕೊಂಡರು.

ಆದ್ದರಿಂದ ಬೀರಬಲ್ ರಾಜನ ಅರಮನೆಗೆ ಹೋದನು. ಕಾವಲುಗಾರರು ಅವನನ್ನು ತಡೆದು, ‘ಎಲ್ಲಿಗೆ ಹೋಗುತ್ತಿರುವೆ?’ ಎಂದು ಕೇಳಿದರು.

ಅವನು, ‘ನಾನು ನೇಣುಗಂಬವೇರುತ್ತಿರುವೆ, ನನ್ನನ್ನು ನೇಣು ಹಾಕುವರು’ ಎಂದನು. ಅದು ಸುಳ್ಳಾಗಿತ್ತು, ಏಕೆಂದರೆ ಅರಮನೆಯಲ್ಲಿ ಬಹಳ ಪ್ರಿಯವಾದ ವ್ಯಕ್ತಿಯನ್ನೇಕೆ ರಾಜನು ಶೂಲಕ್ಕೇರಿಸುವನು?

ಆದ್ದರಿಂದ ಅವನನ್ನು ರಾಜನ ಸಮ್ಮುಖದಲ್ಲಿ ನಿಲ್ಲಿಸಿ ಅವನು ಸುಳ್ಳು ಹೇಳಿದನೆಂದು ಹೇಳಲಾಯಿತು. ಈಗ, ಅವನನ್ನು ಶೂಲಕ್ಕೇರಿಸಿದರೆ ಅವನು ಹೇಳಿದ್ದು ನಿಜವಾಗುತ್ತಿತ್ತು. ನಿರಪರಾಧಿಯನ್ನು ಶಿಕ್ಷಿಸುವುದರಿಂದ ರಾಜನಿಗೆ ಕಳಂಕ ಬರುವುದು. ಅವನನ್ನು ಶಿಕ್ಷಿಸದಿದ್ದರೆ, ಕಾನೂನು  ಅಪ್ರಚಲಿತವಾಗುತ್ತಿತ್ತು.

ರಾಜನು ಗೊಂದಲಕ್ಕೀಡಾದನು. ಎಲ್ಲ ಪಂಡಿತರನ್ನು, ಮಂತ್ರಿಗಳನ್ನು ಕರೆದು ಕೇಳಿದನು. ನಂತರ ಬೀರಬಲ್ ಹೇಳಿದನು, ‘ಇದೇ ಅದು! ನೀವು ಏನು ನುಡಿಯುವಿರೋ ಅದು ಸತ್ಯವಲ್ಲ, ಉದ್ದೇಶವೇ ಸತ್ಯ.’

ಆದ್ದರಿಂದ ವ್ಯಾಪಾರಸ್ಥರು ಸ್ವಲ್ಪ ಸುಳ್ಳು ಹೇಳಬಹುದು ಇಲ್ಲದಿದ್ದರೆ ಯಾರೂ ಮಾರಲು ಸಾಧ್ಯವಾಗುವುದಿಲ್ಲ. ಯಾವ ವ್ಯಾಪಾರವೂ ಉಳಿಯುವುದಿಲ್ಲ. ಇವೆಲ್ಲ ನೈತಿಕತೆಯ ನಿಯಮಾವಳಿಗಳು.

ಇತರರು ನಿಮಗೇನು ಮಾಡಬಾರದೋ, ಅದನ್ನು ನೀವು ಇತರರಿಗೆ ಮಾಡಬೇಡಿ.

ಪ್ರಪಂಚವು ಹೋಳುಗಳಲ್ಲಿಲ್ಲ. ಸಮಾಜವು ಬಿಗಿಯಾದ ಕಕ್ಷೆಗಳಲ್ಲಿಲ್ಲ, ಆಧ್ಯಾತ್ಮ ಮತ್ತು ನೈತಿಕತೆಯು ಮಾನವನ ಅವಿಭಾಜ್ಯ ಅಂಗ.

ಚಾರಿತ್ರ್ಯವನ್ನು ಬೆಳೆಸುವುದು ಆಧ್ಯಾತ್ಮ, ಯಾರಿಗೆ ತಾನೆ ಸಚ್ಚರಿತ್ರರು ತಮ್ಮ ಕೆಲಸದಲ್ಲಿ ಬೇಕಿಲ್ಲ? ವ್ಯಾಪಾರವೆಂದರೆ ಜನರು, ಅಲ್ಲವೇ? ಜನರೊಡನೆ ನಿಮ್ಮ ಕೆಲಸವಿರುವುದು ಮತ್ತು ನಿಮ್ಮಲ್ಲಿ ಕೆಲಸ ಮಾಡುವವರು ಸಂದರ್ಭಗಳಲ್ಲಿ ಪ್ರಾಮಾಣಿಕತೆ, ಸತ್ಯತೆ, ನೇರ ಸ್ವಭಾವ ಮತ್ತು ಕೌಶಲ್ಯದಿಂದ ನಿಭಾಯಿಸುವುದು ನಿಮಗೆ ಬೇಡವೇ?

ಪ್ರತಿಯೊಂದು ವ್ಯಾಪಾರ ಮತ್ತು ಸಂಸ್ಥೆಯಲ್ಲಿ ಕಠಿಣ ಸನ್ನಿವೇಶಗಳು ಬರುತ್ತವೆ. ಅದನ್ನು ನಿಭಾಯಿಸಲು ಕೌಶಲ್ಯ ಬೇಕು. ಇವೆಲ್ಲವೂ ನಮ್ಮ ಆಂತರ್ಯದ ಸ್ಥಾನದಿಂದ ಬರುತ್ತದೆ, ಅದನ್ನು ಆಧ್ಯಾತ್ಮದ ಸ್ಥಾನವೆನ್ನುವರು.

ಆದ್ದರಿಂದ ಆಧ್ಯಾತ್ಮ, ವ್ಯಾಪಾರ, ರಾಜಕೀಯ, ಸೇವಾ ಚಟುವಟಿಕೆಗಳು ಎಲ್ಲವೂ ಸಮಗ್ರ ಜೀವನವನ್ನು ರೂಪಿಸುತ್ತದೆ. ಇವುಗಳಲ್ಲಿ ಯಾವುದಾದರೊಂದು ಇಲ್ಲವಾದರೂ, ಆನಂದವಲ್ಲ, ಅವ್ಯವಸ್ಥೆಯುಂಟಾಗುವುದು.

ಭಾರತದಲ್ಲಿ ವ್ಯಾಪಾರೋದ್ಯಮವನ್ನು ಕೆಲವು ಕ್ಷೇತ್ರಗಳಲ್ಲಿ ಇನ್ನೂ ಬಳಸದೇ ಇದ್ದು, ಅವುಗಳನ್ನು ನಿಮ್ಮೆಲ್ಲರ ಗಮನಕ್ಕೆ ತರಲಿಚ್ಛಿಸುತ್ತೇನೆ. ಅವುಗಳಲ್ಲಿ ಒಂದು ಪ್ರವಾಸೋದ್ಯಮ. ಭಾರತದಲ್ಲಿ ಜನರು ಭೇಟಿ ನೀಡಲು ಬಯಸುವ ಅನೇಕ ಪ್ರವಾಸೀ ತಾಣಗಳಿವೆ, ಹಲವಾರು ಪ್ರಾಚೀನ ಸ್ಥಳಗಳಿವೆ. ಆದರೆ ಪ್ರವಾಸೋದ್ಯಮವನ್ನು ಹೆಚ್ಚು ಅಧ್ಯಯನ ಮಾಡಿಲ್ಲ.

ಮತ್ತೊಂದು ಕ್ಷೇತ್ರ, ಉಡುಪುಗಳು. ಇಲ್ಲಿ ಭಾರತದಲ್ಲಿ ಉಡುಪುಗಳು ಬಹಳ ವಿಶಿಷ್ಠವಾಗಿವೆ.

ಮೂರನೆಯದು ಆಹಾರದ ಉದ್ಯಮ. ಭಾರತದಲ್ಲಿ ಪ್ರವಾಸ ಮಾಡಿದರೆ, ಪ್ರತಿ ಮೈಲಿ ಅಥವಾ ಕಿಲೋಮೀಟರ್‍ಗಳಿಗೂ ವಿವಿಧ ಬಗೆಯ ತಿನಿಸುಗಳನ್ನು ನೋಡಬಹುದು.   ಒಮ್ಮೆ ಕುತೂಹಲದಿಂದ ನಾವು, ‘ಭಾರತದಲ್ಲಿ ಸಸ್ಯಾಹಾರ ಮೇಳವನ್ನು ಆಯೋಜಿಸೋಣ’ ಎಂದೆವು. ನಿಮಗೆ ಗೊತ್ತೇ, 5600 ಬಗೆಯ ಭಕ್ಷ್ಯಗಳನ್ನು ತಯಾರಿಸಿದ್ದರು. ಏಳು ಟನ್‍ಗಳಷ್ಟು ಬಗೆ ಬಗೆಯ ತಿನಿಸುಗಳನ್ನು ಸ್ವಯಂಸೇವಕರು ತಯಾರಿಸಿದ್ದರು.

ಅಹಮದಾಬಾದ್‍ನಲ್ಲಿ ಅನ್ನ ಬ್ರಹ್ಮ ಕಾರ್ಯಕ್ರಮವನ್ನು ಆಯೋಜಿಸಿದ್ದೆವು ಮತ್ತು ತಯಾರಿಸಿದ್ದ ಬಹಳಷ್ಟು ಭಕ್ಷ್ಯಗಳನ್ನು ಹಿಂದೆಂದೂ ಕೇಳಿರಲಿಲ್ಲ.

ನೀವು ತ್ರಿಪುರಾಗೆ ಹೋದರೆ, ಸಾಮಾನ್ಯ ಜನರಿಗೆ ತಿಳಿಯದ ಸುಮಾರು 40ರಿಂದ 50 ತರಹದ ಭಕ್ಷ್ಯಗಳಿರುವುದು. ಹಾಗೆಯೇ, ಕರ್ನಾಟಕದಲ್ಲೂ, ಕೆಲವು ವಿಶೇಷ ಭಕ್ಷ್ಯಗಳಿವೆ, ಒಬ್ಬಟ್ಟು, ಚಟ್ನಿಪುಡಿ, ಗೊಜ್ಜು, ವಿಳ್ಳೆಕಾಯಿ, ಜನರು ಇವುಗಳನ್ನು ಇಷ್ಟಪಡುವರು.

ಆಹಾರ ಉದ್ಯಮವನ್ನು ಸಾಧ್ಯವಾದಷ್ಟು ಉತ್ತಮವಾಗಿ ಪ್ರಚಾರಪಡಿಸಿಲ್ಲ.

ನಾಲ್ಕನೆಯ ಕ್ಷೇತ್ರ, ಆಭರಣಗಳು.

ನಂತರ 5000 ವರ್ಷಗಳಷ್ಟು ಪುರಾತನವಾದ ಆಯುರ್ವೇದ ವೈದ್ಯಶಾಸ್ತ್ರ; ಆಯುರ್ವೇದ ಮತ್ತು ಗಿಡಮೂಲಿಕೆಗಳು, ಶಿರೋಧಾರ ಮತ್ತು ಅಭ್ಯಂಗ ಮಾಲೀಶು ಇತ್ಯಾದಿಗಳು ಪ್ರವರ್ಧಮಾನವಾಗುತ್ತಿವೆ.

ಆಯುರ್ವೇದ ಸುವ್ಯವಸ್ಥಿತ ಶಾಸ್ತ್ರ. ಇದನ್ನು 21ನೇ ಶತಮಾನದ ವೈದ್ಯಶಾಸ್ತ್ರವೆನ್ನಬಹುದು. ಇದನ್ನು ಹಲವಾರು ಜನರು ಮೆಚ್ಚಿಕೊಂಡಿದ್ದು ವಿಶ್ವದಾದ್ಯಂತ ಸ್ಪಾಗಳಲ್ಲಿ ಬಹಳ ಯಶಸ್ವಿಯಾಗುತ್ತಿದೆ. ಆದರೆ ಇದನ್ನು ಇನ್ನಷ್ಟು ಪ್ರಸಿದ್ಧಿಗೊಳಿಸಬೇಕು.

ನಂತರ, ಯೋಗ, ಆಧ್ಯಾತ್ಮ ಮತ್ತು ವೇದಾಂತದ ಜ್ಞಾನ.

ಏಳನೆಯದು ಮಾಹಿತಿ ಮತ್ತು ತಂತ್ರಜ್ಞಾನದ ಉದ್ಯಮ. ಭಾರತವು ಇವತ್ತು ಪ್ರಖ್ಯಾತಿಯಾಗಿರುವುದು ಇದರಿಂದ. ಮಾಹಿತಿ ಮತ್ತು ತಂತ್ರಜ್ಞಾನದಿಂದ ಪ್ರಾರಂಭವಾಗಿ, ಯೋಗ ಮತ್ತು ಧ್ಯಾನವೂ ಇಡೀ ಜಗತ್ತಿನಲ್ಲಿ ಪ್ರಸಿದ್ಧಿಯನ್ನು ಹೊಂದಿದೆ. ಯು.ಎಸ್. ದೇಶವೊಂದರಲ್ಲೇ, ಯೋಗ, 27 ಬಿಲಿಯನ್ ಡಾಲರ್ ಉದ್ಯಮವಾಗಿದೆಯೆಂದು ತಿಳಿಸಲಾಗಿದೆ.

ಕರ್ನಾಟಕದ ವಾಣಿಜ್ಯ ಮತ್ತು ಉದ್ಯಮ ಮಂಡಳಿಯು ಇವೆಲ್ಲಾ ಕ್ಷೇತ್ರಗಳಲ್ಲಿ ಸಂಶೋಧನೆ ನಡೆಸಬಹುದು. ಇವತ್ತು ರಷ್ಯಾ, ನೇಪಾಳ ಮತ್ತು ಇನ್ನೂ ಅನೇಕ ದೇಶಗಳಿಂದ ಆಗಮಿಸಿರುವ ವ್ಯಾಪಾರಸ್ಥರು ನಮ್ಮೊಂದಿಗಿದ್ದಾರೆ. ನಾವೆಲ್ಲರೂ ಒಟ್ಟಾಗಿ ಕುಳಿತು ಪ್ರಪಂಚದ ಪ್ರತಿಯೊಂದು ಭಾಗದಲ್ಲೂ ಹೇಗೆ ಸಮೃದ್ಧಿಯನ್ನು ತರಬಹುದೆಂದು ಸಮಾಲೋಚಿಸಿದರೆ ಒಳ್ಳೆಯದು, ನಮಗೆ ಮತ್ತು ನಿಮಗಷ್ಟೇ ಅಲ್ಲ, ಎಲ್ಲರಿಗೂ ಒಳಿತಾಗುವುದು.

ಈ ಕೆಲವು ಮಾತುಗಳೊಂದಿಗೆ, ನಾವು ನಿಮ್ಮೆಲ್ಲರನ್ನು ಮತ್ತೊಮ್ಮೆ ಅಭಿನಂದಿಸುತ್ತೇವೆ. ದೇವರು ನಿಮ್ಮೆಲ್ಲರನ್ನೂ ಹರಸಲಿ.

ಗುರುವಾರ, ಫೆಬ್ರವರಿ 7, 2013

ಅನುಸರಣೆಯಿರುವಲ್ಲಿ ಆನ೦ದವಿದೆ

೭ ಫೆಬ್ರುವರಿ ೨೦೧೩
ಬೆಂಗಳೂರು

ನಾವು ಏನನ್ನು ನೋಡುವೆವೋ ಅದು, ಏನಿರುವುದೋ ಅದರ ಕೇವಲ ಹತ್ತರಲ್ಲಿ ಒಂದು ಭಾಗದಷ್ಟು ಮಾತ್ರವಾಗಿದೆ.
ಸೂಕ್ಷ್ಮ ಸೃಷ್ಟಿಯು ಸ್ಥೂಲ ಸೃಷ್ಟಿಯನ್ನು ಆಳುತ್ತದೆ. ಸೂಕ್ಷ್ಮ ಸೃಷ್ಟಿಯು ಕೇವಲ ಕಂಪನಗಳಿಂದ ತುಂಬಿದೆ. ಸ್ಥೂಲವನ್ನು ಆಳುವುದು ಸೂಕ್ಷ್ಮವಾಗಿದೆ ಮತ್ತು ಎಲ್ಲಾ ಮಾಹಿತಿಯೂ ಸೂಕ್ಷ್ಮದಲ್ಲಿ ಹುದುಗಿದೆ.
ಇದು ಬಹಳ ಮೋಹಕವಾದುದು - ಆಕಾಶವು ಎಲ್ಲಾ ಮಾಹಿತಿ ಮತ್ತು ಚೈತನ್ಯವನ್ನು ಒಳಗೊಂಡಿದೆ.
ಸೂರ್ಯನು ಶಕ್ತಿಯ ಒಂದು ಮೂಲವೆಂದು ನಾವು ಹೇಳುತ್ತೇವೆ, ಆದರೆ ಸೂರ್ಯನ ಸುತ್ತಲಿರುವ ಆಕಾಶವು ಒಂದು ದಶಲಕ್ಷ ಪಟ್ಟು ಹೆಚ್ಚು ಶಕ್ತಿಯನ್ನು ಹೊಂದಿದೆ, ಮತ್ತು ಎಷ್ಟೋ ಹೆಚ್ಚು ಶಕ್ತಿಶಾಲಿಯಾಗಿದೆ.
ಮೂರು ರೀತಿಯ ಆಕಾಶಗಳಿವೆ:
೧. ಬಾಹ್ಯಾಕಾಶ
೨. ಆಲೋಚನೆಗಳು ಮತ್ತು ಭಾವನೆಗಳು ಸಾಗುವ ಮನಸ್ಸಿನ ಆಂತರಿಕ  ಆಕಾಶ ಮತ್ತು
೩. ಈ ಎರಡನ್ನು ಮೀರಿದ ಒಂದು ಆಕಾಶ; ನಿಶ್ಚಲವಾಗಿರುವ ಒಂದು ಆಕಾಶ.
ಆದುದರಿಂದ ನಿಮ್ಮೊಳಗೆ ಒಂದು ಶಕ್ತಿಯ ಮನೆಯಿದೆ. ನೀವೊಂದು ನಡೆದಾಡುವ ಶಕ್ತಿ ಮನೆಯಾಗಿರುವಿರಿ.

ಪ್ರಶ್ನೆ: ನನ್ನ ಅತ್ತೆಯೊಂದಿಗಿನ ನನ್ನ ಸಂಬಂಧವನ್ನು ಸುಧಾರಿಸಲು ದಯವಿಟ್ಟು ನನಗೆ ಕೆಲವು ಸಲಹೆಗಳನ್ನು ನೀಡಿ.
ಶ್ರೀ ಶ್ರೀ ರವಿ ಶಂಕರ್: ಕೇಳು, ನಿನ್ನ ತಾಯಿಗಾಗಿ ನಿನ್ನಲ್ಲೊಂದು ಬೇರೆಯ ಅಳತೆಗೋಲಿದೆ  ಮತ್ತು ನಿನ್ನ ಅತ್ತೆಗಾಗಿ ಬೇರೊಂದು ಅಳತೆಗೋಲಿದೆ. ಈಗ, ನೀನು ಯಾಕೆ ಹಾಗೆ ಮಾಡುವೆ?
ನಿನ್ನ ತಾಯಿಯು ನಿನಗೆ ಬೈಯುತ್ತಿದ್ದಾಗ, ಅದು ನಿನ್ನನ್ನು ನಿಜವಾಗಿ ತಟ್ಟಲಿಲ್ಲ. ನಿನ್ನ ತಾಯಿಯು ನಿನ್ನ ಮೇಲೆ ರೇಗಾಡುವಾಗ ಅಥವಾ ನಿನ್ನನ್ನು ಬೈಯುವಾಗ ನೀನು ದಪ್ಪ ಚರ್ಮದವಳಾಗುವೆ. ಆದರೆ ನಿನ್ನ ಅತ್ತೆಯು ನಿನ್ನನ್ನು ಬೈಯುವಾಗ, ಅದು ನಿನ್ನನ್ನು ಬಹಳ ಆಳವಾಗಿ ಅಲ್ಲಾಡಿಸುವುದು, ಅಲ್ಲವೇ?
ನಿಮ್ಮಲ್ಲಿ ಎಷ್ಟು ಮಂದಿಗೆ ಈ ಅನುಭವವಿದೆ? ಹೇಳಿ! ನಿಮ್ಮಲ್ಲಿ ಕೆಲವರಿಗೆ ಕೈಗಳನ್ನು ಮೇಲೆತ್ತಲು ನಾಚಿಕೆಯಾಗುತ್ತಿದೆ.
ನೋಡಿ, ನಾವು ಎರಡು ಮಾನದಂಡಗಳನ್ನು ಹೊಂದಿದ್ದೇವೆ, ಒಂದು ನಮ್ಮ ತಾಯಿಗೆ ಮತ್ತು ಒಂದು ನಮ್ಮ ಅತ್ತೆಗೆ. ನಿಮ್ಮ ತಾಯಿಯ ಕಡೆಗಿರುವ ಅದೇ ಮಾನದಂಡವನ್ನು ನೀವು ನಿಮ್ಮ ಅತ್ತೆಯ ಕಡೆಗೆ ಹೊಂದಿದ್ದರೆ, ಆಗ ಸಮಸ್ಯೆಯು ದೂರವಾಗುತ್ತದೆ.
ಎರಡನೆಯ ಸಲಹೆಯೆಂದರೆ, ಕೇವಲ ಅವಳೊಂದಿಗೆ ವಾದಿಸಬೇಡಿರಿ. ಅವಳನ್ನು ಪ್ರೀತಿಯಿಂದ ಗೆಲ್ಲಿರಿ. ಅವಳೇನೇ ಹೇಳಲಿ, ನೀವು ’ಹೌದು’ ಎಂದು ಹೇಳಿದರೆ, ನಿಮಗೇನಾಗುತ್ತದೆ?  ವಾದಗಳು ಮತ್ತು ಅಪಾರ್ಥಗಳು ಆಗುವುದು, ಎರಡೂ ಭಾಗದವರು ಜಗಳವಾಡಲು ಸಹಕರಿಸುವಾಗ. ಒಂದು ಭಾಗದವರು ಜಗಳವಾಡಲು ಸಹಕರಿಸದಿದ್ದರೆ, ಅಲ್ಲಿ ಯಾವುದೇ ವಾದಗಳಿರುವುದಿಲ್ಲ.
ನಿಮ್ಮ ಅತ್ತೆಯು, "ಇದು ಬಹಳ ಬಿಸಿಯಾಗಿದೆ" ಎಂದು ಹೇಳಿದರೆ, ನೀವು, "ಹೌದು ಅತ್ತೆ, ಅದು ಬಿಸಿಯಾಗಿದೆ" ಎಂದು ಹೇಳಿ.
ಅವರು, "ಹಗಲೆಂದರೆ ರಾತ್ರಿ ಮತ್ತು ರಾತ್ರಿಯೆಂದರೆ ಹಗಲು" ಎಂದು ಹೇಳಿದರೆ, "ಹೌದು ಅತ್ತೆ, ನೀವು ಹೇಳುವುದು ಸರಿ. ನಾನು ನೀವು ಹೇಳುವುದನ್ನು ಸಂಪೂರ್ಣವಾಗಿ ಒಪ್ಪುತ್ತೇನೆ" ಎಂದು ಹೇಳಿ.
ಸ್ವಲ್ಪ ಕಾಲ ಅವರನ್ನು ಅನುಸರಿಸಿಕೊಂಡಿರಿ ಮತ್ತು ನಂತರ ನೀವವರನ್ನು ಜಯಿಸಬಲ್ಲಿರಿ ಎಂಬುದು ನಿಮಗೆ ಕಂಡುಬರುತ್ತದೆ.
ಆದುದರಿಂದ, ಅವರನ್ನು ಪ್ರೀತಿ ಮತ್ತು ಒಪ್ಪಿಗೆಯೊಂದಿಗೆ ಜಯಿಸಿ.
ನೋಡಿ, ನೀವು ಒಪ್ಪುವಾಗ, ಯಾರಾದರೂ ನಿಮ್ಮೊಂದಿಗೆ ಜಗಳವಾಡಲು ಹೇಗೆ ಸಾಧ್ಯ? ಒಳಗಿನಿಂದ ಮೃದುವಾಗಿ. ಇದು ಕುಶಲತೆ.
ಆದುದರಿಂದ ನೀವು ಮೊದಲು ಇದನ್ನು ಪ್ರಯತ್ನಿಸಿ ಮತ್ತು ನಂತರ ನನಗೆ ಹೇಳಿ.
ಅತ್ತೆ ಮತ್ತು ಸೊಸೆಯ ನಡುವಿನ ಈ ಸಮಸ್ಯೆಯು ಒಂದು ಪ್ರಾಚೀನವಾದ, ಅನಂತವಾದ  ಸಮಸ್ಯೆಯೆಂದು ನಾನು ಹೇಳುತ್ತೇನೆ.
ಆಶ್ರಮದಲ್ಲಿ ಒಂದು ಸಾಮಾನ್ಯ ನಿಯಮವಿದೆ; ನೀವು ನಿಮ್ಮ ಸಮಸ್ಯೆಗಳನ್ನು ಇಲ್ಲಿಗೆ ತರಬಹುದು, ಆದರೆ ನೀವು ಅವುಗಳನ್ನು ನಿಮ್ಮೊಂದಿಗೆ ಹಿಂದೆ ಕೊಂಡೊಯ್ಯುವಂತಿಲ್ಲ.
ಆದುದರಿಂದ ಒಬ್ಬಳು ಮಹಿಳೆಯು ಎದ್ದು ನಿಂತು ಹೇಳಿದಳು, "ಹಾಗಾದರೆ ನಾನು ನನ್ನ ಅತ್ತೆಯನ್ನು ಇಲ್ಲಿ ಬಿಟ್ಟು ಹೋಗಬಹುದೇ?"
ನಾನಂದೆ, "ಮೊದಲು ನಾನು ನಿನ್ನ ಅತ್ತೆಯನ್ನು ಕೇಳುತ್ತೇನೆ, ಅವಳ ಸಮಸ್ಯೆಯೇನೆಂದು."
ಜನರನ್ನು ಮತ್ತು ವಸ್ತುಗಳನ್ನು ತೊಲಗಿಸುವುದು ಉತ್ತರವಲ್ಲ, ಆದರೆ ಅವುಗಳೊಂದಿಗೆ ಕುಶಲತೆಯಿಂದ ವ್ಯವಹರಿಸುವುದು ಉತ್ತರವಾಗಿದೆ, ಮತ್ತು ಮೌನವು ಎಲ್ಲಾ ಕುಶಲತೆಗಳ ತಾಯಿಯಾಗಿದೆ - ಗೊಣಗುಟ್ಟುವ ಈ ಮನಸ್ಸನ್ನು ಕೆಲವು ನಿಮಿಷಗಳ ಆಳವಾದ ಧ್ಯಾನದೊಂದಿಗೆ ಮೌನಗೊಳಿಸುವುದು. ಆಗ ಎಲ್ಲವೂ ಬದಲಾಗುವುದು ಎಂಬುದನ್ನು ನೀವು ಕಂಡುಕೊಳ್ಳುವಿರಿ.

ಪ್ರಶ್ನೆ: ಗುರುದೇವ, ನನಗೆ, ವಿಷಯಗಳನ್ನು ತಿರುಚುವ, ಅನೈತಿಕತೆಯಿಂದ ಕೂಡಿದ ಮತ್ತು ಕೆಲಸ ಮಾಡಲು ಬಹಳ ಕಷ್ಟವಾಗುವಂತಹ ಒಬ್ಬರು ಮೇಲಾಧಿಕಾರಿಯಿದ್ದಾರೆ. ನಾನೊಬ್ಬ ನಿಷ್ಠಾವಂತ ನೌಕರ. ಆದರೆ ನನಗೆ ನನ್ನ ಮೇಲಾಧಿಕಾರಿಯೊಂದಿಗೆ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ, ನಾನೇನು ಮಾಡಬೇಕು?
ಶ್ರೀ ಶ್ರೀ ರವಿ ಶಂಕರ್: ಪುನಃ ನಾನು ನಿನಗೆ ಹೇಳುತ್ತಿದ್ದೇನೆ, ಇದೆಲ್ಲವೂ ಕಂಪನಗಳ ವಿಷಯ.
ನೀನು ಗಮನಿಸಿರುವೆಯಾ, ಯಾವುದೇ ಕಾರಣವಿಲ್ಲದೆಯೇ, ಕೆಲವು ಜನರ ಬಗ್ಗೆ ನಿನಗೆ ತಿರಸ್ಕಾರವುಂಟಾಗುತ್ತದೆ ಮತ್ತು ಯಾವುದೇ ಕಾರಣವಿಲ್ಲದೆಯೇ ಕೆಲವು ಜನರ ಕಡೆಗೆ ನಿನಗೆ ಸೆಳೆತವುಂಟಾಗುತ್ತದೆ. ಅದು ಮಾತನಾಡುವುದು ನಮ್ಮ ಕಂಪನಗಳಾಗಿವೆ, ಜನರ ಮನಸ್ಸುಗಳನ್ನು ಬದಲಾಯಿಸುವುದು ನಮ್ಮ ಕಂಪನಗಳಾಗಿವೆ. ಯೋಚನೆಗಳು ಮತ್ತು ಭಾವನೆಗಳು ಬದಲಾಗುವುದು ಕಂಪನಗಳ ಮೂಲಕವಾಗಿದೆ. ಆದುದರಿಂದ ನೀನು ಶಕ್ತಿಶಾಲಿಯಾಗಿರು.
ಹಾಗೆಯೇ, ಮೇಲಾಧಿಕಾರಿಯು ಕಠೋರವಾಗಿದ್ದಷ್ಟೂ ನೀವು ಹೆಚ್ಚು ಕುಶಲರಾಗಬಹುದು. ಅದು ನೀವು ಮೊದಲೆಂದೂ ನೋಡಿರದ ಕುಶಲತೆಗಳನ್ನು ನಿಮ್ಮಿಂದ ಹೊರತರುತ್ತದೆ.
ನೇರವಾಗಿರುವುದು ಬಹಳ ಸುಲಭ, ಆದರೆ ಕುಶಲತಾಪೂರ್ವಕವಾಗಿ ನೀವು ನಿಜವಾಗಿ ಹೇಳಬಯಸುವುದನ್ನು ಹೇಳಲು ಸಾಧ್ಯವಾದರೆ ಅದು ಹೆಚ್ಚು ಮೆಚ್ಚುವಂತಹದ್ದು. ಆದುದರಿಂದ ನೀವು ಆ ಕುಶಲತೆಗಳನ್ನು ಬೆಳೆಸಿಕೊಳ್ಳಬಹುದು.
ಮೌನವು, ಮಾತುಕತೆಯಲ್ಲಿ ಕುಶಲತೆಯನ್ನು ತರಬಲ್ಲದು.
ಕೋಪಗೊಳ್ಳುವ ಪ್ರತಿ ವ್ಯಕ್ತಿಯ ಬಳಿಯೂ ತಮ್ಮ ಕೋಪಕ್ಕೆ ಸ್ವಲ್ಪ ಸಮರ್ಥನೆ ಇರುತ್ತದೆ. ತಾವು ಸರಿಯೆಂದು ಅವರು ಯೋಚಿಸುತ್ತಾರೆ. ನಾನು ಹೇಳುತ್ತಿರುವುದು ನಿಮಗೆ ತಿಳಿಯುತ್ತಿದೆಯೇ?
ಕೋಪದ ಹಿಂದೆ, ನ್ಯಾಯಕ್ಕಾಗಿ ಬೇಡಿಕೆ ಮತ್ತು ಅನ್ಯಾಯದ ಕಡೆಗೆ ಅಸಹನೆಯಿರುತ್ತದೆ. ಆದುದರಿಂದ ಕೋಪವು ಒಳ್ಳೆಯದು, ಅದು ಆವಶ್ಯಕವಾದುದು, ಆದರೆ ನೀವು ಎಚ್ಚೆತ್ತುಕೊಳ್ಳುವಂತೆ ಮಾಡಲು ಮಾತ್ರ. ಅದರ ನಂತರ ಕೋಪಕ್ಕೆ ಸೃಜನಶೀಲತೆಯ ಒಂದು ದಿಕ್ಕನ್ನು ನೀಡಬೇಕಾಗುತ್ತದೆ, ಇಲ್ಲವಾದರೆ ಅದೇ ಕೋಪವು ನಿಮ್ಮನ್ನು ಸುಟ್ಟುಹಾಕಬಲ್ಲದು.
ಮನೆಯಲ್ಲಿ ಒಂದು ಒಲೆಯಿರುವುದು ಒಳ್ಳೆಯದು. ಒಬ್ಬರ ಮನೆಯಲ್ಲಿ ಬೆಂಕಿಯಿರಬೇಕು, ಆದರೆ ಮನೆಗೆ ಬೆಂಕಿ ಹಿಡಿಯಬಾರದು.
ಕಳೆದ ಭಾನುವಾರ ನಾನು ದಿಲ್ಲಿಯಲ್ಲಿದ್ದೆ ಮತ್ತು ರಾಮ್ ಲೀಲಾ ಮೈದಾನದಲ್ಲಿ ಸುಮಾರು ೧೦೦,೦೦೦ ಯುವಜನರಿದ್ದರು. ನಾನಂದೆ, "ಕಡೆಗೂ ದೇಶದ ಎಲ್ಲಾ ಯುವಜನರು ಒಂದು ಅಪರಾಧದ ವಿರುದ್ಧ ಎದ್ದುನಿಂತಿರುವುದಕ್ಕೆ ನನಗೆ ಸಂತೋಷವಾಗುತ್ತಿದೆ. ದಿಲ್ಲಿಯ ಜನರಲ್ಲಿ ಬಹಳಷ್ಟು ಕ್ರೋಧವಿದೆ, ಆದರೆ ಈ ಕ್ರೋಧವು ಒಂದು ಸರಿಯಾದ ದಿಕ್ಕಿನಲ್ಲಿ ಪ್ರವಹಿಸುವಂತೆ ಮಾಡಬೇಕು."
ನಾನು ಹೇಳುತ್ತಿರುವುದು ನಿಮಗೆ ಅರ್ಥವಾಗುತ್ತಿದೆಯೇ? ಕ್ರೋಧವು ಆವಶ್ಯಕವಾಗಿದೆ, ಒಬ್ಬನು ಅನ್ಯಾಯದ ವಿರುದ್ಧ ಎದ್ದುನಿಲ್ಲಬೇಕು, ಆದರೆ ಆ ಕ್ರೋಧವನ್ನು ಕುಶಲತಾಪೂರ್ವಕವಾಗಿ ಪ್ರವಹಿಸಬೇಕು, ಇಲ್ಲವಾದರೆ ಅದು ಅವ್ಯವಸ್ಥೆಯನ್ನು ಸೃಷ್ಟಿಸುವುದು.

ಪ್ರಶ್ನೆ: ಪ್ರೀತಿಯ ಗುರುದೇವ, ಆತ್ಮಸಾಕ್ಷಾತ್ಕಾರದ ಸ್ಥಿತಿಯನ್ನು ಅನುಭವಿಸಲು ಗುರುವಿರುವುದು ಕಡ್ಡಾಯವೇ?
ಶ್ರೀ ಶ್ರೀ ರವಿ ಶಂಕರ್: ನೀನು ಈ ಪ್ರಶ್ನೆಯನ್ನು ಕೇಳುವುದು ಮತ್ತು ನಾನು ಅದಕ್ಕೆ ಉತ್ತರಿಸುವುದು ಆವಶ್ಯಕವೇ? ನೀನು ಪ್ರಶ್ನೆಯನ್ನು ಕೇಳಿರುವೆ, ಈಗ ನಾನು ಉತ್ತರಿಸಿದರೆ, ಆಗ ನಾವು ಸಿಕ್ಕಿಬೀಳುತ್ತೇವೆ! ತಿಳಿಯಿತೇ?
ನೀನೊಂದು ಪ್ರಶ್ನೆಯನ್ನು ಕೇಳಿದರೆ ಮತ್ತು ನನಗೆ ಅದರ ಉತ್ತರ ತಿಳಿದಿದೆಯೆಂದು ನೀನು ಯೋಚಿಸಿದರೆ, ಆಗ ನಾನು ಅದಾಗಲೇ ಒಬ್ಬ ಗುರುವಾದೆನು ಮತ್ತು ನೀನು ಅದಾಗಲೇ ಒಬ್ಬ ಶಿಷ್ಯನಾದೆ.
ಕೆಲವು ಜನರನ್ನುತ್ತಾರೆ, "ನಾನೊಬ್ಬ ಗುರುವಲ್ಲ" ಮತ್ತು ಇತರ ಕೆಲವರು ಹೇಳುತ್ತಾರೆ, "ನಾನೊಬ್ಬ ವಿದ್ಯಾರ್ಥಿಯಲ್ಲ". ಇದು, "ನಾನೊಬ್ಬ ವೈದ್ಯನಲ್ಲ, ಆದರೆ ಹೇಗಿದ್ದರೂ ನಾನು ನಿನಗೆ ಸ್ವಲ್ಪ ಔಷಧಿಯನ್ನು ನೀಡುವೆ" ಎಂದು ಹೇಳುವಂತೆ. ಅಥವಾ ಒಬ್ಬರು, "ನಾನೊಬ್ಬ ರೋಗಿಯಲ್ಲ, ಆದರೆ ನನಗೆ ಸ್ವಲ್ಪ ಔಷಧಿ ಬೇಕು" ಎಂದು ಹೇಳುವಂತೆ. ಈ ಎರಡೂ ವ್ಯಾಖ್ಯಾನಗಳಿಗೆ ಯಾವುದೇ ಅರ್ಥವಿಲ್ಲ.
ನೋಡಿ, ಸ್ವಲ್ಪ ಮಾರ್ಗದರ್ಶನದ ಅಗತ್ಯವಿದೆ. ಗುರುವೊಬ್ಬ ವ್ಯಕ್ತಿಯಲ್ಲ, ಅದು ಜ್ಞಾನ, ಅದೊಂದು ಪ್ರಕಾಶ, ಅದೊಂದು ಶಕ್ತಿ, ಅದು ಪ್ರೇಮ; ಇದೆಲ್ಲವೂ ಸೇರಿದುದು. ಆಧ್ಯಾತ್ಮದಂತಹ ಬಹಳ ಸೂಕ್ಷ್ಮವಾದುದೊಂದಕ್ಕೆ ಸ್ವಲ್ಪ ಮಾರ್ಗದರ್ಶನದ ಅಗತ್ಯವಿದೆ.
ನಿಮ್ಮ ಮನಸ್ಸು ಬಹಳ ಸ್ಥಿರವಾಗಿರುವಾಗ, ನಿಮಗೆ ಎಲ್ಲಾ ಮಾರ್ಗದರ್ಶನವನ್ನು ಪಡೆಯಲು ಸಾಧ್ಯವಿದೆ. ಆದರೆ ಮನಸ್ಸು ಸ್ಥಿರವಾಗಿಲ್ಲದಿರುವಾಗ, ಯಾರ ಮನಸ್ಸು ಸಂಪೂರ್ಣವಾಗಿ ಸ್ಥಿರವಾಗಿರುವುದೋ ಅವರಿಂದ ಮಾರ್ಗದರ್ಶನವನ್ನು ಪಡೆಯುವುದು ಒಳ್ಳೆಯದು.

ಪ್ರಶ್ನೆ: ಗುರುದೇವ, ಕೃಷ್ಣ ಪರಮಾತ್ಮನಲ್ಲಿ ೧೬ ಗುಣಗಳಿವೆಯೆಂಬುದಾಗಿ ನೀವು ಉಲ್ಲೇಖಿಸಿರುವಿರಿ. ನನ್ನಲ್ಲಿ ಕೂಡಾ ಈ ಎಲ್ಲಾ ೧೬ ಗುಣಗಳು ಎಲ್ಲೋ ಇವೆಯೇ? ಹೌದಾದರೆ, ಅವುಗಳನ್ನು ನಾನು ಹೊರತರುವುದು ಹೇಗೆ?
ಶ್ರೀ ಶ್ರೀ ರವಿ ಶಂಕರ್: ಹೌದು, ಪ್ರತಿಯೊಬ್ಬರಲ್ಲೂ ಈ ಎಲ್ಲಾ ೧೬ ಗುಣಗಳು ಇವೆ ಮತ್ತು ನೀವು ಹೆಚ್ಚು ಕೇಂದ್ರಿತರಾದಷ್ಟೂ, ನೀವು ಹೆಚ್ಚು ಅನುರಾಗ ಹಾಗೂ ಸಹಾನುಭೂತಿ ಹೊಂದಿದಷ್ಟೂ, ಅವುಗಳು ಹೆಚ್ಚು ಪ್ರಕಟವಾಗುತ್ತವೆ.

ಪ್ರಶ್ನೆ: ಗುರುದೇವ, ಇವತ್ತು ಭಾರತದಲ್ಲಿ ಎರಡು ಭಾಗಗಳಿವೆ, ಒಂದು ಗ್ರಾಮೀಣ ಭಾರತ ಮತ್ತು ಇನ್ನೊಂದು ನಗರ ಭಾರತ. ಇವುಗಳೆರಡರ ನಡುವೆ ಒಂದು ಸಂತುಲನವನ್ನು ತರುವುದು ಹೇಗೆ?
ಶ್ರೀ ಶ್ರೀ ರವಿ ಶಂಕರ್: ಗ್ರಾಮೀಣ ಭಾರತಕ್ಕೆ ತನ್ನದೇ ಆದ ಅನನ್ಯ ಗುಣಗಳಿವೆ, ಅದನ್ನು ಸಂರಕ್ಷಿಸಬೇಕಾಗಿದೆ ಮತ್ತು ಜನರ ಆತ್ಮಗೌರವಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು. ಸಾಧಾರಣವಾಗಿ ಗ್ರಾಮೀಣ ಜನರ ಆತ್ಮಗೌರವವು ಕಡಿಮೆಯಾಗುತ್ತದೆ ಮತ್ತು ಅವರು ನಗರದ ಯುವಕರು ಏನು ಮಾಡುವರೋ ಅದನ್ನು ಅನುಕರಿಸಲು ಬಯಸುತ್ತಾರೆ, ಅದರ ಅಗತ್ಯವೇ ಇಲ್ಲ.
ನೀವವರಿಗೆ ತಮ್ಮ ಘನತೆ ಗೌರವಗಳನ್ನು ನೀಡಬೇಕು ಮತ್ತು ಅವರು ವಸ್ತ್ರ ಧರಿಸುವ ರೀತಿ ಹಾಗೂ ಅವರು ಸೇವಿಸುವ ಆಹಾರವೆಲ್ಲವೂ ಸರಿಯೆಂದು ಅವರಿಗೆ ಹೇಳಬೇಕು. ಅವರು ತಾವು ಬಯಸುವ ಯಾವುದೇ ಆರೋಗ್ಯಕರ ಅಭ್ಯಾಸಗಳನ್ನು ಬೇಕಾದರೂ ಅನುಸರಿಸಬಹುದು.
ನಾನು ಜಾರ್ಖಂಡ್ ಮತ್ತು ಚತ್ತೀಸ್ ಗಢದಲ್ಲಿ ಕೆಲವು ಬುಡಕಟ್ಟಿನ ಪ್ರದೇಶಗಳಿಗೆ ಹೋಗಿದ್ದೇನೆ ಮತ್ತು ಅವರು ತಮ್ಮ ಹಳ್ಳಿಯನ್ನು ಸಂಪೂರ್ಣವಾಗಿ ಸ್ವಚ್ಛವಾಗಿರಿಸುವರೆಂಬುದನ್ನು ನೋಡಿ ನಿಮಗೆ ಅಚ್ಚರಿಯಾಗುತ್ತದೆ. ಅಲ್ಲೆಲ್ಲೂ ಯಾವುದೇ ಕಸವನ್ನು ಹಾಕಿರುವುದಿಲ್ಲ.
ಈ ಆದಿವಾಸಿ ಪ್ರದೇಶಗಳಲ್ಲಿ, ಅವರಿಗೆ ವಿದ್ಯುತ್ ಪೂರೈಕೆಯಿಲ್ಲ, ಆದರೆ ಅವರು ತಮ್ಮ ಚಿಕ್ಕ ಹಳ್ಳಿಗಳನ್ನು ಬಹಳ ಸ್ವಚ್ಛವಾಗಿರಿಸಿಕೊಂಡಿರುವರು. ಪ್ರತಿಯೊಂದು ಮನೆಯೂ ಬಹಳ ಸ್ವಚ್ಛವಾಗಿರಿಸಲ್ಪಟ್ಟಿದೆ. ನಿಮಗೆ ಅಲ್ಲಿ ಇಲ್ಲಿ ಚರಂಡಿಗಳು ಕಾಣಸಿಗುವುದಿಲ್ಲ, ಅದು ಯಾವುದೂ ಇಲ್ಲ.
ಅದು ಕಾಡಿನಂತಿದೆ. ನೀವು ನೋಡಿದರೆ, ಕಾಡು ಬಹಳ ಸ್ವಚ್ಛವಾಗಿರುತ್ತದೆ. ಹಲವಾರು ಪ್ರಾಣಿಗಳು ಸಾಯುವುದಾದರೂ ಸಹ ನಿಮಗೆ ಕಾಡಿನಲ್ಲಿ ನಿರ್ಜೀವ ಶರೀರಗಳು ಕಾಣಸಿಗುವುದಿಲ್ಲ. ಪ್ರಕೃತಿಯು ಹೇಗೋ ಒಂದು ಸಂತುಲನವನ್ನು ಉಳಿಸಿಕೊಳ್ಳುತ್ತದೆ.
ಅದೇ ರೀತಿಯಲ್ಲಿ, ಸಾಕ್ಷರತೆಯು ಬಹುತೇಕ ಸೊನ್ನೆಯಾಗಿರುವ ಆದಿವಾಸಿ ಪ್ರದೇಶಗಳು ಮತ್ತು ಆದಿವಾಸಿ ಜನರು, ಅವರಲ್ಲಿ ಪರಿಸರವನ್ನು ಸಂರಕ್ಷಿಸುವ ಹಾಗೂ ಸ್ವಚ್ಛತೆಯ ಆ ವಿವೇಕವಿದೆ, ಇದನ್ನು ನಗರದ ಜನರು ಕಲಿಯಬೇಕಾಗಿದೆ.
ಖಂಡಿತಾ ಈ ಆದಿವಾಸಿ ಪ್ರದೇಶಗಳಲ್ಲಿ ನಾವು ಹಲವಾರು ಶಾಲೆಗಳನ್ನು ಹೊಂದಿದ್ದೇವೆ. ಅಲ್ಲಿ ೩೦,೦೦೦ಕ್ಕೂ ಹೆಚ್ಚು ಮಕ್ಕಳು ಕಲಿಯುತ್ತಿದ್ದಾರೆ. ಈ ಶಾಲೆಗಳು ಎಷ್ಟು ದೂರದ ಪ್ರದೇಶಗಳಲ್ಲಿವೆಯೆಂದರೆ, ಅಲ್ಲಿಗೆ ನೀವು ನಡಿಗೆಯ ಮೂಲಕ ಮಾತ್ರ ಹೋಗಲು ಸಾಧ್ಯ; ಅಲ್ಲಿ ಯಾವುದೇ ರಸ್ತೆಗಳಿಲ್ಲ. ಹಾಗೂ ಈ ಆದಿವಾಸಿ ಜನರಲ್ಲಿ ಎಷ್ಟೊಂದು ಸ್ಪಂದನವಿದೆ; ಒಂದು ನಿರ್ದಿಷ್ಟ ಆನಂದ; ಅದು ನಿಜಕ್ಕೂ ಗಮನಿಸಲು ಯೋಗ್ಯವಾದುದು.

ಪ್ರಶ್ನೆ: ನಾನು ಮೃದುವಾಗಿ ಮತ್ತು ನಮ್ರನಾಗಿ ಎರಡೂ ಆಗಿರುವುದು ಹಾಗೂ ಅದೇ ಸಮಯದಲ್ಲಿ ಅಧಿಕಾರಯುಕ್ತನಾಗಿರುವುದು  ಹೇಗೆ?
ಶ್ರೀ ಶ್ರೀ ರವಿ ಶಂಕರ್: ನೀನದನ್ನು ಮಾಡಲು ಬಯಸುವೆಯಾ? ನಿನಗದನ್ನು ಮಾಡಲು ಸಾಧ್ಯವಿದೆ!
ಬಲಶಾಲಿಯಾಗಿರುವುದಕ್ಕಾಗಿ ನೀನು ಆಕ್ರಮಣಕಾರಿಯಾಗಿರಬೇಕಾಗಿಲ್ಲ ಮತ್ತು ಮೃದುವಾಗಿರುವುದಕ್ಕಾಗಿ ನೀನು ಬಲಹೀನನಾಗಿರಬೇಕಾಗಿಲ್ಲ. ಅವುಗಳು ವಿರುದ್ಧ ಗುಣಗಳೆಂದು ಮತ್ತು ಅವುಗಳಲ್ಲಿ ಒಂದನ್ನು ಮಾತ್ರ ನಾವು ಹೊಂದಿರಲು ಸಾಧ್ಯವೆಂದು ನಾವು ಯೋಚಿಸುತ್ತೇವೆ; ಇಲ್ಲ! ನಾನು ಹೇಳುವುದೇನೆಂದರೆ, ನಿಮಗೆ ಎರಡನ್ನೂ ಹೊಂದಿರಲು ಸಾಧ್ಯ. ನೀವು ವಿವೇಚನಾಯುಕ್ತ ಹಾಗೂ ಸಂವೇದನಾಶೀಲರಾಗಿರಲು ಸಾಧ್ಯ.
ಹೆಚ್ಚಾಗಿ ಸಂವೇದನಾಶೀಲರಾಗಿರುವ ಜನರು ವಿವೇಕಿಗಳಾಗಿರುವುದಿಲ್ಲ ಮತ್ತು ಯಾರು ಬಹಳ ವಿವೇಕಿಗಳಾಗಿರುವರೋ ಅವರು ಸಂವೇದನಾಶೀಲರಾಗಿರುವುದಿಲ್ಲ. ಆದರೆ ನಿಮ್ಮಲ್ಲಿ ವಿವೇಕ ಮತ್ತು ಸಂವೇದನಾಶೀಲತೆ ಎರಡನ್ನೂ ಜೋಡಿಸುವ ಮಹತ್ತರ ಸಾಮರ್ಥ್ಯವಿದೆ. ಕುಶಲತೆಯೆಂದರೆ ಅದು ಮತ್ತು ಧ್ಯಾನ ಇದಕ್ಕಿರುವ ಉತ್ತರವಾಗಿದೆ. ಧ್ಯಾನ ಮಾಡಿ!

ಪ್ರಶ್ನೆ: ಒಂದು ಜಪಮಾಲೆಯಲ್ಲಿ ೧೦೮ ಮಣಿಗಳಿರುವುದರ ಕಾರಣವೇನು? ಇದಕ್ಕೇನಾದರೂ ಮಹತ್ವವಿದೆಯೇ?
ಶ್ರೀ ಶ್ರೀ ರವಿ ಶಂಕರ್: ಭಾರತೀಯ ಜ್ಯೋತಿಷ್ಯದ ಪ್ರಕಾರ ೧೨ ನಕ್ಷತ್ರ ಪುಂಜಗಳು ಮತ್ತು ಒಂಭತ್ತು ಗ್ರಹಗಳಿವೆ. ೧೨ ನಕ್ಷತ್ರ ಪುಂಜಗಳಲ್ಲಿ ಸಂಚರಿಸುವ ಒಂಭತ್ತು ಗ್ರಹಗಳು ೧೦೮ ವಿವಿಧ ರೀತಿಯ ಬದಲಾವಣೆಗಳನ್ನು ತರಬಲ್ಲವು. ಆದುದರಿಂದ ೧೦೮ ಮಣಿಗಳಿರುವುದು ಯಾವುದೇ ಬದಲಾವಣೆಗಳ ಯಾವುದೇ ಉಪದ್ರವಕಾರಿ ಪರಿಣಾಮಗಳನ್ನು ತೊಡೆದುಹಾಕುವುದಕ್ಕಾಗಿ.

ಪ್ರಶ್ನೆ: ಭಾರತದಂತಹ ಒಂದು ದೇಶದಲ್ಲಿ, ವಿಶೇಷವಾಗಿ ನಾನು ವಾಸಿಸುತ್ತಿರುವ ಮುಂಬೈಯಲ್ಲಿ ಎಷ್ಟೊಂದು ಅಸಮಾನತೆಯಿದೆಯೆಂದರೆ, ನನ್ನಲ್ಲೇನಿರುವುದೋ ಅದಕ್ಕಾಗಿ ನನಗೆ ಮುಜುಗರ ಹಾಗೂ ತಪ್ಪಿತಸ್ಥ ಭಾವನೆಯುಂಟಾಗುತ್ತದೆ. ಹಾಗಿದ್ದರೂ ನನಗೆ ಹಣ ಸಂಪಾದಿಸುವ ಮತ್ತು ಚೆನ್ನಾಗಿ ಜೀವಿಸುವ ಆಕಾಂಕ್ಷೆಯಿದೆ. ಈ ಎರಡು ವಿಷಯಗಳ ನಡುವೆ ರಾಜಿ ಮಾಡಿಕೊಳ್ಳುವುದು ಹೇಗೆ?
ಶ್ರೀ ಶ್ರೀ ರವಿ ಶಂಕರ್: ಒಂದಲ್ಲ ಒಂದು ಸೇವಾಕಾರ್ಯದಲ್ಲಿ ನಿನ್ನನ್ನು ತೊಡಗಿಸು. ಏನೋ ಒಂದು ನಿನ್ನನ್ನು ಚುಚ್ಚುತ್ತಿರುವುದು ಒಳ್ಳೆಯದು. ಸಮಾಜಕ್ಕಾಗಿ ಏನಾದರೂ ಒಳ್ಳೆಯದನ್ನು ಮಾಡಲು ಅದುವೇ ನಿನ್ನನ್ನು ಪ್ರೇರೇಪಿಸುತ್ತದೆ. ನೀನು ಸಂಪಾದಿಸುವುದರಲ್ಲಿ ೨% ಅಥವಾ ೩%ವನ್ನು ದಾನಕ್ಕಾಗಿ ಮುಡಿಪಾಗಿಡು, ಯಾಕೆಂದರೆ ನಾವು ಸಂಪಾದಿಸುವುದೆಲ್ಲವನ್ನೂ ನಾವು ನಮಗಾಗಿಯೇ ಉಪಯೋಗಿಸಿದರೆ, ಆಗ ಅದು ಒಳ್ಳೆಯದಲ್ಲ. ನಾವು ಖಂಡಿತವಾಗಿಯೂ ಅಹಿತವನ್ನು ಅನುಭವಿಸುತ್ತೇವೆ. ಆದುದರಿಂದ ನಾವು ೧೦% ಅಥವಾ ೫%, ನಿಮಗೆಷ್ಟು ಸಾಧ್ಯವೋ ಅಷ್ಟನ್ನು ಸಾಮಾಜಿಕ ಕಾರಣಗಳಿಗಾಗಿ ಮುಡಿಪಾಗಿಡಬೇಕು ಮತ್ತು ಹೋಗಿ ಮಕ್ಕಳಿಗೆ ಹಾಗೂ ಕೊಳೆಗೇರಿಗಳಲ್ಲಿರುವ ಜನರಿಗೆ ಸಹಾಯ ಮಾಡಬೇಕು.
ಧಾರಾವಿಯಲ್ಲಿ ಬಹಳಷ್ಟು ಚಟುವಟಿಕೆಗಳು ನಡೆಯುತ್ತಿವೆ, ನೀನದರ ಭಾಗವಾಗಬಹುದು. ಈ ಚಿಕ್ಕ ಮಕ್ಕಳು ವಿದ್ಯಾವಂತರಾಗಿ ಬೆಳೆಯುವುದನ್ನು ನೋಡುವಾಗ ನಿನಗೆ ಅಪಾರ ತೃಪ್ತಿಯುಂಟಾಗುವುದು. ಒಂದು ಹಿತಕರವಾದ ಮನೆ ಮತ್ತು ಒಂದು ಒಳ್ಳೆಯ ಕಾರಿರುವುದರ ಬಗ್ಗೆ ನೀನು ತಪ್ಪಿತಸ್ಥ ಭಾವನೆ ಹೊಂದಬೇಕಾದ ಅಗತ್ಯವಿಲ್ಲ.

ಪ್ರಶ್ನೆ: ಬಹಳ ಭ್ರಷ್ಟವಾಗಿರುವ ಮತ್ತು ನಿಮ್ಮ ಎಲ್ಲಾ ವ್ಯವಹಾರಗಳ ಮೇಲೆ ಭ್ರಷ್ಟರು ಮೇಲುಗೈ ಹೊಂದುತ್ತಿರುವಾಗ,  ಒಂದು ವ್ಯಪಾರೀ ಜಗತ್ತಿನಲ್ಲಿ ನಲ್ಲಿ ಸ್ಪರ್ಧಿಸುವುದು ಹೇಗೆ?
ಶ್ರೀ ಶ್ರೀ ರವಿ ಶಂಕರ್: ಒಬ್ಬ ವ್ಯಕ್ತಿಗೆ ಒಬ್ಬಂಟಿಯಾಗಿ ಭ್ರಷ್ಟಾಚಾರದ ವಿರುದ್ಧ ಹೋರಾಡಲು ಕಷ್ಟವಾಗುತ್ತದೆ, ಅದು ಕೂಡಾ ಒಬ್ಬ ವ್ಯಾಪಾರಿಗೆ. ಒಬ್ಬ ಸನ್ಯಾಸಿಗೆ ಅದು ಸುಲಭ, ಯಾಕೆಂದರೆ ಒಬ್ಬ ಸನ್ಯಾಸಿಗೆ ಕಳಕೊಳ್ಳಲು ಏನೂ ಇರುವುದಿಲ್ಲ, ಆದರೆ ಒಬ್ಬ ವ್ಯಾಪಾರಿಗೆ ಅದು ಕಷ್ಟ ಮತ್ತು ಅದಕ್ಕಾಗಿಯೇ ನಿಮಗೆ ನಾಗರಿಕ ಸಮಾಜದ ಅಗತ್ಯವಿರುವುದು. ನಾಗರಿಕ ಸಮಾಜವು ಒಂದು ಗುಂಪಿನಲ್ಲಿ ಒಟ್ಟಾದಾಗ, ಅವರು ಭ್ರಷ್ಟಾಚಾರದ ವಿರುದ್ಧ ಸುಲಭವಾಗಿ ಕ್ರಮ ಕೈಗೊಳ್ಳಬಹುದು.
ನಾನು ನಿಮಗೊಂದು ಉದಾಹರಣೆಯನ್ನು ಹೇಳುತ್ತೇನೆ. ಅದು ಏನಾಯಿತೆಂದರೆ, ಮಹಾರಾಷ್ಟ್ರದ ಅಹ್ಮದ್ ನಗರದಲ್ಲಿ, ಒಂದು ರಸ್ತೆಯು ಕೇವಲ ಕಾಗದದಲ್ಲಿ ಮಾತ್ರವಿತ್ತು, ಆದರೆ ವಾಸ್ತವವಾಗಿ ಅಲ್ಲಿ ಯಾವುದೇ ರಸ್ತೆಯಿರಲಿಲ್ಲ. ಹಾಗೆ ನಮ್ಮ ಆರ್ಟ್ ಆಫ್ ಲಿವಿಂಗಿನ ೫೦ ಯುವಕರು ಒಟ್ಟು ಸೇರಿ ಪುರಸಭಾಧ್ಯಕ್ಷರ ಕಛೇರಿಗೆ ಹೋದರು. ಅವರು ಮಾಡಿದ ಮೊದಲ ಕೆಲಸವೆಂದರೆ, ಪುರಸಭಾಧ್ಯಕ್ಷರಿಗೆ ಮುಗುಳ್ನಗೆಯನ್ನು ಬೀರಿದುದು. ಅವರೆಲ್ಲರೂ ಮುಗುಳ್ನಗೆಯೊಂದಿಗೆ ಪುರಸಭಾಧ್ಯಕ್ಷರ ಮುಂದೆ ಕುಳಿತರು ಮತ್ತು, "ಮೇಡಂ, ಈ ರಸ್ತೆಯನ್ನು ಯಾವಾಗ ಮಾಡಲಾಗುವುದೆಂದು ದಯವಿಟ್ಟು ನಮಗೆ ಹೇಳಿ. ದಯವಿಟ್ಟು ನಮಗೆ ದಿನಾಂಕವನ್ನು ನೀಡಿ. ನೀವು ದಿನಾಂಕವನ್ನು ಹೇಳುವವರೆಗೆ ನಾವು ಇಲ್ಲಿಂದ ಹೋಗುವುದಿಲ್ಲ" ಎಂದು ಹೇಳಿದರು.
ಪುರಸಭಾಧ್ಯಕ್ಷರು ನಡುಗಿ ಹೋದರು ಮತ್ತು ಅವರಂದರು, "ಹೌದು ಅದನ್ನು ಮಾಡಲಾಗುವುದು", ಮತ್ತು ೨೪ ಗಂಟೆಗಳಲ್ಲಿ ರಸ್ತೆಯು ಮಾಡಲ್ಪಟ್ಟಿತು.
ಅದೇ ರೀತಿಯಲ್ಲಿ ಹೈದರಾಬಾದಿನಲ್ಲಿ ಒಂದು ಕಾರ್ಖಾನೆಯನ್ನು ಮಾಡುತ್ತಿದ್ದ ಕೆಲವು ಯುವ ಉದ್ಯಮಿಗಳಿಗೆ ತಮ್ಮ ಕಾರ್ಖಾನೆಗೆ ಒಂದು ಪರವಾನಗಿ ಬೇಕಾಗಿತ್ತು ಮತ್ತು ಅವರು ಸಂಪರ್ಕಿಸಿದ ಪ್ರತಿಯೊಬ್ಬ ಪರಿಶೀಲನಾಧಿಕಾರಿಯೂ ಲಂಚವನ್ನು ಕೇಳುತ್ತಿದ್ದರು. ಈಗ ಇವರಂದರು, "ನೋಡಿ, ನಾವು ಯಾವುದೇ ಲಂಚವನ್ನು ಕೊಡುವುದೂ ಇಲ್ಲ ತೆಗೆದುಕೊಳ್ಳುವುದೂ ಇಲ್ಲವೆಂದು ಒಂದು ಪ್ರತಿಜ್ಞೆಯನ್ನು ತೆಗೆದುಕೊಂಡಿದ್ದೇವೆ. ನೀವು ನಮ್ಮನ್ನು ೫೦ ಸಲ ಬೇಕಾದರೂ ಇಲ್ಲಿಗೆ  ಬರಲು ಹೇಳಬಹುದು ಮತ್ತು ನಾವು ಬರುವೆವು, ಆದರೆ ನಾವು ಒಂದು ರೂಪಾಯಿ ಕೂಡಾ ಲಂಚ ಕೊಡುವುದಿಲ್ಲವೆಂಬುದನ್ನು ದಯವಿಟ್ಟು ಖಚಿತಪಡಿಸಿಕೊಳ್ಳಿ."
ಯುವಕರ ಈ ನಿರ್ಧಾರವನ್ನು ನೋಡಿ, ಅವರಿಗೆ ಬೇಕಿದ್ದ ಎಲ್ಲಾ ಹತ್ತು ಪರವಾನಗಿಗಳನ್ನೂ ಅವರು ನೀಡಿದರು. ಆ ಕೈಗಾರಿಕಾ ಉದ್ಯಾನದಲ್ಲಿ ಇತರರೆಲ್ಲರೂ ಅಚ್ಚರಿಗೊಂಡರು. ಅವರಂದರು, "ಈ ಪರವಾನಗಿಗಳನ್ನು ಪಡೆಯಲು ನಾವು ಎರಡು ವರ್ಷಗಳಿಂದ ಪ್ರಯತ್ನಿಸುತ್ತಿದ್ದೇವೆ ಮತ್ತು ನಮಗದು ಸಿಗಲಿಲ್ಲ, ಈ ಮೂರು ಹುಡುಗರಿಗೆ ಅದು ಹೇಗೆ ಎಲ್ಲಾ ಪರವಾನಗಿಗಳು ಸಿಕ್ಕವು?"
ಆದುದರಿಂದ, ಒಮ್ಮೆ ನಾವು ನಿರ್ಧಾರ ಹೊಂದಿದರೆ, ನಾವು ವ್ಯವಸ್ಥೆಯನ್ನು ಬದಲಾಯಿಸಬಹುದು, ನಾವೊಂದು ಬದಲಾವಣೆಯನ್ನು ತರಬಹುದು. ಯುವಕರಾಗಿ ನಿಮ್ಮ ಮನಸ್ಸಿನಲ್ಲಿ ಈ ನಿರ್ಧಾರ ಇರಬೇಕು, "ನಾನೊಂದು ಬದಲಾವಣೆಯನ್ನು ತರಲು ಸಾಧ್ಯವಿದೆ." ನೀವು, "ಪ್ರಪಂಚವು ಭ್ರಷ್ಟವಾಗಿದೆ ಮತ್ತು ಅದು ಬದಲಾಗದು ಹಾಗೂ ಯಾವುದೂ ಯಾವತ್ತೂ ಬದಲಾಗದು" ಎಂದು ಯೋಚಿಸಿದರೆ, ಆಗ ನಿಮ್ಮದೇ ಯೋಚನೆ ಮತ್ತು ನಿಮ್ಮದೇ ಕಂಪನವು ನಿಮ್ಮ ಸುತ್ತಲೂ ಈ ರೀತಿಯ ಪರಿಸ್ಥಿತಿಗಳನ್ನು ತರುವುದು. ಆದುದರಿಂದ ನೀವೊಂದು ಆದರ್ಶಾತ್ಮಕ ಕನಸನ್ನು ಹೊಂದಬೇಕು ಮತ್ತು ನಂತರ ಸಂಗತಿಗಳು ಆಗುತ್ತವೆಯೆಂಬುದು ನಿಮಗೆ ಕಂಡುಬರುವುದು.
ಪುನಃ ನಾನು ನಿಮಗೆ ಹೇಳುತ್ತಿದ್ದೇನೆ, ಭ್ರಷ್ಟಾಚಾರದ ವಿರುದ್ಧ ಒಂಟಿಯಾಗಿ ಹೋರಾಡುವುದು ಕಷ್ಟ. ಭ್ರಷ್ಟಾಚಾರದ ವಿರುದ್ಧ ಹೋರಾಡಲು ನೀವು ಒಂದು ಗುಂಪಿನಲ್ಲಿ ಕೆಲಸ ಮಾಡಬೇಕು.

ಪ್ರಶ್ನೆ: ಕೆಲವೊಮ್ಮೆ ವರ್ಷಗಳ ಕಾಲದ ಪ್ರಯತ್ನವು ವಿಫಲತೆಯಲ್ಲಿ ಕೊನೆಯಾಗುತ್ತದೆ. ಅಂತಹ ಪರಿಸ್ಥಿತಿಗಳಲ್ಲಿ ಏನು ಮಾಡುವುದು?
ಶ್ರೀ ಶ್ರೀ ರವಿ ಶಂಕರ್: ಕೇವಲ ಮುಂದೆ ಸಾಗುತ್ತಿರಿ. ಪ್ರತಿಯೊಂದು ಸೋಲು ಕೂಡಾ ಕಲಿಯಲಿರುವ ಒಂದು ಪಾಠವಾಗಿದೆ. ಧ್ಯಾನ ಮಾಡಿ. ಕೆಲವು ನಿಮಿಷಗಳ ಆಳವಾದ ಧ್ಯಾನವು ನಿಮ್ಮನ್ನು ನಿಮ್ಮೊಳಗೆ ಆಳದಲ್ಲಿರುವ ಅಂತಃಸ್ಫುರಣೆಯ ಸಾಗರದೊಂದಿಗೆ ಜೋಡಿಸುವುದು. ಪ್ರತಿಯೊಂದು ನಿರ್ಧಾರಕ್ಕೂ, ನೀವು ಆ ಅಂತಃಸ್ಫುರಣೆಯ ಆಂತರಿಕ ಮೂಲದೊಂದಿಗೆ ಸಂಪರ್ಕದಲ್ಲಿರುವುದು ಆವಶ್ಯಕವಾಗಿದೆ, ಆಗ ತಪ್ಪುವುದು ವಿರಳವಾಗುವುದು.

ಪ್ರಶ್ನೆ: ಪ್ರೀತಿಯ ಗುರುದೇವ, ಇತ್ತೀಚೆಗೆ ನಾನು ನೀವು, "ನಿಮ್ಮ ಬಂಧನ ಮತ್ತು ನಿಮ್ಮ ಮುಕ್ತಿಗೆ ನಿಮ್ಮದೇ ಮನಸ್ಸು ಜವಾಬ್ದಾರವಾಗಿರುವುದು" ಎಂದು ಹೇಳುವುದನ್ನು ಕೇಳಿದೆ. ನನಗೆ ಗೊಂದಲವಾಗಿದೆ, ಮುಕ್ತಿಗೆ ಮನಸ್ಸು ಜವಾಬ್ದಾರವಾಗುವುದು ಹೇಗೆ? ನಾನು ಮನಸ್ಸಿನಾಚೆಗೆ ಹೋಗಬೇಕಾಗಿಲ್ಲವೇ?
ಶ್ರೀ ಶ್ರೀ ರವಿ ಶಂಕರ್ : ಹೌದು, ಬಂಧನದ ಕಾರಣವು ಮನಸ್ಸು, ಅಲ್ಲವೇ? ನಿಮ್ಮಿಂದ ಶಾಂತಿಯನ್ನು ದೂರಕ್ಕೆ ಒಯ್ಯುವುದು ಮನಸ್ಸಿನಲ್ಲಿನ ತುಮುಲಗಳು. ಯಾವಾಗೆಲ್ಲಾ ನೀವು ಸಂತೋಷವಾಗಿ ಮತ್ತು ಶಾಂತರಾಗಿರುವಿರೋ, ಆಗ ನಿಮ್ಮ ಮನಸ್ಸು ನಿಮ್ಮ ಆತ್ಮದೊಂದಿಗೆ ಸಂಪರ್ಕದಲ್ಲಿರುತ್ತದೆ. ಯೋಚನೆಗಳು ಮತ್ತು ಭಾವನೆಗಳಿಂದ ನೀವು ಅಶಾಂತರಾಗಿರುವಾಗ, ಯಾವತ್ತೂ ಅಲ್ಲಿಯೇ ಇರುವ ಶಾಂತಿಯನ್ನು ನೋಡಲು ನೀವು ಅಸಮರ್ಥರಾಗುತ್ತೀರಿ.

ಪ್ರಶ್ನೆ: ಗುರುದೇವ, ಯಾವುದೇ ಭಯವಿಲ್ಲದೆಯೇ; ಕಳೆದುಕೊಳ್ಳುವ ಭಯ, ಸಾವಿನ ಭಯ, ಸೋಲಿನ ಭಯ, ತಿಳಿದುದರ ಮತ್ತು ತಿಳಿಯದಿರುವುದರ ಬಗ್ಗೆಯಿರುವ ಭಯ; ಇವುಗಳಿಲ್ಲದೆಯೇ ನಾನು ಈ ಪ್ರಪಂಚದಲ್ಲಿ ಹೇಗೆ ಬದುಕಬಹುದು?
ಶ್ರೀ ಶ್ರೀ ರವಿ ಶಂಕರ್: ಭಯವೆಂದರೆ ಪ್ರೀತಿಯು ತಲೆಕೆಳಗಾಗಿ ನಿಂತಿರುವುದು.
ಪ್ರೀತಿಯಿದ್ದರೆ, ಆಗ ಅಲ್ಲಿ ಯಾವುದೇ ಭಯವಿರುವುದಿಲ್ಲ ಮತ್ತು ಭಯವಿದ್ದರೆ, ಆಗ ಅಲ್ಲಿ ಪ್ರೀತಿಯಿರುವುದಿಲ್ಲ.
ನೋಡು, ಭಯ, ಪ್ರೀತಿ ಮತ್ತು ದ್ವೇಷ ಇವುಗಳೆಲ್ಲವೂ ಒಂದೇ ಚೈತನ್ಯದಿಂದ ಮಾಡಲ್ಪಟ್ಟಿವೆ. ಒಬ್ಬ ವ್ಯಕ್ತಿಯಲ್ಲಿ ದ್ವೇಷವಿರುವಾಗ, ಅವನು ಯಾವುದಕ್ಕೂ ಭಯಪಡುವುದಿಲ್ಲ.
ಒಬ್ಬ ವ್ಯಕ್ತಿಯಲ್ಲಿ ಆಳವಾದ ಪ್ರೀತಿಯಿರುವಾಗ ಕೂಡಾ ಅಲ್ಲಿ ಯಾವುದೇ ಭಯವಿರುವುದಿಲ್ಲ. ಅದು ಒಂದು ಶಕ್ತಿಯು ಈ ಮೂರು ರೂಪಗಳಲ್ಲಿ ಪ್ರಕಟಗೊಳ್ಳುವುದಾಗಿದೆ - ಪ್ರೀತಿ, ದ್ವೇಷ ಮತ್ತು ಭಯ.
ಫೆಬ್ರುವರಿ ೨, ೨೦೧೩ ರಂದು ನಾನು ತಿಹಾರ್ ಜೈಲಿಗೆ ಭೇಟಿ ನೀಡಿದೆ ಮತ್ತು ನಾನು ಆರ್ಟ್ ಆಫ್ ಲಿವಿಂಗಿನ ಕುಶಲತೆ ತರಬೇತಿ ಕೇಂದ್ರವೊಂದನ್ನು, ಒಂದು ಕ್ಯಾಂಟೀನನ್ನು ಮತ್ತು ಒಂದು ಆಸ್ಪತ್ರೆಯನ್ನು ಉದ್ಘಾಟನೆ ಮಾಡಿದೆ. ಅಲ್ಲಿ ನಡೆದಿರುವ ಸುಧಾರಣೆಯ ಪ್ರಮಾಣವು ನಿಜಕ್ಕೂ ಹೃದಯಸ್ಪರ್ಶಿಯಾದುದು. ಕಠೋರ ಅಪರಾಧಿಗಳಾಗಿದ್ದ ಈ ಜನರು ಹೇಗೆ ಬದಲಾದರು ಎಂಬುದು ನೋಡಲು ಯೋಗ್ಯವಾದುದು. ಅವರು ಸಂಗೀತವನ್ನು, ಚಿತ್ರಕಲೆಯನ್ನು ಮತ್ತು ಹೊಸ ವಿಷಯಗಳನ್ನು ಕಲಿಯುವುದನ್ನು ಆಸ್ವಾದಿಸಲು ತೊಡಗಿದ್ದಾರೆ. ನಾನವರಲ್ಲಿ ಅಂದೆ, ಹೋಟೇಲು ಮತ್ತು ಕುಶಲತೆ ತರಬೇತಿ ಕೇಂದ್ರಗಳನ್ನು ಉಪಯೋಗಿಸಿ, ಆದರೆ ಆಸ್ಪತ್ರೆಯನ್ನು ಉಪಯೋಗಿಸಬೇಡಿ ಎಂದು.
ಒಂದು ಸಮಾಜದ ಆರೋಗ್ಯವು, ಆಸ್ಪತ್ರೆಗಳಲ್ಲಿರುವ ಖಾಲಿ ಹಾಸಿಗೆಗಳಿಂದ ಮತ್ತು ಜೈಲುಗಳಲ್ಲಿರುವ ಖಾಲಿ ಕೋಣೆಗಳಿಂದ ಸೂಚಿಸಲ್ಪಡುತ್ತದೆ. ಇವತ್ತು, ಕೇವಲ ೬೦೦೦ ಸಾಮರ್ಥ್ಯವಿರುವ ಸೆರೆಮನೆಯಲ್ಲಿ ೧೨೦೦೦ ಜನರಿದ್ದಾರೆ. ಆದುದರಿಂದ ಜನರು ಸೆರೆಮನೆಗಳೊಳಕ್ಕೆ ಹೋಗುವುದಿಲ್ಲವೆಂಬುದನ್ನು ಖಾತ್ರಿ ಪಡಿಸಿಕೊಳ್ಳಲು ನಾವು ಅವುಗಳ ಹೊರಗಿನಿಂದ ಕೂಡಾ ಕೆಲಸ ಮಾಡಬೇಕಾಗಿದೆ. ನಾವು ಮಾನವೀಯ ಮೌಲ್ಯಗಳ ಒಂದು ಅಲೆಯನ್ನು ಮತ್ತು ಆತ್ಮೀಯತೆಯ ಒಂದು ಭಾವವನ್ನು ತಂದಾಗ ಇದಾಗಲು ಸಾಧ್ಯವಿದೆ.
ಸೆರೆಮನೆಗಳಲ್ಲಿರುವ ಈ ಜನರು ಸುಂದರ ಜನರಾಗಿರುವರು, ಆದರೆ ಅಪರಾಧವನ್ನೆಸಗಿದಾಗ ಅವರಲ್ಲಿ ಯಾವುದೇ ಭಯವಿರಲಿಲ್ಲ ಯಾಕೆಂದರೆ ದ್ವೇಷವು ಅವರನ್ನು ಸ್ವಾಧೀನಪಡಿಸಿಕೊಂಡಿತು.
ಅದಕ್ಕಾಗಿಯೇ, ಜನರು ತಮ್ಮನ್ನು ಸೇವಾ ಕಾರ್ಯಗಳನ್ನು ಮಾಡುವುದರಲ್ಲಿ ಮತ್ತು ಉಜ್ಜಾಯೀ ಪ್ರಾಣಾಯಾಮ, ಧ್ಯಾನದ ಅಭ್ಯಾಸ ಮಾಡುವುದರಲ್ಲಿ ತೊಡಗಿಸಿಕೊಂಡರೆ, ಒಬ್ಬರು ಅನುಭವಿಸುವ ಭಯ, ಆತಂಕ ಮತ್ತು ಒತ್ತಡಗಳಂತಹ ಅದೇ ಚೈತನ್ಯವು ಮಗುಚಿ, ಎಲ್ಲರ ಕಡೆಗೂ ಪ್ರೀತಿ ಮತ್ತು ಸಹಾನುಭೂತಿಯಾಗುತ್ತದೆ.

ಬುಧವಾರ, ಫೆಬ್ರವರಿ 6, 2013

ಪ್ರತಿ ಜೀವಿಯ ಅಸ್ತಿತ್ವವೂ ಜಗತ್ತಿಗೆ ಅತ್ಯಗತ್ಯ


೬ ಫೆಬ್ರುವರಿ ೨೦೧೩
ಬೆಂಗಳೂರು

ಪ್ರಶ್ನೆ: ಸೇವಿಸುವ ಮುನ್ನ ಆಹಾರವನ್ನು (ಪ್ರಸಾದ) ದೇವರಿಗೆ ಅರ್ಪಿಸುವುದರ ಪ್ರಾಮುಖ್ಯತೆಯ ಬಗ್ಗೆ ದಯವಿಟ್ಟು ನಮಗೆ ತಿಳಿಸಿ. ಹಾಗೆಯೇ ಆಹಾರವನ್ನು ಅರ್ಪಿಸುವುದರ ಸರಿಯಾದ ರೀತಿಯ ಬಗ್ಗೆ ಕೂಡಾ ದಯವಿಟ್ಟು ನಮಗೆ ತಿಳಿಸಿ. ಯಾವುದಾದರೂ ಮಂತ್ರದ ಅಗತ್ಯವಿದೆಯೇ?
ಶ್ರೀ ಶ್ರೀ ರವಿ ಶಂಕರ್: ಭಾರತದಲ್ಲಿ, ವೈಶ್ವ ದೇವ ಎಂದು ಕರೆಯಲ್ಪಡುವ ಒಂದು ಸಂಪ್ರದಾಯವಿದೆ. ಒಬ್ಬಳು ಮಹಿಳೆಯು ಮನೆಯಲ್ಲಿ ಅಡಿಗೆ ಮಾಡುವಾಗ ಅವಳು ಮಾಡುವ ಮೊದಲ ಕೆಲಸವೆಂದರೆ ಒಂದು ಹಿಡಿ ಅಕ್ಕಿ ಅಥವಾ ಬೇಳೆ ಅಥವಾ ಅವಳೇನನ್ನು ಬೇಯಿಸುವಳೋ ಅದನ್ನು ತೆಗೆದು ಪಕ್ಷಿಗಳಿಗಾಗಿ, ಇರುವೆಗಳಿಗಾಗಿ ಮತ್ತು ಜೀವಿಗಳಿಗಾಗಿ ಹೊರಗೆ ತೋಟದಲ್ಲಿಡುವುದು. ಇದರ ಮಹತ್ವವೆಂದರೆ, ಪರಿಸರವನ್ನು ಗೌರವಿಸಬೇಕೆಂದು ಹೇಳುವುದು.
ಹಾಗೆಯೇ, ಹಲವು ಜನರು, ತಾವು ಊಟ ಮಾಡುವ ಮೊದಲು, ಕೆಲವು ಕಾಳುಗಳನ್ನು ತಮ್ಮ ತಟ್ಟೆಯ ಹೊರಗೆ ಇಡುತ್ತಾರೆ ಮತ್ತು ನಂತರ ಅವರು ಅವುಗಳನ್ನು ಪ್ರಾಣಿ ಪಕ್ಷಿಗಳಿಗೆ ನೀಡುತ್ತಾರೆ.
ನಿಮಗೆ ಗೊತ್ತಾ, ಪಕ್ಷಿಗಳು ವಿಶ್ವದ ಎಷ್ಟೊಂದು ಅವಿಭಾಜ್ಯ ಅಂಗವಾಗಿವೆಯೆಂದು. ಆದುದರಿಂದ ನಾವು ಪಕ್ಷಿಗಳ ಬಗ್ಗೆ ಕಾಳಜಿ ವಹಿಸಬೇಕು; ನಾವು ಇರುವೆಗಳ ಬಗ್ಗೆ ಕಾಳಜಿ ವಹಿಸಬೇಕು; ನಾವು ಪ್ರತಿಯೊಂದು ಜೀವಿಯ ಬಗ್ಗೆಯೂ ಕಾಳಜಿ ವಹಿಸಬೇಕು. ಯಾವುದೇ ಒಂದು ಜೀವಿ ವಿಶ್ವದಿಂದ ಕಣ್ಮರೆಯಾದರೂ, ವಿಶ್ವಕ್ಕೆ ತನ್ನನ್ನು ತಾನು ನಡೆಸಿಕೊಂಡು ಬರಲು ಸಾಧ್ಯವಿಲ್ಲ.
ಪ್ರಸಾದವೆಂದರೆ, ನೀವು ಪಡೆಯುವ ಆಹಾರವನ್ನು ನೀವೊಂದು ಉಡುಗೊರೆಯಂತೆ; ಒಂದು ಆಶೀರ್ವಾದದಂತೆ ತೆಗೆದುಕೊಳ್ಳುವುದು. ಪ್ರಸಾದವೆಂದರೆ ಕೇವಲ, ದೇವರ ಒಂದು ಆಶೀರ್ವಾದವೆಂದು ಅರ್ಥ. ಆಹಾರವು ಒಂದು ಆಶೀರ್ವಾದ, ಜೀವನವು ಒಂದು ಆಶೀರ್ವಾದ, ಸಮಯವು ಒಂದು ಆಶೀರ್ವಾದ, ನಮ್ಮ ಉಸಿರು ಒಂದು ಆಶೀರ್ವಾದ. ಇವುಗಳೆಲ್ಲಾ ಉಡುಗೊರೆಗಳಾಗಿವೆ.

ಪ್ರಶ್ನೆ: ಭಾರತೀಯ ಪುರಾಣವು ಎಲ್ಲಾ ಶಕ್ತಿಗಳಿಗೆ ರೂಪಗಳನ್ನು ನೀಡಿದುದು ಯಾಕೆ? ಎಲ್ಲಾ ಪೌರಾಣಿಕ ಕಥೆಗಳು ನಿಜವೇ? ಋಷಿಗಳು ಆತ್ಮ ಸಾಕ್ಷಾತ್ಕಾರ ಹೊಂದಿದ್ದರೆ, ಅವರು ತಮ್ಮ ನಿಯಂತ್ರಣವನ್ನು ಕಳೆದು ಶಾಪ ನೀಡಲು ಹೇಗೆ ಸಾಧ್ಯ?
ಶ್ರೀ ಶ್ರೀ ರವಿ ಶಂಕರ್: ವಿಶ್ವವು ನಾಮಗಳಿಂದ ಮತ್ತು ರೂಪಗಳಿಂದ ತುಂಬಿದೆ. ನೀವೊಂದು ಹೆಸರನ್ನು ನೀಡಿದ ಕ್ಷಣವೇ ಅದರೊಂದಿಗೆ ರೂಪವೂ ಬರುತ್ತದೆ, ಮತ್ತು ಈ ರೂಪಗಳಲ್ಲಿ ಹಲವು ಸೂಕ್ಷ್ಮದಲ್ಲಿ ಗುರುತಿಸಲ್ಪಟ್ಟವು. ಆದುದರಿಂದ ಅವುಗಳು ಸೂಕ್ಷ್ಮಲೋಕದಲ್ಲಿ ಮುಂದುವರಿಯುತ್ತವೆ.
ಈಗ, ಋಷಿಗಳು ಯಾಕೆ ಕೋಪಗೊಂಡರು ಮತ್ತು ಶಪಿಸಿದರು, ನನಗೆ ತಿಳಿಯದು. ಸಾಧಾರಣವಾಗಿ ಎಲ್ಲಾ ಋಷಿಗಳೂ ಹೀಗೆ ಮಾಡುವುದಿಲ್ಲ. ಹೀಗೆ ಮಾಡಿದ ಕೆಲವೇ ಕೆಲವು ಋಷಿಗಳಿದ್ದರಷ್ಟೆ. ಆದರೆ ಪ್ರತಿ ಸಲವೂ ಅವರು ಶಪಿಸಿದಾಗ, ಅವರ ಶಾಪದಿಂದ ಕೂಡಾ ಏನೋ ಉತ್ತಮವಾದುದೇ ಆಯಿತು. ಅದಕ್ಕಾಗಿಯೇ ಹೇಳಿರುವುದು, ಆತ್ಮ ಸಾಕ್ಷಾತ್ಕಾರ ಹೊಂದಿದವರ ಕೋಪ ಕೂಡಾ, ಸಮಾಜಕ್ಕೆ ಏನೋ ಒಳ್ಳೆಯದನ್ನು ಮಾಡುವುದು. ಅದೇ ವೇಳೆ, ಒಬ್ಬ ಅಜ್ಞಾನಿಯ ಪ್ರೇಮವೂ ಕೂಡಾ ಸ್ವಲ್ಪ ತೊಂದರೆಯನ್ನುಂಟುಮಾಡುತ್ತದೆ. ಒಬ್ಬ ಜ್ಞಾನಿಯ ಕೋಪ ಕೊಡಾ ಲಾಭದಾಯಕವಾಗಿದೆ. ಅವನು ಯಾವುದೇ ತೊಂದರೆಯನ್ನುಂಟುಮಾಡಲು ಸಾಧ್ಯವಿಲ್ಲ, ಅವನು ಸಮಾಜಕ್ಕೆ ಕೇವಲ ಒಳಿತನ್ನು ಮಾತ್ರ ಮಾಡುತ್ತಾನೆ.
ಆದುದರಿಂದ, ಪ್ರತಿಸಲವೂ ಒಬ್ಬ ಋಷಿ ಶಪಿಸಿದಾಗ, ಅದು ಜನತೆಗೆ ಒಂದು ದೊಡ್ಡ ವರವಾಗಿ ಪರಿಣಮಿಸಿತು.

ಪ್ರಶ್ನೆ: ಸ್ವಾತಂತ್ರ್ಯವು ಬಹಳ ಸಾಪೇಕ್ಷವಾದುದು ಎಂದು ನನಗನಿಸುತ್ತದೆ. ಕೆಲವೊಮ್ಮೆ ನನ್ನ ಸ್ವಾತಂತ್ರ್ಯವು ಬೇರೊಬ್ಬರ ಸ್ವಾತಂತ್ರ್ಯಕ್ಕೆ ವಿರೋಧಾತ್ಮಕವಾಗಿರುತ್ತದೆ. ’ಸಂಪೂರ್ಣ ಸ್ವಾತಂತ್ರ್ಯ’ ಎಂಬುದೇನಾದರೂ ಇದೆಯೇ? ಅಥವಾ ಅದು ಅಸ್ತವ್ಯಸ್ತತೆಯಾಗಿರಬಹುದೇ? 
ಶ್ರೀ ಶ್ರೀ ರವಿ ಶಂಕರ್: ಬಂಧನ ಮತ್ತು ಮುಕ್ತಿ, ಎರಡೂ ಮನಸ್ಸಿನಲ್ಲಿ ಆಗುವುದು, ಮತ್ತು ನಿಮ್ಮ ದೃಷ್ಟಿಯು ಸೀಮಿತವಾದಾಗ ನಿಮಗೆ ಹಲವಾರು ಬಂಧನಗಳು ಕಾಣಿಸುತ್ತವೆ. ನಿಮ್ಮ ದೃಷ್ಟಿಯು ವಿಸ್ತಾರವಾದಂತೆಲ್ಲಾ, ಕೇವಲ ಸ್ವಾತಂತ್ರ್ಯ ಮಾತ್ರ ಇರುವುದೆಂಬುದನ್ನು ನೀವು ತಿಳಿಯಲು ತೊಡಗುವಿರಿ.

ಪ್ರಶ್ನೆ: ಬಾಂಧವ್ಯ ಮತ್ತು ತೊಡಕುಗಳಿಂದ ದೂರವುಳಿಯಲಿರುವ ಅತ್ಯಂತ ಸುಲಭ ಮಾರ್ಗ ಯಾವುದು?
ಶ್ರೀ ಶ್ರೀ ರವಿ ಶಂಕರ್: ಕೇಂದ್ರಿತನಾಗಿರು. ಇದೆಲ್ಲವೂ ಒಂದು ಕನಸು ಮತ್ತು ಎಲ್ಲವೂ ಕೊನೆಯಾಗಲಿದೆ ಎಂಬುದನ್ನು ತಿಳಿ. ಪ್ರತಿಯೊಬ್ಬರೂ ಕೊನೆಯಾಗಲಿದ್ದಾರೆ ಮತ್ತು ಒಂದು ದಿನ ಎಲ್ಲವೂ ಮುಗಿಯಲಿದೆ.
ಹಿಂದೆ ತಿರುಗಿ ನೋಡು, ನೀವು ಸುಮಾರು ೩೦ರಿಂದ ೫೦ ವರ್ಷಗಳನ್ನು ಈ ಭೂಮಿಯ ಮೇಲೆ ಕಳೆದಿರುವಿರಿ. ಆ ಎಲ್ಲಾ ಘಟನೆಗಳಿಗೇನಾಯಿತು? ಎಲ್ಲವೂ ಹೋಗಿದೆ, ಸರಿಯಾ!ಕೇವಲ ಎಚ್ಚೆತ್ತುಕೊಳ್ಳಿ!

ಪ್ರಶ್ನೆ: ಗುರುದೇವ, ಆಯ್ಕೆಯಿಂದ ಆಯ್ಕೆಯಿಲ್ಲದಿರುವೆಡೆಗೆ ಸಾಗುವುದು ಹೇಗೆ?
ಶ್ರೀ ಶ್ರೀ ರವಿ ಶಂಕರ್: ಒಳ್ಳೆಯದು ಮತ್ತು ಕೆಟ್ಟದರ ನಡುವೆ ಯಾವುದೇ ಆಯ್ಕೆಯಿಲ್ಲ. ಆಯ್ಕೆಯಿರುವುದು ಯಾವತ್ತೂ ಕೆಟ್ಟದು ಮತ್ತು ಅದಕ್ಕಿಂತ ಕೆಟ್ಟದರ ನಡುವೆ; ಅಥವಾ ಒಳ್ಳೆಯದು ಮತ್ತು ಉತ್ತಮವಾದುದರ ನಡುವೆ. ನೀನಿದನ್ನು ಅರ್ಥ ಮಾಡಿಕೊಂಡರೆ, ಆಗ ಅಲ್ಲಿ ಯಾವುದೇ ಆಯ್ಕೆಯಿಲ್ಲವೆಂಬುದನ್ನು ನೀನು ಕಾಣುವೆ.

ಪ್ರಶ್ನೆ: ನಾನು ನಿಮ್ಮೊಂದಿಗೆ ಇರಲು ಸಾಧ್ಯವಿಲ್ಲದಿರುವಾಗ, ಕೆಲವೊಮ್ಮೆ ನಿಮ್ಮ ಮೇಲಿರುವ ನನ್ನ ಪ್ರೀತಿಯು ನನಗೆ ದುಃಖವನ್ನು ತರುತ್ತದೆ. ನೀವು ಎಲ್ಲೆಡೆಯೂ ಇರುವಿರಿ ಎಂದು ನನ್ನ ಮನಸ್ಸು ಹೇಳುತ್ತದೆ, ಆದರೆ ನನ್ನ ಹೃದಯವನ್ನು ಸುಲಭವಾಗಿ ಸಮಾಧಾನಿಸಲು ಸಾಧ್ಯವಾಗುವುದಿಲ್ಲ. ನಾನೇನು ಮಾಡಬೇಕು?
ಶ್ರೀ ಶ್ರೀ ರವಿ ಶಂಕರ್: ಕೇವಲ ವಿಶ್ರಾಮ ಮಾಡು ಮತ್ತು ನಿನ್ನನ್ನು ನೀನು ನಿರಂತರವಾಗಿ ಕ್ರಿಯಾಶೀಲವಾಗಿರಿಸು. ಪ್ರಪಂಚದಲ್ಲಿ ಎಷ್ಟೊಂದು ಸೇವೆಯ ಅಗತ್ಯವಿದೆ, ಆದುದರಿಂದ ಅದರಲ್ಲಿ ತೊಡಗು. ಹಾತೊರೆತವು ಸೃಜನಶೀಲತೆಯಾಗಿ ಪರಿವರ್ತನೆಗೊಳ್ಳಬೇಕು. ನಿನ್ನಲ್ಲಿರುವ ಸೃಜನಶೀಲತೆ ಮತ್ತು ಕ್ರಿಯಾಶೀಲತೆಗಳನ್ನು ಹೊರತರುವಲ್ಲಿ ಹಾತೊರೆತವು ಒಂದು ಮಾಧ್ಯಮವಾಗಬಹುದು, ಒಂದು ವೇಗವರ್ಧಕವಾಗಬಹುದು. ಆದುದರಿಂದ ಇದನ್ನು ಅದಕ್ಕಾಗಿ ಬಳಸಿ.

ಪ್ರಶ್ನೆ: ಪ್ರೀತಿಯ ಗುರುದೇವ, ನೀವು ನನ್ನನ್ನು ಮತ್ತು ನಾನು ಮಾಡುವುದೆಲ್ಲವನ್ನೂ ತಿಳಿದಿರುವಿರೇ?
ಶ್ರೀ ಶ್ರೀ ರವಿ ಶಂಕರ್: ನಿನಗೇನನ್ನಿಸುವುದು? ನೀನು ಮಾಡುವುದೆಲ್ಲವನ್ನೂ ನಾನು ಯಾಕೆ ತಿಳಿಯಬೇಕು? ನನಗದರ ಅಗತ್ಯವಿಲ್ಲ.

ಪ್ರಶ್ನೆ: ಸರಿಯಾದ ರೀತಿಯ ಆಡಳಿತ ಯಾವುದು? ಇದು ಆಧ್ಯಾತ್ಮಿಕ ರೀತಿಯ ಆಡಳಿತಕ್ಕಿರುವ ಸಮಯವಲ್ಲವೇ?
ಶ್ರೀ ಶ್ರೀ ರವಿ ಶಂಕರ್: ಹೌದು, ಬಂಡವಾಳಶಾಹಿ, ಸಮತಾವಾದ, ಜಾತ್ಯಾತೀತತೆ, ಇವುಗಳೆಲ್ಲವೂ ಯಾವುದಕ್ಕೂ ಪ್ರಯೋಜನವಿಲ್ಲ. ವಾಸ್ತವವಾಗಿ, ಮಾನವೀಯತೆಯಿಲ್ಲದೇ ಹೋದರೆ ಅವುಗಳೆಲ್ಲವೂ ವಿಫಲವಾಗಬಹುದು. ಮತ್ತು ಮಾನವೀಯತೆಯನ್ನು ಹೊರ ತರುವುದು ಹೇಗೆ? ಅದು ಆಧ್ಯಾತ್ಮದ ಮೂಲಕ.

ಪ್ರಶ್ನೆ: ಗುರುದೇವ, ಹೃದಯವು ಶರೀರದ ಎಡಭಾಗದಲ್ಲಿದೆ. ಇದಕ್ಕೆ ಏನಾದರೂ ಆಧ್ಯಾತ್ಮಿಕ ಕಾರಣವಿದೆಯೇ?
ಶ್ರೀ ಶ್ರೀ ರವಿ ಶಂಕರ್: ಅಂತಹ ಹಲವಾರು ಪ್ರಶ್ನೆಗಳಿವೆ. ಮೂಗಿನಲ್ಲಿ ಎರಡು ಹೊಳ್ಳೆಗಳು ಯಾಕಿವೆ. ಎರಡು ಕಣ್ಣುಗಳೂ ಒಂದೇ ಕಡೆ ಯಾಕಿವೆ, ಒಂದು ಮುಂದೆ ಮತ್ತು ಒಂದು ಹಿಂದೆ ಇರಬಹುದಿತ್ತು.
ಹೃದಯವು ಎಡಭಾಗದಲ್ಲಿ ಯಾಕಿದೆಯೆಂಬುದಕ್ಕೆ ಒಬ್ಬನು ಏನನ್ನು ಹೇಳಲು ಸಾಧ್ಯ? ಯಾವುದಾದರೊಂದು ಎಲ್ಲಾದರೂ ಇರಲೇಬೇಕು. ನಿನಗೆ ಕೇಳಲು ಯಾವುದಾದರೂ ಉತ್ತಮ ಪ್ರಶ್ನೆ ಸಿಗಲಿಲ್ಲವೆಂದು ನನಗನಿಸುತ್ತದೆ. ನೀನು ಜೀವನದಲ್ಲಿನ ಇತರ ವಿಷಯಗಳ ಬಗ್ಗೆ ಅಚ್ಚರಿಪಡಬೇಕೆಂದು ನನಗನಿಸುತ್ತದೆ. ನಾವು ಮಾಡಬೇಕಾಗಿರುವ ಹಲವಾರು ವಿಷಯಗಳಿವೆ. ಪ್ರಪಂಚಕ್ಕೆ ನಿನ್ನಿಂದ ಹೆಚ್ಚು ಗಮನ ಮತ್ತು ಹೆಚ್ಚು ಸೇವೆ ಬೇಕಾಗಿದೆ.

ಮಂಗಳವಾರ, ಫೆಬ್ರವರಿ 5, 2013

ನಿಮ್ಮ ಮನೆಗೆ ಕೊಂಚ ಬಣ್ಣ ತುಂಬಿ


ಫ಼ೆಬ್ರವರಿ ೦೫, ೨೦೧೩
ಬೆಂಗಳೂರು, ಭಾರತ

ಪ್ರ: ದೇವರು ಸರ್ವಾಂತರ್ಯಾಮಿಯಾಗಿದ್ದು, ನನಗೆ ಗುರುಗಳೊಂದಿಗೆ ಸಂಪರ್ಕದ ದೃಢ ಅನುಭವವಿದ್ದರೆ, ಆಗಲೂ ದೇವಸ್ಥಾನಗಳಿಗೆ ಹೋಗುವುದು ಅವಶ್ಯಕವೇ, ಶಾಸ್ತ್ರಗಳ ಮಹತ್ವವೇನು?

ಶ್ರೀ ಶ್ರೀ :ನೋಡಿ, ನೀವು ಯಾವುದೇ ದೇವಸ್ಥಾನ, ಮಸೀದಿ ಅಥವಾ ಇಗರ್ಜಿಗಳಿಗೆ ಅಥವಾ ಎಲ್ಲೂ ಹೋಗುವ ಅವಶ್ಯಕತೆ ಇಲ್ಲ. ನೀವೆಲ್ಲೇ ಇದ್ದರೂ, ಕುಳಿತು ಧ್ಯಾನ ಮಾಡಿ, ಆಗ ನೀವು ದೈವತ್ವದ ಅಸ್ತಿತ್ವವನ್ನು ಅನುಭವಿಸುತ್ತೀರಿ. ಆದರೆ ಸ್ವಲ್ಪ ಶಾಸ್ತ್ರಗಳು ಜೀವನದಲ್ಲಿ ಇರುವುದು ಒಳ್ಳೆಯದು, ಅತಿಯಾಗಿ ಅಲ್ಲ.

ಶಾಸ್ತ್ರಗಳಿಲ್ಲದೆ, ಜೀವನವು ಒಣಕಲು ಮತ್ತು ಏಕತಾನಮಯವಾಗುತ್ತದೆ.ಅದು ಈ ಶಾಸ್ತ್ರಗಳು ಜೀವನಕ್ಕೆ ಒಂದು ನಿರ್ದಿಷ್ಟ ರಸ, ಒಂದು ನಿರ್ದಿಷ್ಟ ಹುರುಪು, ಒಂದು ನಿರ್ದಿಷ್ಟ ರಂಗನ್ನು ತರುವಂಥದ್ದು.ಹಾಗಾಗಿ ನಾನು ಹೇಳುತ್ತೇನೆ, ನಾವು ಕಾಲ ಕಾಲಕ್ಕೆ ಕೆಲವೂ ಶಾಸ್ತ್ರಗಳನ್ನು ಇಟ್ಟುಕೊಳ್ಳಬೇಕು; ಅದು ಒಳ್ಳೆಯದು.

ನೋಡಿ, ಯಾವುದೇ ಸಂಪ್ರದಾಯಗಳೇ ಇಲ್ಲದ ಮನೆಯೊಳಗೆ ಹೋಗಿ ಮತ್ತು ಪ್ರತಿ ದಿನ ಒಂದು ದೀಪವೋ, ಅಗರ್ಬತ್ತಿಯನ್ನೋ ಉರಿಸುವ ಒಂದು ಮನೆಯೊಳಗೆ ನಡೆಯಿರಿ; ಎಲ್ಲಿ ಆ ಪಾವನತ್ವ ಇದೆಯೋ, ಅಲ್ಲಿನ ಪರಿಸರದಲ್ಲಿ ಆ ವ್ಯತ್ಯಾಸವಿದೆ. ನಿಮ್ಮಲ್ಲೆಷ್ಟು ಮಂದಿ ಇದನ್ನು ಗಮನಿಸಿದ್ದೀರಿ?

ಒಂದು ನಿರ್ದಿಷ್ಟ ವ್ಯತ್ಯಾಸವಿದೆ.ಅದು ಒಂದು ರೀತಿಯ ವಾತವರಣವನ್ನು ಸೃಷ್ಟಿಸುತ್ತದೆ.ಸೂಕ್ಷ್ಮವಾದುದು ಅಲ್ಲಿ ಇನ್ನೂ ಜೀವಂತವಾಗುತ್ತದೆ, ಅಲ್ಲವೇ?

ಹಾಗಾಗಿ ದಿನ ನಿತ್ಯ ಜೀವನದಲ್ಲಿ ಕೊಂಚ ಸಂಪ್ರದಾಯ ಒಳ್ಳೆಯದು.ಬೆಳಗ್ಗೆ ನೀವು ಎದ್ದಾಗ, ಕುಳಿತು ಧ್ಯಾನಿಸಿ.ಧ್ಯಾನದ ಜೊತೆಗೆ ಪ್ರಾಣಾಯಾಮಗಳನ್ನೂ ನೀವು ಖಂಡಿತ ಮಾಡಬೇಕು.

ಮನೆಯಲ್ಲಿ ಕೇವಲ ಒಬ್ಬರು ಎಲ್ಲಾದರೂ ದೀಪ ಬೆಳಗಿದರೆ, ಎಲ್ಲರೂ ಅದನ್ನು ಮಾಡಬೇಕಾಗಿಲ್ಲ, ಒಂದು ಮನೆಯಲ್ಲಿ ಒಬ್ಬರು ದೀಪ ಬೆಳಗಿದರೆ ಅದು ಸಂಪೂರ್ಣ ಪರಿಸರದಲ್ಲಿ ಚೈತನ್ಯ ತುಂಬುತ್ತದೆ.ಇದು ನಾನು ಕಾರ್ಯರೂಪದಲ್ಲಿ ನೋಡಿರುವಂಥದ್ದು.

ನಾನು ಬಹಳ ಮನೆಗಳಿಗೆ ಭೇಟಿ ನೀಡಿದ್ದೇನೆ; ಚಿಕ್ಕವು, ದೊಡ್ಡವು, ಗುಡಿಸಲುಗಳು, ಬಂಗಲೆಗಳು, ಮತ್ತು ಪ್ರತಿ ಸ್ಥಳದಲ್ಲೂ ನಾನು ಒಂದು ವಿಷಯ ಖಂಡಿತವಾಗಿ ಇರುವುದನ್ನು ನೋಡಿದ್ದೇನೆ, ಒಂದು ಚಿಕ್ಕ ಗುಡಿಸಲಿನಲ್ಲೂ ಅವರು ಒಂದು ಸಣ್ಣ ಪೂಜಾ ಕೊಟಡಿ ಇಟ್ಟುಕೊಂಡು ಅಲ್ಲಿ ದೀಪ ಇತ್ಯಾದಿ ಇಡುತ್ತಾರೆ, ಮತ್ತು ಅಲ್ಲಿನ ಸಂಪೂರ್ಣ ಪರಿಸರದಲ್ಲಿ ಒಂದು ಸೂಕ್ಷ್ಮತ್ವವಿದೆ, ಅದರಲ್ಲಿ ಏನೋ ಒಳ್ಳೆಯದಿದೆ. ಏನೂ ಇಲ್ಲದ, ಪಾವಿತ್ರ್ಯದ ಯಾವುದೇ ಪ್ರತೀಕವಿಲ್ಲದ ಅಥವಾ ದೀಪವನ್ನು ಹಚ್ಚದಿರುವಂಥ ಮನೆಯೊಳಗೆ ನೀವು ಹೋಗಿ, ಆಗ ಏನೋ ಒಂದು ಜಡತ್ವವಿರುತ್ತದೆ.ನಾನು ಇದನ್ನು ಗಮನಿಸಿದ್ದೇನೆ.ಅದಕ್ಕೇ ನಾನು ಹೇಳುವುದು, ಮನೆಯಲ್ಲಿ ಒಂದು ಚಿಕ್ಕ ಪೂಜಾ ಕೊಟಡಿ ಮತ್ತು ಸ್ವಲ್ಪ ಸಂಪ್ರದಾಯಗಳು ಒಳ್ಳೆಯದು.ಯಾರಾದರೂ ಒಬ್ಬರು ಅದನ್ನು ಮಾಡಬಹುದು; ಮನೆಯ ಮಹಿಳೆ ಮಾಡಬಹುದು, ಅಥವಾ ಗೃಹದ ಪುರುಷ ಅದನ್ನು ಮಾಡಬಹುದು.ಮತ್ತು ಅದು ಮಕ್ಕಳಿಗೂ ಒಳ್ಳೆಯದು, ಅವರಿಗೆ ಧಾರ್ಮಿಕ ಅಥವಾ ಆಧ್ಯಾತ್ಮಿಕತೆಯ ಆ ಸವಿಯನ್ನು ಪಡೆಯಲು ಅವರು ಮಾಡಬೇಕಾದುದು ಏನೋ ಇದೆ ಎಂದು ನೋಡಿ ಕಲಿಯಲು ಮಕ್ಕಳಿಗೂ ಅದು ಒಳ್ಳೆಯದು.

ಈ ದೇಶದಲ್ಲಿ ನೀವು ಇದನ್ನು ಬಸ್ಸುಗಳಲ್ಲೂ ನೋಡುತ್ತೀರಿ.ಪ್ರತಿ ಬಸ್ ಚಾಲಕ, ಟ್ಯಾಕ್ಸೀ ಚಾಲಕ, ಕಾರ್ ಚಾಲಕ, ಆಟೊ ಚಾಲಕರು, ಮುಂಜಾನೆ ಮೊದಲನೆಯದಾಗಿ ಹೂವನ್ನಿಟ್ಟು ಅಥವಾ ಅಗರ್ಬತ್ತಿಯನ್ನು ಉರಿಸು ವಂದಿಸುತ್ತಾರೆ.ಮತ್ತು ಅವರು ಮಾಡುವ ಈ ಸಣ್ಣ ಚಟುವಟಿಕೆ ಅವರ ಜೀವನಗಳಲ್ಲಿ ಗುಣಮಟ್ಟದ ವ್ಯತ್ಯಾಸವನ್ನು ಉಂಟುಮಾಡುತ್ತದೆ.ಭಾರತದಲ್ಲಿ ಅಂಗಡಿಗಳಲ್ಲೂ ಮತ್ತು ಹೋಟೆಲ್.ಗಳಲ್ಲೂ ಪೂಜೆಗಾಗಿ ದೇವರ ಪೀಠ ಇಟ್ಟಿರುವರು.

ನೀವು ಅವರನ್ನು ಕೇಳಬಹುದು, ’ನೀವು ಇದನ್ನು ಯಾಕೆ ಮಾಡುತ್ತೀರಿ?’ ಯಾರಾದರೂ ಇದರ ಬಗ್ಗೆ ಸಂಶೋಧನೆ ಮಾಡಬಹುದು.ಇದು ಅವರಿಗೆ ಒಂದು ರೀತಿಯ ಮಾನಸಿಕ ಶಕ್ತಿಯನ್ನು ನೀಡುತ್ತದೆ.ಒಂದು ಸೂಕ್ಷ್ಮ ರೀತಿಯಲ್ಲಿ ಇದು ಪರಿಸರದಲ್ಲಿ ಚೈತನ್ಯ ತುಂಬುತ್ತದೆ.ನನಗೆ ಹೀಗೆ ಅನಿಸುತ್ತದೆ.

ಭಾರತದಲ್ಲಿ, ಸರ್ಕಾರೀ ಕಛೇರಿಗಳಲ್ಲಿ ಇದನ್ನು ಮಾಡುತ್ತಾರೆ.ಅವರ ಕಛೇರಿಯ ಪ್ರತಿ ಅಧಿಕಾರಿಯು ಒಂದು ಪೂಜಾ ಪೀಠವನ್ನು ಇಟ್ಟುಕೊಂಡಿರುತ್ತಾರೆ.ಕರ್ನಾಟಕದಲ್ಲಿ ಇದು ಸ್ವಲ್ಪ ಜಾಸ್ತಿ ಇದೆ.ಮುಖ್ಯ ಮಂತ್ರಿ ಪ್ರಮಾಣ ತೆಗೆದುಕೊಳ್ಳಬೇಕಿದ್ದರೆ, ಅಥವಾ ಹೊಸ ಕಛೇರಿಯನ್ನು ಪ್ರವೇಶಿಸಬೇಕಿದ್ದರೆ, ಅವ್ವರು ಅಲ್ಲಿ ಒಂದು ಆಮೂಲಾಗ್ರ ಪೂಜಾವಿಧಿ, ಎಲ್ಲವನ್ನೂ ಮಾಡುತ್ತಾರೆ.

ಜಗತ್ತಿನಾದ್ಯಂತ ಇದು ಇದೆ.ಅಮೆರಿಕಾದ ಶಸನ ಸಭೆ ಮತ್ತು ಕ್ಯಾನಡಾದ ಸಂಸತ್ತಿನಲ್ಲಿ ಪ್ರತಿ ದಿನ ಅವರು ಒಂದು ನಿಮಿಷ ಪ್ರಾರ್ಥನೆ ಇಟ್ಟುಕೊಳ್ಳುತ್ತಾರೆ. ಪ್ರತಿ ಸಂಸತ್ತಿಗೂ ಒಬ್ಬ ಅರ್ಚಕ(ಪ್ಯಾಸ್ಟರ್) ಬಂದು ದೈವೀ ಬೈಬಲ್.ನಿಂದ ಓದಿ ಹೇಳುವವರಿರುತ್ತಾರೆ. ಭಾರತದಲ್ಲಿ ಮಾತ್ರ ನಾವು ಜಾತ್ಯತೀತತೆಯ ಬಗ್ಗೆ ಮಾತನಾಡುವುದು.ನಾವು ಎಲ್ಲಾ ವಿವೇಕ, ಜ್ಞಾನ ಮತ್ತು ಪುರಾತನ ಸಂಪ್ರದಾಯಗಳಿಂದ ದೂರವಿರಲು ಪ್ರಯತ್ನಿಸುದು ಒಂದು ರೀತಿಯ ಖಾಯಿಲೆ.ಜನರು ಇದನ್ನು ಮಾಡಲು ಪ್ರಯತ್ನಿಸುತ್ತಾರೆ ಆದರೆ ಅದು ನಿಜಾವಗಿಯೂ ಆಗುವುದಿಲ್ಲ. ಇದು ಅಷ್ಟು ಆಳವಾಗಿ ಪ್ರತಿಯೊಬ್ಬರಲ್ಲಿ ಸಮಗ್ರಗೊಂಡಿದೆ.

ಪ್ರ: ಯಾವುದೇ ರೀತಿಯ ಅನ್ಯಾಯದೊಂದಿಗೆ ವ್ಯವಹರಿಸಲು ಅತ್ಯುತ್ತಮ ಮಾರ್ಗ ಯಾವುದು?

ಶ್ರೀ ಶ್ರೀ: ಕೆಲವೊಮ್ಮೆ ನೀವು ಯಾವುದನ್ನು ಅನ್ಯಾಯ ಅಂದುಕೊಳ್ಳುತ್ತೀರೋ, ಅದು ಇನ್ನೊಬ್ಬ ವ್ಯಕ್ತಿಯ ದೃಷ್ಟಿಯಲ್ಲಿ ಹಾಗಲ್ಲದೇ ಇರಬಹುದು. ಅದು ಅನ್ಯಾಯವೇ ಅಲ್ಲದಿರಬಹುದು.

ನೀವು ಅನ್ಯಾಯದ ವಿರುದ್ಧ ಎದ್ದು ನಿಲ್ಲುವುದು ಅಗತ್ಯ, ಆದರೆ ವಿವೇಕದೊಂದಿಗೆ ಮತ್ತು ಅರಿವಿನೊಂದಿಗೆ, ಯಾಕಂದರೆ ಪೀಡಿತ ಅಥವಾ ಸಿಟ್ಟಾದ ಎಲ್ಲರೂ ಯಾವಾಗಲೂ ಹೇಳುವುದು, ’ನಾನು ಅನ್ಯಾಯವನ್ನು ತಡೆಯುತ್ತಿದ್ದೇನೆ’ ಎಂದು.

ಕ್ರೋಧದ ಜ್ವಾಲೆಯ ಹಿಂದೆ, ನ್ಯಾಯಕ್ಕಾಗಿ ಒಂದು ಮೊರೆಯಿದೆ, ಅಥವಾ ನ್ಯಾಯಕ್ಕಾಗಿ ಒಂದು ತಗಾದೆ ಇದೆ.ಆದರೆ ನೀವು ವಿಮರ್ಶಿಸಿದಾಗ, ಅದರ ಆಳಕ್ಕೆ ಹೋದಾಗ, ಅದು ಸರಿಯೇ ಅಲ್ಲದಿರಬಹುದು.ಅದು ನ್ಯಾಯವೇ ಅಲ್ಲದಿರಬಹುದು.ಹಾಗಾಗಿ ನಾನು ಹೇಳುತ್ತೇನೆ, ನೀವು ಮೊದಲು ಕೂಲಂಕುಷವಾಗಿ ಶಾಂತ ಮನಸ್ಸಿನಿಂದ ವಿಮರ್ಶಿಸಿ ನೋಡಬೇಕು, ಅದಾದ ನಂತರ ಅನ್ಯಾಯದ ವಿರಿದ್ಧ ಒಂದು ನಿಲುವನ್ನು ಇಟ್ಟುಕೊಳ್ಳಬೇಕು.

ಪ್ರ: ಗುರೂಜಿ, ಆಧ್ಯಾತ್ಮಿಕ ಪಥದಲ್ಲಿ ಬ್ರಹ್ಮಚರ್ಯವು ಒಂದು ಮುಖ್ಯ ಭಾಗ ಎಂದು ಹೇಳಲಾಗುತ್ತದೆ. ಮನಸ್ಸಿನ ಬ್ರಹ್ಮಚರ್ಯವನ್ನು ಹೇಗೆ ಬೆಳೆಸಿಕೊಳ್ಳುವುದು?ಬ್ರಹ್ಮಚರ್ಯವೆಂಬುದು ಶಾರೀರಿಕ ವ್ರತವೇ ಅಥವಾ ಮನಸ್ಸಿಗೆ ಹೆಚ್ಚು ಸಂಬಂಧಿಸಿದ್ದೇ?

ಶ್ರೀ ಶ್ರೀ: ಅದು ಎರಡೂ ಆಗಿದೆ. ಬ್ರಹ್ಮಚರ್ಯವು ತಾನಾಗಿ ಆಗುತ್ತದೆ, ನೀವು ಅದನ್ನು ತಮ್ಮ ಮೇಲೆ ಹೇರಿಕೊಳ್ಳಲಾಗುವುದಿಲ್ಲ. ನೋಡಿ, ನಿಮಗೆ ಪರೀಕ್ಷೆಯಿದ್ದು ನೀವು ಅದಕ್ಕೆ ಓದುತ್ತಿದ್ದರೆ, ಅಂಥ ದಿನಗಳಲ್ಲಿ ಎಲ್ಲಾ ವಿದ್ಯಾರ್ಥಿಗಳೂ ಅನಿವಾರ್ಯವಾಗಿ ಹೇಳುತ್ತಾರೆ, ’ನಮಗೆ ಕಾಮದ ಆಲೋಚನೆಗಳೇ ಇಲ್ಲ, ನಮ್ಮ ಪರೀಕ್ಷೆಗಳಲ್ಲಿ ನಾವು ಬಿಡುವಿಲ್ಲದೆ ಅಷ್ಟು ಮಗ್ನರಾಗಿದ್ದೇವೆ.’

ಹಾಗೆಯೇ, ನಿಮಗೆ ಒಂದು ಬಹಳ ಮುಖ್ಯವಾದ ಪ್ರಾಜೆಚ್ಟ್ ಮುಗಿಸಬೇಕಿದೆ ಎಂದು ನೀವು ಶ್ರಮದಿಂದ ಕೆಲಸ ಮಾಡುತ್ತಿದ್ದೀರಿ, ಆಗಲೂ ಬ್ರಹ್ಮಚರ್ಯವು ತಾನಾಗಿಯೇ ಆಗುತ್ತದೆ.

ಧ್ಯಾನದ ಮೂಲಕವೂ; ನಿಮ್ಮಲ್ಲಿನ ಶಕ್ತಿ ಉದಯಿಸಿದಾಗ, ನೀವು ಅಂಥ ಆನಂದವನ್ನು, ಅಂಥ ಪುಳಕವನ್ನು, ಮತ್ತು ಅಂಥ ಹರ್ಷೋನ್ಮಾದವನ್ನು ನಿಮ್ಮೊಳಗೆ ಕಾಣುತ್ತೀರೆಂದರೆ ಬ್ರಹ್ಮಚರ್ಯವು ತಾನಾಗಿಯೇ ಆಗುತ್ತದೆ.ವಾಸ್ತವದಲ್ಲಿ, ಬಹಿರ್ಮುಖಿಯಾಗಿರುವುದು ಒಂದು ಬೇನೆ. ಬ್ರಹ್ಮಚರ್ಯವು ಅಂತರ್ಮುಖವಾಗಿರುವ ಮನಸ್ಸಿನ ಪ್ರಭಾವ, ಅದು ಆಗುವುದು ನೀವು ಯಾವುದೂ ಏನೂ ಅಲ್ಲ, ಇದೆಲ್ಲವೂ ಏನೂ ಅಲ್ಲ ಎಂದು ಕಂಡಾಗ. ಒಂದು ವೇಳೆ ಏನಾದರೂ ಆಗುತ್ತಿದ್ದರೆ, ಅದು ಆ ಸೂಕ್ಷ್ಮ ಸ್ಥರದಿಂದ ಆಗುತ್ತಿದೆ. ಆ ಸೂಕ್ಷ್ಮ ಸ್ಥರದೊಂದಿಗಿನ ಸಂಪರ್ಕವು ಇಲ್ಲಿ ನಡೆಯುತ್ತಿರುವ ಚಟುವಟಿಕೆಗಳನ್ನು ಬಹುಮಟ್ಟಿಗೆ ಕ್ಷುಲಕವಾಗಿಸುತ್ತದೆ, ಮತ್ತು ಅಂಥ ಸಮಯದಲ್ಲಿ ಬ್ರಹ್ಮಚರ್ಯ ಉಂಟಾಗುವುದು. ’ಓ, ಅದು ಆದಾಗ ಆಗುತ್ತದೆ, ಈಗ ನನ್ನ ಚಪಲ ತೀರಿಸಿಕೊಳ್ಳೋಣ’ ಎಂದಲ್ಲ ಅದರ ಅರ್ಥ. ಅಲ್ಲ!

ಅರಬ್ಬೀ ಪ್ರಾಂತ್ಯದ ಒಬ್ಬ ಪ್ರಾಧ್ಯಾಪಕರು ಒಂದು ಕುತೂಹಲಕಾರಿ ವಿಷಯವನ್ನು ಹೇಳಿದರು.ಅವರು ಹೇಳಿದರು, ಶರೀರದಲ್ಲಿನ ಪ್ರತಿ ದ್ರವವು ಮಿದುಳಿನ ದ್ರವದೊಂದಿಗೆ ಸಂಪರ್ಕ ಹೊಂದಿದೆ, ಯಾವುದೇ ಕಳೆದುಕೊಂಡ ದ್ರವದಿಂದ ಶೇಕಡ ೨೦ರಷ್ಟು ಮಿದುಳಿನ ದ್ರವವು ಇಳಿಯುತ್ತದೆ.ಇದು ಅವರು ಮಾಡುತ್ತಿರುವ ಒಂದು ದೊಡ್ಡ ಸಂಶೋಧನೆ. ಆದ್ದರಿಂದಲೇ ಹಿಂದಿನ ಜನರು ಹೇಳಿರುವುದು, ನೀವು ವಿದ್ಯಾರ್ಥಿಯಾಗಿದ್ದರೆ, ಮತ್ತು ಮಿದುಳಿಗೆ ಕೆಲಸ ಕೊಡಬೇಕಿದ್ದರೆ, ನೀವು ಅದಕ್ಕೆ ಬ್ರಹ್ಮಚರ್ಯವನ್ನು ಸೇರಿಸಬೇಕು.

ಹಾಗೆ, ಮೊದಲ ೨೫ ವರ್ಷಗಳ ಕಾಲ ನೀವು ಬ್ರಹ್ಮಚರ್ಯವನ್ನು ಪಾಲಿಸಬೇಕು, ನಂತರ ೨೫ರಿಂದ ೫೦ರ ವಯಸ್ಸಿನ ತನಕ ನೀವು ಗೃಹಸ್ಥಾಶ್ರಮದಲ್ಲಿದ್ದು, ಕೌಟುಂಬಿಕ ಜೀವನದ ಹರ್ಶೋಲ್ಲಾಸಗಳನ್ನು ಪಡೆಯಬಹುದು, ಆದರೆ ೫೦ರ ಬಳಿಕವಲ್ಲ.
೫೦ರ ನಂತರ, ನೀವು ನಿಧಾನವಾಗಿ ಕೆಳಗಿಳಿಯಬೇಕು, ಇಲ್ಲದಿದ್ದರೆ ಅದು ನಿಮಗೊಂದು ಚಟವಾಗಿಬಿಡುತ್ತದೆ.

ಜನರಿಗೆ ಈ ಚಟವಿದ್ದಾಗ, ಶರೀರಕ್ಕೆ ನಿರ್ವಹಿಸಲಾಗುವುದಿಲ್ಲ, ಆದರೆ ಮನಸ್ಸು ಅದರ ಬಗ್ಗೆ ಜ್ವರತೆ ಇರುತದೆ.ಶರೀರ ಮತ್ತು ಮನಸ್ಸು ಜೊತೆಗೆ ಸಾಗಬೇಕು.ಇಲ್ಲವಾದರೆ, ಇದು ಬುಲೀಮಿಯಾದಂತೆ ಒಂದು ಖಾಯಿಲೆಯೆಂದು ನಾನು ಹೇಳುತ್ತೇನೆ.ದೇಹ ಇನ್ನೂ ಆಹಾರ ಬೇಡವೆನ್ನುತ್ತದೆ, ಆದರೆ ಮನಸ್ಸು ಇಲ್ಲ, ಇನ್ನೂ ತುಂಬಿಸು ಎನ್ನುತ್ತದೆ.

ಹೀಗೆ, ೭೦-೮೦ ವಯಸ್ಸಿನವರೂ ಅಶ್ಲೀಲ ಚಿತ್ರಗಳನ್ನು ನೋಡುತ್ತಾರೆ, ಏನನ್ನೂ ಮಾಡಲು ನಿಶ್ಶಕ್ತರಾಗಿದ್ದರೂ! ಇದು ಶೋಚನೀಯ ಸ್ಥಿತಿ.ಇದು ಬ್ರಹ್ಮಚರ್ಯವಲ್ಲ. ಇದು ಮನಸ್ಸು ಸರಿಯಾದ ಸ್ಥಿತಿಯಲ್ಲಿ ಇಲ್ಲದಿರುವುದು.
ಮಧ್ಯಮ ಮಾರ್ಗ (ಸಂಯಮ) ಎಂಬುದನ್ನು ಬ್ರಹ್ಮಚರ್ಯ ಎಂದು ಕರೆಯುವುದು; ಸಂಯಮವು ಬ್ರಹ್ಮಚರ್ಯ ವ್ರತ.

ಪ್ರ: ಪ್ರಿಯ ಗುರೂಜಿ, ಇಂದು ನಾವು ಸೇವಿಸುವ ಆಹಾರದಲ್ಲಿ ಬಹಳಷ್ಟು ರಾಸಾಯನಿಕ ಪದಾರ್ಥಗಳಿವೆ ಮತ್ತು ಸರಕಾರದ ಕಾರ್ಯನೀತಿ, ಧೋರಣೆ ಇದನ್ನು ಪ್ರಚೋದಿಸುತ್ತವೆ. ಇದನ್ನು ಹೇಗೆ ನಿರ್ವಹಿಸುವುದು?ಅಲ್ಲದೇ ಸಾವಯವ ಕೃಷಿಯಿಂದ ಲಭಿಸುವ ಆಹಾರ ಮತ್ತು ಸಾವಯವ ಕೃಷಿಯ ಬಗ್ಗೆಯೂ ದಯವಿಟ್ಟು ಹೇಳಬೇಕು.

ಶ್ರೀ ಶ್ರೀ: ಸಾವಯವ ಕೃಷಿಯು ಈ ಭೂಮಿಯ ಭವಿಷ್ಯ.

ನಮಗೆ ಈ ಭೂಮಿಯು ಜೀವಂತವಾಗಿರಬೇಕಿದ್ದರೆ, ನಾವು ಸಾವಯವ ಮಾರ್ಗವನ್ನು ಅಳವಡಿಸಬೇಕು. ಬೇರೊಂದು ಮಾರ್ಗವಿಲ್ಲ. ಕೆಲವು ಜನ ಎಷ್ಟು ಲೋಭಿ ಮತ್ತು ಸ್ವಾರ್ಥರಾಗಿರುತ್ತಾರೆಂದರೆ ಅವರು ಈ ಭೂಮಿಗಾಗಿ ಕಳವಳ ಪಡುವುದಿಲ್ಲ, ಮತ್ತು ಹಾಗಾಗಿ ಅವರು  ಅಪಾಯಕಾರಿ ವಿಷಯಗಳನ್ನು ರೈತರಿಗೆ ಉತ್ತೇಜಿಸುತ್ತಾರೆ. ಒಂದೋ ಎರಡೋ ಬೆಳೆಗಳು ಚೆನ್ನಾಗಿ ಬರುತ್ತವೆ, ಹಾಗೆ ಅದು ರೈತರನ್ನು ಆಕರ್ಷಿಸಿ ಅವರು ಅದನ್ನು ತೆಗೆದುಕೊಳ್ಳುತ್ತಾಎ. ಒಮ್ಮೆ ಅವರು ಅದನ್ನು ತೆಗೆದುಕೊಂಡ ನಂತರ, ಮೂರನೆ ಅಥವಾ ನಾಲ್ಕನೇ ಫಸಲಿನಿಂದ ಎಲ್ಲವೂ ಇಳಿದುಹೋಗುತ್ತದೆ ಮತ್ತು ನೆಲವೂಕೆಟ್ಟು ಹೋಗುತ್ತದೆ. ಭೂಮಿಯು ವ್ಯವಸಾಯಕ್ಕೆ ಅಯೋಗ್ಯವಾಗಿಬಿಡುತ್ತದೆ.ಇದುವೇ ಸಮಸ್ಯೆ.ಅದಕ್ಕಾಗಿಯೇ ನಾವು ರೈತರಿಗೆ ಸಾವಯವ ಕೃಷಿ; ಪ್ರಾಚೀನ ರೀತಿಯ ವ್ಯವಸಾಯವ್ಯನ್ನು ಕಲಿಸಲಿಕ್ಕಾಗಿ ಒಂದು ಕೃಷಿ ವಿದ್ಯಾನಿಲಯವನ್ನು ಸ್ಥಾಪಿಸಿದ್ದೇವೆ.

ಹಿಂದಿನ ದಿನಗಳಲ್ಲಿ, ಜನರು ಮೂರು ಬೆಳೆಗಳನ್ನು ಬೆಳೆಸುತ್ತಿದ್ದರು.ಹಾಗೆ ಒಂದು ಬೆಳೆ ಸತ್ತರೂ ಇನ್ನೆರಡು ಬೆಳೆಗಳಿವೆ.ಹಾಗೆ ಜನರು ಎಂದೂ ಹಸಿವಿನಿಂದ ಬಳಲುತ್ತಿರಲಿಲ್ಲ. ಅವರು ಎಂದೂ ದಿವಾಳಿಯಾಗಲಿಲ್ಲ ಅಥವಾ ನಷ್ಟದಲ್ಲಿ ಮುಳುಗಲಿಲ್ಲ.

ಉದಾಹರಣೆಗೆ ಅವರು ಯಾವುದಾದರೂ ಧಾನ್ಯಗಳೊಂದಿಗೆ ಕಬ್ಬು ಇತರೆಯನ್ನು ಬೆಳೆಸುತ್ತಿದ್ದರು, ಹಾಗೆ ಒಂದು ಬೆಳೆ ಬರದಿದ್ದರೆ, ಇನ್ನೆರಡು ಇರುತ್ತಿದ್ದವು.ಸಾಮಾನ್ಯವಾಗಿ ಎಲ್ಲಾ ಮೂರು ಬೆಳೆಗಳು ಬರುತ್ತಿದ್ದವು ಮತ್ತು ಅವುಗಳ ವೈವಿಧ್ಯದಿಂದ ತಾನಾಗಿಯೇ ಮಣ್ಣಿನಲ್ಲಿ ಸಾರಜನಕದ ಅಂಶವನ್ನು ಹೊಂದಿಸುತ್ತಿತ್ತು.ಈ ರೀತಿಯ ವ್ಯವಸಾಯಕ್ಕೆ ಪ್ರತಿಯೊಬ್ಬರು ಮರಳಬೇಕಾಗಿರುವುದು.

ನಾವು ಅಗ್ನಿಹೋತ್ರ (ಒಂದು ವಿಧದ ವೈದಿಕ ಯಜ್ಞ)ವನ್ನು ಮಾಡಬೇಕು, ಆಗ ಅದು ಹಾನಿಕಾರಕ ಹುಳಜಂತುಗಳನ್ನು ತಡೆಗಟ್ಟುತ್ತದೆ. ಹಾಗೆ ನೀವು ಕ್ರಿಮಿನಾಶಕಗಳನ್ನು ಹಾಕಬೇಕಾಗಿಲ್ಲ. ಮತ್ತೆ ಪ್ರಾಕೃತಿಕ ಕ್ರಿಮಿನಾಶಕಗಳಿವೆ: ಗೋಮೂತ್ರ, ಕಹಿಬೇವಿನೆಲೆ ಮತ್ತು ಹಲವಾರು ಅಂಥ ಪದಾರ್ಥಗಳು.

ಹಾಗೆ ನಾವು ನೀರನ್ನು, ಈ ಭೂಮಿಯನ್ನು ಮತ್ತು ಜನರ ಆರೋಗ್ಯವನ್ನು ಕೆಡಿಸದಂಥ ಈ ಬಗೆಯ ವ್ಯವಸಾಯಕ್ಕೆ ಮರಳಬೇಕಾಗಿದೆ.

ಪ್ರ: ಗುರೂಜಿ, ನಾವು ಮೂರು ಅಸಮರ್ಥ ವೈದ್ಯರ ಬಳಿಗೆ ಹೋದ್ದರಿಂದ ನಾನು ನನ್ನ ಕುಟುಂಬದ ಮೂರು ಮಂದಿಯನ್ನು ಕಳೆದುಕೊಂಡೆ. ನಾವು ವೈದ್ಯಕೀಯ ಸೇವಾಕ್ಷೇತ್ರದಲ್ಲಿ ಏನು ತಪ್ಪು ಮಾಡುತ್ತಿದ್ದೇವೆ, ಮತ್ತು ನಾವದನ್ನು ಹೇಗೆ ಸುಧಾರಿಸಬಹುದು?

ಶ್ರೀ ಶ್ರೀ: ಇದನ್ನು ವೈದ್ಯರು ಕುಳಿತು ಚರ್ಚಿಸಬೇಕು.

ಮೊತ್ತಮೊದಲನೆಯದಾಯಿ ನಾನು ಹೇಳುವುದು, ವೈದ್ಯರು ಧ್ಯಾನ ಮಾಡಬೇಕು, ಅವರ ಮನಸ್ಸು ತಿಳಿಯಾಗುತ್ತದೆ ಮತ್ತು ಅವರು ತಮ್ಮೊಳಗಿನ ಆಳದಲ್ಲಿರುವ ಅಂತರ್ದೃಷ್ಟಿಯ(ಒಳ ಅರಿವು)  ಸಾಮರ್ಥ್ಯವನ್ನು ಹೊರತೆಗೆಯಬಹುದು.

ಆಯುರ್ವೇದ ವೈದ್ಯರು ಮಾಡುವುದು ಇದನ್ನೇ, ಅವರು ನಿಮ್ಮ ನಾಡಿಯನ್ನು ಹಿಡಿದು ನಿಮ್ಮಲ್ಲಿ ಏನು ತೊಂದರೆ ಇದೆ ಎಂದು ಗುರುತಿಸಿ ನಿರ್ಣಯಿಸುತ್ತಾರೆ.ಇದನ್ನು ಮಾಡುವುದಕ್ಕೂ ಅವರು ಧ್ಯಾನ ಮಾಡಬೇಕು, ಅದು ಬಹಳ ಮುಖ್ಯ. ಮನಸ್ಸಿನ ಒಳಗಿನ ಅಂತರ್ದೃಷ್ಟಿಯ ಮೂಲವನ್ನು ಶೋಧಿಸುವುದಕ್ಕಾಗಿ ಮನಸ್ಸು ಸಪಂದನಶೀಲವಾಗಿ ಮಿಡಿಯುತ್ತಿರಬೇಕು.

ನೋಡಿ ಅವರಿಗೆ ಅಂತರ್ದೃಷ್ಟಿಯಿಲ್ಲದಿದ್ದರೆ, ಅವರು ಕತ್ತಲಿನಲ್ಲಿ ಏನು ಔಷಧ ಕೊಡುವುದು ಎಂದು ತಡಕಾಡುತ್ತಿದ್ದಾರೆ. ಆದ್ದರಿಂದಲೇ , ಬಹಳ ವೈದ್ಯರು ಇದ್ದರೂ, ಕೆಲವು ವೈದ್ಯರಷ್ಟೇ ಜನರನ್ನು ಗುಣಮುಖಗೊಳಿಸುವವರಲ್ಲಿ ಗಣಿಸಲ್ಪಡುತ್ತಾರೆ. ಯಾಕೆ?ಇದು ಸಾಧ್ಯವಾಗುವುದು ಹೇಗೆಂದರೆಅವರಲ್ಲಿ ತಮ್ಮ ಅಂತರ್ದೃಷ್ಟಿಯ ಸಾಮರ್ಥ್ಯವನ್ನು ಉಪಯೋಗಿಸುವ ಮತ್ತು ರೋಗಿಗಳಿಗೆ ಸರಿಯಾದ ಔಷಧಿಯನ್ನು ಕೊಡುವ ವರವಿದೆ.

ವೈದ್ಯರು ಧ್ಯಾನ ಮಾಡಬೇಕು ಮತ್ತು ಪ್ರಶಾಂತ ಮನಸ್ಸಿನಿಂದ ವೈದ್ಯಕೀಯ ಪರಿಶೀಲನೆ ಮಾಡಿ ನಿರ್ಧಾರ ತೆಗೆದುಕೊಳ್ಳಬೇಕು.

ಇತ್ತೀಚೆಗೆ ಏ.ಐ.ಎಂ.ಎಸ್.(ಏಮ್ಸ್) ನಡೆಸಿದ ಸಮೀಕ್ಷೆಯನ್ನು ಓದಿ ತಿಳಿದೆ- ಶೇಕಡಾ ೬೦ರಷ್ಟು ವೈದ್ಯರೇ ಅಸ್ವಸ್ಥರು ಎಂದು. ಅವರ ಗಮನ ವ್ಯಾಪ್ತಿ ಬಹಳ ಕಡಿಮೆಯಿರುತ್ತದೆ, ಅದಕ್ಕಾಗಿಯೇ ನರ್ಸ್ ಅವರಿಗೆ ಶಸ್ತ್ರಕ್ರಿಯೆಯ ಮೊದಲು ವೈದ್ಯರಿಗೆ ಕೊಡುವ ಉಪಕರಣಗಳನ್ನು ಎಣಿಸಬೇಕು, ಮತ್ತೆ ಇನ್ನೊಮ್ಮೆ ಮರಳಿ ಪಡೆದ ಉಪಕರಣಗಳನ್ನು ಎಣಿಸಬೇಕು.ಹಲವು ಸಲ ಅವರು ಚಾಕು ಅಥವಾ ಸೂಜಿ ಉದಕರಣಗಳನ್ನು ದೇಹದೊಳಗೆ ಬಿಟ್ಟು ಹೊಲಿಗೆ ಹಾಕುತ್ತಾರೆ.

ಅದಕ್ಕಾಗಿ ಅವರು ಎಷ್ಟು ಉಪಕರಣಗಳು ಹೋದವು ಮತ್ತು ಎಷ್ಟು ಮರಳಿ ಬಂದವು ಎಂದು ಪಟ್ಟಿ ಮಾಡುತ್ತಾರೆ.ಹಾಗಾಗಿ ಪ್ರತಿ ವೈದ್ಯನೂ ಸ್ವಲ್ಪ ಕಾಲ ತೆಗೆದುಕೊಂಡು ವಿಶ್ರಮಿಸಬೇಕು, ಅವರು ಒತ್ತಡಕ್ಕೊಳಗಾಗುವುದು ದುಬಾರಿಯಾಗುತ್ತದೆ.

ಪೈಲಟ್.ಗಳು, ವಾಯು ಸಂಚಾರ ನಿಯಂತ್ರಣ ಗೋಪುರಗಳಲ್ಲಿ ಕೆಲಸ ಮಾಡುವವರು, ವೈದ್ಯರು - ಈ ಉದ್ಯೋಗದಲ್ಲಿರುವವರಿಗೆ ಬಹಳ ಮಾನಸಿಕ ಶಕ್ತಿಯು ಅಗತ್ಯ.ಅವರು ಯಾವಗಲೂ ತುದಿಗಾಲಲ್ಲಿ ನಿಂತಿರಬೇಕಾಗುತ್ತದೆ, ಜಾಗೃತರಾಗಿರಬೇಕಾಗುತ್ತದೆ.ಅವರು ಒಂದು ಸಣ್ಣ ತಪ್ಪನ್ನು ಮಾಡಿದರೂ ನಿರ್ವಹಿಸಲಾಗುವುದಿಲ್ಲ.

ವಾಯು ಸಂಚಾರ ನಿಯಂತ್ರಣ ಗೋಪುರದಲ್ಲಿ ಕೆಲಸ ಮಾಡುವವರು , ಒಂದು ನಿಮಿಷಕ್ಕೂ ಕಿರಿದಾಗಿ ನಿದ್ರಿಸಲಾಗುವುದಿಲ್ಲ, ಅವರು ಬಹಳ ನಿಖರ ಮತ್ತು ಎಚ್ಚರವಾಗಿರಬೇಕು. ಆದರೆ ಮಾನಸಿಕ ಶಕ್ತಿಯಿಲ್ಲದೇ ಅಥವಾ ಧ್ಯಾನಸ್ಥ ಅರಿವಿಲ್ಲದೆ ಅವರು  ಅದನ್ನು ಮಾಡುವುದು ಹೇಗೆ ಸಾಧ್ಯ? ಹಾಗಾಗಿ ಅತಿ ಒತ್ತಡ ಮತ್ತು ಅತಿ ಅಪಾಯ-ಸಂಬಂಧಿಸಿದ ಕೆಲಸದಲ್ಲಿರುವವರು ಧ್ಯಾನವನ್ನು ಕಡ್ಡಾಯವಾಗಿ ಮಾಡಬೇಕು.

ಪ್ರ: ಗುರೂಜಿ, ಪ್ರಯತ್ನವಿಲ್ಲದಿರುವುದು(ನಿರಾಯಾಸವಾಗಿರುವುದು) ನನ್ನನ್ನು ಜೀವನದಲ್ಲಿ ಹೇಗೆ ಯಶಸ್ವಿಯಾಗಿಸಬಹುದು? ದಯವಿಟ್ಟು ಬಿಡಿಸಿ ಹೇಳಿ.

ಶ್ರೀ ಶ್ರೀ: ಒಂದು ಬಾಣವು ಮುಂದೆ ಹೋಗಬೇಕಾದರೆ ಅದನ್ನು ಹಿಂದೆ ಎಳೆಯಬೇಕಗಿರುವಂತೆ, ಅಲ್ಲ?

ಹಾಗೆಯೇ, ನಿರಾಯಾಸವಾಗಿರುವುದು ನಿಮಗೆ ಗಾಢ ವಿಶ್ರಾಂತಿಯನ್ನು ನೀಡುತ್ತದೆ, ಮತ್ತು ಅದು ನಿಮ್ಮ ಅಂತರ್ದೃಷ್ಟಿಯ, ಸೃಜನಾತ್ನಕತೆಯ ಮತ್ತು ಶಕ್ತಿಯ ಮೂಲವನ್ನು ಹೊರತೆಗೆಯಲು ಸಹಾಯವಾಗುತ್ತದೆ.ಆಗ ನೀವು ಹೊರಬಂದು ಅದರ ಅರಿವಿನಿಂದ ಕಾರ್ಯನಿರ್ವಹಿಸುತ್ತೀರಿ.

’ನಾನು ಸಿತಾರ್ ನುಡಿಸುವುದನ್ನು ಕಲಿಯಲು ಯಾವುದೇ ಪರಿಶ್ರಮ ಹಾಕುವುದಿಲ್ಲ ಆದರೆ ನನಗೆ ಮಹಾನ್ ಸಿತಾರ್ ವಾದಕನಾಗಬೇಕು’, ಎಂದು ನಿಮಗೆ ಹೇಲಲಾಗುವುದಿಲ್ಲ. ನೀವು ಪರಿಶ್ರಮ ಹಾಕಬೇಕು.ಅದರೊಂದಿಗೆ ನಿರಾಯಾಸವಾಗಿರುವುದು ನಿಮಗೆ ಪರಿಶ್ರಮ ಹಾಕಲು ಸಹಾಯವಾಗುತ್ತದೆ.

ಪ್ರ: ಪ್ರತಿ ಆತ್ಮವೂ ಒಂದು ದಿನ ಮೋಕ್ಷ ಪಡೆಯುವುದೇ? ಈ ಭೂಮಿ ಇನ್ನೆಷ್ಟು ಕಾಲ ಇರುತ್ತದೆ ಮತ್ತು ನಾವೆಲ್ಲರೂ ಮುಂದಿನ ಜನ್ಮದಲ್ಲೂ ಕೃಪೆಯನ್ನು ಪಡೆಯುತ್ತೇವೋ?

ಶ್ರೀ ಶ್ರೀ: ನೀವು ನಿಮ್ಮ ಬಗ್ಗೆ ಕೇಳಿ. ನೀವು ಜಗತ್ತಿನ ಎಲ್ಲಾ ಆತ್ಮಗಳ ಬಗ್ಗೆ ಕೇಳುತ್ತೀರಿ?ಮೊದಲನೆಯದಾಗಿ ಎಲ್ಲಾ ಆತ್ಮಗಳಿಗೂ ಮೋಕ್ಷ ಬೇಕೆಂದಿದೆಯೇ? ಅವುಗಳಿಗೆ ಬೇಕೆಂದನಿಸದೇ ಇದ್ದಿರಬಹುದು; ಸರಿಯೇ!

ನಿಮಗೆ ಗೊತ್ತೇ.ಕೆಲವೊಮ್ಮೆ ನಾವು ಸಾಮಾನ್ಯೀಕರಿಸಿದ ವಾಕ್ಯಗಳನ್ನು ಹೇಳುತ್ತೇವೆ ಮತ್ತು ಈ ಸಾಮಾನ್ಯೀಕರಿಸಿದ ಪ್ರಶ್ನೆಗಳನ್ನೂ ಕೇಳುತ್ತೇವೆ.ಎಲ್ಲಾ ಆತ್ಮಗಳೂ ಮೋಕ್ಷವನ್ನು ಹೊಂದುತ್ತವೋ ಎಂಬುದು ನನಗೆ ಗೊತ್ತಿಲ್ಲ, ಆದರೆ ನಿಮಗೆ ಅದು ಬೇಕಿದ್ದರೆ, ಹೌದು, ಅದು ಸಾಧ್ಯ. ನಿಮಗೆ ಎಲ್ಲಾ ಅವಕಾಶಗಳಿವೆ.

ನಾವು ಇದೆಲ್ಲವನ್ನೂ ಈ ಜನ್ಮದಲ್ಲೇ ಮುಗಿಸೋಣ, ನೀವು ನನ್ನನ್ನು ಮುಂದಿನ ಜನ್ಮಕ್ಕೂ ಏಕೆ ಎಳೆಯುತ್ತೀರಿ.

ದೇವರು ಎಲ್ಲ ರೂಪಗಳಲ್ಲೂ ಇದ್ದಾನೆ.ಭಗವಂತನಿಲ್ಲದ ಸ್ಥಳವಿಲ್ಲ. ಹಾಗಾಗಿ ಭಗವಂತ ಎಲ್ಲೆಲ್ಲೂ ಇದ್ದಾನೆ.

ಭಾನುವಾರ, ಫೆಬ್ರವರಿ 3, 2013

ಭಾರತ ಬದಲಾವಣೆಯತ್ತ ಸಾಗುವ ಸಮಯ ಇದೋ ಬಂದಿದೆ


ದೆಹಲಿ, ಭಾರತ
೩ ಫೆಬ್ರುವರಿ, ೨೦೧೩

ಬೆಂಕಿಯಿರಬೇಕು, ಆದರೆ ಅದು ತಮ್ಮ ಮನೆಯನ್ನೇ ಸುಟ್ಟುಹಾಕಬಾರದು ಎಂಬುದನ್ನು ಸರಿಯಾಗಿಯೇ ಹೇಳಲಾಗಿದೆ.

ಒಂದು ರೀತಿಯಲ್ಲಿ, ಭಾರತದ ಯುವಕರು ಎಚ್ಚೆತ್ತುಕೊಳ್ಳುತ್ತಿರುವುದಕ್ಕೆ ನನಗೆ ಸಂತೋಷವಾಗುತ್ತಿದೆ. ಈಗ ಜನರು ನಮ್ಮನ್ನು ಲಘುವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ, ಯಾಕೆಂದರೆ ಯುವಕರು ಎಚ್ಚೆತ್ತಿದ್ದಾರೆ.

ನಮಗೆ ಭ್ರಷ್ಟಾಚಾರದ ಬಗ್ಗೆ ಅರಿವಾಗಿದೆ ಮತ್ತು ನಾವು ಅದರ ವಿರುದ್ಧ ನಮ್ಮ ಧ್ವನಿ ಎತ್ತಿದ್ದೇವೆ. ಪ್ರತಿದಿನವೂ ಭ್ರಷ್ಟಾಚಾರ ಮತ್ತು ಇತರ ರೀತಿಯ ಅಪರಾಧಗಳ ವಿರುದ್ಧ ಧ್ವನಿ ಎತ್ತಲಾಗುತ್ತಿದೆ.

’ಇನ್ನು ಮುಂದೆ ನಾವು ಅಪರಾಧವನ್ನು ಸಹಿಸೆವು ಮತ್ತು ನಮಗೆ ಕಟ್ಟುನಿಟ್ಟಾದ ಕಾನೂನುಗಳು ಬೇಕು’, ಇದಕ್ಕಾಗಿ ದಿಲ್ಲಿಯ ಯುವಕರು ತಮ್ಮ ದನಿ ಎತ್ತಿದ್ದಾರೆ ಮತ್ತು ಇಡೀ ದೇಶದ ಯುವಕರು ಇದಕ್ಕೆ ಸೇರಿಕೊಂಡಿದ್ದಾರೆ.

ಬೆಂಕಿಯನ್ನು ಹಚ್ಚಲಾಗಿದೆ ಮತ್ತು ಅದು ಒಳ್ಳೆಯದು, ಆದರೆ ನಾವಿದನ್ನು ಹಿಂಸೆಯ ಕಡೆಗೆ ತೆಗೆದುಕೊಂಡು ಹೋಗದಿರುವಂತೆ ನಾವು ಖಾತ್ರಿಪಡಿಸಿಕೊಳ್ಳಬೇಕು.

ನಮ್ಮನ್ನು ಎಚ್ಚರಗೊಳಿಸಲು ಕ್ರೋಧವು ಆವಶ್ಯಕವಾಗಿದೆ. ಆದರೆ ನಂತರ ಅದು ಅತಿಯಾದರೆ ಮತ್ತು ಸರಿಯಾದ ಮನೋಭಾವ ಹಾಗೂ ಒಂದು ಕ್ರಿಯಾ ಯೋಜನೆಯಿಲ್ಲದೆಯೇ ನಾವು ಕೇವಲ ಕ್ರೋಧಗೊಂಡಿದ್ದರೆ, ಆಗ ಆ ಕ್ರೋಧವು ನಮ್ಮನ್ನು ಸುಟ್ಟು ಹಾಕಲಿದೆ. ಯಾವುದೇ ರಚನಾತ್ಮಕ ಚಟುವಟಿಕೆಯ ಬದಲಾಗಿ ಅದು ಕೇವಲ ವಿನಾಶವನ್ನು ಮಾತ್ರ ತರುವುದು. ಕ್ರೋಧವು ಆವಶ್ಯಕವಾಗಿದೆ ಮತ್ತು ನಾವು ಆ ಕ್ರೋಧವನ್ನು, ಆ ಶಕ್ತಿಯನ್ನು ಸರಿಯಾದ ದಿಕ್ಕಿನಲ್ಲಿ ಪ್ರವಹಿಸುವಂತೆ ಮಾಡಬೇಕಾಗಿದೆ.

ಇದು ಭಾರತದ ವಿಶೇಷತೆ. ನಾವೆಲ್ಲರೂ ಒಂದು ಕ್ರಾಂತಿಯನ್ನು ಬಯಸುತ್ತೇವೆ, ಆದರೆ ಒಂದು ಶಾಂತಿಪೂರ್ಣವಾದ ರೀತಿಯಲ್ಲಿ. ನಾವೆಲ್ಲರೂ ನಮ್ಮ ತಲೆಗಳನ್ನು ಎತ್ತಿಹಿಡಿದು ನಿಲ್ಲಲು ಮತ್ತು ಪರಸ್ಪರರನ್ನು ದೂಷಿಸದೆಯೇ ಆಗಬೇಕಾಗಿರುವ ಎಲ್ಲಾ ಕೆಲಸವನ್ನು ಮಾಡಲು ತಯಾರಿದ್ದೇವೆ.

ಯುವಜನರಲ್ಲಿ ಬಹಳಷ್ಟು ಶಕ್ತಿಯಿದೆ. ಸಮಾಜವು ದೊಡ್ಡ ಪ್ರಗತಿಯನ್ನು ಹೊಂದುವುದು ಈ ಶಕ್ತಿಯನ್ನು ಸರಿಯಾದ ದಿಕ್ಕಿನಲ್ಲಿ ಪ್ರವಹಿಸುವಂತೆ ಮಾಡಿದಾಗಲೇ.

ಇವತ್ತು ನಾವು ಒಂದು ಉತ್ತಮ ಭಾರತಕ್ಕಾಗಿ ಸ್ವಯಂಸೇವಕರಾಗಿ ಎಂಬ ಈ ಬ್ಯಾನರಿನ ಅಡಿಯಲ್ಲಿ ಬೇರೆ ಬೇರೆ ಸಮಸ್ಯೆಗಳನ್ನು ಕೈಗೆತ್ತಿಕೊಂಡಿದ್ದೇವೆ, ಯಾಕೆಂದರೆ ವಿವಿಧ ಜನರು ವಿವಿಧ ಆಸಕ್ತಿಗಳನ್ನು ಹೊಂದಿದ್ದಾರೆ.

ಈ ಕ್ರಾಂತಿಯು ಕೇವಲ ಒಂದು ಸಂಸ್ಥೆಯ ಕೆಲಸವಲ್ಲ. ಇದು ಇಡೀ ದೇಶದ ಕೆಲಸವಾಗಿದೆ. ಈ ಚಳುವಳಿಯನ್ನು ಬೆಂಬಲಿಸಿ ಈಗಾಗಲೇ ಇದರೊಂದಿಗೆ ಸೇರಿಕೊಂಡಿರುವ ಹಲವಾರು ಸಂಸ್ಥೆಗಳು ಮತ್ತು ಸಂಯುಕ್ತ ರಾಷ್ಟ್ರ ಸಂಸ್ಥೆಗಳಿವೆ ಹಾಗೂ ಇದರಲ್ಲಿ ಸೇರಿಕೊಳ್ಳಲು ನಾವು ಸರಕಾರದ ಜನರನ್ನೂ ಸ್ವಾಗತಿಸುತ್ತೇವೆ. ನಾವು ಎಲ್ಲರೂ ಬಂದು ಈ ಚಳುವಳಿಯಲ್ಲಿ ನಮ್ಮೊಂದಿಗೆ ಸೇರಿಕೊಳ್ಳಲು ಸ್ವಾಗತಿಸುತ್ತೇವೆ. ಭಾರತವನ್ನು ಒಂದು ಸುಂದರ ಮತ್ತು ಸುರಕ್ಷಿತ ದೇಶವನ್ನಾಗಿ ನೋಡಲು, ನಾವೆಲ್ಲರೂ ಜೊತೆಯಲ್ಲಿ ಸಮಗ್ರತೆಯೊಂದಿಗೆ ಕೆಲಸ ಮಾಡೋಣ.

ಇವತ್ತು, ಜನರಲ್ಲಿ ಸುರಕ್ಷಿತವಾಗಿರುವ ಭಾವನೆಯಿಲ್ಲ. ಪ್ರಪಂಚದ ಯಾವುದೇ ಭಾಗದ ಜನರನ್ನಾದರೂ ಸ್ವೀಕರಿಸುವ ಒಂದು ದೇಶವೆಂಬುದಾಗಿ ಭಾರತವು ಯಾವತ್ತೂ ತಿಳಿಯಲ್ಪಡುತ್ತಿತ್ತು. ಜನರು ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಅವರು ಭಾರತಕ್ಕೆ ಬರುತ್ತಿದ್ದರು ಮತ್ತು ಸುರಕ್ಷತೆಯನ್ನು ಅನುಭವಿಸುತ್ತಿದ್ದರು. ಈಗ ನಮ್ಮದೇ ದೇಶದಲ್ಲಿ, ನಾವು ಸುರಕ್ಷಿತವಾಗಿರುವೆವೆಂದು ನಮಗೆ ಅನ್ನಿಸುವುದಿಲ್ಲ!

ಸ್ತ್ರೀಯರು ಸುರಕ್ಷತೆಯನ್ನು ಅನುಭವಿಸುತ್ತಿಲ್ಲ, ಮಕ್ಕಳು ಸುರಕ್ಷತೆಯನ್ನು ಅನುಭವಿಸುತ್ತಿಲ್ಲ, ಕಲಾವಿದರು ಸುರಕ್ಷತೆಯನ್ನು ಅನುಭವಿಸುತ್ತಿಲ್ಲ, ದಲಿತರು ಸುರಕ್ಷತೆಯನ್ನು ಅನುಭವಿಸುತ್ತಿಲ್ಲ, ಮುಸ್ಲಿಮರು ಸುರಕ್ಷತೆಯನ್ನು ಅನುಭವಿಸುತ್ತಿಲ್ಲ ಮತ್ತು ಬ್ರಾಹ್ಮಣರು ಕೂಡಾ ಈಗ ಸುರಕ್ಷತೆಯನ್ನು ಅನುಭವಿಸುತ್ತಿಲ್ಲ. ಪ್ರತಿಯೊಂದು ಜಾತಿ, ಪ್ರತಿಯೊಂದು ಒಳಪಂಗಡದ ಜನರ ಮನಸ್ಸುಗಳಲ್ಲೂ ಭಯ ಉತ್ಪತ್ತಿಯಾಗಿದೆ.    

ಇದರ ಹಿಂದಿರುವ ಕಾರಣವೇನು? ನಾವು ಇದರ ಮೂಲ ಕಾರಣದ ಕಡೆಗೆ ಹೋಗಬೇಕಾಗಿದೆ.

ನಿನ್ನೆಯಷ್ಟೇ ನಾನು ತಿಹಾರ್ ಜೈಲಿಗೆ ಹೋದೆ. ಸಾಧಾರಣವಾಗಿ, ಜನರು ರಾಮ್ ಲೀಲಾ ಮೈದಾನಕ್ಕೆ ಮೊದಲು ಬಂದು ನಂತರ ತಿಹಾರ್ ಜೈಲಿಗೆ ಹೋಗುತ್ತಾರೆ, ಆದರೆ ನಾನು ತಿಹಾರ್ ಜೈಲಿಗೆ ಮೊದಲು ಹೋಗಿ ನಂತರ ಇಲ್ಲಿಗೆ ಬಂದೆ.

ಅಪರಾಧಿಗಳಿಗೆ ಕಠಿಣ ಶಿಕ್ಷೆಯನ್ನು ಕೊಡಬೇಕೆಂದು ಸಾಮಾನ್ಯವಾಗಿ ನಾವು ಹೇಳುತ್ತೇವೆ. ಹೌದು, ಖಂಡಿತವಾಗಿ ನಾವು ಕೊಡಬೇಕು. ಅಪರಾಧಿಗಳಿಗೆ ನಾವು ಅತ್ಯಂತ ಕಠಿಣ ಶಿಕ್ಷೆಗಳನ್ನು ಕೊಡಬೇಕು. ಆದರೆ ಈ ಅಪರಾಧಗಳನ್ನು ಅವರು ಮೊದಲನೆಯದಾಗಿ ಯಾಕೆ ಮಾಡಿದರು ಎಂಬುದರ ಕಡೆಗೆ ಕೂಡಾ ನಾವು ಆಳವಾಗಿ ನೋಡಬೇಕು.

ನಿನ್ನೆ ತಿಹಾರ್ ಜೈಲಿನಲ್ಲಿ ನಾವು ಒಂದು ಕೌಶಲ್ಯ ತರಬೇತಿ ಕಾರ್ಯಕ್ರಮವನ್ನು ಪ್ರಾರಂಭಿಸಿದೆವು. ನಿಮಗೆ ಗೊತ್ತಾ, ನೀವು ಒಂದು ದಿನವನ್ನು ಜೈಲಿನಲ್ಲಿ ಅಪರಾಧಿಗಳೊಂದಿಗೆ ಕಳೆದರೆ, ನಿಮ್ಮ ಹೃದಯವು ಕರಗುವುದು. ನ್ಯೂಯೋರ್ಕ್ ಜೈಲಿನಲ್ಲಿ ಒಬ್ಬ ವ್ಯಕ್ತಿಯಿದ್ದ. ಅವನು ಹಲವಾರು ಲೈಂಗಿಕ ಅಪರಾಧಗಳನ್ನೆಸಗಿದ್ದ ಮತ್ತು ಹಲವಾರು ಮಹಿಳೆಯರನ್ನು ಕೊಂದಿದ್ದ. ಗಲ್ಲಿಗೇರಿಸುವುದಕ್ಕೆ ಸ್ವಲ್ಪ ಮೊದಲು, ಅವನ ಕೊನೆಯ ಆಸೆಯೇನೆಂದು ಅವನಲ್ಲಿ ಕೇಳಿದಾಗ ಅವನಂದನು, "ಲಭ್ಯವಿರುವ ಎಲ್ಲಾ ಅಶ್ಲೀಲತಾ ತಾಣಗಳನ್ನು ತೆಗೆದುಹಾಕಬೇಕು. ಆ ಅಂತರ್ಜಾಲ ತಾಣಗಳನ್ನು ನೋಡಿ ನನ್ನ ಮನಸ್ಸು ಭ್ರಷ್ಟವಾಯಿತು ಮತ್ತು ಆ ಎಲ್ಲಾ ಅಪರಾಧಗಳನ್ನು ಮಾಡಿದಾದ ನಾನು ನನ್ನ ಪ್ರಜ್ಞೆಯಲ್ಲಿರಲಿಲ್ಲ. ನಾನೇನು ಮಾಡುತ್ತಿದ್ದೆನೆಂಬ ಎಲ್ಲಾ ಪ್ರಜ್ಞೆಯನ್ನು ನಾನು ಕಳೆದುಕೊಂಡಿದ್ದೆ."

ಯಾವುದೆಲ್ಲಾ ಅಪರಾಧಗಳು ಸಂಭವಿಸುತ್ತಿವೆಯೋ, ಅವುಗಳು ಸಂಭವಿಸುವುದು ಜನರು ತಮ್ಮ ಪ್ರಜ್ಞೆಯಲ್ಲಿ ಇಲ್ಲದಿರುವಾಗ, ಮತ್ತು ಅಪರಾಧದ ದೊಡ್ಡ ಪ್ರೋತ್ಸಾಹಕವೆಂದರೆ ಮದ್ಯಸಾರ.

ಪ್ರತಿಯೊಂದು ಹಳ್ಳಿಯಲ್ಲಿ ಮದ್ಯಸಾರವು ಲಭ್ಯವಿದೆ ಮತ್ತು ಅದನ್ನು ಶುದ್ಧ ದೇಶೀ ಮದ್ಯವಾಗಿ ಮಾರಲಾಗುತ್ತದೆ ಅಥವಾ ಸ್ಥಳೀಯ ಮದ್ಯವೆಂದು ಲೇಬಲ್ ಹಚ್ಚಲಾಗುತ್ತದೆ.

ಒಬ್ಬನು ಒಮ್ಮೆ ಒಂದು ದೊಡ್ದ ತಲೆನೋವಿನಿಂದ ನರಳುತ್ತಿದ್ದನು. ಹಾಗೆ ಅವನು ಇನ್ನೊಬ್ಬನಲ್ಲಿ ಕೇಳಿದನು, "ಎಲ್ಲಾ ಭಾಷಣಗಳನ್ನು ಕೇಳಿ ನನಗೆ ಇಷ್ಟೊಂದು ಭಯಾನಕ ತಲೆನೋವು ಬಂದಿದೆ. ನಾನೇನು ಮಾಡುವುದು?"

ಅವನ ಮಿತ್ರನಂದನು, "ನೀನು ಒಂದು ಬಾಟಲಿ ಮದ್ಯ ಕುಡಿ, ನೀನು ಸರಿಹೋಗುವೆ."

ಆ ವ್ಯಕ್ತಿ ಕೇಳಿದನು, "ಮದ್ಯಪಾನ ಮಾಡುವುದರಿಂದ ತಲೆನೋವು ಹೇಗೆ ಗುಣವಾಗುವುದು?"

ಅವನ ಮಿತ್ರನಂದನು, "ಮದ್ಯಪಾನ ಮಾಡಿದುದರಿಂದ, ನಾನು ನನ್ನ ನೆಲ, ನನ್ನ ನೌಕರಿ ಕಳೆದುಕೊಂಡೆ ಮತ್ತು ನನ್ನ ಪತ್ನಿ ನನ್ನನ್ನು ಬಿಟ್ಟಳು. ನಾನು ಎಲ್ಲವನ್ನೂ ಕಳೆದುಕೊಂಡೆ. ಮದ್ಯಪಾನದೊಂದಿಗೆ, ನಾನು ಎಲ್ಲವನ್ನೂ ಕಳೆದುಕೊಂಡಿರುವಾಗ, ಅದಕ್ಕೆ ಹೋಲಿಸಿದರೆ ಒಂದು ತಲೆನೋವು ಯಾವ ಸಂಗತಿ? ನಿನ್ನ ತಲೆನೋವು ಯಾಕೆ ಹೋಗುವುದಿಲ್ಲ? ಮದ್ಯಸಾರಕ್ಕೆ ಎಷ್ಟೊಂದು ಶಕ್ತಿಯಿದೆಯೆಂದರೆ, ಅದು ಎಲ್ಲವನ್ನೂ ನಿನ್ನಿಂದ ದೂರ ತೆಗೆದುಕೊಂಡು ಹೋಗುವುದು."

ದಿಲ್ಲಿಯಲ್ಲಿ ನಡೆದ ಅಪರಾಧಗಳು ಕ್ಷಮಿಸಲು ಅನರ್ಹವಾಗಿದ್ದವು ಮತ್ತು ಈ ಅಪರಾಧಗಳನ್ನೆಸಗಿದವರೆಲ್ಲರೂ ಮದ್ಯಪಾನ ಮಾಡಿದ್ದರು. ಆದರೆ ಮುಖ್ಯ ಅಪರಾಧಿಯಾಗಿರುವ ಮದ್ಯಸಾರದ ಕಡೆಗೆ ಯಾರೂ ಬೆರಳು ಮಾಡುತ್ತಿಲ್ಲ.

ಮದ್ಯಪಾನ ಮಾಡಿರುವ ಒಬ್ಬ ವ್ಯಕ್ತಿಯು ಪ್ರಜ್ಞೆಯಲ್ಲಿರುವುದಿಲ್ಲ; ತಾನೇನು ಮಾಡುತ್ತಿರುವೆನೆಂಬ ಅರಿವಿರುವುದಿಲ್ಲ. ಆ ಸಮಯದಲ್ಲಿ ಅವನಿಗೆ ಕಾನೂನಿನ ಬಗ್ಗೆ ಯಾವುದೇ ಅರಿವಿರುವುದಿಲ್ಲ.

ಇದೇ ರೀತಿಯಲ್ಲಿ, ಮಾದಕ ದ್ರವ್ಯಗಳ ಸಮಸ್ಯೆ. ದೇಶದ ದೊಡ್ಡ ನಗರಗಳಲ್ಲಿ ಹಲವುದರಲ್ಲಿ ಡ್ರಗ್ ಮಾಫಿಯಾವು ಹುಚ್ಚೆದ್ದು ಓಡುತ್ತಿದೆ. ದೇಶವನ್ನು ಅಧೋಗತಿಗೆ ತರುತ್ತಿರುವ ಮಾದಕ ದ್ರವ್ಯಗಳು ಮತ್ತು ಇತರ ಎಲ್ಲಾ ರೀತಿಯ ಅಮಲೇರಿಸುವ ವಸ್ತುಗಳ ಪದಾರ್ಥಗಳ ವಿರುದ್ಧ ನಾವು ಎದ್ದುನಿಲ್ಲಬೇಕು.

ಇವತ್ತು ದೇಶದಲ್ಲಿ ಮಾನವೀಯ ಮೌಲ್ಯಗಳು ಮತ್ತು ನೈತಿಕತೆಗಳ ಒಂದು ದೊಡ್ಡ ಅವನತಿಯಾಗುತ್ತಿದೆ ಮತ್ತು ನಾನು ನಿಮಗೆ ಹೇಳುತ್ತೇನೆ ಕೇಳಿ, ಮದ್ಯಸಾರ ಮತ್ತು ಈ ಎಲ್ಲಾ ಇತರ ಅಮಲು ಪದಾರ್ಥಗಳು ಇದಕ್ಕಿರುವ ಪ್ರಧಾನ ಕಾರಣಗಳಲ್ಲಿ ಒಂದಾಗಿದೆ.

ಅಪರಾಧಿಗಳು ಹೆಚ್ಚಾಗಿ ಹಾರ್ಮೋನುಗಳ ಅಸಮತೋಲನವನ್ನು ಅನುಭವಿಸುತ್ತಿರುತ್ತಾರೆ. ಅದು, ಅವರು ಹಿಂಸಾತ್ಮಕವಾಗಿ ವರ್ತಿಸಲು ಕಾರಣವಾಗುತ್ತದೆ. ಒಂದು ಸಹಾಯವಾಣಿಯನ್ನು ಪ್ರಾರಂಭಿಸಬೇಕೆಂದು ನಾನು ಹೇಳಿದುದು ಅದಕ್ಕಾಗಿಯೇ. ಸಮಾಜ-ವಿರೋಧಿ ಪ್ರವೃತ್ತಿಗಳು ಅಥವಾ ಹಿಂಸಾತ್ಮಕ ವರ್ತನೆಗಳಿರುವ ಒಬ್ಬ ಹುಡುಗ ಅಥವಾ ಒಬ್ಬಳು ಹುಡುಗಿಯನ್ನು ನೀವು ನೋಡಿದರೆ, ಆಗ ಆ ವ್ಯಕ್ತಿಗೆ ಚಿಕಿತ್ಸೆ ಮತ್ತು ಸಹಾಯದ ಅಗತ್ಯವಿದೆ ಹಾಗೂ ನಾವು ಅವರಿಗೆ ಸಹಾಯ ಮಾಡಬೇಕಾಗಿದೆ. ಅದಕ್ಕಾಗಿಯೇ ನಾವು ಇದಕ್ಕೆ ಒಂದು ಸಹಾಯವಾಣಿಯನ್ನು ಪ್ರಾರಂಭಿಸಿದ್ದೇವೆ.

ನೀವಿರುವ ಜಾಗದಲ್ಲಿ, ಇಂತಹ ರೀತಿಯ ಸಹಾಯದ ಅಗತ್ಯವಿರುವ ಯಾರನ್ನಾದರೂ ನೀವು ನೋಡಿದರೆ, ಅವರಿಗೆ ಖಂಡಿತವಾಗಿಯೂ ಸಹಾಯ ಸಿಗಬೇಕು. ಹಾರ್ಮೋನಿನ ಅಸಮತೋಲನಗಳಿರುವ ಮತ್ತು ಈ ರೀತಿಯ ಅಪರಾಧಗಳಲ್ಲಿ ಸೇರಿಕೊಳ್ಳುತ್ತಿರುವ ಜನರಿಗೆ ನಾವು ಸಲಹೆಯನ್ನು ನೀಡಬೇಕಾಗಿದೆ.

ನಿರ್ಭಯ (ದಿಲ್ಲಿಯಲ್ಲಿ ಬಲಾತ್ಕಾರಕ್ಕೊಳಪಟ್ಟ ಹುಡುಗಿ) ಮತ್ತು ಅವಳ ಮಿತ್ರ ರಸ್ತೆಯ ಮೇಲೆ ಬಿದ್ದಿದ್ದರು. ಹಲವಾರು ಜನರು ಅವರನ್ನು ನೋಡಿದರು ಮತ್ತು ಸುಮ್ಮನೆ ತಮ್ಮ ದಾರಿ ಹಿಡಿದುಕೊಂಡು ಹೋದರು! ಯಾವುದಾದರೂ ಮನುಷ್ಯನು ಹೀಗೆ ಮಾಡಬಲ್ಲನೇ? ಜನರು ಅವರಿಗೆ ಸಹಾಯ ಮಾಡಲು ಯಾಕೆ ಬರಲಿಲ್ಲ? ಇದು ಯಾಕೆಂದರೆ, ’ನಾನು ಈ ದೇಶಕ್ಕಾಗಿರುವ ಒಬ್ಬ ಸ್ವಯಂಸೇವಕ ಮತ್ತು ಎಲ್ಲರೂ ನನಗೆ ಸೇರಿದವರು’ ಎಂಬ ಆಳವಾದ ಭಾವನೆ ಅಥವಾ ನಿರ್ಧಾರ ಅವರಲ್ಲಿರಲಿಲ್ಲ.  ಇದುವೇ ಆಧ್ಯಾತ್ಮವೆಂಬುದು.

ಈ ಪರಿಸ್ಥಿತಿಯನ್ನು ಬದಲಾಯಿಸುವುದು, ಕಾನೂನುಗಳ ಮೂಲಕ ಮಾಡಲು ಸಾಧ್ಯವಿಲ್ಲ. ಕಾನೂನುಗಳು ಆವಶ್ಯಕ, ಅದರಲ್ಲಿ ಸಂಶಯವಿಲ್ಲ, ಆದರೆ ಮನುಷ್ಯರ ಮನಸ್ಸುಗಳನ್ನು ಕಾನೂನುಗಳಿಂದ ಪರಿವರ್ತಿಸಲು ಸಾಧ್ಯವಿಲ್ಲ. ಜನರ ಮನಸ್ಸುಗಳನ್ನು ಪರಿವರ್ತಿಸಲು, ನೀವು ಮತ್ತು ನಾನು ಕೆಲಸ ಮಾಡಬೇಕು. ಇದನ್ನು ಮಾಡಲು ನಾವೆಲ್ಲರೂ ಒಟ್ಟಿಗೆ ಎದ್ದೇಳಬೇಕು. ನಾವು ಎಲ್ಲರನ್ನೂ ಪ್ರೇಮದೊಂದಿಗೆ ಅಪ್ಪಿಕೊಳ್ಳಬೇಕು. ಪ್ರೇಮವು, ಅತ್ಯಂತ ಕಠಿಣವಾದ ಕಲ್ಲನ್ನು ಕೂಡಾ ಕರಗಿಸಬಲ್ಲದು, ಅದಕ್ಕೆ ಒಂದು ಮನುಷ್ಯನನ್ನು ಪರಿವರ್ತಿಸಲು ಸಾಧ್ಯವಿಲ್ಲವೇ?

ನಮ್ಮ ದೇಶ, ನಮ್ಮ ಸಮಾಜ ಹೇಗಿತ್ತೆಂದರೆ, ಪ್ರತಿಯೊಂದು ಕಣದಲ್ಲೂ ಮಾನವೀಯತೆಯು ಕಾಣುತ್ತಿತ್ತು. ಆದರೆ ಈಗ ಮಾನವೀಯತೆಯ ಆ ಭಾವವು ಎಲ್ಲೋ ಹುದುಗಿ ಹೋಗಿದೆ ಮತ್ತು ಅದು ಧೂಳಿನಿಂದ ಮುಚ್ಚಿಹೋಗಿದೆ. ಇದನ್ನು ಮತ್ತೊಮ್ಮೆ ಮೇಲಕ್ಕೆ ತರುವುದು ನಮ್ಮಲ್ಲಿ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಇದಕ್ಕಾಗಿಯೇ ನಿಮ್ಮಲ್ಲಿ ಪ್ರತಿಯೊಬ್ಬರೂ ದೇಶಕ್ಕಾಗಿ ಸ್ವಯಂಸೇವಕರಾಗಬೇಕು. ೨೪ ಗಂಟೆಗಳಲ್ಲಿ, ನಿಮ್ಮ ಸಮಯದ ಒಂದು ಗಂಟೆಯನ್ನು ನೀವು ದೇಶಕ್ಕೆ ನೀಡಬೇಕು.

ಒಬ್ಬ ಯುವಕನು ಒಮ್ಮೆ ನನ್ನಲ್ಲಿ ಕೇಳಿದನು, "ಗುರುದೇವ, ನಾವು ದೇಶಕ್ಕೆ ಒಂದು ಗಂಟೆಯನ್ನು ಕೊಟ್ಟರೆ, ಆಗ ನಾವು ನಮ್ಮ ಶಿಕ್ಷಣದ ಬಗ್ಗೆ ಏನು ಮಾಡುವುದು? ಸ್ವಯಂಸೇವೆ ಮಾಡುವುದರ ಬದಲಾಗಿ ಹೆಚ್ಚು ಓದಬೇಕೆಂದು ಹೆತ್ತವರು ನಮ್ಮಲ್ಲಿ ಹೇಳುತ್ತಿದ್ದಾರೆ."

ನಾನು ಹೇಳುತ್ತೇನೆ ಕೇಳಿ, ನಿಮ್ಮ ಓದಿನ ಸಮಯವನ್ನು ಕಸಿದುಕೊಳ್ಳಬೇಡಿ. ನಿಮ್ಮ ಓದನ್ನು ಪೂರ್ಣಗೊಳಿಸಿ. ಆದರೆ ಪ್ರತಿದಿನವೂ ಮನೋರಂಜನೆಗೆಂದು ನೀವು ಸ್ವಲ್ಪ ಸಮಯವನ್ನು ಬದಿಗಿರಿಸುವುದಿಲ್ಲವೇ? ನೀವು ಸ್ವಲ್ಪ ಸಮಯವನ್ನು ಮನೋರಂಜನೆಗೆಂದು ಬದಿಗಿರಿಸುತ್ತೀರಿ; ಉದಾಹರಣೆಗೆ ಇಂಟರ್ನೆಟ್ ಸರ್ಫ್ ಮಾಡುವುದು, ಟಿವಿ ನೋಡುವುದು ಅಥವಾ ಆಟಗಳನ್ನು ಆಡುವುದು, ಮೊದಲಾದವು, ಅಲ್ಲವೇ? ಹಾಗಾದರೆ, ಆ ಬಿಡುವಿನ ಸಮಯದಿಂದ ಅರ್ಧ ಗಂಟೆಯನ್ನು ತೆಗೆದುಕೊಳ್ಳಿ. ಒಂದು ದಿನದಲ್ಲಿ ಒಂದು ಗಂಟೆ ಸಾಕು.

ಒಂದು ವಾರದಲ್ಲಿ ನಾವು ಏಳು ಗಂಟೆಗಳನ್ನು ಸಮಾಜಕ್ಕಾಗಿ ವ್ಯಯಿಸಿದರೆ, ಅಥವಾ ಹೀಗೆ ಹೇಳೋಣ, ಭಾನುವಾರದಂದು ಏಳು ಗಂಟೆಗಳನ್ನು ಕಳೆದರೂ ಕೂಡಾ, ಅದು ಸಾಕಾಗುವುದು.

ಇಲ್ಲಿ ಹಲವಾರು ಸ್ವಯಂಸೇವಕರಿದ್ದಾರೆ ಮತ್ತು ನಾನು ಅವರೆಲ್ಲರನ್ನೂ ಅಭಿನಂದಿಸುತ್ತೇನೆ. ಕೇವಲ ಎರಡು ತಿಂಗಳುಗಳಲ್ಲಿ, ಅವರಿಂದ ಒಂದು ಸಾವಿರ ಸೇವಾ ಯೋಜನೆಗಳು ಕೈಗೆತ್ತಲ್ಪಟ್ಟವು ಮತ್ತು ಪೂರ್ಣಗೊಳಿಸಲ್ಪಟ್ಟವು ಕೂಡಾ. ಇದರೊಂದಿಗೆ, ದೇಶವು ಇನ್ನೂ ನಿದ್ದೆ ಮಾಡುತ್ತಿಲ್ಲ, ಆದರೆ ಬದಲಿಗೆ ಇದು ಎಚ್ಚೆತ್ತುಕೊಳ್ಳುತ್ತಿದೆ ಎಂಬ ಆಶಾಕಿರಣವು ಎದ್ದಿದೆ.

ದೇಶದ ಯುವಕರು ಎಚ್ಚೆತ್ತಾಗ, ಯಾರೂ ಅವರನ್ನು ತಡೆಯಲು ಸಾಧ್ಯವಿಲ್ಲ. ಯಾವುದೇ ಕಾನೂನಿಗೂ ಅವರನ್ನು ತಡೆದು ನಿಲ್ಲಿಸಲು ಸಾಧ್ಯವಿಲ್ಲ, ಅವರು ಮುಂದೆ ಸಾಗುತ್ತಾ ಇರುವರು.

ನಮ್ಮ ದೇಶವು ಒಂದು ಸುರಕ್ಷಿತ ಸ್ಥಳವಾಗಬೇಕೆಂದು ನಾವೆಲ್ಲರೂ ಬಯಸುತ್ತೇವೆ. ನಮ್ಮ ಸ್ವಂತ ದೇಶದಲ್ಲಿ ಸುರಕ್ಷತೆಯನ್ನು ಅನುಭವಿಸಲು ನಮ್ಮಲ್ಲಿ ಪ್ರತಿಯೊಬ್ಬರೂ ಬಯಸುತ್ತೇವೆ. ಇದಕ್ಕಾಗಿ, ನಾವು ಈಗ ಕೆಲಸ ಮಾಡಲು ಪ್ರಾರಂಭಿಸದಿದ್ದರೆ ಮತ್ತು ನಾವು ಈಗ ತೊಡಗಿಸಿಕೊಳ್ಳದೇ ಹೋದರೆ, ಭವಿಷ್ಯದಲ್ಲಿ ನಮ್ಮ ಮಕ್ಕಳು ನಮ್ಮನ್ನು ಕ್ಷಮಿಸಲಾರರು.

ಒಂದು ತಪ್ಪನ್ನು ಮಾಡುವುದು ಸ್ವಾಭಾವಿಕ. ಒಂದು ಗಾದೆಯಿದೆ, ’ತಪ್ಪು ಮಾಡುವುದು ಮಾನವ ಗುಣ '. ಹಾಗೆ, ತಪ್ಪುಗಳು ಸಂಭವಿಸುತ್ತವೆ. ಆದರೆ ನಾವು ತಪ್ಪು ಮಾಡುವಾಗ, ಸಮಾಧಾನ ತಂದುಕೊಂಡು,  ಪರಿಹಾರ ನೀಡುವತ್ತ ಗಮನ ಕೊಡಬೇಕು.
ನಾನೊಂದು ತಪ್ಪು ಮಾಡಿದರೂ ಕೂಡಾ, ನಾನು ಅದನ್ನು ಮನಗಂಡು, ಅದರಿಂದ ಕಲಿತುಕೊಳ್ಳುತ್ತೇನೆ - ಯುಗಗಳಿಂದ ಭಾರತದಲ್ಲಿನ ಸಂಪ್ರದಾಯ ಇದಾಗಿದೆ. ಭಾರತದಲ್ಲಿ, ತಮ್ಮ ತಪ್ಪುಗಳನ್ನು ಸ್ವೀಕರಿಸಿ, ಅವುಗಳಿಂದ ಕಲಿತು, ಅವುಗಳಿಗೆ ಅಗತ್ಯವಾದ ಪರಿಹಾರಗಳನ್ನು ಮಾಡುವ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಿದ್ದವರು ಸುಶಿಕ್ಷಿತರು ಮತ್ತು ಕಲಿತವರು ಎಂದು ಕರೆಯಲ್ಪಡುತ್ತಿದ್ದರು.

ತಮ್ಮ ತಪ್ಪಿಗೆ, ನ್ಯಾಯವೆಂದು ತೋರಿದ ಒಂದು ಶಿಕ್ಷೆಯನ್ನು ಅವರು ಸ್ವಯಂ ವಿಧಿಸಿಕೊಳ್ಳುತ್ತಿದ್ದರು ಮತ್ತು ಅದನ್ನು ಪೂರೈಸುತ್ತಿದ್ದರು. ಈ ದೇಶದ ಜನರ ಮೌಲ್ಯಗಳು ಹಾಗಿದ್ದವು. ಈ ರೀತಿಯ ಮನೋಭಾವವನ್ನು ನಾವು ಮತ್ತೊಮ್ಮೆ ಜೀವಿತಗೊಳಿಸಬೇಕಾಗಿದೆ. ವಿಶೇಷವಾಗಿ ನಮ್ಮ ದೇಶದ ರಾಜಕಾರಣಿಗಳು ಇದನ್ನು ಅನುಸರಿಸಬೇಕಾಗಿದೆ. ದೇಶದಲ್ಲಿರುವ ಎಲ್ಲಾ ರಾಜಕಾರಣಿಗಳು, ಅವರು ಯಾವುದೇ ಪಕ್ಷಕ್ಕಾದರೂ ಸೇರಿರಲಿ, ತಮ್ಮ ತಪ್ಪುಗಳನ್ನು ಅರ್ಥಮಾಡಿಕೊಂಡು ಅವುಗಳನ್ನು ಒಪ್ಪಿಕೊಳ್ಳಬೇಕು ಮತ್ತು ಅದಕ್ಕಾಗಿ ಪರಿಹಾರಗಳನ್ನು ಮಾಡಿಕೊಳ್ಳಲು ತಾವು ಸಿದ್ಧರಿರುವುದಾಗಿ ತೋರಿಸಬೇಕು. ಅವರಿದನ್ನು ಮಾಡಿದರೆ, ಇದಕ್ಕಾಗಿ ದೇಶದ ಜನರು ಅವರನ್ನು ಗೌರವಿಸುವರು. ಅಧಿಕಾರದ ಸ್ಥಾನದಲ್ಲಿರುವುದನ್ನು ಮುಂದುವರಿಸುವುದಕ್ಕಾಗಿ ಅವರು ತಮ್ಮ ತಪ್ಪುಗಳನ್ನು ಮುಚ್ಚಿಹಾಕಬಾರದು.

ಈ ದಿನಗಳಲ್ಲಿ, ಎಲ್ಲಾ ರಾಜಕೀಯ ಪಕ್ಷಗಳು ಅಪರಾಧಿಗಳಿಗೆ ಚುನಾವಣೆಯ ಟಿಕೆಟುಗಳನ್ನು ಕೊಡುತ್ತವೆ. ಇದನ್ನು ನಿಲ್ಲಿಸಬೇಕು. ಅಪರಾಧಿಗಳಿಗೆ ಚುನಾವಣೆಯ ಟಿಕೆಟುಗಳನ್ನು ಕೊಡಬೇಡಿ.

ನೀವು ಹೇಳಬಹುದು, "ಗುರುದೇವ, ನಿಮ್ಮ ಒಂದೇ ಕೆಲಸವೆಂದರೆ ಧ್ಯಾನ ಕಲಿಸುವುದು. ಮತ್ತೆ ಯಾಕೆ ನೀವು ಈಗ ಈ ಎಲ್ಲಾ ವಿಷಯಗಳಲ್ಲಿ ತೊಡಗಿಸಿಕೊಳ್ಳುತ್ತಿರುವಿರಿ? ನೀವು ರಾಜಕೀಯದ ಬಗ್ಗೆ ಯಾಕೆ ಮಾತನಾಡುತ್ತಿರುವಿರಿ?"

ನಾವು ಮಾತನಾಡುತ್ತಿರುವುದು ರಾಜನೀತಿಯ ಬಗ್ಗೆಯಲ್ಲ; ಇದು ರಾಷ್ಟ್ರನೀತಿ (ದೇಶದ ಅಭಿವೃದ್ಧಿಗಾಗಿರುವ ತಂತ್ರ). ಇದು ಮಾನವ ನೀತಿ (ಮಾನವ ಕುಲಕ್ಕಾಗಿ ನ್ಯಾಯ).

ನಾನು ರಾಜನೀತಿಯಿಂದ ದೂರವಿರುತ್ತೇನೆ. ಆದರೆ, ಜನರ ನೋವಿಗೆ ಮತ್ತು ದೇಶದ ಜನರಿಗೆ ಕಳಕಳಿಯಿರುವ ಪ್ರತಿಯೊಂದು ವಿಷಯಕ್ಕಾಗಿ ನಾನು ಎದ್ದು ನಿಲ್ಲುವೆನು. ನನ್ನ ಪ್ರತಿ ಕಣವೂ ಈ ದೇಶಕ್ಕಾಗಿ ಕೆಲಸ ಮಾಡಲು ಸಿದ್ಧವಿದೆ. ಈ ದೇಶಕ್ಕಾಗಿ ಒಂದು ಸುಂದರವಾದ ಕನಸನ್ನು ಹೊಂದಿದವರಲ್ಲಿ ನಾನು ಒಬ್ಬನಾಗಿದ್ದೇನೆ.

ಕೆಲವು ಜನರು ಹೇಳಬಹುದು, "ಓ ಹೌದು, ಇದೆಲ್ಲವೂ ಕೇಳಲು ಚೆನ್ನಾಗಿದೆ. ಆದರೆ ಇದೆಲ್ಲವೂ ಕೆಲವು ದಿನಗಳ ವರೆಗೆ ಇರುವುದು ಮತ್ತು ನಂತರ ಮಾಯವಾಗುವುದು. ಇದೆಲ್ಲದರ ಪ್ರಯೋಜನವೇನು?"

ಎಲ್ಲಾ ಕಡೆಗಳಲ್ಲಿ ಹತಾಶೆಗೆ ಕಾರಣವಾಗಿರುವುದು ಈ ರೀತಿಯ ಯೋಚನೆಯೇ. ಎಲ್ಲೆಡೆಯೂ ನಾವು ಒಂದೋ ಕ್ರೋಧವನ್ನು ಅಥವಾ ನಿರಾಶೆಯನ್ನು ನೋಡುತ್ತೇವೆ. ಒಂದು ಕೊನೆಯಲ್ಲಿ ಕ್ರೋಧ ಮತ್ತು ಇನ್ನೊಂದು ಕೊನೆಯಲ್ಲಿ ನಿರಾಶೆ. ಒಂದು ಸುಂದರ ಭಾರತದ ನಮ್ಮ ಕನಸನ್ನು ಈಡೇರಿಸಲು ನಾವು ಇವುಗಳೆರಡನ್ನು ದಾಟಿಹೋಗಬೇಕು. ನಾವು ಈ ದಿಕ್ಕಿನಲ್ಲಿ ಮುಂದೆ ಸಾಗಬೇಕು.

ಇಲ್ಲಿರುವ ಗೌರವಾನ್ವಿತ ಭಾಷಣಕಾರರಲ್ಲಿ ಒಬ್ಬರಾಗಿರುವ ಶ್ರೀ ವಾಯುದ್ದೀನ್ ಅವರು, ಈ ರಾಷ್ಟ್ರದ ಚಾರಿತ್ರ್ಯವನ್ನು ನಿರ್ಮಿಸುವತ್ತ ನಾವು ಕೆಲಸ ಮಾಡಬೇಕಾಗಿದೆಯೆಂದು ಉಲ್ಲೇಖಿಸಿದರು. ಇದಕ್ಕಾಗಿ, ದೇಶದಲ್ಲಿ ಹೊಣೆಗಾರಿಕೆಯ ಸ್ಥಾನಗಳನ್ನು ಹಿಡಿದಿಡಲು ನಮಗೆ ಉತ್ತಮ ಚಾರಿತ್ರ್ಯದ ಜನರ ಅಗತ್ಯವಿದೆ. ಈಗ, ಎಲ್ಲೋ ಕುಳಿತಿದ್ದು ದೇಶವನ್ನು ನಿರ್ವಹಿಸಲು ಪ್ರಯತ್ನಿಸುವ ಕೇವಲ ಒಬ್ಬ ವ್ಯಕ್ತಿಯಿಂದ ಇದಾಗಲು ಸಾಧ್ಯವಿಲ್ಲ. ಜನರು ಎಚ್ಚೆತ್ತುಕೊಳ್ಳಬೇಕು ಮತ್ತು ದೇಶದ ಚಾರಿತ್ರ್ಯ ನಿರ್ಮಾಣದ ಕಡೆಗೆ ಹೆಚ್ಚು ಅರಿವುಳ್ಳವರಾಗಬೇಕು.

ಪ್ರತಿಯೊಂದು ಪ್ರದೇಶದಲ್ಲಿ ಜನರು ಒಂದಾಗಬೇಕು ಮತ್ತು ಕಳ್ಳತನಗಳು ಹಾಗೂ ಹಿಂಸೆಗಳಿಂದ ಪ್ರದೇಶವನ್ನು ಸುರಕ್ಷಿತಗೊಳಿಸಬೇಕು. ಇದಕ್ಕಾಗಿ ಜನರು ಸಿದ್ಧರಿರಬೇಕು ಮತ್ತು ಕ್ರಮವನ್ನು ತೆಗೆದುಕೊಳ್ಳಬೇಕು. ಆಗ ಮಾತ್ರ ನಾವು ಏನನ್ನಾದರೂ ಸಾಧಿಸಿದಂತಾಗುವುದು. ಆಗ ಮಾತ್ರ ನಮ್ಮ ಸ್ವಯಂಸೇವೆಯು ಯಶಸ್ವಿಯಾಗುವುದು.

ಆದುದರಿಂದ ನಾನು ನಿಮ್ಮೆಲ್ಲರಲ್ಲೂ ಮತ್ತೊಮ್ಮೆ ಮನವಿ ಮಾಡುತ್ತೇನೆ. ನಾವೆಲ್ಲರೂ ಒಟ್ಟುಸೇರಿ ಭಾರತವನ್ನು ಒಂದು ಸುರಕ್ಷಿತ, ಸುಂದರ ಮತ್ತು ಸಾಕ್ಷರ ದೇಶವನ್ನಾಗಿ ಮಾಡಲು ಸಾಧ್ಯವಾಗಲು, ನಮ್ಮೊಂದಿಗೆ ಸೇರಿಕೊಂಡು ಸ್ವಯಂಸೇವೆ ಮಾಡುವಂತೆ, ನಿಮ್ಮಲ್ಲಿ ಪ್ರತಿಯೊಬ್ಬರೂ ಇನ್ನೂ ಒಂದು ನೂರು ಜನರನ್ನು ಪ್ರೇರೇಪಿಸಿ. ೧೦೦% ಸಾಕ್ಷರತೆ ಇರಬೇಕು.
ಮಕ್ಕಳಿಗೆ ಕಲಿಸಲು ಕೊಳಗೇರಿಗಳಿಗೆ ಹೋದ, ಇವತ್ತು ಇಲ್ಲಿರುವ ಸ್ವಯಂಸೇವಕರನ್ನು ನಾನು ಪುನಃ ಅಭಿನಂದಿಸಲು ಬಯಸುತ್ತೇನೆ. ದೈಹಿಕ ದುಡಿಮೆ ಮಾಡುತ್ತಿದ್ದ ಮಕ್ಕಳನ್ನು ಅಲ್ಲಿಂದ ದೂರ ಒಯ್ದು ಶಿಕ್ಷಣವನ್ನು ನೀಡಲಾಯಿತು. ಇದೊಂದು ಸುಲಭದ ಕೆಲಸವಲ್ಲ, ಆದರೆ ಅವರಿದನ್ನು ಮಾಡಿದರು.

ಸಮಾಜಕ್ಕಾಗಿ ನಾವು ಸೇವೆಯಲ್ಲಿ ತೊಡಗುವಾಗ, ನಾವು ಹಲವು ಸಲ ಟೀಕೆಯನ್ನು ಕೇಳಿಸಿಕೊಳ್ಳಬೇಕಾಗುತ್ತದೆ. ಜನರು ತಪ್ಪುಗಳನ್ನು ಕಂಡುಹುಡುಕಲು, ನಿಮ್ಮ ಇಮೇಜನ್ನು(ಸ್ಥಾನಮಾನ) ಹಾಳುಮಾಡಲು ಮತ್ತು ನಿಮ್ಮನ್ನು ಅವರು ಹೇಗೆ ಪತನಗೊಳಿಸಬಹುದು ಎಂಬುದನ್ನು ನೋಡಲು ಕಾಯುತ್ತಿರುತ್ತಾರೆ. ಅವರದನ್ನು ಮಾಡಲಿ ಬಿಡಿ, ಅವರು ತಪ್ಪುಗಳನ್ನು ಕಂಡುಹುಡುಕಲಿ ಬಿಡಿ. ನಮ್ಮ ಹೃದಯವು ಸ್ವಚ್ಛವಾಗಿಯೂ ಶುದ್ಧವಾಗಿಯೂ ಇದೆ, ಆದುದರಿಂದ ನಾವು ನಮ್ಮ ಕೆಲಸ ಮಾಡುವುದನ್ನು ಮುಂದುವರಿಸುವೆವು ಮತ್ತು ಮುಂದೆ ಸಾಗುವೆವು. ಯಾರೆಲ್ಲಾ ಏನಾದರೂ ಹೇಳಲು ಬಯಸುವರೋ, ಅವರು ಹೇಳಲಿ ಬಿಡಿ. ನಾವು ಭಾರತಕ್ಕಾಗಿ ಎದ್ದು ನಿಂತಿದ್ದೇವೆ.

ಪರಮಾತ್ಮನು ಎಲ್ಲೋ ಮೇಲೆ ಸ್ವರ್ಗದಲ್ಲಿ ಇಲ್ಲ. ಅವನು ನಮ್ಮೆಲ್ಲರೊಳಗಿದ್ದಾನೆ. ಅವನು ಪ್ರತಿಯೊಂದು ಅಣುವಿನಲ್ಲೂ ಇದ್ದಾನೆ. ಅದಕ್ಕಾಗಿಯೇ ನಾನು ಹೇಳುತ್ತಿರುವುದು, ’ದೇಶದ ಸೇವೆಯೇ ದೇವರ ಸೇವೆ.’

ದೇವರ ಕಡೆಗಿರುವ ಮತ್ತು ದೇಶದ ಕಡೆಗಿರುವ ಭಕ್ತಿಯು ಒಂದೇ ನಾಣ್ಯದ ಎರಡು ಮುಖಗಳಾಗಿವೆ.

ದೇವರ ಕಡೆಗಿರುವ ಭಕ್ತಿ ಬೇರೆ ಮತ್ತು ದೇಶದ ಕಡೆಗಿರುವ ಭಕ್ತಿ ಬೇರೆ ಎಂದು ಯೋಚಿಸಬೇಡಿ. ನೀವು ದೇವರನ್ನು ಪ್ರೀತಿಸುವುದಾದರೆ, ಆಗ ನೀವು ಅವನ ಸೃಷ್ಟಿಯನ್ನು ಕೂಡಾ ಪ್ರೀತಿಸುವಿರಿ. ಪರಿಸರದ ಬಗ್ಗೆ ನಾವು ತಿಳಿದಿರುವುದು ಮುಖ್ಯವಾಗಿದೆ. ಆದುದರಿಂದ ಇವತ್ತು, ಪರಿಸರವನ್ನು ಸಂರಕ್ಷಿಸುವುದಕ್ಕಾಗಿ ನಾವು ಎದ್ದು ನಿಲ್ಲೋಣ. ಸ್ತ್ರೀಯರ ಸುರಕ್ಷತೆಗಾಗಿ ನಾವು ದೃಢವಾಗಿ ನಿಲ್ಲೋಣ. ನೀವೆಲ್ಲರೂ ಸಿದ್ಧರಿರುವಿರಾ?

ಇವತ್ತು ನಿಮಗೆಲ್ಲರಿಗೂ ಒಂಭತ್ತು ಅಂತಹ ಪ್ರತಿಜ್ಞೆಗಳನ್ನು ನೀಡಲಾಗುವುದು. ನೀವು ಸಿದ್ಧರಿರುವಿರಾ? ನಿಮ್ಮಲ್ಲಿ ಎಷ್ಟು ಮಂದಿ ಸಿದ್ಧರಿರುವಿರಿ? ನಿಮ್ಮ ಕೈಗಳನ್ನು ಮೇಲೆತ್ತಿ. (ಎಲ್ಲರೂ ತಮ್ಮ ಕೈಗಳನ್ನು ಮೇಲೆತ್ತುತ್ತಾರೆ)

ಇವತ್ತು ಅತ್ಯಂತ ಅಗತ್ಯವಾಗಿರುವುದೇನೆಂದರೆ ಬದಲಾವಣೆ; ನಮ್ಮ ಮನಸ್ಸಿನಲ್ಲಿ ಬದಲಾವಣೆ, ನಮ್ಮ ವರ್ತನೆಯಲ್ಲಿ ಬದಲಾವಣೆ ಮತ್ತು ಸಮಾಜದಲ್ಲಿ ಬದಲಾವಣೆ. ಇದು ಬಹಳ ಮುಖ್ಯವಾದುದು.

ಒಬ್ಬರ ಕಡೆಗೆ ಬೆರಳು ಮಾಡಿ, ಇಂತಿಂತ ವ್ಯಕ್ತಿ ತಪ್ಪು ಮಾಡಿರುವನೆಂದು ಹೇಳುವುದು ಬಹಳ ಸುಲಭ. ನಾವು ಮರೆತುಬಿಡುವುದೇನೆಂದರೆ, ಇತರ ಮೂರು ಬೆರಳುಗಳು ತಿರುಗಿ ನಮ್ಮ ಕಡೆಗೆ ಮುಖಮಾಡುತ್ತಿರುತ್ತವೆ. ಒಂದು ಶುದ್ಧವಾದ ಮನಸ್ಸು ಮತ್ತು ಹೃದಯದೊಂದಿಗೆ ನಾವು ಯಾವುದಾದರೂ ಕೆಲಸವನ್ನು ಪ್ರಾರಂಭಿಸಿದರೆ, ಪ್ರಕೃತಿ ಕೂಡಾ ಅದನ್ನು ಹೇಗೆ ಬೆಂಬಲಿಸುವುದು ಎಂಬುದನ್ನು ಸುಮ್ಮನೆ ನೋಡಿ.

ಎರಡು ದಿನಗಳ ಮೊದಲು, ಈ ಕಾರ್ಯಕ್ರಮದ ಸಂಘಟಕರು ನನ್ನ ಬಳಿಗೆ ಬಂದು, ಮುಂಬರುವ ದಿನಗಳಲ್ಲಿ ಒಂದು ಆಲಿಕಲ್ಲು ಚಂಡಮಾರುತ ಮತ್ತು ಭಾರೀ ಮಳೆಯಾಗುವುದೆಂದು ಹವಾಮಾನ ಮುನ್ಸೂಚನೆ ಹೇಳುತ್ತದೆಯೆಂದು ಹೇಳಿದರು. ಇವತ್ತಿಗೂ ಕೂಡಾ ಮುನ್ಸೂಚನೆ ಅದೇ ಆಗಿತ್ತು. ಹೀಗಾಗಿ ಅವರಂದರು, "ಗುರುದೇವ, ದಯವಿಟ್ಟು ಏನಾದರೂ ಮಾಡಿ".

ನಾನು ಅವರಿಗಂದೆ, "ಯಾವಾಗಲೆಲ್ಲಾ ನಾವು ಯಾವುದೇ ಹೆಜ್ಜೆಯನ್ನು ನಿಸ್ವಾರ್ಥವಾಗಿ ಮತ್ತು ಒಂದು ಶುದ್ಧವಾದ ಹೃದಯದೊಂದಿಗೆ ತೆಗೆದುಕೊಳ್ಳುವೆವೋ, ಪ್ರಕೃತಿಯು ಅದನ್ನು ಬೆಂಬಲಿಸುವುದು." ನಮ್ಮಲ್ಲಿರುವ ಒಂದೇ ಒಂದು ವಿಷಯವೆಂದರೆ, ಒಂದು ಶುದ್ಧವಾದ ಹೃದಯ. ಹಾಗಾಗಿ, ಏನೂ ಆಗದೆಂದು ನಾನು ಸಂಘಟಕರಿಗೆ ಹೇಳಿದೆ. ಮತ್ತು ನೋಡಿ, ಎಲ್ಲರೂ ಈಗ ಬಹಳ ಆರಾಮವಾಗಿ ಕುಳಿತಿದ್ದಾರೆ.

ದೇಶವು ಈಗಲೂ ಜಾತಿ ಮತ್ತು ಧರ್ಮಗಳಿಂದ ವಿಭಾಗಿಸಲ್ಪಟ್ಟಿದೆ ಮತ್ತು ಸತ್ಯದಿಂದ ಸಂಪರ್ಕ ಕಳೆದುಕೊಂಡಿದೆ. ಹಿಂಸಾತ್ಮಕ ಕ್ರಿಯೆಗಳನ್ನು ಮಾಡಿಕೊಂಡು ಸಾಯಲು ಹಲವರು ಸಿದ್ಧರಿದ್ದಾರೆ. ದೇಶವನ್ನು, ಜನರನ್ನು ಇದೆಲ್ಲದರಿಂದ ನಾವು ದೂರ ಕೊಂಡೊಯ್ಯಬೇಕಾಗಿದೆ.

ಮಹಾತ್ಮಾ ಗಾಂಧಿಯವರ ಕಾಲದಲ್ಲಿ, ಅಹಿಂಸೆಯೊಂದಿಗೆ ಮಹಾನ್ ಹೆಮ್ಮೆಯು ಜೋಡಿಕೊಂಡಿತ್ತು. ಆದರೆ ಇವತ್ತು, ಹೆಮ್ಮೆಯು ಹಿಂಸೆಯೊಂದಿಗೆ ಸಂಬಂಧ ಹೊಂದಿದೆ. ಇವತ್ತು ಆಕ್ರಮಣಶೀಲತೆಯು ಹೆಮ್ಮೆಯೊಂದಿಗೆ ತನ್ನನ್ನು ತಾನು ಸೇರಿಸಿಕೊಂಡಿದೆ. ಒಬ್ಬರು ಬಹಳ ಆಕ್ರಮಣಶೀಲರಾಗಿರುವಾಗ, ಅವನು ಒಬ್ಬ ನಾಯಕನೆಂದು ಪರಿಗಣಿಸಲ್ಪಡುತ್ತಾನೆ. ಆದರ್ಶ ವ್ಯಕ್ತಿಗಳು ಬಹಳ ಆಕ್ರಮಣಶೀಲರಾಗಿರಬೇಕೆಂದು ಮತ್ತು ಆಗ ಅವರು ಒಳ್ಳೆಯವರು ನಿರೀಕ್ಷಿಸಲಾಗುತ್ತದೆ. ಇಲ್ಲ, ನಾವಿದನ್ನು ಸಂಪೂರ್ಣವಾಗಿ ಬದಲಾಯಿಸಬೇಕು. ಅಹಿಂಸೆಯು ನಮ್ಮ ಜೀವನರೇಖೆಯಾಗಿರಬೇಕು.

ನಾವು ಅಹಿಂಸೆಯ ಪಥವನ್ನು ತುಳಿಯುತ್ತೇವೆ, ಹಾಗಿದ್ದರೂ ನಾವು ಬಹಳ ದೃಢವಾಗಿದ್ದೇವೆ, ನಾವು ಬಹಳ ಬಲಶಾಲಿಗಳಾಗಿದ್ದೇವೆ ಮತ್ತು ನಮ್ಮ ಉದ್ದೇಶವು ಫಲದಾಯಕವಾಗುವುದನ್ನು ನಾವು ಕಾಣುವೆವು. ಹಾಗಾಗಿ ನಾವೆಲ್ಲರೂ ಕೆಲಸ ಮಾಡಬೇಕಾಗಿದೆ.

ನಾನು ಮತ್ತೊಮ್ಮೆ ನಿಮ್ಮೆಲ್ಲರಿಗೂ ಅಭಿನಂದಿಸುತ್ತೇನೆ; ದೂರ ದೂರದ ಸ್ಥಳಗಳಿಂದ ಬಂದಿರುವವರು, ಹಾಗೆಯೇ ದಿಲ್ಲಿಯ ಎಲ್ಲಾ ಭಾಗಗಳಿಂದ ಬಂದಿರುವವರು ಮತ್ತು ಭಾರತದ ವಿವಿಧ ಭಾಗಗಳಿಂದ ಇದನ್ನು ವೀಕ್ಷಿಸುತ್ತಿದ್ದ ನಿಮ್ಮೆಲ್ಲರಿಗೂ. ಇದು ಕೇವಲ ಆರಂಭವಷ್ಟೇ. ನಾವು ಒಂದಾಗಿ ಕೆಲಸ ಮಾಡೋಣ ಮತ್ತು ದೇಶಕ್ಕಾಗಿ ಪ್ರತಿದಿನವೂ ಒಂದು ಗಂಟೆಯನ್ನು ನೀಡೋಣ. ದೇವರು ನಿಮಗೆಲ್ಲರಿಗೂ ಸದ್ಬುದ್ಧಿಯನ್ನು ಕೊಟ್ಟು ಆಶೀರ್ವದಿಸಲಿ. ಅವನು ಈಗಾಗಲೇ ಮಾಡಿದ್ದಾನೆ, ಆದರೆ ಯಾರಿಗೆ ಇದು ತಿಳಿದಿಲ್ಲವೋ, ಅವರು ಇದನ್ನು ಅರಿತುಕೊಳ್ಳಲೆಂದು ನಾನು ಪ್ರಾರ್ಥಿಸುತ್ತೇನೆ. ಇದರೊಂದಿಗೆ, ನಾನು ನನ್ನ ಮಾತನ್ನು ಇಲ್ಲಿಗೆ ಮುಕ್ತಾಯಗೊಳಿಸುತ್ತೇನೆ.