ಶುಕ್ರವಾರ, ಮಾರ್ಚ್ 20, 2009

ಶಿಸ್ತು ಮತ್ತು ಸ್ವಾತಂತ್ರ್ಯಗಳು

ಶುಕ್ರವಾರ ಮಾರ್ಚ್ ೨೦, ೨೦೦೯

ಶಿಸ್ತು ಮತ್ತು ಸ್ವಾತಂತ್ರ್ಯಗಳು ಪರಸ್ಪರ ವಿರುದ್ಧವಾದರೂ ಪೂರಕವಾದವುಗಳು.
ರಕ್ಷಣಾಬಲದ ಉದ್ದೇಶ ಸ್ವಾತಂತ್ರ್ಯವನ್ನು ಕಾಪಾಡುವುದು. ಆದರೆ ಸೈನ್ಯದಲ್ಲಿ ಸ್ವಾತಂತ್ರ್ಯವಿದೆಯೇ? ಸೈನಿಕರಿಗೆ ಸ್ವಾತಂತ್ರ್ಯವಿದೆಯೇ? ಇಲ್ಲ. ಅವರಿಗೆ ಎಡಗಾಲನ್ನು ಎತ್ತಿಹಾಕಿ ಎಂದರೆ ಬಲಗಾಲನ್ನು ಎತ್ತುವ ಸ್ವಾತಂತ್ರ್ಯವೂ ಇಲ್ಲ. ಅವರ ಪ್ರತಿಯೊಂದು ಹೆಜ್ಜೆಯೂ ಅಳತೆಯಂತಿರಬೇಕು. ಸೈನಿಕರು ತಮ್ಮ ಸಹಜ ಶೈಲಿಯಲ್ಲಿ ನಡೆಯುವುದೂ ಸಾಧ್ಯವಿಲ್ಲ. ರಕ್ಷಣಾ ಬಲಗಳಲ್ಲಿ ಸ್ವಾತಂತ್ರ್ಯವಿಲ್ಲ. ಹಾಗಿದ್ದರೂ ಅವು ದೇಶದ ಸ್ವಾತಂತ್ರ್ಯವನ್ನು ರಕ್ಶಿಸುತ್ತವೆ!

ಶಿಸ್ತುರಹಿತವಾದ ಸ್ವಾತಂತ್ರ್ಯ ಸೈನ್ಯವಿಲ್ಲದ ದೇಶದಂತೆ. ಶಿಸ್ತು ಸ್ವಾತಂತ್ರ್ಯವನ್ನು ಕಾಪಾಡುತ್ತದೆ. ಅವೆರಡೂ ಹೆಗಲೆಣೆಯಾಗಿ ಸಾಗುತ್ತವೆ. ಇದನ್ನು ಅರಿತುಕೊಂಡು ಜೀವನದಲ್ಲಿ ಪ್ರಗತಿ ಸಾಧಿಸಿ. ನಿಮಗೆ ಸ್ವಾತಂತ್ರ್ಯವನ್ನು ಅನುಭವಿಸಲು ಸಹಯ ಮಾಡುವ ಕೆಲವು ಪ್ರತಿಬಂಧಗಳಿರುತ್ತವೆ. ನೀವು ಸ್ವಾತಂತ್ರ್ಯ ಹಾಗೂ ಶಿಸ್ತು ಯಾವುದರ ಮೇಲೆ ಗಮನ ಹರಿಸುತ್ತೀರಿ ಎಂಬುದರ ಮೇಲೆ ಸಂತೋಷವಾಗಿರಬಹುದು, ಇಲ್ಲವೆ ದುಃಖಿತರಾಗಬಹುದು.
ಬೇಲಿಗೆ ಒಂದು ನಿಶ್ಚಿತವಾದ ಉದ್ದೇಶವಿದೆ. ನಿಮ್ಮ ಆಸ್ತಿಯ ತುಂಬ ಬೇಲಿಗಳನ್ನೇ ಹಾಕಿಕೊಂಡರೆ ಮನೆ ಕಟ್ಟುವುದಾದರೂ ಎಲ್ಲಿ? ಆದರೆ ಒಂದು ಸುವ್ಯವಸ್ಥಿತವಾದ ಬೇಲಿ ಮನೆಯನ್ನು ಕಾಪಾಡುತ್ತದೆ.
ಪ್ರೇಮವು ನಿಮ್ಮನ್ನು ಸರಿದಾರಿಗೆ ತರುತ್ತದೆ. ಅದೇ ರೀತಿ ಭಯದಿಂದಲೂ ನೀವು ಸರಿದಾರಿಗೆ ಬರಬಹುದು. ಅನೇಕ ಧರ್ಮಗಳು ಭಯವನ್ನೇ ಒಂದು ಪ್ರಮುಖ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತವೆ.

ಒಂದು ವಯಸ್ಸಿನಲ್ಲಿ ಪ್ರಕೃತಿಯೇ ಮಗುವಿನಲ್ಲಿ ಭಯವನ್ನು ಹುಟ್ಟಿಸುತ್ತದೆ. ಮಗು ತೀರ ಎಳೆಯದಾಗಿರುವಾಗ ಅದಕ್ಕೆ ಭಯವೇ ಇರುವುದಿಲ್ಲ. ಅದಕ್ಕೆ ತಾಯಿಯಿಂದ ಸಂಪೂರ್ಣ ಪ್ರೇಮ ಹಾಗೂ ರಕ್ಷಣೆ ದೊರೆಯುತ್ತದೆ. ಆದರೆ ಅದು ಸ್ವತಂತ್ರವಾಗಿ ಬೆಳೆಯಲಾರಂಭಿಸಿದಂತೆ ಪ್ರಕೃತಿ ಭಯದ ಬೀಜವನ್ನು ಬಿತ್ತುತ್ತದೆ. ಆಗ ಮಗು ಎಚ್ಚರಿಕೆಯಿಂದ ಇರಲು ಕಲಿಯುತ್ತದೆ. ಸ್ವಾತಂತ್ರ್ಯ ಹೆಚ್ಚಾಗುತ್ತಿರುವಂತೆ ಮಗು ನಡೆಯುವಾಗ ಎಚ್ಚರಿಕೆ ವಹಿಸುತ್ತದೆ.

ಅಪರಿಮಿತ ಆನಂದದ ಒಂದು ಸ್ಥಿತಿಯನ್ನು ಅದ್ವೈತವು ಚರ್ಚಿಸುತ್ತದೆ. ಆದರೆ ಅದ್ವೈತದ ಜ್ಞಾನವನ್ನು ಜನರು ತಮ್ಮ ಅನುಕೂಲತೆಗೆ ತಕ್ಕಂತೆ ಅರ್ಥೈಸಿಕೊಂಡು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ನಾವು ಪರಿಸ್ಥಿತಿಯನ್ನು ಅರಿತಿರ ಬೇಕು ಮನಸ್ಸು ಸ್ವತಂತ್ರವಾಗಿರಬೇಕು, ಹೃದಯ ಪ್ರೇಮಮಯವಾಗಿರ ಬೇಕು, ಕ್ರಿಯೆ ಶಿಸ್ತುಬದ್ಧವಾಗಿರಬೇಕು.

ಸ್ವಾತಂತ್ರ್ಯವನ್ನು ಕಳೆದುಕೊಳ್ಳುವ ಭೀತಿಯಿಂದ ಶಿಸ್ತು ಹಾಗೂ ರಕ್ಷಣಾಭಾವ ಉಂಟಾಗುತ್ತದೆ. ರಕ್ಷಣೆಯ ಉದ್ದೇಶ ಭಯವನ್ನು ಹೊಡೆದೋಡಿಸುವುದು.

" ಈ ಮಾರ್ಗದಲ್ಲಿ ಜ್ಞಾನವು ನಿಮ್ಮ ಸ್ವಾತಂತ್ರ್ಯ - ಅದೇ ನಿಮ್ಮ ಸಂರಕ್ಷಕ "

ಗುರುವಾರ, ಮಾರ್ಚ್ 19, 2009

ಶರಣಾಗತಿ, ಅವಮಾನ ಮತ್ತು ನಾಚಿಕೆ

ಗುರುವಾರ ಮಾರ್ಚ್ ೧೯, ೨೦೦೯

ಶರಣಾಗತಿಯಲ್ಲಿ ತಲೆಯು ಬಾಗಿ ಹೃದಯವನ್ನು ಸಂಧಿಸುತ್ತದೆ. ಬಾಗಲಾರದ ತಲೆಗೆ ಬೆಲೆಯಿಲ್ಲ. ಸೆಟೆದು ನಿಲ್ಲುವ ತಲೆ ಯಾವಾಗಲಾದರೂ ಒಮ್ಮೆ ಶರಣಾಗತಿಯಿಂದಲೋ ಅವಮಾನದಿಂದಲೋ ಬಾಗಲೇ ಬೇಕಾಗುತ್ತದೆ. ಶರಣಾಗತಿಯ ಭಾವದಿಂದ ನಮಿಸುವ ತಲೆ ಯಾವತ್ತೂ ಅವಮಾನದಿಂದ ತಗ್ಗುವ ಪ್ರಮೇಯ ಬರುವುದಿಲ್ಲ.

ಅವಮಾನವು ಅಹಂಕಾರದ ಸಹಯೋಗಿಯಾಗಿರುತ್ತದೆ. ಸಮಾಜವು ಅವಮಾನವನ್ನು ಉಂಟುಮಾಡುತ್ತದೆ. ಅವಮಾನವು ನಮ್ಮ ಗಳಿಕೆ. ನಾಚಿಕೆಯು ಪ್ರೇಮದ ಸಹವರ್ತಿಯಾಗಿರುತ್ತದೆ. ಮಕ್ಕಳಿಗೆ ನಾಚಿಕೆ ಎಷ್ಟು ಭೂಷಣಪ್ರಾಯವಾಗಿರುತ್ತದೆ ಅಮನಿಸಿ. ಅದು ಅವರಿಗೆ ಸ್ವಾಭಾವಿಕವಾಗಿಯೇ ಇರುತ್ತದೆ.
ಅವಮಾನವು ಅಪರಾಧಿ ಪ್ರಜ್ಞೆಯನ್ನು ಹುಟ್ಟಿಸುತ್ತದೆ.
ನಾಚಿಕೆಯಿಂದ ಸೌಂದರ್ಯ ವರ್ಧಿಸುತ್ತದೆ.

ನಾಚಿಕೆಯನ್ನು ಉಳಿಸಿಕೊಳ್ಳಿ, ಅವಮಾನವನ್ನು ಸಮರ್ಪಣೆ ಮಾಡಿ.