ಬುಧವಾರ, ಫೆಬ್ರವರಿ 10, 2016

ಆತ್ಮಸಂವಾದ

ಫೆಬ್ರುವರಿ ೧೦, ೨೦೧೬
ಚೆನ್ನೈ, ಭಾರತ
ಗುರುದೇವ ಶ್ರೀ ಶ್ರೀ ರವಿ ಶಂಕರ್ ಅವರು, ಫೆಬ್ರುವರಿ ೧೦, ೨೦೧೬ರಲ್ಲಿ "ದ ಲಿ ಮೆರಿಡಿಯನ್ ಹೋಟೆಲ್" ನಲ್ಲಿ ನಡೆದ ಚನ್ನೈಯ ಮಹತ್ತರ ಸಂಭಾಷಣೆಯ ಉದ್ಘಾಟನಾ ಅಧಿವೇಶನದಲ್ಲಿ ಮಾತನಾಡಿದರು. ಅಲ್ಲಿ ಅವರು ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು, ವ್ಯಾಪಾರ ಮುಖಂಡರು, ವ್ಯವಸ್ಥಾಪಕರು, ಉದ್ಯಮಿಗಳು, ಶಿಕ್ಷಣ ಶಾಸ್ತ್ರಜ್ಞರು, ಬುದ್ಧಿಜೀವಿಗಳು ಮತ್ತು ಮಾರ್ಕೆಟಿಂಗ್, ಎಂಜಿನಿಯರಿಂಗ್, ಮಾಹಿತಿ ತಂತ್ರಜ್ಞಾನ, ಬ್ಯಾಂಕಿಂಗ್, ಮಾನವ ಸಂಪನ್ಮೂಲ, ಮಾಧ್ಯಮ ಹಾಗೂ ಸೃಜನಶೀಲತೆಯ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಇತರ ನಾಯಕರನ್ನು ಒಳಗೊಂಡ ವೃತ್ತಿಪರರ ಒಂದು ದೊಡ್ಡ ಪ್ರೇಕ್ಷಕ ವರ್ಗವನ್ನು ಭೇಟಿಯಾದರು. ಈ ಕಾರ್ಯಕ್ರಮದಲ್ಲಿ ಗುರುದೇವರು ಹೇಳಿದುದು ಈ ಕೆಳಗಿನಂತಿದೆ:  

ನಾವು ನಮ್ಮ ಮಾತುಗಳ ಮೂಲಕ ಸಂಪರ್ಕಿಸುವುದರಿಂದ ಹೆಚ್ಚಾಗಿ ನಮ್ಮ ಕಂಪನಗಳ ಮೂಲಕ ಸಂಪರ್ಕಿಸುತ್ತೇವೆ. ನಾವೊಂದು ವಿಮಾನದಿಂದ ಇಳಿಯುವಾಗ ಗಗನಸಖಿಯು "ನಿಮ್ಮ ದಿನವು ಶುಭವಾಗಿರಲಿ" ಎಂದು ಹೇಳುತ್ತಾಳೆ. ಆದರೆ ಅವಳದನ್ನು ನಿಜವಾದ ಅರ್ಥದಲ್ಲಿ ಹೇಳುತ್ತಾಳೆಯೇ? ಅದನ್ನೇ ನಿಮ್ಮ ತಾಯಿ ಅಥವಾ ನಿಮ್ಮ ಅಜ್ಜಿ ಹೇಳಿದಾಗ, ಅದು ತನ್ನೊಂದಿಗೆ ಕೆಲವು ಕಂಪನಗಳನ್ನು ಒಯ್ಯುತ್ತದೆ. ಈ ಕಂಪನಗಳನ್ನು ಗ್ರಹಿಸುವ ನಮ್ಮ ಸಾಮರ್ಥ್ಯವು ನಾವು ಶಾಂತವಾಗಿರುವ ನಮ್ಮ ಸಾಮರ್ಥ್ಯದ ಮೇಲೆ ಅವಲಂಬಿತವಾಗಿದೆ. ನಾವು ನಮ್ಮ ಮನಸ್ಸಿನಲ್ಲಿ ಒಂದು ವಿಷಯದೊಂದಿಗೇ ಸಿಕ್ಕಿಹಾಕಿಕೊಂಡಿದ್ದರೆ, ಆಗ ನಾವು ಹಲವು ವಿಷಯಗಳನ್ನು ಕಳೆದುಕೊಳ್ಳುತ್ತೇವೆ. ಹಲವು ಸಲ ಜನರು ಒಂದು ಪ್ರಶ್ನೆಯೊಂದಿಗೆ ಕುಳಿತುಕೊಳ್ಳುತ್ತಾರೆ ಮತ್ತು ಇತರ ಎಲ್ಲದುದರ ಕಡೆಗೆ ಅವರು ಕಿವುಡರಾಗುತ್ತಾರೆ. ನಾನು ಹೇಳುತ್ತಿರುವುದು ನಿಮಗೆ ಅರ್ಥವಾಗುತ್ತಿದೆಯೇ? ನೀವು ಒಂದು ಪ್ರಶ್ನೆಗೆ ಅಂಟಿಕೊಂಡಿರುವಾಗ ನಿಮ್ಮ ಲೋಟವು ತುಂಬಿಹರಿಯುತ್ತಿರುತ್ತದೆ, ಆಗ ಅದರೊಳಗೆ ಹಾಕಲು ಇನ್ನೂ ಹೆಚ್ಚಿನದೇನೂ ಇರುವುದಿಲ್ಲ.

ಒಮ್ಮೆ ಒಬ್ಬ ಶಿಷ್ಯನು ಹಲವಾರು ಪ್ರಶ್ನೆಗಳೊಂದಿಗೆ ತನ್ನ ಗುರುವಿನ ಬಳಿಗೆ ಹೋದನು ಮತ್ತು ಅವರಲ್ಲಿ ಜ್ಞಾನವನ್ನು ಬೇಡಿದನು. ಗುರುವು ಹೀಗಂದರು, "ಬಾ, ಕುಳಿತುಕೋ ಮತ್ತು ಮೊದಲಿಗೆ ಒಂದು ಲೋಟ ಕಾಫಿ ಕುಡಿ". ಲೋಟವು ತುಂಬಿ ಹರಿದು, ಮೇಜು ಮತ್ತು ನಂತರ ನೆಲದ ಮೇಲೆ ಚೆಲ್ಲುವವರೆಗೆ ಗುರುವು ಲೋಟದೊಳಕ್ಕೆ ಕಾಫಿಯನ್ನು ಎರೆದರು.

ಶಿಷ್ಯನಂದನು, "ಗುರುದೇವ, ನೀವೇನು ಮಾಡುತ್ತಿರುವಿರಿ?"

ಗುರು ಅಂದರು, "ನೀನು ನನ್ನ ಬಳಿಗೆ ಒಂದು ತುಂಬಿಹರಿಯುತ್ತಿರುವ ಲೋಟದಂತೆ ಬಂದಿರುವೆ. ನಿನ್ನ ಹಿಡಿಯುವ ಸಾಮರ್ಥ್ಯವು ಬಹಳ ಚಿಕ್ಕದಾಗಿದೆ, ಆದರೆ ನಿನಗೆ ಕೆಲವು ಬಹಳ ದೊಡ್ಡ ಪ್ರಶ್ನೆಗಳಿಗೆ ಉತ್ತರಗಳು ಬೇಕು. ನಾನು ಸುರಿಯುವುದನ್ನು ಹಿಡಿದುಕೊಳ್ಳಲು ನಿನಗೆ ಸಾಧ್ಯವಾಗಲಾರದು. ನಾನು ಕೊಡಲು ಸಿದ್ಧ, ಆದರೆ ಪಡೆಯಲು ನೀನು ಸಿದ್ಧವಾಗಿರುವೆಯಾ? ನೀನು ಪಡೆಯಬೇಕಾದರೆ, ಆಗ ಮೊದಲಿಗೆ ನೀನು ಖಾಲಿಯಾಗಬೇಕು."

ಗೀತೆಯಲ್ಲಿ ಕೃಷ್ಣನು ಹೀಗಂದಿದ್ದಾನೆ,

"ನ ಹ್ಯಸನ್ನ್ಯಸ್ತಸಂಕಲ್ಪೋ ಯೋಗೀ ಭವತಿ ಕಶ್ಚನ",

ನೀನು ನಿನ್ನ ಮನಸ್ಸಿನಲ್ಲಿ ಒಂದು ಯೋಚನೆಗೆ ಅಂಟಿಕೊಂಡಿದ್ದರೆ, ಆಗ ಹೊಸ ಜ್ಞಾನವನ್ನು ಪಡೆಯಲು ನಿನಗೆ ಸಾಧ್ಯವಾಗಲಾರದು.

ನೋಡಿ, ಒಬ್ಬಳು ತಾಯಿಯು ಮಗುವಿಗೆ, "ತೊಲಗಿ ಹೋಗು" ಎಂದು ಹೇಳಿದರೆ, ಅವಳದನ್ನು ನಿಜವಾದ ಅರ್ಥದಲ್ಲಿ ಹೇಳಿರುತ್ತಾಳೆಯೇ? ಇಲ್ಲ! ಅವಳು ಯಾವತ್ತೂ ನಿಜವಾದ ಅರ್ಥದಲ್ಲಿ ಅದನ್ನು ಹೇಳುವುದಿಲ್ಲ. ಸುಮ್ಮನೆ ಕೋಪದಿಂದ ಅವಳು ಹಾಗೆ ಹೇಳುತ್ತಾಳೆ. ನಾವು ಪದಗಳಿಗೆ ಅವುಗಳ ಅರ್ಥಗಳನ್ನು ಕೊಡುತ್ತೇವೆ ಮತ್ತು ನಾವು ನಮ್ಮ ಅಂತರಾಳದಿಂದ ಅವುಗಳಿಗೆ ಅವುಗಳ ಅರ್ಥವನ್ನು ಕೊಡುತ್ತೇವೆ. ಕಂಪನಗಳ ಮಟ್ಟದಿಂದ ನಾವು ಹೇಳುವಾಗ, ಅದು ಆತ್ಮಸಂವಾದನ - ಆತ್ಮದಿಂದ ಆತ್ಮಕ್ಕಿರುವ ಸಂಪರ್ಕ, ಮತ್ತು ಸಂಪರ್ಕದ ಈ ಮಟ್ಟದಲ್ಲಿ ಮಾತ್ರ ನಿಜವಾದ ಜ್ಞಾನವು ಉದಯಿಸುವುದು.

ಪ್ರಾಚೀನ ದಿನಗಳಲ್ಲಿ ಈ ದೇಶದಲ್ಲಿ ಉಪನಯನದ ಸಂಪ್ರದಾಯವಿತ್ತು. ಗುರುವು ಶಿಷ್ಯನನ್ನು ತಮ್ಮ ಹತ್ತಿರ ಕುಳಿತುಕೊಳ್ಳಿಸಿ, ಶಿಷ್ಯನ ಕಣ್ಣುಗಳೊಳಗೆ ನೋಡಿ ಅವನಿಗೆ ಜ್ಞಾನವನ್ನು ಹಸ್ತಾಂತರಿಸುತ್ತಿದ್ದರು. ಪ್ರತಿಯಾಗಿ ಶಿಷ್ಯನಿಗೆ ತನ್ನ ಗುರುವಿನ ಮೇಲೆ ನಂಬಿಕೆಯಿರುತ್ತಿತ್ತು.

ಗುರುವಿಗೆ ತಿಳಿಯದು ಎಂದು ನೀವು ಯೋಚಿಸಿದರೆ, ಮತ್ತೆ ಒಂದು ಪ್ರಶ್ನೆಯನ್ನು ಕೇಳುವುದಾದರೂ ಯಾಕೆ? ಗಿಂಡಿಗೆ ಹೋಗುವುದು ಹೇಗೆಂಬುದು ನಿನಗೆ ತಿಳಿಯದೆಂದು ನಾನು ಯೋಚಿಸಿದರೆ, ನಾನು ಯಾಕಾದರೂ ನಿನ್ನನ್ನು ಕೇಳುತ್ತೇನೆ? ನೀನು ಚೆನ್ನೈಯವನಾಗಿರುವುದರಿಂದ ನಾನು ನಿನ್ನನ್ನು ಕೇಳುತ್ತೇನೆ. ಆದರೆ ನೀನು ಬಿಹಾರಿನವನಾಗಿದ್ದು, ಕೇವಲ ಒಬ್ಬ ಭೇಟಿ ಕೊಡುವವನಾಗಿದ್ದರೆ, ನಾನು ನಿನ್ನನ್ನು ಕೇಳುವ ತೊಂದರೆಯನ್ನು ತೆಗೆದುಕೊಳ್ಳುವುದಿಲ್ಲ, ಅದು ಹಾಗಲ್ಲವೇ? ಆದ್ದರಿಂದ, ಅಲ್ಲಿ ವಿಶ್ವಾಸ ಮುಖ್ಯ. ವಿಶ್ವಾಸ ನಮ್ಮ ಜೀವನದ ಭಾಗವಾಗಿದೆ. ನಾವು ನಂಬಿಕೆಯೊಂದಿಗೆ ಜನಿಸಿದ್ದೇವೆ. ಒಂದು ಮಗುವಿಗೆ ತಾಯಿಯನ್ನು ಗೊತ್ತಿರುವುದಿಲ್ಲ, ಆದರೆ ಅದು ತಾಯಿಯ ಕಣ್ಣುಗಳನ್ನು ನೋಡುವಾಗ ಅದು ಪ್ರೇಮವನ್ನು ಅನುಭವಿಸುತ್ತದೆ. ಅದು ತಾಯಿಯಲ್ಲಿ, "ನಿನ್ನ ಹೆಸರೇನು? ನೀನು ಓದಿದ್ದು ಎಲ್ಲಿ? ನಿನ್ನ ಹೆತ್ತವರು ಯಾರು? ನೀನು ಎಲ್ಲಿಂದ ಬಂದಿರುವೆ? ನೀನೇನು ಮಾಡುತ್ತಿರುವೆ?" ಎಂದು ಕೇಳುವುದಿಲ್ಲ. ಮಗುವಿಗೆ ಏನೂ ಗೊತ್ತಿರುವುದಿಲ್ಲ, ಆದರೆ ಅದಕ್ಕೆ ಪ್ರೇಮದ ಅನುಭವವಾಗುತ್ತದೆ. ಮಗುವು ತಾಯಿಯನ್ನು ಒಂದು ತಿಳಿಯಲಿರುವ ವಸ್ತುವನ್ನಾಗಿ ಮಾಡುವುದಿಲ್ಲ. ಅದೇ ರೀತಿಯಲ್ಲಿ, ಅಷ್ಟೊಂದು ದೊಡ್ಡದಾಗಿರುವ ಮತ್ತು ಮಹತ್ತಾಗಿರುವ ಒಂದನ್ನು ನೀವು ತಿಳಿಯಲಿರುವ ಒಂದು ವಸ್ತುವನ್ನಾಗಿ ಮಾಡಲು ನಿಮಗೆ ಸಾಧ್ಯವಿಲ್ಲ. ಪ್ರೇಮವನ್ನು ನೀವು ಅನುಭವಿಸಿದಾಗ ಮಾತ್ರ ನಿಮಗೆ ಜ್ಞಾನವನ್ನು ಪಡೆಯಲು ಸಾಧ್ಯ. ಕೆಲವರು ಯೋಚಿಸುತ್ತಾರೆ, ನಿಮ್ಮಲ್ಲಿ ಜ್ಞಾನವಿದ್ದರೆ ಮಾತ್ರ ನಿಮಗೆ ಪ್ರೇಮವನ್ನು ಅನುಭವಿಸಲು ಸಾಧ್ಯವೆಂದು, ಅದು ಕೂಡಾ ಸರಿ.

ಕೆಲವು ಜನರು ಹೀಗೆಂದು ಹೇಳುತ್ತಾರೆ, "ನಾನು ದೇವರನ್ನು ಸಾಕ್ಷಾತ್ಕರಿಸಿಕೊಳ್ಳಲು ಬಯಸುತ್ತೇನೆ", ಆದರೆ ನೀವು ದೇವರನ್ನು ಸಾಕ್ಷಾತ್ಕರಿಸಿಕೊಳ್ಳಲು ಯಾಕೆ ಬಯಸುತ್ತೀರಿ? ನನ್ನ ಪ್ರೀತಿಪಾತ್ರರೇ, ನೀವು ದೇವರಿಂದ ದೂರ ಹೋಗಲಿಕ್ಕೇ ಸಾಧ್ಯವಿಲ್ಲ. ಅದು ಅಸಾಧ್ಯ! ಎಲ್ಲೆಡೆಯೂ ಗಾಳಿಯಿದೆ, ಆದರೆ ನೀವೊಂದು ಫ್ಯಾನಿನ ಹತ್ತಿರ ಕುಳಿತಾಗ ನಿಮಗದರ ತೀವ್ರತೆಯನ್ನು ಅನುಭವಿಸಲು ಸಾಧ್ಯವಾಗುತ್ತದೆ. ಅದೇ ರೀತಿಯಲ್ಲಿ, ದೇವರ ಉಪಸ್ಥಿತಿಯನ್ನು ಅನುಭವಿಸಲು ನಿಮಗೆ ಧ್ಯಾನ, ಸತ್ಸಂಗ ಹಾಗೂ ಒಬ್ಬರು ಗುರುಗಳ ಅಗತ್ಯವಿದೆ.  

ನಿಮ್ಮಲ್ಲಿ ಎಷ್ಟು ಮಂದಿ ಸಂಶಯದ ಬಗ್ಗೆ ಯೋಚಿಸಿದ್ದೀರಿ?

(ಸಭಿಕರಲ್ಲಿ ಅನೇಕರು ಕೈಗಳನ್ನೆತ್ತುತ್ತಾರೆ )

ನಿಮ್ಮಲ್ಲಿ ಎಷ್ಟು ಮಂದಿ ಸಂಶಯದ ಬಗ್ಗೆ ಯೋಚಿಸಿಲ್ಲ?

(ಸಭಿಕರಲ್ಲಿ ಕೆಲವರು ಕೈಗಳನ್ನೆತ್ತುತ್ತಾರೆ )

ಸಂಶಯವು ಯಾವತ್ತೂ ಸಕಾರಾತ್ಮಕವಾದುದರ ಬಗ್ಗೆ ಇರುತ್ತದೆ. ನೀವಿದನ್ನು ಗಮನಿಸಿದ್ದೀರಾ? ಒಬ್ಬರು ನಿಮ್ಮಲ್ಲಿ, "ಅವನು ತುಂಬಾ ಕೆಟ್ಟ ವ್ಯಕ್ತಿ" ಎಂದು ಹೇಳಿದರೆ ನೀವದನ್ನು ಒಪ್ಪುತ್ತೀರಿ ಮತ್ತು ಅದು ಹಾಗೇ ಎಂದು ಅಂದುಕೊಳ್ಳುತ್ತೀರಿ. ಅದರ ಬಗ್ಗೆ ಯಾವುದೇ ಸಂಶಯವಿಲ್ಲ. ಆದರೆ ಯಾರಾದರೂ "ಅವನೊಬ್ಬ ಒಳ್ಳೆಯ ವ್ಯಕ್ತಿ" ಎಂದು ಹೇಳಿದರೆ ನೀವು, "ಹಾಗೆಂದು ನೀನು ಯೋಚಿಸುತ್ತಿರುವೆ, ನೋಡೋಣ" ಎಂದು ಹೇಳುತ್ತೀರಿ.

ಒಬ್ಬ ವ್ಯಕ್ತಿಯ ಪ್ರಾಮಾಣಿಕತೆಯನ್ನು ನಾವು ಸಂಶಯಿಸುತ್ತೇವೆ, ಆದರೆ ಒಬ್ಬ ವ್ಯಕ್ತಿಯ ಅಪ್ರಾಮಾಣಿಕತೆಯನ್ನು ನಾವು ಯಾವತ್ತೂ ಸಂಶಯಿಸುವುದಿಲ್ಲ. ಅದೇ ರೀತಿ, ನಾವು ನಮ್ಮ ಸ್ವಂತ ಸಂತೋಷದ ಬಗ್ಗೆ ಸಂಶಯಿಸುತ್ತೇವೆ. ಯಾರಾದರೂ ನಿಮ್ಮಲ್ಲಿ "ನೀನು ಸಂತೋಷವಾಗಿದ್ದೀಯಾ?" ಎಂದು ಕೇಳಿದರೆ ನೀವು, "ನನಗೆ ಖಚಿತವಿಲ್ಲ" ಎಂದು ಹೇಳುತ್ತೀರಿ. ಆದರೆ ನಾವು ನಮ್ಮ ಖಿನ್ನತೆಯ ಬಗ್ಗೆ ಎಂದಿಗೂ ಸಂಶಯಿಸುವುದಿಲ್ಲ. "ನಾನು ಖಿನ್ನನಾಗಿದ್ದೇನೆಯೇ ಎಂದು ನನಗೆ ಖಚಿತವಾಗಿ ತಿಳಿಯದು" ಎಂದು ನೀವು ಯಾವತ್ತಾದರೂ ಹೇಳಿದ್ದೀರಾ? ಇಲ್ಲ! ನಮ್ಮ ಖಿನ್ನತೆಯ ಬಗ್ಗೆ ಹಾಗೂ ನಮ್ಮ ಕೋಪದ ಬಗ್ಗೆ ನಮಗೆ ಬಹಳ ಖಚಿತವಾಗಿ ತಿಳಿದಿದೆ, ಆದರೆ ನಮ್ಮ ಪ್ರೀತಿಯ ಬಗ್ಗೆ ನಮಗೆ ಖಚಿತವಾಗಿ ತಿಳಿಯದು.

ನಾವು ಜನರಲ್ಲಿ, "ನೀನು ನಿಜವಾಗಿಯೂ ನನ್ನನ್ನು ಪ್ರೀತಿಸುತ್ತೀಯಾ?" ಎಂದು ಕೇಳುತ್ತೇವೆ. ಆದರೆ ನಾವು ಯಾರೊಡನೆಯೂ, "ನೀನು ನಿಜವಾಗಿಯೂ ನನ್ನಲ್ಲಿ ಕೋಪಗೊಂಡಿರುವೆಯಾ?" ಎಂದು ಯಾವತ್ತೂ ಕೇಳುವುದಿಲ್ಲ.

ಹೀಗೆ, ಸಕಾರಾತ್ಮಕವಾಗಿರುವ ಯಾವುದನ್ನಾದರೂ ನಾವು ಸಂಶಯಿಸುತ್ತೇವೆ ಮತ್ತು ಅದಕ್ಕಾಗಿಯೇ ದೇವರೆಂದು ಕರೆಯಲ್ಪಡುವ ಒಂದು ಶಕ್ತಿಯ ಅಸ್ತಿತ್ವದ ಬಗ್ಗೆ ನಾವು ಸಂಶಯಿಸುತ್ತೇವೆ. ಸಂಶಯಪಡುವುದು ಬಹಳ ಸಾಮಾನ್ಯವಾದ ಒಂದು ಸಂಗತಿ. ಜನರ ಒಳ್ಳೆಯತನದ ಬಗ್ಗೆ ನೀವು ಸಂಶಯಪಡುತ್ತೀರಿ, ಅದು ಕೂಡಾ ಸಹಜ. ನಿಮ್ಮಲ್ಲಿರುವ ಒಳ್ಳೆಯತನದ ಬಗ್ಗೆ ಅಥವಾ ನಿಮಗಾಗುತ್ತಿರುವ ಏನಾದರೂ ಒಳ್ಳೆಯದ್ದರ ಬಗ್ಗೆ ಕೂಡಾ ನೀವು ಸಂಶಯಪಡುತ್ತೀರಿ, ಅಲ್ಲವೇ? ಈ ಸಂಶಯವೆಂದರೇನು ಎಂಬುದನ್ನು ಒಮ್ಮೆ ನಾವು ತಿಳಿದುಕೊಂಡರೆ, ಅತ್ಯಂತ ಉನ್ನತವಾದ ಹಾಗೂ ಬಲಯುತವಾದ ಒಂದು ಹಂತಕ್ಕೆ ನಾವು ಜಿಗಿಯುತ್ತೇವೆ ಮತ್ತು ಅದುವೇ ನಿಜವಾದ ವಿಶ್ವಾಸ.

ಪ್ರೀತಿ ಮತ್ತು ವಿಶಾಸವನ್ನು ನಿಮಗೆ ಬೇರ್ಪಡಿಸಲು ಸಾಧ್ಯವಿಲ್ಲ. "ನನಗೆ ನಿನ್ನಲ್ಲಿ ವಿಶ್ವಾಸವಿದೆ, ಆದರೆ ನಾನು ನಿನ್ನನ್ನು ಪ್ರೀತಿಸುವುದಿಲ್ಲ" ಎಂದು ನೀವು ಹೇಳಲಾರಿರಿ. ಹಾಗೆಯೇ, "ನಾನು ನಿನ್ನನ್ನು ಪ್ರೀತಿಸುತ್ತೇನೆ, ಆದರೆ ನನಗೆ ನಿನ್ನಲ್ಲಿ ವಿಶ್ವಾಸವಿಲ್ಲ" ಎಂದು ಕೂಡಾ ನೀವು ಹೇಳಲಾರಿರಿ. ಪ್ರೀತಿ ಮತ್ತು ವಿಶ್ವಾಸಗಳು ಒಂದೇ ನಾಣ್ಯದ ಎರಡು ಮುಖಗಳು.
ಸಮೃದ್ಧತೆಯ ಕಡೆಗೆ ಬರೋಣ. ಒಬ್ಬನು ಸಮೃದ್ಧತೆಯನ್ನು ಅನುಭವಿಸುವುದು ಹೇಗೆ? ೩೦ ವರ್ಷಗಳ ಹಿಂದೆ ಒಬ್ಬ ಉದ್ಯೋಗಿಯು ನನಗೆ ಇದೇ ಪ್ರಶ್ನೆಯನ್ನು ಕೇಳಿದನು. ನಾನು ಅವನಲ್ಲಿ ಹೀಗೆಂದು ಕೇಳಿದೆ, "ನಿನಗೆ ಎಷ್ಟು ಸಾಲವಿದೆ?" ಅವನಂದನು, "ನನಗೆ ೨೨,೦೦೦ ರೂಪಾಯಿಗಳಷ್ಟು ಸಾಲವಿದೆ ಮತ್ತು ನನಗೆ ನಾನು ಬಡವನೆಂದು ಅನ್ನಿಸುತ್ತದೆ".
ನಾನು ಅವನಲ್ಲಿ ಕೇಳಿದೆ, "ನಿನ್ನ ಕಂಪೆನಿಗೆ ಎಷ್ಟು ಸಾಲವಿದೆಯೆಂದು ನಿನಗೆ ಗೊತ್ತಾ? ಅದಕ್ಕೆ ೨೨ ಕೋಟಿ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿಗೆ ಇರಲೂಬಹುದು!"

ನಾನು ಅವನಿಗಂದೆ, "ಭೂಮಿಯ ಮೇಲಿನ ಅತ್ಯಂತ ಶ್ರೀಮಂತ ದೇಶವಾದ ಅಮೇರಿಕಾಕ್ಕೆ ಎಷ್ಟು ಸಾಲವಿದೆಯೆಂದು ನಿನಗೆ ಗೊತ್ತಾ? ೨೨,೦೦೦ ರೂಪಾಯಿಗಳ ಸಾಲದೊಂದಿಗೆ, ಪ್ರಪಂಚ ನಿನ್ನ ಮೇಲೆ ಬಿದ್ದಿದೆಯೆಂದು ನಿನಗನಿಸುತ್ತದೆ. ಆದ್ದರಿಂದ ಈಗ ನನಗೆ ಹೇಳು ಯಾರು ಶ್ರೀಮಂತರು ಮತ್ತು ಯಾರು ಬಡವರು? ೨೨ ಕೋಟಿ ರೂಪಾಯಿಗಳಷ್ಟು ಸಾಲವಿರುವವರೊಬ್ಬರೇ ಅಥವಾ ೨೨,೦೦೦ ರೂಪಾಯಿಗಳಷ್ಟು ಸಾಲವಿರುವವರೊಬ್ಬರೇ?ನಿನಗೆ ನಾಲ್ಕು ಜನರ ಸೀಮಿತವಾದೊಂದು ಜವಾಬ್ದಾರಿಯಿದೆ, ಬೇರೊಬ್ಬರಿಗೆ ೧೦,೦೦೦ ಜನರನ್ನು ನೋಡಿಕೊಳ್ಳುವ ಒಂದು ಜವಾಬ್ದಾರಿಯಿದೆ".

ಬಡತನವಿರುವುದು ಕೇವಲ ಮನಸ್ಸಿನಲ್ಲಿ ಮಾತ್ರ. ಉತ್ತರ ಭಾರತದಲ್ಲಿ, ದೀಪಾವಳಿಗಿಂತ ಒಂದು ದಿನ ಮೊದಲು ಅವರು "ಧಂತೇರಸ್" ಆಚರಿಸುತ್ತಾರೆ. ಧಂತೇರಸ್‌ನಂದು ಅವರು ತಮ್ಮೆಲ್ಲಾ ಸಂಪತ್ತನ್ನು ಹೊರತಂದು ದೇವರ ಮುಂದಿಡುತ್ತಾರೆ ಮತ್ತು ಸಮೃದ್ಧತೆಯನ್ನು ಅನುಭವಿಸುತ್ತಾರೆ. ಅವರು ಯಾಕೆ ಇದನ್ನು ಮಾಡುತ್ತಾರೆ? ಅದು ಯಾಕೆಂದರೆ, ನಾವು ಒಳಗಿನಿಂದ ಸಮೃದ್ಧತೆಯನ್ನು ಅನುಭವಿಸುವಾಗ ಅದೊಂದು ಸಕಾರಾತ್ಮಕ ಮನೋಭಾವವನ್ನು, ಶಕ್ತಿ ಮತ್ತು ಉತ್ಸಾಹವನ್ನು ಹೊರತರುತ್ತದೆ ಹಾಗೂ ನಿಮಗೆ ಇನ್ನೂ ಹೆಚ್ಚಿನದನ್ನು ಪಡೆಯಲು ಸಾಧ್ಯವಾಗುತ್ತದೆ. ಆದರೆ ನೀವೊಂದು "ಕೊರತೆ"ಯ ಪ್ರಜ್ಞೆಯಲ್ಲಿರುವಾಗ, ನಾನು ನಿಮಗೆ ಹೇಳುತ್ತೇನೆ ಕೇಳಿ, ನೀವು ಬಿತ್ತಿದ ಆ ಬೀಜವು ಕೊರತೆಯನ್ನು ಹೆಚ್ಚಿಸುತ್ತದೆ ಮತ್ತು ಸಮೃದ್ಧತೆಯನ್ನು ಕಡಿಮೆಗೊಳಿಸುತ್ತದೆ. ಸಮೃದ್ಧತೆಯು ನಿಮ್ಮೊಳಗೆ ಮೊದಲಿಗೆ ಒಂದು ಬೀಜವಾಗಿ ಆರಂಭವಾಗುತ್ತದೆ, ಆದ್ದರಿಂದ ಸಮೃದ್ಧತೆಯನ್ನು ಅನುಭವಿಸಿ. ನಿಮ್ಮೊಳಗೆ ಸಮೃದ್ಧತೆಯ ಬೀಜವಿರುವಾಗ, ಜಾದೂ ನಡೆಯುತ್ತದೆ!

ಹಿಂದಿನ ಕಾಲದಲ್ಲಿ, ಮಕ್ಕಳು ಕೆಲವರು ಸಿಹಿತಿಂಡಿಯನ್ನು ಕೇಳಿದರೆ, ಅಜ್ಜಿಯಂದಿರು ಅದು ಇಲ್ಲವೆಂದು ಯಾವತ್ತೂ ಹೇಳುತ್ತಿರಲಿಲ್ಲ. ಅವರು ಹೀಗೆಂದು ಹೇಳುತ್ತಿದ್ದರು, "ಬೇಕಾದಷ್ಟು ಸಿಹಿತಿಂಡಿಗಳಿವೆ, ಆದರೆ ನಾವು ಅಂಗಡಿಗೆ ಹೋಗಿ ಸ್ವಲ್ಪ ಖರೀದಿಸಬೇಕಷ್ಟೆ". ಇಲ್ಲಿನ ಪರಿಕಲ್ಪನೆ ಏನಾಗಿತ್ತೆಂದರೆ, ಅಲ್ಲಿ ಕೆಲವು ನಿರ್ದಿಷ್ಟ ದೇವತೆಗಳು ಸುತ್ತಾಡುತ್ತಿರಬಹುದು ಮತ್ತು ನೀವು, "ನನ್ನಲ್ಲಿ ಇದು ಇಲ್ಲ" ಎಂದು ಹೇಳಿದರೆ ಅವರು, "ತಥಾಸ್ತು" (ಅಂದರೆ, ಹಾಗೇ ಆಗಲಿ) ಎಂದು ಹೇಳಬಹುದು! ಈ ದೇವತೆಗಳು ಯಾವಾಗ ಸುತ್ತಾಡುತ್ತಿರಬಹುದು ಎಂಬುದು ನಿಮಗೆ ಗೊತ್ತಿಲ್ಲ. ಆದ್ದರಿಂದ ಯಾವಾಗಲೂ ಒಂದು ಸಕಾರಾತ್ಮಕ ಮನೋಭಾವವನ್ನಿಟ್ಟುಕೊಳ್ಳಲು ಅವರು ನಮಗೆ ಹೇಳುತ್ತಿದ್ದರು. ಇದೊಂದು ಸುಂದರವಾದುದು. ಎಲ್ಲಾ ಸಮಯದಲ್ಲೂ ನಾವು ಒಂದು ಸಕಾರಾತ್ಮಕ ಮನೋಭಾವವನ್ನು ಹೊಂದಿರಬೇಕು.

ಪ್ರಾಣವು ಹೆಚ್ಚಾಗುವಾಗ, ಸಂಶಯಗಳು ಮಾಯವಾಗುತ್ತವೆ, ಪ್ರಶ್ನೆಗಳು ಮಾಯವಾಗುತ್ತವೆ ಮತ್ತು ಸಮಸ್ಯೆಗಳು ಮಾಯವಾಗುತ್ತವೆ. ಪ್ರಾಣವು ಕಡಿಮೆಯಿರುವಾಗ, ನಕಾರಾತ್ಮಕತೆಯು ಬರುತ್ತದೆ.

ನೀವು ಇವತ್ತಿನ ರಾಜಕಾರಣಿಗಳನ್ನು ದೂಷಿಸುತ್ತೀರಿ. ಕಾಲದ ಚರಿತ್ರೆಯಲ್ಲಿ ಅವರು ಇದಕ್ಕಿಂತ ಉತ್ತಮ ಯಾವಾಗ ಇದ್ದರೆಂದು ನನಗೆ ಹೇಳಿ ನೋಡೋಣ? ಮಾನವಕುಲದ ಚರಿತ್ರೆಯಲ್ಲಿ ಯಾವುದೇ ಹಿಂಸೆಯಿದ್ದಿರದ, ಯಾವುದೇ ದುರ್ಯೋಧನ ಅಥವಾ ಮರೀಚಿ ಅಥವಾ ರಾವಣ ಅಥವಾ ಕುಂಭಕರ್ಣ ಇದ್ದಿರದ ಒಂದು ಕಾಲವನ್ನು ನನಗೆ ಹೇಳಿ. ಹಿರಣ್ಯಕಶ್ಯಪು ಮತ್ತು ಹಿರಣ್ಯಾಕ್ಷ ಇದ್ದಿರಲಿಲ್ಲವೇ? ವಾಸ್ತವವಾಗಿ, ಪ್ರಾಚೀನ ಕಾಲದಲ್ಲಿ, ನೀವು "ಹರಿ ಓಂ" ಎಂದು ಹೇಳಿದರೆ, ಹಿರಣ್ಯಕಶ್ಯಪು ನಿಮ್ಮ ಮನೆಗೆ ಬಂದು ನಿಮ್ಮನ್ನು ಹಿಡಿಯುತ್ತಿದ್ದ. ಕನಿಷ್ಠಪಕ್ಷ ಈ ಯುಗದಲ್ಲಿ ಇದು ಉತ್ತಮವಾಗಿದೆ, ನಮ್ಮಲ್ಲಿ ಅಂತಹ ರಾಕ್ಷಸರಿಲ್ಲ.

ನಾವು ನಕಾರಾತ್ಮಕತೆಯ ಕಡೆಗೆ ಗಮನ ಕೊಡುವಾಗ ನಾವದಕ್ಕೆ ನಮ್ಮ ಮನಸ್ಸಿನಲ್ಲಿ ಆಶ್ರಯ ಕೊಡುತ್ತೇವೆ ಮತ್ತು ಚಡಪಡಿಸುತ್ತೇವೆ. ನೀವದನ್ನು ಇನ್ನೊಂದು ಕೋನದಿಂದ ನೋಡಬೇಕೆಂದು ನಾನು ಬಯಸುತ್ತೇನೆ: ನಕಾರಾತ್ಮಕ ಶಕ್ತಿಗಳಿವೆ, ಆದರೆ ಅವುಗಳಿರುವುದು ಒಳ್ಳೆಯ ಜನರನ್ನು ಒಂದುಗೂಡಿಸಲು. ಪ್ಯಾರಿಸ್‌ನಲ್ಲಿ ನಡೆದುದು ಒಂದು ಘೋರ ಅಪರಾಧ, ಆದರೆ ಅದೇನು ಮಾಡಿತು? ಅದು ಇಡೀ ದೇಶವನ್ನು ಒಗ್ಗೂಡಿಸಿತು. ಹತ್ತು ಲಕ್ಷ ಜನರು ಒಟ್ಟುಸೇರಿ ಒಳ್ಳೆಯತನಕ್ಕಾಗಿ ಎದ್ದುನಿಂತರು; ಏಕತೆಗಾಗಿ ನಡೆದರು. ಒಳ್ಳೆಯದು ಯಾವಾಗಲೂ ಜಯಿಸುತ್ತದೆ! ಅದು ನಮ್ಮ ದೇಶದ ಆದರ್ಶವಾಕ್ಯವೂ ಆಗಿದೆ: "ಸತ್ಯಮೇವ ಜಯತೆ" (ಸತ್ಯವೊಂದೇ ಜಯಿಸುವುದು). ಅದನ್ನು ನಾವು ಮರೆಯದಿರೋಣ! ಅದನ್ನು ನಾವು ನಮಗೆ ನೆನಪಿಸುತ್ತಾ ಇರಬೇಕು ಮತ್ತು ಇಲ್ಲಿರುವ ನಮ್ಮಲ್ಲಿ ಪ್ರತಿಯೊಬ್ಬರೂ ನೂರು ಅಥವಾ ಹೆಚ್ಚು ಜನರನ್ನು ತಲುಪಿ ಆನಂದದ ಒಂದು ಅಲೆಯನ್ನು ಸೃಷ್ಟಿಸಬೇಕು.

ನೀವು ಯಾರಲ್ಲಾದರೂ, ಅವರು ಮಾಡುತ್ತಿರುವುದನ್ನು ಅವರು ಯಾಕೆ ಮಾಡುತ್ತಿರುವರೆಂದು ಕೇಳಿದರೆ, ಅವರು ಏನು ಹೇಳಬಹುದು? ಸಂತೋಷಕ್ಕಾಗಿ, ಅಲ್ಲವೇ? ಈ ಭೂಮಿಯ ಮೇಲಿರುವ ಯಾರೇ ಆದರೂ ಏನನ್ನಾದರೂ ಮಾಡುವುದು ಸಂತೋಷಕ್ಕಾಗಿ, ಆದರೆ ನಿಜಕ್ಕೂ ಅವರಿಗೆ ಅದು ಸಿಗುತ್ತದೆಯೇ? ಬಹಳ ಕಡಿಮೆ ಜನರಿಗೆ ಅದು ಸಿಗುತ್ತದೆ. ಆದ್ದರಿಂದ, ನಮ್ಮ ಕರ್ತವ್ಯವೆಂದರೆ ನಿಜವಾದ, ದೀರ್ಘಕಾಲ ಉಳಿಯುವಂತಹ ಸಂತೋಷವನ್ನು ಮತ್ತು ಒಂದು ಅಳಿಸಲಾಗದ ಮುಗುಳ್ನಗೆಯನ್ನು ಕಂಡುಕೊಳ್ಳುವುದು, ಹಾಗೂ ಅದು ಆಧ್ಯಾತ್ಮವೆಂದು ಕರೆಯಲ್ಪಡುತ್ತದೆ. ಇದಕ್ಕೆ ದಾರಿಯೆಂದರೆ ಧ್ಯಾನದ ಮೂಲಕವಾಗಿದೆ.

ಯಾವುದು ಅಂತರ್ಜ್ಞಾನವನ್ನು ತರುವುದೋ, ಯಾವುದು ನಿಮ್ಮ ಬುದ್ಧಿವಂತಿಕೆಯನ್ನು ಎತ್ತರಕ್ಕೇರಿಸುವುದೋ ಮತ್ತು ಯಾವುದು ನಿಮ್ಮೊಳಗೆ ನವೀನತೆಯನ್ನು ತರುವುದೋ ಅದುವೇ ಧ್ಯಾನವಾಗಿದೆ. ಇದುವೇ ಇಂದಿನ ಸಮಾಜಕ್ಕೆ ಅತ್ಯಂತ ಆವಶ್ಯಕವಾದುದು. ಒತ್ತಡವೆಂದರೆ, ಮಾಡಲು ಅತಿಯಾದ ಕೆಲಸವಿರುವುದು, ಅತೀ ಕಡಿಮೆ ಸಮಯವಿರುವುದು ಮತ್ತು ಶಕ್ತಿಯಿಲ್ಲದಿರುವುದು. ಒತ್ತಡವು ನಮ್ಮ ಅಂತರ್ಜ್ಞಾನವನ್ನು ನಿಸ್ತೇಜಗೊಳಿಸುತ್ತದೆ, ನಮ್ಮ ಹೊಸತನ್ನು ಆವಿಷ್ಕರಿಸುವ ಉತ್ಸಾಹವನ್ನು ಮಸುಕುಗೊಳಿಸುತ್ತದೆ ಮತ್ತು ನಮ್ಮ ಬುದ್ಧಿವಂತಿಕೆಯನ್ನು ನಾಶಪಡಿಸುತ್ತದೆ. ಎಲ್ಲಾ ಮೂರರ (ಬುದ್ಧಿವಂತಿಕೆ, ನವೀನತೆ ಮತ್ತು ಅಂತರ್ಜ್ಞಾನ)ಶತ್ರುವಾಗಿದೆ ಒತ್ತಡ ಮತ್ತು ಅಪನಂಬಿಕೆ. ನಾವು ಇವುಗಳನ್ನು ತೊಡೆದುಹಾಕಬೇಕಾಗಿದೆ ಮತ್ತು ಹಾಗೆ ಮಾಡಲು ನಾವು ನಮ್ಮ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ನಮ್ಮ ಶಕ್ತಿಯನ್ನು ಹೆಚ್ಚಿಸಿಕೊಂಡಾಗ, ಒತ್ತಡವು ಇಲ್ಲದಾಗುತ್ತದೆ ಮತ್ತು ಅಂತರ್ಜ್ಞಾನವು ಕಾಣಿಸಿಕೊಳ್ಳುತ್ತದೆ.

ನಾನು ಯಾವತ್ತೂ ಚಿಕ್ಕ ಮಕ್ಕಳ ಕಡೆಗೆ ಹೆಚ್ಚು ಗಮನ ಕೊಡಲಿಲ್ಲ. ಆದರೆ ಇತ್ತೀಚೆಗೆ, ಮಕ್ಕಳಿಗಾಗಿ ಯಾಕೆ ನಾವು ಏನನ್ನಾದರೂ ಮಾಡಬಾರದೆಂದು ನಾನು ಯೋಚಿಸಿದೆ. ಹೀಗಾಗಿ ನಾವು ಮಕ್ಕಳಿಗಾಗಿ ಒಂದು ಅಂತರ್ಜ್ಞಾನದ ಶಿಬಿರವನ್ನು ನಡೆಸಿದೆವು. ಕಣ್ಣಿಗೆ ಪಟ್ಟಿ ಕಟ್ಟಿಕೊಂಡು ಓದಲು ಈ ಮಕ್ಕಳಿಗೆ ಸಾಧ್ಯವಾಗುತ್ತದೆ. ಈ ಜ್ಞಾನವು ಶಿಕ್ಷಣದಲ್ಲಿ ಕ್ರಾಂತಿಯನ್ನು ತರಲಿದೆ. ಇನ್ನುಮುಂದೆ ನಿಮ್ಮ ಮಕ್ಕಳನ್ನು ಮೂರ್ಖರನ್ನಾಗಿಸಲು ನಿಮಗೆ ಸಾಧ್ಯವಿಲ್ಲ! ನೀವು ಮಕ್ಕಳಿಂದ ವಸ್ತುಗಳನ್ನು ಬಚ್ಚಿಡಲಾರಿರಿ, ಅದನ್ನು ನೀವು ಎಲ್ಲಿ ಬಚ್ಚಿಟ್ಟಿದ್ದೀರೆಂದು ಅವರಿಗೆ ಸರಿಯಾಗಿ ಗೊತ್ತಿರುತ್ತದೆ.

ಮೊನ್ನೆಯಷ್ಟೇ ಒಬ್ಬರು ಸಜ್ಜನರು, ತಾವೊಂದು ಪ್ರಧಾನವಾದ ಕಡತವನ್ನು ಕಳೆದುಕೊಂಡರೆಂದೂ, ಅದಕ್ಕಾಗಿ ಅವರು ಎಲ್ಲೆಡೆಯೂ ಹುಡುಕುತ್ತಿರುವರೆಂದೂ ನನಗೆ ಸಂದೇಶ ಕಳುಹಿಸಿದರು. ಅವರ ಮಗಳು ಅವರಲ್ಲಿ, "ಅಪ್ಪಾ, ನೀವು ಯಾಕೆ ಅದನ್ನು ಅಲ್ಲಿ ಇಲ್ಲಿ ಹುಡುಕುತ್ತಿದ್ದೀರಾ? ಅದು ನಿಮ್ಮ ಹಾಸಿಗೆಯ ಕೆಳಗಿರುವ ಪೆಟ್ಟಿಗೆಯೊಳಗಿದೆ" ಎಂದು ಹೇಳಿದಳು. ಮಕ್ಕಳು ಎಷ್ಟು ಅಂತರ್ಜ್ಞಾನಿಗಳಾಗಿದ್ದಾರೆಂದರೆ, ಅವರು ಗೋಡೆಗಳಾಚೆ ಇರುವುದನ್ನು ನೋಡಬಲ್ಲರು. ಪಕ್ಕದ ಕೋಣೆಯಲ್ಲಿ ನೀವು ಏನನ್ನಾದರೂ ಇಟ್ಟರೆ ಅದೇನೆಂದು ಅವರು ಹೇಳಬಲ್ಲರು.

ಬರೋಡಾದಲ್ಲಿ ಸುಮಾರು ೨೦೦ ಅಂಧ ಮಕ್ಕಳಿಗೆ ನಾವು ಒಂದು ಶಿಬಿರವನ್ನು ನಡೆಸಿದೆವು ಮತ್ತು ಅವರು ನೋಡಲು ಸಮರ್ಥರಾದರು. ಇದು ಮನಸ್ಸಿನ ಕಣ್ಣುಗಳ ಮೂಲಕ ಸಾಧ್ಯವಾಗುತ್ತದೆ. ಇದು ಅದ್ಭುತವಾದುದು! ಹೆಚ್ಚಿನ ಮಾಹಿತಿ ಮತ್ತು ವಿಡಿಯೋಗಳು ನಿಮಗೆ ಫೇಸ್‌ಬುಕ್ ಹಾಗೂ ಯೂಟ್ಯೂಬ್‌ಗಳಲ್ಲಿ ಸಿಗಬಹುದು. ದೊಡ್ಡವರು ಕೂಡಾ ಈ ಅಂತರ್ಜ್ಞಾನದ ಶಕ್ತಿಯನ್ನು ಬೆಳೆಸಿಕೊಳ್ಳಬಹುದು, ಆದರೆ ಅದು ಸ್ವಲ್ಪ ಹೆಚ್ಚು ಸಮಯ ತೆಗೆದುಕೊಳ್ಳಬಹುದು. ಯಾಕೆ ಗೊತ್ತಾ ನಿಮಗೆ? ಅದು ಯಾಕೆಂದರೆ ದೊಡ್ಡವರಾಗಿ ನಾವು ರಾಗ ದ್ವೇಷಗಳನ್ನು ಹೊಂದಿದ್ದೇವೆ. ನಾವು ಇದನ್ನು ಇಷ್ಟಪಡುತ್ತೇವೆ, ನಾವು ಅದನ್ನು ಇಷ್ಟಪಡುವುದಿಲ್ಲ, ನಾವು ಈ ಜನರನ್ನು ಇಷ್ಟಪಡುತ್ತೇವೆ, ನಾವು ಈ ಜನರನ್ನು ಇಷ್ಟಪಡುವುದಿಲ್ಲ; ನಮ್ಮ ಮನಸ್ಸಿನಲ್ಲಿ ಅಡಚಣೆಯನ್ನು ಮಾಡುವ, ಎಲ್ಲಾ ರೀತಿಯ ಪೂರ್ವಾಗ್ರಹಗಳು ನಮ್ಮಲ್ಲಿವೆ. ಮೊದಲಿಗೆ ನಾವು ಅದರಿಂದ ಮುಕ್ತರಾಗಬೇಕು.

ಪೂರ್ವಾಗ್ರಹದಿಂದ ಮುಕ್ತವಾದ ಒಂದು ಬುದ್ಧಿಯು ಒಂದು ನಿಜವಾದ ಬುದ್ಧಿವಂತಿಕೆಯಾಗಿದೆ. ಬುದ್ಧಿವಂತರೆಂದು ಕರೆಯಲ್ಪಡುವ ಇಂದಿನ ಜನರನ್ನು ನಾನು ಬುದ್ಧಿವಂತರೆಂದು ಪರಿಗಣಿಸುವುದಿಲ್ಲ ಯಾಕೆಂದರೆ ಅವರು ಪೂರ್ವಾಗ್ರಹಿಗಳಾಗಿದ್ದಾರೆ. ನಿಮ್ಮಲ್ಲಿ ಪೂರ್ವಾಗ್ರಹವಿದ್ದರೆ ಅದರರ್ಥ ನಿಮ್ಮ ಬುದ್ಧಿವಂತಿಕೆಯು ಮುಚ್ಚಲ್ಪಟ್ಟಿದೆಯೆಂದು. ನಿಮ್ಮಲ್ಲಿ ಅದು ಇರಲೂಬಹುದು, ಆದರೆ ನೀವದನ್ನು ಉಪಯೋಗಿಸುವುದಿಲ್ಲ.

ಪ್ರಶ್ನೆ: ನೀವು ಸಂಸ್ಕೃತ ಮಾತನಾಡುವುದನ್ನು ಇನ್ನೂ ಸ್ವಲ್ಪ ಹೆಚ್ಚು ಕೇಳಲು ನಾನು ಬಯಸುತ್ತೇನೆ. 

ಶ್ರೀ ಶ್ರೀ ರವಿ ಶಂಕರ್: ನೀನು ನನ್ನ ಮೌನವನ್ನು ಹೆಚ್ಚು ಕೇಳಲು ಕಲಿಯುವುದು ಒಳ್ಳೆಯದು, ನಾನು ಅದರಲ್ಲಿ ನಿಪುಣ. ಅದರಿಂದಲೇ ನಾನು ಯಾವುದೇ ಭಾಷೆಯಲ್ಲೂ ನಿಪುಣನಲ್ಲ.