ಬುಧವಾರ, ಡಿಸೆಂಬರ್ 25, 2013

ಪ್ರಾರ್ಥಿಸುವ ವಿಧಾನ

ಡಿಸೆಂಬರ್ ೨೫, ೨೦೧೩
ಬೂನ್, ನಾರ್ತ್ ಕೆರೋಲಿನಾ

ಡೇವಿಡ್ ಎಂಬ ಹೆಸರನ್ನು ಉಲ್ಲೇಖಿಸಿದಾಗ ನನಗೆ ಹೊಳೆಯಿತು, ಇಂಗ್ಲೀಷಿನಲ್ಲಿ ಅಥವಾ ಹಿಬ್ರೂ ಭಾಷೆಯಲ್ಲಿ ಡೇವಿಡ್ ಎಂಬ ಹೆಸರಿಗೆ ಯಾವುದಾದರೂ ಅರ್ಥವಿದೆಯೇ ಎಂದು. ಡೇವಿಡ್ ಅಂದರೆ ಏನರ್ಥ?

(ಸಭಿಕರು ಹೇಳುತ್ತಾರೆ: ಡೇವಿಡ್ ಅಂದರೆ ಜ್ಞಾನದ ರಾಜ)

ಸಂಸ್ಕೃತದಲ್ಲಿ ದೇವಿದ್, ದೇವ್-ವಿದ್ ಅಂದರೆ ದೇವರನ್ನು ತಿಳಿದವನೊಬ್ಬನು ಎಂದರ್ಥ. ಅದು ಡೇವಿಡ್ ಎಂಬುದರ ಸಂಸ್ಕೃತ ಅರ್ಥವಾಗಿದೆ. ದೇವ್-ವಿದ್ ಎಂಬುದು ಡೇವಿಡ್ ಎಂದಾಗುತ್ತದೆ. ವಿದ್ ಅಂದರೆ ತಿಳಿಯುವುದು.

ದೇವರಿಗೆ ಯಾವುದೇ ರೂಪವಿಲ್ಲ, ಆದರೆ ಅವನು ಎಲ್ಲಾ ರೂಪಗಳಲ್ಲಿದ್ದಾನೆ. ದೇವರಿಗೆ ಕಣ್ಣುಗಳಿಲ್ಲ, ಆದರೆ ಅವನು ಎಲ್ಲಾ ಸಮಯವೂ ಎಲ್ಲವನ್ನೂ ನೋಡುತ್ತಿರುತ್ತಾನೆ. ದೇವರಿಗೆ ಕಿವಿಗಳಿಲ್ಲ, ಆದರೆ ಒಂದು ಯೋಚನೆ ಏಳುವ ಮುನ್ನವೇ ಅವನು ನಿಮ್ಮನ್ನು ಕೇಳಿಸಿಕೊಳ್ಳುತ್ತಾನೆ. ನೀವದನ್ನು ಹೇಳಬೇಕಾಗಿ ಬರುವ ಮೊದಲೇ, ಅವನು ಅದಾಗಲೇ ನಿಮ್ಮನ್ನು ಕೇಳಿಸಿಕೊಳ್ಳುತ್ತಾನೆ. ದೇವರು ಒಂದು ಭಾಷೆಯಲ್ಲಿ ಮಾತನಾಡಬೇಕಾಗಿಲ್ಲ, ಅವನು ನೇರವಾಗಿ ಭಾವನೆಯನ್ನು ತಿಳಿಯಪಡಿಸುತ್ತಾನೆ.

ನೀವು ಜ್ಞಾನವನ್ನು ಕೇಳಿಸಿಕೊಳ್ಳುವಾಗ ಏನಾಗುವುದೆಂದರೆ, ನಿಮ್ಮ ಮೆದುಳು ಅದನ್ನು ಪರಿಷ್ಕರಿಸುತ್ತದೆ ಮತ್ತು ನಂತರ ನಿಮಗೆ ಅರ್ಥವಾಗುತ್ತದೆ. ಪದಗಳು ನಿಮ್ಮ ಕಿವಿಗಳೊಳಗೆ ಪ್ರವೇಶಿಸುತ್ತವೆ, ನಂತರ ಅದಕ್ಕೊಂದು ಅರ್ಥ ಸಿಗುತ್ತದೆ ಹಾಗೂ ನಂತರ ನಿಮಗದು ತಿಳಿಯುತ್ತದೆ. ದೇವರು ಹಾಗೆ ಮಾಡಬೇಕಾಗಿಲ್ಲ. ಅಲ್ಲಿ ಯಾವುದೇ ಮಾತುಗಳಿಲ್ಲ, ಆದರೆ ಅವನು ನಿಮಗೊಂದು ನೇರವಾದ ಅರಿವನ್ನು ನೀಡುತ್ತಾನೆ. ಅದು ಸುಂದರವಲ್ಲವೇ?

ಸಂಸ್ಕೃತದಲ್ಲಿ ವಿರೂಪಾಕ್ಷ  ಎಂದು ಕರೆಯಲ್ಪಡುವ ಒಂದು ಸುಂದರವಾದ ಹೆಸರಿದೆ. ಅದರರ್ಥ, ಒಂದು ರೂಪವಿಲ್ಲದ ಕಣ್ಣುಗಳು. ಕಣ್ಣುಗಳಿಲ್ಲದೆಯೇ ಅವನು ಎಲ್ಲರ ಕಡೆಗೂ ನೋಡುತ್ತಾನೆ. ಅಕ್ಷ ಎಂದರೆ ಕಣ್ಣುಗಳು, ವಿರೂಪ ಎಂದರೆ ರೂಪವಿಲ್ಲದ; ರೂಪವಿಲ್ಲದ ಕಣ್ಣುಗಳು, ಅಂದರೆ, ಅರಿವು; ಅರಿವನ್ನು ತರುವ ಆ ಸಾನ್ನಿಧ್ಯ. ನೀವು ನಿಮ್ಮ ಕಣ್ಣುಗಳನ್ನು ಮುಚ್ಚುವಾಗ ನಿಮಗೇನನ್ನಿಸುತ್ತದೆ? ನಿಮಗೆ ಅರಿವಿನ ಅನುಭವವಾಗುತ್ತದೆ ಸರಿಯಾ? ತಿಳಿದಿರುವಿಕೆ. ಅದು ವಿರೂಪಾಕ್ಷ. ಅದು ಶಿವ ತತ್ವ, ಅದು ದೈವಿಕತೆ.

ಶಿವ ಅಂದರೆ, ಯಾರಿಗೆ ಕಣ್ಣುಗಳಿಲ್ಲವೋ ಆದರೆ ಎಲ್ಲವನ್ನೂ ನೋಡುವನೋ ಅವನು. ಅಲ್ಲೊಂದು ರೂಪವಿಲ್ಲ, ಆದರೂ ಅವನಿಲ್ಲದೆ ಯಾವ ರೂಪವೂ ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲ; ಅವನು ಪ್ರತಿಯೊಂದು ರೂಪದಲ್ಲಿರುವನು. ಇದು ಬಹಳ ಸುಂದರವಾಗಿದೆ!

ಪ್ರತಿಯೊಂದೂ ನಿಮಗೊಂದು ಸಂದೇಶವನ್ನು ಕೊಡುತ್ತಿದೆ. ಕ್ರಿಸ್‌ಮಸ್ ಮರವು ನಿಮಗೆ ಹೀಗೆಂದು ಹೇಳುತ್ತಿದೆ, ’ಕ್ರಿಸ್‌ಮಸ್ ಮರದಂತಿರು, ಯಾವತ್ತೂ ಹಸುರಾಗಿ’.

ನಮ್ಮ ಜೀವನವು ಒಂದು ಕ್ರಿಸ್‌ಮಸ್ ಮರದಂತಿರಲಿ. ಚಳಿಗಾಲದಲ್ಲಿರಲಿ ಅಥವಾ ಬೇಸಿಗೆಗಾಲದಲ್ಲಿರಲಿ, ಶರದೃತು ಅಥವಾ ವಸಂತಕಾಲದಲ್ಲಿರಲಿ, ಕ್ರಿಸ್‌ಮಸ್ ಮರವು ಅದೇ ರೀತಿ ಇರುತ್ತದೆ. ಹೀಗೆ ಜೀವನದಲ್ಲಿ, ಪ್ರತಿಯೊಂದು ಪರಿಸ್ಥಿತಿಯಲ್ಲೂ ನಿಮ್ಮನ್ನು ಹಸುರಾಗಿ ಇಟ್ಟುಕೊಳ್ಳಿ!

ಕ್ರಿಸ್‌ಮಸ್ ಮರವು ಎಲ್ಲರಿಗೂ ಉಡುಗೊರೆಗಳನ್ನು ಹೊತ್ತಿರುತ್ತದೆ. ಜೀವನದಲ್ಲಿ ನಿಮಗೆ ನೀಡಲಾಗಿರುವುದೆಲ್ಲಾ ಎಲ್ಲರಿಗಾಗಿರುವುದು. ನೀವು ಹೊಂದಿರುವ ಯಾವುದೇ ಉಡುಗೊರೆಯೂ ನಿಮಗಾಗಿಯಲ್ಲ, ಅದು ಪ್ರಪಂಚಕ್ಕಾಗಿ. ನಿಮ್ಮೆಲ್ಲಾ ಪ್ರತಿಭೆಗಳು, ನಿಮಗೆ ದಯಪಾಲಿಸಲಾಗಿರುವ ಎಲ್ಲವೂ; ಅದೆಲ್ಲವೂ ಇತರರಿಗೆ ಸಹಾಯ ಮಾಡಲಿಕ್ಕಾಗಿ ಇರುವುದು. ಹಾಗಾಗಿ ಸೇವೆ ಮಾಡಿ, ಮುಗುಳ್ನಗಿ ಮತ್ತು ಆಚರಿಸಿ!

ಇದು ಯೇಸು ಕ್ರಿಸ್ತನ ಸಂದೇಶವಾಗಿದೆ: ಒಳಗೆ ಮತ್ತು ಸುತ್ತಲೆಲ್ಲಾ ಪ್ರೇಮವನ್ನು ಕಂಡುಕೊಳ್ಳಿ.

ನೀವು ಎರಡು ಸ್ಥಾನಗಳಲ್ಲಿರಬಹುದು: ಒಂದನೆಯದು, ನಿಮಗೆ ಜ್ಞಾನವನ್ನು ಜೀವಿಸಲು ಸಾಧ್ಯವಿದೆ. ನಿಮಗೆ ಜ್ಞಾನವನ್ನು ಜೀವಿಸಲು ಸಾಧ್ಯವಾದಾಗ, ಅದನ್ನು ಜೀವಿಸಲು ನಿಮಗೆ ಸಾಧ್ಯವೆಂದು ಹೆಮ್ಮೆ ಪಡಬೇಡಿ. ಜ್ಞಾನದಲ್ಲಿ ಜೀವಿಸಿಕೊಂಡಿರುವಂತೆ ನಿಮ್ಮನ್ನು ಹರಸಲಾಗಿದೆ; ಜ್ಞಾನಿಯಾಗಿರುವಂತೆ ನಿಮ್ಮನ್ನು ಹರಸಲಾಗಿದೆ ಎಂಬುದನ್ನು ತಿಳಿಯಿರಿ. ನೀವು ಜ್ಞಾನಿಯಾಗಿರುವಿರಿ ಎಂಬುದನ್ನು ನೀವು ಗುರುತಿಸಿದಾಗ, ಜ್ಞಾನಿಯಾಗಿರುವ ಅಥವಾ ಪರಿಪೂರ್ಣರಾಗಿರುವ ನಿಮ್ಮ ಗುರುತಿಸಿಕೊಳ್ಳುವಿಕೆಯು ನಿಮ್ಮಲ್ಲಿ ದುರಹಂಕಾರ ಅಥವಾ ಅಹಂಕಾರವನ್ನು ತರದಿರುವಂತೆ ನೋಡಿಕೊಳ್ಳಿ. ವಿನಮ್ರತೆಯಿರಬೇಕು. ನೀವೊಬ್ಬ ಉತ್ತಮ ಮಾತುಗಾರರಾಗಿರಬಹುದು, ಒಬ್ಬ ಉತ್ತಮ ಸಂಯೋಜಕರಾಗಿರಬಹುದು, ಹಲವಾರು ರೀತಿಗಳಲ್ಲಿ ಒಬ್ಬ ಉತ್ತಮ ವ್ಯಕ್ತಿಯಾಗಿರಬಹುದು. ಬೇರೆ ಯಾರಿಗಿಂತಲೂ ನೀವು ಉತ್ತಮರಾಗಿರುವಿರೆಂಬ ಆ ಜ್ಞಾನವು ನಿಮ್ಮನ್ನು ಬಿಗಿಯಾಗಿ, ಕಠೋರ ಹಾಗೂ ದುರಹಂಕಾರಿಯನ್ನಾಗಿ ಮಾಡಲು ಬಿಡಬೇಡಿ.

ನಿಮ್ಮಲ್ಲಿ ಆ ಗುಣ ಇಲ್ಲದಿರುವಾಗ. ನಿಮ್ಮಲ್ಲಿ ಬಹಳ ಬಲಹೀನವಾದ ಸಂಕಲ್ಪ, ಬಹಳ ಬಲಹೀನವಾದ ಇಚ್ಛಾ ಶಕ್ತಿಯಿದೆಯೆಂದೂ, ನಿಮ್ಮಲ್ಲಿ ಪ್ರತಿಭೆಯಿಲ್ಲವೆಂದೂ, ನಿಮಗೆ ಜ್ಞಾನವನ್ನು ಜೀವಿಸಲು ಸಾಧ್ಯವಾಗುತ್ತಿಲ್ಲವೆಂದೂ ಮತ್ತು ನೀವು ಹಳೆಯ ಚಟಗಳಿಗೆ ಈಡಾಗುತ್ತಿದ್ದೀರೆಂದೂ, ನೀವು ಸಂಪೂರ್ಣವಾಗಿ ಬಲಹೀನವಾಗಿ ಅಥವಾ ನಿಸ್ಸಹಾಯಕರಾಗಿರುವುದಾಗಿಯೂ ನಿಮಗನಿಸುತ್ತದೆ ಎಂದಿಟ್ಟುಕೊಳ್ಳೋಣ. ಆಗ ನೀವು ಹೀಗೆಂದು ಪ್ರಾರ್ಥಿಸುತ್ತೀರಿ, ’ಓ ದೇವರೇ, ನನಗೆ ಸಾಧ್ಯವಿಲ್ಲ! ನೀನೇ ನನ್ನನ್ನು ಈ ದುರವಸ್ಥೆಯಿಂದ ಹೊರತೆಗೆ!’

ನಿಮ್ಮಲ್ಲಿ ಜ್ಞಾನವಿರುವಾಗ ವಿನಮ್ರತೆ ಮತ್ತು ಕೃತಜ್ಞತೆ, ಹಾಗೂ ಅದಿಲ್ಲದಿರುವಾಗ, ನೋವನ್ನು ಅನುಭವಿಸುವುದು ಮತ್ತು ಪ್ರಾರ್ಥನಾಪೂರ್ಣರಾಗಿರುವುದು. ಯಾವುದೇ ಮೂರನೆಯ ಆಯ್ಕೆಯು ನನಗೆ ಕಾಣಿಸುವುದಿಲ್ಲ. ಯಾವುದಾದರೂ ಇದ್ದರೆ ನನಗೆ ಹೇಳಿ. ನಾನು ತಿಳಿಯಲು ಬಯಸುತ್ತೇನೆ.

ಹಾಗಾಗಿ ಪ್ರಾರ್ಥನಾಪೂರ್ಣರಾಗಿರಿ. ನಿಮ್ಮ ಬಲಹೀನತೆಯನ್ನು ನೀವು ಗುರುತಿಸಿ ಅದರ ನೋವನ್ನು ಅನುಭವಿಸಿದಾಗ ನೀವು ಪ್ರಾರ್ಥನಾಪೂರ್ಣರಾಗುವಿರಿ. ಮತ್ತು ನೀವು ಜ್ಞಾನದೊಂದಿಗೆ ಶಕ್ತಿಯನ್ನು ಅನುಭವಿಸಿದಾಗ, ಕೃತಜ್ಞತಾಪೂರ್ಣರಾಗಿರಿ, ಆಗ ನಿಮ್ಮ ಜ್ಞಾನದ ಶಕ್ತಿಯು ಹಲವು ಪಟ್ಟುಗಳಷ್ಟು ಹೆಚ್ಚಾಗುತ್ತದೆ. ನೀವು ಶಕ್ತಿ, ಸಾಮರ್ಥ್ಯ ಮತ್ತು ಕೃತಜ್ಞತೆಯನ್ನು ಅನುಭವಿಸುವಾಗ, ನಿಮ್ಮ ಶಕ್ತಿಯು ಹಲವು ಪಟ್ಟುಗಳಷ್ಟು ಹೆಚ್ಚಾಗುತ್ತದೆ.

ಜೀವನವು ಈ ಎರಡು ವಿಷಯಗಳ ನಡುವಿನ ಒಂದು ಉಯ್ಯಾಲೆಯಾಗಿದೆ ಮತ್ತು ಉಯ್ಯಾಲೆಯು ನಿಂತಾಗ ಅಷ್ಟೇ, ನೀವು ಜೀವನದಿಂದ ಮುಕ್ತರಾಗುವಿರಿ! ಮುಂದೆ ಯಾವುದೇ ತೂಗುವಿಕೆಯಿಲ್ಲ ಮತ್ತು, ’ನಾನು ಜ್ಞಾನೋದಯ ಹೊಂದಿರುವೆನು, ನಾನು ಮುಕ್ತನಾಗಿರುವೆನು’ ಎಂದು ನೀವು ಘೋಷಿಸಬಹುದು. ಯಾರೂ ನಿಮಗೊಂದು ಪ್ರಮಾಣಪತ್ರವನ್ನು ನೀಡಬೇಕಾಗಿಲ್ಲ!

ನಿಸ್ಸಹಾಯಕತೆಯ, ಬಲಹೀನತೆಯ ಪ್ರತಿಕ್ಷಣವೂ ನಿಮ್ಮನ್ನು ಪ್ರಾರ್ಥನೆಯ ಕಡೆಗೆ ಮುನ್ನಡೆಸುತ್ತದೆ ಮತ್ತು ಪ್ರಾರ್ಥನೆಯು ನಿಮ್ಮನ್ನು ನಕಾರಾತ್ಮಕತೆಯಿಂದ ಹೊರಗಿರಿಸುತ್ತದೆ ಹಾಗೂ ಖಿನ್ನತೆಯೊಳಕ್ಕೆ ಆಳವಾಗಿ ಕೆಳಗೆ ಬೀಳುವುದರಿಂದ ನಿಮ್ಮನ್ನು ತಡೆಯುತ್ತದೆ. ಇಲ್ಲದಿದ್ದರೆ, ಯಾವಾಗೆಲ್ಲಾ ನೀವು ನಿಮ್ಮ ನಿಸ್ಸಹಾಯಕತೆಯನ್ನು ಗುರುತಿಸುವಿರೋ ಆಗಲೇ ನೀವು ಖಿನ್ನತೆಗೊಳಗಾಗುವುದು. ಅಲ್ಲವೇ?

ನೀವು ಯಾವಾಗ ಖಿನ್ನತೆಗೊಳಗಾಗುತ್ತೀರಿ? ನೀವು ಜ್ಞಾನವನ್ನು ತಿಳಿದಿರುವಾಗ ಮತ್ತು ಅದನ್ನು ಜೀವಿಸಲು ನಿಮಗೆ ಸಾಧ್ಯವಿಲ್ಲದಿರುವಾಗ. ಈಗ ಖಿನ್ನತೆಗೊಳಗಾಗಬೇಡಿ. ಖಿನ್ನತೆಗೆ ಬೀಳುವ ಬದಲು, ಪ್ರಾರ್ಥನಾಪೂರ್ಣರಾಗಿರಿ.
ಇದುವೇ ಯೇಸುವಿನ ಇಡೀ ಸಂದೇಶ; ಪ್ರಾರ್ಥನಾಪೂರ್ಣರಾಗಿರಿ.

ಪ್ರಾರ್ಥಿಸುವುದು ಹೇಗೆ? ನಂತರ ಅವನು ಪ್ರಾರ್ಥಿಸುವುದನ್ನು ತೋರಿಸಿದನು. ಕೊನೆಕ್ಷಣದಲ್ಲಿ ಅವನನ್ನು ಶಿಲುಬೆಗೇರಿಸುವಾಗ ಕೂಡಾ ಅವನು ಪ್ರಾರ್ಥಿಸಿದನು. ಅವನು ನಿಸ್ಸಹಾಯಕತೆಯನ್ನು ಅನುಭವಿಸಿದನು ಮತ್ತು ಹೀಗೆಂದು ಹೇಳಿದನು, "ಓ ತಂದೆಯೇ, ನೀನು ನನ್ನ ಕೈಬಿಟ್ಟಿರುವೆಯಾ?" ನಿಸ್ಸಹಾಯಕತೆಯ ಆ ಭಾವನೆ; ದೇವರು ಕೂಡಾ ನನ್ನನ್ನು ತೊರೆದಿರುವನು! ಆದರೆ ಕೂಡಲೇ ಅದು ಪ್ರಾರ್ಥನೆಯಾಗಿ ತಿರುಗಿತು. ತಾವೇನು ಮಾಡುತ್ತಿರುವೆವೆಂಬುದು ಅವರಿಗೆ ತಿಳಿಯದು, ಆದುದರಿಂದ ಅವರನ್ನು ಕ್ಷಮಿಸು.

ಆ ಕ್ಷಣದಲ್ಲಿ ಅವನಿಗೆ ತಾನು ಸಂಪೂರ್ಣವಾಗಿ ನಿಸ್ಸಹಾಯಕನೆನಿಸಿತು. ಆತ್ಮವು ಇಚ್ಛಿಸುತ್ತಿದೆ, ಆದರೆ ಮಾಂಸವು ಬಲಹೀನವಾಗಿದೆ. ’ನನ್ನ ಶಿಷ್ಯರು ಹಾಗಿರಲಿ, ದೇವರೂ ನನ್ನನ್ನು ತೊರೆದಿರುವನು!’

ಎಲ್ಲಾ ಶಿಷ್ಯರು ಗುರುವನ್ನು ಪರಿತ್ಯಜಿಸಿದ್ದ ಒಂದು ಘಟನೆಯಾಗಿತ್ತು ಅದು. ಎಲ್ಲರೂ ಓಡಿಹೋದರು. ಆ ಸಮಯದಲ್ಲಿ ಅವನಿಗೆ ಎಷ್ಟೊಂದು ನೋವಾಗಿದ್ದಿರಬಹುದೆಂದು ನೋಡಿ. ಪ್ರತಿಯೊಬ್ಬರೂ ಅವನನ್ನು ತೊರೆದಿದ್ದರು! ಆದರೆ ಆ ಸಂಪೂರ್ಣ ನಿಸ್ಸಹಾಯಕತೆಯು ಕೂಡಲೇ ಪ್ರಾರ್ಥನೆಯಾಗಿ ಬದಲಾಯಿತು.

ಹೀಗಾಗಿ, ಈ ಎರಡು ಪರಿಸ್ಥಿತಿಗಳನ್ನು ನೆನಪಿಟ್ಟುಕೊಳ್ಳಿ: ನೀವು ಶಕ್ತಿಶಾಲಿಯಾಗಿರುವಾಗ ಕೃತಜ್ಞತೆ ಮತ್ತು ನೀವು ಬಲಹೀನರಾದಂತೆ ಅನ್ನಿಸುವಾಗ ಪ್ರಾರ್ಥನಾಪೂರ್ಣತೆ ಹಾಗೂ ಕೋಪಗೊಳ್ಳದಿರುವುದು. ನೀವು ಶಕ್ತಿಶಾಲಿಯಾಗಿರುವಾಗ ನಿಮಗೆ ಕೋಪ ಬರುವುದಿಲ್ಲ. ನಿಮಗೆ ಯಾವಾಗ ಕೋಪ ಬರುತ್ತದೆ? ನೀವು ಬಲಹೀನತೆ ಮತ್ತು ನಿಸ್ಸಹಾಯಕತೆಯನ್ನು ಅನುಭವಿಸುವಾಗ. ನಿಮಗೆ ಕೋಪ ಬರುವುದು ಮತ್ತು ಹತಾಶೆಯಾಗುವುದು ಆಗಲೇ. ನಿಮಗೆ ನೀವೇ ಹೊಡೆದುಕೊಳ್ಳುವಂತೆ ಅನ್ನಿಸುತ್ತದೆ. ಎಲ್ಲಿಗೆ ಹೋಗುವುದು, ಏನು ಮಾಡುವುದು ಎಂದು ನಿಮಗೆ ತಿಳಿಯುವುದಿಲ್ಲ. ನೀವು ಪ್ರಾರ್ಥನೆಯೊಳಕ್ಕೆ ಕರಗಿ ಹೋಗಬಹುದಾದುದು ಆ ಕ್ಷಣವೇ.

ನೀವು ಹಿಂತಿರುಗಿ ನೋಡಿದರೆ, ನೀವು ಬಹಳ ಶಕ್ತಿಶಾಲಿಯಾಗಿದ್ದ ದಿನಗಳಲ್ಲಿ, ನಿಮಗೆ ಯಾವತ್ತೂ ಕೋಪ ಬರಲಿಲ್ಲ, ನಿಮಗೆ ದುಃಖವಾಗಲಿಲ್ಲ. ಯಾರಾದರೂ ಏನನ್ನಾದರೂ ಮಾಡಿದರೆ, ನಿಮಗೆ, ’ಇದು ಏನೂ ಅಲ್ಲ. ನಾನಿದನ್ನು ನೋಡಿಕೊಳ್ಳಬಲ್ಲೆ. ಓ, ಇದೊಂದು ಆನೆಯ ಪಾದದ ಮೇಲಿನ ಒಂದು ಇರುವೆ. ನಾನದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ’ ಎಂದು ಅನ್ನಿಸುತ್ತದೆ.

ಆದರೆ ನೀವು ದುಃಖಿತರಾಗಿರುವಾಗ, ನೀವು ನಿಸ್ಸಹಾಯಕರೆಂದೂ ಬಲಹೀನರೆಂದೂ ನಿಮಗನ್ನಿಸಿದಾಗ, ನಿಮಗೆ ಕೋಪ ಬರುತ್ತದೆ, ತಳಮಳವಾಗುತ್ತದೆ ಮತ್ತು ನಿಮ್ಮ ತಲೆಚಚ್ಚಿಕೊಳ್ಳಬೇಕೆಂದು ಅನ್ನಿಸುತ್ತದೆ. ನೀವು ಅಳುತ್ತೀರಿ! ನಿಮಗೆ ನಿಸ್ಸಹಾಯಕತೆ ಅನ್ನಿಸಿದಾಗ ಈ ಎಲ್ಲಾ ವಿಪರೀತ ಭಾವನೆಗಳು ಬರುತ್ತವೆ. ’ನನಗೆ ಏನನ್ನೂ ಮಾಡಲು ಸಾಧ್ಯವಿಲ್ಲ’ ಎಂದು ನಿಮಗನ್ನಿಸಿದಾಗ, ಆ ಸಮಯದಲ್ಲಿ ನಿಮಗೆ ಹಾಗೆ ಅನ್ನಿಸಿದಾಗ, ಅದೊಂದು ಪ್ರಾರ್ಥನೆಯಾಗಲು ಅತ್ಯಂತ ಶಕ್ತಿಶಾಲಿ ಕ್ಷಣವಾಗಿದೆ.

ಪ್ರಾರ್ಥನೆಯು ಎಂತಹ ಶಕ್ತಿಯನ್ನು ಹೊಂದಿದೆ ಎಂದು ನಿಮಗೆ ತಿಳಿಯದು. ಪ್ರಾರ್ಥನಾಪೂರ್ಣತೆಯು ನಿಮಗೆ ಸಂಪೂರ್ಣ ಶಕ್ತಿಯನ್ನು ತರುತ್ತದೆ. ಅದು ಚಕ್ರವನ್ನು ಪೂರ್ತಿಗೊಳಿಸುತ್ತದೆ. ಯಾರು ಪ್ರಾರ್ಥಿಸುವರೋ ಮತ್ತು ಯಾರಲ್ಲಿ ಅವರು ಪ್ರಾರ್ಥಿಸುವರೋ, ಪ್ರಾರ್ಥನೆಯಲ್ಲಿ ಒಂದಾಗುತ್ತಾರೆ. ಅದು ಎಲ್ಲವನ್ನೂ ಬದಲಾಯಿಸುತ್ತದೆ. ಅದು ಅಷ್ಟೊಂದು ಅದ್ಭುತ ವಿದ್ಯಮಾನ, ಚೇತನದ ಅಂತಹ ಒಂದು ಕಾರ್ಯವಿಧಾನವಾಗಿದೆ. ಬಹಳ ಆಸಕ್ತಿಕರ!

ಯೇಸುವು ಈ ಎರಡೂ ಪರಿಸ್ಥಿತಿಗಳನ್ನು ಎದುರಿಸಿದನು. ಮಾರಾಟಗಾರರನ್ನು ಹೊರಹಾಕಲು ಅವನು ದೇವಾಲಯಕ್ಕೆ ಹೋದಾಗ, ತಾನು ಸಂಪೂರ್ಣವಾಗಿ ಶಕ್ತಿಯುತನಾಗಿರುವೆನೆಂದು ಅವನಿಗನ್ನಿಸಿತು. ಅವನು ಜ್ಞಾನವನ್ನು ನೀಡುತ್ತಿದ್ದಾಗ, ಅವನು ಸಂಪೂರ್ಣವಾಗಿ ಶಕ್ತಿಯುತನಾಗಿದ್ದನು.

ಕೆಲವು ಸಲ ಅವನು ಸಂಪೂರ್ಣ ನಿಸ್ಸಹಾಯಕತೆಯನ್ನು ಮತ್ತು ಬಲಹೀನತೆಯನ್ನು ಅನುಭವಿಸಿದನು, ಯಾಕೆಂದರೆ ತಾನೇನನ್ನು ಮಾಡಲು ಬಯಸಿದ್ದನೋ ಅದನ್ನು ಮಾಡಲು ಅವನಿಗೆ ಸಾಧ್ಯವಾಗಲಿಲ್ಲ. ತಾನು ಬಯಸಿದ್ದ ರೀತಿಯಲ್ಲಿ ಸಮಾಜವನ್ನು ಬದಲಾಯಿಸಲು ಅವನಿಗೆ ಸಾಧ್ಯವಾಗಲಿಲ್ಲ. ಯಾವುದನ್ನು ತಿಳಿಯಪಡಿಸಲಿತ್ತೋ ಅದನ್ನು ಜನರು ಅರ್ಥಮಾಡಿಕೊಳ್ಳುವಂತೆ ಮಾಡಲು ಅವನಿಗೆ ಸಾಧ್ಯವಾಗಲಿಲ್ಲ. ಅವನು ಅವರಿಗೆ ಹಲವಾರು ರೀತಿಗಳಲ್ಲಿ, ಹಲವಾರು ಕಥೆಗಳಲ್ಲಿ ಹೇಳಿದನು, ಆದರೂ ಜನರಿಗೆ ಅದು ಅರ್ಥವಾಗುತ್ತಿರಲಿಲ್ಲ.

ನೀವೊಬ್ಬರು ಶಿಕ್ಷಕರು ಮತ್ತು ನೀವು ಯಾವುದೋ ಮಹತ್ತರವಾದ ಜ್ಞಾನವನ್ನು ನೀಡುತ್ತಿದ್ದೀರೆಂದು ಊಹಿಸಿಕೊಳ್ಳಿ. ಮತ್ತು ಅವರು ಕೆಲವು ಬಹಳ ಮೂರ್ಖ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ; ನಾನು ನನ್ನ ಮೂಗಿನ ಮೂಲಕ ಉಸಿರಾಡಬೇಕೇ ಅಥವಾ ನನ್ನ ಬಾಯಿಯ ಮೂಲಕವೇ ಅಥವಾ ನನ್ನ ಕಿವಿಗಳ ಮೂಲಕವೇ ಎಂದು.

ನೀವು ಹೀಗೆಂದು ಹೇಳುವಿರಿ, "ಓ ದೇವರೇ! ನಾನು ನಿನಗೆ ಉಸಿರಾಟದ ಅಭ್ಯಾಸಗಳನ್ನು ಇಷ್ಟು ದೀರ್ಘ ಕಾಲದವರೆಗೆ ಕಲಿಸಿದೆ ಮತ್ತು ಆದರೂ ನನ್ನ ನಾಲಿಗೆಯೆಲ್ಲಿರಬೇಕೆಂದು ನೀನು ಕೇಳುತ್ತಿರುವೆ!"

ಇದೇ ರೀತಿಯ ಪರಿಸ್ಥಿತಿಯ ಅನುಭವ ಯೇಸುವಿಗಾಯಿತು. ಅವನ ನಿಕಟ ಶಿಷ್ಯರು ಅವನನ್ನು ಒಂದು ಬಹಳ ದೀರ್ಘಕಾಲದವರೆಗೆ ಸಂಶಯಿಸುತ್ತಾ ಇದ್ದರು. ಸಂತ ಥೋಮಸ್ ಅವರಲ್ಲಿ ಒಬ್ಬನಾಗಿದ್ದನು.

ನೀವು ಒಬ್ಬರಲ್ಲಿ ಹಲವಾರು ಸಾರಿ, "ಅಡುಗೆಮನೆ ಅಲ್ಲಿದೆ ಮತ್ತು ಆಹಾರ ತಯಾರಾಗಿದೆ. ನಿನಗೆ ನನ್ನ ಮೇಲೆ ನಂಬಿಕೆಯಿಲ್ಲದಿದ್ದರೆ, ನೀನೇ ಹೋಗಿ ನೋಡು" ಎಂದು ಹೇಳಿದರೆ ಹೇಗೆಯೋ ಅದನ್ನೇ ಯೇಸುವು ಹೇಳಿದುದು, "ನಾನು ಹೇಳುತ್ತಿರುವುದನ್ನು ನೀವು ನಂಬದೇ ಇದ್ದರೆ, ನೀವು ಬೇರೆ ಯಾರನ್ನಾದರೂ ಕೇಳಿ."

ಅದುವೇ ಥೋಮಸ್‌ನೊಂದಿಗೂ ಆಯಿತು. ಯೇಸುವು, "ನೀನು ಯಾಕೆ ಭಾರತಕ್ಕೆ ಹೋಗಿ ನೀನೇ ನೋಡಬಾರದು" ಎಂದು ಹೇಳಿದನು. ಹೀಗಾಗಿ ಶಿಲುಬೆಗೇರಿಸಿದ ನಂತರ, ಥೋಮಸ್ ಭಾರತಕ್ಕೆ ಹೋದನು ಮತ್ತು ಅವನು ಅಲ್ಲಿ ಮರಣ ಹೊಂದಿದನು.

ನಿಮಗಿದು ಗೊತ್ತೇ? ಸಂತ ಥೋಮಸ್ ಭಾರತಕ್ಕೆ ಹೋದಾಗ, ಅವನು ಕೇರಳಕ್ಕೆ ಬಂದಿಳಿದನು ಮತ್ತು ಅವನು ಅಲ್ಲಿ ಸಂತ ಥೋಮಸ್ ಚರ್ಚ್ ಎಂದು ಕರೆಯಲ್ಪಡುವ ತನ್ನದೇ ಆದ ಚರ್ಚನ್ನು ಆರಂಭಿಸಿದನು. ಅವರು ಮರ್ ಥೋಮಾ ಎಂದು ಕರೆಯಲ್ಪಡುತ್ತಾರೆ. ಇವತ್ತಿಗೂ ಕೂಡಾ ಅವರು ಕೇಸರಿ ನಿಲುವಂಗಿಗಳನ್ನು ಧರಿಸುತ್ತಾರೆ. ಅವರು ಬಿಳಿ ನಿಲುವಂಗಿಗಳನ್ನು ಧರಿಸುವುದಿಲ್ಲ. ಅಲ್ಲಿನ ಬಿಷಪ್ ಕೇಸರಿ ನಿಲುವಂಗಿಗಳನ್ನು ಧರಿಸುತ್ತಾರೆ ಮತ್ತು ಅವುಗಳಲ್ಲಿ ರುದ್ರಾಕ್ಷ ಮಣಿಗಳಿರುತ್ತವೆ. ಅವರು ಬಹುತೇಕ ಎಲ್ಲಾ ಹಿಂದೂ ಸನ್ಯಾಸಿ ಸಂಪ್ರದಾಯಗಳನ್ನು ಸ್ವೀಕರಿಸಿದ್ದಾರೆ. ಅದು ಕೆಥೋಲಿಕ್ ಚರ್ಚಿಗೆ ಸಂಬಂಧಪಟ್ಟದ್ದಲ್ಲ, ಆದರೆ ಅವುಗಳು ಅಲ್ಲಿ ಅಸ್ತಿತ್ವದಲ್ಲಿವೆ. ಅವರು ತಮ್ಮ ವಿಶಿಷ್ಟ ಗುರುತನ್ನು ಇಟ್ಟುಕೊಂಡಿದ್ದಾರೆ; ಮರ್ ಥೋಮಾ ಕ್ರಿಶ್ಚಿಯನ್ನರು. ಚರ್ಚ್ ಅಲ್ಲಿ ಕ್ರಿ.ಶ. ೬೨ ರಿಂದ ಇದೆ.

ಸಂತ ಥೋಮಸನು ಚೆನ್ನೈನಲ್ಲಿ, ಮೈಲಾಪುರದಲ್ಲಿ ಮರಣ ಹೊಂದಿದನು. ಅಲ್ಲಿಯೇ ಯೇಸುವು ೧೨ ವರ್ಷಗಳ ಕಾಲ ವೇದಾಂತ ಮತ್ತು ಉಪನಿಷತ್ತುಗಳ ಅಧ್ಯಯನ ಮಾಡಿದುದು. ನಂತರ ಸಂತ ಥೋಮಸನು ಹೋಗಿ ಅವುಗಳನ್ನು ಅಧ್ಯಯನ ಮಾಡಿದನು, ಕಲಿತನು ಮತ್ತು ಹಲವಾರು ಯೋಗಿಗಳನ್ನು ಭೇಟಿಯಾದನು.

ಇವತ್ತಿಗೂ ಕೂಡಾ ಆ ಚರ್ಚ್ ಅಲ್ಲಿದೆ ಮತ್ತು ಅವನ ಶರೀರವು ಅಲ್ಲಿದೆ. ಅಲ್ಲೊಂದು ಚಿಕ್ಕ ಗುಡ್ಡವಿದೆ. ಅದರ ಮೇಲೆ ಅವನು ಕುಳಿತು ಧ್ಯಾನ ಮಾಡಿದನು ಮತ್ತು ನಾನು ಮತ್ತು ನನ್ನ ತಂದೆ ಒಬ್ಬರೇ; ನಾನು ಅದಾಗಿರುವೆನು! ಸೋ ಹಮ್! ಎಂಬುದನ್ನು ಅರಿತನು. ಅದುವೇ ಸೋ ಹಮ್ ಎಂದರೆ, ನಾನು ಮತ್ತು ನನ್ನ ತಂದೆ ಒಬ್ಬರೇ! ಅವನು ಅಲ್ಲಿ ಆ ಜ್ಞಾನವನ್ನು ಗಳಿಸಿದನು.
ನಿಜವಾಗಿಯೂ ಯೇಸುವು ಜನಿಸಿದುದು ಕ್ರಿಸ್‌ಮಸ್ ದಿನದಂದಲ್ಲ. ಈ ವಾಸ್ತವವು ನಿಮ್ಮಲ್ಲಿ ಎಷ್ಟು ಮಂದಿಗೆ ತಿಳಿಯದು?

ಕ್ರಿಸ್‌ಮಸ್ ಅವನ ಜನ್ಮದಿನವಲ್ಲ. ಯೇಸುವು ಮಾರ್ಚಿನಲ್ಲಿ ಜನಿಸಿದನು, ಅವನು ಮೀನ ರಾಶಿಯವನು. ಅದಕ್ಕಾಗಿಯೇ ಕ್ರೈಸ್ತ ಧರ್ಮವು ಎರಡು ಮೀನುಗಳ ಸಂಕೇತವನ್ನು ಹೊಂದಿದ್ದುದು. ಅವನು ಆ ಮಾಸದಲ್ಲಿ ಜನಿಸಿದನು ಯಾಕೆಂದರೆ, ಪರಿಶುದ್ಧ ಗರ್ಭಧಾರಣೆಯು ಜೂನ್‌ನಲ್ಲಾಗಿತ್ತು. ಗರ್ಭಧಾರಣೆಯ ೬ ತಿಂಗಳುಗಳ ಬಳಿಕ ಜನಿಸಿದ ಅಪಕ್ವ ಶಿಶುವಾಗಿರಲಿಲ್ಲ ಯೇಸು.
ನಿಜವಾಗಿಯೂ ಭಗವಾನ್ ಬುದ್ಧನಂತೆ, ಯೇಸುವಿನ ಜನನ ಮತ್ತು ಪುನರುತ್ಠಾನ ಬಹುತೇಕ ಒಂದೇ ಸಮಯಕ್ಕೆ ಆಗಿತ್ತು.

ಬುದ್ಧನು ಜನಿಸಿದುದು, ಆತ್ಮ ಸಾಕ್ಷಾತ್ಕಾರ ಹೊಂದಿದುದು ಮತ್ತು ಮರಣ ಹೊಂದಿದುದು ಒಂದೇ ದಿನದಂದು ಎಂಬುದು ನಿಮಗೆ ಗೊತ್ತೇ? ಅದು ಬುದ್ಧ ಪೌರ್ಣಿಮೆಯಂದು. ಬಹಳ ಸದೃಶವಾದ ಸಂಗತಿಯು ಯೇಸುವಿನೊಂದಿಗೆ ಆಯಿತು. ಅವನು ಮಾರ್ಚ್‌ನಲ್ಲಿ ಜನಿಸಿದನು ಮತ್ತು ಸುಮಾರು ಅದೇ ಸಮಯದಲ್ಲಿ ಅವನನ್ನು ಶಿಲುಬೆಗೇರಿಸಲಾಯಿತು. ಬಹುಶಃ ಕೇವಲ ಒಂದು ವಾರದ ವ್ಯತ್ಯಾಸ, ಅಷ್ಟೇ. ಇದು ಬಹಳ ಆಸಕ್ತಿಕರವಾದುದು.

ವ್ಯಕ್ತಿತ್ವವಲ್ಲ, ಸಂದೇಶ; ಜ್ಞಾನ ಅತ್ಯಂತ ಹೆಚ್ಚು ಮುಖ್ಯವಾದುದು ಎಂಬುದನ್ನು ನೀವು ತಿಳಿದಿರಬೇಕು. ನಾವೆಲ್ಲರೂ ಇಲ್ಲಿದ್ದೇವೆ ಮತ್ತು ನಾವೆಲ್ಲರೂ ಒಂದು ದಿನ ಹೋಗಲಿದ್ದೇವೆ, ಆದರೆ ಈ ಪ್ರಪಂಚಕ್ಕೆ ನಾವು ಏನನ್ನು ಕೊಡುವೆವೋ ಅದು ಪ್ರಪಂಚದಲ್ಲಿ ಉಳಿಯುತ್ತದೆ. ಹೀಗಾಗಿ, ನಾವು ಮನೆಗೆ ಏನನ್ನು ಒಯ್ಯಬೇಕೆಂದರೆ, ನಾನು ಹೇಗೆ ಪ್ರಯೋಜನಕಾರಿಯಾಗಬಹುದು, ನಾನು ಈ ಭೂಮಿಯ ಮೇಲೆ ಇರುವಲ್ಲಿಯವರೆಗೆ ನಾನು ಯಾವ ಒಳ್ಳೆಯ ಕೆಲಸಗಳನ್ನು ಮಾಡಬಹುದು ಎಂದು.

ಈ ಒಂದು ಯೋಚನೆ, ಅದು ವಾರಕ್ಕೊಮ್ಮೆಯಾದರೂ ಬಂದರೆ, ಜೀವನವು ವಿಭಿನ್ನವಾಗುವುದು. ಇಲ್ಲದಿದ್ದರೆ ನಾವು ನಮ್ಮ ದಿನಚರಿಯಲ್ಲಿ ಮತ್ತು ಚಿಕ್ಕ ವಿಷಯಗಳಲ್ಲಿ ಬಹಳಷ್ಟು ಮುಳುಗಿಹೋಗುತ್ತೇವೆ. ದಿನಚರಿಯು ನಿಮ್ಮ ಜೀವನವನ್ನು ತಿಂದುಹಾಕುತ್ತದೆ. ಎಲ್ಲೋ ನಾವು ಎಚ್ಚೆತ್ತುಕೊಳ್ಳಬೇಕು. ಕೆಲವು ಗಂಟೆಗಳ ಕಾಲದ ಎಚ್ಚರ ಕೂಡಾ, ’ನಾನು ಈ ಭೂಮಿಗೆ ಒಂದು ಉದ್ದೇಶಕ್ಕಾಗಿ ಬಂದಿರುವೆನು, ನಾನಿಲ್ಲಿ ಏನಾದರೂ ಒಳ್ಳೆಯದನ್ನು ಮಾಡಬೇಕು’, ಇದು ಜೀವನದಲ್ಲಿ ರಸವನ್ನು ತರುವುದು. ಇಲ್ಲದಿದ್ದರೆ, ನೀವು ದಿನಚರಿಯಲ್ಲಿ ಸಂಪೂರ್ಣವಾಗಿ ಮುಳುಗಿದ್ದರೆ, ಅದು ಜೀವನವನ್ನು ನಾಶಪಡಿಸಬಲ್ಲದು. ಅದೇ ವೇಳೆಗೆ, ದಿನಚರಿಯು ಆವಶ್ಯಕವಾಗಿದೆ.

ನೀವು ನಿಮ್ಮ ದಿನಚರಿಯನ್ನು ಹೊಂದಿರಬಾರದೆಂದು ನಾನು ಹೇಳುತ್ತಿಲ್ಲ. ಒಂದು ದಿನಚರಿಯಿಲ್ಲದೆ ಜೀವಿಸುವುದು ಅಸಾಧ್ಯ. ನಿಮಗದು ಬೇಕು, ಆದರೆ ಅದರಲ್ಲಿ ೧೦೦% ಮುಳುಗಬೇಡಿ. ಕಡಿಮೆಪಕ್ಷ ನಿಮ್ಮ ಮೂಗನ್ನು ಅದರಿಂದ ಮೇಲೆ ಇಡಿ! ಇವುಗಳು ಅಂತಹ ಸಂದರ್ಭಗಳಾಗಿವೆ.

ಎಲ್ಲಾ ಉತ್ಸವಗಳು ನಿಮಗೆ ಹೀಗೆಂದು ಹೇಳಲು ಪ್ರಯತ್ನಿಸುತ್ತಿವೆ, "ಬಾ, ನಿನ್ನ ಮೂಗನ್ನು ದಿನಚರಿಯಿಂದ ಮೇಲಿಡು.’

ದುರದೃಷ್ಟವಶಾತ್ ಉತ್ಸವಗಳು ಕೂಡಾ ಒಂದು ದಿನಚರಿಯಾಗಿವೆ! ಕಾಲದಿಂದ ಕಾಲಕ್ಕೆ ಸುಮ್ಮನೇ ಎಚ್ಚೆತ್ತುಕೊಂಡು ನೋಡಿ, ನಾನು ನನ್ನ ದಿನಚರಿಯಲ್ಲಿ ಮತ್ತು ಇತರ ಚಿಕ್ಕ ವಿಷಯಗಳಲ್ಲಿ ಸಿಕ್ಕಿಹಾಕಿಕೊಳ್ಳುವುದಕ್ಕಿಂತ ಹೆಚ್ಚು ಅಮೂಲ್ಯವಾದುದಾಗಿದೆ ಜೀವನ. ನಾನು ಜನರಿಗೆ ಪ್ರಯೋಜನಕಾರಿಯಾಗಿರಬೇಕು. ನಾನು ಸ್ವಲ್ಪ ಸಂತೋಷವನ್ನು ಹರಡಬೇಕು. ಈ ಯೋಚನೆಯನ್ನು ನಾವು ನಮ್ಮೊಂದಿಗೆ ಒಯ್ಯಬೇಕು. ನೀವೇನು ಹೇಳುತ್ತೀರಿ?

ಈ ಎರಡು ವಿಷಯಗಳನ್ನು ನೀವು ನೆನಪಿನಲ್ಲಿಡುವಿರೇ? ಅದು ಸುಮ್ಮನೆ ಇನ್ನೊಂದು ಬದಿಯಿಂದ ಹೊರಹೋಗಬಾರದು.

ಏನದು? ನನಗೆ ನಿಸ್ಸಹಾಯಕತೆ ಮತ್ತು ಬಲಹೀನತೆಯ ಅನುಭವವಾದಾಗ ನಾನು ಪ್ರಾರ್ಥಿಸುವೆನು ಮತ್ತು ನಾನು ಶಕ್ತಿಶಾಲಿಯೆಂಬ ಅನುಭವ ನನಗಾದಾಗ ನಾನು ಧನ್ಯವಾದವನ್ನರ್ಪಿಸುವೆನು ಮತ್ತು ಕೃತಜ್ಞತಾಪೂರ್ಣನಾಗಿರುವೆನು. ಅದು ಕೂಡಾ ಒಂದು ಪ್ರಾರ್ಥನೆಯಾಗಿದೆ.

ಪ್ರಶ್ನೆ: ನಾನು ದೇವರೆಂಬುದನ್ನು ನಾನು ಅರಿತುಕೊಳ್ಳುವುದು ಹೇಗೆ?

ಶ್ರೀ ಶ್ರೀ ರವಿ ಶಂಕರ್:
’ನಾನು ದೇವರು, ನಾನು ದೇವರು’ ಎಂದು ನೀವು ಹೇಳುತ್ತಾ ಹೋಗಬಾರದು. ಜನರು ನಿಮ್ಮನ್ನು ಹುಚ್ಚಾಸ್ಪತ್ರೆಗೆ ಸೇರಿಸುವರು. ಅದು ಘೋಷಿಸಲಿರುವ ಒಂದು ವಿಷಯವಲ್ಲ. ಅದು ಕೇವಲ ಒಂದು ಆಂತರಿಕ ಸಾಕ್ಷಾತ್ಕಾರವಾಗಿದೆ.

ದೇವರಲ್ಲದೇ ಇರುವುದು ಯಾವುದೂ ಇಲ್ಲ. ಈ ಆಕಾಶದಲ್ಲಿ, ವಾಯುವಲ್ಲದಿರುವುದು ಅಥವಾ ಆಕಾಶವಲ್ಲದಿರುವುದು ಏನಾದರೂ ಇದೆಯೇ? ವಾಯುವು ಆಕಾಶದಲ್ಲಿದೆ, ನೀವು ಆಕಾಶದಲ್ಲಿರುವಿರಿ, ನಾನು ಆಕಾಶದಲ್ಲಿರುವೆನು, ನಿಮ್ಮ ಶರೀರದಲ್ಲಿರುವ ಪ್ರತಿಯೊಂದು ಕೋಶವೂ ಆಕಾಶದಲ್ಲಿದೆ. ಇದು ಸಾಕ್ಷಾತ್ಕಾರವಾಗಿದೆ.

ಆ ಒಂದು ವಿಷಯವಲ್ಲದೆ ಬೇರೇನೂ ಅಸ್ತಿತ್ವದಲ್ಲಿಲ್ಲ ಎಂಬುದನ್ನು ತಿಳಿ, ಮತ್ತು ಆ ಒಂದು ವಿಷಯವೇ ನಾನಾಗಿರುವೆನು ಮತ್ತು ಎಲ್ಲರೂ ಆಗಿರುವರು.

ಇದನ್ನು ಅನುಭವಿಸಲು ಮತ್ತು ಸಾಕ್ಷಾತ್ಕರಿಸಿಕೊಳ್ಳಲು, ಹೃದಯವು ಅರಳಬೇಕು ಮತ್ತು ಅದಾಗುವುದು ಹಾಡುವುದರ ಮೂಲಕ. ಅದಕ್ಕಾಗಿಯೇ ನೀವು ಹಾಡುವಾಗ ಅಥವಾ ನೀವು ಧ್ಯಾನದಲ್ಲಿ ಕರಗುವಾಗ, ಇರುವುದು ಕೇವಲ ಆನಂದ ಮಾತ್ರ ಹಾಗೂ ಆನಂದವು ದೇವರ ಸ್ವಭಾವವಾಗಿದೆ!

ನೀವು ಸತ್ಯದೊಂದಿಗೆ ಇರುವಾಗ, ನೀವು ದೇವರೊಂದಿಗೆ ಇರುತ್ತೀರಿ. ನೀವೊಂದು ಆನಂದಪೂರ್ಣ ಸ್ಥಿತಿಯಲ್ಲಿರುವಾಗ, ನೀವು ದೇವರಲ್ಲಿರುತ್ತೀರಿ.