ಬುಧವಾರ, ಜುಲೈ 31, 2013

ಗತಿಸಿದ ಶ್ವಾಸ ಹಿಂದಿರುಗಿದಾಗ

ಬ್ಯಾಡ್ ಅಂಟೊಗಸ್ಟ್, ಜರ್ಮನಿ
೩೧ ಜೂಲೈ ೨೦೧೩


ಪ್ರಶ್ನೆ: ಜೀವ ಮತ್ತು ಆತ್ಮ ಜನನದ ಮುನ್ನ ಎಲ್ಲಿರುವುದು? ಜೀವ ಮತ್ತು ಆತ್ಮಗಳ ನಡುವೆ ಏನು ವ್ಯತ್ಯಾಸ? ಜೀವ ಹೇಗೆ ಜನಿಸುವುದು, ಮತ್ತು ಎಲ್ಲಿಂದ ಬರುವುದು?

ಶ್ರೀ ಶ್ರೀ ರವಿಶಂಕರ್: ಎರಡೂ ಒಂದೇ. ಜೀವ ಗರ್ಭಧಾರಣೆಯ ಸಮಯದಲ್ಲಿ ದೇಹದ ಒಳಗೆ ಬರುತ್ತದೆ, ಮತ್ತು ಕೆಲವೊಮ್ಮೆ ಹುಟ್ಟುವ ಸಮಯದಲ್ಲೂ ಸಹ. ಆತ್ಮವು ಗರ್ಭಧಾರಣೆಯ ಅಥವಾ ಹುಟ್ಟುವ ಸಮಯದಲ್ಲಿ ದೇಹವನ್ನು ಪ್ರವೇಶಿಸುತ್ತದೆ. ಕೆಲವೊಮ್ಮೆ ಒಂದು ಆತ್ಮವು ಜನ್ಮದವೆರೆಗೆ ಇದ್ದು ಮತ್ತೊಂದು ಆತ್ಮ ಹುಟ್ಟುವ ಸಮಯದಲ್ಲಿ ಬರುತ್ತದೆ. ಸಾಮಾನ್ಯವಾಗಿ, ಒಂದೇ ಆತ್ಮ ಸಂಪೂರ್ಣ ಕಾಲದವರೆಗೆ ಇರುತ್ತದೆ.

ಇದು ಐದು ರಹಸ್ಯಗಳಲ್ಲಿ ಒಂದು. ಸಾವಿನ ರಹಸ್ಯ, ಜನ್ಮದ ರಹಸ್ಯ, ಮತ್ತು ರಾಜರಹಸ್ಯ. ಇವು ಐದು ರಹಸ್ಯಗಳಲ್ಲಿ ಕೆಲವು. ನಾನು ಜ್ಞಾನದ ಪುಸ್ತಕಗಳಲ್ಲಿ ಇದರ ಬಗ್ಗೆ ಮಾತನಾಡಿದ್ದೇನೆ. ಕೇವಲ ಆ ಪುಸ್ತಕಗಳನ್ನು ಓದಿ.

ನನಗೆ ಗೊತ್ತು ಅನೇಕರು ‘ಆನ್ ಇಂಟಿಮೇಟ್ ನೋಟ್ ಟು ದ ಸಿನ್ಸಿಯರ್ ಸ್ಪೀಕರ್ (ಆತ್ಮೀಯರಿಗೊಂದು ಕಿವಿಮಾತು)' ಸರಣಿಯ ಏಳು ಸಂಪುಟಗಳನ್ನು ಓದಿಲ್ಲವೆಂದು. ಈ ಏಳು ಸಂಪುಟಗಳನ್ನು ಓದಿ. ಏಳು ವರ್ಷಗಳ ಕಾಲ, ಪ್ರತಿವಾರ ನಾನು ಒಂದು ಜ್ಞಾನದ ಪುಟ ನೀಡುತ್ತಿದ್ದೆನು. ಬುಧವಾರದಂದು, ನಾವೆಲ್ಲರು ಕುಳಿತು ಹೊಸದನ್ನು ಬರೆಯುತ್ತಿದ್ದೆವು. ಮತ್ತು ಇದನ್ನು ಎಲ್ಲಾ ಸಂಗ್ರಹಿಸಿ ‘ಆನ್ ಇಂಟಿಮೇಟ್ ನೋಟ್ ಟು ದ ಸಿನ್ಸಿಯರ್ ಸ್ಪೀಕರ್’ ಎಂದು ಸಂಕಲನ ಮಾಡಲಾಯಿತು.

ನೀವೆಲ್ಲರೂ ಓದಲೇಬೇಕಾಗಿರುವ ಇನ್ನೊಂದು ಪುಸ್ತಕವೆಂದರೆ ಯೋಗವಾಸಿಷ್ಠ (ರಾಜಕುಮಾರ ರಾಮನಿಗೆ ಋಷಿ ವಸಿಷ್ಠರ ಪ್ರವಚನ, ಇದು ರಾಮ ನಿರುತ್ಸಾಹದ ಸ್ಥಿತಿಯಲ್ಲಿದ್ದ ಅವಧಿಯಲ್ಲಿ). ನೀವು ಒಮ್ಮೆ ಓದಿದಾಗ ಅರ್ಥವಾಗದೆ ಇರಬಹುದು. ಮತ್ತೆ ಮತ್ತೆ ಮತ್ತೆ ಓದಿ. ಅರ್ಥವಾದಷ್ಟು ತೆಗೆದುಕೊಳ್ಳಿ. ಮತ್ತು ನಿಮಗೆ ಅರ್ಥವಾಗದಿದ್ದನ್ನು ಬಿಡಿ. ಒಂದು ದಿನ ನೀವು 'ಓ, ಇದು ಹೀಗೆ!' ಎಂದು ಹೇಳುವಿರಿ.

ಅಮೇರಿಕಾದಲ್ಲಿ ಒಬ್ಬರು ವೈದ್ಯರಿರುವರು, ಅವರು ಮೆದುಳಿನ ಶಸ್ತ್ರ-ವೈದ್ಯರು. ಅವರು ಏಳು ದಿನಗಳ ಕಾಲ ಅಸಹಜ ಗಾಢ ನಿದ್ರೆಯಲ್ಲಿ ಇದ್ದರು, ಮತ್ತು ಜನರು ಅವರು ಮೃತ ಪಟ್ಟಿರುವರು, ಮತ್ತು ಅವರ ಜೀವ ಮರಳಿಬರುವುದಿಲ್ಲ ಎಂದು ಭಾವಿಸಿದರು. ಆದರೆ ಇದ್ದಕ್ಕಿದ್ದಂತೆ ಏನೋ ಸಂಭವಿಸಿತು ಮತ್ತು ಅವರು ಮರಳಿ ಬಂದರು.

ಅವರು ’ಸ್ವರ್ಗದ ಪುರಾವೆ’ ಎನ್ನುವ ಕೃತಿಯನ್ನು ಬರೆದರು. ಅವರೊಬ್ಬ ಕ್ರಿಶ್ಚಿಯನ್, ಮತ್ತು ಪೂರ್ವ ತತ್ವಶಾಸ್ತ್ರದ ಬಗ್ಗೆ ಅವರಿಗೆ ಯಾವುದೇ ಕಲ್ಪನೆ ಇರಲಿಲ್ಲ. ಅವರು ಅದರ ಬಗ್ಗೆ ಎಂದೂ ಓದಿರಲಿಲ್ಲ. ಆದರೆ ಅವರು ಮತ್ತೆ ಜೀವಿತರಾದಾಗ, ಅವರು ಬರೆದ ವಿಷಯ ಚಕಿತಗೊಳಿಸುತ್ತದೆ. ಅವರು ಬರೆದ ವಿಷಯ ಸಾಮಾನ್ಯವಾಗಿ ಭಗವದ್ಗೀತೆಯಲ್ಲಿ(ಪುರಾತನ ಭಾರತೀಯ ಗ್ರಂಥ) ಕಲಿಸಲಾಗುತ್ತದೆ. ಅವರು ಹೇಳಿದರು, ಅವರು ದೇಹಬಿಟ್ಟು ಹೊರಟ ಮೇಲೆ, ಅವರಿಗೆ ಭಾಸವಾಗಿದ್ದು ದೊಡ್ಡ ಉಪಸ್ಥಿತಿ ಮಾತ್ರ, ಮತ್ತು ಆ ಉಪಸ್ಥಿತಿಯ ಹೆಸರು ಓಂ. ಅವರು ಇದನ್ನು ಓಂ ಎಂದು ಕರೆದರು.

ಅವರು ಚಿನ್ನದ ಮೊಟ್ಟೆಯ ಬಗ್ಗೆ, ಹಾಗೂ ತಿರುಳ ಬಗ್ಗೆ ಕೂಡ ಮಾತನಾಡುತ್ತಾರೆ. ತಿರುಳ ಅರ್ಥ ಸ್ವಯಂ, ಆತ್ಮ.
ಮತ್ತು ಅವರು ಬೇರುಗಳು ಮೇಲೆ ಇದೆ, ಮತ್ತು ಚಿಗುರುಗಳು ಕೆಳಗೆ ಇದೆ ಎಂದಿದ್ದಾರೆ.  ಭಗವದ್ಗೀತೆಯು ಇದನ್ನೇ ಹೇಳಿದೆ. ಒಂದು ಮರವಿದೆ ಅದರ ಬೇರುಗಳು ಮೇಲೆ, ಆಕಾಶದಲ್ಲಿ ಹೊಂದಿದೆ ಎಂದು.

ಅವರು ಹೇಳಿದ್ದಾರೆ, ಅವರು ದೇಹಬಿಟ್ಟು ಹೊರಟಾಗ, ಅವರು ಬೇರುಗಳ ಮೂಲಕ ಅನ್ಯ ಕಡೆಗೆ ತೆರಳಿದರು. ಅವರು ಹೋದ ಹಾದಿ ಮಣ್ಣಿನ, ಅಸ್ಪಷ್ಟ ಬಾಹ್ಯಾಕಾಶವಾಗಿತ್ತು.

ಇದನ್ನು ಪುರಾಣಗಳು (ಕೇವಲ ಪ್ರಾಚೀನ ಪುರಾಣಗಳು ಆಧುನಿಕ ಭಾಷೆಯಲ್ಲಿ; ವಿಜ್ಞಾನದ ಭಾಷೆಯಲ್ಲಿ) ಪರಿಪೂರ್ಣವಾಗಿ ಮಾತನಾಡುತ್ತವೆ.

ಅದು ಇದೇ ವಿಷಯವನ್ನು ಹೇಳುತ್ತದೆ: ಭಾಷೆ ಇಲ್ಲದೆ ಸಂಪರ್ಕ. ಮತ್ತು ಒಬ್ಬರು ದೇವದೂತ ಬರುತ್ತಾರೆ, ಒಬ್ಬರು ಮಾರ್ಗದರ್ಶಿ ನಿಮ್ಮನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಕರೆದುಕೊಂಡು ಹೋಗುತ್ತಾರೆ. ಇದನ್ನೇ ಹೇಳಿರುವುದು.

ನಿಮಗೇಕೆ ಜೀವನದಲ್ಲಿ ಗುರು ಬೇಕಾಗಿರುವುದು? ಏಕೆಂದರೆ ನೀವು ಮರಣ ಹೊಂದಿದ ನಂತರ, ನೀವು ಭೇಟಿಮಾಡುವ ಮೊದಲ ವ್ಯಕ್ತಿಯೇ ಗುರು ಆಗಿರುವರು. ಗುರು ನಿಮ್ಮನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಕರೆದುಕೊಂಡು ಹೋಗುತ್ತಾರೆ; ಮಾರ್ಗದರ್ಶಿಯ ಹಾಗೆ. ಇದು ನೀವು ವಿಮಾನ ನಿಲ್ದಾಣ ತಲುಪಿದಾಗ, ನಿಮ್ಮನ್ನು ಸ್ವಾಗತಿಸಲು ಅಲ್ಲಿ ಯಾರಾದರೂ ಇರುವ ಹಾಗೆ. ಆದುದರಿಂದ ಗುರು ಮುಖ್ಯ.

ಇವೆಲ್ಲ ಪ್ರಾಚೀನ ವಿಚಾರಗಳು, ಇವನ್ನೇ ಈ ವೈದ್ಯರು ಅನುಭವಿಸಿದ್ದು. ಇದು ಬಹಳ ಕುತೂಹಲಕಾರಿ ಸಾವಿನ ಸಮೀಪದ ಅನುಭವಗಳು. ಅನೇಕರು ಅದೇ ರೀತಿಯ ಅನುಭವಗಳನ್ನು ಹೊಂದಿರುವರು, ಒಂದು ಸುರಂಗದ ಇತರ ಭಾಗದಲ್ಲಿ ಬಹಳ ಪ್ರೀತಿಯ ಬೆಳಕು ನೋಡಿದ ಹಾಗೆ. ನರಕಕ್ಕೆ ಹೋಗಿದ್ದ ಹಾಗೆ ಅಥವಾ ಆ ರೀತಿಯ ಯಾವುದೂ ಅಲ್ಲ. ಈ ಅನುಭವಗಳ ಓದುವಿಕೆಯಿಂದ ನಿಮಗೆ ಜೀವನವು ಅರ್ಥವಾಗುವುದು. ಆದ್ದರಿಂದ ನರಕದ ಬಗ್ಗೆ ಭಯ ಅಥವಾ ಸ್ವರ್ಗದ ಬಗ್ಗೆ ಪ್ರಲೋಭನೆ ಮರೆತುಬಿಡಿ.

ಭಾರತದಲ್ಲಿ ಕೂಡ​​,  ಒಬ್ಬ ಮಾನ್ಯರು ಆಶ್ರಮಕ್ಕೆ ನಿಯಮಿತವಾಗಿ ಬರುತ್ತಿರುತ್ತಾರೆ, ಅವರಿಗೂ ಅದೇ ರೀತಿಯ ಅನುಭವ ಆಯಿತೆಂದು ಹೇಳಿದರು. ಅವರನ್ನು ಎಚ್ಚೆತ್ತುಗೊಳ್ಳಿಸುವ ಮುನ್ನ ಏಳು ನಿಮಿಷಗಳ ಕಾಲ ನಿಧನರಾಗಿದ್ದರು.

ಅವರನ್ನುಎಚ್ಚೆತ್ತುಗೊಳ್ಳಿಸಿದನಂತರ, ಅವರು ತಮ್ಮ ಪ್ರಯಾಣವನ್ನು ವಿವರಿಸಿದರು. ಹೇಗೆ ಕೆಲವು ಜನರು ಬಂದು ತಮ್ಮನ್ನು ಮತ್ತೊಂದು ಸ್ಥಳಕ್ಕೆ ಕರೆದುಕೊಂಡು ಹೋದರು ಎಂದು. ಅವರು ಹೇಳಿದರು ಅಲ್ಲಿ ಜನರು ಬಿಳಿ ದಿರಿಸಲ್ಲಿ, ಗಡ್ಡವನ್ನು ಹೊಂದಿದ್ದು, ಋಷಿಗಳ ಹಾಗಿದ್ದರು.

ಅವರು ತಮ್ಮನ್ನು ತಂದ ಜನರಿಗೆ ಹೇಳಿದರು, ‘ಏಕೆ ನೀವು ಇವರನ್ನು ತಂದಿರಿ? ಇವರು ತಪ್ಪು ವ್ಯಕ್ತಿ, ಇವರು ಇನ್ನೂ ಭೂಮಿಯ ಮೇಲಿರಬೇಕು’.

ತಮ್ಮನ್ನು ತಂದ ಜನರು ಹೇಳಿದರು, 'ಇಲ್ಲ, ಇವರು ಸರಿಯಾದ ವ್ಯಕ್ತಿ', ಮತ್ತು ಅದರಿಂದ ಅವರೆಲ್ಲ ವಾದದಲ್ಲಿ ತೊಡಗಿದರು. ಅವರು ತಮ್ಮ ಅನುಭವವನ್ನು ವಿವರಿಸುತ್ತಿದ್ದು, ಮತ್ತು ನಂತರ ಹೇಳಿದರು ತಮ್ಮನ್ನು ಮರಳಿತಂದು, ತಮ್ಮ ಶವದ ಮೂಗಿನ ಹೊಳ್ಳೆಗಳ ಹತ್ತಿರ ಬಿಟ್ಟುಹೋದರು.

ಅವರು ಹೇಳಿದರು, ‘ನನ್ನನ್ನು ಶಸ್ತ್ರಚಿಕಿತ್ಸೆಯ ಮೇಜಿನ ಮೇಲೆ ಕಂಡೆ.  ನಾನು ನನ್ನನ್ನೆ ಕಂಡೆ ಮತ್ತು ಜನರು ಆಳುವುದನ್ನು ಕಂಡೆ. ವೈದ್ಯರು ನನ್ನನ್ನು ಎಚ್ಚೆತ್ತುಗೊಳ್ಳಿಸಲು ಪ್ರಯತ್ನಿಸುತ್ತಿದ್ದರು ಆದರೆ ನಾನು ಹೊರಟು ಹೋಗಿದ್ದೆ. ನನಗೆ ಒಂದು ಸಣ್ಣ ದಾರದ ಸಂಪರ್ಕವಿತ್ತು. ಮತ್ತು ಅವರು ನನ್ನನ್ನು ಆ ಸಣ್ಣ ದಾರಕ್ಕೆ ಸೇರಿಸಿ ಮೂಗಿನ ಹೊಳ್ಳೆಗಳ ಹತ್ತಿರ ಬಿಟ್ಟು ಹೋದರು. ನಾನು ನಿಧಾನವಾಗಿ ಉಸಿರು ತೆಗೆದುಕೊಂಡು ಪುನಃ ಜೀವಿತನಾದೆ.

ಆದ್ದರಿಂದ ಜೀವನವು ನಾವು ಭಾವಿಸುವುದಕ್ಕಿಂತ ತುಂಬಾ ಹೆಚ್ಚು. ನಾನು ೧೭ ವರ್ಷದವನಿದ್ದಾಗ ಕನ್ನಡದಲ್ಲಿ ಒಂದು ಕವಿತೆ ಬರೆದೆನು. ಆ ಕವಿತೆಯಲ್ಲಿ, ನಾನು ಬರೆದದ್ದು ’ನಾನು ಎಲ್ಲೆಡೆ ಇದ್ದೆನು ಮತ್ತು ನಂತರ ಇದ್ದಕ್ಕಿದ್ದಂತೆ ನಾನು ಒಂದು ಮಿಂಚಿನ ಹಾಗೆ ಈ ಭೂಮಿಯ ಮೇಲೆ ಬಂದೆ’. ಮತ್ತು ಈ ವೈದ್ಯರು ಸಹ ಇದನ್ನೇ ನಿಖರವಾಗಿ ಬರೆದಿದ್ದಾರೆ!

ಪ್ರಶ್ನೆ: ನೀವು, ನಮ್ಮ ಸಮಸ್ಯೆಗಳ ಬಹುಪಾಲು ನಮ್ಮ ಪೋಷಕರೊಂದಿಗಿರುವ ಸಂಬಂಧದಿಂದ ಬರುತ್ತದೆ ಎಂದು ಮನೋವಿಜ್ಞಾನಿಗಳು ಯೋಚಿಸಿದ ಹಾಗೆ ಯೋಚಿಸುವಿರ?

ಶ್ರೀ ಶ್ರೀ ರವಿ ಶಂಕರ್: ಇಲ್ಲ, ಪ್ರಮುಖ ಸಮಸ್ಯೆಗಳು ನಿಮ್ಮ ಸ್ವಂತ ಮನಸ್ಸಿನಿಂದಲೇ ಬರುತ್ತವೆ. ಅದನ್ನು ಪೋಷಕರ ಮೇಲೆ ತೂಗುಹಾಕಬೇಡಿ, ಬಡಪಾಯಿ ಜೀವಿಗಳು.

ಕೆಲವು ವರ್ಷಗಳ ಹಿಂದೆ, ಒಂದು ಎಳೆಯ ಹುಡುಗಿ ತನ್ನ ಪೋಷಕರ ಜೊತೆ ನನ್ನ ಬಳಿ ಬಂದಿದ್ದಳು. ಆ ಹುಡುಗಿ, ತನ್ನ ಹದಿಹರೆಯ ಕಳೆದು ೨೧-೨೨ ಸುಮಾರು ವರ್ಷದವಳಾಗಿದ್ದಳು, ಮತ್ತು ಅವಳು ತನ್ನ ಪೋಷಕರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದಳು. ನಂತರ ಮನೋವಿಜ್ಞಾನಿಗಳು ಅವಳ ಜೊತೆ ಮಾತನಾಡಿ ಅವಳ ಕೆಲವು ಸಮಸ್ಯೆಗಳು ಅವಳ ಪೋಷಕರ ಕಾರಣದಿಂದಾಗಿ ಎಂದರು, ಮತ್ತು ಇದ್ದಕ್ಕಿದ್ದಂತೆ ಅವರ ಇಡೀ ಸಂಬಂಧವು ಕುಸಿದುಬಿತ್ತು. ಅವರಲ್ಲಿ ಇದರ ಮೊದಲು ಯಾವುದೇ ಸಮಸ್ಯೆ ಇರಲಿಲ್ಲ.

ನಿಮಗೆ ಗೊತ್ತಾ, ನಾನು ನಿಮಗೆ ಹೇಳುತ್ತೇನೆ, ಮಕ್ಕಳು ದೂರದರ್ಶನದಲ್ಲಿ ಅನೇಕ ಕಾರ್ಯಕ್ರಮಗಳನ್ನು ವೀಕ್ಷಿಸಿ, ಅವರು ಬಲಿಯಾದವರೊಂದಿಗೆ ತಮ್ಮನ್ನು ಗುರುತಿಸಿಕೊಳ್ಳಲು ಆರಂಭಿಸುತ್ತಾರೆ. ದುರುಪಯೋಗಕ್ಕೆ ಬಲಿಯಾದ ಮಕ್ಕಳಿರುತ್ತಾರೆ, ಮತ್ತು ಮಕ್ಕಳು ದೂರದರ್ಶನವನ್ನು ನೋಡುತ್ತಾ ಇದ್ದಕಿದ್ದಂತೆ ಯೋಚನೆ ಮಾಡಲು ಪ್ರಾರಂಬಿಸುತ್ತಾರೆ ‘ನಿನಗೆ  ಗೊತ್ತೇ ನನಗೆ ೨ ವರ್ಷ ವಯಸ್ಸಾಗಿದಾಗ, ನನ್ನ ತಂದೆ ನನ್ನನ್ನು ದುರುಪಯೋಗಿಸಿದರು’.

ಆಕೆಯ ತಂದೆ ಹೇಳಿದರು. 'ನಾನು ಆಣೆ ಇಡುವೆ ಅಂತಹ ಕೃತ್ಯವನ್ನು ನಾನು ಎಂದಿಗೂ ಮಾಡಲಾರೆ, ಆದರೆ ನನ್ನ ಮಗು ತನ್ನನ್ನು ನಾನು ಹಿಂಸಿಸಿದೆನು ಎಂದು ಆರೋಪಿಸುತ್ತಿದೆ'.

ಅವರು ತುಂಬಾ ಛಿದ್ರಗೊಂಡಿದ್ದರು. ಇಬ್ಬರೂ ಪೋಷಕರು ನರಕಕ್ಕೆ ಹೋದ ಹಾಗಿತ್ತು, ಆದರೂ ಒಂದು ಮಾತನ್ನು ಹೇಳಲಿಲ್ಲ. ಆ ಮಗು ಕಲ್ಪನೆಯನ್ನು ಪ್ರಾರಂಭಿಸಿತ್ತು.

ಎರಡು ವರ್ಷದ ಮಗು ಏನನ್ನಾದರೂ ಹೇಗೆ ನೆನಪು ಇಟ್ಟುಕೊಳ್ಳುವುದು? ನಿಮಗೆ ನೆನೆಪಿದೆಯೇ ನೀವು ಎರಡು ವರುಷ ವಯಸ್ಸಲ್ಲಿದಾಗ ನಿಮ್ಮನ್ನು ಯಾರು ತೊಟ್ಟಿಲಲ್ಲಿ ತೂಗಿದರು, ಯಾವಾಗ ಕೆಳಗೆ ಹಾಕಿದರು ಎಂದು? ಎರಡು ವರುಷದಿಂದ ನಾಲ್ಕು ವರುಷ ಅಥವಾ ಐದು ವರುಷದವರೆಗೂ ಮುಂದುವರಿಸಿದರೆ ಹೌದು, ನಿಮಗೆ ನೆನಪಿರುತ್ತದೆ. ಆದರೆ ಯಾರಾದರೂ ಎರಡು ವರುಷದ ಮಗುವಿಗೆ ಏನಾದರೂ ಮಾಡಿದರೆ, ಅದು ಅವರ ನೆನೆಪಿನಲ್ಲಿರುತ್ತದೆ ಎಂದು ನಿಮಗೆ ಅನ್ನಿಸುತ್ತದೆಯೇ? ಸ್ವತಃ, ನನಗೆ ಹಾಗೆ ಅನ್ನಿಸುವುದಿಲ್ಲ.

ಸರಿ, ಏನೇ ಸಂಭವಿಸಿದ್ದರೂ ಸಹ, ೨೫ ವರ್ಷಗಳ ಅಥವಾ ೩೦ ವರ್ಷಗಳ ನಂತರ ಅದನ್ನು ನೆನಪಿಸಿಕೊಳ್ಳುವುದರಲ್ಲಿ, ಹಾಗೂ ೫೦ ವರ್ಷಗಳ ಮೇಲಿರುವಂತವರನ್ನು ಆರೋಪಿಸಿ ಮತ್ತು ಅವರ ಜೀವನವನ್ನು ಶೋಚನೀಯ ಮಾಡುವದರಲ್ಲಿ ಏನು ಅಂಶವಿದೆ. ಹೌದು, ನೀವು ಬಲಿಯಾಗಿದ್ದ ವೇಳೆ ಖಂಡಿತವಾಗಿ ನೀವು ಮಾತನಾಡಲೇಬೇಕು ಆದರೆ ಕೆಲವೊಮ್ಮೆ ಜನರು ಬಲಿಯಾಗದೆ ಇದ್ದರೂ ಅವರು ಬಲಿಪಶುಗಳ ಸ್ಥಾನವನ್ನು ಹೇರಿಸಿಕೊಳ್ಳುತ್ತಾರೆ. ಬಲಿಪಶುತನವನ್ನು ತಮ್ಮ ಮೇಲೆ ಹೊರಿಸುಕೊಳ್ಳುತ್ತಾರೆ; ಜನರು ಹೀಗೆ ಮಾಡುವರು.

ಇದು ದೊಡ್ಡ ಸಮಸ್ಯೆ. ಆಧುನಿಕ ಮನೋವಿಜ್ಞಾನ ಪ್ರಾಚೀನ ಜ್ಞಾನದಿಂದ ಕಲಿಯಲು ಬಹಳಷ್ಟು ಇರುವುದು. ಅವರು ಜನರಿಗೆ, ಅವರ ಆಳದಲ್ಲಿ ನೋವು ಇರುವುದೆಂದು ಹೇಳಬಾರದು. ನೀವು ಆಳವಾಗಿ ಒಳಗೆ ಹೋದರೆ, ಯಾವುದೇ ನೋವು ಇಲ್ಲ, ಇರುವುದು ಅತ್ಯಾನಂದ ಮಾತ್ರ. ನೀವು ಎಂದೂ ಒಳಗೆ ಆಳವಾಗಿ ಹೋಗಿಲ್ಲ.

ಪ್ರಶ್ನೆ: ನಾನು ಇಲ್ಲಿ ಉತ್ತಮ ತತ್ವಗಳನ್ನು ಬಹಳಷ್ಟು ಕಲಿತೆ. ನನ್ನ ದೈನಂದಿನ ಜೀವನದಲ್ಲಿ ಇದನ್ನು ಕಾರ್ಯಗತಗೊಳಿಸುವುದು ಹೇಗೆ? ನಾನು ವ್ಯವಹಾರದಲ್ಲಿ ಇರುವುದಕ್ಕೆ ಸ್ವಲ್ಪ ಜಗಳಗಂಟನಾಗಿ ಮತ್ತು ಕಾರ್ಯನಿರತನಾಗಿ ಇರುವ ಅಗತ್ಯವಿದೆ. ಕೇವಲ ಧ್ಯಾನ ಸಾಕಾಗುವುದಿಲ್ಲ.

ಶ್ರೀ ಶ್ರೀ ರವಿ ಶಂಕರ್: ಸರಿ! ಮನಃಸ್ಥಿತಿಯನ್ನು ಮಾಡುವ ಅಗತ್ಯವಿಲ್ಲ. ನೀವು ಇಲ್ಲಿ ಕುಳಿತಾಗ, ನೀವು ಹೀಗೆ(ಅಡ್ಡಕಾಲಿನಲ್ಲಿ) ಕುಳಿತಿರುವಿರಿ. ನಿಮ್ಮ ಕಚೇರಿಗೆ ಹೋದಾಗ, ಇದೇ ರೀತಿ ಕುಳಿತುಕೊಳ್ಳುವ ಅಗತ್ಯವಿಲ್ಲ! ನೀವು ವ್ಯವಹಾರದಲ್ಲಿ ಇರುವಾಗ, ನೀವು ವ್ಯವಹಾರ ಮಾಡಿ.

ನೀವು ಚಳಿಗಾಲದ ಉಡುಗೆಯನ್ನು ಎಲ್ಲಾ ಸಮಯ ತೊಡುವುದಿಲ್ಲ. ನೀವು ಚಳಿಗಾಲದ ಉಡುಗೆಯನ್ನು ತೊಟ್ಟುಕೊಂಡು ನಡೆಯುವುದನ್ನು ಕಲ್ಪಿಸಿಕೊಳ್ಳಿ, ಈ ಹವಾಮಾನದಲ್ಲಿ! ನೀವು ಬದುಕಲು ಸಾಧ್ಯವಿಲ್ಲ. ಚಳಿಗಾಲದ ಉಡುಗೆಯನ್ನು ಚಳಿಗಾಲದಲ್ಲಿ ಮಾತ್ರ ತೊಡಿ. ಹಾಗೂ ನೀವು ಬಿಸಿಲುಗಾಲದ ಉಡುಗೆಯನ್ನು ತೊಟ್ಟು ಚಳಿಗಾಲದಲ್ಲಿ ನಡೆದಾಡಲೂ ಆಗುವುದಿಲ್ಲ.

ನೀವು ಉಡುಗೆಯನ್ನು ಬದಲಾಯಿಸುವ ಹಾಗೆ, ನಿಮ್ಮ ಮನಃಸ್ಥಿತಿಗಳನ್ನು, ನಿಮ್ಮ ವರ್ತನೆ ಬದಲಾಯಿಸುವ  ಸಾಮರ್ಥ್ಯ ನಿಮ್ಮಲ್ಲಿರುವುದು. ನೀವು ಸಾರ್ವಕಾಲಿಕವಾಗಿ ಒಳ್ಳೆ-ಒಳ್ಳೆಯಾಗಿ ಇರುವ ಅಗತ್ಯವಿಲ್ಲ. ನೀವು ವ್ಯವಹಾರದಲ್ಲಿ ಇರುವಾಗ ವ್ಯವಹಾರದ ಮನಃಸ್ಥಿತಿಯಲ್ಲಿರಿ. ನೀವು ಕಾರ್ಯನಿರತರಾಗಿರಬೇಕು, ನೀವು ನಿಧಾನವಾದ ಚಲನೆಯಲ್ಲಿ ಹೋಗಬೇಕಿಲ್ಲ.
ನೀವು ನಿಧಾನವಾದ ಚಲನೆಯಲ್ಲಿ ಧ್ಯಾನ (ಆರ್ಟ್ ಆಫ್ ಲಿವಿಂಗ್‌ನಲ್ಲಿ ಕಲಿಸುವ ಒಂದು ಧ್ಯಾನತಂತ್ರ)ವನ್ನು ಇಲ್ಲಿ ಈ ಹಾಲ್‌ನಲ್ಲಿ ಮಾಡಬಹುದು. ನೀವು ಊಟದ ಹಜಾರದಲ್ಲಿ ಕುಳಿತು ಚಲನೆಯಲ್ಲಿ ಧ್ಯಾನ ಮಾಡಿದರೆ, ನಿಮ್ಮ ಮಧ್ಯಾಹ್ನದ ಊಟ ರಾತ್ರಿಯ ಭೋಜನವಾಗಿ ಪರಿಣಮಿಸುತ್ತದೆ.

ಇಲ್ಲಿ ಕಲಿತದ್ದೆಲ್ಲ ನಿಮ್ಮಲ್ಲಿ ಒಳ ಪರಿವರ್ತನೆ ತರುವಂತಹುದು. ಇವು ಮನಸ್ಸಿನ ಒಂದು ಪರಿಕಲ್ಪನೆ ಅಲ್ಲ. ಇದೆಲ್ಲವೂ  ನಿಮ್ಮ ಭಾಗವಾಗಿದೆ. ವಾಸ್ತವವಾಗಿ ನೀವು ದೈನಂದಿನ ಜೀವನದಲ್ಲಿ ಇದನ್ನು ಕಾರ್ಯಗತಗೊಳಿಸಲು ಪ್ರಯತ್ನಿಸಿಬೇಡಿ. ನೀವು ಸಾಮಾನ್ಯ, ಸಹಜ ವ್ಯಕ್ತಿಯಾಗಿ ಇರಿ. ಈ ಜ್ಞಾನ ಸ್ವಯಂಚಾಲಿತವಾಗಿ ನಿಮ್ಮ ಜೀವನದಲ್ಲಿ ಉಪಯೋಗಕ್ಕೆ ಬರುತ್ತದೆ.
ಅದು ಜ್ಞಾನದ ಕರ್ತವ್ಯ. ಇದನ್ನು ಕಾರ್ಯಗತಗೊಳಿಸಲು ಯಾವುದೇ ಪ್ರಯತ್ನ ಇಲ್ಲ. ಇದು ಸಹಜ, ಇದು ಸ್ವಯಂಚಾಲಿತವಾಗಿ ಪ್ರತಿಬಿಂಬಿಸುತ್ತದೆ.

ಪ್ರಶ್ನೆ: ಇಚ್ಛೆಗಳನ್ನು ಹೇಗೆ ಎದುರಿಸುವುದು? ನಾನು ಮಗು ಹೊಂದಲು ಬಯಸುವೆ, ಅದು ಹಲವಾರು ಯತ್ನಗಳ ನಂತರ ಇನ್ನೂ ಪೂರೈಸಿಲ್ಲ.

ಶ್ರೀ ಶ್ರೀ ರವಿ ಶಂಕರ್: ಬಯಕೆ ಈಡೇರಲಿ ಅತವಾ ಬಿಡಲಿ, ಸಂತೋಷವಾಗಿರಿ. ಬಯಕೆಯನ್ನು ಹಿಡಿದುಕೊಳ್ಳಬೇಡಿ.  ಏಕೆಂದರೆ ಒಂದು ಬಯಕೆ ಈಡೇರಿಸಿದರೆ, ಅದು ನಿಮ್ಮನ್ನು ಬಯಕೆ ಹುಟ್ಟುವ ಮುನ್ನ ಇದ್ದ ಸ್ಥಾನದಲ್ಲೇ ಬಿಡುತ್ತದೆ. ಎಲ್ಲ  ಬಯಕೆಗಳನ್ನು ಈಡೇರಿಸಲಾಗುವುದಿಲ್ಲ. ಕೆಲವು ಈಡೇರುತ್ತವೆ, ಕೆಲವು ಈಡೇರುವುದಿಲ್ಲ.

ಆದರೆ ನೀವು ಒಂದು ನಿಲುವನ್ನು ತೆಗೆದುಕೊಳ್ಳಬೇಕು. ನಿಮಗೆ ಆ ನಿಲುವು ಏನು ಗೊತ್ತೇ?  ಏನೇ ಬಂದರೂ ನಾನು ಸಂತೋಷವಾಗಿರವೆನು. ಒಂಟಿಯಾಗಿ ಅಥವಾ ವಿವಾಹಿತನಾಗಿ, ನಾನು ಸಂತೋಷವಾಗಿರವೆನು. ನಿಮಗೆ ಬೇಕಾದರೆ, ನೀವು ಮದುವೆಯಾಗುವದಕ್ಕೆ ಹೆಚ್ಚು ಅವಕಾಶಗಳಿರುತ್ತವೆ. ಮತ್ತು ನೀವು ಆಗಲೇ ಮದುವೆಯಾಗಿದ್ದರೆ, ಆಗ ಅದು ಒಳ್ಳೆಯದು. ಆದರೂ ಸಂತೋಷವಾಗಿರಿ. ಮಗು ಇದ್ದರೂ ಅಥವಾ ಇಲ್ಲದಿದ್ದರೂ ಕೂಡ, ಸಂತೋಷವಾಗಿರಿ.

ನೀವು ಜೀವನದಲ್ಲಿ ಒಂದು ನಿರ್ಧಾರ ತೆಗೆದುಕೊಳ್ಳಬೇಕಾಗಿರುವುದೆಂದರೆ ‘ನಾನು ಯಾವುದೇ ಪರಿಸ್ಥಿತಿಯು ನನ್ನ ಸಂತೋಷವನ್ನು ತಗ್ಗಿಸುವುದಕ್ಕೆ ಅನುಮತಿಸುವುದಿಲ್ಲ’. ತಿಳಿಯಿತೆ? ಆ ನಿರ್ಧಾರವನ್ನು ನೀವೇ ತೆಗೆದುಕೊಳ್ಳಬೇಕು, ಬೇರೆ ಯಾರೂ ಅದನ್ನು ನಿಮ್ಮ ಪರ ತೆಗೆದುಕೊಳ್ಳಲಾಗುವುದಿಲ್ಲ.

ಪ್ರಶ್ನೆ: ನಿಮ್ಮ ಅಭಿಪ್ರಾಯದಲ್ಲಿ, ಸಾವಿನ ನಂತರ ಏನಿರುವುದು? ನೀವು ಪುನರ್ಜನ್ಮವನ್ನು ನಂಬುವಿರಾ?

ಶ್ರೀ ಶ್ರೀ ರವಿ ಶಂಕರ್: ನಾನು ಪುನರ್ಜನ್ಮವನ್ನು ನಂಬುವುದಿಲ್ಲ. ನನಗೆ ಅದು ಇರುವುದು ಗೊತ್ತು. ನೀವು ನಂಬಬೇಕಾಗಿರುವುದು  ಗೊತ್ತಿಲ್ಲದಿದ್ದನ್ನು ಮಾತ್ರ. ನನಗೆ ಅದು ಇರುವುದೆಂದು ಗೊತ್ತಿರುವಾಗ ನಾನು ಏಕೆ ನಂಬಬೇಕು?

ನೀವು ‘ನನ್ನ ವಾಹನ ಹೊರಗಿದೆ ಎಂದು ನಂಬುವೆ’ ಎಂದು ಹೇಳುವುದಿಲ್ಲ. ನಿಮ್ಮ ವಾಹನ ಹೊರಗೆ ನಿಲ್ಲಿಸಿದಾಗ, ನೀವು ಹೇಳುವಿರಿ, ‘ನನ್ನ ವಾಹನ ಹೊರಗಿದೆ’ ಎಂದು. ತಿಳಿಯಿತೆ?

ಈ ಜೀವನ ಒಂದು ವಿಶಾಲವಾದ ಜೀವನದ ಕೇವಲ ಒಂದು ಸಣ್ಣ ಭಾಗವಷ್ಟೇ. ಈ ಜೀವನ ಕೇವಲ ಒಂದು ಸಣ್ಣ ಚೂರು.

ಪ್ರಶ್ನೆ: ನಾನು ನಿಮ್ಮ ಟ್ವಿಟ್ಟರ್‌ ಖಾತೆಯ ಹಿಂಬಾಲಕ, ನೀವು ನಿಮ್ಮ ಟ್ವೀಟ್‌ಗಳನ್ನು ಸ್ವಂತ ಬರೆಯುವಿರಾ?

ಶ್ರೀ ಶ್ರೀ ರವಿ ಶಂಕರ್: ಹೌದು, ಈ ಬೆಳಿಗ್ಗೆ ನಾನು ಮೂರು ಬಾರಿ ಟ್ವೀಟ್ ಮಾಡಿದೆನು. ನಾನು ನನ್ನ ಟ್ವೀಟ್‌ಗಳನ್ನು ಸ್ವಂತ ಬರೆಯುವೆನು. ಒಮೊಮ್ಮೆ ನನ್ನ ಕಾರ್ಯದರ್ಶಿ ಅಥವಾ ಅದನ್ನು ಬೇರೊಬ್ಬರು ಮಾಡಲು ಕೇಳುವೆನು, ಆದರೆ ೯೫% ದಷ್ಟು ಸಮಯ ನಾನೇ ಟ್ವೀಟ್ ಮಾಡುವೆನು.

ಪ್ರಶ್ನೆ: ನಾನು ಅನೇಕ ವರ್ಷಗಳಿಂದ ಖಿನ್ನತೆಯನ್ನು ಶಮನಗೊಳಿಸುವ ಶಮನಕಾರಿಗಳನ್ನು ಸೇವಿಸುತ್ತಿದ್ದೆನು. ನಾನು ಈ ೨ ವರ್ಷಗಳಿಂದ  ಶಮನಕಾರಿಗಳನ್ನು ಸೇವಿಸುವುದನ್ನು ನಿಲ್ಲಿಸಿದ್ದೇನೆ. ನಾನು ಪ್ರತಿ ದಿನ ನನ್ನ ಸುದರ್ಶನಕ್ರಿಯೆ ಮಾಡುವೆನು, ಆದರೆ ನನ್ನ ಏಕಾಗ್ರತೆ ಮತ್ತು ನಿದ್ರೆ ಸಾಧಾರಣವಾಗಿಲ್ಲ, ಮತ್ತು ಇದು ನನ್ನ ಕೆಲಸದ ಮೇಲೆ ಪರಿಣಾಮ ಬೀರುತ್ತದೆ. ಕೆಲವೊಮ್ಮೆ ನನಗೆ ಅನ್ನಿಸುವುದು, ನಾನು ಶಮನಕಾರಿಗಳನ್ನು ಸೇವಿಸುತ್ತಿದ್ದ ಕಾಲದಲ್ಲಿ ನನ್ನ ಸ್ಥಿತಿ ಸುಧಾರಿಸಿತ್ತು ಎಂದು. ನನ್ನ ಕೆಲಸ ಪೇಚಿನಲ್ಲಿದೆಯಾದರೆ ವೈದ್ಯರ ಸಲಹೆಯ ಮೇರೆಗೆ ಶಮನಕಾರಿಗಳನ್ನು ತೆಗೆದುಕೊಳ್ಳಲೇ, ಅಥವಾ ಏನೇ ಆದರೂ ತಡೆದುಕೊಳ್ಳಲೇ.

ಶ್ರೀ ಶ್ರೀ ರವಿ ಶಂಕರ್: ನಾನು ಏನೇ ಆದರೂ ತಡೆದುಕೊಳ್ಳಿ ಎಂದು ಹೇಳಲಾರೆ, ಆದರೆ ತಡೆದುಕೊಳ್ಳಿ. ಮತ್ತು ಯೋಗ ಮಾಡಿ. ಬೆಳಗ್ಗೆ ಒಂದು ಗಂಟೆಯ ಕಾಲ ನಿಮ್ಮ ದೇಹವನ್ನು ಚಾಚುವುದರಲ್ಲಿ ಮತ್ತು ದೇಹದ ಸಮತೋಲನೆ ಮಾಡುವುದರಲ್ಲಿ ಕಳೆಯಿರಿ.

ಇಂದು ಚೆನ್ನಾಗಿತ್ತು (ಬೆಳಿಗಿನ ಯೋಗ ಅಧಿವೇಶನ), ಅಲ್ಲವೆ? ನಿಮ್ಮಲ್ಲಿ ಎಷ್ಟು ಜನ ಅದನ್ನು ಆನಂದಿಸಿದಿರಿ? ನೀವು ಇದನ್ನು ಮಾಡಿದಾಗ,  ಏಕಾಗ್ರತೆ ಉತ್ತಮಗೊಳ್ಳುತ್ತದೆ. ಅದಕ್ಕಾಗಿಯೇ ನಾನು ನಿಮಗೆ ತೆರೆದ ಕಣ್ಣಿನ ಧ್ಯಾನ ನೀಡಿದೆನು. ನನಗೆ ಗೊತ್ತು ಅನೇಕ ಬಾರಿ ನಿಮ್ಮ ಕಣ್ಣುಗಳು ಮುಚ್ಚಿದ್ದಾಗ ನೀವು ದೂರ ಹೋಗಲು ಪ್ರಾರಂಭಿಸುವಿರಿ, ಮತ್ತು ನೀವು ಗಾಳಿಯಲ್ಲಿ ಕೋಟೆಗಳನ್ನು ನಿರ್ಮಿಸಲು ಆರಂಭಿಸುವಿರಿ. ಮತ್ತು ನಂತರ ನಾನು ನಿಮ್ಮ ಕಣ್ಣುಗಳು ತೆರೆದು ಇರಿಸಿಕೊಳ್ಳಲು ನೆನಪಿಸಬೇಕಾಗುವುದು!

ಆದ್ದರಿಂದ, ಈ ರೀತಿಯ ಕೆಲವು ನಿಮಿಷಗಳ ಧ್ಯಾನ ಮಾಡಿ ಮತ್ತು ನೀವು ನಿಮ್ಮ ಏಕಾಗ್ರತೆಯ ಶಕ್ತಿಗೆ ಮರಳಿರುತ್ತೀರಿ. ನನ್ನನ್ನು ನೋಡಿ, ಜನರು ಪ್ರತಿದಿನ ನನಗೆ ಅನೇಕ ಪ್ರಶ್ನೆಗಳನ್ನು ಕೇಳುವರು, ನಿಮಗೆ ಅದರ ಕಲ್ಪನೆಯೂ ಇಲ್ಲ.

ನಮ್ಮದು ಒಂದು ಸಣ್ಣ ಕೋರ್ಸ್, ಆದರೆ ಕೆನಡಾದಲ್ಲಿ ೩೦೦೦ ಜನರು, ಮತ್ತು ಅಮೇರಿಕದಲ್ಲಿ ೩೦೦೦ ಜನರಿರುತ್ತಾರೆ, ಮತ್ತು ಎಲ್ಲರೂ ಹೋಗುವಾಗ ಮತ್ತು ಬರುವಾಗ ಅದೇ ಪ್ರಶ್ನೆಯನ್ನು ಐದು ಬಾರಿ ನನ್ನನ್ನು ಕೇಳುತ್ತಾ ಇರುತ್ತಾರೆ, ಮತ್ತು ನಾನು ಅದೇ ಉತ್ತರವನ್ನು ಪ್ರತಿಸಲ ಕೊಡುವೆನು. ಮತ್ತು ನನಗೆ ಅವರು ಐದು ಬಾರಿ ಕೇಳುತ್ತಿರುವರು ಎಂದು ತಿಳಿದಿದೆ ಮತ್ತು ನಾನು ತುಂಬಾ ಎಚ್ಚರಿಕೆಯಿಂದ ಇರಬೇಕು!

ನಾನು ಎಲ್ಲರನ್ನು ನೋಡುವೆನೆಂಬುದನ್ನು ಖಚಿತಪಡಿಸಿಕೊಳ್ಳುವೆನು, ನಾನು ಒಂದು ವ್ಯಕ್ತಿಯನ್ನು ಗಮನಿಸದಿದ್ದಲ್ಲಿ ನಂತರ ಆ ವ್ಯಕ್ತಿ ಬರೆಯುತ್ತಾರೆ ‘ನೀವು ನನ್ನನು ಅಲಕ್ಷ್ಯ ಮಾಡಿದಿರಿ, ನೀವು ನನ್ನನ್ನು ಇಷ್ಟಪಡುವುದಿಲ್ಲ. ನೀವು ನನ್ನನ್ನು ಪ್ರೀತಿಸುವುದಿಲ್ಲ’.
ವಾಸ್ತವವಾಗಿ, ನಾನು ಅವರನ್ನು ತಪ್ಪಿಸಿಲ್ಲ. ನಾನು ಅವರನ್ನು ಗಮನಿಸುವಾಗ, ಅವರು ಬೇರೆ ಎಲ್ಲೋ ನೋಡುತ್ತಿರುವರು! ಆದರೆ ಅವರು ಹೇಳುವರು, ‘ನೀವು ನನ್ನನ್ನು ನೋಡಿ ನಗಲಿಲ್ಲ’.

ನೋಡಿ ನಾನು ಎಲ್ಲರನ್ನೂ ನೂರಕ್ಕೆ ನೂರರಷ್ಟು ಗಮನಿಸುವೆನು. ನೀವು ಸಹ ಹಾಗೆ ಮಾಡಬಹುದು.

ಪ್ರಶ್ನೆ: ಆತ್ಮೀಯ ಗುರುದೇವ, ಕಳೆದ ಕೆಲವು ವರ್ಷಗಳಲ್ಲಿ ಅನೇಕ ಜನರು ನಾಲ್ಕನೇ ಆಯಾಮದ ಒಳಗೆ ನಮ್ಮ ಗ್ರಹದ ಪ್ರವೇಶದ ಬಗ್ಗೆ ಮಾತನಾಡಿರುವರು. ನೀವು ಇದರ ಬಗ್ಗೆ ಏನು ಹೇಳುವಿರಿ?

ಶ್ರೀ ಶ್ರೀ ರವಿ ಶಂಕರ್: ನೀವು ಯಾವುದೇ ಆಯಾಮವನ್ನು ಇಲ್ಲಿಯೇ ತಿಳಿದುಕೊಳ್ಳುವವರೆಗೂ, ಇಂತಹ ಮಾತುಗಳಿಂದ ಪ್ರಭಾವಿತರಾಗಬೇಡಿ. ಇದು ರೋಚಕತೆ ಸೃಷ್ಟಿಸಲು ಕೇವಲ ಒಂದು ಮಾರ್ಗ.

ಇದು ಜನರು ಡಿಸೆಂಬರ್ ೨೦೧೨ ರಲ್ಲಿ ಭೂಮಿಯು ಕೊನೆಗೊಳ್ಳುವ ಬಗ್ಗೆ, ನನ್ನನ್ನು ಹಲವು ನೂರು ಸಾವಿರ ಬಾರಿ ಕೇಳಿದ ಹಾಗೆ. ಓ ದೇವರೇ! ನಾನು ಹೋದ ಕಡೆಯಲ್ಲ,  ನಾನು ಕೇಳಿದ್ದು ಭೂಮಿಯು ಕೊನೆಗೊಳ್ಳುತ್ತಿದೆ ಎಂದು.

ನಾನು ಹೇಳಿದ್ದು, ‘ನಿಜವಾಗಿಯೂ ಹಾಗೆ ಆಗುವುದಿಲ್ಲ, ಎಲ್ಲವೂ ಎಂದಿನಂತೆ ಇರುತ್ತದೆ'.

ಎಲ್ಲವೂ ಮುಚ್ಚಿ ಹೋಗುತ್ತದೆ ಎಂದು ಯೋಚಿಸಿ, ಜನರು ಆರು ತಿಂಗಳಿಗಾಗುವಷ್ಟು ಹಾಲಿನ ಪುಡಿ ಮತ್ತು ದಿನಸಿ ಸಾಮಾನುಗಳನ್ನು ತಮ್ಮ ನೆಲಮಾಳಿಗೆಯಲ್ಲಿ ಸಂಗ್ರಹಿಸಲು ಆರಂಭಿಸಿದರು.

ಇವೆಲ್ಲ ಜನರು ಬಯಸುವ ಚಿಕ್ಕ ರೋಚಕತೆಗಳು, ಮತ್ತು ಆದ್ದರಿಂದ ಅವರು ಇಂತಹ ಕಲ್ಪನೆಗಳನ್ನು ಮತ್ತೆ ಮತ್ತೆ ಆಚೆ ತರುತ್ತಾರೆ. ಎಲ್ಲಾ ಆಯಾಮಗಳು ಇಲ್ಲಿಯೇ ಇವೆ ಎಂದು ತಿಳಿಯಿರಿ, ಚಿಂತೆ ಮಾಡಬೇಡಿ ಮತ್ತು ಸಂತೋಷವಾಗಿರಿ.

ಮಂಗಳವಾರ, ಜುಲೈ 30, 2013

ಧರ್ಮದಿಂದ ಆಧ್ಯಾತ್ಮದ ಕಡೆಗೆ

ಬಾಡ್ ಅಂತೋಗಸ್ಟ್, ಜರ್ಮನಿ
೩೦ ಜುಲೈ ೨೦೧೩

ಪ್ರಶ್ನೆ: ಧರ್ಮವು ನನ್ನ ಜೀವನದಲ್ಲಿ ಒಂದು ತಡೆಯಾಗಿದೆ. ನನಗೆ ಮುಂದಕ್ಕೆ ಸಾಗಲು ಸಾಧ್ಯವಾಗುತ್ತಿಲ್ಲ. ನಾನೇನು ಮಾಡಬೇಕು?

ಶ್ರೀ ಶ್ರೀ ರವಿ ಶಂಕರ್: ಪರವಾಗಿಲ್ಲ. ಧರ್ಮದಿಂದ ಆಧ್ಯಾತ್ಮದ ಕಡೆಗೆ ಸಾಗು. ನೀನೊಬ್ಬ ಆಧ್ಯಾತ್ಮಿಕ ಜೀವವಾಗಿರುವೆ ಮತ್ತು ಅಷ್ಟು ಸಾಕು. ಪ್ರತಿಯೊಂದು ಧರ್ಮವೂ ಕೆಲವು ಒಳ್ಳೆಯ ವಿಷಯಗಳನ್ನು ನೀಡುತ್ತದೆ. ಪ್ರಪಂಚದಲ್ಲಿರುವ ಎಲ್ಲಾ ಧರ್ಮಗಳಿಂದ ಸ್ವಲ್ಪ ಸ್ವಲ್ಪ ತೆಗೆದುಕೊಂಡು ಮುಂದೆ ಸಾಗು. ನೀನು ಅದರೊಂದಿಗೆ ಸಿಕ್ಕಿಹಾಕಿಕೊಳ್ಳಬೇಕಾಗಿಲ್ಲ. ಚಿಂತಿಸಬೇಡ.

ನೀನು ಅನುಮತಿಸದೇ ಇದ್ದರೆ ಯಾವುದೂ ಒಂದು ತಡೆಯಾಗಲು ಸಾಧ್ಯವಿಲ್ಲ. ನೀನು, ನಿನ್ನದೇ ಆದ ಮನಸ್ಸು ಅದನ್ನೊಂದು ತಡೆಯನ್ನಾಗಿ ಮಾಡುವುದು. ಬಹುಶಃ ನೀನು ದೇವರ ವಿರುದ್ಧ ಪಾಪ ಮಾಡುತ್ತಿರುವೆಯೇನೋ ಎಂಬಂತಹ ಪಾಪಪ್ರಜ್ಞೆ ನಿನ್ನಲ್ಲಿರುವ ಕಾರಣದಿಂದ. ಆಧ್ಯಾತ್ಮಿಕ ವ್ಯಕ್ತಿಯಾಗಿರುವುದು ಒಂದು ಪಾಪವಾಗಿರಲು ಹೇಗೆ ಸಾಧ್ಯ! ಸಂತೋಷವಾಗಿರುವುದು ಒಂದು ಪಾಪವಾಗಿರಲು ಹೇಗೆ ಸಾಧ್ಯ? ಪ್ರೇಮಮಯಿಯಾಗಿರುವುದು ಮತ್ತು ಪ್ರಪಂಚದಲ್ಲಿ ಒಳ್ಳೆಯದನ್ನು ಮಾಡುವುದು ಒಂದು ಪಾಪವಾಗಿರಲು ಹೇಗೆ ಸಾಧ್ಯ? ಸ್ಥಿರವಾಗುವುದು, ಶಾಂತವಾಗುವುದು ಮತ್ತು ಸಮರ್ಪಿತನಾಗಿರುವುದು ಒಂದು ಪಾಪವಾಗಿರಲು ಹೇಗೆ ಸಾಧ್ಯ?

ಜನರ ಮನಸ್ಸುಗಳೊಳಗೆ ತಪ್ಪಿತಸ್ಥ ಮನೋಭಾವ ಮತ್ತು ಪಾಪದ ಭಯಗಳನ್ನು ಪ್ರೇರಿತಗೊಳಿಸಲಾಗಿದೆ, "ಓ ಇದನ್ನು ಮಾಡಬೇಡ, ದೇವರು ನಿನಗೆ ಶಿಕ್ಷೆ ನೀಡುವನು." ಸಂಪೂರ್ಣ ಹತಾಶೆ ಮತ್ತು ಬಲಹೀನತೆಯ ಒಂದು ಭಾವವು ಬರುತ್ತದೆ.

ನಾನು ನಿಮಗೆ ಹೇಳುತ್ತೇನೆ ಕೇಳಿ, ನೀವೆಲ್ಲರೂ ವಜ್ರಗಳಂತೆ. ನೀವು ಆನಂದ ಮತ್ತು ಪ್ರೇಮಗಳ ಆಳವಾದ ಚೈತನ್ಯವಾಗಿರುವಿರಿ. ಯೋಗ ಮತ್ತು ಧ್ಯಾನಗಳನ್ನು ಮಾಡುವುದಕ್ಕಾಗಿ ದೇವರು ನಿಮ್ಮ ಮೇಲೆ ಕೋಪಗೊಳ್ಳನು. ಪೌರಾತ್ಯ ವಿಷಯಗಳು ಸೈತಾನಿಕವಾದವು, ದೇವರು ನಿಮ್ಮ ಮೇಲೆ ಕೋಪಗೊಳ್ಳುವನು ಎಂಬಂತಹ ಮಾತುಗಳನ್ನು ಹರಡುವ ಕೆಲವು ಜನರಿದ್ದಾರೆ. ಇದು ಬಹಳ ಮೂರ್ಖತನ!

ನಿನ್ನೆ ಒಬ್ಬನು ನನ್ನಲ್ಲಿ ಹೇಳುತ್ತಿದ್ದನು, "ಗುರುದೇವ, ನನ್ನ ಸಹಪಾಠಿ ಮತಪರಿವರ್ತನೆಯಾದನು. ಅವನನ್ನು ಬಾಪ್ಟೈಸ್ (ನಾಮಕರಣ) ಮಾಡಲಾಯಿತು. ಈಗ ಅವನು ನನ್ನ ಮನೆಗೆ ಬರುವಾಗ, ಅವನು ಪ್ರಸಾದವನ್ನು ಕೂಡಾ ತೆಗೆದುಕೊಳ್ಳುವುದಿಲ್ಲ. ದೇವಸ್ಥಾನದಲ್ಲಿ ಒಂದು ಮದುವೆಗೆ ನಾನು ಅವನನ್ನು ಕರೆದರೆ ಅವನು ನನ್ನೊಂದಿಗೆ ದೇವಸ್ಥಾನಕ್ಕೆ ಬರುವುದಿಲ್ಲ, ಯಾಕೆಂದರೆ ತಾನೊಂದು ದೇವಸ್ಥಾನಕ್ಕೆ ಹೋದರೆ ತಾನು ಕ್ರಿಸ್ತನಿಗೆ ವಂಚನೆ ಮಾಡಿದಂತಾಗುತ್ತದೆಯೆಂದು ಅವನಂದುಕೊಳ್ಳುತ್ತಾನೆ. ನೀಡಲಾಗುವ ಆಹರವನ್ನು ಅವನು ಮುಟ್ಟುವುದು ಕೂಡಾ ಇಲ್ಲ" ಎಂದು.

ಇದು ಬಹಳ ಮೂರ್ಖತನ. ಇದೆಲ್ಲಾ ತಪ್ಪಾದ ಮಾಹಿತಿ. ಹೀಗೆಯೇ ಅವರಲ್ಲಿ ಪಾಪಪ್ರಜ್ಞೆ ಮತ್ತು ಭಯಗಳನ್ನು ತರುವುದು. ಇದು ತಪ್ಪು.

ನಾವು ಪ್ರತಿಯೊಂದು ಧರ್ಮವನ್ನೂ ಗೌರವಿಸಬೇಕು, ನಾವು ಎಲ್ಲರನ್ನೂ ಜೊತೆಯಲ್ಲಿ ಕರೆದೊಯ್ಯಬೇಕು. ದೇವರು ನಿಮ್ಮ ಮೇಲೆ ಕೋಪಗೊಳ್ಳನು ಮತ್ತು ನೀವು ನರಕಕ್ಕೆ ಹೋಗಲಾರಿರಿ ಎಂಬುದರ ಬಗ್ಗೆ ನಾನು ನಿಮಗೆ ಖಾತರಿ ನೀಡಬಲ್ಲೆನು. ಹಾಗಾಗಿ ಅಂತಹ ವಿಷಯಗಳನ್ನು ಪ್ರೇರೇಪಿಸುವ ಜನರ ಬಗ್ಗೆ ಚಿಂತಿಸಬೇಡಿ. ದೃಢ ವಿಶ್ವಾಸದೊಂದಿಗೆ ಸಾಗಿ.

ಪ್ರಶ್ನೆ: ಇದು ನನಗೆ ಸರಿಯಾದ ಜಾಗವೇ? ಸಾಮಾನ್ಯ ಜೀವನಕ್ಕೆ ಹಿಂದಿರುಗುವ ಪ್ರಶ್ನೆಯೇ ಇಲ್ಲ. ನನ್ನನ್ನು ಪ್ರೀತಿಸುವ ನನ್ನ ಪತಿಗೆ ಕೂಡಾ ಆರ್ಟ್ ಆಫ್ ಲಿವಿಂಗ್‌ನಲ್ಲಿನ ನನ್ನ ಚಟುವಟಿಕೆಗಳನ್ನು ಸ್ವೀಕರಿಸಲು ಸಾಧ್ಯವಾಗಿಲ್ಲ. ನನಗೆ ಹುಚ್ಚು ಹಿಡಿಯುತ್ತಿದೆಯೆಂದು ಅವರಿಗೆ ಭಯವಾಗಿದೆ!

ಶ್ರೀ ಶ್ರೀ ರವಿ ಶಂಕರ್: ವಿಷಯಗಳನ್ನು ಸಂತುಲನದಲ್ಲಿರಿಸಿಕೋ. ಯಾರನ್ನೂ ಹೆದರಿಸಬೇಡ. ನೀನು ಜೀವನವನ್ನು ಸಂತುಲನಗೊಳಿಸಬೇಕು. ಜನರು ಅರ್ಥಮಾಡಿಕೊಳ್ಳುವಂತೆ ಮಾಡು.

ಇದು (ಆರ್ಟ್ ಆಫ್ ಲಿವಿಂಗ್) ಅತಿರೇಕವಲ್ಲ, ಇದೊಂದು ಸಾಮಾನ್ಯವಾದ ಜೀವನ; ಸಂತೋಷವಾಗಿರುವುದು, ಕೇಂದ್ರಿತರಾಗಿರುವುದು ಮತ್ತು ಆನಂದ ಹಾಗೂ ಸಂತೋಷಗಳ ಸಂದೇಶವನ್ನು ಹರಡುವುದು. ನಾವು ನಮ್ಮ ಅಭಿವ್ಯಕ್ತಿಯನ್ನು ಸುಧಾರಿಸಬೇಕಾಗಿದೆ.

ಪ್ರಶ್ನೆ: ನಾನಿಲ್ಲಿ ಯಾಕಿರುವೆನು? ನಾನು ಈ ಕೋರ್ಸನ್ನು ಯಾಕೆ ಮಾಡಿದೆ? ನಾನು ಸಾಮಾನ್ಯವಾಗಿರುವೆನೇ?

ಶ್ರೀ ಶ್ರೀ ರವಿ ಶಂಕರ್: ಸಾಮಾನ್ಯತೆಗೆ ಹಲವಾರು ಮಾನದಂಡಗಳಿವೆ. ಒಂದು ಕೆಳಗಿನ ದರ್ಜೆಯಿಂದ, ನೀನು ಸಾಮಾನ್ಯನಾಗಿಲ್ಲದೇ ಇರಬಹುದು. ಒಂದು ಉನ್ನತ ದರ್ಜೆಯಿಂದ, ನೀನು ಸಾಮಾನ್ಯನಾಗಿರುವೆ. ಪುನಃ, ಇನ್ನೂ ಹೆಚ್ಚಿನ ಎತ್ತರದ ದರ್ಜೆಯಿಂದ ನೀನು ಸಾಮಾನ್ಯನಾಗಿಲ್ಲದೇ ಇದ್ದರೆ, ಆಗ ನೀನು ಎಷ್ಟೋ ಹೆಚ್ಚು ಎತ್ತರಕ್ಕೆ ಹೋಗುತ್ತಿರಬೇಕಾಗುತ್ತದೆ.

ಹಾಗಾಗಿ, ಸಾಮಾನ್ಯನೆಂದರೆ ನಿನ್ನ ಅರ್ಥದಲ್ಲಿ ಏನು? ನೀನು ಇಲ್ಲಿ ಏಕಿರುವೆ? ನೀನು ಈ ಪ್ರಶ್ನೆಯನ್ನು ಒಂದು ಇನ್ನೂ ದೊಡ್ಡದಾದ ಪ್ರಾಸಂಗಿಕತೆಯಲ್ಲಿ ಕೇಳಬೇಕು. ನಾನು ಇಲ್ಲಿ ಈ ಭೂಮಿಯ ಮೇಲೆ ಯಾಕಿರುವೆನು, ಅದೊಂದು ನಿಜವಾಗಿಯೂ ಅಮೂಲ್ಯವಾದ ಪ್ರಶ್ನೆ.

ನಾನು ಈ ಪ್ರಶ್ನೆಯನ್ನು ನಿನಗೆ ಬಿಡುತ್ತೇನೆ, ನೀನು ಅದನ್ನು ಇಟ್ಟುಕೊಳ್ಳಬೇಕು. ನಿನ್ನಲ್ಲಿ ನೀನೇ ಮತ್ತೆ ಮತ್ತೆ ಕೇಳಿಕೋ. ಅದು ನಿನ್ನನ್ನು ಒಬ್ಬ ಮಹಾನ್ ತತ್ವಜ್ಞಾನಿಯನ್ನಾಗಿ ಮಾಡುವುದು.

ಪ್ರಶ್ನೆ: ನನ್ನ ಸಹೋದ್ಯೋಗಿಗಳು ಯಾವತ್ತೂ ನನ್ನ ಚೈತನ್ಯವನ್ನು ತೆಗೆದುಹಾಕುತ್ತಾರೆ. ನನ್ನ ಚೈತನ್ಯವನ್ನು ಕಳೆದುಕೊಳ್ಳದೇ ಇರಲು ನಾನೇನು ಮಾಡಬಹುದು?

ಶ್ರೀ ಶ್ರೀ ರವಿ ಶಂಕರ್: ಪರವಾಗಿಲ್ಲ, ಅವರಿಗೆ ಹೆಚ್ಚು ಕೊಡು! ಅವರೆಲ್ಲರೂ ನಿನ್ನಿಂದ ಎಷ್ಟನ್ನು ತೆಗೆದುಕೊಳ್ಳಬಲ್ಲರೋ ಅದಕ್ಕಿಂತ ಎಷ್ಟೋ ಹೆಚ್ಚು ಚೈತನ್ಯ ನಿನ್ನಲ್ಲಿದೆ. ನೀನು ನನ್ನ ಬೆಳಕನ್ನು ದೂರ ಒಯ್ಯುತ್ತಿರುವೆಯೆಂದು ಸೂರ್ಯ ಅಥವಾ ಚಂದ್ರ ಯಾವತ್ತೂ ಹೇಳುವುದಿಲ್ಲ! ನೀನು ಚೈತನ್ಯದ ಮೂಲವಾಗಿರುವೆ. ನಾನು ನಿನ್ನೊಂದಿಗಿದ್ದೇನೆ. ನಾನು ನಿನಗೆ ಚೈತನ್ಯದ ದೀರ್ಘಕಾಲಿಕ ಪೂರೈಕೆಯನ್ನು ನೀಡುತ್ತೇನೆ, ಚಿಂತಿಸಬೇಡ. ನಿನ್ನ ಗಮನವನ್ನು ಅಲ್ಲಿ ಹಾಕಬೇಡ, ಅದನ್ನು ಇಲ್ಲಿ ಹಾಕು. ಅದನ್ನು ನೀನು ಇಲ್ಲಿ ಹಾಕಿದರೆ ನಿನಗೆ ಹೆಚ್ಚು ಚೈತನ್ಯ ಸಿಗುತ್ತದೆ. ನೀನದನ್ನು ಅಲ್ಲಿ ಹಾಕಿದರೆ ಆಗ, ನಿನ್ನ ಚೈತನ್ಯವು ಬರಿದಾಗುತ್ತಿರುವುದಾಗಿ ನಿನಗೆ ಅನ್ನಿಸುತ್ತದೆ.

ಪ್ರಶ್ನೆ: ನಾನು ಕೋಪವನ್ನು ತಡೆಹಿಡಿಯಬೇಕೇ ಅಥವಾ ವ್ಯಕ್ತಪಡಿಸಬೇಕೇ?

ಶ್ರೀ ಶ್ರೀ ರವಿ ಶಂಕರ್: ಕೆಲವೊಮ್ಮೆ ವ್ಯಕ್ತಪಡಿಸು, ಕೆಲವೊಮ್ಮೆ ತಡೆಹಿಡಿ. ಅದಕ್ಕೆ ಯಾವುದೇ ಏಕೈಕ ಉತ್ತರವಿಲ್ಲ.
ನೀನದನ್ನು ಯಾವಾಗಲೂ ವ್ಯಕ್ತಪಡಿಸಲು ಸಾಧ್ಯವಿಲ್ಲ, ನೀನು ನಿನಗೆ ಮತ್ತು ನಿನ್ನ ಸುತ್ತಲಿರುವ ಇತರರಿಗೆ ಬಹಳಷ್ಟು ಹಾನಿಯನ್ನುಂಟುಮಾಡುವೆ. ಮತ್ತೆ, ನೀನದನ್ನು ಯಾವಾಗಲೂ ತಡೆಹಿಡಿಯಲು ಸಾಧ್ಯವಿಲ್ಲ, ಕೆಲವೊಮ್ಮೆ ನೀನದನ್ನು ವ್ಯಕ್ತಪಡಿಸಬೇಕು. ಇಲ್ಲದಿದ್ದರೆ ನೀನು ಸ್ಫೋಟಗೊಳ್ಳುವೆ. ಹಾಗಾಗಿ ನಿನ್ನಲ್ಲಿ ಆ ಸರಿಯಾದ ಸಂತುಲನವಿರಬೇಕು.

ಬುದ್ಧಿವಂತಿಕೆಯೆಂದರೆ, ಅದನ್ನು ಯಾವಾಗ ವ್ಯಕ್ತಪಡಿಸಬೇಕು ಮತ್ತು ಅದನ್ನು ಯಾವಾಗ ತಡೆಹಿಡಿಯಬೇಕು ಎಂಬುದನ್ನು ತಿಳಿದಿರುವುದು.

ಪ್ರಶ್ನೆ: ಒಂದೆರಡು ಸಂಬಂಧಗಳಲ್ಲಿ ಸೋತ ಬಳಿಕ, ಇನ್ನೊಂದು ಸಂಬಂಧದಲ್ಲಿ ಇರಬೇಕೆಂಬ ಬಯಕೆಯನ್ನು ನಾನು ಜಯಿಸುವುದು ಹೇಗೆ? ನನಗೊಬ್ಬ ಸಂಗಾತಿಯಿದ್ದರೆ ಚೆನ್ನಾಗಿತ್ತೆಂದು ನಾನು ಇಚ್ಛಿಸುವಾಗ ನನಗೆ ಪಾಪಪ್ರಜ್ಞೆಯುಂಟಾಗುತ್ತದೆ, ಯಾಕೆಂದರೆ ಹಿಂದೆ ನಾನು ಸೋತಿರುವೆನು. 

ಶ್ರೀ ಶ್ರೀ ರವಿ ಶಂಕರ್: ಸರಿ, ನೀನು ಮಾಡಬಹುದಾದ ಎರಡು ಸಂಗತಿಗಳಿವೆ.

೧. ಅದು (ಸಂಬಂಧ) ನಿನಗಿರುವುದಲ್ಲ ಎಂದು ನಿನಗನ್ನಿಸಿದರೆ, ನೀನು ಮುಂದೆ ಸಾಗು, ಒಂದು ಸಿಂಹದಂತೆ ಒಬ್ಬನೇ ನಡೆ.

೨. ನಿನಗೆ ನಿಜವಾಗಿಯೂ ಅದರ ಅಗತ್ಯವಿದೆಯೆಂದು ನಿನಗನ್ನಿಸಿದರೆ, ಆಗ ನೀನು ಯಶಸ್ವಿಯಾಗುವಲ್ಲಿಯವರೆಗೆ ಮತ್ತೆ ಪ್ರಯತ್ನ ಮಾಡು. ನಿನ್ನ ಜೀವಮಾನವಿಡೀ ಪ್ರಯತ್ನಪಡುತ್ತಾ ಇರು, ನೀನು ಗೋರಿಗೆ ಹೋಗುವವರೆಗೆ. ನೀನು ಅದರ ಬಗ್ಗೆ ಅಷ್ಟೊಂದು ದೃಢವಾಗಿದ್ದರೆ, ನೀನು ಸ್ವರ್ಗದಲ್ಲಿ ಮತ್ತು ಅದರ ನಂತರ ಕೂಡಾ ಪ್ರಯತ್ನಿಸಬಹುದು.

ಈಗ ಸಂತೋಷವಾಗಿರು.

ಅದು ಕೆಲಸ ಮಾಡಿಲ್ಲದೇ ಇದ್ದರೆ, ನಿನ್ನನ್ನು ನೀನು ಹೆಚ್ಚು ದುಃಖಿತನನ್ನಾಗಿಸುವುದು ಯಾಕೆ? ಮತ್ತು ನೀನು ವಯೋಮಿತಿಯನ್ನು ದಾಟುತ್ತಿರುವುದಾದರೆ, ಏನಾದರೂ ಉತ್ತಮವಾದುದರ ಕಡೆಗೆ ಗಮನ ನೀಡು.

ಸಂಬಂಧವಿರುವುದು ಮಧ್ಯದ ಕೆಲವು ವರ್ಷಗಳಿಗೆ ಮಾತ್ರ.

ಸುಮ್ಮನೆ ನೋಡು, ನಿನ್ನ ಹದಿಹರೆಯದಲ್ಲಿ ನಿನಗೆ ಯಾವುದೇ ಸಂಬಂಧವಿರಲಿಲ್ಲ ಮತ್ತು ನಿನಗೆ ಯಾವುದೇ ಸಮಸ್ಯೆಯಿರಲಿಲ್ಲ.

ನೀನು ಸಂತೋಷವಾಗಿದ್ದೆ ಮತ್ತು ನಿನಗೆ ಬಹುಶಃ ೭೦ ವರ್ಷ ಕಳೆದ ಬಳಿಕ ನಿನಗೆ ಯಾವುದೇ ಸಂಬಂಧವಿರಲಾರದು.

ನಿನಗೊಂದು ಸಂಬಂಧವಿದ್ದರೂ ಕೂಡಾ, ಅದು ಕೇವಲ ಜಗಳ ಮಾಡಲಿಕ್ಕಾಗಿ ಇರುವುದು. ಅದರ ನಂತರ ಯಾವುದೇ ಸಂಬಂಧವಿರುವುದಿಲ್ಲ, ಅದೊಂದು ಒಡನಾಟದ ರೀತಿಯದ್ದಾಗಿರುವುದು. ಹಾಗಾಗಿ ಅದರಲ್ಲೇನಿದೆ ಮಹಾ?

ನಡುವೆಯಿರುವ ಜೀವನಕ್ಕಾಗಿ, ನಿನಗದು ಬೇಕೆಂದು ನಿನಗನ್ನಿಸಿದರೆ, ಆಗ ಅದನ್ನು ಹೊಂದು. ಅದು ಸರಿಹೋಗುತ್ತಿಲ್ಲವೆಂದು ನೀನು ಹೇಳುವುದಾದರೆ, ಆಗ ಮುಂದಕ್ಕೆ ಸಾಗು. ನಿನಗೆ ಬಹಳ ಆಸೆ ಹುಟ್ಟಿದರೆ, ಮತ್ತೊಮ್ಮೆ ಇನ್ನೊಬ್ಬ ವ್ಯಕ್ತಿಯೊಂದಿಗೆ ಪ್ರಯತ್ನಿಸು. ಅದು ಸರಿಹೋದರೆ, ಒಳ್ಳೆಯದು. ಇಲ್ಲದಿದ್ದರೆ, ಒಳ್ಳೆಯದು. ಯಾವ ರೀತಿಯಲ್ಲಾದರೂ ಅದು ಒಳ್ಳೆಯದು.

ಪ್ರಶ್ನೆ: ಅಚ್ಚುಮೆಚ್ಚಿನ ಗುರುದೇವ, ಸಾವಿನ ಬಳಿಕ ಅಂಗಗಳನ್ನು ದಾನ ಮಾಡುವುದರ ಬಗ್ಗೆ ನಿಮ್ಮ ಅನಿಸಿಕೆಯೇನು?

ಶ್ರೀ ಶ್ರೀ ರವಿ ಶಂಕರ್: ಅದು ಒಳ್ಳೆಯದು. ನಾವು ನಮ್ಮ ಅಂಗಾಂಗಗಳನ್ನು ದಾನ ಮಾಡಬಹುದು. ನಮ್ಮ ಅಂಗಾಂಗಗಳು ಬೇರೊಬ್ಬರ ನೆರವಿಗೆ ಬರಬಹುದಾದರೆ, ನಾವು ಸಂತೋಷಪಡಬೇಕು.

ನಿಮ್ಮ ಕಣ್ಣುಗಳು ಅಥವಾ ಇತರರಿಗೆ ಯಾವೆಲ್ಲಾ ಅಂಗಗಳು ಸಹಾಯಕವಾಗುವುವೋ ಅವುಗಳನ್ನು ದಾನ ಮಾಡಿ. ನೀವು ಇಲ್ಲಿ ಇಲ್ಲದೇ ಇದ್ದರೂ ಕೂಡಾ, ನಿಮ್ಮ ಕಣ್ಣುಗಳು, ಒಬ್ಬರಿಗೆ ನೋಡಲು ಸಹಾಯ ಮಾಡುತ್ತವೆ.

ಉದಾಹರಣೆಗೆ ನೀವು ಒಬ್ಬರಿಗೆ ಜ್ಞಾನವನ್ನು ಕೊಡುವಾಗ, ನೀವಿಲ್ಲದೇ ಇರುವಾಗಲೂ ಆ ಜ್ಞಾನವು ಮುಂದುವರಿಯುತ್ತದೆ. ತಲೆಮಾರುಗಳವರೆಗೆ ಜನರು ಅದನ್ನು ಆನಂದಿಸುವರು.

ಜ್ಞಾನ ಅಥವಾ ವಿವೇಕ ಉಳಿಯುವಷ್ಟು ಕಾಲ ಅಂಗಾಂಗಗಳು ಉಳಿಯದಿದ್ದರೂ ಸಹ, ಅವುಗಳು ಒಂದು ಅಲ್ಪಾವಧಿಯವರೆಗೆ ಬೇರೊಬ್ಬರಿಗೆ ಸಹಾಯ ಮಾಡಬಲ್ಲವು. ಉದ್ದೇಶವೇನೆಂದರೆ, ನಾವು ಯಾವುದೇ ರೀತಿಯಲ್ಲಿ ಪ್ರಯೋಜನಕಾರಿಯಾಗುವುದಾದರೆ; ಬದುಕಿರುವಾಗವಾಗಲೀ ಅಥವಾ ಸಾವಿನ ಬಳಿಕವಾಗಲೀ; ನಾವದನ್ನು ಸುಮ್ಮನೆ ಮಾಡಬೇಕು.

ಪ್ರಶ್ನೆ: ಒಬ್ಬರನ್ನು ದ್ವೇಷಿಸುವುದನ್ನು ನಿಲ್ಲಿಸುವುದು ಸಾಧ್ಯವೆಂದು ನಿಮಗೆ ನಿಜವಾಗಿಯೂ ಅನ್ನಿಸುವುದೇ?

ಶ್ರೀ ಶ್ರೀ ರವಿ ಶಂಕರ್: ದ್ವೇಷಿಸುವುದನ್ನು ನಿಲ್ಲಿಸಬೇಡ, ಅವರನ್ನು ದ್ವೇಷಿಸುತ್ತಾ ಇರು. ಮೈ ಡಿಯರ್, ನಿನಗೆ ಯಾವುದು ಅತ್ಯಂತ ಸುಲಭವೆನ್ನಿಸುವುದೋ ಅದನ್ನು ಮಾಡು!

ಏನನ್ನಾದರೂ ಮಾಡುವುದು ನಿನಗೆ ತೊಂದರೆ ನೀಡುತ್ತಿರುವುದಾದರೆ ಮತ್ತು ಅದನ್ನು ಮಾಡುವುದು ನಿನಗೆ ಅಷ್ಟೊಂದು ಕಷ್ಟವೆನ್ನಿಸಿದರೆ, ಆಗ ಅದನ್ನು ಮಾಡುವುದು ಯಾಕೆ?

ನೀನು ಏನಾದರೂ ಕಷ್ಟವಾದುದನ್ನು ಮಾಡಿಯೂ ನೀನು ದುಃಖಿತನಾದರೆ, ಅದರಲ್ಲೇನಿದೆ ಅರ್ಥ? ಯಾವುದು ಸುಲಭವೋ ಮತ್ತು ಯಾವುದು ನಿನ್ನನ್ನು ಸಂತೋಷಗೊಳಿಸುವುದೋ ಅದನ್ನು ಮಾಡು.

ಒಬ್ಬರನ್ನು ಪ್ರತಿದಿನವೂ ದ್ವೇಷಿಸುವುದು ನಿನಗೆ ಆರಾಮದಾಯಕವಾಗಿದ್ದರೆ, ನಿನ್ನನ್ನು ಸಂತೋಷಗೊಳಿಸುವುದಾದರೆ, ಸುಮ್ಮನೆ ಅದನ್ನು ಮಾಡು! ನಾನು ಕೇವಲ ನಿನ್ನ ಸಂತೋಷದ ಬಗ್ಗೆ ಮಾತ್ರ ಕಳಕಳಿ ಹೊಂದಿದ್ದೇನೆ. ಒಬ್ಬರನ್ನು ದ್ವೇಷಿಸುವುದು ನಿನಗೆ ಸಂತೋಷವನ್ನೂ ಆನಂದವನ್ನೂ ನೀಡುವುದಾಗಿದ್ದರೆ, ಅದನ್ನು ಸುಮ್ಮನೆ ಪಾಪಪ್ರಜ್ಞೆಯಿಲ್ಲದೆ ಮಾಡು. (ನಗು)

ಸಂಗತಿ ಇದಲ್ಲ. ನೀನು ಯಾರನ್ನಾದರೂ ದ್ವೇಷಿಸುವಾಗ, ಅವರು ನಿನ್ನ ಮನಸ್ಸನ್ನು ಆಕ್ರಮಿಸಿಕೊಳ್ಳುತ್ತಾರೆ. ಅವರು ನಿನ್ನ ಪ್ರಜ್ಞೆಯಲ್ಲಿ ಒಂದು ಸ್ಥಾನವನ್ನು ಆಕ್ರಮಿಸಿಕೊಳ್ಳುತ್ತಾರೆ ಮತ್ತು ನಿಧಾನವಾಗಿ ನೀನು ಅವರಂತೆ ಆಗುವೆ. ನೀನು ಒಬ್ಬರನ್ನು ದ್ವೇಷಿಸಬಾರದು ಯಾಕೆಂದರೆ, ನೀನು ಅವರಂತಾಗಲು ಬಯಸುವುದಿಲ್ಲ. ಇದು ಕಾರಣ.

ಪ್ರಶ್ನೆ: ಬೇರೆ ಬೇರೆ ಯೋಗ ತಂತ್ರಗಳನ್ನು ಮಿಶ್ರಗೊಳಿಸುವುದು ಸರಿಯೇ ಅಥವಾ ನಾವು ಒಂದು ದಾರಿಯನ್ನು ಕಂಡುಕೊಳ್ಳಬೇಕೇ?

ಶ್ರೀ ಶ್ರೀ ರವಿ ಶಂಕರ್: ಇಲ್ಲ, ಅವುಗಳನ್ನು ಮಿಶ್ರಗೊಳಿಸಬೇಡ, ಅದೊಂದು ಕಲಸುಮೇಲೋಗರವಾಗುತ್ತದೆ. ನಿನ್ನ ತಟ್ಟೆಯಲ್ಲಿ ಅಷ್ಟೊಂದು ಅದ್ಭುತವಾದ ಯೋಜನೆಯಿದೆ. ಎಲ್ಲವೂ ಒಂದೇ ವಿಚಾರರೇಖೆಯ ಮೇಲೆ ಆಧಾರಿತವಾದುದು, ಪ್ರಾಚೀನವಾದರೂ ಅಗಾಧವಾದ ಮತ್ತು ಹಾಗಿದ್ದರೂ ಆಧುನಿಕವಾದ ಒಂದು ತತ್ವಶಾಸ್ತ್ರ. ಹಾಗಾಗಿ ಕೇವಲ ಒಂದು ದಾರಿಯನ್ನು ಅನುಸರಿಸು. ಅದು ಅತ್ಯುತ್ತಮವಾದುದು.

ನಾನಿದನ್ನು ಬಹಳ ವರ್ಷಗಳ ನಂತರ ಹೇಳುತ್ತಿದ್ದೇನೆ, ಇಲ್ಲದಿದ್ದರೆ ನಾನು ಸಾಧಾರಣವಾಗಿ, ನಿಮಗೇನು ಇಷ್ಟವೋ ಅದನ್ನು ಮಾಡಿ ಎಂದು ಹೇಳುತ್ತೇನೆ. ಯಾಕೆಂದು ನಿಮಗೆ ಗೊತ್ತಾ? ಅಲ್ಲಿ ಇಲ್ಲಿ ಹೋಗಿ ತಮ್ಮ ಮನಸ್ಸನ್ನು ದೊಡ್ಡದಾಗಿ ಅಸ್ತವ್ಯಸ್ತ ಮಾಡಿಕೊಂಡು, ನಂತರ ನನ್ನ ಬಳಿಗೆ ಬರುವ ಹಲವಾರು ಜನರಿದ್ದಾರೆ. ಹಾಗಾಗಿ ಈಗ ನಾನು ಖಡಾಖಂಡಿತವಾಗಿ ಹೇಳಲು ಶುರು ಮಾಡಿದ್ದೇನೆ ಮತ್ತು ಹಾಗಾಗಿ ಅದನ್ನು ಮಾಡಬೇಡವೆಂದು ನಾನು ನಿನಗೆ ಹೇಳುತ್ತಿದ್ದೇನೆ.

ಅನೇಕ ಜನರು ಅಲ್ಲಿ ಇಲ್ಲಿ ಹೋದರು ಮತ್ತು ಅವರಿಗೆ ಈ ಜಪವನ್ನೋ ಅಥವಾ ಆ ತಂತ್ರವನ್ನೋ ಮಾಡಲು ಹೇಳಲಾಯಿತು ಹಾಗೂ ಆ ಬಳಿಕ ಅವರು ನಿಯಂತ್ರಣವಿಲ್ಲದೆಯೇ ನಡುಗತೊಡಗಿದರು. ಈ ಜನರಿಗೆ ಸಮಸ್ಯೆಗಳುಂಟಾದವು ಮತ್ತು ಆಸ್ಪತ್ರೆಗೆ ಹೋಗಬೇಕಾಯಿತು. ಕಳೆದ ಕೆಲವು ವರ್ಷಗಳಲ್ಲಿ ಹಲವಾರು ಅಂತಹ ಘಟನೆಗಳು ಸಂಭವಿಸಿವೆ. ಜನರಿಗೆ ಹೆಚ್ಚಿನ ಚಿಕಿತ್ಸೆಯನ್ನು ನೀಡಲೇಬೇಕಾಯಿತು ಮತ್ತು ಅವರಲ್ಲಿ ಕೆಲವರನ್ನು ಗುಣಪಡಿಸುವುದು ಬಹಳ ಕಷ್ಟವಾಯಿತು.

ನೀನು ಬೇರೆ ವಿವಿಧ ತಂತ್ರಗಳನ್ನು ಮಾಡಲು ಯಾಕೆ ಬಯಸುವೆ, ಅದರಲ್ಲೇನಿದೆ ಅರ್ಥ?  ನಿನ್ನ ತಟ್ಟೆಯಲ್ಲಿ ಏನೋ ಒಂದು ಬಹಳ ಚೆನ್ನಾಗಿರುವುದು ಇದೆ. ಆದರೆ ನಿನಗೆ ಲಾಭವೇ ಸಿಗುತ್ತಿಲ್ಲವಾದರೆ, ಅದು ನಿನಗೆ ಸಹಾಯವನ್ನೇ ಮಾಡುತ್ತಿಲ್ಲವೆಂದು ನೀನು ನನಗೆ ಹೇಳು. ಆಗ ಎಲ್ಲಿಗೆ ಹೋಗಬೇಕು, ನಿನಗೆ ಯಾವುದು ಸಹಾಯ ಮಾಡಬಲ್ಲದು ಎಂಬುದನ್ನು ನಾನು ತೋರಿಸುವೆನು.

ಪ್ರಶ್ನೆ: ನನ್ನಲ್ಲಿ ಮತ್ತು ದೇವರಲ್ಲಿ ವಿಶ್ವಾಸವನ್ನು ಹೆಚ್ಚಿಸುವುದು ಹೇಗೆ?

ಶ್ರೀ ಶ್ರೀ ರವಿ ಶಂಕರ್: ಅದರ ಬಗ್ಗೆ ಮರೆತುಬಿಡು!

ವಿಶ್ವಾಸವನ್ನು ಹೆಚ್ಚಿಸಲು ಪ್ರಯತ್ನಿಸಬೇಡ. ವಿಶ್ವಾಸವನ್ನು ಹೆಚ್ಚಿಸಲು ಬಯಸುವುದು ಸಮಸ್ಯೆಯಾಗಿದೆ. ನಿನಗೆ ಎಷ್ಟು ಬೇಕೋ ಅಷ್ಟು ನಿನ್ನಲ್ಲಿದೆ ಎಂಬುದನ್ನು ತಿಳಿ.

ನಿನ್ನ ಲೋಟವು ಎಷ್ಟು ದೊಡ್ಡದಿದೆಯೋ, ಅಷ್ಟು ಈಗಾಗಲೇ ಇದೆ. ವಿಶ್ರಾಮ ಮಾಡು ಮತ್ತು ನಿನ್ನ ಲೋಟವು ತುಂಬಿರುವುದು ನಿನಗೆ ಕಂಡುಬರುವುದು. ನಿನ್ನ ಲೋಟದ ಸಾಮರ್ಥ್ಯಕ್ಕಿಂತ ಹೆಚ್ಚಿನದನ್ನು ಹಿಡಿಯಲು ನಿನಗೆ ಸಾಧ್ಯವಿಲ್ಲ.

ಹಲವು ಸಲ ಜನರು ನನ್ನಲ್ಲಿ ಅವರಿಗೆ ಆಶೀರ್ವಾದ ನೀಡುವಂತೆ ಕೇಳಿಕೊಳ್ಳುತ್ತಾರೆ. ನಾನವರಿಗೆ, "ನನ್ನ ಆಶೀರ್ವಾದವು ಯಾವತ್ತೂ ಇದೆ! ಆದರೆ ನೀವು, ಪಡೆಯುವುದಕ್ಕಾಗಿರುವ ನಿಮ್ಮ ಸಾಮರ್ಥ್ಯದ ಕಡೆಗೆ ನೋಡಬೇಕು. ನೀವು ನನ್ನ ಬಳಿಗೆ ಒಂದು ಚಿಕ್ಕ ಲೋಟದೊಂದಿಗೆ ಬಂದು, ಅದರಲ್ಲಿ ನಿಮಗೆ ೧೦ ಲೀಟರ್ ಹಾಲು ಬೇಕೆಂದು ಹೇಳಿದರೆ, ಅದು ಹೇಗೆ ಸಾಧ್ಯ?

ಹತ್ತು ಲೀಟರ್‌ಗಳಷ್ಟು ಹಿಡಿಯುವ ಒಂದು ಪಾತ್ರೆಯನ್ನು ನೀವು ಒಯ್ಯಬೇಕು. ಒಂದು ಚಾ ಲೋಟದಲ್ಲಿ ನೀವು ೧೦ ಲೀಟರ್‌ಗಳನ್ನು ತುಂಬಿಸಲು ಸಾಧ್ಯವಿಲ್ಲ" ಎಂದು ಹೇಳುತ್ತೇನೆ.

ಹಾಗಾಗಿ ನಿನ್ನ ಸಾಮರ್ಥ್ಯವನ್ನು ಹೆಚ್ಚಿಸಿಕೋ ಮತ್ತು "ನನ್ನಲ್ಲಿ ಸಾಕಷ್ಟು ವಿಶ್ವಾಸವಿದೆ" ಎಂದು ನೀನು ಹೇಳುವಾಗ, ಅದು ತನ್ನಿಂತಾನೇ ಆಗುತ್ತಾ ಹೋಗುವುದು. "ನನ್ನಲ್ಲಿ ವಿಶ್ವಾಸವಿಲ್ಲ" ಎಂದು ಹೇಳಬೇಡ. ನಿನ್ನಲ್ಲಿ ಸಾಕಷ್ಟು ವಿಶ್ವಾಸವಿದೆ.  

ಶನಿವಾರ, ಜುಲೈ 27, 2013

ಪ್ರತಿಭೆ ಅರಳುವುದನ್ನು ತಪ್ಪಿಸಲು ಸಾಧ್ಯವಿಲ್ಲ

ಬೂನ್, ನಾರ್ತ್ ಕೆರೊಲಿನ
೨೭ ಜುಲೈ ೨೦೧೩

ಜೀವನವು ಒಂದು ಉತ್ಸವ. ನೀವು ಎಲ್ಲಾ ಅವಕಾಶಗಳನ್ನು ಸೆಳೆದುಕೊಂಡು ಉಪಯೋಗಿಸಿ, ಪ್ರತಿದಿನ, ಸಂಭ್ರಮಿಸಿ ಹಾಗು ಕೃತಜ್ಞರಾಗಿರಿ.

ಉತ್ಸವ  ಹೇಗೆ ಉಂಟಾಗುತ್ತದೆ? ಬರಿ ಬಲೂನು ಹಾಗು ಹೂವುಗಳನ್ನು ಇಡುವುದರಿಂದ ಉತ್ಸವವಾಗುವುದಿಲ್ಲ; ಅದು ನಿಮ್ಮೊಳಗಿಂದ ಉಂಟಾಗಬೇಕು. ಉತ್ಸವ ಉಂಟಾಗಲು ಅರ್ಹತೆ ಹಾಗು ನಿಯಮಗಳೇನು? ನೀವು ಇದರ ಬಗ್ಗೆ ಯೋಚಿಸಿರುವಿರಾ?

(ಸಭಿಕರು: ಕೃತಜ್ಞತೆ ಹಾಗು ಸಂತಸ ತುಂಬಿದೆ)

ಇದೊಂದು ಕೊಂಡಿಯಂತೆ: ನೀವು ಆಚರಿಸಿದರೆ, ಸಂತಸದಿಂದಿರುವಿರಿ; ನೀವು ಸಂತಸದಿಂದಿದ್ದರೆ, ಆಚರಿಸುವಿರಿ.

(ಸಭಿಕರು: ಸಂತುಷ್ಟಿ;ಒಳ್ಳೆಯ ಒಡನಾಟ; ಸಂಭ್ರಮಿಸಲು ಒಬ್ಬರ ಗೆಳೆತನ; ಮನೆಯಂತೆ ಅನುಭವ, ಸುಭಧ್ರತೆ.)

ಹೌದು, ಭಯವಂತರಾದರೆ ಸಂಭ್ರಮಿಸಲು ಸಾಧ್ಯವಿಲ್ಲ. ಪ್ರೀತಿಯಲ್ಲಿರಲು; ಜೊತೆಗಿದ್ದಂತ ಅನುಭವ.

(ಸಭಿಕರು: ಒಳ್ಳೆಯ ಭೋಜನ)

ಖಂಡಿತ, ಭೋಜನವು ಸಂಭ್ರಮದ ಒಂದು ಭಾಗ. ನೀವು ಹಸಿವಿಂದಿದ್ದರೆ, ಸಂಭ್ರಮಿಸಲು ಸಾಧ್ಯವಿಲ್ಲ.

(ಸಭಿಕರು; ಭೋಜನ ಹಾಗು ಪಾನೀಯದ ವಿನಿಮಯ?)

ಆಲಿಸಿ. ಭೋಜನ ಹಾಗು ಪಾನೀಯ ವಿನಿಮಯ ಮಾಡುವವರು ನಿಜವಾಗಿಯೂ ಸಂತಸದಿಂದಿರುವರೆ? ಅಥವಾ ಆಚರಣೆಯಲ್ಲಿ? ಅವರ ಮುಖಗಳನ್ನು ನೋಡಿರಿ!

ನಮಗೆ ಶುದ್ಧತೆಯ ಅರಿವು ಬೇಕು.

ನೀವು ಶುದ್ಧವಾಗಿದ್ದರೆ, ಉತ್ಸವಿಸುವಿರಿ. ನೀವು ಅಶುದ್ಧದಿಂದಿದ್ದರೆ, ಉತ್ಸವಿಸುವಿರ?

ಒಂದು ವೇಳೆ ನೀವು ಒಳಚರಂಡಿಯಲ್ಲಿ ಕೆಲಸ ಮಾಡುತ್ತಿರುವಾಗ ಯಾರಾದರು ನಿಮ್ಮನ್ನು ಉತ್ಸವಕ್ಕೆ ಕರೆದರೆ, ನೀವು ಹೇಳುವಿರಿ "ಇಲ್ಲ. ನಾನು ಕೊಳೆಯಾಗಿದ್ದೇನೆ. ಸ್ನಾನ ಮಾಡಿ ಬರುತ್ತೇನೆ" ಎಂದು. ಹೌದಲ್ಲವೇ?

ಹಾಗಾದರೆ ನಿಮಗೆ  ಸಂಭ್ರಮಿಸಲು ಏನು ಬೇಕು? ಶುದ್ಧತೆಯ ಅರಿವು; ಶುದ್ಧತೆ. ಸಂಭ್ರಮವು ನೀವು ಒಳಗಿಂದ ಹಾಗು ಹೊರಗಿಂದ ಶುದ್ದರು ಎಂದು ಅರಿವಾದಾಗ ಉಂಟಾಗುತ್ತದೆ. ಜನರು ತಮ್ಮನು ತಾವು ನಾಸ್ತಿಕರು  ಎಂದುಕೊಳ್ಳುತ್ತಾರೋ ಅವರು ಸಂಭ್ರಮಿಸಲು ಸಾಧ್ಯವಿಲ್ಲ, ಅವರ ನಾಸ್ತಿಕತೆ ಹಾಗು ಅಪನಂಬಿಕೆ ಅವರನ್ನೇ ತಿನ್ನುತ್ತದೆ. ಆದ್ದರಿಂದ ಶುದ್ದತೆ ಒಳಗೆ ಹಾಗು ಹೊರಗೆ.

ಈ ಗುರುಪೂರ್ಣಿಮದಂದು ನಿಮಗೆ ಒಂದನ್ನು ನೆನಪಿಸಲು ಇಷ್ಟಪಡುತ್ತೇನೆ. ನೀವು ಒಂದು ವಜ್ರ; ಬಹುಶ: ಕಸದ ಬುಟ್ಟಿಯಲ್ಲಿ!.
ಆದ್ದರಿಂದ ನಿಮಗೆ ಯಾವಾಗ ನೀವು ಅಶುದ್ದರು ಎನಿಸುತ್ತದೋ, ತಿಳಿಯಿರಿ ನೀವು ಒಂದು ವಜ್ರ. ವಜ್ರವು ಎಂದಿಗೂ ಅಶುದ್ದವಾಗಲು ಸಾಧ್ಯವಿಲ್ಲ, ಆದರೆ ಕಸದ ಬುಟ್ಟಿಯಲ್ಲಿರಲು ಸಾಧ್ಯ.

ವಜ್ರವು ಕಸದ ಬುಟ್ಟಿಯಲ್ಲಿದ್ದರೆ ನೀವದನ್ನು ಎಸೆಯುವಿರ? ಇಲ್ಲ. ಅದನ್ನು ಹೊರತೆಗೆದು ತೊಳೆಯುವಿರಿ. ಈ ನಿಮ್ಮ ಎಲ್ಲಾ  ಅನುಸರಣೆ, ವಜ್ರವನ್ನು ತೊಳೆಯುವುದು ಮಾತ್ರ. ಅಷ್ಟೇ.

ವಜ್ರವನ್ನು ತೊಳೆಯಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ? ನೀವು ಅದನ್ನು ಜೋರಾಗಿ ಉಜ್ಜಬೇಕೆ? ಇಲ್ಲ. ಸ್ವಲ್ಪವೇ ನೀರು; ಸ್ವಲ್ಪ ಸೋಪು.ಇದೇ ರೀತಿ 'ಸೋ ಹಮ್ ಸೋ ಹಮ್' ಅಷ್ಟೆ. ವಜ್ರವು ಶುದ್ದವಾಗಿಬಿಡುತ್ತದೆ.

ನಿಮಗೆ ಗೊತ್ತಾದಾಗ ನಿತ್ಯ ಶುದ್ದೋಹಮ್; ನಾನು ಎಂದಿಗೂ ಶುದ್ದ, ಸಂಭ್ರಮವು ಎಂದಿಗೂ ನಿಮ್ಮ ಜೀವನದಿಂದ ಹೋಗುವುದಿಲ್ಲ.

ಸಹಜವಾಗಿ ನಾವು ಶುದ್ದರು. ಇದನ್ನು ನೀವು ಯಾವಾಗ ಅನುಭವಿಸುತ್ತೀರೋ ನೀವು ಶುದ್ಧರು, ನಿಮ್ಮ ಹೃದಯ ಶುದ್ಧತೆಯಿಂದ ಕೂಡಿದೆ. ಆಗ ನೀವು ಯಾರಿಗೂ, ಈ ಗ್ರಹದ ಅಥವಾ ಯಾವುದೇ ಗ್ರಹದವರಿಗೂ ಕೆಟ್ಟದ್ದನ್ನು ಬಯಸುವುದಿಲ್ಲ. ನಂತರ ನೀವೇ ಪ್ರೀತಿಯಾಗುತ್ತೀರ.

ಯಾವಾಗ ನಿಮಗೆ ನೀವು ಶುದ್ಧರು, ನೀವೇ ಪ್ರೀತಿ ಅನ್ನಿಸುತ್ತದೋ ಆಗ ನೀವು ಅರಳುತ್ತೀರ. ನಿಮ್ಮಲ್ಲಿ ಒಂದು ಎಚ್ಚರಿಕೆ, ಜಾಗರೂಕತೆ ಉಂಟಾಗುತ್ತದೆ.

ನೀವು ಸಹಜ ಶುದ್ಧರು, ಮೌನವು ಶುದ್ಧತೆಯ ಪರಿಮಳವಿದ್ದಂತೆ. ಮೌನ, ನಾನು ಎಂದಿಗೂ ಶುದ್ಧ ಎಂಬ ಅರಿವು ಸಂಭ್ರಮಿಸಲು ಕಾರಣವಾಗುತ್ತದೆ. ಮೌನದಿಂದ ಉಂಟಾಗುವ ಸಂಭ್ರಮವು ನಿಜವಾದುದು ಏಕೆಂದರೆ ಅದು ಆಳದಿಂದ ಬಂದುದಾಗಿದೆ.

ಸೋಪು ನೀರು ಮತ್ತೆಲ್ಲವನ್ನು ಉಪಯೋಗಿಸಿ ವಜ್ರವನ್ನು ತೊಳೆಯಲು ಆರಂಭಿಸಿದಂದಿನಿಂದ (ಆರ್ಟ್ ಆಫ್ ಸೈಲೆನ್ಸ್  ಕೋರ್ಸ್ ಬಗ್ಗೆ ಪ್ರಸ್ತಾಪಿಸುತ್ತ ) ಈಗ ವಜ್ರವು ಹೊಳೆಯುತ್ತಿದೆ, ಇದೇ ಸಂಭ್ರಮ.   ನಿಮ್ಮಲ್ಲಿ ಪ್ರಾಮಾಣಿಕತೆ ಇದ್ದರೆ, ನಿಮ್ಮ ಪ್ರಾಮಾಣಿಕತೆಯು ನಗುವಿನಿಂದ ಹೊರಹೊಮ್ಮುತ್ತದೆ. ಕೆಲವರ ನಗುವನ್ನು ನೋಡಿದ್ದೀರ? ಅದು ಒಳಗಿನಿಂದ ಬರುವುದಿಲ್ಲ; ಅದು ಕೃತಕ ನಗು. ಜನರು ಹೇಳುತ್ತಾರೆ 'ಸುಸ್ವಾಗತ' ಆದರೆ ಅದು ಕೃತಕ ಸ್ವಾಗತ.

ಜನರು ಹೇಳುತ್ತಾರೆ 'ವಂದನೆಗಳು' ಆದರೆ ಅದು ಕೃತಕ ವಂದನೆ. ಅದು ಹೊರಗಿನಿಂದ ಬಂದುದು. ಏಕೆಂದರೆ ಒಳಗೆ ಮೌನವಿಲ್ಲ. ಒಳಗೆ ಬಂಡಾಯ, ಪಾಪ, ಅಶುದ್ಧತೆ ಕುದಿಯುತ್ತಿದೆ.

ಮನುಷ್ಯ ಜನ್ಮವು ಸಂಭ್ರಮಾಚರಣೆಗೆ ತಕ್ಕುದಾಗಿದೆ. ನಮ್ಮ ಈ ಎಲ್ಲಾ ರಗಳೆಗಳಿಂದ ಹೊರಬರುವುದು ಮುಖ್ಯವಾಗಿದೆ.
ನಾವೇನು ಮಾಡುತ್ತೇವೆ ಅಂದರೆ ಕಸವನ್ನು ಆಭರಣ ಪೆಟ್ಟಿಗೆಯಲ್ಲಿಡುತ್ತೇವೆ. ಕಸದ ಬುಟ್ಟಿಯಲ್ಲಿರುವುದು ಆಭರಣ ಪೆಟ್ಟಿಗೆಯಲ್ಲ. ಆದರೆ ನಾವೇ ಕಸವನ್ನು ಆಭರಣ ಪೆಟ್ಟಿಗೆಯಲ್ಲಿ ಹಾಕುತ್ತಿದ್ದೇವೆ. ಅದನ್ನು ಸುಮ್ಮನೆ ತೆಗೆದು ಹಾಕಬೇಕು.

ನೀವು ಶುದ್ಧ ಪ್ರೀತಿ ಎಂದು ಅರಿತುಕೊಳ್ಳಿ. ನಮ್ಮನ್ನು ನಾವು ಕೆಟ್ಟವರು, ಪಾಪಿಗಳು ಎಂದು ತಿಳಿದುಕೊಂಡಿದ್ದೇವೆ. ಈ ಕಟ್ಟಳೆಗಳನ್ನೆಲ್ಲ ನಮಗೇ ಹೇರಿಕೊಂಡಿದ್ದೇವೆ. ನಮಗೆ ನಾವೇ ಕಟುವಾಗಿರುವುದರಿಂದ, ನಮ್ಮ ಒಳ್ಳೆಯ ಗುಣಗಳು, ವರಗಳು ಅನುಭವಿಸಲು ಆಗುತ್ತಿಲ್ಲ.

ಪ್ರಪಂಚದಲ್ಲಿರುವ ಪ್ರತಿಯೊಬ್ಬನು ಈ ಎಲ್ಲ ಒಳ್ಳೆಯ ಗುಣಗಳೊಂದಿಗೆ ಬಂದಿದ್ದಾನೆ. ಆದರೆ ಅದನ್ನು ನಾವು  ಗುರುತಿಸಲು ಆಗುತ್ತಿಲ್ಲ.

ಗುರುಪೂರ್ಣಿಮವು ನಿಮ್ಮ ಒಳ್ಳೆಯ ಗುಣಗಳನ್ನು ಗುರುತಿಸಿ ಆಚರಿಸುವ ಒಂದು ಸಂಭ್ರಮಾಚರಣೆ. ನೀವು ಯಾವಾಗ ಈ ಸುಂದರತೆಯನ್ನು ಗುರುತಿಸುತ್ತೀರೊ, ಮತ್ತು ನೀವು ಪಡೆದುಕೊಂಡ ವರಗಳು, ನಿಮ್ಮ ಕೃತಜ್ಞತೆಯನ್ನು ಸೂಚಿಸುತ್ತವೆ.
ನಿಮ್ಮ ಕೃತಜ್ಞತೆಯನ್ನು ಗುರುಗಳಿಗೆ ಅರ್ಪಿಸುವುದೇ ಗುರುಪೂರ್ಣಿಮ.

ಅದೇ ನಿಜವಾದ ಸಂಭ್ರಮಾಚರಣೆ.

ನಾವು ಮೌನದಿಂದ ಹೊರಬಂದರೂ (ಆರ್ಟ್ ಆಫ್ ಸೈಲೆನ್ಸ್ ಕೋರ್ಸ್ ಬಗ್ಗೆ ಪ್ರಸ್ತಾಪಿಸುತ್ತ) ಮತ್ತೊಂದು ಮೌನವನ್ನು ನಮ್ಮೊಂದಿಗೆ ಹೊತ್ತೊಯ್ಯುತ್ತೇವೆ. ಈಗ ಗುರುತಿಸಿ, ನೀವು ಒಂದು ಕಸದ ಬುಟ್ಟಿಯಲ್ಲಿರುವ  ವಜ್ರ. ಆದರೆ ಅದನ್ನು ಗಣನೆಗೆ ತೆಗೆದುಕೊಳ್ಳಬೇಡಿ.

ಇದರ ಅರ್ಥ ನೀವು ಬೇಜಾರು ಮಾಡಿಕೊಳ್ಳಬಾರದು. ಕೋಪ  ಮಾಡಿಕೊಳ್ಳಬಾರದು, ಈ ಹಿಂದೆ ಮಾಡುತ್ತಿದ್ದ ಯಾವುದನ್ನು ಮಾಡಬಾರದು ಎಂದಲ್ಲ. ಅಥವಾ ಮುಸಿ-ಮುಸಿ, ಅವಿಧೇಯತೆಯಿಂದಿರಬೇಕೆಂದಲ್ಲ. ಇಲ್ಲ. ಇದನ್ನೆಲ್ಲಾ ನೀವು ಮಾಡಬಹುದು!!. ದಿನ ನಿತ್ಯದಲ್ಲಿ ಮಾಡಬೇಕಾದೆಲ್ಲವನ್ನು ಮಾಡಬಹುದು.

ಆದಾಗ್ಯೂ, ತಿಳಿಯಿರಿ ನೀವು, ನೀವು ಮಾಡುವ ಕೆಲಸಕ್ಕಿಂತ ಎತ್ತರದಲ್ಲಿದ್ದೀರಿ. ನೀವು ನಿಮ್ಮ ಪರಿಸ್ಥಿತಿ, ಸುತ್ತ-ಮುತ್ತ, ಆಲೋಚನೆ, ಭಾವನಾತ್ಮಕತೆ ಎಲ್ಲಕ್ಕಿಂತ ಎತ್ತರದಲ್ಲಿದ್ದೀರಿ. ನೀವು, ನೀವು ತಿಳಿದಿರುವುದಕ್ಕಿಂತ ಉತ್ತಮರು.  ಮತ್ತೆ ಮತ್ತೆ ತಿಳಿಯಿರಿ 'ನಾನು ಒಂದು ವಜ್ರ, ದುರಾದೃಷ್ಟವಷಾತ್ ಕಸದ ಬುಟ್ಟಿಯಲ್ಲಿ ಬಿದ್ದಿದ್ದೆ, ಈಗ ಅದರಿಂದ ಹೊರಬಂದು ನನ್ನನ್ನು ನಾನು ಶುಚಿ ಮಾಡುತ್ತಿದ್ದೇನೆ!'

ಅದು ವಾರ್ಷಿಕ ಶುಚಿತ್ವವಿರಬಹುದು, ವರ್ಷದಲ್ಲಿ ಎರಡು ಬಾರಿ ಶುಚಿತ್ವವಿರಬಹುದು, ನಂತರ ನಿಮಗೆ ತಿಳಿಯುತ್ತದೆ ನೀವು ಹೊತ್ತಿರುವ ಹೊರೆ ನೀವಲ್ಲ ಎಂದು. ನೀವು ಎಂದಿಗೂ ಶುದ್ಧರು.

ಇದನ್ನು ಗುರುತಿಸಲು ಅಥವಾ ನಂಬಲು ಕಷ್ಟವಾಗುತ್ತಿದೆಯೇ? ಇದಕ್ಕಾಗಿಯೇ ನಾವು ಸುದರ್ಶನ ಕ್ರಿಯಾ ಹಾಗು ಮತ್ತಿತರೆ ಪ್ರಕ್ರಿಯೆ ಮಾಡುವುದು, ನೀವು ಶುದ್ದರು ಹಾಗು ಅದ್ಬುತವಾದಂತವರು ಎಂದು ತಿಳಿಯಲು. ನಿಮ್ಮಲ್ಲಿ ಎಷ್ಟು ಮಂದಿ ನೀವೊಂದು ವಜ್ರ, ಶುದ್ಧರು ಎಂದು ತಿಳಿಯಲು ಕಷ್ಟಪಟ್ಟಿರಿ?

(ಸಭಿಕರಲ್ಲಿ  ಕೆಲವರು ಕೈ ಎತ್ತುತ್ತಾರೆ)

ಓಹ್  ಹೌದಾ? ಹಾಗಾದರೆ ನಿಮಗೆ ಎರಡು ಅಡ್ವಾನ್ಸ್ ಕೋರ್ಸ್ ಬೇಕಾಗಬಹುದು; ಬಹುಶ: ಮತ್ತೊಂದು ಬಾರಿಯೂ ಬೇಕಾಗಬಹುದು. ನಿಮ್ಮಲ್ಲಿ ಯಾರಿಗಾದರು ನಾನು ಮೇಲೆ ಹೇಳಿದ ವಿಷಯ ಸಂಬಂಧಪಟ್ಟಿದೆಯೆ?

(ಕೆಲವು ಸಭಿಕರು ಕೈ ಎತ್ತುತ್ತಾರೆ)

ಸಧ್ಯ ಕೆಲವರಿಗಾದರೂ ನಾನು ಹೇಳುತ್ತಿರುವುದು ಅರ್ಥವಾಗುತ್ತಿದೆಯಲ್ಲ! ಒಳ್ಳೆಯದು.

ಗುರುಪೂಜೆಯ ಮೊದಲಲ್ಲಿ ನಾವೊಂದು ಮಂತ್ರ ಪಠಣ ಮಾಡಿದೆವು

ಅಪವಿತ್ರಃ ಪವಿತ್ರೋವಾ ಸರ್ವಾವಸ್ಥಾಂಗತೋ ಪಿವ
ಯಃ ಸ್ಮರೇತ್ ಪುಂಡರೀಕಾಕ್ಷಂ ಸ ಬಾಹ್ಯ ಅಭ್ಯಂತರ ಶುಚಿಃ

ಶುದ್ದವೋ ಅಶುದ್ದವೋ, ಹೇಗೇ ಇರು (ನೀನು ಕೆಳಗಡೆ ಬಿದ್ದಿರಬಹುದು, ಬಹುಶ: ತುಂಬಾ ತಳಮುಟ್ಟಿರಬಹುದು) ಆದರು, ಕಮಲದ ನೆನಪನ್ನು ತಂದುಕೋ (ಕಮಲದ ಪುಷ್ಪವು ಮಣ್ಣಿನಲ್ಲಿ ಬೆಳೆದರೂ, ಅದು ಮಣ್ಣಿಗೆ ಅಂಟಿಕೊಂಡಿರುವುದಿಲ್ಲ.) ಇರುವಿಕೆ ಕಮಲದಂತೆ ಇರಬೇಕು.

(ಪುಂಡರೀಕ ಅಂದರೆ ಕಮಲದಂತೆ ಅರಳುವುದು)

ಇರುವಿಕೆಯು ಸಾಕ್ಷಿ ಇದ್ದಂತೆ. ನಿಮಗೆ ಯಾವಾಗ ಅರಿವಾಗುತ್ತದೋ ನೀವೇ ಸಾಕ್ಷಿ ಎಂದು, ಆಗ ಹೊರಗೆ ಹಾಗು ಒಳಗೆ ಶುದ್ಧತೆಯನ್ನು ತರುತ್ತದೆ. (ಸ ಬಾಹ್ಯ ಅಭ್ಯಂತ)

ಯಃ ಸ್ಮರೇತ್ ಪುಂಡರೀಕಾಕ್ಷಂ: ಇದು ಒಬ್ಬರನ್ನು ಕಮಲದ ಕಣ್ಣಿನಿಂದ ನೆನಪಿಟ್ಟುಕೊಳ್ಳುವುದಲ್ಲ.

ಇಲ್ಲಿ ಎರಡು ವಿಷಯವಿದೆ. ಅಕ್ಷಮ್: ಕಣ್ಣು ಹಾಗು ಸಾಕ್ಷಿ. ಪುಂಡರೀಕ: ಕಮಲಾ ಹಾಗು ಅರಳುವಿಕೆ. ಮಣ್ಣಿನ ಕಲೆಇಲ್ಲದೆ, ಅಂಟಿಕೊಳ್ಳದೆ ಇರುವುದು.

ಯಾವಾಗ ಅರಿವು ಅರಳುತ್ತದೊ, ಅದು ಕಲೆಯಿಲ್ಲದೆ, ಮಣ್ಣಿನ ಸಂಪರ್ಕವಿಲ್ಲದೆ ಇರುತ್ತದೆ. ಇದೇ ಹೊತ್ತಿನಲ್ಲಿ ಸಾಕ್ಷಿಯಾಗುತ್ತದೆ, ಅರಿವಿಗಾಗಿ.

ಅರಿವಿನ ನೆನಪೇ ನಿಮ್ಮನ್ನು ಶುದ್ಧರನ್ನಾಗಿಸುತ್ತದೆ.

ನಿಮಗೆ ಯಾವಾಗ ತಿಳಿಯುತ್ತದೋ  ನಿಮ್ಮ ಅನುಬಂಧ ಗುರುವಿನೊಂದಿಗೆ ಎಂದು, ಅರಿವು ಉದಯಿಸಲು ಆರಂಭಿಸುತ್ತದೆ.
ನೀವು ಪ್ರೀತಿಸುವವರನ್ನು ನೆನಪಿಸಿಕೊಂಡರೆ, ಪ್ರೀತಿಯು ಪ್ರೇರಣೆಗೊಳ್ಳುತ್ತದೆ. ನಮ್ಮ ಶತ್ರುವನ್ನು ನೆನಪಿಸಿಕೊಂಡರೆ ಅಹಿತ ಭಾವನೆ ನಿಮ್ಮಲ್ಲಿ ಮೂಡುತ್ತದೆ; ದೇಹದ ಕಣ-ಕಣವು ಅಶಾಂತತೆಯಿಂದ ಬಳಲುತ್ತದೆ. ಏನಾದರು ಯಾರ ಬಗ್ಗೆಯಾದರು ಚಿಂತಿಸಿದರೆ ಅದೇ ದೇಹದಲ್ಲಿ ಉಂಟಾಗುತ್ತದೆ. ಆದ್ದರಿಂದ ಅರಿವುಂಟಾದವರ ಬಗ್ಗೆ ಚಿಂತಿಸಿದರೆ ನಿಮ್ಮಲ್ಲಿ ಶುದ್ಧತೆ ಉದಯಿಸುತ್ತದೆ.

ನೀವು ಆಸೆಬುರುಕರೊಂದಿಗೆ ಅಥವಾ ಮಹತ್ವಾಕಾಂಕ್ಷಿಗಳೊಂದಿಗೆಯಿದ್ದರೆ ನಿಮಗೂ ಅದೇ ಭಾವ ಉಂಟಾಗುತ್ತದೆ. ನೀವು ಶಾಂತತೆ ಹಾಗು ಉಲ್ಲಾಸದ ವ್ಯಕ್ತಿ ಗಳೊಂದಿಗಿದ್ದರೆ ನೀವು ಅದೇ ಆಗುತ್ತೀರ. ಅದೇ ಭಾವ ನಿಮ್ಮಲ್ಲೂ ಉಂಟಾಗುತ್ತದೆ.

ನೀವು ಯಾರನ್ನೂ ದ್ವೇಷಿಸುವುದಿಲ್ಲ ಯಾಕೆ? ಅದು ಯಾಕೆಂದರೆ, ನೀವು ಯಾರನ್ನು ದ್ವೇಷಿಸುತ್ತೀರೋ ಆ ವ್ಯಕ್ತಿಯು ನಿಮ್ಮ ಮನಸ್ಸಿನಲ್ಲಿ ಬಹುದೊಡ್ಡದಾಗಿ ನೆಲಸುತ್ತಾರೆ. ನೀವು ಯಾರ ಬಗ್ಗೆ ಯೋಚಿಸುತ್ತೀರೊ ಅವರ ಗುಣವನ್ನೇ ಹೀರಿಕೊಳ್ಳುತ್ತೀರ. ಇದುವೇ ವಿಜ್ಞಾನ ಹಾಗು ಸತ್ಯ.

ನಿಮಗೆ ಗೊತ್ತಾ, ಬುದ್ಧನ ಮೂರ್ತಿಯನ್ನು ಏಕೆ ಧ್ಯಾನಕ್ಕಾಗಿ ಬಳಸುತ್ತಿದ್ದರು?

ಬುದ್ದ ದೇಹವನ್ನು ತೊರೆದ ನಂತರ, ಅವರು ಬುದ್ದನ ಮೂರ್ತಿಯನ್ನು ಬಳಸುತ್ತಿದ್ದರು. ನೀವು ಬುದ್ದನ ಮೂರ್ತಿಯ ಮುಂದೆ ಕುಳಿತಾಗ, ಬುದ್ದನಂತೆಯೇ  ಕುಳಿತುಕೊಳ್ಳುತ್ತೀರ. ನೀವು ನಿಮ್ಮ ಕಣ್ಣನ್ನು ಮುಚ್ಚಿ ಹಾಗು ಆ ನಿಶ್ಚಲತೆಯನ್ನು ನೀವು ಸೆಳೆದುಕೊಳ್ಳುತ್ತೀರ. ಇದು ಬುದ್ದನ ಮೂರ್ತಿಯನ್ನು ಹೊಂದುವುದರ ಉದ್ದೇಶವಾಗಿತ್ತು. ಇಂದು, ಬುದ್ದನ ದೊಡ್ಡ ದೊಡ್ಡ ಮೂರ್ತಿಯನ್ನು ಹೊಂದುವುದು ಫ್ಯಾಷನ್ ಆಗಿದೆ.

ಇಲ್ಲಿ ಮಹತ್ವವಾದುದು ಮೂರ್ತಿಯಲ್ಲ, ನೀವು ಮೂರ್ತಿಯ ಹಾಗೆ ಕೂರುವುದು, ಒಂದು ಮುಗುಳ್ನಗೆಯ ಜೊತೆಗೆ. ವಿಶ್ರಮಿಸಿ, ನೀವು ಹೊತ್ತಿರುವ ಎಲ್ಲ ಅನವಶ್ಯಕ ವಸ್ತುಗಳು ಹೊರಹೋಗಲಿ. ಅರಿಯಿರಿ, "ನಾನು ವಜ್ರ, ಎಂದಿಗೂ ಶುದ್ಧ". ನಂತರ ನೀವು ಆ ಗುಣಗಳನ್ನು ಹೀರಿಕೊಳ್ಳುತ್ತೀರ.

ಎಲ್ಲರ ಜ್ಞಾನವು, ಶ್ರೀಮಂತಿಕೆಯಿಂದ ಹಾಗು ಎಲ್ಲಾ ಒಳ್ಳೆಯ ಗುಣಗಳಿಂದ ಕೂಡಿದೆ. ಇದನ್ನು ನೀವು ಹೊರಗಿನಿಂದ ತರುವ ಅವಶ್ಯಕತೆ ಇಲ್ಲ, ನಿಮ್ಮೊಳಗೇ  ಇದೆ. ಅದಕ್ಕೆ ಬೇಕಾಗಿರುವುದು ಪೋಷಣೆ ಅಷ್ಟೆ. ಕಮಲದ ಹಾಗೆ; ಎಲ್ಲಾ  ದಳಗಳು ಇವೆ, ಅದು ಅರಳಬೇಕಷ್ಟೆ. ತೆರೆದುಕೊಂಡು ತನ್ನ ಕೀರ್ತಿಯನ್ನು ಹರಡಬೇಕು. ಇದೇ ರೀತಿ ಎಲ್ಲಾ ವ್ಯಕ್ತಿಗಳೂ ಒಳ್ಳೆಯ ಗುಣಗಳನ್ನು ಹೊಂದಿದ್ದಾರೆ.

ಗುರುಪೂರ್ಣಿಮೆಯಂದು, ವರ್ಷದಲ್ಲಿ ಒಂದು ಬಾರಿ, ಆ ಎಲ್ಲಾ ಒಳ್ಳೆಯ ಗುಣಗಳನ್ನು ಹೀರಿಕೊಳ್ಳಿರಿ, ಹಾಗು ಕೃತಜ್ಞತೆಯಿಂದಿರಿ. ನೀವು ಕೃತಜ್ಞತೆಯಿಂದ ಇದ್ದಷ್ಟು ಒಳ್ಳೆಯ ಅನುಗ್ರಹ ಉಂಟಾಗುತ್ತದೆ. ಆದ್ದರಿಂದ, ಸಂಭ್ರಮಾಚರಣೆ ಉಂಟಾಗುವುದು ಮೌನದಲ್ಲಿ, ಶುದ್ದತೆಯ ಅರಿವಿನಲ್ಲಿ, ಹಂಚಿಕೊಳ್ಳುವುದರ ಮೂಲಕ.

ಸೇವಾ ಗುಂಪಿನಲ್ಲಿರುವ ಜನರು ತಮ್ಮ  ಒಳ್ಳೆಯ ಸೇವಾ ಅನುಭವವನ್ನು ಹಂಚಿಕೊಳ್ಳುತ್ತಿದ್ದರು. ನೀವು ಹಂಚಿಕೊಂಡಾಗ, ಖುಷಿಯು ದ್ವಿಗುಣಗೊಳ್ಳುತ್ತದೆ, ಅದೇ ಸಂಭ್ರಮಾಚರಣೆ. ಇದಕ್ಕಿಂತ ಹೆಚ್ಚಿನದಿದ್ದರೆ ಹೇಳಿ, ಇದಕ್ಕೆ ಜೋಡಿಸೋಣ.

(ಸಭಿಕರು: ಹೌದು, ಸಂಭ್ರಮಾಚರಣೆ ದೇವರ ಜೊತೆಗೂ ಇದೆ)

ಕ್ಷಮಿಸುವ ಗುಣವಿಲ್ಲದೆ ನೀವು ಹರ್ಷದಿಂದಿರಬಲ್ಲಿರಾ?

ಬೂನ್, ನಾರ್ತ್ ಕೆರೊಲಿನ
೨೭ ಜುಲೈ, ೨೦೧೩

ಪ್ರ: ಗುರುದೇವ್, ನಾನು ತುಂಬಾ ಇಷ್ಟಪಡುವ ವ್ಯಕ್ತಿಯು ನನಗೆ ನೋವುಂಟುಮಾಡಿದ್ದಾರೆ. ಅವರನ್ನು ಕ್ಷಮಿಸುವುದು ಕಷ್ಟವಾಗುತ್ತಿದೆ. ನಾನೇನು ಮಾಡಲಿ?

ಶ್ರೀ ಶ್ರೀ ರವಿಶಂಕರ್: ನಿನ್ನ ಮುಂದಿರುವ ಆಯ್ಕೆಗಳೇನು?
ಒಂದು, ನೀನು  ಅವರನ್ನು ಕ್ಷಮಿಸಲಾರೆ. ಕ್ಷಮಿಸುವುದು ತುಂಬಾ ಕಷ್ಟಕರವಾದುದರಿಂದ, ಕ್ಷಮಿಸದಿರು.
ನನ್ನ ಕಳಕಳಿಯೆಂದರೆ, ನೀವು ಸಂತೋಷದಿಂದ ಹಾಗು ಶಾಂತಿಯಿಂದ ಇರಲು ಸಾಧ್ಯವೇ?
ನೀವು ಸಂತೋಷ, ತೃಪ್ತಿ ಹಾಗು ಶಾಂತಿಯಿಂದ ಇರಲು ಸಾಧ್ಯವೇ? ಇಲ್ಲ!. ಹಾಗಿದ್ದರೆ ಬಿಟ್ಟು ಬಿಡಿ!.
ಅಂತಹ ಕೆಲವು ಜನರಿದ್ದಾರೆ; ಇಲ್ಲಿ ತುಂಬಾ ಮುಳ್ಳುಗಳಿವೆ. ಅದರ ಗುಣವೇ ನಿಮ್ಮ ಕಾಲಿಗೆ ಚುಚ್ಚುವುದು.
ಈಗ ಮುಳ್ಳನ್ನು ತೆಗೆಯಿರಿ, ಎಸೆಯಿರಿ ಹಾಗು ನಿಮ್ಮ ದಾರಿಯಲ್ಲಿ ನಡೆಯಿರಿ. ನೀವು ಮುಳ್ಳನ್ನಿಟ್ಟುಕೊಂಡು, "ನೀನು ಏಕೆ ಚುಚ್ಚಿದೆ? ಇದು ನಿನ್ನ ನೀಚ ಸ್ವಭಾವ. ನೀನು ನನ್ನ ಚುಚ್ಚಿದುದರಿಂದ ನಾನು ನಿನ್ನ ಕ್ಷಮಿಸುವುದಿಲ್ಲ"! 
ಮುಳ್ಳು ಹೇಳುತ್ತದೆ, "ಹೇ ಇದುವೇ ನನ್ನ ಸ್ವಭಾವ. ಇದನ್ನು ಬಿಟ್ಟು ಹಾಗು ಇದೊಂದನ್ನೇ ನಾನು ಮಾಡುವುದು. ನಾನು ನಿನಗೇಕೆ ಚುಚ್ಚಿದೆ? ನಾನು ನಿನಗೇಕೆ ನೋಯಿಸಿದೆ? ಜನರಿಗೆ ನೋಯಿಸುವುದೇ  ನನ್ನ ಗುಣ. ನೀನು ನನ್ನ ದಾರಿಗೆ ಬಂದೆ ಹಾಗಾಗಿ ಇಬ್ಬರೂ ಒಬ್ಬರನ್ನೊಬ್ಬರು ಭೇಟಿಯಾದೆವು!.
ಈಗ ಇದನ್ನು ಬಿಟ್ಟುಬಿಡಬೇಕಾ? ಅಥವಾ ಅದರ ಹಿಂದೆ ಹೋಗಬೇಕಾ?
ನಿಮ್ಮನ್ನು ನೋಯಿಸಿದವರ ಹಿಂದೆ ನೀವ್ಯಾಕೆ ಹೋಗುತ್ತೀರ? ನಿಮ್ಮನ್ನು ನೋಯಿಸಿದವರ ಬಗ್ಗೆ ಏಕೆ ಚಿಂತಿಸುತ್ತೀರ? ಅವರನ್ನು ದೂರ ತಳ್ಳಿ. ನಿಮ್ಮ ಜೀವನದಿಂದಲೇ ಅವರನ್ನು ಹೊರಗಿಡಿ!. 
ಕ್ಷಮಿಸಲು ಸಾಧ್ಯವಿಲ್ಲದಾಗ, ಅವರನ್ನು ಮುಗಿಸಿ ಬಿಡಿ!. ನೀವು ನಿಜವಾಗಿಯೂ ಬಂದೂಕಿನಿಂದ ಅವರನ್ನು ಮುಗಿಸಿದರೆ, ನೀವೂ ಇಲ್ಲವಾದಂತಯೆ. ನೀವು ಜೈಲಿನಲ್ಲಿರಬೇಕಾಗುತ್ತದೆ. ತುಂಬಾ ಜನರು ಅದನ್ನೇ ಮಾಡುತ್ತಾರೆ.
ಬುದ್ಧಿವಂತರು ಅವರ ಬಗ್ಗೆ ಚಿಂತಿಸುವುದನ್ನು ನಿಲ್ಲಿಸುತ್ತಾರೆ. ಅಥವಾ ಅವರ ಬಗ್ಗೆ ಅನುಕಂಪದಿಂದ, 'ಎಂಥಾ ಅಜ್ಞಾನಿ ಇವನು, ಜ್ಞಾನದ ಒಂದು ಹನಿಯೂ ಇವನ ಜೀವನದಲ್ಲಿ ಸಿಕ್ಕಿಲ್ಲ. ಒಬ್ಬರನ್ನು ನೋಯಿಸಿದರೆ ಅದು ಹತ್ತು ಪಟ್ಟು ಹಿಂದಿರುಗಿ ಬರುತ್ತದೆ ಎಂಬುದು ಇವರಿಗೆ ತಿಳಿದಿಲ್ಲ. ಇಂಥಹ ಮಂದಿ ತುಂಬಾ ತೊಂದರೆಗೊಳಗಾಗುತ್ತಾರೆ. ಅವರು ಅಜ್ಞಾನಿಗಳು, ಅಜ್ಞಾನದಿಂದಿರುವುದು ಅವರ ಗುಣ'.
ತಿಳಿಯಿರಿ, ಅದು ಅವರ ಗುಣ. ಅವರು ಅವಿವೇಕಿಗಳು. ಅವರಿಗೆ ತಿಳಿದಿಲ್ಲ ಅವರೇನು ಮಾಡುತ್ತಿದ್ದಾರೆಂದು. ಹೇಳಿ 'ನನಗೆ ಇಂಥಹವರಿಂದ ಏನೂ ಆಗಬೇಕಾಗಿಲ್ಲ. ಇವರ ಬಗ್ಗೆ ಚಿಂತಿಸಲು ಸಮಯವೂ ಇಲ್ಲ'. ನಿಮ್ಮನ್ನು ನೀವು ಕಾರ್ಯನಿರತರನ್ನಾಗಿಸಿಕೊಳ್ಳಿ. 
ನೀವು ವಿಶಾಲ ಹೃದಯದವರಾಗಿದ್ದರೆ, ಅವರು ಅಜ್ಞಾನಿಗಳೆಂದು ತಿಳಿದುಕೊಳ್ಳುತ್ತೀರ. ಅವರಿಗೆ ತಿಳಿದಿರಲಿಲ್ಲ ಅವರೇನು ಮಾಡುತ್ತಿದ್ದಾರೆಂದು. ಆಸೆಬುರುಕತನ ಹಾಗು ಹೊಟ್ಟೆಕಿಚ್ಚಿನಿಂದ ಅದನ್ನು ಮಾಡಿದ್ದಾರೆ. ನೀವು ಅವರಿಗಾಗಿ ಸಹಾನುಭೂತಿ ಹೊಂದುತ್ತೀರ.
ಇದು ಸರಿ ಎನಿಸುತ್ತದೆಯೇ?

ಪ್ರ. ಗುರುದೇವ್, ನಾನು ತುಂಬ ದುಃಖದಲ್ಲಿದ್ದೇನೆ. ಮತ್ತೊಮ್ಮೆ ನಿಮ್ಮಿಂದ ಭೌತಿಕವಾಗಿ  ದೂರವಾಗುತ್ತಿದ್ದೇನೆ. ನಾನು ಈ ಅಗಲುವಿಕೆಯಿಂದ ಹೇಗೆ ಹೊರಬರಲಿ?

ಶ್ರೀ.ಶ್ರೀ. ರವಿಶಂಕರ್: ಇಲ್ಲ,ಇಲ್ಲ,ಇಲ್ಲ. ನಾನು ಗಾಳಿ, ಸೂರ್ಯ, ಚಂದ್ರನಿದ್ದ ಹಾಗೆ. ನೀನು ನನ್ನ ಒಂದು ಭಾಗ. ನಾನು ನಿನ್ನ ಒಂದು ಭಾಗವೇ. ಸಂತೋಷದಿಂದಿರು ಹಾಗು ಸಮಾಜಕ್ಕೆ ಒಳ್ಳೆಯದಾಗುವ ಕೆಲಸವನ್ನು ಮಾಡು. ನಿನ್ನಲ್ಲಿ ಏನಿದೆಯೋ ಅದನ್ನು ನಿನ್ನ ಸುತ್ತಲಿರುವವರಿಗೆ ಹಂಚು. ತುಂಬಾ ಜನರ ಕಣ್ಣೀರನ್ನು ಒರೆಸಬೇಕಿದೆ; ಸುಮ್ಮನೆ ಕುಳಿತು ನಿನ್ನ ಬಗ್ಗೆಯೇ ಚಿಂತಿಸಬೇಡ. ಸಮಾಜದಲ್ಲಿ ಹೆಚ್ಚಿನ ದುಃಖಿತರಿದ್ದಾರೆ. ಅವರ ದುಃಖವನ್ನು ಕಡಿಮೆ ಮಾಡುವುದು ನಮ್ಮ ಕೆಲಸ. ಅಲ್ಲವೇ?
ನಾವು ಸಂತೋಷದ ಅಲೆಗಳನ್ನು ಕಲ್ಪಿಸಬೇಕು. ನೀವೆಲ್ಲೇ ಇದ್ದರೂ ನಿಮ್ಮೆಲ್ಲ ಸ್ನೇಹಿತರು, ಬಂಧುಗಳನ್ನು ತಳಮನೆಗೆ ಕರಿಯಿರಿ, ಅಥವಾ ಎಲ್ಲಿ ಜಾಗವಿದೆಯೋ ಅಲ್ಲಿ, ಎಲ್ಲರೂ ಸೇರಿ ಭಾಸ್ತ್ರಿಕ, ಲಘು ವ್ಯಾಯಾಮ, ಹಾಡು, ನೃತ್ಯ, ೧೦-೧೫ ನಿಮಿಷದ ಧ್ಯಾನ ಮಾಡಿ. ಧ್ಯಾನದ ಕ್ಯಾಸೆಟ್ಟು ಅಥವಾ ಸಿಡಿಗಳು ತುಂಬಾ ಇವೆ. ಎಲ್ಲರು ಆ ಸಿಡಿಗಳಿಂದ ತಮ್ಮ ಮನೆಯಲ್ಲಿಯೇ ಧ್ಯಾನವನ್ನು ನಡೆಸಬಹುದು. ಅಥವಾ ಟೀಚರ್ರನ್ನು ಮನೆಗೆ ಕರೆಸಿ ಪ್ರಾಸ್ತಾವಿಕ ತರಗತಿ ತೆಗೆದುಕೊಳ್ಳಬಹುದು. ನೀವು ಸಂಭ್ರಮ ಹಾಗು ಸಂತೋಷದ ಅಲೆಯನ್ನು ಸೃಷ್ಟಿಸಬಹುದು. 

ಪ್ರ. ಗುರುದೇವ್, ಧ್ಯಾನದ ಮೂರು ಮಜಲುಗಳನ್ನು ವಿವರಿಸುತ್ತೀರ?

ಶ್ರೀ.ಶ್ರೀ. ರವಿಶಂಕರ್: ಹೌದು, ಧ್ಯಾನದಲ್ಲಿ ಮೂರು ಮಜಲುಗಳಿವೆ.
ಮೊದಲನೆಯ ಮಜಲು 'ಅನ್ವ ಉಪಾಯ'.ಇದು ಪ್ರಾಣಾಯಾಮ, ಧ್ಯಾನ, ಮಂತ್ರೋಚ್ಚಾರಣೆ, ವ್ಯಾಯಾಮ ಮತ್ತು  ಯೋಗವನ್ನು ಒಳಗೊಂಡಿದೆ.
ಎರಡನೆಯ ಮಜಲು 'ಶಕ್ತ ಉಪಾಯ'. ಇದು ತುಂಬಾ ಸೂಕ್ಷ್ಮವಾದುದು. ಇದೊಂದು ನಿಶ್ಚಲತೆ, ಇದನ್ನು ನೀವು ಮೇಲಿನ ಎಲ್ಲಾ ವ್ಯಾಯಾಮಗಳನ್ನು ಮಾಡಿದ ಮೇಲೆ ದೊರೆಯುವಂತಹುದು. ಇದು ತುಂಬ ಆಂತರಿಕವಾದುದು.
ನೀವು ಸ್ವಲ್ಪವೇ ಮಾಡುತ್ತಿದ್ದರೂ, ವಸ್ತುತಃ ಎಲ್ಲವೂ ಆಗುತ್ತಿರುತ್ತದೆ. ಅಲ್ಲಿ ಮಾಡುತ್ತಿರುವವರು ಯಾರೂ ಇರುವುದಿಲ್ಲ. ಆದರೂ ಎಲ್ಲವು ಆಗುತ್ತಿರುತ್ತದೆ. 'ಶಕ್ತ ಉಪಾಯ' ತುಂಬಾ ಆಂತರಿಕವಾದುದು ಎಂಬುದು ಅರಿವಾಗುತ್ತದೆ.
ಮೂರನೆಯ ಮಜಲು 'ಶಂಭವ ಉಪಾಯ'. ಇದು ಶಕ್ತ ಉಪಾಯಕ್ಕೆ ಅತೀತವಾದುದು. ಇದೊಂದು ಗುರುತಿಸುವಿಕೆ, ತಿಳಿವು. ಆಕಸ್ಮಾತ್ತಾಗಿ ಇದು ಉದಯಿಸುತ್ತದೆ. ಅದರ ಕುರುಹು ನಿಮಗೆ ತಿಳಿಯುವುದಿಲ್ಲ, ಹೇಳಲು ಹಾಗು ಮಾಡಲು ಏನೂ ಇರುವುದಿಲ್ಲ.
ನೀವು ನಡೆಯುತ್ತಿರುತ್ತೀರಿ, ಸೂರ್ಯಾಸ್ತವನ್ನು ಕಣ್ತುಂಬಿಕೊಳ್ಳುತ್ತಿರುತ್ತೀರಿ, ಅಚಾನಕ್ಕಾಗಿ ಏನೋ ಘಟಿಸುತ್ತದೆ, ಏನೋ ತೆರೆದುಕೊಳ್ಳುತ್ತದೆ. ನೀವು ಯಾರನ್ನೋ ಭೇಟಿ ಮಾಡುತ್ತೀರಿ, ಅಚಾನಕ್ಕಾಗಿ ಒಂದು ತರಹದ ಔನ್ನತ್ಯ, ಸಂತೋಷ ಅನುಭವಿಸುತ್ತೀರಿ.
ನೀವು ಧ್ಯಾನ, ನಿದ್ರೆ ಅಥವಾ ಏನೇ ಮಾಡುತ್ತಿದ್ದರೂ ಆಕಸ್ಮತ್ತಾಗಿ ಒಂದು ತಿಳಿವು, ಎಚ್ಚರಿಕೆ ಉದಯಿಸುತ್ತದೆ.  ಇದೇ 'ಶಂಭವ ಉಪಾಯ'. ಇದು ಅನುಗ್ರಹ, ಆಶೀರ್ವಾದ, ಪ್ರೀತಿ ಅಥವಾ ಯಾವುದರಿಂದಲೋ ಉಂಟಾಗುತ್ತದೆ.
ಮೊದಲ ಮಜಲು 'ಅನ್ವ ಉಪಾಯ' ಅನಿವಾರ್ಯವಾದುದು. ಎರಡನೆಯ ಮಜಲು 'ಶಕ್ತ ಉಪಾಯ' ಸ್ಪಷ್ಟವಾದುದು. 'ಶಂಭವ ಉಪಾಯ'ವು ಉಡುಗೊರೆ.

ಪ್ರ. ಗುರುದೇವ್, ಒಂದು ಮಗುವು ಆರ್ಟ್ ಎಕ್ಸೆಲ್ ಕೋರ್ಸ್ ನಲ್ಲಿ ಕೇಳಿದ ಪ್ರಶ್ನೆ. ಒಬ್ಬರು ಪ್ರಸಿದ್ಧಿ  ಹಾಗು ಮಹತ್ವ ಪಡೆದರೆ ಅದರ ಅನುಭವವು ಹೇಗಿರುತ್ತದೆ?

ಶ್ರೀ.ಶ್ರೀ. ರವಿಶಂಕರ್: ನಾನು ಒಂದು ಮಗುವಾಗಬೇಕು ಹಾಗು ಮಗುವಾಗಿಯೇ ಮುಂದುವರಿಯಬೇಕು. ಮಗುವಾಗಿರುವ ಸಂತೋಷವನ್ನು ಯಾವುದೂ ಕೊಡುವುದಿಲ್ಲ. ಎಲ್ಲರು ತಿಳಿಯಬೇಕು, ನೀವು ಬೆಳೆಯಲು ಸಾಧ್ಯವಿಲ್ಲವೆಂದು. ನನಗನ್ನಿಸುತ್ತದೆ, ನಾನು ಬೆಳೆಯಲು ನಿರಾಕರಿಸುತ್ತಿದ್ದೇನೆಂದು. ನನಗೆ ಮಗುವಾಗಿರಲು ಇಷ್ಟ ಹಾಗು ಹಾಗೆಯೇ ಇರುತ್ತೇನೆ. ನಾವು ಹಾಗೆಯೇ ಇರಬೇಕು. ಬೆಳೆಯುವುದು, ಪ್ರಸಿದ್ಧಿ ಪಡೆಯುವುದು ಇವುಗಳ ಬಗ್ಗೆ ಗಮನ ಹರಿಸಬಾರದು. ಮುಗ್ಧ ಮಕ್ಕಳು. ಇದು ತುಂಬ ಸಣ್ಣ ಸಣ್ಣ ಪ್ರಪಂಚ.

ಪ್ರ. ಗುರುದೇವ್, ದೇಹದ ಬಗೆಗಿನ ಮೋಹವನ್ನು ಹೇಗೆ ತ್ಯಜಿಸಲಿ? ಇದು ನನಗೆ ಅರಿಯಲು ಕಷ್ಟವಾಗುತ್ತಿದೆ, ನಾನೇ ದೇಹವಲ್ಲ ನಾನು ದೇಹದೊಳಗಿದ್ದೇನೆಂದು.

ಶ್ರೀ.ಶ್ರೀ. ರವಿಶಂಕರ್: ನೀವು ಯಾವುದೇ ಕಷ್ಟಪಡಬೇಕಿಲ್ಲ. ಸ್ವಲ್ಪ ತಾಳಿರಿ. ದೇಹವು ನಿಮ್ಮಿಂದ ಅಗಲುತ್ತದೆ, ನೀವು ದೇಹದಿಂದ ಅಗಲಬೇಕಾಗಿಲ್ಲ. ವಿರಮಿಸಿ. ನನಗನ್ನಿಸುತ್ತಿದೆ, ನಿಮಗೆ ನಿಮ್ಮ ಬಗ್ಗೆ ಚಿಂತಿಸಲು ಮುಕ್ತ ಸಮಯ ಸಿಕ್ಕಿದೆ ಎಂದು. ಹೊರಗೆ ಹೋಗಿ ಮತ್ತು ಒಳ್ಳೆಯ ಕೆಲಸಗಳನ್ನು ಮಾಡಿರಿ, ಪ್ರಪಂಚಕ್ಕೆ ಮತ್ತು ಜನರಿಗೆ ನೀವು ಬೇಕಾಗಿದ್ದೀರಿ.
ಪ್ರತಿಯೊಬ್ಬರೂ ಒಂದಿಲ್ಲೊಂದು ಪ್ರತಿಭೆಯನ್ನು ವರವಾಗಿ ಪಡೆದಿದ್ದಾರೆ. ಈ ಪ್ರತಿಭೆಯು ನಮಗಾಗಿ ಅಲ್ಲ. ಒಬ್ಬ ಸಂಗೀತಗಾರನಿಗೆ ಒಳ್ಳೆಯ ದನಿಯಿದೆ. ಅದು ಬಚ್ಚಲು ಮನೆಯಲ್ಲಿ ಹಾಡಲು ಅಲ್ಲ, ಅವನ ದನಿಯು ಎಲ್ಲರನ್ನು ರಂಜಿಸಲು ಇದೆ. ಒಬ್ಬ ಬರಹಗಾರನಿಗೆ ಒಳ್ಳೆಯ ಭಾಷಾಪ್ರೌಢಿಮೆ ಇದೆ. ಅದನ್ನು ಅಕ್ಷರಿಸಿ ತಾನೇ  ಓದುವುದಕ್ಕಾಗಿ ಅಲ್ಲ. ಇನ್ನೊಬ್ಬರನ್ನು ಸಂತೋಷಿಸಲು ಹಾಗು ಉತ್ತೇಜಿಸಲು ಇದೆ.
ಅದೇ ರೀತಿ ನಿಮಗೆ ಉಲ್ಲಾಸದ ಅರಿವು ಇದ್ದರೆ, ಅದರಿಂದ ನಿಮಗೆ ನೀವೇ ನಗುವುದಕ್ಕಾಗುವುದಿಲ್ಲ. ಆ ಉಲ್ಲಾಸದ ಅರಿವಿನಿಂದ ನಿಮಗೇನು ಉಪಯೋಗವಾಗುವುದಿಲ್ಲ. ಅದು ಬೇರೆಯವರಿಗಾಗಿಯೇ ಪ್ರಯೋಜನವಾಗುತ್ತದೆ. ನೀವೇನನ್ನು ಕೊಡುಗೆಯಾಗಿ ಪಡೆದಿದ್ದೀರೋ ಅದು ಬೇರೆಯವರಿಗೆ ಹಾಗು ಸಮಾಜಕ್ಕಾಗಿ. ನೀವು ಒಳ್ಳೆಯ ಸರ್ಜನ್ ಆಗಿದ್ದರೆ, ನಿಮಗೆ ನೀವೇ ಆಪರೇಷನ್ ಮಾಡಿಕೊಳ್ಳಲಾಗುವುದಿಲ್ಲ. ಒಳ್ಳೆಯ ಸರ್ಜನ್ ನ ಕುಶಲತೆ ಹಾಗು ಜ್ಞಾನವು ಅವನಿಗೆ ಅಗತ್ಯವಿದ್ದಾಗ ಉಪಯೋಗಕ್ಕೆ ಬರುವುದಿಲ್ಲ. ಅವನು ಬೇರೆಯ ಸರ್ಜನ್ ಬಳಿಗೆ ಹೋಗಬೇಕು.

ಪ್ರ. ಗುರುದೇವ್, ನಾನು ನನ್ನ ಜೀವನದಲ್ಲಿ ಜ್ಞಾನಾರ್ಜನೆ, ಅನ್ವೇಷಣೆ ಹಾಗು ವಿಶ್ಲೇಷಣೆಯಲ್ಲಿ ತೊಡಗುತ್ತಿದ್ದೆ. ನಾನು ಆರ್ಟ್ ಆಫ್ ಲಿವಿಂಗ್ ಗೆ ಬಂದಾಗ ಆಲೋಚನೆ ಹಾಗು ವಿಶ್ಲೇಷಣೆ ಮಾಡುವುದನ್ನು ನಿಲ್ಲಿಸಿ ಧ್ಯಾನ ಮಾತ್ರ ಮಾಡಲು ಹೇಳಿದರು. ಅದು ನನ್ನಿಂದ ಸಾಧ್ಯವಾಗುತ್ತಿಲ್ಲ. ದಯಮಾಡಿ ನೆರವಾಗಿ.

ಶ್ರೀ.ಶ್ರೀ. ರವಿಶಂಕರ್: ನೋಡಿಲ್ಲಿ ನಾವೀಗ ಚಿಂತನೆ ಹಾಗು ವಿಶ್ಲೇಷಣೆ ಮಾಡುತ್ತಿದ್ದೇವೆ. ನೀವು ವಿಶ್ಲೇಷಿಸಬೇಕು, ಆದರೆ ಯಂತ್ರೋಪಕರಣಗಳನ್ನು ಜಾಸ್ತಿ ಉಪಯೋಗಿಸಬೇಡಿ. ಅವುಗಳನ್ನು ಪೂರ್ಣ ದುರಸ್ತಿಗೊಳಿಸುವಿಕೆಯ ಅಗತ್ಯವಿದೆ. ದೀರ್ಘ ಪ್ರಯಾಣದ ನಂತರ ನೀವು ಕಾರನ್ನು ದುರಸ್ತಿಗೆ ಕೊಡುವುದಿಲ್ಲವೆ? ಧ್ಯಾನವು, ನಿಮ್ಮ ಮನಸ್ಸನ್ನು ರಿಪೇರಿಗೆ ಕರೆದೊಯ್ಯುವಂತೆ. ಈ ಯಂತ್ರವನ್ನು ಬಹುವಾಗಿ ಉಪಯೋಗಿಸಿದರೆ ಅದು ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತದೆ, ಆದುದರಿಂದ ಸಮತೋಲನವನ್ನು ಕಾಯ್ದುಕೊಳ್ಳುವುದು ಒಳ್ಳೆಯದು. ಧ್ಯಾನವು ಬೌದ್ದಿಕ ಯಂತ್ರವನ್ನು ನಿರ್ವಹಿಸುವ ಸಾಧನದಂತೆ. ಅದನ್ನು ಅಲಕ್ಷಿಸಬೇಡಿ. ನಿಮ್ಮ ಬೌದ್ದಿಕ ಬುದ್ದಿಯನ್ನು ಉಪಯೋಗಿಸಬೇಡಿ ಎಂದು ಹೇಳುವುದಿಲ್ಲ. ನೀವು ಬೌದ್ದಿಕ ಬುದ್ದಿಯನ್ನು ಎಷ್ಟು ಸಾಧ್ಯವೋ ಅಷ್ಟೂ ಉಪಯೋಗಿಸಿ, ಆದರೆ ಅದರ ನಿರ್ವಹಣೆಯನ್ನು ಮಾಡುತ್ತಿರಿ.
ಕರ್ಮದ ನಿಯಮದಂತೆ, ವಿಷಯಗಳು ನಿಮ್ಮ ಹಿಂದಿನ ಕೆಲಸದ ಮೇಲೆ ನಿರ್ಧಾರವಾಗಿರುತ್ತವೆ. 

ಪ್ರ. ಗುರುದೇವ್, ಆಕರ್ಷಣ ನಿಯಮದಂತೆ ನಿಮ್ಮ ಅನುಭವಗಳನ್ನು ನೀವೇ ನಿರ್ಧಾರ ಮಾಡುತ್ತಿರ, ಗೊತ್ತಿದ್ದೋ ಅಥವಾ ಗೊತ್ತಿಲ್ಲದೆಯೋ. ನಾನು ಗಲಿಬಿಲಿಗೊಳಗಾಗಿದ್ದೇನೆ. ದಯವಿಟ್ಟು ವಿವರಿಸಿ.

ಶ್ರೀ.ಶ್ರೀ. ರವಿಶಂಕರ್:  ಕೆಲವು ಕರ್ಮಗಳಿವೆ, ಅವುಗಳನ್ನು ನೀವು ಅಳಿಸಬಹುದು. ಮತ್ತೆ ಕೆಲವು ಕರ್ಮಗಳಿವೆ ಅವುಗಳನ್ನು ನೀವು ಅಳಿಸಲಾಗದು. ಅವುಗಳು ಎಗ್ಸಿಟ್ ಪಾಯಿಂಟ್ ಇದ್ದ ಹಾಗೆ. ನೀವು ಇದರಿಂದ ನಿರ್ಗಮಿಸುವುದು ಮಾತ್ರ ಸಾಧ್ಯ. ಈ ದಾರಿಯಿಂದ ನೀವು ತಪ್ಪಿಸಿಕೊಂಡರೆ  ತಿರುಗಿ ಹೋಗುವ ಅವಕಾಶ ಇಲ್ಲ, ಮುಂದಿನ ಎಗ್ಸಿಟ್ ಪಾಯಿಂಟ್ ಗಾಗಿ ಕಾಯಬೇಕಾಗುತ್ತದೆ. ಜೀವನವು ಹಾಗೆಯೇ. ಮಾಡುವಂತಹ ಆಯ್ಕೆಗಳು ತುಂಬಾ ಇರುತ್ತವೆ.  ತಿರುವುಗಳು ತುಂಬಾ ಇರುತ್ತವೆ. ಅದು ತಪ್ಪಿಹೋದರೆ ಮುಂದಿನದಕ್ಕಾಗಿ ಕಾಯಬೇಕಾಗುತ್ತದೆ. ಚಿಂತಿಸಬೇಡಿ, ದಾರಿಯಲ್ಲಿ ಹಲವಾರು ತಿರುವುಗಳು ಬರುತ್ತವೆ. ಈಗ ನೀವು ಎರಡು ತಿರುವುಗಳ ನಡುವೆ ಇದ್ದರೆ ನೀವು ಕಂಗಾಲಾಗುತ್ತೀರಿ. ಮತ್ತು ಅದೇ ವಿಧಿ.

ಪ್ರ. ಗುರುದೇವ್, ನನಗೆ ಅನ್ನಿಸುತ್ತಿದೆ ಜೀವನವು ಒಂದು ಭ್ರಮೆ ಇದ್ದಂತೆ. ಜೀವನದಲ್ಲಿ ಮೇಲ್ಮೈ  ಸಾಧಿಸಲು ಏನಾದರು ಉಪದೇಶವಿದೆಯೇ? ಹುಟ್ಟು - ಸಾವುಗಳು ನಮ್ಮ ನಿಯಂತ್ರಣಕ್ಕೆ ಬರಬಹುದೇ. ದಯವಿಟ್ಟು ವಿವರಿಸಿ.

ಶ್ರೀ . ಶ್ರೀ  . ರವಿಶಂಕರ್: ಹೌದು. ನಮಗೆ ನಿಯಂತ್ರಣ ಸಾಧ್ಯ.  ನಮಗೆ ಯಾವುದರಲ್ಲೂ ನಿಯಂತ್ರಣ ಇಲ್ಲದಿದ್ದರೆ, ಈ ಪ್ರಶ್ನೆ ಕೇಳಲೂ ಆಗುತ್ತಿರಲಿಲ್ಲ. ಜೀವನಕ್ಕೆ ಒಂದು ಸುಂದರವಾದ ಉದ್ದೇಶ ಹಾಗು ಅಂತ್ಯ ಇದೆ. ತುಂಬಾ ಕೆಲಸಗಳನ್ನು ನೀನು ಮಾಡಬಹುದು ಮತ್ತು ಕೆಲವನ್ನು ಹಾಗೆಯೇ ಒಪ್ಪಿಕೊಳ್ಳಬೇಕಾಗುತ್ತದೆ. ಏಕೆಂದರೆ ಅದು ನಿನ್ನ ಅಳತೆಗೆ ಮೀರಿದ್ದು.  ಇವೆಲ್ಲವನ್ನೂ ನಾನು ' ಸೆಲೆಬ್ರೇಟಿಂಗ್ ಸೈಲೆನ್ಸ್' ಹಾಗು ಇತರ ಪುಸ್ತಕದಲ್ಲಿ ಹೇಳಿದ್ದೇನೆ. ಆ ಪುಟಗಳನ್ನು ತಿರುಗಿಸಿ.

ಶುಕ್ರವಾರ, ಜುಲೈ 26, 2013

ಏಳು ಚಕ್ರಗಳು

ಬೂನ್, ನಾರ್ತ್ ಕೆರೋಲಿನಾ
ಜುಲೈ ೨೬, ೨೦೧೩

ಪ್ರಶ್ನೆ: ಗುರುದೇವ, ಲೈಂಗಿಕ ಶಕ್ತಿ ಮತ್ತು ಧ್ಯಾನದ ಶಕ್ತಿಯು ಒಂದೇ ಆಗಿದೆಯೇ?

ಶ್ರೀ ಶ್ರೀ ರವಿ ಶಂಕರ್: ಹೌದು, ಶರೀರದಲ್ಲಿರುವುದು ಒಂದೇ ಒಂದು ಶಕ್ತಿಯಾಗಿದೆ, ಆದರೆ ಬೇರೆ ಬೇರೆ ಚಕ್ರಗಳಲ್ಲಿ ಅದು ಬೇರೆ ಬೇರೆ ರೂಪಗಳಲ್ಲಿ ಪ್ರಕಟವಾಗುತ್ತದೆ.

ಲೈಂಗಿಕ ಶಕ್ತಿ, ಪ್ರೇಮ ಶಕ್ತಿ, ಬೌದ್ಧಿಕ ಶಕ್ತಿ, ತೀಕ್ಷ್ಣತೆ, ಅರಿವು, ಕೋಪ; ಇವುಗಳೆಲ್ಲವೂ ಸಂಬಂಧ ಹೊಂದಿವೆ.

ನೀವು ಏಳು ಚಕ್ರಗಳ ಬಗ್ಗೆ ಕೇಳಿರಬಹುದು; ಅದು, ಒಂದು ಶಕ್ತಿ ಹಲವಾರು ರೂಪಗಳಲ್ಲಿ ತನ್ನನ್ನು ಪ್ರಕಟಪಡಿಸಿಕೊಳ್ಳುವುದಾಗಿದೆ.

ಮೊದಲನೆಯ ಚಕ್ರದಲ್ಲಿ, ಬೆನ್ನುಹುರಿಯ ಬುಡದಲ್ಲಿ, ಶಕ್ತಿಯು ಉತ್ಸಾಹ ಅಥವಾ ಜಡತ್ವವಾಗಿ ಪ್ರಕಟವಾಗುತ್ತದೆ.

ಅದೇ ಪ್ರಾಣ ಶಕ್ತಿಯು ಎರಡನೆಯ ಚಕ್ರಕ್ಕೆ ಬರುವಾಗ, ಅದು ಲೈಂಗಿಕ ಶಕ್ತಿ ಅಥವಾ ಸೃಜನಾತ್ಮಕ ಅಥವಾ ಪ್ರಜನನೀಯ (ಹುಟ್ಟಿಸಬಲ್ಲ) ಶಕ್ತಿಯಾಗಿ ಪ್ರಕಟವಾಗುತ್ತದೆ.

ಅದೇ ಶಕ್ತಿಯು ನಾಭಿ ಪ್ರದೇಶಕ್ಕೆ ಏರುತ್ತದೆ, ಅಂದರೆ ಮೂರನೆಯ ಚಕ್ರಕ್ಕೆ ಮತ್ತು ನಾಲ್ಕು ವಿವಿಧ ರೂಪಗಳಲ್ಲಿ ಪ್ರಕಟವಾಗುತ್ತದೆ. ಅದು ನಾಲ್ಕು ವಿವಿಧ ಭಾವನೆಗಳಿಗೆ ಸಂಬಂಧಿಸಿದೆ - ಲೋಭ, ಮಾತ್ಸರ್ಯ, ಉದಾರತೆ ಮತ್ತು ಸಂತೋಷ. ಅದಕ್ಕಾಗಿಯೇ ಈ ಎಲ್ಲಾ ನಾಲ್ಕು ಭಾವನೆಗಳು ಹೊಟ್ಟೆಯ ಮೂಲಕ ಚಿತ್ರಿಸಲ್ಪಟ್ಟಿರುವುದು.

ಮಾತ್ಸರ್ಯವೆಂಬುದು ಒಬ್ಬರು ಹೊಟ್ಟೆಯಲ್ಲಿ ಅನುಭವಿಸುವಂತಹ ಒಂದು ಭಾವನೆಯಾಗಿದೆ. ಉದಾರತೆಯನ್ನು ಒಂದು ದೊಡ್ಡ ಹೊಟ್ಟೆಯೊಂದಿಗೆ ಚಿತ್ರಿಸಲಾಗುತ್ತದೆ, ಉದಾಹರಣೆಗೆ ಸಾಂತಾ ಕ್ಲಾಸ್. ಸಂತೋಷವನ್ನು ಕೂಡಾ ಒಂದು ದೊಡ್ಡ ಹೊಟ್ಟೆಯೊಂದಿಗೆ ಚಿತ್ರಿಸಲಾಗುತ್ತದೆ, ಉದಾಹರಣೆಗೆ ಭಗವಾನ್ ಗಣೇಶ ಮತ್ತು ಲಾಫಿಂಗ್ ಬುದ್ಧ.

ಅದೇ ಭಾವನೆಯು ನಾಲ್ಕನೆಯ ಚಕ್ರಕ್ಕೆ, ಅಂದರೆ ಹೃದಯ ಚಕ್ರಕ್ಕೆ ಬರುತ್ತದೆ. ಮೂರು ವಿವಿಧ ಭಾವನೆಗಳಾಗಿ ಪ್ರಕಟವಾಗುತ್ತದೆ, ಅವುಗಳು ಪ್ರೇಮ, ದ್ವೇಷ ಮತ್ತು ಭಯ.

ಈ ಶಕ್ತಿಯು ಐದನೆಯ ಚಕ್ರಕ್ಕೆ ಏರುವಾಗ; ಅಂದರೆ ಗಂಟಲಿನ ಮಟ್ಟಕ್ಕೆ, ಅದು ದುಃಖ ಮತ್ತು ಕೃತಜ್ಞತೆಗಳನ್ನು ಸೂಚಿಸುತ್ತದೆ. ನೀವು ದುಃಖಿತರಾಗುವಾಗ ಗಂಟಲು ಕಟ್ಟುತ್ತದೆ ಮತ್ತು ನೀವು ಕೃತಜ್ಞತೆಯನ್ನು ಅನುಹವಿಸುವಾಗ ಕೂಡಾ ಗಂಟಲು ಕಟ್ಟುತ್ತದೆ.

ಅದೇ ಶಕ್ತಿಯು ನಂತರ ಹುಬ್ಬುಗಳ ನಡುವೆ ಆರನೆಯ ಚಕ್ರಕ್ಕೆ ಹೋಗುತ್ತದೆ ಮತ್ತು ಕೋಪ ಹಾಗೂ ಜಾಗರೂಕತೆಯಾಗಿ ಪ್ರಕಟವಾಗುತ್ತದೆ. ಕೋಪ, ಜಾಗರೂಕತೆ, ಜ್ಞಾನ ಮತ್ತು ವಿವೇಕ ಇವುಗಳೆಲ್ಲವೂ ಮೂರನೆಯ ಕಣ್ಣಿನ ಕೇಂದ್ರದೊಂದಿಗೆ ಸಂಬಂಧ ಹೊಂದಿವೆ.

ಅದೇ ಶಕ್ತಿಯು ಏಳನೆಯ ಚಕ್ರಕ್ಕೆ ಹೋಗುತ್ತದೆ; ತಲೆಯ ತುತ್ತ ತುದಿಯಲ್ಲಿ ಮತ್ತು ಸಂಪೂರ್ಣ ಆನಂದವಾಗಿ ಪ್ರಕಟವಾಗುತ್ತದೆ. ಅದಕ್ಕಾಗಿಯೇ ಯಾವುದೇ ಪವಿತ್ರ ಸ್ಥಳದಲ್ಲಿನ ಅನುಭವಗಳಲ್ಲಿ, ನೀವು ಸಂಪೂರ್ಣ ಆನಂದವನ್ನು ಅನುಭವಿಸುವಾಗ ಮನಸ್ಸು ಕೂಡಲೇ ತಲೆಯ ತುತ್ತತುದಿಗೆ ಹೋಗುವುದು. ಏನೋ ಒಂದು ತಲೆಯ ತುದಿಗೆ ಏರುತ್ತದೆ ಮತ್ತು ನೀವು ಪರಮಸುಖವನ್ನು ಅನುಭವಿಸುತ್ತೀರಿ.

ಹಾಗಾಗಿ, ಶಕ್ತಿಯ ಮೇಲ್ಮುಖವಾದ ಚಲನೆ ಮತ್ತು ಕೆಳಮುಖವಾದ ಚಲನೆ ಇವುಗಳೆಲ್ಲವೂ ಜೀವನದಲ್ಲಿನ ಭಾವನೆಗಳಾಗಿವೆ.

http://www.artofliving.org/meditation/free-online-meditation

ಪ್ರಶ್ನೆ: ಗುರುದೇವ, ನಾನು ಪ್ರಾರ್ಥಿಸುವುದು ಹೇಗೆಂಬುದನ್ನು ಕಲಿಯಲು ಬಯಸುತ್ತೇನೆ. ಪ್ರಾಥಿಸುವುದು ಹೇಗೆಂಬುದರ ಬಗ್ಗೆ ನೀವು ಸ್ವಲ್ಪ ಹೇಳಬಲ್ಲಿರಾ?

ಶ್ರೀ ಶ್ರೀ ರವಿ ಶಂಕರ್: ಪ್ರಾಥನೆಯೆಂಬುದು ಸ್ವಯಂಪ್ರೇರಿತವಾದುದು. ಅದು ಎರಡು ಸಂದರ್ಭಗಳಲ್ಲಿ ಆಗುತ್ತದೆ, ನೀವು ಬಹಳ ಕೃತಜ್ಞರಾಗಿ ನಿಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸುವಾಗ ಮತ್ತು ನೀವು ಸಂಪೂರ್ಣವಾಗಿ ಅಸಹಾಯಕರಾಗಿ ಸಹಾಯಕ್ಕಾಗಿ ಬೇಡುವಾಗ.

ಪ್ರಾರ್ಥನೆಯು ಸುಮ್ಮನೇ ಆಗುತ್ತದೆ, ನಿಮಗದನ್ನು ಬೆಳೆಸಲು ಸಾಧ್ಯವಿಲ್ಲ. ಹೆಚ್ಚೆಂದರೆ ನೀವು ಏನು ಮಾಡಬಹುದೆಂದರೆ, ನಿಮ್ಮದೇ ಜೀವನದ ಕಡೆಗೆ ತಿರುಗಿ, ನೀವೆಲ್ಲಿದ್ದಿರಿ ಮತ್ತು ನೀವು ಹೇಗೆ ಸಾಗಿದಿರಿ ಎಂಬುದನ್ನು ನೋಡಬಹುದು.

ಪರ್ಯಾಯವಾಗಿ, ಇತರ ಜನರ ಜೀವನಗಳ ಕಡೆಗೆ ನೋಡಿ ಮತ್ತು ಈ ಭೂಮಿಯ ಮೇಲೆ ಎಷ್ಟೊಂದು ಜನರು ದುಃಖಿತರಾಗಿರುವರೆಂಬುದನ್ನೂ, ನೀವು ಎಷ್ಟೊಂದು ಅದೃಷ್ಟಶಾಲಿಗಳೆಂಬುದನ್ನೂ ನೋಡಿ! ಈ ಸೌಮ್ಯವಾದ ಅರಿವು, ನೀವು ಪ್ರಾರ್ಥನಾಪೂರ್ಣರಾಗಿರುವಂತೆ ಅಥವಾ ಕೃತಜ್ಞತಾಪೂರ್ಣರಾಗಿರುವಂತೆ ಮಾಡುವುದು.

ಪ್ರಾರ್ಥನೆಯು ಆರಂಭವಾಗಿದೆ ಮತ್ತು ಧ್ಯಾನವು ಅದರ ಪರಾಕಾಷ್ಠೆ ಆಗಿದೆ. ಪ್ರಾರ್ಥನೆಯು, ನೀಡಲ್ಪಟ್ಟ ಎಲ್ಲದಕ್ಕೂ ದೇವರಿಗೆ ಧನ್ಯವಾದಗಳನ್ನರ್ಪಿಸುವುದಾಗಿದೆ ಮತ್ತು ಧ್ಯಾನವು, ಅಲ್ಲಿರುವುದಾಗಿದೆ; ದೇವರು ಏನು ಹೇಳುತಿರುವರೋ ಅದನ್ನು ಕೇಳಲು ಸಿದ್ಧರಾಗಿರುವುದು. ಧ್ಯಾನವು ಒಂದು ಪ್ರೌಢ ರೂಪದ ಪ್ರಾಥನೆಯಾಗಿದೆ.

ನಾನು ನಿಮ್ಮನ್ನು ಪ್ರಾರ್ಥನೆ ಮಾಡುವುದರಿಂದ ನಿರುತ್ಸಾಹಗೊಳಿಸುತ್ತಿಲ್ಲ. ಪ್ರಾರ್ಥನೆಯು ಧ್ಯಾನಕ್ಕಿಂತ ಮುಂಚಿತವಾಗಿ ಆಗಬಹುದು. ನೀವು ಪ್ರಾರ್ಥಿಸಿ, ನಂತರ ಕುಳಿತುಕೊಂಡು ಧ್ಯಾನ ಮಾಡಬಹುದು.
 
ಪ್ರಶ್ನೆ: ಗುರುದೇವ, ಅತ್ಯಂತ ಧನಾತ್ಮಕವಾದ ಜಾಗಗಳಲ್ಲಿ ಕೂಡಾ ಮತ್ತು ಕೆಲವೊಮ್ಮೆ ಪ್ರಾರ್ಥಿಸುವಾಗ ಕೂಡಾ ಭಯಾನಕವಾದ ಹಾಗೂ ಕೆಟ್ಟ ಯೋಚನೆಗಳು ಯಾಕೆ ಬರುತ್ತವೆಯೆಂದು ನನಗೆ ಅಚ್ಚರಿಯಾಗುತ್ತದೆ. ದಯವಿಟ್ಟು ಸಹಾಯ ಮಾಡಿ. 

ಶ್ರೀ ಶ್ರೀ ರವಿ ಶಂಕರ್: ಚಿಂತಿಸಬೇಡ. ಯೋಚನೆಗಳು ಯೋಚನೆಗಳಷ್ಟೇ. ಈ ಯೋಚನೆಗಳು ಬರುತ್ತಿವೆಯೆಂಬ ಅರಿವು ನಿನ್ನಲ್ಲಿರುವವರೆಗೆ ನೀನು ಬಹಳ ಸುರಕ್ಷಿತನಾಗಿರುವೆ, ಯಾಕೆಂದರೆ ಈ ಯೋಚನೆಗಳು ಬರುತ್ತವೆ ಮತ್ತು ಹೋಗುತ್ತವೆ.
ಹಲವಾರು ಕಾರಣಗಳಿಂದಾಗಿ ನಕಾರಾತ್ಮಕ ಯೋಚನೆಗಳು ಬರುತ್ತವೆ:

೧. ಶರೀರದಲ್ಲಿ ಒಳ್ಳೆಯ ರಕ್ತಪರಿಚಲನೆಯ ಕೊರತೆಯಿಂದ ಮತ್ತು ಸರಿಯಾದ ಉಸಿರಾಟ ಇಲ್ಲದಿರುವುದರಿಂದ ಅಥವಾ ಮೆದುಳಿಗೆ ಸಾಕಷ್ಟು ಆಮ್ಲಜನಕದ ಪೂರೈಕೆಯಿಲ್ಲದಿರುವುದರಿಂದ.

೨. ಒಳ್ಳೆಯ ಶೌಚಕ್ರಿಯೆಯ ಕೊರತೆಯಿಂದ. ನಿಮಗೆ ಮಲಬದ್ಧತೆಯಾದರೆ, ನಕಾರಾತ್ಮಕ ಯೋಚನೆಗಳು ಬರುವುದನ್ನು ನೀವು ಗಮನಿಸಬಹುದು.

೩. ಪ್ರಾಣವು ಕಡಿಮೆಯಾಗಿರುವುದರಿಂದ ಅಥವಾ ಶಕ್ತಿಯಿಲ್ಲದಿರುವುದರಿಂದ.

ಇದಕ್ಕಿರುವ ಪರಿಹಾರಗಳೆಂದರೆ:

೧. ಪರಿಚಲನೆಯನ್ನು ಸುಧಾರಿಸುವುದು: ಎದ್ದೇಳಿ, ನಿಮ್ಮ ವ್ಯಾಯಾಮವನ್ನು ಮಾಡಿ, ಹಾಡಿ, ನೃತ್ಯ ಮಾಡಿ, ಯೋಗ, ಧ್ಯಾನ, ಪ್ರಾಣಾಯಾಮ ಮಾಡಿ; ಇವುಗಳೆಲ್ಲವೂ ಸಹಾಯ ಮಾಡುವುವು.

೨. ವರ್ಷಕ್ಕೊಮ್ಮೆ ಅಥವಾ ಎರಡು ಸಾರಿ ಸ್ವಲ್ಪ ಶುದ್ಧೀಕರಣ ಮಾಡಿ. ನೀವು ಶ್ರೀ ಶ್ರೀ ಯೋಗ ಹಂತ-೨ ನ್ನು ಮಾಡಿಲ್ಲದೇ ಇದ್ದರೆ ನೀವದನ್ನು ಮಾಡಬೇಕು. ಅಲ್ಲಿ ಕುಂಜಲ (ಗಂಟಲು ಮತ್ತು ಹೊಟ್ಟೆಯನ್ನು ಶುಚಿಗೊಳಿಸುತ್ತದೆ) ಮತ್ತು ಶಂಖ ಪ್ರಕ್ಷಾಳನ (ಬಾಯಿಯಿಂದ ಗುದದವರೆಗೆ ಇಡೀ ಪ್ರಾಥಮಿಕ ಕಾಲುವೆಯನ್ನು ಶುಚಿಗೊಳಿಸುತ್ತದೆ) ಗಳ ಮೂಲಕ ನೀವು ನೀರನ್ನು ಕುಡಿಯಲು ಮತ್ತು ನಿಮ್ಮ ಇಡೀ ವ್ಯವಸ್ಥೆಯನ್ನು ಶುದ್ಧೀಕರಿಸಲು ಕಲಿಯುತ್ತೀರಿ.

ನೀವು ಬಹಳಷ್ಟು ನೀರನ್ನು ಕುಡಿದು ಒಂದು ಗುಂಪಿನ ವ್ಯಾಯಾಮಗಳನ್ನು ಮಾಡುವಾಗ, ನೀರು ನಿಮ್ಮ ಶರೀರವನ್ನು ಶುಚಿಗೊಳಿಸುವುದು ಮತ್ತು ಸಂಪೂರ್ಣ ವ್ಯವಸ್ಥೆಯನ್ನು ತೊಳೆದುಬಿಡುವುದು. ಇದೇ ಕಾರಣಕ್ಕಾಗಿಯೇ ಯೋಗಿಗಳು ಪ್ರಾಚೀನ ಕಾಲದಿಂದಲೂ ಈ ಕ್ರಿಯೆಗಳನ್ನು ಸಲಹೆ ಮಾಡಿದುದು. ಇದು ಹಲವಾರು ಜನರಿಗೆ ಯೋಚನೆಗಳನ್ನು ಹೋಗಲಾಡಿಸುವುದರಲ್ಲಿ ಸಹಾಯ ಮಾಡಿದೆ.

೩. ಒಳ್ಳೆಯ ಸಂಗವನ್ನು ಇಟ್ಟುಕೊಳ್ಳಿ. ಸಂಗವೂ ಕೂಡಾ ನಿಮ್ಮ ಶಕ್ತಿಯನ್ನು ಕೆಳಕ್ಕೆಳೆಯಬಲ್ಲದು.

ಇದೆಲ್ಲದರ ಹೊರತಾಗಿ, ನಿಮಗೆ ನಕಾರಾತ್ಮಕ ಯೋಚನೆಗಳು ಬಂದರೆ ಚಿಂತಿಸಬೇಡಿ, ಅವುಗಳು ಹೇಗೆ ಬರುತ್ತವೆಯೋ ಹಾಗೇ ಹೋಗುತ್ತವೆ. ನೀವು ಅವುಗಳ ಬಗ್ಗೆ ಭಯಭೀತರಾದರೆ, ಅವುಗಳು ನಿಮ್ಮೊಂದಿಗೆ ಉಳಿಯುವುವು. ನೀವು ಭಯಪಡದೇ ಇದ್ದರೆ, ಅವುಗಳು ಸುಮ್ಮನೇ ನಿಮ್ಮನ್ನು ಬಿಟ್ಟುಹೋಗುತ್ತವೆ.

ಪ್ರಶ್ನೆ: ಗುರುದೇವ, ಒಬ್ಬ ಸಾಕ್ಷಿಯಾಗು ಎಂದು ನಾವು ಹೇಳುವಾಗ, ನಿಜವಾಗಿ ಅದರ ಅರ್ಥವೇನು? ಸರಿಯಾದ ಕೃತ್ಯ ಮಾಡುವುದನ್ನು ಖಚಿತಪಡಿಸಿಕೊಳ್ಳಲು, ಒಬ್ಬ ಸಾಕ್ಷಿಯಾಗಿರುವುದು ಮತ್ತು ಭಾಗಿಯಾಗುವುದರ ಮಧ್ಯೆ ನಾವು ಸಂತುಲನವನ್ನಿರಿಸುವುದು ಹೇಗೆ?

ಶ್ರೀ ಶ್ರೀ ರವಿ ಶಂಕರ್: ನೀನು ಹೆದ್ದಾರಿಯ ಪಕ್ಕದಲ್ಲಿ ನಿಂತುಕೊಂಡು ಹೋಗುತ್ತಿರುವ ಕಾರುಗಳನ್ನೆಲ್ಲಾ ನೋಡಿದರೆ ಅಥವಾ ನೀನು ಭೋಜನಶಾಲೆಯಲ್ಲಿ ಕುಳಿತು ಎಲ್ಲರೂ ತಿನ್ನುತ್ತಿರುವುದನ್ನು ನೋಡಿದರೆ, ಅದು ಒಬ್ಬ ಸಾಕ್ಷಿಯಾಗಿರುವುದಾಗಿದೆ.

ಅದರರ್ಥ, ಭಾಗಿಯಾಗದಿರುವುದು, ಆದರೆ ಏನಾಗುತ್ತಿದೆಯೆಂಬುದನ್ನು ಸುಮ್ಮನೆ ಗಮನವಿಟ್ಟು ನೋಡುವುದಾಗಿದೆ.

ಅದೇ ರೀತಿಯಲ್ಲಿ, ನೀನು ಈಗಾಗಲೇ ನಿನ್ನೊಳಗೆ ಬರುವ ಹಲವಾರು ಯೋಚನೆಗಳಿಗೆ ಸಾಕ್ಷಿಯಾಗಿರುವೆ. ಎಲ್ಲಾ ಯೋಚನೆಗಳಲ್ಲಿ ನೀನು ಭಾಗಿಯಾಗುವುದಿಲ್ಲ; ಇಲ್ಲದಿದ್ದರೆ ನೀನು ಹುಚ್ಚನಾಗುವೆ.

ಪ್ರಶ್ನೆ: ಗುರುದೇವ, ಮನುಕುಲದ ವಿಕಾಸದಲ್ಲಿ ಕೃತಕ ಬುದ್ಧಿಮತ್ತೆಯ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ಪಾತ್ರವೇನು? ಬೇಗನೇ ವಿಲಕ್ಷಣತೆಯು ಬರುವುದೆಂದು ವಿಜ್ಞಾನಿಗಳು ಹೇಳುತ್ತಾರೆ; ಅಂದರೆ ಕೃತಕ ಬುದ್ಧಿಮತ್ತೆಯು ಮಾನವ ಬುದ್ಧಿಮತ್ತೆಯನ್ನು ಮೀರಿ ಭೂಮಿಯನ್ನು ಆಳುವ ಒಂದು ಕಾಲ. ನಾವು ಚಿಂತಿಸಬೇಕೇ?

ಶ್ರೀ ಶ್ರೀ ರವಿ ಶಂಕರ್: ಇಲ್ಲ, ನೀವು ಅದರ ಬಗ್ಗೆ ಕಳವಳಗೊಳ್ಳಬೇಕಾದ ಅಗತ್ಯವೇ ಇಲ್ಲ. ನನಗಿರುವ ಒಂದೇ ಕಳವಳವೆಂದರೆ ಜನರು ಯಾಕೆ ತಮ್ಮ ಬುದ್ಧಿಶಕ್ತಿಯನ್ನು ಉಪಯೋಗಿಸುತ್ತಿಲ್ಲವೆಂದು. ಪ್ರತಿಯೊಬ್ಬರಿಗೂ ಬುದ್ಧಿಶಕ್ತಿಯನ್ನು ದಯಪಾಲಿಸಲಾಗಿದೆ ಮತ್ತು ಅತ್ಯಂತ ದೊಡ್ಡ ಸಮಸ್ಯೆಯೆಂದರೆ, ಅವರದನ್ನು ಬಳಸುವುದಿಲ್ಲ!

ಪ್ರಶ್ನೆ: ಪ್ರೀತಿಯ ಗುರುದೇವ, ಆತ್ಮ ಮತ್ತು ವರ್ತಮಾನದ ಕ್ಷಣಗಳ ನಡುವೆ ಒಂದು ಗುಪ್ತವಾದ ಪ್ರಬಲ ಸಂಪರ್ಕವಿದೆಯೆಂಬುದಾಗಿ ನಾನು ಕೇಳಿದ್ದೇನೆ. ನೀವು ದಯವಿಟ್ಟು ವಿವರಿಸಬಲ್ಲಿರಾ?

ಶ್ರೀ ಶ್ರೀ ರವಿ ಶಂಕರ್: ಹೌದು, ಆತ್ಮವು ಯಾವಾಗಲೂ ಇದೆ, ಮತ್ತು ಇದು ನಿಮ್ಮ ಉಡುಗೊರೆಯಾಗಿದೆ.

ಪ್ರಶ್ನೆ: ಪ್ರೀತಿಯ ಗುರುದೇವ, ಕೊನೆಯಲ್ಲಿ ದೇವರೇ ಕರ್ತೃವಾದರೆ, ಒಂದು ಜೀವಿಯು ಕರ್ಮ ಅಥವಾ ಕರ್ಮದ ಫಲಗಳಿಗೆ ಜವಾಬ್ದಾರವಾಗುವುದು ಹೇಗೆ?

ಶ್ರೀ ಶ್ರೀ ರವಿ ಶಂಕರ್: ನೋಡು, ಕರ್ತೃತ್ವವು ಫಲಾನುಭವದೊಂದಿಗೆ ಹೋಗುತ್ತದೆ. ನೀನು ಕರ್ತೃವಲ್ಲದಿದ್ದರೆ, ನೀನು ಪರಿಣಾಮವನ್ನು ಅನುಭವಿಸುವುದೂ ಇಲ್ಲ. "ನಾನು ಕರ್ತೃವಲ್ಲ, ದೇವರು ನಾನು ಹೆಚ್ಚು ಆಹಾರ ತಿನ್ನುವಂತೆ ಮಾಡಿದರು, ಆದರೆ ನನಗೆ ಹೊಟ್ಟೆ ನೋಯುತ್ತಿದೆ" ಎಂದು ನೀನು ಹೇಳುವಂತಿಲ್ಲ.

ನಾನು ಹೇಳುವುದೇನೆಂದರೆ, "ದೇವರಿಗೆ ಹೊಟ್ಟೆ ನೋಯುತ್ತಿದೆ. ನೀನೆಲ್ಲಿರುವೆ ನಡುವೆ?" ನೀನು ತಿಂದಿರುವುದಾದರೆ, ನಿನಗೆ ಹೊಟ್ಟೆ ನೋಯುತ್ತಿದೆ; ದೇವರು ತಿಂದಿರುವುದಾದರೆ, ಆಗ ಹೊಟ್ಟೆ ನೋಯುವುದು ಕೂಡಾ ದೇವರಿಗೆ. ಅಜೀರ್ಣತೆಯಿಂದ ಬಳಲುತ್ತಿರುವುದು ನೀನಲ್ಲ. ನಾನು ಹೇಳುತ್ತಿರುವುದು ನಿನಗೆ ಅರ್ಥವಾಗುತ್ತಿದೆಯೇ?

ಈ ಸಂಪೂರ್ಣ ತತ್ವಜ್ಞಾನವನ್ನು ನಾವು ತಪ್ಪಾಗಿ ಅರ್ಥೈಸಿಕೊಂಡಿದ್ದೇವೆಂದು ನನಗನ್ನಿಸುತ್ತದೆ. ಪ್ರತಿಯೊಬ್ಬ ವ್ಯಕ್ತಿಗೂ ಒಂದು ನಿರ್ದಿಷ್ಟ ಪ್ರಮಾಣದ ಸ್ವಾತಂತ್ರ್ಯವಿದೆ ಮತ್ತು ನಿರ್ದಿಷ್ಟ ಸಂಗತಿಗಳು ಅವನ ಶಕ್ತಿಯನ್ನು ಮೀರಿದುದಾಗಿದೆ. ಜೀವನವು ಎರಡರ ಸಮ್ಮಿಶ್ರಣವಾಗಿದೆ; ನಿಮ್ಮ ಸ್ವತಂತ್ರ ಇಚ್ಛೆ ಮತ್ತು ಯಾವುದು ಪೂರ್ವನಿರ್ಧಾರಿತವೋ ಅದು. ಕೆಲವು ಸಂಗತಿಗಳು ನಿಮ್ಮ ನಿಯಂತ್ರಣದಲ್ಲಿವೆ ಮತ್ತು ಬೇರೆ ಕೆಲವು ಸಂಗತಿಗಳು ಅಲ್ಲ. ಯಾವುದೂ ನನ್ನ ನಿಯಂತ್ರಣದಲ್ಲಿಲ್ಲ ಎಂದು ನೀವು ಹೇಳಲು ಸಾಧ್ಯವಿಲ್ಲ ಮತ್ತು ಎಲ್ಲವೂ ನನ್ನ ನಿಯಂತ್ರಣದಲ್ಲಿದೆಯೆಂದು ಕೂಡಾ ನೀವು ಹೇಳಲು ಸಾಧ್ಯವಿಲ್ಲ, ಎರಡೂ ಸರಿಯಲ್ಲ.

ಉದಾಹರಣೆಗೆ, ಮಳೆ ಬರುವುದೇ ಅಥವಾ ಇಲ್ಲವೇ ಎಂಬುದರ ಮೇಲೆ ನಿಮಗೆ ಯಾವುದೇ ನಿಯಂತ್ರಣವಿಲ್ಲ. ಹಾಗಿದ್ದರೂ, ಮಳೆ ಬರುತ್ತಿದ್ದರೆ, ಒದ್ದೆಯಾಗಬೇಕೇ ಅಥವಾ ಬೇಡವೇ ಎಂಬುದು ನಿಮ್ಮ ನಿಯಂತ್ರಣದಲ್ಲಿರುತ್ತದೆ. ಮಳೆ ಬರುವುದು ವಿಧಿಯಾಗಿದೆ, ಆದರೆ ಒದ್ದೆಯಾಗದಿರುವುದು ನಿಮ್ಮ ಸ್ವತಂತ್ರ ಇಚ್ಛೆಯಾಗಿದೆ. ಒಂದು ರೈನ್‌ಕೋಟ್ ಹಾಕಿಕೊಳ್ಳಿ ಅಥವಾ ಒಂದು ಛತ್ರಿ ಹಿಡಿದುಕೊಳ್ಳಿ ಮತ್ತು ನೀವು ಒದ್ದೆಯಾಗದೇ ಇರುತ್ತೀರಿ.

ಪ್ರಶ್ನೆ: ಪ್ರೀತಿಯ ಗುರುದೇವ, ಜ್ಞಾನೋದಯವನ್ನು ಹೊಂದುವ ಬಯಕೆಯು, ಜ್ಞಾನೋದಯಕ್ಕಿರುವ ಒಂದು ಅಡ್ಡಿಯೇ? ಜ್ಞಾನೋದಯವನ್ನು ಹೊಂದುವ ಬಯಕೆಯು ಒಂದು ಕೆಟ್ಟ ವಿಷಯವೇ?

ಶ್ರೀ ಶ್ರೀ ರವಿ ಶಂಕರ್: ಇಲ್ಲ, ಅದೊಂದು ಅಡ್ಡಿಯಾಗಬೇಕೆಂದೇನೂ ಇಲ್ಲ. ಅದರ ಬಗ್ಗೆಯಿರುವ ಜ್ವರತೆಯು ಒಂದು ಅಡ್ಡಿಯಾಗಬಲ್ಲದು, ಆದರೆ ಬಯಕೆ ಪರವಾಗಿಲ್ಲ. ಅದು ಈಗಾಗಲೇ ಅಲ್ಲಿದ್ದರೆ, ಆಗ ನೀನೇನು ಮಾಡುವುದು? 

ಅರ್ಥವಾಗದ್ದನ್ನು ಅರ್ಥ ಮಾಡಿಕೊಳ್ಳುವ ಪರಿ

ಬೂನ್, ನಾರ್ತ್ ಕೆರೋಲಿನಾ
ಜುಲೈ ೨೬, ೨೦೧೩

ಪ್ರಶ್ನೆ: ಪ್ರೀತಿಯ ಗುರುದೇವ, ಸತ್ಯವು ವ್ಯಂಜನ ಮತ್ತು ಸ್ವರಗಳ ನಡುವೆ ಅಡಗಿದೆಯೆಂದು ನೀವು ಇವತ್ತು ಹೇಳಿದಿರಿ. ಅದು ಬಹಳ ಸುಂದರವಾಗಿದೆ. ಅದರ ಬಗ್ಗೆ ನೀವು ಇನ್ನೂ ಸ್ವಲ್ಪ ಹೆಚ್ಚು ಹೇಳಬಲ್ಲಿರಾ?

ಶ್ರೀ ಶ್ರೀ ರವಿ ಶಂಕರ್: ಬೇರೆ ಬೇರೆ ಅಕ್ಷರಗಳು ಶರೀರದ ಬೇರೆ ಬೇರೆ ಭಾಗಗಳ ಮೇಲೆ ಪ್ರಭಾವ ಬೀರುತ್ತವೆ. ನಮ್ಮ ಶರೀರವು ಅಕ್ಷರಗಳ ಒಂದು ಮಾಲೆಯಿದ್ದಂತೆ, ಅದು ಅಕ್ಷರ ಮಾಲಿಕಾ ಎಂದು ಕರೆಯಲ್ಪಡುತ್ತದೆ. ನೀವೇ ಒಂದು ಮಾಲೆಯಾಗಿರುವಿರಿ; ಬೇರೆ ಬೇರೆ ಅಕ್ಷರಗಳು ಬೇರೆ ಬೇರೆ ಕೇಂದ್ರಗಳ ಮೇಲೆ ಪ್ರಭಾವ ಬೀರುತ್ತವೆ.

ಭಾಷೆಗಳಲ್ಲಿ ಅತ್ಯಂತ ಹಳೆಯದಾಗಿರುವ ಸಂಸ್ಕೃತವನ್ನು ಯಾವ ರೀತಿಯಲ್ಲಿ ಸಂಘಟಿಸಲಾಗಿದೆಯೆಂದರೆ, ಅದು ಡಾರ್ವಿನನ ವಿಕಾಸ ವಾದಕ್ಕೆ ಹೊಂದಿಕೆಯಾಗುತ್ತದೆ.

ಸಂಸ್ಕೃತ ಭಾಷೆಯ ಮೊದಲನೆಯ ಅಕ್ಷರವು ಅ ಆಗಿದೆ, ಅದನ್ನೇ ಪ್ರತಿಯೊಂದು ಮಗುವೂ ಹೇಳುವುದು. ಸ್ವರಗಳಲ್ಲಿ ಕಡೆಯದು ಅಃ ಆಗಿದೆ. ನೀವು ನಗುವಾಗ ಬರುವ ಶಬ್ದ ಯಾವುದು? ಅಹ ಹ ಹ! ಹೀಗೆ, ನಗುವಿನಲ್ಲಿ ಸಂಪೂರ್ಣ ಭಾಷೆಯು ಇದೆ, ಅ ದಿಂದ ಅಃ ವರೆಗೆ. ಸಂಸ್ಕೃತದಲ್ಲಿ, ಅಃ ಎಂಬುದು ಆಶ್ಚರ್ಯ ಮತ್ತು ನಗುವಿಗೆ ಬಳಸಲ್ಪಡುತ್ತದೆ. ನೀವು ಪ್ರಯತ್ನಿಸಿದರೂ ಕೂಡಾ, ಆ ಮತ್ತು ಹಾ ಇಲ್ಲದೆ ನಿಮಗೆ ನಗಲು ಸಾಧ್ಯವಿಲ್ಲ.

ಸಂಸ್ಕೃತ ಸ್ವರಗಳನ್ನು ನೀವು ಗಮನಿಸಿದರೆ; ಅ, ಆ, ಇ, ಈ, ಊ, ಔ; ಶಬ್ದವು ಹೇಗೆ ಉತ್ಪತ್ತಿಯಾಗುವುದೆಂದು ಗಮನಿಸಿ. ಅ ಎಂಬ ಶಬ್ದವು ಗಂಟಲಿನ ಬುಡದಲ್ಲಿ ಬರುತ್ತದೆ, ಆ ಎಂಬುದು ಇನ್ನೂ ಹೆಚ್ಚು ಬಹಿರ್ಮುಖವಾಗಿ ಬರುತ್ತದೆ. ಇ ಎಂಬುದು ಬಾಯಿಯ ಮೇಲ್ಭಾಗದಿಂದ ಬರುತ್ತದೆ ಮತ್ತು ಈ ಎಂಬುದು ಹೆಚ್ಚು ಬಹಿರ್ಮುಖವಾಗಿದೆ. ಊ ಎಂಬುದು ತುಟಿಗಳಿಗೆ ಬರುತ್ತದೆ ಮತ್ತು ಋ ಎನ್ನುವಾಗ ನಾಲಿಗೆ ತಿರುವುತ್ತದೆ. ಉಳಿದ ಅಕ್ಷರಗಳು ಐ, ಒ, ಔ, ಅಂ, ಅಃ.

ನೀವು ವ್ಯಂಜನಗಳ ಕಡೆಗೆ ಹೋದರೆ, ಅವುಗಳು ಕ, ಖ, ಗ, ಘ, ಙ ಮತ್ತು ಅವುಗಳು ಗಂಟಲಿನಿಂದ ಪ್ರಾರಂಭವಾಗುತ್ತವೆ.

ನಂತರ ಚ, ಛ, ಜ, ಝ, ಞ ಶಬ್ದವು ಬಾಯಿಯ ಕಡೆಗೆ ಚಲಿಸುತ್ತದೆ. ನಂತರ ಬರುವುದು, ತ, ಥ, ದ, ಧ, ನ, ಇವುಗಳು ಬರುವುದು ಹಲ್ಲುಗಳ ಚಲನೆಯ ಸಹಾಯದಿಂದ. ಕೊನೆಯ ಕೆಲವು ತುಟಿಗಳಿಂದ ಬರುತ್ತವೆ, ಪ, ಫ, ಬ, ಭ, ಮ.
ನೀವು ಗಮನಿಸಿದರೆ, ಈ ಎಲ್ಲಾ ಶಬ್ದಗಳು ಗಂಟಲಿನ ಬುಡದಿಂದ ಹೊರಮುಖವಾಗಿ ಚಲಿಸುತ್ತವೆ.

ಪ್ರಾಣಿ ಸಂಕುಲವನ್ನು ಕೂಡಾ ಇಲ್ಲಿ ಗಣನೆಗೆ ತೆಗೆದುಕೊಳ್ಳಲಾಗಿದೆ. ಎಲ್ಲಾ ಪಕ್ಷಿಗಳು ಕ ಮತ್ತು ಚ ಶಬ್ದಗಳನ್ನು ಹೊರಹೊಮ್ಮುತ್ತವೆ. ಎರಡು ಪಕ್ಷಿಗಳು ಮಾತ್ರ, ಅಂದರೆ ಗಿಳಿ ಮತ್ತು ಮೈನಾ, ಇವುಗಳಿಗೆ ಮ ಎಂಬ ಶಬ್ದವನ್ನು ಕೂಡಾ ಬಳಸಲು ಸಾಧ್ಯವಿದೆ. ಇತರ ಎಲ್ಲಾ ಪಕ್ಷಿಗಳು ಕ ಮತ್ತು ಚ ಮಾತ್ರ ಬಳಸುತ್ತವೆ.

ಕಪ್ಪೆಗಳಂತಹ ಉಭಯಚರ ಪ್ರಾಣಿಗಳು, ತ, ಥ ಅಥವಾ ತ್ರ ಎಂಬಂತಹ ಶಬ್ದಗಳನ್ನು ಮಾಡುತ್ತವೆ.

ಹಸುಗಳು, ಕುರಿಗಳು, ಮೇಕೆಗಳು, ಕುದುರೆಗಳು, ಮೊದಲಾದಂತಹ ಸಸ್ತನಿಗಳು ಪ, ಫ, ಬ, ಭ, ಮ ಅಥವಾ ಮುಂದಿನ ವ್ಯಂಜನಗಳ ಗುಂಪನ್ನು ಬಳಸುತ್ತವೆ.

ಕೊನೆಯದಾಗಿ ಬರುವುದು, ಯ, ರ, ಲ, ವ, ಶ, ಷ ಗಳಂತಹ ಇತರ ಎಲ್ಲಾ ಅಕ್ಷರಗಳು.

ಆದ್ದರಿಂದ, ಅಕ್ಷರಗಳು ಮತ್ತು ಶಬ್ದಗಳು ವಿಕಾಸವಾದದ ಕ್ರಮದಲ್ಲಿಯೇ ಸಂಯೋಜಿಸಲ್ಪಟ್ಟಿವೆ; ಅಂದರೆ ಪಕ್ಷಿಗಳು, ಪ್ರಾಣಿಗಳು, ಸಸ್ತನಿಗಳು ಮತ್ತು ಮಾನವರು. ಅದು ಆಸಕ್ತಿಕರವಾಗಿಲ್ಲವೇ? ಅದು ಸಂಪೂರ್ಣವಾಗಿ ಆಕರ್ಷಕವಾದುದು.

ಇಂಗ್ಲೇಡ್‌ನಲ್ಲಿ ಒಂದು ಸಂಶೋಧನೆಯನ್ನು ಮಾಡಲಾಯಿತು; ಸಂಸ್ಕೃತ ಭಾಷೆಯು ನರ-ಭಾಷಾ ಕ್ರಿಯೆಗಳಿಗೆ ಬಹಳ ಸೂಕ್ತವಾದುದು ಎಂಬುದಾಗಿ. ಸಂಸ್ಕೃತದ ಮೂಲವನ್ನು ಹೊಂದಿದ ಜನರು ಗಣಿತ ಮತ್ತು ಲೆಕ್ಕಾಚಾರಗಳಲ್ಲಿ ಬಹಳ ಚುರುಕಾಗಿರುವುದು ಯಾಕೆಂದು ತಿಳಿಯಲು ಸುಮಾರು ಹತ್ತು ವರ್ಷಗಳಿಂದ ವಿಜ್ಞಾನಿಗಳು ಪ್ರಯತ್ನಿಸುತ್ತಿದ್ದರು. ಇಂಗ್ಲಿಷ್ ಭಾಷೆಯಲ್ಲಿ ಸುಮಾರು ೬೦% ಸಂಸ್ಕೃತವನ್ನು ಅನುಸರಿಸುತ್ತದೆಯೆಂಬುದು ನಿಮಗೆ ಗೊತ್ತಿದೆಯೇ? ಇಂಗ್ಲಿಷ್ ಪದಗಳ ಮೂಲಗಳನ್ನು ನೀವು ನೋಡಿದರೆ, ಅವುಗಳಲ್ಲಿ ಹೆಚ್ಚಿನವು ಸಂಸ್ಕೃತ ಮೂಲದವು. ಸ್ವಸ ಎಂಬುದು ಸಿಸ್ಟರ್ ಆಗಿದೆ, ಭ್ರಾತ ಎಂಬುದು ಬ್ರದರ್ ಆಗಿದೆ, ಪಿತಾ ಎಂಬುದು ಫಾದರ್ ಮತ್ತು ಮಾತಾ ಎಂಬುದು ಮದರ್ ಆಗಿದೆ. ಇವುಗಳ ರೀತಿಯಲ್ಲಿ ನೀವು ಸಮಾಂತರಗಳನ್ನು ಎಳೆದರೆ, ಇಂಗ್ಲಿಷ್‌ನ ಮೂಲವು ಸಂಸ್ಕೃತ ಭಾಷೆಯೆಂಬುದು ನಿಮಗೆ ಮನದಟ್ಟಾಗುವುದು.

ಇವತ್ತು ಬೆಳಗ್ಗೆ ನಾವು ನೋಡಿದಂತೆ, ನಾಲ್ಕು ಹಂತಗಳ ವಾಣಿಯಿದೆ:

೧. ವೈಖರಿ ಎಂಬುದು ನಾವೆಲ್ಲರೂ ಈಗ ಸಂಪರ್ಕಕ್ಕೆ ಬಳಸುತ್ತಿರುವ ಮಾತಿನ ಹಂತ.

೨. ಮಧ್ಯಮ ಎಂಬುದು ವೈಖರಿಗಿಂತ ಸೂಕ್ಷ್ಮವಾಗಿದೆ. ಅಲ್ಲಿ ನಿಮಗೆ ಸಂಪರ್ಕಿಸಲು ಭಾಷೆಯ ಅಗತ್ಯವಿಲ್ಲ, ಆದರೆ ಕೇವಲ ಉದ್ದೇಶಗಳು ಅಥವಾ ಭಾವನೆಗಳು ಸಂಪರ್ಕಿಸಲು ಸಹಾಯ ಮಾಡುತ್ತವೆ. ಇದು ನೀವು, ನಿಮ್ಮ ಭಾಷೆ ಅರ್ಥವಾಗದ ಜನರೊಂದಿಗೆ ಸಂಪರ್ಕಿಸುವಂತೆ ಅಥವಾ ತಮಗೆ ಹಸಿವಾಗಿದೆಯೆಂದೋ, ನಿದ್ದೆ ಬರುತ್ತಿದೆಯೆಂದೋ ನಿಮ್ಮಲ್ಲಿ ಹೇಳಲು ತಗಾದೆ ತೆಗೆಯುವ ಮಕ್ಕಳೊಂದಿಗೆ ನೀವು ಸಂಪರ್ಕಿಸುವಂತೆ ಅಥವಾ ವಿವಿಧ ಸನ್ನೆಗಳ ಮೂಲಕ ಸಂಪರ್ಕಿಸುವಂತೆ. ಮಧ್ಯಮ ಎಂಬುದು ಮಾತಿಗಿಂತ ಸೂಕ್ಷ್ಮವಾಗಿದೆ. ಪ್ರಾಣಿಗಳು ಮತ್ತು ಮರಗಳು ಸಹ ಸಂಪರ್ಕಿಸಲು ಮಧ್ಯಮವನ್ನು ಬಳಸುತ್ತವೆ.

೩. ಪಶ್ಯಂತಿ ಎಂದರೆ ಎಲ್ಲಿ ನೀವು ಪದಗಳು ಅಥವಾ ಭಾಷೆಗಳಿಲ್ಲದೆಯೇ ಜ್ಞಾನವನ್ನು ಸುಲಭವಾಗಿ ಗುರುತಿಸುವಿರೋ ಅದು. ಅದು ಆಳವಾದ ಅಂತಃಸ್ಫುರಣೆಯಂತೆ. ಕೆಲವೊಮ್ಮೆ, ನೀವು ಧ್ಯಾನದಲ್ಲಿ ಆಳಕ್ಕೆ ಹೋದಾಗ, ನಿಮಗೆ ಯಾವುದಾದರೂ ಮಂತ್ರೋಚ್ಛಾರ ಅಥವಾ ಶಬ್ದಗಳು ಕೇಳಿಸಲೂಬಹುದು ಅಥವಾ ನಿಮಗೆ ಯಾವುದಾದರೂ ಉಪಾಯಗಳು ಸಿಗಲೂಬಹುದು.

ಭಾಷೆಯಿಲ್ಲದೆಯೇ ಉಪಾಯಗಳು ಬರುವಾಗ, ಅದು ಪಶ್ಯಂತಿ ಎಂದು ಕರೆಯಲ್ಪಡುತ್ತದೆ. ಒಬ್ಬ ದೃಷ್ಟಾ ಎಲ್ಲೋ ಆಳದಿಂದ ಅದನ್ನು ಸ್ವಲ್ಪ ಮಟ್ಟಿಗೆ ಗುರುತಿಸಬಹುದು. ಎಲ್ಲಾ ವೈಜ್ಞಾನಿಕ ಸಂಶೋಧನೆಗಳು ಪಶ್ಯಂತಿಯ ಮಟ್ಟದಿಂದ ಆಗುತ್ತವೆ.

೪. ಪರ, ಪಶ್ಯಂತಿಯನ್ನು ಮೀರಿದುದು, ಇದು ಸಾರ್ವತ್ರಿಕ ಭಾಷೆಯಾಗಿದೆ ಅಥವಾ ಎಲ್ಲಾ ಅಭಿವ್ಯಕ್ತಿಗಳ ಮೂಲವಾಗಿದೆ. ಆಳವಾದ ಸಮಾಧಿ ಅಥವಾ ಸಂಪೂರ್ಣ ಸ್ಥಿರತೆಯಲ್ಲಿ, ನೀವು ಪರದೊಂದಿಗೆ ಜೋಡಿರುತ್ತೀರಿ. ಯಾವುದೇ ಮೌಖಿಕ ಸಂಪರ್ಕದ ಅಗತ್ಯವಿರುವುದಿಲ್ಲ. ನಿಜವಾಗಿಯೂ, ನಿಜವಾದ ಸಂಪರ್ಕ ಆಗುವುದು ಪರದಿಂದ. ಅದು ಕೇವಲ ಸಂಪರ್ಕಿಸುವ ಕಂಪನವಾಗಿದೆ.

ನಾವು ಮಾಡುವ, ವೈಖರಿಯ ಮಟ್ಟದಿಂದ ಇರುವ ಇತರ ಎಲ್ಲಾ ಮಾತುಕತೆಗಳು ಇರುವುದು ಮನಸ್ಸನ್ನು ಕೆಲಸದಲ್ಲಿ ತೊಡಗಿಸಿಕೊಂಡಿರಲು ಮಾತ್ರ. ಮನಸ್ಸಿಗೆ ಪರದ ಮಟ್ಟದಲ್ಲಿರುವ ಸಂಪರ್ಕವನ್ನು ಕಲ್ಪಿಸಲು ಸಾಧ್ಯವಿಲ್ಲ, ಆತ್ಮವು ಮಾತ್ರ ಅದನ್ನು ಅರ್ಥಮಾಡಿಕೊಳ್ಳುತ್ತದೆ. ಪರ ಎಂಬುದು ಆತ್ಮದ ಭಾಷೆಯಾಗಿದೆ. ಮನಸ್ಸಿಗೆ ಸ್ವಲ್ಪ ಮನರಂಜನೆಯ ಅಗತ್ಯವಿರುತ್ತದೆ; ಮನಸ್ಸಿನ ಮನರಂಜನೆಯು ವೈಖರಿಯಾಗಿದೆ, ನಾವು ಮಾತನಾಡುವ ಭಾಷೆ.

ಪ್ರಶ್ನೆ: ಗುರುದೇವ, ದಯವಿಟ್ಟು ನೀವು ಶಬ್ದ/ಅಕ್ಷರ ಧ್ಯಾನದ ಬಗ್ಗೆ ಸ್ವಲ್ಪ ಹೆಚ್ಚು ಮಾತನಾಡುವಿರಾ?

ಶ್ರೀ ಶ್ರೀ ರವಿ ಶಂಕರ್: ನಾವು ಇವತ್ತು ಮಾಡಿದ್ದು ಅದೇ ಧ್ಯಾನ. ಅಲ್ಲಿ ನೀವು ಆ ಇಲ್ಲದೆ ಕಾ ಕ್ಕೆ ಹೋಗಲು ಸಾಧ್ಯವಿಲ್ಲ. ಎಲ್ಲಿಂದ ಶಬ್ದವು ಎದ್ದಿತೋ ಅದೇ ಮೂಲಕ್ಕೆ ನೀವು ಹೋದಿರಿ, ಸರಿಯಾ? ಆ ಸಮಯದಲ್ಲಿ ಏನಾಯಿತು? ಸ್ಥಿರತೆ! ಆ ಕ್ಷಣದಲ್ಲಿ ಮನಸ್ಸು ಸಂಪೂರ್ಣವಾಗಿ ಸ್ಥಿರವಾಯಿತು. ಹೀಗೆ, ಎಲ್ಲಿಂದ ಯೋಚನೆಯು ಬಂದಿತೋ ಆ ಮೂಲಕ್ಕೆ ನಾವು ಹೋದೆವು, ೨೫ ನಿಮಿಷಗಳು ಒಂದು ಕ್ಷಣದಂತೆ ಕಳೆದು ಹೋದವು. ನಿಮಗೆ ಇದೆಲ್ಲವೂ ತಿಳಿದಿರುವಾಗ, ನೀವು ಒಳಕ್ಕೆ ಆಳವಾಗಿ ಹೋಗಬಲ್ಲಿರಿ.
ಈ ವಿಷಯಗಳು ಯಾವುದೇ ಪುಸ್ತಕಗಳಲ್ಲಿ ಸಿಗುವುದಿಲ್ಲ; ಅದು ಅನುಭವದಿಂದಲೇ ಬರಬೇಕು, ಅದು ಬಹಳ ಪ್ರಧಾನವಾದುದು.

ಶಬ್ದವು ಹೇಗೆ ಉತ್ಪತ್ತಿಯಾಗುತ್ತದೆ ಎಂಬುದರ ಬಗ್ಗೆ ಒಬ್ಬರು ಋಷಿಗಳು ಹೇಳಿದ ಒಂದು ಸುಂದರವಾದ ಪುರಾತನ ಮಾತಿದೆ; ಆತ್ಮ ಬುಧ್ಯ ಸಮೇತ್ಯುಕ್ತ. ಆತ್ಮವು ಬುದ್ಧಿಯೊಂದಿಗೆ ಕೂಡಿಕೊಂಡಾಗ ಮತ್ತು ಮನಸ್ಸಿನೊಂದಿಗೆ ಜೋಡಿಕೊಂಡಾಗ, ಶರೀರದಲ್ಲಿ  ಉಷ್ಣತೆ ಅಥವಾ ಚೈತನ್ಯದ ಉತ್ಪತ್ತಿಯಾಗುತ್ತದೆ. ಈ ಶಕ್ತಿಯು ಧ್ವನಿಪೆಟ್ಟಿಗೆಯ ಮೂಲಕ ವಾಯುವನ್ನು ಸಾಗಿಸುತ್ತದೆ ಮತ್ತು ನಿಧಾನವಾಗಿ ಶಬ್ದವು ಉತ್ಪತ್ತಿಯಾಗುತ್ತದೆ. ಈ ಯಾಂತ್ರಿಕ ವ್ಯವಸ್ಥೆಯು ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದನ್ನು ಅರ್ಥೈಸಿಕೊಳ್ಳಲು; ಶಬ್ದದ ಮೂಲಕ್ಕೆ ಹೋಗಲು, ಅದು ಹೇಗೆ ಉತ್ಪತ್ತಿಯಾಗುತ್ತದೆ ಎಂಬುದನ್ನು ಕಂಡುಹಿಡಿಯಲು ಬಹಳಷ್ಟು ಆತ್ಮವಿಮರ್ಶೆ ಮತ್ತು ಸ್ಥಿರತೆಯ ಅಗತ್ಯವಿರುತ್ತದೆ. ಅದು ಸ್ವಾರಸ್ಯವಾದುದು.

ನೂರಮೂರು ಅಥವಾ ೧೦೪ ವರ್ಷಗಳವರೆಗೆ ಬದುಕಿದ ಒಬ್ಬರು ಯೋಗಿಯಿದ್ದರು. ಅವರು ಸುಮಾರು ಏಳೋ ಎಂಟೋ ವರ್ಷಗಳ ಹಿಂದೆ ತೀರಿಹೋದರು. ಅವರಿಗೆ ನಾದ ಬ್ರಹ್ಮ ಎಂಬ ಬಿರುದನ್ನು ನೀಡಲಾಗಿತ್ತು, ಯಾಕೆಂದರೆ ಅವರಿಗೆ ತಮ್ಮ ಶರೀರದ ಯಾವುದೇ ಭಾಗದಿಂದ ಬೇಕಾದರೂ ಒಂದು ಶಬ್ದವನ್ನು ಮಾಡುವುದು ಸಾಧ್ಯವಿತ್ತು. ನಾನು ಕೂಡಾ ಅವರನ್ನು ಒಮ್ಮೆ ಭೇಟಿಯಾಗಿದ್ದೆ. ತಮ್ಮ ಶರೀರದ ಬೇರೆ ಬೇರೆ ಭಾಗಗಳಿಂದ ನಿರ್ದಿಷ್ಟ ಶಬ್ದಗಳನ್ನು ಮಾಡುವುದು ಅವರಿಗೆ ಸಾಧ್ಯವಿತ್ತು.

ಅವರು ಯು.ಎಸ್.ಎ.ಗೆ ಕೂಡಾ ಹೋದರು ಮತ್ತು ವಿಜ್ಞಾನಿಗಳಿಗೆ ಬಹಳ ಆಶ್ಚರ್ಯವಾಯಿತು. ಅವರು ಇಲೆಕ್ಟ್ರೋಡುಗಳನ್ನು ಅವರ ಮೇಲೆ ಹಾಕಿ ಬಹಳಷ್ಟು ಪ್ರಯೋಗಗಳನ್ನು ಮಾಡಿದರು. ಅವರು ಹಿಮಾಲಯಗಳಲ್ಲಿ ಋಷಿಕೇಶದಲ್ಲಿ ವಾಸಿಸುತ್ತಿದ್ದರು ಮತ್ತು ಇದನ್ನು ಬಹಳ ದೀರ್ಘಕಾಲದಿಂದ ಅಭ್ಯಾಸ ಮಾಡಿದ್ದರು. ಅವರು ಭಾರಿಯಾದ, ಸ್ನಾಯುಭರಿತ ದೇಹವನ್ನು ಹೊಂದಿದ್ದರು ಮತ್ತು ಶರೀರದ ವಿವಿಧ ಭಾಗಗಳಿಂದ ಕ, ಚ, ಪ ಗಳಂತಹ ಶಬ್ದಗಳನ್ನು ಮಾಡಬಲ್ಲವರಾಗಿದ್ದರು. ಅದು ಆಸಕ್ತಿಕರವಾಗಿತ್ತು.

ಅವರೊಬ್ಬರು ಬಹಳ ಸಜ್ಜನರಾಗಿದ್ದರು. ಆದರೆ ಅವರು ತಮ್ಮ ಜ್ಞಾನವನ್ನು ಯಾರಿಗಾದರೂ ಕಲಿಸಿದರೆಂದು ನನಗನ್ನಿಸುವುದಿಲ್ಲ; ಅದು ಅವರೊಂದಿಗೆ ಹೋಯಿತು.

ಈ ಜಗತ್ತು ಅಚ್ಚರಿಗಳಿಂದ ತುಂಬಿದೆ. ಒಂದು ಸಮಯದಲ್ಲಿ, ನಾನು ಸುಮಾರು ೨೨ ಅಥವಾ ೨೫ ವರ್ಷ ವಯಸ್ಸಿನವನಾಗಿದ್ದಾಗ, ಇದನ್ನು ನಾನು ಅವರಿಂದ ಕಲಿಯಬೇಕು ಎಂದು ಅಂದುಕೊಂಡಿದ್ದೆ, ಆದರೆ ಆಗ ನನಗೆ ಮಾಡಲು ಇತರ ಹಲವಾರು ಕೆಲಸಗಳಿದ್ದವು.

ಈ ಭೂಗ್ರಹದಲ್ಲಿ ಜ್ಞಾನವು ಕೊನೆಯಿಲ್ಲದುದಾಗಿದೆ, ವಿಶೇಷವಾಗಿ ಅತೀಂದ್ರಿಯ ಜ್ಞಾನ. ನಾನು ಜಿನೇವಾದಲ್ಲಿ ಸಿ.ಇ.ಆರ್.ಎನ್. (ಯುರೋಪಿಯನ್ ಆರ್ಗನೈಸೇಷನ್ ಫಾರ್ ನ್ಯೂಕ್ಲಿಯಾರ್ ರಿಸರ್ಚ್)ಗೆ ಆಮಂತ್ರಿಸಲ್ಪಟ್ಟೆ. ಅಲ್ಲಿನ ವಿಜ್ಞಾನಿಗಳು ನನ್ನನ್ನು ಸ್ವಾಗತಿಸಿದರು ಮತ್ತು ನನಗೆ ದೇವಕಣ (ಗಾಡ್ ಪಾರ್ಟಿಕಲ್) ವನ್ನು ಮತ್ತು ಅವರದನ್ನು ಹೇಗೆ ಕಂಡುಹಿಡಿದರು ಎಂಬುದನ್ನು ತೋರಿಸಿದರು.

ಅಲ್ಲಿನ ಹಿರಿಯ ವಿಜ್ಞಾನಿಗಳಲ್ಲೊಬ್ಬರು, ತಾವು ಪದಾರ್ಥಗಳ ಬಗ್ಗೆ ಕಳೆದ ೪೦ ವರ್ಷಗಳಿಂದ ಕೆಲಸ ಮಾಡುತ್ತಿರುವುದಾಗಿಯೂ, ಕಂಡುಕೊಂಡಿದ್ದೇನೆಂದರೆ ಅದು ಅಸ್ತಿತ್ವದಲ್ಲೇ ಇಲ್ಲವೆಂಬುದಾಗಿಯೂ ಹೇಳಿದರು. ಅವರು ಉಪ-ಪರಮಾಣು ಕಣಗಳು, ನ್ಯೂಟ್ರೋನುಗಳು, ಇಲೆಕ್ಟ್ರೋನುಗಳು, ಪ್ರೋಟೋನುಗಳು, ಮೊದಲಾದವುಗಳ ಮೇಲೆ ಕೆಲಸ ಮಾಡುತ್ತಿದ್ದರು. ಆದರೆ ತಿಳಿದುಬಂದದ್ದೇನೆಂದರೆ ಅವುಗಳು ಅಸ್ತಿತ್ವದಲ್ಲಿಯೇ ಇಲ್ಲವೆಂಬುದು!

ಇದು, ಪುರಾತನ ತತ್ವಜ್ಞಾನಿಗಳು ಏನನ್ನು ಹೇಳುತ್ತಿದ್ದರೋ ಅದಕ್ಕೆ ಬಹಳಷ್ಟು ಸದೃಶವಾದುದಾಗಿದೆ; ಅಂದರೆ ಇದೆಲ್ಲವೂ ಏನೂ ಅಲ್ಲವೆಂದು. ಎಲ್ಲವೂ ಏನೂ ಅಲ್ಲ ಮತ್ತು ಏನೂ ಅಲ್ಲದಿರುವುದು ಎಲ್ಲವೂ ಆಗಿದೆ. ಆಕಾರವೆಂದು ನೀವು ನೋಡುವ ಎಲ್ಲವೂ ಏನೂ ಅಲ್ಲ ಮತ್ತು ಏನೂ ಅಲ್ಲವೆಂದು ನೀವು ಯಾವುದನ್ನು ನೋಡುವಿರೋ, ಅದುವೇ ಎಲ್ಲವನ್ನೂ ಮಾಡುತ್ತಿರುವುದು.

ಇದೊಂದು ಸುಂದರವಾದ ಸಂಗತಿಯಾಗಿದೆ; ಇಲ್ಲಿ ತಾವು ಬೇರೆ ಬೇರೆಯಲ್ಲವೆಂಬುದು ವಿಜ್ಞಾನಕ್ಕೂ ಆಧ್ಯಾತ್ಮಕ್ಕೂ ಮನವರಿಕೆಯಾಗುತ್ತದೆ. ತಾವು ಬೇರೆ ಬೇರೆಯೆಂದು ಯಾರು ಯೋಚಿಸುವರೋ ಅವರು ಮೂರ್ಖರು; ಅವರೊಂದು ನೂರು ವರ್ಷಗಳ ಹಿಂದೆ ಜೀವಿಸುತ್ತಿದ್ದಾರೆ, ಆದರೆ ಇವತ್ತಿನ ಯುಗದಲ್ಲಿ, ಅವುಗಳು ಒಂದೇ.

ನಾನು ವಿಜ್ಞಾನಿಗಳೊಂದಿಗೆ ಮೂರು ರೀತಿಯ ಆಕಾಶಗಳ ಬಗ್ಗೆ ಮಾತನಾಡಿದೆ:

೧) ಚಿತ್ತಾಕಾಶ, ಎಲ್ಲಿ ಎಲ್ಲಾ ಯೋಚನೆಗಳು ಮತ್ತು ಭಾವನೆಗಳು ತೇಲುತ್ತವೆಯೋ ಆ ಮಧ್ಯವರ್ತಿ ಆಕಾಶ ಅಥವಾ ಆಂತರಿಕ ಆಕಾಶ.

೨) ಚಿದಾಕಾಶ, ಯಾವುದು ಅಲ್ಲಿ ಇಲ್ಲಿ ಏಕೀಕೃತಗೊಂಡಂತೆ ಕಾಣಿಸುವುದೋ ಹಾಗೂ ವಸ್ತುವಿನಂತೆ ಕಾಣಿಸುವುದೋ ಆ ಶುದ್ಧವಾದ ಪ್ರಜ್ಞೆ ಅಥವಾ ಚೈತನ್ಯದ ಆಕಾಶ.

೩) ಭೂತಾಕಾಶ, ಅಸ್ತಿತ್ವದಲ್ಲಿರುವ ಎಲ್ಲಾ ವಸ್ತುಗಳನ್ನು ನಾವು ಯಾವುದರಲ್ಲಿ ನೋಡುತ್ತೇವೆಯೋ ಆ ಬಾಹ್ಯ ಆಕಾಶ.

ವಸ್ತುವೆಂದು ಯಾವುದು ಗೋಚರವಾಗುವುದೋ ಅದು ನಿಜವಾಗಿ ವಸ್ತುವಲ್ಲ, ಅದೆಲ್ಲವೂ ಒಂದು ಚೈತನ್ಯವಾಗಿದೆ ಮತ್ತು ಆ ಒಂದು ಕ್ಷೇತ್ರವು ಬ್ರಹ್ಮ ಎಂದು ಕರೆಯಲ್ಪಡುತ್ತದೆ ಹಾಗೂ ಎಲ್ಲರೂ ಅದುವೇ ಆಗಿರುವರು, ಎಲ್ಲವೂ ಅದುವೇ ಆಗಿರುವುದು.

ವಿಜ್ಞಾನಿಗಳು ಬಹಳ ಕುತೂಹಲಗೊಂಡರು. ಈ ಜ್ಞಾನವು ನಮಗೆ ಈ ತಲೆಮಾರಿನಲ್ಲಿ ಲಭ್ಯವಿರುವುದು ಬಹಳ ಸುಂದರವಾಗಿದೆ. ಇದು ಒಂದು ಲ್ಯಾಪ್‌ಟಾಪ್ ಹೊಂದಿರುವಷ್ಟೇ ಉತ್ತಮವಾದುದು.

ಸುಮ್ಮನೇ ಕಲ್ಪಿಸಿಕೊಳ್ಳಿ, ಕೆಲವು ತಲೆಮಾರುಗಳ ಹಿಂದೆ ಗೂಗಲ್ ಇರಲಿಲ್ಲ. ನೀವು ಏನನ್ನಾದರೂ ಕಲಿಯಬೇಕಾಗಿದ್ದರೆ, ನೀವೊಂದು ಗ್ರಂಥಾಲಯಕ್ಕೆ ಹೋಗಿ ಸೂಚಿಗಳನ್ನು ಮತ್ತು ಪುಟಗಳನ್ನು ಹುಡುಕಬೇಕಾಗಿತ್ತು. ಒಂದು ಗ್ರಂಥಾಲಯದಲ್ಲಿ ಸೂಚಿಯಲ್ಲಿ ಹುಡುಕಲು ಎರಡು ಗಂಟೆಗಳು ತೆಗೆದುಕೊಳ್ಳುತ್ತಿತ್ತು. ಇವತ್ತು, ಒಂದು ಗುಂಡಿಯನ್ನು ಅದುಮುವ ಮೂಲಕ ಪ್ರಪಂಚದಲ್ಲಿರುವ ಏನನ್ನು ಬೇಕಾದರೂ ನೀವು ನಿಮ್ಮ ಲ್ಯಾಪ್‌ಟಾಪ್‌ನಲ್ಲಿ ಪಡೆಯಬಹುದು.

ಪ್ರಪಂಚದಲ್ಲಿನ ಎಲ್ಲಾ ಜ್ಞಾನವು ನಿಮ್ಮ ತೊಡೆಯ ಮೇಲೆ ಕೂಡಲೇ ಲಭ್ಯವಿರುವುದು ಈ ತಲೆಮಾರಿಗಿರುವ ಒಂದು ಬಹಳ ಅದೃಷ್ಟದ ವಿಷಯವಾಗಿದೆ. ನೀವು ಭೂಖಂಡಗಳಾಚಿನಿಂದ ಪುಸ್ತಕಗಳನ್ನು ಖರೀದಿಸಿ, ಅವುಗಳನ್ನು ಪಡೆಯಲು ತಿಂಗಳುಗಟ್ಟಲೆ ಕಾಯಬೇಕಾಗಿಲ್ಲ. ಹಿಂದೆ ನೀವು ಅಮೇರಿಕಾದಲ್ಲಿದ್ದು, ನಿಮಗೆ ನಾರದ ಭಕ್ತಿ ಸೂತ್ರಗಳು ಬೇಕಾಗಿದ್ದರೆ, ನೀವು ಭಾರತದಿಂದ ಪುಸ್ತಕವನ್ನು ತರಿಸಬೇಕಾಗಿತ್ತು ಮತ್ತು ಅದನ್ನು ಪಡೆಯಲು ತಿಂಗಳುಗಟ್ಟಲೆ ಕಾಯಬೇಕಾಗಿತ್ತು. ಆದರೆ ಇವತ್ತು, ನಿಮ್ಮ ಬೆರಳುಗಳ ತುದಿಯಲ್ಲಿ ಎಲ್ಲವೂ ಕಾಣಿಸಿಕೊಳ್ಳುತ್ತದೆ.

ಅದೇ ರೀತಿಯಲ್ಲಿ, ಈ ಯುಗದಲ್ಲಿ ವಿಜ್ಞಾನವು ಆಧ್ಯಾತ್ಮದ ಭಾಷೆಯನ್ನೇ ಮಾತನಾಡುತ್ತಿರುವುದು ನಮ್ಮ ಅದೃಷ್ಟವಾಗಿದೆ. ಅದು ಆಧ್ಯಾತ್ಮವನ್ನು ದೃಢೀಕರಿಸುತ್ತಿದೆ. ಇದರರ್ಥ, ಯಾವುದೇ ತಲೆಮಾರು ಕೂಡಾ ಈ ಉನ್ನತವಾದ ಆಧ್ಯಾತ್ಮಿಕ ಜ್ಞಾನದಿಂದ ವಂಚಿತವಾಗಿಲ್ಲ.

ಪ್ರಶ್ನೆ: ಗುರುದೇವ, ಭಾರತದಲ್ಲಿನ ಭ್ರಷ್ಟಾಚಾರವು ಸಮಾಜಕ್ಕೆ ಮತ್ತು ಪರಿಸರಕ್ಕೆ ಶಾಶ್ವತವಾದ ಹಾನಿಯನ್ನುಂಟುಮಾಡುತ್ತಿದೆಯೆಂದು ತೋರುತ್ತದೆ. ಅದನ್ನು ಸರಿಪಡಿಸಬಹುದೇ? ಹೌದಾದರೆ, ಅಮೇರಿಕಾದಲ್ಲಿ ಜೀವಿಸುತ್ತಿರುವ ನನ್ನಂತಹ ಅನಿವಾಸಿಗಳು ಹಾನಿಯನ್ನು ಸರಿಪಡಿಸುವ ಪ್ರಯತ್ನದಲ್ಲಿ ಹೇಗೆ ಸಹಾಯ ಮಾಡಬಹುದು?

ಶ್ರೀ ಶ್ರೀ ರವಿ ಶಂಕರ್: ಭಾರತದಲ್ಲಿ ಏನನ್ನಾದರೂ ಮಾಡಲು ನಿನಗೆ ಆಸಕ್ತಿಯಿರುವುದಾದರೆ ಮತ್ತು ಜಾಗೃತಿಯನ್ನು ಹೇಗೆ ಸೃಷ್ಟಿಸಬಹುದು; ಭೂಮಿಯ ಮೇಲಿರುವ ಅತ್ಯಂತ ದೊಡ್ಡ ಪ್ರಜಾಪ್ರಭುತ್ವವನ್ನು ರಕ್ಷಿಸಲು ನಿನ್ನ ಪ್ರತಿಭೆಗಳನ್ನು ಹೇಗೆ ಬಳಸಬಹುದು ಎಂಬುದನ್ನು ನೀನು ತಿಳಿಯಲು ಬಯಸುವುದಾದರೆ, ನೀನು ಖಂಡಿತವಾಗಿಯೂ ಇಲ್ಲಿರುವ ಆರ್ಟ್ ಆಫ್ ಲಿವಿಂಗ್ ಸ್ವಯಂಸೇವಕರನ್ನು ಭೇಟಿಯಾಗಬೇಕು, ಅವರು ನಿನಗೆ ಮಾರ್ಗದರ್ಶನ ನೀಡಬಲ್ಲರು.

ನೀನು ಹಲವಾರು ವಿಷಯಗಳನ್ನು ಮಾಡಬಹುದು; ನಿನ್ನ ತವರೂರಿನಲ್ಲಿ, ಹಳ್ಳಿಗಳಲ್ಲಿ ನಿನ್ನ ಸುತ್ತಲಿರುವ ಜನರೊಂದಿಗೆ ಜಾಗೃತಿಯನ್ನು ಸೃಷ್ಟಿಸಬಹುದು ಮತ್ತು ಅವರಿಗೆ ಅರ್ಥವಾಗುವಂತೆ ಮಾಡಬಹುದು. ಭಾರತವು ಈಗ ವಂಚನೆಗಳು ಮತ್ತು ಕೊಳಚೆಗಳ ನಡುವೆ ಸಾಗುತ್ತಿದೆ, ಹಾಗೂ ಸರಕಾರವು ಬಡತನವನ್ನು ಉಳಿಸಿಕೊಳ್ಳಲು ಬಯಸುತ್ತಿದೆ; ಹಾಗಾಗಿ ಅವರು ಸುಮ್ಮನೆ ಜನರಿಗೆ ಉಡುಗೊರೆಗಳನ್ನು ನೀಡಿ, ಅವರಿಂದ ಮತಗಳನ್ನು ಖರೀದಿಸುತ್ತಾರೆ.

ಕಳೆದ ಕೆಲವು ತಿಂಗಳುಗಳಲ್ಲಿ, ಆರ್ಟ್ ಆಫ್ ಲಿವಿಂಗ್ ಸ್ವಯಂಸೇವಕರು ಬರಿದಾಗಿದ್ದ ನಾಲ್ಕು ನದಿಗಳನ್ನು ಪುನಶ್ಚೇತನಗೊಳಿಸಿದ್ದಾರೆ; ಕರ್ನಾಟಕದಲ್ಲಿ ಒಂದು ಮತ್ತು ಮಹಾರಾಷ್ಟ್ರದಲ್ಲಿ ಮೂರು. ನದಿಗಳು ಬತ್ತಿಹೋಗಿದ್ದವು ಮತ್ತು ನಮ್ಮ ಸ್ವಯಂಸೇವಕರು ಕಷ್ಟಪಟ್ಟು ಕೆಲಸ ಮಾಡಿದರು, ಹೂಳೆತ್ತಿದರು, ಎಲ್ಲಾ ಕಡ್ಡಿಕಸವನ್ನು ತೆಗೆದರು ಹಾಗೂ ಈ ನದಿಗಳು ಮತ್ತೆ ಹರಿಯುವಂತೆ ಮಾಡಿದರು. ಲಕ್ಷಾಂತರ ಡಾಲರ್‌ಗಳೊಂದಿಗೆ ಯಾವುದನ್ನು ಮಾಡಲು ಸರಕಾರಕ್ಕೆ ಸಾಧ್ಯವಾಗಲಿಲ್ಲವೋ ಅದನ್ನು ಕೆಲವು ಸಾವಿರ ಡಾಲರ್‌ಗಳೊಂದಿಗೆ ಆರ್ಟ್ ಆಫ್ ಲಿವಿಂಗ್ ಸ್ವಯಂಸೇವಕರು ಸೇವೆಯಂತೆ ಮಾಡಿದರು. ಈಗ, ಈ ಎಲ್ಲಾ ಜಾಗಗಳಲ್ಲೂ ನೀರಿದೆ ಮತ್ತು ಗ್ರಾಮಸ್ಥರು ಬಹಳ ಸಂತೋಷವಾಗಿದ್ದಾರೆ.

ಕರ್ನಾಟಕದಲ್ಲಿ ನಾವು ಸುಮಾರು ೨೩೦ ಗ್ರಾಮಗಳಲ್ಲಿ ಮತ್ತು ಮಹಾರಾಷ್ಟ್ರದಲ್ಲಿ ಸುಮಾರು ೩೦೦-೪೦೦ ಗ್ರಾಮಗಳಲ್ಲಿ ಈ ನದಿಗಳ ಕೆಲಸ ಪೂರೈಸಿದ್ದೇವೆ.

ಹಿಮಾಲಯಗಳ ಪ್ರದೇಶದಲ್ಲಿ ನೆರೆ ಬಂದಾಗ, ಆರು ಯೆಸ್ ಪ್ಲಸ್ ಶಿಕ್ಷಕರು ಅಲ್ಲಿ ಹೇಗೆ ಒಂದು ಪರಿವರ್ತನೆಯನ್ನು ತಂದರು ಎಂಬುದರ ಬಗ್ಗೆ ರೆಡಿಫ್ ಅಂತರ್ಜಾಲ ತಾಣದಲ್ಲಿ ಒಂದು ಲೇಖನ ಬಂದಿತ್ತು. ಈ ಹುಡುಗಿಯರು ಕಸವನ್ನು ತೆಗೆದು, ರಸ್ತೆಗಳನ್ನು ಮಾಡಿದರು ಮತ್ತು ಇದುವರೆಗಿನವುಗಳಲ್ಲಿ ಅತ್ಯಂತ ಕೆಟ್ಟ ನೆರೆಯಿಂದ ಪೀಡಿತರಾದ ಜನರಿಗೆ ಆಹಾರ ಹಾಗೂ ಇತರ ಸಾಮಗ್ರಿಗಳನ್ನು ನೀಡಿದರು.

ಅಲ್ಲಿ ಬಹಳಷ್ಟು ಕೆಲಸಗಳನ್ನು ಮಾಡಲಾಗುತ್ತಿದೆ. ಆರ್ಟ್ ಆಫ್ ಲಿವಿಂಗ್ ಸಾಕಷ್ಟು ಸಕ್ರಿಯವಾಗಿದೆ.

ಭಾನುವಾರ, ಜುಲೈ 21, 2013

ಎಚ್ಚೆತ್ತುಕೊಳ್ಳಿ!

ಮಾಂಟ್ರಿಯಾಲ್, ಕೆನಡ
೨೧ ಜುಲೈ ೨೦೧೩

ಪ್ರಶ್ನೆ: ಗುರುದೇವ, ಈ ಜನ್ಮದಲ್ಲಿ ನೀವು ನಮ್ಮನ್ನು ಹುಡುಕಿದಿರಿ. ಆದರೆ ನೀವು ಈ ಭೂಮಿಗೆ ಬಹಳ ವಿರಳವಾಗಿ ಭೇಟಿ ನೀಡುವ ಕಾರಣ, ಅಥವಾ ಹಾಗೆಂದು ನಾನು ಯೋಚಿಸುವ ಕಾರಣ, ನಾವು ಮತ್ತೆ ಭೇಟಿಯಾಗುವರೆಗೆ ನಮಗೆಲ್ಲಾ ಏನು ಸಂಭವಿಸುತ್ತದೆ? ಹೇಗೋ ನಾವು ಹಿಂದಕ್ಕೆ ಜಾರುತ್ತೇವೆಯೇ? ನಾವು ಜ್ಞಾನದಲ್ಲಿ ಬೆಳೆಯುವುದು ಮುಂದುವರಿಯುವುದೇ?

ಶ್ರೀ ಶ್ರೀ ರವಿ ಶಂಕರ್: ಹಿಂದಕ್ಕೆ ಜಾರುವುದಿಲ್ಲ!

ಇದನ್ನೇ ನಾವು ಗುರು ಪೂರ್ಣಿಮೆಯಂದು ಆಚರಿಸುವುದು; ನಾವು ಹಿಂದೆ ತಿರುಗಿ, ನಾವು ಎಷ್ಟು ಬೆಳೆದಿರುವೆವು ಮತ್ತು ಹೇಗೆ ನಾವು ಪೂರ್ತಿ ಹಿಂದಕ್ಕೆ ಜಾರಲು ಸಾಧ್ಯವಿಲ್ಲವೆಂಬುದನ್ನು ನೋಡುತ್ತೇವೆ.

ನೀವು ೧೦ ಹೆಜ್ಜೆಗಳಷ್ಟು ಮುಂದಕ್ಕೆ ನಡೆದಿದ್ದರೆ, ನೀವು ೮ ಹೆಜ್ಜೆಗಳಷ್ಟು ಹಿಂದಕ್ಕೆ ಹೋಗಿರುವುದಾಗಿ ತೋರಲೂಬಹುದು, ಆದರೆ ಎಲ್ಲಾ ೧೦ ಹೆಜ್ಜೆಗಳಷ್ಟಲ್ಲ. ಮೇಲಾಗಿ, ನಿಮಗೆ ಯಾವುದು ಎಂಟು ಹೆಜ್ಜೆಗಳೆಂದು ಕಾಣಿಸುವುದೋ, ಅದು ನಾಲ್ಕೈದು ಅಥವಾ ಮೂರ್ನಾಲ್ಕು ಹೆಜ್ಜೆಗಳಾಗಿರಲೂಬಹುದು. ಆದರೆ ಪರವಾಗಿಲ್ಲ; ನಾನು ಚಿಂತಿಸುವುದಿಲ್ಲ, ನೀವು ಕೂಡಾ ಚಿಂತಿಸಬೇಕಾಗಿಲ್ಲ!

ಒಂದು ವಿಷಯವನ್ನು ನಾವು ನಿರ್ಧರಿಸಬೇಕು, "ಕೆಲಸ ಆಗುತ್ತಿರುವುದಾದರೂ ಅಥವಾ ಇಲ್ಲವಾದರೂ, ಕಡಿಮೆಪಕ್ಷ ನಾನು ನನ್ನ ಸಂತೋಷವನ್ನು ಕಳೆದುಕೊಳ್ಳದೇ ಇರುತ್ತೇನೆ! ನಾನು ಸಂತೋಷವಾಗಿರುತ್ತೇನೆ!"

ನೀವು ದುಃಖಿತರಾಗಿರುವುದರಿಂದ  ವಿಷಯಗಳು ಬದಲಾಗುವುದಿಲ್ಲ, ಖಂಡಿತವಾಗಿಯೂ. ನೀವೊಂದು ಯೋಜನೆ ಅಥವಾ ಯಾವುದೋ ಕೆಲಸವನ್ನು ಆರಂಭಿಸಿದಿರಿ, ಅದು ಆಗಲಿಲ್ಲ. ಕೇವಲ ಅದು ಆಗದೇ ಇರುವ ಕಾರಣಕ್ಕಾಗಿ ಕಡಿಮೆಪಕ್ಷ ನಿಮ್ಮಲ್ಲಿ ಈಗಾಗಲೇ ಏನಿದೆಯೋ ಅದನ್ನು ಕಳೆದುಕೊಳ್ಳಬೇಡಿ. ನಿಮ್ಮಲ್ಲಿ ಸ್ವಲ್ಪ ಸಂತೋಷವಿದೆ, ಇದನ್ನು ಅದಕ್ಕಾಗಿ ಕಳೆದುಕೊಳ್ಳಬೇಡಿ! ನೀವಿದನ್ನು ನೆನಪಿನಲ್ಲಿಟ್ಟುಕೊಂಡರೆ ಅಷ್ಟು ಸಾಕು!

ಸಾಧನೆ ಎಂಬುದರ ಅರ್ಥವೇನೆಂಬುದು ನಿಮಗೆ ತಿಳಿದಿದೆಯೇ? ಸಾಧನೆಯೆಂದರೆ, "ನಾನು ದೇವರಿಗೆ ಹತ್ತಿರವಾಗಿರುವೆನು. ನಾನು ಸಾರ್ವತ್ರಿಕ ಚೇತನಕ್ಕೆ ಹತ್ತಿರವಾಗಿರುವೆನು. ದೊಡ್ಡ ಮನಸ್ಸಿನೊಂದಿಗೆ ನನಗೊಂದು ಸಂಬಂಧವಿದೆ" ಎಂಬ ಭಾವನೆಯನ್ನು ಹೊಂದಿರುವುದು! ಕೇವಲ ಈ ಸಂಬಂಧ ಸಾಕು. ನೀವಿದನ್ನು ನೆನಪಿನಲ್ಲಿಟ್ಟುಕೊಂಡರೆ, ನೀವು ನಿಮ್ಮ ಸಾಧನೆಯಲ್ಲಿ ಯಶಸ್ವಿಯಾಗಿರುವಿರೆಂದು ಅರ್ಥ; ನೀವು ಹೆಚ್ಚಿಗೆ ಬೇರೇನನ್ನೂ ಮಾಡಬೇಕಾಗಿಲ್ಲ!

ನೀವು ನಿಮ್ಮ ಧ್ಯಾನವನ್ನು ಬಿಡಬೇಕೆಂಬುದು ನನ್ನ ಮಾತಿನ ಅರ್ಥವಲ್ಲ; ನನ್ನನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳಬೇಡಿ. ನಿಮಗೆ ಒಳ್ಳೆಯ ಮಾನಸಿಕ ಮತ್ತು ಶಾರೀರಿಕ ಯೋಗಕ್ಷೇಮವನ್ನು ನೀಡುವ ಧ್ಯಾನ, ಪ್ರಾಣಾಯಾಮ ಮತ್ತು ಎಲ್ಲವನ್ನೂ ಮಾಡಿ. ಆದರೆ ಆಧ್ಯಾತ್ಮಿಕವಾಗಿ, ನೀವದನ್ನು ಸುಮ್ಮನೇ ನಿಮ್ಮ ಕಡೆಯಿಂದ ತಿಳಿದುಕೊಳ್ಳಬೇಕು ಮತ್ತು ಅನುಭವಿಸಬೇಕು.

 "ವಿಶಾಲವಾದ ಮನಸ್ಸು ನನ್ನದಾಗಿದೆ, ನಾನು ದೇವರಿಗೆ ಸಂಬಂಧಪಟ್ಟವನು/ಳು, ಗುರುಸಂಪರ್ಕ ನನ್ನದಾಗಿದೆ. ಅಂತಿರ್ಪ ಸ್ಥಿತಿಗಳೆಲ್ಲವೂ ಒಂದೇ. ನನ್ನ ಸಹಜತೆ ನನಗೆ ತೃಪ್ತಿ ನೀಡಿದೆ" ಎಂದು ನೀವು ಭಾವಿಸಿಕೊಳ್ಳಬೇಕು.

ಕೆಲವು ವಿಷಯಗಳನ್ನು ಮನಸ್ಸು ಒಪ್ಪುತ್ತದೆ ಮತ್ತು ಕೆಲವು ವಿಷಯಗಳನ್ನು ಅದು ಒಪ್ಪುವುದಿಲ್ಲ. ಕೆಲವೊಮ್ಮೆ ನಿಮ್ಮ ಬುದ್ಧಿಗೆ, "ನಾನು ಸರಿ" ಎಂದು ಅನ್ನಿಸುತ್ತದೆ. ಅದಾಗಿರಬಹುದು, ಪರವಾಗಿಲ್ಲ, ಅದೆಲ್ಲವನ್ನೂ ನೀವು ಒಂದು ಬದಿಗೆ ಹಾಕಿ. ಕಾರ್ಯದ ಸೀಮಿತ ಕ್ಷೇತ್ರದಲ್ಲಿ, ಯಾವತ್ತೂ ಕೆಲವು ಕಾರ್ಯಗಳು ಇತರ ಕಾರ್ಯಗಳಿಗಿಂತ ಉತ್ತಮವಾಗಿರುತ್ತವೆ. ಕೆಲವೊಮ್ಮೆ ಅದು ಉತ್ತಮವೆಂದು ತೋರುತ್ತದೆ ಮತ್ತು ಕೆಲವೊಮ್ಮೆ ಅದು ಉತ್ತಮವಾಗಿರುತ್ತದೆ. ಎಲ್ಲಾ ಕಾರ್ಯಗಳಲ್ಲೂ ದೋಷಗಳು, ನ್ಯೂನತೆಗಳಿವೆ ಮತ್ತು ಎಲ್ಲಾ ಕಾರ್ಯಗಳಲ್ಲೂ ಲಾಭಗಳಿವೆ. ಪರಿಪೂರ್ಣವಾಗಿರಬಲ್ಲ ಒಂದೇ ಒಂದು ಕಾರ್ಯವೂ ಇಲ್ಲ. ಅದು ಹಾಗೆ ತೋರುತ್ತದೆ, ಆದರೆ ಯಾವುದು ತೋರುವುದೋ ಮತ್ತು ಯಾವುದು ಇರುವುದೋ, ಇವುಗಳು ಬಹಳ ವಿಭಿನ್ನವಾಗಿವೆ! ನಿಮ್ಮ ಪ್ರಧಾನ ಗುರಿಯೆಂದರೆ, ಜ್ಞಾನವನ್ನು ಇಟ್ಟುಕೊಳ್ಳುವುದು ಮತ್ತು ಅದನ್ನು ಊರುವುದು. ಆದುದರಿಂದ, ಆನಂದವನ್ನು ಕಳೆದುಕೊಳ್ಳಬೇಡಿ!

ಅದನ್ನು ಹೇಳುವುದು ಮಾಡುವುದಕ್ಕಿಂತ ಸುಲಭವೆಂಬುದು ನನಗೆ ಗೊತ್ತು. "ಓ ಗುರುದೇವ, ನಿಮಗೆ ಇದು ಬಹಳ ಸುಲಭ, ನನಗೆ ಇದು ಸುಲಭವಲ್ಲ, ಇದು ಕಷ್ಟ" ಎಂದು ನೀವು ಹೇಳಲೂಬಹುದು. ನನಗದು ಬಹಳ ಚೆನ್ನಾಗಿ ಗೊತ್ತಿದೆ, ಆದರೂ ಕಡಿಮೆಪಕ್ಷ ಸಂತೋಷವನ್ನು ಇಟ್ಟುಕೊಳ್ಳಿ ಎಂದು ನಿಮಗೆ ಹೇಳಲಿರುವ ಪ್ರಲೋಭನೆಯನ್ನು ತಡೆಯಲು ನನಗೆ ಸಾಧ್ಯವಾಗುವುದಿಲ್ಲ!

ನೀವು ನಿಮ್ಮ ಸಂಬಂಧವನ್ನು ಕಳೆದುಕೊಂಡಿರಲೂಬಹುದು, ಆದರೆ ನಿಮ್ಮ ಮುಗುಳ್ನಗೆಯನ್ನು ಕಳೆದುಕೊಳ್ಳಬೇಡಿ! ಹೌದು, ನೀವು ಒಂದು ಸಂಬಂಧವನ್ನು ಕಳೆದುಕೊಂಡಿರಿ, ಪರವಾಗಿಲ್ಲ, ಅಲ್ಲಿ ಏಳು ಬಿಲಿಯನ್ ಜನರಿದ್ದಾರೆ! ಬೇರೊಬ್ಬರು ಬಂದು ನಿಮ್ಮನ್ನು ಕಂಡುಕೊಳ್ಳುವರು. ನೀವು ಮುಗುಳ್ನಗೆಯನ್ನಿರಿಸಿಕೊಂಡರೆ, ಆಗ ಬೇರೊಬ್ಬರು ನಿಮ್ಮ ಜೀವನದಲ್ಲಿ ಬರುವರು. ಇಲ್ಲದಿದ್ದರೆ, ಯಾರು ಬಂದು ಒಬ್ಬ ಖಿನ್ನ ವ್ಯಕ್ತಿಯೊಂದಿಗೆ ಗೆಳೆತನವನ್ನು ಮಾಡುತ್ತಾರೆ? ನೀವು ಖಿನ್ನರಾಗಿದ್ದರೆ ಅಥವಾ ಖಿನ್ನರಾದಂತೆ ಕಾಣಿಸಿದರೆ, ಆಗ ನಿಮಗೆ ಇನ್ನೊಬ್ಬ ಸ್ನೇಹಿತ ಅಥವಾ ಸ್ನೇಹಿತೆ ಸಿಗಲಾರರು! ಯಾರೂ ನಿಮ್ಮ ಕಡೆಗೆ ನೋಡರು ಅಥವಾ ಒಂದು ಉದ್ದನೆ ಮುಖವನ್ನು ಹೊಂದಿದ ವ್ಯಕ್ತಿಯಿಂದ ಮೋಹಿತರಾಗರು.

ನೀವೊಬ್ಬ ಸಂಗಾತಿಯನ್ನು ಹುಡುಕುತ್ತಿರುವಾಗ ನಿಮಗೆ ಬೇಕಾಗಿರುವುದೆಂದರೆ ಉತ್ಸಾಹ ಮತ್ತು ಮುಗುಳ್ನಗೆಗಳು.
ಈಗ, ನಿಮಗೊಂದು ನೌಕರಿಯಿಲ್ಲದೇ ಇರಲೂಬಹುದು. ಆದರೂ, ಅದು ಪರವಾಗಿಲ್ಲ. ಒಂದು ಉದ್ದನೆಯ ಮುಖವನ್ನು ಹೊಂದಿದ ಹಾಗೂ ಅಷ್ಟೊಂದು ಖಿನ್ನರಾದಂತೆ ಕಾಣಿಸುವವರೊಬ್ಬರಿಗೆ ಯಾರು ಒಂದು ನೌಕರಿಯನ್ನು ಕೊಡಲು ಬಯಸುವರು? ಜೀವನವು ಮುಂದುವರಿಯುವುದು. ನೀವು ಹಸಿದು ಸಾಯುವುದಿಲ್ಲ. ಎಲ್ಲವೂ ನಿಮ್ಮ ಬಳಿಗೆ ಬರುವುದು! ನೀವು ದೊಡ್ಡ ಮನಸ್ಸಿನೊಂದಿಗೆ, ವಿಶ್ವವ್ಯಾಪಿ ಚೇತನದೊಂದಿಗೆ ಸಂಬಂಧ ಜೋಡಿರುವಿರಿ. ನೀವು ಆಧ್ಯಾತ್ಮಿಕ ಪಥದಲ್ಲಿರುವಿರಿ.

"ಏನೇ ಬರಲಿ, ನಾನು ನಡೆಯುವೆನು! ನನ್ನ ಮಡಿಲಿಗೊಂದು ನೌಕರಿ ಬೀಳುವುದು. ಆದರೂ ಅದಕ್ಕಾಗಿ ನಾನು ಹುಡುಕುತ್ತಾ ಇರಬೇಕು!" ನೀವು ಹೀಗೆ ಮಾಡಿದರೆ, ಆಗ ಆರ್ಟ್ ಆಫ್ ಲಿವಿಂಗ್ ತನ್ನ ಧ್ಯೇಯದಲ್ಲಿ ಯಶಸ್ವಿಯಾಯಿತೆಂದಾಯಿತು!

ಮನೆಯಲ್ಲಿ ಯಾರೊಂದಿಗೋ ನಿಮಗೆ ಒಂದು ವಾದ ಅಥವಾ ಜಗಳವಾಯಿತೆಂದು ಇಟ್ಟುಕೊಳ್ಳೋಣ. ಆಗ ಮತ್ತೆ ಮುಗುಳ್ನಗಲು ತುಂಬಾ ಸಮಯ ತೆಗೆದುಕೊಳ್ಳಬೇಡಿ. ನಿಮ್ಮ ಜಗಳವು ಸೆಲ್ ಫೋನುಗಳಲ್ಲಿರುವ ಪ್ರಕ್ರಿಯೆಗಳಲ್ಲೊಂದರಂತೆ; ಅಂದರೆ ಆಡಿಯೋ, ವಿಡಿಯೋ, ಕ್ಯಾಮೆರಾಗಳಂತೆ ಇರಬೇಕು. ನಿಮ್ಮ ಸೆಲ್ ಫೋನ್ ಕ್ಯಾಮೆರಾ ಪ್ರಕ್ರಿಯೆಯಲ್ಲಿ ಬಹಳ ಹೊತ್ತು ಸಿಕ್ಕಿಬಿದ್ದಿರಲು ಸಾಧ್ಯವಿಲ್ಲ, ಅದನ್ನು ವೇಗವಾಗಿ ಬದಲಾಯಿಸಲು ಸಾಧ್ಯವಾಗಬೇಕು, ಸರಿಯಾ?

ಅದೇ ರೀತಿಯಲ್ಲಿ, ಮನಸ್ಸು ಜಗಳದ ಪ್ರಕ್ರಿಯೆಯಲ್ಲಿರಬಹುದು, ಆದರೆ ಮುಂದಿನ ನಿಮಿಷ, ಅದನ್ನು ಬದಲಾಯಿಸಿ!
ನಿಮ್ಮಲ್ಲಿ ಕೆಲವರಿಗೆ, ಇದೊಂದು ಎಂತಹ ದೊಡ್ಡ ಸಮಾಧಾನ - ಗುರುದೇವರು ಜಗಳ ಮಾಡಲು ಅನುಮತಿಯನ್ನು ನೀಡಿರುವರು! ಎದೆಯಿಂದ ಏನೋ ದೂರವಾಯಿತು!

ಚಿಂತಿಸಬೇಡಿ, ನೀವು ಜಗಳ ಮಾಡಲೇಬೇಕಾದರೆ, ಆಗ ಜಗಳ ಮಾಡಿ, ಆದರೆ ಹಿಂತಿರುಗಿ ಬನ್ನಿ ಮತ್ತು ಪುನಃ ಮುಗುಳ್ನಗಿ. ಬದಲಾಯಿಸಿ! ಅದನ್ನು ಮಾಡುವ ಸಾಮರ್ಥ್ಯ ನಿಮ್ಮಲ್ಲಿದೆ! ಎಲ್ಲಾ ಸಮಯವೂ ಹೌದೆನ್ನುತ್ತಾ, ನೀವು ತರಕಾರಿಗಳಂತೆ ಆಗಬೇಕೆಂದು ಮತ್ತು ದುರ್ಬಲರಾಗಿರಬೇಕೆಂದು ನಾನು ಬಯಸುವುದಿಲ್ಲ.

ನೀವು ಬಲಶಾಲಿಗಳು ಮತ್ತು ಮುಗುಳ್ನಗೆಯಿಂದಿರುವವರೂ, ಬಲಶಾಲಿಗಳು ಮತ್ತು ಸೂಕ್ಷ್ಮವಾಗಿರುವವರೂ, ವಿವೇಚನೆಯುಳ್ಳವರು ಮತ್ತು ಸಂವೇದನಾಶೀಲರೂ, ಎಲ್ಲವೂ ಒಂದೇ ಸಮಯದಲ್ಲಿ ಆಗಿರಬೇಕೆಂದು ನಾನು ಬಯಸುತ್ತೇನೆ.

ಬಹಳ ವಿವೇಚನಾಶೀಲರಾದ ಜನರಿದ್ದಾರೆ, ಆದರೂ ಅವರಿಗೆ ಅವಿವೇಕತನವನ್ನು ಸಹಿಸಲು ಸಾಧ್ಯವಾಗುವುದಿಲ್ಲ. ನಿಮಗೆ ಅವಿವೇಕತನವನ್ನು ಸಹಿಸಲು ಸಾಧ್ಯವಾಗದಿದ್ದರೆ, ಆಗ ನೀವು ಈ ಸಂವೇದನಾಶೀಲತೆಯನ್ನು ಕಳೆದುಕೊಳ್ಳುತ್ತೀರಿ, ಸರಿಯಾ? ಆದರೂ, ಸಂವೇದನಾಶೀಲರಾಗಿರುವ ಆದರೆ ವಿವೇಚನಾಶೀಲರಲ್ಲದ ಜನರಿದ್ದಾರೆ. ಅವರು ಎಷ್ಟೊಂದು ಸಂವೇದನಾಶೀಲರೆಂದರೆ, ಅವರು ಮಾತನಾಡುತ್ತಿರುವಾಗ ಯಾರಾದರೂ ಆಕಳಿಸಿದರೆ, "ನೋಡಿ, ನಾನು ಅವರಿಗೆ ಹೇಳುತ್ತಿರುವುದರಲ್ಲಿ ಅವರಿಗೆ ಆಸಕ್ತಿಯಿಲ್ಲ" ಎಂದು ಅವರು ಹೇಳುವರು!

ಒಂದು ಕಡೆಯಲ್ಲಿ, ಆಕಳಿಕೆಯು ಒಂದು ವಿವಾಹ ವಿಚ್ಛೇದನದ ಕಾರಣವಾಯಿತೆಂಬುದು ನಿಮಗೆ ಗೊತ್ತಿದೆಯೇ?

ಪತ್ನಿಯೆಂದಳು, "ನಾನು ನನ್ನ ಗಂಡನೊಂದಿಗೆ ಮಾತನಾಡುವಾಗಲೆಲ್ಲಾ ಅವರು ಆಕಳಿಸಲು ತೊಡಗುತ್ತಾರೆ. ಅವರಿಗೆ ನನ್ನಲ್ಲಿ ಆಸಕ್ತಿಯಿಲ್ಲ. ಅದು ನನ್ನ ವ್ಯಕ್ತಿತ್ವಕ್ಕೊಂದು ಅವಮಾನವಾಗಿದೆ. ಪ್ರತಿಸಲವೂ ನಾನು ಅವರೊಂದಿಗೆ ಮಾತನಾಡುವಾಗ, ಅವರು ಆಕಳಿಸಲು ತೊಡಗುತ್ತಾರೆ."

ಹೀಗೆ, ಬಹಳ ಸಂವೇದನಾಶೀಲರಾಗಿರುವ ಜನರು ವಿವೇಕಿಗಳಾಗಿರುವುದಿಲ್ಲ. ನೀವು ವಿವೇಕಿಗಳು ಮತ್ತು ಸಂವೇದನಾಶೀಲರು ಎರಡೂ ಆಗಿರಬೇಕೆಂದು ನಾನು ಬಯಸುತ್ತೇನೆ.

ಈಗ, ಹಿಂದೆ ಹೋಗಿ, "ಓ, ನಾನು ವಿವೇಕಿಯಾಗಿರುವೆನು ಮತ್ತು ಸಂವೇದನಾಶೀಲನಾಗಿಲ್ಲ" ಅಥವಾ "ನಾನು ಸಂವೇದನಾಶೀಲನಾಗಿರುವೆನು ಮತ್ತು ವಿವೇಕಿಯಲ್ಲ" ಎಂದು ಹೇಳಬೇಡಿ.
    
ಆ ಪಯಣದಲ್ಲಿ ಮತ್ತೆ ಹೋಗಬೇಡಿ. ಸುಮ್ಮನೇ ಅದನ್ನು ಮನಸ್ಸಿನಲ್ಲೆಲ್ಲೋ ಇಟ್ಟುಕೊಳ್ಳಿ; ಅದು ಅಲ್ಲಿ ಉಳಿಯುತ್ತದೆ.
ಆತ್ಮ-ಜ್ಞಾನವನ್ನು ಹೇಗೆ ಪಡೆಯಲಾಗುತ್ತದೆ? ಸಂಸ್ಕೃತದಲ್ಲಿ ಇದು ಪ್ರತ್ಯಭಿಜ್ಞ ಎಂದು ಕರೆಯಲ್ಪಡುತ್ತದೆ (ಇದು ಎಷ್ಟೊಂದು ಸುಂದರವಾದ ಶಬ್ದವೆಂದರೆ, ಬೇರೆ ಯಾವುದೇ ಭಾಷೆಯಲ್ಲೂ ಇದಕ್ಕೆ ಸಮಾನವಾದ ಶಬ್ದವಿಲ್ಲ).

ಪ್ರತ್ಯಭಿಜ್ಞ ಎಂದರೆ ಗುರುತಿಸುವುದು. ಪ್ರತ್ಯಭಿಜ್ಞ ಹೃದಯಂ ಎಂದರೆ, ಹೃದಯವು ಆತ್ಮವನ್ನು ಗುರುತಿಸುವಿಕೆ. ಈ ಎಲ್ಲಾ ಜ್ಞಾನವಿರುವುದು ಅದರ ಬಗ್ಗೆಯೇ; ಈ ಸಂತುಲನ, ಈ ಧ್ಯಾನ, ನಾವು ಮಾತನಾಡಿದ ಮೂರು ವಿಷಯಗಳು; ಅಂದರೆ ಅನುರಾಗ, ವೈರಾಗ್ಯ ಮತ್ತು ಸಹಾನುಭೂತಿ. ಜ್ಞಾನವು ಬರುವುದು ಮಾಡುವುದರಿಂದಲ್ಲ, ಕೇವಲ ಗುರುತಿಸುವುದರಿಂದ.

ಉದಾಹರಣೆಗೆ, ಜನರು ಸಾಮಾನ್ಯವಾಗಿ ತಮ್ಮ ಕನ್ನಡಕಗಳನ್ನು ತಮ್ಮ ತಲೆಯ ಮೇಲೆ ಇಟ್ಟುಕೊಳ್ಳುತ್ತಾರೆ ಮತ್ತು ನಂತರ ಅದಕ್ಕಾಗಿ ಸುತ್ತಲೂ ಹುಡುಕಲು ತೊಡಗುತ್ತಾರೆ. ಒಬ್ಬರು ಅವರಿಗೆ, "ಏ, ಅದು ನಿನ್ನ ತಲೆಯ ಮೇಲಿದೆ" ಎಂದು ಹೇಳುತ್ತಾರೆ!

ಆಗ ಅವರು, "ಓ, ಹೌದು" ಎಂದು ಹೇಳುತ್ತಾರೆ!

ಹಾಗಾಗಿ, ಜ್ಞಾನವು ಕೂಡಲೇ ತನ್ನ ಫಲವನ್ನು ನೀಡುತ್ತದೆ. ನೀವೇನೂ ಮಾಡಬೇಕಾಗಿಲ್ಲ; ನಡುವೆ ಯಾವುದೇ ಕರ್ಮವಿಲ್ಲ, ನಡುವೆ ಯಾವುದೇ ಕೃತ್ಯವಿಲ್ಲ.

ನೀವು ಕನ್ನಡಕವನ್ನು ಹುಡುಕುತ್ತಿದ್ದಿರಿ ಮತ್ತು ಅದು ಅಲ್ಲಿಯೇ ಇದೆಯೆಂಬುದು ನಿಮಗೆ ಫಕ್ಕನೇ ಅರಿವಾಯಿತು. ಹೀಗೆ, ನಿಮ್ಮ ಕನ್ನಡಕದ ಜ್ಞಾನವು ಕನ್ನಡಕದೊಂದಿಗೆ ಬಂತು. ನೀವದನ್ನು ಪಡೆದಿರಿ ಯಾಕೆಂದರೆ, ನಿಮ್ಮಲ್ಲದು ಈಗಾಗಲೇ ಇತ್ತು. ಜ್ಞಾನ ಮತ್ತು ಅದನ್ನು ಪಡೆಯುವುದರ  ನಡುವೆ ಯಾವುದೇ ದೂರವಿಲ್ಲ.

ಇದನ್ನು ನಾನು ಇನ್ನೂ ಹೆಚ್ಚು ಸ್ಪಷ್ಟ ಪಡಿಸುತ್ತೇನೆ. ನಿಮಗೆ ಆಪ್ಪಲ್ ಪೈಯ ಅರಿವಿದೆ ಎಂದು ಇಟ್ಟುಕೊಳ್ಳೋಣ. ಆಪ್ಪಲ್ ಪೈಯ ಬಗ್ಗೆ ನಿಮ್ಮ ಅರಿವು ಮತ್ತು ಅದನ್ನು ಪಡೆಯುವುದರ ಮಧ್ಯೆ ಒಂದು ದೂರವಿದೆ; ಅಂದರೆ, ಅದನ್ನು ಪಡೆಯುವುದು ಮತ್ತು ತಿನ್ನುವುದು.

ಹೀಗಿದ್ದರೂ, ನಿಮ್ಮ ಹುಬ್ಬುಗಳ ಮೇಲೆ ಕನ್ನಡಕ ಕೂತಿದೆ ಎಂಬುದನ್ನು ತಿಳಿಯುವಲ್ಲಿ, ಆ ಅರಿವೇ ಫಲವಾಗಿತ್ತು. ಆ ಅರಿವು ಕೂಡಲೇ ನಿಮಗೆ ಫಲಿತಾಂಶವನ್ನು ಕೂಡಾ ನೀಡಿತು. ಮಧ್ಯೆ ಯಾವುದೇ ಕೃತ್ಯವಿರಲಿಲ್ಲ.

ಗುರು ವಾಣಿ, ಜ್ಞಾನದ ಮಾತುಗಳು ಎಂದರೆ, ನೀವು ಮಾತುಗಳನ್ನು (ಜ್ಞಾನ) ಕೇಳಿಸಿಕೊಳ್ಳುತ್ತೀರಿ ಮತ್ತು ಕೂಡಲೇ ನೀವದನ್ನು ಪಡೆಯುತ್ತೀರಿ. ಅದರ ಬಗ್ಗೆ ನೀವು ಏನನ್ನಾದರೂ ಮಾಡಬೇಕಾಗಿಲ್ಲ.

ನೋಡಿ, ನೀವು ಸುಂದರವಾಗಿದ್ದೀರಿ; ನೀವು ಸುಂದರವಾಗಿರುವಿರೆಂಬುದನ್ನು ನೀವು ತಿಳಿಯಲು ನೀವೇನೂ ಮಾಡಬೇಕಾಗಿಲ್ಲ, ತಿಳಿಯಿತೇ?

ಇಲ್ಲಿಯವರೆಗೆ, ನಾನು ನಿಮಗೆ ಇವೆಲ್ಲವನ್ನೂ ಮಾಡಲು ಹೇಳುತ್ತಿದ್ದೆ; ಪ್ರಾಣಾಯಾಮ, ಸತ್ಸಂಗ, ಭಜನೆ ಮಾಡಿ, ಭಕ್ತಿಯಿರಲಿ ಎಂದು. ಈಗ ನಾನು ನಿಮಗೆ ಸಂಪೂರ್ಣವಾಗಿ ವಿಭಿನ್ನವಾದುದೇನನ್ನೋ ಹೇಳುತ್ತಿದ್ದೇನೆ! ಏನು? ಸುಮ್ಮನೇ ಎಚ್ಚೆತ್ತುಕೊಳ್ಳಿ!
ನೀವು ಹೇಗೆ ಎಚ್ಚೆತ್ತುಕೊಳ್ಳುವಿರಿ? ಇದೊಂದು ಪ್ರಶ್ನೆಯಲ್ಲ. ನೀವು ನಾನು ಹೇಳುವುದನ್ನು ಕೇಳಿಸಿಕೊಂಡಿರಿ, ನೀವು ಈಗಾಗಲೇ ಎಚ್ಚೆತ್ತುಕೊಂಡಿರುವಿರಿ!

ಒಬ್ಬರು ನಿದ್ರಿಸುತ್ತಿದ್ದಾರೆ ಮತ್ತು ನೀವು, "ಏ, ಬಾ ಏಳು" ಎಂದು ಹೇಳುತ್ತೀರಿ. ಅವರದನ್ನು ಕೇಳಿಸಿಕೊಂಡಾಗ, ಅವರು ಅದಾಗಲೇ ಎಚ್ಚರವಾಗಿರುತ್ತಾರೆ, ಸರಿಯಾ? ಅದುವೇ ಇದು, ಕೂಡಲೇ! ಸಿದ್ಧಿ, ಅಂದರೆ ಅದನ್ನು ಪಡೆಯುವುದು ಮತ್ತು ಅದನ್ನು ತಿಳಿಯುವುದರ ನಡುವೆ ಯಾವುದೇ ಅಂತರವಿಲ್ಲ. ಅಷ್ಟೇ!

ಈಗ ನೋಡಿ, ಅದು ನಿಮಗೆ ಒಳಗೆ ಎಷ್ಟೊಂದು ದೊಡ್ಡ ಸಮಾಧಾನವನ್ನು ಕೊಡುತ್ತದೆ! ಫಕ್ಕನೇ ನೀವು, "ನಾನು ಏನನ್ನೂ ಮಾಡಬೇಕಾಗಿಲ್ಲ" ಎಂದು ಯೋಚಿಸುತ್ತೀರಿ.

ಯಾರೋ ಒಬ್ಬರು ನೀವು ಸುಂದರವಾಗಿರುವಿರೆಂದು ಹೇಳಿದ್ದಾರೆ, ಈಗ ನೀವು ಯಾವುದೇ ಮೇಕಪ್ ಮಾಡಬೇಕಾಗಿಲ್ಲ, ನೀವು ಸುಂದರವಾಗಿರುವಿರಿ; ನೀವು ಸುಮ್ಮನೇ ಅದನ್ನು ನಂಬಬೇಕು.

ಈಗ, ನೀವು ಮುಂದುವರಿಸುತ್ತಾ ಹೀಗೆಂದು ಹೇಳಬಹುದು, "ಇಲ್ಲ, ನಾನು ಸುಂದರವಾಗಿಲ್ಲ, ನೋಡಿ ನನ್ನ ಮೂಗು ಬಾಗಿದೆ, ನನ್ನ ಹುಬ್ಬುಗಳು ಚಿಕ್ಕದಾಗಿವೆ. ನಾನೊಂದು ಪೆಡಿಕ್ಯೂರ್ ಅಥವಾ ಮೆನಿಕ್ಯೂರ್‌ಗೆ ಹೋಗಬೇಕು. ನನ್ನ ಹುಬ್ಬುಗಳನ್ನು ತೆಗೆಯಬೇಕು ಮತ್ತು ಚೆನ್ನಾಗಿ ಕಾಣಿಸಲು ಏನಾದರೂ ಮಾಡಬೇಕು."

ನಾನು ಹೇಳುತ್ತೇನೆ, ’ಹೇ, ನೀನು ಸುಂದರವಾಗಿರುವೆ!" ಮುಗಿಯಿತು! ನೀವು ಹೋಗಿ ಆ ಪ್ಯಾಕ್ ಅಥವಾ ಫೌಂಡೇಶನ್ ಹಾಕಬೇಕಾಗಿಲ್ಲ!

ನೀವು ಸುಂದರವಾಗಿಲ್ಲವೆಂದು ಮತ್ತು ನೀವು ಬ್ಯೂಟಿಶಿಯನ್ ಹತ್ತಿರ ಹೋಗಿ, ಫೌಂಡೇಶನ್ ಹಾಕಿ, ನಂತರ ಅದರ ಮೇಲೆ ನಿಮ್ಮ ಕೆನ್ನೆಯನ್ನು ಕೆಂಪಗಾಗಿಸಲು ಗುಲಾಬಿ ಬಣ್ಣವನ್ನು ಹಾಕಿ, ಇಲ್ಲಿ ಸ್ವಲ್ಪ ಹಸಿರು, ಅಲ್ಲಿ ನೀಲಿ ಹಾಗೂ ಕಣ್ಣುಗಳ ಮೇಲೆ ಏನೋ ಮಿನುಗುವುದನ್ನು ಹಾಕಿದರೆ ಮಾತ್ರ ನೀವು ಸುಂದರವಾಗಿ ಕಾಣಿಸುವಿರೆಂದು ನೀವು ಯೋಚಿಸುವುದಾದರೆ, ಆಗ ನಾನು ನಿಮಗೆ ಏನು ಹೇಳಲು ಸಾಧ್ಯ?

ಸರಿ, ಹಾಗೆ ಮಾಡಿ!

ನೋಡಿ, ಇದುವೇ ಜನರ ಮನಸ್ಸಿನಲ್ಲಿ ನಡೆಯುತ್ತಿರುವುದು. ಮಾಡುವುದರಲ್ಲಿನ ಅವರ ನಂಬಿಕೆಯು ಎಷ್ಟು ಬಲವಾಗಿದೆಯೆಂದರೆ, ಅವರು ಸುಂದರವಾಗಿರುವರೆಂದು ಯಾರಾದರೂ ಅವರಿಗೆ ಹೇಳಿದರೂ ಕೂಡಾ ಅದನ್ನು ಸ್ವೀಕರಿಸಲು ಅವರಿಗೆ ಸಾಧ್ಯವಾಗುವುದಿಲ್ಲ.

"ಇಲ್ಲ, ಮೊದಲು ನಾನು ಹೋಗಿ ಕೂದಲು ಕತ್ತರಿಸಿಕೊಳ್ಳಬೇಕು, ನಂತರ ಟೈ ಧರಿಸಬೇಕು ಮತ್ತು ನಂತರ ಮತ್ತೆ ಸ್ವಲ್ಪ ಮಿನುಗುವ ವಸ್ತುಗಳನ್ನು ಹಾಕಿ ನಾನು ಚೆನ್ನಾಗಿ ಕಾಣಿಸಬೇಕು" ಎಂದು ಅವರು ಹೇಳುತ್ತಾರೆ.

ನೀವು ಅದನ್ನೆಲ್ಲಾ ಮಾಡಬಾರದೆಂದು ನಾನು ಹೇಳುತ್ತಿಲ್ಲ, ಅದು ಪರವಾಗಿಲ್ಲ. ನೀವು ಹೊರಗಿನಿಂದ ಚೆನ್ನಾಗಿಯೂ, ಮೃದುವಾಗಿಯೂ ಇರುವುದಾಗಿ ಅನ್ನಿಸುವಂತೆ ಮಾಡುವ ಉತ್ಪನ್ನಗಳನ್ನು ಬಳಸಲು ನೀವು ಇಚ್ಛಿಸುವುದಾದರೆ; ಒಳಗಡೆ ಕೂಡಾ ನೀವು ಬಹಳ ಮೃದುವಾಗಿಯೂ ಚೆನ್ನಾಗಿಯೂ ಇರುವಿರಿ ಎಂಬುದನ್ನು ನೆನಪಿಡಿ.

ಚಲಿಸುವ ಚಿತ್ರಗಳ ರೂಪದಲ್ಲಿ ಇದನ್ನು ನೋಡಲು ಲಿಂಕ್: 

Focus on responsibility of this day, this moment

ನಿನ್ನಿನದನ್ನು ಮರೆತು ಇಂದಿನದರತ್ತ ಗಮನ ಹರಿಸಿ

ಮಾಂಟ್ರಿಯಾಲ್, ಕೆನಡ
೨೧ ಜುಲೈ ೨೦೧೩

ಪ್ರಶ್ನೆ: ಗುರುದೇವ, ಒಂದು ಮಾನವ ಆತ್ಮವು ಮೋಕ್ಷವನ್ನು ಪಡೆಯಲು ಹೆಚ್ಚಾಗಿ ಒಂದು ಅಥವಾ ಎರಡು ಮಿಲಿಯನ್ ವರ್ಷಗಳನ್ನು ತೆಗೆದುಕೊಳ್ಳಬಹುದು ಎಂದು ನನಗೆ ಹೇಳಲಾಗಿದೆ. ಕ್ರಿಯೆ ಮತ್ತು ಧ್ಯಾನಗಳನ್ನು ಪ್ರತಿದಿನವೂ ಮಾಡುವುದರಿಂದ, ಈ ಮೋಕ್ಷವನ್ನು ಒಂದು ಜನ್ಮದಲ್ಲಿಯೇ ಪಡೆದುಕೊಳ್ಳಬಹುದು ಎಂಬುದು ನಿಜವೇ?

ಶ್ರೀ ಶ್ರೀ ರವಿ ಶಂಕರ್: ಎಲ್ಲವೂ ಯಾವುದೋ ವಿಚಿತ್ರವಾದ ಕರ್ಮದೊಂದಿಗೆ ಕೆಲಸ ಮಾಡುತ್ತದೆ. ನೀವು ನಿಮ್ಮ ದೃಷ್ಟಿಯನ್ನು ಮೇಲಕ್ಕೆತ್ತಿ ಈ ಕ್ಷೇತ್ರದೊಳಕ್ಕೆ ನೋಡಬೇಕು.

ಒಂದು ಸುಂದರವಾದ ದ್ವಿಪದಿಯಿದೆ, ಅದು ಹೀಗೆಂದು ಹೇಳುತ್ತದೆ, "ಈ ಪ್ರಪಂಚವು ಎಲ್ಲಾ ಸಂಪತ್ತನ್ನು ಹೊಂದಿದೆ, ಬೇಕಾದುದೆಲ್ಲವೂ ಇದೆ, ಆದರೆ ಕರ್ಮವಿಲ್ಲದವನೊಬ್ಬನು ಅದನ್ನು ಪಡೆಯಲು ಸಾಧ್ಯವಿಲ್ಲ."

ಹಾಗಾಗಿ, ಏನನ್ನಾದರೂ ನೀನು ಪಡೆಯುವೆಯೋ ಅಥವಾ ಇಲ್ಲವೋ, ಅದೆಲ್ಲವೂ ಯಾವುದೋ ವಿಚಿತ್ರ ಕರ್ಮಗಳಿಗನುಸಾರವಾಗಿ ಕೆಲಸ ಮಾಡುತ್ತದೆ.

ಮನ್ನಣೆ, ಹಣ, ಅಧಿಕಾರ, ಸಂಬಂಧ, ಆರೋಗ್ಯ; ಎಲ್ಲವೂ ಸೃಷ್ಟಿಯಲ್ಲಿರುವ ಒಂದು ನಿಯಮದ ಮೇಲೆ ಅವಲಂಬಿಸಿದೆ. ಒಳ್ಳೆಯ ಕಾಲ ಬರುವಾಗ, ನಿಮ್ಮ ಅತ್ಯಂತ ಕೆಟ್ಟ ಶತ್ರು ನಿಮಗೆ ಸಹಾಯ ಮಾಡಲು ತೊಡಗುತ್ತಾನೆ ಮತ್ತು ಕೆಟ್ಟ ಕಾಲ ಬರುವಾಗ, ನಿಮ್ಮ ಅತ್ಯಂತ ಒಳ್ಳೆಯ ಸ್ನೇಹಿತ ಕೂಡಾ ಒಬ್ಬ ಶತ್ರುವಂತೆ ವರ್ತಿಸುತ್ತಾನೆ. ಈ ಎಲ್ಲಾ ಸಂಗತಿಗಳು ಆಗುವುದು ಯಾವುದೋ ಬಹಳ ವಿಚಿತ್ರ ಕರ್ಮಗಳಿಂದಾಗಿ. ಒಬ್ಬ ಬುದ್ಧಿವಂತ ವ್ಯಕ್ತಿಯು ಇದೆಲ್ಲದರಲ್ಲಿ ಸಿಕ್ಕಿಬೀಳುವುದಿಲ್ಲ. ಅವನು ಇನ್ನೂ ತನ್ನ ಪ್ರಯತ್ನ ಹಾಕುತ್ತಾ ಇರುತ್ತಾನೆ ಮತ್ತು ಮುಂದೆ ಸಾಗುತ್ತಾ ಇರುತ್ತಾನೆ.

ಒಂದು ಪ್ರಯತ್ನವನ್ನು ಹಾಕಲು ನೀವು ಏನೆಲ್ಲಾ ಬೇಕೋ ಅದನ್ನೆಲ್ಲಾ ಮಾಡಿ ಮತ್ತು ನಂತರ ನೀವದನ್ನು ಬಿಟ್ಟುಬಿಡಿ.

ಮಹಾಭಾರತ ಯುದ್ಧವನ್ನು ತಡೆಯಲು ಶ್ರೀಕೃಷ್ಣ ಪರಮಾತ್ಮನು ಮೂರು ಸಲ ಹೋದನು ಎಂಬುದು ನಿಮಗೆ ಗೊತ್ತಿದೆಯೇ?

ಯಾರೋ ಒಬ್ಬರು ಶ್ರೀಕೃಷ್ಣ ಪರಮಾತ್ಮನಲ್ಲಿ, "ಹೇಗಿದ್ದರೂ ಯುದ್ಧವಾಗುತ್ತದೆಯೆಂಬುದು ನಿನಗೆ ತಿಳಿದಿತ್ತು ಎಂದಾದರೆ, ಶಾಂತಿ ಸಂಧಾನಕ್ಕಾಗಿ ನೀನು ಮೂರು ಸಲ ಯಾಕೆ ಹೋದೆ? ಎಲ್ಲಾ ಮೂರು ಸಾರಿಯೂ ನಿನ್ನ ಶಾಂತಿ ಸಂಧಾನಗಳು ಸೋತವು, ಹಾಗಾದರೆ ನೀನು ಯಾಕೆ ಹೋದೆ?" ಎಂದು ಕೇಳಿದರು. ಅದೊಂದು ಬಹಳ ಸಮಂಜಸವಾದ ಪ್ರಶ್ನೆ.

ಆಗ ಶೀಕೃಷ್ಣ ಪರಮಾತ್ಮನು ಹೀಗೆಂದು ಹೇಳಿದನು, "ನಾನು ಹೋಗದೇ ಇರುತ್ತಿದ್ದರೆ ಆಗ, ನೀನು ಶಾಂತಿ ಸಂಧಾನ ಮಾಡಬಹುದಾಗಿತ್ತು, ನೀನದನ್ನು ಯಾಕೆ ಮಾಡಲಿಲ್ಲ? ಎಂಬ ಪ್ರಶ್ನೆ ಬರುತ್ತಿತ್ತು."

ನಿನ್ನ ಕರ್ಮದ ಕಡೆಗೆ ನಿನಗೆ ನಿನ್ನ ಕರ್ತವ್ಯವಿದೆ, ನೀನು ಏನೆಲ್ಲಾ ಮಾಡಬೇಕೋ, ನೀನದನ್ನು ಮಾಡು!

ಶಾಂತಿ ಸಂಧಾನವು ಯಶಸ್ವಿಯಾಯಿತೆಂದು ಇಟ್ಟುಕೊಳ್ಳೋಣ, ಆಗ ಇಡೀ ಮಹಾಭಾರತವು ಮುಗಿಯುತ್ತಿತ್ತು ಮತ್ತು ಗೀತೆಯು ಬರುತ್ತಲೇ ಇರಲಿಲ್ಲ! ದೇವರ ಅಮರ ಹಾಡು (ಭಗವದ್ಗೀತೆ) ಅಸ್ತಿತ್ವಕ್ಕೇ ಬರುತ್ತಿರಲಿಲ್ಲ!

ಹಾಗಾಗಿ, ಗೀತೆಯು ಬರಲೇ ಬೇಕು ಮತ್ತು ಯುದ್ಧವು ಆಗಲೇಬೇಕು ಎಂಬುದನ್ನು ಬಹಳ ಚೆನ್ನಾಗಿ ತಿಳಿದಿದ್ದರೂ ಸಹ ಶ್ರೀಕೃಷ್ಣ ಪರಮಾತ್ಮನು ಶಾಂತಿ ಸಂಧಾನಗಳಿಗಾಗಿ ಹೋದನು. ಇದು ಯಾಕೆಂದರೆ, ಅದು ನಮ್ಮ ಧರ್ಮದಲ್ಲಿದೆ, ನಮ್ಮ ಸ್ವಭಾವದಲ್ಲಿದೆ. ನಾವು ನಮ್ಮ ಪ್ರಯತ್ನಗಳನ್ನು ಹಾಕುತ್ತಾ ಇರಬೇಕು ಮತ್ತು ಪರಿಣಾಮಗಳಿಗೆ ಅಥವಾ ಫಲಿತಾಂಶಗಳಿಗೆ ಅಂಟಿಕೊಂಡಿರಬಾರದು.

ನಾನು ಹೇಳುತ್ತಿರುವುದು ನಿಮಗೆ ಅರ್ಥವಾಗುತ್ತಿದೆಯೇ? ಇದು ಬಹಳ ಸೂಕ್ಷ್ಮ ಯಾಕೆಂದರೆ ಮನಸ್ಸು ಒಂದಲ್ಲ ಒಂದು ರೀತಿಯಲ್ಲಿ ಮಾಯೆಯೊಳಕ್ಕೆ ಎಳೆಯಲ್ಪಡುತ್ತದೆ.

ನಿನ್ನೆ ನಿಮ್ಮಲ್ಲಿ ಕೆಲವರು ಗೋಡೆಯ ಮೇಲೆ ಕೆಲವು ವಿನ್ಯಾಸಗಳನ್ನು ಬರೆದಿರಿ. ಐದು ಅಥವಾ ಆರು ವರ್ಷಗಳ ಬಳಿಕ ಈ ಗೋಡೆಗೆ ಪುನಃ ಬಣ್ಣ ಬಳಿಯಬೇಕಾಗುವುದು. ಹಾಗೆ, ನೀವು ಮಾಡಿದ ಎಲ್ಲಾ ವಿನ್ಯಾಸಗಳ ಮೇಲೆ ಇನ್ನೊಂದು ಬಣ್ಣ ಬರುವುದು.

ಅದೇ ರೀತಿಯಲ್ಲಿ, ನೀವು ನಿಮ್ಮ ತೋಟದಲ್ಲಿ ಏನನ್ನಾದರೂ ಬೆಳೆಯುವಾಗ, ಜೊತೆಯಲ್ಲಿ ಕಳೆಗಳೂ ಬೆಳೆಯುತ್ತವೆ. ನೀವು ಹೋಗಿ ಅವುಗಳನ್ನು ಕೀಳುತ್ತೀರಿ. ಪುನಃ, ಕಳೆಗಳು ಬೆಳೆಯುವಾಗ ನೀವು, "ಓ, ನಾನು ಈಗಷ್ಟೇ ತೋಟವನ್ನು ಸ್ವಚ್ಛಗೊಳಿಸಿದ್ದೇನೆ ಮತ್ತು ಕಳೆಗಳು ಮತ್ತೆ ಬಂದಿವೆ" ಎಂದು ಹೇಳಲು ಸಾಧ್ಯವಿಲ್ಲ! ಇದು ಪ್ರಕೃತಿ.

ಶರೀರದ ಸ್ವಭಾವವೆಂದರೆ ಕೊಳೆಯಾಗುವುದು. ಸ್ನಾನ ಮಾಡಿದ ಬಳಿಕ ನೀವು, "ಇಡೀ ವರ್ಷಕ್ಕಾಗಿ ನಾನು ಸ್ನಾನ ಮಾಡಿದ್ದೇನೆ" ಎಂದು ಹೇಳಲು ಸಾಧ್ಯವಿಲ್ಲ! ನೀವು ಮತ್ತೆ ಮತ್ತೆ ಸ್ನಾನ ಮಾಡುತ್ತಾ ಇರಬೇಕಾಗುತ್ತದೆ.

ಅದೇ ರೀತಿಯಲ್ಲಿ, ಮನಸ್ಸನ್ನು ಜ್ಞಾನದೊಳಕ್ಕೆ ಊರಬೇಕಾದ ಅಗತ್ಯವಿದೆ. ಅದು ಸುಲಭವಾಗಿ ಈ ನಾಲ್ಕು ಜ್ಞಾನದ ಸ್ತಂಭಗಳಿಂದ ಹೊರಕ್ಕೆ ಜಾರಬಹುದು; ವಿವೇಕ, ವೈರಾಗ್ಯ, ಸ್ವ-ನಿಯಂತ್ರಣ ಮತ್ತು ನಿಮ್ಮಲ್ಲಿರುವುದನ್ನು ಗೌರವಿಸುವುದು. ಮತ್ತು ನಂತರ, ಮೋಕ್ಷವನ್ನು ಬಯಸುವುದು!

ಹಾಗಾಗಿ ಜ್ಞಾನವನ್ನು ಮರಳಿ ಮತ್ತೆ ಮತ್ತೆ ಪಡೆಯುತ್ತಾ ಇರಿ! ಹೇಗಿದ್ದರೂ ಎಲ್ಲವೂ ಅಲ್ಲಿದೆ ಎಂಬುದು ನಿಮಗೆ ಇದ್ದಕ್ಕಿದ್ದಂತೆ ಕಂಡುಬರುತ್ತದೆ.

ಈಗ, ನೀವು ಅದರಿಂದ ಜಾರುವಾಗ, ಆಗಲೂ ನೆನಪಿಟ್ಟುಕೊಳ್ಳಿ ಅದು ಇನ್ನೊಂದು ಹಂತವೆಂದು.

ಇದೆಲ್ಲವನ್ನೂ ತಿಳಿದುಕೊಂಡು, ಆಗಲೂ ನೀನು ಸಿಕ್ಕಿಬಿದ್ದಿರುವೆಯೆಂದಿಟ್ಟುಕೊಳ್ಳೋಣ (ಮಾಯೆಯಲ್ಲಿ). ಆಗ, ನೀನು ಸಿಕ್ಕಿಬಿದ್ದಿರುವೆಯೆಂದು ಬೇಸರಪಡಬೇಡ; ಅದು ಕೂಡಾ ಪ್ರಕೃತಿಯ ಭಾಗ. "ಓ, ನಾನು ಜ್ಞಾನವನ್ನು ಅಳವಡಿಸಿಕೊಳ್ಳಲಿಲ್ಲ" ಅಥವಾ "ಒಂದೋ ಬೇರೊಬ್ಬರು ತಪ್ಪಾಗಿರುವರು ಅಥವಾ ನಾನು ತಪ್ಪು" ಎಂದು ಹೇಳಬೇಡ. ಈ ಪ್ರವೃತ್ತಿಯು ನಮ್ಮ ಸಮಾಜದಲ್ಲಿ, ನಮ್ಮ ಜೀವನದಲ್ಲಿ ಒಂದು ದೀರ್ಘ ಕಾಲದಿಂದ ಇದೆ. ನಾವು ಅದರಿಂದ ಹೊರಕ್ಕೆ ಬರಬೇಕು. ಹಲವು ಸಾರಿ ನೀವು ಅದರಿಂದ ಹೊರಬರುತ್ತೀರಿ ಮತ್ತು ಕೆಲವೊಮ್ಮೆ ನೀವು ಅದರಲ್ಲಿ ಸಿಕ್ಕಿಬೀಳುತ್ತೀರಿ, ಸರಿಯಾ? ಅದರಿಂದ ಹೊರಬನ್ನಿ ಮತ್ತು ವಿಷಯಗಳನ್ನು ಅವುಗಳಿರುವಂತೆಯೇ ನೋಡಿ! ಈ ಕ್ಷಣದಲ್ಲಿ, ಅದು ಇರುವುದೇ ಹಾಗೆ, ಯಾಕೆಂದರೆ ಇರುವುದೆಲ್ಲವೂ ಈ ಕ್ಷಣವೇ!

ಈ ಕ್ಷಣದಲ್ಲಿ, ಅಹಿತಕರವಾದ ಸಂಗತಿಗಳು ಆಗುತ್ತಿರಲಿ ಅಥವಾ ಹಿತಕರವಾದ ಸಂಗತಿಗಳು ಆಗುತ್ತಿರಲಿ, ನಾನು ಅದಕ್ಕೊಂದು ಸಾಕ್ಷಿಯಾಗಿದ್ದೇನೆ. ಮತ್ತು ನನ್ನ ಮನಸ್ಸು ಅದರಲ್ಲಿ ಸಿಕ್ಕಿಹಾಕಿಕೊಳ್ಳುತ್ತಿದೆ, ಅದು ಕೂಡಾ ಆಗುವಿಕೆಯ ಒಂದು ಭಾಗವಾಗಿದೆ; ನಾನು ಅದಕ್ಕೆ ಕೂಡಾ ಸಾಕ್ಷಿಯಾಗಿದ್ದೇನೆ. ಪರಿಸ್ಥಿತಿಯಿಂದ ನೀವು ಮೇಲಕ್ಕೆ ಏಳುವುದು ಹೀಗೆಯೇ!
ಯೋಗ ಸೂತ್ರಗಳನ್ನು ಸ್ಥಾಪಿಸಿದ ಮಹಾಋಷಿ ಪತಂಜಲಿ ಹೀಗೆಂದು ಹೇಳಿದರು, ’ಸ ತು ದೀರ್ಘ ಕಾಲ ನೈರಂತರ್ಯ ಸತ್ಕಾರಸೇವಿತೋ ದೃಢ ಭೂಮಿಃ’.

ನೀವು ಪ್ರಾಣಾಯಾಮ, ಧ್ಯಾನ ಮತ್ತು ಜ್ಞಾನಗಳನ್ನು ಒಂದು ದೀರ್ಘಕಾಲದವರೆಗೆ ಅಭ್ಯಸಿಸಬೇಕು. ಸಂಪೂರ್ಣ ಜೀವನವೇ ಒಂದು ಅಭ್ಯಾಸವಾಗಿದೆ ಮತ್ತು ನೀವು ಗೌರವದೊಂದಿಗೆ ಅಭ್ಯಸಿಸಿದಾಗ, ಈ ಜ್ಞಾನವು ನಿಮ್ಮಲ್ಲಿ ಚೆನ್ನಾಗಿ ದೃಢವಾಗಿ ಸ್ಥಾಪನೆಯಾಗುತ್ತದೆ.

ಪ್ರಶ್ನೆ: ಗುರುದೇವ, ಇಲ್ಲಿಯವರೆಗೆ, ಧ್ಯಾನ ಮಾಡುವಾಗ ಒಳಮುಖವಾಗಿ ಹೋಗಲು ಸಾಧ್ಯವಾಗಲು ನಾವು ನಮ್ಮ ಕಣ್ಣುಗಳನ್ನು ಮುಚ್ಚಿದ್ದೆವು. ಧ್ಯಾನಗಳ ಸಂದರ್ಭದಲ್ಲಿ ನಮ್ಮ ಕಣ್ಣುಗಳನ್ನು ಅರ್ಧ ತೆರೆದಿರುವುದರ ಕಾರಣವೇನು?

ಶ್ರೀ ಶ್ರೀ ರವಿ ಶಂಕರ್: ಹಲವು ಸಲ, ನೀವು ನಿಮ್ಮ ಕಣ್ಣುಗಳನ್ನು ಮುಚ್ಚಿದಾಗ, ನಿಮಗೆ ನಿಮ್ಮ ಮಾನಸಿಕ ಕಲ್ಪನೆಗಳೊಳಕ್ಕೆ ಹೋಗುವ ಅಥವಾ ಒಂದು ಕನಸಿನೊಳಕ್ಕೆ ಹರಿದುಹೋಗುವ ಅಥವಾ ಕೆಲವೊಮ್ಮೆ ನಿದ್ದೆಗೆ ಜಾರುವ ಪ್ರವೃತ್ತಿಯಿರುತ್ತದೆ. ಯೋಗದ ಪರಿಭಾಷೆಯಲ್ಲಿ ಇದು ಮನೋರಾಜ್ಯ ಎಂದು ಕರೆಯಲ್ಪಡುತ್ತದೆ.

ಮನೋರಾಜ್ಯವೆಂದರೆ, ಮನಸ್ಸು ತನ್ನದೇ ಆದ ರಾಜ್ಯವನ್ನು ಸೃಷ್ಟಿಸಲು ಆರಂಭಿಸಿ ಅದರಲ್ಲಿ ಸುತ್ತುತ್ತಾ ಇರುವ ಒಂದು ಸ್ಥಿತಿ; ಅದು ಸಂಘರ್ಷದಲ್ಲಿಯೂ ಆಗಿರಬಹುದು ಅಥವಾ ಖುಷಿಯಲ್ಲಿಯೂ ಆಗಿರಬಹುದು. ನೀವು ಯೋಚಿಸುತ್ತಾ, ಕಲ್ಪನೆ ಮಾಡಿಕೊಳ್ಳುತ್ತಾ ಅಥವಾ ನಿಮಗೆ ಸಂತೋಷ ನೀಡುವ ಇಲ್ಲವೇ ದುಃಖ ನೀಡುವ ಯಾವುದನ್ನಾದರೂ ಪುನರ್ ಸೃಷ್ಟಿ ಮಾಡುತ್ತಾ ನಿಮ್ಮದೇ ಆದ ಮನಸ್ಸಿನಲ್ಲಿ ಕುಳಿತುಕೊಳ್ಳುತ್ತೀರಿ.

ಒಂದೋ ನೀವು, ಎಲ್ಲರೂ ನಿಮ್ಮ ವಿರೋಧವಾಗಿರುವರು, ಇಡೀ ಪ್ರಪಂಚವೇ ನಿಮ್ಮ ವಿರೋಧವಾಗಿರುವುದು; ನಿಮ್ಮ ಅತ್ತೆ, ಮಾವ, ಗಂಡ ಅಥವಾ ಸ್ನೇಹಿತ; ಎಲ್ಲರೂ ನಿಮ್ಮ ಹಿಂದೆ ಬಿದ್ದಿದ್ದಾರೆ ಎಂದು ಯೋಚಿಸುತ್ತೀರಿ, ಅಥವಾ ನಿಮ್ಮ ಮನಸ್ಸು, ನೀವು ಒಬ್ಬರನ್ನು ಹೇಗೆ ಒಪ್ಪಿಸಬೇಕು ಅಥವಾ ಮೆಚ್ಚಿಸಬೇಕು ಎಂದು ಯೋಚಿಸುತ್ತದೆ. ಈ ರೀತಿಯ ವಿಷಯಗಳು ಮನಸ್ಸಿನಲ್ಲಿ ಆಗುತ್ತಾ ಇರುತ್ತವೆ.

ನಿಮ್ಮ ಮನಸ್ಸು ಮನೋರಾಜ್ಯದಲ್ಲಿ ಸಿಕ್ಕಿಹಾಕಿಕೊಂಡಾಗ, ಧ್ಯಾನದ (ಕಣ್ಣು ಮುಚ್ಚಿದ) ಸಂದರ್ಭಗಳಲ್ಲಿ ಅದು ಇನ್ನೂ ಹೆಚ್ಚು ತಿಳಿದುಬರುತ್ತದೆ.

ನೀವು ಕಣ್ಣುಗಳನ್ನು ಅರ್ಧ ತೆರೆದಿರುವ ಈ ಧ್ಯಾನದಲ್ಲಿ, ಮನೋರಾಜ್ಯಕ್ಕೆ ಜಾರಲು ನಿಮಗೆ ಬಹಳ ಕಡಿಮೆ ಅವಕಾಶವಿರುತ್ತದೆ; ಒಂದು ಬೇರೆ ಗುಣಮಟ್ಟದ ಧ್ಯಾನವಾಗಲು ಶುರುವಾಗುತ್ತದೆ.

ಪ್ರಶ್ನೆ: ಗುರುದೇವ, ಶಿವ ತತ್ವ ಮತ್ತು ಕೃಷ್ಣ ಪ್ರಜ್ಞೆಗಳ ನಡುವಿನ ವ್ಯತ್ಯಾಸವೇನು?

ಶ್ರೀ ಶ್ರೀ ರವಿ ಶಂಕರ್: ಶಿವ ತತ್ವವು ಒಂದು ಸಿದ್ಧಾಂತವಾಗಿದೆ, ಅದಕ್ಕೆ ಯಾವುದೇ ಭೌತಿಕ ರೂಪವಿಲ್ಲ. ಕೃಷ್ಣನೆಂದರೆ ಮಾನವ ರೂಪದಲ್ಲಿ ಶಿವ ತತ್ವವನ್ನು ಸಂಪೂರ್ಣವಾಗಿ ತನ್ನದಾಗಿಸಿಕೊಂಡ ಒಬ್ಬನು. ಕೃಷ್ಣನು ಒಬ್ಬ ಐತಿಹಾಸಿಕ ವ್ಯಕ್ತಿಯಾಗಿದ್ದನು. ಅವನು ೫,೧೧೪ ವರ್ಷಗಳ ಮೊದಲು ಜೀವಿಸಿದ್ದನು.

ಕೃಷ್ಣನು ಭೂಮಿಯ ಮೇಲೆ ನಡೆದಾಡಿದನು, ಆದರೆ ಅವನು ಶಿವ ತತ್ವವನ್ನು ತನ್ನದಾಗಿಸಿಕೊಂಡನು. ಅವನು ಟೊಳ್ಳು ಮತ್ತು ಖಾಲಿಯಾಗಿದ್ದನು, ಮತ್ತು ನಂತರ ಅವನು ಕಾಲದಿಂದ ಕಾಲಕ್ಕೆ ಶಿವ ತತ್ವವನ್ನು ಸಂಪೂರ್ಣವಾಗಿ ಪ್ರತಿಪಾದಿಸಿದನು.

ಪ್ರಶ್ನೆ: ನನ್ನ ಕುಟುಂಬದೊಂದಿಗೆ ಹೊರತುಪಡಿಸಿ ಬೇರೆ ಎಲ್ಲೆಡೆಯಲ್ಲೂ ಒಂದು ಆರ್ಟ್ ಆಫ್ ಲಿವಿಂಗ್ ಅನುಭವವನ್ನು ಹೊಂದಲು ನನಗೆ ಸಾಧ್ಯವಾಗುತ್ತದೆ. ಯಾಕೆಂದು ನೀವು ದಯವಿಟ್ಟು ವಿವರಿಸಬಲ್ಲಿರಾ ಮತ್ತು ನಾನು ಅದರಿಂದ ಹೊರಬರುವುದು ಹೇಗೆ?

ಶ್ರೀ ಶ್ರೀ ರವಿ ಶಂಕರ್: ಕೆಲವೊಮ್ಮೆ, ಕೆಲವು ಜಾಗಗಳಲ್ಲಿ ಕೆಲವು ಜನರು ಇತರ ಜನರಿಗಿಂತ ಹೆಚ್ಚು ನಿಮ್ಮನ್ನು ಪ್ರಚೋದಿಸುವರು. ಅದು ನಿನ್ನ ತಪಸ್ಸು, ನಿನ್ನ ಸಾಧನೆ. ಅಲ್ಲಿರು, ಓಡಿಹೋಗಬೇಡ, ಅಲ್ಲಿಯೇ ನಿನ್ನ ಪರೀಕ್ಷೆ ನಡೆಯುತ್ತಿರುವುದು. ಅದೊಂದು ಪರೀಕ್ಷೆ, ಹಾಗೆಯೇ ಒಂದು ಅಭ್ಯಾಸ ಕೂಡಾ. ನೀನು ಅದನ್ನು ತಾಳಬೇಕು.

ನಿನಗೆ ಅತ್ಯಾವಶ್ಯವಿರುವ ಶಕ್ತಿಯನ್ನು ತರುವುದು ಜ್ಞಾನದ ಮೂರನೆಯ ಸ್ತಂಭವಾಗಿದೆ - ಷಟ್ ಸಂಪತ್ತಿ (ಆರು ರೀತಿಯ ಸಂಪತ್ತುಗಳು).

ಪ್ರಶ್ನೆ: ಗುರುದೇವ, ಶಕ್ತಿ ಕ್ರಿಯೆಯ ಲಾಭಗಳೇನು? ಅದು ಕೇವಲ ಶರೀರದ ಮಟ್ಟದಲ್ಲಿ ಮಾತ್ರವೇ ಅಥವಾ ಅದು ಮನಸ್ಸಿನ ಮೇಲೂ ಪರಿಣಾಮ ಬೀರುತ್ತದೆಯೇ?

ಶ್ರೀ ಶ್ರೀ ರವಿ ಶಂಕರ್: ಎರಡೂ. ನಿಮ್ಮ ಚೇತನಕ್ಕೆ ಲಾಭಕರವಾಗುವ ಯಾವುದೇ ಆದರೂ ಖಂಡಿತವಾಗಿಯೂ ಶರೀರಕ್ಕೂ ಲಾಭಕರವಾಗಿರುತ್ತದೆ. ಶರೀರವು ಆರೋಗ್ಯಕರವೂ, ಬಲಶಾಲಿಯೂ ಆಗಿದ್ದರೆ, ಅದು ಚೇತನ ಮತ್ತು ಮನಸ್ಸಿನ ಮೇಲೆ ಕೂಡಾ ಪ್ರತಿಫಲಿಸುತ್ತದೆ. 

ಶನಿವಾರ, ಜುಲೈ 20, 2013

ಸೃಷ್ಟಿಯ ರಹಸ್ಯಗಳು

ಮಾಂಟ್ರಿಯಾಲ್, ಕೆನಡ
ಜುಲೈ ೨೦, ೨೦೧೩

ಪ್ರಶ್ನೆ: ಪ್ರೀತಿಯ ಗುರುದೇವ, ಇತ್ತೀಚೆಗೆ ಹಿಗ್ಸ್-ಬೋಸನ್ ಕಣ ಎಂದು ಕರೆಯಲ್ಪಡುವ ಒಂದರ ಆವಿಷ್ಕಾರವಾಯಿತು. ಇದು ವಿಜ್ಞಾನಿಗಳನ್ನು ಶುದ್ಧ ಚೈತನ್ಯದ ಕಡೆಗೆ ಕೊಂಡೊಯ್ಯುತ್ತಿದೆಯೇ?

ಶ್ರೀ ಶ್ರೀ ರವಿ ಶಂಕರ್: ಅವರು ಎಲ್ಲಿ ದೇವ ಕಣವನ್ನು ಕಂಡುಹಿಡಿದರೋ ಆ ಸಂಸ್ಥೆಯಾದ ಸಿ.ಇ.ಆರ್.ಎನ್. (ಯುರೋಪಿಯನ್ ಆರ್ಗನೈಸೇಶನ್ ಫಾರ್ ನ್ಯೂಕ್ಲಿಯಾರ್ ರಿಸರ್ಚ್) ನ್ನು ನಾನು ಸಂದರ್ಶಿಸಿದೆ. ನಾವು ಅವರಿಗೆ ಯೋಗ ವಸಿಷ್ಠ ಪುಸ್ತಕ ಮತ್ತು ಕೆಲವು ಧ್ಯಾನ ಸಿ.ಡಿ. ಗಳನ್ನು ಉಡುಗೊರೆಯಾಗಿ ನೀಡಿದೆವು. ವಾಸ್ತವವಾಗಿ, ಆ ಸಂಸ್ಥೆಯ ಮುಖ್ಯಸ್ಥರು ನಮ್ಮ ವರ್ಲ್ಡ್ ಫಾರಮ್ ಫಾರ್ ಎಥಿಕ್ಸ್ ಇನ್ ಬ್ಯುಸಿನೆಸ್ ಸಮ್ಮೇಳನಕ್ಕೆ ಬಂದು ಮಾತನಾಡಿದರು.

ವಿಜ್ಞಾನಿಗಳು ಆಧ್ಯಾತ್ಮಕ್ಕೆ ಬಹಳ ಹತ್ತಿರವಾಗಿದ್ದಾರೆ, ಅವರು ಅದರಿಂದ ದೂರವಿಲ್ಲ. ಅವರೇನು ಹೇಳುತ್ತಿರುವರೋ ಅದು, ನಾವು ಹೇಳುತ್ತಾ ಬಂದಿರುವ ಅದೇ ವಿಷಯವಾಗಿದೆ. ಆ ಸಂಸ್ಥೆಯೊಂದಿಗೆ ೪೦ ವರ್ಷಗಳಿಂದ ಇದ್ದ ಜರ್ಮನಿಯ ಒಬ್ಬ ವಿಜ್ಞಾನಿಯು, ಈ ಎಲ್ಲಾ ವರ್ಷಗಳಲ್ಲಿ ತಾನು ವಸ್ತುವಿನ ಬಗ್ಗೆ ಅಧ್ಯಯನ ನಡೆಸಿರುವುದಾಗಿಯೂ, ತಿಳಿದುಬಂದುದೇನೆಂದರೆ ಅದು ಅಸ್ತಿತ್ವದಲ್ಲಿಯೇ ಇಲ್ಲವೆಂದೂ ಹೇಳಿದರು. ವಸ್ತುವು ಅಸ್ತಿತ್ವದಲ್ಲಿಯೇ ಇಲ್ಲ! ಅಸ್ತಿತ್ವದಲ್ಲಿರುವುದು ಏನೆಂದರೆ ಕೇವಲ ಚೈತನ್ಯ, ಮತ್ತು ಇದೆಲ್ಲವೂ ಒಂದು ಭ್ರಮೆ ಮಾತ್ರ.

ಇದನ್ನೇ ಪವಿತ್ರ ಸಂಪ್ರದಾಯದ ಗುರುಗಳು ಸಾವಿರಾರು ವರ್ಷಗಳ ಮೊದಲು ಹೇಳಿದುದು, "ಇದೆಲ್ಲವೂ ಕೇವಲ ಮಾಯೆ, ಒಂದು ಭ್ರಮೆ, ಯಾಕೆಂದರೆ ಯಾವುದೂ ಅಸ್ತಿತ್ವದಲ್ಲಿಲ್ಲ; ಒಂದೇ ಒಂದು ವಿಷಯ ಅಸ್ತಿತ್ವದಲ್ಲಿರುವುದು." ಈಗ ವಿಜ್ಞಾನಿಗಳು ಅದನ್ನೇ ಹೇಳುತ್ತಿದ್ದಾರೆ.

ಗ್ರಹಿಸುವವನು ಮತ್ತು ಗ್ರಹಿಸಲ್ಪಡುವ ವಸ್ತುವಿನ ನಡುವೆ ಒಂದು ನಿಕಟ ಸಂಬಂಧ ಇದೆಯೆಂದು ವಿಜ್ಞಾನಿಗಳು ಹೇಳುತ್ತಾರೆ. ನೀವಿಲ್ಲದಿದ್ದರೆ, ನಿಮಗೆ ಇಲೆಕ್ಟ್ರಾನನ್ನು ನೋಡಲು ಕೂಡಾ ಸಾಧ್ಯವಿಲ್ಲ, ಅದು ಅಸ್ತಿತ್ವದಲ್ಲಿಲ್ಲ. ಅಲ್ಲಿ ನೀವಿರುವುದರಿಂದ ಒಂದು ಇಲೆಕ್ಟ್ರೋನ್ ಮೇಲೆ ಪ್ರಭಾವ ಬೀರುತ್ತೀರಿ. ಹೀಗೆ, ದೃಷ್ಟಾ, ದೃಶ್ಯ ಮತ್ತು ದೃಷ್ಟಿಸುವ ಪ್ರಕ್ರಿಯೆ; ತಿಳಿಯುವವನು, ತಿಳುವಳಿಕೆಯ ವಸ್ತು ಮತ್ತು ತಿಳಿಯುವ ಪ್ರಕ್ರಿಯೆ; ಅವುಗಳೆಲ್ಲವೂ ಒಂದೇ. ಇದನ್ನೇ ನಾವು ಆಧ್ಯಾತ್ಮದಲ್ಲಿ ಹೇಳುತ್ತಾ ಬಂದಿರುವುದು.

ಅದೇ ವಿಷಯವನ್ನು ಒಬ್ಬ ವಿಜ್ಞಾನಿಯಿಂದ ಕೇಳುವುದು ಬಹಳ ಹರ್ಷದಾಯಕವಾಗಿತ್ತು. ಅವರು ಕೂಡಾ ಸಂತೋಷವಾಗಿ ಮತ್ತು ಆನಂದಪೂರ್ಣರಾಗಿದ್ದರು.

ವಿಜ್ಞಾನಿಗಳು, "ನಾವು ವಿಶ್ವದ ಬಗ್ಗೆ ಬಹಳಷ್ಟನ್ನು ಕಂಡುಹುಡುಕಿದ್ದೇವೆಂದು ನಾವು ಯೋಚಿಸಿದ್ದೆವು, ಆದರೆ ನಮಗೆ ಇನ್ನೂ ಹೆಚ್ಚಿನದು ತಿಳಿದಾಗ, ನಮಗೆ ತಿಳಿದಿಲ್ಲದೇ ಇರುವ ವಿಷಯಗಳು ಹಲವಾರಿವೆ ಎಂಬುದು ನಮಗೆ ಅರಿವಾಯಿತು; ಉದಾಹರಣೆಗೆ ಗಾಢ ವಸ್ತು ಮತ್ತು ಗಾಢ ಚೈತನ್ಯ" ಎಂದು ಹೇಳಿದರು. ಭಾರತ್ ಗ್ಯಾನ್ ನ ಮೂಲಕ, ಸೃಷ್ಟಿಯ ಬಗ್ಗೆ ಆರ್ಟ್ ಆಫ್ ಲಿವಿಂಗ್ ಪ್ರಕಟಿಸಿರುವ ದಿ ಕ್ರಿಯೇಶನ್ ಎಂಬ ಒಂದು ಪುಸ್ತಕವನ್ನು ನಾವು ಅವರಿಗೆ ಉಡುಗೊರೆಯಾಗಿ ನೀಡಿದೆವು.
ವೇದಗಳಲ್ಲಿ, ಸೃಷ್ಟಿಯ ಬಗ್ಗೆ ಒಂದು ಸ್ತೋತ್ರವಿದೆ. ಅದು ಈ ರೀತಿ ಸಾಗುತ್ತದೆ, ’ಆರಂಭದಲ್ಲಿ, ಕತ್ತಲಿನಿಂದ ಆವರಿಸಲ್ಪಟ್ಟ ಕತ್ತಲೆಯಿತ್ತು’. ಯಾವುದೇ ಪಂಡಿತನಿಗೂ ಅದನ್ನು ನಿಜವಾಗಿ ಅರ್ಥ ಮಾಡಿಕೊಳ್ಳಲು ಅಥವಾ ವ್ಯಾಖ್ಯಾನಿಸಲು ಸಾಧ್ಯವಾಗಲಿಲ್ಲ. ಈಗ, ಅದನ್ನೇ ವಿಜ್ಞಾನಿಗಳು ಹೇಳುತ್ತಿರುವುದು; ಒಂದು ಗಾಢ ವಸ್ತು ಮತ್ತು ಗಾಢ ಚೈತನ್ಯವಿದೆ.
ವಿಶ್ವದಲ್ಲಿ ವಸ್ತುಗಳು ಯಾಕೆ ಗೋಳಾಕಾರದಲ್ಲಿವೆ? ಅದು ಎಲ್ಲದರ ಸುತ್ತಲಿರುವ ಗಾಢ ವಸ್ತುವಿನ ಒತ್ತಡದಿಂದಾಗಿ, ಅದಕ್ಕಾಗಿಯೇ ನಮಗೆ ಎಲ್ಲವೂ ಗೋಳಾಕಾರದಲ್ಲಿ ಕಾಣಿಸುವುದು.

ಸೂರ್ಯನು ಗುಂಡಗೆ ಇರುವುದು ಯಾಕೆ? ಯಾಕೆಂದರೆ, ಸೂರ್ಯನ ಸುತ್ತಲಿರುವ ಗಾಢ ಚೈತನ್ಯವು ಎಷ್ಟು ಹೆಚ್ಚೆಂದರೆ, ಅದು ಸೂರ್ಯನನ್ನು ಅದುಮುತ್ತದೆ. ಅದು, ಒಂದು ನೀರಿನ ಬಾಟಲಿಯಲ್ಲಿರುವ ಅನಿಲದ ಕಣಗಳಂತೆ. ನೀವೊಂದು ಸೋಡಾ ಪಾನೀಯವನ್ನು ಅಲುಗಾಡಿಸಿದರೆ, ಗುಳ್ಳೆಗಳು ಉಂಟಾಗುತ್ತವೆ. ಅವುಗಳ ಸುತ್ತಲಿರುವ ನೀರಿನ ಒತ್ತಡದಿಂದಾಗಿ ಒಳಗಿರುವ ಗುಳ್ಳೆಗಳು ಗುಂಡಗಿರುತ್ತವೆ.

ಅದೇ ರೀತಿಯಲ್ಲಿ, ಈ ವಿಶ್ವವು ಕಾಣಿಸದಿರುವ ಗಾಢ ಚೈತನ್ಯವನ್ನು ಒಳಗೊಂಡಿದೆ. ನಿಮಗದನ್ನು ನೋಡಲು ಸಾಧ್ಯವಿಲ್ಲದಿರುವುದರಿಂದ ಅವರದನ್ನು ಗಾಢ ಚೈತನ್ಯವೆಂದು ಕರೆಯುತ್ತಾರೆ. ಈ ಗಾಢ ಚೈತನ್ಯದ ಇರುವಿಕೆಯ ಕಾರಣದಿಂದಾಗಿಯೇ, ನಕ್ಷತ್ರಗಳು ಮತ್ತು ಗ್ರಹಗಳನ್ನೊಳಗೊಂಡಂತೆ ಇತರ ಎಲ್ಲಾ ವಸ್ತುಗಳು ಗೋಳವಾಗಿರುವುದು. ಮೇಲಾಗಿ, ನಾವು ನೋಡುವ ಈ ನಕ್ಷತ್ರಗಳು, ಗ್ರಹಗಳು ಸೃಷ್ಟಿಯ ಕೇವಲ ೧೦% ನ್ನು ಮಾತ್ರ ರೂಪಿಸುತ್ತವೆ; ೯೦% ಗಾಢ ಚೈತನ್ಯ, ಗಾಢ ವಸ್ತುವಾಗಿದೆ ಮತ್ತು ಶಿವ ತತ್ವವೆಂದರೆ ಅದುವೇ.

ನಂತರ ವಿಜ್ಞಾನಿಗಳು, ಅವರ ಆವಿಷ್ಕಾರವು ದೇವಕಣವೆಂದು ಹೇಗೆ ಗುರುತಿಸಲ್ಪಟ್ಟಿತು ಎಂಬುದಾಗಿ ನನಗೆ ಹೇಳಿದರು.
ವಿಜ್ಞಾನಿಗಳು ಕಣಗಳ ದೇವರನ್ನು; ಅಂದರೆ ಎಲ್ಲಿಂದ ಇತರ ಎಲ್ಲಾ ಕಣಗಳು ಬಂದಿವೆಯೋ ಅದನ್ನು ಕಂಡುಹಿಡಿದಾಗ; ಕಣಗಳಲ್ಲೇ ಸೂಕ್ಷ್ಮವಾದುದರಲ್ಲಿ ಮೂರು ಐಸೋಟೋಪುಗಳು ಇರಲೇ ಬೇಕೆಂಬುದಾಗಿ ಅವರು ಕಂಡುಕೊಂಡರು. ಮೂರು ಐಸೋಟೋಪ್‌ಗಳಿಲ್ಲದೆ ವಸ್ತುವು ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲ. ಇದನ್ನೇ ಋಷಿಗಳು ಹೇಳಿದುದು, "ಸೃಷ್ಟಿಯು ಅಸ್ತಿತ್ವದಲ್ಲಿರಬೇಕಾದರೆ ಮೂರು ವಿಷಯಗಳು ಇರಲೇ ಬೇಕು - ಸತ್ವ, ರಜಸ್ ಮತ್ತು ತಮಸ್. ಇವುಗಳಲ್ಲಿ ಒಂದು ಇಲ್ಲವಾಗಿದ್ದರೆ ಕೂಡಾ, ವಸ್ತುಗಳು ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲ."

ವಸ್ತುವು ಅಸ್ತಿತ್ವದಲ್ಲಿರಬೇಕಾದರೆ ಮೂರು ವಿಷಯಗಳು ಇರಲೇಬೇಕೆಂದು ವಿಜ್ಞಾನಿಗಳು ಹೇಳಿದರು.ವಿಜ್ಞಾನಿಗಳು ಆ ಮೂರನ್ನು ಇನ್ನೂ ತುಂಡರಿಸಿದಾಗ, ಅವುಗಳು ಕೇವಲ ಕಂಪನಗಳು ಎಂಬುದನ್ನು ಅವರು ಕಂಡುಕೊಂಡರು; ಅವರು ಕರೆದುದು ಹಾಗೆ, ಕಣಗಳ ದೇವರು ಎಂದು.

ಸಂಸ್ಥೆಯ ಮಾರ್ಕೆಟಿಂಗ್ ವಿಭಾಗವು, "ನೀವದನ್ನು ಕಣಗಳ ದೇವರು ಎಂದು ಕರೆದರೆ, ಅದು ಮಾರಾಟವಾಗಲಾರದು, ಸುಮ್ಮನೇ ಅದನ್ನು ದೇವಕಣ ಎಂದು ಕರೆಯಿರಿ" ಎಂದು ಹೇಳಿತು.

ಹೀಗೆ, ಮಾರ್ಕೆಟಿಂಗ್ ವಿಭಾಗವು, ’ಗಳ’ ಎಂಬುದನ್ನು ತೆಗೆದುಹಾಕಿ, "ದೇವಕಣದ ಆವಿಷ್ಕಾರವಾಯಿತು" ಎಂದು ಹೇಳಿತು. ನಂತರ ಮಾಧ್ಯಮಗಳು ಅದನ್ನು ಒಂದು ದೊಡ್ಡ ರೀತಿಯಲ್ಲಿ ತೆಗೆದುಕೊಂಡವು. ಇದನ್ನೇ ಅವರು ನನಗೆ ಹೇಳಿದ್ದು. ಇದು ಆಸಕ್ತಿಕರವಾದುದು.

ಈಗ, ಆ ಯಂತ್ರವನ್ನು ದುರಸ್ತಿಗೆಂದು ೧೮ ತಿಂಗಳುಗಳವರೆಗೆ ನಿಲ್ಲಿಸಲಾಗಿದೆ. ಅದೊಂದು, ಕೆಳಗಡೆ ನಿರ್ಮಿಸಲ್ಪಟ್ಟ, ೨೭ ಕಿಲೋಮೀಟರುಗಳಷ್ಟು ದೊಡ್ಡದಾದ ಸುರಂಗವಾಗಿದೆ; ಎರಡೂ ದಿಕ್ಕುಗಳಿಂದ ಒಂದು ಕಣವು ಬರುತ್ತದೆ ಮತ್ತು ಹೆಚ್ಚಿನ ವೇಗದಲ್ಲಿ ಅವುಗಳು ಒಂದಕ್ಕೊಂದು ಢಿಕ್ಕಿ ಹೊಡೆಯುತ್ತವೆ. ಅದು ಹಲವಾರು ಛಾಯಾಚಿತ್ರಗಳಲ್ಲಿ ಸೆರೆಹಿಡಿಯಲ್ಪಡುತ್ತದೆ.
ವಿಶ್ಲೇಷಣೆಯು ಹಲವು ವರ್ಷ ತೆಗೆದುಕೊಳ್ಳಬಹುದು ಎಂದು ವಿಜ್ಞಾನಿಗಳು ಹೇಳುತ್ತಾರೆ; ನೂರಾರು, ಸಾವಿರಾರು ವಿಜ್ಞಾನಿಗಳು ಅದರ ಮೇಲೆ ಕೆಲಸ ಮಾಡುವರು. ಪ್ರಸ್ತುತದಲ್ಲಿ, ಸುಮಾರು ೩,೦೦೦ ವಿಜ್ಞಾನಿಗಳು, ಈ ಕಣಗಳನ್ನು ವಿಶ್ಲೇಷಣೆ ಮಾಡುತ್ತಾ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಹಾಗಾದರೆ, ದೇವಕಣವೆಂದರೇನು? ಅದರರ್ಥ, ಕಣಗಳ ತಾಯಿಯೆಂದು. ಇದೆಲ್ಲವೂ ಬಹಳ ಆಸಕ್ತಿಕರವಾಗಿದೆ. ವಿಜ್ಞಾನಿಗಳು ಏನೆಲ್ಲಾ ಹೇಳಿರುವರೋ ಅದರೊಂದಿಗೆ ನೀವು ವೈದಿಕ ಜ್ಞಾನವನ್ನು ಹೋಲಿಸಬಹುದು, ಅದು ಆಶ್ಚರ್ಯಜನಕವಾಗಿ ಒಂದೇ ರೀತಿಯಾಗಿದೆ.

ಪ್ರಶ್ನೆ: ಗುರುದೇವ, ಮಹಾ ವಿಸ್ಫೋಟದ (ಬಿಗ್ ಬ್ಯಾಂಗ್) ಒಂದು ಪ್ರಸ್ತುತ ಸಿದ್ಧಾಂತ ಹೇಳುವುದೇನೆಂದರೆ, ಅತ್ಯಂತ ಸಣ್ಣ ಬಿಂದುವೊಂದು ವಿಸ್ತರಿಸಲು ತೊಡಗಿದಾಗ ವಿಶ್ವವು ಪ್ರಾರಂಭವಾಯಿತೆಂದು. ವಿಜ್ಞಾನಕ್ಕೆ ಇನ್ನೂ ವಿವರಿಸಲು ಸಾಧ್ಯವಾಗದೇ ಇರುವ, ಈ ವಿಶ್ವದ ಗಡಿಗಳಾಚೆಗೆ ಇರುವುದೇನು? ಇದರ ಮೇಲೆ ನೀವು ಸ್ವಲ್ಪ ಪ್ರಕಾಶ ಬೀರಬಲ್ಲಿರಾ?

ಶ್ರೀ ಶ್ರೀ ರವಿ ಶಂಕರ್: ವಿಷಯಗಳು ಶುರುವಾದಾಗ, ಅದು ಪ್ರಾರಂಭವಾದಾಗ - ಇದು ರೇಖಾತ್ಮಕ ಚಿಂತನೆಯಾಗಿದೆ. ನೀನು ಯೋಗ ವಸಿಷ್ಠವನ್ನು ಓದಿದರೆ, "ಮರೀಚಿಕೆಯು ಯಾವಾಗ ಶುರುವಾಯಿತು?" ಎಂದು ನೀನು ಕೇಳುವೆ.

ಉತ್ತರವೆಂದರೆ, "ಯಾವುದೇ ಆರಂಭವಿರಲಿಲ್ಲ, ಅದು ಯಾವತ್ತೂ ಸೃಷ್ಟಿಸಲ್ಪಡಲಿಲ್ಲ, ಯಾಕೆಂದರೆ ಅದು ಅಸ್ತಿತ್ವದಲಿಲ್ಲ!"

ಒಂದು ಮರೀಚಿಕೆಗೆ ಯಾವುದೇ ಆರಂಭವಿಲ್ಲ. ನೀರು ತುಂಬಿದ ಒಂದು ಗಾಜಿನ ಪಾತ್ರೆಯಲ್ಲಿ ನೀವೊಂದು ಪೆನ್ನನ್ನು ಇರಿಸಿದಾಗ, ಪೆನ್ನು ಬಾಗಿದಂತೆ ಕಾಣಿಸುತ್ತದೆ. ಪೆನ್ನು ಯಾವಾಗ ಬಾಗಿತೆಂದು ನೀನು ಕೇಳಿದರೆ? ಇಲ್ಲ, ಅದು ಬಾಗಿದಂತೆ ಕಾಣಿಸುವುದು ಮಾತ್ರ. ಅದೇ ರೀತಿಯಲ್ಲಿ, ಈ ವಿಶ್ವಕ್ಕೆ ಯಾವುದೇ ಆದಿಯಿಲ್ಲ, ಅದೊಂದು ಟೆನ್ನಿಸ್ ಚೆಂಡಿನಂತೆ - ಇದು ಗೋಳಾತ್ಮಕ ಚಿಂತನೆಯೆಂದು ಕರೆಯಲ್ಪಡುತ್ತದೆ.

ಒಂದು ಗೋಳಕ್ಕೆ ಯಾವುದೇ ಆರಂಭವಿಲ್ಲ; ಪ್ರತಿಯೊಂದು ಬಿಂದುವೂ ಒಂದು ಆರಂಭವಾಗಿದೆ ಮತ್ತು ಪ್ರತಿಯೊಂದು ಬಿಂದುವೂ ಒಂದು ಅಂತ್ಯವಾಗಿದೆ. ಅದೇ ರೀತಿಯಲ್ಲಿ, ಪ್ರಪಂಚದಲ್ಲಿ, ಪ್ರತಿಯೊಂದೂ ಹುಟ್ಟುತ್ತದೆ ಮತ್ತು ಪ್ರತಿಯೊಂದೂ ಸಮಾಪ್ತವಾಗುತ್ತದೆ, ಪ್ರತಿದಿನವೂ.

ಪ್ರಶ್ನೆ: ಈ ಗ್ರಹದಲ್ಲಿ ಬಿಲಿಯಗಟ್ಟಲೆ ವರ್ಷಗಳ ಮೊದಲು ಮಾನವ ಜೀವನವು ಅಸ್ತಿತ್ವದಲ್ಲಿತ್ತೇ?

ಶ್ರೀ ಶ್ರೀ ರವಿ ಶಂಕರ್: ಯಾರಿಗೆ ಗೊತ್ತು? ನನಗೆ ತಿಳಿಯದು!

ನಾನು ನಿನಗೆ ಹೇಳಬಹುದಾದ ಒಂದು ವಿಷಯವೆಂದರೆ, ಪ್ರಾಚೀನ ಜನರು ಮಾಡಿರುವ ಪಂಚಾಂಗವು ಬಹಳ ಪರಿಪೂರ್ಣವಾಗಿದೆ.

ಆ ದಿನಗಳಲ್ಲಿ, ಅವರಲ್ಲಿ ದೂರದರ್ಶಕಗಳಾಗಲೀ ಅಥವಾ ಈ ಎಲ್ಲಾ ಅತ್ಯಾಧುನಿಕ ಉಪಕರಣಗಳಾಗಲೀ ಇರಲಿಲ್ಲ. ಪ್ರತಿಯೊಂದು ನಕ್ಷತ್ರದ, ಗ್ರಹಗಳ ಚಲನೆ ಮತ್ತು ಸಮಯ-ನಿರ್ಧಾರವನ್ನು ಅಳೆಯುವುದು ಅವರಿಗೆ ಹೇಗೆ ಸಾಧ್ಯವಾಯಿತು? ಪ್ರತಿಯೊಂದೂ ಅಷ್ಟೊಂದು ಕರಾರುವಕ್ಕಾಗಿದೆ. ನಿಜವಾಗಿ ಅದು ಪ್ರತಿ ನಿಮಿಷದವರೆಗೂ ಕರಾರುವಕ್ಕಾಗಿದೆ. ಅದು ವಿಸ್ಮಯಕಾರಿಯಾದುದು. ಯಾವಾಗ ಮತ್ತು ಯಾವ ಸಮಯದಲ್ಲಿ ಗ್ರಹಣವು ಪ್ರಾರಂಭವಾಗುವುದು, ಯಾವ ನಿಮಿಷದಲ್ಲಿ ಅದು ಕೊನೆಯಾಗಲಿದೆ, ಇನ್ನೊಂದು ನೂರು ವರ್ಷಗಳಲ್ಲಿ ಅದು ಪ್ರಪಂಚದ ಯಾವ ಭಾಗದಲ್ಲಿರುವುದು ಎಂಬುದನ್ನು ಅವರು ಲೆಕ್ಕ ಹಾಕಿ ನಿಮಗೆ ಹೇಳುತ್ತಿದ್ದರು. ಅಷ್ಟೊಂದು ಲೆಕ್ಕಾಚಾರ ಮಾಡಲಾಗಿದೆ.

ಖಗೋಳಶಾಸ್ತ್ರದ ನಿಖರತೆ ಮತ್ತು ಪ್ರಾಚೀನ ಜನರು ಯಾವುದರ ಮೂಲಕ ಪಂಚಾಂಗವನ್ನು ಲೆಕ್ಕ ಹಾಕಿ ಮಾಡಿದರೋ ಅದನ್ನು ನೋಡಿದರೆ ನೀವು ಬೆಚ್ಚಿಬೀಳುವಿರಿ.

ಪ್ರಶ್ನೆ: ಗುರುದೇವ, ಕಳೆದ ಕೆಲವು ವರ್ಷಗಳಲ್ಲಿ ಸುನಾಮಿಗಳು, ಭೂಕಂಪಗಳು, ಸುಂಟರಗಾಳಿಗಳು ಮತ್ತು ನೆರೆಗಳಂತಹ ಪ್ರಾಕೃತಿಕ ವಿಕೋಪಗಳು ಹೆಚ್ಚುತ್ತಿರುವಂತೆ ಕಾಣಿಸುತ್ತದೆ. ಸಾಧನೆ, ಧ್ಯಾನ ಅಥವಾ ಯಜ್ಞಗಳ ಮೂಲಕ ಈ ಸಂಭವಗಳನ್ನು ಸಂಪೂರ್ಣವಾಗಿ ನಿವಾರಿಸಲು ಯಾವುದಾದರೂ ದಾರಿಯಿರುವುದೇ?

ಶ್ರೀ ಶ್ರೀ ರವಿ ಶಂಕರ್: ಜನರು ಈ ಹಲವಾರು ಡೈನಮೈಟ್‌ಗಳನ್ನು ಭೂಮಿಯ ಅಡಿಗೆ ಹಾಕುತ್ತಿರುವಾಗ, ಬೆಟ್ಟಗಳನ್ನು ಕೊರೆಯುತ್ತಿರುವಾಗ ಮತ್ತು ಗಣಿಗಾರಿಕೆ ಮಾಡುತ್ತಿರುವಾಗ, ಭೂಮಿಯು ಪ್ರತಿಕ್ರಿಯಿಸುತ್ತದೆ. ನಾವು ಪ್ರಕೃತಿಯ ಬಗ್ಗೆ ಕಾಳಜಿ ವಹಿಸಬೇಕು. ಜನರು ಪ್ರಕೃತಿಯ ಬಗ್ಗೆ ಸಾಕಷ್ಟು ಕಾಳಜಿ ವಹಿಸುತ್ತಿಲ್ಲ. ಅಷ್ಟೊಂದು ಮರಗಳನ್ನು ಕಡಿಯುತ್ತಿರುವುದು; ಜಲ ಯೋಜನೆ ಅಭಿವೃದ್ಧಿಯ ಹೆಸರಿನಲ್ಲಿ ಅಣೆಕಟ್ಟುಗಳನ್ನು ಕಟ್ಟಬಾರದ ಜಾಗಗಳಲ್ಲಿ ಕಟ್ಟುತ್ತಿರುವುದು ಸುನಾಮಿಗಿರುವ ಕಾರಣಗಳಲ್ಲೊಂದು ಎಂದು ಹೇಳಲಾಗುತ್ತದೆ.

ಹಾಗಾಗಿ, ಇದು ಪ್ರಕೃತಿಯ ಕೋಪವಾಗಿದೆ, ಅದು ಒಂದು ವಿಷಯ.

ಎರಡನೆಯದಾಗಿ, ಕೆಲವೊಮ್ಮೆ ನಿಮಗದನ್ನು ತಡೆಯಲು ಸಾಧ್ಯವಿಲ್ಲ; ಸೃಷ್ಟಿ ಮತ್ತು ನಾಶಗಳು ಪ್ರಕೃತಿಯ ಭಾಗವಾಗಿವೆ, ಮತ್ತು ಸಮಯವು ಒಂದು ಪ್ರಧಾನ ಪಾತ್ರವನ್ನು ವಹಿಸುತ್ತದೆ. ಒಂದು ನಿರ್ದಿಷ್ಟ ಸಮಯದಲ್ಲಿ, ಪ್ರಕೃತಿಯು ಈ ಚಕ್ರಗಳಿಗೆ ಒಳಗಾಗುತ್ತದೆ.

ನಿಮಗೆ ಗೊತ್ತೇ, ನಮ್ಮ ಸೌರ ಮಂಡಲವು ಹಲವಾರು ಕಪ್ಪು ಕುಳಿ (ಬ್ಲ್ಯಾಕ್ ಹೋಲ್) ಗಳಿಂದ ಸುತ್ತುವರಿಯಲ್ಪಟ್ಟಿದೆಯೆಂದು ವಿಜ್ಞಾನಿಗಳು ಹೇಳಿರುವರೆಂದು?

ನಮ್ಮ ಸೂರ್ಯನು ಅವುಗಳ ಮೂಲಕ ಹಾದುಹೋಗುತ್ತಿದೆ, ಎಲ್ಲಾ ಕಪ್ಪು ಕುಳಿಗಳಿಂದ ತಪ್ಪಿಸಿಕೊಳ್ಳುತ್ತಾ; ಅದು ಯಾವುದೇ ಸಮಯದಲ್ಲಿ ಬೇಕಾದರೂ ಸೆಳೆಯಲ್ಪಡಬಹುದು. ಕಪ್ಪು ಕುಳಿಗಳು ಬಹಳಷ್ಟು ಹತ್ತಿರ ಬರುತ್ತವೆ ಮತ್ತು ನಂತರ ಸೂರ್ಯ ದೂರ ಸಾಗುತ್ತದೆ ಹಾಗೂ  ಕಪ್ಪು ಕುಳಿಗಳು ದೂರಕ್ಕೆ ಸಾಗುತ್ತವೆ. ಸೂರ್ಯನು ಒಳಕ್ಕೆಳೆದುಕೊಳ್ಳಲ್ಪಟ್ಟಾಗ, ಸಂಪೂರ್ಣ ಸೌರ ಮಂಡಲವು  ಶೂನ್ಯವಾಗಿ ಬಿಡುತ್ತದೆ.

ಇದೆಲ್ಲವನ್ನೂ ಸುಮ್ಮನೇ ಊಹಿಸಿಕೊಳ್ಳಿ, ಕ್ಷಣಮಾತ್ರದಲ್ಲಿ ಎಲ್ಲವೂ ಶೂನ್ಯವಾಗುವುದು ಮತ್ತು ಅದು ಯಾವುದೇ ಕ್ಷಣ ಬೇಕಾದರೂ ಆಗಬಹುದು! ನಿಮಗೆ ಭಯವಾಗುವುದಿಲ್ಲವೇ? ನೀವೆಲ್ಲರೂ ಸಂತೋಷವಾಗಿರುವಿರಿ! ಎಲ್ಲವೂ ಒಂದು ಕುಳಿಯೊಳಕ್ಕೆ ಎಳೆಯಲ್ಪಡುವುದು ಎಂಬುದನ್ನು ಕೇಳಿಸಿಕೊಂಡು ನೀವು ಸಂತೋಷವಾಗಿದ್ದೀರಿ. ಏನೂ ಉಳಿಯಲಾರದು, ಏನೂ!

ಆಗ ನೀವು ಒಂದು ನೌಕರಿ, ಒಬ್ಬ ಸಂಗಾತಿ, ಒಬ್ಬ ಆತ್ಮ ಸಂಗಾತಿಯನ್ನು ಕಂಡುಹುಡುಕುವ ಬಗ್ಗೆ ಚಿಂತಿಸಬೇಕಾಗಿಲ್ಲ; ನೀವು ಚಿಂತಿಸಬೇಕಾಗಿ ಬರುವುದಿಲ್ಲ. ನಿಜವಾಗಿ, ಎಲ್ಲರೂ ಇಡೀ ಒಂದು ಆತ್ಮ ಸಂಗಾತಿಯ ಒಳಕ್ಕೆ ವಿಲೀನವಾಗುವರು; ಎಲ್ಲವೂ ವಿಲೀನವಾಗುವುದು, ಮುಕ್ತಾಯವಾಗುವುದು.

ಪ್ರಶ್ನೆ: ಗುರುದೇವ, ನಾವು ತಂತ್ರಜ್ಞಾನದಲ್ಲಿ ಮುನ್ನುಗ್ಗುತ್ತಿರುವಂತೆ  ನಮ್ಮ ಕುಲಕ್ಕೆ ಒಂದು ಅಪಾಯವಿದೆಯೆಂದು ನನಗನ್ನಿಸುತ್ತದೆ. ಈ ಪ್ರಾಚೀನ ಜ್ಞಾನದಿಂದ ನಾವು ಸಂಪರ್ಕ ಕಡಿದುಕೊಳ್ಳುತ್ತಿದ್ದೇವೆಯೇ? ಹಾಗಿದ್ದಲ್ಲಿ, ನಾವು ಅದರ ಬಗ್ಗೆ ಏನು ಮಾಡಬಹುದು?

ಶ್ರೀ ಶ್ರೀ ರವಿ ಶಂಕರ್: ವಾಸ್ತವವಾಗಿ, ನೀವು ವಿಜ್ಞಾನಕ್ಕೆ, ಕಣ ಭೌತಶಾಸ್ತ್ರ ಅಥವಾ ಗಣಿತಕ್ಕೆ ಇನ್ನೂ ಹೆಚ್ಚು ಹತ್ತಿರ ಹೋದಷ್ಟೂ ನೀವು ಪ್ರಾಚೀನ ಜನರ ಜ್ಞಾನ, ಅಂದರೆ ವೇದಾಂತಕ್ಕೆ ಬಹಳ ಹತ್ತಿರ ಹೋಗುತ್ತೀರಿ. ನೀವು ವೇದಾಂತಕ್ಕೆ ಎಷ್ಟು ಹತ್ತಿರ ಬರುತ್ತೀರೆಂದರೆ, ನಿಮಗದನ್ನು ಅಲ್ಲಗಳೆಯಲು ಸಾಧ್ಯವೇ ಇಲ್ಲ, ಯಾಕೆಂದರೆ ಅದು ಯಥಾರ್ಥದಲ್ಲಿ ಇದನ್ನೇ ಹೇಳುತ್ತದೆ.

ಪ್ರಶ್ನೆ: ವಿಜ್ಞಾನದ ಈಗಿನ ಸಿದ್ಧಾಂತಗಳ ಪ್ರಕಾರ, ಭೂಮಿಯ ವಯಸ್ಸು ಸುಮಾರು ೪ ಬಿಲಿಯನ್ ವರ್ಷಗಳಷ್ಟು ಎಂದು ಅಂದಾಜು ಮಾಡಲಾಗಿದೆ. ಹೀಗಿದ್ದರೂ, ವೇದಗಳ ಪ್ರಕಾರ, ಭೂಮಿಯ ವಯಸ್ಸು ಬೇರೆಯಾಗಿದೆ. ಈ ವ್ಯತ್ಯಾಸವನ್ನು ನೀವು ವಿವರಿಸಬಲ್ಲಿರಾ?

ಶ್ರೀ ಶ್ರೀ ರವಿ ಶಂಕರ್: ಪಾಶ್ಚಾತ್ಯ ವಿಜ್ಞಾನದ ಪ್ರಕಾರ ಅದು ೪ ಬಿಲಿಯನ್ ವರ್ಷಗಳೇ? ಅಲ್ಲ, ವಿಜ್ಞಾನದ ಪ್ರಕಾರ ಅದು ೧೨.೮ ಬಿಲಿಯನ್ ವರ್ಷಗಳು ಮತ್ತು ವೈದಿಕ ಜ್ಞಾನದ ಪ್ರಕಾರ ಅದು ಸುಮಾರು ೧೯ ಬಿಲಿಯನ್ ವರ್ಷಗಳು.