ಶುಕ್ರವಾರ, ಮೇ 31, 2013

ಜ್ಞಾನಾಕಾಶ

ಬೆಂಗಳೂರು, ಭಾರತ
೩೧ ಮೇ ೨೦೧೩

'ಪ್ರತ್ಯಕ್ಷಾವಗಮಂ ಧರ್ಮ್ಯಂ ಸುಸುಖಂ ಕರ್ತುಮವ್ಯಯಮ್  II' (೯.೨)

ಕೃಷ್ಣ ಪರಮಾತ್ಮನು ಅರ್ಜುನನಿಗೆ ಹೇಳುತ್ತಾನೆ, ‘ಈ ಜ್ಞಾನ ಪ್ರತ್ಯಕ್ಷವಾಗಿ ಅನುಭವಿಸಬೇಕಾದಂತಹುದು. ಇದನ್ನು ನೀನು ಇಂದು ಅನುಸರಿಸಿದರೆ, ನೀನು ಇದರ ಲಾಭಗಳನ್ನು ಹಲವಾರು ವರ್ಷಗಳ ನಂತರ ಪಡೆಯುವೆ ಎಂದಲ್ಲ, ಇಲ್ಲ! ನೀನು ತಕ್ಷಣ ಈ ಜ್ಞಾನದ ಫಲಗಳನ್ನು ಪಡೆಯುವೆ. ಹೇಗೆ? ನೀನು ಇದನ್ನು ಪ್ರತ್ಯಕ್ಷವಾಗಿ ಅನುಭವಿಸುತ್ತೀಯಾ, ನೋವು ಅಥವಾ ಹಸಿವಿನ ಅನುಭವಗಳ ಹಾಗೆ’.

ನಿಮಗೆ ನಿದ್ರೆ ಬರುವ ಹಾಗೆ ಇದ್ದರೆ, ನೀನು ಯಾರನ್ನಾದರೂ ಕೇಳಬೇಕೇ,’ನನಗೆ ನಿದ್ರೆ ಬರುತ್ತಿದೆಯೇ?’ ಎಂದು. ನಿಮ್ಮ ಕಾಲಿನಲ್ಲಿ ನೋವಿದ್ದರೆ, ನೀವು ಹೋಗಿ ಆ ನೋವು ನಿಜವೇ ಅಥವಾ ಅಲ್ಲವೇ ಎಂದು ಯಾರನ್ನಾದರೂ ಕೇಳಬೇಕೆ? ಅದು ನಿಮ್ಮ ಅನುಭವದಲ್ಲೇ ಸ್ಪಷ್ಟವಾಗುತ್ತದೆ.

ಅದೇ ರೀತಿಯಲ್ಲಿ, ನೀವು ತಿಳಿಯುವುದೇನೆಂದರೆ ಈ ಜ್ಞಾನವು ಸಹ ಸ್ವತಃ-ಪ್ರಮಾಣವಾದುದು ಮತ್ತು ತಕ್ಷಣ ಅನುಭವಿಸಬಹುದಾದಂತಹುದು.

ಈಗ, ನೀವೆಲ್ಲರೂ ಸುದರ್ಶನ ಕ್ರಿಯೆ ಅಭ್ಯಾಸ, ಪ್ರಾಣಾಯಾಮ ಮತ್ತು ಧ್ಯಾನ ಮಾಡುವಿರಿ.  ನೀವು ಎಂದಿಗಾದರೂ  ಇವೆಲ್ಲ  ಲಾಭದಾಯಕವೇ ಎಂದು ಬೇರೆಯವರನ್ನು ಕೇಳಬೇಕಾಗಿದೆಯೇ?

ನೀವು ಧ್ಯಾನ ಮಾಡಿದಾಗ, ನೀವು ತಕ್ಷಣ ಅದರ ಲಾಭವನ್ನು ಅನುಭವಿಸುವಿರಿ. ನೀವು ಸುದರ್ಶನ ಕ್ರಿಯೆ ಮಾಡಿದಾಗ, ನೀವು ತಕ್ಷಣ ಅದರ ಲಾಭವನ್ನು ಅನುಭವಿಸುವಿರಿ, ಅಲ್ಲವೇ? ಅದೇ ರೀತಿ, ನಿಮಗೆ ಹಸಿವಾದಾಗ, ನೀವು ಅದನ್ನು ತಕ್ಷಣ  ಅನುಭವಿಸುವಿರಿ.

ನೀವು ಧ್ಯಾನ ಮಾಡುತ್ತಿರುವಾಗ, ನೀವು ತಕ್ಷಣ ಸಂತೋಷ ಮತ್ತು ಶಾಂತಿಯನ್ನು ಅನುಭವಿಸುವಿರಿ. ನಿಮ್ಮ ಮನಸ್ಸು ಅದೇ ಕ್ಷಣದಲ್ಲಿ ಶಾಂತಿಯುತವಾಗುವುದು.

ಆದ್ದರಿಂದ ಅದೇ ರೀತಿಯಲ್ಲಿ, ಕೃಷ್ಣ ಪರಮಾತ್ಮನು ಅರ್ಜುನನಿಗೆ ಹೇಳುತ್ತಾನೆ, ’ನೀನು ಈ ಜ್ಞಾನವನ್ನು ಪ್ರಾಯೋಗಿಕವಾಗಿ ಅನುಭವಿಸಬಹುದು. ಈ ಜ್ಞಾನವು ಸಂತೋಷವನ್ನು ಮತ್ತು ದುಃಖದಿಂದ ಮುಕ್ತಿಯನ್ನು ತರುತ್ತದೆ. ಮತ್ತು ಈ ಜ್ಞಾನವು ಖಂಡಿತವಾಗಿ ಅನುಸರಿಸುವ ಅರ್ಹತೆ ಹೊಂದಿದೆ. ಇದನ್ನು ಅರ್ಥಮಾಡಿಕೊಳ್ಳುವುದು ಹಾಗೂ ಅಭ್ಯಸಿಸುವುದು ಸುಲಭ ಮತ್ತು ಅದೇ ಸಮಯದಲ್ಲಿ ಈ ಜ್ಞಾನವು ಶಾಶ್ವತ ಮತ್ತು ಬದಲಾಗದಂತಹುದು’.

ನೀವು ಕೇವಲ ಒಮ್ಮೆ ಧ್ಯಾನ ಮಾಡಿದರೂ, ಆ ಧ್ಯಾನದ ಫಲ ಸಾರ್ವಕಾಲಿಕ ಮತ್ತು ಶಾಶ್ವತ.

ನೀವು ಯಾವುದೇ ಒಳ್ಳೆಯ ಕೆಲಸ ಮಾಡಿದಾಗ, ಅದರ ಫಲಗಳು ನಿಮ್ಮೊಂದಿಗೆ ಉಳಿಯುವುದು. ಆದ್ಧರಿಂದ ಈ ಜ್ಞಾನವು ಸಾರ್ವಕಾಲಿಕ ಮತ್ತು ಶಾಶ್ವತ.

ಒಮ್ಮೆ ಈ ಜ್ಞಾನವನ್ನು ಪಡೆದ ನಂತರ, ಇದು ನಿಮ್ಮೊಂದಿಗೆ ಎಂದೆಂದಿಗೂ ಉಳಿಯುವುದು. ಇದು, ನೀವು ಒಮ್ಮೆ ಬೈಸಿಕಲ್ ಚಾಲನೆ ಕಲಿತರೆ, ನಿಮ್ಮ ಜೀವಾವಧಿ ಬೈಸಿಕಲ್ ಚಾಲನೆ ತಿಳಿದಿರುವ ಹಾಗೆ. ನೀವು ಮತ್ತೆ ಮತ್ತೆ ಕಲಿಯುವ ಅಗತ್ಯವಿಲ್ಲ. ಅದೇ ರೀತಿಯಲ್ಲಿ, ನೀವು ಒಮ್ಮೆ ಹಲ್ವ ತಯಾರಿಸುವುದನ್ನು ಕಲಿತರೆ, ನಿಮ್ಮ ಸಂಪೂರ್ಣ ಜೀವಾವಧಿ ಅದನ್ನು ತಿಳಿದಿರುವ ಹಾಗೆ. ನೀವು ಅದನ್ನು ಪದೇ ಪದೇ ಕಲಿಯುವ ಅಗತ್ಯವಿಲ್ಲ.

ಆದ್ದರಿಂದ ಕೃಷ್ಣ ಪರಮಾತ್ಮ ಹೇಳುತ್ತಾನೆ, ‘ಈಗ ನಾನು ನಿನಗೆ ಕೊಡುವದರಲ್ಲಿರುವ ಈ ಜ್ಞಾನವು ಸನಾತನ ಮತ್ತು ಕಾಲಾತೀತವಾದುದು’.

ಅವನು ನಂತರ ಮುಂದಿನ ಶ್ಲೋಕದಲ್ಲಿ ಹೇಳುತ್ತಾನೆ,

‘ಅಶ್ರದ್ದಧಾನಾಃ ಪುರುಷಾ ಧರ್ಮಸ್ಯಾಸ್ಯ ಪರಂತಪ I
ಅಪ್ರಾಪ್ಯ ಮಾಂ ನಿವರ್ತಂತೇ ಮೃತ್ಯುಸಂಸಾರವರ್ತ್ಮನಿ II' (೯.೩)

ಅವನು ಹೀಗೆಂದು ಹೇಳುತ್ತಾನೆ, 'ನಾನು ನಿನಗೆ ಈಗ ಕಾಣಪಡಿಸುವ ಸರ್ವೋಚ್ಛ ಜ್ಞಾನದ ಮೇಲೆ ನಂಬಿಕೆ ಇಲ್ಲದವರು, ನನ್ನನು ಹೊಂದಲಾಗುವುದಿಲ್ಲ.’

ಇದರ ಅರ್ಥ ಅಂತಹ ಜನರಿಗೆ ಆತ್ಮ ಜ್ಞಾನ ಸಾಧ್ಯವಾಗುವುದಿಲ್ಲ ಎಂದು.

ಆದ್ದರಿಂದ ಅವನು ಹೇಳುತ್ತಾನೆ, ‘ಇಂತಹ ನಂಬಿಕೆ-ಇಲ್ಲದವರು ನನ್ನನ್ನು ತಲುಪಲು ಸಾಧ್ಯವಾಗುವುದಿಲ್ಲ ಮತ್ತು ಅವರು ಪದೇ ಪದೇ ಜನನ ಮತ್ತು ಮರಣದ ಚಕ್ರದಲ್ಲಿ ಸುತ್ತುತ್ತಿರುವರು’.

ನೋಡಿ, ಜ್ಞಾನದ ಮಾರ್ಗಕ್ಕೆ ಬರದ ಒಬ್ಬ ವ್ಯಕ್ತಿ ಜಗತ್ತಿನ ಗೊಂದಲಗಳಲ್ಲಿ ಸಿಕ್ಕಿಕೊಂಡಿರುತ್ತಾನೆ. ಇದು ಸತ್ಯವಲ್ಲವೆ? ಅವನು ಜೀವನದ ದೈನಂದಿನ ಹೋರಾಟಗಳಲ್ಲಿ ಅಷ್ಟು ಸಿಕ್ಕಿಕೊಂಡಿರುತ್ತಾನೆ.

ಅದೇ ದೂರುಗಳು, ಅದೇ ಸಮಸ್ಯೆಗಳು;  ಅದೇ ಕಥೆ ಪ್ರತಿದಿನ ಪುನರಾವರ್ತನೆಯಾಗುತ್ತದೆ.

ಯಾರ ಜೀವನವು ಜ್ಞಾನರಹಿತವಾಗಿದ್ದು, ಯಾವುದೇ ವೈಜ್ಞಾನಿಕ ಮೇಲ್ನೋಟ ಹೊಂದಿಲ್ಲದಿರುವುದೋ, ಅಥವಾ ಯಾವುದೇ ಹೆಚ್ಚಿನ ಉದ್ದೇಶ ಹೊಂದಿಲ್ಲದಿರುವುದೋ, ಅವನಿಗೆ ಜೀವನದಲ್ಲಿ ಏನೂ ಸಾಧಿಸಲು ಸಾಧ್ಯವಿಲ್ಲ.

ಇಂತಹ ಜನರು ಏನು ಮಾಡುವರು? ಅವರು ಜನರೊಂದಿಗೆ ರಾಗ ದ್ವೇಷಗಳಲ್ಲಿ ಸಿಕ್ಕಿಹಾಕಿಕೊಳ್ಳುವರು. ಅವರು ಪ್ರೀತಿಸಿದವರೊಂದಿಗೇ ಜಗಳವಾಡುವರು ಮತ್ತು ನಂತರ ಜಗಳವಾಡಿದವರನ್ನೇ ಪ್ರೀತಿಸುವರು. ಅವರ ಸ್ನೇಹಿತರು ಶತ್ರುಗಳಾಗುತ್ತಾರೆ  ಮತ್ತು ಶತ್ರುಗಳು ಸ್ನೇಹಿತರಾಗುತ್ತಾರೆ.

ನೀವು ಗಮನಿಸಿರಬೇಕು, ನೀವು ಏನು ತಪ್ಪು ಮಾಡದಿದ್ದರೂ ಸಹ ನಿಮ್ಮ ಸುತ್ತಲಿನ ಜನರು ನಿಮ್ಮ ಶತ್ರುಗಳಾಗುವರು ಎಂದು. ನಿಮ್ಮಲ್ಲಿ ಎಷ್ಟು ಮಂದಿಗೆ ಈ ಅನುಭವವಾಗಿದೆ?

(ಹಲವರು ತಮ್ಮ ಕೈಗಳನ್ನು ಮೇಲೆತ್ತಿದರು)

ನೋಡಿ, ಬಹುತೇಕ ಎಲ್ಲರೂ ತಮ್ಮ ಕೈಗಳನ್ನು ಮೇಲೆತ್ತಿದರು!

ಆದ್ದರಿಂದ, ಜನರು ಜೀವನದಲ್ಲಿ ಒಂದರ ನಂತರ ಇನ್ನೊಂದು ಇಂತಹ ಘಟನೆಗಳಲ್ಲಿ ಹಾದು ಹೋಗುವರು, ಮತ್ತು ಅಂತಿಮವಾಗಿ ತಮ್ಮ ಸಾವನ್ನು ಭೇಟಿಮಾಡುವರು. ಅವರು ಹುಟ್ಟು ಮತ್ತು ಸಾವಿನ ಪುನರಾವರ್ತನದಿಂದ ಬಳಲುವರು, ಮತ್ತು ಯಾವುದೇ ರೀತಿಯ ಶಾಶ್ವತವಾದ ಸಂತೋಷ ಕಾಣುವುದಕ್ಕೆ ಸಾಧ್ಯವಾಗುವುದಿಲ್ಲ. ಈ ಭೌತಿಕ ಪ್ರಪಂಚದಲ್ಲಿ ಕಾಣಬಹುದಾದಂತಹ ಯಾವುದೇ ನಿಜವಾದ ಸಂತೋಷ ಇಲ್ಲ. ನೀವು ವಿಶ್ವದಲ್ಲಿ ಸಂತೋಷವನ್ನು ಎಷ್ಟು ಹೆಚ್ಚು ಹುಡುಕಿಕೊಂಡು ಹೋಗುವಿರೋ, ನಿಮಗೆ ಅಷ್ಟೇ ಹೆಚ್ಚಿನ ದುಃಸ್ಥಿತಿ ಕಾಣುವುದು.

ಆದ್ದರಿಂದ ಈ ಜ್ಞಾನದಲ್ಲಿ ನಂಬಿಕೆ ಹೊಂದಿಲ್ಲದವನಿಗೆ ಮತ್ತು ತನ್ನ ಜೀವನದಲ್ಲಿ ಯಾವುದೇ ರೂಪದ ಭಕ್ತಿ ಇಲ್ಲದವನಿಗೆ ಇನ್ನೇನಿದೆ. ಸೃಷ್ಟಿಯಲ್ಲಿ ಎಲದಕ್ಕೂ ಜೀವ ಕೊಡುವ, ಮತ್ತು ಪ್ರೇಮದ ಕುರುಹುವಾಗಿರುವ ಮಹಾ ಶಕ್ತಿಯ ಮೇಲೆ ನಂಬಿಕೆ ಇಲ್ಲದವನಿಗೆ, ಅವನ ಜೀವನದಲ್ಲಿ ಏನು ಉಳಿದಿರುತ್ತದೆ? ಅವನ ಜೀವನ ಎಷ್ಟು ಬರಡು.

ಅಂತಹ ವ್ಯಕ್ತಿ ಯಾವಾಗಲೂ ತನ್ನ ಆಸೆಗಳ ಹಿಂದೆ ಓಡುತ್ತಿರುವನು ಮತ್ತು ಏನಾದರೂ ಒಂದು ಬಯಸುತ್ತಿರುವನು.  ಆದ್ದರಿಂದ ಅವನಿಗೆ ಏನಾದರೂ ಬೇಕಾದ್ದು ದೊರೆಯದಿದ್ದರೆ  ದುಃಖಿತನಾಗುವನು, ಮತ್ತು ಅದು ಲಭಿಸಿದ ಮೇಲೆ ಕೂಡ  ದುಃಖಿತನಾಗಿರುವನು. ಇದರ ಅರ್ಥವೇ ಮೃತ್ಯು-ಸಂಸಾರ (ವಸ್ತು ಪ್ರಪಂಚದಲ್ಲಿ ಎಲ್ಲವೂ ತಾತ್ಕಾಲಿಕವಾಗಿರುವ, ನಿರಂತರವಾಗಿ ಬದಲಾಗುತ್ತಿರುವ ಮತ್ತು ಮೃತ್ಯುವಿಗೆ ಆಹುತಿಯಾಗುವ ಅಂಶವನ್ನು ಉಲ್ಲೇಖಿಸಿ).

ಅದರಿಂದಲೇ ಕೃಷ್ಣ ಭಗವಂತ ಹೇಳುವನು, 'ಜೀವನದಲ್ಲಿ ನಂಬಿಕೆ ಮತ್ತು ಭಕ್ತಿ ಇಲ್ಲದಿರುವ ವ್ಯಕ್ತಿ ನನ್ನನ್ನು ಹೊಂದಲು ಸಾಧ್ಯವಿಲ್ಲ. ಇಂತಹ ಜನರು ಶಾಶ್ವತ ದೈವತ್ವವಾದ ನನ್ನನು ಹೊಂದಲು ವಿಫಲಗೊಳ್ಳುವರು ಮತ್ತು ಈ ಸಾವಿನ ಪ್ರಪಂಚಕ್ಕೆ (ಅರ್ಥಾತ್ ಎಂದಿಗೂ ಬದಲಾವಣೆಯಾಗುವ ವಸ್ತು ಪ್ರಪಂಚ) ಮತ್ತೆಮತ್ತೆ ಹಿಂದಿರುಗುವರು'

ಮುಂದಿನ ಎರಡು ಶ್ಲೋಕಗಳಲ್ಲಿ, ಅವನು ಹೇಳುತ್ತಾನೆ,

‘ಮಯಾ ತತಮಿದಂ ಸರ್ವಂ ಜಗದವ್ಯಕ್ತಮೂರ್ತಿನಾ I
ಮತ್‌ಸ್ಥಾನಿ ಸರ್ವಭೂತಾನಿ ನ ಚಾಹಂ ತೇಷ್ವವಸ್ಥಿತಃ II' (೯.೪)

'ನ ಚ ಮತ್‌ಸ್ಥಾನಿ ಭೂತಾನಿ ಪಶ್ಯ ಮೇ ಯೋಗಮೈಶ್ವರಮ್ I
ಭೂತಭೃನ್ನ ಚ ಭೂತಸ್ಥೋ ಮಮಾತ್ಮಾ ಭೂತಭಾವನಃ II' (೯.೫)

ಕೃಷ್ಣ ಭಗವಂತ ಹೇಳುವನು. ‘ಓ ಅರ್ಜುನ, ಈ ಇಡೀ ಸೃಷ್ಟಿ ನನ್ನ ಅಭಿವ್ಯಕ್ತಿಯಾಗಿದೆ. ಆದರೂ ನಾನು ಅವ್ಯಕ್ತ ಮತ್ತು ನಿರಾಕಾರ. ಈ ಸಂಪೂರ್ಣ ಸೃಷ್ಟಿ (ರೂಪ ಒಳಗೊಂಡಿರುವ) ನನ್ನಿಂದ ಬಂದಿರುವುದು (ಆ ಸೂಕ್ಷ್ಮ ನಿರಾಕಾರದ ದೈವತ್ವ). ಈ ಸೃಷ್ಟಿಯಲ್ಲಿ  ಕಾಣುವ ಎಲ್ಲವೂ ನನ್ನಿಂದ ಬಂದಿರುವುದು. ಎಲ್ಲಾ ಪಂಚಭೂತಗಳು (ಪ್ರಕೃತಿಯ ಐದು ಮೂಲಭೂತ ಅಂಶಗಳು) - ಭೂಮಿ, ಜಲ, ಅಗ್ನಿ, ವಾಯು ಮತ್ತು ಆಕಾಶ ನನ್ನಲ್ಲಿ ವಾಸಿಸುತ್ತವೆ ಮತ್ತು ನನ್ನಿಂದ ಸೃಷ್ಟಿಯಾಗಿವೆ. ಆದರೂ ನಾನು ಅವುಗಳಲ್ಲಿ ಇಲ್ಲ.

ಇದು ‘ಈ ಬಟ್ಟೆ ನನಗೆ ಸೇರಿದ್ದು ಆದರೂ ನಾನು ಬಟ್ಟೆ ಅಲ್ಲ’ ಎಂಬ ನಿಮ್ಮ ಹೇಳಿಕೆಯನ್ನು  ಹೋಲುತ್ತದೆ. ನೋಡಿ, ನೀವು ಬಟ್ಟೆ ಒಳಗೆ ಇರುವಿರಿ ಮತ್ತು ಬಟ್ಟೆ ನಿಮ್ಮನ್ನು ಆವರಿಸುತ್ತದೆ, ಆದರೂ ನೀವು ಧರಿಸಿದ ಬಟ್ಟೆ ಅಲ್ಲ.

ಇದೇ ರೀತಿಯಲ್ಲಿ, ಕೃಷ್ಣ ಪರಮಾತ್ಮ ಹೇಳುತ್ತಾನೆ, ‘ಈ ಐದು ಅಂಶಗಳು ನನ್ನಿಂದ ಜನಿಸಿವೆ ಮತ್ತು ನನ್ನಲ್ಲಿ ವಾಸಿಸುತ್ತವೆ, ಆದರೂ ನಾನು ಅವುಗಳಲ್ಲಿ ಇಲ್ಲ. 

ಇದು ’ಪ್ರಕೃತಿಯ ಐದು ಅಂಶಗಳು ಪರಮಾತ್ಮನಿಂದಲೇ ಬಂದಿರುವುದು, ಆದರೂ ಪರಮಾತ್ಮನು ದಿವ್ಯ ಪ್ರಜ್ಞೆಯಾಗಿದ್ಧು ಪ್ರಕೃತಿಯ ಐದು ಅಂಶಗಳಿಗೆ ಅಥವಾ ಅಂಶಗಳಿಂದ ಸೀಮಿತವಾಗಿಲ್ಲ’ ಎಂದು ಸೂಚಿಸುತ್ತದೆ.

ಇದನ್ನೇ ಕೃಷ್ಣ ಪರಮಾತ್ಮ ಇಲ್ಲಿ ಹೇಳುತ್ತಾನೆ ಮತ್ತು ಇದು ಒಂದು ದೊಡ್ಡ ರಹಸ್ಯ.

ಅವನು ಇಲ್ಲಿ ಏನು ಹೇಳುತ್ತಾನೆ ಎಂದರೆ, 'ನಾನು ನೀವು ನೋಡಲಾರದ ನಿರಾಕಾರದ ಅಂಶ ಮತ್ತು ನಿಮ್ಮ ನೋಟದಲ್ಲಿ ಕಾಣುವ ಎಲ್ಲವನ್ನು ಮೀರಿರುವೆನು’.

ಉದಾಹರಣೆಗೆ, ಒಂದು ಮರವಿದೆ ಮತ್ತು ಅಮೃತವು ಮರದ ಕಾಂಡದ ಒಳಗೆ ಇದ್ದರೆ, ನೀವು ಮರವನ್ನು ಮಾತ್ರ ನೋಡಬಹುದು ಅಮೃತವನ್ನಲ್ಲ.

ಅದರಿಂದ ಇಲ್ಲಿ, ಕೃಷ್ಣ ಪರಮಾತ್ಮ ಹೇಳುತ್ತಾನೆ, 'ಈ ಸೃಷ್ಟಿಯಲ್ಲಿ ವೈವಿಧ್ಯತೆ ಉಗಮಿಸುವ (ದೈವಿಕ) ಅಮೃತ ನಾನು. ಎಲ್ಲಾ ಮರಗಳು, ಎಲೆಗಳು ಮತ್ತು ಅವುಗಳಲ್ಲಿ  ಇರುವ ಹಣ್ಣುಗಳ ಹಿಂದಿನ ಕಾರಣ ನಾನೇ.  ಅದೇ ರೀತಿಯಲ್ಲಿ, ನೀವು ವ್ಯಕ್ತಿಯ ದೇಹ ನೋಡಬಹುದೇ ಹೊರತು  ಆತನ ಆತ್ಮವನ್ನಲ್ಲ. ಆತ್ಮವು ನಿರಾಕಾರ ಮತ್ತು ಆ ಆತ್ಮವು ನಾನೇ ಆಗಿರುವೆನು'.

ಜೀವಶಕ್ತಿ ನಮ್ಮೊಳಗಿನ ಪ್ರತಿ ಕಣದಲ್ಲೂ ಇರುತ್ತದೆ. ಜೀವಶಕ್ತಿ ವ್ಯಕ್ತಿಯ ದೇಹ ಬಿಟ್ಟ ಕ್ಷಣದಲ್ಲಿ,  ಅವನು ಸತ್ತ ಎಂದು ಘೋಷಿಸಲಾಗುತ್ತದೆ.

ಉದಾಹರಣೆಗೆ, ನಿಮ್ಮ ಚರ್ಮದ ಒಂದು ಸಣ್ಣ ಭಾಗ ಸುಟ್ಟಾಗ, ಆದು ನಿಧಾನವಾಗಿ ಸಾಯುತ್ತದೆ ಮತ್ತು ಎಲ್ಲಾ ಸಂವೇದನೆ ಇಲ್ಲದಾಗುತ್ತದೆ. ಆ ಸುಟ್ಟ ಭಾಗದಲ್ಲಿ ನಿಮಗೆ ಸ್ಪರ್ಶಜ್ಞಾನ ಇರುವುದಿಲ್ಲ ಏಕೆಂದರೆ ಅದರಲ್ಲಿ ಜೀವಶಕ್ತಿ ಇಲ್ಲದಿರುವುದಿಂದ.
ಈ ಸೃಷ್ಟಿಯಲ್ಲಿ ಜೀವನ ಇರುವುದು ಪ್ರಜ್ಞೆಯಿಂದ. ಆದ್ದರಿಂದ ಕೃಷ್ಣ ಪರಮಾತ್ಮ ಹೇಳುವನು, ‘ನಾನು ಈ ಇಡೀ ಸೃಷ್ಟಿಯಲ್ಲಿ ಎಲ್ಲ ಜೀವಗಳನ್ನು  ಸಮರ್ಥಿಸುವ ಜೀವಾಧಾರಕ ಪ್ರಜ್ಞೆಯಾಗಿ ಅಭಿವ್ಯಕ್ತವಾಗಿರುವೆನು. ಇದು ನೀವು ತಿಳಿಯಲೇಬೇಕಾಗಿರುವ ಒಂದು ದೊಡ್ಡ ರಹಸ್ಯ’.

ಮಂಗಳವಾರ, ಮೇ 28, 2013

ಮನೋವಿಕಾಸದ ಮೂರು ಹಂತಗಳು

ಬೆಂಗಳೂರು, ಭಾರತ
೨೮ ಮೇ ೨೦೧೩

ನಸ್ಸಿನ ವಿಕಾಸದಲ್ಲಿ ಮೂರು ಹಂತಗಳಿವೆ.

ಮೊದಲನೆಯ ಹಂತವೆಂದರೆ, ಮಾಯೆಯಲ್ಲಿರುವುದು ಮತ್ತು ಅದನ್ನು ತಿಳಿಯದಿರುವುದು. ಅದರರ್ಥವೇನೆಂದರೆ, ಒಬ್ಬನು ಮಾಯೆಯಲ್ಲಿ ಎಷ್ಟರ ಮಟ್ಟಿಗೆ ಸಿಕ್ಕಿಹಾಕಿರುತ್ತಾನೆಂದರೆ, ಅವನಿಗೆ ಅದರ ಬಗ್ಗೆ ಅರಿವೂ ಇರುವುದಿಲ್ಲ.

ಉದಾಹರಣೆಗೆ, ಒಬ್ಬನಿಗೆ ತನ್ನ ಮನಸ್ಸಿನಲ್ಲಿ ಒಂದು ನಿರ್ದಿಷ್ಟ ಭ್ರಮೆಯಿರುತ್ತದೆ ಮತ್ತು ಅದೊಂದು ಭ್ರಮೆಯೆಂಬುದು ಸಹ ಅವನಿಗೆ ತಿಳಿದಿರುವುದಿಲ್ಲ. ಅದು ನಿಜವೆಂಬುದಾಗಿ ಅವನು ಯೋಚಿಸುತ್ತಾನೆ. ಇದು ಮೊದಲನೆಯ ಹಂತ.

ಎರಡನೆಯ ಹಂತವೆಂದರೆ, ಒಬ್ಬನು ಭ್ರಮೆಯಲ್ಲಿ ಸಿಲುಕಿರುತ್ತಾನೆ ಮತ್ತು ಅದು ಭ್ರಮೆಯೆಂಬುದು ಅವನಿಗೆ ತಿಳಿದಿರುತ್ತದೆ.
ಈ ಹಂತದಲ್ಲಿ, ಮಾಯೆಯು ತನ್ನನ್ನು ಸಂಪೂರ್ಣವಾಗಿ ಆವರಿಸಿದೆಯೆಂಬುದು ಮತ್ತು ಅದರಿಂದಾಗಿ ತಾನು ತೊಂದರೆಗೀಡಾಗಿರುವೆನೆಂಬುದು ಆ ವ್ಯಕ್ತಿಗೆ ತಿಳಿದಿರುತ್ತದೆ.

ಮೂರನೆಯ ಹಂತವೆಂದರೆ, ಯಾವುದರಲ್ಲಿ ಒಬ್ಬನು ಮಾಯೆಯಿಂದ ಸಂಪೂರ್ಣವಾಗಿ ಮುಕ್ತನಾಗುವನೋ ಮತ್ತು ಅದರಿಂದ ಅಪ್ರಭಾವಿತನಾಗಿ ಉಳಿಯುವನೋ ಅದು. ಮೂರನೆಯ ಹಂತದಲ್ಲಿ, ಮಾಯೆಯು ತನಗೆ ಏನನ್ನೂ ಮಾಡಲು ಸಾಧ್ಯವಿಲ್ಲವೆಂಬುದು ಆ ವ್ಯಕ್ತಿಗೆ ತಿಳಿದಿರುತ್ತದೆ.

ಹೀಗೆ ಇವುಗಳು ಮೂರು ಹಂತಗಳಾಗಿವೆ. ಮೊದಲನೆಯದೆಂದರೆ, ಯಾವುದರಲ್ಲಿ ಒಬ್ಬ ವ್ಯಕ್ತಿಯು ತನ್ನದೇ ಆದ ಮನಸ್ಸಿನಿಂದಾಗಿ ದುಃಖಿತನಾಗಿರುವನೋ ಅದು. ಅಂತಹ ಒಬ್ಬ ವ್ಯಕ್ತಿಯು ಮೌನವಾಗಿ ಕುಳಿತರೂ ಕೂಡಾ, ಆಗಲೂ ಎಲ್ಲಾ ರೀತಿಯ ಯೋಚನೆಗಳು ಅವನ ಮನಸ್ಸಿಗೆ ಬರುತ್ತವೆ; ಉದಾಹರಣೆಗೆ, "ಇದು ಒಳ್ಳೆಯದು, ಅದು ಒಳ್ಳೆಯದಲ್ಲ; ನಾನು ಇದನ್ನು ಮತ್ತು ಅದನ್ನು ಮಾಡಬೇಕು; ಇಂತಿಂತಹ ವ್ಯಕ್ತಿಯು ಹೀಗೆ, ಹಾಗೆ; ನನಗೇನು ಆಗುವುದು ಅಥವಾ ಏನಾಗದೇ ಇರಬಹುದು", ಮುಂತಾಗಿ.

ಇಂತಹ ಯೋಚನೆಗಳು ವ್ಯಕ್ತಿಯ ಮನಸ್ಸಿಗೆ ಎಲ್ಲೆಡೆಗಳಿಂದಲೂ ಬರುತ್ತಿರುತ್ತವೆ. ಅವನಿಗೆ ಒಂದು ಕ್ಷಣವೂ ಶಾಂತಿ ಸಿಗುವುದಿಲ್ಲ. ಮನಸ್ಸು ಈ ಯೋಚನೆಗಳೊಂದಿಗೆ ಎಷ್ಟು ವ್ಯಸ್ತವಾಗಿಬಿಡುವುದೆಂದರೆ, ಅದು ಭ್ರಮೆಗೆ ಬೀಳುತ್ತದೆ ಮತ್ತು ತಾನು ಭ್ರಮೆಯಲ್ಲಿ ಸಿಕ್ಕಿಹಾಕಿಕೊಂಡಿರುವುದನ್ನು ಗುರುತಿಸಲು ಕೂಡಾ ಅದಕ್ಕೆ ಸಾಧ್ಯವಾಗುವುದಿಲ್ಲ. ಇದು ಮೊದಲನೆಯ ಹಂತ.

ಸರಿ, ಒಂದು ಕ್ಷಣಕ್ಕೆ ನಾವು ನಮ್ಮನ್ನು ಬದಿಗಿರಿಸೋಣ. ಒಬ್ಬರಲ್ಲ ಒಬ್ಬರು ಭ್ರಮೆಯಲ್ಲಿ ಸಿಲುಕಿರುವುದನ್ನು ನಾವೆಲ್ಲರೂ ನೋಡಿರುವೆವು, ಅಲ್ಲವೇ? ಒಬ್ಬರು ಭ್ರಮೆಯಲ್ಲಿ ಸಿಲುಕಿರುವುದನ್ನು ನೋಡಿ ನಿಮ್ಮಲ್ಲೇ ನೀವು ಯೋಚಿಸುತ್ತೀರಿ, "ಓ, ಅವನೊಂದು ಭ್ರಮೆಯಲ್ಲಿ ಎಷ್ಟರಮಟ್ಟಿಗೆ ಸಿಲುಕಿದ್ದಾನೆಂದರೆ ಅವನಿಗೆ ಸತ್ಯವನ್ನು ಕಾಣಲು ಸಾಧ್ಯವಾಗುತ್ತಿಲ್ಲ."
ಇಲ್ಲಿ ನಿಮ್ಮಲ್ಲಿ ಎಷ್ಟು ಮಂದಿ ಇದನ್ನು ನೋಡಿರುವಿರಿ? ನಿಮ್ಮ ಕೈಗಳನ್ನೆತ್ತಿ.

(ಹಲವರು ತಮ್ಮ ಕೈಗಳನ್ನೆತ್ತುತ್ತಾರೆ)

ಸಂಪೂರ್ಣ ಜಗತ್ತು ತಮ್ಮ ವಿರುದ್ಧವಾಗಿದೆಯೆಂಬ ಈ ತಪ್ಪುಕಲ್ಪನೆಯನ್ನು ಹೊಂದಿದ ಕೆಲವು ಜನರಿದ್ದಾರೆ. ಮೊದಲನೆಯದಾಗಿ, ಸಂಪೂರ್ಣ ಜಗತ್ತು ಈ ವ್ಯಕ್ತಿಯನ್ನು ತಿಳಿದೂ ಸಹ ಇಲ್ಲ ಮತ್ತು ಈ ವ್ಯಕ್ತಿಯ ಬಗ್ಗೆ ಯೋಚಿಸಲು ಕೂಡಾ ಯಾರ ಬಳಿಯೂ ಸಮಯವಿಲ್ಲ, ಆದರೂ ಸಂಪೂರ್ಣ ಜಗತ್ತು ತನ್ನ ವಿರುದ್ಧವಾಗಿದೆಯೆಂದು ಆ ವ್ಯಕ್ತಿಗೆ ಅನ್ನಿಸುತ್ತದೆ. ಪ್ರತಿಯೊಬ್ಬರೂ ತನ್ನ ಶತ್ರುವೆಂದೂ ಮತ್ತು ತನ್ನ ಜೀವದ ಹಿಂದೆ ಬಿದ್ದಿರುವರೆಂದೂ ಅವನು ಯೋಚಿಸುತ್ತಾನೆ. ಅಂತಹ ಒಂದು ಭ್ರಮೆಯೂ ಕೂಡಾ ಮಾಯೆಯ ಕಾರಣದಿಂದಾಗಿದೆ. ಕೆಲವೊಮ್ಮೆ ಇದರ ವಿರುದ್ಧವೂ ಸಂಭವಿಸುತ್ತದೆ. ಪ್ರತಿಯೊಬ್ಬರೂ ಸದಾ ಕಾಲವೂ ತನ್ನನ್ನೇ ನೋಡುತ್ತಿದ್ದಾರೆಂದು ಒಬ್ಬ ವ್ಯಕ್ತಿಗೆ ಅನ್ನಿಸುತ್ತದೆ. ಅವನು ಹೀಗೆಂದು ಯೋಚಿಸುತ್ತಾನೆ, "ಓ, ಎಲ್ಲರೂ ನನ್ನನ್ನು ಮಾತ್ರ ಹೊಗಳುತ್ತಿದ್ದಾರೆ."

ಅಂತಹ ಜನರು ತಮ್ಮ ಜೀವಮಾನವಿಡೀ ಅಂತಹ ಭ್ರಮೆಗಳಲ್ಲಿ ಜೀವಿಸುತ್ತಾರೆ ಮತ್ತು ಅವರು ಅದರೊಂದಿಗೆಯೇ ಸಾಯುತ್ತಾರೆ ಕೂಡಾ.

ಹೆಚ್ಚಾಗಿ ಜನರಿಗೆ ಇನ್ನೊಬ್ಬ ವ್ಯಕ್ತಿಯ ಭ್ರಮೆಗಳನ್ನು ಬಹಳ ಚೆನ್ನಾಗಿ ಗುರುತಿಸಲು ಸಾಧ್ಯವಾಗುತ್ತದೆ, ಆದರೆ ತಮ್ಮದೇ ಆದವುಗಳನ್ನಲ್ಲ. ತಮ್ಮದೇ ಆದ ಭ್ರಮೆಗಳನ್ನು ಅವರು ನಿಜವೆಂಬುದಾಗಿ ಯೋಚಿಸುತ್ತಾರೆ. ಇನ್ನೊಬ್ಬ ವ್ಯಕ್ತಿಯು ಒಂದು ಭ್ರಮೆಯಲ್ಲಿ ಸಿಲುಕಿರುವಾಗ ನಾವದನ್ನು ಗುರುತಿಸಬಲ್ಲೆವು, ಆದರೆ ನಾವೇ ಒಂದು ಮಾಯೆಯಲ್ಲಿ ಸಿಲುಕಿರುವಾಗ, ನಾವೊಂದು ಮಾಯೆಯಲ್ಲಿ ಸಿಲುಕಿರುವೆವು ಎಂಬುದನ್ನು ಗುರುತಿಸಲು ನಮಗೆ ಸಾಧ್ಯವಾಗುವುದಿಲ್ಲ.

ನಾವು ಇತರ ಜನರ ಬಗೆಗಿನ ಯೋಚನೆಗಳಲ್ಲಿ ಬಹಳ ಮುಳುಗಿಹೋಗುತ್ತೇವೆ. ನಾವು, "ಅವನು ಹೀಗೆ" ಅಥವಾ "ಅವಳು ಹಾಗೆ; ಇದು ಸರಿ, ಅದು ತಪ್ಪು" ಮೊದಲಾಗಿ ಯೋಚಿಸುತ್ತಿರುತ್ತೇವೆ. ನಾವು ಸದಾಕಾಲವೂ ಒಂದಲ್ಲ ಒಂದನ್ನು ಯೋಚಿಸುತ್ತಿರುತ್ತೇವೆ ಮತ್ತು ಮನಸ್ಸು ಒಂದು ಕ್ಷಣವೂ ಶಾಂತವಾಗಿರುವುದಿಲ್ಲ.

ಸತ್ಸಂಗದಲ್ಲಿ ಕೂಡಾ, ಮಾಯೆಯಿಂದಾಗಿ ಮನಸ್ಸು ಯೋಚನೆಗಳ ಒಂದು ಸುಳಿಯಲ್ಲಿ ಸಿಲುಕಿಹಾಕಿರುತ್ತದೆ.  

ಇದು ಮೊದಲನೆಯ ಹಂತವಾಗಿದೆ, ಇಲ್ಲಿ ಒಬ್ಬನು ದುಃಖಿತನಾಗಿರುತ್ತಾನೆ ಮತ್ತು ಮಾಯೆಯಲ್ಲಿ ಸಿಲುಕಿರುವುದರ ಬಗ್ಗೆ ಅರಿತಿರುವುದಿಲ್ಲ.

ಎರಡನೆಯ ಹಂತದಲ್ಲಿ, ಆಗುತ್ತಿರುವುದೆಲ್ಲವೂ ಭ್ರಮೆಯಲ್ಲದೆ ಮತ್ತೇನೂ ಅಲ್ಲ ಮತ್ತು ಅದು ಮಾಯೆಯಿಂದಾಗಿ ಎಂಬುದನ್ನು ಒಬ್ಬನು ಅರಿತಿರುತ್ತಾನೆ, ಆದರೆ ಅವನಿಗೆ ಅದರಿಂದ ಹೊರಬರಲು ಸಾಧ್ಯವಾಗುವುದಿಲ್ಲ.

ಎರಡನೆಯ ಹಂತದಲ್ಲಿ, ನೀವು ಭ್ರಮೆಯಲ್ಲಿರುವಿರಿ ಎಂಬುದು ನಿಮಗೆ ತಿಳಿದಿರುತ್ತದೆ. ಈ ವ್ಯಕ್ತಿಯ ಮತ್ತು ಆ ವ್ಯಕ್ತಿಯ ಕಡೆಗೆ ನೀವು ತೆಗೆದುಕೊಂಡ ತೀರ್ಮಾನಗಳೆಲ್ಲಾ ಪೂರ್ತಿಯಾಗಿ ತಪ್ಪಾದವು ಎಂಬುದು ನಿಮಗೆ ಕಂಡುಬರುತ್ತದೆ. ಅವರು ಯಾವ ರೀತಿಯವರೆಂದು ನೀವು ಅಂದುಕೊಂಡಿದ್ದಿರೋ ಅವರು ಆ ರೀತಿಯವರಲ್ಲವೆಂಬುದು ನಿಮಗೆ ತಿಳಿಯುತ್ತದೆ.

ಇತರರ ಬಗ್ಗೆ ನೀವು ನಿಮ್ಮ ಮನಸ್ಸಿನಲ್ಲಿ ಯಾವುದೆಲ್ಲಾ ಧಾರಣೆಗಳನ್ನು ಮಾಡಿದ್ದಿರೋ, ಅವುಗಳೆಲ್ಲವೂ ತಪ್ಪೆಂಬುದು ನಿಮಗೆ ಕಂಡುಬರುತ್ತದೆ. ಹೀಗೆ, ಇದೆಲ್ಲವೂ ಭ್ರಮೆಯೆಂದು ತಿಳಿಯಲು ನಿಮಗೆ ಸಾಧ್ಯವಾಗುತ್ತದೆ. ಆದರೆ, ಅದು ಭ್ರಮೆಯೆಂಬುದನ್ನು ತಿಳಿಯುವುದರ ಹೊರತಾಗಿಯೂ, ನಿಮಗೆ ಅದರಿಂದ ಹೊರಬರಲು ಸಾಧ್ಯವಾಗುವುದಿಲ್ಲ. ಹೀಗೆ, ನೀವು ಭ್ರಮೆಯಲ್ಲಿರುತ್ತೀರಿ ಮತ್ತು ನಿಮಗೆ ಅದರ ಅರಿವಿರುತ್ತದೆ. ಈಗ ನೀವು ಇದರಿಂದ ಹೇಗೆ ಹೊರಬರಬಹುದು?

ನಾವೊಂದು ಭ್ರಮೆಯಲ್ಲಿ ಸಿಲುಕಿಹಾಕಿಕೊಂಡಾಗ ಮತ್ತು ನಮಗೆ ಅದರ ಅರಿವಿಲ್ಲದಿರುವಾಗ, ನಾವು ನಮ್ಮ ಸುತ್ತಲಿನ ಜನರಿಂದ ತೊಂದರೆಯನ್ನು ಅನುಭವಿಸುತ್ತೇವೆ. ಇದು ಮೊದಲನೆಯ ಹಂತ. ಇದೆಲ್ಲವೂ ನಮ್ಮದೇ ಮನಸ್ಸಿನ ಸೃಷ್ಟಿಯೆಂಬುದು ನಮಗೆ ತಿಳಿಯುವಾಗ, ನಾವು ನಮ್ಮ ಮೇಲೆಯೇ ಕೋಪಗೊಳ್ಳುತ್ತೇವೆ ಮತ್ತು ನಮಗೆ ನಮ್ಮದೇ ಮನಸ್ಸಿನಿಂದ ತೊಂದರೆಯಾಗುತ್ತದೆ. ಎಷ್ಟು ಮಂದಿಗೆ ಈ ಅನುಭವವಾಗಿದೆ?

ನೀವು ನಿಮ್ಮದೇ ಮನಸ್ಸಿನಿಂದಾಗಿ ದುಃಖಿತರಾಗಿರುವಿರಿ ಮತ್ತು ಇತರರಿಂದಾಗಿಯಲ್ಲ ಎಂಬುದು ನಿಮಗೆ ತಿಳಿದಿರುತ್ತದೆ. ಇದು ಎರಡನೆಯ ಹಂತ.

ಮೊದಲನೆಯ ಹಂತದಲ್ಲಿ, ಒಬ್ಬ ವ್ಯಕ್ತಿಯು ಭ್ರಮೆಯಲ್ಲಿ ಸಿಲುಕಿಬಿದ್ದಿರುತ್ತಾನೆ ಮತ್ತು ತಾನು ಸಿಲುಕಿಬಿದ್ದಿರುವೆನೆಂಬುದರ ಅರಿವು ಆತನಿಗಿರುವುದಿಲ್ಲ. ಹಾಗಾಗಿ ತನ್ನ ಪರಿಸ್ಥಿತಿಗಳಿಗಾಗಿ ತನ್ನದೇ ಮನಸ್ಸಿನ ಬದಲಾಗಿ ಅವನು ಜಗತ್ತನ್ನು ದೂಷಿಸುತ್ತಾನೆ. ಮತ್ತು ಪ್ರಪಂಚವನ್ನು ಸರಿಪಡಿಸಲು ಅವನಿಗೆ ಸಾಧ್ಯವಿಲ್ಲದಿರುವುದರಿಂದ, ಅವನು ಅಸಹಾಯಕತೆ ಮತ್ತು ಕೋಪವನ್ನು ಅನುಭವಿಸಲು ತೊಡಗುತ್ತಾನೆ ಹಾಗೂ ಇದು ಅವನಲ್ಲಿ ಹಿಂಸಾತ್ಮಕ ಪ್ರವೃತ್ತಿಗಳನ್ನು ಹೆಚ್ಚಿಸುತ್ತದೆ.

ತಮ್ಮದೇ ಮನಸ್ಸಿನಿಂದ ತಾವು ತೊಂದರೆಗೊಳಗಾಗಿರುವೆವು ಎಂಬುದನ್ನಾದರೂ ಅರಿತಿರುವವರು, ಮೊದಲನೆಯ ಹಂತದಲ್ಲಿರುವವರಿಗಿಂತ ಸ್ವಲ್ಪ ಹೆಚ್ಚು ಬುದ್ಧಿವಂತರು. ಅಂತಹ ಜನರು ತಮ್ಮ ಪರಿಸ್ಥಿತಿಗಳಿಗೆ ಅಥವಾ ತಮ್ಮ ದುಃಖಗಳಿಗೆ ಪ್ರಪಂಚವನ್ನು ದೂಷಿಸುವುದಿಲ್ಲ. ಬದಲಾಗಿ, ಅವರು ತಮ್ಮನ್ನೇ ದೂಷಿಸಿಕೊಳ್ಳಲು ತೊಡಗುತ್ತಾರೆ ಮತ್ತು ಇಲ್ಲಿಯೇ ಅವರು ಸಿಕ್ಕಿಬೀಳುವುದು. ಅವರು ತಮ್ಮನ್ನೇ ದೂಷಿಸಿಕೊಳ್ಳುತ್ತಾರೆ ಮತ್ತು ಪಾಪಪ್ರಜ್ಞೆಯ ಭಾವನೆಗಳಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ.

ಈ ಎರಡು ಹಂತಗಳಿಗಿಂತ ಮೇಲಿರುವ ಮೂರನೆಯ ಹಂತದಲ್ಲಿಯೇ ಒಬ್ಬನು ಮಾಯೆಯಿಂದ ಬಾಧಿತನಾಗದಿರುವುದು.
ಈ ಹಂತದಲ್ಲಿ, ಆಗುವುದೆಲ್ಲವೂ ಮಾಯೆಯಿಂದಾಗಿ ಅಥವಾ ಮನಸ್ಸಿನಿಂದಾಗಿ ಎಂದು ಒಬ್ಬ ವ್ಯಕ್ತಿಯು ಸಂಪೂರ್ಣವಾಗಿ ಅರಿತಿರುತ್ತಾನೆ ಮತ್ತು ಅವನು ಅದರೊಳಕ್ಕೆ ಸಿಕ್ಕಿಬೀಳುವುದಿಲ್ಲ.

ಇದು ಮನಸ್ಸಿನ ಸ್ವಭಾವ ಮತ್ತು ಭ್ರಮೆಯೆಂಬುದು ಮಾಯೆಯ ಸ್ವಭಾವವೆಂಬುದು ಅವನಿಗೆ ತಿಳಿದಿರುತ್ತದೆ. ಆದರೂ, ತಾನು ಮನಸ್ಸೂ ಅಲ್ಲ ಮತ್ತು ತಾನು ಮಾಯೆಯಲ್ಲಿ ಸಿಲುಕಿದವನೂ ಅಲ್ಲವೆಂಬುದು ಕೂಡಾ ಅವನಿಗೆ ತಿಳಿದಿರುತ್ತದೆ. ಹಾಗಾಗಿ ಅವನು ಮನಸ್ಸಿನ ಸ್ವಭಾವವನ್ನು ವಿರೋಧಿಸುವುದಿಲ್ಲ ಅಥವಾ ಅದಕ್ಕೆ ಅಡ್ದಿಯಾಗುವುದಿಲ್ಲ ಮತ್ತು ಅವನು ಮಾಯೆಯಲ್ಲಿ ಸಿಕ್ಕಿಹಾಕಿಕೊಳ್ಳುವುದೂ ಇಲ್ಲ. ಅವನು ಅವುಗಳೆರಡೂ ತಾವು ಕೆಲಸ ಮಾಡುವ ರೀತಿಯಲ್ಲಿ ಕೆಲಸ ಮಾಡಲು ಬಿಡುತ್ತಾನೆ.

ಅಂತಹ ಜ್ಞಾನಿಗಳು, ಮನಸ್ಸನ್ನು ಹಲವಾರು ಅಂಶಗಳಿಂದ ಪ್ರಭಾವಿತಗೊಳಿಸಬಹುದು ಎಂಬುದನ್ನು ಅರಿತಿರುತ್ತಾರೆ. ಇದಕ್ಕಿರುವ ಒಂದು ಒಳ್ಳೆಯ ಉದಾಹರಣೆಯೆಂದರೆ, ನೀವು ಸೇವಿಸುವ ಆಹಾರ. ’ಜೈಸಾ ಅನ್ನ್ ವೈಸಾ ಮನ್’ ಎಂಬ ಒಂದು ಮಾತಿದೆ (ಅಂದರೆ, ’ಅನ್ನದಂತೆ ಮನಸ್ಸು’ ಎಂದು. ಇಲ್ಲಿನ ಅರ್ಥವೆಂದರೆ, ನೀವು ಏನನ್ನು ತಿನ್ನುವಿರೋ ಅದು ನಿಮ್ಮ ಮನಸ್ಸು ಮತ್ತು ನಿಮ್ಮ ವರ್ತನೆಯ ಮೇಲೆ ಪ್ರಭಾವ ಬೀರುತ್ತದೆ).  

ಹೀಗೆ ಮನಸ್ಸು ನೀವು ತಿನ್ನುವ ಆಹಾರದಿಂದ, ನೀವಿರುವ ಪರಿಸರದಿಂದ ಮತ್ತು ನೀವಿರಬಹುದಾದ ನಿರ್ದಿಷ್ಟ ಕಾಲಘಟ್ಟದಿಂದ ಪ್ರಭಾವಿತವಾಗುತ್ತದೆ.

ಸಮಯವು ಕೂಡಾ ಮನಸ್ಸಿನ ಮೇಲೆ ಒಂದು ಪ್ರಭಾವವನ್ನು ಬೀರುತ್ತದೆ. ನೀವಿರುವ ಕಾಲಘಟ್ಟದ ಕಾರಣದಿಂದಾಗಿ ನಿಮ್ಮ ಮನಸ್ಸು ಭಾವನೆಗಳ ಬಿರುಗಾಳಿಗಳಲ್ಲಿ ಸಿಕ್ಕಿಹಾಕಿಕೊಂಡಿರುವ ನಿದರ್ಶನಗಳಿವೆ.

ಹೀಗೆ, ಸಮಯ, ಆಹಾರ ಮತ್ತು ಪರಿಸರ - ಇವುಗಳು ಮನಸ್ಸಿನ ಮೇಲೆ ಪ್ರಭಾವ ಬೀರುವ ಮೂರು ಅಂಶಗಳಾಗಿವೆ.
ಈ ರೀತಿಯಲ್ಲಿ, ಮಾಯೆಯು ತನ್ನ ಸ್ವಭಾವಕ್ಕನುಸಾರವಾಗಿ ಕೆಲಸ ಮಾಡುತ್ತಿದೆಯೆಂಬುದನ್ನು ಜ್ಞಾನಿಯು ತಿಳಿದಿರುತ್ತಾನೆ ಮತ್ತು ಹಾಗಾಗಿ ಅವನು ಸುಮ್ಮನೆ ವಿಶ್ರಾಮ ಮಾಡುತ್ತಾನೆ ಹಾಗೂ ಆತ್ಮನಲ್ಲಿ ವಿರಮಿಸುತ್ತಾನೆ.

ಇದು ನಿಜವಾದ ಜ್ಞಾನ. ಈ ಜ್ಞಾನದಿಂದ ಮನಸ್ಸು ಶುದ್ಧಗೊಳ್ಳುತ್ತದೆ (ಮಾಯೆಯ ಕೊಳೆಯಿಂದ) ಮತ್ತು ಮಾಯೆಯಲ್ಲಿ ಸಿಲುಕಿಕೊಂಡಿರುವುದರಿಂದ ಮುಕ್ತವಾಗುತ್ತದೆ. ಈ ಜ್ಞಾನದಿಂದ ಬುದ್ಧಿ ಕೂಡಾ ಶುದ್ಧಗೊಳ್ಳುತ್ತದೆ ಮತ್ತು ಸ್ವತಃ ತನ್ನನ್ನು ಮಾಯೆಯಿಂದ ಬೇರ್ಪಡಿಸಿಕೊಳ್ಳುತ್ತದೆ.

ಅಂತಹ ಬುದ್ಧಿಶಕ್ತಿಯ ಪರಿಶುದ್ಧತೆಯಿರುವ ಜನರು ಏನೇ ಕಾರ್ಯಗಳನ್ನು ಮಾಡಲಿ ಬಾಧಿತರಾಗದೇ ಉಳಿಯುತ್ತಾರೆ.

ವಿಶಾಲ ಸೂರ್ಯನನ್ನು ಕನ್ನಡಿಯಲ್ಲಿ ಸೆರೆ ಹಿಡಿಯಿರಿ

ಬೆಂಗಳೂರು, ಭಾರತ
೨೮ ಮೇ ೨೦೧೩

’ಯಸ್ಯ ನಾಹಂಕೃತೋ ಭಾವೋ ಬುದ್ಧಿರ್ಯಸ್ಯ ನ ಲಿಪ್ಯತೇ I
ಹತ್ವಾಪಿ ಸ ಇಮಾಂಲ್ಲೋಕಾನ್ನ ಹಂತಿ ನ ನಿಬಧ್ಯತೇ II’  (೧೮.೧೭)

ಕೃಷ್ಣ ಪರಮಾತ್ಮನು ಹೀಗೆಂದು ಹೇಳುತ್ತಾನೆ, "ಯಾರ ಬುದ್ಧಿಯು ಮಾಯೆಯ ಪ್ರಭಾವದಿಂದ ಮುಕ್ತವಾಗಿರುವುದೋ (ಅಲಿಪ್ತ ಬುದ್ಧಿ), ಅಂತಹ ಒಬ್ಬ ವ್ಯಕ್ತಿಯು ಸಂಪೂರ್ಣ ಪ್ರಪಂಚವನ್ನು ನಾಶಪಡಿಸಿದರೂ ಸಹ, ಆಗಲೂ ಅವನು ಯಾವುದೇ ಪಾಪದಿಂದ ಮುಕ್ತನಾಗಿಯೂ ಪ್ರಭಾವಿತನಾಗದೆಯೂ ಆಗಿಯೂ ಉಳಿಯುತ್ತಾನೆ. ಅಂತಹ ಒಬ್ಬ ವ್ಯಕ್ತಿಯು ತನ್ನ ಕರ್ಮಗಳಿಂದ ಬಂಧಿತನಾಗನು."

ಹೇಗಿದ್ದರೂ, ಅಂತಹ ಮಾಯೆಯೊಂದಿಗೆ ಸಂಬಂಧವಿರದ ಜಾಗೃತ ಬುದ್ಧಿಯಿರುವ ಒಬ್ಬ ವ್ಯಕ್ತಿಯು, ಜನರನ್ನು ಕೊಲ್ಲುವಂತಹ ಹಿಂಸಾತ್ಮಕ ಕಾರ್ಯಗಳಲ್ಲಿ ಮೊದಲೇ ತೊಡಗಲಾರನು. ಮತ್ತು ಅವನು ಹಾಗೆ ಮಾಡಿದರೂ ಕೂಡಾ ಅವನದನ್ನು, ರಾಗ-ದ್ವೇಷಗಳಿಂದ ಪ್ರೇರಿತನಾಗಿ ಮಾಡುವ ಹೊರತಾಗಿ ಒಬ್ಬ ಯೋಧನಾಗಿರುವ ತನ್ನ ಕರ್ತವ್ಯದ ಒಂದು ಭಾಗವಾಗಿ ಮಾಡುವನು.

ಹೀಗೆ ಇದು ಮೂರನೆಯ ಹಂತವಾಗಿದೆ. ಇದರಲ್ಲಿ ಅಲಿಪ್ತ-ಬುದ್ಧಿಯಿರುವ ಒಬ್ಬನಿಗೆ ಮಾಯೆಯನ್ನು ಗುರುತಿಸಲು ಸಾಧ್ಯವಾಗುತ್ತದೆ. ಅಂತಹ ಒಬ್ಬ ವ್ಯಕ್ತಿಯು ಮಾಯೆಯ ರೀತಿಗಳನ್ನು ವಿರೋಧಿಸಲು ಪ್ರಯತ್ನಿಸುವುದೂ ಇಲ್ಲ, ಅದರಿಂದ ತೊಂದರೆಗೊಳಗಾಗುವುದೂ ಇಲ್ಲ. ಅಂತಹ ಒಂದು ಸ್ಥಿತಿಯಲ್ಲಿ, ಅವನು ಮಾಯೆಯಿಂದ ಪ್ರಭಾವಿತನಾಗದೇ ಉಳಿಯುತ್ತಾನೆ ಮತ್ತು ಅದರಿಂದ ಮುಕ್ತನಾಗಿರುತ್ತಾನೆ.

ನಾನು ಹೇಳುತ್ತಿರುವುದು ನಿಮಗೆ ಅರ್ಥವಾಗುತ್ತಿದೆಯೇ?

ವಾಸ್ತವವಾಗಿ, ಈ ಹಂತದಲ್ಲಿ ಒಬ್ಬನು ಮಾಯೆಯ ರೀತಿಗಳಿಗೆ ಸಾಕ್ಷಿಯಾಗುವುದನ್ನು ಆನಂದಿಸುತ್ತಾನೆ ಮತ್ತು ಅದರಿಂದ ಮನರಂಜನೆಯನ್ನು ಪಡೆಯುತ್ತಾನೆ. ಅದು ಮನರಂಜನೆಯ ಒಂದು ಮೂಲವಾಗುತ್ತದೆ.

ಯಾವುದರಿಂದಾಗಿ ನಾವು ಮೋಹಗಳಲ್ಲಿ ಮತ್ತು ಭ್ರಮೆಯಲ್ಲಿ ಸಿಕ್ಕಿಹಾಕಿಕೊಳ್ಳುವೆವೋ, ಅದೇ ಮಾಯೆಯು, ನಾವು ವಿಕಾಸದ ಮೂರನೆಯ ಹಂತದಲ್ಲಿ ಅರಳುವಾಗ ಮನರಂಜನೆಯ ಒಂದು ಮೂಲವಾಗುತ್ತದೆ. ಆಗ ಮಾಯೆಯು ನಮಗೆ ಮೋಜು ಮತ್ತು ವಿನೋದದ ಒಂದು ಮೂಲವಾಗುತ್ತದೆ.

ಹೀಗೆ, ಮಾಯೆಯು ಬಂಧನ ಮತ್ತು ಭ್ರಮೆಗಳನ್ನು ಸೃಷ್ಟಿಸುತ್ತದೆ ಮತ್ತು ಅದೇ ಸಮಯದಲ್ಲಿ ಮಾಯೆಯು ನಮಗೆ ಆನಂದವನ್ನು ಹಾಗೂ ಸಂತೋಷವನ್ನು ಕೂಡಾ ಕೊಡುತ್ತದೆ!

ಇದಕ್ಕಾಗಿಯೇ ಕೃಷ್ಣ ಪರಮಾತ್ಮನು ಹೀಗೆಂದು ಹೇಳಿರುವುದು:

"ದೈವೀ ಹ್ಯೇಷಾ ಗುಣಮಯೀ ಮಮ ಮಾಯಾ ದುರತ್ಯಯಾ I
ಮಾಮೇವ ಯೆ ಪ್ರಪದ್ಯಂತೇ ಮಾಯಾಮೇತಾಂ ತರಂತಿ ತೇ II"  (೭.೧೪)

ಅವನು ಹೀಗೆಂದು ಹೇಳುತ್ತಾನೆ,"ಓ ಅರ್ಜುನ!ಯೋಗ ಮಾಯೆಯು ದೈವೀ ಗುಣಗಳಿಂದ ತುಂಬಿದೆ ಮತ್ತು ಒಬ್ಬನಿಗೆ ಅದನ್ನು ಅಷ್ಟೊಂದು ಸುಲಭವಾಗಿ ಜಯಿಸಲು ಸಾಧ್ಯವಿಲ್ಲ. ಅದನ್ನು ಜಯಿಸುವುದು ಬಹಳ ಕಷ್ಟವಾಗಿದೆ. ನನ್ನಲ್ಲಿ ಆಶ್ರಯವನ್ನು ಪಡೆಯುವುದರಿಂದ ಮತ್ತು ನನಗೆ ಸಂಪೂರ್ಣವಾಗಿ ಶರಣಾಗತನಾಗುವುದರಿಂದ ಮಾತ್ರ ನಿನಗದನ್ನು ಜಯಿಸಲು ಸಾಧ್ಯ."

ಈ ಸಂಪೂರ್ಣ ಸೃಷ್ಟಿಯು ಮಾಯೆಯಿಂದ ಮರೆಯಾಗಿದೆ. ಎಲ್ಲೆಡೆಯೂ ವಾಯುವಿರುವಂತೆಯೇ, ಸಂಪೂರ್ಣ ಪ್ರಪಂಚವು ಮಾಯೆಯಿಂದ ಆವೃತವಾಗಿದೆ. ಪ್ರತಿಯೊಬ್ಬ ವ್ಯಕ್ತಿಯ ಮನಸ್ಸು ಮಾಯೆಯಿಂದ ಆವರಿಸಲ್ಪಟ್ಟಿದೆ. ಪ್ರತಿಯೊಬ್ಬರೂ ಮಾಯೆಯಲ್ಲಿ ಆಳವಾಗಿ ಸಿಕ್ಕಿಹಾಕಿಕೊಂಡಿರುವರು. ಪ್ರತಿಯೊಬ್ಬರ ಮನಸ್ಸೂ ಮಾಯೆಯ ಒಂದಲ್ಲ ಒಂದು ಪ್ರಭಾವದಡಿಯಲ್ಲಿದೆ.

ಇಲ್ಲಿ ಕುಳಿತಿರುವ ನಿಮ್ಮೆಲ್ಲರ ಮನಸ್ಸಿನಲ್ಲೂ ಹಲವಾರು ವಿವಿಧ ಯೋಚನೆಗಳಿವೆ. ನಿಮ್ಮಲ್ಲಿ ಪ್ರತಿಯೊಬ್ಬರ ಮನಸ್ಸಿನಲ್ಲೂ ಏನೆಲ್ಲಾ ನಡೆಯುತ್ತಿದೆಯೆಂಬುದನ್ನು ಸುಮ್ಮನೆ ಗಮನಿಸಿ! ಓ ದೇವರೇ! (ನಗು) ಮಾಯೆಯೆಂದರೆ ಇದುವೇ.

ಹೀಗೆ ಈ ಸಂಪೂರ್ಣ ಸೃಷ್ಟಿಯು ಮಾಯೆಯಿಂದ ಆವರಿಸಲ್ಪಟ್ಟಿದೆ.

ಆದರೆ ಒಬ್ಬ ಪ್ರಾಮಾಣಿಕ ಭಕ್ತನಿಗೆ ಯಾವತ್ತೂ, "ಓ ಶಿವ ಪರಮಾತ್ಮನೇ, ನನ್ನ ಮನಸ್ಸು ನಿರಂತರವಾಗಿ ನಿನ್ನ ಭಕ್ತಿಯಲ್ಲಿ ನಿರತವಾಗಿದೆ ಮತ್ತು ಯಾವಾಗಲೂ ನಿನ್ನ ಯೋಚನೆಗಳಲ್ಲಿ ಮುಳುಗಿದೆ. ನನ್ನ ಮನಸ್ಸು ನಿನ್ನನ್ನು ಅಷ್ಟೊಂದು ಪೂರ್ತಿಯಾಗಿ ಆವರಿಸಿದೆ. ಹಗಲೂ ಇರುಳೂ ನನಗೆ ನೆನಪಿರುವುದೆಲ್ಲಾ ನೀನು ಮತ್ತು ನೀನು ಮಾತ್ರ" ಎಂದು ಅನ್ನಿಸುತ್ತದೆ.

ಈಗ ಹೀಗಾಗಲು ಹೇಗೆ ಸಾಧ್ಯ? ನಮ್ಮ ಸೀಮಿತ ಮನಸ್ಸು, ಅಗಾಧವಾದ ಹಾಗೂ ಸರ್ವವ್ಯಾಪಿಯಾದ ದೈವತ್ವವನ್ನು ಅವರಿಸಲು ಮತ್ತು ಹಿಡಿದಿಟ್ಟುಕೊಳ್ಳಲು ಹೇಗೆ ಸಾಧ್ಯ?

ನಮ್ಮ ಸೀಮಿತ ಮನಸ್ಸಿನೊಳಗೆ ದೇವರನ್ನು ಹಿಡಿದಿಡಲು ಹೇಗೆ ಸಾಧ್ಯ? ಇದು ಸಾಧ್ಯವೇ? ಹೌದು, ಒಂದು ದೊಡ್ಡ ಆನೆಯನ್ನು ಒಂದು ಚಿಕ್ಕ ಕನ್ನಡಿಯಲ್ಲಿ ಸೆರೆಹಿಡಿಯಲು ಸಾಧ್ಯವಿರುವ ರೀತಿಯಲ್ಲೇ ಇದೂ ಸಾಧ್ಯವಿದೆ.

ಇಡೀ ಸೂರ್ಯನನ್ನು ಒಂದು ಕನ್ನಡಿಯಲ್ಲಿ ಸೆರೆಹಿಡಿಯಲು ನಿಮಗೆ ಸಾಧ್ಯವಿಲ್ಲವೇ? ಸೂರ್ಯ ಬಹಳ ಬೃಹತ್ತಾದುದು, ಆದರೂ ನಿಮಗದನ್ನು ಒಂದು ಚಿಕ್ಕ ಕನ್ನಡಿಯಲ್ಲಿ ಅಷ್ಟೊಂದು ಸಮರ್ಪಕವಾಗಿ ಸೆರೆಹಿಡಿಯಲು ಸಾಧ್ಯವಾಗುತ್ತದೆ, ಅಲ್ಲವೇ? ಅದೇ ರೀತಿಯಲ್ಲಿ, ದೈವತ್ವವನ್ನು ಸಂಪೂರ್ಣವಾಗಿ ಸೆರೆಹಿಡಿಯಲು ನಮ್ಮ ಮನಸ್ಸು ಸಮರ್ಥವಾಗಿದೆ. ನಿಮ್ಮಲ್ಲೊಂದು ಶುದ್ಧವಾದ ಹೃದಯವಿದ್ದರೆ, ಆಗ ನೀವೇ ದೇವರು ಎಂದು ಹೇಳಲಾಗಿರುವುದು ಇದಕ್ಕಾಗಿಯೇ! ನೀವೇ ಬ್ರಹ್ಮ. ಆದರೆ ಅದು ಸಾಧ್ಯವಾಗುವುದು ಯಾವಾಗ? ನಿಮ್ಮ ಹೃದಯದ ಕನ್ನಡಿಯು ಸ್ವಚ್ಛವಾಗಿಯೂ ಶುದ್ಧವಾಗಿಯೂ ಇರುವಾಗ, ನೀವು ನಿಮ್ಮಲ್ಲಿಯೇ ದೈವಿಕತೆಯನ್ನು ಗಮನಿಸಬಹುದು. ಕನ್ನಡಿಯು ಮಾಯೆಯಿಂದ ಆವೃತವಾಗಿದ್ದರೆ ಅಥವಾ ಕೊಳೆಯಾಗಿದ್ದರೆ, ಆಗ ಅದು ಕೆಲಸ ಮಾಡದು.

ಒಬ್ಬ ಸಂತನೆಂದರೆ, ಯಾರ ಮನಸ್ಸು ಮತ್ತು ಹೃದಯಗಳು ಒಂದು ಕನ್ನಡಿಯಂತೆ ಶುದ್ಧವಾಗಿರುವುದೋ (ಎಲ್ಲಾ ನಕಾರಾತ್ಮಕತೆಗಳಿಂದ ಮುಕ್ತವಾಗಿ), ಅವನು. ಒಬ್ಬರು ಗುರುವೆಂದರೆ, ಯಾರು ಒಂದು ಸ್ಪಷ್ಟ ಕನ್ನಡಿಯಂತೆ ಶುದ್ಧವೂ ಪಾರದರ್ಶಕವೂ ಆಗಿರುವರೋ ಅವರು.

ಹೀಗೆ ನಿಮ್ಮ ಮನಸ್ಸು ಸ್ವಚ್ಛವೂ ಶುದ್ಧವೂ ಆಗಿರಬೇಕು, ಆಗ ನಿಮ್ಮಲ್ಲಿ ಪೂರ್ಣತೆಯು (ಪ್ರಜ್ಞೆಯ) ಅರಳುತ್ತದೆ. ನಂತರ ನೀವು ಸೂರ್ಯ ಮತ್ತು ಚಂದ್ರರನ್ನು ಕನ್ನಡಿಯಲ್ಲಿ ಸೆರೆಹಿಡಿಯಬಹುದು.

ಆದುದರಿಂದ, ಒಂದು ಕನ್ನಡಿಯು ಹೇಗೆ ಒಂದು ದೊಡ್ಡ ಆನೆಯನ್ನು ಸಂಪೂರ್ಣವಾಗಿ ಸೆರೆಹಿಡಿಯಬಲ್ಲದೋ, ಹಾಗೆಯೇ ನಿಮ್ಮ ಮನಸ್ಸು ಕೂಡಾ ದೈವಿಕತೆಯನ್ನು ಹಿಡಿಯಬಲ್ಲದು. ಆದರೆ ಮನಸ್ಸು ಮಾಯೆಯ ಮನೆಯಾಗಬಾರದು; ಬದಲಾಗಿ ಅದು ದೇವರ ನಿವಾಸ-ಸ್ಥಾನವಾಗಿರಬೇಕು. ಮಾಯೆಯಲ್ಲಿ ಮುಳುಗಿಹೋಗಬಲ್ಲ ಅದೇ ಮನಸ್ಸು ದೇವರಿಗೆ ಸಂಪೂರ್ಣವಾಗಿ ಶರಣಾಗತವಾಗಲೂಬಲ್ಲದು.

ಇಂತಹ ಸುಂದರವಾದ ಜ್ಞಾನವನ್ನು ಕೇಳಿಸಿಕೊಳ್ಳುವ ಮಾತ್ರದಿಂದಲೇ ಮನಸ್ಸು ಬಹಳ ಮೇಲೆತ್ತಲ್ಪಡುತ್ತದೆ ಮತ್ತು ಶುದ್ಧವಾಗುತ್ತದೆ, ಅಲ್ಲವೇ? ಮನಸ್ಸು ತಕ್ಷಣವೇ ಎಲ್ಲಾ ರಾಗ-ದ್ವೇಷಗಳನ್ನು ಕಳೆದು ಸ್ವಚ್ಛವಾಗುತ್ತದೆ.

ನಾವು ನಮ್ಮ ಮುಖದಿಂದ ನಗೆಯನ್ನು ಯಾಕೆ ಕಳೆದುಕೊಳ್ಳುತ್ತೇವೆ? ಕಾರಣವೆಂದರೆ, ರಾಗ-ದ್ವೇಷಗಳು ಮತ್ತು ಮಾಯೆಯಲ್ಲಿ ಸಿಕ್ಕಿಹಾಕಿಕೊಳ್ಳುವಿಕೆ. ನಮ್ಮ ಮನಸ್ಸಿನಲ್ಲಿನ ಜಾಗವು ರಾಗ-ದ್ವೇಷಗಳಿಂದ ತುಂಬಿದಾಗ, ಸಂತೋಷವು ಸಂಪೂರ್ಣವಾಗಿ ಕಳೆದುಹೋಗುತ್ತದೆ. ನಾವು, "ಓ, ಇದು ಸರಿಯಲ್ಲ, ಅದು ಸರಿಯಲ್ಲ! ಈ ವ್ಯಕ್ತಿ ಒಳ್ಳೆಯವನಲ್ಲ! ಆ ವ್ಯಕ್ತಿ ಸರಿಯಿಲ್ಲ!" ಎಂಬಂತಹ ಯೋಚನೆಗಳಲ್ಲಿ ಬಹಳವಾಗಿ ಸಿಕ್ಕಿಬೀಳುತ್ತೇವೆ. ನಾನು ಹೇಳುತ್ತೇನೆ ಕೇಳಿ, ನೀವು ಕೂಡಾ ಹಾಗಿದ್ದರೆ ಮುಂದೆಂದೂ ಸರಿಯಾಗಿರುವುದಿಲ್ಲ! ನಿಮ್ಮೆಲ್ಲಾ ಶಕ್ತಿಯೂ ಅಂತಹ ಯೋಚನೆಗಳಲ್ಲಿ ಸುಮ್ಮನೆ ಕಳೆದುಹೋಗಿಬಿಡುತ್ತದೆ.
ಇಂತಹ ಯೋಚನೆಗಳಲ್ಲಿ ನೀವು ನಿಮ್ಮೆಲ್ಲಾ ಸಕಾರಾತ್ಮಕ ಶಕ್ತಿಯನ್ನು ವ್ಯಯಿಸಿರುವಾಗ, ನೀವು ನಿಷ್ಪ್ರಯೋಜಕರಾಗುವಿರಿ; ಏನನ್ನೂ ಮಾಡಲು ಅಸಮರ್ಥರಾಗುವಿರಿ. ನೀವು ಜೀವನದಲ್ಲಿ ನಿಮ್ಮ ಉತ್ಸಾಹವನ್ನು ಕಳೆದುಕೊಂಡಿರುವಾಗ, ಮತ್ತೆ ಬೇರೇನು ಉಳಿಯುತ್ತದೆ?

ಅಷ್ಟೊಂದು ಸಿಕ್ಕಿಹಾಕಿಕೊಂಡಿರುವುದರಿಂದ, ನೀವು ನಿಮ್ಮೆಲ್ಲಾ ಪ್ರೇಮ, ನಗು ಮತ್ತು ಉತ್ಸಾಹಗಳನ್ನು ಕಳೆದುಕೊಳ್ಳುತ್ತೀರಿ. ನೀವು ನಿಮ್ಮ ಉತ್ಸಾಹವನ್ನು ಕಳೆದುಕೊಂಡಾಗ, ನೀವು ಬೇರೆಲ್ಲವನ್ನೂ ಕಳೆದುಕೊಳ್ಳುತ್ತೀರಿ. ನಂತರ ನೀವು ಒಂದು ಜಾಗದಲ್ಲಿ ಸುಮ್ಮನೆ ಕೂರುವಿರಿ ಮತ್ತು ಏನನ್ನೂ ಮಾಡಲಾರಿರಿ. ಇದೆಲ್ಲವೂ ಆಗುವುದು ಯಾಕೆ? ಅದು ಮಾಯೆಯಿಂದಾಗಿ. ಈ ಮಾಯೆಯು ನಿಶ್ಚಿತವಾಗಿಯೂ ಬಹಳ ಆಸಕ್ತಿದಾಯಕವಾದುದು . ಅದು ಯಾರನ್ನು ಬೇಕಾದರೂ ವಶಪಡಿಸಿಕೊಳ್ಳಬಲ್ಲದು ಮತ್ತು ಅವರನ್ನು ತನ್ನ ತಾಳಕ್ಕೆ ತಕ್ಕಂತೆ ಕುಣಿಸಬಲ್ಲದು! ಮತ್ತು ಸಿಕ್ಕಿಬಿದ್ದವರು ಪಾಪ ಕುಣಿಯುತ್ತಾ ಇರುತ್ತಾರೆ.

ಸಂಪೂರ್ಣ ಜಗತ್ತು ಮಾಯೆಯಿಂದಾಗಿ ತೊಂದರೆಗೀಡಾಗಿದೆ. ಇದರಿಂದಾಗಿ, ಹಲವಾರು ಜನರು ಮಾಯೆಯ ಆಟವನ್ನು ಟೀಕಿಸುತ್ತಾರೆ ಮತ್ತು ಅದರಿಂದ ವಿಮುಖರಾಗುತ್ತಾರೆ. ಆದರೆ ಕೃಷ್ಣ ಪರಮಾತ್ಮನು ಹೀಗೆಂದು ಹೇಳುತ್ತಾನೆ, "ಈ ಮಾಯೆಯು ದೈವಿಕ ಗುಣಗಳಿಂದ ತುಂಬಿದೆ ಮತ್ತು ನನ್ನಿಂದ ಜನ್ಮ ತಾಳಿದೆ. ಆದುದರಿಂದ ನೀನದನ್ನು ಗೌರವಿಸಬೇಕು ಮತ್ತು ಆದರಿಸಬೇಕು."

ಕೇವಲ ಕೃಷ್ಣ ಪರಮಾತ್ಮ ಮಾತ್ರ ಅಂತಹ ಒಂದು ವಿಷಯವನ್ನು ಹೇಳಬಲ್ಲನು, ಬೇರೆ ಯಾರೂ ಅಲ್ಲ. ಅದು ಹೇಗೆಂದರೆ, ಒಂದು ಸಿನೆಮಾದ ನಿರ್ದೇಶಕನು ಮಾತ್ರ, "ಎಲ್ಲವೂ ನನಗೆ ಸೇರಿದುದು. ನಾಯಕ ಮತ್ತು ಖಳನಾಯಕ ಇಬ್ಬರೂ ನನಗೆ ಸೇರಿದವರು" ಎಂದು ಹೇಗೆ ಹೇಳಲು ಸಾಧ್ಯವೋ ಹಾಗೆ.

ಖಳನಾಯಕನು ತನಗೆ ಸೇರಿದವನೆಂದು ನಾಯಕನಿಗೆ ಹೇಳಲು ಸಾಧ್ಯವೇ? ಇಲ್ಲ, ಅದು ಆ ರೀತಿಯಾಗಲು ಸಾಧ್ಯವಿಲ್ಲ. ಸಿನೆಮಾದ ನಾಯಕನು ಖಳನಾಯಕನನ್ನು ಖಳನಾಯಕನೆಂದೇ ಪರಿಗಣಿಸಬೇಕು. ಆದರೆ ಸಿನೆಮಾದ ನಿರ್ದೇಶಕನಿಗೆ, "ನಾಯಕ ಮತ್ತು ಖಳನಾಯಕರಿಬ್ಬರೂ ನನಗೆ ಸೇರಿದವರು. ಈ ಸಿನೆಮಾದಲ್ಲಿ ಕೆಲಸ ಮಾಡಲು ನಾನು ಅವರಿಗೆ ಹಣ ನೀಡಿದ್ದೇನೆ. ಅವರಿಬ್ಬರ ನಡುವಿನ ಸಂಘರ್ಷವನ್ನು ಬರೆದಿರುವವನು ನಾನು ಮತ್ತು ಅದರ ಅಂತ್ಯವನ್ನು ಬರೆದಿರುವವನು ಕೂಡಾ ನಾನೇ" ಎಂದು ಹೇಳುವ ಅಧಿಕಾರವಿದೆ.

ಇದಕ್ಕಾಗಿಯೇ ಕೃಷ್ಣ ಪರಮಾತ್ಮನು, "ಈ ಮಾಯೆಯು ನನ್ನಿಂದ ಹುಟ್ಟಿದೆ. ಅದನ್ನು ಪ್ರಚಾರಪಡಿಸುವವನು ನಾನು ಮತ್ತು ನನ್ನ ದೈವಿಕ ಕೃಪೆಯಿಂದ ಮಾತ್ರ ನಿನಗೆ ಅದನ್ನು ಜಯಿಸಲು ಸಾಧ್ಯ. ನೀನು ಎಷ್ಟೇ ಪ್ರಯತ್ನಪಟ್ಟರೂ, ನಿನ್ನ ಪ್ರಯತ್ನಗಳಿಂದಾಗಿ ಮಾತ್ರ ನೀನು ಅದರಿಂದ ಮುಕ್ತನಾಗಲು ಸಾಧ್ಯವಿಲ್ಲ. ನನ್ನ ಆಶ್ರಯ ತೆಗೆದುಕೊಳ್ಳುವುದರಿಂದ ಮಾತ್ರ ನಿನಗೆ ಮಾಯೆಯ ಸಾಗರವನ್ನು ದಾಟಲು ಸಾಧ್ಯ" ಎಂದು ಹೇಳುತ್ತಾನೆ.

ಆದುದರಿಂದ, ನಿಮ್ಮೊಳಗೆ ಆಳವಾಗಿ ಹೋಗುವುದರಿಂದ ಮಾತ್ರ ನಿಮಗೆ ಈ ಮಾಯೆಯನ್ನು ಜಯಿಸಲು ಸಾಧ್ಯ. 

ಸೋಮವಾರ, ಮೇ 27, 2013

ಜ್ಯೋತಿಷ್ಯ - ಜ್ಞಾನದ ಕಣ್ಣು

ಬೆಂಗಳೂರು, ಭಾರತ
೨೭ ಮೇ ೨೦೧೩

ಪ್ರಶ್ನೆ: ಪ್ರೀತಿಯ ಗುರುದೇವ, ಜ್ಯೋತಿಷ್ಯದ ಪ್ರಕಾರ ನಾನು ರಾಹು-ಶನಿ ಗ್ರಹ ಸಂಯೋಜನೆಯ ಪ್ರಭಾವದಲ್ಲಿರುವೆನು. ಹೆಚ್ಚಾಗಿ ಇದು ನನ್ನನ್ನು ಹತಾಶನನ್ನಾಗಿ, ಕೋಪಗೊಳ್ಳುವಂತೆ ಮತ್ತು ಕಿರಿಕಿರಿಯಾಗುವಂತೆ ಮಾಡಿದೆ. ನಾನು ಆಧ್ಯಾತ್ಮಿಕ ಪಥದಿಂದ ದೂರ ಸರಿಯುತ್ತಿದ್ದೇನೆ ಮತ್ತು ನನ್ನ ಸುತ್ತಲಿರುವ ಇತರರಿಗೆ ತೊಂದರೆ ಸೃಷ್ಟಿಸುತ್ತಿದ್ದೇನೆ. ದಯವಿಟ್ಟು ಸಹಾಯ ಮಾಡಿ. 

ಶ್ರೀ ಶ್ರೀ ರವಿ ಶಂಕರ್: ಕನಿಷ್ಠಪಕ್ಷ ನಿನ್ನಲ್ಲಿ ಈ ಜ್ಞಾನವಿದೆ. ನೀನು ಇಷ್ಟನ್ನು ಅರ್ಥಮಾಡಿಕೊಂಡಿರುವುದಾದರೆ, ಆಗ ನಿನಗೆ, ಈ ಎಲ್ಲಾ ನಕಾರಾತ್ಮಕ ಭಾವನೆಗಳು ಕೇವಲ ಒಂದು ಹಾದುಹೋಗುವ ಹಂತವೆಂಬುದು ತಿಳಿದಿರುತ್ತದೆ. ಇದು ಯಾವುದೋ ಗ್ರಹಗತಿಯಿಂದ ಎಂಬುದು ನಿನಗೆ ತಿಳಿದಿದೆ. ಇಲ್ಲಿಯೇ ಜ್ಯೋತಿಷ್ಯವು ಒಂದು ದೊಡ್ಡ ರೀತಿಯಲ್ಲಿ ನಿನ್ನ ಸಹಾಯಕ್ಕೆ ಬರುವುದು. ಇದು ಈ ಗ್ರಹಗತಿಗಳ ಕಾರಣದಿಂದಾಗಿ ಎಂಬುದು ನಿನಗೆ ತಿಳಿದಿರಲಿಲ್ಲವೆಂದು ಇಟ್ಟುಕೊಳ್ಳೋಣ, ನಿನಗೇನಾಗಬಹುದು? ಸಂಪೂರ್ಣ ಪ್ರಪಂಚವನ್ನು ನಕಾರಾತ್ಮಕವೆಂದು ನೀನು ಬ್ರ್ಯಾಂಡ್ ಮಾಡಬಹುದು. ನೀನು ನಕಾರಾತ್ಮಕವೆಂದು ನೀನು ಯೋಚಿಸುವೆ ಮತ್ತು ಎಂದೆಂದಿಗೂ ನೀನು ದುಃಖಿತನಾಗಿರುವೆ, ಅಲ್ಲವೇ?

ಅದಕ್ಕಾಗಿಯೇ ಜ್ಯೋತಿಷ್ಯವು ಜ್ಞಾನದ ಕಣ್ಣು ಎಂದು ಕರೆಯಲ್ಪಡುವುದು. ಅದು, ನೀವು ನಿಮ್ಮ ತಕ್ಷಣದ ಪರಿಸ್ಥಿತಿಯಾಚೆಗೆ ನೋಡುವಂತೆ ಮತ್ತು ಅದು ಕೇವಲ ಅಲ್ಪ ಕಾಲದ ವರೆಗೆ ಎಂಬುದನ್ನೂ, ಅದು ಬದಲಾಗಲಿದೆಯೆಂಬುದನ್ನೂ ತಿಳಿಯುವಂತೆ ಮಾಡುತ್ತದೆ. ಇದರಿಂದ ನಿಮಗೆ ಯಾವುದೋ ತಿಳಿಯದ ಆಂತರಿಕ ಶಕ್ತಿಯು ಲಭಿಸುತ್ತದೆ. ನೀವು ನಿಮ್ಮನ್ನೇ ಅಥವಾ ನಿಮ್ಮ ಸುತ್ತಲಿರುವ ಜನರನ್ನು ದೂಷಿಸಲು ತೊಡಗಲಾರಿರಿ. ಗ್ರಹಗಳನ್ನು ದೂಷಿಸುವುದು ಯಾವತ್ತಿಗೂ ಉತ್ತಮ ಯಾಕೆಂದರೆ, ಅವುಗಳು ಬಹಳ ದೂರದಲ್ಲಿವೆ. ನೀವು ಅವುಗಳ ಬಗ್ಗೆ ಏನನ್ನೂ ಮಾಡಲಾರಿರಿ. ಅವುಗಳು ಅವುಗಳದ್ದೇ ಆದ ಗತಿಯಲ್ಲಿ ಚಲಿಸುತ್ತವೆ, ಅವುಗಳ ಚಲನೆಯ ವೇಗವನ್ನು ಹೆಚ್ಚಿಸಲು ನಿಮಗೆ ಸಾಧ್ಯವಿಲ್ಲ.

ಯಾವಾಗೆಲ್ಲಾ ಸಂಗತಿಗಳು ಕೆಟ್ಟದಾಗುತ್ತವೆಯೋ, ಸ್ವಾಭಾವಿಕ ಪ್ರವೃತ್ತಿಯೆಂದರೆ ನಿಮ್ಮನ್ನೇ ದೂಷಿಸುವುದು ಅಥವಾ ಇತರರನ್ನು ದೂಷಿಸುವುದು. ಎರಡೂ ಸಂದರ್ಭಗಳಲ್ಲಿ ನಷ್ಟವಾಗುವುದು ನಿಮಗೆ. ಆದರೆ ನೀವು ಗ್ರಹಗಳ ಮೇಲೆ ಆಪಾದನೆಯನ್ನು ಹಾಕಿದಾಗ, ಇತರರನ್ನು ದೂಷಿಸುವುದರಿಂದ ಮತ್ತು ನಿಮ್ಮನ್ನೇ ದೂಷಿಸುವುದರಿಂದ ನೀವು ಮುಕ್ತರಾಗುತ್ತೀರಿ. ಹೀಗೆ ಒಂದು ನಿರ್ದಿಷ್ಟ ಮಟ್ಟದ ವಿವೇಕವು ನಿಮ್ಮ ಜೀವನದಲ್ಲಿ ಬರುತ್ತದೆ. ಇದು ಅದರ ಒಂದು ಪ್ರಯೋಜನ.
ಇದಕ್ಕೆ ಯಾವತ್ತೂ ಒಂದು ಪರಿಹಾರವಿದೆಯೆಂಬುದನ್ನು ನೀನು ತಿಳಿದಿರಬೇಕು. ಅದು ಯಾವುದು? ದೈವವನ್ನು ಆರಾಧಿಸುವುದು.

ಎಲ್ಲಾ ಗ್ರಹಗಳ ಮೇಲೆ ಇರುವುದು ಭಗವಾನ್ ಶಿವ ಅಥವಾ ಶಿವ ತತ್ವ. ಆದುದರಿಂದ, ಓಂ ನಮಃ ಶಿವಾಯ ಎಂದು ಜಪಿಸುವುದರಿಂದ, ನೀನು ಇದೆಲ್ಲದರ ಮೇಲಿಂದ ತೇಲಿಹೋಗುವೆ.

ನಾನು ಹೇಳುತ್ತೇನೆ ಕೇಳು, ಈ ಯಾವುದೇ ಅನಾನುಕೂಲ ಪರಿಸ್ಥಿತಿಗಳಲ್ಲಿಯಾದರೂ ಅಲ್ಲಿ ಯಾವತ್ತೂ ಒಂದು ಪ್ರಯೋಜನವಿದೆ, ಅಂದರೆ ಹೆಚ್ಚು ಅಂತರ್ಮುಖವಾಗಿ ತಿರುಗುವುದು ಮತ್ತು ಹೆಚ್ಚು ಆಧ್ಯಾತ್ಮಿಕವಾಗುವುದು. ಅನುಕೂಲಕರ ಪರಿಸ್ಥಿತಿಗಳಲ್ಲಿ ನಿನ್ನ ಮನಸ್ಸು ಬಹಿರ್ಮುಖವಾಗಿರುವುದು, ಆದುದರಿಂದ ಕಡಿಮೆಪಕ್ಷ ಅನಾನುಕೂಲ ಪರಿಸ್ಥಿತಿಗಳಲ್ಲಿ ನೀನು ನಿನ್ನ ಮನಸ್ಸನ್ನು ಅಂತರ್ಮುಖವಾಗಿ ತಿರುಗಿಸಿ, ಈ ಸಮಯವನ್ನು ಪ್ರಾರ್ಥನೆ ಮತ್ತು ಧ್ಯಾನಕ್ಕಾಗಿ ಬಳಸಬಹುದು.

ಇವುಗಳೆಲ್ಲವೂ, ರಾಹುಭುಕ್ತಿ, ಶನಿಭುಕ್ತಿ, ಕೇತುಭುಕ್ತಿ, ಮೊದಲಾದವೆಲ್ಲಾ ಆಧ್ಯಾತ್ಮಿಕ ಪ್ರಗತಿಗೆ ಬಹಳ ಒಳ್ಳೆಯದು. ಶನಿಯ ಮುಖ್ಯ ಉದ್ದೇಶವೆಂದರೆ, ನಿಮ್ಮನ್ನು ಹೆಚ್ಚು ಆಧ್ಯಾತ್ಮಿಕರನ್ನಾಗಿಸುವುದು, ಮತ್ತು ಅವನು ಅದನ್ನು ಹೇಗೆ ಮಾಡುತ್ತಾನೆ? ನೀವು ಬಾಹ್ಯಕ್ಕೆ ಅಂಟಿಕೊಂಡಿರುವಾಗ, ನಿಮ್ಮನ್ನು ಅಂತರ್ಮುಖವಾಗಿ ತರಲು ಅವನು ಅಲ್ಲಿ ಸಮಸ್ಯೆಯನ್ನು ತರುತ್ತಾನೆ.
ನೀವು ಈಗಾಗಲೇ ಅಂತರ್ಮುಖವಾಗಿದ್ದರೆ, ಅವನಿಗೆ ಹೆಚ್ಚಿನದೇನೂ ಮಾಡಲು ಇರುವುದಿಲ್ಲ. ಅವನ ಕೆಲಸವು ಮುಗಿಯಿತು, ಹಾಗಾಗಿ ಅಲ್ಲಿ ಯಾವುದೇ ಸಮಸ್ಯೆ ಕೂಡಾ ಇರದು. ಸಮಸ್ಯೆಗಳಿದ್ದರೂ ಕೂಡಾ ಅವುಗಳು ಕನಿಷ್ಠವಾಗಿರುವುವು, ಅವುಗಳು ಸುಮ್ಮನೆ ಬರುವುವು ಮತ್ತು ಹೋಗುವುವು. ಹೀಗೆ, ಪ್ರತಿಯೊಂದು ಪರಿಸ್ಥಿತಿಯನ್ನೂ ಒಬ್ಬರ ಲಾಭಕ್ಕಾಗಿ ಬಳಸಬಹುದು.

ಪ್ರಶ್ನೆ: ಗುರುದೇವ, ನಮ್ಮಲ್ಲಿ ಕೆಲವು ರಾಪಿಡ್ ಫಯರ್ ಪ್ರಶ್ನೆಗಳಿವೆ.

ಶ್ರೀ ಶ್ರೀ ರವಿ ಶಂಕರ್: ಮುಂದುವರೆಸಿ!

ಜ್ಞಾನ?

ಜೀವನದಲ್ಲಿ ಆವಶ್ಯಕ.

ಸಂಬಂಧಗಳು?

ಅದನ್ನು ಸಮರಸವಾಗಿ ಇಟ್ಟುಕೊಳ್ಳುವುದು ಕಷ್ಟ. ಆದಾಗ್ಯೂ ನೀವು ಪ್ರಯತ್ನ ಮಾಡಬೇಕು.

ಫ್ಯಾನ್‌ಗಳು?

ಕೆಲವೊಮ್ಮೆ ಬಿಸಿಯಾಗಿ ಬೀಸುತ್ತವೆ ಮತ್ತು ಕೆಲವೊಮ್ಮೆ ತಣ್ಣಗೆ ಬೀಸುತ್ತವೆ.

ಮ್ಯಾಜಿಕ್?

ಜೀವನದಲ್ಲಿ ಯಾವತ್ತೂ ಇದೆ, ವಿಶೇಷವಾಗಿ ಆರ್ಟ್ ಆಫ್ ಲಿವಿಂಗ್‌ನಲ್ಲಿ.

ಎಸ್.ಎಮ್.ಎಸ್.?

ಅದು ಚಿಕ್ಕದಾಗಿ ಮತ್ತು ಚುರುಕಾಗಿರಲಿ.

ಸಂಸ್ಕೃತ?

ಎಲ್ಲಾ ಭಾಷೆಗಳ ತಾಯಿ. ಬುದ್ಧಿವಂತರು ಅದನ್ನು ಅಭ್ಯಸಿಸುತ್ತಾರೆ.

ಪರಿಸರ?

ಸಂರಕ್ಷಣೆಯ ಅಗತ್ಯವಿದೆ.

ಹಣ?

ಕೇವಲ ಒಂದು ದಾರಿ, ಅದುವೇ ಒಂದು ಕೊನೆಯಲ್ಲ.

ಶಕ್ತಿ ಡ್ರಾಪ್ಸ್?

ಎಲ್ಲರೂ ಅದನ್ನು ಸೇವಿಸಬೇಕು.

ಪ್ರಾರ್ಥನೆಗಳು?

ಅದು ಪ್ರಾಮಾಣಿಕವಾಗಿರುವಾಗ, ಉತ್ತರಿಸಲ್ಪಡುವುದು.

ಕರ್ಮ?

ಜೀವನದ ಭಾಗ. ಒಳ್ಳೆಯ ಕರ್ಮವು ಆನಂದ ತರುತ್ತದೆ.

ಭಾನು ಅಕ್ಕ?

ಎಲ್ಲರಿಗೂ ಅಚ್ಚುಮೆಚ್ಚು.

ನಿಮ್ಮ ಕಾರ್ಯದರ್ಶಿಗಳು?

ಬಹಳ ಪರಿಶ್ರಮ ಪಡುವರು. ಅದೊಂದು ದೊಡ್ಡ ಸವಾಲು.

ತೃಪ್ತಿ?

ತೃಪ್ತಿ ಬರುವುದು ಸೇವೆಯಿಂದ.

ಆಶೀರ್ವಾದಗಳು?

ನಿಮಗೆ ಧಾರಾಳವಾಗಿ ಇದೆ.

ಬೆಂಗಳೂರು ಆಶ್ರಮ?

ಭೂಮಿಯ ಮೇಲಿನ ಸ್ವರ್ಗ.

ತಂತ್ರಜ್ಞಾನ?

ಸುಖವನ್ನು ತರುವುದು ಅದರ ಉದ್ದೇಶ.

ಆಯುರ್ವೇದ?

ಮುಂದಿನ ಶತಮಾನದ ಔಷಧಿ ಮತ್ತು ಹಿಂದಿನ ಕಾಲದ ಔಷಧಿ.

ಆಟಿಕೆಗಳು?

ದೇವರ ಕೈಗಳಲ್ಲಿ ನೀವು ಒಂದು ಎಂಬುದನ್ನು ನೆನಪಿಡಿ. ನಿಮ್ಮ ಭಾವನೆಗಳ ಆಟಿಕೆಯಾಗಿರುವುದರಿಂದ ದೇವರ ಒಂದು
ಆಟಿಕೆಯಾಗಿರುವುದರತ್ತ ಸಾಗಿರಿ.

ದೇಶಭಕ್ತಿ?

ಇದನ್ನು ನಾವು ಈಗ ಜಾಗೃತಗೊಳಿಸಬೇಕು. ಇದು ಅಗತ್ಯದ ಸಮಯ. ಭಾರತಕ್ಕೆ ಅದರ ಅಗತ್ಯವಿದೆ.

ಯೋಗ?

ನಿಮ್ಮನ್ನು ಬುದ್ಧಿವಂತರನ್ನಾಗಿಸುವುದು ಮತ್ತು ಬುದ್ಧಿವಂತರು ಅದನ್ನು ಮಾಡುತ್ತಾರೆ.

ಅಹಂ?

ನಿಮಗದು ಸಿಕ್ಕಿದರೆ, ಅದನ್ನು ಇಟ್ಟುಕೊಳ್ಳಿ. ಅದನ್ನು ತೊಡೆದು ಹಾಕಲು ಪ್ರಯತ್ನಿಸಬೇಡಿ.

ಪ್ರೇಮ?

ನಿಮ್ಮ ಸ್ವಭಾವ.

ಶಿವ?

ಇರುವ, ಮುಂದೆ ಇರಲಿರುವ ಮತ್ತು ಹಿಂದೆ ಇದ್ದ ಎಲ್ಲವೂ.

ಶಾಪಿಂಗ್?

ಕಡಿಮೆಪಕ್ಷ ಆಧ್ಯಾತ್ಮಿಕ ಕ್ಷೇತ್ರದಲ್ಲಿ ಅದನ್ನು ತರಬೇಡಿ.

ನಮ್ರತೆ?

ಪ್ರೌಢ ವ್ಯಕ್ತಿಯ ವರ್ತನೆ.

ಪ್ರಜ್ಞೆ?

ಸೌಂದರ್ಯ, ಸತ್ಯ ಮತ್ತು ಜ್ಞಾನ.

ಆರ್ಟ್ ಆಫ್ ಲಿವಿಂಗ್?

ದಾರಿ, ಗುರಿ.

ಭಾನುವಾರ, ಮೇ 26, 2013

ನಂಬಿಕೆಯೆಂಬ ಪರ್ವತ

ಬೆಂಗಳೂರು, ಭಾರತ
೨೬ ಮೇ ೨೦೧೩

ಪ್ರಶ್ನೆ: ಗುರುದೇವ, ಹಲವು ಸಲ ನನ್ನ ಭಕ್ತಿಯು ಹೆಚ್ಚುಕಡಿಮೆಯಾಗುತ್ತದೆ ಮತ್ತು ಕೆಲವೊಮ್ಮೆ ನಾನು ನಿಮ್ಮನ್ನು ಕೂಡಾ ಸಂಶಯಿಸುತ್ತೇನೆ. ಆಗ ನನಗೆ ಭಯಾನಕವೆನಿಸುತ್ತದೆ ಮತ್ತು ನಿರ್ನಾಮವಾದಂತೆ ಅನಿಸುತ್ತದೆ. ಅಂತಹ ಸಮಯಗಳಲ್ಲಿ ನಾನು ಏನು ಮಾಡಬೇಕು? 

ಶ್ರೀ ಶ್ರೀ ರವಿ ಶಂಕರ್: ಕೇಳು, ಶ್ರದ್ಧೆಯೆಂಬುದು ಒಂದು ಬೆಟ್ಟದಂತೆ ಮತ್ತು ಸಂಶಯಗಳು ಮೋಡಗಳಂತೆ. ಯಾವುದೇ ಮೋಡಕ್ಕೆ ಯಾವತ್ತಾದರೂ ಒಂದು ಬೆಟ್ಟವನ್ನು ಅಲುಗಾಡಿಸಲು ಸಾಧ್ಯವೇ? ಅದು ಅಸಾಧ್ಯ. ಅದು ಕೆಲವೊಮ್ಮೆ ಬೆಟ್ಟವನ್ನು ಆವರಿಸುತ್ತದೆ ಮತ್ತು ನಿಮಗೆ ಬೆಟ್ಟವನ್ನು ನೋಡಲು ಸಾಧ್ಯವಾಗುವುದಿಲ್ಲ. ಅಷ್ಟೇ. ಆದರೆ ಒಂದು ಬೆಟ್ಟವು ಚಲಿಸುತ್ತಿರುವ ಮೋಡಗಳಿಂದಾಗಿ ಬೀಳಲು ಯಾವತ್ತೂ ಸಾಧ್ಯವಿಲ್ಲ. ಅವುಗಳು ಅದನ್ನು ಕೇವಲ ಸ್ವಲ್ಪ ಹೊತ್ತಿನವರೆಗೆ ಮಂಕುಗೊಳಿಸುತ್ತವೆ. ಚಿಂತಿಸಬೇಡ!

ಪ್ರಶ್ನೆ: ಗುರುದೇವ, ಮುಕ್ತಿಯನ್ನು ಹೊಂದಬೇಕಾದರೆ ಪ್ರತಿಯೊಬ್ಬ ಮನುಷ್ಯನೂ ಒಂದು ಸಲವಾದರೂ ಭಾರತದಲ್ಲಿ ಜನ್ಮ ತಾಳಬೇಕೆಂಬ ಒಂದು ಹೇಳಿಕೆಯಿದೆ. ಅದು ಯಾಕೆ ಹಾಗೆ?

ಶ್ರೀ ಶ್ರೀ ರವಿ ಶಂಕರ್: ಇಲ್ಲ, ಈ ರೀತಿಯೇನೂ ಎಲ್ಲೂ ಬರೆದಿಲ್ಲ. ಸಂಪೂರ್ಣ ಪ್ರಪಂಚವು ನಿಮ್ಮದು, ಆಧ್ಯಾತ್ಮದಲ್ಲಿ ಯಾವುದೇ ಸೀಮೆಯಿಲ್ಲ. ’ಸ್ಕ್ರುನ್ವಂತೋ ವಿಶ್ವಮಾರ್ಯಂ’, ಸಂಪೂರ್ಣ ಪ್ರಪಂಚವನ್ನು ನಾವು ಒಂದು ಶ್ರೇಷ್ಠವಾದ ಹಾಗೂ ಆದರ್ಶ ಸಮಾಜವನ್ನಾಗಿ ಮಾಡೋಣ.

ಪ್ರಶ್ನೆ: ಗುರುದೇವ, ನನ್ನ ಹೆತ್ತವರು ಜ್ಯೋತಿಷ್ಯವನ್ನು ಆಳವಾಗಿ ಅನುಸರಿಸುತ್ತಾರೆ ಮತ್ತು ಅದನ್ನು ಮಾಡಲು ನನ್ನನ್ನೂ ಬಲವಂತಪಡಿಸುತ್ತಾರೆ. ನಾನದನ್ನು ಅನುಸರಿಸಬೇಕೇ ಅಥವಾ ನಕಾರಾತ್ಮಕತೆಯನ್ನು ತೊಡೆದುಹಾಕಲು ಸುದರ್ಶನ ಕ್ರಿಯೆ ಸಾಕೇ?

ಶ್ರೀ ಶ್ರೀ ರವಿ ಶಂಕರ್: ಹೌದು, ಇದು ಸಾಕು. ಜ್ಯೋತಿಷ್ಯವೆಂಬುದು ಒಂದು ವಿಜ್ಞಾನ, ಪ್ರಪಂಚಕ್ಕೆ ಒಂದು ಪ್ರಾಚೀನ ಕೊಡುಗೆ, ಆದರೆ ಅದನ್ನು ಅತಿಯಾಗಿ ನಂಬುವುದು ಕೂಡಾ ಅಜ್ಞಾನವಾಗಿದೆ ಮತ್ತು ಅದನ್ನು ಸಂಪೂರ್ಣವಾಗಿ ತಿರಸ್ಕರಿಸುವುದು ಕೂಡಾ ಅಜ್ಞಾನವಾಗಿದೆ. ಅದರ ಬಗೆಗಿನ ಜ್ಞಾನವು ಒಳ್ಳೆಯದು, ಆದರೆ ಎಲ್ಲಾ ಜ್ಯೋತಿಷ್ಯದ ಸಮಸ್ಯೆಗಳಿಗೆ ’ಓಂ ನಮಃ ಶಿವಾಯ’ ಎಂಬುದು ಅತ್ಯುತ್ತಮ ಪರಿಹಾರವಾಗಿದೆ.

ಪ್ರಶ್ನೆ: ಯೆಸ್! ಕೋರ್ಸ್ ಮಾಡಿದ ಬಳಿಕ ನಾನು ಮಾಂಸಾಹಾರವನ್ನು ತ್ಯಜಿಸಿದೆ, ಆದರೆ ನನ್ನ ಹೆತ್ತವರು ಮತ್ತು ಇತರರು ಅದನ್ನು ತಿನ್ನುವಂತೆ ನನ್ನನ್ನು ಒತ್ತಾಯಪಡಿಸುತ್ತಿರುತ್ತಾರೆ. ನಾನೇನು ಮಾಡಬೇಕು? ನಿಜವಾಗಿಯೂ ನಾನು ಇದನ್ನು ಮಾಡಲು ಬಯಸುವುದಿಲ್ಲ. 

ಶ್ರೀ ಶ್ರೀ ರವಿ ಶಂಕರ್: ಹೌದು, ನೀನು ಏನನ್ನು ಮಾಡಲು ಬಯಸುವುದಿಲ್ಲವೋ, ಮಾಡಬೇಡ. ಅದಕ್ಕೆ ಬದ್ಧನಾಗಿರು. ಈ ವಿಷಯದಲ್ಲಿ ನೀನು ನಿನ್ನ ಹೆತ್ತವರ ಮಾತನ್ನು ಕೇಳಬೇಡ. ಅವರು ಹೇಳುವ ಇತರ ವಿಷಯಗಳನ್ನು ಕೇಳು.

ಪ್ರಶ್ನೆ: ಗುರುದೇವ, ಕೆಲವು ಕ್ಷಿಪ್ರ ಪ್ರಶ್ನೆಗಳು (ರಾಪಿಡ್ ಫಯರ್ ಕ್ವೆಶ್ಚನ್ಸ್)

ಆರ್ಟ್ ಎಕ್ಸೆಲ್?

ಎಕ್ಸೆಲ್ಲೆಂಟ್ ಆರ್ಟ್ (ಅತ್ಯುತ್ತಮ ಕಲೆ).

ಗುರು?

ಅನಿವಾರ್ಯ.

ಸುದರ್ಶನ ಕ್ರಿಯೆ?

ಮನುಕುಲಕ್ಕೆ ಉಡುಗೊರೆ.

ಒಬ್ಬ ಆರ್ಟ್ ಆಫ್ ಲಿವಿಂಗ್ ಶಿಕ್ಷಕ?

ನಡತೆಗೆ ಉದಾಹರಣೆ.

ಹೃದಯದ ಒಡೆತ?

ಇಲ್ಲಿ ಆಗುವುದಿಲ್ಲ!

ಕಲಿಯುವಿಕೆ?

ಜೀವನಪರ್ಯಂತ ಮಾಡಲಿರುವ ವಿಷಯ.

ದೇಶಭಕ್ತಿ?

ಈ ಸಮಯದಲ್ಲಿ ಮತ್ತು ಈ ಕ್ಷಣದಲ್ಲಿ ಅತ್ಯಂತ ಹೆಚ್ಚು ಅಗತ್ಯವಿರುವುದು.

ಒಂದು ವಿಶಾಲ ದೃಷ್ಟಿ?

ಯಾವುದನ್ನು ಶಿಕ್ಷಣವು ನಿಮಗೆ ಕೊಡಬೇಕೋ ಅದು.

ಧೂಮಪಾನ?

ಜೀವನವನ್ನು ಸುಡುವ ಅಸ್ವಸ್ಥತೆ.

ಓಜಸ್ವೀಟಾ?

ಸುಮ್ಮನೆ ಅದನ್ನು ಕುಡಿಯಿರಿ!

ಕ್ರಿಕೆಟ್?

ಇವತ್ತು ದೊಡ್ಡ ತೊಂದರೆಯಲ್ಲಿದೆ!

ಹೆತ್ತವರು?

ಅವರನ್ನು ಗೌರವಿಸಿ.

ಸೇವೆ?

ಅದನ್ನು ನಿಮ್ಮ ಜೀವನದ ಒಂದು ಭಾಗವನ್ನಾಗಿ ಮಾಡಿ.

ಮುಗುಳ್ನಗೆ?

ಅದನ್ನು ಇಟ್ಟುಕೊಳ್ಳಿ ಮತ್ತು ಎಲ್ಲರಲ್ಲೂ ಅದನ್ನು ಮೂಡಿಸಿ.

ಹದಿಹರೆಯದವರು?

ಹೆತ್ತವರಿಗೆ ಸವಾಲು, ತಮಗೆ ಸಮಸ್ಯೆ! ಆದರೆ ನೀವದನ್ನು ದಾಟುವಿರಿ.

ಯಶಸ್ಸು?

ಪ್ರಪಂಚವು ಅದರ ಹಿಂದೆ ಒಡುತ್ತಿದೆ, ಆದರೆ ಅದು ನಮ್ಮ ಹಿಂದೆ ಓಡುತ್ತದೆ!

ಕೋಪ?

ಕೆಲಸವನ್ನು ಶೀಘ್ರವಾಗಿ ಮಾಡಲು ಒಂದು ಒಳ್ಳೆಯ ಸಲಕರಣೆಯಾಗಿ ಉಪಯೋಗಿಸಲ್ಪಡಬೇಕು.

ದುಡುಕಿನ ವಾಹನ ಚಾಲನೆ?

ದುರದೃಷ್ಟಕರ.

ಗುರಿಗಳು?

ಅವುಗಳನ್ನು ಇಟ್ಟುಕೊಳ್ಳಿ ಮತ್ತು ನಂತರ ಅವುಗಳನ್ನು ಬದಲಾಯಿಸಿ. ಒಂದು ಗುರಿಯನ್ನಿಟ್ಟುಕೊಂಡು, ನಂತರ ಅದನ್ನು ಬದಲಾಯಿಸಿ, ಯಾಕೆಂದರೆ ಅದೊಂದು ಬಹಳ ಚಿಕ್ಕ ಗುರಿಯಾಗಿ ನಿಮಗೆ ಕಂಡುಬರುತ್ತದೆ, ಆಗ ನೀವು ಇನ್ನೂ ದೊಡ್ಡದಾದ ಒಂದು ಗುರಿಯತ್ತ ದೃಷ್ಟಿಯಿರಿಸಿ.

ಭಕ್ತಿ?

ಭಾಗ್ಯವಂತರು ಹೊಂದಿರುವುದು.

ಸ್ನೇಹಿತರು?

ನಿಮ್ಮ ನ್ಯೂನತೆಗಳ ಕಡೆಗೆ ಬೆರಳು ಮಾಡಿ ತೋರಿಸುವವರು.

ಪರೀಕ್ಷೆಗಳು?

ಒಂದು ನಿರಾಳವಾದ ಮನಸ್ಸಿನಿಂದ ಅವುಗಳನ್ನು ಚೆನ್ನಾಗಿ ಮಾಡಿ!

ಟೀಮ್ ವರ್ಕ್?

ವೇಗವಾದ ಪ್ರಗತಿ ಮತ್ತು ಉತ್ಪಾದಕತೆಗೆ ಅಗತ್ಯವಾದುದು.

ಆಟಗಳು?

ಒಬ್ಬರು ಆಟವಾಡಬೇಕು. ಕೆಲವೊಮ್ಮೆ ಗೆಲ್ಲಬೇಕು ಮತ್ತು ಕೆಲವೊಮ್ಮೆ ಇತರರು ಗೆಲ್ಲುವಂತೆ ಮಾಡಬೇಕು.

ಶ್ರೀ ಶ್ರೀ?

ಯಾವತ್ತೂ ನಿಮ್ಮೊಂದಿಗೆ ಮತ್ತು ನಿಮಗಾಗಿ ಇರುವರು!

ಪ್ರಶ್ನೆ: ಗುರುದೇವ, ನಿಮ್ಮ ಅಚ್ಚುಮೆಚ್ಚಿನ ಪುಸ್ತಕ ಯಾವುದು?

ಶ್ರೀ ಶ್ರೀ ರವಿ ಶಂಕರ್: ಸಾಮಾನ್ಯವಾಗಿ ನಾನು ಪುಸ್ತಕಗಳನ್ನು ಓದುವುದಿಲ್ಲ. ಮನುಷ್ಯನ ಮನಸ್ಸು ಅಥವಾ ವಿಶ್ವವು ನನ್ನ ಅಚ್ಚುಮೆಚ್ಚಿನ ಪುಸ್ತಕವಾಗಿದೆ.

ಪ್ರಶ್ನೆ: ಗುರುದೇವ, ನಿಮ್ಮ ಅಚ್ಚುಮೆಚ್ಚಿನ ಶಿಕ್ಷಕರು ಯಾರು?

ಶ್ರೀ ಶ್ರೀ ರವಿ ಶಂಕರ್: ಪ್ರತಿಯೊಂದು ಮಗು!

ಪ್ರಶ್ನೆ: ಗುರುದೇವ, ನಿಮ್ಮ ಅಚ್ಚುಮೆಚ್ಚಿನ ಹಾಡು ಯಾವುದು?

ಶ್ರೀ ಶ್ರೀ ರವಿ ಶಂಕರ್: ವಂದೇ ಮಾತರಂ

ಪ್ರಶ್ನೆ: ಗುರುದೇವ, ನಿಮ್ಮ ಅಚ್ಚುಮೆಚ್ಚಿನ ಹೂ ಯಾವುದು?

ಶ್ರೀ ಶ್ರೀ ರವಿ ಶಂಕರ್: ಅರಳುವ ಪ್ರತಿಯೊಂದು ಹೂ!

ಪ್ರಶ್ನೆ: ಗುರುದೇವ, ನಿಮ್ಮ ಅಚ್ಚುಮೆಚ್ಚಿನ ದೇಶ ಯಾವುದು?

ಶ್ರೀ ಶ್ರೀ ರವಿ ಶಂಕರ್: ಈ ಭೂಮಿಯ ಮೇಲೆ ನಾನು ಎಲ್ಲೆಲ್ಲಾ ಇರುತ್ತೇನೋ, ಆ ಸಮಯದಲ್ಲಿ ಆ ದೇಶವು ನನಗೆ ಅಚ್ಚುಮೆಚ್ಚು, ಅದಕ್ಕಾಗಿಯೇ ನಾನು ಅಲ್ಲಿರುವುದು!

ಶನಿವಾರ, ಮೇ 25, 2013

ನೀವು ಬಯಸಬೇಕಾದ್ದು ಏನನ್ನು?

ಬೆಂಗಳೂರು, ಭಾರತ
೨೫ ಮೇ ೨೦೧೩

ಪ್ರಶ್ನೆ: ಪ್ರೀತಿಯ ಗುರುದೇವ, ಆಸೆಗಳನ್ನು ಬಿಟ್ಟುಬಿಡಬೇಕೆಂದು ನಮ್ಮಲ್ಲಿ ಹೇಳಲಾಗಿದೆ, ಆದರೆ ಇನ್ನೊಂದು ಕಡೆಯಲ್ಲಿ, ಮೋಕ್ಷಕ್ಕಾಗಿ (ಜನನ ಮರಣಗಳ ಚಕ್ರದಿಂದ ಮುಕ್ತಿ) ಶ್ರಮಿಸಬೇಕೆಂದು ನಮಗೆ ಸಲಹೆ ನೀಡಲಾಗಿತ್ತು. ಇದು ಕೂಡಾ ನಮ್ಮ ಆಸೆಗಳನ್ನು ಹೆಚ್ಚಿಸುವುದಲ್ಲವೇ?

ಶ್ರೀ ಶ್ರೀ ರವಿ ಶಂಕರ್: ಹೌದು, ಜೀವನದಲ್ಲಿನ ದೊಡ್ಡ ವಿಷಯಗಳಿಗಾಗಿ ನಿಮ್ಮ ಬಯಕೆಗಳನ್ನು ಹೆಚ್ಚಿಸಿಕೊಳ್ಳಿ, ಚಿಕ್ಕ ವಿಷಯಗಳಿಗಾಗಿಯಲ್ಲ. ಚಿಕ್ಕ ವಿಷಯಗಳಿಗಾಗಿ ಇರುವ ಬಯಕೆಯೇ ಸಮಸ್ಯೆಗಳನ್ನುಂಟುಮಾಡುವುದು. ನಿಮ್ಮಲ್ಲಿ ಬಯಕೆಗಳು ಇರಲೇಬೇಕು ಎಂದಾದಲ್ಲಿ, ಅತ್ಯುನ್ನತವಾದುದನ್ನು ಕೇಳಿಕೊಳ್ಳಿ, ಅಂದರೆ, ಪರಮಾತ್ಮ. ಸಂಪೂರ್ಣ ವಿಶ್ವವನ್ನು ನಿಮ್ಮ ಸ್ವಂತದ್ದಾಗಿ ಮಾಡುವಂತೆ ಬೇಡಿಕೊಳ್ಳಿ, ಈ ವಿಶ್ವದಲ್ಲಿನ ಎಲ್ಲರ ಸಂತೋಷವನ್ನು ಬಯಸಿ.

ಬಯಕೆಗಳು ದೊಡ್ಡದಾಗಿರುವಾಗ ಅವುಗಳು ಹಾನಿಕಾರಕವಾಗಿ ಉಳಿಯುವುದಿಲ್ಲ. ನೀವು ಸತ್ಯವನ್ನು ಬಯಸುವಾಗ, ನೀವು ಸತ್ಯಕ್ಕೆ ಬದ್ಧರಾಗಿರುವಾಗ, ಮನಸ್ಸು ಶಾಂತವೂ ಸ್ಪಷ್ಟವೂ ಆಗುತ್ತದೆ. ಚಿಕ್ಕ ಬಯಕೆಗಳು ಚಡಪಡಿಕೆಗೆ ಕಾರಣವಾಗುತ್ತವೆ, ಆದರೆ ಅತ್ಯುನ್ನತವಾದ ಸತ್ಯಕ್ಕಾಗಿ ಇರುವ ಬಯಕೆಯು ಮನಸ್ಸನ್ನು ಸ್ಥಿರವಾಗಿಸುತ್ತದೆ. ಚಡಪಡಿಕೆಯು ನೋವನ್ನು ತರುವ ಒಂದು ವಿಷಯವಾಗಿದೆ.

ಪ್ರಶ್ನೆ: ಗುರುದೇವ, ಓಂ ಎಂದರೇನು? ಓಂನ್ನು ಯಾರು ಪ್ರಾರಂಭಿಸಿದರು?

ಶ್ರೀ ಶ್ರೀ ರವಿ ಶಂಕರ್: ಓಂ ಎಂಬುದು ಸೃಷ್ಟಿಯ ಸಾರವಾಗಿದೆ, ಒಂದು ಮರದ ಬೀಜದಂತೆ. ಬೀಜದಲ್ಲಿ, ಸಂಪೂರ್ಣ ಮರವಿದೆ, ಸರಿಯಾ? ನೀವೊಂದು ಮಾವಿನ ಬೀಜವನ್ನು ಬಿತ್ತುವಿರಿ ಮತ್ತು ಇಡೀ ಮಾವಿನ ಮರ ಬರುತ್ತದೆ. ಮಂತ್ರಗಳು ಯಾಕೆ ಬೀಜಮಂತ್ರಗಳೆಂದು ಕರೆಯಲ್ಪಡುತ್ತವೆಯೆಂದರೆ, ಇದೇ ಕಾರಣಕ್ಕಾಗಿ.

ಓಂ ಎಂಬುದು ಪರಮ ಬೀಜಮಂತ್ರವಾಗಿದೆ. ಅಂದರೆ, ಎಲ್ಲಾ ಬೀಜಮಂತ್ರಗಳ ಬೀಜಮಂತ್ರ. ಓಂ ಎಂಬುದು ಸೃಷ್ಟಿಯೊಂದಿಗೆ ಬಹಳ ಆರಂಭದಿಂದಲೂ  ಅಥವಾ ಅನಾದಿಕಾಲದಿಂದಲೂ ಇದ್ದ ಶಬ್ದವಾಗಿದೆ.

ಪ್ರಶ್ನೆ: ಗುರುದೇವ, ಈ ಯುಗದಲ್ಲಿ ಇಂತಹ ಒಬ್ಬರು ಮಹಾನ್ ಗುರುವನ್ನು ಹೊಂದಿರಲು ನಾವು ಬಹಳ ಅದೃಷ್ಟವಂತರು, ಆದರೆ ನಾವು ಹಲವಾರು ತಪ್ಪು ಕೆಲಸಗಳನ್ನು ಮಾಡಿದರೂ ನೀವು ನಮ್ಮನ್ನು ಆಯ್ಕೆ ಮಾಡಿರಲು ಕಾರಣವೇನು?

ಶ್ರೀ ಶ್ರೀ ರವಿ ಶಂಕರ್: ನೋಡಿ, ನೀವು ರೋಗಿಷ್ಠರಾಗಿರುವಾಗ; ಆಗಲಾದರೂ ನೀವು ಆಸ್ಪತ್ರೆಗೆ ಹೋಗುತ್ತೀರಲ್ಲವೇ? ಜನರು ರೋಗಿಷ್ಠರಾಗಿದ್ದು, ಆಗಲೂ ಅವರು ಆಸ್ಪತ್ರೆಗೆ ಹೋಗಲು ಬಯಸದಿದ್ದರೆ, ನೀವು ಅವರಿಗೆ ಏನನ್ನು ಹೇಳುವಿರಿ?
ಆದುದರಿಂದ ನೀವು ತಪ್ಪು ಕೆಲಸಗಳನ್ನು ಮಾಡಿದರೆ ಪರವಾಗಿಲ್ಲ, ಕಡಿಮೆಪಕ್ಷ ಬಂದು ಸತ್ಸಂಗದಲ್ಲಿ ಕುಳಿತುಕೊಳ್ಳಿ. ತಪ್ಪು  ಕೆಲಸಗಳನ್ನು ಮಾಡಲಿರುವ ನಿಮ್ಮ ಪ್ರವೃತ್ತಿಯು ಕಡಿಮೆಯಾಗುತ್ತಾ ಹೋಗುವುದು ಮತ್ತು ಸುಮ್ಮನೇ ಮಾಯವಾಗುವುದು.
ಅದು ಈಗಾಗಲೇ ಆಗುತ್ತಿಲ್ಲವೇ?

ಪ್ರಶ್ನೆ: ನಾವು ಸುದರ್ಶನ ಕ್ರಿಯೆಯನ್ನು ನಿಯಮಿತವಾಗಿ ಮಾಡಿದರೆ, ನಾವು ಪರಿಪೂರ್ಣರಾಗುವೆವೇ?

ಶ್ರೀ ಶ್ರೀ ರವಿ ಶಂಕರ್: ಹೌದು, ಖಂಡಿತಾ. ಕೇವಲ ಕ್ರಿಯೆಯನ್ನು ಮಾಡುವುದು ಸಾಕಾಗುವುದಿಲ್ಲ. ನೀನು ನಿನಗೆ ನೀಡಲಾಗುತ್ತಿರುವ ಎಲ್ಲಾ ಜ್ಞಾನವನ್ನು, ಎಲ್ಲಾ ಒಳ್ಳೆಯ ಸಲಹೆಗಳನ್ನು ಕೇಳಿಸಿಕೊಳ್ಳಬೇಕು. ಎರಡೂ, ಅಭ್ಯಾಸ ಮತ್ತು ಸೂತ್ರಗಳು ಜೀವನದಲ್ಲಿ ಆವಶ್ಯಕವಾಗಿವೆ.

ಪ್ರಶ್ನೆ: ಸಾವಿನ ನಂತರ ನನ್ನಲ್ಲಿ ಏನು ಉಳಿಯುತ್ತದೆ? ಅದು ಕೇವಲ ಆತ್ಮವೇ ಅಥವಾ ಮನಸ್ಸು ಕೂಡಾ ಉಳಿಯುವುದೇ?

ಶ್ರೀ ಶ್ರೀ ರವಿ ಶಂಕರ್: ನಿಮ್ಮ ಮನದಲ್ಲಿರುವ ಭಯದ, ಕಡುಬಯಕೆಗಳ ಮತ್ತು ತಿರಸ್ಕಾರಗಳ ಛಾಪುಗಳು ಯಾವತ್ತೂ ನಿಮ್ಮೊಂದಿಗೆ ಹೋಗುವುವು. ಅದಕ್ಕಾಗಿಯೇ ನಾವು ಧ್ಯಾನ ಮಾಡಬೇಕಾದುದು. ಧ್ಯಾನವು, ಈ ಎಲ್ಲಾ ಬೇಡದಿರುವ ಛಾಪುಗಳನ್ನು ಅಳಿಸಿಹಾಕುತ್ತದೆ.

ಪ್ರಶ್ನೆ: ಎಲ್ಲರೂ ಯಾಕೆ ವಿಭಿನ್ನರಾಗಿರುವರು ಮತ್ತು ಒಂದೇ ರೀತಿಯಾಗಿಲ್ಲ?

ಶ್ರೀ ಶ್ರೀ ರವಿ ಶಂಕರ್: ಎಲ್ಲರೂ ಯಾಕೆ ಒಂದೇ ರೀತಿಯಾಗಿರಬೇಕು?

ನಾವು ನಿನಗೆ ಬೆಳಗ್ಗಿನ ಉಪಾಹಾರ, ಮಧ್ಯಾಹ್ನದ ಊಟ ಮತ್ತು ರಾತ್ರಿಯ ಊಟಕ್ಕೆ ಕೇವಲ ಆಲೂಗಡ್ಡೆಯನ್ನು ತಿನ್ನಿಸಿದರೆ, ಅದೂ ಕೂಡಾ ಅಲೂಗಡ್ಡೆಯ ಒಂದೇ ವ್ಯಂಜನವಾಗಿದ್ದರೆ, ನೀನದನ್ನು ಇಷ್ಟಪಡುವಿಯೇ?

ನೀನು ಬೇರೆ ಬೇರೆ ಬಣ್ಣಗಳ ಬಟ್ಟೆಯನ್ನು ಯಾಕೆ ಧರಿಸುವೆ? ನೀನು ಪ್ರತಿದಿನವೂ ಒಂದೇ ಬಟ್ಟೆಯನ್ನು ಧರಿಸಬೇಕು, ಸೈನಿಕರಂತೆ. ನೀನದನ್ನು ಇಷ್ಟಪಡುವಿಯೇ? ಇಲ್ಲ, ಅಲ್ಲವೇ? ಅದಕ್ಕಾಗಿಯೇ ಭೂಮಿಯ ಮೇಲೆ ಹಲವಾರು ವಿವಿಧ ರೀತಿಯ ಜನರಿರುವುದು, ಯಾಕೆಂದರೆ ಪ್ರಕೃತಿಯು ವೈವಿಧ್ಯತೆಯನ್ನು ಇಷ್ಟಪಡುತ್ತದೆ.

ಪ್ರಶ್ನೆ: ಗುರುದೇವ, ನಿಮ್ಮ ಚೈನಾ ಮತ್ತು ಮಂಗೋಲಿಯಾ ಪ್ರವಾಸದ ಬಗ್ಗೆ ನಮಗೆ ಹೇಳಿ.

ಶ್ರೀ ಶ್ರೀ ರವಿ ಶಂಕರ್: ಹೌದು, ಮಂಗೋಲಿಯಾವು ಬಹಳ ಚೆನ್ನಾಗಿತ್ತು. ಸುಮಾರು ಹತ್ತು ಸಾವಿರ ಜನರು ಸತ್ಸಂಗಗಳಿಗೆ ಬಂದಿದ್ದರು. ಜನರು ಬಹಳ ಸಂತೋಷವಾಗಿದ್ದಾರೆ. ನಾನು ಅಲ್ಲಿಂದ ಹೊರಟಾಗ, ವಿಮಾನ ನಿಲ್ದಾಣದಲ್ಲಿದ್ದ ಎಲ್ಲರೂ; ಭದ್ರತೆಯವರು, ಕ್ಷಕಿರಣ ಯಂತ್ರವನ್ನು ಚಲಾಯಿಸುತ್ತಿದ್ದ ಜನರು, ಅವರೆಲ್ಲರೂ ಆಶೀರ್ವಾದವನ್ನು ಪಡೆಯಲು ಒಬ್ಬರಾದ ಮೇಲೆ ಒಬ್ಬರಂತೆ ಬಂದರು. ಅದು ಮಂಗೋಲಿಯಾದಲ್ಲಿನ ಜನರ ಹೃದಯವನ್ನು ಬಹಳ ಸ್ಪರ್ಶಿಸಿದೆ.

ಚೈನಾದಲ್ಲಿ, ಜನಸಂದಣಿ ಮತ್ತು ನಮ್ಮ ಜನರ ಉತ್ಸಾಹದಿಂದ ಅವರು ಬಹಳ ಭಯಗೊಂಡರು. ಅಲ್ಲಿ ಸತ್ಸಂಗಕ್ಕೆ ಬರಲು ಬಯಸುತ್ತಿದ್ದ ಹಲವಾರು ಜನರಿದ್ದರು. ಚೈನಾದಲ್ಲಿ, ದೊಡ್ಡ ಕೋರ್ಸುಗಳಿಗೆ ನಿಮಗೆ ವಿಶೇಷ ಅನುಮತಿ ಬೇಕಾಗುತ್ತದೆ. ಒಂದು ಕೋರ್ಸಿಗೆ ಕೇವಲ ೫೦ ಜನರಿಗೆ ಮಾತ್ರ ಅನುಮತಿ ಸಿಗುತ್ತದೆ ಮತ್ತು ಒಂದು ದೊಡ್ಡ ಸಭೆಗೆ ೫೦೦ ಜನರಿಗೆ. (ನಮ್ಮ ಸಭೆಯು ಮಿತಿ ಮೀರಿ ಹೋಗುತ್ತದೆ, ಸಹಸ್ರ ಸಂಖ್ಯೆಗಳಲ್ಲಿ. ಆದುದರಿಂದ ಅವರು, ಇಲ್ಲ, ತಾವದನ್ನು ನಿರ್ವಹಿಸಲಾರೆವು ಎಂದು ಹೇಳಿದರು ಮತ್ತು ದೊಡ್ಡ ಸಂಖ್ಯೆಗಳಿಗಿರುವ ಮನವಿಯನ್ನು ತಳ್ಳಿಹಾಕಿದರು.)

ಚೈನಾದಲ್ಲಿ, ಅವರು ಬಹಳ ಶಿಸ್ತುಬದ್ಧರಾಗಿದ್ದಾರೆ. ನಾವು ಅವರಿಂದ ಕಲಿಯಬೇಕು. ತಮ್ಮ ದೇಶಕ್ಕಾಗಿ ಜನರಲ್ಲಿ ಬಹಳಷ್ಟು ಬದ್ಧತೆಯಿದೆ; ಸಂಪೂರ್ಣ ಬದ್ಧತೆ. ಅವರ ಗುಪ್ತ ದಳಗಳು ಬಹಳ ಶಕ್ತಿಶಾಲಿಯಾಗಿವೆ ಮತ್ತು ಬಹಳ ಸಮರ್ಥವಾಗಿವೆ. ನಿರ್ದಿಷ್ಟವಾದ ಕೆಲವು ಹೋಟೇಲುಗಳಲ್ಲಿ ಮಾತ್ರ ವಿದೇಶೀಯರು ತಂಗಬಹುದಾಗಿದೆ ಮತ್ತು ಈ ಹೋಟೇಲುಗಳಲ್ಲಿನ ಪರಿಚಾರಕ, ಪರಿಚಾರಕಿಯರಲ್ಲಿ ಹಲವರು ರಹಸ್ಯ ತನಿಖಾ ದಳದವರಾಗಿದ್ದಾರೆ.

ಅವರ ಮೇಲ್ವಿಚಾರಣೆಯು ಎಷ್ಟು ಚೆನ್ನಾಗಿದೆಯೆಂದರೆ, ಅವರಿಗೆ ಎಲ್ಲರ ಬಗ್ಗೆಯೂ ಎಲ್ಲವನ್ನೂ ತಿಳಿಯಲು ಸಾಧ್ಯವಿದೆ. ಅವರ ರಹಸ್ಯ ಸೇವಾ ದಳಗಳ ಬಗ್ಗೆ ಅವರಿಂದ ನಮ್ಮ ದೇಶವು ಕಲಿಯಬೇಕು, ಆಗ ಈ ದೇಶದಲ್ಲಿ ಯಾವುದೇ ಭಯೋತ್ಪಾದನೆ ಇರದು.

ಜನರನ್ನು ಹೇಗೆ ಮೇಲ್ವಿಚಾರಣೆ ಮಾಡಬೇಕು, ಯಾರನ್ನು ಭೇಟಿಯಾಗಲು ಯಾರು ಬರುತ್ತಿದ್ದಾರೆ ಮತ್ತು ಏನಾಗುತ್ತಿದೆಯೆಂಬುದನ್ನು ಅವರು ಚೆನ್ನಾಗಿ ತಿಳಿದಿರುವರು. ಖಂಡಿತಾ, ಕೆಲವೊಮ್ಮೆ ಜನರಿಗೆ ಅದು ಉಸಿರುಗಟ್ಟಿಸಿದಂತೆ ಆಗುತ್ತದೆ ಯಾಕೆಂದರೆ, ಅತಿಯಾದ ಕಾಠಿಣ್ಯವಿದೆ ಮತ್ತು ಕಾರ್ಯಕ್ರಮಗಳನ್ನು ಮಾಡಲು ಯಾವುದೇ ಸ್ವಾತಂತ್ರ್ಯವಿಲ್ಲ, ಆದರೆ ಅವರಲ್ಲಿ ಒಳ್ಳೆಯ ಬದ್ಧತೆಯಿದೆ.

ಶುಕ್ರವಾರ, ಮೇ 24, 2013

ಪ್ರಾಚೀನ ಶಿಕ್ಷಣಗಳ ಸಾರ

ಹಾಂಗ್‌ಕಾಂಗ್, ಚೈನಾ
ಮೇ ೨೪, ೨೦೧೩

ವತ್ತು ಹುಣ್ಣಿಮೆಯಾಗಿದೆ, ಬುದ್ಧ ಪೌರ್ಣಿಮೆ. ಬುದ್ಧನು ಜನಿಸಿದುದು ಇವತ್ತಿನ ದಿನ ಮತ್ತು ಅವನು ಅದೇ ದಿನದಂದೇ ಜ್ಞಾನೋದಯವನ್ನು ಹೊಂದಿದನು.

ನೀವೆಲ್ಲರೂ ಹಾಯಾಗಿರುವಿರೇ? ಔಪಚಾರಿಕತೆಗಳು ನಮ್ಮನ್ನು ಒಂದು ದೂರದ ಮಟ್ಟದಲ್ಲಿ ಇರಿಸುತ್ತವೆ ಮತ್ತು ಸತ್ಸಂಗವೆಂದರೆ ಒಟ್ಟಾಗಿ ನಿಕಟವಾಗಿ ಕುಳಿತುಕೊಳ್ಳುವುದು. ಮುಕ್ತವಾಗಿರಿ, ಹಾಯಾಗಿರಿ; ಸಂಪೂರ್ಣವಾಗಿ ವಿಶ್ರಾಮದಿಂದ, ಯಾವುದೇ ಔಪಚಾರಿಕತೆಯಿಲ್ಲದೆ.

ನಾವು ಯಾವುದನ್ನು ಜೀವನವೆಂದು ಅಂದುಕೊಂಡಿರುವೆವೋ ಅದು ನಿಜವಾದ ವಾಸ್ತವಿಕತೆಯ ಒಂದು ಚಿಕ್ಕ ಅಂಶವಾಗಿದೆ. ಇಲ್ಲಿನ ಪ್ರತಿಯೊಂದು ಆಗುವಿಕೆಯನ್ನೂ, ಸ್ಥೂಲಕ್ಕಿಂತ ಹೆಚ್ಚು ಶಕ್ತಿಯನ್ನು ಹೊಂದಿದ ಒಂದು ಸೂಕ್ಷ್ಮ ಪ್ರಪಂಚದಲ್ಲಿ, ಒಂದು ಸೂಕ್ಷ್ಮ ವಲಯದಲ್ಲಿ ಮಾಡಲಾಗಿದೆ.

ಇವತ್ತು, ವಿಜ್ಞಾನಿಗಳು ಕೂಡಾ ಇದನ್ನು ಸಾಬೀತುಪಡಿಸಿದ್ದಾರೆ ಮತ್ತು ಅವರು ಅದೇ ತೀರ್ಮಾನಕ್ಕೆ ಬಂದಿದ್ದಾರೆ. ಪ್ರಪಂಚದಲ್ಲಿನ ಆಗುವಿಕೆ; ಯಾವುದನ್ನು ನಾವು ನೋಡುವೆವೋ ಅದು ಒಂದು ಪೂರ್ವ-ಮುದ್ರಿತ ಸಿ.ಡಿ.ಯಂತೆ. ಸೂಕ್ಷ್ಮ ಜಗತ್ತಿನಲ್ಲಿ ಎಲ್ಲವೂ, ಒಂದು ಇನ್ನೂ ಆಳವಾದ ಮಹತ್ವವನ್ನು ಹೊಂದಿದೆ ಮತ್ತು ನಾವೆಲ್ಲರೂ ಸೂಕ್ಷ್ಮ ಶರೀರಗಳನ್ನು ಹೊಂದಿದ್ದೇವೆ.

ಒಂದು ಸ್ಥೂಲ ಶರೀರವಿದೆ, ಮತ್ತೆ ಒಂದು ಸೂಕ್ಷ್ಮ ಶರೀರವಿದೆ. ಸೂಕ್ಷ್ಮದ ಆಚೆಗೆ ಕಾರಣ ಶರೀರವಿದೆ ಹಾಗೂ ನಂತರ, ನಾವು ವಾಸ್ತವವೆಂದು ಯೋಚಿಸುವ ಪ್ರಪಂಚದ ಸಂಭವಗಳಿವೆ.

ಭೌತಶಾಸ್ತ್ರದ ಮಹಾನ್ ಪ್ರಾಚಾರ್ಯರಲ್ಲಿ ಒಬ್ಬರಾದ, ಜರ್ಮನಿಯ ಪ್ರೊಫೆಸರ್ ಡಿ ಹೂರೆ ಅವರು ಬೆಂಗಳೂರು ಆಶ್ರಮಕ್ಕೆ ಬಂದರು ಮತ್ತು ಒಂದು ಬಹಳ ಆಸಕ್ತಿಕರವಾದ ವಿಷಯವನ್ನು ಹೇಳಿದರು. ಅವರಂದರು, "ಗುರುದೇವ, ನಾನು ವಸ್ತುಗಳ ಬಗ್ಗೆ ೪೫ ವರ್ಷಗಳ ಕಾಲ ಅಧ್ಯಯನ ಮಾಡಿದೆ, ತಿಳಿದು ಬಂದುದೇನೆಂದರೆ ಅದು ಅಸ್ತಿತ್ವದಲ್ಲಿಯೇ ಇಲ್ಲವೆಂಬುದು! ಆದುದರಿಂದ ಇವತ್ತು, ನಾನೊಂದು ಭಾಷಣವನ್ನು ಮಾಡುವಾಗ, ನಾನು ಬೌದ್ಧ ಸಿದ್ಧಾಂತ ಅಥವಾ ಯಾವುದೋ ಪೌರಾತ್ಯ ತತ್ವಜ್ಞಾನದ ಬಗ್ಗೆ ಮಾತನಾಡುತ್ತಿರುವೆನೆಂದು ಜನರು ಯೋಚಿಸುತ್ತಾರೆ ಯಾಕೆಂದರೆ, ವಸ್ತುವು ಅಸ್ತಿತ್ವದಲ್ಲಿಲ್ಲವೆಂದೂ, ಇರುವುದು ಕೇವಲ ತರಂಗಗಳೆಂದೂ ನಾನು ಹೇಳುತ್ತೇನೆ."

ಯಾವುದನ್ನು ನಾವು ವಸ್ತುವೆಂದು ಅಂದುಕೊಳ್ಳುವೆವೋ, ನಿಜವಾಗಿ ಅದು ವಸ್ತುವಲ್ಲ. ವಸ್ತುವೆಂದರೆ ತರಂಗಗಳು, ಚೈತನ್ಯವಲ್ಲದೆ ಬೇರೇನೂ ಅಲ್ಲ. ಈ ಸಂಪೂರ್ಣ ವಿಶ್ವವು ಒಂದು ತರಂಗ ಪ್ರಕ್ರಿಯೆಯಲ್ಲದೆ ಬೇರೇನೂ ಅಲ್ಲವೆಂದು ಕ್ವಾಂಟಮ್ ಭೌತಶಾಸ್ತ್ರ ಹೇಳುತ್ತದೆ.

ಹೀಗೆ, ವಸ್ತುವು ಅಸ್ತಿತ್ವದಲ್ಲಿಲ್ಲ, ನಾವು ಯಾವುದನ್ನು ನೋಡುವೆವೋ ಅದು ನಿಜವಾಗಿ ಅಸ್ತಿತ್ವದಲ್ಲಿಲ್ಲವೆಂದು ಪ್ರೊಫೆಸರ್ ಡಿ ಹೂರೆಯವರು ಹೇಳಿದರು!

ನೀವು ನಿಮ್ಮದೇ ಶರೀರವನ್ನು ನೋಡಿದರೆ, ಸಂಪೂರ್ಣ ಶರೀರವನ್ನು ಒಂದು ಚಿಕ್ಕ ಪೆಟ್ಟಿಗೆಯಾಗಿ ಕಟ್ಟಿಬಿಡಬಹುದು. ನಿಮ್ಮ ಶರೀರದಲ್ಲಿರುವ ಎಲ್ಲವನ್ನೂ ಕುಗ್ಗಿಸಬಹುದು. ಈ ಶರೀರದಲ್ಲಿರುವ ಘನಪದಾರ್ಥ ಕೇವಲ ಅಷ್ಟು ಮಾತ್ರ, ಉಳಿದುದೆಲ್ಲವೂ ಟೊಳ್ಳು ಮತ್ತು ಖಾಲಿ ಜಾಗ.

ಚರ್ಮದ ಒಂದು ತುಂಡನ್ನು ನೀವು ಸೂಕ್ಷ್ಮದರ್ಶಕದ ಅಡಿಯಲ್ಲಿ ಇಟ್ಟು ನೋಡಿದರೆ, ಅದೊಂದು ಸೊಳ್ಳೆ ಪರದೆಯಂತೆ ಕಾಣಿಸುವುದು. ಅಲ್ಲಿ ಬಹಳಷ್ಟು ಖಾಲಿ ಜಾಗವಿದೆ. ನಮ್ಮ ಶರೀರದ ಸುಮಾರು ೬೦ ಶೇಕಡಾವು ನೀರಿನ ಅಂಶದಿಂದ ಮಾಡಲ್ಪಟ್ಟಿದೆ, ೧೫ ಶೇಕಡಾ ವಾಯು ಅಂಶವಾಗಿದೆ ಮತ್ತು ಉಳಿದುದರಲ್ಲಿ ೯೦ ಶೇಕಡಾವು ಆಕಾಶ ಅಂಶವಾಗಿದೆ.

ಆದುದರಿಂದ, ನಮ್ಮ ಶರೀರವು ಬೇರೆ ಎಲ್ಲದಕ್ಕಿಂತಲೂ ಹೆಚ್ಚು ಆಕಾಶವನ್ನು ಹೊಂದಿದೆ. ನಿಮ್ಮ ಮನಸ್ಸೆಲ್ಲವೂ ಆಕಾಶವಾಗಿದೆ.
ಪರಮಾತ್ಮ ಬುದ್ಧನು ಇದನ್ನೇ ಹೇಳಿದನು, "ಎಲ್ಲವೂ ಏನೂ ಅಲ್ಲ!"

ನಿಮ್ಮ ಶರೀರವು ಏನೂ ಅಲ್ಲ, ನಿಮ್ಮ ಮನಸ್ಸು ಏನೂ ಅಲ್ಲ, ನೀವು ಏನನ್ನು ನೋಡುವಿರೋ ಅದು ಏನೂ ಅಲ್ಲ, ನಾನು ಏನೂ ಅಲ್ಲ, ನೀವು ಏನೂ ಅಲ್ಲ! ನಿಜವಾದುದು ಏನೆಂದರೆ, ಎಲ್ಲವೂ ಕೇವಲ ಕಂಪನಗಳು, ಕೇವಲ ತರಂಗಗಳು. ಸಂಪೂರ್ಣ ವಿಶ್ವವು ಕೇವಲ ತರಂಗಗಳಾಗಿವೆ.

ಪ್ರಾಚೀನ ಗ್ರಂಥವಾದ ಅಷ್ಟಾವಕ್ರ ಗೀತೆಯಲ್ಲಿ, ’ತರಂಗಾಃ ಫೇನಬುದ್‌ಬುದಾಃ’ ಎಂದು ಹೇಳಲಾಗಿದೆ. ಸಂಪೂರ್ಣ ವಿಶ್ವವು ಒಂದು ಸಾಗರದಂತೆ ಮತ್ತು ಪ್ರತಿಯೊಂದು ಜೀವಿಯೂ ಸಾಗರದಲ್ಲಿನ ಒಂದು ಅಲೆಯಂತೆ; ಅಲೆಗಳು ಏಳುತ್ತವೆ ಮತ್ತು ಇಳಿಯುತ್ತವೆ. ಅದೇ ರೀತಿಯಲ್ಲಿ, ಈ ಎಲ್ಲಾ ವರ್ಷಗಳಲ್ಲಿ; ೮೦ ವರ್ಷಗಳು ಅಥವಾ ೯೦ ವರ್ಷಗಳು, ಈ ಎಲ್ಲಾ ಶರೀರಗಳು ಎದ್ದಿವೆ ಮತ್ತು ನಂತರ ಅವುಗಳು ಸಾಗರಕ್ಕೆ ಮರಳಿ ಹೋಗುತ್ತವೆ. ಮತ್ತೆ ಅವುಗಳು ಏಳುತ್ತವೆ ಮತ್ತು ಅವುಗಳು ಮರಳಿ ಹೋಗುತ್ತವೆ.

ವಿಶ್ವವು ಬಿಲಿಯಗಟ್ಟಲೆ ವರ್ಷಗಳಿಂದ ಮುಂದುವರಿಯುತ್ತಿದೆ ಮತ್ತು ೬೦ ವರ್ಷಗಳ, ೮೦ ವರ್ಷಗಳ ಅಥವಾ ೧೦೦ ವರ್ಷಗಳ ಈ ಜೀವನವು ಏನೂ ಅಲ್ಲ. ಅದು ಸಾಗರದಲ್ಲಿನ ಒಂದು ಅಲೆಯಂತೆ.

ಹಲವಾರು ವರ್ಷಗಳಿಂದ ಈ ಅಲೆಗಳು ಏಳುತ್ತಿವೆ ಮತ್ತು ಅದೇ ನೀರಿಗೆ ಮರಳಿ ಹೋಗುತ್ತಿವೆ.

ನೀವು ಎಚ್ಚೆತ್ತುಕೊಂಡು, ಇದೆಲ್ಲವೂ ಏನೂ ಅಲ್ಲ, ಎಲ್ಲವೂ ಏನೂ ಅಲ್ಲವೆಂಬುದನ್ನು ಅರ್ಥ ಮಾಡಿಕೊಂಡಾಗ ನೀವು ಮುಗುಳ್ನಗುವಿರಿ ಮತ್ತು ಅದುವೇ ನಿರ್ವಾಣವೆಂದು ಕರೆಯಲ್ಪಡುವುದು!

ನಿರ್ವಾಣವೆಂದರೇನು? ನಿರ್ವಾಣವೆಂದರೆ, ಎಲ್ಲವೂ ಏನೂ ಅಲ್ಲ! ಎಂದು. ಇದನ್ನು ನೀವು ತಿಳಿದುಕೊಂಡಾಗ, ಅಂತಹ ಮುಕ್ತಿಯು ಬರುತ್ತದೆ. ಇದು ಪ್ರಾಚೀನ ಶಿಕ್ಷಣಗಳ ಸಾರವಾಗಿದೆ. ಟಾವೋ ಎಂದರೆ ಇದುವೇ, ವೇದಾಂತವೆಂದರೆ ಇದುವೇ ಮತ್ತು ಭಗವಾನ್ ಬುದ್ಧನ ಬೋಧನೆಗಳು ಇದುವೇ ಆಗಿದೆ.

ಇವತ್ತು ಬುದ್ಧ ಪೌರ್ಣಿಮೆಯಾಗಿರುವುದರಿಂದ, ನಾನು ನಿಮಗೆ ಭಗವಾನ್ ಬುದ್ಧನ ಜೀವನದ ಬಗ್ಗೆ ಸ್ವಲ್ಪ ಹೇಳಲು ಬಯಸುತ್ತೇನೆ.

ಭಗವಾನ್ ಬುದ್ಧನು ಪ್ರಪಂಚದಲ್ಲಿನ ದುಃಖವನ್ನು ನೋಡಿದಾಗ, ಅವನಂದನು, "ಜೀವನಕ್ಕೆ ಯಾವುದೇ ಅರ್ಥವಿಲ್ಲ. ನಿಮಗೆ ವಯಸ್ಸಾಗಬೇಕಿದ್ದರೆ ಮತ್ತು ನೀವು ಸಾಯಬೇಕಿದ್ದರೆ, ಆಗ ಜೀವಿಸುವುದರಲ್ಲಿ ಅರ್ಥವೇನಿದೆ!"

ಅವನಿಗೆ ಒಬ್ಬ ರೋಗಿಷ್ಠ ವ್ಯಕ್ತಿ, ಒಬ್ಬ ಮೃತ ವ್ಯಕ್ತಿ ಮತ್ತು ಒಬ್ಬ ಸನ್ಯಾಸಿ ಎದುರಾದಾಗ, ಅವನು ತನ್ನ ಅರಮನೆಯನ್ನು ಬಿಟ್ಟು ಹಲವಾರು ವರ್ಷಗಳವರೆಗೆ ಧ್ಯಾನದಲ್ಲಿ ಕುಳಿತನು. ಅವನು ಜ್ಞಾನೋದಯವನ್ನು ಹೊಂದಿದ ಬಳಿಕ, ಏಳು ದಿನಗಳವರೆಗೆ ಅವನು ಒಂದು ಶಬ್ದವನ್ನೂ ಮಾತನಾಡಲಿಲ್ಲ. ಸೂಕ್ಷ್ಮ ಪ್ರಪಂಚದ ದೇವದೂತರು ಮತ್ತು ದೇವತೆಗಳು ಚಿಂತಿತರಾದರು. ಬಹಳ ದೀರ್ಘ ಕಾಲದ ನಂತರ ಬುದ್ಧನು ಭೂಮಿಯ ಮೇಲೆ ಬಂದಿರುವನು, ಅವನು ಯಾಕೆ ಏನನ್ನೂ ಮಾತನಾಡುತ್ತಿಲ್ಲ ಎಂದು ಅವರು ಹೇಳಿದರು.

ಬುದ್ಧನು ಹೇಳಿದನು, "ಹೇಗಿದ್ದರೂ, ಯಾವ ಜನರಿಗೆ ತಿಳಿದಿರುವುದೋ ಅವರಿಗೆ ತಿಳಿದಿದೆ ಮತ್ತು ಯಾರಿಗೆ ತಿಳಿದಿಲ್ಲವೋ ಅವರಿಗೆ, ನಾನು ಮಾತನಾಡುವುದರಿಂದಲೂ ತಿಳಿಯದು. ಹಣ ಮಾಡುವುದರಲ್ಲಿ, ಸಂಬಂಧಗಳನ್ನು ಸರಿಪಡಿಸುವುದರಲ್ಲಿ, ಜಗಳವಾಡುವುದರಲ್ಲಿ, ತಿನ್ನುವುದರಲ್ಲಿ ಮತ್ತು ನಿದ್ರಿಸುವುದರಲ್ಲಿ ಅವರು ಎಷ್ಟೊಂದು ವ್ಯಸ್ತರಾಗಿರುವರೆಂದರೆ, ನಾನು ಹೇಳುವುದರಿಂದ ಯಾವುದೂ ಅವರ ಮನಸ್ಸುಗಳೊಳಕ್ಕೆ ಹೋಗಲಾರದು."

ಹೀಗೆ ಅವನು ಏಳು ದಿನಗಳವರೆಗೆ ಮೌನವನ್ನು ಪಾಲಿಸಿದನು. ಆಗ ಎಲ್ಲಾ ದೇವತೆಗಳು ಮತ್ತು ದೇವದೂತರು, ಗಡಿರೇಖೆಯಲ್ಲಿರುವ ಕೆಲವು ಜನರಿರುವರು ಎಂದು ಹೇಳುವುದರೊಂದಿಗೆ ಬುದ್ಧನೊಂದಿಗೆ ವಾದ ಮಾಡಿದರು. ’ನೀವು ಅವರಿಗೆ ಕೇವಲ ಹೇಳಿದರೆ ಸಾಕು, ಅವರಿಗೆ ಅದು ತಿಳಿಯುತ್ತದೆ! ಸ್ವಲ್ಪ ಕಲ್ಪನೆಯಿರುವ ಮತ್ತು ನಿಜವಾಗಿ ತಿಳಿಯಲು ಬಯಸುವ ಜನರಿದ್ದಾರೆ, ಅವರಿಗಾಗಿ ನೀವು ಮಾತನಾಡಲೇಬೇಕು.’

ನಂತರ ಭಗವಾನ್ ಬುದ್ಧನು ಆ ದಿನದಿಂದ; ಏಳನೆಯ ದಿನದಿಂದ ಮಾತನಾಡಲು ಪ್ರಾರಂಭಿಸಿದನು.

ಏಳನೆಯ ದಿನದಂದು, ಹುಣ್ಣಿಮೆಯ ಬಳಿಕ ಭಗವಾನ್ ಬುದ್ಧನು ಮಾತನಾಡಲು ತೊಡಗಿದನು ಮತ್ತು ಅವನು ಹೇಳಿದುದೇನೆಂದರೆ, ’ಇದೆಲ್ಲವೂ ಏನೂ ಅಲ್ಲ’ ಎಂದು!

ಆದಿಶಂಕರರೂ ಅದನ್ನೇ ಹೇಳಿದರು, ’ನೀವೇನು ನೋಡುತ್ತಿರುವಿರೋ ಅದೆಲ್ಲವೂ ಮಾಯೆ, ಇದು ಮಾಯೆ.’
ಮಾಯೆಯೆಂದರೆ, ಯಾವುದನ್ನು ಅಳತೆ ಮಾಡಲು ಸಾಧ್ಯವಿದೆಯೋ ಮತ್ತು ಯಾವುದನ್ನು ಬದಲಾಯಿಸಲು ಸಾಧ್ಯವಿದೆಯೋ ಅದು. ಯಾವುದೆಲ್ಲಾ ಬದಲಾಗುವುದೋ ಅದು ಮಾಯೆಯಾಗಿದೆ. ನಿಮ್ಮ ಸುತ್ತಲೂ ಎಲ್ಲವೂ ಬದಲಾಗುವುದಿಲ್ಲವೇ?

ಭಗವಾನ್ ಬುದ್ಧನು ಹೇಳಿದನು, ’ಎಲ್ಲವೂ ಶೂನ್ಯ (ಏನೂ ಅಲ್ಲ).’

ಆದಿಶಂಕರರು ಏನನ್ನು ಹೇಳಿದರೋ ಅದು ಸ್ವಲ್ಪ ವ್ಯತ್ಯಸ್ತವಾಗಿದೆ. ಅವರಂದರು, "ಇದೆಲ್ಲವೂ ಸಂಪೂರ್ಣ ಬ್ರಹ್ಮವಾಗಿದೆ, ಇದೆಲ್ಲವೂ ಒಂದು."

ಎಲ್ಲವೂ ಶಕ್ತಿಯ ಮೇಲೆ, ಒಂದು ದೈವತ್ವದ ಮೇಲೆ ಆಧರಿತವಾಗಿದೆ. ನಾವೇನನ್ನು ನೋಡುವೆವೋ ಅದೆಲ್ಲವೂ ಒಂದು ಕನಸಿನಂತೆ.

ನೀವು ಈ ಕೂಡಲೇ ಒಂದು ವಿಷಯವನ್ನು ಅನುಭವಿಸಬೇಕೆಂದು ನಾನು ಬಯಸುತ್ತೇನೆ. ಎಚ್ಚೆತ್ತುಕೊಂಡು ನೋಡಿ, ಈ ಕ್ಷಣದವರೆಗೆ, ನೀವು ಇಲ್ಲಿಗೆ ಬರುವಲ್ಲಿವರೆಗೆ, ಕಳೆದ ೩೦ ವರ್ಷಗಳು, ೫೦ ವರ್ಷಗಳವರೆಗೆ ನಿಮ್ಮ ಜೀವನದಲ್ಲಿ ಏನೇನೆಲ್ಲಾ ಆಗಿದೆಯೋ, ಅದು ಒಂದು ಕನಸಿನಂತೆ ಅಲ್ಲವೇ?

ನಿಮ್ಮ ಮನಸ್ಸನ್ನು ಮುಂದಕ್ಕೆ ಮತ್ತು ಹಿಂದಕ್ಕೆ ತೆಗೆದುಕೊಂಡು ಹೋಗಿ, ಇದು ಮನಸ್ಸಿನ ಫಾಸ್ಟ್‌ಫೋರ್‌ವರ್ಡ್ ಮತ್ತು ರಿವೈಂಡ್ ಮಾಡುವಿಕೆಯಾಗಿದೆ. ನಿಮ್ಮದೇ ಸ್ವಂತ ಯಂತ್ರವನ್ನು ಚಾಲನೆ ಮಾಡಲು ಕಲಿಯಿರಿ.

ಈಗ ಅದನ್ನು ಮುಂದಕ್ಕೆ ತೆಗೆದುಕೊಂಡು ಹೋಗಿ.  ನೀವಿಲ್ಲಿ ಕುಳಿತಿರುವಿರಿ, ನೀವು ಮನೆಗೆ ಮರಳಿ ಹೋಗುವಿರಿ, ಊಟ ಮಾಡುವಿರಿ ಮತ್ತು ನಿದ್ರಿಸುವಿರಿ. ನಾಳೆ ನೀವು ಏಳುವಿರಿ, ನಿಮ್ಮ ಹಲ್ಲುಗಳನ್ನುಜ್ಜುವಿರಿ ಮತ್ತು ನಿಮ್ಮ ದೈನಂದಿನ ಕೆಲಸಗಳನ್ನು ಮಾಡುವಿರಿ. ಮರುದಿನ ಕಳೆಯುವುದು, ಮೂರನೆಯ ದಿನ ಕಳೆಯುವುದು ಮತ್ತು ಜೂನ್ ಬರುವುದು. ನಂತರ ಜುಲೈ, ಅಗಸ್ಟ್, ಸೆಪ್ಟೆಂಬರ್ ಮತ್ತು ಹೊಸ ವರ್ಷದ ಕೂಟ ನಡೆಯುವುದು. ಅದೆಲ್ಲವೂ ಹೋಗುತ್ತದೆ! ಎಲ್ಲಾ ದಿನಗಳು ಹೋಗುತ್ತವೆ. ಅದೊಂದು ಕನಸಿನಂತೆ ಅಲ್ಲವೇ? ನಾನು ನಿಂತುಕೊಂಡು ನಿಮ್ಮೊಂದಿಗೆ ಮಾತನಾಡುತ್ತಿರುವುದು ಒಂದು ಕನಸಾಗಿರುವ ಸಾಧ್ಯತೆಯಿದೆಯೇ? ಇದೊಂದು ವಾಸ್ತವವೆಂಬುದು ನಿಮಗೆ ಹೇಗೆ ಗೊತ್ತು? ಇದೊಂದು ಕನಸಾಗಿರಲೂಬಹುದು.

ವರ್ತಮಾನವು ಒಂದು ಕನಸಾಗಿರಬಹುದು, ವರ್ತಮಾನವನ್ನು ಪ್ರಶ್ನಿಸಿ. ಭವಿಷ್ಯವು ಒಂದು ಕನಸಿನಂತೆ.
ನಿಮ್ಮ ಗಮನವನ್ನು ಪಲ್ಲಟಿಸಿ ಈ ವಾಸ್ತವವನ್ನು ನೋಡಲು ನೀವು ಸಫಲರಾದರೆ, ಇದರ ಮೇಲಿನದನ್ನು ನೀವು ನೋಡುವಿರಿ.

ಇದರ ಮೇಲೆ ಮತ್ತು ಇದನ್ನು ಮೀರಿದುದು ಏನೋ ಇದೆ, ಅದು ಉಳಿಯುತ್ತದೆ, ಅದು ಬಹಳ ಸುಂದರವಾಗಿದೆ, ಅದುವೇ ಆತ್ಮ, ಅದುವೇ ಸತ್ಯ. ಮತ್ತೆ ಅದರಿಂದ ನಿಮಗೆ ನಿಮ್ಮ ಜೀವನದಲ್ಲಿ ಎಂತಹ ಅಸಾಧಾರಣ ಶಕ್ತಿ, ಅಸಾಧಾರಣ ಚೈತನ್ಯ, ಅಸಾಧಾರಣ ಪ್ರೀತಿ ಮತ್ತು ಸೌಂದರ್ಯವನ್ನು ಗಳಿಸಲು ಸಾಧ್ಯವಾಗುವುದೆಂದರೆ, ಯಾವುದಕ್ಕೂ ಅದನ್ನು ಅಲ್ಲಾಡಿಸಲು ಸಾಧ್ಯವಿಲ್ಲ.

ನೀವೇನು ಮಾಡಬೇಕಾಗಿದೆ? ನೀವು ಕೇವಲ ಎಚ್ಚೆತ್ತುಕೊಂಡು ಸ್ವಿಚ್ಚನ್ನು ಆನ್ ಮಾಡಬೇಕಾಗಿದೆ. ಈ ಗುಂಡಿಯನ್ನು ಆರಿಸಿ ಮತ್ತು ಇನ್ನೊಂದನ್ನು ಆನ್ ಮಾಡಿ.

ಪ್ರತಿಯೊಂದು ಕೋನದಲ್ಲಿ ಬೇರೇನೋ ಕಾಣಿಸುವ ಈ ತ್ರೀ ಡಿ ಹಾಲೋಗ್ರಾಂ ಚಿತ್ರಗಳು ನಿಮಗೆ ತಿಳಿದಿವೆಯೇ? ಅಂತಹ ಚಿತ್ರಗಳನ್ನು ನೀವು ನೋಡಿರುವಿರೇ? ಇದನ್ನೇ ನೀವು ಮಾಡಬೇಕಾಗಿರುವುದು. ಒಂದು ಕೋನದಿಂದ ನೀವು ವೈವಿಧ್ಯಮಯ ಪ್ರಪಂಚವನ್ನು ಮತ್ತು ಅದರ ತೊಡಕುಗಳನ್ನು ನೋಡುವಿರಿ. ಇನ್ನೊಂದು ಕೋನದಿಂದ ನೀವೊಂದು ವಿಭಿನ್ನ ಪ್ರಪಂಚವನ್ನು; ನೀವಿಲ್ಲಿ ಏನನ್ನು ನೋಡುವಿರೋ ಅದಕ್ಕಿಂತ ಬಹಳಷ್ಟು ವ್ಯತ್ಯಸ್ತವಾದ ಪ್ರಪಂಚವನ್ನು ನೋಡುವಿರಿ. ಸ್ವಿಚ್ ಆನ್ ಮತ್ತು ಆಫ್ ಮಾಡುವ ಸಾಮರ್ಥ್ಯವನ್ನು; ಎರಡನ್ನೂ ನಾವು ಹೊಂದಿರಬೇಕು. ಅದುವೇ ಆಧ್ಯಾತ್ಮಿಕತೆಯಾಗಿದೆ, ಅದುವೇ ಶಾಂತಿಯಾಗಿದೆ.

ಒಂದು ಕ್ಷಣ ಎಚ್ಚೆತ್ತುಕೊಂಡು ನೋಡಿ, ಇದೆಲ್ಲವೂ ಒಂದು ಕನಸು ಮತ್ತು ಎಲ್ಲವನ್ನೂ ಎಸೆದುಬಿಡಿ. ಕೂಡಲೇ ನೀವು ಸಾರ್ವತ್ರಿಕ ಶಕ್ತಿ; ಬ್ರಹ್ಮ; ಓಂ; ನೀವು ಮಾಡಲ್ಪಟ್ಟಿರುವ ಸತ್ಯದೊಂದಿಗೆ ಜೋಡುತ್ತೀರಿ!

ಹೀಗೆ, ಇವುಗಳು ನಾವು ಜೀವಿಸುವ ಜೀವನದಲ್ಲಿನ ವಿಭಿನ್ನ ಆಯಾಮಗಳಾಗಿವೆ. ನೀವು ಜನರೊಂದಿಗೆ ಕೆಲಸ ಮಾಡಬೇಕಾದಾಗ, ಈ ತತ್ವಜ್ಞಾನವನ್ನು ಉಪಯೋಗಿಸಬೇಡಿ; ಅಂದರೆ ಎಲ್ಲವೂ ಏನೂ ಅಲ್ಲ ಎಂಬುದನ್ನು. ನಿಮಗೆ ನಿಮ್ಮ ವ್ಯವಹಾರವನ್ನು ಮಾಡಲು ಸಾಧ್ಯವಾಗದು! ಹೀಗಿದ್ದರೂ, ಇದನ್ನು ನಿಮ್ಮ ಮನಸ್ಸಿನಲ್ಲಿಡಿ, ಎಲ್ಲವೂ ಏನೂ ಅಲ್ಲ. ಇದು ನಿಮಗೆ ಆಂತರಿಕ ಶಕ್ತಿ, ಅಂತಃಸ್ಫುರಣಾ ಸಾಮರ್ಥ್ಯ, ಸಂತೋಷ, ತೃಪ್ತಿ, ಪ್ರೀತಿ ಮತ್ತು ಸಹಾನುಭೂತಿಗಳನ್ನು ನೀಡುತ್ತದೆ. ಇದು ಮತ್ತೊಂದು ಮಗ್ಗುಲಾಗಿದೆ. ಹಾಗೆ ಮಗ್ಗುಲುಗಳನ್ನು ಬದಲಾಯಿಸಿ ಮತ್ತು ನೀವು ನಿಮ್ಮ ದೈನಂದಿನ ಜೀವನದಿಂದ ಮರಳಿ ಬರುವಾಗ, ಅದರ ಮೇಲೆ ಕೆಲಸ ಮಾಡಿ!

ಪ್ರಶ್ನೆ: ನಾನು ನಿಮಗಾಗಿ ಏನು ಮಾಡಬಹುದು, ಸುಮ್ಮನೆ ನನಗೆ ತಿಳಿಸಿ ಮತ್ತು ನಾನು ಅದನ್ನು ಮಾಡುವೆನು!

ಶ್ರೀ ಶ್ರೀ ರವಿ ಶಂಕರ್: ಸಂತೋಷವಾಗಿರು ಮತ್ತು ಸಂತೋಷವನ್ನು ಹರಡು. ನೀನು ಜ್ಞಾನದಲ್ಲಿ ಆಳವಾಗಿ ಹೋಗಿ, ಪ್ರಪಂಚಕ್ಕೆ ಕೊಡುಗೆಯನ್ನು ನೀಡುವ;  ಸಂತೋಷವನ್ನು, ಜ್ಞಾನವನ್ನು, ವಿವೇಕವನ್ನು ಹೊಮ್ಮುವವರಲ್ಲಿ ಒಬ್ಬನಾಗಬೇಕೆಂದು ನಾನು ಬಯಸುತ್ತೇನೆ. ನಾನು ಬಯಸುವುದು ನೀನು ಇದನ್ನು ಮಾಡಬೇಕೆಂದು.

ಭೂಮಿಯಲ್ಲಿರುವ ಬಿಲಿಯಗಟ್ಟಲೆ ಜನರಲ್ಲಿ, ಕೆಲವರಾದರೂ ಜ್ಞಾನ, ಪ್ರೀತಿ ಮತ್ತು ಸಂತೋಷವನ್ನು ಹೊರಹೊಮ್ಮಿದರೆ, ನಿಮಗೆ ಈ ಭೂಮಿಯನ್ನು ಗುಣಪಡಿಸಲು ಸಾಧ್ಯವಿದೆ. ಇದೊಂದು ಬಹಳವಾಗಿ ಅಗತ್ಯವಿರುವ ಶಮನವಾಗಿದೆ. ಈ ಸಮಯದಲ್ಲಿ, ಈ ಭೂಮಿಗೆ ನೀನು ಬಹಳ ಅಮೂಲ್ಯವಾಗಿರುವೆ. ಸೇವಾ ತಂಡವನ್ನು ಸೇರು ಮತ್ತು ಸ್ವಲ್ಪ ಸೇವೆಯನ್ನು ಮಾಡು.

ಪ್ರಶ್ನೆ: ಒಬ್ಬರು ಮನಸ್ಸನ್ನು ನಿಯಂತ್ರಿಸುವುದು ಹೇಗೆ?

ಶ್ರೀ ಶ್ರೀ ರವಿ ಶಂಕರ್: ನೀನು ಮನಸ್ಸನ್ನು ನಿಯಂತ್ರಿಸಲು ಯಾಕೆ ಬಯಸುವೆ? ಮನಸ್ಸು ಯಾವತ್ತೂ, ತನಗೆ ಎಲ್ಲಿ ಹೆಚ್ಚು ಸಂತೋಷ ಮತ್ತು ಹೆಚ್ಚು ಆನಂದ ಸಿಗುವುದೋ ಅಲ್ಲಿಗೆ ಹೋಗುತ್ತದೆ. ಅದು ಹೋಗಲಿ ಬಿಡು!

ನಿಜವಾದ ಆನಂದವು ಹೊರಗಡೆಯಿಲ್ಲ, ಅದು ಒಳಗಡೆಯಿದೆ ಎಂಬುದು ನಿನಗೆ ಕಂಡುಬರುತ್ತದೆ. ಮನಸ್ಸು ಹೊರಗಡೆ ಎಲ್ಲೆಡೆಯೂ ಹೋಗುವುದು ಮತ್ತು ಅದಕ್ಕೆ ಆನಂದವು ಸಿಗದಿದ್ದಾಗ, ಅದು ಕೊನೆಯದಾಗಿ ಒಳಗೆ ಹೋಗುವುದು, ತನ್ನಿಂತಾನೇ.
ಎಲ್ಲಿ ಪ್ರೇಮವಿರುವುದೋ ಅಲ್ಲಿ ನೀವು ಮನಸ್ಸನ್ನು ನಿಯಂತ್ರಿಸಲು ಪ್ರಯತ್ನಿಸಬೇಕಾದ ಅಗತ್ಯವಿಲ್ಲ. ಎಲ್ಲಿ ಆಸಕ್ತಿಯಿರುವುದೋ, ನೀವು ಮನಸ್ಸನ್ನು ನಿಯಂತ್ರಿಸಬೇಕಾಗಿಲ್ಲ. ನಿಮ್ಮ ಮಗುವನ್ನು ಪ್ರೀತಿಸಲು ನೀವೊಂದು ಪ್ರಯತ್ನ ಮಾಡಬೇಕಾಗುತ್ತದೆಯೇ? ಇಲ್ಲ! ಮಕ್ಕಳಿಗಾಗಿ ಇರುವ ಪ್ರೀತಿಯು ತನ್ನಿಂತಾನೇ ಬರುವಂತಹುದು, ಬಹಳ ಸ್ವಾಭಾವಿಕವಾದುದು.

ಅದೇ ರೀತಿಯಲ್ಲಿ, ಎಲ್ಲವೂ ಖಾಲಿಯಾಗಿ ತೋರುವಾಗ, ಮನಸ್ಸು ಆ ಉನ್ನತ ಜ್ಞಾನ, ವಿವೇಕ ಮತ್ತು ಶಕ್ತಿಯ ಕಡೆಗೆ ಹೋಗುವುದು. ಅದು ಬಹಳ ಸ್ವಾಭಾವಿಕವಾದುದು.

ಪ್ರಶ್ನೆ: ಮನಸ್ಸು ಮತ್ತು ಹೃದಯಗಳು ಒಂದೇ ರೀತಿಯಲ್ಲಿ ಹೇಗೆ ಯೋಚಿಸಬಹುದು?

ಶ್ರೀ ಶ್ರೀ ರವಿ ಶಂಕರ್: ಹೃದಯವು ಯೋಚಿಸುವುದಿಲ್ಲ ಮೈ ಡಿಯರ್, ಅದು ಕೇವಲ ಅನುಭವಿಸುವುದು ಮಾತ್ರ! ಮನಸ್ಸು ಕೇವಲ ಯೋಚಿಸುತ್ತದೆ, ಅದು ಅನುಭವಿಸುವುದಿಲ್ಲ. ಎರಡೂ ಆವಶ್ಯಕ. ಅವುಗಳನ್ನು ಅವುಗಳ ಸ್ಥಾನಗಳಲ್ಲಿ ಇರಿಸು. ನಿನ್ನ ವ್ಯವಹಾರವನ್ನು ನಿನ್ನ ಮನಸ್ಸಿನಿಂದ ಮಾಡು ಮತ್ತು ನಿನ್ನ ಜೀವನವನ್ನು ನಿನ್ನ ಹೃದಯದಿಂದ ಜೀವಿಸು.

ಪ್ರಶ್ನೆ: ಒಬ್ಬ ವ್ಯಕ್ತಿ ಅಥವಾ ಒಬ್ಬ ಸಂಗಾತಿಯನ್ನು ಅವರಿರುವಂತೆಯೇ ಸ್ವೀಕರಿಸುವುದು ಹೇಗೆ?

ಶ್ರೀ ಶ್ರೀ ರವಿ ಶಂಕರ್: ಇದರಲ್ಲಿ ನನಗೆ ಯಾವುದೇ ಅನುಭವವಿಲ್ಲ! ನೀನು ಸುತ್ತ ತಿರುಗಿ, ಬಹಳಷ್ಟು ಸಲಹೆಗಳನ್ನು ನೀಡಬಲ್ಲ ಹಲವರನ್ನು ಕಾಣಬಹುದು ಎಂದು ನನಗನ್ನಿಸುತ್ತದೆ. ಅವರಲ್ಲಿ ಕೇಳು ಮತ್ತು ನಿನಗೆ ಯಾವುದು ಸರಿಹೋಗುವುದೆಂದು ನೋಡು!

ಇಲ್ಲಿಯೇ ವೇದಾಂತವು ಜೀವನಕ್ಕೆ ಪ್ರಾಯೋಗಿಕವಾಗಿ ಬರುವುದು. ಸಂಪೂರ್ಣ ಗತಕಾಲವು ಹೋಗಿಯಾಗಿದೆ, ಅದೊಂದು ಕನಸಿನಂತೆ, ಮುಗಿಯಿತು ಎಂಬುದನ್ನು ನೀನು ನೋಡುವೆ. ಕನಿಷ್ಠಪಕ್ಷ ಈಗಲಾದರೂ ಉತ್ಸಾಹದಿಂದಿರು! ಈ ಕ್ಷಣ!

ನಿಮ್ಮ ಜೀವನದ ಪ್ರತಿ ಕ್ಷಣದಲ್ಲೂ ಉತ್ಸಾಹವನ್ನು ಸೃಷ್ಟಿಸುವುದು ನಿಮಗೆ ಬಿಟ್ಟಿದ್ದು. ನೀವು ಅದನ್ನು ಹೇಗೆ ಮಾಡಬಹುದು? ನೀವು ಭೂತಕಾಲಕ್ಕೆ ಜೋತುಬಿದ್ದಿರುವುದಾದರೆ ನಿಮಗೆ ಅದನ್ನು ಮಾಡಲು ಸಾಧ್ಯವಿಲ್ಲ. ನೀವು ಸುಮ್ಮನೇ ಭೂತಕಾಲವನ್ನು ಒದ್ದೋಡಿಸಬೇಕು. ಅದನ್ನು ಹೋಗಲು ಬಿಡಿ.

ಸರಿ, ನಿನ್ನೆ ಅವರೊಂದು ತಪ್ಪು ಮಾಡಿದರು, ಪರವಾಗಿಲ್ಲ. ಕೆಲವು ಹಿತಕರ ಸಂಗತಿಗಳು ಆಗುತ್ತವೆ, ಕೆಲವು ಅಹಿತಕರ ಸಂಗತಿಗಳು ಆಗುತ್ತವೆ, ಕೆಲವು ಒಳ್ಳೆಯ ಸಂಗತಿಗಳು ಆಗುತ್ತವೆ, ಕೆಲವು ಕೆಟ್ಟ ಸಂಗತಿಗಳು ಆಗುತ್ತವೆ. ಅವುಗಳನ್ನೆಲ್ಲಾ ಎಸೆದುಬಿಡಿ!

ಈ ಕ್ಷಣದಲ್ಲಿ, ನಿನ್ನ ಕೆಲಸವೆಂದರೆ ವಾತಾವರಣದಲ್ಲಿ ಧನಾತ್ಮಕ ಚೈತನ್ಯವನ್ನು ಮತ್ತು ಉತ್ಸಾಹವನ್ನು ಸೃಷ್ಟಿಸುವುದು ಹಾಗೂ ಕುಟುಂಬದಲ್ಲಿ ಹೆಚ್ಚಿನ ಪ್ರೀತಿಯಿರುವಂತೆ ನೋಡಿಕೊಳ್ಳುವುದು. ನಾವೆಲ್ಲರೂ ಇದನ್ನು ಮಾಡಬಲ್ಲೆವೇ? ಇದು ಜ್ಞಾನದಲ್ಲಿ ಜೀವಿಸುವಿಕೆ!

ಆರು ತಿಂಗಳಿಗೊಮ್ಮೆ ಅಥವಾ ವರ್ಷಕ್ಕೊಮ್ಮೆ, ನೀವು ದೂರಲು ಬಯಸಿದರೆ, ಒಂದು ಗಂಟೆ ಕಾಲ ಕುಳಿತುಕೊಂಡು ದೂರಿ ಮತ್ತು ನಂತರ ಅದರ ಬಗ್ಗೆ ಮರೆತುಬಿಡಿ. ಆದರೆ ಅದನ್ನು ಪ್ರತಿದಿನವೂ ಮಾಡಬೇಡಿ.

ನೀವು ಎಲ್ಲಾ ಸಮಯದಲ್ಲೂ ಸವಿ ಸವಿಯಾಗಿ ನಡೆದುಕೊಳ್ಳಬೇಕೆಂದು ನಾನು ಹೇಳುತ್ತಿಲ್ಲ. ಜೀವನವು ಎಲ್ಲದರ ಒಂದು ಸಮ್ಮಿಶ್ರಣವಾಗಿದೆ, ಕೆಲವೊಮ್ಮೆ ಜಗಳಗಳು, ಕೋಪ ಮತ್ತು ಆನಂದ. ಜೀವನವು ವರ್ಣರಂಜಿತವಾಗಿರಬೇಕು; ನೀವು ಜೀವನದಲ್ಲಿ ಎಲ್ಲಾ ಬಣ್ಣಗಳನ್ನು ಹೊಂದಿರಬೇಕು, ಒಂದೇ ಸಮವಸ್ತ್ರವನ್ನು ಹೊಂದಿರಬೇಕಾದ ಅಗತ್ಯವಿಲ್ಲ.

ಹೀಗಿದ್ದರೂ, ಮನಸ್ಸಿನ ಈ ಎಲ್ಲಾ ಚಿಕ್ಕ ಚಂಚಲತೆಗಳಿಂದ ಕ್ಷಿಪ್ರವಾಗಿ ಹೊರಗಿ ಬರಲು ನಿಮಗೆ ಸಾಧ್ಯವಾಗಬೇಕು ಮತ್ತು ಈ ಜ್ಞಾನವು ನಿಮಗೆ ಸಹಾಯ ಮಾಡುವುದು. ಪ್ರತಿದಿನವೂ ಎಚ್ಚೆತ್ತು ಹೇಳಿ, ’ಶಿವೋಹಂ, ನಾನು ಶುದ್ಧವಾದ ಹಾಗೂ ಸುಂದರವಾದ ಪ್ರಜ್ಞೆಯಾಗಿರುವೆನು.’

ಆದುದರಿಂದ ಇವತ್ತು ಬುದ್ಧ ಪೌರ್ಣಿಮೆಗಾಗಿ, ಈ ಸುಂದರವಾದ ಸಂದೇಶವನ್ನು ನಿಮ್ಮೊಂದಿಗೆ ಒಯ್ಯಿರಿ, ’ಎಲ್ಲವೂ ಏನೂ ಅಲ್ಲ.’
’ಅಪ್ಪೊ ದೀಪೋ ಭವ’ , ಅಂದರೆ ನಿಮಗೆ ನೀವೇ ಬೆಳಕಾಗಿರಿ. ನೀವೇ ಪ್ರಕಾಶವಾಗಿರುವಿರಿ. ಆದುದರಿಂದ ಸಂತೋಷವಾಗಿ ಮನೆಗೆ ಮರಳಿ ಹೋಗಿ ಮತ್ತು ಮಲಗುವ ಮುನ್ನ, ಈ ಎಲ್ಲಾ ಜ್ಞಾನದ ಅಂಶಗಳನ್ನು ನೆನಪಿಸಿಕೊಳ್ಳಿ. ಅದನ್ನು ನಿಮ್ಮ ಜಾಗೃತ ಸ್ಮರಣೆಗೆ ಕೆಲವು ಸಾರಿ ತಂದುಕೊಳ್ಳುವುದು ಒಳ್ಳೆಯದು.

ಮುಂದಿನ ಎರಡು ದಿನಗಳು ಕೂಡಾ, ನೀವು ಈ ಜ್ಞಾನವನ್ನು ನೆನಪಿಗೆ ತಂದುಕೊಂಡರೆ, ಅದು ದೀರ್ಘಕಾಲದವರೆಗೆ ನಿಮ್ಮೊಂದಿಗೆ ಉಳಿಯುವುದು.

ಎರಡು ಸಂಗತಿಗಳಿವೆ. ಒಂದನೆಯದು ಶ್ರವಣ, ಅಂದರೆ ಕೇಳಿಸಿಕೊಳ್ಳುವುದು. ಇನ್ನೊಂದು ಮನನ, ಅಂದರೆ ಜ್ಞಾನವನ್ನು ಕೆಲವು ಸಲ ನಿಮ್ಮ ಮನಸ್ಸಿಗೆ, ನಿಮ್ಮ ಜಾಗೃತ ಗಮನಕ್ಕೆ ತರುವುದು. ಎರಡೂ ಮುಖ್ಯ ಮತ್ತು ಬಹಳಷ್ಟು ಸಹಾಯ ಮಾಡುವುವು.

ನೀವು ನೆನಪಿನಲ್ಲಿಟ್ಟುಕೊಳ್ಳಬೇಕಾದುದು ಏನೆಂದರೆ, ಎಲ್ಲವೂ ಏನೂ ಅಲ್ಲ, ಇದೆಲ್ಲವೂ ಒಂದು ಕನಸು. ಆಗಿಹೋದುದು ಒಂದು ಕನಸು, ಭವಿಷ್ಯವು ಒಂದು ಕನಸು, ಈಗ, ವರ್ತಮಾನವು ಒಂದು ಕನಸು; ಪ್ರಪಂಚವು ಕನಸಿನ ಸ್ವಭಾವವುಳ್ಳದ್ದಾಗಿದೆ, ಮತ್ತು ನಿಮಗೆ ನೀವೇ ಬೆಳಕಾಗಿರುವಿರಿ.

ಗುರುವಾರ, ಮೇ 23, 2013

ಧ್ಯಾನವು ಆರೋಗ್ಯವನ್ನು ನಿರೀಕ್ಷೆಗಿಂತ ಹೆಚ್ಚಿನ ಮಟ್ಟದಲ್ಲಿ ಸುಧಾರಿಸುತ್ತದೆ

ಉಲಾನ್ ಬತೋರ್, ಮಂಗೋಲಿಯಾ
೨೩ ಮೇ ೨೦೧೩

ರ್ಟ್ ಆಫ್ ಲಿವಿಂಗ್‌ನ ಕನಸೆಂದರೆ ಒಂದು ಜಾಗತಿಕ ಕುಟುಂಬವನ್ನು ಸೃಷ್ಟಿಸುವುದು. ಸಂಪೂರ್ಣ ಪ್ರಪಂಚವು, ಒಂದು ಕುಟುಂಬದ ಭಾವನೆಯಲ್ಲಿ ಒಂದುಗೂಡಬೇಕು. ಅದೀಗ ಮಂಗೋಲಿಯಾದಲ್ಲಿ ಹೆಚ್ಚು ಹೆಚ್ಚು ಆಗುತ್ತಿರುವುದನ್ನು ನಾನು ನೋಡುತ್ತಿದ್ದೇನೆ.

ಮಂಗೋಲಿಯಾದ ಆರ್ಥಿಕ ಸ್ಥಿತಿಯು ಸಾಕಷ್ಟು ಉತ್ತಮವಾಗಿದೆ, ಅದು ಬಹಳ ಬೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ಈ ಆರ್ಥಿಕ ಅಭಿವೃದ್ಧಿಯೊಂದಿಗೆಯೇ, ನಮ್ಮ ಮಾನವೀಯ ಮೌಲ್ಯಗಳಿಗೆ ಧಕ್ಕೆಯಾಗದಂತೆ ನಾವು ಜಾಗ್ರತೆ ವಹಿಸಬೇಕಾಗಿದೆ.

ಮಂಗೋಲಿಯಾವು ಒಂದು ದೀರ್ಘವಾದ ಆಧ್ಯಾತ್ಮಿಕ ಸಂಪ್ರದಾಯವನ್ನು ಹೊಂದಿದೆ; ದೇಶದಲ್ಲಿ ಆಧ್ಯಾತ್ಮಿಕತೆಯನ್ನು ಕಾಯ್ದುಕೊಳ್ಳುವಂತೆ ನಾವು ನೋಡಿಕೊಳ್ಳಬೇಕಾಗಿದೆ.

ಆಧುನಿಕ ದಿನಗಳ ಸವಾಲುಗಳಾದ ಒತ್ತಡ, ವ್ಯಾಕುಲತೆ ಮತ್ತು ಹಿಂಸೆಗಳನ್ನು ತೊಡೆದುಹಾಕಬೇಕು. ಪ್ರಪಂಚದ ಈ ಭಾಗದಲ್ಲಿ ಅವುಗಳು ಬೆಳೆಯಲು ನಾವು ಬಿಡಬಾರದು. ಸಮಾಜವು ಹೆಚ್ಚು ಬಲಶಾಲಿಯಾದಂತೆ ಮತ್ತು ಆರ್ಥಿಕವಾಗಿ ಸಮೃದ್ಧವಾದಂತೆ, ಸವಾಲುಗಳು ಮತ್ತು ಅಪರಾಧದ ವೇಗವು ಹೆಚ್ಚಾಗುತ್ತದೆ. ಅಮೇರಿಕಾದಲ್ಲಿ ಏನಾಗುತ್ತಿದೆಯೆಂಬುದು ನಿಮಗೆ ಕಾಣಿಸುತ್ತಿದೆಯೇ? ಪ್ರಪಂಚದಲ್ಲಿಯೇ ಅತ್ಯಂತ ಹೆಚ್ಚು ಅಭಿವೃದ್ಧಿ ಹೊಂದಿದ ದೇಶದಲ್ಲಿ ಹಿಂಸಾಚಾರದ ಹಲವಾರು ಘಟನೆಗಳು ನಡೆಯುತ್ತಿವೆ. ಕಳೆದ ಒಂದು ವರ್ಷದಲ್ಲಿ ಅಮೇರಿಕಾದಲ್ಲಿ ಒಂದು ಕೋಟಿ ಹಿಂಸಾಚಾರದ ಘಟನೆಗಳು ದಾಖಲಾಗಿವೆ.

ಪ್ರಪಂಚದಾದ್ಯಂತ ಮತ್ತು ವಿಶೇಷವಾಗಿ ಸಂಯುಕ್ತ ಸಂಸ್ಥಾನಗಳಲ್ಲಿ, ಆರ್ಟ್ ಆಫ್ ಲಿವಿಂಗ್ ಒಂದು ಅಹಿಂಸಾ ಅಭಿಯಾನವನ್ನು ಪ್ರಾರಂಭಿಸಿದೆ. ಅಹಿಂಸೆ ಮತ್ತು ಸಹಾನುಭೂತಿಗಳ ಆ ಮೌಲ್ಯಗಳನ್ನು ನಾವು ನಮ್ಮ ಸಮಾಜದಲ್ಲಿ ಮತ್ತು ಮಂಗೋಲಿಯಾದಲ್ಲಿ ಕೂಡಾ ಹೆಚ್ಚು ಹೆಚ್ಚು ತರಬೇಕಾಗಿದೆ.

ನಮಗೆ ಮಾಡಲು ಹಲವಾರು ಕೆಲಸಗಳಿರುವಾಗ, ಸ್ವಲ್ಪವೇ ಸ್ವಲ್ಪ ಸಮಯವಿರುವಾಗ ಮತ್ತು ಶಕ್ತಿಯಿಲ್ಲದಿರುವಾಗ, ಒತ್ತಡವು ಸ್ವಾಭಾವಿಕವಾಗಿದೆ.

ಇವತ್ತಿನ ಪ್ರಪಂಚದಲ್ಲಿ, ನಮಗೆ ನಮ್ಮ ಅಗತ್ಯಗಳನ್ನು ಕಡಿಮೆಗೊಳಿಸಲು ಸಾಧ್ಯವಿಲ್ಲ, ನಾವು ಮಾಡಬೇಕಾಗಿರುವುದು ಏನೆಂದರೆ, ನಮ್ಮ ಚೈತನ್ಯದ ಮಟ್ಟವನ್ನು ಹೆಚ್ಚಿಸುವುದು. ನಾವು ನಮ್ಮ ಅಭ್ಯಾಸಗಳನ್ನು ಬದಲಾಯಿಸಿದಾಗ; ನಾವು ಸರಿಯಾದ ಮತ್ತು ಆರೋಗ್ಯಕರವಾದ ಆಹಾರವನ್ನು ಸೇವಿಸುವಾಗ, ಒಳ್ಳೆಯ ವಿಶ್ರಾಂತಿಯನ್ನು ತೆಗೆದುಕೊಳ್ಳುವಾಗ ಮತ್ತು ಸಕಾರಾತ್ಮಕವಾಗಿ ಯೋಚಿಸುವಾಗ ಚೈತನ್ಯದ ಮಟ್ಟವು ಹೆಚ್ಚುತ್ತದೆ. ನೀವು ಕುಳಿತುಕೊಂಡು ಅರ್ಧ ಗಂಟೆ ಅಥವಾ ಹತ್ತು ನಿಮಿಷಗಳಾದರೂ ಕೇವಲ ನಕರಾತ್ಮಕವಾಗಿ ಯೋಚಿಸಿದರೆ, ದಿನಪೂರ್ತಿ ನಿಮ್ಮನ್ನು ಬಳಲಿಸಲು ಅದು ಸಾಕು.

ಆರ್ಟ್ ಆಫ್ ಲಿವಿಂಗ್ ಎಂದರೆ, ನಕಾರಾತ್ಮಕ ಯೋಚನೆಯಿಂದ ಸಕಾರಾತ್ಮಕ ಯೋಚನೆಗೆ, ಒಂದು ದೂರುವ ಮನೋಭಾವದಿಂದ ಒಂದು ಸಹಾನುಭೂತಿಯುಳ್ಳ ಮನೋಭಾವಕ್ಕೆ, ಒಂದು ಒತ್ತಡಭರಿತ ಮುಖದಿಂದ ಒಂದು ಹಸನ್ಮುಖ ಮುಖಕ್ಕೆ, ಒತ್ತಡದಿಂದ ಪ್ರಶಾಂತತೆಗೆ ಬದಲಾಗುವುದಾಗಿದೆ. ನಿಮ್ಮ ಉಸಿರಾಟದ ಕಡೆಗೆ ಗಮನ ನೀಡುವುದರಿಂದ ಮತ್ತು ಧ್ಯಾನದಿಂದ ಇದನ್ನು ಮಾಡಬಹುದಾಗಿದೆ.

ಇವತ್ತು, ಧ್ಯಾನ ಮತ್ತು ಸುದರ್ಶನ ಕ್ರಿಯೆಯು ಒಬ್ಬರ ಗ್ರಹಿಕೆಯನ್ನೂ ಮೀರಿ ಆರೋಗ್ಯವನ್ನು ಸುಧಾರಿಸಬಲ್ಲದೆಂದು ವಿಜ್ಞಾನಿಗಳು ಸಾಬೀತುಪಡಿಸಿದ್ದಾರೆ.

ಇತ್ತೀಚೆಗೆ, ನೋರ್ವೇಯ ಓಸ್ಲೋ ವಿಶ್ವವಿದ್ಯಾಲಯದಲ್ಲಿನ ಒಬ್ಬರು ವಿಜ್ಞಾನಿಯು ಒಂದು ಸಂಶೋಧನೆಯನ್ನು ನಡೆಸಿದರು. ಯಾರಾದರೂ ಈ ತಂತ್ರಗಳನ್ನು ಎರಡು ದಿನಗಳ ಕಾಲ ಅಭ್ಯಾಸ ಮಾಡಿದರೂ ಕೂಡಾ, ಅದು ಒಬ್ಬ ವ್ಯಕ್ತಿಯ ವರ್ಣ ತಂತು(ಡಿ.ಎನ್.ಎ.), ವಂಶವಾಹಿ(ಜೀನ್‌)ಗಳ ಮೇಲೆ ಪ್ರಭಾವ ಬೀರುತ್ತದೆ ಎಂಬುದನ್ನು ಅವರು ಕಂಡುಹಿಡಿದರು. ನಮ್ಮ ಶರೀರದಲ್ಲಿರುವ ಸುಮಾರು ೩೦೦ ಜೀನ್‌ಗಳು ಕ್ಯಾನ್ಸರ್ ಮೊದಲಾದ ರೋಗಗಳಿಗೆ ಕಾರಣವೆಂದೂ, ಒಬ್ಬರು ಧ್ಯಾನ ಮಾಡುವಾಗ ಈ ಜೀನ್‌ಗಳು ಮಟ್ಟಹಾಕಲ್ಪಡುತ್ತವೆಯೆಂದೂ ಅವರು ಹೇಳಿದರು. ಖಂಡಿತಾ, ತಾವು ಹೇಗೆ ಶಾರೀರಿಕವಾಗಿ, ಮಾನಸಿಕವಾಗಿ, ಭಾವನಾತ್ಮಕವಾಗಿ ಮತ್ತು ಆಧ್ಯಾತ್ಮಿಕವಾಗಿ ಲಾಭಪಡೆದಿರುವೆವು ಎಂದು ವರದಿ ಮಾಡುವ ಪ್ರಪಂಚದಾದ್ಯಂತದ ಲಕ್ಷಗಟ್ಟಲೆ ಜನರ ಪ್ರತಿದಿನದ ಅನುಭವ ಕೂಡಾ ಇದಾಗಿದೆ; ತಮ್ಮ ಆರೋಗ್ಯವು ಹೇಗೆ ಸುಧಾರಿಸಿದೆ, ಜನರೊಂದಿಗಿನ ತಮ್ಮ ಸಂಬಂಧಗಳು ಹೇಗೆ ಸುಧಾರಿಸಿವೆ ಮತ್ತು ಇನ್ನೂ ಬಹಳಷ್ಟು.

ಹಾಗಾಗಿ, ನಾವು ನಮ್ಮ ಬೇರುಗಳನ್ನು ಆಳವಾಗಿಸಬೇಕು ಮತ್ತು ನಮ್ಮ ದೃಷ್ಟಿಯನ್ನು ವಿಶಾಲಗೊಳಿಸಬೇಕು. ಈ ಭೂಮಿಯ ಮೇಲೆ ನಾವಿರುವ ಜೀವನದ ಅಲ್ಪಾವಧಿಯಲ್ಲಿ ನಾವು ಹೆಚ್ಚು ಮುಗುಳ್ನಗಬೇಕು ಮತ್ತು ಸಂತೋಷವನ್ನು ಹರಡಬೇಕು.

ಮೂರು ವರ್ಷಗಳ ಮೊದಲು ನಾನು ಇಲ್ಲಿಗೆ ಬಂದಾಗ, ಈ ದೇಶದ ಜಿ.ಡಿ.ಪಿ.ಯು (ಗ್ರಾಸ್ ಡೊಮೆಸ್ಟಿಕ್ ಪ್ರೊಡಕ್ಟ್ - ಸಮಗ್ರ ದೇಶೀಯ ಉತ್ಪನ್ನ) ಖಂಡಿತವಾಗಿಯೂ ಮೇಲಕ್ಕೆ ಹೋಗುವುದೆಂದು ನಾನು ಹೇಳಿದ್ದೆನು. ಈಗ, ಅದು ನಿಜವಾಗಿಯೂ ಮೇಲಕ್ಕೆ ಹೋಗಿದೆಯೆಂಬುದನ್ನು ತಿಳಿಯಲು ನನಗೆ ಬಹಳ ಸಂತೋಷವಾಗುತ್ತದೆ. ಇವತ್ತು, ಸಂಯುಕ್ತ ರಾಷ್ಟ್ರದಿಂದ ಬಳಸಲಾಗುತ್ತಿರುವ ಇನ್ನೊಂದು ಪದವಿದೆ, ಜಿ.ಡಿ.ಹೆಚ್., ಅಂದರೆ, ಗ್ರಾಸ್ ಡೊಮೆಸ್ಟಿಕ್ ಹ್ಯಾಪ್ಪಿನೆಸ್ (ಸಮಗ್ರ ದೇಶೀಯ
ಸಂತೋಷ); ಅದು ಕೂಡಾ ಮಂಗೋಲಿಯಾದಲ್ಲಿ ಮೇಲಕ್ಕೆ ಏರಬೇಕು.

ಈ ದೇಶದಲ್ಲಿ ವಿದ್ಯಾವಂತ ಜನರ ಸಂಖ್ಯೆಯು ಬಹಳ ಹೆಚ್ಚಾಗಿರುವುದರಿಂದ, ಜನರಿಗೆ ಆಧ್ಯಾತ್ಮಿಕ ಮೌಲ್ಯಗಳಲ್ಲಿ ಶಿಕ್ಷಣ ನೀಡಲು ಸಾಧ್ಯವಿದೆ. ಇವತ್ತು, ಭೂತಾನವು ಪ್ರಪಂಚದಲ್ಲಿ ಅತ್ಯಂತ ಸಂತೋಷವಿರುವ ದೇಶವಾಗಿದೆ. ಮಂಗೋಲಿಯಾವು ಭೂತಾನದೊಂದಿಗೆ ಸ್ಪರ್ಧಿಸಬೇಕೆಂದು ನಾನು ಆಶಿಸುತ್ತೇನೆ. ಅದು ಖಂಡಿತವಾಗಿ ಸ್ಪರ್ಧಿಸಿ, ಒಂದು ಉನ್ನತ ಮಟ್ಟದ ಜಿ.ಡಿ.ಹೆಚ್. ನ್ನು ತಲಪಲು ಸಾಧ್ಯವಿದೆ. ಇದನ್ನು ನಾವು ನಮ್ಮ ಗುರಿಯಾಗಿ ಇರಿಸೋಣ.

ಇಲ್ಲಿರುವ ನಾವೆಲ್ಲರೂ ಒಂದು ವಚನಬದ್ಧತೆಯನ್ನು ತೆಗೆದುಕೊಳ್ಳಬೇಕೆಂದು ಕೇಳಲು ನಾನು ಬಯಸುತ್ತೇನೆ. ಈ ದೇಶದಲ್ಲಿ ಸೆರೆಮನೆಗಳು ಮತ್ತು ಆಸ್ಪತ್ರೆಗಳು ಖಾಲಿಯಾಗಿರುವಂತೆ ನಾವು ನೋಡಿಕೊಳ್ಳಬೇಕು. ನಾವು ಆ ಆದರ್ಶವನ್ನು ಹೊಂದೋಣ ಮತ್ತು ಆ ನಿಟ್ಟಿನಲ್ಲಿ ಕೆಲಸ ಮಾಡೋಣ.

ಇದನ್ನು ಸಾಧಿಸಲು, ನಾವೆಲ್ಲರೂ ಸ್ವಲ್ಪ ಸಮಾಜ ಸೇವೆಯನ್ನು ಮಾಡಬೇಕು. ನೀವು ಮಹತ್ವಾಕಾಂಕ್ಷಿಗಳಾಗಿರಬೇಕು, ಆದರೆ ಲೋಭಿಗಳಾಗಿರಬಾರದೆಂದು ನಾನು ಇಚ್ಛಿಸುತ್ತೇನೆ. ಜನರು ಲೋಭಿಗಳಾಗುವಾಗ, ಭ್ರಷ್ಟಾಚಾರವು ಹೆಚ್ಚಾಗುತ್ತದೆ.

ಎಲ್ಲಿ ಆತ್ಮೀಯತೆಯು ಕೊನೆಯಾಗುವುದೋ ಅಲ್ಲಿ ಭ್ರಷ್ಟಾಚಾರವು ಪ್ರಾರಂಭವಾಗುತ್ತದೆ. ಯಾವುದೇ ಕಾನೂನಿಗೂ ಭ್ರಷ್ಟಾಚಾರವನ್ನು ತಡೆಯಲು ಸಾಧ್ಯವಿಲ್ಲ. ಭ್ರಷ್ಟಾಚಾರವನ್ನು ಯಾವುದು ನಿಜಕ್ಕೂ ತಡೆಯಬಲ್ಲದೆಂದರೆ, ಅದು ಆಧ್ಯಾತ್ಮವಾಗಿದೆ. ಜನರಲ್ಲಿ ಒಂದು ಆತ್ಮೀಯತೆಯ ಭಾವವಿರುವಾಗ ಭ್ರಷ್ಟಾಚಾರವು ಕೊನೆಯಾಗುವುದು. ಅಪರಾಧ ಮತ್ತು ಭ್ರಷ್ಟಾಚಾರಗಳಿಗೆ ಒಂದು ನಿಜವಾದ ಅಪರಾಧಿಯಿದೆ, ಅದು, ಮಾದಕದ್ರವ್ಯ ಮತ್ತು ಮದ್ಯಗಳ ವ್ಯಸನ. ನಮ್ಮ ಯುವಜನತೆಯು ಸಿಗರೇಟ್, ಮದ್ಯ ಅಥವಾ ಮಾದಕವಸ್ತುಗಳ ವ್ಯಸನಕ್ಕೆ ಬೀಳದಂತೆ ನಾವು ನೋಡಿಕೊಳ್ಳಬೇಕು, ಯಾಕೆಂದರೆ ಇದು ಮಾನವ ಜೀವನವನ್ನು ನಾಶಪಡಿಸುತ್ತದೆ.

ಜನರು ಮಾದಕದ್ರವ್ಯಗಳ ಪ್ರಭಾವದಡಿಯಲ್ಲಿರುವಾಗ, ತಾವೇನು ಮಾಡುತ್ತಿರುವೆವೆಂಬುದು ಅವರಿಗೆ ತಿಳಿದಿರುವುದಿಲ್ಲ. ಅದಕ್ಕಾಗಿಯೇ ಅವರು ಅಪರಾಧಗಳನ್ನೆಸಗುವುದು. ಆದುದರಿಂದ, ತಾಯಿ ಮತ್ತು ಸಹೋದರಿಯರಾಗಿ, ಬುದ್ಧಿವಂತ ಪುರುಷರಾಗಿ, ನೀವೆಲ್ಲರೂ, ಆರೋಗ್ಯ, ಸಂಪತ್ತು ಮತ್ತು ಮನಸ್ಸುಗಳಿಗೆ ಹಾನಿಕಾರಕವಾಗಿರುವ ಈ ಮಾದಕದ್ರವ್ಯಗಳಲ್ಲಿ ಯಾವುದಕ್ಕೇ ಆದರೂ ನಮ್ಮ ಯುವಪೀಳಿಗೆಯು ವ್ಯಸನಕ್ಕೆ ಬೀಳುವುದನ್ನು ತಡೆಯಬೇಕು.

ಮಾಲಿನ್ಯವೆಂಬುದು ಗಮನದ ಆವಶ್ಯಕತೆಯಿರುವ ಇನ್ನೊಂದು ಕ್ಷೇತ್ರವಾಗಿದೆ. ಪ್ರಪಂಚದ ನಾನಾ ಭಾಗಗಳಲ್ಲಿ ಮಾಲಿನ್ಯವು ಹೆಚ್ಚಾಗುತ್ತಿದೆ. ಮಂಗೋಲಿಯಾವು ಇನ್ನೂ ಬಹಳ ಶುದ್ಧವಾಗಿದೆ; ನೆಲ, ಜಲ, ಇಲ್ಲಿರುವ ಎಲ್ಲವೂ ಶುದ್ಧವಾಗಿದೆ. ಇಲ್ಲಿನ ವಾಯು, ನೆಲ, ಜಲ ಮತ್ತು ವಾತಾವರಣದ ಶುದ್ಧತೆಯು ಕಾಪಾಡಲ್ಪಡುವಂತೆ ದಯವಿಟ್ಟು ನೋಡಿಕೊಳ್ಳಿ.

ಈ ನೆಲವನ್ನು ನಾವು ಭೂಮಿಯ ಮೇಲಿನ ಒಂದು ಪರಿಸರ ಸ್ವರ್ಗವನ್ನಾಗಿ ಇರಿಸೋಣ. ಆಹಾರವನ್ನು ಬೆಳೆಯಲು ನಾವು ಮಣ್ಣಿಗೆ ಹಾನಿಕಾರಕ ರಾಸಾಯನಿಕಗಳನ್ನು ಹಾಕದಂತೆ ಜಾಗ್ರತೆ ವಹಿಸೋಣ. ಯಾವುದೇ ಕೀಟನಾಶಕ ಔಷಧಿಗಳಿಲ್ಲದೆಯೇ, ಯಾವುದೇ ರಾಸಾಯನಿಕ ಗೊಬ್ಬರಗಳಿಲ್ಲದೆಯೇ; ಸಾವಯವ ಕೃಷಿ ಅಥವಾ ನೈಸರ್ಗಿಕ ಕೃಷಿಯ ಮೂಲಕ ನಾವು ಆಹಾರವನ್ನು ನೈಸರ್ಗಿಕವಾಗಿ ಬೆಳೆಯಬೇಕು.  

ಈ ಜ್ಞಾನವನ್ನು, ಈ ತಂತ್ರಜ್ಞಾನವನ್ನು ಮಂಗೋಲಿಯಾಕ್ಕೆ ತರಲು ಏನೆಲ್ಲಾ ಬೇಕೋ ಅದನ್ನೆಲ್ಲಾ ಆರ್ಟ್ ಆಫ್ ಲಿವಿಂಗ್ ಮಾಡುವುದು. ಭಾರತ ಮತ್ತು ಪ್ರಪಂಚದ ಇತರ ಸ್ಥಳಗಳಲ್ಲಿ ನಾವು ಸಾವಯವ ಕೃಷಿ ಮಾಡುತ್ತಿದ್ದೇವೆ. ಇದರ ಮೇಲೆ ನಾವು ಬಹಳಷ್ಟು ಸಂಶೋಧನೆಗಳನ್ನು ಮಾಡಿದ್ದೇವೆ ಮತ್ತು ನಾವು ಇದನ್ನು ಮಂಗೋಲಿಯಾದ ರೈತರೊಂದಿಗೆ ಹಂಚಿಕೊಳ್ಳಲು ಬಯಸುತ್ತೇವೆ.

ಆರ್ಟ್ ಆಫ್ ಲಿವಿಂಗ್ ಭಾರತದಲ್ಲಿ ೨೦೦ ಕ್ಕೂ ಹೆಚ್ಚು ಶೈಕ್ಷಣಿಕ ಸಂಸ್ಥೆಗಳನ್ನು ಹೊಂದಿದೆ. ನಾವು ಒಂದು ವಿಶ್ವವಿದ್ಯಾಲಯವನ್ನು ಮತ್ತು ಮಾಸ್ಟರ್ ಆಫ್ ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್ (ಎಮ್.ಬಿ.ಎ.) ಕೋರ್ಸುಗಳನ್ನು ನೀಡುವ ಎರಡು ಕಾಲೇಜುಗಳನ್ನು ಹೊಂದಿದ್ದೇವೆ. ಭಾರತಕ್ಕೆ ಬಂದು ಅಧ್ಯಯನ ನಡೆಸಲು ಇಚ್ಛಿಸುವ ಮಂಗೋಲಿಯಾದ ವಿದ್ಯಾರ್ಥಿಗಳಿಗೆ ಹತ್ತು ಎಮ್.ಬಿ.ಎ. ಸ್ಥಾನಗಳನ್ನು ಕಾಯ್ದಿರಿಸುವಂತೆ ನಾನು ಭಾರತದಲ್ಲಿನ ನಮ್ಮ ಉಪಕುಲಪತಿಗಳಲ್ಲಿ ವಿನಂತಿಸುವೆನು (ನಮ್ಮಲ್ಲಿರುವುದು ಸೀಮಿತವಾದ ಸ್ಥಾನಗಳು; ಈ ಕಾಲೇಜಿನಲ್ಲಿರುವುದು ಕೇವಲ ೧೮೦ ಸ್ಥಾನಗಳು).

ನಮ್ಮ ಕಾಲೇಜಿನಲ್ಲಿ ಕಲಿಯಲು ಇಚ್ಛಿಸುವ ನಿಮ್ಮ ಸ್ನೇಹಿತರಿಗೆ ಮತ್ತು ವಿದ್ಯಾರ್ಥಿಗಳಿಗೆ ನೀವಿದನ್ನು ಹೇಳಬಹುದು; ಅರ್ಜಿ ಸಲ್ಲಿಸಲು ಅವರಿಗೆ ಸುಸ್ವಾಗತವಿದೆ.

ಇವತ್ತು ಬೆಳಗ್ಗೆ ನಾನು ಮಂಗೋಲಿಯಾದ ಮಾನ್ಯ ಪ್ರಧಾನ ಮಂತ್ರಿಯವರನ್ನು ಭೇಟಿಯಾದೆ. ನಾವಿಲ್ಲಿ ಒಂದು ಕಾಲೇಜು ಅಥವಾ ಶಾಲೆಯನ್ನು; ಯಾವುದರ ಆವಶ್ಯಕತೆಯಿದೆಯೋ ಅದನ್ನು ಶುರು ಮಾಡಲು ಇಚ್ಛಿಸುತ್ತೇವೆಂದು ನಾನು ಅವರಿಗೆ ಹೇಳಿದೆ. ಶಾಲೆಯನ್ನು ತೆರೆದು, ಮಂಗೋಲಿಯಾದ ಈ ಯೋಜನೆಯಲ್ಲಿ ಭಾಗಿಯಾಗಲು ಆಸಕ್ತಿಯಿರುವವರೆಲ್ಲವೂ ನಿಮ್ಮ ಹೆಸರು ಮತ್ತು ಸಂಪರ್ಕ ಸಂಖ್ಯೆಯನ್ನು ನೀಡಬೇಕೆಂದು ನಾನು ಆಹ್ವಾನ ನೀಡುತ್ತೇನೆ. ನಾವೊಂದು ಸಮಿತಿಯನ್ನು ರೂಪಿಸಿ, ವಿವಿಧ ಪ್ರಾಂತ್ಯಗಳಲ್ಲಿ ಒಂದೆರಡು ಶಾಲೆಗಳನ್ನು ಶುರು ಮಾಡೋಣ. ಅವುಗಳು ಪೌರಾತ್ಯ ಮತ್ತು ಪಾಶ್ಚಾತ್ಯಗಳಲ್ಲಿ ಅತ್ಯುತ್ತಮವಾದ, ಉತ್ತರ ಮತ್ತು ದಕ್ಷಿಣಗಳಲ್ಲಿ ಅತ್ಯುತ್ತಮವಾದುದನ್ನು ನೀಡುವುವು ಮತ್ತು ಒಂದು ಜಾಗತಿಕ ಶಿಕ್ಷಣ ಕೇಂದ್ರವನ್ನು ಸೃಷ್ಟಿಸುವುವು.

ಜೀವನವು ಒಂದು ವೃಕ್ಷದಂತೆ. ಹೇಗೆ ಬೇರುಗಳು ಹಳತು ಮತ್ತು ಗೆಲ್ಲುಗಳು ಹೊಸತಾಗಿರುತ್ತವೆಯೋ, ಅದೇ ರೀತಿಯಲ್ಲಿ, ಜೀವನಕ್ಕೆ ಪ್ರಾಚೀನ ಜ್ಞಾನ ಮತ್ತು ಆಧುನಿಕ ವೈಜ್ಞಾನಿಕ ಜ್ಞಾನ, ಎರಡೂ ಜೊತೆಯಲ್ಲಿ ಬೇಕಾಗಿದೆ.

ಹಾಗೆಯೇ, ಮಂಗೋಲಿಯಾದಲ್ಲಿ ತಲೆಗೆ ಮಸಾಜ್ ಮಾಡುವ ಒಂದು ವಿಶೇಷ ತಂತ್ರವಿದೆ ಎಂಬುದನ್ನು ನಾನು ತಿಳಿದುಕೊಂಡೆ.

ಇದು ಜನರಿಗೆ ಹಿತಕರವಾದ ಅನುಭವವನ್ನು ನೀಡುತ್ತದೆ. ಇದರ ಬಗ್ಗೆ ಪ್ರಪಂಚಕ್ಕೆ ಚೆನ್ನಾಗಿ ತಿಳಿದಿಲ್ಲ. ಈ ಜ್ಞಾನವನ್ನು ಹೆಚ್ಚು ಜನಪ್ರಿಯಗೊಳಿಸಲು, ನಾನು ಇದನ್ನು ಭಾರತ, ಅಮೇರಿಕಾ ಮತ್ತು ಪ್ರಪಂಚದಾದ್ಯಂತ ತೆಗೆದುಕೊಂಡುಹೋಗಲು ಬಯಸುತ್ತೇನೆ; ಆಯುರ್ವೇದ, ಆಕ್ಯುಪಂಕ್ಚರ್ ಮತ್ತು ಆಸ್ಟಿಯೋಪತಿಯೊಂದಿಗೆ ನಾವೇನು ಮಾಡಿರುವೆವೋ ಹಾಗೆಯೇ. ಇದೊಂದು ಬಹಳ ಒಳ್ಳೆಯ ಕೆಲಸವಾಗಬಹುದು.

ಮನುಕುಲಕ್ಕೆ ಲಾಭವುಂಟುಮಾಡುವ ಮಂಗೋಲಿಯಾದ ಸಾಂಪ್ರದಾಯಿಕ ಔಷಧಿ ಮತ್ತು ಔಷಧೀಯ ತಂತ್ರಗಳು ಹರಡಬೇಕು ಮತ್ತು ಎಲ್ಲೆಡೆಗೂ ಕೊಂಡೊಯ್ಯಲ್ಪಡಬೇಕು. ಹಾಗಾಗಿ, ಅಂತಹ ವೈದ್ಯರನ್ನು ಭಾರತಕ್ಕೆ ಬರುವಂತೆ ಆಹ್ವಾನಿಸಲು ನಾನು ಬಯಸುತ್ತೇನೆ. ಆರ್ಟ್ ಆಫ್ ಲಿವಿಂಗ್‌ನಲ್ಲಿ, ಈ ಚಿಕಿತ್ಸೆಗಳ ಸಾಂಪ್ರದಾಯಿಕ ವ್ಯವಸ್ಥೆಯ ಬಗ್ಗೆ ನಾವು ಏನನ್ನಾದರೂ ಮಾಡಲು ಬಯಸುತ್ತೇವೆ.

ಪ್ರಶ್ನೆ: ನಮ್ಮ ಆಂತರಿಕ ಪಯಣ ಮತ್ತು ಹೊರ ಜಗತ್ತಿನ ಘಟನೆಗಳನ್ನು ಸೇರಿಸುವುದು ಹೇಗೆ?

ಶ್ರೀ ಶ್ರೀ ರವಿ ಶಂಕರ್: ಆಂತರಿಕ ಪಯಣ ಮತ್ತು ಹೊರ ಜಗತ್ತಿನ ಘಟನೆಗಳು ಪೂರಕವಾಗಿವೆ. ನೀವು ಒಳಗಡೆ ಸಂತೋಷವಾಗಿದ್ದರೆ, ಹೊರಗಡೆ ಕ್ರಿಯಾತ್ಮಕವಾಗಿ ಕೆಲಸ ಮಾಡಲು ನಿಮಗೆ ಸಾಧ್ಯವಾಗುತ್ತದೆ. ನೀವು ಹೆಚ್ಚು ಕ್ರಿಯಾತ್ಮಕವಾದಷ್ಟೂ, ವಿಶ್ರಾಂತಿ ಹಾಗೂ ಧ್ಯಾನಗಳು ಆಳವೂ, ಉತ್ತಮವೂ ಆಗಿರುತ್ತವೆ. ನೀವು ಧ್ಯಾನ ಮಾಡುವಾಗ ಆನಂದವು ಹೆಚ್ಚಾಗುತ್ತದೆ.

ಯಾವ ಜನರು ಸೋಮಾರಿಗಳಾಗಿರುವರೋ, ಅವರು ಸಂತೋಷವಾಗಿರಲು ಸಾಧ್ಯವಿಲ್ಲ. ಯಾವ ಜನರು ಕ್ರಿಯಾತ್ಮಕವಾಗಿರುವರೋ, ಅವರು ಕೂಡಾ ಸಂತೋಷವಾಗಿರಬೇಕೆಂದೇನೂ ಇಲ್ಲ. ಕ್ರಿಯಾಶೀಲತೆಯು ಆಂತರಿಕ ಮೌನದೊಂದಿಗೆ ಸೇರಿರಬೇಕು. ಆದುದರಿಂದ, ಸಮಯದಿಂದ ಸಮಯಕ್ಕೆ, ಒಬ್ಬರು ಕೆಲವು ದಿನಗಳ ಬಿಡುವನ್ನು ತೆಗೆದುಕೊಂಡು, ಒಳಕ್ಕೆ ಆಳವಾಗಿ ಹೋಗಿ ಧ್ಯಾನ ಮಾಡುವುದು ಹೇಗೆ ಎಂಬುದನ್ನು ಕಲಿಯಬೇಕು.

ಪ್ರಶ್ನೆ: ನಾವು ಬಟ್ಟೆ ತುಂಬಿ ಮಾಡಿದ ಗೊಂಬೆಗಳೆಂದು ತೋರುತ್ತದೆ. ಇದರ ಮೇಲೆ ನೀವು ದಯವಿಟ್ಟು ಸ್ವಲ್ಪ ಬೆಳಕು ಚೆಲ್ಲಬಲ್ಲಿರಾ?

ಶ್ರೀ ಶ್ರೀ ರವಿ ಶಂಕರ್: ಹೌದು, ಇದೊಂದು ಬಹಳ ದೊಡ್ಡ ತತ್ವಶಾಸ್ತ್ರ ಸಂಬಂಧಿತ ಪ್ರಶ್ನೆಯಾಗಿದೆ. ಯಾರು ಬಹಳ ಒಳ್ಳೆಯ ಕೆಲಸವನ್ನು ಮಾಡಿದ್ದಾರೋ ಅಥವಾ ಯಾರು ಅತ್ಯಂತ ಕೆಟ್ಟ ಅಪರಾಧವನ್ನು ಮಾಡಿರುವರೋ ಅವರನ್ನು ನೀವು ಕೇಳಿದರೆ, ಹೇಗೋ ತಾವದನ್ನು ಮಾಡಿಲ್ಲವೆಂದೂ, ಅದು ಕೇವಲ ತಮ್ಮ ಮೂಲಕ ಆಗಿಹೋಯಿತೆಂದೂ ಅವರು ಹೇಳುತ್ತಾರೆ. ಇದು ಹಲವು ಜನರ ಅನುಭವವಾಗಿದೆ.

ನಿಮ್ಮೊಳಗೆ ಏನೋ ಇದೆ. ಅದು, ನಿಮ್ಮ ಸುತ್ತಲೂ ಆಗುತ್ತಿರುವ ಎಲ್ಲಾ ಸಂಗತಿಗಳ ಕೇವಲ ಒಂದು ಸಾಕ್ಷಿಯಾಗಿದೆ. ಈ ವಿಷಯದ ಬಗ್ಗೆ ನೀವು ಹೆಚ್ಚಿನದನ್ನು ಓದಲು ಬಯಸುವುದಾದರೆ, ಅಷ್ಟಾವಕ್ರ ಗೀತೆ ಅಥವಾ ಯೋಗ ವಾಸಿಷ್ಠ ಪುಸ್ತಕವನ್ನು ಓದಿ. ಈ ಪುಸ್ತಕಗಳು ನಿಮಗೆ ಇನ್ನೂ ಹೆಚ್ಚು ಆಳವಾದ ತಿಳುವಳಿಕೆಯನ್ನು ನೀಡುವುವು

ಶನಿವಾರ, ಮೇ 18, 2013

ಪರಿಸರವನ್ನು ಪ್ರೀತಿಸಿ

ಜಾಗತಿಕ ಸಾಂಸ್ಕೃತಿಕ ವೇದಿಕೆ
ಹಾಂಗ್‌ಝೌ, ಚೀನಾ
ಮೇ ೧೮, ೨೦೧೩

ನಾವು ಪರಿಸರದ ಬಗ್ಗೆ ಕಾಳಜಿ ವಹಿಸಬೇಕೆಂಬುದನ್ನು ನಾವೆಲ್ಲರೂ ಒಪ್ಪುತ್ತೇವೆ, ಆದರೆ ಈ ಶಿಕ್ಷಣವು ಗ್ರಾಮೀಣ ಪ್ರದೇಶಗಳಿಗೆ, ಹಳ್ಳಿಯ ಜನರಿಗೆ ಮತ್ತು ನಗರಗಳಿಗೆ ಕೂಡಾ  ಹೋಗಬೇಕಾಗಿದೆ. ನಾವು ಜನರಿಗೆ ಶಿಕ್ಷಣ ನೀಡಬೇಕಾಗಿದೆ, ಅರಿವನ್ನು ತರಬೇಕಾಗಿದೆ.

ಇವತ್ತು, ಲೋಭವು ನಮ್ಮ ಸಮಾಜವನ್ನು ತಿಂದುಹಾಕುತ್ತಿದೆ. ಅದು ಪರಿಸರವನ್ನು ನಾಶಪಡಿಸುತ್ತಿದೆ, ಅದು ಕುಟುಂಬಗಳನ್ನು ನಾಶಪಡಿಸುತ್ತಿದೆ, ಅದು ನಾವೆಲ್ಲರೂ ಸಮರ್ಥಿಸುವ ಮಾನವೀಯತೆಯನ್ನು ನಾಶಪಡಿಸುತ್ತಿದೆ. ಲೋಭಕ್ಕೆ ಕಡಿವಾಣ ಹಾಕಲು, ನಾವು ಆತ್ಮೀಯತೆಯ ಒಂದು ಭಾವವನ್ನು ಸೃಷ್ಟಿಸಬೇಕಾಗಿದೆ.

ಈ ಸಮ್ಮೇಳನದಲ್ಲಿ ನಿಮ್ಮಲ್ಲಿ ಹಲವರು ಆಧ್ಯಾತ್ಮಿಕ ಮೌಲ್ಯಗಳು, ಪ್ರೇಮ, ಮಾನವೀಯತೆ ಮತ್ತು ಮಾನವೀಯ ಮೌಲ್ಯಗಳ ಬಗ್ಗೆ ಮಾತನಾಡಿರುವುದಕ್ಕೆ ನನಗೆ ಬಹಳ ಸಂತೋಷವಿದೆ. ಹತ್ತು ವರ್ಷಗಳ ಮೊದಲು, ಇಪ್ಪತ್ತು ವರ್ಷಗಳ ಮೊದಲು ಇದಕ್ಕೆ ನಿಷೇಧವಿತ್ತು. ಯಾವುದೇ ಪರಿಸರ ಅಥವಾ ವೈಜ್ಞಾನಿಕ ಸಮ್ಮೇಳನದಲ್ಲಿ ಪ್ರೇಮದ ಬಗ್ಗೆ ಮಾತನಾಡುವುದು ಕೂಡಾ ಸರಿಯಲ್ಲವೆಂದು ಯೋಚಿಸಲಾಗುತ್ತಿತ್ತು. ಇವತ್ತು, ಸಮಾಜವನ್ನು ನಾವು ಹೆಚ್ಚು ಸಂತೋಷಕರವಾಗಿಸಬೇಕಾಗಿದೆ ಎಂಬುದನ್ನು ನಾವು ಅರಿತುಕೊಂಡಿದ್ದೇವೆ. ಒಂದು ಹೆಚ್ಚಿನ ಜಿ.ಡಿ.ಪಿ.ಯನ್ನು ಹೊಂದಿದರೆ ಮಾತ್ರ ಸಾಲದು, ನಾವು ಒಂದು ಹೆಚ್ಚಿನ ಜಿ.ಡಿ.ಹೆಚ್. ಅಂದರೆ, ಗ್ರಾಸ್ ಡೊಮೆಸ್ಟಿಕ್ ಹ್ಯಾಪ್ಪಿನೆಸ್ (ಸಮಗ್ರ ದೇಶೀಯ ಸಂತೋಷ) ಹೊಂದಿರಬೇಕು.
ಸಂತೋಷವನ್ನು ಸೃಷ್ಟಿಸಲು, ನಾವು ಆ ಜಾಗೃತಿಯನ್ನು ಸೃಷ್ಟಿಸಬೇಕಾಗಿದೆ. ಭಗವದ್ಗೀತೆ; ಭಾರತದಲ್ಲಿನ ಒಂದು ಪವಿತ್ರಗ್ರಂಥದ ಪ್ರಕಾರ, ಪ್ರಕೃತಿಯು ಎಂಟು ಅಂಶಗಳನ್ನು ಹೊಂದಿದೆ ಅಥವಾ ವಿಶ್ವವು ಈ ಎಂಟು ಪದಾರ್ಥಗಳಿಂದ; ಪೃಥ್ವಿ, ಜಲ, ಅಗ್ನಿ, ವಾಯು, ಆಕಾಶ, ಮನಸ್ಸು, ಬುದ್ಧಿ ಮತ್ತು ಪ್ರಜ್ಞೆಗಳಿಂದ ಮಾಡಲ್ಪಟ್ಟಿದೆ ಎಂದು ಹೇಳಲಾಗುತ್ತದೆ.

ನಾವು ಭೂಮಿಯನ್ನು ಸಂರಕ್ಷಿಸಬೇಕು. ಗಣಿಗಾರಿಕೆಯ ಹೆಸರಿನಲ್ಲಿ ನಾವು ಅಷ್ಟೊಂದು ಡೈನಮೈಟುಗಳನ್ನು ಹಾಕಲು ಸಾಧ್ಯವಿಲ್ಲ.

ನಾವು ನಮ್ಮ ಲೋಭಕ್ಕೆ ಒಂದು ಕಡಿವಾಣವನ್ನು ಹಾಕಬೇಕು ಮತ್ತು ಮನುಷ್ಯತ್ವವು ಅರಳಿದಾಗ ಮಾತ್ರ ಗ್ರಾಹಕೀಕರಣವನ್ನು ತಡೆಯಲು ಸಾಧ್ಯ. ನಮ್ಮಲ್ಲಿ ಒಂದು ಆತ್ಮೀಯತೆಯ ಭಾವವಿರುವಾಗ, ಭೂಮಿಯ ಬಗೆಗಿರುವ ಕಾಳಜಿಯು ಹೆಚ್ಚು ಹೆಚ್ಚು ಮಹತ್ವಪೂರ್ಣವಾಗುತ್ತದೆ. ಭೂಮಿಯೇ ಒಂದು ಜೀವಿಯಾಗಿದೆ. ಅದು ಹಲವಾರು ಜೀವಿಗಳಿಗೆ ಆಶ್ರಯ ನೀಡುತ್ತಿದೆಯಾದ್ದರಿಂದ ಅದು ಜೀವಂತವಾಗಿದೆ. ನಾವು ಭೂಮಿಯನ್ನು ಗೌರವಿಸಬೇಕಾಗಿದೆ. ಪ್ರಪಂಚದಾದ್ಯಂತದ ಪ್ರಾಚೀನ ಜನರು ಭೂಮಿಯನ್ನು, ನದಿಗಳನ್ನು, ಬೆಟ್ಟಗಳನ್ನು ಮತ್ತು ಗಾಳಿಯನ್ನು ಗೌರವಿಸುತ್ತಿದ್ದರು. ನಾವು ಈ ಪ್ರಾಚೀನ ಮೌಲ್ಯಗಳನ್ನು ಉಳಿಸಿಕೊಳ್ಳಬೇಕಾಗಿದೆ ಮತ್ತು ಎಲ್ಲರ ಪ್ರಗತಿ ಹಾಗೂ ಸಮೃದ್ಧಿಗಾಗಿ ಆಧುನಿಕ ದೃಷ್ಟಿಕೋನವನ್ನು ಹೊಂದಬೇಕಾಗಿದೆ.
ಒಂದು ಒತ್ತಡ-ಮುಕ್ತವಾದ ಮನಸ್ಸು ಇನ್ನೂ ಹೆಚ್ಚು ಮುಖ್ಯವಾದುದು. ಒಂದು ನಾವು ಸೃಷ್ಟಿಸುವ ಪರಿಸರ ಮಾಲಿನ್ಯ, ಇನ್ನೊಂದು ಭಾವನಾತ್ಮಕ ಮಾಲಿನ್ಯ. ಖಿನ್ನತೆಯಿರುವ ಯಾರಾದರೂ ಒಬ್ಬರಿದ್ದರೆ, ಅವರು ಸುತ್ತಲೆಲ್ಲಾ ಖಿನ್ನತೆಯ ಅಲೆಗಳನ್ನು ಹರಡುವರು. ಸಂಪೂರ್ಣ ಪ್ರಪಂಚವು ಕಂಪನಗಳಲ್ಲದೆ ಇನ್ನೇನೂ ಅಲ್ಲ, ಎಲ್ಲವೂ ತರಂಗಗಳಾಗಿವೆ.

ಜನರು ಸಂತೋಷವಾಗಿರುವುದನ್ನು ನೋಡಲು, ಪ್ರಪಂಚವನ್ನು ತರಂಗಗಳಾಗಿ ನೋಡುವ ಈ ದೃಷ್ಟಿಕೋನವನ್ನು ನಾವು ಉಪಯೋಗಿಸಬೇಕಾದುದು.

ಪ್ರಪಂಚದಲ್ಲಿ ಆತ್ಮಹತ್ಯೆಯ ವೇಗವು ಹೆಚ್ಚಾಗುತ್ತಿದೆ ಯಾಕೆಂದರೆ, ಪ್ರೇಮ, ಆತ್ಮೀಯತೆ ಮತ್ತು ಸಹಾನುಭೂತಿ ಎಂದು ಕರೆಯಲ್ಪಡುವ ಪದಗಳ ಬಗ್ಗೆ ನಾವು ಗಮನ ಹರಿಸುತ್ತಿಲ್ಲ. ಖಿನ್ನತೆಗೊಳಗಾಗಲು ಒಂದು ಸರಳವಾದ ಸೂತ್ರವಿದೆ: ಸುಮ್ಮನೆ ಕುಳಿತುಕೊಂಡು, ’ನನ್ನ ಬಗ್ಗೆಯೇನು? ನನ್ನ ಬಗ್ಗೆಯೇನು? ನನ್ನ ಬಗ್ಗೆಯೇನು?’ ಎಂದು ಹೇಳುತ್ತಾ ಕೇವಲ ನಿಮ್ಮ ಬಗ್ಗೆ ಮಾತ್ರ ಯೋಚಿಸಿ. ಇದು ಖಿನ್ನತೆಗೊಳಗಾಗಲಿರುವ ಒಂದು ಖಚಿತವಾದ ಮಾರ್ಗವಾಗಿದೆ.

ನಾವು ಭೂಮಿಯ ಬಗ್ಗೆ ಕಾಳಜಿ ವಹಿಸುವಾಗ, ನಾವು ನಮ್ಮ ಸುತ್ತಲಿರುವ ಜನರ ಬಗ್ಗೆ ಕಾಳಜಿ ವಹಿಸುವಾಗ, ನಾವು ನಮ್ಮ ಕೈಗಳನ್ನು ಚಾಚಿ ಅಗತ್ಯದಲ್ಲಿರುವವರಿಗೆಲ್ಲರಿಗೂ ಲಭ್ಯವಾಗುವಾಗ, ಜೀವನದಿಂದ ಖಿನ್ನತೆಯು ಮಾಯವಾಗುತ್ತದೆ. ಅಂತಹ ಶಿಕ್ಷಣ ಅಥವಾ ಅರಿವು ಇವತ್ತು ಒಂದು ತಕ್ಷಣದ ಅವಶ್ಯಕತೆಯಾಗಿ ಕಾಣುತ್ತದೆ ಯಾಕೆಂದರೆ, ಜಾಗತಿಕ ಆರೋಗ್ಯ ಸಂಸ್ಥೆಯ ಪ್ರಕಾರ, ಮುಂಬರುವ ದಶಕದಲ್ಲಿ ಖಿನ್ನತೆಯು ಅತ್ಯಂತ ದೊಡ್ಡ ಮಾರಕ ರೋಗವಾಗಲಿದೆ.

ಕ್ಯಾನ್ಸರ್ ಇನ್ನೊಂದು ಅಸ್ವಸ್ಥತೆಯಾಗಿದೆ. ನಾವು ನಮ್ಮ ಭೂಗ್ರಹದ ಬಗ್ಗೆ ಕಾಳಜಿ ವಹಿಸುವಾಗ, ನಾವು ನಮ್ಮ ಜಲದ ಬಗ್ಗೆ ಕಾಳಜಿ ವಹಿಸುವಾಗ, ಪರಿಸರದಲ್ಲಿನ, ವಾತಾವರಣದಲ್ಲಿನ ಕಂಪನಗಳ ಬಗ್ಗೆ ನಾವು ಕಾಳಜಿ ವಹಿಸುವಾಗ ಈ ಎಲ್ಲಾ ರೋಗಗಳನ್ನು ನಾವು ನಿಭಾಯಿಸಬಹುದು. ಎಲ್ಲೆಡೆಗಳಲ್ಲಿ ಅಷ್ಟೊಂದು ಗೋಪುರಗಳು ಇರುವುದರೊಂದಿಗೆ, ವಿದ್ಯುತ್ಕಾಂತೀಯ ವಿಕಿರಣಗಳು ಹಿಂದೆ ಇದ್ದುದಕ್ಕಿಂತ ಬಹಳಷ್ಟು ಹೆಚ್ಚಾಗಿವೆ ಮತ್ತು ಇದು ಹಲವಾರು ನಗರ ಪ್ರದೇಶಗಳಲ್ಲಿ ಆರೋಗ್ಯದ
ಅಪಾಯಗಳನ್ನು ಉಂಟುಮಾಡುತ್ತಿದೆ.

ಭಾರತದಲ್ಲಿ ಒಂದು ಹಳೆಯ ಮಾತಿದೆ, ’ಒಂದು ಮರವನ್ನು ಕಡಿಯುವ ಮೊದಲು, ಮರದಿಂದ ನೀವು ಅನುಮತಿಯನ್ನು ಪಡೆಯಬೇಕು.’

ಇದು ಯಾಕೆಂದರೆ, ಮರವು ಒಂದು ಜೀವಿಯಾಗಿದೆ. ನೀವು ಮರಕ್ಕೆ, ನಾನು ನಿನ್ನ ವಿಧದ ಐದು ಗಿಡಗಳನ್ನು ನೆಡುತ್ತೇನೆ ಎಂದು ಭಾಷೆ ಕೊಡುತ್ತೀರಿ. ಆದುದರಿಂದ, ಮರವನ್ನು ಕತ್ತರಿಸಲು ನನಗೆ ಅನುಮತಿಯನ್ನು ನೀಡು. ಈ ಪದ್ಧತಿಯು ಒಂದು ಬಹಳ ದೀರ್ಘ ಕಾಲದ ಹಿಂದಿನಿಂದ ಇದೆ. ಅದು ಚೈನಾದಲ್ಲೂ ಇದೆ ಎಂಬುದರ ಬಗ್ಗೆ ನನಗೆ ಖಾತ್ರಿಯಿದೆ (ವೇದಾಂತದಿಂದ ಬೌದ್ಧಧರ್ಮದ ಲಾವೊ ತ್ಸು ವರೆಗೆ, ಚೀನಾ ಮತ್ತು ಭಾರತವು ಈ ಸಾಮಾನ್ಯ ಪದ್ಧತಿಯನ್ನು ಹಂಚಿಕೊಂಡಿವೆ).

ಹೀಗೆ, ಸಂಪೂರ್ಣ ವಿಶ್ವವು ಒಂದು ಪ್ರತ್ಯೇಕ ಭಾಗವಾಗಿದೆ ಹಾಗೂ ನಾವು ವಿಶ್ವದ ಅವಿಭಾಜ್ಯ ಅಂಗವಾಗಿರುವೆವು.
ಮಾನವ ಅಸ್ತಿತ್ವಕ್ಕೆ ಐದು ಕೋಶಗಳಿವೆ: ಪರಿಸರವು ನಮ್ಮ ಮೊದಲ ಶರೀರವಾಗಿದೆ, ಭೌತಿಕ ಶರೀರವು ನಮ್ಮ ಎರಡನೆಯ ಶರೀರವಾಗಿದೆ, ಪ್ರಾಣ ಅಥವಾ ಚೈತನ್ಯವು ಮೂರನೆಯ ಶರೀರವಾಗಿದೆ (ಚಿ ಎಂಬುದು ಚೈನೀಸ್ ಪರಿಭಾಷೆಯಾಗಿದೆ; ಪ್ರಾಣ ಅಥವಾ ಚೈತನ್ಯವು ಹೆಚ್ಚಾಗಿರುವಾಗ ಅಲ್ಲಿ ಉತ್ಸಾಹ, ಸೃಜನಶೀಲತೆಯಿರುತ್ತದೆ. ಚೈತನ್ಯವು ಕಡಿಮೆಯಾಗುವಾಗಲೇ ಖಿನ್ನತೆ, ಆತ್ಮಹತ್ಯಾ ಪ್ರವೃತ್ತಿ, ಪ್ರಕೃತಿ ಮತ್ತು ತನಗೆ ಹಾನಿ ಮಾಡಲಿರುವ ಪ್ರವೃತ್ತಿಗಳು ಏಳುವುದು).

ಆದುದರಿಂದ, ಈ ಪ್ರಾಣದ ಶರೀರವನ್ನು ಅಭಿವೃದ್ಧಿಪಡಿಸುವುದು ಆವಶ್ಯಕವಾಗಿದೆ. ನಾಲ್ಕನೆಯ ಕೋಶವು ಮನಸ್ಸು. ಅದೊಂದು ಮುಖ್ಯ ಪಾತ್ರವನ್ನು ವಹಿಸುತ್ತದೆ. ಐದನೆಯದು ಪ್ರಜ್ಞೆ. ಪರಿಸರ ಸಂರಕ್ಷಣೆ ಮತ್ತು ಮಾನವಕುಲದ ಪೋಷಣೆ ಎರಡರಲ್ಲೂ ಅದೊಂದು ಮುಖ್ಯ ಪಾತ್ರವನ್ನು ವಹಿಸುತ್ತದೆ.

ಒಟ್ಟಿನಲ್ಲಿ, ನಾನು ಹೇಳುವುದೇನೆಂದರೆ, ಮಾಲಿನ್ಯ-ಮುಕ್ತ ಪರಿಸರ, ರೋಗ-ಮುಕ್ತ ಶರೀರ, ಗೊಂದಲ-ಮುಕ್ತ ಮನಸ್ಸು, ತಡೆ-ಮುಕ್ತ ಬುದ್ಧಿ, ಆಘಾತ-ಮುಕ್ತ ಸ್ಮೃತಿ ಮತ್ತು ದುಃಖ-ಮುಕ್ತ ಆತ್ಮ ಇವುಗಳು ಪ್ರತಿಯೊಬ್ಬ ವ್ಯಕ್ತಿಯ ಜನ್ಮಸಿದ್ಧ ಹಕ್ಕಾಗಿದೆ.

ಗುರುವಾರ, ಮೇ 16, 2013

ಪ್ರಕೃತಿಯ ನಿಯಮ

ಬೆಂಗಳೂರು, ಭಾರತ
೧೬ ಮೇ ೨೦೧೩
ಮೇಲುನೋಟಕ್ಕೆ ಮೀರಿದ್ದನ್ನು ಕಾಣಲು ಕಲಿಯಿರಿ

ಕೃಷ್ಣ ಪರಮಾತ್ಮನು ಹೀಗೆಂದು ಹೇಳುತ್ತಾನೆ,

’ಸ ತಯಾ ಶ್ರದ್ಧಯಾ
ಯುಕ್ತಸ್ತಸ್ಯಾರಾಧನ
ಮೀಹತೇ I
ಲಭತೇ ಚ ತತಃ
ಕಾಮಾನ್ಮಯೈವ
ವಿಹಿತಾನ್ ಹಿ ತಾನ್ II’  (೭.೨೨)

ಕೃಷ್ಣ ಪರಮಾತ್ಮನು ಹೇಳುತ್ತಾನೆ, ’ಒಬ್ಬ ವ್ಯಕ್ತಿಯು ಯಾವುದೇ ದೇವತೆಯನ್ನು ಆರಾಧಿಸುವಾಗಲಾದರೂ, ನನ್ನಿಂದ ಏರ್ಪಡಿಸಲ್ಪಟ್ಟಿರುವಂತೆ, ಅವನು ಖಂಡಿತವಾಗಿಯೂ ತನ್ನ ಆರಾಧನೆಯ ಪುಣ್ಯವನ್ನು ಪಡೆಯುತ್ತಾನೆ. ಭಕ್ತಿಯ ಫಲವನ್ನು ಕರುಣಿಸುವ, ನನ್ನಿಂದ ಹೊರತಾದ ಬೇರೆ ಯಾವುದೋ ವ್ಯಕ್ತಿಯಿರುವನೆಂದು ಯೋಚಿಸಬೇಡ. ಭಕ್ತಿಯ ಎಲ್ಲಾ ಫಲಗಳು ನನ್ನ ಮೂಲಕ ಬರುತ್ತವೆ. ಇದು ಪ್ರಕೃತಿಯ ನಿಯಮ.’

ಪ್ರಕೃತಿಯ ಒಂದು ನಿಯಮವಿದೆ. ನೀವು ನಿಮ್ಮ ಕೈಯನ್ನು ಬೆಂಕಿಯಲ್ಲಿಟ್ಟರೆ ಸ್ವಾಭಾವಿಕವಾಗಿ ಸುಡುವುದು ಮತ್ತು ನೀವು ನಿಮ್ಮ ಕೈಯನ್ನು ನೀರಿನಲ್ಲಿ ಅದ್ದಿದರೆ ನಿಮಗೆ ಅದರ ತಂಪು ಅನುಭವಕ್ಕೆ ಬರುವುದು. ಹಾಗಾಗಿ ಕೃಷ್ಣ ಪರಮಾತ್ಮನು, ’ಎಲ್ಲವೂ ಪ್ರಕೃತಿಯ ನಿಯಮಕ್ಕನುಸಾರವಾಗಿ ನಡೆಯುತ್ತದೆ ಮತ್ತು ಪ್ರಕೃತಿಯ ಈ ನಿಯಮಗಳನ್ನು ಸೃಷ್ಟಿಸಿರುವುದು ನಾನೇ. ಅದಕ್ಕಾಗಿಯೇ, ಎಲ್ಲರಿಗೂ ಅವರ ಭಕ್ತಿಯ ಫಲಗಳನ್ನು ಕರುಣಿಸುವವನು ನಾನು. ಒಬ್ಬರ ಕರ್ಮಗಳನ್ನಾಧರಿಸಿ ಅವರಿಗೆ ಸಿಗಬೇಕಾದ ಪುಣ್ಯಗಳನ್ನು ನಿರ್ಧರಿಸುವುದು ನಾನೇ, ಬೇರೆ ಯಾರೂ ಅಲ್ಲ. ನಾನು ಒಂದು ಆಗಿರುವೆನು (ಶುದ್ಧ ಚೇತನ),
ಆದರೂ ನಾನು ವಿವಿಧ ರೂಪಗಳ ಮೂಲಕ ಪ್ರಕಟಗೊಂಡಿರುವೆನು’ ಎಂದು ಹೇಳುತ್ತಾನೆ.

ಅವನನ್ನುತ್ತಾನೆ,

’ಅಂತವಂತು ಫಲಂ ತೇಷಾಂ ತದ್ ಭವತ್ಯಲ್ಪಮೇಧಸಾಮ್ I
ದೇವಾನ್ ದೇವಯಜೋ ಯಾಂತಿ ಮದ್ಭಕ್ತಾ ಯಾಂತಿ ಮಾಮಪಿ II’  (೭.೨೩)

ಜನರು ಚಿಕ್ಕ ವಸ್ತುಗಳನ್ನು ಬಯಸುವಾಗ, ಅವರ ಬುದ್ಧಿಯು ಬಹಳ ಸೀಮಿತವಾದುದು ಎಂಬುದನ್ನು ಅದು ತೋರಿಸುತ್ತದೆ.
ಅದು ಯಾಕೆಂದರೆ, ಒಮ್ಮೆ ಅವರು ತಾವು ಬಯಸುವ ಈ ಚಿಕ್ಕ ವಸ್ತುಗಳನ್ನು ಪಡೆದಾಗ, ಬಹಳ ಅಲ್ಪಾವಧಿಯಲ್ಲಿ ಅದೆಲ್ಲವೂ ಕೊನೆಯಾಗುತ್ತದೆ.

ತಮ್ಮ ಜೀವಮಾನವಿಡೀ ಜನರು ಒಂದು ಬಡ್ತಿ, ಅಥವಾ ಹೆಚ್ಚು ಹಣ ಅಥವಾ ಒಂದು ಹೆಚ್ಚು ತೃಪ್ತಿದಾಯಕ ಸಂಬಂಧದಂತಹ ಚಿಕ್ಕ ವಿಷಯಗಳನ್ನು ಬಯಸುತ್ತಿರುತ್ತಾರೆ. ಆದರೆ ಇವುಗಳೆಲ್ಲವೂ ಬಹಳ ಸೀಮಿತವಾದವು (ಅಂದರೆ: ಇವೆಲ್ಲವೂ ಚಿರ ಸಂತಸ ಅಥವಾ ತೃಪ್ತಿಯನ್ನು ಕೊಡಲಾರವು). ಆದುದರಿಂದ, ಅಂತಹ ಬಯಕೆಗಳನ್ನು ಪೂರೈಸಲು ಪ್ರಯತ್ನ ಪಡುತ್ತಿರುವ ಮತ್ತು ಈ ಬಯಕೆಗಳನ್ನು ನೆರವೇರಿಸಲು ತಮ್ಮ ಸಂಪೂರ್ಣ ಜೀವನವನ್ನು ವ್ಯಯಿಸುವ ಜನರು ಬುದ್ಧಿವಂತರಲ್ಲ. ಇದೊಂದು ಸೀಮಿತ ಬುದ್ಧಿಶಕ್ತಿಯ ಸಂಕೇತವಾಗಿದೆ. ಹಾಗೆ ಮಾಡುವುದಕ್ಕಾಗಿ ಅವರು ಮೂರ್ಖರೆಂದು ನಾವು ಹೇಳಲು ಸಾಧ್ಯವಿಲ್ಲ, ಆದರೆ ಇದು ಖಂಡಿತವಾಗಿಯೂ ಕಡಿಮೆ ಬುದ್ಧಿಶಕ್ತಿಯ ಒಂದು ಸಂಕೇತವಾಗಿದೆ. ಜೀವನದಲ್ಲಿ ಬಹಳ ಚಿಕ್ಕ ಲಾಭಕ್ಕಾಗಿ ಅವರು ಬಹಳಷ್ಟು ಪ್ರಯತ್ನ ಪಡುತ್ತಾರೆ.

ದೃಶ್ಯಕ್ಕೆ ಸಮರ್ಪಣೆ ಆಗಿರುವುದರಿಂದ (ಅಂದರೆ, ಸಂಕುಚಿತವಾದ ಗುರಿಗಳನ್ನು ಅಥವಾ ಚಿಕ್ಕ ಇಂದ್ರಿಯ ಸುಖಗಳ ಬಯಕೆಯನ್ನು ಹೊಂದಿರುವುದು) ಒಬ್ಬರು ಕೇವಲ ಅಲ್ಪಾಯುಷ್ಯದ ಫಲಗಳನ್ನು ಪಡೆಯುತ್ತಾರೆ. ಆದರೆ ತನ್ನೊಳಗಿರುವ ದೃಷ್ಟನಿಗೆ ಸಮರ್ಪಿತನಾದವನೊಬ್ಬನು (ಅಂದರೆ ಆತ್ಮವು ಒಂದು ಸಾಕ್ಷಿಯಂತೆ) ಶಾಶ್ವತ ಲಾಭಗಳನ್ನು ಪಡೆಯುತ್ತಾನೆ. ಅಂತಹ ಸಮರ್ಪಣೆಯ ಫಲಗಳು ಯಾವತ್ತೂ ಕ್ಷಯಿಸುವುದಿಲ್ಲ.

ಹಾಗಾಗಿ ಸೃಷ್ಟಿ(ಅಥವಾ ಜೀವನ)ಯೆಂಬುದು, ನಿಮ್ಮ ಗಮನವನ್ನು ದೃಶ್ಯದಿಂದ ತಿರುಗಿ ದೃಷ್ಟನ (ನೋಡುವವನ) ಕಡೆಗೆ ಸ್ಥಳಾಂತರಿಸಲಿರುವ ಒಂದು ಪ್ರಕ್ರಿಯೆಯಾಗಿದೆ.

ನೀವು ನಿಮ್ಮ ಶ್ರದ್ಧೆಯನ್ನು ದೃಶ್ಯದ ಮೇಲಿಡುತ್ತೀರಿ (ಇಲ್ಲಿ, ಒಬ್ಬರು ಪ್ರಾರ್ಥಿಸುವ ದೇವರ ಸ್ವರೂಪವನ್ನು ಉಲ್ಲೇಖಿಸುತ್ತಾ) ಯಾಕೆಂದರೆ ನಿಮಗೆ ಅದರಿಂದ ಏನೋ ಸಿಗುತ್ತದೆ. ಆದರೆ ನೀವು ಏನನ್ನೆಲ್ಲಾ ಗಳಿಸುವಿರೋ, ಅದು ನಿಮ್ಮೊಳಗಿರುವ ಭಕ್ತಿಯಿಂದಾಗಿ, ಅದು ನೋಡುಗನ ಭಕ್ತಿಯಾಗಿದೆ. ಒಬ್ಬರು ಜೀವನದಲ್ಲಿ ಏನೆಲ್ಲಾ ಪಡೆಯುವರೋ ಅದು ಅವರ ಶ್ರದ್ಧೆಯಿಂದಾಗಿ. ಶ್ರದ್ಧೆಯು ಯಾವತ್ತೂ ಒಳಗಿನಿಂದ (ನೋಡುಗನಿಂದ) ಬರುತ್ತದೆ.

ಜೀವನದಲ್ಲಿ ನಾವು ಏನೆಲ್ಲಾ ಪಡೆಯುತ್ತೇವೋ ಅದು ನಮ್ಮ ಶ್ರದ್ಧೆಯ ಕಾರಣದಿಂದ, ಮತ್ತು ನಾವು ಏನನ್ನು ಪಡೆಯುತ್ತೇವೆ ಎಂಬುದು, ಯಾವುದಾದರೂ ದೇವಮಾನವ ಅಥವಾ ದೇವತೆ ಅಥವಾ ಒಬ್ಬರು ಗುರು ಅಥವಾ ದೇವರ ಕಡೆಗೆ ನಮ್ಮಲ್ಲಿರುವ ಶ್ರದ್ಧೆಯ ರೀತಿಯನ್ನು ಅವಲಂಬಿಸಿದೆ. ಹಾಗಾಗಿ, ಯಾವುದು ಹೆಚ್ಚು ಮುಖ್ಯವಾದುದು: ದೃಶ್ಯವೇ ಅಥವಾ ಶ್ರದ್ಧೆಯೇ? ಶ್ರದ್ಧೆಯು ಮಾತ್ರ ಮುಖ್ಯವಾದುದು ಎಂದು ಹೇಳಲಾಗಿದೆ. ಮತ್ತು ಈ ಶ್ರದ್ಧೆಯು ಎಲ್ಲಿಂದ ಬರುತ್ತದೆ? ಇಲ್ಲಿಯೇ ಕೃಷ್ಣ ಪರಮಾತ್ಮನು ಹೀಗೆಂದು ಹೇಳುವುದು,

’ಒಬ್ಬರಲ್ಲಿರುವ ಯಾವುದೇ ಶ್ರದ್ಧೆಯು ನನ್ನಿಂದ ಮತ್ತು ನನ್ನಿಂದ ಮಾತ್ರ ಬರುತ್ತದೆ, ಯಾಕೆಂದರೆ ನಾನು ಆ ಶುದ್ಧ ಚೇತನನಾಗಿರುವೆನು. ವಿವಿಧ  ದೇವಮಾನವ ಮತ್ತು ದೇವತೆಯರನ್ನು ಶ್ರದ್ಧಾಪೂರ್ವಕವಾಗಿ ಪ್ರಾರ್ಥಿಸುವವರು ಅವರೊಂದಿಗೆ ಒಂದಾಗುತ್ತಾರೆ, ಆದರೆ ನನ್ನ ಭಕ್ತರು ನನ್ನನ್ನು ಹೊಂದುತ್ತಾರೆ.’

ಯಾರು ಆತ್ಮನನ್ನು ನಂಬುವರೋ ಅವರು ಆತ್ಮ-ಜ್ಞಾನವನ್ನು ಪಡೆಯುತ್ತಾರೆ. ದೇವಮಾನವರನ್ನು ದೇವರಿಂದ ಬೇರೆ ಎಂದು ನಂಬಿ, ಅವರನ್ನು ಮಾತ್ರ ಪೂಜಿಸುವವರು ಆ ದೇವಮಾನವರನ್ನು ಹೊಂದುತ್ತಾರೆ ಮತ್ತು ಅವರೊಂದಿಗೆ ವಿಲೀನವಾಗುತ್ತಾರೆ. ಹಾಗಾಗಿ ಕೃಷ್ಣ ಪರಮಾತ್ಮನು, ’ಸಂಪೂರ್ಣವಾಗಿ ನನ್ನ ಭಕ್ತನಾದವನೊಬ್ಬನು ಮಾತ್ರ ನನ್ನನ್ನು ಹೊಂದುತ್ತಾನೆ ಮತ್ತು ನನ್ನೊಳಗೆ ವಿಲೀನವಾಗುತ್ತಾನೆ’ ಎಂದು ಹೇಳುತ್ತಾನೆ.

ಹಾಗಾದರೆ ಈ ನಾನು ಯಾರು? - ಇದನ್ನೇ ಕೃಷ್ಣ ಪರಮಾತ್ಮನು ಮುಂದಿನ ಶ್ಲೋಕದಲ್ಲಿ ವಿವರಿಸುವುದು:

’ಅವ್ಯಕ್ತಂ ವ್ಯಕ್ತಿಮಾಪನ್ನಂ ಮನ್ಯಂತೇ ಮಾಮಬುದ್ಧಯಃ I
ಪರಂ ಭಾವಮಜಾನಂತೋ ಮಮಾವ್ಯಯಮನುತ್ತಮಮ್ II’  (೭.೨೪)

’ಶಾಶ್ವತವಾದ, ಸಾಟಿಯಿಲ್ಲದ ಮತ್ತು ಪ್ರಾಪಂಚಿಕ ಲೋಕವನ್ನು ಮೀರಿರುವ ನನ್ನ ದೈವಿಕ ಸ್ವರೂಪವು ನನ್ನ ಪರ-ರೂಪವಾಗಿದೆ, ಅದು ಬರಿಗಣ್ಣಿಗೆ ಗೋಚರಿಸುವುದಿಲ್ಲ. ಇದರ ಬಗ್ಗೆ ಅರಿವಿಲ್ಲದವರು ಮತ್ತು ನಾನು ನನ್ನ ಭೌತಿಕ ಶರೀರಕ್ಕೆ ಅಥವಾ ಒಂದು ವ್ಯಕ್ತಿತ್ವಕ್ಕೆ ಸೀಮಿತನು ಎಂದು ಯೋಚಿಸುವವರು ಮೂರ್ಖರು. ನಾನು ದೈವಿಕ ಶಕ್ತಿಯಾಗಿರುವೆನು ಮತ್ತು ಒಬ್ಬ ವ್ಯಕ್ತಿಯಲ್ಲ. ನಾನು ಎಲ್ಲೆಡೆಯೂ ಇರುವ ಶುದ್ಧ ಚೇತನವಾಗಿರುವೆನು. ಅವರಿಗೆ ನನ್ನ ಈ ದೈವಿಕ ರೂಪವು ತಿಳಿಯದು ಮತ್ತು ನನ್ನ ಕಡೆಗೆ ಒಂದು ಸೀಮಿತ ದೃಷ್ಟಿಕೋನದಿಂದ ನೋಡುವರು’ ಎಂದು ಅವನು ಹೇಳುತ್ತಾನೆ.

ಒಂದು ಸೀಮಿತ ದೃಷ್ಟಿಯಿಂದ ನೋಡುವುದು ಎಂದರೆ ಏನರ್ಥ? ಅದರರ್ಥ, ’ಓ, ಅವರು ಆ ವ್ಯಕ್ತಿಯತ್ತ ನೋಡಿದರು ಮತ್ತು ಅವರು ನನ್ನತ್ತ ನೋಡಲಿಲ್ಲ. ಅವರು ಆ ವ್ಯಕ್ತಿಯೊಂದಿಗೆ ಮಾತನಾಡಿದರು ಮತ್ತು ಅವರು ನನ್ನೊಂದಿಗೆ ಮಾತನಾಡಲಿಲ್ಲ’ ಎಂಬಂತಹ ಚಿಕ್ಕ ವಿಷಯಗಳಲ್ಲಿ ಸಿಕ್ಕಿಹಾಕಿಕೊಳ್ಳುವುದು. ಇದೆಲ್ಲವೂ ಬಹಳ ಸಣ್ಣ ನಡವಳಿಕೆಯಾಗಿದೆ.

ನಿಮ್ಮ ಮಾನವ ಬುದ್ಧಿಯೊಂದಿಗೆ ನೀವು ನಿಮ್ಮ ಗುರುವನ್ನು ನೋಡಬಾರದೆಂದು ಭಾರತೀಯ ಸಂಪ್ರದಾಯದಲ್ಲಿ ಯಾವತ್ತೂ ಹೇಳಲಾಗಿದೆ. ಇದು ಯಾಕೆಂದರೆ, ಹಾಗೆ ಮಾಡಿದರೆ, ಆಗ ನೀವು, ’ಗುರುದೇವರು ಅವನನ್ನು ನೋಡಿದರು, ಆದರೆ ನನ್ನ ಕಡೆಗೆ ನೋಡಲಿಲ್ಲ. ಗುರುದೇವರು ಬೇರೆ ಯಾರೊಂದಿಗೋ ಮಾತನಾಡಿದರು, ಆದರೆ ನನ್ನೊಂದಿಗಲ್ಲ. ಅವರು ಈ ವ್ಯಕ್ತಿಯೊಂದಿಗೆ ಹೆಚ್ಚು ಮಾತನಾಡುತ್ತಾರೆ, ಆದರೆ ನನ್ನೊಂದಿಗೆ ಕಡಿಮೆ. ಅವರು ಇತರರನ್ನು ನನಗಿಂತ ಹೆಚ್ಚು ಪ್ರೀತಿಸುತ್ತಾರೆ’ ಎಂಬಂತಹ ಸಣ್ಣ ಯೋಚನೆಗಳಲ್ಲಿ ಸಿಕ್ಕಿಹಾಕಿಕೊಳ್ಳುತ್ತೀರಿ. ಅಂತಹ ಯೋಚನೆಗಳಲ್ಲಿ ಸಿಕ್ಕಿಹಾಕಿಕೊಳ್ಳಬೇಡಿ. ಇವುಗಳೆಲ್ಲಾ ಬರುವುದು ಸೀಮಿತವಾದ ಮಾನವ ಬುದ್ಧಿಯ ಕಾರಣದಿಂದಾಗಿ.

ಒಮ್ಮೆ ನೀವು ಗುರುವಿನೊಂದಿಗಿದ್ದರೆ, ಮತ್ತೆ ಅಷ್ಟೇ! ನಿಮ್ಮ ಭಕ್ತಿ ಮತ್ತು ಅವರಿಗೆ ನಿಮ್ಮ ಕಡೆಗಿರುವ ಪ್ರೀತಿಯು ಸಂಪೂರ್ಣವಾದುದೆಂದು ತಿಳಿಯಿರಿ. ಅದನ್ನು ಒಂದು ಚೂರೂ ಸಂಶಯಿಸಬೇಡಿ ಅಥವಾ ಪ್ರಶ್ನಿಸಬೇಡಿ. ಗುರುವು ನಿಮ್ಮನ್ನು ಪ್ರೀತಿಸುವರೇ ಅಥವಾ ಇಲ್ಲವೇ ಎಂಬುದಾಗಿ ಯೋಚಿಸಬೇಡಿ, ಯಾಕೆಂದರೆ ಗುರುವೆಂದರೆ ಒಂದು ಶಕ್ತಿ ಹಾಗೂ ಆ ಶಕ್ತಿಯು ನಿಮ್ಮನ್ನು ಬಹಳ ಪ್ರೀತಿಸುತ್ತದೆ. ಅಲ್ಲಿ ಬೇರೆ ಯಾವುದೇ ಆಯ್ಕೆಯಿಲ್ಲ ಯಾಕೆಂದರೆ, ಪ್ರೀತಿಯೆಂಬುದು ಅದರ ಸ್ವಭಾವವೇ ಆಗಿದೆ.

ಮುಂದಿನ ಶ್ಲೋಕದಲ್ಲಿ ಅವನು ಹೀಗೆಂದು ಹೇಳುತ್ತಾನೆ,

’ನಾಹಂ ಪ್ರಕಾಶಃ ಸರ್ವಸ್ಯ ಯೋಗಮಾಯಾಸಮಾವೃತಃ I
ಮೂಢೋಯಂ ನಾಭಿಜಾನಾತಿ ಲೋಕೋ ಮಾಮಜಮವ್ಯಯಮ್ II’  (೭.೨೫)

ಕೃಷ್ಣ ಪರಮಾತ್ಮನು ಹೀಗೆಂದು ಹೇಳುತ್ತಾನೆ, ’ನಾನು ಎಲ್ಲರಿಗೂ ಕಾಣಿಸುವುದಿಲ್ಲ ಮತ್ತು ಇದು ಯಾಕೆಂದರೆ ನನ್ನದೇ ಯೋಗಮಾಯೆಯ ಕಾರಣದಿಂದಾಗಿ. ಇದರಿಂದಾಗಿಯೇ ಎಲ್ಲರಿಗೂ ನನ್ನನ್ನು ಗುರುತಿಸಲು ಸಾಧ್ಯವಾಗದೇ ಇರುವುದು. ನನ್ನನ್ನು ತಿಳಿದಿರುವವನೊಬ್ಬನು ಖಂಡಿತವಾಗಿಯೂ ಒಬ್ಬ ಬುದ್ಧಿವಂತ ವ್ಯಕ್ತಿಯಾಗಿರುವನು ಮತ್ತು ಯಾರಿಗೆ ತಿಳಿದಿಲ್ಲವೋ ಅವನು ಅಜ್ಞಾನಿಯಾಗಿರುವನು.’

ಸೂರ್ಯನ ಕಡೆಗೆ ನೋಡಿ, ನಂತರ ನಿಮ್ಮಲ್ಲಿ, ’ಇದು ಸೂರ್ಯನೇ?’ ಎಂದು ಕೇಳುವ ಒಬ್ಬರನ್ನು ನೀವು ಏನೆಂದು ಕರೆಯುವಿರಿ? ಸೂರ್ಯನ ಬಿಸಿಲು ನಿಮ್ಮ ತಲೆಯ ಮೇಲೆ ಬೀಳುತ್ತಿರುವಾಗ, ಅದರ ಉಷ್ಣವು ನಿಮ್ಮ ಸುತ್ತಲಿರುವ ಭೂಮಿಯನ್ನು ಸುಡುತ್ತಿರುವಾಗಲೂ ಒಬ್ಬರು ಅಂತಹ ಒಂದು ಪ್ರಶ್ನೆಯನ್ನು ಕೇಳುವರೇ? ಆ ಪುರಾವೆಯೇ ಅಷ್ಟೊಂದು ಸ್ಪಷ್ಟವಾಗಿದೆ.

ಹಾಗಾಗಿ ಕೃಷ್ಣ ಪರಮಾತ್ಮನು ಹೀಗೆಂದು ಹೇಳುತ್ತಾನೆ, ’ನನ್ನ ಯೋಗಮಾಯೆಯ ಕಾರಣದಿಂದಾಗಿ, ಎಲ್ಲರಿಗೂ ನನ್ನನ್ನು ನೋಡಲು ಸಾಧ್ಯವಿಲ್ಲ. ಈ ಸಂಪೂರ್ಣ ಸೃಷ್ಟಿಯಲ್ಲಿ, ಸಂಭವಿಸುವ ಎಲ್ಲದರ ಹಿಂದಿರುವ ಅವ್ಯಯನು (ಶಾಶ್ವತವಾದ ತತ್ವ ಅಥವಾ ಎಲ್ಲಾ ಕಾರಣಗಳಿಗೆ ಆಧಾರವಾಗಿರುವ ಕಾರಣ) ನಾನಾಗಿರುವೆನು. ನಾನು ಯಾವುದರಿಂದಲೂ ಕ್ಷೀಣಿಸಲ್ಪಡುವುದಿಲ್ಲ ಮತ್ತು ನಾನು ಯಾವುದರಿಂದಲೂ ವರ್ಧಿಸಲ್ಪಡುವುದಿಲ್ಲ. ನಾನು ಬದಲಾಗದೇ ಉಳಿಯುತ್ತೇನೆ. ನಾನು ಯಾವತ್ತೂ ಹುಟ್ಟಲಿಲ್ಲ ಮತ್ತು ನನಗೆ ಯಾವುದೇ ಅಂತ್ಯವಿಲ್ಲ. ಒಬ್ಬ ಮೂರ್ಖ ವ್ಯಕ್ತಿಗೆ ಇದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಒಂದು ಸ್ವಲ್ಪವಾದರೂ ಬುದ್ಧಿ ಯಾರಲ್ಲಿದೆಯೋ ಅವನಿಗೆ, ನಾನು (ಆತ್ಮ ಅಥವಾ ಶುದ್ಧ ಚೇತನವಾಗಿ) ಹುಟ್ಟಿಯೂ ಇಲ್ಲ ನನಗೆ ಸಾವೂ ಇಲ್ಲವೆಂಬುದು ಒಳಗಿನಿಂದ ತಿಳಿದಿರುತ್ತದೆ. ನನ್ನ ಸುತ್ತಲಿರುವ ಜನರಿಗೆ ನಿರಂತರವಾಗಿ ವಯಸ್ಸಾಗುತ್ತಿದ್ದರೂ ಮತ್ತು ವಯಸ್ಸಿನೊಂದಿಗೆ ಬದಲಾಗುತ್ತಿದ್ದರೂ, ನಾನು ಯಾವತ್ತೂ ಜನನ ಅಥವಾ ಮರಣವನ್ನು ಅನುಭವಿಸಿಲ್ಲ. ನಾನು ಬದಲಾಗದೇ ಇರುವಾಗ, ನಾನು ಮರಣ ಹೊಂದಲು ಹೇಗೆ ಸಾಧ್ಯ?’

ಯಾವುದು ನಿರಂತರವಾಗಿ ಬದಲಾಗುವುದೋ ಅದು ಮಾತ್ರ ಮರಣ ಹೊಂದಲು ಸಾಧ್ಯ.

ನಮ್ಮೊಳಗೆ ಯಾವತ್ತೂ ಬದಲಾಗದೇ ಇರುವ ಏನೋ ಒಂದಿದೆ. ಒಂದಲ್ಲ ಒಂದು ಸಮಯದಲ್ಲಿ, ಯಾವುದೋ ಒಂದು ರೀತಿಯಲ್ಲಿ, ಪ್ರತಿಯೊಬ್ಬರೂ ಇದನ್ನು ಅನುಭವಿಸಿದ್ದೇವೆ. ನಮ್ಮಲ್ಲಿನ ಈ ಬದಲಾಗದಿರುವ ಅಂಶದ ಮೇಲೆ ನಾವು ಹೆಚ್ಚು ಗಮನ ಹರಿಸಿದರೆ, ಆಗ ನಾವು ಶಾಶ್ವತರು; ನಾವು ಎಂದಿಗೂ ಇರುವೆವು ಎಂಬ ಈ ಅನುಭೂತಿಯು ಉದಯಿಸುತ್ತದೆ.
ಹೀಗೆ ಇಲ್ಲಿ ಕೃಷ್ಣ ಪರಮಾತ್ಮನು ಆತ್ಮ ತತ್ವದ ಬಗ್ಗೆ ಮಾತನಾಡುತ್ತಾನೆ. ಈ ಆತ್ಮ ತತ್ವವನ್ನು ತಿಳಿದಿರುವವನೊಬ್ಬನು ನಿಜವಾಗಿಯೂ ಬುದ್ಧಿವಂತನೆಂದು ಅವನು ಹೇಳುತ್ತಾನೆ.

ಮುಂದಿನ ಶ್ಲೋಕದಲ್ಲಿ ಕೃಷ್ಣ ಪರಮಾತ್ಮನು ಹೀಗೆಂದು ಹೇಳುತ್ತಾನೆ,

’ವೇದಾಹಂ ಸಮತೀತಾನಿ ವರ್ತಮಾನಾನಿ ಚಾರ್ಜುನ I
ಭವಿಷ್ಯಾಣಿ ಚ ಭೂತಾನಿ ಮಾಂ ತು ವೇದ ನ ಕಶ್ಚನ II’  (೭.೨೬)

’ನನಗೆ ಎಲ್ಲವೂ ತಿಳಿದಿದೆ. ಭೂತಕಾಲದಲ್ಲಿ ನಡೆದಿರುವುದೆಲ್ಲವನ್ನೂ ನಾನು ತಿಳಿದಿರುವೆನು. ವರ್ತಮಾನದಲ್ಲಿ ನಡೆಯುತ್ತಿರುವುದೆಲ್ಲವನ್ನೂ ನಾನು ತಿಳಿದಿರುವೆನು ಮತ್ತು ಭವಿಷ್ಯದಲ್ಲಿ ನಡೆಯಲಿರುವುದನ್ನೆಲ್ಲವನ್ನೂ ಕೂಡಾ ನಾನು ತಿಳಿದಿರುವೆನು’ ಎಂದು ಅವನು ಹೇಳುತ್ತಾನೆ.

ನಮ್ಮೊಳಗೆ ಆಳದಲ್ಲಿರುವ ಆತ್ಮವು ಎಲ್ಲವನ್ನೂ ತಿಳಿದಿದೆ. ಅದಕ್ಕೆ, ಭೂತಕಾಲದಲ್ಲಿ ನಡೆದ ಮತ್ತು ಭವಿಷ್ಯದಲ್ಲಿ ನಡೆಯಲಿರುವ ಎಲ್ಲಾ ಘಟನೆಗಳ ಅರಿವಿದೆ. ಯಾವುದಕ್ಕೆ ತಿಳಿಯಲಿರುವ ಸಾಮರ್ಥ್ಯವಿರುವುದೋ ಅದು ಆತ್ಮವಾಗಿದೆ.

ಹಾಗಾಗಿ ಕೃಷ್ಣ ಪರಮಾತ್ಮನು ಹೀಗೆಂದು ಹೇಳುತ್ತಾನೆ, ’ನಾನು ಎಲ್ಲವನ್ನೂ ಮತ್ತು ಎಲ್ಲರನ್ನೂ ತಿಳಿದಿರುವೆನು, ಆದರೂ ಎಲ್ಲರೂ ನನ್ನನ್ನು ತಿಳಿದಿಲ್ಲ. ಎಲ್ಲವನ್ನೂ ತಿಳಿಯಲು ಸಮರ್ಥವಾಗಿರುವ ಒಂದೇ ಒಂದು ಶಕ್ತಿಯಿರುವುದು ಮತ್ತು ಅದುವೇ ಆತ್ಮವಾಗಿದೆ. ಸೃಷ್ಟಿಯಲ್ಲಿನ ವಸ್ತುಗಳು ಬೇರೆ ಬೇರೆಯಾಗಿ ಕಾಣಿಸುತ್ತವೆ, ಆದರೂ ಅವುಗಳಲ್ಲಿ ಯಾವುದಕ್ಕೂ ನಿಜವಾಗಿ ನನ್ನನ್ನು ತಿಳಿಯದು, ಆದರೂ ನಾನು ಅವುಗಳೆಲ್ಲವನ್ನೂ ತಿಳಿದಿರುವೆನು.

ಜನರು ಹೆಚ್ಚಾಗಿ ಕೇಳುತ್ತಾರೆ, ’ಇದೆಲ್ಲಾ ನಿಜವಾದರೆ, ಮತ್ತೆ ಯಾಕೆ ಪ್ರಪಂಚದಾದ್ಯಂತ ಹೆಚ್ಚು ಹೆಚ್ಚು ಜನರು ಆಧ್ಯಾತ್ಮಿಕ ಪಥದಲ್ಲಿ ನಡೆಯುವುದಿಲ್ಲ?’

’ಮೂರ್ಖರಿಗೆ ನನ್ನನ್ನು ತಿಳಿಯಲು ಸಾಧ್ಯವಿಲ್ಲ. ಪ್ರಪಂಚದಲ್ಲಿ ಬುದ್ಧಿವಂತರಿರುವುದು ಕೆಲವೇ ಕೆಲವು ಮಂದಿ ಮತ್ತು ಅವರಿಗೆ ಮಾತ್ರ ನನ್ನನ್ನು ಅರಿಯುವ ಸಾಮರ್ಥ್ಯವಿರುವುದು. ಯಾರು ನನ್ನನ್ನು ಅರಿತಿರುವರೋ ಅದುವೇ ಅವರು ಒಬ್ಬ ಬುದ್ಧಿವಂತ ವ್ಯಕ್ತಿಯಾಗಿರುವುದರ ನಿಜವಾದ ಸಂಕೇತ’ ಎಂದು ಹೇಳುತ್ತಾ ಕೃಷ್ಣ ಪರಮಾತ್ಮನು ಇದನ್ನು ಬಹಳ ಸ್ಪಷ್ಟವಾಗಿ ವಿವರಿಸುತ್ತಾನೆ.

ಗೀತಾ ಜ್ಞಾನ - ೧೦

ಇಚ್ಛೆ - ದ್ವೇಷದ ತಾಕಲಾಟದಲ್ಲಿ ಜರ್ಝರಿತವಾಗುವ ಮನಸ್ಸು

ಬೆಂಗಳೂರು, ಭಾರತ
೧೬ ಮೇ ೨೦೧೩

’ಇಚ್ಛಾದ್ವೇಷಸಮುತ್ಥೇನ ದ್ವಂದ್ವಮೋಹೇನ ಭಾರತ I
ಸರ್ವಭೂತಾನಿ ಸಮ್ಮೋಹಂ ಸರ್ಗೇ ಯಾಂತಿ ಪರಂತಪ II’  (೭.೨೭)

ಹೀಗೆಂದು ಹೇಳುತ್ತಾ ಕೃಷ್ಣ ಪರಮಾತ್ಮನು ಮುಂದುವರಿಸುತ್ತಾನೆ,

"ಹಲವರಿಗೆ ನನ್ನನ್ನು ತಿಳಿಯಲು ಸಾಧ್ಯವಾಗದಿರುವುದು ಯಾಕೆ? ಕಾರಣವೇನೆಂದರೆ ಇಚ್ಛೆ ಮತ್ತು ದ್ವೇಷ. ಅವರು ತಮ್ಮ ಇಚ್ಛೆಗಳು ಮತ್ತು ದ್ವೇಷಗಳ ನಡುವೆ ನಿರಂತರವಾಗಿ ಸಿಕ್ಕಿಹಾಕಿಕೊಂಡಿರುತ್ತಾರೆ" ಎಂದು ಹೇಳುತ್ತಾನೆ.

ಒಬ್ಬರು ಇನ್ನೊಬ್ಬರ ಕಡೆಗೆ ರಾಗದಲ್ಲಿ ಸಿಕ್ಕಿಬಿದ್ದಿರುವಾಗ ಅಥವಾ ದ್ವೇಷಗ್ರಸ್ತರಾಗಿರುವಾಗ, ಆ ಭಾವನೆ ಅವರ ಮನಸ್ಸನ್ನು ಸಂಪೂರ್ಣವಾಗಿ ಆವರಿಸುತ್ತದೆ  ಮತ್ತು ಅವರಿಗೆ ಬೇರೇನನ್ನೂ ನೋಡಲು ಸಾಧ್ಯವಾಗುವುದಿಲ್ಲ. ಒಬ್ಬರಿಗಾಗಿ ತೀವ್ರವಾಗಿ ಹಂಬಲಿಸುವ ಅಥವಾ ಒಬ್ಬರ ಕಡೆಗೆ ಅತಿಯಾದ ದ್ವೇಷವನ್ನು ಹೊಂದಿರುವ ಒಬ್ಬ ವ್ಯಕ್ತಿಯು ಮೋಹದ ಬಲೆಗೆ ಬೀಳುತ್ತಾನೆ.

ಸಕಲ ಜೀವಿಗಳ ಮೇಲೆ ಇದರ ಪರಿಣಾಮ ಉಂಟಾಗುತ್ತದೆ, ಮತ್ತು ಈ ಕಾರಣದಿಂದಲೇ ಅವುಗಳೆಲ್ಲವೂ ಕಷ್ಟಗಳನ್ನು ಅನುಭವಿಸುತ್ತವೆ. ಕಷ್ಟ ಅನುಭವಿಸುತ್ತಿರುವ ಮತ್ತು ದುಃಖಿಸುತ್ತಿರುವ ಒಬ್ಬ ವ್ಯಕ್ತಿಗೆ ಬೇರೇನನ್ನೂ ನೋಡಲು ಅಥವಾ ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಅವನ ಸುತ್ತಲೂ ಏನಾದರೂ ಒಳ್ಳೆಯದು ನಡೆಯುತ್ತಿದ್ದರೂ ಕೂಡಾ, ಅವನಿಗದನ್ನು ನೋಡಲು ಸಾಧ್ಯವಾಗುವುದಿಲ್ಲ. ಅಂತಹ ಒಬ್ಬ ವ್ಯಕ್ತಿಯು ತನ್ನದೇ ಪ್ರಪಂಚದಲ್ಲಿ ಜೀವಿಸುತ್ತಾನೆ. ಅದು ಭ್ರಮೆ ಅಥವಾ ಭ್ರಾಂತಿ.

ಅಂತಹ ಒಬ್ಬ ವ್ಯಕ್ತಿಗೆ ತನ್ನ ಜೀವನದಲ್ಲಿ ಒಂದು ಸಮಸ್ಯೆಯಿರುವಾಗ; ಅದು ಹಣದ ಬಗ್ಗೆಯಿರಲಿ ಅಥವಾ ಸಂಬಂಧಗಳು ಮೊದಲಾದುವುಗಳ ಬಗ್ಗೆಯಿರಲಿ, ಅವನಿಗೆ ನೋಡಲು ಸಾಧ್ಯವಾಗುವುದು ಬರಿಯ ಸಮಸ್ಯೆಗಳನ್ನು ಮಾತ್ರ. ಅವನ ಮನಸ್ಸು ಸಮಸ್ಯೆಯಲ್ಲಿ ಸಂಪೂರ್ಣವಾಗಿ ಮುಳುಗಿಹೋಗಿರುತ್ತದೆ ಮತ್ತು ಬೇರೇನೂ ಅಲ್ಲ. ಅವನು ಹಗಲು ರಾತ್ರಿಗಳನ್ನು; ವರ್ಷಗಳನ್ನು ಕೂಡಾ ಅದರ ಬಗ್ಗೆ ಚಿಂತೆ ಮಾಡುವುದರಲ್ಲಿ ಕಳೆಯುತ್ತಾನೆ, ಆದರೆ ಅದರಿಂದ ಹೊರಬರಲು ಅವನಿಗೆ ಸಾಧ್ಯವಾಗುವುದಿಲ್ಲ.

ಒಬ್ಬರು ಯಾವುದಾದರೂ ರೀತಿಯ ನಷ್ಟವನ್ನು ಅನುಭವಿಸುತ್ತಿದ್ದರೆ, ಆಗ ಆ ನಷ್ಟವು ಆ ವ್ಯಕ್ತಿಯನ್ನು ಎಷ್ಟೊಂದು ಸಂಪೂರ್ಣವಾಗಿ ಹಿಡಿತದಲ್ಲಿಡುವುದೆಂದರೆ, ಅದರ ಹೊರತಾಗಿ ಏನನ್ನು ನೋಡಲೂ ಅವನಿಗೆ ಸಾಧ್ಯವಾಗುವುದಿಲ್ಲ. ಇದನ್ನೇ ಕೃಷ್ಣ ಪರಮಾತ್ಮನು ಮೋಹವೆಂದು ಕರೆಯುವುದು. ಅವನು ಹೀಗೆಂದು ಹೇಳುತ್ತಾನೆ, "ಅಂತಹ ಮೋಹಗಳಲ್ಲಿ ಸಿಲುಕಿಹಾಕಿಕೊಂಡವನಿಗೆ ನನ್ನನ್ನು, ಎಲ್ಲವನ್ನೂ ವ್ಯಾಪಿಸಿರುವ ಒಂದು ಶುದ್ಧ ಚೇತನವೆಂದು ಗುರುತಿಸಲು ಸಾಧ್ಯವಾಗುವುದಿಲ್ಲ. ನನ್ನ ಅಗಾಧ ಪ್ರಭೆಯನ್ನು ಗುರುತಿಸಲು ಅವನಿಗೆ ಸಾಧ್ಯವಾಗುವುದಿಲ್ಲ. ನಾನು ಬಹಳ ವಿಶಾಲವೂ ಭವ್ಯವೂ ಆಗಿರುವೆನು, ಅದನ್ನು ನೋಡಲು ಅವನಿಗೆ ಸಾಧ್ಯವಾಗುವುದಿಲ್ಲ. ಹಾಗಾದರೆ ಹೀಗಾಗುವುದು ಯಾಕೆ ಮತ್ತು ನನ್ನನ್ನು ಗುರುತಿಸಲು ಯಾರಿಗೆ ಸಾಧ್ಯವಾಗುವುದು?"

ಇದರ ಬಗ್ಗೆ ಅವನು ಮುಂದಿನ ಶ್ಲೋಕದಲ್ಲಿ ವಿವರಿಸುತ್ತಾನೆ:

’ಯೇಷಾಂ ತ್ವಂತಗತಂ ಪಾಪಂ ಜನಾನಾಂ ಪುಣ್ಯಕರ್ಮಣಾಮ್ I
ತೇ ದ್ವಂದ್ವಮೋಹನಿರ್ಮುಕ್ತಾ ಭಜಂತೇ ಮಾಂ ದೃಢಾವ್ರತಾಃ II’  (೭.೨೮)

ಕೃಷ್ಣ ಪರಮಾತ್ಮನು ಹೀಗೆಂದು ಹೇಳುತ್ತಾನೆ, "ಯಾರ ಪಾಪಗಳು ಕಡಿಮೆಯಾಗಿವೆಯೋ ಮತ್ತು ಯಾರು ತನ್ನ ಒಳ್ಳೆಯ ಕೆಲಸಗಳ ಪುಣ್ಯವನ್ನು ಪಡೆಯಲು ತೊಡಗಿರುವನೋ, ಅಂತಹ ಒಬ್ಬ ವ್ಯಕ್ತಿಯು ರಾಗ ಮತ್ತು ದ್ವೇಷಗಳ ಸಂಘರ್ಷಣೆಗಳಿಂದ ಮುಕ್ತನಾಗುತ್ತಾನೆ ಹಾಗೂ ನನ್ನನ್ನು ಅವಿರತನಾಗಿ ಪೂಜಿಸುತ್ತಾನೆ.  ಹಾಗೆಯೇ, ನನ್ನನ್ನು ನಂಬುವವನೊಬ್ಬನು ತನ್ನಿಂತಾನೇ ತನ್ನೆಲ್ಲಾ ಪಾಪಗಳಿಂದ ಶುದ್ಧೀಕರಿಸಲ್ಪಡುತ್ತಾನೆ. ನನ್ನಲ್ಲಿ ಆಶ್ರಯ ಪಡೆಯುವ ಮತ್ತು ನನ್ನನ್ನು ಶುದ್ಧ ಚೇತನವಾಗಿ ನೋಡುವವನೊಬ್ಬನು ತನ್ನೆಲ್ಲಾ ಪಾಪಗಳಿಂದ ಮುಕ್ತನಾಗುತ್ತಾನೆ ಹಾಗೂ ಅವನ ಎಲ್ಲಾ ಒಳ್ಳೆಯ ಕರ್ಮಗಳು ಫಲವನ್ನು ನೀಡಲು ತೊಡಗುತ್ತವೆ."

ಮುಂದಿನ ಶ್ಲೋಕದಲ್ಲಿ ಅವನು ಹೀಗೆಂದು ಹೇಳುತ್ತಾನೆ,
’ಜರಾಮರಣಮೋಕ್ಷಾಯ ಮಾಮಾಶ್ರಿತ್ಯ ಯತಂತಿ ಯೇ I
ತೇ ಬ್ರಹ್ಮ ತದ್ ವಿದುಃ ಕೃತ್ಸ್ನಮಧ್ಯಾತ್ಮಂ ಕರ್ಮ ಚಾಖಿಲಮ್ II’  (೭.೨೯)

ಕೃಷ್ಣ ಪರಮಾತ್ಮನು ಹೀಗೆಂದು ಹೇಳುತ್ತಾನೆ, "ಯಾರು ವೃದ್ಧಾಪ್ಯ ಮತ್ತು ಮೃತ್ಯುವಿನಿಂದ ಮುಕ್ತವಾಗಲು ಬಯಸುವರೋ; ಯಾರಿಗೆ ನಾನು ಮಾತ್ರ ಆಶ್ರಿತನೋ ಮತ್ತು ಯಾರು ಎಲ್ಲದಕ್ಕೂ ಸಂಪೂರ್ಣವಾಗಿ ನನ್ನನ್ನೇ ಅವಲಂಬಿಸಿರುವರೋ, ಅಂತಹ ಗಣ್ಯರು ಖಂಡಿತವಾಗಿಯೂ ಬ್ರಹ್ಮನನ್ನು ಹೊಂದುತ್ತಾರೆ. ನಿಜವಾಗಿಯೂ ಆಧ್ಯಾತ್ಮವೆಂದರೆ ಇದುವೇ. ಕರ್ಮಗಳ ರೀತಿಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದು ಕೂಡಾ ಅವರಿಗೇ."

ನಂತರ ಅವನು ಹೇಳುತ್ತಾನೆ,

’ಸಾಧಿಭೂತಾಧಿದೈವಂ ಮಾಂ ಸಾಧಿಯಜ್ಞಂ ಚ ಯೇ ವಿದುಃ I
ಪ್ರಯಾಣಕಾಲೇಪಿ ಚ ಮಾಂ ತೇ ವಿದುರ್ಯುಕ್ತ ಚೇತಸಃ II’  (೭.೩೦)

ಇಲ್ಲಿ ಕೃಷ್ಣ ಪರಮಾತ್ಮನು, "ಯಾರ ಪುಣ್ಯಗಳು ಫಲವನ್ನು ನೀಡಲು ತೊಡಗುತ್ತವೆಯೋ ಅವರು ತಮ್ಮೆಲ್ಲಾ ದುಃಖಗಳಿಂದ ಮುಕ್ತರಾಗುತ್ತಾರೆ ಮತ್ತು ಅವರು ನನ್ನ ಕಡೆಗೆ ಸೆಳೆಯಲ್ಪಡಲು ತೊಡಗುತ್ತಾರೆ. ಯಾರ ಪಾಪಗಳು ಶುದ್ಧೀಕರಿಸಲ್ಪಟ್ಟಿಲ್ಲವೋ ಅವರು ಅಜ್ಞಾನದಲ್ಲಿ ಮತ್ತು ಭ್ರಮೆಯಲ್ಲಿ ಸಿಕ್ಕಿಹಾಕಿಕೊಂಡಿರುತ್ತಾರೆ" ಎಂದು ಹೇಳುತ್ತಾನೆ.

ಇದು ಪಾಪ ಮತ್ತು ಪುಣ್ಯಗಳ ನಡುವೆಯಿರುವ ವ್ಯತ್ಯಾಸವಾಗಿದೆ. ಇದುವೇ ಇವುಗಳೆರಡರ ವ್ಯಾಖ್ಯಾನವಾಗಿದೆ. ನಿಮ್ಮನ್ನು ಆಧ್ಯಾತ್ಮ ಪಥಕ್ಕೆ ಬರಲು ಯಾವುದು ಬಿಡುವುದಿಲ್ಲವೋ ಅದು ಪಾಪವಾಗಿದೆ. ನೋಡಿ, ನೀವು ಬೆಳಕಿನ ಕಡೆಗೆ ನಡೆದರೆ, ಕತ್ತಲು ತನ್ನಿಂತಾನೇ ಮಾಯವಾಗಲು ಶುರುವಾಗುತ್ತದೆ. ಆದರೆ ಪಾಪವೆಂದರೆ, ಯಾವುದು ನಿಮ್ಮನ್ನು ಬೆಳಕಿನ ಕಡೆಗೆ ನಡೆಯಲು ಬಿಡುವುದಿಲ್ಲವೋ ಅದು. ಮತ್ತು ಇದುವೇ ದುಃಖ, ನೋವು ಮತ್ತು ಸಂಕಟಗಳನ್ನು ಉಂಟುಮಾಡುವುದು.

ಕೋರ್ಸುಗಳಲ್ಲಿ ಮತ್ತು ಕಾರ್ಯಾಗಾರಗಳಲ್ಲಿ ಇದು ಸಂಭವಿಸುವುದನ್ನು ನಾವು ಕೂಡಾ ನೋಡಿದ್ದೇವೆ. ಯಾವುದಾದರೂ ಸಂಕಟ ಮತ್ತು ದುಃಖಗಳಿಗೆ ಇನ್ನೂ ಒಳಗಾಗಬೇಕಾಗಿರುವವರಿಗೆ ಬಂದು ಕೋರ್ಸಿನಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ. ಅವರ ಕರ್ಮವು ಹೇಗಿರುತ್ತದೆಯೆಂದರೆ, ಅವರು ಬಂದು ಕೋರ್ಸನ್ನು ಅನುಭವಿಸುವುದನ್ನು ಅದು ತಡೆಯುತ್ತದೆ.

ಅವರಿಗೆ ಸತ್ಸಂಗಕ್ಕೆ ಬರಲು ಸಾಧ್ಯವಾಗುವುದಿಲ್ಲ ಮತ್ತು ಅವರು ಬಂದರೂ ಸಹ ಅವರ ಮನಸ್ಸು ಬೇರೆಲ್ಲೋ ಓಡುತ್ತಿರುತ್ತದೆ. ಇದೆಲ್ಲವೂ ಅವರ ಪ್ರತಿಕೂಲ ಕರ್ಮದಿಂದಾಗಿ (ಪಾಪ). ಯಾರು ಈ ಪಥದಲ್ಲಿ ನಡೆಯುವರೋ ಮತ್ತು ಆತ್ಮ ಜ್ಞಾನವನ್ನು ಪಡೆಯುವರೋ ಅವರು ಸಂಕಟಗಳಿಂದ ಮುಕ್ತರಾಗುತ್ತಾರೆ.

ಇದರೊಂದಿಗೆ, ಏಳನೆಯ ಅಧ್ಯಾಯವು ಮುಕ್ತಾಯವಾಗುತ್ತದೆ. ಮುಂದಿನ ಅಧ್ಯಾಯದಲ್ಲಿ ಕೃಷ್ಣ ಪರಮಾತ್ಮನು, ಆಧ್ಯಾತ್ಮವೆಂದರೆ ನಿಜವಾಗಿಯೂ ಏನೆಂಬುದನ್ನು ವಿವರಿಸುತ್ತಾನೆ. ಯಾವುದು ನಿಮಗೆ ಪುಣ್ಯವನ್ನು ತರುವುದೋ ಮತ್ತು ನಿಮ್ಮ ಜೀವನದಲ್ಲಿ ಪ್ರಕಾಶವು (ಆತ್ಮಜ್ಞಾನದ)  ಉದಯಿಸುವಂತೆ ಮಾಡುವುದೋ ಅದು ಆಧ್ಯಾತ್ಮವಾಗಿದೆ.

ಒಮ್ಮೆ ನೀವು ಈ ಪಥದಲ್ಲಿ ಬಂದ ಬಳಿಕ, ನಿಮಗೆ ವಯಸ್ಸಾಗಿದೆಯೆಂದು ನಿಮಗನ್ನಿಸುವುದಿಲ್ಲ. ಆಧ್ಯಾತ್ಮ ಪಥದಲ್ಲಿರುವ ವಯಸ್ಸಾದ ಮತ್ತು ವೃದ್ಧ ಜನರು ತಮ್ಮ ಕೊನೆಯುಸಿರಿನವರೆಗೆ ತಮ್ಮ ಉತ್ಸಾಹವನ್ನು ಇಟ್ಟುಕೊಳ್ಳುತ್ತಾರೆ. ಅವರಿಗೆಷ್ಟೇ ವಯಸ್ಸಾದರೂ, ಅವರ ಮುಖವು ಇನ್ನೂ ಪ್ರಸನ್ನತೆ ಮತ್ತು ಸಂತೋಷಗಳಿಂದ ಬೆಳಗುತ್ತಿರುತ್ತದೆ. ಅವರಲ್ಲಿ ಒಂದು ಮಗುವಿನಂತಹ ಮುಗ್ಧತೆಯಿರುತ್ತದೆ. ಯಾರಲ್ಲಿ ಅಂತಹ ಒಂದು ಮಗುವಿನಂತಹ ಮುಗ್ಧತೆಯಿರುವುದೋ ಅವರನ್ನು ನೀವು ವೃದ್ಧರು ಎಂದು ಕರೆಯಲು ಹೇಗೆ ಸಾಧ್ಯ? ಯಾರು ಮರಣಕ್ಕೆ ಹೆದರುವುದಿಲ್ಲವೋ ಮತ್ತು ನಗುನಗುತ್ತಾ ಇರುವರೋ ಅವರನ್ನು ನೀವು ವಯಸ್ಸಾದವರೆಂದು ಕರೆಯಲು ಹೇಗೆ ಸಾಧ್ಯ? ನಾನು ಶರೀರವಲ್ಲ, ನಾನು ಶುದ್ಧ ಚೇತನ ಎಂದು ಒಬ್ಬ ವ್ಯಕ್ತಿಯು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವಾಗ ಅವನಲ್ಲಿ ಅಷ್ಟೊಂದು ಶಕ್ತಿಯು ಉದಯಿಸುತ್ತದೆ. ಅಂತಹ ಒಬ್ಬ ವ್ಯಕ್ತಿಯು ಮರಣದ ಭಯ ಹೊಂದಿರಲು ಹೇಗೆ ಸಾಧ್ಯ?

ಅಂತಹ ಜನರು, ವೃದ್ಧಾಪ್ಯ ಮತ್ತು ಮರಣಗಳಿಂದ ಮುಕ್ತತೆಯನ್ನು ಅನುಭವಿಸುತ್ತಾರೆ. ಅವರು ಸಂತೋಷ ಮತ್ತು ಉತ್ಸಾಹಗಳಿಂದ ತುಂಬಿರುತ್ತಾರೆ. ರಾಗ ಮತ್ತು ದ್ವೇಷಗಳ ಸಂಘರ್ಷಗಳಿಂದ ಅವರು ಮುಕ್ತರಾಗಿರುತ್ತಾರೆ.

ಇಲ್ಲವಾದರೆ, ಜೀವನದ ಕೊನೆಯ ಕ್ಷಣದವರೆಗೂ, ಹಲವು ಜನರು ತಮ್ಮ ಮಗ, ಮಗಳು ಅಥವಾ ಮೊಮ್ಮಕ್ಕಳು ಮೊದಲಾದವರ ಬಗ್ಗೆ ಚಿಂತಿಸುತ್ತಿರುವುದನ್ನು ನೀವು ನೋಡುತ್ತೀರಿ (ನನ್ನ ಮಗನಿಗೆ ಹಾಗಾಗುತ್ತಿದೆ, ನನ್ನ ಮಗಳಿಗೆ ಹೀಗಾಗುತ್ತಿದೆ). ಪ್ರತಿಯೊಬ್ಬರೂ ತಮ್ಮೊಡನೆ ಕೆಲವು ಕರ್ಮಗಳನ್ನು ಪಡೆದುಕೊಂಡು ಬಂದಿರುತ್ತಾರೆ, ಸ್ವಲ್ಪ ಪಾಪ ಹಾಗೂ ಸ್ವಲ್ಪ ಪುಣ್ಯ ಎಂದು ನೀವು ಅರಿತುಕೊಳ್ಳಬೇಕು. ಪಾಪ ಕರ್ಮಗಳ ಸಾಲವನ್ನು ತೀರಿಸಬೇಕಾಗುತ್ತದೆ ಮತ್ತು ಉತ್ತಮ ಕರ್ಮಗಳ ಪುಣ್ಯಗಳನ್ನು ಅನುಭವಿಸಬೇಕಾಗುತ್ತದೆ.

ಕೃಷ್ಣ ಪರಮಾತ್ಮನು ಹೇಳುತ್ತಾನೆ, "ನನ್ನ ಮೇಲೆ ಯಾರು ಪೂರ್ಣ ನಂಬಿಕೆಯಿಟ್ಟಿರುತ್ತಾರೋ, ಅವರು ಕರ್ಮ ಮತ್ತು ಪಾಪಗಳಿಂದ ಮುಕ್ತರಾಗುತ್ತಾರೆ. ನಿಜವಾಗಿಯೂ ಅಧ್ಯಾತ್ಮಿಕತೆಯೆಂದರೆ ಇದೇ."

ಜನರು ಅಧ್ಯಾತ್ಮಿಕತೆಯೆಂದರೆ ಕೇವಲ ಕರ್ಮ ವಿಧಿಗಳನ್ನು ಜೀವನದಾದ್ಯಂತ ಪಾಲಿಸುವುದೆಂದು ಊಹಿಸುತ್ತಾರೆ. ಆದರೆ ಅದು ತಪ್ಪು. ಜೀವನ ಪರ್ಯಂತ ಕೇವಲ ಜಪಮಾಲೆಯ ಮಣಿಗಳನ್ನು ತಿರುವುತ್ತಿದ್ದರೆ, ಅದು ನಿಮಗೆ ಯಾವುದೇ ಪುಣ್ಯವನ್ನು ತರಲಾರದು. ಹೃದಯದಲ್ಲಿ ದೈವಿಕತ್ವವು ಬಲವಾಗಿ ಊರಿದರೆ, ಅಷ್ಟೇ ಸಾಕು!

ಉದಾಹರಣೆಗೆ, ನೀವೆಲ್ಲರೂ ಬೆಂಗಳೂರಿನಲ್ಲಿ ಕುಳಿತಿದ್ದೀರಿ. ನಿಮಗೆಲ್ಲರಿಗೂ ನೀವು ಬೆಂಗಳೂರಿನಲ್ಲಿರುವಿರೆಂದು ತಿಳಿದಿದೆ, ಅಲ್ವೇ? ಯಾರಾದರೂ ನಿಮಗೆ ಪುನಃಪುನಃ ಇದನ್ನು ನೆನಪಿಸಬೇಕೇ? "ನಾನು ಬೆಂಗಳೂರಿನಲ್ಲಿದ್ದೇನೆ" ಎಂದು ನೀವು ಹತ್ತು ಸಾರಿ ಜಪಿಸಿ, ನೆನಪಿಸಕೊಳ್ಳಬೇಕಾಗಿದೆಯೇ? ಯಾರು ಆ ತರ ಮಾಡುತ್ತಾರೆ? ಯಾರಿಗೆ ಸಂಶಯವಿದೆಯೋ ಅವರು. ನೀವು ದೆಹಲಿಯಲ್ಲಿದ್ದು, ನಿಮಗೆ ಬೆಂಗಳೂರಿನಲ್ಲಿದ್ದೀರೆಂದು ತಪ್ಪು ಕಲ್ಪನೆಯಿದ್ದರೆ, ನೀವು ದೆಹಲಿಯಲ್ಲಿದ್ದೀರಿ, ಬೆಂಗಳೂರಿನಲ್ಲಲ್ಲ ಎಂದು ಪುನಃಪುನಃ ನೆನಪಿಸಿಕೊಳ್ಳಬೇಕಾಗುತ್ತದೆ.

ಹಾಗೆ, ಕೃಷ್ಣ ಪರಮಾತ್ಮನು, "ಬಲವಾದ ಅರ್ಪಣೆ ಮತ್ತು ಅಚಲಿತ ಶ್ರದ್ಧೆಯಿಂದ ನನ್ನನ್ನು ನಂಬಿ" ಎನ್ನುವಾಗ, ಅವನು ಅವನ ಹೆಸರನ್ನು ಪುನಃಪುನಃ ಜಪಿಸಿ ಎನ್ನುತ್ತಿಲ್ಲ. ಅಲ್ಲ, ಅದು ಹಾಗಲ್ಲ. ಒಂದು ಸಾರಿ ಅವನ ಮೇಲೆ ನಂಬಿಕೆಯಿಟ್ಟರೆ ಅಷ್ಟೆ. ಅನಂತರ ನಿಮಗೆ ಯಾವುದೇ ಸಂಶಯವಿರಬಾರದು. ದೇವರನ್ನು ಅರಿಯುವುದೆಂದರೆ ನಿಜವಾಗಿ ಇದೇ. ಒಂದು ಸಾರಿ ಅವನನ್ನು ಅರಿತ ಮೇಲೆ ಮತ್ತು ಅವನ ಮೇಲೆ ಸಂಪೂರ್ಣ ನಂಬಿಕೆಯಿಟ್ಟರೆ, ಅದು ಎಂದೆಂದಿಗೂ ಉಳಿಯುತ್ತದೆ. ಇಂತಹ ಜ್ಞಾನವು ಎಂದಿಗೂ ಕುಂದುವುದಿಲ್ಲ. ಆದು ಎಂದೆಂದಿಗೂ ನಿಮ್ಮೊಡನಿರುವುದು.

ಭ್ರಮೆಯು ತುಂಬಾ ಸಮಯ ಉಳಿಯಲಾರದು. ಅದು ಬಂದು ಹೋಗುತ್ತಿರುತ್ತದೆ. ಅದು ಶಾಶ್ವತವಾಗಿ ಉಳಿಯುವುದಿಲ್ಲ. ಜ್ಞಾನವನ್ನು ಎಂದೂ ಅಳಿಸಲಾಗದು. ಒಬ್ಬನ ಪಾಪಕಾರ್ಯಗಳಿಂದಾಗಿ ಮಾತ್ರ, ಜ್ಞಾನವು ಅಜ್ಞಾನದಿಂದ ಮರೆಮಾಚಲ್ಪಡುವುದು. ಒಳ್ಳೆಯ ಕಾರ್ಯಗಳನ್ನು ಮಾಡಿದಾಗ, ಅಜ್ಞಾನದ ಸೆರಗು ಸರಿದು, ಜ್ಞಾನವು ಉದಯಿಸುತ್ತದೆ. ಇದೇ ಆಧ್ಯಾತ್ಮಿಕತೆ.

ಮೂರು ರೀತಿಯ ತಾಪಗಳಿವೆ. ಆದಿಭೌತಿಕ, ಆಧ್ಯಾತ್ಮಿಕ ಮತ್ತು ಆದಿದೈವಿಕ.

ಕೃಷ್ಣ ಪರಮಾತ್ಮನು, "ನಾನು ಈ ಮೂರೂ ಮತ್ತು ಅವುಗಳನ್ನು ಮೀರಿದವನೂ ಆಗಿರುವೆನು" ಎಂದು ಹೇಳುತ್ತಾನೆ ಮತ್ತು ಅವನು ಅದನ್ನು ಅಷ್ಟಕ್ಕೇ ಬಿಟ್ಟು, ಅರ್ಜುನನು ಅದರ ಬಗ್ಗೆ ಪ್ರಶ್ನಿಸುವಂತೆ ಮಾಡುತ್ತಾನೆ. ಇಲ್ಲಿ ಅವನು ಅರ್ಜುನನಿಗೆ ಪ್ರಶ್ನೆಯನ್ನು ಕೇಳಲು ಅವಕಾಶ ಮಾಡಿಕೊಡುವುದಲ್ಲದೆ, ಅವನು ಗಮನ ನೀಡುತ್ತಿರುವನೇ ಇಲ್ಲವೇ ಎಂದು ಕೂಡಾ ಪರೀಕ್ಷಿಸುತ್ತಿದ್ದಾನೆ (ನಗು). ಅರ್ಜುನನು ಅದುವರೆಗೆ ಕೊಡಲ್ಪಟ್ಟ ಎಲ್ಲಾ ಜ್ಞಾನವನ್ನು ಅರ್ಥೈಸಿರುವನೇ ಇಲ್ಲವೇ ಎಂದು ಪರೀಕ್ಷಿಸಲು ಬಯಸುತ್ತಿದ್ದಾನೆ. ಕೃಷ್ಣ ಪರಮಾತ್ಮನು ಜ್ಞಾನವನ್ನು ಕೊಟ್ಟು ಅಧ್ಯಾಯದ ಕೊನೆಗೆ ಅರ್ಜುನನಿಗೆ ಪ್ರಶ್ನಿಸಲು ಹಾಗೂ ಪ್ರತಿಕ್ರಿಯಿಸಲು ಅವಕಾಶವನ್ನು ಕೊಡುತ್ತಾನೆ.

ಬಾಳೆಹಣ್ಣಿನಿಂದ ಪರಮಾನಂದದವರೆಗೆ

ಬೆಂಗಳೂರು, ಭಾರತ
೧೬ ಮೇ ೨೦೧೩

ಪ್ರಶ್ನೆ: ಗುರುದೇವ, ನಾವು ನಮ್ಮೊಂದಿಗೆ ಮನೆಗೆ ಕೊಂಡೊಯ್ಯಬೇಕಾದ ನಿಮ್ಮ ಸಂದೇಶವೇನು?

ಶ್ರೀ ಶ್ರೀ ರವಿ ಶಂಕರ್: ಕೇಳು, ಒಂದು ಸೂಪರ್ ಮಾರ್ಕೆಟಿಗೆ ಬಂದು, ’ನಾನು ಮನೆಗೆ ಕೊಂಡೊಯ್ಯಬೇಕಾದುದೇನು?’ ಎಂದು ಕೇಳುವಂತೆ ಇದು. (ನಗು) ನೌಕರರು ಏನು ಹೇಳುವರೆಂದು ನಿಮಗನಿಸುತ್ತದೆ? ಅವರು ನಿಮಗೆ, ’ನಿಮಗೇನು ಸಾಧ್ಯವೋ ಅದನ್ನು ತೆಗೆದುಕೊಂಡು ಹೋಗಿ’ ಎಂದು ಹೇಳುವರು. ಇಲ್ಲಿ (ಆಶ್ರಮದಲ್ಲಿ) ಎಲ್ಲವೂ ಲಭ್ಯವಿದೆ; ಪರಮಾನಂದದಿಂದ ಬಾಳೆಹಣ್ಣುಗಳವರೆಗೆ (ನಗು). ಕೆಲವರು ಇಲ್ಲಿಗೆ ಸ್ವಲ್ಪ ಶ್ರದ್ಧೆಯೊಂದಿಗೆ ಬರುತ್ತಾರೆ ಮತ್ತು ಕೇವಲ ಒಂದು ಬಾಳೆಹಣ್ಣಿನ ತುಂಡನ್ನು ಒಯ್ಯುತ್ತಾರೆ; ಅದು ಅವರಿಗೆ ಸಿಹಿಯೆನಿಸುತ್ತದೆ. ಕೆಲವರು ಇಲ್ಲಿಗೆ ಸಂಪೂರ್ಣ ಭಕ್ತಿಯೊಂದಿಗೆ ಬರುತ್ತಾರೆ ಮತ್ತು ಪರಮಾನಂದವನ್ನು ಹಿಂದಕ್ಕೆ ಒಯ್ಯುತ್ತಾರೆ. ಹಾಗಾಗಿ ನಿನಗೇನು ಬೇಕೋ ಅದನ್ನು ನೀನು ಕೇಳಬಹುದು ಮತ್ತು ನಿನಗೇನು ಬೇಕೋ ಅದನ್ನು ನೀನು ಮನೆಗೆ ಕೊಂಡೊಯ್ಯಬಹುದು! ಅದನ್ನು ನೀಡಲಾಗುವುದು. ನಿನ್ನೆಲ್ಲಾ ಸಮಸ್ಯೆಗಳು ಮತ್ತು ಚಿಂತೆಗಳನ್ನು ಇಲ್ಲಿ ಬಿಡು.

ಪ್ರಶ್ನೆ: ಗುರುದೇವ, ಅಷ್ಟಾವಕ್ರ ಗೀತೆಯಲ್ಲಿ, ’ನೀನು ಕರ್ತೃವಲ್ಲವಾದ್ದರಿಂದ ಕರ್ತೃತ್ವದಲ್ಲಿ ತೊಡಗಬೇಡ’ ಎಂದು ಹೇಳಲಾಗಿದೆ ಮತ್ತು ಗೀತೆಯು, ’ನೀನು ನಿನ್ನ ಆತ್ಮನಲ್ಲಿ ಸ್ಥಾಪಿತನಾದಾಗ ನಿನಗೊಂದು ಆಯ್ಕೆಯಿದೆ’ ಎಂದು ಹೇಳುತ್ತದೆ. ನಾವು ಕರ್ತೃಗಳಲ್ಲದಿರುವಾಗ ನಮಗೊಂದು ಆಯ್ಕೆಯಿರುವುದು ಹೇಗೆ?

ಶ್ರೀ ಶ್ರೀ ರವಿ ಶಂಕರ್: ಜ್ಞಾನದಲ್ಲಿ ಹಲವಾರು ಹಂತಗಳಿವೆ. ನೀನು ಕರ್ತೃವಲ್ಲದಿರುವಾಗ, ನೀನು ಕರ್ಮದ ಫಲಗಳನ್ನು ಅನುಭವಿಸುವವನು ಕೂಡಾ ಆಗಿರುವುದಿಲ್ಲ ಮತ್ತು ನೀನು ಕರ್ಮದ ಫಲಗಳನ್ನು ಅನುಭವಿಸುವವನು ಆಗಿಲ್ಲದಿರುವಾಗ, ಯಾವುದೇ ಆಯ್ಕೆಯ ಪ್ರಶ್ನೆಯಾದರೂ ಎಲ್ಲಿರುವುದು? ನಿನಗೆ ಅರ್ಥವಾಯಿತೇ?

ಕ್ವಾಂಟಮ್ ಫಿಸಿಕ್ಸ್‌ನಲ್ಲಿ, ಎಲ್ಲವೂ ಪರಮಾಣುಗಳು ಮತ್ತು ಅಣುಗಳಿಂದ ಮಾಡಲ್ಪಟ್ಟಿದೆಯೆಂದು ಹೇಳುವಂತೆ ಇದು. ಇದ್ದಿಲಿನ ಒಂದು ತುಂಡು ಮತ್ತು ವಜ್ರದ ಒಂದು ತುಂಡು ಎರಡೂ ಪರಮಾಣುಗಳಿಂದ ಮಾಡಲ್ಪಟ್ಟಿವೆ.

ನೀವು ಇದರ ಕಡೆಗೆ ಈ ರೀತಿಯಲ್ಲಿ ನೋಡಿದರೆ, ಕಲ್ಲಿದ್ದಲಿನ ಒಂದು ತುಂಡು ಮತ್ತು ಒಂದು ವಜ್ರದ ನಡುವೆ ಯಾವುದೇ ವ್ಯತ್ಯಾಸವಿಲ್ಲ, ಯಾಕೆಂದರೆ ಅವುಗಳೆರಡೂ ಒಂದೇ ರೀತಿಯ ಪರಮಾಣುಗಳಿಂದ ಮಾಡಲ್ಪಟ್ಟಿವೆ. ಆದರೆ ಪ್ರಾಯೋಗಿಕವಾಗಿ, ಕಲ್ಲಿದ್ದಲಿನ ಬದಲು ನೀವು ವಜ್ರದ ಒಂದು ತುಂಡನ್ನು ಬಳಸಲು ಸಾಧ್ಯವಿಲ್ಲ ಮತ್ತು ನೀವು ಕಲ್ಲಿದ್ದಲಿನ ಕಿವಿಯೋಲೆಗಳನ್ನು ಧರಿಸಲೂ ಸಾಧ್ಯವಿಲ್ಲ.

ಹೀಗೆ, ಪ್ರಾಯೋಗಿಕ ಸತ್ಯ ಮತ್ತು ಆಧ್ಯಾತ್ಮಿಕ ಸತ್ಯಗಳ ನಡುವೆ ಒಂದು ವ್ಯತ್ಯಾಸವಿದೆ. ಇವೆರಡನ್ನೂ ನೀವು ಜೀವನದಲ್ಲಿ ಒಟ್ಟಿಗೆ ತೆಗೆದುಕೊಳ್ಳುವಾಗಲೇ ನಿಮ್ಮ ಅನುಭವವು ಪೂರ್ಣಗೊಳ್ಳುವುದು.

’ನಾನು ಕರ್ತೃವಲ್ಲ, ಆದರೆ ನಾನು ನನ್ನ ಕರ್ಮದ ಫಲಗಳನ್ನು ಅನುಭವಿಸುತ್ತಿರುವೆನು’ ಎಂದು ನಿಮಗೆ ನೀವೇ ಪುನರಾವರ್ತಿಸುತ್ತಿದ್ದರೆ, ಆಗ ಅದು ತಪ್ಪು. ಯಾವಾಗೆಲ್ಲಾ ನೀವು ಯಾವುದಾದರೂ ಕರ್ಮದ ಫಲಗಳನ್ನು ಅನುಭವಿಸುತ್ತೀರೋ, ಆಗ ನೀವು ತನ್ನಿಂತಾನೇ ಕರ್ತೃವಾಗುವಿರಿ.

ಅದಕ್ಕಾಗಿಯೇ ಕೃಷ್ಣ ಪರಮಾತ್ಮನು ಹೀಗೆಂದು ಹೇಳುತ್ತಾನೆ,

’ಕಿಂ ಕರ್ಮ ಕಿಮಕರ್ಮೇತಿ ಕವಯೋಪ್ಯತ್ರ ಮೋಹಿತಾಃ I
ತತ್ತೇ ಕರ್ಮ ಪ್ರವಕ್ಷ್ಯಾಮಿ ಯಜ್ಞತ್ವಾ ಮೋಕ್ಷ್ಯಸೇಶುಭಾತ್ II’  (೪.೧೬)

’ಮಹಾನ್ ಸಂತರು ಮತ್ತು ಅತ್ಯಂತ ಬುದ್ಧಿವಂತರು ಕೂಡಾ, ಯಾವ ಕರ್ಮವನ್ನು ಮಾಡುವುದು ಮತ್ತು ಯಾವುದನ್ನು ಮಾಡದಿರುವುದು ಎಂಬುದನ್ನು ನಿರ್ಧರಿಸುವಾಗ ಗೊಂದಲಕ್ಕೊಳಗಾಗುತ್ತಾರೆ. ಕರ್ಮವೆಂದರೇನು ಎಂಬುದನ್ನು ನಾನು ನಿನಗೆ ವಿವರಿಸುವೆನು, ಆದರೆ ಮೊದಲು ನೀನು ಒಬ್ಬ ಯೋಗಿಯಾಗಬೇಕು.’

ನೀನೊಬ್ಬ ಯೋಗಿಯಾಗುವಾಗ, ನೀನೇನೇ ಕರ್ಮ ಮಾಡಿದರೂ, ಅದು ಸ್ವಾಭಾವಿಕವಾಗಿ ಮತ್ತು ಅಪ್ರಯತ್ನಕವಾಗಿ, ಎಲ್ಲಾ ರೀತಿಯಿಂದಲೂ ಸರಿಯೇ ಆಗುವುದು.

ಪ್ರಶ್ನೆ: ಗುರುದೇವ, ಪ್ರೀತಿಯೆಂದರೆ ಆನಂದ ಮತ್ತು ಸಂತೋಷವನ್ನು ಹರಡುವುದು ಎಂದಾಗಿದ್ದರೆ, ಮತ್ತೆ ಯಾಕೆ ಅದು ಅಷ್ಟೊಂದು ನೋವನ್ನುಂಟುಮಾಡುತ್ತದೆ?

ಶ್ರೀ ಶ್ರೀ ರವಿಶಂಕರ್: ನಿಮಗೆ ಗೊತ್ತಾ, ನಾವು ಈ ಭೂಮಿಗೆ ಬರುವಾಗ ನಮಗುಂಟಾಗುವ ಮೊದಲನೆಯ ಅನುಭವವೆಂದರೆ ಅದು ನೋವು. ನಾವು ತಾಯಿಯ ಗರ್ಭದಿಂದ ಹೊರ ಬಂದಾಗ ಅದು ಯಾತನಾಮಯವಾಗಿತ್ತು. ಅದು ತಾಯಿ ಮತ್ತು ಮಗು ಇಬ್ಬರಿಗೂ ಯಾತನಾಮಯವಾಗಿತ್ತು.

ಒಂಭತ್ತು ತಿಂಗಳುಗಳವರೆಗೆ ಮಗುವು ತಾಯಿಯ ಗರ್ಭದೊಳಗೆ ಸಂತೋಷವಾಗಿ ತೇಲುತ್ತದೆ ಮತ್ತು ಅದು ಏನೂ ಮಾಡಬೇಕಾಗಿರುವುದಿಲ್ಲ. ಅದರ ಆಹಾರವು ನೇರವಾಗಿ ಹೊಟ್ಟೆಗೆ ಪೂರೈಕೆಯಾಗುತ್ತದೆ ಮತ್ತು ಅದು ಏನನ್ನೂ ಜಗಿಯಬೇಕಾಗಿಯೂ ಇಲ್ಲ.

ಒಂದು ಮಗುವಾಗಿ ನೀವು ಒಂಭತ್ತು ತಿಂಗಳವರೆಗೆ ಎಷ್ಟೊಂದು ಅತ್ಯಾನಂದದ ಸ್ಥಿತಿಯಲ್ಲಿದ್ದಿರಿ ಮತ್ತು ಅಚಾನಕ್ಕಾಗಿ ನೀರು ಮಾಯವಾಯಿತು ಹಾಗೂ ಆ ಅನುಕೂಲ ವಲಯದಿಂದ ಹೊರಬರಲು ನಿಮ್ಮನ್ನು ಬಲವಂತಪಡಿಸಲಾಯಿತು. ಅದು ನಿಮಗೆ ಯಾತನಾಮಯವಾಗಿತ್ತು. ಹೀಗೆ, ಅದು ಭೂಮಿಗೆ ಬರುವ ನಿಮ್ಮ ಮೊತ್ತಮೊದಲನೆಯ ಅನುಭವವಾಗಿತ್ತು.

ನೀವು ಮೊದಲು ಬಂದಾಗ, ಅದು ಎಷ್ಟೊಂದು ಯಾತನಾಮಯವಾಗಿತ್ತೆಂದರೆ ನೀವು ಅಳಲು ಶುರುಮಾಡಿದಿರಿ. ನೀವು ಅಳದೇ ಇರುತ್ತಿದ್ದರೆ, ಆಗ ನಿಮ್ಮ ಹೆತ್ತವರು ಅಳುತ್ತಿದ್ದರು! ಹೀಗೆ ನೀವು ಅತ್ತಿರಿ ಮತ್ತು ನಿಮ್ಮ ಸುತ್ತಲಿದ್ದ ಜನರು ನಕ್ಕರು. ಅದು ಹೇಗಿದ್ದಿರಬಹುದೆಂದು ಸುಮ್ಮನೆ ಊಹಿಸಿ, ಹುಟ್ಟಿರುವುದಕ್ಕೆ ನೀವು ಅತ್ತಿರಿ ಮತ್ತು ಇತರರೆಲ್ಲರೂ ಸಂತೋಷಗೊಂಡರು.

ನಿಮ್ಮ ಎರಡನೆಯ ಅನುಭವವು ಪ್ರೀತಿಯಾಗಿತ್ತು. ಹುಟ್ಟಿದ ಬಳಿಕ ನಿಮ್ಮ ತಾಯಿಯು ನಿಮ್ಮನ್ನು ತನ್ನ ತೋಳುಗಳಲ್ಲಿ ಎತ್ತಿಕೊಂಡಾಗ, ನಿಮಗೆ ಬಹಳಷ್ಟು ಪ್ರೀತಿ ಮತ್ತು ಅಕ್ಕರೆಯ ಅನುಭವವಾಯಿತು. ಕುಟುಂಬದಲ್ಲಿ ಎಲ್ಲರೂ ನಿಮ್ಮನ್ನು ಪ್ರೀತಿಸಿದರು. ನಿಮ್ಮ ಅಜ್ಜಿ, ತಾತ, ಮಾವಂದಿರು, ಅತ್ತೆಯಂದಿರು, ಚಿಕ್ಕಪ್ಪ, ಚಿಕ್ಕಮ್ಮ, ಎಲ್ಲರೂ. ಎಲ್ಲರೂ ನಿಮ್ಮನ್ನು ಪ್ರೀತಿಸಿದರು ಮತ್ತು ನಿಮಗೆ ಬಹಳಷ್ಟು ಗಮನವನ್ನು ನೀಡಿದರು. ಆದರೆ ಇದೆಲ್ಲವೂ ಬಂದುದು, ಸ್ವಲ್ಪ ನೋವನ್ನು ಅನುಭವಿಸಿದ ಮೇಲೆ, ಅಲ್ಲವೇ? ಹೀಗೆ, ನೋವೆಂಬುದು ಪ್ರೀತಿಯ ಒಂದು ಭಾಗವಾಗಿದೆ ಮತ್ತು ನೀವು ಕಹಿಮಾತ್ರೆಯನ್ನು ಸುಮ್ಮನೇ ನುಂಗಬೇಕು. ಅದು ನಿಮಗೆ ಒಳ್ಳೆಯದು. ನೋವಿನಿಂದ ದೂರ ಓಡಿಹೋಗಲು ಪ್ರಯತ್ನಿಸಬೇಡಿ. ನೀವು ನೋವಿನಿಂದ ದೂರ ಓಡಿಹೋದರೆ, ನೀವು ಪ್ರೀತಿಯಿಂದ ಕೂಡಾ ದೂರ ಓಡಿಹೋಗುತ್ತೀರಿ.  

ಪ್ರಶ್ನೆ: ಗುರುದೇವ, ಬಹು ಪ್ರತಿಭಾವಂತನಾಗಲು, ನಾವು ನಮ್ಮ ಶಕ್ತಿಯನ್ನು ಬೇರೆ ಬೇರೆ ಕ್ಷೇತ್ರಗಳ ಕಡೆಗೆ ಹರಿಸುತ್ತೇವೆ ಮತ್ತು ಕೊನೆಗೆ ಸೋತುಹೋಗುತ್ತೇವೆ. ನಾವೇನು ಮಾಡಬೇಕು?

ಶ್ರೀ ಶ್ರೀ ರವಿ ಶಂಕರ್: ನಿಮಗೆ ಗೊತ್ತಾ, ಯುವ ಹುಡುಗರು ಮತ್ತು ಹುಡುಗಿಯರಾಗಿ, ನೀವು ಇದರ ಬಗ್ಗೆ ಈಗ ಯೋಚಿಸಬಾರದು. ಇದು ಹಲವಾರು ಪ್ರತಿಭೆಗಳನ್ನು ಬೆಳೆಸಿಕೊಳ್ಳಲಿರುವ ಸಮಯವಾಗಿದೆ. ನೀವು ನಿಮ್ಮ ಹದಿಹರೆಯವನ್ನು ದಾಟುವಾಗ ಒಂದು ವಿಷಯವು ನಿಮ್ಮೊಂದಿಗೆ ಉಳಿಯುವುದು. ಆದರೆ ಆ ಸಮಯದ ಮೊದಲು, ನೀವು ಮಾಡಬೇಕಾಗಿರುವ ಒಂದು ವಿಷಯ ಏನೆಂಬುದರ ಬಗ್ಗೆ ಚಿಂತಿಸಬೇಡಿ. ಇಲ್ಲ, ನಾನಿದನ್ನು ಒಪ್ಪುವುದಿಲ್ಲ. ಈ ಕ್ಷಣದಲ್ಲಿ, ನೀವು ಎಲ್ಲಾ ವಹಿವಾಟುಗಳ ಸರದಾರರಾಗಿರಬೇಕು.

ನಿಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ಪ್ರತಿಭೆಗಳನ್ನು ಬೆಳೆಯಿಸಿಕೊಳ್ಳುವುದರತ್ತ ಕೆಲಸ ಮಾಡಿ. ನಿಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ಭಾಷೆಗಳನ್ನು ಕಲಿಯಿರಿ. ಇದು ಕಲಿಯಲಿರುವ ಸಮಯವಾಗಿದೆ. ನೀವು ಸಂಗೀತ, ಅಡುಗೆ, ಆಟಗಳು, ಚಿತ್ರಕಲೆ, ಮೊದಲಾದವುಗಳಲ್ಲಿ ಮುಂದಿರಬೇಕು. ಮತ್ತೆ, ಆ ನಂತರ ನಿಮ್ಮೊಂದಿಗೆ ಯಾವುದು ಉಳಿಯುವುದು ಎಂಬುದನ್ನು ನೀವು ನೋಡಬೇಕು.

ಪ್ರಶ್ನೆ: ಪಾಪಪ್ರಜ್ಞೆಯನ್ನು ಒಬ್ಬರು ಹೇಗೆ ತೊಡೆದುಹಾಕಬಹುದು?

ಶ್ರೀ ಶ್ರೀ ರವಿ ಶಂಕರ್: ಪಾಪಪ್ರಜ್ಞೆಯನ್ನು ನೀನು ಕೂಡಲೇ ತೊಡೆದುಹಾಕಲು ಯಾಕೆ ಬಯಸುವೆ? ಒಂದು ಸ್ವಲ್ಪ ಪಾಪಪ್ರಜ್ಞೆಯಿದ್ದರೆ ಅದು ನಿಜವಾಗಿ ನಿನಗೆ ಒಳ್ಳೆಯದು. ಆ ಪಾಪಪ್ರಜ್ಞೆಯ ಸ್ವಲ್ಪ ಚುಚ್ಚುವಿಕೆಯು, ಅದೇ ತಪ್ಪನ್ನು ನೀನು ಮತ್ತೆ ಮತ್ತೆ ಮಾಡುವುದರಿಂದ ನಿನ್ನನ್ನು ರಕ್ಷಿಸುವುದು. ಹಾಗಾಗಿ ಸ್ವಲ್ಪ ಪಾಪಪ್ರಜ್ಞೆಯನ್ನು ಇಟ್ಟುಕೊಂಡರೆ ಪರವಾಗಿಲ್ಲ. ಆದರೆ ಅದು ಅತಿಯಾದರೆ, ಆಗ ನಾವು ನೋಡೋಣ.

ಪ್ರಶ್ನೆ: ಗುರುದೇವ, ನೀವು ಬಂಜಾರ ನದಿಗೆ ಕುಂಭಮೇಳಕ್ಕೆ ಬಂದಿದ್ದಾಗ, ಅಲ್ಲಿ ಕೆಲವು ನಾಗ ಸ್ವಾಮಿಗಳಿದ್ದರು, ಅವರು ಬಹಳ ಭಯಾನಕವಾಗಿದ್ದರು. ಅವರು ಯಾಕೆ ಹಾಗಿರುವರು?

ಶ್ರೀ ಶ್ರೀ ರವಿ ಶಂಕರ್: ಅವರು ಯಾಕೆ ಹಾಗಿರುವರೆಂದು ನನಗೆ ಕೂಡಾ ಅಚ್ಚರಿಯಾಗುತ್ತದೆ! (ನಗು) ಬಹುಶಃ ಅವರು ಯಾವತ್ತೂ ಭಗವದ್ಗೀತೆಯನ್ನು ಓದಲಿಲ್ಲ. ಕೃಷ್ಣ ಪರಮಾತ್ಮನು ಅವರನ್ನು ಅನುಮೋದಿಸನು.

ಇದಕ್ಕಾಗಿಯೇ ಕೃಷ್ಣ ಪರಮಾತ್ಮನು ಗೀತೆಯಲ್ಲಿ ಹೇಳಿರುವುದು:

’ನಾಹಂ ಪ್ರಕಾಶಃ ಸರ್ವಸ್ಯ ಯೋಗಮಾಯಾಸಮಾವೃತಃ I
ಮೂಢೋಯಂ ನಾಭಿಜಾನಾತಿ ಲೋಕೋ ಮಾಮಜಮವ್ಯಯಮ್ II’  (೭.೨೫)

ಅವನನ್ನುತ್ತಾನೆ, ’ಈ ಜನರು, ಅವರು ನನ್ನನ್ನು ತಿಳಿಯರು.’

ಅಂತಹ ಜನರು ತಮ್ಮದೇ ಪ್ರಪಂಚದಲ್ಲಿ ಕಳೆದುಹೋಗಿರುತ್ತಾರೆ ಮತ್ತು ಅವರು ತಮಗೆ ತಾವೇ ಹಿಂಸೆ ನೀಡುತ್ತಿರುತ್ತಾರೆ. ಆದರೆ ಅವರಲ್ಲಿ ನಿನಗೆ ಕೆಲವು ನಿಜವಾಗಿ ಮಹಾನ್ ಜನರು ಕೂಡಾ ಕಾಣಸಿಗುತ್ತಾರೆ. ಆದುದರಿಂದ, ಕೇವಲ ಬಾಹ್ಯ ರೂಪಕ್ಕನುಸಾರವಾಗಿ ನೀನು ಒಬ್ಬರನ್ನು ’ಒಳ್ಳೆಯವರು’ ಅಥವಾ ’ಕೆಟ್ಟವರು’ ಎಂದು ಹಣೆಪಟ್ಟಿ ಹಚ್ಚಬಾರದು.
ಈ ದೇಶದಲ್ಲಿ ವಿವಿಧ ಸಂಪ್ರದಾಯಗಳು ಮತ್ತು ಯೋಚಿಸುವ ವಿವಿಧ ರೀತಿಗಳು ಇವೆಯೆಂಬುದನ್ನು ನಾವು ಸ್ವೀಕರಿಸಿಕೊಳ್ಳಬೇಕು.

ಪ್ರಶ್ನೆ: ಗುರುದೇವ, ಒಬ್ಬನು ಪಾಪವನ್ನು ಶೇಖರಿಸಿದಾಗ ಅವನಿಗೆ ಸಾಧನೆಯನ್ನು ಮಾಡಬೇಕೆಂದಾಗಲೀ ಅಥವಾ ಸತ್ಸಂಗಕ್ಕೆ ಹೋಗಬೇಕೆಂದಾಗಲೀ ಅನಿಸುವುದಿಲ್ಲವೆಂದು ಹೇಳಲಾಗುತ್ತದೆ. ಆದರೆ ಯಾವುದಾದರೂ ಸಂದರ್ಭದಲ್ಲಿ, ಇದೊಂದು ನಿರ್ದಿಷ್ಟ ಕರ್ಮದಿಂದಾಗಿ ಆಗುತ್ತಿರುವುದೆಂಬುದನ್ನು ನಾವು ಅರಿತುಕೊಂಡರೆ, ಆಗ ನಾವು ಅದನ್ನು ಪುರುಷಾರ್ಥದ (ಪ್ರಯತ್ನಗಳನ್ನು ಮಾಡುವುದು) ಮೂಲಕ ನಿವಾರಿಸಬಹುದೇ?

ಶ್ರೀ ಶ್ರೀ ರವಿ ಶಂಕರ್: ಹೌದು, ಖಂಡಿತವಾಗಿ. ಮಾಡಬಹುದಾದ ಬುದ್ಧಿವಂತಿಕೆಯ ಕೆಲಸ ಕೂಡಾ ಅದೇ ಆಗಿದೆ. ಅಂತಹ ಜನರು ಬುದ್ಧಿವಂತರು. ಅವರನ್ನು ನೀವು ಮೂರ್ಖರು ಅಥವಾ ಅಜ್ಞಾನಿಗಳೆಂದು ಕರೆಯಲು ಸಾಧ್ಯವಿಲ್ಲ. ನೀವು ಮಾಡಿರುವ ಒಂದು ತಪ್ಪು ಕೆಲಸದ ಬಗ್ಗೆ ನಿಮಗೆ ಅರಿವಾದಾಗ, ಈ ಎಲ್ಲಾ ನಕಾರಾತ್ಮಕ ಕರ್ಮಗಳನ್ನು ತುಂಡರಿಸಿ ಹಾಕುವಲ್ಲಿ ಸಾಧನೆ ಮತ್ತು ಸತ್ಸಂಗಗಳು ನಿಮಗೆ ನೆರವಾಗಬಲ್ಲವು.

ಬುಧವಾರ, ಮೇ 15, 2013

ಏಕೈಕ ಚೇತನ

ಬೆಂಗಳೂರು, ಭಾರತ
೧೫ ಮೇ ೨೦೧೩

ವತ್ತು ಶಂಕರ ಜಯಂತಿಯಾಗಿದೆ. ಅಂದರೆ ಆದಿ ಶಂಕರಾಚಾರ್ಯರ ಜನ್ಮ ದಿನ. ಆದಿ ಶಂಕರಾಚಾರ್ಯರು ಅದ್ವೈತ ಸಿದ್ಧಾಂತದ ಬೋಧನೆಗಳನ್ನು ಪ್ರಚಾರ ಮಾಡಿದರು. ಅದ್ವೈತದ ಪ್ರಕಾರ, ಎಲ್ಲವೂ ಒಂದೇ ಒಂದು ವಸ್ತುವಿನಿಂದ ಮಾಡಲ್ಪಟ್ಟಿದೆ. ಅದ್ವೈತದಲ್ಲಿ, ’ಸರ್ವಂ ಖಲ್ವಿದಂ ಬ್ರಹ್ಮಂ’ ಎಂದು ಹೇಳಲಾಗಿದೆ, ಅಂದರೆ, ಎಲ್ಲವೂ ಬ್ರಹ್ಮನ್ ಅಥವಾ ಒಂದು ಚೇತನದಿಂದ ಮಾತ್ರ ಮಾಡಲ್ಪಟ್ಟಿದೆ; ಅದೆಲ್ಲವೂ ವಾಸುದೇವ (ಕೃಷ್ಣ ಪರಮಾತ್ಮನಿಗಿರುವ ಇನ್ನೊಂದು ಹೆಸರು) ಎಂದು ಅರ್ಥ.

ಹಾಗಾಗಿ, ನೀವು ನೋಡುವ ವೈವಿಧ್ಯತೆಯು ವಾಸ್ತವವಲ್ಲ. ವಾಸ್ತವವೆಂದರೆ, ಯಾವುದು ಕಾಣಿಸುವುದಿಲ್ಲವೋ ಅದು.
ಅದು ನಮಗೆ ಸಿಗುತ್ತಿದ್ದ, ಪ್ರಾಣಿಗಳ ಆಕಾರದ ಬಿಸ್ಕತ್ತುಗಳಂತೆ. ಆ ಬಿಸ್ಕತ್ತುಗಳನ್ನು ನೀವು ನೋಡಿರುವಿರಾ? ಅವುಗಳೆಲ್ಲಾ ಬೇರೆ ಬೇರೆ ಆಕಾರಗಳಲ್ಲಿರುತ್ತವೆ - ಒಂದು ಬೆಕ್ಕು, ನಾಯಿ, ಕುದುರೆ, ಆನೆ. ಅಂತಹ ಬಿಸ್ಕತ್ತುಗಳೊಂದಿಗೆ ಆಟವಾಡಲು ಮಕ್ಕಳು ಇಷ್ಟಪಡುತ್ತಾರೆ. ಬೇರೆ ಬೇರೆ ಗಾತ್ರಗಳ ಮತ್ತು ಆಕಾರಗಳ ಈ ಬೇರೆ ಬೇರೆ ಬಿಸ್ಕತ್ತುಗಳನ್ನು ತಯಾರಿಸಲು ಅವೇ ಸಾಮಾನುಗಳನ್ನು ಬಳಸಲಾಗುತ್ತದೆ. ಇವತ್ತು ಚಾಕೊಲೇಟ್‌ನಲ್ಲಿ ಕೂಡಾ ವಿವಿಧ ಪ್ರಾಣಿಗಳ ಆಕಾರಗಳನ್ನು ಮಾಡಿರುವುದನ್ನು ನೀವು ನೋಡುತ್ತೀರಿ. ಆದರೆ ಕೊನೆಯದಾಗಿ ಅವೆಲ್ಲವೂ ಒಂದೇ ಚಾಕೋಲೇಟ್‌ನಿಂದಲೇ ಮಾಡಲ್ಪಟ್ಟಿರುತ್ತವೆ, ಅಲ್ಲವೇ? ಮತ್ತು ಅವುಗಳಲ್ಲಿ ಎಲ್ಲವೂ ಹೆಚ್ಚು ಕಡಿಮೆ ಒಂದೇ ರುಚಿಯನ್ನು ಹೊಂದಿರುತ್ತವೆ. ಆದರೆ ಈ ಚಾಕೊಲೇಟುಗಳಲ್ಲಿರುವ ವೈವಿಧ್ಯತೆಯನ್ನು ನೋಡಿ ಮಕ್ಕಳು ಆನಂದಿಸುತ್ತಾರೆ. ಹೀಗೆ, ಅವುಗಳೆಲ್ಲವೂ ಬೇರೆ ಬೇರೆಯಾಗಿ ಕಂಡರೂ ಕೂಡಾ,
ಮೂಲಭೂತವಾಗಿ ಅವುಗಳು ಒಂದೇ. ನಾವು ನೋಡುವುದೆಲ್ಲವೂ ಪರಸ್ಪರ ಭಿನ್ನವಾಗಿ ಕಾಣಿಸುವುದು ಮಾಯೆಯಿಂದಾಗಿ, ಆದರೆ ಅದು ನಿಜವಲ್ಲ.

ಆದಿಶಂಕರರ ಒಂದು ಕಥೆಯಿದೆ.

ಒಮ್ಮೆ ಆದಿಶಂಕರರು ಹೇಳುತ್ತಿದ್ದರು, ’ಈ ಸಂಪೂರ್ಣ ಪ್ರಪಂಚ, ಅಂದರೆ ಎಲ್ಲವೂ ಏನೂ ಅಲ್ಲ.’ ಹೀಗೆ ಅವರು, ’ಇದೆಲ್ಲವೂ ಏನೂ ಅಲ್ಲ’ ಎಂದು ಹೇಳುತ್ತಿದ್ದರು. ಆಧುನಿಕ ಕಾಲದ ವಿಜ್ಞಾನಿಗಳು, ’ಈ ಎಲ್ಲಾ ವಸ್ತುಗಳು ಏನೂ ಅಲ್ಲ, ಯಾಕೆಂದರೆ ಅವುಗಳೆಲ್ಲವೂ ಕೇವಲ ತರಂಗಗಳು’ ಎಂದು ಹೇಳುವಂತೆ. ಅವರು ’ಎಲ್ಲವೂ ಏನೂ ಅಲ್ಲ’ ಎಂದು ಹೇಳುತ್ತಿರುವಂತೆಯೇ ಒಂದು ಹುಚ್ಚು ಹಿಡಿದ ಆನೆಯು ಅವರ ಕಡೆಗೆ ಓಡಲು ಪ್ರಾರಂಭಿಸಿತು. ಹೀಗಾಗಿ ಶಂಕರರು ರಕ್ಷಣೆ ಪಡೆಯಲು ಓಡಿದರು.

ಆಗ ಯಾರೋ ಹೇಳಿದರು, ’ಓ, ಆ ಆನೆಯು ಏನೂ ಅಲ್ಲ. ನೀವು ಯಾಕೆ ಓಡುತ್ತಿರುವಿರಿ?’

ಆಗ ಶಂಕರರು ಹೇಳಿದರು, ’ಆನೆಯು ಏನೂ ಅಲ್ಲ ಮತ್ತು ನನ್ನ ಓಟ ಕೂಡಾ ಏನೂ ಅಲ್ಲ.’

ಅಂತಹುದಾಗಿತ್ತು ಆದಿ ಶಂಕರಾಚಾರ್ಯರ ಅಗಾಧವಾದ ಬುದ್ಧಿಶಕ್ತಿ ಮತ್ತು ಇಂತಹವರು ನಿಮಗೆ ವಿರಳವಾಗಿ ಸಿಗುವರು.

ಸಾವಿರ ವರ್ಷಗಳ ಮೊದಲು ಅವರು ಏನನ್ನು ಹೇಳಿದರೋ ಅದು, ಇವತ್ತು ಆಧುನಿಕ ವಿಜ್ಞಾನವು ನಮಗೆ ಏನನ್ನು ಹೇಳುವುದೋ ಅದರೊಂದಿಗೆ ಸರಿಯಾಗಿ ಹೊಂದುತ್ತದೆ. ಇದನ್ನು ನಾವು, ಸಾಪೇಕ್ಷತಾ ಸಿದ್ಧಾಂತಗಳಂತಹ ಬೇರೆಯ ಹೆಸರುಗಳು ಮತ್ತು ಸಿದ್ಧಾಂತಗಳಿಂದ ತಿಳಿದಿದ್ದೇವೆ. ಆದರೆ ಅದು ಒಂದೇ ವಿಷಯ. ಎಲ್ಲವೂ ಆ ಒಂದು ವಿಷಯದ ವಿಸ್ತರಣೆಯೇ ಆಗಿದೆ.

ಇತ್ತೀಚೆಗೆ ಇಲ್ಲಿಗೆ ಪ್ರೊಫೆಸರ್. ಡಿ ಹೂರೆ ಎಂಬ ಒಬ್ಬರು ಮಹಾನ್ ವಿಜ್ಞಾನಿ ಬಂದಿದ್ದರು. ತಾನು ಕಳೆದ ೪೫ ವರ್ಷಗಳಿಂದ ವಸ್ತುವಿನ ಬಗ್ಗೆ ಅಧ್ಯಯನ ನಡೆಸುತ್ತಿರುವುದಾಗಿ ಅವರು ನನ್ನಲ್ಲಿ ಹೇಳಿದರು. ಅವರಂದರು, ’ಗುರುದೇವ, ನಾನು ವಸ್ತುವಿನ ಬಗ್ಗೆ ೪೫ ವರ್ಷಗಳ ಕಾಲ ಅಧ್ಯಯನ ನಡೆಸಿದೆ, ತಿಳಿದಿದ್ದೇನೆಂದರೆ ಅದು ಅಸ್ತಿತ್ವದಲ್ಲಿಯೇ ಇಲ್ಲವೆಂಬುದು! ಹಾಗಾಗಿ ಇವತ್ತು, ನಾನೊಂದು ಭಾಷಣವನ್ನು ಮಾಡುವಾಗ, ವಸ್ತುವು ಅಸ್ತಿತ್ವದಲ್ಲಿಲ್ಲವೆಂದೂ, ಅಸ್ತಿತ್ವದಲ್ಲಿರುವುದು ಕೇವಲ ತರಂಗಗಳೆಂದೂ ನಾನು ಹೇಳುವುದರಿಂದ, ನಾನು ಬೌದ್ಧ ಧರ್ಮ ಅಥವಾ ಯಾವುದೋ ಪೌರಾತ್ಯ ತತ್ವಶಾಸ್ತ್ರದ ಬಗ್ಗೆ ಮಾತನಾಡುತ್ತಿರುವೆನೆಂದು ಜನರು ಅಂದುಕೊಳ್ಳುತ್ತಾರೆ.’

ಇವತ್ತು ವಿಜ್ಞಾನವು ಅದೇ ತೀರ್ಮಾನಕ್ಕೆ ತಲುಪಿದೆ, ಅಂದರೆ, ಏನು ಕಾಣಿಸುವುದೋ ಅದು ನಿಜವಲ್ಲ ಮತ್ತು ಯಾವುದು ಕಾಣಿಸುವುದಿಲ್ಲವೋ ಅದು ನಿಜವಾದುದು ಹಾಗೂ ಅದುವೇ ಎಲ್ಲವೂ. ಆದುದರಿಂದ ಎಲ್ಲವೂ ವಾಸುದೇವನೇ.

ಈಗ, ಎಲ್ಲವೂ ವಾಸುದೇವನೆಂದು ನಾನು ಹೇಳುವಾಗ, ಇದರರ್ಥ ಒಂದು ನವಿಲುಗರಿಯ ಕಿರೀಟದೊಂದಿಗೆ, ಗಾಢ ಹಳದಿ ಬಣ್ಣದ ಬಟ್ಟೆಗಳನ್ನು ಧರಿಸಿ, ರಾಧಾಳ ಬದಿಯಲ್ಲಿ ಒಂದು ಮರದ ಕೆಳಗೆ ಒಂದು ಕೊಳಲನ್ನು ಹಿಡಿದುಕೊಂಡು ನಿಂತಿರುವ ಯಾರೋ ಒಬ್ಬನಿರುವನೆಂದು ಯೋಚಿಸಬೇಡಿ. ನೀವು ಹೀಗೆ ಯೋಚಿಸಿದರೆ, ಮುಂದೆ ನೀವು, ಕೈಯಲ್ಲಿ ಕೊಳಲು ಹಿಡಿದುಕೊಂಡು ಅವನು ಎಷ್ಟು ವರ್ಷಗಳಿಂದ ಹೀಗೆ ನಿಂತಿರುವನೆಂದೂ, ಯಾವತ್ತೂ ಕೊಳಲನ್ನು ಹಿಡಿದು ನಿಂತಿರುವುದರಿಂದ ಅವನ ಕೈಕಾಲುಗಳು ನೋಯುತ್ತಿರಬಹುದೆಂದೂ ಅಚ್ಚರಿಪಡುವಿರಿ (ನಗು). ಆದುದರಿಂದ ಅದನ್ನು ಈ ರೀತಿಯಲ್ಲಿ ತಪ್ಪಾಗಿ ಅರ್ಥೈಸಿಕೊಳ್ಳಬೇಡಿ.

ಇದಕ್ಕಾಗಿಯೇ ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಪರಮಾತ್ಮನು ಹೀಗೆಂದು ಹೇಳುತ್ತಾನೆ,

’ಅವಜಾನಂತಿ ಮಾಂ ಮೂಢಾ ಮಾನುಷೀಂ ತನುಮಾಶ್ರಿತಮ್ I
ಪರಂ ಭಾವಮಜಾನಂತೋ ಮಮ ಭೂತಮಹೇಶ್ವರಮ್ II’  (೯.೧೧)

ಅವನು ಅರ್ಜುನನಿಗೆ ಹೇಳುತ್ತಾನೆ, ’ಜನರು ನನ್ನನ್ನು ಒಬ್ಬ ಮಾನವನೆಂದು ತಪ್ಪಾಗಿ ಅರ್ಥ ಮಾಡಿಕೊಳ್ಳುತ್ತಾರೆ, ನನ್ನನ್ನು ಗುರುತಿಸಲು ಅವರಿಗೆ ಸಾಧ್ಯವಾಗುವುದಿಲ್ಲ. ಯಾವುದರಿಂದ ಎಲ್ಲವೂ ಬಂದಿರುವುದೋ ಮತ್ತು ಯಾವುದರಿಂದಾಗಿ ಎಲ್ಲವೂ ಅಸ್ತಿತ್ವದಲ್ಲಿರುವುದೋ ಆ ಶುದ್ಧ ಚೇತನ ನಾನು.’

ಎಲ್ಲದರಲ್ಲೂ ಮತ್ತು ಎಲ್ಲರಲ್ಲೂ ವಾಸುದೇವನನ್ನು ನೋಡುವ ಅಂತಹ ಮಹಾತ್ಮರು ನಿಜಕ್ಕೂ ವಿರಳ.

’ವಾಸುದೇವನು ಎಲ್ಲದರಲ್ಲೂ ಇರುವನು, ಆದರೆ ನನ್ನಲ್ಲಲ್ಲ. ನಾನು ಕೇವಲ ಒಬ್ಬ ಸೇವಕ. ನಾನು ಏನೂ ಅಲ್ಲ, ಪರಮಾತ್ಮನ ಪಾದ ಧೂಳಿಗೂ ಅರ್ಹನಲ್ಲದವನು. ನಾನು ಬಹಳ ಅಲ್ಪನು’ ಎಂದು ಯೋಚಿಸುವ ಕೆಲವು ಜನರಿದ್ದಾರೆ. ಇಲ್ಲ, ಈ ರೀತಿ ಯೋಚಿಸಬೇಡಿ. ಎಲ್ಲವೂ ವಾಸುದೇವನಾಗಿದ್ದರೆ, ಆಗ ನೀವು ಕೂಡಾ ವಾಸುದೇವ. ನೀವು, ವಾಸುದೇವನಾಗಿರುವ ಎಲ್ಲದರ ಒಂದು ಭಾಗವಾಗಿರುವಿರಿ. ವಾಸುದೇವನನ್ನು ಮೀರಿದುದು ಏನೂ ಇಲ್ಲ.

ತಮ್ಮ ಅಂತರಾತ್ಮದೊಂದಿಗೆ ಆಳವಾಗಿ ಸಂಬಂಧ ಹೊಂದಿದ ಅಂತಹ ಜ್ಞಾನಿ ಆತ್ಮಗಳು ಬಹಳ ವಿರಳ.

ಕೃಷ್ಣ ಪರಮಾತ್ಮನು ಹೀಗೆಂದು ಹೇಳುತ್ತಾನೆ,

’ಕಾಮೈಸ್ತೈಸ್ತೈರ್ಹೃತಜ್ಞಾನಾಃ ಪ್ರಪದ್ಯಂತೇನ್ಯದೇವತಾಃ I
ತಂ ತಂ ನಿಯಮಮಾಸ್ಥಾಯ ಪ್ರಕೃತ್ಯಾ ನಿಯತಾಃ ಸ್ವಯಾ II’  (೭.೨೦)

ತಮ್ಮ ಬಯಕೆಗಳನ್ನು ಈಡೆರಿಸಿಕೊಳ್ಳುವುದಕ್ಕಾಗಿ ಬೇರೆ ಬೇರೆ ದೇವ ದೇವತೆಯರನ್ನು ಪೂಜಿಸುವ ಹಲವಾರು ಜನರಿದ್ದಾರೆ. ಕೆಲವರು ಭಗವಾನ್ ಹನುಮಂತನನ್ನು ಪೂಜಿಸುತ್ತಾರೆ, ಕೆಲವರು ಭಗವಾನ್ ಶಿವನ ಬಳಿಗೆ ಹೋಗುತ್ತಾರೆ ಮತ್ತು ಕೆಲವರು ಸಂತೋಷಿ ಮಾತೆಯ ಆಶೀರ್ವಾದವನ್ನು ಬೇಡುತ್ತಾರೆ, ಹೀಗೆ. ಅವರು ಎಲ್ಲಾ ಬೇರೆ ಬೇರೆ ದೇವತೆಗಳನ್ನು ಪೂಜಿಸುತ್ತಾರೆ ಮತ್ತು ಅವರು ಹಾಗೆ ಮಾಡುವುದರ ಹಿಂದೆ ಬೇರೆ ಬೇರೆ ಬಯಕೆಗಳಿರುತ್ತವೆ.

ಕೃಷ್ಣ ಪರಮಾತ್ಮನು ಹೇಳುತ್ತಾನೆ, ’ತಮ್ಮ ಬಯಕೆಗಳ ಈಡೇರುವಿಕೆಗಾಗಿ ಜನರು ವಿವಿಧ ದೇವತೆಗಳನ್ನು ಆರಾಧಿಸುತ್ತಾರೆ.
ಆದರೆ ಈ ಎಲ್ಲಾ ದೇವತೆಗಳ ಮೂಲಕ ಈ ಬಯಕೆಗಳನ್ನು ಈಡೇರಿಸುವ ಶಕ್ತಿಯು ನಾನು ಮತ್ತು ನಾನು ಮಾತ್ರವಾಗಿರುವೆನು. ಮತ್ತು ಯಾವ ಭಕ್ತಿಯಿಂದ ಜನರು ಈ ದೇವತೆಗಳನ್ನು ಆರಾಧಿಸುವರೋ ಅದು ಕೂಡಾ ನಾನಾಗಿರುವೆನು.’

ಪ್ರಪಂಚದಲ್ಲಿ ಇವತ್ತು ಹಲವಾರು ವಿವಿಧ ಧಾರ್ಮಿಕ ಸಮುದಾಯಗಳಿವೆ, ಕೇವಲ ಒಂದಲ್ಲ. ಮತ್ತು ಪ್ರತೀ ಧರ್ಮದ ಒಳಗೆ ಹಲವಾರು ಪಂಗಡಗಳಿವೆ. ಬೇರೆ ಬೇರೆ ಜನರು ಬೇರೆ ಬೇರೆ ಪಂಗಡಗಳಲ್ಲಿ ಶ್ರದ್ಧೆ ಹೊಂದಿದ್ದಾರೆ ಮತ್ತು ಆರಾಧಿಸುತ್ತಾರೆ. ಅದರಿಂದಾಗಿ ಅವರು ಸ್ವಲ್ಪ ಪುಣ್ಯವನ್ನೂ ಕೂಡಾ ಪಡೆಯುತ್ತಾರೆ.

ಕೆಲವರು ಯೇಸು ಕ್ರಿಸ್ತನನ್ನು ನಂಬುತ್ತಾರೆ, ಕೆಲವರು ಅಲ್ಲಾನನ್ನು ನಂಬುತ್ತಾರೆ, ಕೆಲವರು ಗುರು ಗ್ರಂಥ ಸಾಹಿಬ್‌ನಲ್ಲಿ (ಸಿಖ್ ಧರ್ಮದ ಪವಿತ್ರ ಗ್ರಂಥ), ಕೆಲವರು ಜೆಹೋವಾಹ್‌ನಲ್ಲಿ ನಂಬಿಕೆಯಿಡುತ್ತಾರೆ. ಯಾರು ಬೇಕಾದರೂ ಯಾವುದೇ ಧರ್ಮದಲ್ಲಿ ಶ್ರದ್ಧೆಯಿರಿಸಲಿ, ಅವರು ಖಂಡಿತವಾಗಿಯೂ ಅದರಿಂದ ಏನನ್ನಾದರೂ ಪಡೆಯುತ್ತಾರೆ. ಅವರಿಗೆ ಅದರಿಂದ ಏನೂ ಸಿಕ್ಕಿಲ್ಲದೇ ಇದ್ದರೆ, ಮೊದಲನೆಯದಾಗಿ ಅವರು ಶ್ರದ್ಧೆಯನ್ನು ಏಕೆ ಇಟ್ಟಿರುತ್ತಾರೆ?

ಅದೇ ರೀತಿಯಲ್ಲಿ, ಕೆಲವು ಜನರು ಕಾಳಿ ದೇವಿಯನ್ನು, ಕೆಲವರು ವೈಷ್ಣೋ ದೇವಿಯನ್ನು ನಂಬುತ್ತಾರೆ, ಅದೇ ವೇಳೆ ಕೆಲವು ಭಕ್ತರು, ತಮ್ಮ ಇಚ್ಛೆಗಳು ಅಮರನಾಥದಲ್ಲಿ (ಉತ್ತರ ಭಾರತದಲ್ಲಿರುವ ಶಿವಾರಾಧನೆಗಿರುವ ಪವಿತ್ರ ಸ್ಥಳಗಳಲ್ಲಿ ಒಂದು) ಈಡೇರುತ್ತವೆಯೆಂದು ತಿಳಿಯುತ್ತಾರೆ.

ಅಮರನಾಥ ಗುಡಿಯು, ಪ್ರಕೃತಿಯ ಯಾವುದೋ ನಿಯಮಕ್ಕನುಸಾರವಾಗಿ ರೂಪುಗೊಳ್ಳುವ ಹಿಮದ ಒಂದು ಗಟ್ಟಿಯಲ್ಲದೆ ಬೇರೇನೂ ಅಲ್ಲವೆಂದು, ಅಲ್ಲಿಗೆ ಹೋಗುವುದಾದರೂ ಯಾಕೆಂದು ಯಾರಾದರೂ ಯೋಚಿಸಬಹುದು. ಇಲ್ಲ, ಜನರು ಅಲ್ಲಿಗೆ ತಮ್ಮೆಲ್ಲಾ ಭಕ್ತಿಯೊಂದಿಗೆ ಹೋಗುತ್ತಾರೆ. ಭಕ್ತರಿಗೆ, ಆ ದೇವಾಲಯವು ದೈವತ್ವವನ್ನು ಪ್ರತಿನಿಧಿಸುತ್ತದೆ ಮತ್ತು ಅದು ಕೇವಲ ಒಂದು ಹಿಮದ ಗಟ್ಟಿಯಲ್ಲ. ಅವರು ಅದರಲ್ಲಿ ಭಗವಾನ್ ಶಿವನನ್ನು ನೋಡುತ್ತಾರೆ ಮತ್ತು ಅದನ್ನು ಭಕ್ತಿಯ ಒಂದು ಭಾವನೆಯೊಂದಿಗೆ ಪೂಜಿಸುತ್ತಾರೆ. ಹಾಗಾಗಿ ಕೃಷ್ಣ ಪರಮಾತ್ಮನು ಹೇಳುತ್ತಾನೆ, ’ಯಾರಾದರೂ ಯಾವುದೇ ದೇವತೆಯನ್ನು ಪೂಜಿಸಲಿ, ಅವರಿಗೆ ಅವರ ಪೂಜೆಯ ಫಲಗಳನ್ನು ನೀಡುವುದು ನಾನೇ.’

ಎಲ್ಲರಿಗೂ ಎಲ್ಲವನ್ನೂ ಕೊಡುತ್ತಿರುವುದು ಒಂದು ಶುದ್ಧ ಚೇತನ. ಯಾರಾದರೂ ಹಜ್‌ನಂತಹ ಪವಿತ್ರ ಯಾತ್ರೆಗೆ ಹೋಗುವಾಗ, ಅವರಿಗೆ ಖಂಡಿತವಾಗಿ ಅದರಿಂದ ಸ್ವಲ್ಪ ಆನಂದ ಸಿಗುತ್ತದೆ. ಹಾಗಾಗಿ ಕೃಷ್ಣ ಪರಮಾತ್ಮನು ಹೇಳುತ್ತಾನೆ, ’ಈ ಆನಂದವನ್ನು ಕೊಡುವವನು ನಾನು ಈ ಆನಂದವು ಬರುವುದು ನನ್ನಿಂದ ಮತ್ತು ನನ್ನಿಂದ ಮಾತ್ರ.’

ನಾನು ನಿಮಗೆ ಮತ್ತೆ ಹೇಳುತ್ತೇನೆ, ’ನಾನು’ ಎಂದರೆ, ಒಂದು ನವಿಲುಗರಿಯ ಕಿರೀಟದೊಂದಿಗೆ, ಗಾಢ ಹಳದಿ ಬಣ್ಣದ ಬಟ್ಟೆಗಳನ್ನು ಧರಿಸಿರುವ ಯಾರೋ ಒಬ್ಬರಲ್ಲ. ಇದನ್ನು ಹೇಳುತ್ತಿರುವುದು ಒಂದು ಶುದ್ಧ ಚೇತನ ಮತ್ತು ಅದು ಎಲ್ಲೆಡೆಯೂ, ಎಲ್ಲದರಲ್ಲೂ ಇದೆ. ಅದುವೇ ವಾಸುದೇವ.

ಅಪರ ಪ್ರಕೃತಿ ಮತ್ತು ಪರ ಪ್ರಕೃತಿ ಎರಡನ್ನೂ ಜೊತೆಯಲ್ಲಿ ತನ್ನೊಳಗೆಯೇ ಹಿಡಿದಿಟ್ಟುಕೊಳ್ಳುವ ಆ ತತ್ವವು ವಾಸುದೇವ ಆಗಿದೆ. ಮತ್ತು,

’ಯೋ ಯೋ ಯಾಂ ಯಾಂ ತನುಂ ಭಕ್ತಃ ಶ್ರದ್ಧಯಾರ್ಚಿತುಮಿಚ್ಛತಿ I
ತಸ್ಯ ತಸ್ಯಾಚಲಾಂ ಶ್ರದ್ಧಾಂ ತಾಮೇವ ವಿದಧಾಮ್ಯಹಮ್ II’  (೭.೨೧)

ಹೀಗೆಂದು ಹೇಳುತ್ತಿರುವುದು ಆ ವಾಸುದೇವ.

’ಯಾರೇ ಆಗಿರಲಿ ಮತ್ತು ಯಾವುದೇ ಶ್ರದ್ಧೆಯ ಮೂಲಕ ನನ್ನ ಬಳಿಗೆ ಬಂದಿರಲಿ, ಅವರ ಪೂಜೆಯ ಫಲಗಳನ್ನು ಅವರ ಭಕ್ತಿಗನುಸಾರವಾಗಿ ನಾನು ಅನುಗ್ರಹಿಸುತ್ತೇನೆ. ಮತ್ತು ಈ ಭಕ್ತಿಯನ್ನು ಕೊಡುವವನು ಕೂಡಾ ನಾನೇ. ಹೀಗೆ, ಭಕ್ತಿಯೂ ನಾನೇ, ಆರಾಧನೆಯೂ ನಾನೇ, ಮತ್ತು ಫಲವೂ ಕೂಡಾ ನನ್ನಿಂದಲೇ ಬರುತ್ತದೆ. ಆದರೆ ಈ ಫಲಗಳು ಕೇವಲ ತಾತ್ಕಾಲಿಕ. ಹೀಗಿದ್ದರೂ, ಜ್ಞಾನಿಯಾದವನೊಬ್ಬನು ನನ್ನನ್ನು ನನ್ನ ನಿಜವಾದ ಸ್ವಭಾವದಿಂದ ತಿಳಿಯುವನು ಮತ್ತು ಆದ್ದರಿಂದ ಎಲ್ಲಾ ನಾಲ್ಕು ವಿಧದ ಜನರಲ್ಲಿ ಅವನು ಶ್ರೇಷ್ಠನು.’

ಆತ್ಮ ಸಾಕ್ಷಾತ್ಕಾರವನ್ನು ಸಾಧಿಸಿರುವ ಯಾರೇ ಆದರೂ ಇದನ್ನೇ ಹೇಳಿರುವರು; ಒಂದೇ ಒಂದು ಇರುವುದು (ಚೇತನ). ಅಂತಹ ಜನರಿಗೆ ಎಲ್ಲದರಲ್ಲೂ ಇರುವ ಏಕತ್ವವನ್ನು ಕಾಣಲು ಸಾಧ್ಯವಾಗುತ್ತದೆ.

ಇದನ್ನು ನೋಡದಿರುವವರು ಯಾರೆಂದರೆ, ಪ್ರಪಂಚದಲ್ಲಿ ಜಗಳಗಳು ಮತ್ತು ಬಾಂಧವ್ಯಗಳಲ್ಲಿ ಸಿಕ್ಕಿಹಾಕಿಕೊಂಡಿರುವವರು. ಅವರು ಧರ್ಮಗ್ರಂಥಗಳನ್ನು ಎತ್ತುತ್ತಾರೆ ಮತ್ತು, ’ನಾನು ಹೇಳಿದ್ದೇ ಸರಿ’ ಅಥವಾ ’ನನ್ನ ಧರ್ಮವೇ ಶ್ರೇಷ್ಠ’ ಎಂದು ಯೋಚಿಸುತ್ತಾ ತಮ್ಮ ತಮ್ಮಲ್ಲಿಯೇ ವಾದಿಸುತ್ತಾರೆ. ಆದರೆ, ಭಕ್ತಿಯ ಪರಾಕಾಷ್ಠೆಯನ್ನು ತಲುಪಿದ ಜ್ಞಾನಿಯೊಬ್ಬನು ಎಲ್ಲದರಲ್ಲೂ ದೇವರನ್ನು ಮಾತ್ರ ಕಾಣುತ್ತಾನೆ.