ಮಂಗಳವಾರ, ಮಾರ್ಚ್ 30, 2010

ಬೆಂಗಳೂರು ಆಶ್ರಮ, ಮಾರ್ಚ್ ೩೦ (ಸೋಮವಾರ) ರಾತ್ರಿ ೯.೪೫:

ರಾತ್ರಿ ೯ ಗಂಟೆಯವರೆಗೂ ತಮ್ಮ ಕರ್ತವ್ಯದಲ್ಲಿ ನಿರತರಾಗಿದ್ದ ಗುರೂಜಿಯವರು ಮಾತುಕೊಟ್ಟಂತೆ ರಾತ್ರಿ ೯.೧೨ಕ್ಕೆ ಸತ್ಸಂಗಕ್ಕೆ ಆಗಮಿಸಿದರು. ಶ್ರೀ ಶ್ರೀಯವರಿಗಾಗಿ ಕಾತರದಿಂದ ಕಾಯುತ್ತಿದ್ದ ನೂರಾರು ಜನರಿಗೆ ಅಚ್ಚರಿ, ಆನಂದಗಳೆರಡೂ ಏಕಕಾಲದಲ್ಲಿ ಉಂಟಾದವು.

ಕಿವಿಗಡಚಿಕ್ಕುವ ಚಪ್ಪಾಳೆಯ ನಡುವೆ ಗುರೂಜಿಯವರು "ಈಗ ಪ್ರಚಲಿತವಿರುವ ಒಂಭತ್ತು ದಿನಗಳನ್ನು ನವರಾತ್ರಿ ಎಂದು ಕರೆಯಲಾಗುತ್ತದೆ. ಈ ದಿನಗಳನ್ನು ಜಗನ್ಮಾತೆಗಾಗಿ ಮೀಸಲಿರಿಸಲಾಗಿದೆ. ಇಂದು ನಾಲ್ಕನೆಯ ದಿನ. ರಾಮ ನವಮಿಯವರೆಗಿನ ಒಂಭತ್ತು ದಿನಗಳು ತುಂಬ ಶುಭಕರವಾದ ಕಾಲ. ರಾಮ ನವಮಿಯು ಶ್ರೀರಾಮನು ಹುಟ್ಟಿದ ದಿನ. ನಾವು ಆಶ್ರಮದಲ್ಲಿ ಸೆಪ್ಟೆಂಬರ್, ಅಕ್ಟೋಬರ್ ತಿಂಗಳಿನಲ್ಲಿ ಬರುವ ಎರಡನೇ ನವರಾತ್ರಿಯನ್ನು ಆಚರಿಸುತ್ತೇವೆ. ಈ ಮೊದಲನೆ ನವರಾತ್ರಿಯು ವಸಂತಾಗಮನವನ್ನು ಸೂಚಿಸುತ್ತದೆ" ಎಂದು ಹೇಳಿದರು.
ನಂತರ ಗುರೂಜಿಯವರು ಹುಟ್ಟು ಹಬ್ಬ ಹಾಗೂ ವಾರ್ಷಿಕೋತ್ಸವಗಳ ಬಗೆಗೆ ವಿಚಾರಿಸಿದರು. ಆಶ್ರಮದ ಸತ್ಸಂಗದಲ್ಲಿ ಆ ದಿನದ ಜನ್ಮದಿನ, ವಿವಾಹ ವಾರ್ಷಿಕೋತ್ಸವ ಇರುವ ಭಕ್ತರನ್ನು ಆಶೀರ್ವದಿಸುವ ವಾಡಿಕೆಯನ್ನು ಶ್ರೀ ಶ್ರೀಯವರು ನಡೆಸಿಕೊಂಡು ಬಂದಿದ್ದಾರೆ.

ಐದು ವರ್ಷದ ಬಾಲಕಿಯೊಬ್ಬಳು ಹೂಗಳನ್ನು ಬೊಗಸೆಯಲ್ಲಿ ತುಂಬಿಕೊಂಡು ವೇದಿಕೆಯ ಮೇಲೆ ಪುಟ್ಟ ಪುಟ್ಟ ಹೆಜ್ಜೆಯಿಟ್ಟು ಓಡಿ ಬಂದಳು. "ಇಂದು ನಿನ್ನ ಹುಟ್ಟುಹಬ್ಬವೇನಮ್ಮ?" ಎಂದು ಪ್ರೀತಿಯಿಂದ ಮಾತನಾಡಿಸಿ ಹೂಗಳನ್ನು ಸ್ವೀಕರಿಸಿ "ನಿನಗೂ ಒಂದು ಹಾರ ಬೇಕಲ್ಲವಾ" ಎನ್ನುತ್ತಾ ಆಕೆಯ ಕೊರಳಿಗೆ ಹಾರತೊಡಿಸಿದಾಗ ಪುಟ್ಟ ಬಾಲಕಿ ಪುಳಕಿತಳಾದಳು.

ಗುರೂಜಿಯವರ ಆಗಮನದ ಮೊದಲು ಸೀಮೆಸುಣ್ಣದ ಪುಡಿ ಮತ್ತು ಸಂಗೀತದ ಒಂದು ಪ್ರಯೋಗವನ್ನು ಮಾಡಿ ತೋರಿಸಲಾಗಿತ್ತು. ಹಿನ್ನಲೆಯಲ್ಲಿ ವಿವಿಧ ರೀತಿಯ ಸಂಗೀತವನ್ನು ನುಡಿಸುತ್ತಿದ್ದಂತೆ ಸೀಮೆಸುಣ್ಣದ ಪುಡಿಗಳು ಸುಂದರನಾದ ವಿನ್ಯಾಸದಲ್ಲಿ ಜೋಡಿಸಿಕೊಳ್ಳುತ್ತವೆ. ಈ ಪ್ರಯೋಗದ ಕುರಿತು ಶ್ರೀ ಶ್ರೀಯವರು ನಾಲ್ಕು ದಿನಗಳ ಹಿಂದೆಯೇ ವಿವರಿಸಿದ್ದರು. ಅಂದು ಈ ವಿಶಯವನ್ನು ಪ್ರಸ್ತಾಪಿಸುತ್ತಾ ಇದೇ ರೀತಿ ಸಂಗೀತವು ದೇಹದ ಅಂಗಾಂಗಗಳ ಮೇಲೆಯೂ ಪ್ರಭಾವ ಬೀರುತ್ತದೆ. ಕಣ ಕಣಗಳ ನದುವಣ ಸಾಮರಸ್ಯವು ನಾದದಿಂದ ಜನಿಸುತ್ತದೆ. ಅದಕ್ಕಾಗಿಯೇ ಸತ್ಸಂಗಕ್ಕೆ ಅಷ್ಟು ಮಹತ್ವವಿದೆ. ಇದು ನಿಮ್ಮ ದೇಹದ ಕಣ ಕಣಗಳನ್ನೂ ಬದಲಾಯಿಸಿ ಸೂಕ್ತ ರೀತಿಯಲ್ಲಿ ವ್ಯವಸ್ಥೆ ಮಾಡುತ್ತದೆ ಎಂದರು.

ಏ ಮಾತುಗಳ ಪ್ರಾಯೋಗಿಕ ಅನುಭವವೆಂಬಂತೆ ಅಂದು ಸೇರಿದ ೭೫೦ಕ್ಕೂ ಹೆಚ್ಚು ಜನರು ಹಾಡಿ ಕುಣಿದು, ಧ್ಯಾನ ಮಾಡಿ ಸಂಜೆಯ ಸತ್ಸಂಗದ ಆನಂದವನ್ನು ಪಡೆದರು. ಅವರ ದೇಹದ ಕಣ ಕಣಗಳೂ ಆನಂದವನ್ನು ಅನುಭವಿಸಿದವು.

ಸೋಮವಾರ, ಮಾರ್ಚ್ 29, 2010

ಮನಸ್ಸಿನ ಕ್ಷುದ್ರತೆಯನ್ನು ನಿವಾರಿಸಲು ಆಧ್ಯಾತ್ಮ ಜ್ಞಾನದಿಂದ ಮಾತ್ರ ಸಾಧ್ಯ.

ಬೆಂಗಳೂರು ಆಶ್ರಮ : ಮಾರ್ಚ್ ೨೯ (ಭಾನುವಾರ) ಸಂಜೆ ೫.೩೦. 

ಬೇರೆ ಬೇರೆ ರಾಜ್ಯಗಳಿಂದ ಆಗಮಿಸಿದ ೫೦೦೦ಕ್ಕೂ ಹೆಚ್ಚು ಜನ ಭಾಗವಹಿಸಿದ್ದ ಸತ್ಸಂಗದಲ್ಲಿ ಗುರೂಜಿಯವರು ಕನ್ನಡ, ಹಿಂದಿ, ತಮಿಳು, ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಮಾತನಾಡಿದರು. ರಾಜಕೀಯ, ಮುಂಬರುವ ಚುನಾವಣೆ, ಭಯೋತ್ಪಾದನೆಗೆ ಪರಿಹಾರ, ಯುವಜನರ ಪಾತ್ರ, ಆಧ್ಯಾತ್ಮದ ಮಹತ್ವ....... ಹೀಗೆ ಅನೇಕ ವಿಷಯಗಳ ಕುರಿತು ಗುರೂಜಿ ಸಂವಾದ ನಡೆಸಿದರು. 

ರಾಜಕೀಯದ ಕುರಿತಾದ ಅನೇಕ ಪ್ರಶ್ನೆಗಳಿಗೆ ಉತ್ತರಿಸುತ್ತ ಗುರೂಜಿಯವರು ಸಚ್ಚಾರಿತ್ರ್ಯವಿರುವ ಹಾಗೂ ಕರ್ತವ್ಯನಿಷ್ಠ ಅಭ್ಯರ್ಥಿಗಳಿಗೆ ಮತನೀಡಬೇಕು. ಜನಸೇವೆಯೇ ಜನಾರ್ದನ ಸೇವೆ. ನೀವೆಲ್ಲರೂ ಹಳ್ಳಿಗಳಿಗೆ ತೆರಳಿ ಬದಲಾವಣೆಯನ್ನು ತರುವಂತೆ ಜನರಿಗೆ ತಿಳಿಹೇಳಬೇಕು ಎಂದು ಕರೆನೀಡಿದರು. ಹೃದಯಗಳು ಮಿಲನವಾದಾಗ ಆಡುವ ಮಾತೆಲ್ಲವೂ ಸಂಗೀತವೇ ಆಗಿರುತ್ತದೆ. ಆದುದರಿಂದಲೇ ಪ್ರೇಮಿಗಳು ಅದೇ ವಿಷಯಗಳನ್ನು ಪದೇ ಪದೇ ಹೇಳಿದರೂ ಇನ್ನೂ ಕೇಳಿಸಿಕೊಳ್ಳುವ ಉತ್ಸುಕತೆ ಹೊಂದಿರುತ್ತಾರೆ. ಹೃದಯಗಳ ಮೂಲಕ ಸಂಬಂಧ ಬೆಳೆದಿರುವುದೇ ಇದಕ್ಕೆ ಕಾರಣ. ಮನಸ್ಸಿನಲ್ಲಿ ಮಾಧುರ್ಯವಿಲ್ಲದಿದ್ದರೆ ಸುಂದರವಾದ ಮಾತುಗಳೂ ಚಡಪಡಿಕೆಯನ್ನು ಉಂಟುಮಾಡಬಲ್ಲವು. ಮನಸ್ಸು ಮಧುರವಾಗಿದ್ದರೆ ಇಡೀ ಜಗತ್ತೇ ಮಧುರವಾಗಿರುತ್ತದೆ.

ನಾವು ಮೂರು ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು
೧. ನಾವು ಸಮಾಜಕ್ಕಾಗಿ ಏನಾದರೂ ಮಾಡಬೇಕು
೨. ನಾವು ಜೀವನದಲ್ಲಿ ಗಳಿಸಿದ ಜ್ಞಾನವನ್ನು ಇತರರೊಡನೆ ಹಂಚಿಕೊಳ್ಳಬೇಕು
೩. ನಮ್ಮ ಎಷ್ಟು ಕೆಲಸಗಳು ಇತರರಿಗೆ ಸಂತೋಷವನ್ನುಂತು ಮಾಡಿವೆ?
ಎಷ್ಟು ಜನರು ನಮ್ಮನ್ನು ಸಂತೋಷಪಡಿಸಿದ್ದಾರೆ? ನಾವು ನಮ್ಮ ಸಂತೋಷಕ್ಕಾಗಿ ಮಾಡುವ ಈ ಕೆಲಸ ಇತರರಿಗೆ ದುಃಖವನ್ನು ನೀಡುತ್ತದೆ. ಇತರರ ಸಂತೋಷಕ್ಕಾಗಿಯೇ ಕೆಲಸ ಮಾಡಿದರೆ ಅದರಿಂದ ನಮಗೆ ಬೇಸರವಾಗಬಹುದು. ಈ ವಿಷಯದಲ್ಲಿ ಸಮತೋಲನವನ್ನು ಕಾಯಿದುಕೊಳ್ಳುವುದು ಅಗತ್ಯ.

ನಮ್ಮ ದೇಶ ನಾಲ್ಕು ದಿಕ್ಕುಗಳಿಂದ ಹೊತ್ತಿ ಉರಿಯುತ್ತಿದೆ. ದೇಶದಲ್ಲಿ ಜಾತಿ ಮತ್ತು ಧರ್ಮಗಳ ಆದಾರದ ಮೇಲೆ ವಿಷಮತೆ ಇದೆ. ನಮ್ಮ ನೆರೆಹೊರೆಯ ದೇಶಗಳೂ ಉರಿಯುತ್ತಿವೆ. ನಾವು ನಮ್ಮ ಸಮಾಜವನ್ನು ಸಂರಕ್ಷಿಸಬೇಕು. ಎದ್ದೇಳಿ ದೇಶದ ಯುವಕರೇ ಎದ್ದೇಳಿ.

ನಾವು ಸ್ವಾಭಿಮಾನವನ್ನು ಎಚ್ಚರಿಸಬೇಕು. ನೀವು ನಿಮ್ಮನ್ನು ಗೌರವಿಸ ಬಲ್ಲಿರಾದರೆ ಮಾತ್ರ ಇತರರನ್ನು ಗೌರವಿಸಬಲ್ಲಿರಿ ಇದು ನಿಮ್ಮಲ್ಲಿ ಸ್ವಾಭಿಮಾನ ಇದ್ದಾಗ ಮಾತ್ರ ಸಾಧ್ಯ. ಸಾಧನೆಯಿಂದ ಸ್ವಾಭಿಮಾನ ಜಾಗೃತವಾಗುತ್ತದೆ. ಧ್ಯಾನವು ನಿಮ್ಮಲ್ಲಿ ಹಿಂಸೆಯಂತಹ ಅನಪೇಕ್ಷಿತ ಭಾವನೆಗಳು ಹುಟ್ಟದಂತೆ ತಡೆಯುತ್ತದೆ.
ನಮ್ಮ ನೆರೆಹೊರೆಯ ದೇಶಗಳಲ್ಲಿ ಹಿಂಸೆ ತಾಂಡವವಾಡುತ್ತದೆ. ಕಳೆದ ವರ್ಷ ಬಾಂಗ್ಲದೇಶದಲ್ಲಿ ನಾನೂರು ಬಾಂಬುಗಳು ಏಕಕಾಲದಲ್ಲಿ ಸಿಡಿದವು. ನಮ್ಮ ದೇಶದಲ್ಲಿ ಹತ್ತು ಭಯೋತ್ಪಾದಕ ದಾಳಿಗಳು ಸಂಭವಿಸಿದವು. ಅಮೇರಿಕಾದಲ್ಲಿ ೯/೧೧ ಒಂದೇ ಘಟನೆ ಯಾದರೆ ನಮ್ಮ ದೇಶದಲ್ಲಿ ತಿಂಗಳಿಗೊಮ್ಮೆಯಾದರೂ  ಭಯೋತ್ಪಾದಕರ ದಾಳಿ ನಡೆದಿತ್ತು.

ಆಧ್ಯಾತ್ಮಿಕ ಜ್ಞಾನದ ಮಹತ್ವ ಮನಗಾಣದಿದ್ದರೆ ಭಯೋತ್ಪಾದನೆಯನ್ನು ತಡೆಗಟ್ಟುವುದು ಸಾಧ್ಯವಿಲ್ಲ. ಆಧ್ಯಾತ್ಮಿಕ ಜ್ಞಾನವೊಂದೇ ಮನಸ್ಸಿನ ಕ್ಷುದ್ರತೆಗಳನ್ನು ನಿವಾರಿಸಬಲ್ಲದು. ಇದನ್ನರಿಯದೆ ಪಾಕಿಸ್ತಾನಕ್ಕೆ ಮಿಲಿಯಗತ್ತಲೆ ಡಾಲರುಗಳ ನೆರವು ನೀಡಿದರೂ ಭಯೋತ್ಪಾದನೆಯನ್ನು ನಿಗ್ರಹಿಸಲು ಆ ದೇಶಕ್ಕೆ ಸಾಧ್ಯವಾಗುವುದಿಲ್ಲ.

ಹಣವೊದರಿದಲೇ ಪರಿವರ್ತನೆ ಸಾಧ್ಯವಾಗುವುದಿಲ್ಲ, ಮನಸ್ಸುಗಳು ಪರಿವರ್ತನೆಯಾಗಬೇಕು. ನಾವು ಮೌಲಿಕವಾದ ವಿದ್ಯಾಭ್ಯಾಸ ಪದ್ಧತಿಯನ್ನು ರೂಡಿಸಬೇಕು. ಅಹಿಂಸೆ, ಪ್ರೇಮ ಮತ್ತು ಸಹಾನುಭೂತಿಯ ಸಂದೇಶವನ್ನು ಎಲ್ಲಕಡೆ ಸಾರಬೇಕು. ಆಗಲೇ ಇಂದು ಕಾಣುತ್ತಿರುವ ಹಿಂಸೆಯ ಪ್ರಾಧಾನ್ಯ ಕಡಿಮೆಯಾಗುತ್ತದೆ.
ಇಂದು ಧಾರ್ಮಿಕ ಶಿಕ್ಷಣದ ಅಗತ್ಯವಿದೆ; ಆದರೆ ಅವೈಜ್ಞಾನಿಕ ಶಿಕ್ಷಣವಲ್ಲ. ಧರ್ಮದಲ್ಲಿ ವೈಜ್ಞಾನಿಕವಾದುದನ್ನು ಮಾತ್ರ ತೆಗೆದುಕೊಳ್ಳಿ. ಮೌಲ್ಯಾಧಾರಿತ ಆಧ್ಯಾತ್ಮಿಕ ಶಿಕ್ಷಣದ ಅಗತ್ಯವಿದೆ. ಅಂಧಾಭಿಮಾನರಹಿತವಾದ ಧಾರ್ಮಿಕ ಶಿಕ್ಷಣದ ಅಗತ್ಯವಿದೆ. ನಮ್ಮ ಏಷಿಯಾ ಖಂಡ ಅತ್ಯಂತ ಕಠಿಣ ಕಾಲವನ್ನು ಎದುರಿಸುತ್ತಿದೆ, ಇದೂ ಸಹ ಬದಲಾಗುತ್ತದೆ.

ಈ ದೆಸೆಯಲ್ಲಿ ನಾವು ಈ ಕೆಳಗಿನ  ಮೂರು ನಿರ್ಧಾರಗಳನ್ನು ತೆಗೆದುಕೊಳ್ಳಬೇಕು.
೧. ಪ್ರತಿಯೊಬ್ಬರೂ ದಿನದ ಸ್ವಲ್ಪ ಕಾಲ ಧ್ಯಾನಮಾಡಬೇಕು.
೨. ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು.
೩. ಮತದಾನ ಮಾಡಬೇಕು, ಇತರರಿಗೂ ಮತದಾನ ಮಾಡುವಂತೆ ಪ್ರೋತ್ಸಾಹಿಸಬೇಕು.
( ಸಭಿಕರಲ್ಲೊಬ್ಬರು ಎದ್ದು ನಿಂತು ಪ್ರಶ್ನೆ ಕೇಳಿದರು)

ಪ್ರಶ್ನೆ : ಆಧುನಿಕ ಯುಗದ ವಿವೇಕಾನಂದರ ಮಾತುಗಳನ್ನು ಕೇಳಿಸಿಕೊಳ್ಳುತ್ತಿರುವ ನಾನು ಭಾಗ್ಯಶಾಲಿ. ಆದರೆ ನಾವು ಯಾವ ರೀತಿಯ ಸೇವೆಗೆ  ಸಮರ್ಥರು ಎಂದು ತಿಳಿಯುವುದು ಹೇಗೆ?
ಶ್ರೀ ಶ್ರೀ : ನಿಜ ಸೇವೆ ಮಾಡುವ ಉತ್ಸುಕತೆ ಇದ್ದು  ಮಾರ್ಗದರ್ಶನವನ್ನು ಬಯಸುವ ಎಲ್ಲರೂ ಇಲ್ಲಿಗೆ ಬನ್ನಿ. ಎಲ್ಲರೂ ತಂಡಗಳನ್ನು ಮಾಡಿಕೊಳ್ಳಿ. ನಿಮ್ಮ ಗುರಿಗಳನ್ನು ನಿರ್ಧರಿಸಿಕೊಳ್ಳಿ. ಬೆಂಗಳೂರಿನ ೩೮ ಕೊಳೆಗೇರಿಗಳನ್ನು ನಾವು ದತ್ತು ತೆಗೆದುಕೊಂಡಿದ್ದೇವೆ. ನಿಮ್ಮಲ್ಲಿ ಅನೇಕರು ಅಲ್ಲಿಗೆ ಹೋಗಿ ನಮ್ಮ ಸ್ವಯಂಸೇವಕರಿಗೆ ಸಹಯ ಮಾಡಬಹುದು, ಉತ್ತೇಜನ ನೀಡಬಹುದು.
(ಇನ್ನೊಬ್ಬ ಭಕ್ತರು ಪೋಲೀಸ್ ಠಾಣೆಯ ಪಕ್ಕದಲ್ಲಿ ನಡೆದು ಹೋಗುತ್ತಿದ್ದಗ ಠಾಣೆಯಿಂದ 'ಆರ್ಟ್ ಆಫ಼್ ಲಿವಿಂಗ್'ನ ಭಜನೆಗಳನ್ನು ಕೇಳಿಸಿಕೊಂಡ ಅನುಭವವನ್ನು ವಿವರಿಸಿದರು. ಆಗ ಶ್ರೀ ಶ್ರೀ : ಜೈಲುಗಳಲ್ಲಿ ಸಹಾ ಖೈದಿಗಳು ಈ ಭಜನೆಗಳನ್ನು ಯಾವಾಗಲೂ ಹಾಡುತ್ತಿದ್ದಾರೆ")

ಪ್ರಶ್ನೆ : ದೇಶ ದೇಶಗಳ ನಡುವಣ ಗಡಿರೇಖೆಗಳು ಅಳಿಸಿ ಹೋಗುವುದು ಯಾವಾಗ?
ಶ್ರೀ ಶ್ರೀ : ಪ್ರತಿಯೊಬ್ಬರೂ ಸುದರ್ಶನ ಕ್ರಿಯೆಯಲ್ಲಿ ತೊಡಗಿಕೊಂಡಾಗ ( ಸಭಿಕರಿಂದ ಕಿವಿಗಡಚಿಕ್ಕುವ ಚಪ್ಪಳೆ, ಹರ್ಷೋದ್ಗಾರ )

ಶನಿವಾರ, ಮಾರ್ಚ್ 27, 2010

ಧ್ಯಾನದ ಅಭ್ಯಾಸವಿರುವವರ ಜವಾಬ್ದಾರಿ ದ್ವಿಗುಣವಾಗುತ್ತದೆ

ಬೆಂಗಳೂರು ಆಶ್ರಮ, ಮಾರ್ಚ್ ೨೭ ( ಶುಕ್ರವಾರ ) ಸಂಜೆ ೮:೧೫

" ಪ್ರತಿಯೊಬ್ಬರೂ ಜೀವನದಲ್ಲಿ ಸಂತೋಷದಿಂದಿರಲು ಬಯಸುತ್ತಾರೆ. ಆದರೆ ಸಾಮನ್ಯತಃ ದು:ಖಿಗಳಾಗಿರುತ್ತಾರೆ " ಎಂದು ಗುರೂಜಿಯವರು ಆಶ್ರಮದ ಸತ್ಸಂಗದಲ್ಲಿ ನೆರೆದಿದ್ದ ೫೦೦೦ ಜನರನ್ನು ಉದ್ದೇಶಿಸಿ ಹೇಳಿದರು. ದೇಶದ ಬಹುಭಾಗದಲ್ಲಿ ಹೊಸವರ್ಷದ ದಿನವನ್ನಾಗಿ ಆಚರಿಸಿದ ಈ ದಿನದಂದು ಆಶ್ರಮದಲ್ಲಿ ವಿಶೇಷ ಸತ್ಸಂಗವು ಬಯಲು ರಂಗಮಂದಿರದಲ್ಲಿ ನಡೆಯಿತು.

ನಮ್ಮ ದು:ಖಕ್ಕೆ ಕಾರಣವಾಗುವ ಮೂರು ಆಯಾಮಗಳು
೧. ಗೊಂದಲ
೨. ಭಯ
೩. ಬಡತನ
ಇವುಗಳನ್ನು ತೊಡೆದು ಹಾಕುವುದು ಹೇಗೆ?
ನಿಸ್ವಾರ್ಥ ಮನೋಭಾವವು ಗೊಂದಲವನ್ನು ನಿವಾರಿಸುತ್ತದೆ.
ವಿರಕ್ತಿಯು (ನಿರ್ಮೋಹ) ಭಯವನ್ನು ಅಳಿಸಿಹಾಕುತ್ತದೆ
ಲೋಭದಿಂದ ನಿವೃತ್ತಿಹೊಂದಿದರೆ ಬಡತನ ದೂರವಗುತ್ತದೆ.

ನಮ್ಮ ಭಾವನೆಗಳು ತೀವ್ರವಾದಷ್ಟು ಈ ಸವಾಲುಗಳನ್ನು ಶೀಘ್ರವಾಗಿ ಪರಿಹರಿಸಬಹುದು.
ಇಂದು ಹೊಸವರ್ಷ ಪ್ರಾರಂಭವಾಗಿದೆ, ಪ್ರತಿ ಹೊಸವರ್ಷಕ್ಕೂ ಒಂದೊಂದು ಹೊಸ ಹೆಸರು. ಈ ವರ್ಷದ ಹೆಸರು ವಿರೋಧಿ - ಸಂಘರ್ಷಗಳ ವರ್ಷ.

ಸಾಧಕರು ಮತ್ತು ಜ್ಞಾನಾರ್ಥಿಗಳು ಪರಸ್ಪರ ವಿರೋಧವಾಗಿರುವ ಶಕ್ತಿಗಳನ್ನು ಶಾಂತಗೊಳಿಸಬೇಕು. ದುರ್ಜನರು ಸಂಘರ್ಷಗಳನ್ನು ಇನ್ನೂ ಹೆಚ್ಚು ಮಾಡುತ್ತಾರೆ, ಸಜ್ಜನರು ಅವುಗಳನ್ನು ಶಮನಗೊಳಿಸುತ್ತಾರೆ.  ಈ ವರ್ಷ ನಿಮ್ಮ ಗುಣನಡತೆಗಳನ್ನು ಪರೀಕ್ಷೆ ಮಾಡುವ ಕಾಲ.

ಈ ವಿರೊಧೀ ಭಾವನೆಗಳನ್ನು ತೊಡೆದು ಹಾಕಲು ನಾವು ಯುಕ್ತಿಯನ್ನು ಬಳಸಬೇಕು. ಕೆಲವು ಸಂಧರ್ಭಗಳಲ್ಲಿ ಸರಿಯಾಗಿ ತಿಳಿಯುವುದರಿಂದ, ಕರುಣೆಯಿಂದ ಅಥವಾ ಜ್ಞಾನದಿಂದ ಕಾರ್ಯ ಸಾಧಿಸಬಹುದು.
ವಿರೋಧ ಜೀವನಕ್ಕೆ ಅವಶ್ಯಕ. ಅನ್ಯಾಯದ ವಿರುದ್ಧ ಸೆಟೆದು ನಿಲ್ಲಲು ವಿರೋಧವೇ ಪ್ರಾರಂಭವಾಗಬೇಕು. ಸಂಘರ್ಷಗಳಿಗೂ ಜೀವನದಲ್ಲಿ ಸ್ಥಾನವಿದೆ. ನಮ್ಮ ದೇಹದಲ್ಲಿ ಕಾಯಿಲೆಗಳನ್ನು ಎದುರಿಸುವ ಬ್ಯಾಕ್ಟೀರಿಯಾಗಳಿರುವುದರಿಂದಲೇ ನಾವು ಆರೋಗ್ಯವಾಗಿರುತ್ತೇವೆ. ಅನ್ಯಾಯದ ವಿರುದ್ಧ ಹೋರಾಟವನ್ನು ದಮನ ಮಾಡಬಾರದು. ಪಿಡುಗುಗಳ ವಿರುದ್ಧ ನಾವು ಎದ್ದು ನಿಲ್ಲಬೇಕೆಂದಿದ್ದರೆ ಈ ವರ್ಷ ಅದಕ್ಕೆ ಪ್ರಶಸ್ತ ಕಾಲ.
ಭಾರತದಲ್ಲಿ ಚುನಾವಣೆಗಳು ಸಮೇಪಿಸುತ್ತಿವೆ. ಭ್ರಷ್ಟಾಚಾರವನ್ನು ವಿರೋಧಿಸಿ. ಪ್ರತಿಯೊಂದು ಅನ್ಯಾಯವನ್ನು ಎದುರಿಸಿ. "ಬೇರೆಯವರ ಮನೆಗೆ ಬೆಂಕಿ ಬಿದ್ದಿರುವುದು - ನಾನೇಕೆ ಯೋಚಿಸಲಿ? " ಎಂದು ತಿಳಿಯ ಬೇಡಿ.  ಬೆಂಕಿಯ ನಾಲಗೆ ನಿಮ್ಮ ಮನೆಗೆ ಚಾಚುವುದಕ್ಕೆ ಹೆಚ್ಚು ಸಮಯ ಬೇಡ. 

ಈ ವರ್ಷದಲ್ಲಿ ನೀವು ಹತ್ತು ತರಹದ ಸಂಘರ್ಷಗಳನ್ನು ಎದುರಿಸ ಬಹುದು. ಮೊದಲನೆಯದು ಸಂಶಯ, ನಿಮ್ಮ ಮೇಲೇ ಸಂಶಯ, ಜನರ ಮೇಲೆ, ದೇಶದ ಬಗ್ಗೆ, ಧರ್ಮದ ಬಗ್ಗೆ ಸಂಶಯ. ಅನುಮಾನಗಳು ಮೊಳೆತಾಗ, ಇದು ಅಶಾಶ್ವತ ಎಂಬ ಅರಿವು ನಿಮ್ಮಲ್ಲಿರಲಿ, ಸ್ವಲ್ಪ ಸಮಯದಲ್ಲೆ  ಸಂಶಯ ದೂರವಾಗುತ್ತದೆ.
ಎಲ್ಲ ಧ್ಯಾನಸಕ್ತರಿಗೂ ಈ ವರ್ಷ ಜವಾಬ್ದಾರಿ ದ್ವಿಗುಣವಾಗಿದೆ. ನಮ್ಮ ಮಾನಸಿಕ ಸಮತೆಯನ್ನು ಉಳಿಸಿಕೊಳ್ಳುವುದರ ಜೊತೆಗೆ ತೊಂದರೆಯಲ್ಲಿರುವವರಿಗೂ ಸಮತೋಲನವನ್ನು ಸಾಧಿಸಲು ಸಹಾಯ ಮಾಡಬೇಕು. ಜ್ಞಾನ, ಸೇವೆ ಹಾಗೂ  ಭಕ್ತಿಯಲ್ಲಿ ನಿರತರಾಗಲು ಇದು ಸೂಕ್ತ ಸಮಯ. " ನಾನು ಆತ್ಮಜ್ಞಾನವನ್ನು ಪಡೆದುಕೊಳ್ಳಬೇಕು"  ಎಂಬುದೇ ನಮ್ಮ ಮನಸ್ಸಿನಲ್ಲಿ ಏಳುವ ಪ್ರಥಮ ಬಯಕೆಯಾಗಿರಬೇಕು.
ದೇವರು ಸರ್ವಾಂತರ್ಯಾಮಿ. ಅವನೇ ಸತ್ಯ, ಅವನೇ ಸೌಂದರ್ಯ, ಅವನೇ ಚೈತನ್ಯ. ಅವನು ನಿಮ್ಮೊಳಗೂ, ಎಲ್ಲರ ಒಳಗೂ ನೆಲೆಸಿರುವಾಗ ನಾವು ವೈಯಕ್ತಿಕವಾಗಿ ಅವನನ್ನು ಕಾಣಲು ಏಕೆ ಸಾಧ್ಯವಾಗುವುದಿಲ್ಲ? ಇದಕ್ಕೆ ೫ ಕಾರಣಗಳಿವೆ.
೧. ಮೌಢ್ಯ
೨. ಅಹಂಕಾರ
೩. ಬಯಕೆಗಳು
೪. ಹೇವರಿಕೆ ( ಜಿಗುಪ್ಸೆ )
೫. ಭಯ
ಈ ಐದು ಕಾರಣಗಳು ಮಾಯವಾದಾಗ ನೀವು ದೈವತ್ವದ ಹಾದಿಯಲ್ಲಿ  ಮುನ್ನಡೆಯುತ್ತೀರಿ. ಈ ಹೊಸವರ್ಷದಂದು ಮೌಢ್ಯತೆ ಕಡಿಮೆಯಾಗಿದೆಯೇ? ಎಂದು ಯೋಚಿಸಿ. ಮೊತ್ತ ಮೊದಲು ಭಾಗ - ೧ ಶಿಬಿರದ ನಂತರದ ಉನ್ನತ ಧ್ಯಾನ ಶಿಬಿರದ ಬಗ್ಗೆ ಯೊಚಿಸಿ.
ಮೌಢ್ಯತೆ ಕಡಿಮೆಯಾಗಿದೆಯೇ?
ನೀವು ಮೊದಲಿಗಿಂತ ಹೆಚ್ಚು ಸಹಜವಾಗಿ ವರ್ತಿಸುತ್ತಿದ್ದೀರಾ?
ನಿಮಗೆ ಅವಮಾನಗಳನ್ನು  ಸಹಿಸಿಕೊಳ್ಳುವುದು ಸಾಧ್ಯವಾಗುತ್ತಿದೆಯೇ?
ಬೇರೆಯವರು ನಿಮ್ಮೊಂದಿಗೆ ಅಸಮಧಾನಗೊಂಡಾಗಲೂ ನಿಮಗೆ ಮುಗುಳ್ನಗೆ ಹೊಂದಲು ಸಾಧ್ಯವಿದೆಯೇ?
ನಿಮ್ಮ ಭಯ ಕಡಿಮೆಯಗಿದೆಯೇ?

ಉತ್ತರ ಇಲ್ಲವೆಂದಾದಲ್ಲಿ ಇನ್ನು ಹೆಚ್ಚು ಧ್ಯಾನಮಾಡಿ. ಈ ಎಲ್ಲ ಕಾರಣಗಳು ಕ್ಷೀಣಿಸುವುದನ್ನು ಗಮನಿಸಬಹುದು. ಧ್ಯಾನ, ಪ್ರಾಣಾಯಾಮ, ಸುದರ್ಶನ ಕ್ರಿಯೆ, ಪದ್ಮ ಸಾಧನಾ ಮತ್ತು ಸೇವೆ ಈ ಕಾರಣಗಳನ್ನು ಕಡಿಮೆ ಮಾಡಿ ನಿಮ್ಮನ್ನು ಜ್ಞಾನ ಮಾರ್ಗದಲ್ಲಿ ಮುನ್ನಡೆಸುತ್ತವೆ. ದೇವರು ಮತ್ತು ಸಾಮನ್ಯ ಜೀವಜಂತುಗಳ ನಡುವೆ ಇರುವ ವ್ಯತ್ಯಾಸವೇನೆಂದರೆ ದೇವರಲ್ಲಿ ಈ ಐದು ಕಾರಣಗಳಿರುವುದಿಲ್ಲ. ಜ್ಞಾನಿಗಳಲ್ಲಿ ಇವು ಅಲ್ಪ ಪ್ರಮಾಣದಲ್ಲಿ ಉಳಿದುಕೊಂಡಿದ್ದರೆ ಮೂಢರಲ್ಲಿ ಇವೇ ಪ್ರಧಾನವಾಗಿರುತ್ತವೆ.

ಪ್ರತಿ ಹೊಸ ವರ್ಷದಂದೂ ಈ ಐದು ಆಯಾಮಗಳು ಕಡಿಮೆಯಾಗಿದೆಯೇ ಎಂದು ಗಮನಿಸಿ ನೋಡಿ.ಖಂಡಿತವಾಗಿಯೂ ನಿಮ್ಮಲ್ಲಿ ಪ್ರಗತಿಯುಂಟಾಗಿರುವುದನ್ನು ನೇವು ಗಮನಿಸುತ್ತೀರಿ.

ಶುಕ್ರವಾರ, ಮಾರ್ಚ್ 26, 2010

ವ್ಯವಹಾರ ಮತ್ತು ಆಧ್ಯಾತ್ಮ

ಗುರುವಾರ, ಮಾರ್ಚ್ ೨೬, ೨೦೦೯

ಆಧ್ಯಾತ್ಮವಾದಿಗಳು ವ್ಯಾಪಾರದ ಕುರಿತು ಸಾಮಾನ್ಯವಾಗಿ ತಿರಸ್ಕಾರವನ್ನು ಹೊಂದಿರುತ್ತಾರೆ. ಅದೇ ರೀತಿ ವ್ಯವಹಾರಸ್ಥರು ಆಧ್ಯಾತ್ಮವನ್ನು ಅಪ್ರಯೋಜಕ ಎಂದು ಪರಿಗಣಿಸುತ್ತಾರೆ. ಆದರೆ ನಮ್ಮ ಹಿಂದಿನವರು ಆಧ್ಯಾತ್ಮವನ್ನು ಹೃದಯ ಎಂದು ಪರಿಗಣಿಸಿದರೆ ವ್ಯವಹಾರವನ್ನು ಕಾಲುಗಳು ಎಂದು ಪರಿಗಣಿಸಿದ್ದರು. ಇವೆರಡರಲ್ಲಿ ಯಾವುದೊಂದು ಕೊರತೆಯಾದರೂ ಆ ಸಮಾಜ ಪರಿಪೂರ್ಣವಾಗಲಾರದು. ವ್ಯವಹಾರದಿಂದ ಭೌತಿಕ ಸೌಕರ್ಯಗಳು ಒದಗಿದರೆ ಆಧ್ಯಾತ್ಮವು ಮಾನಸಿಕ ನೆಮ್ಮದಿಯನ್ನು ಉಂಟುಮಾಡುತ್ತದೆ. 

ಆಧ್ಯಾತ್ಮವು ವ್ಯವಹಾರದಲ್ಲಿ ಸನ್ನಡತೆ ಮತ್ತು ಸದಾಚಾರಗಳನ್ನು ಉಂಟುಮಾಡುತ್ತದೆ. ದೇಹ | ಮನಸ್ಸುಗಳ ಸಂಕೀರ್ಣ ವ್ಯವಸ್ಥೆಯಲ್ಲಿ ಯಾವುದೇ ಒಂದಕ್ಕೆ ನೆಮ್ಮದಿಯನ್ನು ತಪ್ಪಿಸಿದರೂ ಎರಡಕ್ಕೂ ಅದರಿಂದ ಹಾನಿಯುಂಟಗುತ್ತದೆ. ಬಡವರ ಜೀವನದ ಮೂಲ ಸೌಕರ್ಯಗಳಾನ್ನು ಗಮನಿಸದೆ ಅವರೊಂದಿಗೆ ಆಧ್ಯಾತ್ಮದ ಮಾತನಾಡಬಾರದು. ಅವರಿಗೆ ಭೌತಿಕವಾಗಿ ಸಹಾಯ ಮಾಡಬೇಕು. ಈ ಜಗತ್ತಿನಲ್ಲಿ ಸೇವೆಯಿಂದ ಹೊರತಾದ ಆಧ್ಯಾತ್ಮವಿಲ್ಲ. ಭೌತಿಕವಾದ ಅವಶ್ಯಕತೆಗಳನ್ನು ಅಲಕ್ಷಿಸಿ ಸೇವೆ ಸಾಧ್ಯವಿಲ್ಲ. ಬಾಯಿ ಮಾತಿನಲ್ಲಿ ಸೇವೆ ಆಗುವುದಿಲ್ಲ. ಸೇವೆಯು ಕಾಯಕವನ್ನು ಬಯಸುತ್ತದೆ.

ಪ್ರತಿಯೊಂದು ವ್ಯವಸ್ಥೆಯಲ್ಲಿಯೂ ದೊಷಗಳಿರುತ್ತವೆ. ಬಂಡವಾಳರಾಹಿಯು ಬಡವರನ್ನು ಶೋಷಿಸಿದರೆ ಸಮಾಜವಾದವು ವೈಯಕ್ತಿಕ ಪ್ರತಿಭೆಯನ್ನು ಹಾಗೂ ಸಾಹಸೀ ಪ್ರವೃತ್ತಿಯನ್ನು ನಾಶಮಾಡುತ್ತದೆ. ಆಧ್ಯಾತ್ಮವು ಬಂಡವಾಳರಾಹಿ ಮತ್ತು ಸಮಾಜವಾದದ ನಡುವಣ ಸೇತುವೆ. ಆಧ್ಯಾತ್ಮವು ಬಂಡವಾಳರಾಹಿಗೆ ಸೇವೆ ಮಾಡುವ ಹೃದಯವನ್ನು ಕರುಣಿಸಿದರೆ ಸಮಾಜವಾದಿಗೆ ಸೃಜನಶೀಲತೆಯ ಚೈತನ್ಯವನ್ನು ನೀಡುತ್ತದೆ.  

ನಾದದಿಂದ ಸಾಮರಸ್ಯ ಜನಿಸುತ್ತದೆ

ಬೆಂಗಳೂರು ಆಶ್ರಮ, ಮಾರ್ಚ್ ೨೬ ( ಶುಕ್ರವಾರ ) ರಾತ್ರಿ ೮.೩೦

೭೦೦ ಜನ ನೆರೆದಿದ್ದ ಸತ್ಸಂಗದಲ್ಲಿ ಗುರೂಜಿಯವರು " ನಾದದಿಂದ ಸಾಮರಸ್ಯ ಜನಿಸುತ್ತದೆ " ಎಂದು ಹೇಳಿದರು. ದೇಹದ ಕಣಕಣಗಳ ಮೇಲೆ ಶಬ್ದದ ಪ್ರಭಾವವನ್ನು ವಿವರಿಸುತ್ತ ಅವರು "ಸತ್ಸಂಗದಲ್ಲಿ ಉಂಟಾಗುವ ಸತ್ಪರಿಣಾಮ ಇದು, ನಿಮ್ಮ ದೇಹವು ಸೂಕ್ಷ್ಮವಾದ ಕಣಗಳಿಂದ ಮಾಡಲ್ಪಟ್ಟಿದೆ. ಇವುಗಳ ಮೇಲೆ ಸಂಗೀತ ಪ್ರಭಾವ ಬೀರುತ್ತದೆ. ಇದರಿಂದಾಗಿಯೇ ನಾವು ಸತ್ಸಂಗಕ್ಕೆ ಮಹತ್ವ ನೀಡುತ್ತೇವೆ. ನೀವು ಸತ್ಸಂಗದಲ್ಲಿದ್ದಾಗ ಅದರಲ್ಲಿ ಮುಳುಗಿಬಿಡಿ. ಅದು ನಿಮ್ಮ ದೇಹದ ಕಣಕಣಗಳನ್ನೂ ಬದಲಾಯಿಸುತ್ತದೆ. ನಿಮ್ಮ ದೇಹವ್ಯವಸ್ಥೆಯನ್ನು ಪುನರ್ವ್ಯವಸ್ಥೆ ಮಾಡುತ್ತದೆ. ವಿಜ್ಞಾನಿಗಳು ಸೀಮೆಸುಣ್ಣದ ಧೂಳು, ಕಬ್ಬಿಣದ ರಜ ಮುಂತಾದವುಗಳು ಸಂಗೀತದ ಲಯಕ್ಕೆ ನರ್ತಿಸುತ್ತ ಸುಂದರ ವಿನ್ಯಸಗಳಾಗಿ ಸಜ್ಜಾಗುತ್ತವೆ" ಎಂದು ಅವರು ಹೇಳಿದರು.

" ಈ ಎಲ್ಲವೂ ಏನೂ ಅಲ್ಲ " ಎನ್ನುವ ಅದ್ವೈತ ತತ್ವವನ್ನು ಜರ್ಮನಿಯ ವಿಜ್ಞಾನಿ ಶ್ರೀ ಹ್ಯಾನ್ಸ್ ಪೀಟರ್ ಅವರ ಅಧ್ಯಯನಗಳು ಸಾಬೀತುಪಡಿಸಿವೆ ಎಂದೂ ಗುರೂಜಿ ತಿಳಿಸಿದರು. 

ಗುರುವಾರ, ಮಾರ್ಚ್ 25, 2010

ಸಂರಕ್ಷಣೆ ಮತ್ತು ಪರಿವರ್ತನೆ

ಬುಧವಾರ ಮಾರ್ಚ್ ೨೫, ೨೦೦೯

ಯಾವುದು ತಾತ್ಕಾಲಿಕವಾದುದೋ, ಸಣ್ಣದೋ, ಯಾವುದು ನಾಶವಾಗುತ್ತದೆಯೋ ಅದಕ್ಕೆ ರಕ್ಷಣೆ ಬೇಕು. ಬದಲಾಗಿ ಶಾಶ್ವತವಾದ, ದೊಡ್ಡ ಅಥವಾ ವಿಶಾಲವಾದ ಸಂಗತಿಗಳಿಗೆ ರಕ್ಷಣೆಯ ಅಗತ್ಯವಿಲ್ಲ.

ನಿಮ್ಮ ದೇಹಕ್ಕೆ ರಕ್ಷಣೆ ಬೇಕು; ಆತ್ಮಕ್ಕಲ್ಲ.

ನಿಮ್ಮ ಮನಸ್ಸಿಗೆ ರಕ್ಷಣೆ ಬೇಕು; ನಿಮ್ಮ ಆತ್ಮಕ್ಕಲ್ಲ.

ಸಂರಕ್ಷಣೆ ಎಂದರೇನು? ವಸ್ತು ಈಗ ಯಾವ ಸ್ಥಿತಿಯಲ್ಲಿದೆಯೋ ಅದೇ ಸ್ಥಿತಿಯಲ್ಲಿ ಇನ್ನೂ ಹೆಚ್ಚು ಕಾಲ ಅದು ಇರುವಂತೆ ನೋಡಿಕೊಳ್ಳುವುದು. ಸಂರಕ್ಷಣೆ ಪರಿವರ್ತನೆಯನ್ನು ತಡೆಹಿಡಿಯುತ್ತದೆ. ಸಂರಕ್ಷಿತ ವಾತಾವರಣದಲ್ಲಿ ಪರಿವರ್ತನೆ ಸಾಧ್ಯವಿಲ್ಲ. ಬೀಜವು ಮೊಳೆತು ಸಸಿಯಾಗಲು ಸಂರಕ್ಷಣೆ ಬೇಕು. ಸಸಿಯು ಬೆಳೆದು ಮರವಾಗಲು ಸಂರಕ್ಷಣೆ ಬೇಕು. ಸಂರಕ್ಷಣೆಯಿಂದ ಪರಿವರ್ತನೆಗೆ ಸಹಾಯ ದೊರೆಯಲೂ ಬಹುದು, ವಿಘ್ನ ಉಂಟಾಗಲೂ ಬಹುದು. ರಕ್ಷಣೆಯ ಜವಾಬ್ದಾರಿ ಹೊತ್ತವರಿಗೆ ಯಾವ ಮಟ್ಟದಲ್ಲಿ ರಕ್ಷಣೆ ಒದಗಿಸಬೇಕೆಂಬ ಕಲ್ಪನೆ ಇರಬೇಕು.
ಸತ್ಯಕ್ಕೆ ರಕ್ಷಣೆಯ ಅಗತ್ಯವಿಲ್ಲ. ಸಂರಕ್ಷಣೆ ಹಾಗೂ ಪರಿವರ್ತನೆಗಳೆರಡೂ ಕಾಲ ಹಾಗೂ ಅವಕಾಶದ ಪರಿಮಿತಿಗೆ ಒಳಪಟ್ಟಿರುತ್ತವೆ. ಕಾಲವನ್ನು ಅತಿಕ್ರಮಿಸಬೇಕಾದರೆ ಈ ನಿಯಮಗಳನ್ನು ಗೌರವಿಸಬೇಕಾಗುತ್ತದೆ.
ನಾವು ಸಂರಕ್ಷಣೆಗೊಳಗಾದವರು, ಅದೇ ಸಮಯಕ್ಕೆ ಪರಿವರ್ತನೆಗೆ ಸಹ ಒಳಗಾದವರು. ಇದೇ ಹರಿ, ಇದೇ ಹರ. ಹರಿಯು ಸಂರಕ್ಷಕ, ಹರನು ಪರಿವರ್ತನಕಾರಕ.

ಸಂರಕ್ಷಣೆಯು ನಾಶವಾಗತಕ್ಕಂತಹ ವಸ್ತುಗಳಿಗೆ ಸಂಬಂಧಿಸಿದ್ದು ಕಾಲಕ್ಕೆ ಅಧೀನವಾಗಿದೆ. ಒಬ್ಬ ವೈದ್ಯ  ಎಷ್ಟು ಸಮಯದವರೆಗೆ ಕಾಪಾಡಬಲ್ಲ? ಅವನು ಎಲ್ಲಿಯವರೆಗೆ ಗುಣಪಡಿಸಬಲ್ಲ? ಶಾಶ್ವತವಾಗಿಯಂತೂ ಅಲ್ಲ. ಶಾಂತಿ ಹಾಗೂ ಸಂತೋಷಗಳಿಗೆ ಸಂರಕ್ಷಣೆಯ ಅಗತ್ಯವಿಲ್ಲ. ಏಕೆಂದರೆ ಅವು ತಾತ್ಕಾಲಿಕವಾದವುಗಳಲ್ಲ.