ಸೋಮವಾರ, ಜೂನ್ 2, 2014

ದುಃಖಿತರಲ್ಲಿ ಧೈರ್ಯವನ್ನು ಪ್ರೇರೇಪಿಸುವ ಮನವಿರಲಿ

ಜೂನ್ ೨, ೨೦೧೪
ಬೆಂಗಳೂರು

ಬೋಸ್ನಿಯಾ ಮತ್ತು ಹರ್ಝೆಗೋವ್ನಿಯಾ, ಸರ್ಬಿಯಾ, ಕ್ರೊಯೇಷಿಯಾ, ಮೆಸಿಡೋನಿಯಾ, ಅಲ್ಬೇನಿಯಾ ದೇಶಗಳ ಚರಿತ್ರೆಯಲ್ಲೇ ಅತ್ಯಂತ ಕೆಟ್ಟದಾದ ನೆರೆಯಿಂದ, ಮೇ ೧೪ ಮತ್ತು ೧೭, ೨೦೧೪ರ ನಡುವೆ ೧೦ ಲಕ್ಷಕ್ಕಿಂತಲೂ ಹೆಚ್ಚು ಜನರು ಸಂತ್ರಸ್ತರಾಗಿದ್ದಾರೆ. ಬೋಸ್ನಿಯಾದಲ್ಲಿರುವ ೧,೦೦,೦೦೦ ಕ್ಕಿಂತಲೂ ಹೆಚ್ಚು ಮನೆಗಳು ಮತ್ತು ಇತರ ಕಟ್ಟಡಗಳು ಉಪಯೋಗಕ್ಕೆ ಯೋಗ್ಯವಾಗಿ ಉಳಿದಿಲ್ಲ. ೧೦ ಲಕ್ಷಕ್ಕಿಂತಲೂ ಹೆಚ್ಚು ಜನರಿಗೆ ಶುದ್ಧವಾದ ನೀರಿನ ಪೂರೈಕೆಯಿಲ್ಲದಾಗಿದೆ.

ಯುರೋಪಿನ ಆರ್ಟ್ ಆಫ್ ಲಿವಿಂಗ್ ಕುಟುಂಬವು ಬಾಲ್ಕನ್ಸ್‌(ದಕ್ಷಿಣ ಪೂರ್ವ ಯುರೋಪಿನ ಒಂದು ಭೌಗೋಳಿಕ ಪ್ರದೇಶ)ನ ವಿವಿಧ ಭಾಗಗಳಲ್ಲಿ  ಪರಿಹಾರ ಯತ್ನಗಳ ಕೆಲಸ ಮಾಡುತ್ತಿದೆ.

(ಜೂನ್ ೨, ೨೦೧೪ರಂದು, ಸಂತ್ರಸ್ತ ಕುಟುಂಬಗಳಿಗಾಗಿ, ಶಾಂತಿಗಾಗಿ ಒಂದು ವಿಶೇಷವಾದ ಧ್ಯಾನವನ್ನು ಪೂಜ್ಯ ಶ್ರೀ ಶ್ರೀ ರವಿಶಂಕರರೊಂದಿಗೆ ನಡೆಸಲಾಯಿತು. ಅದರಲ್ಲಿ, ಶಾಂತಿ ಮತ್ತು ಜೀವನದ ಪುನಃಸ್ಥಾಪನೆಗಾಗಿ ಧ್ಯಾನ ಮಾಡಲು ಹಾಗೂ ಪ್ರಾರ್ಥಿಸಲು ಜಗತ್ತಿನೆಲ್ಲೆಡೆಗಳಿಂದ ಸಾವಿರಾರು ಜನರು ಒಂದುಗೂಡಿದರು. ಶ್ರೀ ಶ್ರೀಯವರ ಸಂದೇಶದ ಪ್ರತಿಲಿಪಿಯು ಕೆಳಕಂಡಂತಿದೆ.)

ಬಾಲ್ಕನ್ಸ್‌ನ ಜನರೊಂದಿಗೆ ನಾವು ನಮ್ಮ ಒಗ್ಗಟ್ಟನ್ನು ವ್ಯಕ್ತಪಡಿಸುತ್ತಿರುವಂತೆಯೇ, ಪರಿಸರವನ್ನು ಸಂರಕ್ಷಿಸಲು ಕೂಡಾ ನಾವೊಂದು ಪ್ರತಿಜ್ಞೆಯನ್ನು ತೆಗೆದುಕೊಳ್ಳುತ್ತಿದ್ದೇವೆ.

ಇವತ್ತು ಏನಾಗುತ್ತಿದೆಯೆಂದರೆ, ಎಲ್ಲೋ ಒಂದೆಡೆ ಕ್ಷಾಮವಿದೆ; ಎಲ್ಲೋ ಒಂದೆಡೆ ಬರವಿದೆ; ಎಲ್ಲೋ ಒಂದೆಡೆ ನೆರೆಯಿದೆ. ಈ ದಶಕಗಳಲ್ಲಿ ಮನುಕುಲವು ಎದುರಿಸುತ್ತಿರುವ ಪ್ರಕೃತಿ ವಿಕೋಪಗಳು, ನಾವು ಪ್ರಕೃತಿಯ ಬಗ್ಗೆ ಕಾಳಜಿ ವಹಿಸಬೇಕು ಎಂಬುದರ ಕಡೆಗಿರುವ ಒಂದು ಸೂಚನೆಯಾಗಿದೆ.

ಈಗ, ನಾನು ಮಾತನಾಡುತ್ತಿರುವಂತೆಯೇ, ಇಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಹಲವು ವರ್ಷಗಳಿಂದ ನಮ್ಮಲ್ಲಿ ಇಷ್ಟು ಭಾರೀ ಮಳೆಯಾಗಿಲ್ಲ. ಈ ವರ್ಷ ಬಹಳ ಕಡಿಮೆ ಮಳೆಯಾಗುವುದೆಂದೂ, ಮತ್ತು ಅದು ಭಾರತದಲ್ಲಿ ಬೆಳೆಗಳ ಮೇಲೆ ಪರಿಣಾಮ ಬೀರುವುದೆಂದೂ ಎಲ್ಲಾ ಹವಾಮಾನ ಇಲಾಖೆಗಳೂ ಭವಿಷ್ಯ ನುಡಿದಿದ್ದವು. ಆದರೆ ಇವತ್ತು ನಾವು ಏನನ್ನು ನೋಡುತ್ತಿರುವೆವೋ ಅದು ಭವಿಷ್ಯವಾಣಿಗಳನ್ನು ಸುಳ್ಳಾಗಿಸುತ್ತಿರುವಂತೆ ತೋರುತ್ತಿದೆ. ನಮ್ಮಲ್ಲಿ ಈಗ ಅಷ್ಟೊಂದು ಭಾರೀ ಮಳೆ ಬರುತ್ತಿದೆ.

ಈ ದೇಶದಲ್ಲಿ, ತೀವ್ರವಾದ ನೀರಿನ ಕೊರತೆಯಿದೆ. ಕೆಲವು ದಿನಗಳ ಹಿಂದೆ ನಾನು ಕೆಲವು ಹಳ್ಳಿಗಳ ಮೂಲಕ ಪ್ರಯಾಣಿಸುತ್ತಿದ್ದೆ ಮತ್ತು ಅಲ್ಲಿ ನಾಲ್ಕು ವರ್ಷಗಳಿಂದ ಬತ್ತಿದ್ದ ಹೊಳೆಗಳಿರುವುದನ್ನು ನಾನು ನೋಡಿದೆ. ಪಶು ಪಕ್ಷಿಗಳಿಗೆ ಅಲ್ಲಿ ನೀರಿರಲಿಲ್ಲ. ಕುಡಿಯಲು ನೀರಿಲ್ಲ. ಕೃಷಿಗೆ ನೀರಿಲ್ಲ.

ಇವತ್ತಿನ ಮಳೆಯು ಆ ಪ್ರಾರ್ಥನೆಗಿರುವ ಒಂದು ಉತ್ತರವೆಂದು ನನಗನ್ನಿಸುತ್ತದೆ. ಈಗ, ಈ ಎಲ್ಲಾ ಹಳ್ಳಿಗಳಲ್ಲಿ ಸಾಕಷ್ಟು ನೀರಿರಬಹುದು.

ಈಗ, ಬಾಲ್ಕನ್ ರಾಜ್ಯಗಳಲ್ಲಿ, ನಾವು ನೆರೆಗಳನ್ನು ನಿಯಂತ್ರಿಸಲು ಸಾಧ್ಯವಾಗುವಂತೆ ಮಾಡುವ ಒಂದು ವ್ಯವಸ್ಥೆ ನಮ್ಮ ಬಳಿಯಿರುವುದಕ್ಕಾಗಿ,  ನಾವೊಂದು ಉತ್ತಮವಾದ ಮೂಲಭೂತ ಸೌಕರ್ಯವನ್ನು ನಿರ್ಮಿಸಬೇಕಾಗಿದೆ.

ಕೆಲವೊಮ್ಮೆ, ನೆರೆಗಳನ್ನು ನಿಯಂತ್ರಿಸಲು ಸಾಧ್ಯವಾಗದೇ ಇರುವಾಗ, ಜನರು ತಮಗಾಗಿ ಒಂದು ಹೆಚ್ಚು ಸುರಕ್ಷಿತ ಪ್ರದೇಶವನ್ನು ಕಂಡುಕೊಳ್ಳಲು ಸಾಧ್ಯವಾಗುವುದಕ್ಕಾಗಿ ಹವಾಮಾನ ಮುನ್ಸೂಚನಾ ಇಲಾಖೆಯು ಜನರಿಗೆ ಎಚ್ಚರಿಕೆಯನ್ನು ನೀಡಬೇಕು.

ಪರಿಹಾರ ಕಾರ್ಯವನ್ನು: ಆಘಾತದ ಪರಿಹಾರ ಮತ್ತು ಧ್ಯಾನದ ಕಾರ್ಯಕ್ರಮಗಳನ್ನು ಒದಗಿಸುವುದರಲ್ಲಿ ಆರ್ಟ್ ಆಫ್ ಲಿವಿಂಗ್‌ನ ಸ್ವಯಂಸೇವಕರು ತಮ್ಮ ೧೦೦% ವನ್ನು ಹಾಕುತ್ತಿರುವರೆಂಬುದರ ಬಗ್ಗೆ ನನಗೆ ಖಾತ್ರಿಯಿದೆ. ಇದು ಬಹಳ ಮುಖ್ಯ.
ಧ್ಯಾನವು ಪ್ರಕೃತಿಯನ್ನು ಸಮಾಧಾನಗೊಳಿಸಲು ಸಹಾಯ ಮಾಡುತ್ತದೆ. ಧ್ಯಾನವು, ಸವಾಲಿನ ಪರಿಸ್ಥಿತಿಗಳನ್ನು ಎದುರಿಸಲು ನಮಗೆ ಸಹಾಯ ಮಾಡುತ್ತದೆ. ಅದು ನಮಗೆ ಬಹಳಷ್ಟು ಅಗತ್ಯವಿರುವ ವಿಶ್ವಾಸವನ್ನು ಮತ್ತು ಅಪೇಕ್ಷಿತ ಹಾಗೂ ಲಾಭದಾಯಕ ಫಲಿತಾಂಶಗಳನ್ನು ಯಾವ ಕಾರ್ಯವು ನಮಗೆ ನೀಡಬಲ್ಲದು ಎಂಬುದನ್ನು ಮುಂಗಾಣಲಿರುವ ಅಂತಃಸ್ಫುರಣ ಸಾಮರ್ಥ್ಯವನ್ನು ಕೂಡಾ ನೀಡುತ್ತದೆ.

ಬಿಕ್ಕಟ್ಟಿನ ಸಮಯದಲ್ಲಿ ಧ್ಯಾನವು ಜನರಲ್ಲಿ, ಸಾಮೂಹಿಕ ಉತ್ಸಾಹದ ಒಂದು ಭಾವನೆಯನ್ನು ಕೂಡಾ ಸೃಷ್ಟಿಸುತ್ತದೆ. ಹೀಗಾಗಿ, ನಾನು ಹೇಳುವುದೇನೆಂದರೆ, ಎದೆಗುಂದಬೇಡಿ. ಬಿಕ್ಕಟ್ಟು ಮುಗಿದುಹೋಗುತ್ತದೆ. ಮತ್ತು ಈ ಸಂಕಟಕಾಲದಲ್ಲಿ ನಾವೆಲ್ಲರೂ ನಿಮ್ಮೊಂದಿಗಿದ್ದೇವೆ.

ಎಲ್ಲಾ ಸಂಕಟವನ್ನು, ಎಲ್ಲಾ ದುಃಖವನ್ನು ಮತ್ತು ಎಲ್ಲಾ ಸಂತೋಷವನ್ನು ಕೂಡಾ ನಾವು ಒಟ್ಟಿಗೆ ಹಂಚಿಕೊಳ್ಳೋಣ.
ಇದು ಜನರಿಗೆ, ಎಚ್ಚೆತ್ತುಕೊಂಡು ತಮ್ಮ ಸ್ವಾರ್ಥಪರವಾದ ಉದ್ದೇಶಗಳಿಂದಾಚೆಗೆ ನೋಡಲಿರುವ ಒಂದು ಅವಕಾಶ ಕೂಡಾ ಆಗಿದೆ. ಜೀವನದಲ್ಲಿ ಇನ್ನೂ ಹೆಚ್ಚಿನ ಗುರಿಗಳಿವೆ. ಅದಕ್ಕಾಗಿ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಾಗಿದೆ. ನಾವು ಪರಸ್ಪರರ ಬಗ್ಗೆ ಕಾಳಜಿ ವಹಿಸಬೇಕು ಮತ್ತು ಮುಂದಕ್ಕೆ ಪ್ರಗತಿ ಹೊಂದಬೇಕು.

ಸಂಕಟವು ಜನರನ್ನು ಒಟ್ಟು ಸೇರಿಸುತ್ತದೆ. ಮತ್ತು ಈ ಸಂಕಟದಲ್ಲಿ ಜನರು ಒಟ್ಟಾಗಿದ್ದಾರೆ. ಅವರು ತಮ್ಮ ವೈರವನ್ನು, ಭಿನ್ನತೆಗಳನ್ನು ಮತ್ತು ದ್ವೇಷವನ್ನು ಮರೆತಿದ್ದಾರೆ. ಬೋಸ್ನಿಯಾ ಮತ್ತು ಇತರ ಪ್ರದೇಶಗಳಲ್ಲಿ ಜನಾಂಗೀಯ ಹಾಗೂ ಧಾರ್ಮಿಕ ಹಿಂಸೆಯು ನಡೆದಿವೆಯೆಂಬುದು ನನಗೆ ತಿಳಿದಿದೆ. ನಾವು ಸ್ಲೊವೇನಿಯಾದವರಾಗಿರಲಿ, ಕ್ರೊಯೇಷಿಯಾದವರಾಗಿರಲಿ ಅಥವಾ ಬೋಸ್ನಿಯಾದವರಾಗಿರಲಿ, ನಾವು ನಮ್ಮೆಲ್ಲಾ ಭಿನ್ನಾಭಿಪ್ರಾಯಗಳನ್ನು ಮರೆಯಲಿರುವ ಸಮಯವು ಇದಾಗಿದೆ. ನಾವು ನಮ್ಮೆಲ್ಲಾ ಭಿನ್ನಾಭಿಪ್ರಾಯಗಳನ್ನು ಮರೆಯಬೇಕು ಮತ್ತು ಒಂದು ಮಾನವೀಯತೆಯಾಗಿ, ಜನರ ಸೇವೆ ಮಾಡುವುದರಲ್ಲಿ ಹಾಗೂ ಬಾಲ್ಕನ್ಸ್‌ನಲ್ಲಿ ಯಥಾಸ್ಥಿತಿಯನ್ನು ಪುನಃ ಸ್ಥಾಪಿತಗೊಳಿಸುವುದರಲ್ಲಿ ನಾವು ಒಟ್ಟಾಗಬೇಕು.

ಪ್ರಶ್ನೆ: ಇಂತಹ ಪರಿಸ್ಥಿತಿಗಳಲ್ಲಿ, ಆಹಾರವಿಲ್ಲದಿರುವಾಗ ಮತ್ತು ವಿದ್ಯುಚ್ಛಕ್ತಿ ಇಲ್ಲದಿರುವಾಗ ಜ್ಞಾನವನ್ನು ಅನ್ವಯಿಸಲು ನನಗೆ ಕಷ್ಟವಾಗುತ್ತದೆ. 

ಶ್ರೀ ಶ್ರೀ ರವಿ ಶಂಕರ್: ನೀನು ಜ್ಞಾನವನ್ನು ಅನ್ವಯಿಸಬೇಕಾಗಿಲ್ಲ, ಕೇವಲ ಸ್ವಾಭಾವಿಕವಾಗಿರು.

ಜ್ಞಾನವು ಈಗಾಗಲೇ ನಿಮ್ಮಲ್ಲಿ ಅಂತರ್ಗತವಾಗಿದೆ. ನೀವು ಪರಿಸ್ಥಿತಿಗಳನ್ನು ಸ್ವೀಕರಿಸಬೇಕು, ವರ್ತಮಾನದ ಕ್ಷಣದಲ್ಲಿ ಜೀವಿಸಬೇಕು ಮತ್ತು ಜನರ ಸೇವೆ ಮಾಡಬೇಕು. ಇದು ಜ್ಞಾನ. ಇನ್ನೂ ಹೆಚ್ಚಿನ ಯಾವುದೇ ಜ್ಞಾನವನ್ನು ಅನ್ವಯಿಸಲು ಪ್ರಯತ್ನಿಸಬೇಡಿ; ಅದರ ಅಗತ್ಯವಿಲ್ಲ. ಸ್ವಾಭಾವಿಕವಾಗಿರಿ ಮತ್ತು ಏನಾದರೂ ಒಳ್ಳೆಯದಾಗಲಿದೆಯೆಂಬ ವಿಶ್ವಾಸವನ್ನು ಹೊಂದಿ. ನಿಮ್ಮ ಪ್ರಾಥನೆಗಳಿಗೆ ಉತ್ತರಿಸಲಾಗುತ್ತದೆಯೆಂಬ ವಿಶ್ವಾಸವನ್ನಿಡಿ.

ಪ್ರಶ್ನೆ: ನನ್ನ ವಿಶ್ವಾಸವು ಅಲುಗಾಡಿದೆ. ಒಬ್ಬ ವ್ಯಕ್ತಿಯಾಗಿ ನಾನು, ಈ ಆಘಾತದಿಂದ ಹೊರಬರಲು ಇತರರಿಗೆ ಸಹಾಯ ಮಾಡಲು ಸಾಧ್ಯವೇ?

ಶ್ರೀ ಶ್ರೀ ರವಿ ಶಂಕರ್: ಹೇ! ಒಂದು ನೆರೆಯು ನಿನ್ನ ವಿಶ್ವಾಸವನ್ನು ಅಲುಗಾಡಿಸಲು ಸಾಧ್ಯವಿಲ್ಲ. ಹಾಗಿದ್ದಲ್ಲಿ ಅದು ವಿಶ್ವಾಸವೇ ಅಲ್ಲ. ಸಂಕಟದ ಪ್ರತಿ ಕ್ಷಣದಲ್ಲೂ ನಿನಗೆ ಸಹಾಯವು ದೊರಕುವುದು ಮತ್ತು ನಿನಗೆ ಸಹಾಯ ಮಾಡಲಾಗುವುದು ಎಂಬುದನ್ನು ಸುಮ್ಮನೇ ತಿಳಿ. ನಿನ್ನೊಂದಿಗೆ ನಿಲ್ಲುವ, ನಿನಗೆ ಸಹಾಯ ಮಾಡುವ ಒಂದು ಶಕ್ತಿಯಿದೆ. ಅಷ್ಟನ್ನೇ ನೀನು ಮನಸ್ಸಿನಲ್ಲಿಟ್ಟುಕೊಳ್ಳಬೇಕಾದುದು.

ಒಂದು ಧಾರಾಕಾರ ಮಳೆ ಅಥವಾ ಒಂದು ನೆರೆ ಅಥವಾ ಒಂದು ಕ್ಷಾಮವು ನಿನ್ನ ವಿಶ್ವಾಸವನ್ನು ಅಲುಗಾಡಿಸಬಲ್ಲದಾದರೆ, ಆಗ ಅದು ನಿಜವಾಗಿಯೂ ವಿಶ್ವಾಸವಲ್ಲ. ಅದೊಂದು ಪ್ರಾಸಂಗಿಕ ಪರಿಕಲ್ಪನೆ ಅಷ್ಟೇ. ಇದು ವಿಶ್ವಾಸಕ್ಕಿರುವ ಪರೀಕ್ಷೆಯ ಸಮಯವಾಗಿದೆ, ಹೀಗಾಗಿ ಅದನ್ನು ಅಚಲವಾಗಿರಿಸು.

ಪ್ರಶ್ನೆ: ಜನಸಂಖ್ಯೆಯಲ್ಲಿ ೧% ಜನರು ಧ್ಯಾನ ಮಾಡಿದರೆ, ಅದು ಉಳಿದ ೯೯% ಜನರಿಗೆ ಲಾಭದಾಯಕವಾಗಿದೆ ಎಂದು ನೀವು ಹೇಳುತ್ತೀರಿ. ನೀವು ದಯವಿಟ್ಟು ವಿವರಿಸಬಲ್ಲಿರೇ?

ಶ್ರೀ ಶ್ರೀ ರವಿ ಶಂಕರ್: ಇಡೀ ವಿಶ್ವವು ಕೇವಲ ತರಂಗಗಳಾಗಿವೆ. ನೀನಿದನ್ನು ನೋಡಬಹುದು. ಒಂದು ಗುಂಪಿನಲ್ಲಿ ಒಬ್ಬ ವ್ಯಕ್ತಿಯು ಕ್ಷೋಭೆಗೊಳಗಾಗುತ್ತಾನೆಂದಿಟ್ಟುಕೊಳ್ಳೋಣ. ನೋಡು ಅದು ಹೇಗೆ ಎಲ್ಲರಿಗೂ ಹರಡುತ್ತದೆಯೆಂದು. ಎಲ್ಲರೂ ವ್ಯಾಕುಲರಾಗುತ್ತಾರೆ. ಅದೇ ರೀತಿಯಲ್ಲಿ, ಒಬ್ಬ ವ್ಯಕ್ತಿಯು ಶಾಂತಿಯುತವಾಗಿದ್ದರೆ, ಆ ಶಾಂತಿಯು ಪಸರಿಸುತ್ತದೆ.

ಪ್ರಶ್ನೆ: ನೈಸರ್ಗಿಕ ವಿಕೋಪಗಳುಂಟಾಗುವಾಗ, ನೈಸರ್ಗಿಕ ವಿಕೋಪಗಳಲ್ಲಿ ದೇವರ ಕೈಯಿದೆಯೇ ಅಥವಾ ಮನುಷ್ಯನು ಒಂದು ಪಾತ್ರವನ್ನು ವಹಿಸುತ್ತಾನೆಯೇ?

ಶ್ರೀ ಶ್ರೀ ರವಿ ಶಂಕರ್: ಎರಡೂ. ಕೆಲವೊಮ್ಮೆ ಅದೊಂದು ರಹಸ್ಯ; ಅದು ಹೇಗೆ ಆಗುತ್ತಿದೆಯೆಂಬುದನ್ನು ವಿವರಿಸಲು ನಿಮಗೆ ಸಾಧ್ಯವಿಲ್ಲ. ಮತ್ತು ಇತರ ಹಲವಾರು ಸಂದರ್ಭಗಳಲ್ಲಿ, ನಾವು ಪ್ರಕೃತಿಯ ಕಡೆಗೆ ದಯಾಪರರಾಗಿಲ್ಲ. ನಾವದನ್ನು ಮಿತಿಮೀರಿ ಶೋಷಣೆ ಮಾಡುತ್ತಿದ್ದೇವೆ. ಮತ್ತು ಅದಕ್ಕಾಗಿಯೇ ಪ್ರಕೃತಿಯು ಒಂದು ಉಗ್ರ ರೀತಿಯಲ್ಲಿ ಪ್ರತಿಕ್ರಿಯಿಸುತ್ತದೆ.

ಪ್ರಶ್ನೆ: ಈ ಪ್ರಾಕೃತಿಕ ವಿಕೋಪವು ಸುತ್ತಲೂ ಬಹಳಷ್ಟು ವಿಪತ್ತನ್ನು ತಂದಿದೆ, ಆದರೆ ಅದು ಏಕತ್ವದ ಸ್ಫೂರ್ತಿಯನ್ನು ಹಾಗೂ ಆತ್ಮೀಯತೆಯನ್ನು ಕೂಡಾ ತಂದಿದೆ. ನಾವಿದನ್ನು ಹೇಗೆ ಕಾಪಾಡಿಕೊಳ್ಳಬಹುದು?

ಶ್ರೀ ಶ್ರೀ ರವಿ ಶಂಕರ್: ನಿಮಗೆ ಗೊತ್ತಾ, ಭಾವನೆಗಳನ್ನು ಕಾಪಾಡಿಕೊಳ್ಳಲು ಸಾಧ್ಯವಿಲ್ಲ. ಯಾವಾಗಲೂ ನೀವು ಒಂದೇ ಭಾವನೆಯನ್ನು ಹೊಂದಿರಲು ಸಾಧ್ಯವಿಲ್ಲ. ಭಾವನೆಗಳು ಅಲೆಗಳಂತೆ, ಅವುಗಳು ಬರುತ್ತವೆ ಮತ್ತು ಹೋಗುತ್ತವೆ. ಅವುಗಳು ಮೇಲೆ ಬರುತ್ತವೆ ಮತ್ತು ಕೆಳಕ್ಕೆ ಹೋಗುತ್ತವೆ. ಹೀಗಾಗಿ, ಭಾವನೆಗಳನ್ನು ಅಥವಾ ಐಕ್ಯತೆಯನ್ನು ಕಾಪಾಡಿಕೊಳ್ಳುವುದರ ಬಗ್ಗೆ ನೀವು ಚಿಂತಿಸಬಾರದು. ಐಕ್ಯತೆಯಿದೆ ಎಂದು ಸುಮ್ಮನೇ ದೃಢವಾಗಿ ನಂಬಿಕೊಂಡು ಮುಂದುವರೆಯಿರಿ.