ಮಂಗಳವಾರ, ಏಪ್ರಿಲ್ 8, 2014

’ರಾಮ’ನೆಂಬ ನಮ್ಮೊಳಗಿನ ದೈವೀ ಶಕ್ತಿ

ಎಪ್ರಿಲ್ ೮, ೨೦೧೪
ಕೋಲ್ಕತ್ತಾ, ಪಶ್ಚಿಮ ಬಂಗಾಳ

ಪ್ರಶ್ನೆ: ಗುರೂಜಿ, ರಾಮ ಎಂದರೆ ಅರ್ಥವೇನು?

ಶ್ರೀ ಶ್ರೀ ರವಿ ಶಂಕರ್: ರಾಮ ಎಂದರೆ ನಮ್ಮೊಳಗಿನ ಪ್ರಭೆ; ಆತ್ಮನ ಪ್ರಕಾಶ. ’ರವಿ’ ಎಂಬ ಪದಕ್ಕೂ ಅದೇ ಅರ್ಥ. ’ರ’ ಎಂದರೆ ಪ್ರಕಾಶ, ’ವಿ’ ಎಂದರೆ ವಿಶೇಷ. ಇದರರ್ಥ, ನಮ್ಮೊಳಗಿನ ಶಾಶ್ವತವಾದ ಈ ವಿಶೇಷ ಪ್ರಕಾಶ. ನಮ್ಮ ಹೃದಯದಲ್ಲಿನ ಪ್ರಕಾಶವು ರಾಮ ಎಂದು ಕರೆಯಲ್ಪಡುತ್ತದೆ.

ಹೀಗೆ ನಮ್ಮ ಆತ್ಮದ ಪ್ರಕಾಶವು ರಾಮ ಆಗಿದೆ.

’ರಾಮ ನವಮಿ’ಯ ಈ ದಿನವು, ಈ ದೈವಿಕವಾದ ಆಂತರಿಕ ಪ್ರಕಾಶದ ಜನ್ಮವನ್ನು ಆಚರಿಸುತ್ತದೆ. ಭಗವಾನ್ ರಾಮನು ದಶರಥ ರಾಜ ಮತ್ತು ಕೌಶಲ್ಯಾ ರಾಣಿಗೆ ಹುಟ್ಟಿದನು. ಕೌಶಲ್ಯಾ ಎಂದರೆ ಕುಶಲತೆ ಮತ್ತು ದಶರಥ ಎಂದರೆ ಹತ್ತು ರಥಗಳುಳ್ಳವನು. ನಮ್ಮ ಶರೀರದಲ್ಲಿ ಹತ್ತು ಇಂದ್ರಿಯಗಳಿವೆ - ಪಂಚ ಜ್ಞಾನೇಂದ್ರಿಯಗಳು ಮತ್ತು ಪಂಚ ಕರ್ಮೇಂದ್ರಿಯಗಳು (ಎರಡು ಕೈಗಳು, ಎರಡು ಕಾಲ್ಗಳು, ಜನನೇಂದ್ರಿಯ, ವಿಸರ್ಜನಾಂಗ ಮತ್ತು ಬಾಯಿ).

ಸುಮಿತ್ರ ಎಂದರೆ ಎಲ್ಲರೊಂದಿಗೂ ಸ್ನೇಹದಿಂದ ಇರುವವರು. ಕೈಕೇಯಿ ಎಂದರೆ, ಯಾವಾಗಲೂ ಎಲ್ಲರಿಗೂ ನಿಸ್ವಾರ್ಥವಾಗಿ ಕೊಡುವವರು.

ದಶರಥ ರಾಜನು ತನ್ನ ಮೂವರು ಪತ್ನಿಯರೊಂದಿಗೆ ಋಷಿಗಳ ಬಳಿಗೆ ಹೋದನು. ಋಷಿಗಳು ಅವರಿಗೆ ಪ್ರಸಾದವನ್ನು ನೀಡಿದಾಗ ಅದರ ಕೃಪೆಯಿಂದ ಭಗವಾನ್ ರಾಮ, ಲಕ್ಷ್ಮಣ, ಶತ್ರುಘ್ನ ಮತ್ತು ಭರತ ಹುಟ್ಟಿದರು.

ರಾಮ ಎಂದರೆ ಆಂತರಿಕ ಪ್ರಕಾಶ ಮತ್ತು ಲಕ್ಷ್ಮಣ ಎಂದರೆ ಅರಿವು. ಶತ್ರುಘ್ನ ಎಂದರೆ, ಯಾರಿಗೆ ಶತ್ರುಗಳಿಲ್ಲವೋ ಅವನು ಅಥವಾ ಯಾರು ಯಾವುದೇ ವಿರೋಧವನ್ನು ಎದುರಿಸುವುದಿಲ್ಲವೋ ಅವನು. ಭರತ ಎಂದರೆ ಪ್ರತಿಭಾನ್ವಿತನಾದ ಒಬ್ಬನು.
ಅಯೋಧ್ಯ (ಭಗವಾನ್ ರಾಮನ ಜನ್ಮಸ್ಥಳ) ಎಂದರೆ, ಯಾವುದನ್ನು ನಾಶಪಡಿಸಲು ಸಾಧ್ಯವಿಲ್ಲವೋ ಅದು. ಕಥೆಯ ಸಾರವು ಹೀಗಿದೆ: ನಮ್ಮ ಶರೀರವು ಅಯೋಧ್ಯೆಯಾಗಿದೆ. ನಮ್ಮ ಶರೀರದ ರಾಜನು ಐದು ಜ್ಞಾನೇಂದ್ರಿಯಗಳು ಮತ್ತು ಐದು ಕರ್ಮೇಂದ್ರಿಯಗಳು. ಶರೀರದ ರಾಣಿಯು ಕುಶಲತೆ ಆಗಿದೆ. ನಮ್ಮೆಲ್ಲಾ ಜ್ಞಾನಗಳು ಹೊರಮುಖವಾಗಿವೆ. ಕುಶಲತೆಯನ್ನು ಬಳಸಿ ನಾವು ಅವುಗಳನ್ನು ಒಳಮುಖವಾಗಿ ತರುತ್ತೇವೆ ಮತ್ತು ಆಗಲೇ ದೈವಿಕವಾದ ಶಾಶ್ವತ ಪ್ರಕಾಶ, ಅಂದರೆ ಭಗವಾನ್ ರಾಮನು ನಮ್ಮೊಳಗೆ ಉದಯಿಸುವುದು.

ಭಗವಾನ್ ರಾಮನು ನವಮಿಯಂದು ಜನಿಸಿದನು. ನವಮಿಯ (ಒಂಭತ್ತನೆಯ ದಿನದ) ಮಹತ್ವವನ್ನು ನಾನು ಬೇರೆ ಯಾವಾಗಲಾದರೂ ವಿವರಿಸುತ್ತೇನೆ.

ಮನಸ್ಸು (ಸೀತೆ), ಅಹಂಕಾರದಿಂದ (ರಾವಣ) ಅಪಹರಿಸಲ್ಪಟ್ಟಾಗ, ದೈವಿಕ ಪ್ರಕಾಶವು ಅರಿವಿನೊಂದಿಗೆ (ಲಕ್ಷ್ಮಣ) ಜೊತೆಯಾಗಿ, ಭಗವಾನ್ ಹನುಮಂತನ (ಪ್ರಾಣವನ್ನು ಸೂಚಿಸುತ್ತಾ) ಭುಜಗಳ ಮೇಲೆ ಅವಳನ್ನು ಮನೆಗೆ ಮರಳಿ ತಂದರು. ಈ ರಾಮಾಯಣವು ನಮ್ಮ ಶರೀರದಲ್ಲಿ ಸದಾಕಾಲ ನಡೆಯುತ್ತಾ ಇರುತ್ತದೆ.

ಪ್ರಶ್ನೆ: ಗುರುದೇವ, ಪ್ರೀತಿಯು ಒಂದು ಭಾವನೆಯಲ್ಲದಿದ್ದರೆ ಮತ್ತದು ಏನು?

ಶ್ರೀ ಶ್ರೀ ರವಿ ಶಂಕರ್: ಅದು ನಮ್ಮ ಅಸ್ತಿತ್ವವೇ ಆಗಿದೆ. ನಾನು ನಿಮಗೆ ಕೇವಲ ಮೂರು ವಿಷಯಗಳನ್ನು ಮಾತ್ರ ಹೇಳುತ್ತೇನೆ: ಹೃದಯದಲ್ಲಿ ಶುದ್ಧತೆ, ಮನಸ್ಸಿನಲ್ಲಿ ಸ್ಪಷ್ಟತೆ ಮತ್ತು ಕಾರ್ಯದಲ್ಲಿ ಪ್ರಾಮಾಣಿಕತೆ. ಇದು ಆಧ್ಯಾತ್ಮದ ಸಾರವಾಗಿದೆ. ನಿಮ್ಮಲ್ಲಿ ಈ ಮೂರು ಇದ್ದರೆ, ಹಲವಾರು ಸಮಸ್ಯೆಗಳು ಮೊಗ್ಗಾಗಿರುವಾಗಲೇ ಅಲ್ಲಿಯೇ ಆಗಲೇ ಕಿತ್ತು ಹಾಕಲ್ಪಡುತ್ತದೆ.

ಪ್ರಶ್ನೆ: ಗುರುದೇವ, ನಿಮ್ಮನ್ನು ಭೇಟಿಯಾದ ಬಳಿಕವೂ ಜನರು ನಿಷ್ಠುರವಾಗಿ ಹಾಗೂ ಮತ್ಸರದಿಂದ ವರ್ತಿಸುವುದನ್ನು ಮುಂದುವರಿಸುವುದು ಯಾಕೆ? ಇದಕ್ಕೆ ಕಾರಣವೇನು?

ಶ್ರೀ ಶ್ರೀ ರವಿ ಶಂಕರ್: ಇತರರ ಬಗ್ಗೆ ಚಿಂತಿಸುವುದು ಬೇಡವೆಂದು ನಾನು ನಿನಗೆ ಸಲಹೆ ನೀಡುವೆ. ಸುಮ್ಮನೆ ಊಹಿಸಿ ನೋಡು, ಅವರು ಈ ಪಥದ ಮೇಲೆ ಇರದಿರುತ್ತಿದ್ದರೆ, ಅವರು ಎಷ್ಟೊಂದು ನಿಷ್ಠುರರಾಗಿರುತ್ತಿದ್ದರು. ನಾನು ಅವರನ್ನು ಸ್ವೀಕರಿಸುತ್ತೇನೆ ಮತ್ತು ಸುಧಾರಿಸಲು ಅವರಿಗೆ ಸಾಕಷ್ಟು ಸಮಯವನ್ನು ನೀಡುತ್ತೇನೆ. ಸಮಯದೊಂದಿಗೆ ಜನರು ಬದಲಾಗುತ್ತಾರೆ. ಜನರು ಸುಧಾರಿಸುತ್ತಾರೆ. ಇತರರನ್ನು ನೋಡುವುದರಲ್ಲಿ ಮತ್ತು ಅವರನ್ನು ಗಮನಿಸುವುದರಲ್ಲಿ ನೀನು ಸಿಕ್ಕಿಹಾಕಿಕೊಳ್ಳಬಾರದು. ನೀನು ನಿನ್ನನ್ನೇ ನೋಡು. ಪಥದ ಮೇಲೆ ಬಂದ ಬಳಿಕ ನೀನು ಎಷ್ಟು ಬದಲಾಗಿರುವೆ ಎಂಬುದರ ಬಗ್ಗೆ ಸುಮ್ಮನೆ ಮೌನವಾಗಿ ಚಿಂತನೆ ಮಾಡು ಮತ್ತು ಗಮನಿಸು. ನೀನು ನಿನ್ನದೇ ಪ್ರಗತಿಯನ್ನು ನೋಡು. ಕೆಲವು ಜನರು ನಿಧಾನವಾಗಿ ಕಲಿಯುವವರಾಗಿರುತ್ತಾರೆ, ಕೆಲವರು ವೇಗವಾಗಿ ಕಲಿಯುವವರಾಗಿರುತ್ತಾರೆ. ಜೀವನದಲ್ಲಿ ಹೀಗೆ ಆಗುತ್ತದೆ.

ಪ್ರಶ್ನೆ: ಗುರುದೇವ, ಸೇಡು ಸಮರ್ಥನೀಯವೇ?

ಶ್ರೀ ಶ್ರೀ ರವಿ ಶಂಕರ್: ಸೇಡು ಎಂಬುದು ಅವಿವೇಕ ಮತ್ತು ಮೂರ್ಖತನದ ಒಂದು ಸಂಕೇತವಾಗಿದೆ. ಯಾವುದೇ ಸೇಡು ತೋರಿಸುವುದೇನೆಂದರೆ, ನೀವು ನಿಮ್ಮ ದೃಷ್ಟಿಯನ್ನು ಕಳಕೊಂಡಿರುವಿರೆಂದು, ನೀವು ಕುರುಡರಾಗಿರುವಿರೆಂದು.

ಪ್ರಶ್ನೆ: ಗುರುದೇವ, ನನ್ನ ಎಲ್ಲಾ ಬಯಕೆಗಳು ಪೂರೈಸಲ್ಪಡುತ್ತಿರುವುದು ಯಾಕೆ?

ಶ್ರೀ ಶ್ರೀ ರವಿ ಶಂಕರ್: ನೀನು ಏನನ್ನಾದರೂ ಬಯಸುವಾಗ ನಿನಗದು ಸಿಗುತ್ತದೆ. ಅದು ಸಹಜವೇ ಆಗಿದೆ. ಒಂದು ಕಂಪ್ಯೂಟರ್‌ನಲ್ಲಿ ನೀನೊಂದು ಗುಂಡಿಯನ್ನು ಅದುಮಿದಾಗ ಅದು ಕೆಲಸ ಮಾಡುವಂತೆಯೇ, ಅದೇ ರೀತಿಯಲ್ಲಿ, ನಿನ್ನ ಮನಸ್ಸಿನಲ್ಲೊಂದು ಬಯಕೆಯಿರುವಾಗ, ಅದು ಖಂಡಿತವಾಗಿಯೂ ಪ್ರಕಟವಾಗುತ್ತದೆ. ಅದು ಯಾಕೆ ಪೂರೈಸಲ್ಪಡುತ್ತದೆಯೆಂದು ಯಾರಾದರೂ ಕೇಳುತ್ತಿರುವುದು ಇದು ಮೊದಲ ಸಲವೆಂದು ನನಗನಿಸುತ್ತದೆ. ನಿನ್ನ ಬಯಕೆಗಳು ಪೂರೈಸಲ್ಪಡುವುದು ನಿನಗೆ ಅಷ್ಟೊಂದು ಒಗ್ಗಿ ಹೋಗಿದೆಯಾ? ನೀನೊಬ್ಬ ಅನ್ವೇಷಕನಾಗಿ, ನಿಯಮಿತವಾಗಿ ನಿನ್ನ ಸಾಧನೆಯ (ಆಧ್ಯಾತ್ಮಿಕ ಅಭ್ಯಾಸಗಳು) ಕಡೆಗೆ ಗಮನ ಹರಿಸಿದಾಗ, ನಿನ್ನ ಬಯಕೆಗಳು ತನ್ನಿಂತಾನೇ ಪೂರೈಸಲ್ಪಡಲು ತೊಡಗುವುದನ್ನು ನೀನು ನೋಡುವೆ. ಆಗ ನೀನು, ಅದು ಯಾಕೆ ಪೂರೈಸಲ್ಪಡುವುದೆಂದು ಕೇಳಲೂಬಹುದು ಮತ್ತು ಅದು ಸ್ವಲ್ಪ ಅಸ್ವಾಭಾವಿಕವಾದುದೆಂದು ಯೋಚಿಸಲೂಬಹುದು. ನಾನು ಹೇಳುವುದಾದರೆ, ಅದು ಸಂಪೂರ್ಣವಾಗಿ ಸ್ವಾಭಾವಿಕವಾದುದು. ನಿನಗದು ಅಭ್ಯಾಸವಾಗಿಬಿಡುತ್ತದೆ.

ಪ್ರಶ್ನೆ: ಗುರುದೇವ, ತಮ್ಮ ಹೆಣ್ಣು ಮಗುವಿನ ಸೂಕ್ತ ಮತ್ತು ಸುರಕ್ಷಿತವಾದ ಜೀವನಕ್ಕೆ ವಿವಾಹವು ಆವಶ್ಯಕವೆಂದು ಹಲವು ಹೆತ್ತವರು ನಂಬುತ್ತಾರೆ. ನಿಮಗೇನನ್ನಿಸುತ್ತದೆ? ಆರಾಮದಾಯಕವಾದ ಹಾಗೂ ಸುರಕ್ಷಿತವಾದ ಜೀವನಕ್ಕೆ ವಿವಾಹವು ಎಷ್ಟರ ಮಟ್ಟಿಗೆ ಆವಶ್ಯಕವಾದುದು?

ಶ್ರೀ ಶ್ರೀ ರವಿ ಶಂಕರ್: ಇಲ್ಲ, ವಿವಾಹವು ಕೇವಲ ಒಬ್ಬಳು ಹುಡುಗಿಯ ಸುರಕ್ಷತೆಗಾಗಿ ಮಾತ್ರ ಇರುವುದಲ್ಲ. ಅದೊಂದು ವೈಯಕ್ತಿಕ ಆಯ್ಕೆ ಕೂಡಾ ಆಗಿದೆ. ಆದರೆ ನಾನು ನಿನಗೆ ಒಂದು ವಿಷಯವನ್ನು ಹೇಳುತ್ತೇನೆ. ವಿವಾಹವಾದ ನಂತರ ಕೂಡಾ, ಸಂತೋಷವಾಗಿರು. ವಿವಾಹವಾದ ಹೊರತಾಗಿಯೂ ಕೆಲವು ಜನರು ದುಃಖಿತರಾಗಿದ್ದಾರೆ ಮತ್ತು ಕೆಲವರು ಅವಿವಾಹಿತರಾಗಿದ್ದುಕೊಂಡು ಕೂಡಾ ದುಃಖಿತರಾಗಿದ್ದಾರೆ.

ಪ್ರಶ್ನೆ: ಗುರುದೇವ, ನಾನು ಮೊದಲ ಬಾರಿಗೆ ಮತದಾರನಾಗಿದ್ದೇನೆ. ನನ್ನ ಕ್ಷೇತ್ರದ ನಾಯಕನು, ಒಬ್ಬರು ಬಯಸಬಹುದಾದಷ್ಟು ಪ್ರಬಲ ಅಭ್ಯರ್ಥಿಯಲ್ಲ. ಆದರೂ ನಾನು, ಆ ಪಕ್ಷದ ನಾಯಕರು ಚುನಾವಣೆಯಲ್ಲಿ ಗೆಲ್ಲಬೇಕೆಂದು ಬಯಸುತ್ತೇನೆ. ಹಾಗಾದರೆ ನಾನೇನು ಮಾಡುವುದು?

ಶ್ರೀ ಶ್ರೀ ರವಿ ಶಂಕರ್: ರಾಷ್ಟ್ರೀಯ ಚುನಾವಣೆಯ ವಿಷಯದಲ್ಲಿ ಸ್ಥಳೀಯ ಅಭ್ಯರ್ಥಿಯನ್ನು ನೋಡಿ ಮತದಾನ ಮಾಡುವುದು ಬೇಡವೆಂದು ನಾನು ಸಲಹೆ ನೀಡುತ್ತೇನೆ. ದೇಶದ ಪ್ರಧಾನ ಮಂತ್ರಿಯನ್ನಾಗಿ ಯಾರನ್ನು ಮಾಡಬೇಕೆಂದು ನೀವು ಬುದ್ಧಿವಂತಿಕೆಯಿಂದ ಮೌಲ್ಯಮಾಪನ ಮಾಡಬೇಕು.

ಪುರಸಭೆಯ ಚುನಾವಣೆಯ ವಿಷಯ ಬಂದಾಗ, ನೀವು ಅಭ್ಯರ್ಥಿಯ ಬಗ್ಗೆ ಎಲ್ಲವನ್ನೂ ತಿಳಿದುಕೊಳ್ಳಬೇಕು.

ಆದರೆ ರಾಷ್ಟ್ರೀಯ ಮಟ್ಟದಲ್ಲಿ, ರಾಷ್ಟ್ರದ ಹಿತಾಸಕ್ತಿಗಳ ಕಡೆಗೆ ನೋಡಿ. ಯಾರು ಹೃದಯದಿಂದ ಮಾತನಾಡುವರೋ ಅವರಿಗೆ ಮತ ಹಾಕಿ. ಬೇರೆ ಯಾರಿಂದಲೋ ಸಿದ್ಧಪಡಿಸಲ್ಪಟ್ಟ ಒಂದು ಭಾಷಣವನ್ನೋದುವ ಒಬ್ಬ ಪ್ರಧಾನ ಮಂತ್ರಿಯು ನಮಗೆ ಬೇಕಾಗಿಲ್ಲ. ಒಬ್ಬ ಪ್ರಬಲನಾದ ನಾಯಕ ಮತ್ತು ತನ್ನ ಮನಸ್ಸು ಹಾಗೂ ಅಭಿಪ್ರಾಯಗಳನ್ನು ನಿರ್ಭಯವಾಗಿ ವ್ಯಕ್ತಪಡಿಸುವ ಒಬ್ಬರು ನಮಗೆ ಬೇಕು.

ನೋಡಿ, ಒಂದು ರಾಜಕೀಯ ಪಕ್ಷ ಅಥವಾ ಇನ್ನೊಂದರ ಕಡೆಗೆ ಒಲವು ತೋರುವ ಅಥವಾ ಬೆಂಬಲಿಸುವ ಅಧಿಕಾರ ಪ್ರತಿಯೊಬ್ಬರಿಗೂ ಇದೆ. ಅದು ಪರವಾಗಿಲ್ಲ. ಆದರೆ ರಾಷ್ಟ್ರ ಮತ್ತು ಅದರ ಹಿತಾಸಕ್ತಿಗಳ ವಿಷಯದಲ್ಲಿ, ನೀವು ನಿಮ್ಮೆಲ್ಲಾ ರಾಜಕೀಯ ಮತ್ತು ಪ್ರಾದೇಶಿಕ ಆದ್ಯತೆಗಳನ್ನು ಬದಿಗಿಟ್ಟು, ಮೊದಲು ದೇಶದ ಬಗ್ಗೆ ಏಕಮನಸ್ಕತೆಯಿಂದ ಯೋಚಿಸಬೇಕು.

ತಾನು ನೀಡಿದ ಭರವಸೆಗಳನ್ನು ಯಾರು ನಿಜಕ್ಕೂ ಪೂರೈಸಬಲ್ಲರೋ ಮತ್ತು ಒಳ್ಳೆಯ ಕೆಲಸವನ್ನು ಮಾಡಬಲ್ಲರೋ ಅಂತಹ ಒಬ್ಬ ಪ್ರಬಲ ಅಭ್ಯರ್ಥಿಗಾಗಿ ಹುಡುಕಿ ಮತ್ತು ನಂತರ ಅದರಂತೆ ಅವರಿಗೆ ಮತ ನೀಡಿ. ಇತರರಿಗೆ ಕೂಡಾ ಇದನ್ನು ಹೇಳಿ ಮತ್ತು ಅವರು ಅದನ್ನು ಅರ್ಥೈಸಿಕೊಳ್ಳುವಂತೆ ಮಾಡಿ. ನಾನಿದನ್ನು ಯಾಕೆ ಹೇಳುತ್ತಿರುವೆನೆಂದು ನಾನು ಹೇಳುತ್ತೇನೆ.

ಇವತ್ತು ಒಂದು ಡಾಲರ್ ೬೫ ರೂಪಾಯಿಗಳಿಗೆ ಸರಿಸಮಾನವಾಗಿದೆ. ಕೇಂದ್ರದಲ್ಲಿ ಒಬ್ಬ ಬಲಹೀನ ವ್ಯಕ್ತಿಯು ಅಧಿಕಾರಕ್ಕೆ ಬಂದರೆ, ಒಂದು ಡಾಲರ್ ಬೆಲೆ ಬಲವಾಗಿ, ೧೦೦ ರೂಪಾಯಿಗಳಿಗೆ ಸಮಾನವಾಗುತ್ತದೆ. ಹೀಗಾಗಬೇಕೆಂದು ಇತರ ರಾಷ್ಟ್ರಗಳು ಬಯಸುತ್ತವೆ ಯಾಕೆಂದರೆ, ಆಗ ಭಾರತದಿಂದ ವಸ್ತುಗಳನ್ನು ಖರೀದಿಸುವುದು ಅಗ್ಗವಾಗುತ್ತದೆ. ಆದರೆ ಇಲ್ಲಿ, ನಮಗೆ ಎಲ್ಲವೂ ಹೆಚ್ಚು ದುಬಾರಿಯಾಗುತ್ತವೆ. ದೈನಂದಿನ ಪದಾರ್ಥಗಳ ಬೆಲೆಗಳು ಗಗನಕ್ಕೇರುತ್ತವೆ. ಕೇಂದ್ರದಲ್ಲಿ ಒಬ್ಬ ಪ್ರಬಲನಾದ ವ್ಯಕ್ತಿಯು ಅಧಿಕಾರಕ್ಕೆ ಬಂದರೆ, ಆಗ ರೂಪಾಯಿಯು ಶಕ್ತಿ ಗಳಿಸಿಕೊಂಡು, ಡಾಲರ್‌ನ ಖರೀದಿಸುವ ಶಕ್ತಿಯು ೪೦ ರೂಪಾಯಿಗಳಿಗೆ ಇಳಿಯಬಹುದೆಂದು ಇತರ ರಾಷ್ಟ್ರಗಳು ಹೆದರುತ್ತಿವೆ.

ನಮ್ಮ ರಾಷ್ಟ್ರದ ಆರ್ಥಿಕ ಸ್ಥಿತಿಯು ಬಲವಾಗುವುದು ನಿರ್ದಿಷ್ಟವಾದ ವಿದೇಶಗಳಿಗೆ ಬೇಕಾಗಿಲ್ಲ.

ಕಳೆದ ಐದು ವರ್ಷಗಳಲ್ಲಿ ನಮ್ಮಲ್ಲಿ ಕೋಟಿಗಟ್ಟಲೆ ರೂಪಾಯಿಗಳಷ್ಟು ಮೌಲ್ಯದ ೩೦ ಹಗರಣಗಳಾಗಿವೆ. ೧.೪ ಟ್ರಿಲಿಯನ್ ಡಾಲರ್ ಮೌಲ್ಯದ ಭಾರತೀಯ ಹಣವು ಅಕ್ರಮವಾದ ಕಪ್ಪುಹಣದ ರೂಪದಲ್ಲಿ ರಹಸ್ಯವಾಗಿ ನಮ್ಮ ದೇಶದಿಂದ ಹೊರಕ್ಕೆ ಕಳ್ಳಸಾಗಾಣಿಕೆ ಮಾಡಲ್ಪಟ್ಟಿದೆ ಎಂದು ಹೇಳಲಾಗುತ್ತದೆ.

ಒಮ್ಮೆ ನಾನು ವಿದೇಶ ಪ್ರವಾಸಕ್ಕೆ ಹೋಗಿದ್ದಾಗ, ಆ ದೇಶದ ಒಬ್ಬ ಸಜ್ಜನನು ನನ್ನಲ್ಲಿ, ಎರಡು ಬಿಲಿಯನ್ ಡಾಲರ್ ಮೌಲ್ಯದ ಭಾರತೀಯ ಹಣವು ತನ್ನ ದೇಶದ ಬ್ಯಾಂಕ್‌ನಲ್ಲಿ ಒಬ್ಬ ಭಾರತೀಯ ರಾಜಕಾರಣಿಯಿಂದ ಇರಿಸಲ್ಪಟ್ಟದ್ದಾಗಿ ಹೇಳಿದನು.
ಅವನು ನನ್ನಲ್ಲಿ ಕುತೂಹಲದಿಂದ, "ನಿಮ್ಮ ದೇಶದಲ್ಲಿ ಅಷ್ಟೊಂದು ಭ್ರಷ್ಟಾಚಾರವಿರುವುದನ್ನು ನೀವು ಹೇಗೆ ಸಹಿಸುತ್ತಿರುವಿರಿ?" ಎಂದು ಕೇಳಿದನು.
ಈಗ ನಾನು ಅವನಿಗೆ ಏನೆಂದು ಹೇಳಲು ಸಾಧ್ಯ! ಜನರು ಈಗ ಈ ಎಲ್ಲಾ ಸಮಸ್ಯೆಗಳ ಬಗ್ಗೆ ಹೆಚ್ಚು ಹೆಚ್ಚು ಜಾಗೃತರಾಗುತ್ತಿದ್ದಾರೆ ಮತ್ತು ಅವರು ಅಂತಹ ಭ್ರಷ್ಟ ಜನರನ್ನು ಕಂಬಿ ಎಣಿಸುವಂತೆ ಮಾಡುತ್ತಾರೆ ಎಂದು ನಾನು ಅವನಿಗೆ ಹೇಳಿದೆ. ಬದಲಾವಣೆಯ ಸಮಯ ಬಂದಿದೆ. ನಾವೆಲ್ಲರೂ ಇದನ್ನು ಮಾಡಬೇಕು. ಆಹಾರ ಧಾನ್ಯಗಳ ಬೆಲೆಗಳು ಪ್ರಪಂಚದ ಬೇರೆ ಎಲ್ಲೆಡೆಗಳಲ್ಲೂ ನಿಜಕ್ಕೂ ಇಳಿಯುತ್ತಿರುವಾಗ, ಅದು ಭಾರತದಲ್ಲಿ ಮಾತ್ರ ಯಾಕೆ ಏರುತ್ತಿದೆಯೆಂದು ಯಾರಿಗೂ ಅರ್ಥವಾಗುತ್ತಿಲ್ಲ! ಯಾವುದೇ ಅರ್ಥಶಾಸ್ತ್ರಜ್ಞರಿಗೂ ಇದು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದೆಲ್ಲವೂ ಭ್ರಷ್ಟಾಚಾರದಿಂದಾಗಿ.

ನಾವೊಂದು ಬೃಹತ್ತಾದ ತೈಲ ನಿಕ್ಷೇಪಗಳ ಸಂಪತ್ತಿನ ಮೇಲೆ ಕುಳಿತಿದ್ದೇವೆ ಮತ್ತು ಆದರೂ ನಾವು ತೈಲವನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ. ನಮ್ಮಲ್ಲಿ ಬಹಳಷ್ಟು ಕಬ್ಬಿಣದ ಅದಿರಿದೆ, ಆದರೂ ನಾವು ಉಕ್ಕನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ ಮತ್ತು ಅದೇ ರೀತಿಯಲ್ಲಿ ಚಿನ್ನ ಕೂಡಾ.

ಇದು ಬಹಳ ವಿವಾದಾತ್ಮಕವಾದುದು. ಈ ದೇಶಕ್ಕೆ ಅತ್ಯಗತ್ಯವಾಗಿ ಬದಲಾವಣೆಯು ಬೇಕಾಗಿದೆ ಎಂದು ನಾನು ಹೇಳುವುದು ಇದಕ್ಕೇ.

ಪ್ರಶ್ನೆ: ಗುರುದೇವ, ದೇಶದ ಸಂಸದೀಯ ವ್ಯವಸ್ಥೆಯು ಕೆಟ್ಟದಾಗಿರುವುದರಿಂದ ನಾವು ಮತದಾನ ಮಾಡಬಾರದೆಂದು ಕೆಲವು ಜನರು ಹೇಳುತ್ತಾರೆ. ಇದರ ಬಗ್ಗೆ ನಾವೇನು ಮಾಡುವುದು? ನಾವು ಮತದಾನ ಮಾಡಬಾರದೇ?

ಶ್ರೀ ಶ್ರೀ ರವಿ ಶಂಕರ್: ಮತದಾನ ಮಾಡಬಾರದೆಂದೂ, ’ನೋಟಾ’ (’ಅನ್ವಯಿಸುವುದಿಲ್ಲ’ ಎಂಬುದನ್ನು ಸೂಚಿಸುವ, ಅಂದರೆ ಯಾರಿಗೂ ಮತವಿಲ್ಲ ಎಂದು ಅರ್ಥ) ಆಯ್ಕೆಯನ್ನು ಮಾಡಬೇಕೆಂದೂ ಮಾವೋವಾದಿಗಳು ಹೇಳುತ್ತಿದ್ದಾರೆಂದು ನಾನು ಕೇಳಿದೆ. ನಿಮ್ಮ ಮತವನ್ನು ವ್ಯರ್ಥ ಮಾಡಬೇಡಿರೆಂದು ನಾನು ನಿಮ್ಮಲ್ಲಿ ಕೇಳಿಕೊಳ್ಳುತ್ತೇನೆ. ನಿಮ್ಮ ಮತವು ಬಹಳ ಮುಖ್ಯ.

ಭ್ರಷ್ಟರನ್ನು ಎದುರಿಸಲು ನಿಮಗೆ ಶಕ್ತಿಯಿಲ್ಲದಿರುವಾಗ, ನೀವು ಕಡಿಮೆ ಭ್ರಷ್ಟರಾಗಿರುವ ಜನರನ್ನು ಬಳಸಿ ಹೆಚ್ಚು ಭ್ರಷ್ಟರಾಗಿರುವ ಜನರನ್ನು ತೆಗೆದುಹಾಕಬೇಕು.

ಪ್ರಶ್ನೆ: ಗುರುದೇವ, ಹೆಚ್ಚಿನ ಪಕ್ಷಗಳು ತಮ್ಮ ಚುನಾವಣಾ ಅಭ್ಯರ್ಥಿಗಳನ್ನು ಕೇವಲ ಒಂದು ವಾರ ಮೊದಲು ಘೋಷಿಸಿವೆ. ಇದು ಸರಿಯೇ?

ಶ್ರೀ ಶ್ರೀ ರವಿ ಶಂಕರ್: ಅಲ್ಲ, ಇದು ತಪ್ಪು. ಇಲ್ಲಿ ಚುನಾವಣಾ ಸುಧಾರಣೆಗಳನ್ನು ಜಾರಿಗೆ ತರಬೇಕು ಮತ್ತು ಜನರಿಗೆ ಅಭ್ಯರ್ಥಿಗಳೊಂದಿಗೆ ಸಂವಾದ ಮಾಡಲು ಸಾಧ್ಯವಾಗಲು ಹಾಗೂ ಮತ ಹಾಕಲು ನಿರ್ಧರಿಸುವ ಮೊದಲು ಅವರ ಕೆಲಸವನ್ನು ನೋಡಲು, ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಚುನಾವಣೆಯ ಆರು ತಿಂಗಳು ಮೊದಲು ಪ್ರಕಟಿಸಬೇಕು.

ಪ್ರಶ್ನೆ: ಗುರುದೇವ, ಭಾರತದಲ್ಲಿ ಈಗಾಗಲೇ ಹಲವಾರು ವಿಶ್ವವಿದ್ಯಾಲಯಗಳಿವೆ, ಹೀಗಿರುವಾಗ ಶ್ರೀ ಶ್ರೀ ವಿಶ್ವವಿದ್ಯಾಲಯ ಯಾಕೆ?

ಶ್ರೀ ಶ್ರೀ ರವಿ ಶಂಕರ್: ಹಲವು ವಿದ್ಯಾರ್ಥಿಗಳು ವಿದೇಶಕ್ಕೆ ಹೋಗಿ ಏಟು ತಿನ್ನುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಒಂದು ವರ್ಷದಲ್ಲಿ, ೨೨ಕ್ಕಿಂತಲೂ ಹೆಚ್ಚು ಸಾವುಗಳು ಸಂಭವಿಸಿವೆ.

ಪೂರ್ವ ಮತ್ತು ಪಶ್ಚಿಮಗಳಲ್ಲಿ ಅತ್ಯುತ್ತಮವಾದುದನ್ನು ಇಲ್ಲಿಯೇ ಪಡೆಯಲು ಸಾಧ್ಯವಿರುವಾಗ ನಮ್ಮ ಜನರು ಜನಾಂಗೀಯ ತಾರತಮ್ಯವನ್ನು ಯಾಕೆ ಎದುರಿಸಬೇಕು?

ಹೀಗಾಗಿ ನಾವು ಈ ವಿಶ್ವವಿದ್ಯಾಲಯವನ್ನು ಮತ್ತು ಇದರ ಪ್ರಕಾರವಾಗಿ ಕೋರ್ಸಿನ ಪಠ್ಯಕ್ರಮಗಳನ್ನು ಸಂಘಟಿಸಿದೆವು. ನಾವು ನಿಜಕ್ಕೂ ಮತ್ತೊಮ್ಮೆ ನಲಂದ ಮತ್ತು ತಕ್ಷಶಿಲೆಗಳಂತಹ ವಿಶ್ವವಿದ್ಯಾಲಯಗಳನ್ನು ಸೃಷ್ಟಿಸಬಲ್ಲೆವು. ಅಲ್ಲಿ ಪ್ರಪಂಚದೆಲ್ಲೆಡೆಯಿಂದ ಜನರು ಬಂದು ಶಿಕ್ಷಣವನ್ನು ಪಡೆಯಬಹುದು.

ಪ್ರಶ್ನೆ: ಗುರುದೇವ, ನಾನು ದೇವರನ್ನು ಭೇಟಿಯಾಗುವಂತೆ ನೀವು ಮಾಡಬಲ್ಲಿರಾ?

ಶ್ರೀ ಶ್ರೀ ರವಿ ಶಂಕರ್: ಖಂಡಿತಾ, ನಾನಿಲ್ಲಿರುವುದು ಸರಿಯಾಗಿ ಅದನ್ನೇ ಮಾಡಲು. ಮೊದಲು, ಒಳಗಿನಿಂದ ಸಂಪೂರ್ಣವಾಗಿ ತೃಪ್ತನಾಗು ಮತ್ತು ಸಂತೋಷದಿಂದಿರು. ನಂತರ ನಿನಗೆ ಬೇಕಾಗಿರುವುದೆಲ್ಲಾ ನಿನಗೆ ಸಿಗುವುದು.


ಈ ಬರಹದ ’ಸ್ಪೀಕಿಂಗ್ ಟ್ರೀ’ ಲಿಂಕ್:
http://www.speakingtree.in/public/spiritual-slideshow/seekers/self-improvement/ramayana-values-remembered-during-election-season

ಶನಿವಾರ, ಏಪ್ರಿಲ್ 5, 2014

ಸಮರ್ಪಣಾ ಭಾವ

೫ ಎಪ್ರಿಲ್ ೨೦೧೪
ಪುಣೆ, ಮಹಾರಾಷ್ಟ್ರ

(’ಸೇವಾ ತತ್ಪರತೆ’ ಲೇಖನದ ಮುಂದುವರಿದ ಭಾಗ)

ಮ್ಮ ಸಮಾಜದ ಸುಧಾರಣೆಗಾಗಿ ಕೆಲಸ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ’ನಾವು ತೋಟಗಾರನನ್ನು (ದೇವರು) ಪ್ರೀತಿಸುತ್ತೇವೆ, ಆದರೆ ನಾವು ಅವನ ತೋಟವನ್ನು (ಸಮಾಜ) ಇಷ್ಟಪಡುವುದಿಲ್ಲ’ ಎಂದು ನಾವು ಹೇಳಲು ಸಾಧ್ಯವಿಲ್ಲ. ಯಾರಿಗೂ ಇದನ್ನು ಹೇಳಲು ಸಾಧ್ಯವಿಲ್ಲ. ಅದಕ್ಕಾಗಿಯೇ, ಜನಸೇವೆಯೇ ಜನಾರ್ಧನ ಸೇವೆ. ಹೀಗಾಗಿ ನಾವು ಸೇವೆಯಲ್ಲಿ ನಿರತರಾಗಿರಬೇಕು. ಯಾರಿಗೆಲ್ಲಾ ಒಂದು ಸ್ಥಾನವನ್ನು ನೀಡಲಾಗಿದೆಯೋ ಅವರು, ಕುರ್ಚಿಯಿರುವುದು ಜನರ ಸೇವೆ ಮಾಡುವುದಕ್ಕಾಗಿ ಮತ್ತು ಸ್ವಾರ್ಥಪರವಾದ ವೈಯಕ್ತಿಕ ಲಾಭಗಳಿಗಾಗಿಯಲ್ಲ ಎಂಬುದನ್ನು ನೆನಪಿನಲ್ಲಿಡಬೇಕು. ದೇಶದ ನಾಯಕರು ನಮ್ರತೆಯೊಂದಿಗೆ ಜೀವಿಸಬೇಕು ಮತ್ತು ಒಬ್ಬ ಸೇವಕನು ಮಾಡುವಂತೆಯೇ ಸಮರ್ಪಣಾ ಭಾವದೊಂದಿಗೆ ಸೇವೆ ಮಾಡಬೇಕು.

ದೇವರನ್ನು ’ದಾಸಾನುದಾಸ’ ಎಂದು ಹೇಳಲಾಗುತ್ತದೆ, ಅಂದರೆ ದಾಸರ ದಾಸ ಎಂದು. ಭಗವಾನ್ ಹರಿಯು ದಾಸರ ದಾಸ ಎಂದು ಕರೆಯಲ್ಪಡುತ್ತಾನೆ. ದೇವರು ತನ್ನ ಭಕ್ತರಿಗೆ  ಅತ್ಯಂತ ನಮ್ರತೆ ಮತ್ತು ಪ್ರೇಮದಿಂದ ಸೇವೆ ಮಾಡುತ್ತಾನೆ. ಹೀಗಾಗಿ ನಾವು ಕೂಡಾ ಒಬ್ಬ ದಾಸನಂತಿರಬೇಕು (ಯಾವತ್ತೂ ಸೇವೆ ಮಾಡಲು ಸಿದ್ಧರಾಗಿ); ದೇವರಂತೆ, ಆದರೆ ನಾವು ಉದಾಸರಾಗಿರಬಾರದು.

ಕೆಲವು ಜನರು ಎಲ್ಲರೂ ಭ್ರಷ್ಟರೆಂದು ಭಾವಿಸುತ್ತಾರೆ. ಇದು ಸರಿಯಲ್ಲ. ಇವತ್ತು ಕೂಡಾ ಎಲ್ಲೆಡೆಯೂ ಹಲವಾರು ಒಳ್ಳೆಯ ಜನರಿದ್ದಾರೆ.

ದ್ವಾಪರ ಯುಗದಲ್ಲಿ ಐದು ಪಾಂಡವರು ಮತ್ತು ನೂರು ಕೌರವರಿದ್ದರು. ನಿಮಗೆ ಗೊತ್ತಾ, ಕಲಿಯುಗದಲ್ಲಿ ನೂರು ಪಾಂಡವರು (ಇಲ್ಲಿ ಒಳ್ಳೆಯ ಜನರು ಎಂದು ಅರ್ಥ) ಮತ್ತು ಕೇವಲ ಐದು ಕೌರವರಿರುವರು (ಇಲ್ಲಿ ದುಷ್ಟರ ಬಗ್ಗೆ ಉಲ್ಲೇಖಿಸುತ್ತಾ).
ತೊಂದರೆಗಳನ್ನುಂಟುಮಾಡುವ ಜನರು ಇರುವುದು ಕೇವಲ ಒಂದು ಹಿಡಿಯಷ್ಟು ಮಾತ್ರ. ಆದರೆ ಒಳ್ಳೆಯ ಜನರ ಮೌನವು, ಅವರ ಪೀಡೆಯು ಮುಂದುವರಿಯುವುದಕ್ಕೆ ಅನುಮತಿಸಿದೆ.

ಸಮಾಜದ ಎಲ್ಲಾ ಒಳ್ಳೆಯ ಜನರು ಮೌನವಾಗಿರುತ್ತಾರೆ. ಹಲವು ಜನರು ಮತದಾನದ ಹಕ್ಕು ಚಲಾಯಿಸಲು ಕೂಡಾ ಹೋಗುವುದಿಲ್ಲ. "ಓ, ಬಹಳ ಸೆಖೆ" ಅಥವಾ "ಮಳೆ ಬರುತ್ತಿದೆ, ಹೋಗಿ ಮತದಾನ ಮಾಡುವ ತೊಂದರೆ ಯಾಕೆ? ಮನೆಯಲ್ಲಿದ್ದು ಹಾಯಾಗಿರೋಣ" ಎಂದು ಅವರು ಯೋಚಿಸುತ್ತಾರೆ.

ಈ ಮನೋಭಾವದೊಂದಿಗೆ ಅವರು ಮತ ಹಾಕಲು ಹೋಗುವುದಿಲ್ಲ. ಈ ರೀತಿ ಯೋಚಿಸಬಾರದೆಂದು ನಾನು ನಿಮ್ಮಲ್ಲಿ ಕೇಳಿಕೊಳ್ಳುತ್ತೇನೆ. ನೀವು ಖಂಡಿತವಾಗಿಯೂ ಹೋಗಿ ಮತ ಹಾಕಬೇಕು.

ಈ ಪ್ರದೇಶದ ಮತದಾನದ ಶೇಕಡಾವಾರನ್ನು ನಾನು ವೈಯಕ್ತಿಕವಾಗಿ ಪರಿಶೀಲಿಸುವೆನು. ನಮ್ಮಲ್ಲಿ ಶೇ. ೧೦೦ರಷ್ಟು  ಮತದಾನವಾಗಬೇಕು ಮತ್ತು ನೀವೆಲ್ಲರೂ ಇದು ಸಾಧ್ಯವಾಗುವಂತೆ ಮಾಡಬೇಕು.

ಇವತ್ತು ಮಹಾರಾಷ್ಟ್ರದಲ್ಲಿ ಹಲವಾರು ರೈತರು ಆತ್ಮಹತ್ಯೆ ಮಾಡುತ್ತಿದ್ದಾರೆ. ಮೊದಲು ಅವರು ಯಾವತ್ತೂ ಹಾಗೆ ಮಾಡುತ್ತಿರಲಿಲ್ಲ.

ದ್ವಿತೀಯ ಮಹಾಯುದ್ಧದಲ್ಲಿ, ಒಂದು ಲಕ್ಷ ಭಾರತೀಯ ಸೈನಿಕರು ತಮ್ಮ ಜೀವವನ್ನು ಕಳಕೊಂಡರು. ಅವರಲ್ಲಿ ಹಲವರು ಮಹಾರಾಷ್ಟ್ರದವರಾಗಿದ್ದರು. ಅದೇ ಸಮಯದಲ್ಲಿ, ಇಡೀ ದೇಶವು ಪ್ಲೇಗಿನ ಹಿಡಿತದಲ್ಲಿತ್ತು. ಆಗ ಕೂಡಾ ಯಾರೂ ಆತ್ಮಹತ್ಯೆ ಮಾಡಲಿಲ್ಲ. ಈಗ ಜನರು, ಕೇವಲ ಒಂದು ಬೆಳೆಯ ಕಟಾವಿನ ನಷ್ಟದಿಂದಾಗಿ ಹೀಗೆ ಮಾಡಲು ತೊಡಗಿದ್ದಾರೆ. ಕಳೆದ ವಾರ ಐದು ಜನರು ಆತ್ಮಹತ್ಯೆ ಮಾಡಿಕೊಂಡರು ಎಂದು ನನಗೆ ತಿಳಿದುಬಂತು. ದೇಶದ ಸುತ್ತಲೂ ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ನಾನು ಹೋಗುತ್ತಾ ಇರುವ ಕಾರಣಗಳಲ್ಲಿ ಒಂದು ಇದು, ಚಿಂತಿಸಬೇಡಿರೆಂದು ರೈತರಲ್ಲಿ ಹೇಳಲು. ಈಗಲೂ ಕೂಡಾ ಈ ಜಗತ್ತಿನಲ್ಲಿ ಮಾನವೀಯತೆಯಿದೆ. ನಾನು ನಿಮ್ಮೊಂದಿಗಿದ್ದೇನೆ. ಎಲ್ಲಾ ಆರ್ಟ್ ಆಫ್ ಲಿವಿಂಗ್ ಶಿಕ್ಷಕರು ಮತ್ತು ಸ್ವಯಂಸೇವಕರು ನಿಮ್ಮೊಂದಿಗಿದ್ದಾರೆ. ನೀವು ಆತ್ಮಹತ್ಯೆ ಮಾಡಲು ನಾವು ಬಿಡೆವು. ನೀವು ಹಾಗೆ ಮಾಡಬೇಕಾಗಿಲ್ಲ. ನಾವು ನಿಮ್ಮೊಂದಿಗೆ ಜೊತೆಯಲ್ಲಿ ನಿಲ್ಲುತ್ತೇವೆ ಮತ್ತು ನಾವು ನಿಮಗೆ ಎಲ್ಲಾ ರೀತಿಯಲ್ಲೂ ಬೆಂಬಲ ನೀಡುವೆವು.

ನಾವೆಲ್ಲರೂ ನಮ್ಮಲ್ಲಿ ಬಾಂಧವ್ಯ, ಮಾನವೀಯತೆ ಮತ್ತು ಪ್ರೇಮವನ್ನು ಹೊಂದಿದ್ದೇವೆ. ಇದನ್ನು ಬಲವಾಗಿ ಹೊರತರುವ ಸಮಯವು ಇದಾಗಿದೆ. ನಾವು ಜನರನ್ನು ಭೇಟಿಯಾಗಿ ಅವರೊಂದಿಗೆ ಮಾತನಾಡಬೇಕಾಗಿದೆ. ನಾವು ನಮ್ಮ ಸಮಾಜದಲ್ಲಿ ಆನಂದದ ಒಂದು ಅಲೆಯನ್ನು ತರಬೇಕಾಗಿದೆ. ಇವತ್ತು, ಹೆಚ್ಚು ಮುಖ್ಯವಾಗಿರುವುದು ಜಿ.ಡಿ.ಪಿ. (ಗ್ರಾಸ್ ಡೊಮೆಸ್ಟಿಕ್ ಪ್ರೊಡಕ್ಟ್; ಅಂದರೆ ಒಟ್ಟು ದೇಶೀಯ ಉತ್ಪನ್ನ) ಅಲ್ಲ, ಆದರೆ ಜಿ.ಡಿ.ಹೆಚ್. (ಗ್ರಾಸ್ ಡೊಮೆಸ್ಟಿಕ್ ಹ್ಯಾಪ್ಪಿನೆಸ್; ಅಂದರೆ ಒಟ್ಟು ದೇಶೀಯ ಸಂತೋಷ) ಎಂಬುದನ್ನು ವಿಶ್ವಸಂಸ್ಥೆ ಕೂಡಾ ಅನುಮೋದಿಸಿದೆ. ನಾವಿದನ್ನು ಕಡೆಗಣಿಸಲು ಸಾಧ್ಯವಿಲ್ಲ; ಸಂತೋಷವು ಒಂದು ಪ್ರಮುಖವಾದ ಅಂಶವಾಗಿದೆ. ಜನರು ಸಂತೋಷವಾಗಿದ್ದಾರಾ? ಅವರು ತೃಪ್ತರಾಗಿದ್ದಾರಾ? ಈಗ ಈ ಅಂಶಗಳು ಕೂಡಾ ಅಳೆಯಲ್ಪಡುತ್ತವೆ.

ಕಳೆದ ತಿಂಗಳು ನಾನು ವಿಯೆನ್ನಾದಲ್ಲಿದ್ದೆ. ಅಲ್ಲಿ ಇಂಟರೇಕ್ಷನ್ ಕೌನ್ಸಿಲ್ (ಐ.ಎ.ಸಿ.) ಎಂಬ ಒಂದು ಸಮ್ಮೇಳನವಿತ್ತು. ೫೦ ದೇಶಗಳ ಮಾಜಿ ಪ್ರಧಾನ ಮಂತ್ರಿಗಳು ಅದರಲ್ಲಿ ಹಾಜರಿದ್ದರು. ಅವರೆಲ್ಲರೂ ಜಗತ್ತಿನಲ್ಲಿನ ಭ್ರಷ್ಟಾಚಾರದ ಬಗ್ಗೆ ಚಿಂತಿತರಾಗಿದ್ದರು. ಭ್ರಷ್ಟಾಚಾರ, ಭಯೋತ್ಪಾದನೆ, ಹಿಂಸಾಚಾರ, ಈ ಎಲ್ಲಾ ಸಮಸ್ಯೆಗಳನ್ನು ಅಲ್ಲಿ ವಿವರವಾಗಿ ಚರ್ಚಿಸಲಾಯಿತು.

ಜಪಾನ್ ಮತ್ತು ಕೆನಡಾಗಳ ಪೂರ್ವ ಪ್ರಧಾನಮಂತ್ರಿಗಳು ಕೂಡಾ ಅಲ್ಲಿದ್ದರು. ಕಳೆದ ೨೦ ವರ್ಷಗಳಲ್ಲಿ, ನಮ್ಮ ಭಾರತೀಯ ಪ್ರಧಾನ ಮಂತ್ರಿಗಳಲ್ಲಿ ಯಾರೂ ಈ ಸಮ್ಮೇಳನಕ್ಕೆ ಹಾಜರಾಗಿಲ್ಲ. ಇದಕ್ಕೆ ಹಾಜರಾಗಬಹುದಿದ್ದ ಕೆಲವರು ಹಿಂದೆ ಅಸ್ವಸ್ಥರಾಗಿದ್ದರು, ಹೀಗಾಗಿ ಅವರಿಗೆ ಹಾಜರಾಗಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಭಾರತವು ಯಾವುದೇ ಪ್ರಾತಿನಿಧ್ಯವನ್ನು ಹೊಂದಿರಲಿಲ್ಲ.

ಪರಿಷತ್ತು ನನ್ನನ್ನು ಯಾಕೆ ಆಮಂತ್ರಿಸಿತೆಂದು ನನಗೆ ತಿಳಿಯದು. ಸಮಾಜವು ಇವತ್ತು ಎಲ್ಲೆಡೆಯೂ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಅಲ್ಲಿ ನಾವು ಹಲವಾರು ಚರ್ಚೆಗಳನ್ನು ಮಾಡಿದೆವು. ನಾನು ಕೂಡಾ ನನ್ನ ಅಂಶಗಳನ್ನು ಮುಂದಿಟ್ಟೆ.

ಅಲ್ಲಿ ಜನರು ನನ್ನಲ್ಲಿ, "ಗುರುದೇವ, ನಮ್ಮ ದೇಶದಲ್ಲಿ ಕೂಡಾ ಬಹಳಷ್ಟು ಭ್ರಷ್ಟಾಚಾರವಿದೆ. ಐದಾರು ವರ್ಷಗಳಲ್ಲಿ ಒಂದು ಅಥವಾ ಎರಡು ಹಗರಣಗಳಾಗುತ್ತವೆ. ಆದರೆ ನಿಮ್ಮಲ್ಲಿ ಪ್ರತಿ ತಿಂಗಳೂ ಐದರಿಂದ ಆರು ಹಗರಣಗಳಾಗುವುದು ಹೇಗೆ?" ಎಂದು ಕೇಳಿದರು.

ನಾನಂದೆ, "ನೋಡಿ, ಭಾರತವು ಬೃಹತ್ ಜನಸಂಖ್ಯೆಯನ್ನು ಹೊಂದಿದೆ. ಜನರು ಈಗ ಬಹಳ ಜಾಗೃತರಾಗಿದ್ದಾರೆ ಮತ್ತು ದೇಶದ ಪ್ರತಿಯೊಬ್ಬರೂ ತಮ್ಮ ಕರ್ತವ್ಯವನ್ನು ಅರಿತಿದ್ದಾರೆ."

ಮುಂಬರುವ ವರ್ಷಗಳಲ್ಲಿ, ಭಾರತವು ಮತ್ತೊಮ್ಮೆ ಪ್ರಗತಿಯ ಎಷ್ಟೊಂದು ಎತ್ತರಕ್ಕೆ ಏರುವುದೆಂದರೆ ಅದು ಇಡೀ ಜಗತ್ತನ್ನು ನಿಬ್ಬೆರಗುಗೊಳಿಸುವುದು.

ಭಾರತವು ಯಾವತ್ತೂ ಅಧಿಕಾರವನ್ನು ಹೊಂದಿತ್ತು, ಮತ್ತು ಅದು ಭಾರತದ ಆಧ್ಯಾತ್ಮದ ಕಾರಣದಿಂದ. ಒಂದು ಸುರಕ್ಷಿತ ಮತ್ತು ಬಲವಾದ ದೇಶವಾಗಿ ನಾವು ನಮ್ಮ ದೇಶದ ಚಿತ್ರಣವನ್ನು ಮುಂದಕ್ಕೆ ತರಬೇಕಾಗಿದೆ.

ಭಾರತದಲ್ಲಿ ಬಹಳಷ್ಟು ಬಲಾತ್ಕಾರಗಳಾಗುತ್ತಿವೆ ಮತ್ತು ಸ್ತ್ರೀಯರು ಸುರಕ್ಷಿತರಾಗಿಲ್ಲ ಎಂದು ಜನರು ಇವತ್ತು ಹೇಳುತ್ತಾರೆ. ನಮ್ಮ ದೇಶದಲ್ಲಿ ಸ್ತ್ರೀಯರ ಈ ಅಸುರಕ್ಷತೆಯ ಪ್ರಧಾನ ಕಾರಣವೆಂದರೆ ಕುಡಿತ. ಸ್ತ್ರೀಯರ ವಿರುದ್ಧ ಅಪರಾಧಗಳನ್ನು ನಡೆಸಿದ ಜನರಲ್ಲಿ ಹೆಚ್ಚಿನವರು ಮಾದಕದ್ರವ್ಯದ ಪ್ರಭಾವಕ್ಕೊಳಗಾಗಿದ್ದರು. ನಾವು ನಮ್ಮ ಸಮಾಜವನ್ನು ಈ ಮಾದಕದ್ರವ್ಯಗಳಿಂದ ಮುಕ್ತಗೊಳಿಸುವಲ್ಲಿಯವರೆಗೆ, ಸ್ತ್ರೀಯರ ವಿರುದ್ಧ ಹಿಂಸಾಚಾರಗಳು ಮುಂದುವರಿಯುವುವು. ಈ ಘಟನೆಗಳಲ್ಲಿ ಕೆಲವು ವಾರ್ತಾಪತ್ರಿಕೆಗಳಲ್ಲಿ ವರದಿಯಾಗುತ್ತವೆ. ಆದರೆ ಗ್ರಾಮಗಳಲ್ಲಿ ಹಲವಾರು ನಡೆಯುತ್ತವೆ ಮತ್ತು ಅವುಗಳು ವರದಿಯಾಗುವುದಿಲ್ಲ.

ಒಬ್ಬ ಪತಿಯು ಕುಡಿದು ಮನೆಗೆ ಬರುತ್ತಾನೆ ಮತ್ತು ತನ್ನ ಪತ್ನಿಯನ್ನು ಹೊಡೆಯುತ್ತಾನೆ. ಬೆಳಗ್ಗೆ ಮದ್ಯದ ಪ್ರಭಾವವು ಕಡಿಮೆಯಾದಾಗ, ಅದೇ ಪತಿಯು ಅವಳ ಕಾಲುಗಳಿಗೆ ಬಿದ್ದು ಕ್ಷಮೆ ಕೇಳುತ್ತಾನೆ. ಮತ್ತು ಆ ಸ್ತ್ರೀಯು ಅವನನ್ನು ಕ್ಷಮಿಸುತ್ತಾಳೆ ಕೂಡಾ, ಯಾಕೆಂದರೆ ಅವಳು ಕರುಣೆಯಿಂದ ತುಂಬಿದ ಹೃದಯವುಳ್ಳವಳು. ಇವತ್ತು ಈ ಪರಿಸ್ಥಿತಿಯನ್ನು ಬದಲಾಯಿಸಲು ನಾವು ಆಧ್ಯಾತ್ಮದ ಒಂದು ದೊಡ್ಡ ಅಲೆಯನ್ನು ತರಬೇಕಾಗಿದೆ.

ವಾಲ್ಯುಂಟಿಯರ್ ಫಾರ್ ಎ ಬೆಟರ್ ಇಂಡಿಯಾದ (ಉತ್ತಮ ಭಾರತಕ್ಕಾಗಿ ಸ್ವಯಂಸೇವಕರಾಗಿ)  ಸ್ವಯಂಸೇವಕರು ಹಳ್ಳಿಯಿಂದ ಹಳ್ಳಿಗೆ ಹೋಗಿ ಜನರೊಂದಿಗೆ ಕುಳಿತುಕೊಳ್ಳಬೇಕು, ಅವರಿಗೆ ಸ್ಫೂರ್ತಿ ನೀಡಬೇಕು ಮತ್ತು ಅವರಲ್ಲಿ ಉತ್ಸಾಹವನ್ನು ತುಂಬಬೇಕು. ಎಲ್ಲೆಲ್ಲಾ ಸಾಧ್ಯವೋ ಅಲ್ಲೆಲ್ಲಾ ಸತ್ಸಂಗಗಳನ್ನು ಮಾಡಬೇಕು.

ಆಧ್ಯಾತ್ಮದ ಒಂದು ಅಲೆಯನ್ನು ತರುವುದರಿಂದ ಮಾತ್ರ ಈ ಬದಲಾವಣೆಯನ್ನು ಮಾಡಲು ಸಾಧ್ಯ.
ಪರಿವರ್ತನೆಯು ಈಗಾಗಲೇ ಆರಂಭವಾಗಿದೆ ಮತ್ತು ಅತ್ಯಾವಶ್ಯಕವಾಗಿರುವ ಬದಲಾವಣೆ ಕೂಡಾ ಎಲ್ಲೆಡೆಯೂ ಆಗತೊಡಗಿದೆ.

ನಾನು ನಮ್ಮ ಎಲ್ಲಾ ಯುವಾಚಾರ್ಯರನ್ನು ಮತ್ತು ಆರ್ಟ್ ಆಫ್ ಲಿವಿಂಗ್ ಶಿಕ್ಷಕರನ್ನು ಅಭಿನಂದಿಸುತ್ತೇನೆ. ಅವರು ಸಾಯುತ್ತಿದ್ದ ಐದು ನದಿಗಳಿಗೆ ಜೀವ ನೀಡಿದ್ದಾರೆ. ಈ ನದಿಗಳು ಹರಿಯುವುದನ್ನು ನಿಲ್ಲಿಸಿದ್ದವು. ನಿಮ್ಮೆಲ್ಲರೊಂದಿಗೆ ನಾನು ಅತೀ ಹೆಮ್ಮೆಯಿಂದ ಹಂಚಿಕೊಳ್ಳುವ ಸಾಧನೆಗಳಾಗಿವೆ ಇವು. ಕರ್ನಾಟಕದಲ್ಲಿನ ಕುಮುದ್ವತಿ ನದಿ, ಮಹಾರಾಷ್ಟ್ರದಲ್ಲಿನ ಧರಣಿ ನದಿ, ಇವುಗಳು ಕೆಲವು ಉತ್ತಮ ಉದಾಹರಣೆಗಳಾಗಿವೆ.

ಶೋಲಾಪುರದ ಕೆರೆಯಲ್ಲಿ ಬಹಳಷ್ಟು ಪಾಚಿ ಬೆಳೆದಿತ್ತು. ವಿ.ಬಿ.ಐ.ಯ ಎಲ್ಲಾ ಯುವಜನರು ಅಲ್ಲಿಗೆ ಹೋಗಿ, ಒಟ್ಟು ಸೇರಿ ಅದನ್ನು ಸ್ವಚ್ಛಗೊಳಿಸಿದರು. ಈಗ ನೀರು ಮತ್ತೊಮ್ಮೆ ಶುದ್ಧವಾಗಿದೆ. ಇದು, ಒಳ್ಳೆಯ ಕೆಲಸವನ್ನು ಮುಂದುವರಿಸಲು ನಮಗೆ ಮತ್ತೂ ಸ್ಫೂರ್ತಿ ನೀಡಿದೆಯಷ್ಟೆ. ಮಹಾರಾಷ್ಟ್ರದಿಂದ ಸ್ಫೂರ್ತಿಯನ್ನು ಪಡೆದು, ವಿ.ಬಿ.ಐ.ಯು ಕರ್ನಾಟಕದಲ್ಲಿ ಕೂಡಾ ಮೂರು ನದಿಗಳಿಗೆ ಜೀವ ನೀಡುವ ಕಾರ್ಯವನ್ನು ಕೈಗೆತ್ತಿಕೊಂಡಿದೆ. ಅವರು ದಿಲ್ಲಿಯೊಂದರಲ್ಲೇ ಒಂದು ಸಾವಿರಗಳಷ್ಟು ಯೋಜನೆಗಳನ್ನು ಪೂರ್ತಿಗೊಳಿಸಿದ್ದಾರೆ. ಬದಲಾವಣೆಯನ್ನು ತರುವ ಈ ಶಕ್ತಿ ನಮ್ಮಲ್ಲಿದೆ, ಹೀಗಾಗಿ ನಾವು ಬದಲಾವಣೆಯನ್ನು ತರಬೇಕು.

ಇವತ್ತು ಕೂಡಾ ಸಮಾಜದಲ್ಲಿ ಒಳ್ಳೆಯ ಜನರಿದ್ದಾರೆ ಎಂಬ ಈ ವಿಶ್ವಾಸ ನಮ್ಮಲ್ಲಿರಬೇಕು. ನಮ್ಮ ಸಮಾಜವು ಎತ್ತಿಹಿಡಿಯಲ್ಪಟ್ಟಿರುವುದು ಒಳ್ಳೆಯ ಜನರಿಂದಾಗಿಯೇ. ಎಲ್ಲರೂ ಕೆಟ್ಟವರು ಅಥವಾ ಎಲ್ಲರೂ ಅಪ್ರಾಮಾಣಿಕರು ಎಂದು ಯೋಚಿಸಬೇಡಿ. ಇವತ್ತು ಕೂಡಾ ಹಲವಾರು ಒಳ್ಳೆಯ ಜನರಿದ್ದಾರೆ. ಎಲ್ಲಾ ಜನರು ವಂಚಕರೆಂದು ನಾವು ಯೋಚಿಸುವಾಗ, ನಾವು ನಮಗೇ ಆ ರೀತಿಯಾಗಿರಲು ಒಂದು ಪರವಾನಗಿಯನ್ನು ಕೊಡುತ್ತೇವೆ. ಇದು ಯಾಕೆಂದರೆ, ನಾವು, "ಓ, ಎಲ್ಲರೂ ಹೀಗಿದ್ದಾರೆ, ಹೀಗಾಗಿ ನಾನು ಕೂಡಾ ಒಬ್ಬ ವಂಚಕನಂತೆ ವರ್ತಿಸುವೆ. ನಾನು ಯಾಕೆ ಬೇರೆಯವರಿಗಿಂತ ವಿಭಿನ್ನವಾಗಿ ವರ್ತಿಸಬೇಕು?" ಎಂದು ಭಾವಿಸುತ್ತೇವೆ.

ಎಲ್ಲರೂ ತಪ್ಪು ಎಂದು ಹೇಳುವುದೇ ತಪ್ಪು. ಎಲ್ಲರೂ ಕೆಟ್ಟವರಾಗಿರಲು ಸಾಧ್ಯವಿಲ್ಲ.

ನಮ್ಮಲ್ಲಿರಬೇಕಾದ ಇನ್ನೊಂದು ರೀತಿಯ ವಿಶ್ವಾಸವೆಂದರೆ, ದೇವರಲ್ಲಿ; ಜಗತ್ತಿನಲ್ಲಿ ಎಲ್ಲವನ್ನೂ ನಿಯಂತ್ರಿಸುತ್ತಿರುವ ಒಂದು ಸರ್ವೋಚ್ಛ ಶಕ್ತಿಯಲ್ಲಿ ವಿಶ್ವಾಸ. ದೇವರು ನಿಮಗೆ ಸೇರಿದವರು ಮತ್ತು ನಿಮ್ಮನ್ನು ಬಹಳಷ್ಟು ಪ್ರೀತಿಸುತ್ತಾರೆಂಬ ಈ ವಿಶ್ವಾಸವನ್ನು ಹೊಂದಿ. ಆಗ ನಿಮ್ಮ ಜೀವನವು ಅರಳುವುದನ್ನು ನೀವು ನೋಡುವಿರಿ ಮತ್ತು ಹೋದಲ್ಲೆಲ್ಲಾ ನೀವು ಸುವಾಸನೆಯನ್ನು ಹರಡುವಿರಿ. ನಿಮ್ಮಲ್ಲಿ ಈ ವಿಶ್ವಾಸವಿರುವಾಗ, ನೀವು ಏನನ್ನೆಲ್ಲಾ ಬಯಸುವಿರೋ ಅದಾಗಲು ತೊಡಗುವುದು.

ಇಲ್ಲಿರುವ ಭಕ್ತರಲ್ಲಿ ನಾನು ಕೇಳಲು ಬಯಸುತ್ತೇನೆ. ಪಥಕ್ಕೆ ಬಂದ ಬಳಿಕ, ನೀವು ಏನನ್ನೆಲ್ಲಾ ಬಯಸಿರುವಿರೋ ಅದಾಗಲು ತೊಡಗುವುದೆಂದು ನಿಮ್ಮಲ್ಲಿ ಎಷ್ಟು ಮಂದಿಗೆ ಅನ್ನಿಸುತ್ತದೆ? ನಿಮ್ಮ ಕೈಗಳನ್ನೆತ್ತಿ.

(ಸಭಿಕರಲ್ಲಿ ಹಲವರು ಕೈಗಳನ್ನೆತ್ತುತ್ತಾರೆ)

ನಾನು ನಿಮ್ಮಲ್ಲಿ, "ನನಗೆ ಬೇಕಾದುದೆಲ್ಲವೂ ಆಗುತ್ತದೆ" ಎಂದು ಹೇಳಿದರೆ ನೀವು, "ಓ ಗುರುದೇವ, ಆದರೆ ನೀವು ಬೇರೆ" ಎಂದು ಹೇಳುವಿರಿ. ನೋಡಿ, ದೈವಿಕತೆಯು ಎಲ್ಲರಿಗೂ ಒಂದೇ. ದೇವರು ಎಲ್ಲೆಡೆಯೂ ಇರುವನೆಂದು ನಾವು ಹೇಳುವಾಗ, ಅವನು ನಿಮ್ಮಲ್ಲಿಯೂ ಇರುವನು, ಅಲ್ಲವೇ? ಮತ್ತು ದೇವರು ಎಲ್ಲರಿಗೂ ಸೇರಿರುವಾಗ, ಅವನು ಖಂಡಿತವಾಗಿಯೂ ನಿಮಗೂ ಸೇರಿದವನು. ದೇವರು ಯಾವತ್ತೂ ಇದ್ದನು ಮತ್ತು ಇರುವುದನ್ನು ಮುಂದುವರಿಸುವನು, ಸದಾ ಕಾಲವೂ. ದೇವರು ಸರ್ವಶಕ್ತನು ಮತ್ತು ನನ್ನ ಜೀವನದಲ್ಲಿನ ಎಲ್ಲಾ ಯಾತನೆಗಳನ್ನು ಹಾಗೂ ಯಾವುದೇ ಕೊರತೆಯನ್ನು ತೆಗೆದುಹಾಕಲು ಅವನು ಸಮರ್ಥನು ಎಂಬ ಈ ದೃಢ ವಿಶ್ವಾಸವನ್ನು ಯಾವತ್ತೂ ಹೊಂದಿರಿ.

ಹೀಗೆ, ದೈವತ್ವವು ನನಗೆ ಸೇರಿದುದು ಮತ್ತು ಅದು ಯಾವತ್ತೂ ನನ್ನಲ್ಲಿ ವಾಸಿಸುತ್ತಿದೆ ಎಂದು ಭಾವಿಸಿ. ಇದನ್ನು ತಿಳಿಯುವುದು ಮತ್ತು ಈ ವಿಶ್ವಾಸದಲ್ಲಿ ಆಳವಾದ ವಿಶ್ರಾಂತಿಯನ್ನು ತೆಗೆದುಕೊಳ್ಳುವುದು ಧ್ಯಾನವಾಗಿದೆ.

ಪ್ರತಿದಿನವೂ ಈ ದೃಢವಿಶ್ವಾಸದೊಂದಿಗೆ ನೀವು ಧ್ಯಾನ ಮಾಡಿದರೆ ನಿಮಗೆ ಯಾವ ಲಾಭಗಳು ಸಿಗುವುವು? ನಿಮ್ಮ ಇಚ್ಛಾಶಕ್ತಿಯು ಬಲವಾಗುವುದು. ಇತರರನ್ನು ಹರಸಲು ಹಾಗೂ ಅವರ ಬಯಕೆಗಳನ್ನು ಪೂರೈಸಲು ನಿಮಗೆ ಸಾಧ್ಯವಾಗುವುದು.

ನಮ್ಮಲ್ಲಿ ಈ ವಿಶ್ವಾಸವಿರುವಾಗ, ಜೀವನದಲ್ಲಿ ಯಾವುದೇ ಪರಿಸ್ಥಿತಿಯಿಂದ ನಾವು ಹೊರಬರಬಲ್ಲೆವು. ಹೀಗಾಗಿ, ಹೋಗಿ ಈ ಸಂದೇಶವನ್ನು ಹರಡುವಂತೆ ನಾನು ನಿಮ್ಮಲ್ಲಿ ಕೇಳಿಕೊಳ್ಳುವೆನು. ಈ ಸಂದೇಶವನ್ನು ನಮ್ಮ ರೈತರಿಗೆ, ಯುವ ಜನತೆಗೆ ಮತ್ತು ನಮ್ಮ ವಿದ್ಯಾರ್ಥಿಗಳಿಗೆ ಹರಡಿ. ನಮ್ಮ ಜೀವನವು ಒಂದು ಬೆಳೆಗಿಂತ ಎಷ್ಟೋ ಹೆಚ್ಚು ಮುಖ್ಯವಾದುದು. ಒಂದು ಬೆಳೆಯು ನಾಶವಾಯಿತೆಂಬ ಕಾರಣಕ್ಕೆ ಆತ್ಮಹತ್ಯೆ ಮಾಡುವುದು ಒಂದು ಬುದ್ಧಿವಂತಿಕೆಯ ಕೆಲಸವಲ್ಲ. ಜೀವನವು ಇದಕ್ಕಿಂತ ಎಷ್ಟೋ ಹೆಚ್ಚು ಅಮೂಲ್ಯವಾದುದು. ನೀವಿದನ್ನು ಅವರಿಗೆ ಮನದಟ್ಟು ಮಾಡಿಸಬೇಕು.

ಸೇವಾ ತತ್ಪರತೆ

ಎಪ್ರಿಲ್ ೫, ೨೦೧೪
ಪುಣೆ, ಮಹಾರಾಷ್ಟ್ರ

ನರು ನನ್ನಲ್ಲಿ, "ಗುರುದೇವ, ಇದು ಈಗ ಚುನಾವಣೆಯ ಸಮಯ, ನೀವು ಯಾಕೆ ಮಹಾರಾಷ್ಟ್ರಕ್ಕೆ ಹೋಗುತ್ತಿರುವಿರಿ?" ಎಂದು ಹೇಳುತ್ತಾರೆ. ನಾನವರಿಗೆ, ಚುನಾವಣೆಯ ಸಮಯವಾಗಿರಲಿ ಅಲ್ಲದಿರಲಿ, ನನಗೆಲ್ಲವೂ ಒಂದೇ. ಎಲ್ಲಾ ಸಮಯಗಳೂ ಒಂದೇ ಎಂದು ಹೇಳಿದೆ.

ಈ ಚುನಾವಣೆಯ ಕಾಲದಲ್ಲಿ, ಇಲ್ಲಿಗೆ ಬಂದು, ಮುಂದಕ್ಕೆ ಹೆಜ್ಜೆಯಿಟ್ಟು ದೇಶಕ್ಕಾಗಿ ಏನನ್ನಾದರೂ ಮಾಡುವಂತೆ ಜನರಲ್ಲಿ ಅರಿವನ್ನು ಮೂಡಿಸುವುದು ನನಗೆ ಇನ್ನೂ ಹೆಚ್ಚು ಪ್ರಾಮುಖ್ಯವಾಗಿದೆ.

ನೀವು ಇವತ್ತು ನೋಡಿದಂತೆ, ನಾನು ’ಒಂದು ಉತ್ತಮ ಭಾರತಕ್ಕಾಗಿ ಸ್ವಯಂಸೇವಕರಾಗಿ’ ತಂಡದ ಸ್ವಯಂಸೇವಕರನ್ನು ಭೇಟಿಯಾದೆ. ಸ್ವಯಂಸೇವಕರು ಮಾಡಿರುವ ಉತ್ತಮ ಕೆಲಸ ನೋಡಲು ಚೆನ್ನಾಗಿತ್ತು. ಪುಣೆಯಲ್ಲಿಯೇ ಅವರು ಐವತ್ತನಾಲ್ಕು ಸಾವಿರ ಹೊಸ ಜನರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಿದ್ದಾರೆ. ನಮ್ಮ ಯುವಕರು ಮುಂದೆ ಬಂದು ದೇಶದ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಿದ್ದಾರೆ. ಇದು ಬಹಳ ಸಂತೋಷದ ಒಂದು ವಿಷಯ.

ಕಳೆದ ತಿಂಗಳು ರೈತರಿಗೊಂದು ದೊಡ್ದ ಹಿನ್ನಡೆಯಾಯಿತು. ಇಲ್ಲಿ, ಮಹಾರಾಷ್ಟ್ರದಲ್ಲಿ ಒಂದು ನೈಸರ್ಗಿಕ ವಿಕೋಪವಾಯಿತು. ಅಂತಹ ಒಂದು ವಿಕೋಪದ ಬಗ್ಗೆ ಯಾರೂ ಮೊದಲು ಯಾವತ್ತೂ ಕೇಳಿರಲಿಲ್ಲ. ಪ್ರಬಲವಾದ, ಆಲಿಕಲ್ಲು ಸಹಿತ ಬಿರುಗಾಳಿ ಬಂತು, ಅದರಿಂದಾಗಿ ಎಲ್ಲಾ ಬೆಳೆಗಳು ನಾಶವಾದವು. ನಾನು ಚಿತ್ರಗಳನ್ನು ನೋಡಿದಾಗ, ಮಹಾರಾಷ್ಟ್ರವು ಕಾಶ್ಮೀರದಂತೆ (ಮಂಜಿನಿಂದ ಅವೃತವಾದಂತೆ) ಕಾಣಿಸುತ್ತಿತ್ತು. ಈ ನೈಸರ್ಗಿಕ ವಿಕೋಪವು ನಮಗೆ, ಸರಿಯಾಗಿಲ್ಲದೇ ಇರುವುದನ್ನೇನೋ ನಾವು ಪರಿಸರಕ್ಕೆ ಮಾಡುತ್ತಿದ್ದೇವೆ ಎಂಬ ಒಂದು ಎಚ್ಚರಿಕೆಯನ್ನು ನೀಡಿದೆ. ನಾವು ಪರಿಸರದ ಕಡೆಗೆ ಗಮನವನ್ನು ನೀಡುತ್ತಿಲ್ಲ.

ನಾವು ಹಲವು ಜಾಗಗಳಲ್ಲಿ ಪ್ಲಾಸ್ಟಿಕ್‍ಗಳನ್ನು ಸುಡುತ್ತಿದ್ದೇವೆ. ಒಂದು ಪ್ಲಾಸ್ಟಿಕ್ ಚೀಲವನ್ನು ಸುಡುವುದರಿಂದ ಉತ್ಪತ್ತಿಯಾಗುವ ವಿಷವು, ೧೦೦೦ ಜನರಲ್ಲಿ ಕ್ಯಾನ್ಸರನ್ನು ತರಿಸಲು ಸಾಕಾಗುತ್ತದೆ. ನಾವು ಬಹಳಷ್ಟು ಕಾಳಜಿ ವಹಿಸಬೇಕು.

ನಾವು ವಿಷಯುಕ್ತ ಕೀಟನಾಶಕಗಳನ್ನು ಹೊಲಗಳಲ್ಲಿ ಹಾಕುತ್ತಿದ್ದೇವೆ ಮತ್ತು ಭೂಮಿಯು ಹಾಳಾಗುತ್ತಿದೆ. ಜಲಸ್ತರದ ಮೇಲೆ ಕೂಡಾ ಪರಿಣಾಮವಾಗುತ್ತಿದೆ.

ಇವತ್ತು ಭಾರತೀಯ ಮಣ್ಣು ರಕ್ತಹೀನತೆಯಿಂದ ಬಳಲುತ್ತಿದೆ. ಅನೀಮಿಯಾ ಎಂದರೇನು ಎಂದು ನಿಮಗೆ ಗೊತ್ತಾ? ರಕ್ತದಲ್ಲಿ ಕಬ್ಬಿಣಾಂಶದ ಕೊರತೆಯು ಮಾನವ ಶರೀರದಲ್ಲಿ ಅನೀಮಿಯಾವನ್ನುಂಟುಮಾಡುತ್ತದೆ. ಅದೇ ರೀತಿ ಹೈಡ್ರೋಕಾರ್ಬನ್‌ಗಳ ಅಭಾವದಿಂದ ಭೂಮಿಯೂ ಅನೀಮಿಯಾಕ್ಕೊಳಗಾಗುತ್ತಿದೆ. ಸರಾಸರಿಯಾಗಿ, ಭಾರತೀಯ ಮಣ್ಣು ಕೇವಲ ೦.೩ ರಿಂದ ೦.೪ ಶೇಕಡಾದಷ್ಟು ಹೈಡ್ರೋಕಾರ್ಬನ್‌ಗಳನ್ನು ಹೊಂದಿದೆ. ವಿದೇಶಗಳಲ್ಲಿ ಹೈಡ್ರೋಕಾರ್ಬನ್‌ನ ಅಂಶವು ೫ರಿಂದ ೬ ಶೇಕಡಾದಷ್ಟು ಅಧಿಕವಾಗಿದೆ. ಇದರರ್ಥ, ನಮ್ಮ ಭೂಮಿಯು ಅನೀಮಿಯಾದಿಂದ ಬಳಲುತ್ತಿದೆ. ಈ ಪರಿಸ್ಥಿತಿಯನ್ನು ಬದಲಾಯಿಸಲು ನಾವೆಲ್ಲರೂ ಪ್ರಯತ್ನಪಡಬೇಕಾಗಿದೆ. ನಾವು ಪರಿಸ್ಥಿತಿಗಳನ್ನು ಬದಲಾಯಿಸಬೇಕಾಗಿದೆ. ನಾವು ನಮ್ಮ ಪರಿಸರದ ಬಗ್ಗೆ ಗಮನ ಹರಿಸಬೇಕು ಮತ್ತು ಅದರ ಬಗ್ಗೆ ಕಾಳಜಿ ವಹಿಸಬೇಕು. ಇದು ಮೊದಲನೆಯ ಮುಖ್ಯವಾದ ಸಂಗತಿ.

ನಾವು ಎದುರಿಸುತ್ತಾ ಬಂದಿರುವ ಎರಡನೆಯ ಸಮಸ್ಯೆಯೆಂದರೆ ಭ್ರಷ್ಟಾಚಾರ. ಭ್ರಷ್ಟಾಚಾರವನ್ನು ದೇಶದಿಂದ ತೊಲಗಿಸಬೇಕಾಗಿದೆ. ಒಳ್ಳೆಯ ಜನರ ಧ್ವನಿಗಳು ಕೇಳಿಸಬೇಕು.

ಕೇವಲ ಕೆಲವು ಕಾನೂನುಗಳನ್ನು ಜಾರಿಗೆ ತರುವುದರಿಂದ ಭ್ರಷ್ಟಾಚಾರವು ಕೊನೆಯಾಗದು. ಭ್ರಷ್ಟಾಚಾರದ ವಿರುದ್ಧ ಕಾನೂನುಗಳು ಖಂಡಿತವಾಗಿಯೂ ಮುಖ್ಯವಾದುದು, ಆದರೆ ಹೆಚ್ಚಿನ ಜನರು ಆಧ್ಯಾತ್ಮಿಕರಾಗುವಾಗ ಮತ್ತು ನಾವು ಯಾವುದೇ ರೀತಿಯ ಲಂಚವನ್ನು ಕೊಡುವುದೂ ಇಲ್ಲ ತೆಗೆದುಕೊಳ್ಳುವುದೂ ಇಲ್ಲವೆಂದು ನಾವು ದೃಢವಾಗಿ ನಿರ್ಧರಿಸಿದಾಗ ಮಾತ್ರ ಈ ದೇಶದಲ್ಲಿ ಪರಿಸ್ಥಿತಿಯು ಬದಲಾಗುವುದು. ಎಲ್ಲಿ ಆತ್ಮೀಯತೆಯು ಕೊನೆಯಾಗುವುದೋ ಅಲ್ಲಿ ಭ್ರಷ್ಟಾಚಾರವು ಆರಂಭವಾಗುತ್ತದೆ. ಹೀಗಾಗಿ, ಭ್ರಷ್ಟಾಚಾರವನ್ನು ಕೊನೆಗೊಳಿಸಲು ನಾವು ದೇಶದಲ್ಲಿ ಆಧ್ಯಾತ್ಮದ ಒಂದು ಅಲೆಯನ್ನು ತರಬೇಕಾಗಿದೆ. ಇದು ಅಗತ್ಯವಾಗಿದೆ. ಇವತ್ತು ನಮ್ಮ ದೇಶದಲ್ಲಿ ಬಹಳಷ್ಟು ಹಿಂಸಾಚಾರವಿದೆ. ಜನರಲ್ಲಿ ಈ ಹಿಂಸಾಚಾರ ಪ್ರವೃತ್ತಿಗಳಿರುವುದು ಯಾಕೆ? ಸೇವಾ ಮನೋಭಾವ ಮಾಯವಾಗುವಾಗ ಹಿಂಸಾ ಪ್ರವೃತ್ತಿಯು ಹಿಡಿತ ಸಾಧಿಸುತ್ತದೆ. ಒಬ್ಬರು ಇತರರ ಸೇವೆಯಲ್ಲಿ ಅಥವಾ ಯಾವುದೇ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಾಗ, ಸಂತೋಷದ ಮತ್ತು ಪರಮಾನಂದದ ಅಲೆಗಳು ಅವರ ಜೀವನದಲ್ಲಿ ಬರುತ್ತವೆ.

ಇದು ಯುವಕರಿಗೆ ಆವಶ್ಯಕವಾಗಿದೆ. ದೇಶ ಸೇವೆ ಮಾಡುವ ಸಲುವಾಗಿ ನೀವು ಪ್ರತಿದಿನವೂ ಒಂದು ಗಂಟೆಯನ್ನು ನೀಡಬೇಕು.

ಒಂದು ವಾರದಲ್ಲಿ ನಾವು ಏಳು ಗಂಟೆಗಳನ್ನು ನೀಡಿದರೆ, ಸಮಾಜಕ್ಕಾಗಿ ನಾವು ಬಹಳಷ್ಟು ಒಳ್ಳೆಯ ಕೆಲಸವನ್ನು ಮಾಡಬಹುದು. ಹೀಗಾಗಿ, ದೇಶಕ್ಕಾಗಿ ಪ್ರತಿದಿನವೂ ಒಂದು ಗಂಟೆಯನ್ನು ನೀಡಿರಿ. ನಮ್ಮ ಸುತ್ತಲಿನ ಜನರಲ್ಲಿ ನಾವು ಈ ಅರಿವನ್ನು ತರಬೇಕಾಗಿದೆ. ಇದನ್ನು ಮಾಡಲು ನಾವೆಲ್ಲರೂ ಸಿದ್ಧರಾಗಿರುವೆವೇ? ಎಷ್ಟು ಮಂದಿ ಸಿದ್ಧರಾಗಿರುವಿರಿ?

(ಸಭಿಕರಲ್ಲಿ ಹಲವರು ಕೈಗಳನ್ನು ಮೇಲೆತ್ತುತ್ತಾರೆ)

ಇವತ್ತು ನಾನು ನಿಮಗೊಂದು ಮಂತ್ರವನ್ನು ನೀಡುವೆನು, ಅದನ್ನು ನೀವು ಪ್ರತಿದಿನವೂ ಉಚ್ಛರಿಸಬೇಕು. ಆ ಮಂತ್ರವೆಂದರೆ, ’ಅನ್ನದಾತ ಸುಖೀ ಭವಃ’. ಇದರರ್ಥ, ’ಈ ಆಹಾರವನ್ನು ನನಗೆ ನೀಡಿದವರು ಸಂತೋಷವಾಗಿಯೂ ತೃಪ್ತರಾಗಿಯೂ ಇರಲಿ’ ಎಂದು. ಹೀಗಾಗಿ ನೀವು ನಿಮ್ಮ ಊಟವನ್ನು ಪ್ರಾರಂಭಿಸುವ ಮುನ್ನ, ’ಅನ್ನದಾತ ಸುಖೀ ಭವಃ’ ಎಂದು ಉಚ್ಛರಿಸಿ. ಈ ಮಂತ್ರದ ಮೂಲಕ ನಾವು ರೈತರ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸುತ್ತೇವೆ. ರೈತನು ದುಃಖಿತನಾಗಿದ್ದರೆ, ಅವನು ಉತ್ಪಾದಿಸುವ ಬೆಳೆಯು ಆರೋಗ್ಯದಾಯಕವಾಗಿರದು. ಆಗ ಆ ಆಹಾರವನ್ನು ತಿನ್ನುವವರು ಕೂಡಾ ಅನಾರೋಗ್ಯವಂತರಾಗುತ್ತಾರೆ. ಹೀಗಾಗಿ ನಾವು, ’ಅನ್ನದಾತ ಸುಖೀ ಭವಃ’ ಎಂದು ಹೇಳಬೇಕು. ಈ ದೇಶದ ರೈತರು ಸಂತೋಷವಾಗಿಯೂ ಸಮೃದ್ಧರಾಗಿಯೂ ಇರಲಿ!

ನಾನು ನಿಮಗೆ ಹೇಳಲು ಬಯಸುವ ಮುಂದಿನ ವಿಷಯವೆಂದರೆ, ನಮ್ಮ ದೇಶದಲ್ಲಿನ ವ್ಯಾಪಾರ ಮತ್ತು ಆರ್ಥಿಕತೆಯ ಬಗ್ಗೆ.

ನಿಮಗೆ ಗೊತ್ತಾ, ದೇಶದ ಉದ್ಯಮಿಗಳು ದುಃಖಿತರಾಗಿರುವಾಗ ಮಾತ್ರ ಅವರು ಭ್ರಷ್ಟಾಚಾರ ಮತ್ತು ಇತರ ತಪ್ಪು ಕೆಲಸಗಳಿಗೆ ಮೊರೆ ಹೋಗುವುದು. ವ್ಯಾಪಾರಿಗಳು ಕಲಬೆರಕೆಯಲ್ಲಿ ಭಾಗಿಯಾಗುವುದು ಯಾಕೆ? ಈ ದಿನಗಳಲ್ಲಿ ಬಹಳಷ್ಟು ಕಲಬೆರಕೆಗಳಾಗುತ್ತಿವೆ. ವ್ಯಾಪಾರಿಗಳಿಗೆ ’ಸದ್ಬುದ್ಧಿ’ ನೀಡಿ ಹರಸಬೇಕೆಂದು ನಾವು ದೇವರಲ್ಲಿ ಪ್ರಾರ್ಥಿಸಬೇಕು.

ಕಲಬೆರಕೆಯಿಂದುಂಟಾಗುವ ಹಾನಿಯನ್ನು ಅವರು ಅರ್ಥೈಸಿಕೊಳ್ಳಬೇಕು ಮತ್ತು ಅಂತಹ ಕೆಟ್ಟ ಅಭ್ಯಾಸಗಳಿಗೆ ಮೊರೆ ಹೋಗಬಾರದು.

ಮಹಾರಾಷ್ಟ್ರದಲ್ಲಾದರೂ ಪರಿಸ್ಥಿತಿ ಉತ್ತಮವಾಗಿದೆ. ನೀವು ದಿಲ್ಲಿಗೆ ಹೋದರೆ, ಕಲಬೆರಕೆಯ ಸಮಸ್ಯೆಯು ಬಹಳ ವ್ಯಾಪಕವಾಗಿದೆ. ಆಹಾರದ ಕಲಬೆರಕೆಯು ಅಲ್ಲಿ ಎಷ್ಟಿದೆಯೆಂದರೆ, ನಿಮಗೆ ಸಿಹಿತಿಂಡಿಗಳನ್ನು ತಿನ್ನಲು ಕೂಡಾ ಭಯವಾದೀತು.

ಅಲ್ಲಿ ಹಾಲಿನ ಕೊರತೆ ಬಹಳಷ್ಟಿರುವುದರಿಂದ ಅವರು ಸಿಹಿತಿಂಡಿಗಳೊಂದಿಗೆ ಯೂರಿಯಾ ಹಾಗೂ ಕೃತಕವಾದ ರಾಸಾಯನಿಕಗಳನ್ನು ಕಲಬೆರಕೆ ಮಾಡುತ್ತಿದ್ದಾರೆ.

ಹೀಗೆ, ನಮ್ಮ ಉದ್ಯಮಿಗಳು ಮತ್ತು ವ್ಯಾಪಾರಿಗಳು ಸಂತೋಷವಾಗಿರಬೇಕು. ಅವರು ಸಂತೋಷವಾಗಿದ್ದರೆ ಅವರು ಯಾವುದೇ ತಪ್ಪನ್ನು ಮಾಡಲಾರರು. ಸಂತೋಷವಾಗಿರುವ ಒಬ್ಬ ವ್ಯಕ್ತಿಯು ಇತರರೊಂದಿಗೆ ಜಗಳವಾಡುವುದಿಲ್ಲ.

ದುಃಖಿತನಾಗಿರುವ ಹಾಗೂ ತೃಪ್ತನಾಗಿಲ್ಲದಿರುವ ಒಬ್ಬನು, ತನಗೆ ತಾನೇ ಹಾಗೂ ತನ್ನ ಸುತ್ತಲಿರುವ ಇತರರಿಗೆ ಹಾನಿಯನ್ನುಂಟುಮಾಡುತ್ತಾನೆ.

ನಾನು ಹೇಳಲಿರುವ ಮೂರನೆಯ ವಿಷಯವೆಂದರೆ, ನಮ್ಮ ದೇಶದಲ್ಲಿನ ಮಹಿಳೆಯರ ಬಗ್ಗೆ. ನಮ್ಮ ದೇಶದ ಮಹಿಳೆಯರು ದುಃಖಿತರಾಗಿರುವಾಗ, ಇಡೀ ದೇಶವೇ ದುಃಖಿತವಾಗಿರುವುದು. ಮನೆಯ ಹೆಂಗಸು ದುಃಖಿತಳಾಗಿದ್ದರೆ, ಇಡೀ ಕುಟುಂಬವೇ ತೊಂದರೆಗೀಡಾಗುವುದು. ಹೀಗಾಗಿ, ಮನೆಯಲ್ಲಿ ಅಡುಗೆ ಮಾಡಿ ನಮಗೆ ಬಡಿಸುವ ಸ್ತ್ರೀಯು ಸಂತೋಷವಾಗಿರಬೇಕೆಂದು ನಾವೆಲ್ಲರೂ ಪ್ರಾರ್ಥಿಸಬೇಕು. ಆದುದರಿಂದ ನೀವು, ’ಅನ್ನದಾತ ಸುಖೀ ಭವಃ’ ಎಂದು ಉಚ್ಛರಿಸಿ ಸ್ತ್ರೀಯರನ್ನು ಹರಸಬೇಕು.
ನಮ್ಮ ರಾಷ್ಟ್ರದ ಸಬಲೀಕರಣಕ್ಕಾಗಿ ನಾವೆಲ್ಲರೂ ನಮ್ಮ ಮನಸ್ಸಿನಲ್ಲಿ ಒಂದು ದೃಢ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಿದೆ. ನಮ್ಮ ದೇಶದಲ್ಲಿ ನೂರು ಶೇಕಡಾ ಮತದಾನವಾಗಬೇಕು. ಚುನಾಯಿಸಿ ಒಳ್ಳೆಯ ಜನರನ್ನು ಅಧಿಕಾರಕ್ಕೆ ತರುವುದು ನಮ್ಮ ಜವಾಬ್ದಾರಿಯಾಗಿದೆ. ಪ್ರಾಮಾಣಿಕರು ಚುನಾಯಿತರಾಗಬೇಕು.

ಇವತ್ತು ಕೂಡಾ ಒಳ್ಳೆಯ ಜನರಿದ್ದಾರೆ, ಹೀಗಾಗಿ ಅವರನ್ನು ಚುನಾಯಿಸಿ. ಅಪರಾಧಿಗಳಿಗೆ ಮತ್ತು ಭ್ರಷ್ಟ ಜನರಿಗೆ ಮತ ಹಾಕಬೇಡಿ. ನೀವು ಇದರ ಬಗ್ಗೆ ಜಾಗರೂಕರಾಗಿದ್ದರೆ, ನಮ್ಮ ದೇಶವು ಇಂದು ಎದುರಿಸುತ್ತಿರುವ ಸಮಸ್ಯೆಗಳನ್ನು ಅದು ತೊಡೆದುಹಾಕಬಲ್ಲದು.

ನಮ್ಮ ದೇಶದ ಆರ್ಥಿಕತೆಯು ಅಪಾಯದಲ್ಲಿದೆ. ನಾವು ಅದರಿಂದ ಹೊರಬರಲು ಬಯಸುವುದಾದರೆ, ಒಂದು ಬಲಿಷ್ಠವಾದ ಸರಕಾರವು ಅಧಿಕಾರಕ್ಕೆ ಬರಬೇಕು. ಅದು ಹಣದುಬ್ಬರವನ್ನು ಕಡಿಮೆ ಮಾಡುವಲ್ಲಿ ಸಹಾಯ ಮಾಡಬಲ್ಲದು. ಹೀಗಾಗಿ ನಾವೆಲ್ಲರೂ ಇದಕ್ಕಾಗಿ ಕೆಲಸ ಮಾಡಬೇಕು.

ಆಧ್ಯಾತ್ಮಿಕ ವ್ಯಕ್ತಿಗಳು ಯಾವುದೇ ನಿರ್ದಿಷ್ಟ ರಾಜಕೀಯ ಪಕ್ಷಕ್ಕೆ ಸೇರಿರುವುದಿಲ್ಲ. ಅವರು ಎಲ್ಲರಿಗೂ ಸೇರಿದವರು. ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರು ಒಂದು ಪಕ್ಷಕ್ಕೆ ಸೇರಿರುತ್ತಾರೆಯೇ? ಒಂದೇ ಒಂದು ನಿರ್ದಿಷ್ಟ ಪಕ್ಷವನ್ನು ಬೆಂಬಲಿಸುವ ಜನರಿಗೆ ಮಾತ್ರ ಒಬ್ಬ ವೈದ್ಯನು ಚಿಕಿತ್ಸೆ ನೀಡುತ್ತಾನೆಯೇ? ಒಬ್ಬ ವೈದ್ಯನು ಒಂದು ಪಕ್ಷಕ್ಕೆ ಸೇರಿದವನಾಗಿದ್ದರೆ, ಆಗ ಇತರ ಪಕ್ಷಗಳ ಜನರು ಚಿಕಿತ್ಸೆಗಾಗಿ ಅವನ ಬಳಿಗೆ ಹೇಗೆ ಹೋಗುವರು? (ನಗು) ಹಾಗೆಯೇ, ಆಧ್ಯಾತ್ಮಿಕ ವ್ಯಕ್ತಿಗಳು ಎಲ್ಲರಿಗಾಗಿರುವರು. ಹೆಚ್ಚಾಗಿ ಜನರು ನನ್ನ ಬಳಿ ಬಂದು, "ಗುರುದೇವ, ನಿಮ್ಮ ಕೆಲಸವು ಆಧ್ಯಾತ್ಮವನ್ನು ಕಲಿಸುವುದಾಗಿದೆ.

ನೀವು ಯಾಕೆ ಭ್ರಷ್ಟಾಚಾರ ಮತ್ತು ಇತರ ಸಾಮಾಜಿಕ ಸಮಸ್ಯೆಗಳ ಬಗ್ಗೆ ಅಷ್ಟೊಂದು ಚರ್ಚಿಸುತ್ತೀರಿ?" ಎಂದು ಕೇಳುತ್ತಾರೆ.
ಹಲವಾರು ಜನರು ಈ ಪ್ರಶ್ನೆಯನ್ನು ಕೇಳುತ್ತಾರೆ. ನಾನವರಿಗೆ, ತನ್ನ ದೇಶಕ್ಕಾಗಿರುವ ಪ್ರೇಮ ಮತ್ತು ದೇವರಿಗಾಗಿರುವ ಪ್ರೇಮವು ಒಂದೇ ನಾಣ್ಯದ ಎರಡು ಮುಖಗಳು ಎಂದು ಹೇಳುತ್ತೇನೆ.

ಅದು ಹಾಗಲ್ಲವಾಗಿರುತ್ತಿದ್ದರೆ, ಸಮರ್ಥ್ ರಾಮದಾಸ್ ಅವರು ಶಿವಾಜಿ ಮಹಾರಾಜರನ್ನು ನ್ಯಾಯಕ್ಕಾಗಿ ಹೋರಾಡುವಂತೆ ಯಾಕೆ ಪ್ರೇರೇಪಿಸುತ್ತಿದ್ದರು? ರಾಮದಾಸ್ ಅವರು ಶಿವಾಜಿ ಮಹಾರಾಜರಿಗೆ ಸ್ಫೂರ್ತಿ ನೀಡಿರಲಿಲ್ಲವೇ? ಯುಗಗಳಿಂದಲೂ ಇದು ನಮ್ಮ ಸಂಪ್ರದಾಯವಾಗಿತ್ತು.

ಸಮಾಜದಲ್ಲಿ ಸಮಸ್ಯೆಗಳಿದ್ದಾಗ ಮತ್ತು ನೈತಿಕತೆಯು ಕುಸಿಯಲು ಆರಂಭವಾದಾಗಲೆಲ್ಲಾ, ಆಧ್ಯಾತ್ಮಿಕ ಕ್ಷೇತ್ರದಿಂದ ಜನರು ಮುಂದೆ ಬಂದು ನಿಯಂತ್ರಣವನ್ನು ಕೈಗೆ ತೆಗೆದುಕೊಂಡರು.

ಹೀಗಾಗಿ ಇದು ನನ್ನ ಕರ್ತವ್ಯವಾಗಿದೆ ಮತ್ತು ನಾನದನ್ನು ಮಾಡುವೆನು.

ಯಾವಾಗೆಲ್ಲಾ ಧರ್ಮದಲ್ಲೊಂದು ಕುಸಿತವಾಗುವುದೋ, ಆಧ್ಯಾತ್ಮಿಕ ಮುಖಂಡರು ಅದರ ವಿರುದ್ಧ ಎದ್ದುನಿಂತು ತಮ್ಮ ದನಿಯೆತ್ತುವರು. ಅವರಿದನ್ನು ಹಿಂದೆ ಮಾಡಿದ್ದಾರೆ ಮತ್ತು ಮುಂದೆಯೂ ಹೀಗೆ ಮಾಡುವುದನ್ನು ಮುಂದುವರಿಸುವರು. ಅಂತಹ ಸಾಮಾಜಿಕ ಸಮಸ್ಯೆಗಳು ಏಳುವಾಗಲೆಲ್ಲಾ ಅವರು ಎದ್ದುನಿಂತು ಮಾತನಾಡುವರು.  

ಶುಕ್ರವಾರ, ಏಪ್ರಿಲ್ 4, 2014

ಕ್ರಿಯಾಶೀಲ ಸ್ವಯಂಸೇವಕರಾಗಿ

೪ ಎಪ್ರಿಲ್ ೨೦೧೪
ವಿದರ್ಭ, ಮಹಾರಾಷ್ಟ್ರ

ಧ್ಯಾತ್ಮಿಕತೆಗೆ ಮಾತ್ರ ಆತ್ಮಹತ್ಯೆಗಳನ್ನು ನಿಲ್ಲಿಸುವ ಮತ್ತು ಅಪರಾಧವನ್ನು ನಿಲ್ಲಿಸುವ ಶಕ್ತಿಯಿರುವುದು.
ನಮ್ಮ ದೇಶವು ಇವತ್ತು ಅಪರಾಧಗಳ ತವರಾಗಿದೆ. ರಾಜಕೀಯ ಪಕ್ಷಗಳು ಅಪರಾಧಿಗಳಿಗೆ ಮತದಾನದ ಚೀಟಿಗಳನ್ನು ಕೊಡುವ ನಿರ್ಬಂಧತೆಯನ್ನು ಅನುಭವಿಸುವುದು ಯಾಕೆಂದರೆ, ಅವರು ಸಾರ್ವಜನಿಕ ಮತ ಬ್ಯಾಂಕ್‌ಗಳ ಮೇಲೆ ಒಂದು ಹಿಡಿತವನ್ನು ಹೊಂದಿರುವುದರಿಂದಾಗಿ ಮತ್ತು ದೇಶದಲ್ಲಿನ ಎಲ್ಲಾ ಸದಾಚಾರದ ಹಾಗೂ ಸಜ್ಜನರ ದೊಡ್ಡದಾದ ಮತದಾನದ ಬ್ಯಾಂಕ್ ಇಲ್ಲದಿರುವುದರಿಂದಾಗಿ ಮಾತ್ರ.

ಎಲ್ಲಾ ಸದಾಚಾರಿ ಮತ್ತು ಒಳ್ಳೆಯ ಜನರ ಒಂದು ವೋಟ್ ಬ್ಯಾಂಕ್ ಇಂದು ನಮಗೆ ಬೇಕಾಗಿದೆ. ನೀವೆಲ್ಲರೂ ನಾನು ಹೇಳುವುದನ್ನು ಒಪ್ಪುವುದಿಲ್ಲವೇ?

(ಹೌದು)

ದ್ವಾಪರ ಯುಗದಲ್ಲಿ ಪಾಂಡವರು ಕೇವಲ ಐವರು ಮಾತ್ರ ಇದ್ದರು, ಅದೇ ವೇಳೆ ಅವರ ದಾಯಾದಿಗಳಾದ ಕೌರವರು ಸಂಖ್ಯೆಯಲ್ಲಿ ೧೦೦ ಇದ್ದರು. ಆದರೆ ಇವತ್ತು, ಕಲಿಯುಗದಲ್ಲಿ, ಈ ಲೆಕ್ಕವು ಅದಲುಬದಲಾಗಿದೆ. ಇವತ್ತು ೧೦೦ ಪಾಂಡವರಿದ್ದಾರೆ (ಇಲ್ಲಿ ಶಿಷ್ಟ ಜನರು ಎಂಬ ಅರ್ಥ) ಮತ್ತು ಕೇವಲ ಐದು ಕೌರವರಿರುವುದು (ಇಲ್ಲಿ ದುಷ್ಟ ಜನರು ಎಂಬ ಅರ್ಥ). ಇವತ್ತು ನಮ್ಮ ಸಮಾಜವು ಯಾತನೆಯನ್ನು ಅನುಭವಿಸುತ್ತಿರುವುದಾದರೆ ಅದು, ಐದು ದುಷ್ಟ ಜನರ ಬದಲಾಗಿ, ಈ ೧೦೦ ಶಿಷ್ಟ ಜನರ ಮೌನದಿಂದಾಗಿ ಎಂಬುದು ನನ್ನ ನಂಬಿಕೆ.

ಇವತ್ತು ನೀವೆಲ್ಲರೂ ಸಮಾಜಕ್ಕಾಗಿ ಕೆಲಸ ಮಾಡುವ ಒಂದು ಸಂಕಲ್ಪವನ್ನು ತೆಗೆದುಕೊಳ್ಳಬೇಕು. ಮನೆಮನೆಗೆ ಹೋಗಿ, ಜನರಿಗೆ ಅವರ ಹಕ್ಕುಗಳ ಬಗ್ಗೆ ಹಾಗೂ ಏನಾಗುತ್ತಿದೆಯೆಂಬುದರ ಬಗ್ಗೆ ಅರಿವು ಮೂಡಿಸಿ.

ಒಳ್ಳೆಯ ಜನರು ಸುಮ್ಮನೆ ಮನೆಯೊಳಗೆ ಕುಳಿತುಕೊಂಡು, ಸಮಾಜಕ್ಕಾಗಿ ಏನನ್ನೂ ಮಾಡದಿರಲು ಬಿಡಬೇಡಿ. ನೀವು ಜನರನ್ನು ಜಾಗೃತಗೊಳಿಸಬೇಕು. ಅವರೆಲ್ಲರೂ ತಮ್ಮ ಮನೆಗಳ ಸೌಕರ್ಯಗಳಿಂದ ಹೊರಕ್ಕೆ ಹೆಜ್ಜೆಯಿಡಬೇಕು ಮತ್ತು ಒಂದು ಉತ್ತಮ ಭಾರತಕ್ಕಾಗಿ ಕ್ರಿಯಾಶೀಲ ಸ್ವಯಂಸೇವಕರಾಗಬೇಕು. ನೀವೆಲ್ಲರೂ ಇದನ್ನು ಮಾಡುವಿರೇ?

ಭಾರತಕ್ಕಾಗಿ ನನ್ನದೊಂದು ಕನಸಿದೆ; ಎಲ್ಲೆಡೆಯೂ ಆಧ್ಯಾತ್ಮದ ಒಂದು ಅಲೆಯನ್ನು, ಸಂತಸದ ಒಂದು ಅಲೆಯನ್ನು ತರುವುದು. ಎಲ್ಲೆಲ್ಲಾ ಸಾಧ್ಯವೋ; ಅದು ಹಳ್ಳಿಗಳಾಗಿರಲಿ ಅಥವಾ ನಗರಗಳಾಗಿರಲಿ; ಜನರ ಮುಖಗಳು ಸಂತೋಷದಿಂದ ಬೆಳಗುತ್ತಿರಬೇಕು. ಕೇವಲ ಸಂಪತ್ತನ್ನು ಗಳಿಸುವುದರಿಂದ ಮಾತ್ರ ಇದು ಆಗಲಾರದು.

ಜಗತ್ತಿನಾದ್ಯಂತದ ರಾಷ್ಟ್ರಗಳು ಇವತ್ತು ಇದನ್ನು ಅನುಮೋದಿಸಿದ್ದಾರೆ. ಅದಕ್ಕಾಗಿಯೇ ಸೋವಿಯತ್ ಯೂನಿಯನ್‌ನಲ್ಲಿ ಕೂಡಾ ಪ್ರಪಂಚ ಸಂತೋಷ ದಿನ (ವರ್ಲ್ಡ್ ಹ್ಯಾಪ್ಪಿನೆಸ್ ಡೇ) ವನ್ನು ಆಚರಿಸಲು ಒಂದು ದಿನವನ್ನು ಮೀಸಲಾಗಿಟ್ಟಿದ್ದಾರೆ.
ಒಂದು ದೇಶದ ಜನರು ಎಷ್ಟು ಸಂತೋಷವಾಗಿದ್ದಾರೆ ಹಾಗೂ ತೃಪ್ತರಾಗಿದ್ದಾರೆ ಎಂಬುದನ್ನು ಅಳೆಯಲು  ಗ್ರಾಸ್ ಡೊಮೆಸ್ಟಿಕ್ ಹ್ಯಾಪ್ಪಿನೆಸ್ (ಒಟ್ಟು ಸಾಂಸಾರಿಕ ಸಂತೋಷ) ಎಂದು ಕರೆಯಲ್ಪಡುವ ಒಂದು ಸೂಚಕವನ್ನು ಅವರು ಕಂಡುಹಿಡಿದಿದ್ದಾರೆ. ಆದುದರಿಂದ ಬಹಳಷ್ಟು ಹಣವನ್ನು ಹೊಂದಿರುವುದರಿಂದ ಮಾತ್ರ ಯಾವುದೇ ಪ್ರಯೋಜನವಿಲ್ಲ. ಜನರು ಸಂತೋಷವಾಗಿ ಹಾಗೂ ತೃಪ್ತರಾಗಿರುವುದು ಕೂಡಾ ಮುಖ್ಯವಾಗಿದೆ.

ಜಪಾನಿನಲ್ಲಿ ಪ್ರತಿವರ್ಷವೂ ೨೦೦೦ಕ್ಕಿಂತಲೂ ಹೆಚ್ಚು ಯುವಕರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಮತ್ತು ಅಲ್ಲಿ ಎರಡು ಲಕ್ಷಕ್ಕಿಂತಲೂ ಹೆಚ್ಚು ಯುವಕರಿಗೆ ಒಂದಲ್ಲ ಒಂದು ಮಾನಸಿಕ ಅಸ್ವಸ್ಥತೆ ಇರುವುದಾಗಿ ಪತ್ತೆಹಚ್ಚಲಾಗಿದೆ. ಯುರೋಪಿನಲ್ಲಿ ಶಾಲಾ ಶಿಕ್ಷಕರಲ್ಲಿ ಸುಮಾರು ೪೦% ಮಂದಿ ಯಾವುದಾದರೂ ಮಾನಸಿಕ ರೋಗಕ್ಕೆ ತುತ್ತಾಗಿದ್ದಾರೆ ಮತ್ತು ಅಲ್ಲಿನ ಜನರಲ್ಲಿ ೩೮% ಮಂದಿ ಆತ್ಮಹತ್ಯೆ ಹಾಗೂ ಇತರ ಸಮಸ್ಯೆಗಳಿಗೆ ಬಲಿಯಾಗುತ್ತಾರೆ.

ಇಂಗ್ಲೇಂಡಿನ ಪ್ರಧಾನ ಮಂತ್ರಿಯವರು ನನ್ನಲ್ಲಿ, "ಗುರುದೇವ, ಸರಕಾರವು ಮನೆಗಳು, ಕಾರುಗಳು, ಮೊದಲಾದ ಸಾಧ್ಯವಿರುವ ಎಲ್ಲಾ ಸೌಕರ್ಯಗಳನ್ನು ಒದಗಿಸುತ್ತಿರುವಾಗ, ಇಲ್ಲಿನ ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಯಾಕೆ?" ಎಂದು ಕೇಳಿದರು.

ಅಲ್ಲಿನ ಜನರು ಯೋಗ, ಪ್ರಾಣಾಯಾಮ ಮತ್ತು ಧ್ಯಾನಗಳನ್ನು ಸ್ವೀಕರಿಸಿದಾಗ, ಅವರು ತಮ್ಮ ಜೀವನದಲ್ಲಿ ಒಂದು ಅಗಾಧವಾದ ಪರಿವರ್ತನೆಯನ್ನು ಅನುಭವಿಸಿದರು.

ಜೀವನಗಳನ್ನು ಶಾಶ್ವತವಾಗಿ ಪರಿವರ್ತಿಸುವ ಸಾಮರ್ಥ್ಯವಿರುವ ಅಗಾಧವಾದ ಆಧ್ಯಾತ್ಮಿಕ ಜ್ಞಾನವನ್ನು ಭಾರತವು ಹೊಂದಿದೆ. ಆದರೂ ನಾವು ನಮ್ಮ ದೇಶದಲ್ಲಿರುವ ನಮ್ಮದೇ ಆದ ಪರಂಪರೆ ಮತ್ತು ಆಧ್ಯಾತ್ಮಿಕ ಆಸ್ತಿಗೆ ಬೆಲೆ ನೀಡಿಲ್ಲ ಮತ್ತು ಗೌರವಿಸಿಲ್ಲ. ನಾವೊಂದು ಬಂಗಾರದ ಸಂಪತ್ತಿನ ಮೇಲೆ ಕುಳಿತಿದ್ದೇವೆ, ಆದರೂ ನಾವು ಅದರ ಬಗ್ಗೆ ಅಜ್ಞಾನಿಗಳಾಗಿದ್ದೇವೆ. ಅದನ್ನು ಗೌರವದೊಂದಿಗೆ ಎತ್ತಿಹಿಡಿಯುವುದರ ಹಾಗೂ ಅದನ್ನು ಪ್ರಚಾರಪಡಿಸುವುದರ ಬದಲಾಗಿ, ನಾವದನ್ನು ತುಚ್ಛವಾಗಿ ನೋಡುತ್ತೇವೆ.

ಭಾರತವು ಹಲವು ರೀತಿಯ ಸಂಪತ್ತುಗಳಿಗೆ ತವರಾಗಿದೆ.

ಪಶ್ಚಿಮದಲ್ಲಿ ನಾವು, ಬಹಳಷ್ಟು ತೈಲವನ್ನು ಹೊಂದಿರುವ ಮಧ್ಯ-ಪೂರ್ವ ರಾಷ್ಟ್ರವನ್ನು ನಮ್ಮ ನೆರೆಯವರಾಗಿ ಹೊಂದಿದ್ದೇವೆ ಮತ್ತು ಪೂರ್ವದಲ್ಲಿ ಇಂಡೋನೇಷಿಯಾ ಮತ್ತು ಮಲೇಷಿಯಾಗಳಿದ್ದು, ಅವು ತೈಲ ನಿಕ್ಷೇಪ ಹೊಂದಿವೆ. ನಾವು ಮಧ್ಯದಲ್ಲಿದ್ದೇವೆ ಮತ್ತು ನಮ್ಮಲ್ಲಿ ಕೂಡಾ ಬಹಳಷ್ಟು ತೈಲ ಸಂಪತ್ತಿದೆ, ಆದರೂ ನಾವು ತೈಲವನ್ನು ಇತರ ರಾಷ್ಟ್ರಗಳಿಂದ ಹೆಚ್ಚಿನ ಬೆಲೆಗಳಲ್ಲಿ ಆಮದು ಮಾಡಿಕೊಳ್ಳುತ್ತಿದ್ದೇವೆ.

ನಮ್ಮಲ್ಲಿ ಬೃಹತ್ ಕಲ್ಲಿದ್ದಲು ನಿಕ್ಷೇಪಗಳಿವೆ, ಹಾಗಿದ್ದೂ ನಾವು ಕಲ್ಲಿದ್ದಲನ್ನು ಹೊರಗಿನಿಂದ ಆಮದು ಮಾಡಿಕೊಳ್ಳುತ್ತಿದ್ದೇವೆ. ನಮ್ಮ ದೇಶದಲ್ಲಿ ಬೋಕ್ಸೈಟ್‌ನ ಬೃಹತ್ ನಿಕ್ಷೇಪಗಳಿವೆ, ಆದರೂ ನಾವು ಹೊರಗಿನಿಂದ ಅಲ್ಯುಮಿನಿಯಂನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ.

ನಾವು ಕಚ್ಚಾ ಕಬ್ಬಿಣದ ಅದಿರನ್ನು ಕಡಿಮೆ ಬೆಲೆಗಳಲ್ಲಿ ರಫ್ತು ಮಾಡುತ್ತಿದ್ದೇವೆ ಮತ್ತು ಹೆಚ್ಚಿನ ಬೆಲೆಗಳಲ್ಲಿ ಸ್ಟೀಲನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ. ಇದನ್ನೆಲ್ಲಾ ಮಾಡುವುದರಿಂದ, ನಾವು ನಮ್ಮ ಆರ್ಥಿಕತೆಗೆ ದೊಡ್ಡ ಹಾನಿಯನ್ನು ಉಂಟುಮಾಡಿದ್ದೇವೆ. ಈ ದೌರ್ಭಾಗ್ಯವು ನಾವೇ ಮಾಡಿಕೊಂಡದ್ದಾಗಿದೆ.

ಇಲ್ಲದಿದ್ದರೆ ನೀವು ನಿಜವಾಗಿಯೂ ಅದರ ಕಡೆಗೆ ನೋಡಿದರೆ, ಭಾರತವು ಇವತ್ತಿಗೂ ಕೂಡಾ ಬಂಗಾರದ ಪಕ್ಷಿಯಾಗಿದೆ. ನಾವು ನಮ್ಮ ದೇಶವನ್ನು ಮತ್ತೊಮ್ಮೆ ಬಂಗಾರದ ಪಕ್ಷಿಯಾಗಿ ನೋಡಲು ಬಯಸುತ್ತೇವೆ. ಇಲ್ಲಿ ಎಷ್ಟು ಮಂದಿಗೆ ಇದೇ ಕನಸಿದೆ? ನಿಮ್ಮ ಕೈಗಳನ್ನು ಮೇಲೆತ್ತಿ. ಇದಕ್ಕಾಗಿ ನಾವೆಲ್ಲರೂ ಒಂದಾಗಬೇಕು.

ಭಾರತವು ಯಾವುದೇ ರೀತಿಯಲ್ಲೂ ಒಂದು ಬಲಹೀನ ಅಥವಾ ಒಂದು ಬಡ ದೇಶವಲ್ಲ. ಆದರೆ ನಾವೇ ನಮ್ಮನ್ನು ಈ ಶೋಚನೀಯ ಅವಸ್ಥೆಗೆ ತಂದಿದ್ದೇವೆ.

ನಿಮಗೆ ಗೊತ್ತಾ, ಸುಮಾರು ೧.೪ ಟ್ರಿಲಿಯನ್ ಡಾಲರ್‌ಗಳಷ್ಟು ಮೌಲ್ಯದ ಭಾರತೀಯ ಹಣವು, ಕಪ್ಪು ಹಣದ ರೂಪದಲ್ಲಿ ವಿದೇಶೀ ಬ್ಯಾಂಕುಗಳಲ್ಲಿ ಜಮಾವಣೆಗೊಂಡಿದೆ. ಅದನ್ನು ನಾವು ನಮ್ಮ ಸ್ವಂತ ದೇಶಕ್ಕೆ ಮರಳಿ ತರಬೇಕೆಂದು ನಿಮಗನಿಸುವುದಿಲ್ಲವೇ? ಶ್ರೇಷ್ಠ ರಾಜರ ತಾಯ್ನಾಡಾದ ಒಂದು ನೆಲದಲ್ಲಿ, ಒಂದಾದ ಮೇಲೊಂದರಂತೆ ಭಯಾನಕವಾದ ಹಗರಣಗಳನ್ನು ನೋಡಲು ನಿಮಗೆ ಸಾಕಾಗುತ್ತಿಲ್ಲವೇ ಮತ್ತು ದುಃಖವಾಗುತ್ತಿಲ್ಲವೇ?

ಇವತ್ತು ನಮಗೊಂದು ಭ್ರಷ್ಟಾಚಾರ-ಮುಕ್ತ ಸಮಾಜ ಬೇಕು. ಕೆಲವು ಕಾನೂನುಗಳನ್ನು ಜಾರಿಗೊಳಿಸುವುದರಿಂದ ಮಾತ್ರ ನಾವು ಭ್ರಷ್ಟಾಚಾರವನ್ನು ನಿರ್ಮೂಲನೆಗೊಳಿಸಬಹುದೆಂದು ನನಗನಿಸುವುದಿಲ್ಲ. ಅದು ಸಾಧ್ಯವಿಲ್ಲ. ಭ್ರಷ್ಟಾಚಾರವನ್ನು ನಿರ್ಮೂಲನೆಗೊಳಿಸಲು, ನಾವು ಸಮಾಜದಲ್ಲಿ ಆತ್ಮೀಯತೆಯ ಒಂದು ಅಲೆಯನ್ನು ತರಬೇಕಾಗಿದೆ. ಯಾರು ತಮಗೆ ಸೇರಿದವರೋ ಅವರೊಂದಿಗೆ ಒಬ್ಬರು ಯಾವತ್ತೂ ಒಂದು ಭ್ರಷ್ಟ ಅಥವಾ ಅಪ್ರಾಮಾಣಿಕ ರೀತಿಯಲ್ಲಿ ವರ್ತಿಸಲಾರರು. ತಮ್ಮ ಸ್ವಂತ ಸಹೋದರ, ಸಹೋದರ ಸಂಬಂಧಿ ಅಥವಾ ಕುಟುಂಬದ ಸದಸ್ಯರಿಂದ ಯಾರೂ ಲಂಚವನ್ನು ತೆಗೆದುಕೊಳ್ಳುವುದಿಲ್ಲ ಅಥವಾ ಕೊಡುವುದಿಲ್ಲ. ಯಾರನ್ನು ತಮ್ಮ ಸ್ವಂತದವರೆಂದು ಪರಿಗಣಿಸುವುದಿಲ್ಲವೋ ಅವರೊಂದಿಗೆ ಜನರು ಒಂದು ಭ್ರಷ್ಟವಾದ ರೀತಿಯಲ್ಲಿ ವರ್ತಿಸುತ್ತಾರೆ.

ಹೀಗಾಗಿ, ಒಂದು ಭ್ರಷ್ಟಾಚಾರ-ಮುಕ್ತ ಸಮಾಜವನ್ನು ಕೇವಲ ಕಾನೂನುಗಳನ್ನು ಮಾಡುವುದರಿಂದ ಮಾತ್ರ ಸಾಧಿಸಲಾಗದು.  ನಮ್ಮ ಸುತ್ತಲಿರುವ ಎಲ್ಲರೊಂದಿಗೂ ನಾವು ನಮ್ಮ ಆತ್ಮೀಯತಾಭಾವವನ್ನು ವಿಸ್ತರಿಸಬೇಕಾಗಿದೆ.

ನಾನು ಪ್ರಪಂಚದಾದ್ಯಂತ ಪ್ರಯಾಣಿಸಿದ್ದೇನೆ, ಆದರೆ ನಾನೆಲ್ಲೇ ಹೋದರೂ ಅಲ್ಲಿನ ಜನರು, ಅವರು ನನ್ನ ಸ್ವಂತದವರೇನೋ ಎಂಬಂತೆ ಭಾವಿಸಿದ್ದಾರೆ ಮತ್ತು ನಾನು ಕೂಡಾ, ನಾನು ಅವರಿಗೆ ಸೇರಿದವನೆಂದು ಭಾವಿಸಿದೆ. ಯಾರಾದರೂ ನನಗೆ ಅಪರಿಚಿತರು ಎಂದು ನನಗೆ ಯಾವತ್ತೂ ಅನ್ನಿಸಲಿಲ್ಲ. ಮೊದಲಿನಿಂದಲೂ ಇದು ನನ್ನ ಸ್ವಭಾವವಾಗಿತ್ತು.

ಇಲ್ಲಿರುವ ಎಲ್ಲರೂ ಒಬ್ಬ ತೋಟಗಾರನಿಂದ (ದೇವರು) ನೋಡಿಕೊಳ್ಳತಕ್ಕಂತಹ ಹೂವುಗಳಾಗಿದ್ದಾರೆ. ಈಗ ಈ ಹೂಗಳು ಬಾಡಲುತೊಡಗಿದರೆ, ಆಗ ನಾವು ಸುಮ್ಮನಿದ್ದುಕೊಂಡು ನೋಡಲು ಸಾಧ್ಯವೇ? ಇಲ್ಲ, ಅದು ಬೂಟಾಟಿಕೆ ಆಗುವುದು. ಇದಕ್ಕಾಗಿಯೇ, ಯಾವುದೆಲ್ಲಾ ಆ ಸಮಯಕ್ಕೆ ಸರಿಯೆಂದು ಮತ್ತು ಸೂಕ್ತವೆಂದು ನನಗನಿಸುವುದೋ, ಅದನ್ನು ನಾನು ಹೇಳುತ್ತೇನೆ.

ನಿಮಗೆ ಗೊತ್ತಾ, ಒಬ್ಬ ಪತ್ರಕರ್ತ, ಒಂದು ದೇಶದ ಅಧ್ಯಕ್ಷ ಮತ್ತು ಆಧ್ಯಾತ್ಮಿಕ ನಾಯಕರು, ಯಾವುದೇ ಒಂದು ನಿರ್ದಿಷ್ಟವಾದ ಪಕ್ಷ ಅಥವಾ ಜನರ ಪಂಗಡಕ್ಕೆ ಸೇರುವುದಿಲ್ಲ. ಅವರು ಎಲ್ಲರಿಗೂ ಸೇರಿದವರಾಗಿರುತ್ತಾರೆ. ಅವರು ಯಾವುದಾದರೂ ಒಂದು ನಿರ್ದಿಷ್ಟ ಪಕ್ಷದೊಂದಿಗೆ ಮೈತ್ರಿ ಹೊಂದಿರುವುದಿಲ್ಲ. ಆದರೆ ಒಬ್ಬ ರಾಜಕಾರಣಿ ಅಥವಾ ಒಂದು ರಾಜಕೀಯ ಪಕ್ಷ ತಪ್ಪು ಕೆಲಸಗಳಲ್ಲಿ ತೊಡಗಿಸಿಕೊಂಡರೆ, ಆಗ ಅವರು ಖಂಡಿತವಾಗಿಯೂ, ಅವರು ತಪ್ಪು ಮಾಡಿರುವುದಾಗಿ ಹೇಳಬೇಕು. ಹೀಗಾಗಿ ಹಾಗೆ ಮಾಡುವುದು ಒಬ್ಬ ಆಧ್ಯಾತ್ಮಿಕ ನಾಯಕನ ಕರ್ತವ್ಯ ಹಾಗೂ ಹಕ್ಕು ಎರಡೂ ಆಗಿದೆ. ಅದಕ್ಕಾಗಿಯೇ ಹಾಗೆ ಮಾಡುವುದನ್ನು ನಾನು ಮುಂದುವರಿಸುವೆನು.

ಮಹಾರಾಷ್ಟ್ರದ ಭೂಮಿಯು ಸ್ವಾಮಿ ರಾಮದಾಸರಂತಹ ಮಹಾನ್ ಸಂತರಿಗೆ ಜನ್ಮ ನೀಡಿದೆ. ಇದು ಮಹಾನ್ ಸಂತರ ನೆಲವಾಗಿದೆ. ಇಲ್ಲಿನ ಪ್ರತಿಯೊಂದು ಗ್ರಾಮದಲ್ಲೂ ದೇಶಭಕ್ತಿ ಹಾಗೂ ಪ್ರೇಮ ಆಳವಾಗಿದೆ.  ಆ ಭಾವನೆಯನ್ನು ನಾವು ಎಲ್ಲೆಡೆಯೂ ಮತ್ತೆ ಹಚ್ಚಬೇಕಾಗಿದೆ ಮತ್ತು ಒಂದು ಮಹಾನ್ ಕ್ರಾಂತಿ ಇಲ್ಲಿಂದ ಪ್ರಾರಂಭವಾಗುವುದನ್ನು ಹಾಗೂ ಅದರ ಕಂಪು ದೇಶದಲ್ಲಿ ಎಲ್ಲೆಡೆಯೂ ಹರಡುವುದನ್ನು ನೀವು ಕಾಣುವಿರಿ. ಆ ದಿನ ಬಹಳ ದೂರವಿಲ್ಲವೆಂದು ನನಗನಿಸುತ್ತದೆ, ಅದು ಈಗ ಇನ್ನೇನು ಬರಲಿದೆ. ಇವತ್ತು, ದೇಶದ ಅಧಿಕಾರದ ಚುಕ್ಕಾಣಿಯನ್ನು ನಾವೊಂದು ಹೊಸ ಹಾಗೂ ಅನುಭವವಿಲ್ಲದ ವ್ಯಕ್ತಿಗೆ ಕೊಡಲು ಸಾಧ್ಯವಿಲ್ಲ. ನಮ್ಮ ದೇಶವು ಒಂದು ಸಂಕಟಕಾಲದಲ್ಲಿದೆ. ಅದು ಅಕ್ಷರಶಃ ಕೃತಕ ಉಸಿರಾಟದ ಆಧಾರದಲ್ಲಿದೆ. ದೇಶದ ಚಾಲಕನ ಸ್ಥಾನದಲ್ಲಿ ಒಂದು ವರ್ಷ ವಯಸ್ಸಿನ ಮಗು ಕುಳಿತುಕೊಳ್ಳುವಂತೆ ಮಾಡಲು ನಮಗೆ ಸಾಧ್ಯವಿಲ್ಲ. ಮಗುವಿಗೆ ಸ್ಟಿಯರಿಂಗ್ ವೀಲ್‌ನ್ನು ಹಿಡಿದುಕೊಳ್ಳಲೂ ಸಾಧ್ಯವಿಲ್ಲ, ಅವನ ಕಾಲುಗಳು ಬ್ರೇಕ್ ಮತ್ತು ಏಕ್ಸಲರೇಟರ್ ಪೆಡಲ್‌ಗಳನ್ನು ತಲಪಲಾರವು ಕೂಡಾ. ದೇಶವನ್ನಾಳಲು, ಪ್ರಾಮಾಣಿಕವಾಗಿ ಮಾತನಾಡುವ ಮತ್ತು ಕೆಲಸ ಮಾಡುವ ಒಬ್ಬ ಸಮರ್ಥನಾದ ಹಾಗೂ ಅನುಭವಸ್ಥ ವ್ಯಕ್ತಿಯು ನಮಗೆ ಬೇಕಾಗಿದ್ದಾರೆ.

ನಾವೆಲ್ಲರೂ ಎಚ್ಚೆತ್ತುಕೊಳ್ಳಬೇಕು. ಯುವಕರು ಮುಂದೆ ಬಂದು, ಈ ದೇಶವನ್ನು, ಅವಳ ಧರ್ಮ ಮತ್ತು ಆಧ್ಯಾತ್ಮಿಕತೆಯನ್ನು, ಅವಳ ಸಂಸ್ಕೃತಿ ಮತ್ತು ಪರಂಪರೆಯನ್ನು ರಕ್ಷಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು.

ಪ್ರಶ್ನೆ: ಗುರುದೇವ, ನಾವೆಲ್ಲರೂ ೧೦೦% ಮತದಾನ ಮಾಡಬೇಕು. ಆದರೆ ಚುನಾವಣೆಯಲ್ಲಿನ ಅಭ್ಯರ್ಥಿಗಳಲ್ಲಿ ೧೦೦% ಒಳ್ಳೆಯವರಲ್ಲದಿದ್ದರೆ, ಆಗ ನಾವೇನು ಮಾಡುವುದು?

ಶ್ರೀ ಶ್ರೀ ರವಿ ಶಂಕರ್: ನನಗೆ ನಿನ್ನ ಪ್ರಶ್ನೆ ಅರ್ಥವಾಗುತ್ತದೆ. ನಾನು ಕೂಡಾ ಅದೇ ಸಂದಿಗ್ಧದಲ್ಲಿದ್ದೇನೆ. ದೇಶದಲ್ಲಿ ಬೇರೆ ಬೇರೆ ಜಾಗಗಳಲ್ಲಿ, ತಪ್ಪು ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಆದರೆ ಕೇಂದ್ರದಲ್ಲಿ ಸಂಸತ್ತಿನೊಳಕ್ಕೆ ಜನರನ್ನು ಚುನಾಯಿತಗೊಳಿಸುವ ವಿಷಯ ಬಂದಾಗ, ನೀವು ದೇಶದ ಹೆಚ್ಚಿನ ಹಿತಾಸಕ್ತಿಗಳ ಮೇಲೆ ಗಮನ ಹರಿಸಬೇಕು. ಆದುದರಿಂದ ಸ್ವಲ್ಪ ನ್ಯೂನತೆಗಳಿರುವ ಒಬ್ಬ ಅಭ್ಯರ್ಥಿಯನ್ನು ನೀವು ನೋಡಿದರೆ, ಆಗ ಕೂಡಾ ಅದು ಪರವಾಗಿಲ್ಲ; ಅವನು ಸಮರ್ಥನಾಗಿಯೂ, ನೈತಿಕವಾಗಿ ನೆಟ್ಟಗಾಗಿಯೂ ಇರುವಲ್ಲಿಯವರೆಗೆ. ಇದು ಯಾಕೆಂದರೆ, ಒಬ್ಬ ಸಮರ್ಥ ನಾಯಕನಿಗೆ, ದೇಶದ ಸಮಸ್ಯೆಗಳನ್ನು ಒಂದು ಸರಿಯಾದ ರೀತಿಯಲ್ಲಿ ನಿರ್ವಹಿಸಲು ಸಾಧ್ಯವಾಗುವುದು. ನಿಮ್ಮ ರಾಜ್ಯದಲ್ಲಿನ ಚುನಾವಣೆಯ ವಿಷಯಕ್ಕೆ ಬಂದಾಗ, ನಿಮ್ಮ ಗಮನವು ಅಭ್ಯರ್ಥಿಯ ನಡತೆ ಹಾಗೂ ಸಾಧನೆಗಳ ಮೇಲೆ ಇರಬೇಕು. ಅವನು ಬಹಳ ಭ್ರಷ್ಟನಾಗಿದ್ದರೆ, ಆಗ ನೀವು ಅವನಿಗೆ ಅವನ ಯುಕ್ತವಾದ ಸ್ಥಳವನ್ನು ತೋರಿಸಬೇಕು.

ನಿಮ್ಮ ನಗರದ ಪುರಸಭೆಯನ್ನು ಚುನಾಯಿತಗೊಳಿಸುವ ವಿಷಯ ಬಂದಾಗ, ಅವರು ಯಾವುದೇ ಪಕ್ಷಕ್ಕೆ ಸೇರಿರಲಿ, ಒಳ್ಳೆಯ ನಡತೆ ಮತ್ತು ಒಂದು ಶುದ್ಧವಾದ ದಾಖಲೆಯಿರುವ ಒಬ್ಬ ವ್ಯಕ್ತಿಯನ್ನು ಮಾತ್ರ ನೀವು ಚುನಾಯಿಸಬೇಕು. ಇದು ಯಾಕೆಂದರೆ, ನಗರದ ಪುರಸಭೆಯು ನಗರದಲ್ಲಿ ನಿಮ್ಮ ರಸ್ತೆಗಳು, ನೀರಿನ ಪೂರೈಕೆ, ವಿದ್ಯುತ್ ಪೂರೈಕೆ, ಮೊದಲಾದಂತಹ ವಿಷಯಗಳಿಗಾಗಿ ಹಗಲು ರಾತ್ರಿ ಕೆಲಸ ಮಾಡಬೇಕಾಗುತ್ತದೆ. ಸಂಸತ್ತಿನ ಸದಸ್ಯರು ಅಥವಾ ರಾಜ್ಯ ವಿಧಾನಸಭಾ ಸದಸ್ಯರು ನಗರದ ಸಮಸ್ಯೆಗಳನ್ನು ನೋಡಿಕೊಳ್ಳಲು ಸಾಧ್ಯವಿಲ್ಲ. ಅಂತಹ ವಿಷಯಗಳನ್ನು ನೋಡಿಕೊಳ್ಳುವುದು ಪುರಸಭೆಯ ಅಧಿಕಾರಿಗಳು.
ಹೀಗಾಗಿ, ಆಡಳಿತದ ವಿವಿಧ ವೇದಿಕೆಗಳ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಚುನಾಯಿಸಲು ನೀವು ಬೇರೆ ಬೇರೆ ಅಳತೆಗೋಲುಗಳನ್ನು ಬಳಸಬೇಕು.

ಪ್ರಶ್ನೆ: ಗುರುದೇವ, ಇವತ್ತು ಯಾಕೆ ಜನರು ಆಧ್ಯಾತ್ಮ ಮತ್ತು ಹಾಗೆಯೇ ರಾಜಕೀಯದತ್ತಲೂ ಒಲಿಯುತ್ತಿದ್ದಾರೆ?

ಶ್ರೀ ಶ್ರೀ ರವಿ ಶಂಕರ್: ಜನರು ಹೆಚ್ಚು ಆಧ್ಯಾತ್ಮಿಕರಾಗುತ್ತಿರುವುದಾದರೆ, ಆಗ ಅದೊಂದು ಒಳ್ಳೆಯ ವಿಷಯ. ಇವತ್ತು ಸಮಾಜದಲ್ಲಿ ಅಷ್ಟೊಂದು ಸಮಸ್ಯೆಗಳಾಗುತ್ತಿರುವಾಗ, ಒಳ್ಳೆಯ ಹಾಗೂ ಆಧ್ಯಾತ್ಮಿಕ ಜನರು ಒಳಪ್ರವೇಶಿಸಿ ರಾಜಕೀಯ ಪಾತ್ರಗಳನ್ನು ಕೂಡಾ ವಹಿಸಬೇಕು. ಎರಡೂ ಬೇಕಾಗಿದೆ.

ಪ್ರಶ್ನೆ: ವೃತ್ತಿಪರವಾಗಿ ಮತ್ತು ಆಧ್ಯಾತ್ಮಿಕವಾಗಿ ಶಕ್ತಿ ಹಾಗೂ ಅಧಿಕಾರಗಳನ್ನು ಗಳಿಸುವುದು ಒಬ್ಬರಿಗೆ ಮನೆಯಲ್ಲಿ ತನ್ನ ಹೆತ್ತವರೊಂದಿಗೆ ದುರ್ವರ್ತಿಸುವ ಅಧಿಕಾರವನ್ನು ನೀಡುವುದೇ? ಅಂತಹ ಜನರನ್ನು ನೀವು ಅಂಗೀಕರಿಸುತ್ತೀರಾ? 

ಶ್ರೀ ಶ್ರೀ ರವಿ ಶಂಕರ್: ಇಲ್ಲ, ಇಲ್ಲವೇ ಇಲ್ಲ. ಈ ಪರಿಸ್ಥಿತಿಯಲ್ಲಿ ಹೆತ್ತವರು ಮತ್ತು ಮಕ್ಕಳು ಇಬ್ಬರೂ ಅರ್ಥಮಾಡಿಕೊಳ್ಳಬೇಕು ಮತ್ತು ಜಾಗರೂಕರಾಗಿರಬೇಕು.

ಹೆತ್ತವರಿಗೆ ನಾನು ನೀಡುವ ಸಲಹೆಯೆಂದರೆ, ಮಕ್ಕಳೊಂದಿಗೆ ಅತಿಯಾಗಿ ಕಟ್ಟುನಿಟ್ಟಾಗಿರಬೇಡಿ ಎಂದು. ನಮ್ಮ ಧರ್ಮಗ್ರಂಥಗಳಲ್ಲಿ ಏನು ಹೇಳಲಾಗಿದೆಯೋ ಅದನ್ನು ನೆನಪಿಸಿಕೊಳ್ಳಿ. ನೀತಿಶಾಸ್ತ್ರ ಮತ್ತು ಧರ್ಮಶಾಸ್ತ್ರಗಳಲ್ಲಿ ಹೀಗೆಂದು ಹೇಳಲಾಗಿದೆ, ’ಪ್ರಾಪ್ತೇತು ಷೋಡಷೇ ವರ್ಷೇ ಪುತ್ರಂ ಮಿತ್ರವದಾಚರೇತ್ ’.

ನಿಮ್ಮ ಮಗುವಿಗೆ ೧೬ ವರ್ಷ ವಯಸ್ಸಾಗುವಾಗ, ನೀವು ಅವರಿಗೆ ಒಬ್ಬ ಮಿತ್ರನಂತಿರಬೇಕು. ಹೀಗಾಗಿ, ನಿಮ್ಮ ಮಕ್ಕಳಿಗೆ ಸ್ವಲ್ಪ ಸ್ವಾತಂತ್ರ್ಯ ನೀಡಿ ಮತ್ತು ಅವರು ಮಾಡುವ ಪ್ರತಿಯೊಂದರಲ್ಲೂ ಅವರನ್ನು ಅತಿಯಾಗಿ ನಿಯಂತ್ರಿಸಲು ಪ್ರಯತ್ನಿಸಬೇಡಿ.
ಆದರೆ ಅತಿಯಾದ ಸ್ವಾತಂತ್ರ್ಯವನ್ನು ಕೂಡಾ ಕೊಡಬೇಡಿ. ನೀವವರಿಗೆ ಅತಿಯಾದ ಸ್ವಾತಂತ್ರ್ಯವನ್ನು ನೀಡಿದರೆ, ಆಗ ಭವಿಷ್ಯದಲ್ಲಿ ತಮ್ಮ ಅವಸ್ಥೆಗಾಗಿ ಅವರೇ ನಿಮ್ಮನ್ನು ದೂಷಿಸುವರು. ಅದು ಹೇಗೆಂದರೆ, ಒಂದು ಕುದುರೆಯ ಲಗಾಮನ್ನು ನೀವು ತುಂಬಾ ಬಿಗಿಯಾಗಿ ಹಿಡಿದುಕೊಂಡರೆ, ಕುದುರೆಗೆ ಓಡಲು ಸಾಧ್ಯವಾಗದು, ಮತ್ತು ನೀವದನ್ನು ಸಂಪೂರ್ಣವಾಗಿ ಸಡಿಲವಾಗಿಟ್ಟರೆ, ಆಗ ಕುದುರೆಯು ತನಗೆ ಬೇಕಾದಲ್ಲಿಗೆಲ್ಲಾ ಓಡುವುದು. ಆದುದರಿಂದ ಇಲ್ಲಿ ಮಧ್ಯದಾರಿಯನ್ನು ಸ್ವೀಕರಿಸಿ.

ವಿದ್ಯಮಾನ ನಿಮಿತ್ತ, ಪ್ರಕೃತಿ ಅನಂತ

ಎಪ್ರಿಲ್ ೪, ೨೦೧೪
ವಿದರ್ಭ, ಮಹಾರಾಷ್ಟ್ರ

ಒಂದು ಸರ್ವೋಚ್ಛ ಶಕ್ತಿಯಿದೆಯೆಂದೂ, ಮತ್ತು ನಾವೆಲ್ಲರೂ ಆ ದೈವಿಕ ಶಕ್ತಿಯ ಸಾಗರದಲ್ಲಿ ತೇಲುತ್ತಿರುವೆವೆಂದೂ ನಾವು ಯಾವಾಗಲೂ ನೆನಪಿನಲ್ಲಿಡಬೇಕು. ಅದು ನಮ್ಮೊಳಗೆ ಹಾಗೂ ನಮ್ಮ ಹೊರಗೆ ಎರಡು ಕಡೆಯೂ ಇದೆ.

ಈ ವಿಶ್ವಾಸವು ಒಳಗಿನಿಂದ ಉದಯಿಸುವಾಗ, ಪ್ರಪಂಚದಲ್ಲಿರುವ ಯಾವುದಕ್ಕೂ ನಮ್ಮನ್ನು ಅಲ್ಲಾಡಿಸಲು ಸಾಧ್ಯವಿಲ್ಲ. ನಮಗೆ ವಿಶ್ವಾಸ ಬಂದಾಗ, ಜೀವನವು ಅಷ್ಟೊಂದು ಹೆಚ್ಚಿನ ಆಂತರಿಕ ಶಕ್ತಿಯನ್ನು ಗಳಿಸುತ್ತದೆ.

ಒಬ್ಬ ವ್ಯಕ್ತಿಯು ಒಳಗಿನಿಂದ ಬಲಶಾಲಿಯಾಗುವಲ್ಲಿಯವರೆಗೆ ಮತ್ತು ಬಲಶಾಲಿಯಾಗದೆ, ಅವನು ಯಾವತ್ತೂ ಸಂತೋಷವಾಗಿರಲಾರ. ಅವನು ದುಃಖಿತನಾಗಿರುವುದು ಮತ್ತು ದಯನೀಯನಾಗಿರುವುದು ಮುಂದುವರಿಯುವುದು. ಹೀಗಾಗಿ ಒಳಗಿನಿಂದ ಶಕ್ತಿಶಾಲಿಯಾಗುವುದು ಬಹಳ ಮುಖ್ಯವಾಗಿದೆ. ಎಲ್ಲವನ್ನೂ ನೋಡಿಕೊಳ್ಳುತ್ತಿರುವ ಒಂದು ಸರ್ವೋಚ್ಛ ಶಕ್ತಿಯಿದೆ ಮತ್ತು ನಾವು ಯಾವತ್ತೂ ಒಬ್ಬಂಟಿಯಲ್ಲ ಎಂಬ ಈ ವಿಶ್ವಾಸದಿಂದ ಮಾತ್ರ ಆ ಆಂತರಿಕ ಶಕ್ತಿ ಬರಲು ಸಾಧ್ಯ.

’ದೇವರಿದ್ದಾರೆ ಮತ್ತು ಸದಾಕಾಲವೂ ನನ್ನನ್ನು ನೋಡಿಕೊಳ್ಳುತ್ತಿದ್ದಾರೆ’ ಎಂದು ನಂಬಿ. ಈ ನಂಬಿಕೆಯೊಂದಿಗೆ ನೀವು ನಿಮ್ಮಲ್ಲಿ ಬಹಳಷ್ಟು ಆತ್ಮವಿಶ್ವಾಸವನ್ನು ಕೂಡಾ ಪಡೆಯುವಿರಿ. ಆಗ ನೀವು, ’ಸೃಷ್ಟಿಯ ಸೃಷ್ಟಿಕರ್ತನು ನನ್ನೊಳಗೆ ವಾಸಿಸುತ್ತಿರುವಾಗ, ಜೀವನದಲ್ಲಿ ಚಿಕ್ಕಪುಟ್ಟ ಹಾಗೂ ಕ್ಷುಲ್ಲಕ ವಿಷಯಗಳಿಗಾಗಿ ಅಳುವುದು ಯಾಕೆ?’ ಎಂದು ಯೋಚಿಸುವಿರಿ. ಈ ವಿಶ್ವಾಸವು ನಮ್ಮೊಳಗೆ ಹೆಚ್ಚಿನ ಉತ್ಸಾಹ ಮತ್ತು ತಾಳ್ಮೆಯನ್ನು ತರುತ್ತದೆ.

ಪ್ರತಿಯೊಬ್ಬರ ಜೀವನದಲ್ಲೂ ಸಮಸ್ಯೆಗಳು ಬರುತ್ತವೆ. ಯಾರು ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸುವುದಿಲ್ಲ? ಕೃಷ್ಣ ಪರಮಾತ್ಮ, ಭಗವಾನ್ ರಾಮ, ಭಗವಾನ್ ಬುದ್ಧ ಮತ್ತು ಪ್ರವಾದಿ ಮೊಹಮ್ಮದ್- ಇವರೆಲ್ಲರೂ ತಮ್ಮ ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸಿದರು. ಆದರೆ ಸಮಸ್ಯೆಗಳ ಹೊರತಾಗಿಯೂ, ನೀವು ದೇವರಲ್ಲಿ ಈ ಸಂಪೂರ್ಣ ವಿಶ್ವಾಸವನ್ನು ಹೊಂದಿರುವಾಗ, ಯಾವುದೇ ಸಮಸ್ಯೆಯೂ ನಿಮಗೆ ನಿಜಕ್ಕೂ ಜಯಿಸಲಾರದಂತಹ ಒಂದು ಸಮಸ್ಯೆಯೆಂದು ಕಂಡುಬರುವುದಿಲ್ಲ.

ನಮ್ಮ ರೈತರಿಗೆ ತಾವು ಅಸಹಾಯಕರೆಂದು ಅನ್ನಿಸುವಂತೆ ಮಾಡಿದ, ಮಹಾರಾಷ್ಟ್ರದಲ್ಲಿ ನಡೆದ ಒಂದು ಘಟನೆಯ ಬಗ್ಗೆ ನನಗೆ ತಿಳಿದು ಬಂತು. ಒಂದು ಪ್ರಕೃತಿ ವಿಕೋಪದಿಂದಾಗಿ ಅವರ ಬೆಳೆಗಳು ನಾಶವಾದವು. ನೀವು ನಿಮ್ಮ ವಿಶ್ವಾಸವನ್ನು ಇಟ್ಟುಕೊಳ್ಳಬೇಕಾದುದು ಮತ್ತು ಆ ನಂಬಿಕೆಯಿಂದ ಇರಬೇಕಾದುದು ಈ ಸಮಯದಲ್ಲೇ.

ಇದರಿಂದಾಗಿ ಭರವಸೆಯನ್ನು ಮತ್ತು ಆಂತರಿಕ ಶಕ್ತಿಯನ್ನು ಕಳೆದುಕೊಳ್ಳಬೇಡಿರೆಂದು ನಾನು ರೈತರಲ್ಲಿ ಹೇಳಲು ಬಯಸುತ್ತೇನೆ. ನಡೆಯುವ ಘಟನೆಗಳಿಗಿಂತ ಜೀವನವು ಎಷ್ಟೋ ಹೆಚ್ಚಿನದು.

ಐದು ರೈತರು ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡರೆಂದು ನಾನು ಕೇಳಿದೆ. ಈ ವೇದಿಕೆಯ ಮೂಲಕ ರೈತರಿಗೆ, ನೀವು ಹೀಗೆ ಮಾಡಬಾರದೆಂಬ ಈ ಸಂದೇಶವನ್ನು ನೀಡಲು ನಾನು ಬಯಸುತ್ತೇನೆ. ನಂಬಿಕೆ ಮತ್ತು ವಿಶ್ವಾಸದೊಂದಿಗೆ ಸುಮ್ಮನೆ ಮುಂದೆ ಸಾಗಿ. ನಾವೆಲ್ಲರೂ ನಿಮ್ಮೊಂದಿಗಿದ್ದೇವೆ.

ದೇಶದಲ್ಲಿ ಆಧ್ಯಾತ್ಮಿಕತೆಯು ಬೆಳೆಯುವಾಗ, ಪ್ರಕೃತಿ ಕೂಡಾ ಸಂತೋಷವಾಗಿ ಹಾಗೂ ಶಾಂತವಾಗಿ ಇರುತ್ತದೆ. ಪ್ರಕೃತಿಯ ಈ ಕೋಪದ ಸ್ಪೋಟವಾಗುವುದು ಯಾಕೆಂದರೆ, ದೇಶದಲ್ಲಿ ಹೆಚ್ಚುತ್ತಿರುವ ಅನ್ಯಾಯ ಹಾಗೂ ಕೆಟ್ಟ ಕೆಲಸಗಳಿಂದಾಗಿ.

ಮಣ್ಣಿಗೆ ಹಾನಿಯುಂಟುಮಾಡುವುದನ್ನು, ನಮ್ಮ ದೇಶದ ವಾಯು ಹಾಗೂ ನೀರಿನ ಸಂಪನ್ಮೂಲಗಳ ಮಾಲಿನ್ಯವನ್ನು ನಾವು ಮುಂದುವರಿಸಿದರೆ, ಆಗ ಪ್ರಕೃತಿಯು ಕೋಪದಿಂದ ಪ್ರತಿಕ್ರಿಯಿಸುವುದನ್ನು ಮುಂದುವರಿಸುವುದು. ಇದರ ಫಲಿತಾಂಶವಾಗಿ ಇಂತಹ ವಿಪತ್ತುಗಳು ಉಂಟಾಗುವುದು.

ಕೇವಲ ಒಂದು ಪ್ಲಾಸ್ಟಿಕ್ ಚೀಲವನ್ನು ಸುಡುವುದರಿಂದ ಉತ್ಪಾದಿಸಲ್ಪಡುವ ವಿಷಕಾರಿ ಡಯಾಕ್ಸಿನ್‌ನ ಪ್ರಮಾಣವು, ೧೦೦೦ ಜನರಲ್ಲಿ ಕ್ಯಾನ್ಸರನ್ನು ಹುಟ್ಟುಹಾಕಲು ಸಾಕು ಎಂಬುದು ನಿಮಗೆ ತಿಳಿದಿತ್ತೇ? ನಾವು ನಮ್ಮ ವಾತಾವರಣದ ಬಗ್ಗೆ ಕಾಳಜಿ ವಹಿಸಬೇಕು ಮತ್ತು ಗಮನ ಹರಿಸಬೇಕು. ಸಾಧ್ಯವಾದಷ್ಟರ ಮಟ್ಟಿಗೆ ನಾವೆಲ್ಲರೂ ಪ್ಲಾಸ್ಟಿಕ್ ಉತ್ಪನ್ನಗಳ ಬಳಕೆಯನ್ನು ತಪ್ಪಿಸಲು ಪ್ರಯತ್ನಿಸಬೇಕು. ಇವತ್ತಿನ ಸಮಯದಲ್ಲಿ ಪ್ಲಾಸ್ಟಿಕ್ ಉತ್ಪನ್ನಗಳನ್ನು ಸಂಪೂರ್ಣವಾಗಿ ನಿಲ್ಲಿಸುವುದು ಕಷ್ಟ, ಆದರೆ ನಾವದನ್ನು ಸಾಧ್ಯವಿರುವಷ್ಟರ ಮಟ್ಟಿಗೆ ಕಡಿಮೆ ಮಾಡಲು ಖಂಡಿತವಾಗಿ ಪ್ರಯತ್ನಿಸಬಹುದು. ಪ್ಲಾಸ್ಟಿಕ್ ತ್ಯಾಜ್ಯವನ್ನು ನದಿಗಳಲ್ಲಿ ಎಸೆಯುವುದು ಅಥವಾ ಅವುಗಳನ್ನು ತೆರೆದ ಸ್ಥಳದಲ್ಲಿ ಸುಡುವುದನ್ನು ಖಂಡಿತವಾಗಿಯೂ ನಾವು ತಡೆಯಬೇಕು.
ಇವತ್ತು, ದೇಶದಲ್ಲಿನ ಪ್ರಾಣಿ ಕಸಾಯಿಖಾನೆಗಳ ಸಂಖ್ಯೆಯು ಬಹಳಷ್ಟು ಹೆಚ್ಚಾಗಿದೆ. ಭಾರತವು ಸ್ವತಂತ್ರವಾದಾಗ, ದೇಶದ ಒಟ್ಟು ಪ್ರಾಣಿ ಸಂಪತ್ತು ೧೨೦ ದಶಲಕ್ಷವಾಗಿತ್ತು ಹಾಗೂ ನಮ್ಮ ಜನಸಂಖ್ಯೆಯು ಕೇವಲ ೩೦ ದಶಲಕ್ಷವಾಗಿತ್ತು ಎಂಬುದು ನಿಮಗೆಲ್ಲರಿಗೂ ತಿಳಿದಿದೆಯೆಂದು ನನಗೆ ಖಾತ್ರಿಯಿದೆ.

ಆ ಸಮಯದಲ್ಲಿ, ಒಬ್ಬ ವ್ಯಕ್ತಿಯು ತನ್ನ ಮನೆಯಲ್ಲಿ ನಾಲ್ಕು ಹಸುಗಳನ್ನು ಹೊಂದಿದ್ದನು. ಇವತ್ತು ಸ್ಥಿತಿಯು ವಿರುದ್ಧವಾಗಿದೆ; ದೇಶದಲ್ಲಿನ ಜನಸಂಖ್ಯೆಯು ೧೨೦ ದಶಲಕ್ಷಗಳಿಗೆ ಏರಿದೆ ಮತ್ತು ನಮ್ಮ ಪ್ರಾಣಿ ಸಂಪತ್ತು ಕೇವಲ ೨೦ ದಶಲಕ್ಷಗಳಿಗೆ ಇಳಿದಿದೆ.
ಇದರಿಂದಾಗಿ ಭಾರತವು ಒಂದು ದೊಡ್ಡ ನಷ್ಟವನ್ನು ಅನುಭವಿಸಿದೆ. ಪ್ರತಿವರ್ಷವೂ ನಾವು ೬.೫ ಲಕ್ಷ ಟನ್ನುಗಳಷ್ಟು ಗೋಮಾಂಸವನ್ನು ರಫ್ತು ಮಾಡುತ್ತಿದ್ದೇವೆ. ಇದು ಹೀಗೇ ಮುಂದುವರಿದರೆ, ಹಾಲಿನ ಬಗ್ಗೆ ಕೇವಲ ಪುಸ್ತಕಗಳಲ್ಲಷ್ಟೇ ಓದುವ, ಆದರೆ ನಿಜಕ್ಕೂ ಅದನ್ನು ಕುಡಿಯಲು ಸಾಧ್ಯವಿಲ್ಲದಿರುವ ಒಂದು ದಿನ ಬರಲೂಬಹುದು. ನಮ್ಮ ಮುಂಬರುವ ಪೀಳಿಗೆಗಳಿಗೆ ಇದೊಂದು ಬಹಳ ದುರಂತದ ಪರಿಸ್ಥಿತಿಯಾಗಬಹುದು.

ನಿಮಗೆ ಗೊತ್ತಾ, ಒಂದು ಹಸುವು ಒಂದು ಎಕರೆಯಷ್ಟು ಜಮೀನನ್ನು ಫಲವತ್ತಾಗಿಸಲು ಸಾಕು. ನಮ್ಮ ಮಣ್ಣಿನಲ್ಲಿ ಹೈಡ್ರೋಕಾರ್ಬನ್ ಹಾಗೂ ನೈಟ್ರೋಕಾರ್ಬನ್‌ಗಳ ಶೇಕಡಾವಾರು ಬಹಳ ಕಡಿಮೆಯಾಗಿದೆಯೆಂಬುದು ನಿಮಗೆಲ್ಲರಿಗೂ ಗೊತ್ತಿದೆಯೇ? ಅಂತರರಾಷ್ಟ್ರೀಯ ಗುಣಮಟ್ಟದ ಪ್ರಕಾರ, ಒಂದು ಆರೋಗ್ಯಕರವಾದ ಫಲವತ್ತಾದ ಮಣ್ಣಿನಲ್ಲಿ ಬೇಕಾದ ಹೈಡ್ರೋಕಾರ್ಬನ್‌ನ ಪ್ರಮಾಣವು ಶೇ. ೬ ಎಂದು ಅಂದಾಜಿಸಲಾಗಿದೆ. ವಿದೇಶಗಳಲ್ಲಿ, ಈ ಪ್ರಮಾಣವು ಶೇ. ೪ ರಿಂದ ೫ರ ನಡುವೆಯಿದೆ. ಆದರೆ ಭಾರತದಲ್ಲಿ, ಮಣ್ಣಿನಲ್ಲಿನ ಇದರ ಪ್ರಮಾಣವು ಕೇವಲ ಶೇ. ೦.೨ ರಿಂದ ೦.೩ಕ್ಕೆ ಇಳಿದಿದೆ.
ರಕ್ತದಲ್ಲಿ ಕಬ್ಬಿಣದ ಅಂಶವು ಕಡಿಮೆಯಾಗುವುದರಿಂದ ನಮ್ಮಲ್ಲಿ ಅನೀಮಿಯಾ (ರಕ್ತಹೀನತೆ) ಉಂಟಾಗುವಂತೆಯೇ, ನಮ್ಮ ಭಾರತೀಯ ಮಣ್ಣು ಕೂಡಾ ಅಂತಹುದೇ ಒಂದು ಅನೀಮಿಯಾದಿಂದ ಬಳಲುತ್ತಿದೆ. ಇದು ಯಾಕೆ ಹೀಗೆ? ಇದು ಯಾಕೆಂದರೆ ನಾವು ನಮ್ಮ ಫಲವತ್ತಾದ ಮಣ್ಣುಗಳನ್ನು ವಿಷಕಾರಿ ರಾಸಾಯನಿಕಗಳು ಮತ್ತು ಕೃತಕ ಗೊಬ್ಬರಗಳಿಗೆ ಒಳಪಡಿಸುತ್ತಿದ್ದೇವೆ. ಇದು ನಮ್ಮ ರೈತರು ಎಚ್ಚೆತ್ತುಕೊಳ್ಳುವ ಸಮಯವಾಗಿದೆ! ರಾಸಾಯನಿಕ-ಮುಕ್ತ ಕೃಷಿ ತಂತ್ರಗಳನ್ನು ನಿಮ್ಮಲ್ಲಿ ಪ್ರತಿಯೊಬ್ಬರೂ ಸ್ವೀಕರಿಸಿಕೊಳ್ಳಬೇಕೆಂದು ನಾನು ಬಲವಾಗಿ ಕೇಳಿಕೊಳ್ಳುತ್ತೇನೆ.

ವಿದೇಶೀ ಬೀಜಗಳ ವಿಧಗಳನ್ನು ಹಾಗೂ ರಾಸಾಯನಿಕ ಕೃಷಿ ತಂತ್ರಗಳನ್ನು ಬಳಸಿ ಬೆಳೆಸಿದ ಗೋಧಿ ಸಸ್ಯವು ಸುಮಾರು ೫೦-೬೦ ಬೀಜಗಳನ್ನು ಹೊಂದಿದೆ, ಆದರೆ ಅದೇ ಗೋಧಿ ಸಸ್ಯವನ್ನು ಸ್ಥಳೀಯ ಭಾರತೀಯ ಬೀಜಗಳು ಮತ್ತು ಸಾವಯವ ಕೃಷಿ ವಿಧಾನಗಳನ್ನು ಬಳಸಿ ಬೆಳೆಸಿದಾಗ, ಅದರಲ್ಲಿ ಒಂದು ಸಸ್ಯದಲ್ಲಿ ೧೨೦ ಗೋಧಿ ಧಾನ್ಯದ ಬೀಜಗಳಿವೆ. ಸ್ಥಳೀಯ ಬೀಜದ ವಿಧಗಳನ್ನು ಮತ್ತು ರಾಸಾಯನಿಕ-ಮುಕ್ತ ಕೃಷಿಯನ್ನು ಬಳಸಿ, ಆರು ಅಡಿಗಳಷ್ಟು ಉದ್ದದ ಸೋರೆಕಾಯಿಗಳನ್ನು ಬೆಳೆಸಲು ರೈತರಿಗೆ ಸಾಧ್ಯವಾಗಿದೆ.

ಈ ಎಲ್ಲಾ ವಾಸ್ತವಗಳನ್ನು ನಿಮಗೆ ಹೇಳುವುದರಿಂದ, ನೀವೆಲ್ಲರೂ ರಾಸಾಯನಿಕ ಕೃಷಿ ತಂತ್ರಗಳನ್ನು ತ್ಯಜಿಸಬೇಕೆಂದು ನಾನು ನಿಮ್ಮಲ್ಲಿ ಕೇಳಿಕೊಳ್ಳಲು ಬಯಸುತ್ತೇನೆ ಹಾಗೂ ನಮ್ಮ ಸ್ಥಳೀಯ ಬೀಜದ ವಿಧಗಳು ಮತ್ತು ಸಾವಯವ ಕೃಷಿಯ ಒಳಿತಿನ ಬಗ್ಗೆ ನಿಮಗೆ ಭರವಸೆಯನ್ನು ಕೊಡಲು ಬಯಸುತ್ತೇನೆ.

ನಾವು ಯಾವಾಗಲೂ ನಮ್ಮ ಹೊಲಗಳಲ್ಲಿ ಬಹುದಳ ಧಾನ್ಯಗಳನ್ನು ಬಿತ್ತುತ್ತಿದ್ದೆವು, ಅಂದರೆ, ಒಂದೇ ಭೂಮಿಯ ತುಂಡಿನಲ್ಲಿ ನಾವು ಎರಡು ಅಥವಾ ಮೂರು ವಿವಿಧ ಫಸಲುಗಳನ್ನು ಬೆಳೆಯುತ್ತಿದ್ದೆವು. ಇದರಿಂದ ಮಣ್ಣು ಆರೋಗ್ಯಕರವಾಗಿಯೂ ಫಲವತ್ತಾಗಿಯೂ ಇರುವಂತೆ ಹಾಗೂ ಒಂದು ಆರೋಗ್ಯವಂತ ಬೆಳೆ ಬೆಳೆಯುವಂತೆ ಕೂಡಾ ಇದು ನೋಡಿಕೊಳ್ಳುತ್ತಿತ್ತು.
ಹಾಗೆಯೇ, ಒಂದು ಬೆಳೆಯು ನಾಶವಾದರೂ, ನಮ್ಮ ಸ್ವಂತ ಆವಶ್ಯಕತೆಗಳಿಗೆ  ಬೇಕಾದಷ್ಟು ಇತರ ಎರಡು ಬೆಳೆಗಳಿಂದ ಸಿಗುತ್ತಿತ್ತು.

ಎಲ್ಲಿ ಮಾನವ ಶಕ್ತಿ ಮತ್ತು ಸಂಪನ್ಮೂಲಗಳ ಕೊರತೆಯಿರುವುದೋ ಅಂತಹ ಸ್ಥಳಗಳಲ್ಲಿ ಈ ಏಕ ಬೆಳೆ ವಿಧಾನಗಳು (ನೆಲದಿಂದ ಕೇವಲ ಒಂದು ರೀತಿಯ ಬೆಳೆಯನ್ನು ಪಡೆಯುವುದು ಅಥವಾ ನೆಡುವುದು) ಬಳಸಲ್ಪಡುತ್ತವೆ. ನಮ್ಮ ಭಾರತೀಯ ಮಣ್ಣಿಗೆ ಇದು ಸೂಕ್ತವೇ ಅಲ್ಲ.

ನೈಸರ್ಗಿಕ ವಿಪತ್ತುಗಳು ಸಂಭವಿಸುವುದನ್ನು ನಾವು ತಡೆಗಟ್ಟಬೇಕಾದರೆ, ಎಲ್ಲೆಡೆಯೂ ನಿಯಮಿತವಾಗಿ ಸತ್ಸಂಗಗಳು ನಡೆಯುವಂತೆ ನಾವೆಲ್ಲರೂ ನೋಡಿಕೊಳ್ಳಬೇಕೆಂದು ಮತ್ತೊಮ್ಮೆ ನಾನು ನಮ್ಮ ದೇಶದ ರೈತರಲ್ಲಿ ಕೇಳಿಕೊಳ್ಳುತ್ತೇನೆ. ನಮ್ಮ ಹೊಲಗಳು ಮತ್ತು ಹಳ್ಳಿಗಳಲ್ಲಿ ಪವಿತ್ರ ಮಂತ್ರಗಳ ಪಠಣ ಮಾಡುವುದನ್ನು ನಾವು ಪ್ರೋತ್ಸಾಹಿಸಬೇಕು.

ನಮ್ಮ ಧರ್ಮಗ್ರಂಥಗಳಲ್ಲಿ ಇದನ್ನು ಶಿಫಾರಸು ಮಾಡಲಾಗಿದೆ ಮತ್ತು ಇದನ್ನು ನಾನು ನನ್ನ ಸ್ವಂತ ಅನುಭವದಿಂದ ನೋಡಿದ್ದೇನೆ. ಎಲ್ಲೆಲ್ಲಾ ’ರುದ್ರಂ’ ಹಾಗೂ ಇತರ ಮಂತ್ರಗಳ ಪಠಣ ಮಾಡಲಾಗುವುದೋ, ಅಲ್ಲಿ ಪರಿಸರವು ಬಹಳ ಧನಾತ್ಮಕವಾದ ಕಂಪನಗಳಿಂದ ಶಕ್ತಿಯುತವಾಗುತ್ತದೆ ಮತ್ತು ಅದರ ಫಲವಾಗಿ ಬೆಳೆಗಳು ಆರೋಗ್ಯವಂತವಾಗಿಯೂ, ಹಾಗೆಯೇ ಸಮೃದ್ಧವಾಗಿಯೂ ಇರುತ್ತವೆ.

ನಿಮಗೆ ಗೊತ್ತಾ, ದಕ್ಷಿಣ ಅಮೇರಿಕಾಗಳಂತಹ ದೇಶಗಳು, ತ್ರಯಂಬಕಂ ಹೋಮ ಮತ್ತು ಅಗ್ನಿಹೋತ್ರಗಳಂತಹ ನಮ್ಮ ಪ್ರಾಚೀನ ತಂತ್ರಗಳನ್ನು ಸ್ವೀಕರಿಸಿವೆ. ಅವರದನ್ನು ತಮ್ಮ ಬೇಸಾಯದಲ್ಲಿ ಪ್ರಯೋಜನಕಾರಿಯಾಗಿ ಬಳಸುತ್ತಿದ್ದಾರೆ. ನಾವು ಯಾಕೆ ಹಿಂದೆ ಬೀಳಬೇಕು ಹಾಗೂ ಅದನ್ನೇ ಯಾಕೆ ಅಂಗೀಕರಿಸಬಾರದು? ಇದು ನಮ್ಮ ಸ್ವಂತ ಸಾಂಸ್ಕೃತಿಕ ಪರಂಪರೆಯಾಗಿದೆ.

ಭರವಸೆಯನ್ನು ಕಳಕೊಳ್ಳಬಾರದೆಂದೂ ಧೈರ್ಯಗುಂದಬೇಡಿರೆಂದೂ ನಾನು ಇಲ್ಲಿರುವ ರೈತರಲ್ಲಿ ಕೇಳಿಕೊಳ್ಳುತ್ತೇನೆ. ಇವತ್ತು ಕೂಡಾ ನಮ್ಮ ದೇಶದಲ್ಲಿ ಬಹಳಷ್ಟು ಮಾನವೀಯತೆಯಿದೆ. ನೀವು ಆತ್ಮಹತ್ಯೆ ಮಾಡಿಕೊಳ್ಳಬೇಕಾಗಿಲ್ಲ.

ಯಾರಿಗಾದರೂ ಆತ್ಮಹತ್ಯೆಯ ಯೋಚನೆ ಬರುತ್ತಿರುವುದಾದರೆ, ಅವರನ್ನು ನಮ್ಮ ಆರ್ಟ್ ಆಫ್ ಲಿವಿಂಗ್ ಶಿಕ್ಷಕರ ಬಳಿಗೆ ಕರೆದುಕೊಂಡು ಹೋಗಿ ಅಥವಾ ಅವರನ್ನು ಬಂದು ಭೇಟಿಯಾಗುವಂತೆ ನಮ್ಮ ಆರ್ಟ್ ಆಫ್ ಲಿವಿಂಗ್ ಶಿಕ್ಷಕರಲ್ಲಿ ಕೇಳಿಕೊಳ್ಳಿ. ಕೇವಲ ಎರಡೇ ದಿನಗಳಲ್ಲಿ ಅವರು ಅವರನ್ನು ಗುಣಪಡಿಸುವರು. ವಾಸ್ತವವಾಗಿ ಎರಡು ದಿನಗಳೂ ಅಲ್ಲ, ಅವರದನ್ನು ಕೇವಲ ಒಂದೇ ದಿನದಲ್ಲಿ ಮಾಡುವರೆಂದು ನಾನು ಹೇಳುತ್ತೇನೆ.

ಮೊದಲು ಕೂಡಾ, ಇಲ್ಲಿ ಮಹಾರಾಷ್ಟ್ರದಲ್ಲಿ, ವಿದರ್ಭ ಪ್ರದೇಶದ ಭಾಗದಲ್ಲಿ ರೈತರ ಆತ್ಮಹತ್ಯೆಯ ಹಲವಾರು ಘಟನೆಗಳಾಗಿದ್ದವು. ನಮ್ಮ ಆರ್ಟ್ ಆಫ್ ಲಿವಿಂಗ್ ಶಿಕ್ಷಕರು ಕಾರ್ಯನಿರತರಾದರು ಮತ್ತು ಅಲ್ಲಿನ ರೈತರ ಪರಿಸ್ಥಿತಿಯನ್ನು ಸುಧಾರಿಸಲು ೧೧೮ ಹಳ್ಳಿಗಳಲ್ಲಿ ಕೆಲಸ ಮಾಡಿದರು.

ಅವರ ಒಳ್ಳೆಯ ಪ್ರಯತ್ನಗಳಿಗಾಗಿ ನಾನು ಅವರೆಲ್ಲರನ್ನು ಅಭಿನಂದಿಸಲು ಬಯಸುತ್ತೇನೆ. ಆ ಎಲ್ಲಾ ಹಳ್ಳಿಗಳು ಈಗ ಬಹಳ ಚೆನ್ನಾಗಿವೆಯೆಂದು ಹಾಗೂ ಅದರ ನಂತರ ಆ ಹಳ್ಳಿಗಳಲ್ಲಿ ಯಾವುದೇ ಆತ್ಮಹತ್ಯೆಯ ಘಟನೆಗಳು ನಡೆದಿಲ್ಲವೆಂದು ನನಗೆ ತಿಳಿದು ಬಂತು.

ಆತ್ಮಹತ್ಯೆಗಳನ್ನು ಮತ್ತು ಅಪರಾಧಗಳನ್ನು ನಿಲ್ಲಿಸುವ ಶಕ್ತಿಯಿರುವುದು ಆಧ್ಯಾತ್ಮಿಕತೆಗೆ ಮಾತ್ರ.  

ಮಂಗಳವಾರ, ಏಪ್ರಿಲ್ 1, 2014

ನಮ್ಮನ್ನು ಕುಗ್ಗಿಸುವ ಕಾರಣಗಳಿವು

ಎಪ್ರಿಲ್ ೧, ೨೦೧೪
ಬೆಂಗಳೂರು, ಭಾರತ

ಜ್ಞಾನವು ನಮ್ಮ ಮನಸ್ಸನ್ನು ಶುದ್ಧೀಕರಿಸುತ್ತದೆ ಮತ್ತು ಶಾಂತಿಯನ್ನು ತರುತ್ತದೆ. ಸಂತೋಷವಾಗಿರಿ ಮತ್ತು ಇತರರಲ್ಲಿ ತಪ್ಪುಗಳನ್ನು ಹುಡುಕುತ್ತಾ ಇರಬೇಡಿ.

ಇವತ್ತು ನಿಶ್ಚಿತಾರ್ಥವಾದವರಿಗೆ ನನ್ನ ಸಲಹೆಯಿದೆ. ನಿಮ್ಮ ಪ್ರೀತಿಪಾತ್ರರ ಪ್ರೇಮದ ಬಗ್ಗೆ ಯಾವತ್ತೂ ಪ್ರಶ್ನೆ ಮಾಡಬೇಡಿ. "ನೀನು ನನ್ನನ್ನು ಎಷ್ಟು ಪ್ರೀತಿಸುವೆ?" ಎಂದು ಅವರಲ್ಲಿ ಕೇಳಬೇಡಿ. ಅವರ ಪ್ರೀತಿಯು ಸ್ವಲ್ಪ ಕಡಿಮೆಯೆಂದು ನಿಮಗೆ ಕಂಡುಬಂದರೆ, ಆಗ ಅವರಲ್ಲಿ, "ನೀನು ಯಾಕೆ ನನ್ನನ್ನು ಅಷ್ಟೊಂದು ಪ್ರೀತಿಸುವೆ?" ಎಂದು ಹೇಳಿ.

ನೆನಪಿನಲ್ಲಿಡಿ, ಬೇಡಿಕೆಯು ಪ್ರೀತಿಯನ್ನು ನಾಶಪಡಿಸುತ್ತದೆ. ಆದುದರಿಂದ ಯಾವತ್ತೂ ಬೇಡಿಕೆಯನ್ನೊಡ್ಡಬೇಡಿ. ನೀವಿಲ್ಲಿರುವುದು ಕೇವಲ ಕೊಡಲು ಮಾತ್ರ.

ಸಂಬಂಧದಲ್ಲಿರುವ ಇಬ್ಬರು ಸಂಗಾತಿಗಳೂ ಅದನ್ನು ನೆನಪಿನಲ್ಲಿಡಬೇಕು, ಸಂಗಾತಿಗೆ ನನ್ನನ್ನು ೧೦೦% ಕೊಡಲು ನಾನಿಲ್ಲಿದ್ದೇನೆ. ನೀವಿದನ್ನು ಮಾಡಿದರೆ, ಆಗ ಸಂಬಂಧವು ಆರೋಗ್ಯಕರವಾಗಿಯೂ ದೀರ್ಘಕಾಲ ಉಳಿಯುವಂತಹುದೂ ಆಗಿರುವುದನ್ನು ನೀವು ಕಾಣುವಿರಿ.

ಬದಲಾಗಿ, ನಾವೇನು ಮಾಡುತ್ತೇವೆ? ನಾವು ಬೇಡಿಕೆಯನ್ನೊಡ್ಡುತ್ತಾ ಇರುತ್ತೇವೆ ಮತ್ತು "ನೀನು ಯಾಕೆ ನನಗೆ ಇದನ್ನು ಮಾಡಲಿಲ್ಲ?" ಎಂದು ಕೇಳುತ್ತಾ ಇರುತ್ತೇವೆ. ನೀವು ಯಾವುದಕ್ಕಾದರೂ ಬೇಡಿಕೆಯನ್ನೊಡ್ಡಿದರೆ, ಪ್ರೀತಿಯು ಕಡಿಮೆಯಾಗತೊಡಗುತ್ತದೆ. ಆದುದರಿಂದ, ಬೇಡಿಕೆಯನ್ನೊಡ್ಡುವುದಲ್ಲ, ಕೇವಲ ಪರಸ್ಪರರಿಗೆ ಸಹಯೋಗ ನೀಡುವುದು.
ನನಗೇನೂ ಬೇಡ, ನಾನು ಕೇವಲ  ಸಹಯೋಗ ನೀಡಲು ಮಾತ್ರ ಬಯಸುತ್ತೇನೆ ಎಂಬ ಭಾವನೆಯೊಂದಿಗೆ ಹೋಗಿ. ನನ್ನ ಜೀವನವಿರುವುದು ಕೊಡಲು. ಈ ಮನೋಭಾವದೊಂದಿಗೆ ನೀವು ಒಂದು ಸಂಬಂಧವನ್ನು ಪ್ರವೇಶಿಸಿದರೆ, ನಿಮಗೆ ನಿಮ್ಮ ಜೀವನದಲ್ಲಿ ಒಂದು ದೊಡ್ಡ ವ್ಯತ್ಯಾಸವು ಕಂಡುಬರುವುದು.

ಪ್ರಶ್ನೆ: ಜನ್ಮಾಂತರಗಳ ನಡುವೆ ಕೂಡಾ ಮನಸ್ಸು, ತನ್ನ ವಿಕಾಸದ ಪ್ರಕ್ರಿಯೆಯನ್ನು ಮುಂದುವರಿಸಬಲ್ಲದೇ? ತನ್ನ ವಿಕಾಸಕ್ಕಾಗಿ ಅದಕ್ಕೆ ಒಂದು ಶರೀರ ಹಾಗೂ ಪರಿಸ್ಥಿತಿಗಳ ಅಗತ್ಯವಿದೆಯೇ?

ಶ್ರೀ ಶ್ರೀ ರವಿ ಶಂಕರ್: ಹೌದು, ಅದಕ್ಕೊಂದು ಶರೀರದ ಅಗತ್ಯವಿದೆ. ಮಾನವ ಶರೀರವು ಬಹಳ ಅಮೂಲ್ಯವಾದುದು ಅದಕ್ಕಾಗಿಯೇ.

ನಿಮಗೆ ಗೊತ್ತಾ, ದೈನಂದಿನ ಜೀವನದಲ್ಲಿ, ನೀವು ಕೆಲಸಗಳನ್ನು ಮಾಡುವಾಗ ಕೆಲವೊಮ್ಮೆ ನೀವು ಶಕ್ತಿಯನ್ನು ಕಳೆದುಕೊಳ್ಳುತ್ತೀರಿ. ಶಕ್ತಿಯು ಕಡಿಮೆಯಾಗುವಾಗ, ಮನಸ್ಸು ಕೂಡಾ ಶಕ್ತಿಗುಂದುತ್ತದೆ. ನಿಮಗೆ ಈ ಅನುಭವವಾಗಿಲ್ಲವೇ?

(ಸಭಿಕರು ’ಹೌದು’ ಎನ್ನುತ್ತಾರೆ)

ಕೆಲವೊಮ್ಮೆ ನಿಮಗೆ ಅಚ್ಚರಿಯಾಗುತ್ತದೆ, ನನ್ನ ಮನಸ್ಸು ಯಾಕೆ ಶಕ್ತಿಗುಂದುತ್ತಿದೆ? ಎಂದು. ಹಲವು ಜನರು ಈ ಪ್ರಶ್ನೆಯನ್ನು ಕೇಳುತ್ತಾರೆ.

’ನನಗೆ ಬಹಳ ಖಿನ್ನವಾದಂತೆ ಹಾಗೂ ಶಕ್ತಿಗುಂದಿದಂತೆ ಅನ್ನಿಸುತ್ತಿದೆ. ಯಾವುದೂ ಆಸಕ್ತಿಕರವಾಗಿ ಅನ್ನಿಸುತ್ತಿಲ್ಲ’ ಎಂದು ನೀವು ಯೋಚಿಸುತ್ತೀರಿ. ಒಂದು ರೀತಿಯ (ಮಾನಸಿಕ) ಶಕ್ತಿಹೀನತೆ ಆಗುತ್ತದೆ ನಿಮಗೆ. ಇದಾಗುವುದು ಕೆಲವು ಕಾರಣಗಳಿಂದಾಗಿ:

ಕಾರಣಗಳಲ್ಲಿ ಒಂದು ಸಮಯವಾಗಿದೆ. ಪ್ರತಿಯೊಬ್ಬರ ಜೀವನಚಕ್ರದಲ್ಲಿ ಒಂದು ನಿರ್ದಿಷ್ಟವಾದ ಸಮಯವಿರುತ್ತದೆ. ಆಗ ಯಾವುದೇ ನಿರ್ದಿಷ್ಟ ಕಾರಣವಿಲ್ಲದೆಯೇ ಮನಸ್ಸಿನ ಶಕ್ತಿಯು ಕುಂದುತ್ತದೆ.

ಎರಡನೆಯ ಕಾರಣವೆಂದರೆ, ಅತಿಯಾಗಿ ಚಿಂತಿಸುವುದು ಮತ್ತು ಹಲವಾರು ಬಯಕೆಗಳು. ಮನಸ್ಸು ಮಹತ್ವಾಕಾಂಕ್ಷೆ ಮತ್ತು ಹಲವಾರು ಬಯಕೆಗಳಿಂದ ಮುಚ್ಚಿ ಹೋಗಿರುವಾಗ, ಅದು ಖಂಡಿತವಾಗಿಯೂ ಖಿನ್ನತೆಯನ್ನುಂಟುಮಾಡುವುದು.
ಮನಸ್ಸು ತನ್ನೆಲ್ಲಾ ಶಕ್ತಿಯನ್ನು ಕೇವಲ ಯೋಚಿಸುವುದರಲ್ಲಿ, ಕನಸು ಕಾಣುವುದರಲ್ಲಿ ಮತ್ತು ಅದಕ್ಕಾಗಿ ಇದಕ್ಕಾಗಿ ಆಸೆ ಪಡುವುದರಲ್ಲೇ ಕಳೆದುಕೊಳ್ಳುತ್ತದೆ. ಇದರಿಂದಾಗಿ ಅದು ಶಕ್ತಿಗುಂದುತ್ತದೆ.

ಹೀಗಾಗಿ ಹಲವಾರು ಬಯಕೆಗಳಿರುವುದು ಮನಸ್ಸು ಶಕ್ತಿಗುಂದುವುದಕ್ಕೆ ಕಾರಣವಾಗುತ್ತದೆ. ಅದಕ್ಕಾಗಿಯೇ ಖಿನ್ನತೆಯನ್ನು ವಿರೋಧಿಸಲು ವೈರಾಗ್ಯವು ಆವಶ್ಯಕ. ನಿಮ್ಮಲ್ಲಿ ವೈರಾಗ್ಯವಿದ್ದರೆ, ನೀವು ಖಿನ್ನರಾಗಿರಲು ಸಾಧ್ಯವಿಲ್ಲ. ವೈರಾಗ್ಯದ ಕೊರತೆಯು ಖಿನ್ನತೆಯನ್ನುಂಟುಮಾಡುತ್ತದೆ. ಹೀಗೆ, ಮಹತ್ವಾಕಾಂಕ್ಷೆ ಮತ್ತು ಹಲವಾರು ಬಯಕೆಗಳು ನಿಮ್ಮ ಮನಸ್ಸಿನ ಶಕ್ತಿಯನ್ನು ಬರಿದುಮಾಡುತ್ತವೆ ಮತ್ತು ನೀವು ಖಿನ್ನತೆಯನ್ನು ಅನುಭವಿಸುತ್ತೀರಿ.

ಮೂರನೆಯ ಕಾರಣವೆಂದರೆ, ಶರೀರದಲ್ಲಿ ಶಕ್ತಿ ಕಡಿಮೆಯಿರುವಾಗ; ಶರೀರವು ಬಲಹೀನವಾಗಿರುವಾಗ. ನಿಮ್ಮಲ್ಲಿ ಅಷ್ಟೊಂದು ಶಕ್ತಿಯಿಲ್ಲದಿರುವಾಗ ಅಥವಾ ನೀವು ರೋಗಪೀಡಿತರಾಗಿರುವಾಗ ಮನಸ್ಸು ಶಕ್ತಿಗುಂದುತ್ತದೆ.

ದೇಹದ ಕ್ಷಮತೆ, ಶಕ್ತಿ ಮತ್ತು ದ್ರವಗಳಿಗೆ ಸಂಬಂಧಿಸಿಕೊಂಡು, ಮನಸ್ಸು ಶಕ್ತಿಗುಂದುತ್ತದೆ. ಅದು ಯಾವುದಾದರೂ ರೋಗದ ಮೂಲಕ ಆಗಬಹುದು ಅಥವಾ ಒಂದು ತಪ್ಪು ಆಹಾರದ ಕಾರಣದಿಂದ ಆಗಬಹುದು. ಕೆಲವೊಮ್ಮೆ ನೀವು, ನಿಮ್ಮ ಶರೀರಕ್ಕೆ ಸರಿಹೊಂದದ ಯಾವುದಾದರೂ ಆಹಾರವನ್ನು ತಿನ್ನುತ್ತೀರಿ ಅಥವಾ ನೀವು ಅತಿಯಾಗಿ ತಿನ್ನುತ್ತೀರಿ. ಆಗ ಕೂಡಾ ನಿಮಗೆ ಖಿನ್ನತೆಯುಂಟಾಗುತ್ತದೆ, ಮತ್ತು ಇದೊಂದು ವಿಷವರ್ತುಲವಾಗಿದೆ. ಖಿನ್ನರಾಗಿರುವುದರಿಂದ ಜನರು ಹೆಚ್ಚು ತಿನ್ನುತ್ತಾರೆ, ಮತ್ತು ಅವರು ಹೆಚ್ಚು ತಿಂದುದರಿಂದಾಗಿ ಅವರು ಖಿನ್ನರಾಗುತ್ತಾರೆ.

ಹೀಗಾಗಿ, ನಿಮಗೆ ಶಕ್ತಿ ಕಡಿಮೆಯಾದಂತೆ ಅನ್ನಿಸಿದರೆ, ಅಥವಾ ಖಿನ್ನತೆಯುಂಟಾದರೆ, ಕೆಲವು ದಿನಗಳ ಕಾಲ ನಿಮ್ಮನ್ನು ಆಹಾರದಿಂದ ತುಂಬಿಸುವುದನ್ನು ನಿಲ್ಲಿಸಿ. ಯಾವುದಾದರೂ ಲಘು ಆಹಾರ ಅಥವಾ ಹಣ್ಣುಗಳನ್ನು ತಿನ್ನಿ, ಮತ್ತು ಇದ್ದಕ್ಕಿದ್ದಂತೆ ನಿಮ್ಮ ಶಕ್ತಿಯು ಮೇಲೇರುವುದು ನಿಮ್ಮ ಅನುಭವಕ್ಕೆ ಬರುತ್ತದೆ.

ಅತಿಯಾಗಿ ಉಪವಾಸ ಮಾಡಬೇಡಿ, ಅದು ಕೂಡಾ ಒಳ್ಳೆಯದಲ್ಲ. ಒಂದು ನಿರ್ದಿಷ್ಟ ಮಿತಿಯವರೆಗೆ ಉಪವಾಸ ಒಳ್ಳೆಯದು.
ಹೀಗೆ, ಲಘು ಆಹಾರವನ್ನು ತಿನ್ನುವುದು, ಮಾನಸಿಕ ಶಕ್ತಿಯನ್ನು ಮೇಲೆತ್ತುವಲ್ಲಿ ಸಹಾಯಕವಾಗಿದೆ.

ಇದರ ಬಗ್ಗೆ ನಿಮ್ಮಲ್ಲಿ ಅರಿವಿರಬೇಕು. ನಿಮಗೆ ಏಕಾಂಗಿತನದ ಅಥವಾ ಖಿನ್ನತೆಯ ಭಾವನೆಯುಂಟಾಗುವಾಗ, ಹೆಚ್ಚು ಆಹಾರವನ್ನು ನಿಮ್ಮೊಳಗೆ ತುಂಬಿಸಿಕೊಳ್ಳುವ ಪ್ರವೃತ್ತಿ ನಿಮ್ಮಲ್ಲಿರುತ್ತದೆ, ಮತ್ತು ನೀವು ಹೆಚ್ಚು ಆಹಾರವನ್ನು ತಿಂದಷ್ಟೂ ನಿಮಗೆ ಹೆಚ್ಚು ಖಿನ್ನತೆಯುಂಟಾಗುತ್ತದೆ. ನಿಮಗೆ ಖಿನ್ನತೆಯುಂಟಾದುದರಿಂದಾಗಿ ನೀವು ತಿನ್ನುತ್ತಾ ಇರುತ್ತೀರಿ, ಹೀಗೆ ನೀವೊಂದು ವಿಷವರ್ತುಲದಲ್ಲಿ ಸಿಕ್ಕಿಹಾಕಿಕೊಳ್ಳುತ್ತೀರಿ.

ನೀವು ಆಹಾರದ ಕಡೆಗೆ ಗಮನ ಹರಿಸಿ, ಸರಿಯಾದ ಪ್ರಮಾಣದ ಆಹಾರವನ್ನು ಮತ್ತು ಸರಿಯಾದ ರೀತಿಯ ಆಹಾರವನ್ನು ಸರಿಯಾದ ಸಮಯದಲ್ಲಿ ತಿಂದರೆ, ಆಗ ಮನಸ್ಸಿನ ಶಕ್ತಿಯು ಹೆಚ್ಚಾಗಬಲ್ಲದು. ಅದು ಖಿನ್ನತೆಯನ್ನು ವಿರೋಧಿಸುವ ಇನ್ನೊಂದು ಮಾರ್ಗವಾಗಿದೆ.

ನಾಲ್ಕನೆಯ ಕಾರಣವೆಂದರೆ, ಸಂಪೂರ್ಣ ಕ್ರಿಯಾಶೂನ್ಯತೆ. ನೀವು ಅತಿಯಾಗಿ ಕ್ರಿಯಾಶೀಲರಾಗಿದ್ದರೆ, ಆಗ ನಿಮಗೆ ಖಿನ್ನತೆಯುಂಟಾಗುತ್ತದೆ. ಅಥವಾ ನೀವು ಸಂಪೂರ್ಣವಾಗಿ ಕ್ರಿಯಾಶೂನ್ಯರಾಗಿದ್ದರೆ, ಮತ್ತು ಏನನ್ನೂ ಮಾಡದಿದ್ದರೆ; ಅಥವಾ ಇತರರಿಗಾಗಿ ಏನನ್ನಾದರೂ ಮಾಡುವ ಒಂದು ಗುರಿ ಅಥವಾ ಒಂದು ಕನಸಿಲ್ಲದೆಯೇ, ನಿಮಗಾಗಿ ಮಾತ್ರ ಕೆಲಸ ಮಾಡಿದರೆ (ಸೇವಾ ಮನೋಭಾವದ ಕೊರತೆ), ಅದು ಖಂಡಿತವಾಗಿಯೂ ಖಿನ್ನತೆಯನ್ನು ತರುತ್ತದೆ.

ಹಿಂದಿನ ಕಾಲದಲ್ಲಿ, ಆಶ್ರಮಗಳಲ್ಲಿ, ಜನರನ್ನು ಯಾವಾಗಲೂ ಯಾವುದಾದರೂ ಸೇವೆಯನ್ನು ಮಾಡುವಂತೆ ಪ್ರೇರೇಪಿಸುತ್ತಿದ್ದುದು ಅದಕ್ಕಾಗಿಯೇ. ಕೊಳೆಗೇರಿಗೆ ಹೋಗಿ, ನೆಲವನ್ನು ಗುಡಿಸಿ ಅಥವಾ ಗಿಡಗಳಿಗೆ ನೀರೆರೆಯಿರಿ ಮತ್ತು ಎಲ್ಲವನ್ನೂ ಅಚ್ಚುಕಟ್ಟಾಗಿರಿಸಿ.

ನಿಮ್ಮನ್ನು ವ್ಯಸ್ತರನ್ನಾಗಿರಿಸಿ. ನೀವು ನಿಮ್ಮನ್ನು ಯಾವುದಾದರೂ ಕೆಲಸದಲ್ಲಿ ತೊಡಗಿಸಿಕೊಂಡಿದ್ದರೆ, ಅದು ಕೂಡಾ ಖಿನ್ನತೆಯನ್ನು ತಡೆಯುವ ಇನ್ನೊಂದು ಮಾರ್ಗವಾಗಿದೆ.  

ಹೀಗೆ ಇಲ್ಲಿ, ಅತಿಯಾಗಿ ಬಹಿರ್ಗಾಮಿಯಾಗಿರುವ ಒಬ್ಬನು ಅಥವಾ ಶಾರೀರಿಕವಾಗಿ ಯಾವುದೇ ಕೆಲಸವನ್ನು ಮಾಡದೇ, ಯಾವತ್ತೂ ಕುಳಿತುಕೊಂಡು ಮಾನಸಿಕ ಸರ್ಕಸ್ಸಿನಲ್ಲಿ ತೊಡಗಿರುವ ಒಬ್ಬನು ಖಿನ್ನತೆಗೊಳಗಾಗುತ್ತಾನೆ. ಹೀಗಾಗಿ, ಅದರಿಂದ ಹೊರಬರಲು ಮಧ್ಯದ ದಾರಿಯು ಸರಿಯಾದ ಮಾರ್ಗವಾಗಿದೆ. ಕಾಲಕಾಲಕ್ಕೆ ಆಳವಾದ ಧ್ಯಾನಕ್ಕೆ ಹೋಗಿ, ಮತ್ತು ನಂತರ ಹೊರಬಂದು, ’ಇದರಿಂದ ನನಗೇನು ಸಿಗುವುದು’ ಎಂದು ಯೋಚಿಸದೆಯೇ ಕೆಲಸದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಿ.
ಪ್ರಪಂಚದಲ್ಲಿ ಯಾವುದನ್ನೆಲ್ಲಾ ಮಾಡುವುದು ಆವಶ್ಯಕವೋ, ಅದನ್ನು ಮಾಡಿ. ಯಾವುದನ್ನು ನೀವು ಮಾಡಬೇಕಾದುದು ಆ ಸಮಯದ ಮತ್ತು ಸ್ಥಳದ ಅಗತ್ಯವಾಗಿರುವುದೋ, ಅದನ್ನು ಮಾಡುವುದು ಸೇವೆಯಾಗಿದೆ. ನಿಮ್ಮ ಮಾನಸಿಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಕೂಡಾ ಇದು ಸಹಾಯ ಮಾಡುವುದು.

ಐದನೆಯ ವಿಷಯವೆಂದರೆ, ನೀವೆಲ್ಲರೂ ಹಾಡುತ್ತಿರುವಿರಿ, ನರ್ತಿಸುತ್ತಿರುವಿರಿ, ಮಂತ್ರೋಚ್ಛಾರಣೆಯನ್ನು ಕೇಳುತ್ತಿರುವಿರಿ, ಪೂಜೆಗಳಲ್ಲಿ ಕುಳಿತುಕೊಳ್ಳುತ್ತೀರಿ, ಇದೆಲ್ಲಾ ಕೂಡಾ ನಿಮ್ಮ ಶಕ್ತಿಯನ್ನು ಮೇಲೆತ್ತುತ್ತದೆ.

’ನಾನು ಕೇವಲ ಪೂಜೆಯಲ್ಲಿ ಕುಳಿತುಕೊಂಡು ಮಂತ್ರೋಚ್ಛಾರಣೆ ಮಾಡಲು ಬಯಸುತ್ತೇನೆ ಮತ್ತು ಇದನ್ನು ಮಾತ್ರ ಮಾಡುತ್ತೇನೆ’ ಎಂದು ನೀವು ಹೇಳಲು ಸಾಧ್ಯವಿಲ್ಲ. ಇಲ್ಲ, ಅದರಿಂದ ಪ್ರಯೋಜನವಾಗದು. ಅಥವಾ, ’ನನಗೆ ಎಷ್ಟು ಬೇಕೋ ಅಷ್ಟು ತಿನ್ನುತ್ತೇನೆ ಮತ್ತು ನಂತರ ಬಂದು ಪೂಜೆಗೆ ಕುಳಿತುಕೊಳ್ಳುತ್ತೇನೆ’, ಅದರಿಂದ ಪ್ರಯೋಜನವಿಲ್ಲ.

’ನಾನು ಇಡೀ ದಿನ ಕುಳಿತುಕೊಂಡು ಧ್ಯಾನ ಮಾಡುತ್ತೇನೆ ಮತ್ತು ಬೇರೇನನ್ನೂ ಮಾಡುವುದಿಲ್ಲ’ ಎಂದು ನೀವು ಹೇಳಿದರೆ, ಆಗ ನೀವು ನಿಮ್ಮ ಸಮಯವನ್ನು ವ್ಯರ್ಥ ಮಾಡಿದಂತೆ, ಯಾಕೆಂದರೆ ಆಗ ನಿಮ್ಮ ಧ್ಯಾನವು ಆಳವಾಗುವುದಿಲ್ಲ. ಅದಕ್ಕಾಗಿಯೇ ನೀವೆಲ್ಲರೂ ಯಾವತ್ತೂ ಭಗವದ್ಗೀತೆಯ ಈ ಶ್ಲೋಕವನ್ನು ನೆನಪಿಟ್ಟುಕೊಳ್ಳಬೇಕು,

’ಯುಕ್ತಾಹಾರವಿಹಾರಸ್ಯ ಯುಕ್ತ ಚೇಷ್ಟಸ್ಯ ಕರ್ಮಸು I
ಯುಕ್ತಸ್ವಪ್ನಾವಬೋಧಸ್ಯ ಯೋಗೋ ಭವತಿ ದುಃಖಃ II’

ಕ್ರಿಯೆ ಮತ್ತು ವಿಶ್ರಾಂತಿಗಳ ನಡುವೆ ಯಾವತ್ತೂ ನೀವು ಆ ಒಂದು ಸಮತೋಲನವನ್ನು ಹೊಂದಿರಬೇಕು.
ಸರಿಯಾದ ಪ್ರಮಾಣದ ಆಹಾರ, ಸರಿಯಾದ ಪ್ರಮಾಣದ ಕ್ರಿಯೆ, ಮತ್ತು ಸರಿಯಾದ ಪ್ರಮಾಣದ ಸೇವೆ ಆವಶ್ಯಕವಾಗಿದೆ. ನೀವಿದನ್ನು ಅನುಸರಿಸುವಾಗ, ದುಃಖವೆಲ್ಲವೂ ಓಡಿ ಹೋಗುತ್ತದೆ. ಈ ಷರತ್ತುಗಳನ್ನು ನೀವು ಅನುಸರಿಸಿದಾಗ ನೀವು ವಿಶ್ವ ಚೇತನದೊಂದಿಗೆ ಒಂದಾಗುತ್ತೀರಿ, ಮತ್ತು ಆಗ ದುಃಖ ಓಡಿ ಹೋಗುತ್ತದೆ ಹಾಗೂ ನೀವು ನಗುತ್ತೀರಿ!

ಪ್ರಶ್ನೆ: ನೀವು ದಯವಿಟ್ಟು ಕಾಲ ಭೈರವನ ಬಗ್ಗೆ ಮಾತನಾಡುವಿರಾ?

ಶ್ರೀ ಶ್ರೀ ರವಿ ಶಂಕರ್: ಕಾಲ ಭೈರವನೆಂದರೆ ಸಮಯದ ದೇವತೆ. ಕಾಲವೇ ದೈವತ್ವವಾಗಿದೆ. ಕಾಲ ಭೈರವನ ವಾಹನ ಯಾವುದೆಂದು ನಿಮಗೆ ಗೊತ್ತೇ? ಅದು ಶ್ವಾನ. ಶ್ವ ಎಂದರೆ ನಿನ್ನೆ ಅಥವಾ ನಾಳೆ, ನ ಎಂದರೆ ಅಲ್ಲ ಎಂದು. ಹೀಗಾಗಿ, ಶ್ವಾನ ಎಂದರೆ, ನಿನ್ನೆಯೂ ಅಲ್ಲ ನಾಳೆಯೂ ಅಲ್ಲ; ಅಂದರೆ, ಈಗ. ಹೀಗಾಗಿ, ಕಾಲ ಭೈರವನು ಎಲ್ಲಿ ವಾಸಿಸುತ್ತಾನೆ? ಈಗ ಎಂಬಲ್ಲಿ.