ಗುರುವಾರ, ಫೆಬ್ರವರಿ 23, 2012

ನ್ಯಾಯವಾದ ನಡೆಯಿ೦ದ ದೊರಕುವ ನೆಮ್ಮದಿ ಇನ್ನೆಲ್ಲೂ ಸಿಗದು


23
2012............................... ಜಿಂದಾಲ್ ಪ್ರಶಸ್ತಿ, ದಿಲ್ಲಿ, ಭಾರತ
Feb

ಪ್ರತಿಷ್ಠಿತ ಸೀತಾರಾಮ ಜಿಂದಾಲ್ ಪ್ರಶಸ್ತಿಗಳು ೨೦೧೨ರ ಸಮಾರಂಭಕ್ಕೆ  ಶ್ರೀ ಶ್ರೀಯವರನ್ನು ಮುಖ್ಯ ಅತಿಥಿಗಳನ್ನಾಗಿ ಹಾಗೂ ಪ್ರಶಸ್ತಿ ಪ್ರಧಾನ ಮಾಡಲು ಆಹ್ವಾನಿಸಿದ್ದರು. ಜಿಂದಾಲ್ ಪ್ರಶಸ್ತಿಗಳು ಸಾಮಾಜಿಕ ಉನ್ನತಿಯ ಆದರ್ಶವನ್ನು ಹೊಂದಿದ್ದು, ಭಾರತೀಯರಿಗೆ ಅತ್ಯುನ್ನತ ಸೇವೆಗಾಗಿ ಮೀಸಲಾಗಿದೆ. ೨೭ ಪ್ರಶಸ್ತಿ ವಿಜೇತರಲ್ಲಿ ಒಬ್ಬರಾದ ಅಣ್ಣಾ ಹಜಾರೆಯವರಿಗೆ ಶ್ರೀ ಶ್ರೀಯವರು ಪ್ರಶಸ್ತಿ ಪ್ರಧಾನ ಮಾಡಿದರು. ಅಲ್ಲಿ ನೆರೆದಿದ್ದ ಜನರನ್ನುದ್ದೇಶಿಸಿ ಶ್ರೀ ಶ್ರೀಯವರು, ಧಾರ್ಮಿಕತೆಯು ನೀಡುವ ನೆಮ್ಮದಿ ಇನ್ಯಾವುದೇ ವಸ್ತುವಿನಿಂದ ಸಿಗುವುದಿಲ್ಲವೆಂದು ತಿಳಿಸಿದರು.
ಓಂ ಶಾಂತಿ. ಪ್ರಶಸ್ತಿ ಸ್ವೀಕರಿಸಲು ಬಂದಿರುವ ನನ್ನ ಪ್ರಿಯ  ಬಾಂಧವರೇ; ಇನ್ನೊಂದು ಕಡೆ ಪ್ರಶಸ್ತಿ ನೀಡಲು ಆಗಮಿಸಿರುವ ಪ್ರಿಯರೇ, ಮತ್ತು ಇಲ್ಲಿ ನೆರೆದಿರುವ ಎಲ್ಲಾ ಪ್ರೇಕ್ಷಕರೇ,
ಚೆನ್ನೈನಲ್ಲಿ ಒಬ್ಬ ಉದಯೋನ್ಮುಖ ಯುವ ರಾಜಕರಣಿಯು ನನ್ನನ್ನು ಒಂದು ಪ್ರಶ್ನೆ ಕೇಳಿದನು, ’ಗುರೂಜೀ, ಒಳ್ಳೆಯತನದ ಉದ್ದೇಶವೇನು? ಅದರಿಂದ ಉಪಯೋಗವೇನು? ಎಲ್ಲಾ ಭ್ರಷ್ಟ ಕಾರ್ಯಗಳನ್ನು ಮಾಡುವವರು ಮತ್ತು ನಿಷ್ಕರುಣೆಯುಳ್ಳವರು ಸಂತೋಷವಾಗಿರುವುದನ್ನು ನಾವೆಲ್ಲರೂ ನೋಡುತ್ತಿದ್ದೇವೆ. ತಮ್ಮ ಜೀವನದಲ್ಲಿ ಅವರು ಆರಾಮವಾಗಿ ಮುನ್ನಡೆಯುತ್ತಿದ್ದಾರೆ. ನಾನೇಕೆ ಒಳ್ಳೆಯವನಾಗಲಿ?  ದಯವಿಟ್ಟು ತಿಳಿಸಿ.
ಅವನೆಂದನು, ’ಉದಾಹರಣೆಗೆ ರಾವಣನನ್ನು ತೆಗೆದುಕೊಳ್ಳಿ. ಜೀವನವಿಡೀ ಸುಖ ಸಂತೋಷದಿಂದ  ಕಳೆದನು. ಮೃತನಾದ ಮೇಲೆ ಮೋಕ್ಷವನ್ನು ಪಡೆದನು. ದುರ್ಯೋಧನ, ಇಡೀ ರಾಜ್ಯವನ್ನು ಆಳಿದನು. ಭಾರತವನ್ನು ತನ್ನ ಜೀವಮಾನವಿಡೀ ಆಳಿದನು. ಮೃತನಾದ ಬಳಿಕ ಅವನೂ ಕೂಡ ಯುಧಿಷ್ಠಿರನಿಗೆ ಮೊದಲು ಸ್ವರ್ಗಕ್ಕೆ ಹೋದನು. ಆದ್ದರಿಂದ ಒಳ್ಳೆಯತನದಿಂದ ಏನು ಪ್ರಯೋಜನ? ನಾವೇಕೆ ಒಳ್ಳೆಯವರಾಗಬೇಕೆಂದು ಹೇಳುತ್ತೀರ?
ಯಾರಿಗಾದರೂ ಇದೊಂದು ದೊಡ್ಡ ಸವಾಲು, - ಯಾವ ಇತಿಹಾಸಕಾರನೇ ಆಗಲಿ ಅಥವಾ ವೇದಾಂತಿಗೆ ಆಗಲಿ, ನಾವೇಕೆ ಒಳ್ಳೆಯವರಾಗಿರಬೇಕು? ನಾನು ಅವನಿಗೆ ಹೇಳಿದೆ, ’ನೋಡು, ದುರ್ಯೋಧನ ಮತ್ತು ರಾವಣನ ಬಗ್ಗೆ ಮರೆತುಬಿಡು. ನೀನೇನಾದರೂ ತಪ್ಪು ಮಾಡಿದ್ದೀಯಾ?” ಅದಕ್ಕವನು’ ’ಹೌದು ಗುರೂಜೀ” ಎಂದನು.
“ನೀನು ತಪ್ಪು ಮಾಡಿದಾಗ ಆ ದಿನ ನಿನಗೆ ನಿದ್ದೆ ಮಾಡಲು ಸಾಧ್ಯವಾಗುತ್ತಿತ್ತಾ? ನಿನ್ನ ಆಹಾರವನ್ನು ಸವಿಯುತ್ತಿದ್ದೆಯಾ?’
“ಗುರೂಜೀ, ಅದು ಹೇಗೆ ಮಾಡಲಿ? ನಾನು ತಪ್ಪು ಮಾಡಿದಾಗ, ನಿದ್ದೆ ಮಾಡಲು ಆಗುವುದಿಲ್ಲ. ಹೋಗಿ ಕುಡಿಯುತ್ತೇನೆ ಮತ್ತು ಪ್ರಜ್ಞಾಹೀನ ಸ್ಥಿತಿಯಲ್ಲಿ ನನ್ನನ್ನು ನಾನೇ ಮುಳುಗಿಸಿಕೊಳ್ಳುತ್ತೇನೆ.”
“ ನೋಡು, ಹೀಗೆಯೇ ಆಗುವುದು. ತಪ್ಪು ಮಾಡಿದಾಗ ನೆಮ್ಮದಿ ಇರುವುದಿಲ್ಲ. ನಿದ್ದೆ ಮಾಡಲು ಆಗುವುದಿಲ್ಲ. ಜೀವನ ನೀಡಿರುವ ವಸ್ತುಗಳೊಂದಿಗೆ ಸುಖದಿಂದಿರಲು ಆಗುವುದಿಲ್ಲ. ಆದ್ದರಿಂದ ಮುಂದೆಂದೋ ನಿನ್ನ ಒಳ್ಳೆಯತನದಿಂದ ಪ್ರಶಸ್ತಿ ಸಿಗುವುದೆಂದಲ್ಲ, ಅದು ಈಗಲೇ ಪುರಸ್ಕರಿಸುತ್ತದೆ.”
ಜನರಲ್ಲಿ ಸಾಮಾನ್ಯ ಮನೋಭಾವವೆಂದರೆ ಯಾರು ನಮ್ಮ ಒಳ್ಳೆಯ ಗುಣಗಳನ್ನು ಗುರುತಿಸುತ್ತಾರೋ, ಮತ್ತು ಈ ಸಂದರ್ಭದಲ್ಲಿ ಸೀತಾರಾಮ ಜಿಂದಾಲ್ ಪ್ರತಿಷ್ಠಾಪನೆಯಂತಹ ಪ್ರಶಸ್ತಿಗಳು ಧರ್ಮದ ಮಾರ್ಗದಲ್ಲಿ ಸಾಗಲು, ಪ್ರಾಮಾಣಿಕರಾಗಿರಲು ಮತ್ತು ನಿಷ್ಕಪಟಿಯಾಗಿರಲು ಜನರಲ್ಲಿ ಮತ್ತೆ ವಿಶ್ವಾಸ ಸ್ಥಾಪಿಸುವುದೆಂದು ನನ್ನ ಭಾವನೆ. ಹೌದು, ನೀವು ಗುರುತಿಸಲ್ಪಡುವಿರಿ, ಧರ್ಮವು  ಬೇರೆ ಯಾವುದೂ ನೀಡದ ಆ ಒಂದು ನೆಮ್ಮದಿಯನ್ನು ನೀಡುತ್ತದೆ. ನಿಮಗೆ ಸಿಗುವ ಆಂತರಿಕ ನೆಮ್ಮದಿ, ಶಾಂತ ನಿದ್ರೆ, ಸವಿಯುವ ಆಹರ, ಪ್ರಾಮಾಣಿಕತೆಯಿದ್ದಾಗ ಜೀವನದಲ್ಲಿ ಸರಳವಾದ ವಸ್ತುಗಳನ್ನು  ಆನಂದಿಸಲು ಸಾಧ್ಯವಾಗುವುದು.
ನಿಮಗೆ ಗೊತ್ತಿದೆಯೇ, ಎಲ್ಲಿ ಸ್ವಂತಿಕೆಯ ಭಾವ ಅಂತ್ಯವಾಗುವುದೋ, ಅಲ್ಲಿಂದ ಭ್ರಷ್ಟಾಚಾರವು ಪ್ರಾರಂಭವಾಗುವುದು. ಇಂದಿನವರೆಗೂ, ಯಾರೂ ಕೂಡ ತಮ್ಮ ಸ್ವಂತದವರೆಂದು ಕೊಂಡಿರುವವರ ಹತ್ತಿರ ಲಂಚಕೋರತನವನ್ನು ಮಾಡಿಲ್ಲ.  ಎಲ್ಲಿ ಲಂಚಕೋರತನ ಶುರುವಾಗುವುದೆಂದರೆ ನಿಖರವಾಗಿ ಎಲ್ಲಿ ಸ್ವಂತಿಕೆಯ ಭಾವ ಕೊನೆಗೊಳ್ಳುವುದೋ ಅಲ್ಲಿಂದ. ಆಧ್ಯಾತ್ಮಿಕವು ಒಂದು ಮೂಲೆಯಲ್ಲಿ ಕುಳಿತುಕೊಂಡು ಏನೋ ಒಂದನ್ನು ಅಭ್ಯಾಸ ಮಾಡುವುದಲ್ಲ. ಸ್ವಂತಿಕೆಯ ಭಾವವನ್ನು ವಿಸ್ತಾರಗೊಳಿಸುವುದು. ಎಲ್ಲರೂ ನನ್ನದೇ ಒಂದು ಭಾಗವೆಂದು ಹಾಗೂ ನಾನು ಎಲ್ಲರ ಒಂದು ಭಾಗವೆಂದು ತಿಳಿಯುವುದು. ಇಲ್ಲಿ ನೆರೆದಿರುವ ಪ್ರತಿಷ್ಠಿತರು ಅಂತಹ ಬದುಕನ್ನು ಬಾಳಿದ್ದಾರೆ. ಅಣ್ಣಾ ಹಜಾರೇಜೀ, ಸಂತೋಷ್ ಹೆಗ್ಡೇಜೀ, ನಮ್ಮ ಧರ್ಮಸ್ಥಳದ ವೀರೇಂದ್ರ ಹೆಗ್ಡೇಜೀ ಮತ್ತು ನಮ್ಮ ಅತ್ಯಂತ ಪ್ರೀತಿಯ ರಾಷ್ಟ್ರಪತಿಗಳಾದ ಅಬ್ದುಲ್ ಕಲಾಂಜೀ – ಅಂತಹ ಮಾದರಿಯಾಗಿಯೇ ತಮ್ಮ ಜೀವನವನ್ನು ಕಳೆದಿದ್ದಾರೆ ಮತ್ತು ಈ ಪ್ರಶಸ್ತಿಗಳನ್ನು ನೀಡಲು ಈ ಸಂಸ್ಥೆಯು ಎಷ್ಟು ಸೌಭಾಗ್ಯ ಪಡೆದಿದೆ.  ಈ ಸಮಾರಂಭದಲ್ಲಿ ಪಾಲ್ಗೊಂಡಿರುವುದು ನನಗೆ ತುಂಬಾ ಸಂತೋಷವಾಗಿದೆ. ಇವರೆಲ್ಲರೂ ನಕ್ಷತ್ರಗಳು. ಯುವ ಜನತೆಗೆ ಪ್ರೇರಣೆಯಾಗಿರುವಂತಹ ಮತ್ತು ಮುಂಬರುವ ಅನೇಕ ಶತಮಾನಗಳವರೆಗೂ ದಾರಿದೀಪವಾಗಿರುವಂತಹ ದೇಶದ ನಿಜವಾದ ಪ್ರತಿಭಾಶಾಲಿಗಳನ್ನು ಒಂದೇ ಸೂತ್ರದಲ್ಲಿ ಪಡೆದಿದ್ದೇವೆ.
ಇಲ್ಲಿ ಇನ್ನೂ ಅನೇಕರು ಸೇರಿದ್ದಾರೆ, ತರುಣ್ ತೇಜ್ ಪಾಲ್ ಜೀ ಮತ್ತು ಇತರ ಹದಿನೈದು ಅದ್ಭುತ ವ್ಯಕ್ತಿಗಳು. ಇವರು ಪ್ರಶಸ್ತಿಗಾಗಿ ಅಥವಾ ಯಾರನ್ನೋ ಮೆಚ್ಚಿಸುವುದಕ್ಕಾಗಿ ಈ ಮಹತ್ಕಾರ್ಯವನ್ನು ಮಾಡಿಲ್ಲ. ಇದನ್ನು ಅವರು ಮಾಡಿರುವುದರ ಕಾರಣ ಅವರಿಂದ ಮಾಡದೇ ಇರಲು ಸಾಧ್ಯವಾಗದೇ ಇರುವುದರಿಂದ. ಅದು ಅವರ ಸ್ವಭಾವದಲ್ಲೇ ಇರುವುದರಿಂದ. ಅದು ಅವರ ವಂಶವಾಹಿನಿಯಲ್ಲಿದೆ ಮತ್ತು ಅದು ಸತ್ಯ.
ಯಾವುದೇ ಸೇವೆಯಲ್ಲಿ ಸತ್ಯತೆಯಿರುವುದು ಏಕೆಂದರೆ ಅದು ನಿಮ್ಮ ಸ್ವಭಾವದಲ್ಲಿದೆ. ನೀವು ಮಾಡದೇ ಇರಲು ಸಾಧ್ಯವಿಲ್ಲ. ಮತ್ತು ಎಲ್ಲ ಮಾನವರಲ್ಲೂ ಈ ಸಹಜ ಪ್ರವೃತ್ತಿಯಿದೆ. ಪ್ರತಿಯೊಬ್ಬನಲ್ಲೂ ಈ ಸೇವೆಯ ಅಂಶವಿರುವುದು. ಈ ಸೇವಾ ಮನೋಭಾವವಿದೆ ಆದರೆ ಎಲ್ಲೋ ಕಳೆದುಹೋಗಿದೆ. ಅದನ್ನು ಪ್ರಕಟಗೊಳಿಸಬೇಕು. ಇಂತಹ ಪ್ರಶಸ್ತಿ ಸಮಾರಂಭಗಳು ಸೇವೆಯ ಅಂಶವನ್ನು ಬೆಳಕಿಗೆ ತರಲು ಸಹಾಯಕವಾಗಿದೆ. ಒಬ್ಬನನ್ನು ಅನುಸರಿಸಿ ಇನ್ನೊಬ್ಬನು ಹೋಗುತ್ತಾ, ನಮ್ಮಲ್ಲಿರುವ ಮಾನವೀಯತೆ ಮತ್ತು ಮುಗ್ಧತೆ ಪ್ರಕಟಗೊಳ್ಳುತ್ತದೆ. ಅನೇಕ ತತ್ವಗಳಿವೆ ಆದರೆ ಜನರು ತತ್ವಗಳನ್ನು ಅನುಸರಿಸುವುದಿಲ್ಲ, ಅವರು ಜನರನ್ನು ಅನುಕರಣೆ ಮಾಡುತ್ತಾರೆ.  ಎಂತಹ ಸಮರ್ಥಶಾಲಿಗಳು ಇಲ್ಲಿ ಸೇರಿದ್ದಾರೆಂದರೆ ನಿಮ್ಮನ್ನು ಸನ್ಮಾನಿಸಲು ನಮಗೆ ನಿಜವಾಗಲೂ ಸಂದ ಗೌರವ. ಇಲ್ಲಿ ಬಹಳ ಆನಂದದ ವಾತಾವರಣವಿದೆ.
ಇಲ್ಲಿ ನೆರೆದಿರುವ ಶ್ರೇಷ್ಠ ವ್ಯಕ್ತಿಗಳಿಂದ ಇಂದಿನ ಯುವಕರು ಕಲಿಯಬೇಕು. ನಮ್ಮ ದೇಶಕ್ಕೆ ಆಶಾಕಿರಣದಂತಿರುವ ಈ ಮಹಾನ್ ವ್ಯಕ್ತಿಗಳ ಮಾರ್ಗವನ್ನು ನಮ್ಮ ಯುವಜನತೆ, ನಮ್ಮ ದೇಶ ಅನುಸರಿಸಬೇಕು.
ಸೀತಾರಾಂಜೀಯವರ ಪರಿಶ್ರಮದಿಂದ ಇವರೆಲ್ಲರನ್ನೂ ಒಂದೇ ವೇದಿಕೆಯಲ್ಲಿ ಸೇರಿಸಿರುವುದು ಪ್ರಶಂಸನಾರ್ಹ. ನೀವು ಶರೀರವನ್ನಷ್ಟೇ ಅಲ್ಲದೇ ಆತ್ಮವನ್ನೂ ಗುಣಪಡಿಸುತ್ತೀರ. ಜಿಂದಾಲ್ ಗಳು ಇದಕ್ಕೆ ಹೆಸರುವಾಸಿ.
ಈ ನನ್ನ ಕೆಲವು ಮಾತುಗಳಿಂದ ಪ್ರತಿಷ್ಠಾಪನೆಯನ್ನು ಹಾಗೂ ಪ್ರಶಸ್ತಿ ಸ್ವೀಕರಿಸಲು ಒಪ್ಪಿಕೊಂಡು ಇಲ್ಲಿಗೆ ಬಂದಿರುವ ಎಲ್ಲ ಪ್ರಶಸ್ತಿ ವಿಜೇತರನ್ನು ಅಭಿನಂದಿಸುತ್ತೇನೆ.
ದೇವರು ನಿಮ್ಮೆಲ್ಲರನ್ನೂ ಹರಸಲಿ!