ಭಾನುವಾರ, ಜೂನ್ 12, 2016

ದೇವರ ಮಾತಿಗೆ ಕಿವಿಗೊಡುವ ಕಲೆ

೧೨ ಜೂನ್ ೨೦೧೬, ಮ್ಯಾಂಚೆಸ್ಟರ್
ಲ್ಲರಿಗೂ ಶುಭ ಸಂಜೆ! ಇಲ್ಲಿ ನಿಮ್ಮೆಲ್ಲರೊಂದಿಗಿರಲು ಬಹಳ ಚೆನ್ನಾಗಿದೆ. ಸುಂದರವಾದ ಜನರನ್ನೊಳಗೊಂಡ ಒಂದು ಭವ್ಯವಾದ ಸಭಾಂಗಣವಾಗಿದೆ ಇದು! ಇಂದಿನ ವಿಷಯವು ಧ್ಯಾನವಾಗಿದೆ. ಧ್ಯಾನ ಮಾಡಬೇಕಾದರೆ, ನಾವೊಂದು ಅನೌಪಚಾರಿಕ ವಾತಾವರಣದಲ್ಲಿರಬೇಕು ಯಾಕೆಂದರೆ, ಒಂದು ಔಪಚಾರಿಕ ವಾತಾವರಣ ಅಥವಾ ಒಂದು ಔಪಚಾರಿಕ ಸೆಟ್ಟಿಂಗ್ ಧ್ಯಾನಕ್ಕೆ ಸರಿಹೊಂದುವುದಿಲ್ಲ. ನೀವು ನಿಮ್ಮ ಮನೆಯಲ್ಲಿರುವಂತೆ ಹಾಯಾಗಿರಬೇಕು; ನಿಜಕ್ಕೂ ಆರಾಮವಾಗಿರಬೇಕು.

ನಾವು ನಮ್ಮ ದೈನಂದಿನ ಜೀವನದಲ್ಲಿ ಅದಲುಬದಲು ಮಾಡಿಕೊಳ್ಳುವ ಕುಶಲೋಪರಿಗಳಲ್ಲಿ ಹಲವು ಒಂದು ಔಪಚಾರಿಕತೆಯಾಗಿದೆ. ಉದಾಹರಣೆಗೆ, ನೀವು ವಿಮಾನದಿಂದ ಇಳಿಯುವಾಗ ಗಗನಸಖಿಯರು ನಿಮಗೊಂದು ಶುಭದಿನವನ್ನು ಹಾರೈಸುತ್ತಾರೆ, ಆದರೆ ಅವರದನ್ನು ನಿಜವಾದ ಅರ್ಥದಲ್ಲಿ ಹೇಳಿರುವುದಿಲ್ಲ! ನಾನವರಿಗೆ ಯಾವುದೇ ಅರ್ಥದಲ್ಲೂ ಅಪಮಾನ ಮಾಡುತ್ತಿಲ್ಲ, ಆದರೆ ಅದು ಅವರ ಹೃದಯದಾಳದಿಂದ ಬರುವ ಒಂದು ವಿಷಯವಲ್ಲ; ನಿಮ್ಮ ತಾಯಿ ಅಥವಾ ನಿಮ್ಮ ಅಜ್ಜಿ ನಿಮಗೆ ಜನ್ಮದಿನವನ್ನು ಹಾರೈಸುವಂತೆ. ನೀವು ಆ ಸಂಬಂಧವನ್ನು ಅನುಭವಿಸುವಾಗ, ನಿಮ್ಮ ಮಾತಿಗೆ ಸ್ವಲ್ಪ ಶಕ್ತಿ ಬರುತ್ತದೆ.

ನಾವು ನಮ್ಮ ಮಾತಿನ ಮೂಲಕ ತಿಳಿಸುವುದಕ್ಕಿಂತ ಹೆಚ್ಚು ನಮ್ಮ ಕಂಪನಗಳ ಮೂಲಕ ತಿಳಿಸುತ್ತೇವೆ. ನಿಮ್ಮ ಮನೆಯಲ್ಲೊಂದು ನಾಯಿಮರಿಯಿದೆಯೆಂದಿಟ್ಟುಕೊಳ್ಳಿ. ನೀವು ಕೆಲಸದಿಂದ ಹಿಂದಿರುಗಿದ ಬಳಿಕ ನಾಯಿಮರಿ ಏನು ಮಾಡುತ್ತದೆ? ಅದು ಹುಚ್ಚುಹಿಡಿದಂತೆ ಆಡುತ್ತದೆ! ಅದು ನಿಮ್ಮನ್ನು ನಿಜಕ್ಕೂ ಪ್ರೀತಿಸುತ್ತದೆಯೆಂಬುದನ್ನು ವ್ಯಕ್ತಪಡಿಸುತ್ತಾ ಅದು ನಿಮ್ಮ ಮೇಲೆಲ್ಲಾ ಜಿಗಿದಾಡುತ್ತದೆ, ಅಲ್ಲವೇ? ನಾವು ನಮ್ಮ ಕಂಪನಗಳ ಮೂಲಕ ಬಹಳಷ್ಟು ತಿಳಿಯಪಡಿಸುತ್ತೇವೆ. ಒಬ್ಬ ವ್ಯಕ್ತಿಯು ನಿಮ್ಮ ಬಳಿ ನಕ್ಕಾಗ, ಅದು ನಿಜಕ್ಕೂ ಒಳಗಿನಿಂದ ಬರುತ್ತಿಲ್ಲವಾದರೆ ಅದು ನಿಮಗೆಲ್ಲರಿಗೂ ತಿಳಿಯುತ್ತದೆಯೆಂಬುದರ ಬಗ್ಗೆ ನನಗೆ ಖಾತ್ರಿಯಿದೆ. ಅದು ಕೇವಲ ಒಂದು ಔಪಚಾರಿಕತೆಯೆಂಬುದು ನಿಮಗೆ ಗೊತ್ತು, ಸರಿಯಾ? ಅದೇ ರೀತಿಯಲ್ಲಿ, ನಿಮ್ಮ ಸುತ್ತಲಿರುವ ಪ್ರತಿಯೊಬ್ಬರೊಡನೆಯೂ ಕೇವಲ ಔಪಚಾರಿಕ ಸಂಬಂಧಗಳನ್ನು ಹೊಂದಿರುವ ಹಂತವನ್ನು ಜೀವನವು ತಲಪಿದಾಗ; ಅದು ನಿಮ್ಮ ಹೃದಯದಾಳದಿಂದ ಬರುತ್ತಿಲ್ಲವಾದರೆ, ಒಂದಲ್ಲ ಒಂದು ಸಮಯದಲ್ಲಿ ಖಿನ್ನತೆಯೆಂದು ಕರೆಯಲ್ಪಡುವ ಒಂದು ಸ್ಥಿತಿಗೆ ನೀವು ಹೋಗುತ್ತೀರಿ. ಜೀವನದಲ್ಲಿ ಒಂದು ರೀತಿಯ ಶುಷ್ಕತೆ ಇರುತ್ತದೆ.

ಈಗ ನೀವು ನನ್ನಲ್ಲಿ ಕೇಳಲೂಬಹುದು, "ಇದಕ್ಕೂ ಧ್ಯಾನಕ್ಕೂ ಸಂಬಂಧವೇನು? ನಾವಿಲ್ಲಿಗೆ ಧ್ಯಾನಕ್ಕಾಗಿ ಬಂದಿದ್ದೇವೆ" ಎಂದು. ಇದಕ್ಕೂ ಅದಕ್ಕೂ ಬಹಳಷ್ಟು ಸಂಬಂಧವಿದೆಯೆಂದು ನಾನು ಹೇಳುತ್ತೇನೆ.

ನಾವೆಲ್ಲರೂ ಜೀವಿಸುತ್ತಿರುವ ಒಂದು ಏಕತಾನತೆಯ ಬದುಕಿನಿಂದ; ರಸಹೀನವಾದ ಒಂದು ಬದುಕಿನಿಂದ; ಮೌಲ್ಯಗಳಿಲ್ಲದ ಒಂದು ಬದುಕಿನಿಂದ; ನಮ್ಮ ಸುತ್ತಲಿರುವ ಜನರೊಂದಿಗೆ ಸಂಪರ್ಕವಿಲ್ಲದ ಒಂದು ಬದುಕಿನಿಂದ ನಮ್ಮನ್ನು ಮೇಲೆತ್ತುವ ಒಂದು ಪರಿಹಾರವಾಗಿದೆ ಧ್ಯಾನ. ಧ್ಯಾನವು ಇವೆಲ್ಲವುಗಳನ್ನು ತಿರುಗಿಸಬಲ್ಲದು! ನಾವು ಯಾವುದೇ ಕ್ಷೇತ್ರದಲ್ಲಾದರೂ ಕೆಲಸ ಮಾಡುತ್ತಿರಲಿ, ನಮ್ಮಲ್ಲಿ ಅಂತರ್ಜ್ಞಾನ ಮತ್ತು ನಾವೀನ್ಯತೆಗಳು ಇರಬೇಕು. ಧ್ಯಾನವು ಇವುಗಳೆರಡನ್ನೂ ಹೆಚ್ಚಿಸಬಲ್ಲದು. ಧ್ಯಾನವು ನಮ್ಮ ಜೀವನದಲ್ಲಿ ಶಕ್ತಿಯನ್ನು ಮರಳಿ ತರಬಲ್ಲದು!  

ಧ್ಯಾನವು ನಮ್ಮ ಜೀವನದಲ್ಲಿ ವಿಸ್ಮಯತೆಯನ್ನು ತರುತ್ತದೆ; ಅದು ಧ್ಯಾನಕ್ಕಿರುವ, ಒಂದುಗೂಡುವಿಕೆಗಿರುವ, ಯೋಗಕ್ಕಿರುವ ಒಂದು ಪೀಠಿಕೆಯಾಗಿದೆ! ಸಂಸ್ಕೃತದಲ್ಲಿ ಪ್ರಾಚೀನವಾದ ಒಂದು ಮಾತಿದೆ, "ವಿಸ್ಮಯ ಯೋಗ ಭೂಮಿಕ"; ಯೋಗಕ್ಕಿರುವ ಪೀಠಿಕೆಯು ವಿಸ್ಮಯತೆಯಾಗಿದೆ; ನಿಮ್ಮ ಸುತ್ತಲೂ ನೀವು ನೋಡುವಾಗ "ವಾಹ್" ಎಂಬ ಒಂದು ಭಾವ. ವಿಸ್ಮಯತೆಯ ಆ ಭಾವದಲ್ಲಿರಲು, "ವಾಹ್" ಎಂಬ ಆ ಭಾವದಲ್ಲಿರಲು ಜೀವನವು ನಿಮಗೆ ಹಲವಾರು ಸಂದರ್ಭಗಳನ್ನು ಅಥವಾ ಅವಕಾಶಗಳನ್ನು ನೀಡಿದೆ. ಇದನ್ನು ನೀವು ಕಳೆದುಕೊಂಡಾಗ, ನೀವು ಜೀವನವನ್ನೇ ಕಳೆದುಕೊಳ್ಳುತ್ತೀರಿ! ನೀವು ಆ ಏಕತಾನತೆಯ ಜೀವನದ ಮೂಲಕ ಹಾದುಹೋಗುತ್ತೀರಿ - ತಿನ್ನುವುದು, ಕುಡಿಯುವುದು, ನಿದ್ರಿಸುವುದು ಮತ್ತು ಟಿವಿ ನೋಡುವುದು; ಅಷ್ಟೇ! ವಿದಾಯ ಹೇಳಲೂ ಸಮಯವಿಲ್ಲದೆ ನೀವು ಹೋಗಿಯಾಗುತ್ತದೆ!

ಧ್ಯಾನವು ಜೀವನವನ್ನು ಅರ್ಥಪೂರ್ಣವಾಗಿಸುತ್ತದೆ, ಅದು ಜೀವನದಲ್ಲಿ ವಿಸ್ಮಯತೆಯ ಆ ಭಾವವನ್ನು ಉಳಿಸಿಕೊಳ್ಳುತ್ತದೆ. ಮಕ್ಕಳಾಗಿ ನಾವೆಲ್ಲರೂ ವಿಸ್ಮಯತೆಯ ಒಂದು ಭಾವದಲ್ಲಿದ್ದೆವು; ನಾವು ವಿಸ್ಮಯಲೋಕದಲ್ಲಿದ್ದೆವು. ನಾವು ಈ ಭೂಮಿಗೆ "ವಾಹ್" ಎಂಬ ಒಂದು ಭಾವದೊಂದಿಗೆ, ಮುಗ್ಧತೆಯ ಒಂದು ಭಾವದೊಂದಿಗೆ, ಆತ್ಮೀಯತೆಯ ಒಂದು ಭಾವದೊಂದಿಗೆ, ನಮ್ಮ ಸುತ್ತಲಿರುವ ಎಲ್ಲರೊಂದಿಗೂ ಜೋಡಿಕೊಂಡಿರುವ ಒಂದು ಭಾವದೊಂದಿಗೆ ಬಂದೆವು. ಏನಾಯಿತು? ಅದನ್ನು ನಾವು ಎಲ್ಲಿ ಕಳೆದುಕೊಂಡೆವು? ನಾವದನ್ನು ನಿಜಕ್ಕೂ ಕಳೆದುಕೊಂಡಿಲ್ಲ, ಅದು ಎಲ್ಲಾ ಸಮಯದಲ್ಲೂ ನಮ್ಮೊಂದಿಗಿದೆ, ಅದು ಕೇವಲ ಮುಚ್ಚಿಹೋಯಿತಷ್ಟೆ. ನಾವು ಯಾರಾಗಿದ್ದೆವೋ, ನಾವು ಯಾರಾಗಿರುವೆವೋ ಮತ್ತು ನಾವು ಯಾರಾಗಲಿರುವೆವೋ ಆ ನಿಜವಾದ ಸ್ವಭಾವವನ್ನು ಯಾವುದು ತೆರೆಯುವುದೋ ಅದು ಧ್ಯಾನವಾಗಿದೆ! ಧ್ಯಾನವು ಸರಳತೆ ಮತ್ತು ಮುಗ್ಧತೆಯನ್ನು ತರುತ್ತದೆ. ಅದು ನಮ್ಮ ಬುದ್ಧಿಯನ್ನು ಇನ್ನೂ ತೀಕ್ಷ್ಣಗೊಳಿಸುತ್ತದೆ, ನಮ್ಮ ಭಾವನೆಗಳನ್ನು ಇನ್ನೂ ಕೋಮಲಗೊಳಿಸುತ್ತದೆ.

ಏಕಕಾಲದಲ್ಲಿ ವಿವೇಕಪೂರ್ಣರಾಗಿಯೂ ಸಂವೇದನಾಶೀಲರಾಗಿಯೂ ಇರಲು ನಾವು ಬಯಸುವುದಿಲ್ಲವೇ? ಕೆಲವರು ವಿವೇಕಪೂರ್ಣರಾಗಿಯೂ ಸದಾಚಾರಿಗಳಾಗಿಯೂ ಇರುತ್ತಾರೆ, ಆದರೆ ಅವರು ಸಂವೇದನಾಶೀಲರಾಗಿರುವುದಿಲ್ಲ. ಮತ್ತೆ ಕೆಲವರಿರುತ್ತಾರೆ, ಅವರು ಬಹಳ ಸಂವೇದನಾಶೀಲರಾಗಿರುತ್ತಾರೆ, ಆದರೆ ಅವರು ವಿವೇಚನೆಯನ್ನು ಕಳೆದುಕೊಳ್ಳುತ್ತಾರೆ. ನಮ್ಮಲ್ಲೇ ಮತ್ತು ನಮ್ಮ ಸುತ್ತಲಿನ ಜನರಲ್ಲಿ ಈ ಅಸಾಮರಸ್ಯವಾಗುತ್ತಿರುವುದು ನಮಗೆ ಕಾಣಿಸುವುದಿಲ್ಲವೇ?

ವಿವೇಕಪೂರ್ಣರಾಗಿರುವುದು ಮತ್ತು ಸಂವೇದನಾಶೀಲರಾಗಿರುವುದರ ನಡುವೆ, ಹೃದಯ ಮತ್ತು ಮನಸ್ಸುಗಳ ನಡುವೆ ಹೆಚ್ಚು ಅಗತ್ಯವಿರುವ ಸಮತೋಲನವನ್ನು ಧ್ಯಾನವು ತರುತ್ತದೆ. ಈ ಸಮತೋಲನವಿದ್ದರೆ ಅದರಿಂದ ಸಂತೋಷವು ಸಿಗುತ್ತದೆ; ಅದುವೇ ನಮಗೆಲ್ಲರಿಗೂ ಬೇಕಾಗಿರುವುದು ಮತ್ತು ಅದಕ್ಕಾಗಿಯೇ ನಾವೆಲ್ಲರೂ ಓಡುತ್ತಿರುವುದು!

ಜಿಡಿಪಿ (ಗ್ರಾಸ್ ಡೊಮೆಸ್ಟಿಕ್ ಪ್ರಾಡಕ್ಟ್)ಗಿಂತಲೂ ಹೆಚ್ಚು ನಾವು ಗಮನ ನೀಡಬೇಕಾಗಿರುವುದು ಜಿಡಿಹೆಚ್‌ (ಗ್ರಾಸ್ ಡೊಮೆಸ್ಟಿಕ್ ಹ್ಯಾಪ್ಪಿನೆಸ್) ನಕಡೆಗೆ ಎಂಬುದಾಗಿ ಇಂದು ಪ್ರಪಂಚದಾದ್ಯಂತ ಅಂಗೀಕರಿಸಲಾಗುತ್ತಿದೆ. ಧ್ಯಾನವು ನಮಗಿರುವ ರಹಸ್ಯವಾದ ಕೀಲಿಯಾಗಿದೆ; ಧ್ಯಾನವಿಲ್ಲದೆ ನಾವು ಆ ಸಂತೋಷವನ್ನು ಹೊಂದಲು ಸಾಧ್ಯವಿಲ್ಲ. ಧ್ಯಾನದ ಬಗ್ಗೆ ಹಲವಾರು ತಪ್ಪು ತಿಳುವಳಿಕೆಗಳಿವೆ. ಕೆಲವರು ಹೇಳುತ್ತಾರೆ ಅದು ಮನಸ್ಸಿನ ಮೇಲೆ ಗಮನ ನೀಡುವುದೆಂದು, ಕೆಲವರು ಹೇಳುತ್ತಾರೆ ಅದರ ಸಂಬಂಧ ಧಾರ್ಮಿಕ ಮಂತ್ರೋಚ್ಛಾರಣೆ ಅಥವಾ ದೇವರನ್ನು ಪ್ರಾರ್ಥಿಸುವುದರೊಂದಿಗಿದೆಯೆಂದು. ಧ್ಯಾನವು ಏಕಾಗ್ರತೆಯಲ್ಲ; ನನ್ನ ಮನಸ್ಸಿಗೆ ಧ್ಯಾನವು ಅದಕ್ಕೆ ವಿರುದ್ಧವಾದುದು. ಯಾವುದೇ ಕೆಲಸವನ್ನು ಮಾಡಲು ನಾವು ಪ್ರಯತ್ನವನ್ನು ಹಾಕಬೇಕಾಗುತ್ತದೆ. ಧ್ಯಾನಕ್ಕೆ ನಿಮಗೆ ಯಾವುದೇ ಪ್ರಯತ್ನವೂ ಬೇಕಾಗಿಲ್ಲ. ಧ್ಯಾನವು ವಿಶ್ರಾಂತಿಯನ್ನು ಪಡೆಯುವ ಒಂದು ಅಪ್ರಯತ್ನವಾದ ಮಾರ್ಗವಾಗಿದೆ.

ಪ್ರಾರ್ಥನೆಯೆಂಬುದು ದೇವರಲ್ಲಿ ಏನನ್ನಾದರೂ ಕೇಳಿಕೊಳ್ಳುವುದಾದರೆ, ಧ್ಯಾನವೆಂಬುದು ದೇವರಲ್ಲಿ, "ನಾನು ಇಲ್ಲಿ ನೀನು ಹೇಳುವುದನ್ನು ಕೇಳಲಿಕ್ಕಾಗಿಯಿದ್ದೇನೆ, ನಿನಗೆ ಹೇಳುವುದೇನಿದೆ?" ಎಂದು ಹೇಳುವುದಾಗಿದೆ. ಊಹಿಸಿ ನೋಡಿ, ಒಂದು ಮಗುವು ಬಂದು ನಿಮ್ಮಲ್ಲಿ ನಿರಂತರವಾಗಿ ಪ್ರಶ್ನೆಗಳನ್ನು ಕೇಳುತ್ತಾ ಇದ್ದರೆ; ನೀವು ಹೇಳುವುದನ್ನೂ ಕೇಳಿಸಿಕೊಳ್ಳದೆ; ನಿಮಗೆ ಹೇಗನಿಸಬಹುದು? ನಿಮಗೆ ಹತಾಶೆಯಾಗದೇ? ದೇವರು ಕೂಡಾ ಅದೇ ಸ್ಥಿತಿಯಲ್ಲಿರಬೇಕೆಂದು ನನಗನಿಸುತ್ತದೆ! ನೀವು ಧ್ಯಾನ ಮಾಡುವಾಗ ಅದು ಹೇಗೆಂದರೆ, "ಹೌದು, ನಾನು ಇಲ್ಲಿ ನೀನು ಹೇಳುವುದನ್ನು ಕೇಳಲಿಕ್ಕಾಗಿಯಿದ್ದೇನೆ, ನಿನಗೆ ಏನು ಹೇಳಲಿದೆಯೋ ಅದನ್ನು ಹೇಳು" ಎಂದು ಹೇಳುವಂತೆ! ಅದು ಧ್ಯಾನದ ದೃಷ್ಟಿಕೋನವಾಗಿದೆ.

ಧ್ಯಾನವು ಎಲ್ಲಾ ಭಾಷೆಗಳ ಜನರನ್ನು ಒಗ್ಗೂಡಿಸುತ್ತದೆ. ಪ್ರಾರ್ಥನೆಗಳು ಹಲವಾರು ಭಾಷೆಗಳಲ್ಲಿರಬಹುದು; ಹಿಂದೂಗಳು ಸಂಸ್ಕೃತದಲ್ಲಿ ಪ್ರಾರ್ಥಿಸುತ್ತಾರೆ, ಕ್ರಿಶ್ಚಿಯನ್ನರು ಇಂಗ್ಲೀಷಿನಲ್ಲಿ ಪ್ರಾರ್ಥಿಸುತ್ತಾರೆ, ಯಹೂದ್ಯರು ಹೀಬ್ರೂವಿನಲ್ಲಿ ಪ್ರಾರ್ಥಿಸುತ್ತಾರೆ, ಬೌದ್ಧರು ಸಂಸ್ಕೃತ ಮತ್ತು ಪಾಲಿಯಲ್ಲಿ ಪ್ರಾರ್ಥಿಸುತ್ತಾರೆ. ಹೆಚ್ಚುಕಡಿಮೆ ಒಂದೇ ಸಾರದೊಂದಿಗೆ ಪ್ರಾರ್ಥನೆಗಳು ವಿವಿಧ ಭಾಷೆಗಳಲ್ಲಿರುವ ವೇಳೆಗೆ, ಧ್ಯಾನವು ಭಾಷೆ, ಧರ್ಮ, ರಾಷ್ಟ್ರೀಯತೆ ಮತ್ತು ಲಿಂಗವನ್ನು ಸಹ ಮೀರಿದೆ.

ಧ್ಯಾನಕ್ಕೆ ಮೂರು ಸ್ವರ್ಣ ನಿಯಮಗಳಿವೆ, ಅವುಗಳನ್ನು ನೀವು ನಿಮ್ಮ ಮನಸ್ಸಿನಲ್ಲಿರಿಸಬೇಕು. ನೀವು ಅವುಗಳನ್ನು ಸದಾಕಾಲವೂ ನೆನಪಿಸುತ್ತಿರಬೇಕಾಗಿಲ್ಲ, ಸುಮ್ಮನೆ ಅವುಗಳನ್ನು ಅಲ್ಲಿರಿಸಿ; ನಿಮಗೆ ನಿಜಕ್ಕೂ ಅಗತ್ಯವಿರುವಾಗ ಅವುಗಳು ಬರುತ್ತವೆ.

ನೀವು ಧ್ಯಾನ ಮಾಡಲು ಶುರು ಮಾಡುವಾಗ, ನೀವು ಈ ಕೆಳಗಿನ ಮೂರು ವಿಷಯಗಳನ್ನು ಹೇಳಬಲ್ಲಿರಾ? :

೧. ನನಗೇನೂ ಬೇಕಾಗಿಲ್ಲ.

ನೀವು, "ನನಗೆ ಬಾಯಾರಿಕೆಯಾಗಿದೆ, ನನಗೆ ಒಂದು ಲೋಟ ನೀರು ಬೇಕು" ಎಂದು ಹೇಳಿದರೂ ಕೂಡಾ ಧ್ಯಾನವು ಆಗಲಾರದು. ನೀವು ಆ ಒಂದು ಲೋಟ ನೀರನ್ನು ಕುಡಿದು ಮುಗಿಸುವುದು ಒಳ್ಳೆಯದು. ಇದು ಮೊದಲನೆಯ ಸ್ವರ್ಣ ನಿಯಮ. ಕೇವಲ ಆ ೨೦ ನಿಮಿಷಗಳಿಗಾಗಿ, "ನನಗೇನೂ ಬೇಕಾಗಿಲ್ಲ" ಎಂದು ಹೇಳಿ.

ನೀವು ಹೀಗೆಂದು ಯೋಚಿಸಲೂಬಹುದು, "ನಾನೊಬ್ಬ ಸನ್ಯಾಸಿ ಅಥವಾ ಏಕಾಂತವಾಸಿಯಾಗಲು ಬಯಸುವುದಿಲ್ಲ, ನನಗೆ ಮಾಡಲು ಹಲವಾರು ವಿಷಯಗಳಿವೆ!" ಹೌದು, ನನ್ನ ಪ್ರೀತಿಪಾತ್ರರೇ, ಒಪ್ಪಿದೆ, ನಿಮಗೆ ಹಲವಾರು ವಿಷಯಗಳು ಬೇಕು, ಆದರೆ ಕೇವಲ ೨೦ ನಿಮಿಷಗಳವರೆಗೆ ನೀವು ಆ ರೈನ್‌ಕೋಟನ್ನು ತೆಗೆದು, ಸ್ಥಿರವಾಗಿ ಕುಳಿತು, ಏನನ್ನೂ ಬಯಸದೇ ಇರಬಲ್ಲಿರಾ?

೨. ನಾನು ಏನನ್ನೂ ಮಾಡಬೇಕಾಗಿಲ್ಲ.

೩. ನಾನು ಏನೂ ಅಲ್ಲ. 

ನೀವೊಬ್ಬ ಬಹಳ ಬುದ್ಧಿವಂತ ವ್ಯಕ್ತಿಯೆಂದು ಅಥವಾ ಅತ್ಯಂತ ಕೆಟ್ಟ ವ್ಯಕ್ತಿಯೆಂದು ಅಥವಾ ಒಬ್ಬ ಮೂರ್ಖನೆಂದು ನೀವು ಯೋಚಿಸಿದರೆ, ಆಗ ಕೂಡಾ ಅಲ್ಲಿ ಧ್ಯಾನಕ್ಕೆ ಯಾವುದೇ ಅವಕಾಶವಿಲ್ಲ. ನಿಮಗೆ ಗೊತ್ತಾ ಒಂದು ಮಾತಿದೆ, ಒಬ್ಬ ಸಿರಿವಂತ ವ್ಯಕ್ತಿಯು ಸೂಜಿಯ ಕಣ್ಣಿನ ಮೂಲಕ ಹಾದುಹೋಗಲಾರನು. ಅದೇ ರೀತಿ, ನೀವು ಶ್ರೀಮಂತ ಅಥವಾ ಬಡವ ಅಥವಾ ಪರಮಪೂಜ್ಯ ವ್ಯಕ್ತಿ ಅಥವಾ ಅತ್ಯಂತ ಕೆಟ್ಟ ಪಾಪಿಯೆಂದು ನೀವು ಯೋಚಿಸಿದರೆ, ಆಗ ಕೂಡಾ ಧ್ಯಾನವು ಸಾಧ್ಯವಿಲ್ಲ. ನಾವು ನಮ್ಮ ಮೇಲೆಯೇ ಹಾಕಿಕೊಳ್ಳುವ ಎಲ್ಲಾ ಗುರುತುಪಟ್ಟಿಗಳನ್ನು ಸ್ವಲ್ಪ ಸಮಯಕ್ಕೆ ನಾವು ಅತ್ತಕಡೆ ಇಡಬೇಕು ಮತ್ತು, "ನಾನು ಏನೂ ಅಲ್ಲ, ನನಗೇನೂ ಬೇಕಾಗಿಲ್ಲ ಮತ್ತು ನಾನೇನೂ ಮಾಡಬೇಕಾಗಿಲ್ಲ" ಎಂದು ಹೇಳಬೇಕು. ಧ್ಯಾನವಾಗುವುದಕ್ಕೆ ಬೇಕಾಗಿರುವ ಮೂರು ನಿಯಮಗಳಾಗಿವೆ ಇವು. ಧ್ಯಾನದ ಪಯಣವು ಚಲನೆಯಿಂದ ಸ್ಥಿರತೆಯ ಕಡೆಗೆ ಮತ್ತು ಶಬ್ದದಿಂದ ಮೌನದ ಕಡೆಗೆ ಇರುವುದಾಗಿದೆ.