ಶುಕ್ರವಾರ, ಜನವರಿ 29, 2016

ನಿಮ್ಮ ಒಳ್ಳೆಯ ಗುಣವು ಪ್ರಕಟವಾಗಲಿ

೨೯ ಜನವರಿ ೨೦೧೬
ಬೆಂಗಳೂರು

ಪ್ರಶ್ನೆ: ಜಾಗತಿಕ ಶಾಂತಿಯು ವೈಯಕ್ತಿಕ ಶಾಂತಿಯನ್ನು ಅವಲಂಬಿಸಿದೆಯೇ?

ಶ್ರೀ ಶ್ರೀ ರವಿ ಶಂಕರ್: ವೈಯಕ್ತಿಕ ಶಾಂತಿಯಿಲ್ಲದೆ ಜಾಗತಿಕ ಶಾಂತಿಯನ್ನು ಹೊಂದುವುದು ಅಸಾಧ್ಯ. ವೈಯಕ್ತಿಕ ಸಂತೋಷವು ಸಾಮೂಹಿಕ ಸಂತೋಷವನ್ನು ತರುತ್ತದೆ. ವ್ಯಕ್ತಿಯನ್ನು ಹೊರತುಪಡಿಸಿದ ಸಮಾಜವಿರುವುದು ಅಸಾಧ್ಯ.

ಶಾಂತಿಯು ವ್ಯಕ್ತಿಯ ಒಳಗಿರುತ್ತದೆ, ಒಬ್ಬನ ಮನಸ್ಸಿನಲ್ಲಿ ಮತ್ತು ಒಬ್ಬನ ಹೃದಯದಲ್ಲಿ. ಒಬ್ಬ ವ್ಯಕ್ತಿಯು ಶಾಂತಿಯುತವಾಗಿಲ್ಲದಿದ್ದರೆ ಆ ಕುಟುಂಬದಲ್ಲಿ ಶಾಂತಿಯಿರಲು ಅಸಾಧ್ಯ ಮತ್ತು ಕುಟುಂಬಗಳು ಸಾಮರಸ್ಯದಲ್ಲಿರದಿದ್ದರೆ ಅಥವಾ ಶಾಂತಿಯುತವಾಗಿರದಿದ್ದರೆ ಸಮಾಜದಲ್ಲಿ ಶಾಂತಿಯಿರುವುದು ಅಸಾಧ್ಯ. ಪ್ರತಿಯೊಂದು ಕುಟುಂಬದಲ್ಲಿ ಶಾಂತಿಯಿಲ್ಲದಿದ್ದರೆ ಸಮಾಜದಲ್ಲಿ ಶಾಂತಿಯಿರುವುದು ಅಸಾಧ್ಯ, ಮತ್ತು ಸಮಾಜಗಳು ಪ್ರಪಂಚವನ್ನು ನಿರ್ಮಿಸುತ್ತವೆ. ಆದ್ದರಿಂದ ಜಾಗತಿಕ ಶಾಂತಿಯ ಮೂಲ ಘಟಕವು ವೈಯಕ್ತಿಕ ಶಾಂತಿಯಾಗಿದೆ. ವ್ಯಕ್ತಿಗೆ ಶಾಂತಿಯನ್ನು ತರುವುದು ಜ್ಞಾನವಾಗಿದೆ. ಎಲ್ಲಾ ಸೌಲಭ್ಯಗಳನ್ನು, ಉಪಕರಣಗಳನ್ನು, ಆಹಾರವನ್ನು, ಮನೋರಂಜನೆಯನ್ನು, ಸೌಕರ್ಯಗಳನ್ನು ಹೊಂದಿರುವ ಹೊರತಾಗಿಯೂ ಜ್ಞಾನವಿಲ್ಲದೇ ಇದ್ದರೆ ಒಬ್ಬ ವ್ಯಕ್ತಿಯಲ್ಲಿ ಯಾವುದೇ ಶಾಂತಿಯಿರುವುದಿಲ್ಲ. ಇವುಗಳೆಲ್ಲಾ ನಿಜವಾಗಿಯೂ ಶಾಂತಿಯನ್ನು ತರುವುದಿಲ್ಲ. ಶಾಂತಿಯನ್ನು ತರುವುದು ಯಾವುದೆಂದರೆ ವಿಶಾಲ ದೃಷ್ಟಿಕೋನ ಮತ್ತು ಜೀವನವನ್ನು ವ್ಯಾಪಕವಾದ ವಿಶ್ವದ ಹಿನ್ನೆಲೆಯಲ್ಲಿ ನೋಡುವ ಜ್ಞಾನ.

ತಮಾಷೆಯ ವಿಷಯವೆಂದರೆ, ಭೂಮಿಯ ಮೇಲಿರುವ ಜನರಲ್ಲಿ ಬಹಳ ಕಡಿಮೆ ಶೇಕಡಾದಷ್ಟು ಜನರು ಕೂಡಾ ನಿಜಕ್ಕೂ ಶಾಂತವಾಗಿದ್ದರೆ ಅವರು ಶಾಂತಿಸ್ಥಾಪಕರಾಗುತ್ತಾರೆ. ಶೀತ ಅಥವಾ ಕೆಮ್ಮಿನಂತಹ ಯಾವುದೇ ಸಾಂಕ್ರಾಮಿಕ ರೋಗದಷ್ಟೇ ಸಾಂಕ್ರಾಮಿಕವಾಗಿದೆ ಶಾಂತಿ. ಶಾಂತಿಯು ವೈರಲ್ ಆಗಿದೆ! ನಿಜವಾದ ಶಾಂತಿ ಮತ್ತು ಜ್ಞಾನವು ಸಾಂಕ್ರಾಮಿಕವಾಗಿದೆಯೆಂದು ನಾನು ಹೇಳುತ್ತೇನೆ.

ಪ್ರಶ್ನೆ: ಪ್ರಜ್ಞೆಯನ್ನು ಉನ್ನತಿಗೇರಿಸುವಲ್ಲಿ ಸಂಗೀತವು ಯಾವ ಪಾತ್ರವನ್ನು ವಹಿಸಬಲ್ಲದು?

ಶ್ರೀ ಶ್ರೀ ರವಿ ಶಂಕರ್: ಸಂಗೀತವು ಸಾಮರಸ್ಯಪೂರ್ಣವಾದ ಧ್ವನಿಯಾಗಿದೆ. ಒಳಗಡೆ ಸಾಮರಸ್ಯವಿದ್ದಲ್ಲಿ ಆಗ ಸಂಗೀತವು ಒಂದು ಹೊರೆಯಾಗಿದೆ, ಆದರೆ ಒಳಗಡೆ ಸಾಮರಸ್ಯವಿಲ್ಲದಿರುವಾಗ ಖಂಡಿತವಾಗಿಯೂ ಸಂಗೀತದ ಬಾಹ್ಯ ಸಾಮರಸ್ಯವು ಆಂತರಿಕ ಶಾಂತಿಯನ್ನು ಮತ್ತು ಸಾಮರಸ್ಯವನ್ನು ಸೃಷ್ಟಿಸಬಲ್ಲದು.

ಒಬ್ಬ ಧ್ಯಾನ ಮಾಡುವವನಿಗೆ, ಒಬ್ಬ ಯೋಗಿಗೆ ಸಂಗೀತವು ಸ್ವಲ್ಪ ಕರ್ಕಶವಾಗಿ ಅನಿಸುತ್ತದೆ, ಯಾಕೆಂದರೆ ಅವನು ಅಥವಾ ಅವಳು ಸಂಗೀತದ ಸಮರಸಕ್ಕಿಂತ ಹೆಚ್ಚು ಉತ್ತಮವಾದ ಒಂದರ ರುಚಿ ನೋಡಿರುತ್ತಾನೆ ಅಥವಾ ನೋಡಿರುತ್ತಾಳೆ - ಅದುವೇ ಮೌನದ ತಾಳ. ಅದನ್ನೇ ಪ್ರಾಚೀನ ಯೋಗಿಗಳು "ಒಂದು ಕೈಯ ಚಪ್ಪಾಳೆ" ಎಂದು ಕರೆದುದು. ಬ್ರಹ್ಮಾಂಡದ ಅನುಕಂಪನ, ಆದಿ ಧ್ವನಿ - ಈ ಎಲ್ಲಾ ಹೆಸರುಗಳನ್ನು ನೀಡಲಾಗಿರುವುದು ಆಳದಲ್ಲಿರುವ ಆ ಸಮರಸತೆಗೆ; ಮೂಲಭೂತವಾಗಿ ಅದು ಮೌನವೇ ಆಗಿದೆ.

ಪ್ರಶ್ನೆ: ಜೀವನವು ಮೊದಲಿಗಿಂತ ಅಷ್ಟೊಂದು ವ್ಯತ್ಯಸ್ತವಾಗಿರುವುದನ್ನು ಪರಿಗಣಿಸಿದಾಗ, ಇವತ್ತು ಸಂಸ್ಕೃತಿಯು ಎಷ್ಟು ಪ್ರಸ್ತುತ?

ಶ್ರೀ ಶ್ರೀ ರವಿ ಶಂಕರ್: ಈ ವಿಷಯಗಳನ್ನು ಯಾವತ್ತೂ ನೀವು ಸಾರ್ವತ್ರೀಕರಣಗೊಳಿಸಲು ಸಾಧ್ಯವಿಲ್ಲ. ಪ್ರಪಂಚದಲ್ಲಿ ಎಲ್ಲಾ ರೀತಿಯ ಪರಿಸ್ಥಿತಿಗಳಿರುತ್ತವೆ, ಎಲ್ಲಾ ರೀತಿಯ ಜನರಿರುತ್ತಾರೆ, ಎಲ್ಲಾ ರೀತಿಯ ಸಂಸ್ಕೃತಿಗಳಿರುತ್ತವೆ. ಸಂಸ್ಕೃತಿಯಿಲ್ಲದೆ ಜೀವಿಸಲು ಜನರಿಗೆ ಸಾಧ್ಯವಿಲ್ಲ. ಸಂಸ್ಕೃತಿ ಬದಲಾಗಲೂಬಹುದು, ಆದರೆ ಒಂದು ಸಂಸ್ಕೃತಿಯಿಲ್ಲದೆ ಒಂದು ಸಮಾಜದಲ್ಲಿ ಬದುಕಲು ನಿಮಗೆ ಸಾಧ್ಯವಿಲ್ಲ. "ನಮ್ಮದು ಸಂಸ್ಕೃತಿಯಿಲ್ಲದ ಒಂದು ಸಮಾಜ" ಎಂದು ಯಾವುದಾದರೂ ಸಮಾಜವು ಹೇಳಿಕೊಂಡರೆ, ನಾನು ನಿಮಗೆ ಹೇಳುವುದೇನೆಂದರೆ, ಅದುವೇ ಒಂದು ಸಂಸ್ಕೃತಿಯೆಂದು. ಮತ್ತು ಪ್ರಪಂಚದಲ್ಲಿನ ಎಲ್ಲಾ ವಿವಿಧ ಸಂಸ್ಕೃತಿಗಳನ್ನು ಕಾಪಾಡುವುದು ನಮ್ಮ ಕರ್ತವ್ಯ ಯಾಕೆಂದರೆ, ಅವುಗಳು ಪ್ರಪಂಚದ ಪರಂಪರೆಯಾಗಿದೆ.

ಪ್ರಶ್ನೆ: ಸೇವೆಯು ತೃಪ್ತಿಯನ್ನು ತರುತ್ತದೆ, ಪ್ರತಿಯೊಬ್ಬರೂ ಅದನ್ನು ಯಾಕೆ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದಿಲ್ಲ? ಅದು ಯಾಕೆ ಎಲ್ಲರಿಗೂ ಸಹಜವಾಗಿ ಬರುವುದಿಲ್ಲ?

ಶ್ರೀ ಶ್ರೀ ರವಿ ಶಂಕರ್: ಸೇವೆಯನ್ನು ಮಾಡದಿರುವವನೊಬ್ಬನು ಒತ್ತಡದಲ್ಲಿರುವವನಾಗಿರುವುದು, ಅಸುರಕ್ಷಿತ, ಸ್ವಾರ್ಥಪರ ಅಥವಾ ಜ್ಞಾನವಿಲ್ಲದಿರುವವನಾಗಿರುವುದು ಸ್ವಾಭಾವಿಕವೇ. ಸ್ವಲ್ಪವಾದರೂ ಜ್ಞಾನವಿದ್ದರೆ, ಸೇವೆಯು ಸಹಜವಾಗಿರುತ್ತದೆ. ನೀವು ಸುಸಂಸ್ಕೃತರೂ ನಾಗರಿಕರೂ ಆಗಿದ್ದರೆ, ಆಗ ಸೇವೆಯು ಸಹಜವಾಗಿರುತ್ತದೆ. ಸೇವೆ ಮಾಡುವುದನ್ನು ಯಾರೂ ನಿಮಗೆ ಕಲಿಸಬೇಕಾಗಿಲ್ಲ. ಯಾವುದಾದರೂ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಯಾರೂ ನಿಮಗೆ ಹೇಳಬೇಕಾಗಿಲ್ಲ.
ಚೆನ್ನೈ ಪ್ರವಾಹದ ಸಂದರ್ಭದಲ್ಲಿ ಏನಾಯಿತು ನೋಡಿ? "ನೀವೆಲ್ಲಾ ಬಂದು ಸಹಾಯ ಮಾಡಿ" ಎಂದು ಯಾರೂ ಜನರನ್ನು ಆಹ್ವಾನಿಸಲಿಲ್ಲ. ಚೆನ್ನೈಯ ಇಡೀ ಯುವಕರು, ಯುವಕರು ಮಾತ್ರವಲ್ಲ, ಚೆನ್ನೈಯ ಜನರೆಲ್ಲಾ ಒಟ್ಟು ಸೇರಿ ಪರಸ್ಪರ ಸಹಾಯ ಮಾಡಿದರು. ಈ ದುರಂತಗಳು ಯಾವುದೋ ವಿಚಿತ್ರವಾದ ರೀತಿಯಲ್ಲಿ ಜನರನ್ನು ಒಂದುಗೂಡಿಸುತ್ತವೆ, ಶತ್ರುಗಳನ್ನು ಒಂದುಗೂಡಿಸುತ್ತವೆ. ತಮ್ಮ ಸಹಜವಾದ ಮಾನವೀಯ ಮೌಲ್ಯಗಳನ್ನು ಅರಿತುಕೊಳ್ಳಲು ದುರಂತಗಳು ಜನರನ್ನು ವಿವಶರಾಗಿಸುತ್ತವೆ. ನೀವು ಬುದ್ಧಿವಂತರಾಗಿದ್ದರೆ, ನಿಮ್ಮ ಅತ್ಯಂತ ಒಳ್ಳೆಯ ಗುಣವನ್ನು ಹೊರತರುವುದಕ್ಕಾಗಿ ನೀವೊಂದು ದುರಂತಕ್ಕಾಗಿ ಕಾಯುವುದಿಲ್ಲ.  

ಪ್ರಶ್ನೆ: ಜೀವನದಲ್ಲಿ ನಾವೊಂದು ಒಳ್ಳೆಯ ಹಾಸ್ಯಪ್ರಜ್ಞೆಯನ್ನು ಹೊಂದಿರುವುದು ಹೇಗೆ?

ಶ್ರೀ ಶ್ರೀ ರವಿ ಶಂಕರ್: ನೀನಿದರ ಬಗ್ಗೆ ಮರೆತುಬಿಡಬೇಕೆಂದು ನನಗನಿಸುತ್ತದೆ. ಹಾಸ್ಯವಿರಬೇಕೆಂದು ಬಯಸುವುದೇ ಹಾಸ್ಯವಿರುವುದಕ್ಕೆ ಒಂದು ತಡೆಯಾಗಿದೆ. ಅದು ಹೇಗೆಂದರೆ ಒಬ್ಬರು, "ನಾನು ನಿದ್ರಿಸಲು ಬಯಸುತ್ತೇನೆ, ನಾನು ನಿದ್ರಿಸಲು ಬಯಸುತ್ತೇನೆ, ನಾನು ನಿದ್ರಿಸಲು ಬಯಸುತ್ತೇನೆ" ಎಂದು ಹೇಳುವಂತೆ. ನಿದ್ರಿಸಲು ಬಯಸುವ ಆ ಜ್ವರತೆಯೇ ಒಂದು ತಡೆಯಾಗುತ್ತದೆ. ನೀವೊಂದು ಚಿಕ್ಕ ನಿದ್ರೆ ಮಾಡುವ ಆತುರದಲ್ಲಿದ್ದರೆ, ಅದು ಸಾಧ್ಯವಾಗದು. ಅದೇ ರೀತಿ, "ನಾನು ಹಾಸ್ಯಮಯವಾಗಿರಲು ಬಯಸುತ್ತೇನೆ" ಎಂದು ಯೋಚಿಸುವುದು; ಅದು ಸಾಧ್ಯವಾಗದು! ಸುಮ್ಮನೆ ಆರಾಮವಾಗಿರಿ ಮತ್ತು ಇತರರಿಗೆ ನಿಮ್ಮ ಮೇಲಿರುವ ಅಭಿಪ್ರಾಯದ ಬಗ್ಗೆ ಚಿಂತಿಸಬೇಡಿ. ಸೂತ್ರವೇನೆಂದರೆ, ನಿಮ್ಮ ಬಗ್ಗೆ ಇತರರು ಏನನ್ನು ಯೋಚಿಸುವರು ಎಂಬುದರ ಬಗ್ಗೆ ಚಿಂತಿಸಬೇಡಿ.

ಪ್ರಶ್ನೆ: ಬ್ರಹ್ಮಚರ್ಯವೆಂದರೇನು? ಹಲವಾರು ವಿಚಲನೆಗಳಿರುವಾಗ ನಾನು ಬ್ರಹ್ಮಚರ್ಯವನ್ನು ಅನುಸರಿಸುವುದು ಹೇಗೆ?

ಶ್ರೀ ಶ್ರೀ ರವಿ ಶಂಕರ್: "ಬ್ರಹ್ಮ" ಅಂದರೆ ಅನಂತತೆ. "ಚರ್ಯ" ಅಂದರೆ ಅನಂತತೆಯಲ್ಲಿ ಚಲಿಸುವುದು. ಅಂದರೆ, ಸಂಪೂರ್ಣ (ಅನಂತತೆ)ದ ಮೇಲೆ ಕೇಂದ್ರೀಕೃತವಾದ ಮನಸ್ಸಿನ ಸ್ಥಿತಿ - ಅಂತಹ ಒಂದು ಮನಸ್ಸಿನಲ್ಲಿ ಯಾವುದೇ ಸ್ವಾಧೀನತೆಯ ಭಾವವಿಲ್ಲ, ಯಾವುದೇ ಕಾಮುಕತೆಯಿಲ್ಲ, ಯಾವುದೇ ಲೋಭವಿಲ್ಲ; ಈ ನಕಾರಾತ್ಮಕ ಧಾರಣೆಗಳಲ್ಲಿ ಯಾವುದೂ ಮನಸ್ಸನ್ನು ಮಸುಕಾಗಿಸುವುದಿಲ್ಲ. ಇದುವೇ ಅದರ ಸರಿಯಾದ ಅರ್ಥ. ಇಂದ್ರಿಯ ನಿಗ್ರಹವು ಇದರ ಒಂದು ಫಲಿತಾಂಶವಾಗಿದೆ; ಅದು ಇದರ ಒಂದು ಭಾಗವಾಗಿದೆ.

ನೋಡಿ, ನಿಮಗೊಂದು ಪರೀಕ್ಷೆ ಅಥವಾ ಏನಾದರೂ ಮುಖ್ಯವಾದ ಕಾರ್ಯ ಮಾಡಲಿರುವಾಗ; ನಿಮ್ಮ ಮನಸ್ಸು ಅದರಲ್ಲಿರುವಾಗ, ಆಗ ಮನಸ್ಸು ಶರೀರದ ಯಾವುದೇ ಅಂಗದ ಕಡೆಗೂ ಹೋಗುವುದಿಲ್ಲ ಅಥವಾ ಯಾವುದಾದರೂ ಆಕರ್ಷಣೆ ಅಥವಾ ಲೈಂಗಿಕತೆಯ ಕಡೆಗೆ ಗಮನ ನೀಡುವುದಿಲ್ಲ. ನೀವು ವ್ಯಸ್ತರಾಗಿರುತ್ತೀರಿ. ನಿಮ್ಮ ಮನಸ್ಸು ಒಂದು ದೊಡ್ಡದರ ಕಡೆಗೆ ಸಾಗುತ್ತಿರುತ್ತದೆ. ಅದಲ್ಲವೇ ಒಬ್ಬರ ಅನುಭವ? ಆಗ ನೀವು ಬ್ರಹ್ಮಚರ್ಯದ ಕ್ಷಣಗಳನ್ನು ಅನುಭವಿಸುತ್ತೀರಿ. ನೀವು ಯಾವುದರಲ್ಲಾದರೂ ತೊಡಗಿದ್ದರೆ, ಅಥವಾ ನೀವು ಆಳವಾದ ಪ್ರೇಮದಲ್ಲಿರುವಾಗ ಕೂಡಾ ಇದು ತನ್ನಿಂತಾನೇ ಆಗುತ್ತದೆ. ಆದ್ದರಿಂದ ಬ್ರಹ್ಮಚರ್ಯವು ಒಂದು ಆಗುವಿಕೆಯಾಗಿದೆ, ಅದುವೇ ಒಂದು ಅಭ್ಯಾಸವಲ್ಲ. ನಿಮ್ಮ ಪ್ರಜ್ಞೆಯು ವಿಸ್ತರಿಸುವಾಗ ಆಗುವುದು ಅದು.

ಪ್ರಶ್ನೆ: ಋಗ್ವೇದದಲ್ಲಿ ಅಗ್ನಿ ಸೂಕ್ತವು ಹೀಗೆಂದು ಹೇಳುತ್ತದೆ, "ಅಗ್ನಿಯು ನಮ್ಮನ್ನು ಜ್ಞಾನದ ಕಡೆಗೆ ಕೊಂಡೊಯ್ಯಬೇಕು". ಇದರ ಅರ್ಥವೇನು?

ಶ್ರೀ ಶ್ರೀ ರವಿ ಶಂಕರ್: ಅಗ್ನಿ ಅಂದರೆ ಸಂಪೂರ್ಣ ವಿಶ್ವವನ್ನು ಆವರಿಸಿರುವ ಆ ಪ್ರಜ್ಞೆ, ಆ ಶಕ್ತಿ - ಆ ಪ್ರಜ್ಞೆಯಿಂದ ನೀವು ಮಾಡಲ್ಪಟ್ಟಿದ್ದೀರಿ, ಅದರಿಂದಲೇ ಎಲ್ಲವೂ ಮಾಡಲ್ಪಟ್ಟಿದೆ. ಹಲವು ಸಲ ಜನರು, "ಆತ್ಮದಲ್ಲಿರುವ ಅಗ್ನಿ" ಎಂದು ಹೇಳುತ್ತಾರೆ. ಈ ಅಗ್ನಿಯು ಒಂದು ಮರ್ತ್ಯ ಅಗ್ನಿಯಲ್ಲ, ನಿಮ್ಮ ಜೀವನವೇ ಅಗ್ನಿಯಾಗಿದೆ. ಪ್ರಜ್ಞೆಯು ಅಗ್ನಿಯಾಗಿದೆ. ಜ್ವಾಲೆಯು ಆಮ್ಲಜನಕದಿಂದಾಗಿ ಅಸ್ತಿತ್ವದಲ್ಲಿರುತ್ತದೆ, ಹಾಗೆಯೇ ನಿಮ್ಮ ಜೀವನವೂ ಆಮ್ಲಜನಕದಿಂದ ಅಸ್ತಿತ್ವದಲ್ಲಿದೆ. ನೀವೊಂದು ಗಾಜಿನಿಂದ ಮುಚ್ಚಲ್ಪಟ್ಟಿದ್ದೀರಿ ಎಂದು ಊಹಿಸಿಕೊಳ್ಳಿ, ಅದರಲ್ಲಿ ಆಮ್ಲಜನಕ ಇರುವಷ್ಟು ಕಾಲ ಮಾತ್ರ ನೀವು ಜೀವಂತವಾಗಿರುವಿರಿ. ಆದ್ದರಿಂದ ನಿಮ್ಮ ಪ್ರಾಣಶಕ್ತಿಯು ಬೆಂಕಿಗೆ ಸಮಾನವಾಗಿದೆ.

ಆ ಮಂತ್ರವು ಒಂದು ಸುಂದರವಾದ ಪ್ರಾರ್ಥನೆಯಾಗಿದೆ. ಅದು ಹೀಗೆಂದು ಹೇಳುತ್ತದೆ, "ನನ್ನನ್ನು ಒಂದು ಹೊಸ ಪಥದೊಳಕ್ಕೆ ಕೊಂಡೊಯ್ಯು. ಪ್ರಪಂಚದಲ್ಲಿರುವ ಜನರಿಗೆ ನಾನು ಒಳ್ಳೆಯದನ್ನು ಮಾಡುವಂತಾಗಲಿ. ವಿಶ್ವದಲ್ಲಿನ ಎಲ್ಲಾ ದೈವಿಕ ಶಕ್ತಿಗಳು ನನಗೆ ಸಹಾಯ ಮಾಡಲಿ, ನನ್ನನ್ನು ಜೊತೆಯಲ್ಲಿ ಕರೆದೊಯ್ಯು". ಇದು ಎಷ್ಟೊಂದು ಸುಂದರವಾದ ಪ್ರಾರ್ಥನೆ! ಪ್ರಾಚೀನ ಜನರಲ್ಲಿ ಅಂತಹ ಆಳವಾದ ಜ್ಞಾನವಿತ್ತು. ಪ್ರಾಥನೆಗಳಲ್ಲಿ ಕೂಡಾ ಅವರು ಎಲ್ಲರನ್ನೂ ಸೇರಿಸಿಕೊಂಡಿದ್ದರು. ಎಲ್ಲಾ ಮಂತ್ರಗಳ ತಾಯಿಯೆಂದು ಪರಿಗಣಿಸಲಾಗಿರುವ ಗಾಯತ್ರಿ ಮಂತ್ರ ಕೂಡಾ ಹೀಗೆಂದು ಹೇಳುತ್ತದೆ, "ದೈವಿಕತೆಯು ನನ್ನ ಬುದ್ಧಿಶಕ್ತಿಗೆ ಸ್ಫೂರ್ತಿ ನೀಡಲಿ ಮತ್ತು ನನ್ನ ಜೀವನಕ್ಕೆ ಸ್ಫೂರ್ತಿ ನೀಡಲಿ", ಯಾಕೆಂದರೆ ನಿಮ್ಮ ಜೀವನವು ಚಿಂತನೆಯ ಮೇಲೆ ಆಧರಿತವಾಗಿದೆ. ಚಿಂತನಾ ಪ್ರಕ್ರಿಯೆಯು ದೈವಿಕತೆಯಿಂದ ಸ್ಫೂರ್ತಿ ಪಡೆದರೆ, ಆಗ ಅಲ್ಲಿ ಯಾವುದೇ ತಪ್ಪುಗಳಾಗಲು ಸಾಧ್ಯವಿಲ್ಲ, ಅಲ್ಲಿ ಯಾವುದೇ ವಿಷಾದಗಳಿರಲು ಸಾಧ್ಯವಿಲ್ಲ. ಯಾವುದೇ ದುಃಖವಿರುವುದಿಲ್ಲ.

ಪ್ರಶ್ನೆ: ನನ್ನಲ್ಲೊಂದು ವೈಜ್ಞಾನಿಕ ಮನೋಧರ್ಮ ಮತ್ತು ವಿಧಾನವಿರುವಾಗ ವಿಶ್ವದಲ್ಲಿನ ದೇವತೆಗಳಲ್ಲಿ ನಾನು ವಿಶ್ವಾಸವಿರಿಸಲು ಹೇಗೆ ಸಾಧ್ಯ?

ಶ್ರೀ ಶ್ರೀ ರವಿ ಶಂಕರ್: ಈ ಗ್ರಹದ ಮೇಲೆ ವಿವಿಧ ತರಂಗಾಂತರಗಳು ಮತ್ತು ಕಂಪನಗಳು ಇವೆಯೆಂಬುದನ್ನು ಒಂದು ವೈಜ್ಞಾನಿಕ ವಿಧಾನದದೊಂದಿಗೆ ಮಾತ್ರ ನಿಮಗೆ ನೋಡಲು ಸಾಧ್ಯ. ನೀವು ಯಾರು? ನೀವು ಕೇವಲ ಒಂದು ಆವರ್ತನ ವಿಶ್ಲೇಷಕ (ಫ್ರೀಕ್ವೆನ್ಸಿ ಅನಲೈಸರ್). ನಿಮ್ಮ ಮೆದುಳು ಒಂದು ಆವರ್ತನ ವಿಶ್ಲೇಷಕವಾಗಿದೆ. ಕೇವಲ ನಿರ್ದಿಷ್ಟವಾದ ಆವರ್ತನಗಳನ್ನು ಮಾತ್ರ ಹಿಡಿಯಲು ಅದು ಸಮರ್ಥವಾಗಿದೆ, ಅಲ್ಲವೇ? ನಿಮ್ಮ ಗ್ರಹಣ ಶಕ್ತಿಯು ಒಂದು ನಿರ್ದಿಷ್ಟವಾದ ಆವರ್ತನ ಶ್ರೇಣಿ (ಬ್ಯಾಂಡ್ ವಿಡ್ತ್)ಗೆ ಸೀಮಿತವಾಗಿದೆ. ಅದರಿಂದಾಚೆಗೆ ಹೋಗಲು ಅದಕ್ಕೆ ಸಾಧ್ಯವಿಲ್ಲ. ನಿಮ್ಮ ಗ್ರಹಣಾತ್ಮಕ ಸಾಮರ್ಥ್ಯವನ್ನು ಮೀರಿ ಗ್ರಹಿಸುವ ಸಾಮರ್ಥ್ಯವು ನಿಮಗೆ ಸಿಗುತ್ತದೆ ಎಂದು ಊಹಿಸೋಣ; ಇಲ್ಲದಿದ್ದರೆ ನೀವು ನೋಡದಿರುವ ಅನೇಕ ವಿಷಯಗಳನ್ನು ನೀವು ನೋಡಬಹುದು. ನೋಡಿ, ಯಾವುದು ನಿಮಗೆ ಕತ್ತಲೆಯಾಗಿದೆಯೋ ಅದು ಒಂದು ಬೆಕ್ಕು ಅಥವಾ ಒಂದು ಗೂಬೆಗೆ ಕತ್ತಲಲ್ಲ. ಒಂದು ಗೂಬೆಯ ಆವರ್ತನ ಶ್ರೇಣಿಯು ನಿಮ್ಮದಕ್ಕಿಂತ ದೊಡ್ಡದು. ಒಂದು ಗೂಬೆಯು ನಿಮಗಿಂತ ಹೆಚ್ಚು ನೋಡಬಲ್ಲದು. ದೇವತೆಗಳೆಂದರೆ ಕಿರೀಟವನ್ನು ಧರಿಸಿಕೊಂಡು ಮೇಲೆ ಸ್ವರ್ಗದಲ್ಲಿ ಕುಳಿತಿರುವ ಯಾವುದೋ ಜನರಲ್ಲ, ಅವರು ಪ್ರಜ್ಞೆಯ ಒಂದು ಅಭಿವ್ಯಕ್ತಿ - ಸೂರ್ಯನ ಬೆಳಕಿನಲ್ಲಿ ಏಳು ಬಣ್ಣಗಳಿರುವಂತೆಯೇ. ಸೂರ್ಯನ ಕಿರಣಗಳಲ್ಲಿ ಒಂದೇ ಒಂದು ಬಣ್ಣವಿರುತ್ತದೆ, ಆದರೆ ನೀವು ಸೂರ್ಯನ ಕಿರಣಗಳನ್ನು ಚದುರಿಸಿದಾಗ, ನಿಮಗೆ ಏಳು ಬೇರೆ ಬೇರೆ ಬಣ್ಣಗಳು ಸಿಗುತ್ತವೆ. ಅದೇ ರೀತಿಯಲ್ಲಿ, ನಿಮ್ಮ ಪ್ರಜ್ಞೆಯು ಹಲವಾರು ಸಾಮರ್ಥ್ಯಗಳನ್ನು, ಹಲವಾರು ರೂಪಗಳನ್ನು ಮತ್ತು ಹಲವಾರು ಜಟಿಲತೆಗಳನ್ನು ಹೊಂದಿದೆ. ಪ್ರಜ್ಞೆಯ ಈ ಸಂಕೀರ್ಣವಾದ ಪ್ರಕ್ರಿಯೆಗಳು ವಿವಿಧ ದೇವತೆಗಳೆಂದು ಕರೆಯಲ್ಪಡುತ್ತವೆ.

ಆಧ್ಯಾತ್ಮ ವಿಜ್ಞಾನದಲ್ಲಿ ನೀವು ಆಳವಾಗಿ ಹೋದಂತೆ ಅದು ಮನಸ್ಸನ್ನು ಆಶ್ಚರ್ಯಚಕಿತಗೊಳಿಸುತ್ತದೆ. ನಿಮ್ಮಲ್ಲೊಂದು ವೈಜ್ಞಾನಿಕ ಮನೋಧರ್ಮವಿರಲೇಬೇಕು, ಆಗ ಮಾತ್ರ ನಿಮಗೆ ಅದರೊಳಕ್ಕೆ ಹೋಗಲು ಸಾಧ್ಯ. ಕೇವಲ ನಂಬಿಕೆಯು ಕೆಲಸ ಮಾಡದು. ಕೊಲೊರಾಡೊದಿಂದ ಇಲ್ಲಿಗೆ ಒಬ್ಬ ವಿಜ್ಞಾನಿ ಬಂದಿದ್ದನು. ಅವನಲ್ಲೊಂದು ಟೈಟಾನಿಯಂ ರೇಡಾರ್ ಇತ್ತು. ಅದರಿಂದ ಶಕ್ತಿಯ ಮಟ್ಟವನ್ನು ಅಳೆಯಲು ಅವನಿಗೆ ಸಾಧ್ಯವಿತ್ತು. ನವರಾತ್ರಿಯ ಸಂದರ್ಭದಲ್ಲಿ ವಿವಿಧ ಮಂತ್ರೋಚ್ಛಾರಗಳು ಮತ್ತು ವಿವಿಧ ಆವಾಹನೆಗಳು ನಡೆಯುತ್ತಿದ್ದ ಸಮಯದಲ್ಲಿ ಅವನು ಶಕ್ತಿಯ ಮಟ್ಟಗಳನ್ನು ಅಳತೆ ಮಾಡಿದನು. ವಿವಿಧ ಮಂತ್ರೋಚ್ಛಾರಗಳನ್ನು ಮಾಡುತ್ತಿದ್ದಾಗ ಆಕಾಶದಲ್ಲಿ ಶಕ್ತಿಯು ಮೂಡುತ್ತಿದ್ದುದನ್ನು ವರ್ಣಮಯವಾದ ಚಿತ್ರಗಳೊಂದಿಗೆ ಅವನು ನಮಗೆ ತೋರಿಸಿದನು. ಒಂದು ಮಂತ್ರೋಚ್ಛಾರದಿಂದ ಇನ್ನೊಂದಕ್ಕೆ ಹೋದಂತೆ ಬಹಳ ವಿಶಿಷ್ಟವಾದ ವಿನ್ಯಾಸಗಳು ಕಂಡವು. ಅದು ನಿಜಕ್ಕೂ ಆಕರ್ಷಕವಾಗಿತ್ತು. ಕರ್ಲಿಯನ್ ಛಾಯಾಗ್ರಾಹಕರು ಕೆಲವು ಚಿತ್ರಗಳನ್ನು ತೆಗೆದರು. ವಿವಿಧ ದೇವತೆಗಳನ್ನು ಆಹ್ವಾನಿಸಿದಾಗ ಸಭಾಂಗಣದಲ್ಲಿನ ಇಡೀ ಬಣ್ಣ ಬದಲಾಯಿತು. ಆದ್ದರಿಂದ ಕೇವಲ ನಂಬಿಕೆಯ ಮೂಲಕ ಮಾಡುವುದಕ್ಕಿಂತ, ಒಂದು ವೈಜ್ಞಾನಿಕ ವಿಧಾನದಲ್ಲಿ ನೀವು ನಿಜಕ್ಕೂ ಎಷ್ಟೋ ಹೆಚ್ಚು ಅನ್ವೇಷಿಸಬಹುದು ಹಾಗೂ ಅರಿತುಕೊಳ್ಳಬಹುದು.