ಗುರುವಾರ, ನವೆಂಬರ್ 28, 2013

ಆಘಾತದ ಚತುರ್ವಿಧ ಅವಲೋಕನ

ನವೆಂಬರ್ ೨೮, ೨೦೧೩
ಬೆಂಗಳೂರು, ಭಾರತ

ಪ್ರಶ್ನೆ: ನಿರೀಕ್ಷೆಯಿಲ್ಲದೆಯೇ ಪ್ರೀತಿಸುತ್ತಾ ಇರುವುದು ಹೇಗೆ? ಅದು ಹೇಗೆ ಸಾಧ್ಯ? ಪ್ರೇಮದಲ್ಲಿ ನಿರೀಕ್ಷೆಗಳು ಏಳುತ್ತವೆ ಮತ್ತು ಅವುಗಳು ಈಡೇರದಿದ್ದರೆ, ಅದು ನೋವನ್ನುಂಟುಮಾಡುತ್ತದೆ. 

ಶ್ರೀ ಶ್ರೀ ರವಿ ಶಂಕರ್: ಹೌದು, ನೀವು ಈ ಕಸರತ್ತುಗಳ ಮೂಲಕ ಹಾದುಹೋಗಬೇಕಾಗುವುದು. ನಿಮ್ಮಲ್ಲಿ ವಿವೇಕವಿದ್ದರೆ, ಕಲಿಯುವುದಕ್ಕಾಗಿ ನೀವು ನೋವಿನ ಮೂಲಕ ಹಾದುಹೋಗಬೇಕಾಗಿಲ್ಲ. ವಿವೇಕದ ಕೊರತೆಯಿರುವಾಗ ನೀವು ನೋವಿನ ಮೂಲಕ ಹಾದುಹೋಗುವಿರಿ, ಆದರೆ ಸ್ವಲ್ಪ ಸಮಯದಲ್ಲೇ ನೀವು ಅದರಿಂದ ಹೊರಬರುವಿರಿ, ಚಿಂತಿಸಬೇಡಿ. ಇದಕ್ಕಾಗಿಯೇ ಒಬ್ಬರು ಜೀವನದಲ್ಲಿ ಒಂದು ವಿಶಾಲವಾದ ದೃಷ್ಟಿಕೋನವನ್ನು ಹೊಂದಿರುವುದು ಮುಖ್ಯವಾಗಿರುವುದು. ನೀವು ವಿಶಾಲ ದೃಷ್ಟಿಕೋನವನ್ನು ಹೊಂದಿರುವಾಗ, ಈ ಎಲ್ಲಾ ಕ್ಷುಲ್ಲಕ ವಿಷಯಗಳು ನಿಜವಾಗಿಯೂ ನಿಮಗೆ ತೊಂದರೆಯುಂಟುಮಾಡುವುದಿಲ್ಲ. ಅವುಗಳೆಲ್ಲವೂ ಸಾಗರದ ಮೇಲಿನ ಅಲೆಗಳಂತೆ, ಅವುಗಳು ಏಳುತ್ತವೆ ಮತ್ತು ಬೀಳುತ್ತವೆ; ಸರೋವರದಲ್ಲಿನ ತರಂಗಗಳಂತೆ, ಗಾಳಿ ಬೀಸುವಾಗ ಅವುಗಳು ಏಳುತ್ತವೆ ಮತ್ತು ಗಾಳಿಯಿಲ್ಲದಿರುವಾಗ ಅಲ್ಲಿ ತರಂಗಗಳಿರುವುದಿಲ್ಲ. ಹಾಗಾಗಿ, ವಿಶಾಲ ದೃಷ್ಟಿಕೋನವನ್ನು ಹೊಂದಿ. ಅದು ಆತ್ಮ ಜ್ಞಾನವಾಗಿದೆ; ಯಾವುದಕ್ಕೂ ನನ್ನನ್ನು ನಡುಗಿಸಲು ಸಾಧ್ಯವಿಲ್ಲ, ನಾನು ಭಾವನೆಗಳಿಗಿಂತ ಎಷ್ಟೋ ಹೆಚ್ಚು ದೊಡ್ಡದಾಗಿರುವೆನು, ನಾನು ನನ್ನ ಸುತ್ತಲಿರುವ ಪ್ರಪಂಚಕ್ಕಿಂತ, ನನ್ನ ಸುತ್ತಲಿರುವ ಜನರಿಗಿಂತ ಎಷ್ಟೋ ಹೆಚ್ಚು ದೊಡ್ಡದಾಗಿರುವೆನು. ಅವರ ಹೊಗಳಿಕೆ ಮತ್ತು ದೂಷಣೆ ವಿಷಯವಲ್ಲ. ನಾನು ಇದೆಲ್ಲದಕ್ಕಿಂತಲೂ ಎಷ್ಟೋ ಹೆಚ್ಚು ದೊಡ್ಡದಾಗಿರುವೆನು! ಈ ಅರಿವು ನಮ್ಮನ್ನು ಮೇಲೆತ್ತುತ್ತದೆ, ಆಗ ಒಬ್ಬನು ಭಾವನೆಗಳು ಮತ್ತು ನೋವಿನ ಸಾಗರದಲ್ಲಿ ಮುಳುಗುವುದಿಲ್ಲ.

ನೋವಿನ ಕಡೆಗೆ ನೋಡಲಿರುವ ನಾಲ್ಕು ವಿಧಾನಗಳಿವೆ.

೧. ನಿಮ್ಮನ್ನು ನೋಯಿಸಿರುವ ಒಬ್ಬರು ನೊಂದಿದ್ದಾರೆ. ಅವರಲ್ಲಿ ಗಾಯದ ಗುರುತುಗಳಿವೆ, ಅವರು ಅಸಂತುಷ್ಟರಾಗಿಯೂ ದುಃಖಿತರಾಗಿಯೂ ಇದ್ದಾರೆ. ತಮ್ಮಲ್ಲೇನಿದೆಯೋ ಅದನ್ನು ಮಾತ್ರ ಹಂಚಲು ಅವರಿಗೆ ಸಾಧ್ಯ. ಅವರು ನೊಂದಿದ್ದಾರೆ ಮತ್ತು ಅವರು ಆ ನೋವನ್ನು ನಿಮ್ಮೊಂದಿಗೆ ಹಂಚುತ್ತಿದ್ದಾರೆ.

ಹೀಗೆ ನಿಮ್ಮಲ್ಲಿ ನೋವನ್ನುಂಟುಮಾಡುವ ಅಥವಾ ನಿಮ್ಮನ್ನು ನೋಯಿಸುವ ಜನರು, ಅವರದನ್ನು ಉದ್ದೇಶಪೂರ್ವಕವಾಗಿ ಮಾಡುತ್ತಿರುವರೆಂದು ನೀವು ಅಂದುಕೊಳ್ಳುತ್ತೀರಿ. ವಾಸ್ತವವಾಗಿ ಅದು ಯಾಕೆಂದರೆ, ಅವರೊಳಗೆ ಸಂತೋಷವಿಲ್ಲ, ಅವರಲ್ಲಿ ಆನಂದವಿಲ್ಲ, ಅವರಲ್ಲಿ ಶಾಂತಿಯಿಲ್ಲ. ಅವರಲ್ಲಿ ನೋವಿದೆ ಮತ್ತು ಅವರು ಗಾಯಗೊಂಡಿದ್ದಾರೆ, ಹಾಗಾಗಿ ಅವರು ನಿಮಗೆ ನೋವನ್ನುಂಟುಮಾಡುತ್ತಿದ್ದಾರೆ. ಹೀಗೆ, ಒಬ್ಬ ಗಾಯಗೊಂಡಿರುವ ವ್ಯಕ್ತಿಗೆ ಏನು ಬೇಕಾಗಿದೆ? ಕರುಣೆ. ಹೀಗಾಗಿ, ನಿಮ್ಮನ್ನು ಯಾರು ನೋಯಿಸುವರೋ ಅವರ ಮೇಲೆ ನೀವು ಕರುಣೆ ತೋರಬೇಕು. ಯಾಕೆಂದರೆ ಅವರು ನೊಂದಿದ್ದಾರೆ ಮತ್ತು ಗಾಯಗೊಂಡಿದ್ದಾರೆ. ಇದು ಒಂದನೆಯದು.

೨. ನಿಮಗೆ ಯಾರು ನೋವನ್ನುಂಟುಮಾಡುತ್ತಿದ್ದಾರೋ ಅವರು ಅಜ್ಞಾನಿಗಳು. ಅವರಲ್ಲಿ ಜೀವನದ ಬಗ್ಗೆ ಒಂದು ವಿಶಾಲ ದೃಷ್ಟಿಕೋನವಿಲ್ಲ. ಅವರು ತಮ್ಮನ್ನು ತಾವೇ ತಿಳಿದಿಲ್ಲ, ಮತ್ತು ತಾವೇನು ಮಾಡುತ್ತಿರುವೆವೆಂಬುದು ಅವರಿಗೆ ತಿಳಿಯದು. ಅವರು ಅಜ್ಞಾನಿಗಳು ಮತ್ತು ಅಹಂಕಾರಿಗಳಾಗಿರುವರು. ಅವರಿಗಾಗಿ ನೀವು ಕೇವಲ ವಿಷಾದವನ್ನು ತೋರಬಹುದು ಮತ್ತು ಯಾವತ್ತಾದರೂ ಒಂದು ದಿನ ಅವರು ಬುದ್ಧಿಶಾಲಿಗಳಾಗಬಹುದೆಂದು ಆಶಿಸಬಹುದು. ತಮ್ಮ ಕೃತ್ಯಗಳು ಇತರರಿಗೆ ನೋವನ್ನುಂಟುಮಾಡುತ್ತಿವೆಯೆಂಬುದು ಅವರಿಗೆ ತಿಳಿಯದು, ಮತ್ತು ಅವರು ಹೆಚ್ಚು ಸಂವೇದನಾಶೀಲರಾಗಲೆಂದು ನೀವು ಅವರಿಗೆ ಹಾರೈಸಿ.

೩. ಅದು ಕೇವಲ ಕರ್ಮ. ನೀವು ಈ ನೋವನ್ನು ಪಡೆಯಲೇಬೇಕಿತ್ತು ಮತ್ತು ಈ ವ್ಯಕ್ತಿಯಲ್ಲದಿದ್ದರೆ ಬೇರೆ ಯಾರಾದರೂ ಅದನ್ನು ನಿಮಗೆ ಕೊಡುತ್ತಿದ್ದರು. ಭೂತಕಾಲದಲ್ಲಿ ನಾವು ಯಾರಿಗೋ ಏನೋ ನೋವನ್ನುಂಟುಮಾಡಿರಬೇಕು, ಹಾಗಾಗಿ ಪ್ರಕೃತಿಯು ಅದನ್ನು ನಮಗೆ ಈಗ ಹಿಂತಿರುಗಿ ತರುತ್ತಿದೆ. ಅದು ಕೇವಲ ಕರ್ಮದ ಮರುಪಾವತಿ ಎಂಬುದು ನಿಮಗೆ ತಿಳಿದಿರುವಾಗ, ನಿಮಗೆ ಬಹಳವಾಗಿ ಸ್ಥಿರವಾದಂತೆ ಅನ್ನಿಸುತ್ತದೆ. ಅಲ್ಲವೇ?

೪. ನಿಮ್ಮನ್ನು ಬಲಶಾಲಿಗಳನ್ನಾಗಿ ಮಾಡುವುದಕ್ಕಾಗಿ ಅದನ್ನು ಮಾಡಲಾಗಿದೆ. ನೀವು ಬಲಶಾಲಿಗಳಾಗಲಿಯೆಂದು; ನಿಮ್ಮೊಳಗಿರುವ ಶಕ್ತಿ ಸಾಮರ್ಥ್ಯಗಳನ್ನು ನೀವು ಕಂಡುಕೊಳ್ಳಲಿಯೆಂದು ಪ್ರಕೃತಿಯು ಇದನ್ನು ನಿಮಗೆ ತರುತ್ತಿದೆ.

ಸಾಮಾನ್ಯವಾಗಿ ಚಪ್ಪರಗಳನ್ನು ಹಾಕುವಾಗ, ಒಂದು ಕಂಬವನ್ನು ಅದರ ಜಾಗದಲ್ಲಿ ಹಾಕಿದ ನಂತರ ಅದು ಸಾಕಷ್ಟು ಬಲವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ನೋಡಲು ಅವರು ಕಂಬವನ್ನು ಅಲ್ಲಾಡಿಸುತ್ತಾರೆ. ನೋವೆಂಬುದು ಹಾಗೆಯೇ, ನೀವು ನಿಮ್ಮಲ್ಲಿಯೇ ಚೆನ್ನಾಗಿ ಸ್ಥಾಪಿತರಾಗಿರುವಿರೇ, ನೀವು ಜ್ಞಾನದಲ್ಲಿರುವಿರೇ ಅಥವಾ ಇಲ್ಲವೇ ಎಂಬುದನ್ನು ನೋಡಲು.
ಪ್ರತಿಯೊಂದು ನೋವೂ ನಿಮ್ಮನ್ನು ಅಲ್ಲಾಡಿಸಲು ಪ್ರಯತ್ನಿಸುತ್ತಿದೆ, ನೀವು ಬಲಶಾಲಿಗಳಾಗಿರುವಿರೇ ಅಥವಾ ಇಲ್ಲವೇ ಎಂದು ನೋಡಲು. ಅದು ನಿಮ್ಮ ಸಾಮರ್ಥ್ಯವನ್ನು ಪರೀಕ್ಷಿಸುತ್ತದೆ. ಅದು ನಿಮ್ಮನ್ನು ಹೆಚ್ಚು ಬಲಶಾಲಿಗಳನ್ನಾಗಿ ಮಾಡುವುದಕ್ಕಾಗಿ.

ಒಬ್ಬ ಬುದ್ಧಿವಂತ ವ್ಯಕ್ತಿ ಅಥವಾ ಯಾರೋ ಜ್ಞಾನಿಗಳು ನಿಮ್ಮನ್ನು ನೋಯಿಸುತ್ತಿರುವರೆಂದು ನಿಮಗನ್ನಿಸಿದರೆ, ಆಗ ನೀವು ಕೃತಜ್ಞರಾಗಿರಬೇಕು ಯಾಕೆಂದರೆ ಅದರಲ್ಲಿ ಏನೋ ಉದ್ದೇಶವಿರುತ್ತದೆ. ನೀವು ಬಲಶಾಲಿಗಳಾಗಿರಬೇಕೆಂದು ಅವರು ಬಯಸುತ್ತಾರೆ.

ನಿಮ್ಮ ತಾಯಿಯು ನಿಮ್ಮನ್ನು ಬೈಯುತ್ತಿದ್ದರೆ, ಅವಳು ಅದನ್ನೊಂದು ಕೆಟ್ಟ ಉದ್ದೇಶದಿಂದ ಮಾಡುತ್ತಿರುವುದಲ್ಲ. ನಿಮ್ಮ ತಂದೆಯು ನಿಮ್ಮನ್ನು ಬೈಯುತ್ತಿದ್ದರೆ, ನೀವು, "ಓ ನನ್ನ ತಂದೆಯು ನನ್ನನ್ನು ನೋಯಿಸಿದರು! ನನ್ನ ತಾಯಿ ನನ್ನನ್ನು ನೋಯಿಸಿದಳು!" ಎಂದು ಹೇಳಲು ಸಾಧ್ಯವಿಲ್ಲ.

ನಿಮ್ಮ ಹೆತ್ತವರು ನಿಮ್ಮನ್ನು ನೋಯಿಸುತ್ತಿರುವುದಿಲ್ಲ; ಅವರು ನಿಮ್ಮ ಬಗ್ಗೆ ಕಾಳಜಿಯನ್ನು ಮತ್ತು ಚಿಂತೆಯನ್ನು ಹೊಂದಿರುತ್ತಾರೆ. ತಮ್ಮ ಸೀಮಿತ ತಿಳುವಳಿಕೆ ಮತ್ತು ನಿಮ್ಮ ಮೇಲಿನ ಪ್ರೇಮದಿಂದಾಗಿ ಅವರು ಹಾಗೆ ಮಾಡುತ್ತಿದ್ದಾರೆ ಎಂಬುದನ್ನು ನಾವು ಗುರುತಿಸಬೇಕು.

ನಿಮಗೆ ನೋವಾದಾಗ ನೀವು ಅನುಭವಿಸುವ ಎರಡು ಪ್ರಧಾನ ವಿಷಯಗಳಿವೆ - ಸಂಪರ್ಕದ ಕೊರತೆ ಮತ್ತು ತಿಳುವಳಿಕೆಯ ಕೊರತೆ. ನೋವಿಗಿರುವ ಇನ್ನೊಂದು ಕಾರಣವನ್ನು ನೀವು ಲೆಕ್ಕ ಹಾಕಲು ಬಯಸುವುದಾದರೆ ಅದು, ಅಸಂಬದ್ಧ ಅಥವಾ ಕ್ಷಣಿಕವಾದ ವಿಷಯಗಳಿಗೆ ಅತಿಯಾಗಿ ಸಂವೇದನಾಶೀಲರಾಗಿರುವುದು. ಘಟನೆಗಳೆಲ್ಲಾ ನಶ್ವರವಾದವು, ಅವುಗಳೆಲ್ಲವೂ ಮುಂದೆ ಸಾಗುತ್ತವೆ. ಎಲ್ಲವೂ ಬದಲಾಗುತ್ತಿವೆ. ನೀವು ಅತಿಯಾಗಿ ಸಂವೇದನಾಶೀಲರಾಗಬೇಕಾದ ಅಗತ್ಯವಿಲ್ಲ, "ಓ ಅವನು ನನಗೆ ಹೀಗೆ ಹೇಳಿದ, ಅವಳು ನನಗೆ ಹೀಗೆ ಹೇಳಿದಳು!" ಎಂದು.

ಕನ್ನಡದಲ್ಲೊಂದು ಗಾದೆ ಮಾತಿದೆ, ’ಎಲುಬಿಲ್ಲದ ನಾಲಿಗೆ; ದೇವರು ನಾಲಿಗೆಯಲ್ಲಿ ಎಲುಬನ್ನು ಇಟ್ಟಿಲ್ಲ; ನಾಲಿಗೆ ಹೊರಳಾಡುತ್ತದೆ, ಎಲ್ಲಾ ದಿಕ್ಕುಗಳಲ್ಲೂ ಚಲಿಸುತ್ತದೆ.’ ಜನರ ಬಾಯಿಗಳಿಂದ ಯಾವ ಪದಗಳು ಹೊರಬರುತ್ತವೆಯೆಂಬುದರ ಬಗ್ಗೆ ಚಿಂತಿಸಬೇಡಿ.

ಇವತ್ತು ಪ್ರಪಂಚದಲ್ಲಿ ಇದೊಂದು ದೊಡ್ಡ ಸಮಸ್ಯೆಯಾಗಿದೆ. ಹಲವಾರು ರೋಗಗಳು ಮತ್ತು ಸಂಘರ್ಷಗಳ ಮೂಲ ಕಾರಣವೆಂದರೆ, ನಾವು ಬಾಯಿಯೊಳಕ್ಕೆ ಏನನ್ನು ಹಾಕಬೇಕು ಎಂಬುದು ನಮಗೆ ತಿಳಿಯದು ಮತ್ತು ಬಾಯಿಯಿಂದ ಏನು ಹೊರಕ್ಕೆ ಬರಬೇಕು ಎಂಬುದು ನಮಗೆ ತಿಳಿಯದು! ಜನರು ಎಲ್ಲಾ ರೀತಿಯ ವಸ್ತುಗಳನ್ನು ತಮ್ಮ ಬಾಯಿಗಳಲ್ಲಿ ತುಂಬಿಸುತ್ತಿರುತ್ತಾರೆ. ಈ ಚಿಕ್ಕ ರಂಧ್ರದಲ್ಲಿ, ಟನ್ನುಗಟ್ಟಲೆ ಆಹಾರವು ಒಳಕ್ಕೆ ಹೋಗುತ್ತದೆ ಮತ್ತು ಬಹಳ ಪ್ರಮಾಣದ ಕಸವು ಹೊರಬರುತ್ತದೆ; ಇದು ಪ್ರಪಂಚದ ದುಃಖವಾಗಿದೆ.

ಮತ್ತೆ, ಕನ್ನಡದ ಒಬ್ಬ ಕವಿಯು ಹೀಗೆಂದು ಹೇಳಿದ್ದಾರೆ, "ಪ್ರಪಂಚದಲ್ಲಿ ಜನರು ಮೋಜು ಪಡುವುದೆಲ್ಲಾ ಮಾತಿನ ಮೂಲಕ!"
ಮಾತಿನ ಕಾರಣದಿಂದಾಗಿ ಹಾಸ್ಯವು ನಡೆಯುತ್ತದೆ, ಎಲ್ಲಾ ಸಂಘರ್ಷಗಳು ಮತ್ತು ಹಗೆತನವು ಕೂಡಾ ಮಾತಿನ ಮೂಲಕ. ಮನೋರಂಜನೆಯನ್ನು ನೀಡುವುದು, ನಿಮ್ಮನ್ನು ನಗಿಸುವುದು ಮಾತಾಗಿದೆ. ಮತ್ತೆ, ಸಮಾಜದಲ್ಲಿ ವಿಭಜನೆಗಳನ್ನು ಮತ್ತು ಜನರ ನಡುವೆ ಹಗೆತನವನ್ನು ಸೃಷ್ಟಿಸುವುದು ಮಾತಾಗಿದೆ.

ನಿಮ್ಮ ಮಾತಿನಿಂದಾಗಿ ನಿಮಗೆ ಎಲ್ಲಾ ವಿವಿಧ ರೀತಿಯ ಸಂಪತ್ತುಗಳು ಬರುತ್ತವೆ. ಮಾತೆಂಬುದು ಪ್ರಪಂಚದಲ್ಲಿ ಒಂದು ನಿಜವಾದ ಮಾಣಿಕ್ಯವಾಗಿದೆ. ಹಾಗಾಗಿ ಎಲ್ಲಾ ನೋವು ಕೇವಲ ಮಾತಾಗಿದೆ. ಕೆಲವು ಶಬ್ದಗಳು ಹೊರಬರುತ್ತವೆ ಮತ್ತು ಒಬ್ಬರು, "ಓ, ನನಗೆ ನೋವಾಯಿತು" ಎಂದು ಹೇಳುತ್ತಾರೆ!

ಈಗ, ಯಾರಾದರೂ ನಿಮ್ಮನ್ನು ದೈಹಿಕವಾಗಿ ನೋಯಿಸಲು ಪ್ರಯತ್ನಿಸುತ್ತಿರುವುದಾದರೆ, ನೀವು ಜಾಗರೂಕರಾಗಿರಿ, ನಿಮ್ಮನ್ನು ಸನ್ನದ್ಧರಾಗಿಸಿಕೊಳ್ಳಿ. ಯಾರಾದರೂ ನಿಮ್ಮನ್ನು ನೋಯಿಸಲು ಬಂದರೆ ನೀವು ಅವರ ಕಾಲುಗಳಿಗೆ ಬೀಳಿ ಎಂದು ನಾನು ಹೇಳುತ್ತಿಲ್ಲ. ಇಲ್ಲ, ನೀವು ಬುದ್ಧಿವಂತರಾಗಿರಿ ಮತ್ತು ನಿಮ್ಮನ್ನು ನೀವೇ ಸಂರಕ್ಷಿಸಿಕೊಳ್ಳಿ; ವಿಶೇಷವಾಗಿ ಮಹಿಳೆಯರು ಮತ್ತು ಹುಡುಗಿಯರು, ಅವರು ಅಲ್ಲಿ ಇಲ್ಲಿ ಒಬ್ಬಂಟಿಯಾಗಿ ಹೋಗಬಾರದು.

ಸಮಸ್ಯೆಯೆಂದರೆ, ಮದ್ಯಪಾನದ ಪ್ರಮಾಣವು ಮೂರು ಪಟ್ಟು ಜಾಸ್ತಿಯಾಗಿದೆ ಮತ್ತು ಅದಕ್ಕನುಸಾರವಾಗಿ ಹಿಂಸಾಚಾರವೂ ಕೂಡಾ ಪ್ರಪಂಚದಲ್ಲಿ ಹೆಚ್ಚಾಗಿದೆ. ಗಂಡಸರು ಕೆಟ್ಟವರಲ್ಲ, ಆದರೆ ಅವರನ್ನು ಕೆಟ್ಟವರನ್ನಾಗಿಸುವುದು ಯಾವುದೆಂದರೆ ಮದ್ಯಸಾರ. ಭಾರತದಲ್ಲಿರುವವರೆಲ್ಲಾ ಕೆಟ್ಟ ಗಂಡಸರು ಮತ್ತು ಹಲವಾರು ಕೆಟ್ಟ ಸಂಗತಿಗಳು ಮಹಿಳೆಯರ ಮೇಲೆ ನಡೆಯುತ್ತಿವೆ ಎಂದು ಯೋಚಿಸಬೇಡಿ; ಅದು ಮದ್ಯಸಾರದ ಪ್ರಭಾವವಾಗಿದೆ.

ಒಬ್ಬ ವ್ಯಕ್ತಿಯು ಮಾಡುವ ಒಂದೇ ಒಂದು ಕೆಟ್ಟ ಕೆಲಸವೆಂದರೆ ಅದು ಅವನು ಕುಡಿಯುವುದು. ಅವನು ಕುಡಿದಾಗ, ಅವನು ಅವನಾಗಿ ಇರುವುದಿಲ್ಲ ಮತ್ತು ಕುಡಿದ ಜನರ ಸುತ್ತ ಮಹಿಳೆಯರು ಸುರಕ್ಷಿತರಲ್ಲ. ಈ ಎಲ್ಲಾ ಮದ್ಯಸಾರದ ವ್ಯಾಪಾರವನ್ನು ಮುಚ್ಚಿ ಹಾಕುವ ಕೆಲಸವನ್ನು ಮಹಿಳೆಯರು ತೆಗೆದುಕೊಳ್ಳಬೇಕು; ಅದಕ್ಕೆ ಬದಲಾಗಿ ಮಹಿಳೆಯರು ಕೈಜೋಡಿಸುತ್ತಿದ್ದಾರೆ ಮತ್ತು ಅವರೊಂದಿಗೆ ಕುಡಿಯುತ್ತಿದ್ದಾರೆ!

ಮಹಿಳೆಯರ ಸುರಕ್ಷತೆಗಾಗಿ ಈ ದೊಡ್ಡ ಸಂಗತಿಯು ನಡೆಯಿತು; ಮದ್ಯಪಾನ ಅಥವಾ ಉತ್ಪನ್ನವನ್ನು ತಡೆಗಟ್ಟುವುದರ ಬಗ್ಗೆ ಯಾರೂ ಮಾತನಾಡಿಲ್ಲ. ಮದ್ಯಪಾನ ನಿಷೇಧವನ್ನು ಪರಿಚಯಿಸಲಾದ ಭಾರತದ ರಾಜ್ಯಗಳಲ್ಲಿ, ನಿಷೇಧವಿಲ್ಲದಿರುವ ರಾಜ್ಯಗಳಿಗೆ ಹೋಲಿಸಿದರೆ ಅಪರಾಧದ ಪ್ರಮಾಣಗಳು ಕಡಿಮೆಯಾಗಿವೆ.

ಜನರನ್ನು ಸಂರಕ್ಷಿಸುವುದಕ್ಕಾಗಿ ಎಲ್ಲಾ ದೇವದೇವತೆಯರೂ ಕೂಡಾ ಆಯುಧಗಳನ್ನು ಹೊಂದಿದ್ದಾರೆ. ಶ್ರೀರಾಮನು ಒಂದು ಧನುಸ್ಸನ್ನು ಹೊಂದಿದ್ದಾನೆ, ಶ್ರೀಕೃಷ್ಣನು ಒಂದು ಸುದರ್ಶನ ಚಕ್ರವನ್ನು ಹೊಂದಿದ್ದಾನೆ. ಹೀಗಾಗಿ, ಅತಿಯಾಗಿ ಮುಗ್ಧರಾಗಿರಬೇಡಿ ಮತ್ತು ಎಲ್ಲೆಂದರಲ್ಲಿ ಓಡಾಡಬೇಡಿ. ವಿಶೇಷವಾಗಿ ಚುನಾವಣೆಗಳು ಮತ್ತು ರಜಾದಿನಗಳಿರುವಾಗ ಮದ್ಯಪಾನದ ಪ್ರಮಾಣವು ಹೆಚ್ಚಾಗುತ್ತದೆ, ಜನರು ಹೆಚ್ಚು ಕುಡಿಯುತ್ತಾರೆ, ಆ ದಿನಗಳಲ್ಲಿ ನೀವು ಜಾಗರೂಕರಾಗಿರಬೇಕು.

ಪ್ರಶ್ನೆ: ಗುರುದೇವ, ನಾನು ಅತ್ಯಂತ ಹೆಚ್ಚು ಬಯಸುವ ವಸ್ತುಗಳು ನನಗೆ ಸಿಗುವುದಿಲ್ಲ. ನನ್ನ ಬಯಕೆಯು ಒಂದು ಅಡ್ಡಿಯೇ?

ಶ್ರೀ ಶ್ರೀ ರವಿ ಶಂಕರ್: ತಾಳ್ಮೆಯಿಂದಿರು. ನಿನಗೇನು ಬೇಕೋ ಅದನ್ನು ಸಾಧಿಸಲು ಮೂರು ವಿಷಯಗಳು ಅಗತ್ಯವಾಗಿವೆ.

೧. ನಿಜವಾದ ಉದ್ದೇಶ - ನಿನಗೇನು ಬೇಕೋ ಅದನ್ನು ಹೊಂದಲು ಅಲ್ಲೊಂದು ನಿಜವಾದ ಅಗತ್ಯವಿರಬೇಕು. ನಮ್ಮ ಬಯಕೆಗಳು ಬದಲಾಗುತ್ತಾ ಇರುತ್ತವೆ, ಆದರೆ ಅದು ನಮ್ಮ ಆವಶ್ಯಕತೆಯಾಗಿದ್ದರೆ ನಾವದನ್ನು ಪಡೆಯುವೆವು. ಬಯಕೆಯು ನಮ್ಮ ಆವಶ್ಯಕತೆಯಾಗಬೇಕು.

೨. ಸ್ವಪ್ರಯತ್ನ - ನಿನಗೇನು ಬೇಕೋ ಅದಕ್ಕಾಗಿ ನೀನು ಪ್ರಯತ್ನವನ್ನು ಹಾಕಬೇಕು. ನೀನು ಸುಮ್ಮನೆ ಕುಳಿತುಕೊಂಡು, "ನನಗಿದು ಬೇಕು, ನನಗದು ಬೇಕು’ ಎಂದು ಬಯಸುತ್ತಾ ಇರಲು ಸಾಧ್ಯವಿಲ್ಲ! ನೀನು ನಿನ್ನ ಪ್ರಯತ್ನವನ್ನು ಹಾಕಿರುವೆಯಾ? ಬಯಕೆಯು ನಿನ್ನ ಆವಶ್ಯಕತೆಯಾಗಿದೆಯೇ? ಅದರ ಕಡೆಗೆ ನೀನು ಕೆಲಸ ಮಾಡಿರುವೆಯಾ? ನೀನು ನಿನ್ನ ೧೦೦% ಹಾಕಿರುವೆಯಾ? ಇದು ಆವಶ್ಯಕವಾದುದು.

೩. ಕಾಲ ಅಥವಾ ಕರ್ಮ - ಅಲ್ಲಿ ಕರ್ಮವಿದ್ದರೆ, ಸಮಯವು ಸರಿಯಾಗಿದ್ದರೆ, ನಿನಗದು ಸಿಗುವುದು! ನಾನು ಈಗ, ಒಂದು ಕತ್ತಲೆಯ ರಾತ್ರಿಯಲ್ಲಿ ಚಂದ್ರನನ್ನು ನೋಡಲು ಬಯಸುತ್ತೇನೆಂದು ಇಟ್ಟುಕೋ. ಯಾವುದೇ ಉದ್ದೇಶವನ್ನು ನಾನು ಇಟ್ಟುಕೊಳ್ಳಲಿ, ನಾನೀಗ ಚಂದ್ರನನ್ನು ನೋಡಲು ಹೇಗೆ ಸಾಧ್ಯ? ಪೂರ್ಣ ಚಂದ್ರನನ್ನು ನೋಡಲು ನಾನು ಇನ್ನೊಂದು ೧೫ ದಿನಗಳವರೆಗೆ ಕಾಯಬೇಕು. ಅಮವಾಸ್ಯೆಯ ದಿನದಂದು ನೀನು ಪೂರ್ಣಚಂದ್ರನನ್ನು ನೋಡಲು ಬಯಸಿದರೆ, ಆಗ ನೀನು ಕಾಯಲೇಬೇಕು.

ನೀನು ಇವತ್ತೊಂದು ದಾಳಿಂಬೆ ಗಿಡವನ್ನು ನೆಟ್ಟು, "ಇಲ್ಲ, ನನಗೆ ಈಗಲೇ ಹಣ್ಣು ಬೇಕು" ಎಂದು ಹೇಳಿದರೆ! ಹೇ, ನೀನು ಇನ್ನೊಂದು ಮೂರು ವರ್ಷಗಳ ಕಾಲ ಕಾಯಬೇಕು! ದಾಳಿಂಬೆ ಮರವು ಎರಡರಿಂದ ಮೂರು ವರ್ಷಗಳಲ್ಲಿ ಮಾತ್ರ ನಿಮಗೆ ಹಣ್ಣು ಕೊಡುವುದು. ಹೀಗೆ, ಕಾಲ ಅಥವಾ ಕರ್ಮವು ಒಂದು ಅಂಶವಾಗಿದೆ.

ಪ್ರಶ್ನೆ: ನಿರಾಕಾರವನ್ನು ತಲುಪಲು ನಾವೊಂದು ಆಕಾರವನ್ನು ಯಾಕೆ ಪ್ರೀತಿಸಬೇಕು?

ಶ್ರೀ ಶ್ರೀ ರವಿ ಶಂಕರ್: ಆಕಾರದ ಕಡೆಗೆ ಮಾತ್ರ ಭಾವನೆಗಳು ಹರಿಯಲು ಸಾಧ್ಯ. ನಿರಾಕಾರದ ಕಡೆಗೆ ಭಾವನೆಗಳನ್ನು ಹೊಂದಲು ನಿಮಗೆ ಸಾಧ್ಯವಿಲ್ಲ. ನೋಡು, ನೀನು ನನ್ನೊಂದಿಗೆ ಮಾತ್ರ ಸಂಪರ್ಕಿಸಬಹುದು, ನನ್ನ ಪಕ್ಕದಲ್ಲಿರುವ ಖಾಲಿ ಜಾಗದೊಂದಿಗೆ ಸಂಪರ್ಕಿಸಲು ನಿನಗೆ ಸಾಧ್ಯವಿಲ್ಲ. ನೀನೊಂದು ಖಾಲಿ ಜಾಗದೊಂದಿಗೆ ಸಂಪರ್ಕಿಸುತ್ತಿರುವೆಯೆಂದು ನೀನು ಹೇಳಿದರೆ, ಆಗ ಅಲ್ಲೇನೋ ಎಡವಟ್ಟಾಗಿದೆ. ನೀನೊಂದು ಸ್ವರೂಪದೊಂದಿಗೆ ಮಾತ್ರ ನಿನ್ನ ಭಾವನೆಗಳನ್ನು ವ್ಯಕ್ತಪಡಿಸಬಹುದು, ನೋಡಬಹುದು, ಸ್ಪರ್ಷಿಸಬಹುದು, ಆಘ್ರಾಣಿಸಬಹುದು, ರುಚಿ ನೋಡಬಹುದು ಮತ್ತು ಸಂಪರ್ಕಿಸಬಹುದು. ಯಾವುದೇ ಭಾವನೆಯ ಸಂಪೂರ್ಣತೆಯು ನಿಮ್ಮನ್ನು, ಎಲ್ಲಾ ಆಕಾರಗಳ ಮೂಲವಾಗಿರುವ, ಸಂಪೂರ್ಣವಾಗಿ ನಿರಾಕಾರವಾದ ಒಂದು ಆಕಾಶಕ್ಕೆ ಕರೆದೊಯ್ಯುತ್ತದೆ.

ಸಂಸ್ಕೃತದಲ್ಲಿ ಎರಡು ಸುಂದರವಾದ ಪದಗಳಿವೆ, ವಿರೂಪಾಕ್ಷ ಮತ್ತು ವಿಶ್ವರೂಪ. ವಿರೂಪಾಕ್ಷ ಎಂದರೆ, ಆಕಾರವಿಲ್ಲದೆ ಕಣ್ಣುಗಳು; ಹಲವು ಜನರು ಈ ಪದವನ್ನು ಒಂದು ಹೆಸರಾಗಿ ಬಳಸುತ್ತಾರೆ. ವಿರೂಪ ಎಂದರೆ, ರೂಪವಿಲ್ಲದ, ಮತ್ತು ಅಕ್ಷ ಎಂದರೆ ಕಣ್ಣುಗಳು. ಇದರರ್ಥ ರೂಪವಿಲ್ಲದ ಕಣ್ಣುಗಳು.

ನೀವು ಇನ್ನೂ ಸ್ವಲ್ಪ ಆಳಕ್ಕೆ ಹೋಗುವಾಗ, ಪ್ರಜ್ಞೆಯು ಕಣ್ಣುಗಳಿಲ್ಲದೆಯೇ ನೋಡಬಹುದು, ಚರ್ಮವಿಲ್ಲದೆಯೇ ಸ್ಪರ್ಶ ಅನುಭವಿಸಬಹುದು, ನಾಲಿಗೆಯಿಲ್ಲದೆಯೇ ರುಚಿ ನೋಡಬಹುದು ಮತ್ತು ಕಿವಿಗಳಿಲ್ಲದೆಯೇ ಕೇಳಿಸಬಹುದು ಎಂಬುದು ನಿಮಗೆ ಕಾಣಿಸುತ್ತದೆ; ಇದು ಯೋಗ ಸಮಾಧಿಯಾಗಿದೆ. ಆಳವಾದ ಸಮಾಧಿಯಲ್ಲಿ ಅಂತಹ ಸಂಗತಿಗಳು ನಡೆಯಲು ತೊಡಗುತ್ತವೆ, ಕನಸುಗಳಲ್ಲಿರುವಂತೆಯೇ. ಐದು ಇಂದ್ರಿಯಗಳಲ್ಲಿ ಯಾವುದೂ ಇಲ್ಲದೆಯೇ ನೀವು ಕನಸು ಕಾಣುತ್ತೀರಿ; ನೀವು ಆಘ್ರಾಣಿಸುತ್ತೀರಿ, ರುಚಿ ನೋಡುತ್ತೀರಿ, ನೀವು ಎಲ್ಲವನ್ನೂ ಮಾಡುತ್ತೀರಿ, ಸರಿಯಾ? ಹೀಗೆ, ವಿರೂಪಾಕ್ಷ ಎಂದರೆ, ಕಣ್ಣುಗಳಿರುವ ಆದರೆ ರೂಪವಿಲ್ಲದ ಪ್ರಜ್ಞೆ.

ವಿಶ್ವರೂಪ ಎಂದರೆ, ಅದು ಪ್ರತಿಯೊಂದು ರೂಪದಲ್ಲೂ ಇದೆ. ಈ ವಿಶ್ವವೇ ದೇವರ ರೂಪವಾಗಿದೆ; ದೇವರು ಮರಗಳ, ಬೆಟ್ಟಗಳ, ನದಿಗಳ ರೂಪದಲ್ಲಿದ್ದಾನೆ. ಸಂಪೂರ್ಣ ವಿಶ್ವವು ದೇವರ ಪ್ರಕಟನೆಯಲ್ಲದೆ ಮತ್ತೇನೂ ಅಲ್ಲ; ದೇವರ ಶರೀರ. ದೇವರು ಅಲ್ಲೆಲ್ಲೋ ಸ್ವರ್ಗದಲ್ಲಿ, ಸೃಷ್ಟಿಯಿಂದ ದೂರದಲ್ಲಿ ಕುಳಿತಿಲ್ಲ, ಅವನೇ ಸೃಷ್ಟಿಯಾಗಿರುವನು.

ದೇವರು ಮತ್ತು ಸೃಷ್ಟಿ ಬೇರೆ ಬೇರೆಯಲ್ಲ. ಅದು, ಒಂದು ಎಳ್ಳಿನ ಬೀಜದೊಳಗೆ ಹೇಗೆ ಎಣ್ಣೆಯಿದೆಯೋ ಹಾಗೆಯೇ. ಅದೇ ರೀತಿಯಲ್ಲಿ, ಈ ಸೃಷ್ಟಿಯ ಪ್ರತಿಯೊಂದು ಪರಮಾಣುವಿನಲ್ಲೂ ಪ್ರಜ್ಞೆಯಿದೆ. ಅದು, ನೃತ್ಯ ಮತ್ತು ನರ್ತಕನನ್ನು ಹೇಗೆ ಬೇರೆ ಬೇರೆ ಮಾಡಲು ಸಾಧ್ಯವಿಲ್ಲವೋ ಹಾಗೆ. ನೀವೊಂದು ನೃತ್ಯವನ್ನು ನೋಡುತ್ತಿದ್ದರೆ, ಅದರರ್ಥ ನೀವು ನರ್ತಕನನ್ನು ನೋಡುತ್ತಿರುವಿರೆಂದು. ನರ್ತಕನಿಲ್ಲದ ಒಂದು ನೃತ್ಯವನ್ನು ನೋಡಲು ನಿಮಗೆ ಸಾಧ್ಯವೇ? ಹೀಗೆ ಈ ವಿಶ್ವವು ನೃತ್ಯವಾಗಿದೆ, ಮತ್ತು ಅದು ನರ್ತಿಸುವಂತೆ ಮಾಡುತ್ತಿರುವುದು ಯಾರು? ನರ್ತಕ!

ಪ್ರತಿಯೊಂದು ಮರದಲ್ಲೂ, ಪ್ರತಿಯೊಂದು ಪ್ರಾಣಿಯಲ್ಲೂ, ಪ್ರತಿಯೊಬ್ಬ ಮನುಷ್ಯನಲ್ಲೂ ಇರುವ ಜೀವ ಯಾವುದು? ಅದು ದೇವರು! ದೇವರು ಪಂಚ ಭೂತಾತ್ಮಿಕ, ಪಂಚಭೂತಗಳಲ್ಲಿ. ಅವನು ಪೃಥ್ವಿ, ಜಲ, ಅಗ್ನಿ, ವಾಯು, ಆಕಾಶವಾಗಿರುವನು; ಪಂಚಭೂತಗಳ ಆತ್ಮವು ಅವನಾಗಿರುವನು. ದೇವರು ಪಂಚಭೂತಗಳಾಗಿ ಮತ್ತು ಪ್ರಜ್ಞೆಯಾಗಿ ಇರುವನು. ದೇವರು ಬೇರೆಲ್ಲೋ ಸ್ವರ್ಗದಲ್ಲಿ ಕುಳಿತಿದ್ದಾನೆ ಎಂದು ಹೇಳುವುದು ತಪ್ಪು ಪರಿಕಲ್ಪನೆಯಾಗಿದೆ.

ಇನ್ನೊಂದು ಬಹಳ ಸುಲಭವಾದ ಉದಾಹರಣೆ, ಗಾಳಿಯು ಎಲ್ಲೆಡೆಯೂ ಇದೆ. ಈಗ ಕೂಡಾ ಗಾಳಿ ಇದೆ. ಗಾಳಿಯಿಲ್ಲದೆ ನೀವು ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲ. ಹಾಗಿದ್ದರೂ, ಕೆಲವೊಮ್ಮೆ ನಿಮಗೆ ಸೆಖೆಯಾದಾಗ, ನಿಮಗೆ ಗಾಳಿಯ ಅನುಭವವಾಗುವುದಿಲ್ಲ; ಆಗ ನೀವೊಂದು ಗಾಳಿ ಬೀಸುವ ಫ್ಯಾನಿನ ಸಮೀಪದಲ್ಲಿ ಕುಳಿತಾಗ, ನಿಮಗದರ ಅನುಭವವಾಗುತ್ತದೆ. ಇತರ ಸಮಯಗಳಲ್ಲಿ, ನಿಮಗೆ ಸೆಖೆ ಹಾಗೂ ಬೆವರುವಾಗ, ನಿಮಗೆ ಗಾಳಿಯ ಅನುಭವವಾಗುತ್ತಿರುವುದಿಲ್ಲ, ಆದರೆ ಅದು ಅಲ್ಲಿದೆ. ಅಲ್ಲಿ ಗಾಳಿಯಿಲ್ಲವೆಂದು ಹೇಳಲು ನಿಮಗೆ ಸಾಧ್ಯವಿಲ್ಲ. ಆದರೂ, ನೀವೊಂದು ಎ.ಸಿ. ಅಥವಾ ಒಂದು ಫ್ಯಾನಿನ ಬಳಿ ಕುಳಿತುಕೊಳ್ಳುವಾಗ ನೀವದನ್ನು ಅನುಭವಿಸಬಹುದು. ಧ್ಯಾನ, ಸಮಾಧಿ, ಸಾಕ್ಷಾತ್ಕಾರದೊಂದಿಗೆ ಸಂಭವಿಸುವುದು ಇದೇ.

ಪ್ರಶ್ನೆ: ಗುರುದೇವ, ನನಗೆ ನಿಜವಾಗಿಯೂ ಬೇಕಾದುದು ಏನು ಎಂಬುದರ ಬಗ್ಗೆ ನಾನು ಗೊಂದಲಗೊಂಡಿದ್ದೇನೆ. ನಾನು ಬಯಸುವ ಪ್ರಾಪಂಚಿಕ ವಸ್ತುಗಳನ್ನು ಕೇಳುವುದಕ್ಕಾಗಿ ನಾನು ಆಶ್ರಮಕ್ಕೆ ಬರುತ್ತೇನೆ, ಆದರೆ ನಾನು ಕೊನೆಯಲ್ಲಿ ಅತ್ಯಾನಂದವನ್ನು ಕೇಳಿ ಅದನ್ನು ಮನೆಗೆ ಒಯ್ಯುತ್ತೇನೆ. ಅತ್ಯಾನಂದವು ಒಳ್ಳೆಯದು, ಆದರೆ ಅದರರ್ಥ ಜೀವನದಲ್ಲಿ ನನಗೆ ಪ್ರಾಪಂಚಿಕ ವಸ್ತುಗಳು ಸಿಗದು ಎಂದೇ?

ಶ್ರೀ ಶ್ರೀ ರವಿ ಶಂಕರ್: ಹಲವು ಸಲ ನೀವು ನಿಮಗೇನೋ ಬೇಕು ಎಂದು ಹೇಳುತ್ತೀರಿ, ಮತ್ತು ನಂತರ ನೀವು, "ಇಲ್ಲ, ನನಗದು ಬೇಡ" ಎಂದು ಹೇಳುವ ಮೂಲಕ ನಿಮ್ಮದೇ ಬಯಕೆಗಳನ್ನು ತುಂಡರಿಸುತ್ತೀರಿ. ನಿಮ್ಮದೇ ಸಂಕಲ್ಪವು ನಿಮ್ಮದೇ ವಿಕಲ್ಪಗಳಿಂದ (ಸಂಶಯಗಳು) ತುಂಡರಿಸಲ್ಪಡುತ್ತದೆ. ಏನೋ ಒಂದು ಸಂಭವಿಸಬೇಕೆಂದು ನೀವು ನಿಜವಾಗಿಯೂ ಬಯಸುವಾಗ, ಅದು ಖಂಡಿತವಾಗಿಯೂ ಸಂಭವಿಸುವುದು. ನೀವು ಆಶೀರ್ವಾದವನ್ನು ಕೇಳಿಕೊಂಡಾಗ ಅದು ಸಂಭವಿಸುತ್ತದೆ.

ಮಹಾಭಾರತ ಯುದ್ಧದಲ್ಲಿ, ಶ್ರೀಕೃಷ್ಣ ಪರಮಾತ್ಮನು, "ಯುದ್ಧ ಮಾಡಬೇಡ, ನಾವು ಈ ಯುದ್ಧವನ್ನು ಮಾಡುವುದು ಬೇಡ. ಶಾಂತಿ ಸಂಧಾನಕ್ಕೆ ಬಾ. ನಾವು ಕುಳಿತುಕೊಳ್ಳೋಣ, ನಾವು ಒಪ್ಪೋಣ" ಎಂದು ಹೇಳಲು ದುರ್ಯೋಧನನ ಬಳಿಗೆ ಮೂರು ಸಲ ಹೋದನು.

ಯುದ್ಧವು ಸಂಭವಿಸುತ್ತದೆ ಮತ್ತು ಅದರಿಂದ ಗೀತೆಯು ಹೊರಬರಲಿದೆಯೆಂಬುದು ಶ್ರೀಕೃಷ್ಣ ಪರಮಾತ್ಮನಿಗೆ ಗೊತ್ತಿತ್ತು, ಆದರೂ ಅವನು ಶಾಂತಿ ಸಂಧಾನಕ್ಕಾಗಿ ಮೂರು ಸಲ ಹೋದನು. ಯಾಕೆ? ಯಾಕೆಂದರೆ, ಒಂದು ಮಟ್ಟದಲ್ಲಿ, ಏನನ್ನು ಮಾಡಬೇಕೋ ಅದನ್ನು ನೀವು ಮಾಡುತ್ತಾ ಇರಬೇಕು. ಮಹಾಭಾರತದಲ್ಲಿ, ಪಾಂಡವರಿಗೆ ಐದು ಗ್ರಾಮಗಳನ್ನು ಕೊಡಲು ದುರ್ಯೋಧನನು ಶ್ರೀಕೃಷ್ಣ ಪರಮಾತ್ಮನಿಗೆ ಒಪ್ಪಿಗೆಯನ್ನು ನೀಡಿದನು ಎಂದಿಟ್ಟುಕೊಳ್ಳೋಣ ಮತ್ತು ಯಾವುದೇ ಯುದ್ಧವೂ ನಡೆಯುತ್ತಿರಲಿಲ್ಲ, ಅಂತಹ ಒಂದು ಪರಿಸ್ಥಿತಿಯನ್ನು ಸುಮ್ಮನೇ ಊಹಿಸಿಕೊಳ್ಳಿ. ಆಗ ಗೀತೆಯೇ ಇರುತ್ತಿರಲಿಲ್ಲ! ಮಹಾಭಾರತ ಗ್ರಂಥ ಕೂಡಾ ಬರುತ್ತಿರಲಿಲ್ಲ!  
    
"ಈ ಕೃತ್ಯವು ಫಲವನ್ನು ನೀಡುವುದಿಲ್ಲವೆಂಬುದು ನಿನಗೆ ಬಹಳ ಚೆನ್ನಾಗಿ ತಿಳಿದಿರುವಾಗ ನೀನಿದನ್ನು ಮಾಡುವುದಾದರೂ ಯಾಕೆ?" ಎಂದು ಯಾರಾದರೂ ಕೇಳುವಾಗ, ಅದಕ್ಕಿರುವ ಉತ್ತರವೆಂದರೆ, "ಪ್ರತಿಯೊಂದು ಕರ್ಮಕ್ಕೂ ಒಂದು ಮಹತ್ತರ ಉದ್ದೇಶವಿದೆ, ಮತ್ತು ಅದು ಕರ್ಮದ ಫಲದೊಂದಿಗೆ ಸಂಬಂಧ ಹೊಂದಿಲ್ಲ. ಇದರಿಂದ ನನಗೇನು ಸಿಗುತ್ತದೆ ಎಂಬುದು ಪ್ರಶ್ನೆಯಲ್ಲ; ಪರಿಸ್ಥಿತಿಯಲ್ಲಿ ನಾನು ಕರ್ತವ್ಯ ಮಾಡಿದೆನೇ ಅಥವಾ ಇಲ್ಲವೇ ಎಂಬುದು ಪ್ರಶ್ನೆಯಾಗಿದೆ."

ಆಸ್ಪತ್ರೆಯಲ್ಲಿ, ಹಲವು ಸಲ ರೋಗಿಯು ಬದುಕುಳಿಯುವುದಿಲ್ಲವೆಂಬುದು ಬಹಳ ಚೆನ್ನಾಗಿ ಗೊತ್ತಿದ್ದರೂ ಆ ರೋಗಿಯನ್ನು ಗುಣಪಡಿಸಲು ವೈದ್ಯರು ತಮ್ಮೆಲ್ಲಾ ಪ್ರಯತ್ನವನ್ನು ಹಾಕುತ್ತಾರೆ. ರೋಗಿಯು ಬದುಕುಳಿಯುವುದಿಲ್ಲವೆಂಬುದು ವೈದ್ಯರಿಗೆ ಗೊತ್ತಾದ ತಕ್ಷಣ, ಅವರು ರೋಗಿಯ ಆರೈಕೆಯನ್ನು ನಿಲ್ಲಿಸುವರೇ? ಇಲ್ಲ! ಎಲ್ಲಿಯವರೆಗೆ ಹೃದಯವು ಬಡಿಯುತ್ತಾ ಇರುವುದೋ, ಉಸಿರು ಚಲಿಸುತ್ತಾ ಇರುವುದೋ ಅಲ್ಲಿಯವರೆಗೆ ವೈದ್ಯರು ರೋಗಿಯ ಆರೈಕೆ ಮಾಡುತ್ತಾರೆ; ಅದರಿಂದೇನೂ ಪ್ರಯೋಜನವಿಲ್ಲವೆಂಬುದು ಅವರಿಗೆ ತಿಳಿದಿದ್ದರೂ ಕೂಡಾ.

ಆದರೆ ನಾವು, "ಅದಾಗಲಿ; ಹೇಗಿದ್ದರೂ ಎಲ್ಲರೂ ಹುಟ್ಟುತ್ತಾರೆ, ಎಲ್ಲರೂ ಸಾಯುತ್ತಾರೆ. ರೋಗಿಷ್ಠರು ಅಥವಾ ಆರೋಗ್ಯವಂತ ಜನರು ಹೇಗಿದ್ದರೂ ಸಾಯುತ್ತಾರೆ, ಹೀಗಾಗಿ ಯಾರಾದರೂ ಯಾರ ಬಗ್ಗೆಯಾದರೂ ಯಾಕೆ ಕಾಳಜಿ ವಹಿಸಬೇಕು? ನಾವು ಸುಮ್ಮನೆ ಕುಳಿತುಕೊಳ್ಳೋಣ!" ಎಂದು ಹೇಳುವಂತಿಲ್ಲ. ಹೀಗೆ ಮಾಡುವುದು ಸರಿಯಲ್ಲ; ನಾವು ಅದರ ಕಡೆಗೆ ಗಮನ ಹರಿಸಬೇಕು.

ಸುನಾಮಿ ಸಂಭವಿಸಿದಾಗ ಸ್ವಾಮಿ ಸದ್ಯೋಜತಃ ಮತ್ತು ನಾನು ಶ್ರೀಲಂಕಾಕ್ಕೆ ಹೋದೆವು. ಕೊಲ್ಲಿಯ ನಮ್ಮ ಕೇಂದ್ರಗಳು ಬಟ್ಟೆ ಹಾಗೂ ಔಷಧಿಗಳ ಹಲವಾರು ಮೂಟೆಗಳನ್ನು ಅಲ್ಲಿಗೆ ಕಳುಹಿಸಿದ್ದವು ಮತ್ತು ನಮ್ಮ ಸ್ವಯಂಸೇವಕರು ಕೂಡಾ ಅಲ್ಲಿದ್ದರು.
ಅಲ್ಲಿ ಸೇನೆಯಿಂದ ಈ ಒಬ್ಬ ಸಿಂಹಳೀಯ ವಿಮಾನ ಚಾಲಕನಿದ್ದನು. ಅವನು ನಮಗೆ ಶ್ರೀಲಂಕಾದ ದಕ್ಷಿಣ-ಪೂರ್ವ ಭಾಗದಲ್ಲಿ ಸಹಾಯ ಮಾಡುತ್ತಿದ್ದನು. ಅವನು ನನ್ನಲ್ಲೊಂದು ಬಹಳ ದುಃಖಕರವಾದ ನಿವೇದನೆಯನ್ನು ಮಾಡಿಕೊಂಡನು. ೬೦೦ ಮಕ್ಕಳು ಓದುತ್ತಿದ್ದ, ತಮಿಳಿನ ಭಾಗದ ಒಂದು ಶಾಲೆ ಮತ್ತು ಒಂದು ಆಸ್ಪತ್ರೆಯ ಮೇಲೆ ಬಾಂಬ್ ಹಾಕಲು ತನ್ನಲ್ಲಿ ಹೇಳಿದ್ದಾಗಿ ಅವನು ಹೇಳಿದನು. "ನಾನು ಈ ಕೆಲಸವನ್ನು ಮಾಡಬೇಕಾಗಿ ಬಂದಾಗ ನನ್ನ ಹೃದಯವು ಒಡೆಯಿತು ಮತ್ತು ನಾನು ನನ್ನ ಕೆಲಸಕ್ಕೆ ರಾಜೀನಾಮೆ ನೀಡಿದೆ" ಎಂದು ಅವನಂದನು.

ನಂತರ, ಖಂಡಿತವಾಗಿಯೂ, ಅವನು ಸುದರ್ಶನ ಕ್ರಿಯೆಯನ್ನು ಮಾಡಿದನು. ಅವನು ತನ್ನ ಕೆಲಸಕ್ಕೆ ರಾಜೀನಾಮೆ ನೀಡಿದ ಬಳಿಕ ಅವನು ತನ್ನ ಇಡೀ ಜೀವನವನ್ನು ಸೇವೆ ಮಾಡುವುದಕ್ಕಾಗಿ ಮುಡಿಪಾಗಿಟ್ಟನು; ಮಕ್ಕಳ ಜೀವನವನ್ನು ಉತ್ತಮಪಡಿಸುವುದಕ್ಕಾಗಿ; ಅವನು ಅನಾಥಾಶ್ರಮಗಳಲ್ಲಿ ಸಹಾಯ ಮಾಡಿದನು. ತನ್ನ ಹಿರಿಯಾಧಿಕಾರಿಗಳ ಆಜ್ಞೆಯನ್ನು ಅನುಸರಿಸದೆ ಬೇರೆ ಆಯ್ಕೆಯಿಲ್ಲ ಎಂಬಂತಹ ಆ ಒಂದು ಘಟನೆಯು ಅವನ ಇಡೀ ಜೀವನವನ್ನು ಬದಲಾಯಿಸಿತು. ಅವನೊಬ್ಬ ಬೌದ್ಧ ಧರ್ಮದ ಅನುಯಾಯಿ ಮತ್ತು ಹಿಂಸೆಯು ಅಷ್ಟೊಂದು ದೊಡ್ಡ ಪಾಪ ಎಂಬುದು ಅವನಿಗೆ ತಿಳಿದಿತ್ತು. ಹಲವಾರು ವರ್ಷಗಳವರೆಗೆ ಅದು ಅವನಿಗೆ ಬಹಳ ಕಠಿಣವಾಗಿತ್ತು.

ಸುನಾಮಿಯು ಸಂಭವಿಸಿದಾಗ ಈ ವ್ಯಕ್ತಿಯು ಆರ್ಟ್ ಆಫ್ ಲಿವಿಂಗ್‌ನೊಂದಿಗೆ ಬಹಳಷ್ಟು ಸೇವೆಯನ್ನು ಮಾಡಿದನು. ಒಬ್ಬರಿಗೆ ಇಂತಹ ಆಘಾತದಿಂದ ಹೊರಬರಲು ಬಹಳ ದೀರ್ಘಕಾಲ ಹಿಡಿಯುತ್ತದೆ. ಆದರೆ ಜ್ಞಾನ, ಅಷ್ಟಾವಕ್ರ ಗೀತೆ, ಕ್ರಿಯೆ ಮತ್ತು ಧ್ಯಾನಗಳ ಸಹಾಯದಿಂದ ಈ ವ್ಯಕ್ತಿಯು, "ಮೊದಲ ಬಾರಿಗೆ ನನಗೆ ಮುಗುಳ್ನಗಲು ಸಾಧ್ಯವಾಗಿದೆ; ನನ್ನ ಜೀವನದಲ್ಲಿ ಸಂತೋಷವು ಮರಳಿ ಬಂದಿದೆ" ಎಂದು ಹೇಳಿದನು.

ಈ ಜ್ಞಾನ, ಈ ಅರಿವು ಅಪಾರವಾಗಿ ಬೆಲೆಬಾಳುವುದಾಗಿದೆ. ಅದು  ಬಹಳ ಸುಂದರವೂ, ಅಪಾರವಾಗಿ ಶಕ್ತಿಶಾಲಿಯೂ ಆಗಿದೆ. ಅದು ಜನರನ್ನು ಎಂತಹ ಆಳವಾದ ಗಾಯಗಳು, ಪಾಪ ಪ್ರಜ್ಞೆ, ನೋವು ಮತ್ತು ದುಃಖಗಳಿಂದ ಬೇಕಾದರೂ ಹೊರತೆಗೆಯಬಲ್ಲದು. ಅದೊಂದು ಹೊಸ ಬೆಳಕನ್ನು ನೀಡಬಲ್ಲದು ಮತ್ತು ಒಬ್ಬರ ಚೇತನವನ್ನು ಮೇಲೆತ್ತಬಲ್ಲದು. ಅದು ಬಹಳ ಹೃದಯಸ್ಪರ್ಷಿಯಾಗಿದೆ.

ಮೊದಲು, ಅಷ್ಟಾವಕ್ರ ಗೀತೆಯನ್ನು ಸಾರ್ವಜನಿಕರಿಗೆ ನೀಡಲಾಗುತ್ತಿರಲಿಲ್ಲ. ಭಾರತದಲ್ಲಿ ಕೂಡಾ, ಪ್ರತಿಯೊಂದು ಕೇಂದ್ರದಲ್ಲಿ ನಾವು ಎರಡರಿಂದ ಮೂರು ಟೇಪುಗಳನ್ನು ಮಾತ್ರ ಹೊಂದಿದ್ದೆವು ಮತ್ತು ಸ್ವಲ್ಪ ಮುಂದುವರಿದ ಜನರಿಗೆ ಮಾತ್ರ ನಾವು ಈ ಕೋರ್ಸುಗಳನ್ನು ನಡೆಸುತ್ತಿದ್ದೆವು. ನಂತರ ನಾನು, ಜನರು ಆ ಹಂತವನ್ನು ತಲಪುವಲ್ಲಿಯವರೆಗೆ ನಾವು ಕಾಯಲು ಸಾಧ್ಯವಿಲ್ಲವೆಂದು ನಿರ್ಧರಿಸಿದೆ. ಅವರು ಯಾವುದೇ ಹಂತದಲ್ಲಿರಲಿ, ಅವರೆಲ್ಲೇ ಇರಲಿ, ಕೆಲವೇ ಕೆಲವು ವಾಕ್ಯಗಳು ಕೂಡಾ ಜನರ ಜೀವನದಲ್ಲಿ ಒಂದು ಬದಲಾವಣೆಯನ್ನು ಉಂಟುಮಾಡಬಲ್ಲವು. ಅಷ್ಟಾವಕ್ರ ಗೀತೆಯನ್ನು ಕೇಳಲು ಎಲ್ಲರಿಗೂ ಅನುಮತಿ ನೀಡಲಾದುದು ಇದರ ನಂತರವೇ; ನಾವದನ್ನು ತೆರೆದೆವು.

ಅಷ್ಟಾವಕ್ರ ಗೀತೆಯು ಉನ್ನತವಾದ ಜ್ಞಾನವಾಗಿದೆ, ಅದು ಉನ್ನತವಾದ ಗಣಿತ ಶಾಸ್ತ್ರವನ್ನು ಕಲಿಯುವಂತೆ. ಗಣಿತಶಾಸ್ತ್ರದ ಮೂಲಭೂತ ಜ್ಞಾನವಿಲ್ಲದೆ ನಿಮಗದನ್ನು ಮಾಡಲು ಸಾಧ್ಯವಿಲ್ಲ. ಪ್ರಾಚೀನ ಜನರು ಹೊಂದಿದ್ದುದು ಈ ವಾದವನ್ನಾಗಿದೆ.

ಪ್ರಾಥಮಿಕ ಶಾಲೆಯಲ್ಲಿ ಕ್ವಾಂಟಮ್ ಭೌತಶಾಸ್ತ್ರವನ್ನು ಕಲಿಸಲು ಸಾಧ್ಯವಿಲ್ಲ. ಹೀಗಿದ್ದರೂ, ಒಬ್ಬನನ್ನು ಕರ್ತೃತ್ವದಿಂದ ಮೇಲೆತ್ತುವುದು ಮತ್ತು ವಿಷಯಗಳನ್ನು ಅವುಗಳಿರುವಂತೆಯೇ ನೋಡುವುದು - ಇದು ಅಷ್ಟಾವಕ್ರ ಗೀತೆಯಲ್ಲಿನ ಬಹಳ ಅಮೂಲ್ಯವಾದ ಜ್ಞಾನವಾಗಿದೆ.

ಪ್ರಶ್ನೆ: ಪ್ರೀತಿಯ ಗುರುದೇವ, ಯಾವುದಾದರೂ ಮುಖ್ಯವಾದ ಕೆಲಸವನ್ನು ಮಾಡಲು ಅಥವಾ ಓದಲು ನಾನು ಬಯಸುವಾಗಲೆಲ್ಲಾ ನನ್ನ ಮನಃಸ್ಥಿತಿಯು ನನ್ನ ದಾರಿಗೆ ಅಡ್ಡವಾಗಿ ಬರುತ್ತದೆ. ನನ್ನ ಕೆಲಸಗಳಲ್ಲಿ ಹೆಚ್ಚಿನವುಗಳಿಗೆ ನಾನು ನನ್ನ ಮನಃಸ್ಥಿತಿಯ ಮೇಲೆ ಸಂಪೂರ್ಣವಾಗಿ ಅವಲಂಬಿತನಾಗಿದ್ದೇನೆ. ಮನಃಸ್ಥಿತಿಗಳನ್ನು ತೊಡೆದುಹಾಕುವುದು ಹೇಗೆ?     

ಶ್ರೀ ಶ್ರೀ ರವಿ ಶಂಕರ್: ಮೊದಲನೆಯದಾಗಿ, ಅದರ ಅರಿವೇ ಅದನ್ನು ಅರ್ಧ ಮಾಡಿಸುತ್ತದೆ. ನಿನ್ನನ್ನು ಅಲ್ಲಾಡಿಸುವುದು ಮನಃಸ್ಥಿತಿ ಎಂಬುದನ್ನು ಈಗ ನೀನು ಅರಿತಿರುವೆ. ಅದರರ್ಥ, ಬುದ್ಧಿಯು ಎಚ್ಚೆತ್ತುಕೊಳ್ಳುತ್ತಿದೆ. ಅದು, "ಹೇ, ನಾನು ಅಷ್ಟೊಂದು ಮೂಡಿ ಆಗಿರುವುದಿಲ್ಲ" ಎಂದು ಹೇಳುತ್ತದೆ. ನೀನು ಆ ನಿರ್ಧಾರವನ್ನು ತೆಗೆದುಕೋ.

ನೀನು ನಿನ್ನ ಮನಃಸ್ಥಿತಿಯ ಅನುಸಾರವಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗದಿರುವ ಹಲವಾರು ಪರಿಸ್ಥಿತಿಗಳು ಜೀವನದಲ್ಲಿವೆ. ಉದಾಹರಣೆಗೆ, ನೀನೊಂದು ವಿಮಾನದಲ್ಲಿದ್ದು, ಅಚಾನಕ್ಕಾಗಿ ನಿನಗೆ ಪ್ರಯಾಣವನ್ನು ಮುಂದುವರಿಸುವುದು ಬೇಡವೆಂದು ಅನ್ನಿಸಿದರೆ; ಅರ್ಧದಾರಿಯಲ್ಲಿ ನಿನ್ನ ಮನಃಸ್ಥಿತಿ ಬದಲಾದರೂ ನಿನಗೆ ವಿಮಾನದಿಂದ ಹೊರಗಿಳಿಯಲು ಸಾಧ್ಯವಿಲ್ಲ! ನೀನು ಅಲ್ಲಿರಲೇಬೇಕು. ಅದು ನೀನು ಚಲಾಯಿಸುತ್ತಿರುವ, ಹಿಂದಕ್ಕೆ ತಿರುಗಿಸಬಲ್ಲಂತಹ ಒಂದು ಕಾರಲ್ಲ. ಕಾರಿಗೆ ಕೂಡಾ, ನೀನು ಹಿಂದಕ್ಕೆ ತಿರುಗಿಸಲು ನಿರ್ಗಮನ ದಾರಿಯನ್ನು ಕಂಡುಹಿಡಿಯಬೇಕು. ಎಲ್ಲೆಂದರಲ್ಲಿ ನೀನು ತಿರುಗಿಸಲು ಸಾಧ್ಯವಿಲ್ಲ.

ಹೀಗೆ, ನೀವು ಜ್ಞಾನವನ್ನು ಗೌರವಿಸದಿದ್ದರೆ, ಜೀವನವು ನಿಮಗೆ ಕಠಿಣವಾದ ಪಾಠಗಳನ್ನು ಕಲಿಸುತ್ತದೆ. ಜೀವನವು ಬದ್ಧತೆಗಳೊಂದಿಗೆ ಚಲಿಸುತ್ತದೆ, ಮನಃಸ್ಥಿತಿಗಳೊಂದಿಗಲ್ಲ ಎಂಬುದನ್ನು ತಿಳಿಯಿರಿ. ಮನಃಸ್ಥಿತಿಯು ಬಹಳ ಅಸ್ಥಿರವಾಗಿದೆ, ಅವುಗಳು ಬರುತ್ತವೆ, ಅವುಗಳು ಬದಲಾಗುತ್ತವೆ. ಆದರೆ, ಬದ್ಧತೆ ಮತ್ತು ಜ್ಞಾನಗಳು ಯಾವತ್ತೂ ಶ್ರೇಷ್ಠ ಫಲಿತಾಂಶಗಳನ್ನು ತರುತ್ತವೆ.

ಪ್ರಶ್ನೆ: ಗುರುದೇವ, ದೇವರು ಮಾಡಲು ಸಾಧ್ಯವಿಲ್ಲದಿರುವುದು ಏನಾದರೂ ಇದೆಯೇ? ಅದು ಯಾವುದು?

ಶ್ರೀ ಶ್ರೀ ರವಿ ಶಂಕರ್: ಅವನನ್ನು ಅಚ್ಚರಿಪಡಿಸಲು ಸಾಧ್ಯವಿಲ್ಲ! ದೇವರು ನಿಮ್ಮ ಮೇಲೆ ಪ್ರತೀಕಾರ ತೀರಿಸಿಕೊಳ್ಳಲು ಸಾಧ್ಯವಿಲ್ಲ; ಅದು ಅಸಾಧ್ಯ!

ಪ್ರಶ್ನೆ: ಗುರುದೇವ, ’ಯೋಗಃ ಕರ್ಮಸು ಕೌಶಲಮ್’ ಎಂಬುದನ್ನು ನೀವು ದಯವಿಟ್ಟು ವಿವರಿಸಬಲ್ಲಿರೇ? ಅದನ್ನು ನಾನು ನನ್ನ ಜೀವನದಲ್ಲಿ ಹೇಗೆ ಅಳವಡಿಸಬಹುದು? 

ಶ್ರೀ ಶ್ರೀ ರವಿ ಶಂಕರ್: ನೀನು ಕುಶಲತಾಪೂರ್ಣನಾಗಿರಲು ಬಯಸುವೆಯೆಂಬುದನ್ನು ಈ ಪ್ರಶ್ನೆಯೇ ಸೂಚಿಸುತ್ತದೆ; ಅಷ್ಟೇ, ನೀನು ಈಗಾಗಲೇ ಕುಶಲತಾಪೂರ್ಣನಾಗಿರುವೆ. ನೀನು ಕುಶಲತಾಪೂರ್ಣನಾಗಿರಲು ಬಯಸುವುದಾದರೆ, ನೀನು ಈಗಾಗಲೇ ಕುಶಲತಾಪೂರ್ಣನಾಗಿರುವೆ; ಸುಮ್ಮನೇ ಮುಂದುವರೆ. ನೀನು ಕಲಿಯಲು ಬಯಸುವುದಾದರೆ, ನೀನು ಈಗಾಗಲೇ ಕಲಿಯುತ್ತಿರುವೆ. ನೀನು ಮತದಾನ ಮಾಡಲು ಹೋಗುವಾಗ, ನೀನು ಅದಾಗಲೇ ಮತ ಚಲಾಯಿಸಿರುವೆ, ತಿಳಿಯಿತೇ?

ಹಾಗಾಗಿ, ನಾನು ಕಲಿಯಲು ಬಯಸುತ್ತೇನೆ ಅಂದರೆ, ಅದನ್ನು ಅದಾಗಲೇ ಅರ್ಧ ಮಾಡಿಯಾಯಿತು, ಕಲಿಯುವಿಕೆಯು ಆರಂಭವಾಗಿದೆ ಎಂದು ಅರ್ಥ.