ಶನಿವಾರ, ನವೆಂಬರ್ 30, 2013

ಭಾರತದಲ್ಲಿ ಗುರು ಪರಂಪರೆ: ಒಂದು ವಿಶ್ಲೇಷಣೆ

ನವಂಬರ್ ೩೦, ೨೦೧೩

ಬೆಂಗಳೂರು, ಭಾರತ

ಪ್ರಶ್ನೆ: ಗುರುದೇವ, ಆಸಾರಾಮ್ ಬಾಪು ಘಟನೆಯ ಬಳಿಕ, ನನ್ನ ಸ್ನೇಹಿತರು ಆರ್ಟ್ ಆಫ್ ಲಿವಿಂಗ್‌ನಲ್ಲಿ ನನಗಿರುವ ನಂಬಿಕೆಯ ಬಗ್ಗೆ ಪ್ರಶ್ನಿಸತೊಡಗಿದ್ದಾರೆ. ಆರ್ಟ್ ಆಫ್ ಲಿವಿಂಗ್ ವಿಭಿನ್ನವಾದುದೆಂದು ಅವರಿಗೆ ಮನವರಿಕೆ ಮಾಡಿಸಲು ನಾನು ಅವರಿಗೆ ಏನೆಂದು ಹೇಳಬಹುದು?

ಶ್ರೀ ಶ್ರೀ ರವಿ ಶಂಕರ್: ಕೆಲವೊಮ್ಮೆ ರಸ್ತೆಯಲ್ಲಿ ಅಪಘಾತಗಳು ಸಂಭವಿಸುತ್ತವೆ ಎಂಬುದನ್ನು ಮನವರಿಕೆ ಮಾದಿಕೊಡಿ. ಅಪಘಾತಗಳು ಸಂಭವಿಸುತ್ತವೆಯೆಂದ ಮಾತ್ರಕ್ಕೆ ನೀವು ರಸ್ತೆಯ ಮೇಲೆ ನಡೆಯುವುದನ್ನು ನಿಲ್ಲಿಸುವುದಿಲ್ಲ, ಅಲ್ಲವೇ? ನೀವು ಹಾಗೆ ಮಾಡಿದರೆ, ಆಗ ಅದು ಮಾನಸಿಕ ಅಸಂತುಲನ ಅಥವಾ ಭ್ರಮೆ ಎಂದು ಕರೆಯಲ್ಪಡುತ್ತದೆ. ಇಲ್ಲೂ ಕೂಡಾ ಹಾಗೆಯೇ.
ಉದಾಹರಣೆಗೆ, ವೈದ್ಯಕೀಯ ವೃತ್ತಿಯಲ್ಲಿ, ಮೂತ್ರಜನಕಾಂಗಗಳನ್ನು ಕದಿಯುವ ವೈದ್ಯರಿದ್ದಾರೆ. ವೈದ್ಯರು ಮೂತ್ರಜನಕಾಂಗಗಳನ್ನು ಕದಿಯುತ್ತಿದ್ದರೆಂದು ಕಂಡುಬಂದ ಒಂದು ದೊಡ್ಡ ಹಗರಣವಾಗಿತ್ತು. ಆದರೆ ಕೆಲವು ವೈದ್ಯರು ಮೂತ್ರಜನಕಾಂಗಗಳನ್ನು ಕದಿಯುತ್ತಿರುವುದು ಕಂಡುಬಂದ ಕಾರಣ ಮಾತ್ರಕ್ಕೆ, ನೀವು ವೈದ್ಯರ ಬಳಿಗೆ ಹೋಗುವುದನ್ನು ನಿಲ್ಲಿಸಬೇಕೆಂದು ಅರ್ಥವಲ್ಲ, ಸರಿಯಾ? ಜನರನ್ನು ಅವರ ಹಣದಿಂದ ವಂಚಿತಗೊಳಿಸಿರುವ ಕಂಪೆನಿಗಳು ಮತ್ತು ಉದ್ಯಮಿಗಳಿದ್ದಾರೆ, ಆದರೆ ಅದರರ್ಥ ನೀವು ಕಂಪೆನಿಗಳಲ್ಲಿ ಬಂಡವಾಳ ಹೂಡುವುದನ್ನು ನಿಲ್ಲಿಸಬೇಕೆಂದಲ್ಲ.

ಹೀಗಾಗಿ ಮೊತ್ತ ಮೊದಲನೆಯದಾಗಿ, ಒಬ್ಬ ಸಜ್ಜನರ ಮೇಲೆ ಏನೋ ತಪ್ಪು ಮಾಡಿದ ಆರೋಪ ಹೊರಿಸಲಾಗಿದೆ. ಮತ್ತು ಅದು ಸಾಬೀತಾಗಿಯೂ ಇಲ್ಲ. ಅವರು ಈ ಪ್ರಕರಣದಲ್ಲಿ ತಪ್ಪಿತಸ್ಥರಲ್ಲ ಎಂದು ಸಾಬೀತಾಯಿತೆಂದು ಇಟ್ಟುಕೊಳ್ಳೋಣ; ಕಾಂಚಿ ಮಠದ ಮುಖ್ಯಸ್ಥರಾದ ಶಂಕರಾಚಾರ್ಯರ (ಇತ್ತೀಚೆಗೆ ನಡೆದ, ಭಾರತದಲ್ಲಿನ ಒಂದು ಆಧ್ಯಾತ್ಮಿಕ ಸಂಸ್ಥೆಯಾದ ಕಾಂಚಿಯ ಮಠಾಧೀಶರ ಖುಲಾಸೆಯ ವಿಷಯವನ್ನು ಉಲ್ಲೇಖಿಸುತ್ತಾ) ವಿಷಯದಲ್ಲಿ ಸಂಭವಿಸಿದಂತೆ. ಒಂಭತ್ತು ವರ್ಷಗಳ ಹಿಂದೆ ಅವರ ಮೇಲೊಂದು ಕೊಲೆಯ ಆರೋಪವನ್ನು ಹೊರಿಸಲಾಗಿತ್ತು. ಇವತ್ತು, ಅವರನ್ನು ಎಲ್ಲಾ ದೋಷಾರೋಪಣೆಗಳಿಂದ ಮುಕ್ತಗೊಳಿಸಲಾಗಿದೆ. ಒಂಭತ್ತು ದೀರ್ಘ ವರ್ಷಗಳವರೆಗೆ ಅವರು ತಪ್ಪು ಆರೋಪದ ಹೊರೆಯನ್ನು ಹೊರಬೇಕಾಯಿತು. ಇದರ ಬಗ್ಗೆ ನೀವೇನು ಹೇಳುವಿರಿ?

೧೭ ಅಥವಾ ೧೯ ವರ್ಷಗಳ ಮೊದಲೇನೋ ಭಾರತದಲ್ಲಿ ಸಂಭವಿಸಿದ ಒಂದು ಘಟನೆಯ ಬಗ್ಗೆ ನಾನು ನಿಮಗೆ ಹೇಳಲು ಬಯಸುತ್ತೇನೆ. ೧೯೯೮ ರಲ್ಲಿ, ದೇಶದ ಒಬ್ಬರು ಶ್ರೇಷ್ಠ ವಿಜ್ಞಾನಿಗಳ ಮೇಲೆ ಗೂಢಚಾರಿಕೆಯ ಆರೋಪವನ್ನು ಹೊರಿಸಲಾಯಿತು. ಅವರು ಬಹಳಷ್ಟು ಚಿತ್ರಹಿಂಸೆಯ ಮೂಲಕ ಹಾದುಹೋದರು. ಅವರ ಕಡೆಗೆ ಬೆರಳು ಮಾಡಿ ತೋರಿಸುತ್ತಿದ್ದ ರಿಕ್ಷಾ ಚಾಲಕರಿದ್ದರು. ಕ್ರಯೋಜೆನಿಕ್ ತಂತ್ರಜ್ಞಾನದ ಮೇಲೆ ಸಂಶೋಧನೆ ನಡೆಸಿ, ಅಮೇರಿಕಾವು ಮಾಡಿದ ಬಾಹ್ಯಾಕಾಶ ನೌಕೆಗೆ ತಗಲಿದ ವೆಚ್ಚದ ಕೇವಲ ಮೂರರಲ್ಲಿ ಒಂದು ಭಾಗ ವೆಚ್ಚ ಮಾತ್ರ ತಗಲುವ ಬಾಹ್ಯಾಕಾಶ ನೌಕೆಯನ್ನು ತಯಾರು ಮಾಡಿದ ಶ್ರೇಷ್ಠ ವಿಜ್ಞಾನಿಗಳಲ್ಲಿ ಅವರು ಒಬ್ಬರು. ಅದು ಎಷ್ಟೋ ಹೆಚ್ಚು ಸಮರ್ಥವಾಗಿತ್ತು ಮತ್ತು ಹಾಗಿದ್ದರೂ, ಸಾಧಾರಣವಾಗಿ ಬಾಹ್ಯಾಕಾಶ ನೌಕೆಯನ್ನು ಮಾಡಲು ತಗಲುವ ವೆಚ್ಚದ ಮೂರರಲ್ಲಿ ಒಂದು ಭಾಗದಷ್ಟು ವೆಚ್ಚ ಮಾತ್ರ ಉಳ್ಳದ್ದಾಗಿತ್ತು. ರಷ್ಯಾವು ಈ ಯೋಜನೆಯಲ್ಲಿ ಅವರೊಂದಿಗೆ ಪಾಲುದಾರನಾಗಲು ಬಯಸಿತ್ತು. ಸಂಯುಕ್ತ ಸಂಸ್ಥಾನಗಳು ಕೂಡಾ ಅವರೊಂದಿಗೆ ಪಾಲುದಾರನಾಗಲು ಬಯಸಿತ್ತು. ಅವರು ನಾಸಾದಿಂದ ಆಮಂತ್ರಿತರಾಗಿದ್ದರು ಮತ್ತು ಅಮೇರಿಕಾದ ಅಧ್ಯಕ್ಷರು ಅವರಲ್ಲಿ, "ನಾನು ನಿಮಗೆ ಅಮೇರಿಕಾದ ಪೌರತ್ವವನ್ನು ನೀಡಲು ಬಯಸುತ್ತೇನೆ. ದಯವಿಟ್ಟು ಇಲ್ಲಿ ನೆಲೆಸಿ ನಿಮ್ಮ ಕೆಲಸವನ್ನು ಮುಂದುವರೆಸಿ" ಎಂದು ಹೇಳಿದ್ದರು.

ಅವರು ಹತ್ತು ತಿಂಗಳುಗಳವರೆಗೆ ನಾಸಾದಲ್ಲಿದ್ದರು. ನಂತರ ಅವರು ಇಲ್ಲಿ ಇಸ್ರೋದಲ್ಲಿನ ಬಾಹ್ಯಾಕಾಶ ಸಂಶೋಧನೆಯ ಮುಖ್ಯಸ್ಥರಾಗಿದ್ದ ವಿಕ್ರಂ ಸಾರಾಭಾಯಿ ಅವರನ್ನು ಸಂಪರ್ಕಿಸಿದರು. ಶ್ರೀ ಸಾರಾಭಾಯಿಯವರು ಅವರಲ್ಲಿ ತಮ್ಮ ಕೆಲಸವನ್ನು ಮುಂದುವರೆಸುವುದಕ್ಕಾಗಿ ಭಾರತಕ್ಕೆ ಮರಳುವಂತೆ ಹೇಳಿದರು. ಹೀಗಾಗಿ ಅವರು ಮರಳಿ ಬಂದರು ಮತ್ತು ಭಾರತದ ಅಧ್ಯಕ್ಷರಾಗಿದ್ದ ಶ್ರೀ ಅಬ್ದುಲ್ ಕಲಾಮ್ ಅವರೊಂದಿಗೆ ಕೆಲಸ ಮಾಡುತ್ತಿದ್ದರು. ಅವರಿಬ್ಬರೂ ಸಹೋದ್ಯೋಗಿಗಳಾಗಿ ಜೊತೆಯಲ್ಲಿ ಕೆಲಸ ಮಾಡುತ್ತಿದ್ದರು.

ಆಗ ಅಲ್ಲಿ ಭಾರತೀಯ ಕಚೇರಿಯಲ್ಲಿ ಒಬ್ಬರು ಸಜ್ಜನರಿದ್ದರು. ಅವರು ಈ ವಿಜ್ಞಾನಿಯ ಮೇಲೆ, ಅವರು ಗೂಢಚಾರಿಕೆ ನಡೆಸುತ್ತಿರುವುದಾಗಿ ಹೇಳುತ್ತಾ ಒಂದು ಸುಳ್ಳು ಮೊಕದ್ದಮೆಯನ್ನು ಹಾಕಿದರು. ಅವರು ಗೂಢಚಾರಿಕೆ ನಡೆಸುತ್ತಿರುವುದಾಗಿ ಮತ್ತು ನಮ್ಮೆಲ್ಲಾ ರಹಸ್ಯಗಳನ್ನು ಮೊರಿಷಿಯಸ್ ಅಥವಾ ಮಾಲ್ಡೀವ್ಸ್‌ನಲ್ಲಿ ಯಾವುದೋ ಮಹಿಳೆಗೆ ಮಾರುತ್ತಿರುವುದಾಗಿ ಅವರ ಮೇಲೆ ಆರೋಪ ಹೊರಿಸಿದರು.

ವಾಸ್ತವವಾಗಿ ಮಾಲ್ಡೀವ್ಸ್‌ನಿಂದ ಬಂದ ಇಬ್ಬರು ಮಹಿಳೆಯರಿದ್ದರು. ಅವರು ಕೇವಲ ಎಂಟನೇ ತರಗತಿ ಪಾಸಾದವರಾಗಿದ್ದರು. ಈ ವಿಜ್ಞಾನಿಗಳು ತಂಗಿದ್ದ ಮನೆಯ ಪಕ್ಕದ ಮನೆಯಲ್ಲಿ ಅವರು ಅತಿಥಿಗಳಾಗಿ ತಂಗಿದ್ದರು. ಹೀಗಾಗಿ ಮೊಕದ್ದಮೆಯು ಹತ್ತು ವರ್ಷಗಳವರೆಗೆ ಸಾಗುತ್ತಾ ಹೋಯಿತು. ಹತ್ತು ವರ್ಷಗಳ ಬಳಿಕ ಕೊನೆಗೂ ಅವರು ನಿರ್ದೋಷಿಯೆಂದು ಸಾಬೀತಾಯಿತು. ಅಷ್ಟರಲ್ಲಿ, ಅವರು ಮಾಡಿದ್ದ ಎಲ್ಲಾ ಸಂಶೋಧನಾ ಕೆಲಸವೂ ಮುಗಿದುಹೋಗಿತ್ತು.

ಇಡೀ ತಂತ್ರಜ್ಞಾನದ ಕಾರ್ಯಕ್ರಮವು ಕುಸಿದು ಬೀಳಲೆಂದು, ತನ್ನ ವಿರುದ್ಧ ಒಂದು ಸುಳ್ಳು ಆರೋಪವನ್ನು ಹಾಕಲು ಸಿ.ಐ.ಎ. ಯು ಈ ಜನರಿಗೆ ಹಣವನ್ನು ಕೊಟ್ಟಿತ್ತೆಂದು ಅವರು ಅನುಮಾನಿಸಿದರು. ಅದರ ನಂತರ, ವಿಷಯಗಳು ನಿಂತುಹೋದವು ಮತ್ತು ದೇಶವು ತನ್ನ ಬಾಹ್ಯಾಕಾಶ ಸಂಶೋಧನೆಯಲ್ಲಿ ಹೊಸತೇನನ್ನೂ ಕಂಡುಹಿಡಿಯಲಿಲ್ಲ. ಅವರು ನನಗೆ ಈ ಇಡೀ ಕಥೆಯನ್ನು ಹೇಳುತ್ತಿದ್ದರು. ನೀವು ಈ ಕಥೆಯನ್ನು ನೋಡಿರಬೇಕು. ಟೈಮ್ಸ್ ನೌ ವಾರ್ತಾ ವಾಹಿನಿಯಲ್ಲಿ ಕೂಡಾ ಇದು ಪ್ರಸಾರವಾಗಿತ್ತು.
ನಾನಿಲ್ಲಿ ಹೇಳುತ್ತಿರುವುದೇನೆಂದರೆ, ಹಲವು ಸಾರಿ ಆರೋಪಗಳು ತಪ್ಪಾಗಿರಬಹುದು. ಮತ್ತು ಕೆಲವೊಮ್ಮೆ ಅದು ನಿಜವಾಗಿರಲೂಬಹುದು ಕೂಡಾ. ಪ್ರಶ್ನೆಯಲ್ಲಿರುವ ವ್ಯಕ್ತಿಯು ಯಾವುದಾದರೂ ತಪ್ಪನ್ನು ಮಾಡಿರಲೂಬಹುದು. ಅಂತಹ ಪ್ರಸಂಗಗಳಲ್ಲಿ ನಾವು ಅವರ ಬಗ್ಗೆ ಕೇವಲ ಕರುಣೆಯನ್ನು ಹೊಂದಿರಬಹುದಷ್ಟೆ, ಯಾಕೆಂದರೆ ಅವರು ಅಂತಹದೇನನ್ನೋ ಮಾಡುವಂತೆ ಮಾಡಿದುದು ಯಾವುದು, ಅಂತಹ ಹೀನವಾದ ಅಪರಾಧವನ್ನು ಅವರು ಮಾಡುವಂತೆ ಮಾಡಿದುದು ಯಾವುದು ಎಂಬುದು ನಮಗೆ ತಿಳಿಯದು. ಒಬ್ಬರು ೭೫ ವರ್ಷದ ವ್ಯಕ್ತಿಯು ಅಂತಹ ಒಂದು ಕೆಲಸವನ್ನು ಮಾಡುವರೆಂದು ಯೋಚಿಸಲೂ ಸಾಧ್ಯವಿಲ್ಲ.

ಎರಡನೆಯದಾಗಿ, ಅಪರಾಧ ಮಾಡಿರುವ ವ್ಯಕ್ತಿಯ ಬಗ್ಗೆ ಕರುಣೆ ಅಥವಾ ಕನಿಕರ ತೋರುವ ಬದಲಾಗಿ ನಾವು ಆ ವ್ಯಕ್ತಿಯನ್ನು ದ್ವೇಷಿಸಲು ತೊಡಗುತ್ತೇವೆ. ನಿಮಗೆ ಗೊತ್ತಿದೆಯೇ, ಅತ್ಯಂತ ಕೆಟ್ಟ ಅಪರಾಧಿ ಅಥವಾ ಒಬ್ಬ ಅಪರಾಧಿಯೆಂದು ಸಾಬೀತಾಗಿರುವ ಒಬ್ಬ ವ್ಯಕ್ತಿಯ ಕಡೆಗೆ ಕೂಡಾ, ನಮ್ಮ ಮನೋಭಾವವು ದ್ವೇಷದ್ದಾಗಿರಬಾರದು. ಬದಲಾಗಿ ನಮ್ಮಲ್ಲಿ ಕನಿಕರವಿರಬೇಕು. ಮತ್ತು ಅಂತಹ ಕೆಲಸಗಳು ನಿಮ್ಮ ಮೂಲಕ ಸಂಭವಿಸಲಿಲ್ಲ ಎಂಬುದಕ್ಕೆ ದೇವರಿಗೆ ಧನ್ಯವಾದವನ್ನರ್ಪಿಸಿ. ನೀವು ಅಂತಹ ತಪ್ಪುಗಳನ್ನು ಅಥವಾ ಪ್ರಮಾದಗಳನ್ನು ಎಸಗಲಿಲ್ಲವೆಂಬುದು ಅದೃಷ್ಟವೆಂದು ಭಾವಿಸಿ. ಒಬ್ಬರು ಏನು ಮಾಡಲು ಸಾಧ್ಯ? ಪ್ರತಿಯೊಂದು ಕ್ಷೇತ್ರದಲ್ಲೂ ಅಂತಹ ಜನರಿರುತ್ತಾರೆ. ನಿಮಗೆ ಗೊತ್ತಾ, ರಾವಣನು ಒಬ್ಬ ಸನ್ಯಾಸಿಯ ಮಾರುವೇಷದಲ್ಲಿ ಬಂದು ಸೀತಾದೇವಿಯನ್ನು ವಂಚಿಸಿದ. ಇದು ಹೊಸತೇನೂ ಅಲ್ಲ.

ವಿಜಯ ನಗರ ಸಾಮ್ರಾಜ್ಯವು ಹೇಗೆ ಪತನಗೊಂಡಿತು ಎಂಬುದು ನಿಮಗೆ ಗೊತ್ತೇ? ಅದು, ಸನ್ಯಾಸಿಗಳಂತೆ ನಟಿಸಿದ ಐದು ಕುಟಿಲ ಜನರಿಂದಾಗಿ.

ವಿಜಯನಗರ ಸಾಮ್ರಾಜ್ಯವು ಎಷ್ಟೊಂದು ಬಲಿಷ್ಠವೂ, ಶಕ್ತಿಶಾಲಿಯೂ ಆಗಿತ್ತೆಂದರೆ ಅದನ್ನು ನಡುಗಿಸಲು ಯಾರಿಗೂ ಸಾಧ್ಯವಿರಲಿಲ್ಲ. ನಿಮ್ಮಲ್ಲಿ ಎಷ್ಟು ಮಂದಿಗೆ ಈ ಕಥೆ ಗೊತ್ತಿಲ್ಲ?

(ಸಭಿಕರಲ್ಲಿ ಹಲವರು ತಮ್ಮ ಕೈಗಳನ್ನು ಮೇಲೆತ್ತುತ್ತಾರೆ).

ವಿಜಯನಗರ ಸಾಮ್ರಾಜ್ಯವು ಬಹುತೇಕ ಅರ್ಧದಷ್ಟು ಭಾರತವನ್ನು ವ್ಯಾಪಿಸಿತ್ತು ಮತ್ತು ಆಳ್ವಿಕೆ ನಡೆಸಿತ್ತು, ಮತ್ತು ವಾಸ್ತವವಾಗಿ ಶ್ರೀಲಂಕಾದಲ್ಲಿ ಕೂಡಾ ಅದರ ವ್ಯಾಪ್ತಿಯಿತ್ತು. ಆ ಸಮಯದಲ್ಲಿ ಅದು ಭೂಮಿಯ ಮೇಲೆ ಅತ್ಯಂತ ಹೆಚ್ಚು ಸಮೃದ್ಧ ಪ್ರಾಂತ್ಯವಾಗಿತ್ತು. ಚೈನಾದ ಪ್ರಯಾಣಿಕರು ಅದನ್ನು, ನಂಬಲಸಾಧ್ಯವಾದುದೇನೋ ಎಂದು ವರ್ಣಿಸಿದ್ದರು. ಅದರ ರಸ್ತೆಗಳ ಮೇಲೆ ವರ್ತಕರು ವಜ್ರಗಳನ್ನು ’ಲೀಟರ್’ಗಳಲ್ಲಿ ಅಳತೆ ಮಾಡುತ್ತಿದ್ದರು. ಮುತ್ತುಗಳನ್ನು ಭಾರಕ್ಕನುಸಾರವಾಗಿಯಲ್ಲ, ಆದರೆ ಘನಪ್ರಮಾಣಕ್ಕನುಸಾರವಾಗಿ ಅಳತೆ ಮಾಡಲಾಗುತ್ತಿತ್ತು.

ಈ ಸಾಮ್ರಾಜ್ಯವು ಒಂದು ಬೃಹತ್ತಾದ ಸಶಸ್ತ್ರ ಪಡೆಯನ್ನು ಹೊಂದಿತ್ತು. ಅದು ೧೦,೦೦೦ ಆನೆಗಳು ಮತ್ತು ಒಂದು ಲಕ್ಷ ಸೈನಿಕರನ್ನು ಹೊಂದಿತ್ತು. ಆದರೆ ಸಂಪೂರ್ಣ ಸಾಮ್ರಾಜ್ಯವು, ಯಾವುದೇ ಯುದ್ಧವನ್ನು ಮಾಡದೆಯೇ ಕೇವಲ ೧೦ ನಿಮಿಷಗಳಲ್ಲಿ ನಾಶವಾಯಿತು. ಏನಾಯಿತೆಂದು ನಿಮಗೆ ಗೊತ್ತೇ? ಐವರು ಬಹ್ಮನಿ ಸುಲ್ತಾನರು ಸಾಧುಗಳಂತೆ ಅಥವಾ ಸ್ವಾಮಿಗಳಂತೆ ವೇಷ ಧರಿಸಿ ಬಂದರು ಮತ್ತು ಅವರು ನದಿಯ ಇನ್ನೊಂದು ಬದಿಯಲ್ಲಿ ಒಂದು ಡೇರೆಯಲ್ಲಿ ಉಳಕೊಂಡರು. ಅವರು ರಾಜನಿಗೆ, "ದಯವಿಟ್ಟು ಬಂದು ಸ್ವಾಮಿಯರನ್ನು ಭೇಟಿಯಾಗಿ. ಅವರು ನದಿಯನ್ನು ದಾಟರು ಮತ್ತು ಅರಮನೆಗೆ ಬರರು. ಹಾಗಾಗಿ ನೀವು ಬಂದು ಅವರನ್ನು ಭೇಟಿಯಾಗಲೇಬೇಕು" ಎಂಬ ಸಂದೇಶವನ್ನು ಕಳುಹಿಸಿದರು. ಹೀಗಾಗಿ ರಾಜನು ಎಲ್ಲಾ ಆದರಗಳೊಂದಿಗೆ ಅವರನ್ನು ಭೇಟಿಯಾಗಲು ಬಂದನು. ಸಂಪ್ರದಾಯದ ಪ್ರಕಾರ, ರಾಜನು ಋಷಿಗಳು ಅಥವಾ ಸಂತರ ಬಳಿಗೆ ಹೋಗಿ, ಆಶೀರ್ವಾದಗಳನ್ನು ಪಡೆಯಲು ತಲೆಬಾಗುತ್ತಾನೆ.

"ನೀನು ಒಬ್ಬಂಟಿಯಾಗಿ ಬಂದು ನಮ್ಮನ್ನು ಭೇಟಿಯಾಗಬೇಕು ಮತ್ತು ನಿನ್ನೆಲ್ಲಾ ಸಶಸ್ತ್ರ ಪಡೆಗಳೊಂದಿಗಲ್ಲ ಎಂಬುದಾಗಿ ನಾವು ಬಯಸುತ್ತೇವೆ" ಎಂದು ಅವರು ಹೇಳಿದರು.  

ಆದುದರಿಂದ ರಾಜನು ಸರಳವಾದ ಉಡುಪನ್ನು ಧರಿಸಿ, ಫಲ ಪುಷ್ಪಗಳನ್ನು ತೆಗೆದುಕೊಂಡು ಸಂತರನ್ನು ಭೇಟಿಯಾಗಲು ಹೋದನು. ಆದರೆ ಅವರು ನಿಜವಾಗಿಯೂ ಸಂತರಾಗಿರಲಿಲ್ಲ. ಅವರು ಸುಲ್ತಾನರ, ಮಾರುವೇಷದಲ್ಲಿನ ಸೇನಾಪತಿಗಳು ಮತ್ತು ಸೈನಿಕರಾಗಿದ್ದರು. ಅವರು ಅಲ್ಲಿಯೇ ರಾಜನ ಶಿರಚ್ಛೇದ ಮಾಡಿದರು ಮತ್ತು ಅವನ ತಲೆಯನ್ನು ಹಂಪಿ ನಗರದ ಕೇಂದ್ರದಲ್ಲಿ ಒಂದು ಕಂಬದಲ್ಲಿ ನೇತಾಡಿಸಲಾಯಿತು. ಹತ್ತು ನಿಮಿಷಗಳಲ್ಲಿ ಸಂಪೂರ್ಣ ರಾಜ್ಯವು, ಯುದ್ಧವಿಲ್ಲದೆಯೇ ಜಯಿಸಲ್ಪಟ್ಟಿತು.
ರಾಜನು ಕೊಲ್ಲಲ್ಪಟ್ಟಾಗ, ರಾಜ್ಯದ ಜನತೆ ಏನು ಮಾಡಲು ಸಾಧ್ಯ? ಹೀಗಾಗಿ ಅವರು ದಾಳಿಕೋರರಿಗೆ ಶರಣಾಗಬೇಕಾಯಿತು. ಅದರ ನಂತರ ಬಹ್ಮನಿಯರು ರಾಜ್ಯವನ್ನು ಧ್ವಂಸ ಮಾಡಿದರು. ಅವರ ಸೈನ್ಯವೂ ಕೂಡಾ ರಾಜ್ಯವನ್ನು ಲೂಟಿ ಮಾಡಲು ಮಾರುವೇಷದಲ್ಲಿ ಕಾಯುತ್ತಿದ್ದರು. ಆ ನಗರವನ್ನು ಕೊಳ್ಳೆ ಹೊಡೆಯಲು ಅವರಿಗೆ ಆರು ತಿಂಗಳುಗಳು ಹಿಡಿದವು ಎಂದು ಹೇಳಲಾಗುತ್ತದೆ.

ಸ್ವಾತಂತ್ರ್ಯದ ಬಳಿಕ, ಜವಹರ್‌ಲಾಲ್ ನೆಹರೂ ಅವರಿಗೆ, ಭಾರತದ ಚರಿತ್ರೆಯನ್ನು ಅಡಗಿಸಿಡುವ ಈ ಮಹಾನ್ ಕಲ್ಪನೆಯು ಬಂತು, ಯಾಕೆಂದರೆ ಕೆಟ್ಟ ಘಟನೆಗಳು ಪ್ರಮುಖವಾಗಿ ಗೋಚರಿಸುವುದನ್ನು ಅಥವಾ ತಿಳಿಯುವುದನ್ನು ಅವರು ಬಯಸಿರಲಿಲ್ಲ. ಭವಿಷ್ಯದಲ್ಲಿ ಇಂತಹ ಕೃತ್ಯಗಳನ್ನು ಪುನರಾವರ್ತಿಸದೆ ಇರುವ ಒಂದು ಪಾಠವನ್ನು ಇದು ಕಲಿಸುತ್ತಿತ್ತು ಎಂಬುದನ್ನು ಅವರು ಅರ್ಥಮಾಡಿಕೊಳ್ಳಲಿಲ್ಲ. ಬದಲಾಗಿ ಅವರು ಅದನ್ನೆಲ್ಲಾ ಮುಚ್ಚಿಹಾಕಿದರು ಮತ್ತು ಎಲ್ಲವೂ ಚೆನ್ನಾಗಿತ್ತೆಂಬಂತೆ ನಟಿಸಿದರು. ಹೀಗೆ ಅವರು ಸತ್ಯಕಥೆಗಳನ್ನು ಕಂಬಳಿಯ ಅಡಿಗೆ ತಳ್ಳಿಹಾಕಿದರು ಮತ್ತು ಬಹಳ ಅನುಕೂಲಕರವಾಗಿ ಎಲ್ಲಾ ವೈಭವದ ದಿನಗಳನ್ನು ಕೂಡಾ ಮರೆತರು.

ಹೀಗೆ ನಮ್ಮ ದೇಶದ ಚರಿತ್ರೆಯು ಯಾವುದೇ ರುಚಿಯಿಲ್ಲದೆ; ಸಿಹಿಯೂ ಇಲ್ಲದೆ (ಭಾರತದ ಚರಿತ್ರೆಯ ವೈಭವಗಳನ್ನು ಉಲ್ಲೇಖಿಸುತ್ತಾ), ಉಪ್ಪೂ ಇಲ್ಲದೆ (ಭಾರತದ ಚರಿತ್ರೆಯಲ್ಲಿನ ಕತ್ತಲಿನ ಮತ್ತು ತ್ರಾಸದಾಯಕ ಅವಧಿಗಳು ಅಥವಾ ಘಟನೆಗಳನ್ನು ಉಲ್ಲೇಖಿಸುತ್ತಾ) ಸಪ್ಪೆಯಾಯಿತು.

ಈ ಪ್ರಯತ್ನಗಳಿಗೆ ಸಹಾಯ ಮಾಡಿದವರು ಸಮತಾವಾದಿ (ಕಮ್ಯುನಿಸ್ಟ್) ಚರಿತ್ರೆಗಾರರಾಗಿದ್ದರು. ಅವರು, ಹಿಂದಿನದೆಲ್ಲಾ ಕಚಡಾ ಮತ್ತು ಅಷ್ಟೊಂದು ವೈಭವದ್ದಾಗಿರಲಿಲ್ಲವೆಂದು ಚಿತ್ರಿಸಲು ಬಯಸಿದ್ದರು. ನೀವು ಅವರ ತತ್ವಶಾಸ್ತ್ರವನ್ನು ಓದಿದರೆ, ಮುಂದಿರುವ ದಾರಿ ಸಮತಾವಾದ ಒಂದೇ ಎಂಬುದಾಗಿ ಅವರು ತೋರಿಸಿರುವುದು ಕಾಣಿಸುತ್ತದೆ. ಹೀಗಾಗಿ ಅವರು, ಶ್ರೀಕೃಷ್ಣ ಪರಮಾತ್ಮ, ಭಗವಾನ್ ಶ್ರೀರಾಮ, ಮೊದಲಾದಂತಹ ಭಾರತದ ಚರಿತ್ರೆಯ ಎಲ್ಲಾ ಇತಿಹಾಸ ಪ್ರಸಿದ್ಧ ವ್ಯಕ್ತಿಗಳನ್ನು ಪೌರಾಣಿಕ ವ್ಯಕ್ತಿಗಳೆಂದು ಅನುಕೂಲಕರವಾಗಿ ಬದಿಗೆ ತಳ್ಳಿಹಾಕಿದರು. ಮಹಾನ್ ಮಹಾಭಾರತ ಯುದ್ಧವು ನಿಜವಾಗಿ ನಡೆದೇ ಇರಲಿಲ್ಲ ಮತ್ತು ಅದು ಕೇವಲ ಒಬ್ಬರ ಕಲ್ಪನೆಯ ಕಟ್ಟುಕಥೆ, ಕಾಲ್ಪನಿಕ ಕಥೆ ಎಂಬುದಾಗಿ ಸಹ ಅವರು ಹೇಳಿದರು. ಸುಮ್ಮನೇ ಊಹಿಸಿಕೊಳ್ಳಿ, ಯೇಸುಕ್ರಿಸ್ತನು ನೀರಿನ ಮೇಲೆ ನಡೆದನು ಅಥವಾ ಬ್ರೆಡ್ ಮತ್ತು ದ್ರಾಕ್ಷಾರಸವನ್ನು ಹಲವುಪಟ್ಟುಗಳಷ್ಟು ಹೆಚ್ಚಿಸಿದನು ಎಂದ ಕಾರಣಕ್ಕೆ ಮಾತ್ರ, ಇವುಗಳೆಲ್ಲಾ ಕಥೆಗಳು ಹಾಗೂ ಅವುಗಳು ನಿಜಕ್ಕೂ ಸಂಭವಿಸಲಿಲ್ಲ ಎಂದು ಅವರು ಹೇಳುತ್ತಾರೆ. ಯಾವುದಾದರೂ ಪವಾಡವನ್ನು ಹೆಕ್ಕಿ, ಅದು ’ತಾರ್ಕಿಕ’ವಾಗಿ ಕಾಣಿಸುವುದಿಲ್ಲವಾದುದರಿಂದ, ಅದು ಅರ್ಥವಾಗುವುದಿಲ್ಲವೆಂಬ ಕಾರಣದಿಂದ ಅದು ನಿಜಕ್ಕೂ ಸಂಭವಿಸಿಯೇ ಇಲ್ಲ ಎಂದು ಹೇಳುವುದಕ್ಕೆ ಇದು ಬಹಳ ಹೋಲಿಕೆಯಾಗುತ್ತದೆ.

ಹೀಗೆ ಕಮ್ಯುನಿಸ್ಟ್ ಚರಿತ್ರೆಗಾರರು ಭಾರತದ ಚರಿತ್ರೆಯಲ್ಲಿ ಇಂತಹ ರೀತಿಯ ವಿಕೃತಿಗಳನ್ನು ಪರಿಚಯಿಸಲು ತೊಡಗಿದರು. ಭಾರತವು ಅನಾಗರಿಕ ಹಾಗೂ ಅವಿದ್ಯಾವಂತ, ವಿಭಾಗಿಸಲ್ಪಟ್ಟ, ಹಲವಾರು ಮೂಢನಂಬಿಕೆಗಳನ್ನು ಹೊಂದಿರುವ, ಸಂಸ್ಕೃತಿಯೇ ಇಲ್ಲದ ಜನರ ಭೂಮಿಯೆಂಬುದು ಅವರ ತತ್ವವಾಗಿತ್ತು. ಇದು ಅವರ ದಾವೆಯಾಗಿತ್ತು ಮತ್ತು ಅವರು ಇದನ್ನು ಸಾಬೀತುಪಡಿಸಲು ಬಯಸಿದರು. ಇದು ಅತ್ಯಂತ ದುರದೃಷ್ಟಕರವಾಗಿದೆ.

ಅವರಿಗೆ ಸಂಸ್ಕೃತದ ಅ-ಆ-ಇ-ಈ ತಿಳಿಯದು. ಈ ದೇಶದ ಅಡಿಪಾಯವು ಸಂಸ್ಕೃತ ಭಾಷೆಯಾಗಿದೆ ಮತ್ತು ಒಂದು ಕಾಲಘಟ್ಟದಲ್ಲಿ ಇಡೀ ದೇಶವನ್ನು ಒಂದಾಗಿ ಜೋಡಿಸಿದುದು ಇದಾಗಿತ್ತು. ಈ ದೇಶದಲ್ಲಿನ ಪ್ರತಿಯೊಂದು ಇತರ ಭಾಷೆಯೂ ಸಂಸ್ಕೃತದಿಂದ ಉದ್ಭವವಾಗಿದೆ. ನಿಮಗೆ ಸಂಸ್ಕೃತ ತಿಳಿದಿಲ್ಲವಾದರೆ ಅಥವಾ ನಿಮಗೆ ಪಾಲಿ ಬರಹ ತಿಳಿದಿಲ್ಲವಾದರೆ, ನಿಮಗೆ ಈ ದೇಶದ ಚರಿತ್ರೆಯನ್ನು ತಿಳಿಯಲು ಸಾಧ್ಯವೇ ಇಲ್ಲ.

ಇದೇ ರೀತಿ ದಕ್ಷಿಣ ಭಾರತದ ಭಾಷೆಗಳು ಕೂಡಾ. ತಮಿಳು ಒಂದು ಬಹಳ ಪ್ರಧಾನವಾದ ಭಾಷೆಯಾಗಿದೆ. ಈ ಜನರಲ್ಲಿ (ಕಮ್ಯುನಿಸ್ಟ್) ಯಾರಿಗೂ ತಮಿಳು ಅಥವಾ ಮಲಯಾಳಂ ಅಥವಾ ತೆಲುಗು ಅಥವಾ ಕನ್ನಡ ಅಥವಾ ಸಂಸ್ಕೃತ ಕೂಡಾ ತಿಳಿದಿರಲಿಲ್ಲ. ಅವರಿಗೆ ಸ್ವಲ್ಪ ಇಂಗ್ಲಿಷ್ ಮತ್ತು ಸ್ವಲ್ಪ ಹಿಂದಿ ಮಾತ್ರ ಗೊತ್ತಿತ್ತು, ಅಷ್ಟೇ. ಆದರೂ ಅವರು ಭಾರತದ ಚರಿತ್ರೆಯ ಬಗ್ಗೆ ಸಂಪುಟಗಳಷ್ಟು ಪುಸ್ತಕಗಳನ್ನು ಬರೆದಿದ್ದಾರೆ. ಇವತ್ತು ಅವುಗಳು ಸಂಪೂರ್ಣವಾಗಿ ಅಪ್ರಚಲಿತ ಎಂದು ಸಾಬೀತಾಗಿವೆ. ಆ ಪುಸ್ತಕಗಳನ್ನು ಓದುವುದು ಸಂಪೂರ್ಣವಾಗಿ ಸಮಯವನ್ನು ವ್ಯರ್ಥಗೊಳಿಸುವುದಾಗಿದೆ. ಆದರೂ ಅವುಗಳು ಇನ್ನೂ ಹಲವಾರು ಗ್ರಂಥಾಲಯಗಳ ಕಪಾಟುಗಳನ್ನು ಆಕ್ರಮಿಸಿಕೊಂಡಿವೆ.  

ಸಂಪೂರ್ಣ ವಿಜಯನಗರ ಸಾಮ್ರಾಜ್ಯವು ಯಾವುದೇ ಯುದ್ಧವಿಲ್ಲದೆ ಹತ್ತು ನಿಮಿಷಗಳಲ್ಲಿ, ಸಾಧುಗಳ ಮತ್ತು ಸ್ವಾಮಿಗಳ ಮಾರುವೇಷದಲ್ಲಿದ್ದ ಕೆಲವು ವ್ಯಕ್ತಿಗಳಿಂದ ಜಯಿಸಲ್ಪಟ್ಟಿತು. ಇಂತಹ ಸಂಗತಿಗಳು ಹಿಂದೆ ಸಂಭವಿಸಿವೆ. ಆದರೆ ಈ ಕಾರಣದಿಂದಾಗಿ, ಈ ದೇಶದಲ್ಲಿನ್ನು ಒಳ್ಳೆಯ ಜನರಿಲ್ಲ ಅಥವಾ ಈ ದೇಶದಲ್ಲಿ ಯಾವುದೇ ಸಂತರಿಲ್ಲ ಎಂದು ನೀವು ಹೇಳಲು ಸಾಧ್ಯವಿಲ್ಲ.

ಪಟ್ಟಭದ್ರ ಹಿತಾಸಕ್ತಿಗಳಿದ್ದ ಜನರಿಂದ ಸಂತ ಕಬೀರ್ ದಾಸನು ದೂಷಿಸಲ್ಪಟ್ಟನು. ಯೇಸು ಕ್ರಿಸ್ತನನ್ನು ಕೂಡಾ ಹಿಂಸಿಸಲಾಯಿತು ಮತ್ತು ದೂಷಿಸಲಾಯಿತು. ಭಗವಾನ್ ಬುದ್ಧನು, ತನ್ನ ವಿರುದ್ಧ ತಿರುಗಿ ನಿಂತ ತನ್ನದೇ ಸೋದರ ಸಂಬಂಧಿಯಿಂದ ಹಿಂಸಿಸಲ್ಪಟ್ಟನು. ನಿಮ್ಮಲ್ಲಿ ಎಷ್ಟು ಮಂದಿಗೆ ಈ ವಾಸ್ತವ ತಿಳಿದಿರಲಿಲ್ಲ?

(ಸಭಿಕರಲ್ಲಿ ಹಲವರು ಕೈಗಳನ್ನು ಮೇಲೆತ್ತುತ್ತಾರೆ)

ಭಗವಾನ್ ಬುದ್ಧನು ಧ್ಯಾನವನ್ನು ಕಲಿಸುತ್ತಿದ್ದನು ಮತ್ತು ಅವನ ನಿಕಟ ಶಿಷ್ಯನೂ ಆಗಿದ್ದ ಅವನ ಸ್ವಂತ ಸೋದರ ಸಂಬಂಧಿಯು ಬುದ್ಧನ ಮೇಲೆ ಬಹಳ ಅಸೂಯೆಪಟ್ಟನು. ಅವನ ಮೆದುಳಿನಲ್ಲೇನಾಯಿತು ಎಂಬುದು ನನಗೆ ತಿಳಿಯದು. ಬಹುಶಃ ಅವನ ಸರ್ಕ್ಯೂಟ್‌ಗಳಲ್ಲಿ (ಮೆದುಳು) ಯಾವುದೋ ಹಾನಿ ಸಂಭವಿಸಿರಬೇಕು!

ಹೀಗಾಗಿ ಅವನು ಭಗವಾನ್ ಬುದ್ಧನು ಕುಳಿತುಕೊಂಡು ಧ್ಯಾನವನ್ನು ಕಲಿಸುತ್ತಿದ್ದ ಜಾಗದ ಹಿಂದಿನ ಬೆಟ್ಟದ ತುದಿಗೆ ಹೋದನು. ಬೆಟ್ಟದ ತುದಿಯಲ್ಲಿ ಒಂದು ಬೃಹತ್ತಾದ ಬಂಡೆಕಲ್ಲಿತ್ತು, ಮತ್ತು ತನ್ನ ಅನುಯಾಯಿಗಳಲ್ಲಿ ಕೆಲವರೊಂದಿಗೆ ಅವನು ದೊಡ್ಡ ಬಂಡೆಕಲ್ಲನ್ನು ಬುದ್ಧನ ದಿಕ್ಕಿನಲ್ಲಿ ತಳ್ಳಿದನು. ಬುದ್ಧನು ಕುಳಿತಲ್ಲಿಂದ ಅವನ ತಲೆಯು ಬಂಡೆಕಲ್ಲಿನಿಂದ ಸ್ವಲ್ಪದರಲ್ಲಿ ತಪ್ಪಿಸಿಕೊಂಡಿತು. ಇದರ ಹೊರತಾಗಿಯೂ, ಭಗವಾನ್ ಬುದ್ಧನು ಇದೆಲ್ಲದರಿಂದ ಅವಿಚಲಿತನಾಗಿ ಕುಳಿತನು. ಅಲ್ಲಿ ಕುಳಿತಿದ್ದ ಇತರ ಎಲ್ಲಾ ಭಕ್ತರು ಮತ್ತು ಶಿಷ್ಯರು ಇದನ್ನು ನೋಡಿ ವಿಚಲಿತರಾದರು ಮತ್ತು ಗಾಬರಿಗೊಂಡರು. ಭಗವಾನ್ ಬುದ್ಧನು ಆಳವಾದ ಕರುಣೆಯಿಂದ ಸುಮ್ಮನೇ ಮುಗುಳ್ನಕ್ಕನು. "ಪಾಪ, ಈ ವ್ಯಕ್ತಿಯ (ಇದನ್ನು ಮಾಡಿದ) ಒಳಗೆ ಬಹಳಷ್ಟು ನೋವು ಮತ್ತು ದುಃಖಗಳಿವೆ" ಎಂದು ಅವನು ಹೇಳಿದನು.

ಪ್ರಶ್ನೆ: ಪ್ರೀತಿಯ ಗುರುದೇವ, ಪರಮ ಶಾಂತಿ ಮತ್ತು ಸಂತೋಷದ ಕಡೆಗೆ ಕೊಂಡೊಯ್ಯುವ ಪಥ ಇದೊಂದೇ?

ಶ್ರೀ ಶ್ರೀ ರವಿ ಶಂಕರ್: ನಿನ್ನ ಬಾಯಾರಿಕೆಯನ್ನು ಇಂಗಿಸಲು ನೀರೊಂದೇ ಉತ್ತರವೇ ಎಂದು ನೀನು ನನ್ನಲ್ಲಿ ಕೇಳಿದರೆ, ನಾನೇನು ಹೇಳಲು ಸಾಧ್ಯ? ಶ್ವಾಸಕೋಶಗಳನ್ನು ತುಂಬಿಸಲಿರುವ ಮಾರ್ಗ ಉಸಿರಾಟ ಮಾತ್ರವೇ ಎಂದು ನೀನು ನನ್ನಲ್ಲಿ ಕೇಳಿದರೆ ನಾನೇನು ಹೇಳಲು ಸಾಧ್ಯ? ನಿನ್ನನ್ನು ಆಂತರಿಕ ಶಾಂತಿಗೆ, ಸಮಚಿತ್ತತೆಗೆ, ಆನಂದ ಮತ್ತು ಪ್ರೇಮಕ್ಕೆ ಕೊಂಡೊಯ್ಯುವ ಯಾವುದೇ ಪಥವಾದರೂ ಅದು ಸರಿ. ಎಲ್ಲಾ ಪಥಗಳೂ ಮೂಲಭೂತವಾಗಿ ಒಂದೇ. ವಿಧಾನಗಳು ಹಲವಾರು ಇರಲೂಬಹುದು.

ಒಬ್ಬರು ನಿಮಗೆ, "ಪ್ರಾಣಾಯಾಮವನ್ನು ಹೀಗೆ ಮಾಡಿ" ಎಂದು ಹೇಳಿಕೊಡಬಹುದು. ಇನ್ನೊಬ್ಬರು ನಿಮಗೆ, "ಪ್ರಾಣಾಯಾಮವನ್ನು ಹೀಗೆ ಮಾಡಿ" ಎಂದು ಒಂದು ವಿಭಿನ್ನವಾದ ರೀತಿಯಲ್ಲಿ ಹೇಳಿಕೊಡಬಹುದು. ಒಬ್ಬರು ನಿಮ್ಮಲ್ಲಿ ಅದನ್ನು ಮಾಡದೇ ಇರಲು ಕೂಡಾ ಹೇಳಬಹುದು. ಹೀಗೆ ಹಲವಾರು ವಿಭಿನ್ನ ವಿಧಾನಗಳಿವೆ. ಇಷ್ಟು ವರ್ಷಗಳಲ್ಲಿ ನಾವು ನೋಡಿದುದೇನೆಂದರೆ, ಈ ವಿಧಾನಗಳು (ಆರ್ಟ್ ಆಫ್ ಲಿವಿಂಗ್‌ನಿಂದ ಕಲಿಸಲಾಗುವ) ಈ ಕಾಲಕ್ಕೆ, ನಮ್ಮ ಪೀಳಿಗೆಗೆ ಮತ್ತು ಜನರಿಗೆ ಸೂಕ್ತವಾದವು  ಎಂಬುದಾಗಿ. ಇದೊಂದು ಕಾಲದ ಪರೀಕ್ಷೆಗೆ ಒಳಪಟ್ಟ ವಿಷಯ ಮತ್ತು ಪ್ರತಿಯೊಬ್ಬರಿಗೂ ಇದು ಹಿತಕರವಾಗಿದೆ.

ನೋಡಿ, ಹಿಂದಿನ ಕಾಲದಲ್ಲಿ ಜನರಿಗೆ ಮಾಡುವುದಕ್ಕೆ ಹೆಚ್ಚೇನೂ ಇರಲಿಲ್ಲ. ಅವರು ಬೀಜಗಳನ್ನು ಹೊಲದಲ್ಲಿ ಎಸೆಯುತ್ತಿದ್ದರು ಮತ್ತು ಅವುಗಳು ಬೆಳೆಯುವುದನ್ನು ನೋಡಲು ಸುಮ್ಮನೇ ಕುಳಿತುಕೊಳ್ಳುತ್ತಿದ್ದರು. ಪಕ್ಷಿಗಳು ತಮ್ಮ ಬೆಳೆಯನ್ನು ನಾಶಪಡಿಸುವುದಿಲ್ಲವೆಂಬುದನ್ನು ಖಚಿತಪಡಿಸಿಕೊಳ್ಳಲು ಅವರು ನೋಡಿಕೊಂಡು ಇರುತ್ತಿದ್ದರು. ಹೀಗೆ ಅವರಲ್ಲಿ ಸಮಯವಿತ್ತು, ಮತ್ತು ಅವರಿಗೆ ಎಂಟು ಗಂಟೆಗಳ ಕಾಲವೆಷ್ಟೋ ಧ್ಯಾನ ಮಾಡಲು ಸಾಧ್ಯವಾಗುತ್ತಿತ್ತು. ಆದರೆ ಪ್ರತಿದಿನವೂ ಎಂಟು ಗಂಟೆಗಳವರೆಗೆ ನೀವು ಧ್ಯಾನ ಮಾಡಬೇಕಾದ ಅಗತ್ಯವಿಲ್ಲ. ಪ್ರತಿದಿನವೂ ಹತ್ತು ನಿಮಿಷಗಳ ಕಾಲ ಕೇವಲ ಸುದರ್ಶನ ಕ್ರಿಯೆಯನ್ನು ಮಾಡಿ, ಅದು ಒಳ್ಳೆಯದು.

ಕೆಲವು ಜನರು ಹತ್ತು ದಿನಗಳವರೆಗಿನ ವಿಪಾಸನ ಧ್ಯಾನ ಶಿಬಿರಕ್ಕೆ ಹೋಗುತ್ತಾರೆ. ಅಲ್ಲಿ ಅವರು ಹತ್ತು ದಿನಗಳವರೆಗೆ ಉಸಿರಾಟವನ್ನು ಗಮನಿಸುತ್ತಾರೆ, ಮತ್ತು ನಂತರ ಅಂತಿಮವಾಗಿ ಹತ್ತು ದಿನಗಳ ಕೊನೆಯಲ್ಲಿ, ಅವರಿಗೆ ಶರೀರದಲ್ಲಿ ಸ್ವಲ್ಪ ಸಂವೇದನೆಗಳ ಅನುಭವವಾಗುತ್ತದೆ. ಅದೇ ಸಂವೇದನೆಗಳನ್ನು ನೀವು, ಆ ಹತ್ತು ನಿಮಿಷಗಳ ಸುದರ್ಶನ ಕ್ರಿಯೆ ಮಾಡುವಿಕೆಯಲ್ಲಿ ಕೂಡಾ ಅನುಭವಿಸಬಹುದು. ನಿಮ್ಮ ಶರೀರದಲ್ಲಿ ಸಂವೇದನೆಯಿದೆ ಎಂಬುದನ್ನು ಅಥವಾ ನಿಮ್ಮ ಶರೀರವು ಟೊಳ್ಳು ಮತ್ತು ಖಾಲಿಯಾಗಿದೆ ಎಂಬುದನ್ನು ಕಂಡುಹಿಡಿಯಲು ನೀವು ಎಂಟರಿಂದ ಹತ್ತು ದಿನಗಳವರೆಗೆ ಕುಳಿತುಕೊಳ್ಳಲು ಬಯಸುವಿರೇ ಎಂಬ ಆಯ್ಕೆ ನಿಮಗೆ ಬಿಟ್ಟದ್ದು. ಅದು ಕೆಟ್ಟದು ಅಥವಾ ಆ ರೀತಿಯದ್ದೇನೋ ಎಂದು ನಾನು ಹೇಳುತ್ತಿಲ್ಲ. ಪ್ರತಿಯೊಂದಕ್ಕೂ ಅದರದ್ದೇ ಆದ ಮೌಲ್ಯವಿದೆ.  

ನಾಲ್ಕು ಅಥವಾ ಐದು ದಿನಗಳ ಉನ್ನತ ಧ್ಯಾನ ಶಿಬಿರದಲ್ಲಿ ನೀವು ಮೌನವನ್ನು ಪಾಲಿಸಿ, ವಿವಿಧ ಧ್ಯಾನಗಳನ್ನು ಮಾಡಿ, ನಂತರ ಯೋಗ ಮತ್ತು ಪ್ರಾಣಾಯಾಮಗಳನ್ನು ಮಾಡಲು ಎದ್ದುನಿಂತಾಗ, ಅದು ರಕ್ತಪರಿಚಲನೆಯನ್ನು ಹೆಚ್ಚಿಸುತ್ತದೆ ಮತ್ತು ಶರೀರಕ್ಕೆ ಚೈತನ್ಯವನ್ನು ನೀಡುತ್ತದೆ. ಅದರೊಂದಿಗೆಯೇ ಅದು ಅನುಭವಗಳನ್ನು ಕೂಡಾ ತರುತ್ತದೆ.

ಅದೃಷ್ಟವಶಾತ್ ದಿ ಆರ್ಟ್ ಆಫ್ ಲಿವಿಂಗ್‌ನಲ್ಲಿ, ನಮಗೆ ಎಲ್ಲಾ ದಾರಿಗಳೂ ತೆರೆದಿವೆ (ಒಬ್ಬರು ಒಳಕ್ಕೆ ಆಳವಾಗಿ ಹೋಗಲು). ನಮ್ಮಲ್ಲಿ ಜ್ಞಾನವಿದೆ, ನಾರದ ಭಕ್ತಿ ಸೂತ್ರಗಳಲ್ಲಿ (ಪ್ರೇಮದ ಸೂತ್ರಗಳ ಬಗ್ಗೆ ನಾರದ ಮಹರ್ಷಿಗಳ ವ್ಯಾಖ್ಯಾನ) ನಾವು ಭಕ್ತಿಯ ಅಂಶವನ್ನು ಹೊಂದಿದ್ದೇವೆ; ಮತ್ತೆ ಅಷ್ಟಾವಕ್ರ ಗೀತೆಯಲ್ಲಿ ನಮಗೆ ಬೌದ್ಧಿಕ ವಿಚಾರಣೆ ಮತ್ತು ಉತ್ತೇಜಕಗಳಿವೆ. ಪತಂಜಲಿ ಯೋಗ ಸೂತ್ರಗಳ ಮೂಲಕ ನಮ್ಮಲ್ಲಿ ಯೋಗದ ಜ್ಞಾನವಿದೆ. ಹೀಗೆ ಎಲ್ಲಾ ಮಗ್ಗಲುಗಳಿಂದಲೂ ಇದು ಸಂಪೂರ್ಣವಾಗಿದೆ; ನಮ್ಮ ಅರಿವಿಗಾಗಿ, ನಮ್ಮ ಯೋಗಕ್ಷೇಮಕ್ಕಾಗಿ ಮತ್ತು ಇದು ಬಹಳ ವೈಜ್ಞಾನಿಕವೂ ಆಗಿದೆ.

ನಾವೊಂದು ವೈಜ್ಞಾನಿಕ ರೀತಿಯಲ್ಲಿ ಮುಂದುವರಿಯಬೇಕು ಮತ್ತು ಕುರುಡು ನಂಬಿಕೆಗಳ ಮೂಲಕವಲ್ಲ ಎಂಬುದು ನನ್ನ ನಂಬಿಕೆ. ಅದು ಆರ್ಟ್ ಆಫ್ ಲಿವಿಂಗ್‌ನ ವಿಶೇಷತೆಯಾಗಿದೆ. ಜನರು ಸಾಮಾನ್ಯವಾಗಿ ಉಪವಾಸ ಮಾಡುವುದರ ಬಗ್ಗೆ ಯಾವುದೇ ವೈಜ್ಞಾನಿಕ ತಿಳುವಳಿಕೆಯಿಲ್ಲದೆಯೇ ಉಪವಾಸ ಮಾಡುತ್ತಾರೆ. ಅವರು ಸಾಮಾನ್ಯವಾಗಿ ಹಗಲಿಡೀ ಉಪವಾಸ ಮಾಡುತ್ತಾರೆ ಮತ್ತು ನಂತರ ರಾತ್ರಿ ಗಡದ್ದಾಗಿ ಭೋಜನ ಮಾಡುತ್ತಾರೆ. ಅಥವಾ ಅವರು ದಿನವಿಡೀ ಉಪವಾಸ ಮಾಡುತ್ತಾರೆ ಮತ್ತು ಕರಿದ ತಿಂಡಿಗಳನ್ನು ತಿನ್ನುವುದರ ಮೂಲಕ ಅದನ್ನು ಮುರಿಯುತ್ತಾರೆ.

ನವರಾತ್ರಿಯ ಸಮಯದಲ್ಲಿ ಹಲವಾರು ಹಿಂದೂಗಳು ಸಾಮಾನ್ಯವಾಗಿ ಉಪವಾಸ ಮಾಡುತ್ತಾರೆ ಮತ್ತು ಕೇವಲ ಕರಿದ ಆಲೂಗಡ್ಡೆ (ಚಿಪ್ಸ್ ಅಥವಾ ವೇಫರ್‌ಗಳು), ಸಿಹಿತಿಂಡಿಗಳು, ಮೊದಲಾದವನ್ನು ಮಾತ್ರ ತಿನ್ನುತ್ತಾರೆ. ಸಿಹಿತಿಂಡಿಗಳನ್ನು ತಿನ್ನುವುದಾದರೂ ಪರವಾಗಿಲ್ಲ, ಆದರೆ ಉಪವಾಸದ ಸಮಯದಲ್ಲಿ ಕರಿದ ಆಲೂಗಡ್ಡೆಯನ್ನು ತಿನ್ನುವುದು ಒಳ್ಳೆಯದಲ್ಲ. ದಕ್ಷಿಣ ಭಾರತದಲ್ಲಿ, ಇಡ್ಲಿಗಳನ್ನು ತಿನ್ನಬಹುದು, ಆದರೆ ಅನ್ನವಲ್ಲ ಎಂದು ಜನರು ಹೇಳುತ್ತಾರೆ. ಅವಲಕ್ಕಿಯನ್ನು ತಿನ್ನಬಹುದು, ಆದರೆ ಅವರು ಅದರೊಂದಿಗೆ ಇತರ ಆಹಾರಗಳನ್ನು ಕೂಡಾ ತಿನ್ನುತ್ತಾರೆ. ಇದು ಉಪವಾಸ ಮಾಡುವ ತಪ್ಪಾದ ವಿಧಾನವಾಗಿದೆ.
ಮುಸ್ಲಿಮರು ಕೂಡಾ ಇಡೀ ದಿನ ಉಪವಾಸ ಮಾಡುತ್ತಾರೆ ಮತ್ತು ನಂತರ ಸಂಜೆ ಉಪವಾಸವನ್ನು ಮುರಿಯುವ ಸಮಯದಲ್ಲಿ ಅವರು ಬಹಳಷ್ಟು ತಿನ್ನುತ್ತಾರೆ. ಅದು ಬಹಳ ದೈಹಿಕ ಆಘಾತವನ್ನುಂಟುಮಾಡುತ್ತದೆ ಮತ್ತು ಇದು ಉಪವಾಸ ಮಾಡುವ ಒಂದು ಬಹಳ ಅವೈಜ್ಞಾನಿಕ ವಿಧಾನವಾಗಿದೆ. ಇಲ್ಲಿ ನಾವು ಯಾವತ್ತೂ ವಿಜ್ಞಾನವನ್ನು ಅನುಸರಿಸಬೇಕು. ಉಪವಾಸ ಮಾಡುವುದು ಒಳ್ಳೆಯದು, ಆದರೆ ನೀವು ಅದನ್ನು ಮಾಡುವ ಒಂದು ವೈಜ್ಞಾನಿಕ ಮಾರ್ಗವನ್ನು ಅನುಸರಿಸಬೇಕು. ಉಪವಾಸದ ಸಮಯದಲ್ಲಿ ಹಣ್ಣಿನ ರಸಗಳನ್ನು ಮತ್ತು ಹಣ್ಣುಗಳನ್ನು ತಿನ್ನಿ. ನೀವು ನಿಮ್ಮ ಉಪವಾಸದಿಂದ ಹೊರಬರಬೇಕಾದಾಗ, ಬಹಳ ಮೆತ್ತಗೆ ನೀವು ಅದರಿಂದ ಹೊರಬರಬೇಕು (ಅಂದರೆ, ಉಪವಾಸದ ಮೂಲಕ ಶುದ್ಧೀಕರಣಗೊಂಡ ಶರೀರಕ್ಕೆ ಭಾರವಾಗದಂತೆ). ಆಗ ಅದು ಶರೀರ ಮತ್ತು ಮನಸ್ಸು ಎರಡಕ್ಕೂ ಒಳ್ಳೆಯದು.

ಪ್ರಶ್ನೆ: ಗುರುದೇವ, ನಿನ್ನೆ ನೀವು, ಭಗವಾನ್ ಬುದ್ಧನ ಜನ್ಮಸ್ಥಳ ಭಾರತವಾದುದರಿಂದ ಬೌದ್ಧ ದೇಶಗಳನ್ನು ಭಾರತದಲ್ಲಿ ಒಟ್ಟುಸೇರಿಸಲು ಪ್ರಯತ್ನಿಸುತ್ತಿದ್ದ ಇಂದಿರಾ ಗಾಂಧಿಯವರ ಬಗ್ಗೆ ಮಾತನಾಡಿದಿರಿ. ಇವತ್ತಿಗೂ ಇದು ಸಾಧ್ಯವಿದೆಯೇ ಮತ್ತು ಅದನ್ನು ಯಾರಿಂದ ಮಾಡಲು ಸಾಧ್ಯ?

ಶ್ರೀ ಶ್ರೀ ರವಿ ಶಂಕರ್: ಪ್ರಪಂಚದಲ್ಲಿರುವ ಎಲ್ಲಾ ದೇಶಗಳು ಒಟ್ಟುಸೇರಬೇಕು ಎಂದು ನನಗನ್ನಿಸುತ್ತದೆ. ಅದನ್ನೇ ನಾವು ದಿ ಆರ್ಟ್ ಆಫ್ ಲಿವಿಂಗ್‌ನಲ್ಲಿ ಮಾಡುತ್ತಿರುವುದು. ಒಂದು ಏಕ ಪ್ರಪಂಚ ಕುಟುಂಬ ಆಗಿ ನಾವು ಎಲ್ಲರನ್ನೂ ಒಂದುಗೂಡಿಸುತ್ತಿದ್ದೇವೆ. ಅದಕ್ಕಾಗಿಯೇ ’ವಸುಧೈವ ಕುಟುಂಬಕಮ್’ (ಎಲ್ಲರೂ ಒಂದು ಕುಟುಂಬ ಮತ್ತು ಒಬ್ಬರು ದೇವರಿಗೆ ಸೇರಿದವರು) ಎಂದು ಹೇಳಲಾಗಿರುವುದು. ವಾಯುವಿಗೆ ಯಾವುದೇ ಸೀಮೆಗಳಿಲ್ಲ, ಸೂರ್ಯನಿಗೆ ಯಾವುದೇ ಸೀಮೆಗಳಿಲ್ಲ. ವಾಸ್ತವವಾಗಿ ಭೂಮಿಯ ಮೇಲೆ ಯಾವುದೇ ಸೀಮೆಯಿಲ್ಲ. ಅವುಗಳೆಲ್ಲವೂ ಬೇರೆ ಬೇರೆ ಜನರ ನಡುವೆ ಮಾನವನು ಮಾಡಿದ ವಿಭಜನೆಗಳಾಗಿವೆ. ಇಡೀ ಪ್ರಪಂಚವು ಒಂದು ಮಾನವಕುಲವಾಗಿ, ಆಧ್ಯಾತ್ಮಿಕತೆಯ ಉತ್ಸಾಹದಲ್ಲಿ ಒಂದಾಗುವುದರ ಕನಸನ್ನು ನಾವು ಕಾಣಬೇಕು. ಸಂಯುಕ್ತ ರಾಷ್ಟ್ರಗಳ ಸಂಸ್ಥೆಯು ಈ ಕಲ್ಪನೆಯೊಂದಿಗೆ ಸ್ಥಾಪಿಸಲ್ಪಟ್ಟಿತು, ಆದರೆ ದುರದೃಷ್ಟವಶಾತ್ ಅಲ್ಲಿ ಆಧ್ಯಾತ್ಮಿಕ ಅಂಶದ ಕೊರತೆಯಿಂದಾಗಿ, ಅದಕ್ಕೆ ಯಶಸ್ಸು ಸಿಗಲಿಲ್ಲ.

ಪ್ರಶ್ನೆ: ಗುರುದೇವ, ನಮ್ಮ ಶರೀರದಲ್ಲಿರುವ ನಿಜವಾದ ಪದಾರ್ಥವನ್ನು ಒಂದು ಬೆಂಕಿಪೆಟ್ಟಿಗೆಯಲ್ಲಿ ತುಂಬಬಹುದು ಮತ್ತು ಉಳಿದುದು ಕೇವಲ ಖಾಲಿ ಜಾಗ ಎಂದು ಹೇಳಲಾಗುತ್ತದೆ. ಈ ಸಂದರ್ಭದಲ್ಲಿ, ನೀವು ದಯವಿಟ್ಟು ತೇಲುವಿಕೆಯ ವಿದ್ಯಮಾನಗಳ ಬಗ್ಗೆ ವಿವರಿಸಬಲ್ಲಿರೇ?

ಶ್ರೀ ಶ್ರೀ ರವಿ ಶಂಕರ್: ನೀನು ಎದ್ದು ನಿಲ್ಲಲು ಬಯಸುವಾಗ, ನೀನೇನು ಮಾಡುವೆ? ನಿನ್ನ ಸಂಪೂರ್ಣ ಶರೀರವು ನೆಲದ ಮೇಲಿದೆ. "ಸರಿ, ಈಗ ಎದ್ದುನಿಲ್ಲು" ಎಂದು ನಿನ್ನ ಮನಸ್ಸು ಶರೀರಕ್ಕೆ ಹೇಳುವಾಗ, ೬೫ ರಿಂದ ೭೦ ಕಿಲೋಗಳ ಈ ಸಂಪೂರ್ಣ ಭಾರವು ಎದ್ದುನಿಲ್ಲುತ್ತದೆ ಮತ್ತು ನಡೆಯಲು ತೊಡಗುತ್ತದೆ. ನೀನು ನಿನ್ನ ಕಾಲ್ಬೆರಳುಗಳ ಆಧಾರವನ್ನು ಪಡೆಯುವೆ ಮತ್ತು ನಿನ್ನ ಕಾಲ್ಬೆರಳುಗಳ ಆಧಾರವನ್ನು ಪಡೆದು ನಡೆಯುವೆ. ನಿನ್ನ ಶರೀರವು ಮೇಲಕ್ಕೆ ಎತ್ತಲ್ಪಡುವುದು ಹಾಗೆ. ಹಾಗಾದರೆ ಅದು ಸಂಭವಿಸುತ್ತಿರುವುದು ಹೇಗೆ? ಅದೆಲ್ಲವೂ ಮನಸ್ಸಿನಲ್ಲಿ, ಪ್ರಜ್ಞೆಯಲ್ಲಿ ಒಂದು ಏಕೈಕ ಯೋಚನೆಯೊಂದಿಗೆ ಪ್ರಾರಂಭವಾಗುತ್ತದೆ.
ಹೀಗಾಗಿ ಮನಸ್ಸು ಬಹಳ ಸುಸಂಬದ್ಧವಾದಾಗ, ಅದು ಶರೀರವನ್ನು ಒಂದು ಏಕೈಕ ಯೋಚನೆಯಿಂದ ಎತ್ತಬಲ್ಲದು. ಆದರೆ ನಾನು ನಿನಗೆ ಹೇಳುತ್ತೇನೆ ಕೇಳು, ತೇಲಿಕೊಂಡು ತಮ್ಮ ಶರೀರವನ್ನು ಗಾಳಿಯಲ್ಲಿ ತೂಗುಹಾಕಿದ ಯಾರನ್ನೂ ನಾನು ನೋಡಿಲ್ಲ. ಹೌದು, ಶರೀರವು ನೆಲದಿಂದ ಮೇಲೆತ್ತಲ್ಪಡುತ್ತದೆ. ಹಲವು ಜನರಿಗೆ ಇಷ್ಟರಮಟ್ಟಿಗೆ ಅನುಭವವಾಗಿದೆ. ಆದರೆ ಗಾಳಿಯಲ್ಲಿ ತೇಲಲು ತೊಡಗಿದ ಯಾರನ್ನೂ ನಾನು ನೋಡಿಲ್ಲ.