ಭಾನುವಾರ, ಮೇ 4, 2014

ನಿಮ್ಮನ್ನೇ ನೀವು ಅರಿಯುವ ಅಗತ್ಯವಿದೆ

ಮೇ ೪, ೨೦೧೪
ರೋಮ್, ಇಟಲಿ

ಪ್ರಶ್ನೆ: ಭಾರತದಲ್ಲಿ ನಾವು ದೇವರ ಮೇಲೆ ಬಹಳವಾಗಿ ಕೇಂದ್ರಿತವಾದಂತೆ ತೋರುತ್ತದೆ ಮತ್ತು ಕೆಲವು ಜನರು ಅಂಧರಾಗಿ ಧರ್ಮನಿಷ್ಠರಾಗಿದ್ದಾರೆ. ದೇವರಲ್ಲಿ ನಂಬಿಕೆಯನ್ನಿರಿಸದೆಯೇ ಸಂತೋಷವಾಗಿರಲು ಸಾಧ್ಯವೇ? ಕೆಲವೊಮ್ಮೆ ನಾವು ಜೀವನದಲ್ಲಿ ದೇವರನ್ನಿರಿಸಿದಾಗ, ಅದು ಸಮಸ್ಯೆಯನ್ನು ಸೃಷ್ಟಿಸುತ್ತದೆ.  

ಶ್ರೀ ಶ್ರೀ ರವಿ ಶಂಕರ್: ನಿನಗೆ ಗೊತ್ತಾ, ದೇವರ ಯಾವುದೇ ಪರಿಕಲ್ಪನೆಯೂ ಇಲ್ಲದೆಯೇ ಆಧ್ಯಾತ್ಮವು ಗೌರವಿಸಲ್ಪಟ್ಟ ಏಕಮಾತ್ರ ದೇಶವೆಂದರೆ ಭಾರತ.

ಜೈನ ಪಂಥದಲ್ಲಿ, ದೇವರು ಹೊರಗೆಲ್ಲೋ ಕುಳಿತಿರುವ ಯಾವುದೇ ಪರಿಕಲ್ಪನೆಯಿಲ್ಲ, ಮತ್ತು ಬೌದ್ಧ ಧರ್ಮದಲ್ಲಿ ಕೂಡಾ ಹಾಗೆಯೇ. ಹೀಗಾಗಿ, ದೇವರೆಂದರೇನು ಅಥವಾ ದೇವರೆಲ್ಲಿರುವರು ಎಂದು ನಿಮಗೆ ಗೊತ್ತಿಲ್ಲದಿದ್ದರೆ ಪರವಾಗಿಲ್ಲ. ದೇವರಲ್ಲಿ ವಿಶ್ವಾಸವಿರಿಸಬೇಕಾಗಿಲ್ಲ, ಕನಿಷ್ಠಪಕ್ಷ ನೀನು ನಿನ್ನಲ್ಲೇ ವಿಶ್ವಾಸವನ್ನಿಡು. ಆಗ ನಿನಗೆ ನೀನು ಯಾರೆಂಬುದು ತಿಳಿಯುವುದು. ನೀನು ಯಾರು? ನೀನು ಶರೀರವೇ? ನೀನು ಮನಸ್ಸೇ? ನೀನು ಯೋಚನೆಯೇ? ನೀನು ಯಾರು! ನೀನು ಯಾರೆಂಬುದನ್ನು ತಿಳಿ, ಅಷ್ಟು ಸಾಕು.

ನೀನು ಯಾರೆಂಬುದನ್ನು ತಿಳಿಯಲು ಬಯಸುವ ಪಥದಲ್ಲಿ, ನಿನ್ನ ಅಖಂಡತೆ, ನಿನ್ನ ಪ್ರಾಮಾಣಿಕತೆ, ಎಲ್ಲರ ಕಡೆಗಿರುವ ನಿನ್ನ ಕರುಣೆ ಹಾಗೂ ಪ್ರೇಮ, ನಿನ್ನ ಸಂವೇದನಾಶೀಲತೆ ಇವೆಲ್ಲವೂ ಬರುತ್ತವೆ, ಮತ್ತು ಇದುವೇ ಧರ್ಮಶ್ರದ್ಧೆ!

ಭಾರತದಲ್ಲಿ, ಉಪನಿಷತ್ತುಗಳಲ್ಲಿ, ಮೊದಲು ದೇವರನ್ನು ನಂಬುವಂತೆ ಹೇಳಲಾಗಿಲ್ಲ. ’ನಿನ್ನನ್ನೇ ತಿಳಿ’ ಎಂದು ಉಪನಿಷತ್ತುಗಳು ಹೇಳುತ್ತವೆ. ಇದನ್ನೇ ಒತ್ತಿ ಹೇಳಲಾಗಿರುವುದು.

ನಾನು ಯಾವುದನ್ನೂ ನಂಬುವುದಿಲ್ಲ, ನಾನೊಬ್ಬ ನಾಸ್ತಿಕ ಎಂದು ನೀವು ಹೇಳಿದರೆ, ಆಗ ನಿಮಗೆ ಗೊತ್ತಾ, ನಾಸ್ತಿಕರಲ್ಲೊಂದು ಬಹಳ ದೊಡ್ಡ ಸಮಸ್ಯೆಯಿದೆ. ಅವರೊಳಗೆ ಭಯವಿದೆ.

ಎರಡು ರೀತಿಯ ಜನರಿದ್ದಾರೆ, ಒಂದು ದೇವರನ್ನು ನಂಬುವವರು ಮತ್ತು ಒಂದು, ದೇವರನ್ನು ನಂಬದೇ ಇದ್ದು, ತಮಗೇನಾಗಲಿದೆಯೆಂದು ತಿಳಿದಿಲ್ಲವಾದ್ದರಿಂದ ಭಯಾನಕವಾದ ಭಯವನ್ನು ಹೊಂದಿರುವವರು. ವಿಶ್ವಾಸದ ಕೊರತೆ, ಕರುಣೆಯ ಕೊರತೆ, ಇವುಗಳೆಲ್ಲವೂ ಬರುತ್ತವೆ.

ನಾನು ಹೇಳುವುದೇನೆಂದರೆ, ನೀನು ದೇವರನ್ನು ನಂಬುವೆಯೋ ಇಲ್ಲವೋ ಎಂಬುದು ಅಪ್ರಸ್ತುತ. ನೀನು ತಿಳಿಯಬೇಕಾಗಿರುವುದೇನೆಂದರೆ, ನೀನು ಯಾರೆಂಬುದು. ನೀನು ಯಾರೆಂಬುದನ್ನು ತಿಳಿಯಲು ನಿನಗೆ ಯಾವುದಾದರೂ ಆಧ್ಯಾತ್ಮಿಕ ಅಭ್ಯಾಸದ, ಯಾವುದಾದರೂ ದಾರಿಯ ಅಗತ್ಯವಿದೆ.

ನಿಮಗೆ ಯಾವುದರಲ್ಲೂ ನಂಬಿಕೆಯಿಲ್ಲವೆಂದು ನೀವು ಹೇಳುವುದಾದರೆ, ಕನಿಷ್ಠಪಕ್ಷ ನೀವು ಹೇಳುತ್ತಿರುವುದರ ಮೇಲಾದರೂ ನೀವು ನಂಬಿಕೆಯನ್ನಿಡಿ, ಸರಿಯಾ? ನೀವು ಹೇಳಬೇಕಾದುದು ಏನೆಂದರೆ, "ನನ್ನನ್ನು ಹೊರತುಪಡಿಸಿ ಬೇರೆ ಯಾವುದರಲ್ಲೂ ನನಗೆ ವಿಶ್ವಾಸವಿಲ್ಲ" ಎಂದು.

"ನನಗೆ ಯಾವುದರಲ್ಲೂ ನಂಬಿಕೆಯಿಲ್ಲ" ಎಂದು ನೀವು ಹೇಳಲು ಸಾಧ್ಯವಿಲ್ಲ, ಆಗ ನೀವು, ನೀವು ಹೇಳುತ್ತಿರುವ ಶಬ್ದಗಳನ್ನು ಕೂಡಾ ನಂಬುವುದಿಲ್ಲ!

ನಾನು ಹೇಳುವುದೇನೆಂದರೆ, ಧರ್ಮ ಅಥವಾ ದೇವರ ಒಂದು ಪರಿಕಲ್ಪನೆಗೆ ತನ್ನದೇ ಆದ ಬೆಲೆಯಿದೆ. ಅದು ದುಃಖದಲ್ಲಿರುವ ಜನರಿಗೆ ಸಹಾಯ ಮಾಡುತ್ತದೆ, ಅದು ಜನರ ಉತ್ಸಾಹವನ್ನು ಮೇಲೆತ್ತುತ್ತದೆ ಮತ್ತು ಅದು ನೈತಿಕ ಹೊಣೆಗಾರಿಕೆಯನ್ನು ಕಾಪಾಡುತ್ತದೆ. ಆದರೆ ಒಬ್ಬ ಒಳ್ಳೆಯ ಮನುಷ್ಯನಾಗಲು ಅಥವಾ ಆಧ್ಯಾತ್ಮದಲ್ಲಿ ಮುಂದುವರಿಯಲು ಇದು ಅತ್ಯಗತ್ಯವೆಂದು ನನಗೆ ಅನ್ನಿಸುತ್ತಿಲ್ಲ. ಅದು ತನ್ನಿಂತಾನೇ ಬರುವುದು.

ಪ್ರಶ್ನೆ: ಒಬ್ಬ ಉತ್ತಮ ವ್ಯಾಪಾರಿಯಾಗಲು ಆಧ್ಯಾತ್ಮಿಕತೆಯು ನನಗೆ ಹೇಗೆ ಸಹಾಯ ಮಾಡಬಲ್ಲದು? ಆಧ್ಯಾತ್ಮಿಕತೆಯು ವ್ಯಾಪಾರಕ್ಕಿಂತ ಭಿನ್ನವಾದುದೇ?

ಶ್ರೀ ಶ್ರೀ ರವಿ ಶಂಕರ್: ವ್ಯಾಪಾರವು ನಿನ್ನಿಂದ ಭಿನ್ನವಾದುದೇ? ನೀನು ಕೊಂಡಿಯಾಗಿರುವೆ. ನೀನು ಚೆನ್ನಾಗಿದ್ದು, ನೀನು ಸಂತೋಷವಾಗಿದ್ದರೆ, ನೀನು ಬುದ್ಧಿಶಾಲಿಯಾಗಿದ್ದು, ಅಂತರ್ಜ್ಞಾನ ಹೊಂದಿದವನಾಗಿದ್ದರೆ, ಆಗ ನೀನು ಒಳ್ಳೆಯ ವ್ಯಾಪಾರವನ್ನು ಮಾಡಬಹುದು.

ನನಗೆ ಹೇಳು, ವ್ಯಾಪಾರಕ್ಕೆ ನಿನಗೆ ಯಾವುದರ ಅಗತ್ಯವಿದೆ? ನಿನಗೆ ಅಂತರ್ಜ್ಞಾನ ಬೇಕು, ನಿನ್ನಲ್ಲಿ ನಾವೀನ್ಯತೆಯಿರಬೇಕು ಮತ್ತು ನಿನಗೆ ಸ್ಫೂರ್ತಿ ಬೇಕು. ಯಾವುದೇ ಸ್ಪರ್ಧೆಯಿಲ್ಲದಿದ್ದರೆ ನೀನು ಹೇಗೆ ಮುಂದೆ ಸಾಗುವೆ? ಸ್ಪರ್ಧೆಯು ನಿನಗೆ ಸ್ಫೂರ್ತಿ ನೀಡುತ್ತದೆ.

ಹೀಗಾಗಿ, ಅಂತರ್ಜ್ಞಾನ, ನಾವೀನ್ಯತೆ ಮತ್ತು ಸ್ಫೂರ್ತಿ, ಈ ಎಲ್ಲಾ ಮೂರು ವಿಷಯಗಳು ಆಧ್ಯಾತ್ಮಿಕತೆಯಿಂದ ಬರುತ್ತವೆ.
ಆಧ್ಯಾತ್ಮಿಕತೆಯೆಂದರೇನು? ನಿಮ್ಮನ್ನೇ ಶಾಂತಗೊಳಿಸುವುದು, ನಿಮ್ಮನ್ನೇ ಕೇಂದ್ರೀಕೃತರಾಗಿಸುವುದು ಮತ್ತು ಜೀವನವನ್ನೊಂದು ವಿಶಾಲ ದೃಷ್ಟಿಕೋನದಿಂದ ನೋಡುವುದು. ಇದುವೇ ನಿಮ್ಮ ಸುತ್ತಲೂ ಒಂದು ಹಿತಕರವಾದ ವಾತಾವರಣವನ್ನು ಉಂಟುಮಾಡುವುದು. ಆಧ್ಯಾತ್ಮಿಕತೆಯೊಂದಿಗೆ, ನಿಮ್ಮ ಸಂಪರ್ಕದ ಗುಣಮಟ್ಟ ಕೂಡಾ ಸುಧಾರಿಸುತ್ತದೆ.

ಜನರೊಂದಿಗೆ ನೀವು ಉತ್ತಮ ಸಂಪರ್ಕವನ್ನು ಬಯಸುವುದಿಲ್ಲವೇ? ಸಂಪರ್ಕ, ಕರುಣೆ, ಒಳ್ಳೆಯ ನಡತೆ, ಸ್ಥಿರತೆ - ಇವುಗಳೆಲ್ಲವೂ ಆಧ್ಯಾತ್ಮಿಕತೆಯ ಉಡುಗೊರೆಗಳಾಗಿವೆ.

ಆದುದರಿಂದ, ನೇರವಾಗಿ ಅಲ್ಲ, ಆದರೆ ಪರೋಕ್ಷವಾಗಿ ಈ ಅಂಶಗಳು ನಿಮ್ಮ ಜೀವನವನ್ನು ಸಮೃದ್ಧಗೊಳಿಸುತ್ತವೆ. ನಿಮ್ಮ ಜೀವನವು ಸಮೃದ್ಧಗೊಂಡಾಗ, ನೀವೊಬ್ಬ ಉತ್ತಮ ಸಂರ್ಕಶಾಲಿಯಾಗುತ್ತೀರಿ, ಉತ್ತಮ ವ್ಯಾಪಾರೀ ಸಮಾಲೋಚಕರಾಗುತ್ತೀರಿ, ನಿಮ್ಮ ಅಂತರ್ಜ್ಞಾನವು ಉತ್ತಮವಾಗಿ ಕೆಲಸ ಮಾಡುತ್ತದೆ, ನೀವು ಇನ್ನೂ ಹೆಚ್ಚು ಹೊಸತನವನ್ನು ತರುವವರಾಗುತ್ತೀರಿ ಮತ್ತು ನೀವು ಇತರರಿಗೆ ಒಂದು ಪ್ರೇರಣೆಯಾಗುವಿರಿ. ಹೀಗೆ, ಈ ವಿಧಾನಗಳಲ್ಲಿ ಆಧ್ಯಾತ್ಮಿಕತೆಯು ನಿಮಗೆ ವ್ಯಾಪಾರದಲ್ಲಿ ಸಹಾಯ ಮಾಡುತ್ತದೆ.

ಇನ್ನೊಂದು ವಿಷಯವೆಂದರೆ ನೈತಿಕತೆ. ಆಧ್ಯಾತ್ಮಿಕತೆಯು ವ್ಯಾಪಾರದಲ್ಲಿ ನೈತಿಕತೆಯನ್ನು ಕೂಡಾ ತರುತ್ತದೆ. ಇತರರು ತಮ್ಮ ಕಡೆಗೆ ಅನೈತಿಕವಾಗಿರಬೇಕೆಂದು ಯಾರೂ ಬಯಸುವುದಿಲ್ಲ. ನಿಮ್ಮ ಗ್ರಾಹಕರು ನಿಮ್ಮ ಕಡೆಗೆ ಅನೈತಿಕರಾಗಿರಬೇಕೆಂದು ನೀವು ಬಯಸುವಿರಾ? ಇಲ್ಲ!

ಇತರರು ನಿಮಗೆ ಯಾವುದನ್ನು ಮಾಡುವುದನ್ನು ನೀವು ಬಯಸುವುದಿಲ್ಲವೋ ಅದನ್ನು ನೀವು ಮಾಡದಿರುವುದು ನೈತಿಕತೆಯಾಗಿದೆ, ಹಾಗೂ ವ್ಯಾಪಾರದಲ್ಲಿ ನೈತಿಕತೆಗೆ ಪುಷ್ಟಿಯನ್ನು ಕೊಡುವುದು ಆಧ್ಯಾತ್ಮಿಕತೆಯಾಗಿದೆ.
ವ್ಯಾಪಾರವೂ ಯಾವಾಗಲೂ ಮೇಲೆ ಕೆಳಗೆ ಹೋಗುತ್ತದೆ. ವ್ಯಾಪಾರದಲ್ಲೊಂದು ಇಳಿಮುಖವಿರುವಾಗ, ಸಂಭಾಳಿಸಿಕೊಂಡು ಮುಂದಕ್ಕೆ ಸಾಗಲು  ನಿಮಗೆ ಅಪಾರ ಶಕ್ತಿಯನ್ನು ಕೊಡುವುದು ಆಧ್ಯಾತ್ಮಿಕತೆಯಾಗಿದೆ.

ಪ್ರಶ್ನೆ: ಒತ್ತಡವನ್ನು ಬಿಟ್ಟುಬಿಡುವುದು ಹೇಗೆ? ನಿಜವಾದ ಸಂತೋಷವನ್ನು ನೀವು ಹೇಗೆ ವ್ಯಾಖ್ಯಾನಿಸುತ್ತೀರಿ?

ಶ್ರೀ ಶ್ರೀ ರವಿ ಶಂಕರ್: ಒತ್ತಡವನ್ನು ಬಿಟ್ಟುಬಿಡಲು ಸ್ವಲ್ಪ ಧ್ಯಾನ, ಸ್ವಲ್ಪ ಉಸಿರಾಟದ ಅಭ್ಯಾಸಗಳು ಮತ್ತು ಪ್ರಾಣಾಯಾಮಗಳನ್ನು ಮಾಡು; ಇದು ಮೊದಲನೆಯದು.

ಎರಡನೆಯದು, ಹಿಂದೆ ತಿರುಗಿ ನೋಡು, ಭೂತಕಾಲದಲ್ಲೂ ನೀನು ಕೆಲವು ಸವಾಲುಗಳನ್ನು ಹೊಂದಿರಲಿಲ್ಲವೇ? ನೀನು ಹೊಂದಿದ್ದೆ, ಅಲ್ಲವೇ? ಇವತ್ತು ನೀನು ಆತಂಕಗೊಂಡಿದ್ದರೆ (ಯಾವುದಾದರೂ ಕಾರಣಕ್ಕಾಗಿ), ಹಿಂದೆ ಕೂಡಾ ನೀನು ಅದೇ ಪರಿಸ್ಥಿತಿಯನ್ನು ಎದುರಿಸಿದ್ದೆ, ಅಲ್ಲವೇ? ಇದು ಮೊದಲ ಸಲವಲ್ಲ. ಮತ್ತು ಆ ಪರಿಸ್ಥಿತಿಯನ್ನು ನೀನು ಜಯಿಸಿರುವೆ. ಹೀಗೆ, ಭೂತಕಾಲದಲ್ಲಿ ನಿನಗೆ ಜಯಿಸಲು ಸಾಧ್ಯವಾಗಿದ್ದ ಒಂದು ಒತ್ತಡಕಾರಿ ಪರಿಸ್ಥಿತಿಯ ಸ್ಮರಣೆಯು, ಈಗ ಒತ್ತಡವನ್ನು ಬಿಟ್ಟುಬಿಡಲಿರುವ ವಿಶ್ವಾಸವನ್ನು ನಿನಗೆ ನೀಡುವುದು.

ಮೂರನೆಯದು ವಿಶ್ವಾಸ; ನನಗೆ ಸಹಾಯ ಮಾಡಲು ಒಂದು ಹೆಚ್ಚಿನ ಶಕ್ತಿಯಿದೆ, ನಾನು ಒಬ್ಬಂಟಿಯಲ್ಲ ಎಂಬ ವಿಶ್ವಾಸ. ಮತ್ತು ಈ ಒತ್ತಡಕಾರಿ ಪರಿಸ್ಥಿತಿಯು ಏನೂ ಅಲ್ಲ, ಇದು ಹೊರಟುಹೋಗಲಿದೆ.

ನಾಲ್ಕನೆಯ ಆಯ್ಕೆಯೆಂದರೆ, ಸುತ್ತಲೂ ನೋಡು ಮತ್ತು ನಿನಗಿಂತ ಹೆಚ್ಚು ಒತ್ತಡವಿರುವ ಜನರನ್ನು ನೋಡು! ನಿಮಗೊಂದು ನಷ್ಟವಾಗಿದ್ದರೆ ಮತ್ತು ಒಬ್ಬರಿಗೆ ನಿಮಗಿಂತ ಒಂದು ದೊಡ್ಡ ನಷ್ಟವಾಗಿದ್ದರೆ, ನಿಮಗೆ ಒಂದು ರೀತಿಯ ಸಮಾಧಾನ ಸಿಗುತ್ತದೆ! ನಾನು ಹೇಳುವುದೆಂದರೆ, ನಿಮ್ಮನ್ನೇ ಸಮಾಧಾನಪಡಿಸಲು ಇದು ಕಡೆಯ ಆಯ್ಕೆಯಾಗಿದೆ.

ನಿಮ್ಮ ಪ್ರದೇಶದಲ್ಲಿ ಯಾವುದೇ ಸಮಸ್ಯೆಯಾಗುತ್ತಿದೆಯೆಂದಿಟ್ಟುಕೊಳ್ಳೋಣ. ಆಗ ನೀವು, ಈಜಿಪ್ಟ್‌ನಲ್ಲಿ ಏನಾಗುತ್ತಿದೆಯೆಂಬುದನ್ನು ನೆನಪಿಸಿಕೊಳ್ಳಿ! ಕಡಿಮೆಪಕ್ಷ ನಿಮ್ಮ ಪರಿಸ್ಥಿತಿಯು ಅವರದ್ದಕ್ಕಿಂತ ಉತ್ತಮವಾಗಿದೆಯೆಂದು ನಿಮಗನ್ನಿಸುವುದು.

ಮನೆಯಲ್ಲಿ ಬಹಳಷ್ಟು ಸೋಲನ್ನನುಭವಿಸುವವರು ಅಥವಾ ಯಾರಾದರೂ ತಮಗೆ ತೊಂದರೆಯನ್ನು ನೀಡುವಾಗ ಅಂತಹವರು ಹೆಚ್ಚಾಗಿ ಇದನ್ನು ಮಾಡುತ್ತಾರೆ. ತಮಗಾಗುವುದನ್ನು ಸಮರ್ಥಿಸಿಕೊಳ್ಳಲು ಅವರು ಇತರರ ವೈಫಲ್ಯಗಳನ್ನು ಎಣಿಸಲು ತೊಡಗುತ್ತಾರೆ.

ಹೀಗೆ, ಈ ರೀತಿಗಳಲ್ಲಿ ನಾವು ಒತ್ತಡವನ್ನು ತೊಡೆದುಹಾಕಬಹುದು.

ಯೋಗಸೂತ್ರಗಳಲ್ಲಿ ಪತಂಜಲಿಯು ಹೀಗೆಂದು ಹೇಳಿದ್ದಾರೆ, ’ಸಂತೋಷ ಅನುತ್ತಮಃ ಸುಖ ಲಾಭಃ’. ’ಏನೇ ಆಗಲಿ ನಾನು ನನ್ನ ಮುಗುಳ್ನಗೆಯನ್ನು ಕಳೆದುಕೊಳ್ಳೆನು’  ಎಂಬ ಒಂದು ಸಂಕಲ್ಪವು ನಿಮಗೆ ಸಹಾಯ ಮಾಡುವುದು. ನೀವದನ್ನು ಕಳೆದುಕೊಳ್ಳಲೂಬಹುದು, ಆದರೆ ನೀವದನ್ನು ಕಳೆದುಕೊಳ್ಳದೇ ಇರುವ ಒಂದು ಸಮಯವು ಬರುವುದು.

ಪ್ರಶ್ನೆ: ಪ್ರತಿದಿನವೂ ಅದೇ ಕೆಲಸವನ್ನು ಮಾಡಲು ನನ್ನನ್ನು ನಾನು ಗಮನವಿಟ್ಟುಕೊಳ್ಳುವಂತೆ ಮಾಡುವುದು ಮತ್ತು ಪ್ರೇರೇಪಿತನಾಗಿಟ್ಟುಕೊಳ್ಳುವುದು ಹೇಗೆಂದು ನಾನು ತಿಳಿಯಲು ಬಯಸುತ್ತೇನೆ. 

ಶ್ರೀ ಶ್ರೀ ರವಿ ಶಂಕರ್: ನನಗೆ ಹೇಳು, ನೀನು ಯಾಕೆ ಗಮನವಿಟ್ಟು ಮಾಡಲು ಬಯಸುವೆ?

(ಉತ್ತರ: ಇದು ನನ್ನ ನೌಕರಿ ಮತ್ತು ಜೀವನೋಪಾಯದ ಪ್ರಶ್ನೆ!)

ಅಷ್ಟೇ! ಇದೊಂದು ನಿನ್ನ ಜೀವನೋಪಾಯದ ಪ್ರಶ್ನೆಯೆಂಬ ಈ ಅರಿವೇ ಸಾಕು ನೀನು ಗಮನವಿಡುವಂತೆ ಮಾಡಲು!
ನೋಡು, ಗಮನ ಬೇಕಾಗಿರುವುದು ಅಲ್ಲಿ ಯಾವುದೇ ಪ್ರೇಮ ಮತ್ತು ಅನುರಾಗವಿಲ್ಲದಿರುವಾಗ. ನಿನಗೆ ಯಾವುದರ ಕಡೆಗಾದರೂ ಒಂದು ಅನುರಾಗವಿದ್ದರೆ, ಆಗ ನೀನು ಅದರ ಮೇಲೆ ಗಮನ ನೀಡಬೇಕಾದ ಅಗತ್ಯವಿಲ್ಲ. ಇದು ಮೊದಲನೆಯದು.

ಎರಡನೆಯದಾಗಿ, ಅದನ್ನು ಸ್ವಂತದ್ದಾಗಿಸಿಕೊಳ್ಳುವುದರಿಂದ, ’ಇದು ನನ್ನದೇ ವ್ಯವಹಾರ’ ಎಂದು ಯೋಚಿಸುವುದರಿಂದ, ಗಮನವು ತನ್ನಿಂತಾನೇ ಬರುತ್ತದೆ. ಅದು ಒಬ್ಬ ಮಾವನ ವ್ಯವಹಾರವಾಗಿದ್ದರೆ ಅಥವಾ ನಿನ್ನ ತಂದೆಯ ವ್ಯವಹಾರವಾಗಿದ್ದರೆ, ಆಗ ಗಮನವು ಕಡಿಮೆಯಾಗಿರುತ್ತದೆ! ಆದರೆ ಅದು ನಿನ್ನ ಸ್ವಂತದ್ದಾಗಿದ್ದರೆ, ಆಗ ನೀನು ಗಮನ ಕೊಡಬೇಕಾಗಿಯೇ ಇಲ್ಲ. ಗಮನವು ಅದರಷ್ಟಕ್ಕೆ ಬರುತ್ತದೆ.