ಸೋಮವಾರ, ಮೇ 5, 2014

ಮನವನ್ನು ನಿಯಂತ್ರಿಸಿ

೫ ಮೇ ೨೦೧೪
ಬಹರೈನ್

ಪ್ರಶ್ನೆ: ಗುರುದೇವ, ಸಂಕಟಕಾಲದಲ್ಲಿ ಭಾವನೆಗಳನ್ನು ನಿಯಂತ್ರಿಸುವುದು ಹೇಗೆ?

ಶ್ರೀ ಶ್ರೀ ರವಿ ಶಂಕರ್: ಉಸಿರಾಡುವುದು, ಉಸಿರಾಡುವುದು ಮತ್ತು ಉಸಿರಾಡುವುದು.
ಉಸಿರಾಟವೆಂಬುದು ಪ್ರಕೃತಿಯು ನಿಮ್ಮಲ್ಲಿ ಹಾಕಿರುವ ಅತ್ಯಂತ ದೊಡ್ದ ರಹಸ್ಯವಾಗಿದೆ. ಅದು ನಿಮ್ಮ ಭಾವನೆಗಳೊಂದಿಗೆ ಸಂಬಂಧ ಹೊಂದಿದೆ. ಉಸಿರಾಟದ ಅಭ್ಯಾಸದ ತಂತ್ರದ ಮೂಲಕ ನೀವು ನಿಮ್ಮ ಭಾವನೆಗಳನ್ನು ನಿಯಂತ್ರಿಸಬಹುದು. ನಿಮ್ಮಲ್ಲಿ ಹಲವರು ಇದನ್ನು ಅನುಭವಿಸಿರುವಿರಿ ಎಂದು ನನಗನಿಸುತ್ತದೆ, ಅಲ್ಲವೇ?

(ಹಲವರು ತಮ್ಮ ಕೈಗಳನ್ನು ಮೇಲೆತ್ತುತ್ತಾರೆ)

ಯಾರು ಇದನ್ನು ಅನುಭವಿಸಿಲ್ಲವೋ ಅವರು ನಿಯಮಿತವಾಗಿ ಸ್ವಲ್ಪ ಉಸಿರಾಟದ ಅಭ್ಯಾಸಗಳನ್ನು ಮಾಡಬೇಕು. ಆಗ ನಿಮಗೆ ನಿಮ್ಮ ಮನಸ್ಸಿನ ಮೇಲೆ ಹೆಚ್ಚಿನ ಹಿಡಿತವಿರುವುದು.

ಪ್ರಶ್ನೆ: ಯಾರಾದರೊಬ್ಬರ ಮೇಲೆ ನಿಮಗೆ ಕಡೆಯ ಸಲ ಕೋಪ ಬಂದಿದ್ದು ಯಾವಾಗ?

ಶ್ರೀ ಶ್ರೀ ರವಿ ಶಂಕರ್: ನನಗೆ ನೆನಪು ಕೂಡಾ ಇಲ್ಲ! ನಿನಗೆ ಯಾರಾದರೊಬ್ಬರ ಮೇಲೆ ಕೋಪ ಬಂತೆಂದು ಇಟ್ಟುಕೊಳ್ಳೋಣ, ಅದರ ಬಗ್ಗೆ ವಿಷಾದಿಸಲು ತೊಡಗಬೇಡ.  ವಿಷಾದವು ನೀವು ಮತ್ತೊಮ್ಮೆ ಕೋಪಗೊಳ್ಳುವಂತೆ ಮಾಡುತ್ತದೆ. ನನ್ನ ಬಗ್ಗೆ ಹೇಳುವುದಾದರೆ, ನಾನು ಎಷ್ಟು ಸಲ ಕೋಪಗೊಂಡಿರುವೆನೆಂಬುದನ್ನು ನಾನು ನನ್ನ ಬೆರಳುಗಳಲ್ಲಿ ಲೆಕ್ಕ ಹಾಕಬಲ್ಲೆನು. ಅದು ನನ್ನ ಸ್ವಭಾವದಲ್ಲಿಲ್ಲ.

ಕೋಪಗೊಳ್ಳದಿರಲು ನಾನು ವಿಶೇಷವಾದುದೇನನ್ನೂ ಮಾಡಿಲ್ಲ. ಹೇಗೋ ನಾನು ಈ ರೀತಿ ಮಾಡಲ್ಪಟ್ಟಿದ್ದೇನೆ, ಅದಕ್ಕಾಗಿ ನಾನು ಯಾವುದೇ ಶ್ಲಾಘನೆಯನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ಈ ಎಲ್ಲಾ ವರ್ಷಗಳಲ್ಲಿ ಯಾರಿಗೂ ನಾನು ಒಂದೇ ಒಂದು ಕೆಟ್ಟ ಪದವನ್ನೂ ಹೇಳಿಲ್ಲ. ಅದು ಯಾವತ್ತೂ ಆಗಲಿಲ್ಲ. ನಾನು ಯಾರನ್ನೂ ಯಾವತ್ತೂ ದೂಷಿಸಿಲ್ಲ, ಶಪಿಸಿಲ್ಲ ಅಥವಾ ಯಾವುದೇ ಕೆಟ್ಟ ಪದವನ್ನು ಹೇಳಿಲ್ಲ.

ಪ್ರಶ್ನೆ: ಅದೇ ಮರುಕಳಿಸುವ ಯೋಚನೆಯನ್ನು ನಾವು ಹೇಗೆ ನಿಲ್ಲಿಸಬಹುದು?

ಶ್ರೀ ಶ್ರೀ ರವಿ ಶಂಕರ್: ಯಾವುದೇ ದಾರಿಯಿಲ್ಲ, ಯಾಕೆಂದರೆ ಯೋಚನೆಗಳು ಅದಾಗಲೇ ಬಂದ ಬಳಿಕ ಮಾತ್ರವಷ್ಟೇ ನೀವು ಅವುಗಳನ್ನು ಗುರುತಿಸುವಿರಿ, ಅಲ್ಲವೇ? ಅವುಗಳು ಬರುತ್ತವೆ ಮತ್ತು ನಂತರ ನೀವು ಅವುಗಳನ್ನು ಗುರುತಿಸುತ್ತೀರಿ. ಹೀಗಾಗಿ, ನೀವದನ್ನು ಗುರುತಿಸುವಾಗ, ಕಾರ್ಯಪ್ರವೃತ್ತರಾಗಿ. ನೀವು ಸುಮ್ಮನೆ ಕುಳಿತರೆ, ನೀವು ಬಹಳಷ್ಟು ಯೋಚಿಸುತ್ತಾ ಇರುವಿರಿ. ನೀವು ಕಾರ್ಯಪ್ರವೃತ್ತರಾಗಿದ್ದರೆ, ನೀವು ಆಗು ಹೋಗುಗಳೊಂದಿಗೆ ಒಂದಾಗಿ ಹರಿಯುತ್ತಿರುವುದು ನಿಮಗೆ ಭಾಸವಾಗುವುದು.

ಪ್ರಶ್ನೆ: ಈ ದಿನಗಳಲ್ಲಿ ಆಕ್ರಮಣಶೀಲತೆಯನ್ನು ಶಕ್ತಿಯ ಒಂದು ಚಿಹ್ನೆಯಾಗಿ ಪರಿಗಣಿಸಲಾಗುತ್ತದೆ. ಇದನ್ನು ಬದಲಾಯಿಸುವುದು ಹೇಗೆ?

ಶ್ರೀ ಶ್ರೀ ರವಿ ಶಂಕರ್: ಆಕ್ರಮಣಶೀಲತೆಯೆಂಬುದು ಸಕಾರಾತ್ಮಕ ಬದಲಾವಣೆಯನ್ನು ತರುವ ಶಕ್ತಿಯಾಗಿದ್ದರೆ, ಪ್ರಪಂಚದ ಹಲವು ಭಾಗಗಳಲ್ಲಿ ಆಗಿರುವ ಮತ್ತು ಈಗ ಆಗುತ್ತಿರುವ ಎಲ್ಲಾ ಆಕ್ರಮಣಶೀಲತೆಯ ಮೂಲಕ, ಪ್ರಪಂಚವು ಬಹಳಷ್ಟು ಬದಲಾಗಿರುತ್ತಿತ್ತು. ಆದರೆ ನಾವು ನೋಡುತ್ತಿರುವುದು ಅದನ್ನಲ್ಲ. ಎಲ್ಲಿ ಆಕ್ರಮಣಶೀಲತೆಯಿರುವುದೋ ಅಲ್ಲಿ ಯಾತನೆಯಿರುತ್ತದೆ. ಅಲ್ಲಿ ಹೆಚ್ಚಿನ ವಿವಾದಗಳು, ಹೆಚ್ಚಿನ ಸಮಸ್ಯೆಗಳು ಮತ್ತು ಹೆಚ್ಚಿನ ಬಡತನಗಳಿರುತ್ತವೆ. ಆಕ್ರಮಣಶೀಲತೆಯೊಂದಿಗೆ ನಾವು ಹಿಂದಕ್ಕೆ ಚಲಿಸುತ್ತೇವೆ. ಎಲ್ಲೆಲ್ಲಾ ಆಕ್ರಮಣಶೀಲತೆಯಿರುವುದೋ, ಅಲ್ಲೆಲ್ಲಾ ಜನರು; ಹೆಚ್ಚಲ್ಲದಿದ್ದರೂ ಕಡಿಮೆಪಕ್ಷ ಹದಿನೈದರಿಂದ ಇಪ್ಪತ್ತು ವರ್ಷಗಳಷ್ಟು ಹಿಂದಕ್ಕೆ ಚಲಿಸಿರುವುದನ್ನು ನೀವು ಕಾಣುತ್ತೀರಿ. ಸಹಕಾರವು ಪ್ರಮುಖವಾಗಿದೆ.

ಉತ್ತಮ ಫಲಿತಾಂಶವನ್ನು ನೀಡದೇ ಇದ್ದ ಹಲವಾರು ಆಕ್ರಮಣಶೀಲತೆಗಳನ್ನು ಪ್ರಪಂಚವು ನೋಡಿದೆ. ಯುದ್ದವು ನಿಯಮಗಳನ್ನು ಬದಲಾಯಿಸಬಲ್ಲದಾದುದರಿಂದ ಅದು ಬಹಳ ಒಳ್ಳೆಯದೆಂದು ಕೆಲವೊಮ್ಮೆ ಜನರು ಯೋಚಿಸುತ್ತಾರೆ. ಮೊದಲೇ ಇದ್ದುದನ್ನು ನಾಶಪಡಿಸಿ, ನಿಯಮದಲ್ಲಿ ಒಂದು ಬದಲಾವಣೆಯನ್ನು ಯುದ್ಧವು ತರಬಲ್ಲದೆಂದು ಅವರು ಯೋಚಿಸುತ್ತಾರೆ. ಆದರೆ ನಿಮಗೆ ಗೊತ್ತಾ, ಹಾಗಾಗುವುದಕ್ಕೆ ಹಲವಾರು ಪೀಳಿಗೆಗಳು ಯಾತನೆಯನ್ನನುಭವಿಸುತ್ತವೆ.
ಮಾಹಿತಿ ಮತ್ತು ತಂತ್ರಜ್ಞಾನದ ಈ ಯುಗದಲ್ಲಿ ಜನರು ಬುದ್ಧಿವಂತರೆಂದು ನನಗನಿಸುತ್ತದೆ. ನಾವು ಆ ಯಾತನೆಯ ಮೂಲಕ ಹಾದುಹೋಗಬೇಕಾಗಿಲ್ಲ. ನಾವು ಎಷ್ಟೋ ಹೆಚ್ಚು ಬುದ್ಧಿವಂತರು ಹಾಗೂ ಎಷ್ಟೋ ಹೆಚ್ಚು ಮಾಹಿತಿ ಹೊಂದಿದವರು, ಹಾಗಾಗಿ ನಮಗೆ ಯುದ್ಧದ ಅಗತ್ಯವಿಲ್ಲವೆಂದು ನನಗನಿಸುತ್ತದೆ. ನಮಗೆ ಬೇಕಾದುದೆಂದರೆ ಅರಿವು ಮಾತ್ರ.

ಪ್ರಶ್ನೆ: ಸಮಾಜ ಸೇವೆ, ವ್ಯವಹಾರ ಮತ್ತು ಮನೆಯಲ್ಲಿನ ಜವಾಬ್ದಾರಿಗಳ ನಡುವೆ ಒಬ್ಬನು ಜೀವನವನ್ನು ಸಮತೋಲನದಲ್ಲಿಟ್ಟುಕೊಳ್ಳಬೇಕಾದುದು ಹೇಗೆ?

ಶ್ರೀ ಶ್ರೀ ರವಿ ಶಂಕರ್: ಇಲ್ಲಿ ಬಹರೈನ್‌ನಲ್ಲಿ ನೀವೆಲ್ಲರೂ ಕಾರು ಚಲಾಯಿಸುತ್ತೀರಾ? ಹೌದು! ನೀವು ಕಾರು ಚಲಾಯಿಸುವಾಗ ನೀವೇನು ಮಾಡುವಿರಿ? ನೀವು ಬದಿಗಳಲ್ಲಿರುವ ಕನ್ನಡಿಗಳನ್ನು, ಹಿಂದಿನದನ್ನು ನೋಡಲಿರುವ ಕನ್ನಡಿಯನ್ನು ಮತ್ತು ಮುಂದಿನ ಗಾಜನ್ನು ಕೂಡಾ ನೋಡುತ್ತೀರಿ. ಈ ಎಲ್ಲಾ ಮೂರನ್ನು ನೀವು ಹೇಗೆ ಸಮತೋಲನ ಮಾಡುವಿರಿ?

"ನಾನು ಕೇವಲ ಹಿಂದಿನದನ್ನು ನೋಡುವ ಕನ್ನಡಿಯನ್ನು ಮಾತ್ರ ನೋಡುವೆನು" ಅಥವಾ "ನಾನು ಕೇವಲ ಮುಂದೆ ಮಾತ್ರ ನೋಡುತ್ತೇನೆ" ಅಥವಾ "ನಾನು ಕೇವಲ ಬದಿಗಳನ್ನು ಮಾತ್ರ ನೋಡುತ್ತೇನೆ" ಎಂದು ನೀವು ಹೇಳಲು ಸಾಧ್ಯವಿಲ್ಲ. ನೀವು ಏಕಕಾಲದಲ್ಲಿ ಎಲ್ಲಾ ಮೂರನ್ನು ಮಾಡಬೇಕು ಮತ್ತು ನೀವದನ್ನು ಮಾಡುತ್ತೀರಿ.

ಸರಿಯಾಗಿ ಅದೇ ರೀತಿಯಲ್ಲಿ!

ಹಿಂದಿನದನ್ನು ನೋಡುವ ಕನ್ನಡಿಯು ಭೂತಕಾಲವನ್ನು ತಿಳಿಯುವಂತೆ. ನಿಮಗೆ ಭೂತಕಾಲದ ಬಗ್ಗೆ ಸ್ವಲ್ಪ ನೆನಪಿರಬೇಕು. ನೀವು ಯಾವುದಾದರೂ ತಪ್ಪನ್ನು ಮಾಡಿದ್ದರೆ, ಅದು ಪುನರಾವರ್ತನೆಯಾಗಬಾರದು. ಮುಂದಿರುವ ಗಾಜು, ಮುಂದಿನ ಜೀವನದ ದೃಷ್ಟಿ ಇದ್ದಂತೆ. ಅದಕ್ಕಾಗಿಯೇ ಮುಂದಿರುವ ಗಾಜು (ವಿಂಡ್‌ಶೀಲ್ಡ್) ಬಹಳ ದೊಡ್ಡದು ಮತ್ತು ಹಿಂದಿರುವುದನ್ನು ನೋಡುವ ಕನ್ನಡಿಯು ಬಹಳ ಚಿಕ್ಕದಾಗಿರುವುದು. ನಂತರ ಅಲ್ಲಿ ಬದಿಯ ಕನ್ನಡಿಗಳಿರುತ್ತವೆ, ಇವುಗಳಿರುವುದು ಸದಾಕಾಲವೂ ನಿಮ್ಮ ಸುತ್ತಲೂ ಏನಾಗುತ್ತಿದೆಯೆಂಬುದರ ಬಗ್ಗೆ ನಿಮಗೆ ಅರಿವು ಇರುವುದಕ್ಕಾಗಿ. ಹೀಗೆ ಈ ಎಲ್ಲಾ ಮೂರನ್ನು ನೀವು ಹೇಗೆ ಬಳಸುತ್ತೀರಿ? ಸರಿಯಾಗಿ ಅದೇ ರೀತಿಯಲ್ಲಿ!

ಪ್ರಶ್ನೆ: ನಾನು ಯಾವಾಗಲೂ ಸಂತೋಷವಾಗಿರುವುದು ಹಾಗೂ ಶರೀರ, ಮನಸ್ಸು ಮತ್ತು ಯೋಚನೆಗಳಿಂದ ನಿರ್ಧಾರಿತವಾದ ಗಡಿಗಳಿಂದ ಸಿಕ್ಕಿಹಾಕಿಕೊಳ್ಳದಿರುವುದು ಹೇಗೆ?

ಶ್ರೀ ಶ್ರೀ ರವಿ ಶಂಕರ್: ನೀನು ಈ ಯಾವಾಗಲೂ ಎಂಬುದನ್ನು ಬಿಟ್ಟುಬಿಟ್ಟರೆ, ನೀನು ಸಂತೋಷವಾಗಿರುವೆ. ಸ್ವಲ್ಪ ಹೊತ್ತು ನೀನು ಅಸಂತೋಷವಾಗಿದ್ದರೆ ಚಿಂತಿಸಬೇಡ, ಹಾಗಾದರೇನಂತೆ? ನಾನು ಯಾವತ್ತೂ ದುಃಖಿತನಾಗಿರಬಾರದು ಎಂದು ನೀನು ಯೋಚಿಸಿದರೆ, ಆಗ ಅದುವೇ ದುಃಖಕ್ಕೆ ಒಂದು ಕಾರಣವಾಗುತ್ತದೆ.