ಮಂಗಳವಾರ, ಅಕ್ಟೋಬರ್ 14, 2014

ನಂಬಿಕೆಯ ಮೂಲಕ ಬಲವನ್ನು ಕಂಡುಕೊಳ್ಳುವುದು

ಅಕ್ಟೋಬರ್ ೧೪, ೨೦೧೪
ಕ್ಯೂಬೆಕ್, ಕೆನಡಾ
ಪ್ರಶ್ನೆ: ಒಬ್ಬ ವ್ಯಕ್ತಿಯು ನಂಬಿಕೆ(ವಿಶ್ವಾಸ/ಶ್ರದ್ಧೆ)ಯನ್ನು ಹೇಗೆ ನಿರ್ಮಿಸಿಕೊಳ್ಳಬಹುದು? ಅಥವಾ ಅದು ಒಬ್ಬನು ಹುಟ್ಟುವಾಗಲೇ ಪಡೆದುಕೊಂಡು ಬಂದಿರುವ ಒಂದು ಪ್ರತಿಭೆಯೇ?

ಶ್ರೀ ಶ್ರೀ ರವಿ ಶಂಕರ್: ನೀವು ನಂಬಿಕೆಯನ್ನು ಉಂಟುಮಾಡಲು ಸಾಧ್ಯವಿಲ್ಲ, ನೀವು ಕೇವಲ ನಿಮ್ಮ ಸಂಶಯಗಳ ಬಗ್ಗೆ ಅರಿತುಕೊಳ್ಳಬೇಕು ಮತ್ತು ಅವುಗಳನ್ನು ಬಿಟ್ಟುಬಿಡಬೇಕು. ನೀವು ನಿಮ್ಮ ಸಂಶಯಗಳನ್ನು ಬಿಟ್ಟುಬಿಡುವಾಗ, ಅಲ್ಲಿ ನಂಬಿಕೆಯು ಅದಾಗಲೇ ಇರುತ್ತದೆ. ಒಂದು ಸಂಶಯವು, ಮನಸ್ಸಿನ ಮೇಲೆ ಸುಳಿಯುತ್ತಿರುವ ಒಂದು ಮೋಡದಂತೆ. ಎಚ್ಚೆತ್ತುಕೊಳ್ಳಿ ಮತ್ತು "ಈ ಸಂಶಯವೇನು? ಅದು ನನ್ನನ್ನು ಕೇವಲ ಕೆಳಕ್ಕಿಳಿಸುತ್ತಿದೆ ಮತ್ತು ನನ್ನನ್ನು ಭಾರವಾಗಿಸುತ್ತದೆ. ನನಗೆ ಇದರ ಅಗತ್ಯವಿಲ್ಲ" ಎಂಬುದನ್ನು ಮನದಟ್ಟು ಮಾಡಿಕೊಳ್ಳಿ.
ಹಿಂದೆ ಹಲವಾರು ಸಾರಿ ಆದಂತೆ ಸಂಶಯದಲ್ಲಿ ಸಿಕ್ಕಿಹಾಕಿಕೊಳ್ಳಲು ನೀವು ನಿರಾಕರಿಸಿದರೆ, ಆಗ ನೀವು ಎಚ್ಚೆತ್ತುಕೊಳ್ಳುವಿರಿ ಮತ್ತು ನೀವು ಎಚ್ಚೆತ್ತುಕೊಳ್ಳುವಾಗ, ಅಲ್ಲಿ ಅದಾಗಲೇ ನಂಬಿಕೆಯು ಇರುತ್ತದೆ.
ನಂಬಿಕೆಯನ್ನು ನಿರ್ಮಿಸಲು ಸಾಧ್ಯವಿಲ್ಲ ಆದರೆ ಸಂಶಯಗಳನ್ನು ನಿವಾರಿಸಿಕೊಳ್ಳಬಹುದು.
ಸಂಶಯಗಳನ್ನು ಸ್ಪಷ್ಟೀಕರಿಸಿಕೊಳ್ಳುವುದಕ್ಕೆ ಯಾವುದೇ ಕೊನೆಯಿಲ್ಲ. ನೀವು ಸಂಶಯಗಳನ್ನು ಸ್ಪಷ್ಟೀಕರಿಸುವುದಕ್ಕೆ ಹೋಗಬಾರದು, ಯಾಕೆಂದರೆ ನೀವು ಒಂದು ಸಂಶಯವನ್ನು ಉತ್ತರಿಸಿದಾಗ ಅದು ಬೇರೆ ಹತ್ತು ಸಂಶಯಗಳನ್ನು ಏಳಿಸುತ್ತದೆ. "ಇದು ನನಗೆ ಭಾರವಾಗುತ್ತಿದೆ" ಎಂಬುದಾಗಿ ಸುಮ್ಮನೇ ಅರಿತುಕೊಳ್ಳಿ, ಮತ್ತು ಅದನ್ನು ಬಿಟ್ಟುಬಿಡಿ. ಆಗ ನೀವು ಅದರಿಂದ ಕ್ಷಿಪ್ರವಾಗಿ ಕೊಡವಿಕೊಂಡು ಹೊರಬರುತ್ತೀರಿ ಹಾಗೂ ನೀವು ನಿಮ್ಮೊಳಗಿರುವ ಶಕ್ತಿ, ಸತ್ಯ ಮತ್ತು ಸಹಿಷ್ಣುತೆಗಳಿಂದ ಕೂಡಿದ ಒಂದು ಆಳವಾದ ಜಾಗಕ್ಕೆ ಬರುತ್ತೀರಿ. ಅದು ನಂಬಿಕೆಯೆಂದು ಕರೆಯಲ್ಪಡುತ್ತದೆ.
ನಿಮ್ಮಲ್ಲಿ ಸಂಶಯವುಂಟಾದಾಗಲೆಲ್ಲಾ ನಿಮಗೆ ಬಲಹೀನತೆಯ ಅನುಭವವಾಗುವುದನ್ನು ನೀವು ಗಮನಿಸಿರಬಹುದು. ನಿಮ್ಮಲ್ಲಿ ವಿಶ್ವಾಸವಿರುವಾಗ ನಿಮಗೆ ಬಹಳ ಬಲದ ಅನುಭವವಾಗುತ್ತದೆ; ಬಹುತೇಕ ಒಳಗಿನಿಂದ ಅಜೇಯರಾದ ಹಾಗೆ. ಹೀಗಾಗಿ ಆಯ್ಕೆಯಿರುವುದು ಶಕ್ತಿ, ಅಜೇಯತನಗಳನ್ನು ಅನುಭವಿಸುವುದರ ಹಾಗೂ ಬಲಹೀನತೆಯನ್ನು ಅನುಭವಿಸುವುದರ ನಡುವೆ.
ಸಂಶಯಗಳು ಯಾವತ್ತೂ ಏನಾದರೂ ಒಳ್ಳೆಯದರ ಬಗ್ಗೆಯಿರುತ್ತದೆ. ಏನಾದರೂ ನಕಾರಾತ್ಮಕವಾದುದರ, ಕೆಟ್ಟದ್ದರ ಬಗ್ಗೆ ನಾವು ಯಾವತ್ತೂ ಸಂಶಯಿಸುವುದಿಲ್ಲ. ಏನಾದರೂ ಒಳ್ಳೆಯದ್ದರ ಬಗ್ಗೆ ನಾವು ಸಂಶಯಿಸುತ್ತೇವೆ. ಈ ಒಂದು ಅರಿವು ಸಾಕು ನಿಮ್ಮನ್ನು ಅದರಿಂದ ಹೊರಬರುವಂತೆ ಮಾಡಲು.

ಪ್ರಶ್ನೆ: ಪ್ರೀತಿಯ ಗುರುದೇವ, ದಯವಿಟ್ಟು ನಾನು ತಂತ್ರ ಸಾಧನೆಯನ್ನು ಮಾಡಬಹುದೇ? ಪರವಾಗಿಲ್ಲ ತಾನೇ? ಹತ್ತು ಮಹಾವಿದ್ಯಾ ಸಾಧನೆಗಳಲ್ಲಿ ಒಂದನ್ನು ನಾನು ಮಾಡುತ್ತಿದ್ದೇನೆ.

ಶ್ರೀ ಶ್ರೀ ರವಿ ಶಂಕರ್: ನೋಡು, ನಾನು ನಿನಗೆ ಹೇಳುತ್ತೇನೆ ಕೇಳು, ಹತ್ತು ಮಹಾವಿದ್ಯೆಗಳನ್ನು ತಿಳಿದ ಜನರು ಅನೇಕರಿಲ್ಲ. ಹೀಗಾಗಿ ನೀನು ಅದು ಯಾವುದನ್ನೂ ಮಾಡಬೇಕಾಗಿಲ್ಲ. ನೀನು ಸುಮ್ಮನೇ ವಿಶ್ರಾಮ ಮಾಡು ಮತ್ತು ಸ್ವಲ್ಪ ಮಂತ್ರೋಚ್ಛಾರಣೆಯನ್ನು ಕೇಳು. ಆರ್ಟ್ ಆಫ್ ಲಿವಿಂಗ್ ಹಲವಾರು ಮಂತ್ರೋಚ್ಛಾರಣೆಗಳನ್ನು ಬಿಡುಗಡೆ ಮಾಡಿದೆ, ಮತ್ತು ಅವುಗಳೆಲ್ಲವೂ ಅದರದ್ದೇ ಒಂದು ಭಾಗವಾಗಿದೆ.
ನಿಮಗೆ ನೀಡಲಾಗುವ ಸಹಜ ಮಂತ್ರಗಳು (ಸಹಜ ಸಮಾಧಿ ಧ್ಯಾನ ಶಿಬಿರದಲ್ಲಿ ನೀಡಲಾಗುವ ಮಂತ್ರ) ಬೀಜ ಮಂತ್ರಗಳಾಗಿವೆ, ಅವುಗಳೆಲ್ಲವೂ ಮಹತ್ತರವಾದವು.
ತಾವು ನಿಮಗೆ ಹತ್ತು ಮಹಾವಿದ್ಯೆಗಳ ಜ್ಞಾನವನ್ನು ನೀಡುವುದಾಗಿ ಯಾರಾದರೂ ನಿಮಗೆ ಹೇಳಲೂಬಹುದು, ಆದರೆ ಅದು ತುಂಬಾ ಸಂಕೀರ್ಣವಾದುದು. ನಾನು ಹೇಳುವುದೇನೆಂದರೆ, ನೀವದನ್ನು ಸುಮ್ಮನೆ ದೂರದಿಂದ ಗೌರವಿಸಿ. ನಿಮ್ಮ ಅಭ್ಯಾಸಕ್ಕಾಗಿ, ನಿಮಗೇನನ್ನು ನೀಡಲಾಗಿದೆಯೋ ಅದು ಉತ್ತಮವಾದುದು. ನಿಮಗೆ ಬೇಕಿದ್ದರೆ, ನಮ್ಮ ಕೇಂದ್ರಗಳಲ್ಲಿ ನಡೆಯುವ ವೈದಿಕ ಕಾರ್ಯಕ್ರಮಗಳಿಗೆ ನೀವು ಸೇರಿಕೊಳ್ಳಬಹುದು. ೪೦ ದಿನಗಳಲ್ಲಿ ನೀವು ಈ ವಿಷಯಗಳ ಬಗ್ಗೆ ಹೆಚ್ಚಿನದನ್ನು ತಿಳಿದುಕೊಳ್ಳಬಹುದು. ನೀವು ಭಾರತಕ್ಕೆ ಬಂದರೆ, ನಾವು ಉಪನಯನವನ್ನು ಕೂಡಾ ಮಾಡುತ್ತೇವೆ ಹಾಗೂ ಆಗ ನೀವು ಮಂತ್ರಗಳನ್ನು ಕಲಿತುಕೊಳ್ಳಬಹುದು.
’ನಾನು ನಿನಗೆ ಈ ಜ್ಞಾನವನ್ನು ನೀಡುತ್ತೇನೆ, ಆ ಜ್ಞಾನವನ್ನು ನೀಡುತ್ತೇನೆ’ ಎಂದು ಹೇಳುವ ಹಲವಾರು ಜನರಿರುತ್ತಾರೆ, ಆದರೆ ಅದೊಂದು ಅವ್ಯವಸ್ಥಿತವಾದ ಗೊಂದಲವಾಗುತ್ತದೆಯಷ್ಟೆ.

ಪ್ರಶ್ನೆ: ಯೋಗ ನಿದ್ರೆಯ ಉದ್ದೇಶವೇನು ಮತ್ತು ಅದು ಕೆಲಸ ಮಾಡುವುದು ಹೇಗೆ?

ಶ್ರೀ ಶ್ರೀ ರವಿ ಶಂಕರ್: ಅದು ಕೆಲಸ ಮಾಡುತ್ತದೆ, ಅಲ್ಲವೇ? ನೀವು ನಿಮ್ಮ ಗಮನವನ್ನು ಒಂದೊಂದಾಗಿ ಶರೀರದ ವಿವಿಧ ಭಾಗಗಳ ಕಡೆಗೆ ತೆಗೆದುಕೊಂಡು ಹೋಗುತ್ತೀರಿ. ಶರೀರ ಮತ್ತು ಪ್ರಜ್ಞೆಯು ಹೇಗೆ ಬೇರೆ ಬೇರೆಯಾದುದು ಎಂಬುದನ್ನು ನೀವು ನೋಡುತ್ತೀರಿ. ಆದರೂ ಅವುಗಳು ಪರಸ್ಪರ ಬೆಸೆದುಕೊಂಡಿವೆ.

ಪ್ರಶ್ನೆ: ಎಲ್ಲಾ ಸಂಕಷ್ಟ ಮತ್ತು ಅನ್ಯಾಯಗಳ ಹೊರತಾಗಿಯೂ ಆಂತರಿಕವಾಗಿ ಶಾಂತಿಯಿಂದಿರುವುದರ ಪ್ರಾಮುಖ್ಯತೆಯನ್ನು ನಾನು ಅರಿತಿದ್ದೇನೆ. ಆದರೆ ಎಲ್ಲಾ ರೀತಿಯ ದಬ್ಬಾಳಿಕೆಗಳ ವಿರುದ್ಧ ಹೋರಾಡುವ ಒಬ್ಬ ಕಾರ್ಯಕರ್ತನಾಗಿ, ಹಿಂಸಾಚಾರವನ್ನು ಹೊಂದಿದ ಒಬ್ಬ ದಬ್ಬಾಳಿಕೆಗಾರನೊಂದಿಗೆ ಒಬ್ಬನು ಹೇಗೆ ವ್ಯವಹರಿಸಬೇಕು?

ಶ್ರೀ ಶ್ರೀ ರವಿ ಶಂಕರ್: ನಾವು ತಲ್ಲಣಗೊಂಡರೆ, ನಮ್ಮ ಕಾರ್ಯವು ಫಲಿಸದು. ನಾವು ಶಾಂತರಾಗಿರುವಾಗ ನಮಗೆ ಅಂತರ್ಜ್ಞಾನದ ಚಿಂತನೆಗಳು ಬರುತ್ತವೆ ಮತ್ತು ಈ ಆಲೋಚನೆಗಳೊಂದಿಗೆ ನೀವೊಂದು ಯೋಜನೆಯನ್ನು ಹಾಕಬೇಕು ಹಾಗೂ ಅದರಂತೆ ಕ್ರಮ ತೆಗೆದುಕೊಳ್ಳಬೇಕು. ನೀವೊಬ್ಬ ದಬ್ಬಾಳಿಕೆಗಾರನನ್ನು ಒಬ್ಬಂಟಿಯಾಗಿ ಎದುರಿಸಲು ಸಾಧ್ಯವಿಲ್ಲ. ನೀವು ಅರಿವನ್ನು ಮೂಡಿಸಬೇಕು ಮತ್ತು ಒಂದು ಗುಂಪಿನಲ್ಲಿ ಇದು ಸಾಧ್ಯವಿದೆ. ಅದೇ ಸಮಯಕ್ಕೆ, ನಿಮ್ಮ ಸಂಕಲ್ಪವನ್ನು ಬಲವಾಗಿರಿಸಿ ಹಾಗೂ ನಿಮಗೆ ಮಾರ್ಗದರ್ಶನ ಮಾಡುವ ಮತ್ತು ನಿಮ್ಮನ್ನು ಆಧರಿಸುವ ಒಂದು ಶಕ್ತಿಯಿದೆಯೆಂಬುದನ್ನು ತಿಳಿಯಿರಿ.
ಕೆಲವೊಮ್ಮೆ ಮಹಾತ್ಮಾ ಗಾಂಧಿಯವರು ಒಬ್ಬಂಟಿಯಾಗಿ ನಡೆಯಬೇಕಾಗಿ ಬಂತು ಎಂಬುದನ್ನು ನೆನಪಿನಲ್ಲಿಡಿ. ಇತರ ಸಮಯದಲ್ಲಿ ಅವರು ಅರಿವಿನ ಅಷ್ಟೊಂದು ದೊಡ್ಡ ಅಲೆಯನ್ನು ಸೃಷ್ಟಿಸಿದರು ಹಾಗೂ ಇಡೀ ಭೂಖಂಡದಲ್ಲಿ ಸಂಚಲನೆಯನ್ನು ಉಂಟುಮಾಡಿದರು, ಅಲ್ಲವೇ? ಮತ್ತು ಅವರು ಯಾವಾಗಲೂ ಧ್ಯಾನ ಮಾಡುತ್ತಿದ್ದರು. ಪ್ರತಿದಿನವೂ ಅವರು ಸತ್ಸಂಗ ಮಾಡುತ್ತಿದ್ದರು, ಪ್ರತಿದಿನ ಸಾಯಂಕಾಲವೂ ಅವರು ಭಜನೆಗಳನ್ನು ಹಾಡುತ್ತಿದ್ದರು. ಬೆಳಗಿನ ಹೊತ್ತು ಅವರು ಭಗವದ್ಗೀತೆಯನ್ನು ಓದುತ್ತಿದ್ದರು. ಹೀಗೆ ಮಹಾತ್ಮಾ ಗಾಂಧಿಯವರಲ್ಲಿ ಆಧ್ಯಾತ್ಮಿಕ ಬಲವಿತ್ತು, ಇಲ್ಲದೇ ಹೋಗಿದ್ದರೆ ಅವರೇನು ಸಾಧಿಸಿರುವರೋ ಅದನ್ನು ಮಾಡಲು ಅವರಿಗೆ ಸಾಧ್ಯವಾಗುತ್ತಿರಲಿಲ್ಲ.

ಪ್ರಶ್ನೆ: ಜಗತ್ತು ತನ್ನ ಗಡಿಗಳನ್ನು ಮತ್ತು ಪ್ರಾದೇಶಿಕ ಸರಕಾರಗಳನ್ನು ತೊಡೆದುಹಾಕಿ ಒಂದಾಗಬೇಕಾದ ಅಗತ್ಯವಿದೆಯೇ?

ಶ್ರೀ ಶ್ರೀ ರವಿ ಶಂಕರ್: ಇಲ್ಲ, ಪ್ರಾದೇಶಿಕ ಸರಕಾರಗಳನ್ನು ತೊಡೆದುಹಾಕಬೇಕಾದ ಅಗತ್ಯವಿಲ್ಲ. ಅವರು ಅವುಗಳನ್ನು ಹೊಂದಿರಬಹುದು, ಆದರೆ ಅವುಗಳ ಜೊತೆಯಲ್ಲಿಯೇ ಅವರೊಂದು ಇನ್ನೂ ವಿಶಾಲವಾದ ದೃಷ್ಟಿಯನ್ನು ಹೊಂದಿರಬಹುದು.
ನೋಡಿ, ನೀವು ನಿಮ್ಮ ಕೌಟುಂಬಿಕ ಜವಾಬ್ದಾರಿಗಳನ್ನು ತೊಡೆದುಹಾಕಬೇಕಾದ ಅಗತ್ಯವಿಲ್ಲ. ನೀವು ನಿಮ್ಮ ಕುಟುಂಬವನ್ನು ನೋಡಿಕೊಳ್ಳಿ, ಅದೇ ಸಮಯದಲ್ಲಿ ನೀವು ನಿಮ್ಮ ಗ್ರಾಮ, ನಿಮ್ಮ ನಗರ ಅಥವಾ ನಿಮ್ಮ ದೇಶವನ್ನು ಕೂಡಾ ನೋಡಿಕೊಳ್ಳಬಹುದು. ನೀವು ಎರಡೂ ಪಾತ್ರಗಳನ್ನು ವಹಿಸಬಹುದು ಮತ್ತು ಅವುಗಳ ನಡುವೆ ಯಾವುದೇ ಸಂಘರ್ಷವಿಲ್ಲ.

ಪ್ರಶ್ನೆ: ಜನರು ನನ್ನ ತಾಳ್ಮೆ, ಕರುಣೆ, ಕ್ಷಮೆ ಮತ್ತು ಸಹನಶೀಲತೆಗಳನ್ನು ಒಂದು ಬಲಹೀನತೆಯನ್ನಾಗಿ ಕಂಡರೆ ನಾನೇನು ಮಾಡಬೇಕು?

ಶ್ರೀ ಶ್ರೀ ರವಿ ಶಂಕರ್: ಬೇರೊಬ್ಬರು ಬೇರೆ ರೀತಿಯಲ್ಲಿ ಯೋಚಿಸುವಂತೆ ಮಾಡಲು ಅಥವಾ ಅವರ ಗ್ರಹಿಕೆಯನ್ನು ಬದಲಾಯಿಸಲು ನಿನಗೆ ಸಾಧ್ಯವಿಲ್ಲ. ಅವರು ಆ ರೀತಿ ಯೋಚಿಸಿದರೆ, ಅದು ಅವರಿಗೆ ಬಿಟ್ಟದ್ದು. ನೀನು ಕೇಂದ್ರಿತನಾಗಿಯೂ ಬಲಶಾಲಿಯಾಗಿಯೂ ಇರುವಲ್ಲಿಯವರೆಗೆ, ನೀನು ಕ್ಷೇಮವಾಗಿರುವೆ. ನೀನು ಮುಂದೆ ಸಾಗು.

ಪ್ರಶ್ನೆ: ನನ್ನ ಪ್ರೀತಿಯ ಗುರುದೇವ, ಒಂದು ದಿನದಲ್ಲಿ ಇನ್ನೂ ಹಲವು ಗಂಟೆಗಳಷ್ಟು ಕಾಲವನ್ನು ನಾನು ಆರ್ಟ್ ಆಫ್ ಲಿವಿಂಗ್‌ಗಾಗಿ ಮೀಸಲಾಗಿರಿಸಲು ಬಯಸುತ್ತೇನೆ. ಆದರೆ ನನಗೆ ಮಕ್ಕಳಿದ್ದಾರೆ ಹಾಗೂ ನಾನು ಅವರೊಂದಿಗೆ ಕೂಡಾ ಇರಬೇಕಾಗುತ್ತದೆ. ನಾನೇನು ಮಾಡಬೇಕು?

ಶ್ರೀ ಶ್ರೀ ರವಿ ಶಂಕರ್: ನಿನಗೆ ಗೊತ್ತಾ, ಮಕ್ಕಳೊಂದು ಅಡಚಣೆಯೆಂದು ಯೋಚಿಸಬೇಡ. ಚಿಕ್ಕ ಮಕ್ಕಳಿರುವ ಮತ್ತು ಆದರೂ ಅತ್ಯಧಿಕ ಕೆಲಸವನ್ನು ಮಾಡುತ್ತಿರುವ ಹಲವರಿದ್ದಾರೆ. ಬಹಳ ಚಿಕ್ಕ ಮಕ್ಕಳಿರುವ ಹಲವಾರು ಶಿಕ್ಷಕರು ನಮ್ಮಲ್ಲಿದ್ದಾರೆ ಮತ್ತು ಆದರೂ ಅವರು ಕೆಲಸ ಮಾಡುತ್ತಿದ್ದಾರೆ.
ಜಾನಿಸ್ ಅಂತಹ ಒಂದು ಉದಾಹರಣೆಯಾಗಿದ್ದಾಳೆ. ಇಬ್ಬರು ಪುಟ್ಟ ಮಕ್ಕಳಿದ್ದಾಗಲೂ ಅವಳು ಎಷ್ಟೊಂದು ಮಾಡಿದ್ದಾಳೆ ಮತ್ತು ಪೋಲೇಂಡಿನಲ್ಲಿ ನಮ್ಮ ಇನ್ನೊಬ್ಬಳು ಶಿಕ್ಷಕಿಯಿದ್ದಾಳೆ, ಅವಳಿಗೆ ಮೂವರು ಚಿಕ್ಕ ಮಕ್ಕಳಿದ್ದರು ಮತ್ತು ಮಕ್ಕಳೊಂದಿಗೆ ಅವಳು ನೂರು ಅಥವಾ ಇನ್ನೂರು ಮಂದಿಗೆ ಕಲಿಸುತ್ತಿದ್ದಳು.
ಆದುದರಿಂದ, ಮಕ್ಕಳಿಂದಾಗಿ ನಾವು ಏನನ್ನಾದರೂ ಮಾಡಲು ಸಾಧ್ಯವಾಗುತ್ತಿಲ್ಲವೆಂದು ನಾವು ಯೋಚಿಸಬಾರದು. ನೀವು ಖಂಡಿತವಾಗಿಯೂ ಅವರನ್ನು ನಿರ್ಲಕ್ಷ್ಯ ಮಾಡಬಾರದು, ನೀವವರನ್ನು ನೋಡಿಕೊಳ್ಳಬೇಕು. ಮಕ್ಕಳ ಕಡೆಗೆ ಗಮನ ಕೊಡಿ, ಆದರೆ ಅದೇ ಸಮಯಕ್ಕೆ, ಸಮಾಜಕ್ಕಾಗಿ ಏನನ್ನಾದರೂ ಮಾಡುವ ಒಂದು ಉದ್ದೇಶ ನಿಮಗಿದ್ದರೆ, ನಿಮಗದನ್ನು ಮಾಡಲು ಸಾಧ್ಯವಿದೆ. ಅದಕ್ಕಾಗಿ ಸ್ವಲ್ಪ ಸಮಯವನ್ನಿರಿಸಿ.