ಶುಕ್ರವಾರ, ಅಕ್ಟೋಬರ್ 24, 2014

ಆನಂದ, ಸಮೃದ್ಧಿ, ಜ್ಞಾನ, ಮತ್ತು ವಿವೇಕ

ಅಕ್ಟೋಬರ್ ೨೪, ೨೦೧೪
ಶಿಕಾಗೋ, ಅಮೇರಿಕಾ
ಲ್ಲರಿಗೂ ದೀಪಾವಳಿಯ ಶುಭಾಶಯಗಳು!

ದೀಪಾವಳಿಯು ಬೆಳಕಿನ ಹಬ್ಬವಾಗಿದೆ, ಆನಂದ, ಸಮೃದ್ಧಿ, ಜ್ಞಾನ, ವಿವೇಕ ಮತ್ತು ಎಲ್ಲದರ ಹಬ್ಬವಾಗಿದೆ, ಯಾಕೆಂದರೆ ಬೆಳಕು ಹಲವಾರು ವಿಷಯಗಳನ್ನು ಸೂಚಿಸುತ್ತದೆ ಮತ್ತು ಒಂದು ದೀಪವನ್ನು ಬೆಳಗಿದರೆ ಸಾಲದು, ಜ್ಞಾನವು ಅರಳಿ ಕತ್ತಲೆಯು ಹೋಗಬೇಕಾದರೆ ನಾವು ಹಲವಾರು ದೀಪಗಳನ್ನು ಬೆಳಗುವುದರ ಅಗತ್ಯವಿದೆ. ದೀಪಾವಳಿಯಂದು ಹಲವಾರು ದೀಪಗಳನ್ನು ಬೆಳಗುವುದು ಅದಕ್ಕಾಗಿಯೇ.

ಒಂದು ಭೌತಿಕ ದೀಪವು ಕೇವಲ ಒಂದು ಚಿಹ್ನೆ ಮಾತ್ರ. ನಿಜವಾದ ದೀಪವು ನೀವು. ನೀವು ಬೆಳಗಬೇಕು, ಹೊಳೆಯುತ್ತಿರಬೇಕು, ಮುಗುಳ್ನಗುತ್ತಾ, ಆನಂದವಾಗಿ ಮತ್ತು ಚೈತನ್ಯ ತುಂಬಿಕೊಂಡಿರಬೇಕು, ಯಾಕೆಂದರೆ ಅದು ನಿಜವಾದ ಹಬ್ಬ. ಇದು ಜ್ಞಾನದಿಂದ ಮಾತ್ರ ಆಗಲು ಸಾಧ್ಯ; ಕೇವಲ ಸೌಕರ್ಯಗಳಿಂದ, ಯಂತ್ರೋಪಕರಣ(ಗಾಜೆಟ್‌)ಗಳಿಂದ, ಹಣ ಅಥವಾ ಸ್ನೇಹಿತರಿಂದ ಮಾತ್ರವಲ್ಲ. ನಿಜವಾದ ಸಂತೋಷವು ಜ್ಞಾನದೊಂದಿಗೆ ಬರುತ್ತದೆ.

ಇವತ್ತು ನಾವೊಂದು ಲಕ್ಷ್ಮಿ ಪೂಜೆಯನ್ನು ಮಾಡುವೆವು. ಇದು ಜಗನ್ಮಾತೆಗೆ, ದೇವ ದೇವತೆಗಳಿಗೆ, "ವರ್ಷವಿಡೀ ನೀವು ನನ್ನನ್ನು ಸಂರಕ್ಷಿಸಿರುವಿರಿ ಹಾಗೂ ನನಗೇನು ಬೇಕಿತ್ತೋ ಅದನ್ನು ನೀಡಿರುವಿರಿ, ಅದಕ್ಕಾಗಿ ನಿಮಗೆ ಬಹಳ ಧನ್ಯವಾದಗಳು. ದಯವಿಟ್ಟು ಮುಂದಿನ ವರ್ಷವೂ ಹಾಗೆ ಮಾಡುವುದನ್ನು ಮುಂದುವರಿಸಿರಿ" ಎಂದು ಹೇಳುತ್ತಾ ಧನ್ಯವಾದವನ್ನರ್ಪಿಸುವುದಾಗಿದೆ.
ಹೀಗೆ ನಾವು ಅವರೊಂದಿಗೆ ನಮ್ಮ ಸಂಪರ್ಕವನ್ನು; ಒಪ್ಪಂದವನ್ನಲ್ಲ (ಕಾಂಟ್ರ್ಯಾಕ್ಟ್), ಸಂಪರ್ಕ(ಕಾಂಟ್ಯಾಕ್ಟ್)ವನ್ನು ನವೀಕರಿಸಲು ಅವರನ್ನು ಪ್ರಾರ್ಥಿಸುತ್ತೇವೆ ಹಾಗೂ ಅವರಲ್ಲಿ ಕೇಳಿಕೊಳ್ಳುತ್ತೇವೆ. ದೇವರೊಂದಿಗೆ ಸಂಪರ್ಕವನ್ನು ನವೀಕರಿಸಲು ನಾವು ಪ್ರಾರ್ಥಿಸುತ್ತೇವೆ.

ದೈವತ್ವದೊಂದಿಗೆ ಸಂಪರ್ಕದಲ್ಲಿರುವ ಯಾರಿಗೇ ಆದರೂ ಯಾವುದೇ ರೀತಿಯ ಕೊರತೆ ಇರುವುದಿಲ್ಲ. ಹೀಗಾಗಿ, ಮತ್ತೆ ಮತ್ತೆ ದೈವತ್ವದೊಂದಿಗೆ ಸಂಪರ್ಕದಲ್ಲಿರುವುದು (ಅದು ನಮ್ಮ ಪ್ರತಿಯೊಂದು ಕಣದಲ್ಲೂ ಇದೆ, ಆದರೆ ಅದನ್ನು ಎಚ್ಚರಗೊಳಿಸಬೇಕಾಗಿದೆಯಷ್ಟೆ.) ದೈವತ್ವವು ಎಲ್ಲೆಡೆಯೂ ಇದೆ, ಆದರೆ ಅದು ಸುಪ್ತವಾಗಿದೆ, ಮತ್ತು ಪೂಜೆಯು (ಪ್ರಾರ್ಥನೆ) ಅದನ್ನು ಎಚ್ಚರಗೊಳಿಸಲಿರುವ ಪ್ರಕ್ರಿಯೆಯಾಗಿದೆ. ದೈವತ್ವವನ್ನು ಎಚ್ಚರಗೊಳಿಸುವುದು!

ಇಲ್ಲಿ ಪಂಡಿತರು ಒಂದು ಬಹಳ ಹಳೆಯದಾದ ಪ್ರಾರ್ಥನೆಯನ್ನು ಉಚ್ಛರಿಸುವರು, ಅದು ಮಾನವಕುಲದ ಮೊದಲಿನ ಪ್ರಾರ್ಥನೆಗಳಲ್ಲಿ ಒಂದಾಗಿದೆ, ಅದು ಋಗ್ವೇದದಲ್ಲಿದೆ. ಅವರು ನಮಗಾಗಿ ಶ್ರೀ ಸೂಕ್ತವನ್ನು ಪಠಿಸಲಿದ್ದಾರೆ.

ಮೊದಲಿಗೆ ನಾವು, ನಮ್ಮ ಜೀವನದಿಂದ ಎಲ್ಲಾ ವಿಘ್ನಗಳನ್ನು ನಿವಾರಿಸಲು ಗಣಪತಿ ಪೂಜೆಯನ್ನು ಮಾಡುವೆವು ಮತ್ತು ನಂತರ ನಾವು ಕಲಶ ಪೂಜೆಯನ್ನು ಮಾಡುವೆವು. ನೀರಿನ ಒಂದು ಕಲಶದೊಂದಿಗೆ ನಾವು ಎಲ್ಲಾ ದೇವತೆಗಳನ್ನು ಆವಾಹನೆ ಮಾಡುವೆವು ಮತ್ತು ಎಲ್ಲರೂ ಒಂದು ಒಳ್ಳೆಯ ಮನಸ್ಸು, ಒಂದು ಒಳ್ಳೆಯ ಹೃದಯ, ಒಂದು ಒಳ್ಳೆಯ ಬುದ್ಧಿ ಹಾಗೂ ಜ್ಞಾನದಿಂದ ಭಾಜನರಾಗುವುದಕ್ಕಾಗಿ, ಈ ಭೂಮಿಯ ಮೇಲೆ ಎಲ್ಲರನ್ನೂ ಆಶೀರ್ವದಿಸಬೇಕೆಂದು ಪ್ರಾರ್ಥಿಸುವೆವು.
ಪ್ರತಿಯೊಬ್ಬ ವ್ಯಕ್ತಿಯಲ್ಲೂ ಮೂರು ರೀತಿಯ ಶಕ್ತಿಗಳಿವೆ. ಅವುಗಳು:

೧. ಇಚ್ಛಾ ಶಕ್ತಿ

೨. ಕ್ರಿಯಾ ಶಕ್ತಿ ಮತ್ತು

೩. ಜ್ಞಾನ ಶಕ್ತಿ

ಅದೇ ರೀತಿಯಲ್ಲಿ, ಮಹಾಕಾಳಿ (ಶಕ್ತಿಯನ್ನು ಸೂಚಿಸುವ), ಮಹಾಲಕ್ಷ್ಮಿ (ಪ್ರಾಪಂಚಿಕ ಸಂಪತ್ತನ್ನು ಸೂಚಿಸುವ) ಮತ್ತು ಮಹಾಸರಸ್ವತಿ (ಜ್ಞಾನವನ್ನು ಸೂಚಿಸುವ) ಇದ್ದಾರೆ. ಇವುಗಳು ಸೂಕ್ಷ್ಮ ಶಕ್ತಿಯಿಂದ ಆಳಲ್ಪಡುವ, ಜೀವನದ ವಿವಿಧ ಅಂಶಗಳಾಗಿವೆ, ಮತ್ತು ಪೂಜೆಯು ಸೂಕ್ಷ್ಮ ಜಗತ್ತಿನೊಂದಿಗೆ ಜೋಡಿಸುವ ಒಂದು ಮಾರ್ಗವಾಗಿದೆ.

ನಾವು ನೋಡುವ ಜಗತ್ತು ಹಿಮಖಂಡದ ಕೇವಲ ಒಂದು ತುದಿಯಾಗಿದೆ, ಯಾಕೆಂದರೆ ಇನ್ನೂ ಹೆಚ್ಚು ಎಷ್ಟೋ ಇದೆ. ಪೂಜೆ ಮತ್ತು ಮಂತ್ರೋಚ್ಛಾರಗಳು ಇನ್ನೊಂದು ಭಾಗದೊಂದಿಗೆ ಸಂಪರ್ಕ ಸಾಧಿಸುವ ಪುರಾತನ ಪದ್ಧತಿಯಾಗಿದೆ.

ಈಗ ನಾವದನ್ನು ಮಾಡುವುದು ಹೇಗೆ? ನಾವು ಕೇವಲ ಆಳವಾದ ಧ್ಯಾನದಲ್ಲಿ ಕುಳಿತುಕೊಳ್ಳಬೇಕು ಮತ್ತು ಮಂತ್ರಗಳನ್ನು ಆಲಿಸಬೇಕು; ಮಂತ್ರಗಳಲ್ಲಿ ಮೀಯಬೇಕು. ಭಾರತದಲ್ಲಿ ಅದು ’ಮಂತ್ರ ಸ್ನಾನ’ ಎಂದು ಕರೆಯಲ್ಪಡುತ್ತದೆ. ಇದು ಕೇವಲ ಕುಳಿತುಕೊಂಡು ಮಂತ್ರಗಳನ್ನಾಲಿಸುವುದು ಹಾಗೂ ಶಬ್ದದಲ್ಲಿ ಮೀಯುವುದಾಗಿದೆ. ಈ ಪ್ರಾಚೀನ ಮಂತ್ರೋಚ್ಛಾರಗಳ ತರಂಗಗಳು ನಮ್ಮ ಇಡೀ ಆತ್ಮವನ್ನು ಚೈತನ್ಯಭರಿತಗೊಳಿಸುತ್ತವೆ.

ಪೂಜೆಯಲ್ಲಿ ಆಗುತ್ತಿರುವುದೆಲ್ಲವೂ ನಮಗೆ ಅರ್ಥವಾಗದೇ ಇದ್ದರೂ ಸಹ, ನಾವು ಕಣ್ಣುಗಳನ್ನು ಮುಚ್ಚಿಕೊಂಡು ಅಥವಾ ತೆರೆದುಕೊಂಡು ಆಗುತ್ತಿರುವುದೆಲ್ಲವನ್ನೂ ಆನಂದಿಸುವೆವು. ಅದನ್ನೇ ಶ್ರದ್ಧೆ ಎಂದು ಕರೆಯುವುದು, ಅಂದರೆ, ಅಜ್ಞಾತವಾದುದನ್ನು ಪ್ರೇಮಿಸುವುದು ಎಂದು ಅರ್ಥ. ಏನೋ ಇದೆಯೆಂಬುದು ನಮಗೆ ತಿಳಿದಿದೆ, ಆದರೆ ಅದು ಏನು ಎಂಬುದು ನಮಗೆ ತಿಳಿಯದು. ಒಮ್ಮೆ ನಾವು ಅದನ್ನು ಪ್ರೇಮಿಸಿದರೆ, ಆಗ ಅದು ನಮಗೆ ತಿಳಿಯತೊಡಗುತ್ತದೆ. ಆಗ ನಿಮಗೆ, "ಓ, ಇದೊಂದು ಶಕ್ತಿ" ಎಂದನಿಸುತ್ತದೆ. ಆಗ ನಿಮಗೆ, ಜಗನ್ಮಾತೆಯೆಂದರೆ ಯಾರೋ ಒಬ್ಬರ ಮನಸ್ಸಿನಿಂದ ಬಂದಿರುವ ಕೇವಲ ಒಂದು ಪರಿಕಲ್ಪನೆ ಮಾತ್ರವಲ್ಲ, ಆದರೆ ಅದೊಂದು ವಾಸ್ತವ ಎಂಬುದು ಮನದಟ್ಟಾಗುತ್ತದೆ. ಅದು ವಿಶ್ವದ ಒಂದು ವಾಸ್ತವಿಕತೆಯಾಗಿದೆ. ಸೂಕ್ಷ್ಮ ಶಕ್ತಿಯು ಅಷ್ಟೊಂದು ನಿಜವಾದುದಾಗಿದೆ.

ಹೀಗಾಗಿ, ಇದು ಅಷ್ಟೊಂದು ನಿಜವಾದುದೂ ಸ್ಪಷ್ಟವೂ ಆಗುವಲ್ಲಿಯವರೆಗೆ, ನಾವು ಈ ಅಜ್ಞಾತವಾದುದನ್ನು ಪ್ರೇಮಿಸಲು ತೊಡಗುತ್ತೇವೆ. ಎರಡು ಹೆಜ್ಜೆಗಳಿವೆ:

೧. ಅಜ್ಞಾತವಾದುದನ್ನು ಪ್ರೀತಿಸುವುದು, ಮತ್ತು ಒಮ್ಮೆ ನೀವದನ್ನು ಮಾಡಿದ ಬಳಿಕ

೨. ನೀವು ಅಜ್ಞಾತವಾದುದನ್ನು ತಿಳಿಯಲು ತೊಡಗುತ್ತೀರಿ.

ನೀವದನ್ನು ತಿಳಿದಾಗ, ಅದು ನಿಮ್ಮ ಒಂದು ಭಾಗವಾಗಿದೆಯೆಂಬುದೂ, ನಿಮ್ಮಿಂದ ಬೇರೆಯಾಗಿಲ್ಲ ಅಥವಾ ನಿಮ್ಮಿಂದ ದೂರವಿಲ್ಲವೆಂಬುದೂ ನಿಮಗೆ ಮನದಟ್ಟಾಗುತ್ತದೆ. ಇದುವೇ ವೇದ ಮತ್ತು ವೇದಾಂತವಾಗಿದೆ; ಅಂದರೆ, ದೈವತ್ವವನ್ನು ಅರಿಯುವುದು ಮತ್ತು ಅದರೊಂದಿಗೆ ವಿಲೀನವಾಗುವುದು.

ಇವತ್ತು ಎಲ್ಲಾ ಗುಜರಾತಿಗಳಿಗೂ ಹೊಸ ವರ್ಷ ಕೂಡಾ ಆಗಿದೆ. ಎಲ್ಲಾ ಗುಜರಾತಿಗಳಿಗೂ ಹೊಸ ವರ್ಷದ ಶುಭಾಶಯಗಳು ಮತ್ತು ಇತರರೆಲ್ಲರಿಗೂ ದೀಪಾವಳಿಯ ಶುಭಾಶಯಗಳು! ಜಗನ್ಮಾತೆಯನ್ನು ಪ್ರಾರ್ಥಿಸುವುದರೊಂದಿಗೆ ಹಾಗೂ ಕಾಣುವ ಹಾಗೂ ಕಾಣದ ದೈವಿಕ ಅಭಿವ್ಯಕ್ತಿಗಳೊಂದಿಗೆ ಹೊಸ ವರ್ಷವನ್ನು ಆರಂಭಿಸುವುದು ಎಷ್ಟೊಂದು ಚೆನ್ನಾಗಿದೆ.

ನಾವೆಲ್ಲರೂ ಇಲ್ಲಿ ಪೂಜೆಯಲ್ಲಿ ಜೊತೆಯಲ್ಲಿ ಕುಳಿತಿರುವುದು, ಜೊತೆಯಲ್ಲಿ ಧ್ಯಾನ ಮಾಡುವುದು ಮತ್ತು ಜೊತೆಯಲ್ಲಿ ಹಾಡುವುದು ಯಜ್ಞ ಎಂದು ಕರೆಯಲ್ಪಡುತ್ತದೆ. ಈಗ, ಯಜ್ಞ ಏನು ಮಾಡುತ್ತದೆ? ಅದು ಸ್ವಸ್ತಿ (ಆರೋಗ್ಯ ಮತ್ತು ಕೇಂದ್ರಿತವಾಗಿರುವುದು), ಶ್ರದ್ಧೆ, ಮೇಧಾ (ಜಾಗೃತಗೊಂಡ ಬುದ್ಧಿ) - ಇವುಗಳನ್ನು ತರುತ್ತದೆ. ಶ್ರದ್ಧೆ ಮತ್ತು ಬುದ್ಧಿ ಇವುಗಳು ಹೆಚ್ಚಾಗಿ ಒಂದು ಇನ್ನೊಂದನ್ನು ವಿರೋಧಿಸುವುದಾಗಿ ಪರಿಗಣಿಸಲ್ಪಡುತ್ತವೆ, ಆದರೆ ಒಂದು ಯಜ್ಞದಲ್ಲಿ ಎರಡೂ ತೀಕ್ಷ್ಣಗೊಳ್ಳುತ್ತವೆ. ಶ್ರದ್ಧೆಯು ಆಳವಾಗುತ್ತದೆ ಮತ್ತು ತಾರ್ಕಿಕತೆಯು ಬಹಳ ತೀಕ್ಷ್ಣವಾಗುತ್ತದೆ.

ಹೀಗೆ ಯಜ್ಞದಿಂದ ಹಲವಾರು ಲಾಭಗಳಿವೆ: ಯಶ, ಪ್ರಜ್ಞೆ, ವಿದ್ಯೆ, ಬುದ್ಧಿ, ಬಲ, ವೀರ್ಯ, ಆಯುಷ್ಯ, ಐಶ್ವರ್ಯ ಮತ್ತು ಇನ್ನೂ ಹಲವಾರು.