ಮಂಗಳವಾರ, ಅಕ್ಟೋಬರ್ 14, 2014

ಬಯಕೆಗಳ ವರ್ತುಲ

ಅಕ್ಟೋಬರ್ ೧೪, ೨೦೧೪
ಕ್ಯೂಬೆಕ್, ಕೆನಡಾ
ಪ್ರಶ್ನೆ: ಬಯಕೆಯನ್ನು ಜಯಿಸುವುದು ಹೇಗೆ?

ಶ್ರೀ ಶ್ರೀ ರವಿ ಶಂಕರ್: ಇದು ಇನ್ನೊಂದು ಬಯಕೆ! ನಾವು ತಿಳಿಯಬೇಕಾಗಿರುವುದೇನೆಂದರೆ, ಈಡೇರಿದ ಒಂದು ಬಯಕೆಯು ನಿಮ್ಮನ್ನು, ಬಯಕೆಯು ಏಳುವುದಕ್ಕೆ ಮೊದಲು ನೀವೆಲ್ಲಿದ್ದಿರೋ ಅದೇ ಜಾಗಕ್ಕೆ ಮರಳಿ ಕರೆದೊಯ್ಯುತ್ತದೆ. ನಿಮ್ಮಲ್ಲಿ ಒಂದು ಬಯಕೆಯು ಏಳುವುದಕ್ಕೆ ಮೊದಲಿನ ನಿಮ್ಮ ಮನಃಸ್ಥಿತಿಯನ್ನು ಸುಮ್ಮನೇ ಊಹಿಸಿಕೊಳ್ಳಿ. ಒಂದು ಬಯಕೆಯನ್ನು ಹೊಂದಿ ಅದನ್ನು ಈಡೇರಿಸಿದ ಎಲ್ಲಾ ಸರ್ಕಸ್ಸಿನ ಬಳಿಕ, ನೀವು ಅದೇ ಜಾಗಕ್ಕೆ ಮರಳಿ ಬರುತ್ತೀರಿ.

ಪ್ರಶ್ನೆ: ನನ್ನ ದೈನಂದಿನ ಬದುಕಿನಲ್ಲಿ ಮತ್ತು ಸಂಕಟದ ಸಮಯದಲ್ಲಿ ದೇವರೊಂದಿಗೆ ನನ್ನ ಸಂಪರ್ಕವನ್ನು ಇಟ್ಟುಕೊಳ್ಳುವುದು ಹೇಗೆ ಎಂದು ದಯವಿಟ್ಟು ನನಗೆ ತಿಳಿಸಿ.

ಶ್ರೀ ಶ್ರೀ ರವಿ ಶಂಕರ್: ಸಂಪರ್ಕವನ್ನಿಟ್ಟುಕೊಳ್ಳಲಿರುವ ಈ ಉದ್ದೇಶವೇ, ನೀನು ಮತ್ತೆ ಮತ್ತೆ ಸಂಪರ್ಕವನ್ನು ಅನುಭವಿಸುತ್ತಿರುವೆ ಎಂಬುದನ್ನು ಸೂಚಿಸುತ್ತದೆ.
ಕೇವಲ ಇದನ್ನೊಂದು ಅಭ್ಯಾಸವನ್ನಾಗಿ ಮಾಡು. ನೀನು ಎದ್ದ ಕೂಡಲೇ ಸಂಪರ್ಕವನ್ನು ಅನುಭವಿಸು. ಮಲಗುವ ಮುನ್ನ, ನೀನು ಪಡೆದಿರುವುದಕ್ಕೆಲ್ಲಾ ದೇವರಿಗೆ ಧನ್ಯವಾದವನ್ನರ್ಪಿಸು. ಇದನ್ನು ಕೂಡಾ ನೀನು ಮಾತಿನ ಮೂಲಕ ಪುನರಾವರ್ತಿಸುವ ಅಗತ್ಯವಿಲ್ಲ, ಅದಿದೆಯೆಂದು ನೀನು ಸುಮ್ಮನೇ ಭಾವಿಸಿಕೊಳ್ಳಬೇಕು ಮತ್ತು ಸಹಜವಾಗಿರಬೇಕು.
ದೈವಿಕತೆಯೆಂಬುದು ಅರಿವಿನ ಅತ್ಯಂತ ಸರಳವಾದ ರೂಪವಾಗಿದೆ. ದೈವಿಕತೆಯು ನಮ್ಮ ಅತ್ಯಂತ ಸಹಜವಾದ ಸ್ಥಿತಿಯಾಗಿದೆ. ನೀವು ಸಂಪೂರ್ಣವಾಗಿ ನಿರಾಳವಾಗಿರುವ ಹಾಗೂ ಆತ್ಮೀಯವಾಗಿರುವ ಯಾವುದೇ ಕ್ಷಣವಿರಲಿ, ಆಗ ನೀವು ದೈವಿಕತೆಯಲ್ಲಿರುವಿರಿ ಎಂಬುದನ್ನು ತಿಳಿಯಿರಿ. ಅಷ್ಟೇ.
ಅತ್ಯಂತ ದೊಡ್ಡ ಅವಶ್ಯಕತೆಗಳಲ್ಲಿ ಒಂದು ಸಂಪೂರ್ಣ ತೃಪ್ತಿಯಾಗಿದೆ. ನೀವು ಸಂಪೂರ್ಣ ತೃಪ್ತಿಯನ್ನು ಅನುಭವಿಸುವಾಗ, ಆ ಕ್ಷಣದಲ್ಲಿ ನೀವು ದೇವರೊಂದಿಗಿರುತ್ತೀರಿ ಮತ್ತು ಅದು ನೀವು ಆ ಕ್ಷಣದಲ್ಲಿರುವ, ’ಈಗ’ದಲ್ಲಿರುವ ಸಮಯವಾಗಿದೆ, ಯಾಕೆಂದರೆ ’ಈಗ’ ಎಂದರೆ ’ಸಂಪೂರ್ಣ ತೃಪ್ತಿ’ ಎಂದರ್ಥ.
’ಈಗ’ ಎಂಬುದು ’ಸಂಪೂರ್ಣ ತೃಪ್ತಿ’ಗೆ ಮತ್ತು ’ನಾಳೆ’ ಎಂಬುದು ’ಆಸೆಗಳು, ಯೋಜನೆಗಳು ಮತ್ತು ಬಯಕೆಗಳು’ ಇವುಗಳಿಗೆ. ಹೀಗಾಗಿ, ಇಲ್ಲಿರಿ ಮತ್ತು ಈಗ ಇರಿ; ಸಂಪೂರ್ಣ ತೃಪ್ತಿ ಮತ್ತು ಸಂಪೂರ್ಣ ಶಾಂತಚಿತ್ತತೆಯಲ್ಲಿ. ಸಂಪೂರ್ಣ ತೃಪ್ತಿ ಮತ್ತು ಸಂಪೂರ್ಣ ಶಾಂತಚಿತ್ತತೆ ನಿಮ್ಮಲ್ಲಿ ಎಷ್ಟು ಸಲ ಬರುತ್ತದೆಯೆಂಬುದು ನಿಮಗೆ ಬಿಟ್ಟದ್ದು. ಕೆಲವೊಮ್ಮೆ ಅದು ನಿಮಗೆ ಆಗಿಹೋಗುತ್ತದೆ. ಹಿಂದಿನ ಅನೇಕ ಸಂತರು ಅದನ್ನು ತಾವು ಪಡಕೊಂಡ ಒಂದು ಉಡುಗೊರೆಯೆಂದು ಹೇಳಿದುದು ಅದಕ್ಕಾಗಿಯೇ.

ಪ್ರಶ್ನೆ: ಕರ್ವಾ ಚೌತ್‌ ಉತ್ಸವದ ಮಹತ್ವವೇನು? ಅದರ ಹಿಂದಿನ ಕಥೆಯೇನು? ವಿವಾಹಿತ ಸ್ತ್ರೀಯರು ಮಾತ್ರ ಅದನ್ನು ಮಾಡಬಹುದೇ? ಧ್ಯಾನ ಮಾಡಲು ಈ ದಿನವು ನಿಜಕ್ಕೂ ಒಂದು ಒಳ್ಳೆಯ ಸಮಯವೇ?

ಶ್ರೀ ಶ್ರೀ ರವಿ ಶಂಕರ್: ಭಾರತದಲ್ಲಿ ಹಲವಾರು ಉತ್ಸವಗಳಿವೆ, ಬಹುತೇಕ ಒಂದು ವರ್ಷದಲ್ಲಿ ಎಷ್ಟು ರವಿವಾರಗಳಿವೆಯೋ ಅಷ್ಟು.
ಕರ್ವಾ ಚೌತ್ ಎಂಬುದು, ಸ್ತ್ರೀಯರು ತಮ್ಮ ಪತಿಯ ದೀರ್ಘಾಯುಸ್ಸಿಗಾಗಿ ಪ್ರಾರ್ಥಿಸುವ ಒಂದು ಉತ್ಸವವಾಗಿದೆ ಮತ್ತು ಅದಕ್ಕೆ ಸಂಬಂಧಿಸಿದಂತೆ ಕಥೆಗಳಿವೆ. ಈ ಕಥೆಗಳ ಬಗ್ಗೆ ನನಗೆ ಹೆಚ್ಚು ತಿಳಿಯದು.
ಪ್ರಾಚೀನ ಕಾಲದಲ್ಲಿ ಸ್ತ್ರೀಯರು ಬಹಳ ಶಕ್ತಿಶಾಲಿಗಳಾಗಿದ್ದರೆಂದು ತೋರುತ್ತದೆ. ಅವರು ಸೂರ್ಯನಲ್ಲಿ ಅಸ್ತಮಿಸಬೇಡವೆಂದು ಹೇಳಿದರೆ, ಅದು ಅಸ್ತಮಿಸುತ್ತಿರಲಿಲ್ಲ. ಸ್ತ್ರೀಯರು ಅಷ್ಟರ ಮಟ್ಟಿಗೆ ಶಕ್ತಿಶಾಲಿಗಳಾಗಿದ್ದರೆಂದು ಹೇಳುತ್ತಾರೆ. ಅಂತಹ ಹಲವಾರು ಕಥೆಗಳಿವೆ, ಮತ್ತು ಅವುಗಳೆಲ್ಲವೂ ಒಂದು ಮಹತ್ತರವಾದ ಉದ್ದೇಶವನ್ನು ಒಬ್ಬರಿಗೆ ನೆನಪಿಸಲಿರುವ ಸ್ಫೂರ್ತಿದಾಯಕ ಕಥೆಗಳಾಗಿವೆ. ಹೀಗೆ, ಭಾರತದಲ್ಲಿ ಇದು ಅಂತಹ ಒಂದು ಉತ್ಸವವಾಗಿದೆ. ಉಪವಾಸ ಮತ್ತು ಪ್ರಾರ್ಥನೆಗಳು ಹೇಗೋ ಸಂಬಂಧ ಹೊಂದಿವೆ. ಜಗತ್ತಿನ ಬಹುತೇಕ ಪ್ರತಿಯೊಂದು ಧರ್ಮದಲ್ಲೂ ಹಾಗೂ ಪ್ರತಿಯೊಂದು ಸಂಪ್ರದಾಯದಲ್ಲೂ ಅವರು ಉಪವಾಸ ಮತ್ತು ಪ್ರಾರ್ಥನೆಗಳನ್ನು ಜೊತೆಗೂಡಿಸಿದ್ದಾರೆ.
ನೀವು ಉಪವಾಸ ಮಾಡುವಾಗ, ನಿಮ್ಮ ಉಪವಾಸದಿಂದ ನೀವು ಅಲ್ಲಿರುವ ಯಾವುದೋ ದೇವರನ್ನು ಸಂತೋಷಪಡಿಸುತ್ತಿರುವುದಿಲ್ಲ. ಅದು ಕೇವಲ ನಿಮ್ಮ ಶರೀರದಿಂದ ವಿಷಯುಕ್ತ ಪದಾರ್ಥಗಳನ್ನು ಹೊರಹಾಕುವಲ್ಲಿ ಸಹಾಯ ಮಾಡುತ್ತದೆ. ಶರೀರದಿಂದ ವಿಷಯುಕ್ತ ಪದಾರ್ಥಗಳು ಹೊರಹಾಕಲ್ಪಟ್ಟಾಗ, ಯೋಚನೆಗಳು ಸಕಾರಾತ್ಮಕವಾಗುತ್ತವೆ. ಶರೀರದಲ್ಲಿ ಹಲವಾರು ವಿಷಯುಕ್ತ ಪದಾರ್ಥಗಳಿರುವಾಗ ಹಾಗೂ ಪ್ಯಾಂಕ್ರಿಯಾಸ್, ಪಿತ್ತಕೋಶ ಹಾಗೂ ಕರುಳುಗಳೆಲ್ಲಾ ತುಂಬಿಹೋಗಿ ಇಕ್ಕಟ್ಟಾಗಿರುವಾಗ ನಿಮ್ಮ ಯೋಚನೆಗಳೆಲ್ಲಾ ನಕಾರಾತ್ಮಕವಾಗಿಯೂ ಅಸ್ಪಷ್ಟವಾಗಿಯೂ ಇರುತ್ತವೆ. ಹೀಗಾಗಿ, ನಿಮ್ಮ ಶರೀರದ ಮೇಲೆ ಆ ಶುದ್ಧೀಕರಣದ ಪರಿಣಾಮವಾಗುವುದಕ್ಕಾಗಿ ಉಪವಾಸ ಮಾಡಲಾಗುತ್ತದೆ, ದೇವರನ್ನು ಪ್ರಸನ್ನಗೊಳಿಸುವುದಕ್ಕಾಗಿಯಲ್ಲ.
ಉಪವಾಸವೂ ಕೂಡಾ ಕೆಲವು ನಿಯಮಗಳನ್ನು ಹೊಂದಿದೆ, ಆದರೆ ಜನರು ಉಪವಾಸದ ನಿಯಮಗಳನ್ನು ಕೂಡಾ ಸರಿಯಾಗಿ ಅನುಸರಿಸುವುದಿಲ್ಲ. ಉಪವಾಸವೆಂದರೆ ತಾವು ಕೆಲವು ನಿರ್ದಿಷ್ಟ ವಸ್ತುಗಳನ್ನು ತಿನ್ನಬಹುದು ಮತ್ತು ಕೆಲವು ನಿರ್ದಿಷ್ಟ ವಸ್ತುಗಳನ್ನು ತಿನ್ನಬಾರದೆಂದು ಜನರು ಯೋಚಿಸುತ್ತಾರೆ. ’ಬಹಳಷ್ಟು ಬೀಜಗಳು ಮತ್ತು ಹಣ್ಣುಗಳನ್ನು ತಿನ್ನಬಹುದು, ಆದರೆ ಬೇಯಿಸಿದ ಆಹಾರ ಅಥವಾ ಅನ್ನ ಅಥವಾ ಬ್ರೆಡ್ ತಿನ್ನಬಾರದು’ - ಇದು ಉಪವಾಸ ಅಲ್ಲ.
ಕೆಲವು ದಿನ ಜನರು ಬೇಯಿಸಿದ ಆಲೂಗಡ್ಡೆ ಮತ್ತು ಸಿಹಿತಿಂಡಿಗಳನ್ನು ತಿನ್ನುತ್ತಾರೆ, ಹಾಗೂ ತಾವು ಉಪವಾಸ ಮಾಡುತ್ತಿರುವುದಾಗಿ ಹೇಳುತ್ತಾರೆ. ಅವರು ತಮ್ಮನ್ನೇ ಮೂರ್ಖರನ್ನಾಗಿಸಿಕೊಳ್ಳುತ್ತಾರೆ. ಮತ್ತೆ ಕೆಲವೊಮ್ಮೆ, ದಿನವಿಡೀ ಉಪವಾಸವಿರಲು ಬಯಸುವ ಕೆಲವರು ಸೂರ್ಯೋದಯದ ಮೊದಲೇ ಎದ್ದು ತಮ್ಮೊಳಗೆ ಆಹಾರವನ್ನು ತುಂಬುತ್ತಾರೆ. ನಂತರ ಅವರು ಉಪವಾಸ ಮಾಡುತ್ತಾರೆ ಮತ್ತು ಸೂರ್ಯನು ಅಸ್ತಮಿಸಿದ ಕೂಡಲೇ, ಮತ್ತೆ ಅವರು ತಮ್ಮಲ್ಲಿ ಆಹಾರ ತುಂಬುತ್ತಾರೆ. ಇದು ಉಪವಾಸ ಮಾಡುವ ಒಂದು ಬಹಳ ಕೆಟ್ಟ ವಿಧಾನವಾಗಿದೆ.
ಉಪವಾಸವು ವೈಜ್ಞಾನಿಕವಾಗಿ ಆಗಬೇಕು. ಹಣ್ಣಿನ ರಸ, ನೀರು ಮತ್ತು ಕೆಲವು ಹಣ್ಣುಗಳೊಂದಿಗೆ ಉಪವಾಸ ಮಾಡಿ. ಇದರಿಂದ ಶರೀರದಲ್ಲಿ ಕಿಣ್ವಗಳು ಉತ್ಪತ್ತಿಯಾಗುತ್ತವೆ. ಅಜೀರ್ಣವಾದ ಆಹಾರವು ಜೀರ್ಣವಾಗುತ್ತದೆ. ಉಪವಾಸದ ದಿನಗಳಂದು ರಾತ್ರಿ ಬಹಳ ತಡವಾಗಿ ತಿನ್ನುವುದು ಬಹಳ ಕೆಟ್ಟದ್ದು, ಯಾಕೆಂದರೆ ಆ ಆಹಾರವನ್ನು ಜೀರ್ಣಿಸಲು ನಿಮ್ಮ ಜಠರಾಗ್ನಿಯು ಅಲ್ಲಿರುವುದಿಲ್ಲ. ಹೀಗಾಗಿ ನೀವದನ್ನು ಮಾಡಬಾರದು.
ಜನರು ಒಂದು ಅವೈಜ್ಞಾನಿಕ ರೀತಿಯಲ್ಲಿ ಉಪವಾಸ ಮಾಡುತ್ತಾರೆ. ಉಪವಾಸವು ವಿವೇಕಪೂರ್ಣವಾಗಿರಬೇಕು. ಬಹುತೇಕ ಪ್ರತಿಯೊಂದು ಸಂಪ್ರದಾಯದಲ್ಲೂ ಜನರು ಈ ರೀತಿಯಾಗಿ ಉಪವಾಸ ಮಾಡುತ್ತಾರೆ. ಯಹೂದ್ಯರು, ಕ್ರಿಶ್ಚಿಯನ್ನರು, ಮುಸ್ಲಿಮರು, ಹಿಂದೂಗಳು - ಇವರೆಲ್ಲರೂ ಉಪವಾಸ ಮಾಡುವ ವೈಜ್ಞಾನಿಕ ವಿಧಾನವನ್ನು ತಿಳಿದಿರಬೇಕು.
ಆಯುರ್ವೇದದ ರೀತಿಯಲ್ಲಿ ಉಪವಾಸ ಮಾಡುವುದನ್ನು ಬಹಳ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಸ್ವಲ್ಪ ಹಣ್ಣುಗಳು, ಹಣ್ಣುಗಳ ರಸ, ನೀರು ಮತ್ತು ನಿಂಬೆ. ಮತ್ತು ನಿಮ್ಮಲ್ಲಿ ಆ ಸಹನಶೀಲತೆ ಇದ್ದರೆ, ಆಗ ಒಂದೆರಡು ದಿನಗಳ ಕಾಲ ಕೇವಲ ನೀರನ್ನು ಕುಡಿದು ಉಪವಾಸ ಮಾಡಿ. ---- ನಾವು ಜನರಿಗೆ ಕೊಡಬೇಕಾಗಿರುವ ಶಿಕ್ಷಣ ಇದುವೇ. ರಾಮದಾನ್ ತಿಂಗಳಿನಲ್ಲಿ ಕೂಡಾ, ಅವರು ದಿನವಿಡೀ ಉಪವಾಸ ಮಾಡುತ್ತಾರೆ, ಪಿತ್ತವು ಏರುತ್ತದೆ ಹಾಗೂ ಸಂಜೆ ಅವರು ಬಹಳಷ್ಟು ತಿನ್ನುತ್ತಾರೆ. ಇದು ತಪ್ಪು. ಸಂಜೆ ಅವರು ಆಹಾರ ಸೇವಿಸುವಾಗ, ಅವರು ಸಲಾಡುಗಳನ್ನು, ಹಣ್ಣುಗಳನ್ನು ಹಾಗೂ ಲಘುವಾದುದೇನನ್ನಾದರೂ; ದೇಹಕ್ಕೆ ವಿಶ್ರಾಂತಿ ನೀಡುವ ಯಾವುದನ್ನಾದರೂ ಸೇವಿಸಬೇಕು.
ಹಿಂದೂಗಳು ನವರಾತ್ರಿಯ ಸಮಯದಲ್ಲಿ ಉಪವಾಸ ಮಾಡುತ್ತಾರೆ, ಮತ್ತು ಅವರು ಜಿಲೇಬಿಗಳನ್ನು ತಿನ್ನುತ್ತಾರೆ! ಅವರು ಎಲ್ಲಾ ಸಿಹಿತಿಂಡಿಗಳನ್ನು ಮತ್ತು ಪಿಷ್ಟವಾಗಿರುವ ಬೇಯಿಸಿದ ಆಲೂಗಡ್ಡೆಗಳನ್ನು ತಿನ್ನುತ್ತಾರೆ! ಇದು ಸರಿಯಾದ ವಿಧಾನವಲ್ಲ, ಕೇವಲ ಹಣ್ಣುಗಳು ಮತ್ತು ಹಣ್ಣಿನ ರಸಗಳಿರಬೇಕು.

ಪ್ರಶ್ನೆ: ಕೆಲವೊಮ್ಮೆ, ಆರ್ಟ್ ಆಫ್ ಲಿವಿಂಗ್‌ನಲ್ಲಿ ಇರುವುದಕ್ಕೂ ಇಸ್ಲಾಂನ್ನು ಅನುಸರಿಸುತ್ತಿರುವುದಕ್ಕೂ ಮಧ್ಯೆ ಒಂದು ಸಂಘರ್ಷವಿದೆಯೆಂದು ನನಗನಿಸುತ್ತದೆ. ವಿಶೇಷವಾಗಿ ನಾನು ’ಶಿವ’ ಅಥವಾ ’ರಾಮ’ ಎಂದು ಉಚ್ಛರಿಸುವಾಗ. ದುರದೃಷ್ಟವಶಾತ್, ಇಸ್ಲಾಂ ಒಂದು ಕುಖ್ಯಾತಿಯನ್ನು ಪಡೆದಿದೆ. 

ಶ್ರೀ ಶ್ರೀ ರವಿ ಶಂಕರ್: ನೋಡು, ನೀನು ಇಸ್ಲಾಮಿನ ಚರಿತ್ರೆಯನ್ನು ತಿಳಿದಿರಬೇಕು. ಇಸ್ಲಾಂ ಹೇಗೆ ಹುಟ್ಟಿತು, ಅದನ್ನು ಯಾವಾಗ ಬರೆಯಲಾಯಿತು ಮತ್ತು ಕಾಲಾಂತರದಲ್ಲಿ ಅದು ಹೇಗೆ ಬದಲಾಯಿತು, ಹಿಂದೆ ಏನನ್ನು ಹೇಳಲಾಯಿತು ಮತ್ತು ಯಾಕೆ; ಯಾವುದು ಪ್ರಾಯೋಗಿಕ ಮತ್ತು ಯಾವುದು ಪ್ರಾಯೋಗಿಕವಲ್ಲ. ಆ ದಿನಗಳಲ್ಲಿ ಸ್ತ್ರೀಯರ ಸಂಖ್ಯೆಯು ಹೆಚ್ಚಾಗಿತ್ತು, ಹೀಗಾಗಿ ಒಬ್ಬ ಪುರುಷನು ನಾಲ್ವರು ಸ್ತ್ರೀಯರನ್ನು ವಿವಾಹವಾಗಲು ಅನುಮತಿಸಲಾಗಿತ್ತು, ಯಾಕೆಂದರೆ ಪುರುಷರ ಸಂಖ್ಯೆಯು ಬಹಳ ಕಡಿಮೆಯಾಗಿತ್ತು. ಇವತ್ತು ನೀವದನ್ನು ಅನುಸರಿಸುವ ಅಗತ್ಯವಿಲ್ಲ.
ಅದೇ ರೀತಿಯಾಗಿ ಆ ದಿನಗಳಲ್ಲಿ, ಒಂದು ನಿರ್ದಿಷ್ಟ ಸಮಯದಲ್ಲಿ, ಎಲ್ಲಾ ತಂತಿವಾದ್ಯಗಳನ್ನು ದೂರಮಾಡಬೇಕು; ಸಂಗೀತವಿರಕೂಡದೆಂದು ಮೊಹಮ್ಮದರು ಹೇಳಿದರು. ಸಂಗೀತದ ಮೇಲೆ ನಿಷೇಧ ಹೇರಲಾಗಿತ್ತು. ಆದರೆ ಇವತ್ತು, ಸಂಗೀತವನ್ನು ನಿಷೇಧಿಸಲಾಗಿರುವ ಯಾವುದಾದರೂ ಒಂದು ದೇಶದ; ಇಸ್ಲಾಂ ದೇಶಗಳೇ ಆಗಿರಬಹುದು, ಅದರ ಹೆಸರನ್ನು ನನಗೆ ಹೇಳು ನೋಡೋಣ?
"ನೀವು ಹಾಡಿದರೆ ಅಥವಾ ನೀವು ನರ್ತಿಸಿದರೆ ಅದು ಹರಾಮ್, ಅದು ಇಸ್ಲಾಮಿನ ವಿರುದ್ಧ. ನೀವು ಹಾಗೆ ಯಾವತ್ತೂ ಮಾಡಬಾರದು" ಎಂದು ಪುರಿಟಾರಿಯದ ಮುಸ್ಲಿಮರು ಹೇಳುತ್ತಾರೆ.
ಎರಡನೆಯದ್ದು, ಯಾವುದೇ ಮಾನವ ಮುಖಗಳ ಫೋಟೋ ತೆಗೆಯುವುದನ್ನು ಇಸ್ಲಾಂ ನಿಷೇಧಿಸುತ್ತದೆ. ಅದು ಇಸ್ಲಾಮಿನಲ್ಲಿ ಹರಾಮ್ ಆಗಿದೆ. ಆದರೆ, ನಿನ್ನ ಫೋಟೋ ತೆಗೆಯದೆ ನಿನ್ನ ಪಾಸ್‌ಪೋರ್ಟನ್ನಾದರೂ ಹೇಗೆ ಮಾಡಲು ಸಾಧ್ಯ? ಅದು ಅಸಾಧ್ಯ.
ನನ್ನನ್ನು ಬಹರೈನ್‌ಗೆ ಆಮಂತ್ರಿಸಲಾಗಿತ್ತು. ಅಲ್ಲಿ ಅರಮನೆಯಲ್ಲಿ ಒಂದು ಸಮ್ಮೇಳನವಿದ್ದುದರಿಂದ ಬಹರೈನ್‌ನ ರಾಜರು ನನ್ನನ್ನು ಆಮಂತ್ರಿಸಿದ್ದರು. ಅಲ್ಲಿ ಇಸ್ಲಾಮಿನ ಉನ್ನತ ವಿದ್ವಾಂಸರಿದ್ದರು ಮತ್ತು ಅವರು ನನ್ನೊಂದಿಗೆ ಮಾತನಾಡುತ್ತಿದ್ದಾಗ, "ಹಜ್ ತೀರ್ಥಯಾತ್ರೆಗೆ ಹೋದಾಗ ಕಾಬಾದ (ಕಪ್ಪು ಕಲ್ಲು) ಛಾಯಾಚಿತ್ರ ತೆಗೆಯುವುದನ್ನು ನಿಷೇಧಿಸಲಾಗಿದೆ" ಎಂದು ಹೇಳಿದರು. ಆದರೆ ಇವತ್ತು, ಜನರು ತಮ್ಮ ಸೆಲ್ ಫೋನುಗಳೊಂದಿಗೆ ಬರುತ್ತಾರೆ ಮತ್ತು ಎಲ್ಲರೂ ಫೋಟೋ ತೆಗೆಯುತ್ತಿದ್ದಾರೆ. ಅವರು ಕಾಬಾ ಕಲ್ಲಿನ ಮತ್ತು ತಮ್ಮದೇ ಚಿತ್ರಗಳನ್ನು ಕೂಡಾ ತೆಗೆಯುತ್ತಿದ್ದಾರೆ.
ಅದಕ್ಕಾಗಿಯೇ ನೀನು ನೋಡಬಹುದು, ಇಸ್ಲಾಮಿನಲ್ಲಿ ಮಾನವ ಮುಖದ ಶಿಲ್ಪಗಳು ಇಲ್ಲವೇ ಇಲ್ಲ. ಶಿಲ್ಪಗಳಿಲ್ಲ, ಛಾಯಾಗ್ರಹಣವಿಲ್ಲ, ಯಾರದ್ದೂ ಯಾವುದೇ ವರ್ಣಚಿತ್ರವಿಲ್ಲ ಯಾಕೆಂದರೆ, ಪುರಿಟಾರಿಯನ್ ಇಸ್ಲಾಮಿನಲ್ಲಿ ಅದು ನಿಷೇಧವಾಗಿದೆ. ಆದರೆ ಇವತ್ತು, ಇದು ಸಾಧ್ಯವೇ? ಕೆಲವು ಇಮಾಮರು ದೂರದರ್ಶನದ ವಿರುದ್ಧ ಒಂದು ಫತ್ವಾ ನೀಡಿದರು. ದೂರದರ್ಶನಕ್ಕೆ ಭೂತ ಹೊಕ್ಕಿದೆಯೆಂದು ಅವರು ಹೇಳಿದರು. ನಿಮಗೆ ಗೊತ್ತೇ, ಭಾರತದ ಒಂದು ನಿರ್ದಿಷ್ಟ ಹಳ್ಳಿಯಲ್ಲಿ, ಒಂದು ದಿನ ಎಲ್ಲರೂ ತಮ್ಮ ದೂರದರ್ಶನಗಳನ್ನು ಎಸೆಯಬೇಕೆಂದು ಹೇಳಲಾಯಿತು. ಒಂದು ದಿನದಲ್ಲಿ ೫,೦೦೦ ಕುಟುಂಬಗಳು ತಮ್ಮ ದೂರದರ್ಶನಗಳನ್ನು ತಂದು ಅವುಗಳನ್ನೊಂದು ಹೊಂಡದಲ್ಲಿ ಎಸೆದರು ಮತ್ತು ಇದೆಲ್ಲವೂ ಹರಾಮ್ ಎಂದು ಹೇಳುತ್ತಾ ಅವುಗಳಿಗೆ ಕಲ್ಲು ಹೊಡೆದರು, ಯಾಕೆಂದರೆ ಮಾನವ ಮುಖಗಳನ್ನು ಮತ್ತು ಚಿತ್ರಗಳನ್ನು ನೋಡಲು ಒಬ್ಬರಿಗೆ ಅನುಮತಿಯಿಲ್ಲ.
ಹೀಗೆ, ಇವತ್ತು ಇಸ್ಲಾಂ ಏನಾಗಿದೆ, ಮತ್ತು ಇಸ್ಲಾಮಿನ ಉದ್ದೇಶಿತ ಗುರಿ ಏನಾಗಿತ್ತು? ಅವುಗಳ ನಡುವೆ ಅಜಗಜಾಂತರವಿದೆ.
ನನ್ನ ದೇವರನ್ನು ನಂಬದೇ ಇರುವವರೆಲ್ಲಾ ನಾಸ್ತಿಕರು ಮತ್ತು ನಾಸ್ತಿಕರಿಗೆ ಇರಲು ಹಕ್ಕಿಲ್ಲವೆಂದು ಇಸ್ಲಾಂ ಹೇಳುತ್ತದೆ. ಇದುವೇ ಐಸಿಸ್ (ಐ.ಎಸ್.ಐ.ಎಸ್.)ನೊಂದಿಗೆ ಆಗುತ್ತಿರುವುದು. ಇದುವೇ ಪುರಿಟಾರಿಯನ್ ಇಸ್ಲಾಮಿಗರು, ನಿಜವಾದ ಇಸ್ಲಾಂ. ಸೂಫಿಗಳು ಸಂಗೀತವನ್ನು ಸ್ವೀಕರಿಸುವುದರಿಂದ ಹಾಗೂ ಅವರು ಜಪ ಮಾಡುವುದರಿಂದ ಅವರು ಕೆಟ್ಟವರೆಂದು ಅವರು ಯೋಚಿಸುತ್ತಾರೆ. ಒಬ್ಬರು ಸೂಫಿ ಸಂತರು ಮರಣ ಹೊಂದಿ ಒಂದು ಗೋರಿಯನ್ನು ಮಾಡಿದಾಗ, ಈ ಗೋರಿಗಳು ಇಸ್ಲಾಮಿನವಲ್ಲ ಎಂದು ಅವರು ಹೇಳಿದರು. ಗೋರಿಗಳನ್ನು ಅಳಿಸಿಹಾಕಬೇಕೆಂದು ಅವರು ಹೇಳುತ್ತಾರೆ. ಅದನ್ನೇ ಅವರು ಮೊಹಮ್ಮದರ ಗೋರಿಗೂ ಮಾಡಿದರು, ಯಾಕೆಂದರೆ ಅದು ಇಸ್ಲಾಮಿನದ್ದಲ್ಲ ಎಂದು ಅವರು ಹೇಳಿದರು. ಶಿಯಾ ಪಂಥವನ್ನು ಇಸ್ಲಾಮಿನದ್ದಲ್ಲವೆಂದು ಘೋಷಿಸಲಾದುದು ಇದಕ್ಕಾಗಿಯೇ, ಯಾಕೆಂದರೆ ಶಿಯಾಗಳು ಈ ಗೋರಿಗಳನ್ನು ಗೌರವಿಸುತ್ತಾರೆ.
ಹೀಗೆ ಇಸ್ಲಾಮಿನಲ್ಲಿ ಈ ಸೈದ್ಧಾಂತಿಕ ಹೋರಾಟಗಳು ಹಲವಾರು ಸಮಸ್ಯೆಗಳನ್ನು ಉಂಟುಮಾಡಿವೆ. ಇಸ್ಲಾಮಿನ ಪ್ರಕಾರ, ನೀನು ಏನನ್ನಾದರೂ ಕದ್ದರೆ ನಿನ್ನ ಕೈಗಳನ್ನು ತುಂಡುಮಾಡಬೇಕು. ಒಂದು ಮಗು ಹೋಗಿ ಏನನ್ನಾದರೂ ಕದಿಯುತ್ತದೆಯೆಂದು ಸುಮ್ಮನೇ ಊಹಿಸಿಕೊಳ್ಳಿ, ಆಗ ನೀವು ಅವನ ಕೈಯನ್ನು ತುಂಡರಿಸುತ್ತೀರಿ, ಇದು ಇವತ್ತು ಪ್ರಾಯೋಗಿಕವೇ? ಯಾರ ಕೈಯನ್ನೇ ಆದರೂ ತುಂಡರಿಸುವುದು ಪ್ರಾಯೋಗಿಕವೇ? ಒಂದು ಮಗುವಿನ ಕೈಗಳನ್ನು ಕೊಚ್ಚಿಹಾಕಬೇಕೇ?
ಸಂಗೀತವನ್ನು ದೂರ ಮಾಡಬೇಕು, ಛಾಯಾಗ್ರಹಣಕ್ಕೆ ಅನುಮತಿ ನೀಡಬಾರದು; ಈ ನಿಯಮಗಳು ಪ್ರಾಯೋಗಿಕವೇ? ಎಲ್ಲೆಡೆಯೂ ವೈವಿಧ್ಯಮಯ ಜನರಿದ್ದಾರೆ, ನೀವು ಎಲ್ಲರೊಂದಿಗೂ ಹೊಂದಿಕೊಂಡಿರಬೇಕು. ಪುರಿಟಾರಿಯನ್ ಎಂದು ಕರೆಯಲ್ಪಡುವ ಇಸ್ಲಾಂ, ಎಲ್ಲರೂಂದಿಗೂ ಅಷ್ಟೊಂದು ಸಂಘರ್ಷಗಳನ್ನು ಸೃಷ್ಟಿಸುತ್ತದೆ.
ನಾವು ಹಲವಾರು ವಿವಿಧ ಬುಡಕಟ್ಟುಗಳನ್ನು ಹಾಗೂ ವಿವಿಧ ಜ್ಞಾನಗಳನ್ನು ಸೃಷ್ಟಿಸಿದ್ದೇವೆ ಮತ್ತು ಇವುಗಳೆಲ್ಲವೂ ಗೌರವಿಸಲ್ಪಡಬೇಕೆಂದು ಹೇಳುವ ಇನ್ನೊಂದು ಪಂಥವೂ ಇಸ್ಲಾಮಿನಲ್ಲಿದೆ. ಇದು ಪೈಗಂಬರರಿಂದ ಹೇಳಲ್ಪಟ್ಟ ಒಂದು ವಿಷಯ.
ಹೀಗೆ, ಜಗತ್ತಿನಲ್ಲಿ ವೈವಿಧ್ಯತೆಯಿದೆ, ವೈವಿಧ್ಯತೆಯನ್ನು ಗೌರವಿಸಿ. ನೀವು ವೈವಿಧ್ಯತೆಯನ್ನು ಗೌರವಿಸಿದಾಗ, ನೀವು ನಿಮ್ಮ ಶ್ರದ್ಧೆಯನ್ನು ಕಡೆಗಣಿಸಿದಂತಾಗುವುದಿಲ್ಲ.
ಒಮ್ಮೆ ದಕ್ಷಿಣ ಆಫ್ರಿಕಾದಲ್ಲಿ ಒಬ್ಬರು ಶಿಕ್ಷಕರು ಒಂದು ಶಿಬಿರವನ್ನು ಕಲಿಸುತ್ತಿದ್ದರು. ನಮ್ಮ ಸುದರ್ಶನ ಕ್ರಿಯೆಯಲ್ಲಿ ನಾವು ’ಓಂ’ ಎಂದು ಹೇಳುತ್ತೇವೆ. ತಾನು ’ಓಂ’ ಎಂದು ಉಚ್ಛರಿಸಲು ಸಾಧ್ಯವಿಲ್ಲವೆಂದೂ, ಯಾಕೆಂದರೆ ಅದು ತನ್ನ ಧರ್ಮಕ್ಕೆ ವಿರುದ್ಧವಾದುದೆಂದೂ ಒಬ್ಬ ವ್ಯಕ್ತಿ ಹೇಳಿದನು.
ಅದಕ್ಕೆ ಶಿಕ್ಷಕರು, "’ಓಂ’ ಎಂದು ಉಚ್ಛರಿಸಿದರೆ ನಿನ್ನ ಶ್ರದ್ಧೆಯನ್ನು ನೀನು ಕಳೆದುಕೊಳ್ಳುವಷ್ಟು ಬಲಹೀನವಾದುದೇ ನಿನಗೆ ನಿನ್ನ ಧರ್ಮದ ಮೇಲಿರುವ ಶ್ರದ್ಧೆ? ನನಗೆ ಹಾಗನಿಸುವುದಿಲ್ಲ. ನಾನು ’ಹಲಲುಯಾ’ ಅಥವಾ ’ಅಲ್ಲಾ-ಹು-ಅಕ್ಬರ್’ ಅಥವಾ ’ಬುದ್ಧಂ ಶರಣಂ ಗಚ್ಛಾಮಿ’ ಎಂದು ಉಚ್ಛರಿಸಬಲ್ಲೆ, ಆದರೆ ಆವಾಗಲೂ ನಾನು ನನ್ನ ಶ್ರದ್ಧೆಯನ್ನು ಉಳಿಸಿಕೊಳ್ಳಬಲ್ಲೆ. ಆಗಲೂ ನಾನಿರುವ ಧರ್ಮವನ್ನು ನಾನು ಗೌರವಿಸುತ್ತೇನೆ" ಎಂದು ಹೇಳಿದರು.
ಈ ಮಾತುಗಳು ಅವನ ಕಣ್ಣುಗಳನ್ನು ತೆರೆಯಿಸಿದವು. ಕೇವಲ ’ಓಂ’ ಎಂದು ಹೇಳುವುದರಿಂದ ನಿಮಗೇನೂ ನಷ್ಟವಾಗುವುದಿಲ್ಲ. ವಾಸ್ತವವಾಗಿ, ನಿಮಗೆ ಲಾಭವಾಗುವುದು.
ಅದೇ ರೀತಿಯಲ್ಲಿ, ನೀವು ಕ್ರಿಸ್‌ಮಸ್ ಕರೋಲ್‌ಗಳನ್ನು ಹಾಡಿದರೆ, ಕೂಡಲೇ ನೀವು ಕ್ರಿಶ್ಚಿಯನ್ನರಾಗಿ ಪರಿವರ್ತಿತರಾಗುವುದಿಲ್ಲ. ನೀವು ಕ್ರಿಸ್‌ಮಸ್ ಕರೋಲ್‌ಗಳನ್ನು ಹಾಡುವುದರಿಂದಾಗಿ ದೇವರು ನಿಮ್ಮಲ್ಲಿ ಕೋಪಗೊಳ್ಳುವುದಿಲ್ಲ.
ನೀವು ಭಜನೆಗಳನ್ನು ಹಾಡಿದರೆ ದೇವರು ನಿಮಗೆ ಶಿಕ್ಷೆ ನೀಡುವುದಿಲ್ಲ. ’ಶಿವ’ ಅಂದರೆ ಏನು? ಯಾವುದು ಬಹಳ ಸುಂದರವಾಗಿರುವುದೋ ಅದು, ಯಾವುದು ಬಹಳ ದಯಾಳುವೋ ಅದು. ಬಹಳ ದಯಾಳುವಾಗಿರುವ ಶಕ್ತಿ ಅಥವಾ ದೈವತ್ವ. ’ನಾರಾಯಣ’ ಅಂದರೆ ಏನು? ಎಲ್ಲಾ ನರಮಂಡಲಗಳಲ್ಲಿರುವ, ಸಂಪೂರ್ಣ ಸೃಷ್ಟಿಯಲ್ಲಿರುವ ಆ ಶಕ್ತಿ. ಜೀವಿಗಳಲ್ಲಿ ಶೋಭಿಸುವುದೇನೇ ಇರಲಿ ಅದು ’ನಾರಾಯಣ’ ಎಂದು ಕರೆಯಲ್ಪಡುತ್ತದೆ.
’ನರಮಂಡಲ’ ಎಂಬ ಪದವು ’ನರ’ ಎಂಬ ಸಂಸ್ಕೃತ ಪದದಿಂದ ಬಂದಿದೆ. ಅದಕ್ಕೆ ಮನುಷ್ಯರು ಎಂಬ ಅರ್ಥವೂ ಇದೆ.
’ನಾರಾಯಣ’ ಅಂದರೆ, ಸುಂದರವಾದ ಹಾಗೂ ಅದ್ಭುತವಾದ ನರಮಂಡಲದಲ್ಲಿ ಆಶ್ರಯಪಡೆದಿರುವುದು ಯಾವುದೋ ಅದು. ಒಂದು ನರಮಂಡಲವಿರದ ಒಬ್ಬ ಮನುಷ್ಯನನ್ನು ಸುಮ್ಮನೇ ಕಲ್ಪಿಸಿಕೊಳ್ಳಿ, ಅವನು ಬದುಕಿರಲಾರ. ನೀವು ನಿಮ್ಮನ್ನು ವ್ಯಕ್ತಪಡಿಸಲು ಸಾಧ್ಯವಾಗುವುದು ನಿಮ್ಮ ನರಮಂಡಲದ ಕಾರಣದಿಂದಾಗಿ. ಸಂಪೂರ್ಣ ವಿಶ್ವದಲ್ಲಿ ಯಾವ ಶಕ್ತಿಯು ಗ್ರಹಿಸುವುದೋ ಮತ್ತು ಯಾವುದು ವ್ಯಕ್ತಪಡಿಸುವುದೋ ಆ ಶಕ್ತಿಯು ನಾರಾಯಣ ಆಗಿದೆ.
ಆದ್ದರಿಂದ, ವಿವಿಧ ಸಂಪ್ರದಾಯಗಳ ವಿವಿಧ ಭಾಷೆಗಳಲ್ಲಿ ಹಾಡುಗಳನ್ನು ಹಾಡುವುದು ಯಾವುದೇ ದೇವರು ಅಥವಾ ನಿರ್ದಿಷ್ಟ ಸಂಪ್ರದಾಯದ ವಿರುದ್ಧವಾಗಿಲ್ಲ. ಅದು ಕೇವಲ ಗ್ರಹಿಕೆ. ಮೂಲಭೂತವಾದಿಗಳು ತಮ್ಮನ್ನು ತಾವೇ ಹಾಗೂ ಇತರರನ್ನು ತರಬೇತುಗೊಳಿಸುವುದು ಹೀಗೆಯೇ. ನೀವು ಬೇರೆ ಯಾವುದೋ ದೇವರ ಹೆಸರನ್ನು ಉಚ್ಛರಿಸಿದರೆ ನೀವು ನಾಸ್ತಿಕರೆಂದು ಅಥವಾ ಹಾಗೇನೋ ಅವರು ನಿಮಗೆ ಹೇಳುತ್ತಾರೆ.
ಇವತ್ತು ಇಲ್ಲಿಗೆ ಬರುವುದಕ್ಕೆ ಸ್ವಲ್ಪ ಮೊದಲು, ಇರಾಕಿನಲ್ಲಿನ ಒಂದು ಆತ್ಮಹತ್ಯಾ ಕಾರ್ ಬಾಂಬಿನ ಬಗ್ಗೆ ನಾನು ಓದಿದೆ. ಹಲವಾರು ಜನರು ಮರಣ ಹೊಂದಿದರು. ಪಾಕಿಸ್ತಾನದಲ್ಲಿ ಪ್ರತಿದಿನವೂ ಆತ್ಮಹತ್ಯಾ ಬಾಂಬುಗಳು, ಪ್ರತಿದಿನವೂ ಹಿಂಸಾಚಾರಗಳು ನಡೆಯುತ್ತಿವೆ. ಇದೆಲ್ಲವೂ ಶಾಂತಿಯ ಹೆಸರಿನಲ್ಲಿ. ಇಸ್ಲಾಂ ಎಂದರೆ ಶಾಂತಿ ಎಂದು ಅರ್ಥ. ಆದರೂ ಇಸ್ಲಾಮಿನ ಹೆಸರಿನಲ್ಲಿರುವುದೆಲ್ಲಾ ಬಹಳಷ್ಟು ಹಿಂಸಾಚಾರ; ಕಲ್ಪಿಸಿಕೊಳ್ಳಲೂ ಸಾಧ್ಯವಾಗಲಾರದ ಹಿಂಸಾಚಾರ.
ಇರಾಕಿನಲ್ಲಿನ ಯಾಝಿದಿಗಳು ಸಾವಿರಾರು ವರ್ಷಗಳಿಂದ ಒಂದು ಸಂಪ್ರದಾಯವನ್ನು ಅನುಸರಿಸುತ್ತಿದ್ದಾರೆ, ಆದರೆ ಈಗ ಅವರನ್ನು ಚಿತ್ರಹಿಂಸೆಪಡಿಸಲಾಗುತ್ತಿದೆ, ಕೊಲ್ಲಲಾಗುತ್ತಿದೆ, ಹತ್ಯೆಗೈಯಲಾಗುತ್ತಿದೆ ಹಾಗೂ ಅವರು ಅಲ್ಲಾನ ವಿರುದ್ಧವೆಂದೂ, ದೇವರ ವಿರುದ್ಧವೆಂದೂ ಹೇಳಲಾಗುತ್ತಿದೆ. ದೇವರು ಅವರಿಗೆ ವಿರುದ್ಧವಾಗಿರುತ್ತಿದ್ದರೆ ಅವನು ಅವರಿಗೆ ಏನಾದರೂ ಮಾಡಿರುತ್ತಿದ್ದ. ದೇವರು ಸರ್ವಶಕ್ತನು, ಅವನಿಗೆ ಅವರು ಬದುಕಿರುವುದು ಇಷ್ಟವಿರದೇ ಇರುತ್ತಿದ್ದರೆ, ಅವನು ಅವರನ್ನು ಡೈನೋಸಾರ್‌ಗಳಂತೆ ಅಳಿಸಿಹಾಕಿರುತ್ತಿದ್ದ. ದೇವರಿಗಾಗಿ ನಾವದನ್ನು ಮಾಡಬೇಕಾದ ಅಗತ್ಯವಿಲ್ಲ. ದೇವರು ಅವನ ಕೆಲಸವನ್ನು ಮಾಡಲು ಬಿಡಿ, ನಾವು ನಮ್ಮ ಕೆಲಸವನ್ನು ಮಾಡೋಣ. ಜಗತ್ತಿನಲ್ಲಿ ಧರ್ಮದ ಹೆಸರಿನಲ್ಲಿ ಅಷ್ಟೊಂದು ಹಿಂಸಾಚಾರವಿರುವುದು ಬಹಳ ದುರದೃಷ್ಟಕರವಾಗಿದೆ. ಅದಕ್ಕಾಗಿಯೇ ನಾವು ಧರ್ಮಗಳ ನಡುವೆಯಿರುವ ಈ ಅಡೆತಡೆಗಳನ್ನು ಮುರಿಯಬೇಕಾಗಿರುವುದು.
ಇಸ್ಲಾಮಿನಲ್ಲಿ, ಎಲ್ಲರೂ ಒಂದೆನ್ನುವ ನಂಬಿಕೆಯಂತಹ ಕೆಲವು ಮಹತ್ತರ ವಿಷಯಗಳಿವೆ. ಸಾಮೂಹಿಕ ಪ್ರಾರ್ಥನೆಗಳಿವೆ - ಎಲ್ಲರೂ ಜೊತೆಯಲ್ಲಿ ಪ್ರಾರ್ಥನೆ ಮಾಡುತ್ತಾರೆ. ಈ ಮಹತ್ತರ ವಿಷಯಗಳನ್ನು ಇಟ್ಟುಕೊಳ್ಳಿ ಹಾಗೂ ವಿಭಜನೆ, ಹಿಂಸಾಚಾರ ಮತ್ತು ನಾನು ಮೇಲಣ ದರ್ಜೆಯವನು, ಇತರರೆಲ್ಲರೂ ಕೆಳದರ್ಜೆಯವರೆಂಬ ಮೇಲರಿಮೆಗಳನ್ನು ಉತ್ತೇಜಿಸುವ ಇತರ ವಿಷಯಗಳನ್ನು ಬಿಟ್ಟುಬಿಡಿ. ಅಂತಹ ವಿಷಯಗಳನ್ನು ದೂರ ಮಾಡಬೇಕು. ನಾನು ಹೇಳುತ್ತೇನೆ ಕೇಳಿ, ಜ್ಞಾನೋದಯವನ್ನು ಹೊಂದಿದ ಹಲವಾರು ಮುಸ್ಲಿಮರಿದ್ದಾರೆ. ಈ ಭೂಮಿಯ ಮೇಲೆ ಹಲವಾರು ಒಳ್ಳೆಯ ಮುಸ್ಲಿಮರಿದ್ದಾರೆ, ಆದರೆ ಕೇವಲ ಈ ಕೆಲವು ಜನರು ಹಾಗೂ ಅವರ ಮತಾಂಧತೆಯ ಕಾರಣದಿಂದಾಗಿ ಇವತ್ತು ಅವರ ಧರ್ಮಕ್ಕೆ ಅಷ್ಟೊಂದು ಕೆಟ್ಟ ಹೆಸರು ಬಂದಿದೆ. ಅದು ಬಹಳ ದುರದೃಷ್ಟಕರ.
ಪ್ರವಾದಿಗಳ ಪತ್ನಿ ಖದೀಜಾ ಯಾವತ್ತೂ ಬುರ್ಖಾವನ್ನು ಧರಿಸಲಿಲ್ಲ. ಅವಳು ಯಾವತ್ತೂ ಒಂದು ಹಿಜಾಬ್ ಕೂಡಾ ಧರಿಸಲಿಲ್ಲ. ಅವಳಿಗೆ ಸಂಪೂರ್ಣ ಹಕ್ಕುಗಳನ್ನು ನೀಡಲಾಗಿತ್ತು. ಆನಂತರದಲ್ಲಿ ಪುರುಷ ಪ್ರಧಾನ ಸಮಾಜವು ಎಲ್ಲೋ ಸ್ತ್ರೀಯರ ಹಕ್ಕುಗಳನ್ನು ಕಸಿದುಕೊಂಡಿತೆಂದು ನನಗನಿಸುತ್ತದೆ. ಅವರದನ್ನು ಈಗ ಮಾಡಬೇಕಾಗಿಲ್ಲ.