ಗುರುವಾರ, ಜನವರಿ 8, 2015

ವಿಶ್ವಾಸವು ಅಖಂಡವಾಗಿರಲಿ

೦೮/೦೧/೨೦೧೫
ಬೆಂಗಳೂರು, ಭಾರತ

"ನಾನು ಯಾರು?" - ಈ ಪ್ರಶ್ನೆಯನ್ನು ಮತ್ತೆ ಮತ್ತೆ ನಿಮ್ಮಲ್ಲಿಯೇ ಕೇಳುತ್ತಾ ಇರಿ. ಧ್ಯಾನದಲ್ಲಿ ಇನ್ನೂ ಆಳಕ್ಕೆ ಹೋಗಲು ಇದುವೇ ದಾರಿ ಮಾಡಿಕೊಡುತ್ತದೆ. ನೀವು ನಿಮ್ಮ ಬಗ್ಗೆ ಏನನ್ನು ಯೋಚಿಸುವಿರೋ ಅಥವಾ ನೀವೇನೆಂದು ನಿಮಗನ್ನಿಸುವುದೋ ಅದನ್ನೆಲ್ಲಾ ಪಕ್ಕಕ್ಕೆ ಇಟ್ಟುಬಿಡಿ. ಈ ಪ್ರಶ್ನೆಗೆ ಶಬ್ದಗಳ ಮೂಲಕ ಉತ್ತರಿಸಲು ಸಾಧ್ಯವಿಲ್ಲ. ಅದನ್ನು ಶಬ್ದಗಳ ಮೂಲಕ ಉತ್ತರಿಸುವವನಿಗೆ ನಿಜಕ್ಕೂ ಅದು ತಿಳಿಯದು. ಈ ಪ್ರಶ್ನೆಯು ಬಹಳ ಮುಖ್ಯವಾದುದು. ಹೀಗಾಗಿ ಈ ಪ್ರಶ್ನೆಯನ್ನು ಮತ್ತೆ ಮತ್ತೆ ನಿಮ್ಮಲ್ಲೇ ಕೇಳುತ್ತಾ ಇರಿ - ಅದು ನೂರು ಅಥವಾ ಸಾವಿರ ಬಾರಿ ಆಗಿರಬಹುದು; ಮತ್ತೆ ಮತ್ತೆ.
ನಂತರ ನಿಮ್ಮಲ್ಲೇ ಕೇಳಿಕೊಳ್ಳಿ, "ನಾನು ಯಾಕೆ?" ನಾನು ಹೇಳುವುದೇನೆಂದರೆ, ನೀವು ನಿಜಕ್ಕೂ ಯಾರೆಂಬುದು ನಿಮಗೆ ಮೊದಲು ತಿಳಿದಿರಬೇಕು. ನೀವು ಯಾಕಿರುವಿರಿ ಮತ್ತು ಹಾಗೆಯೇ ನೀವು ಯಾಕಿಲ್ಲ ಎಂಬುದನ್ನು ಆಮೇಲೆ ಯೋಚಿಸಿ. ಯಾರೊಬ್ಬರಿಗಾದರೂ ನೀವು ಅಸ್ತಿತ್ವದಲ್ಲಿ ಇಲ್ಲವೇ ಎಂದು ಯೋಚಿಸಿ.

ನೀವಿಲ್ಲಿರುವುದು ತೊಂದರೆಯನ್ನು ಅನುಭವಿಸುವುದಕ್ಕಾಗಿಯಲ್ಲ, ನೀವಿಲ್ಲಿರುವುದು ಇತರರಿಗೆ ತೊಂದರೆಯನ್ನು ಕೊಡುವುದಕ್ಕಾಗಿಯೂ ಅಲ್ಲ. ನೀವಿಲ್ಲಿರುವುದು ಕೇವಲ ಒಂದು ದಿನದಿಂದ ಇನ್ನೊಂದು ದಿನಕ್ಕೆ ನಿದ್ದೆ ಮಾಡಿ, ತಿಂದು ಕುಡಿದು ಮಾಡುವುದಕ್ಕಾಗಿಯಲ್ಲ. ನೀವಿಲ್ಲಿರುವುದು ಹರಟೆಹೊಡೆಯುವುದಕ್ಕಲ್ಲ. ಹೀಗೆ ನೀವು ಈ ರೀತಿ ಆಳವಾಗಿ ಯೋಚಿಸುವಾಗ, ನೀವು ಯಾಕೆ ಇಲ್ಲಿರುವಿರಿ ಎಂಬುದು ನಿಮಗೆ ನಿಧಾನವಾಗಿ ಅರ್ಥವಾಗಲು ತೊಡಗುತ್ತದೆ. ನೀವು ಯಾವುದಲ್ಲ ಎಂಬ ವಿಷಯಗಳ ಒಂದು ಪಟ್ಟಿಯನ್ನು ಮಾಡಲು ಆರಂಭಿಸಿ. ನೀವಲ್ಲದಿರುವುದನ್ನು (ಗುರುತು ಅಥವಾ ಲೇಬಲ್) ಒಂದರ ನಂತರ ಒಂದು ವಿಷಯದಂತೆ ನಿರಾಕರಿಸುತ್ತಾ ಬನ್ನಿ. ಆಗ ನಿಮಗೆ ತಿಳಿಯುತ್ತದೆ ನೀವಿಲ್ಲಿ ಯಾಕಿರುವಿರಿ ಎಂಬುದು ಮತ್ತು ನೀವಿಲ್ಲಿರುವುದು ನಿಮ್ಮ ಸುತ್ತಲಿರುವವರಿಗೆ ಹಾಗೂ ನಿಮಗೆ ಕೂಡಾ ಪ್ರಯೋಜನಕಾರಿಯಾಗಿಯೂ ಸಹಾಯಕವಾಗಿಯೂ ಇರವುದಕ್ಕಾಗಿಯೆಂಬುದು. ನಿಮ್ಮಿಂದಾಗಿ ಕೆಲವು ಜನರಿಗೆ ಆರಾಮ ಮತ್ತು ಸಮಾಧಾನ ಸಿಗುವಾಗ, ನಿಮಗೆ ಸಿಗುವ ಸಂತೋಷ ಮತ್ತು ತೃಪ್ತಿಯನ್ನು ಶಬ್ದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವೇ ಇಲ್ಲ.

ಪ್ರಶ್ನೆ: ಗುರುದೇವ, ನಾನು ನಿಮ್ಮ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳತೊಡಗಿರುವೆ. ನಾನೇನು ಮಾಡುವುದು?

ಶ್ರೀ ಶ್ರೀ ರವಿ ಶಂಕರ್: ಅದು ಒಳ್ಳೆಯದು. ಒಂದು ಮುಕ್ತಾಯಕ್ಕೆ ಬರಬಲ್ಲಂತಹದ್ದಲ್ಲ ನಂಬಿಕೆಯೆಂದರೆ, ಇದು ಮೊದಲನೆಯ ವಿಷಯ. ನೀನು ನಿನ್ನ ಜೀವನದಲ್ಲಿ ಯಾವುದರಿಂದಲೋ ಓಡಿಹೋಗಲು ಪ್ರಯತ್ನಿಸುತ್ತಿರುವೆ, ಮತ್ತು ಹಾಗೆ ಮಾಡುವುದಕ್ಕೆ ದೇವರು ಅಥವಾ ನಿನ್ನ ಗುರುವನ್ನು ಒಂದು ನೆಪವಾಗಿ ಅಥವಾ ಕಾರಣವಾಗಿ ಬಳಸುತ್ತಿರುವೆ. ಅಂತಹ ರೀತಿಯಲ್ಲಿ ಕಟ್ಟಲ್ಪಟ್ಟ ನಂಬಿಕೆಯು ಖಂಡಿತವಾಗಿಯೂ ಒಂದಲ್ಲ ಒಂದು ಸಮಯದಲ್ಲಿ ಅಲುಗಾಡಬಹುದು. ಪ್ರತಿಸಲವೂ ನಿನ್ನ ನಂಬಿಕೆಯು ಅಲುಗಾಡುವಾಗ, ನಿನ್ನ ಭಕ್ತಿಯು ಮತ್ತೊಮ್ಮೆ ಒಳಗಿನಿಂದ ನವೀಕೃತಗೊಳ್ಳುವುದು. ಸತ್ಯವು ಯಾವತ್ತೂ ಸೋಲುವುದಿಲ್ಲ ಅಥವಾ ಅಲುಗಾಡುವುದಿಲ್ಲ. ನಿಜವಾದ ನಂಬಿಕೆಯು ಸಂಭವಿಸುವ ಯಾವುದನ್ನೂ ಲೆಕ್ಕಿಸದೆ ದೃಢವಾಗಿ ಉಳಿಯುತ್ತದೆ. ಅಲುಗಾಡುವುದು ಯಾವುದೆಂದರೆ, ಬಹಳ ಬಾಹ್ಯಮಟ್ಟದಲ್ಲಿರುವ ಯಾವುದೋ ಸಣ್ಣ ನಂಬಿಕೆ. ನಿನ್ನದೇ ಆದ ನಿರೀಕ್ಷೆಗಳು ಮತ್ತು ಬಯಕೆಗಳು ನಿನ್ನನ್ನು ಅಲುಗಾಡಿಸುವುದು.

ಸ್ವಲ್ಪ ಹೊತ್ತಿಗೆ ಮೊದಲು ಒಬ್ಬಳು ಮಹಿಳೆಯು ನನ್ನ ಬಳಿಗೆ ಬಂದಳು. ಅವಳು ತನಗಿಂತ ವಯಸ್ಸಿನಲ್ಲಿ ಚಿಕ್ಕವನಾದ ಒಬ್ಬ ಗಂಡಸನ್ನು ಪ್ರೀತಿಸುತಿದ್ದಳು. ಅವಳು ನನ್ನಲ್ಲಿ, "ಗುರುದೇವ, ನೀವು ದೇವರು ಮತ್ತು ನೀವು ಏನನ್ನು ಬೇಕಾದರೂ ಮಾಡಬಲ್ಲಿರಿ. ದಯವಿಟ್ಟು ನನ್ನನ್ನು ಆ ಗಂಡಸಿನೊಂದಿಗೆ ಮದುವೆ ಮಾಡಿಸಿ" ಎಂದು ಹೇಳಿದಳು.

ಈ ರೀತಿ ಅವಳು ನನ್ನನ್ನು ಪ್ರಶ್ನಿಸತೊಡಗಿದಳು. ಆ ಯುವಕನಿಗೆ ಅವಳನ್ನು ವಿವಾಹವಾಗಲು ಇಷ್ಟವೇ ಇರಲಿಲ್ಲ ಮತ್ತು ಅದರ ಬಗ್ಗೆ ಯೋಚಿಸಿದರೇ ಅವನು ಓಡಿ ಹೋಗುತ್ತಿದ್ದ. ನಾನು ಅವಳಿಗಂದೆ, "ನಾನು ಆ ಹುಡುಗನನ್ನು ಕೂಡಾ ಕೇಳುತ್ತೇನೆ, ಅವನಿಗೆ ನಿನ್ನನ್ನು ಮದುವೆಯಾಗಲು ಇಷ್ಟವಿದೆಯೇ ಇಲ್ಲವೇ ಎಂಬುದಾಗಿ".

ಅವಳಂದಳು, "ಇಲ್ಲ ಗುರುದೇವ, ಅವನಿಗೆ ನನ್ನನ್ನು ಮದುವೆಯಾಗಲು ಇಷ್ಟವಿಲ್ಲ. ಆದರೆ ಅವನಿಗೆ ಮನದಟ್ಟು ಮಾಡಿಸಿ ಅವನ ಮನಸ್ಸನ್ನು ಬದಲಾಯಿಸಲು ನಿಮಗೆ ಸಾಧ್ಯವಿದೆ. ನಿಮಗೆ ಏನು ಬೇಕಾದರೂ ಮಾಡಲು ಸಾಧ್ಯವಿದೆಯೆಂಬುದು ನನಗೆ ಗೊತ್ತು. ದಯವಿಟ್ಟು ನಿಮ್ಮ ಶಕ್ತಿಯನ್ನು ಬಳಸಿ ಅವನ ಮನಸ್ಸಿನ ಮೇಲೆ ಪ್ರಭಾವ ಬೀರಿ ಹಾಗೂ ನನ್ನನ್ನು ಮದುವೆಯಾಗಲು ಅವನು ಒಪ್ಪುವಂತೆ ಮಾಡಿ".

ನಾನವಳಿಗಂದೆ, "ಒಬ್ಬ ಆರೋಗ್ಯವಂತ ಸ್ಥೂಲಕಾಯದ ವ್ಯಕ್ತಿಯೊಬ್ಬನಿದ್ದಾನೆ. ಅವನು ಬಂದು ನನ್ನಲ್ಲಿ, ಅದನ್ನೇ ನಿನಗಾಗಿ ಮಾಡಲು ಕೇಳಿಕೊಂಡ. ಅವನು ನಿನ್ನನ್ನು ಮದುವೆಯಾಗಲು ಬಯಸುತ್ತಾನೆ. ಹೀಗಾಗಿ ಅವನು ನನ್ನಲ್ಲಿಗೆ ಬಂದು, ನಿನ್ನ ಮನಸ್ಸನ್ನು ಜಾದೂ ರೀತಿಯಿಂದ ಬದಲಾಯಿಸಿ, ಅವನನ್ನು ಮದುವೆಯಾಗುವಂತೆ ನಿನ್ನನ್ನು ಒಪ್ಪಿಸಲು ನನ್ನಲ್ಲಿ ಕೇಳಿಕೊಂಡ. ಅವನು ನಿನ್ನನ್ನು ಪ್ರೀತಿಸುತ್ತಾನೆ. ಈಗ ನಾನೇನು ಮಾಡುವುದು?"

ಇದನ್ನು ಕೇಳಿದಾಗ ಅವಳಂದಳು, "ಓ ಗುರುದೇವ! ಆ ಇನ್ನೊಬ್ಬ ವ್ಯಕ್ತಿಯನ್ನು ಮದುವೆಯಾದರೆ ನಾನು ಸತ್ತೇ ಹೋಗುವೆನು".
ನಾನಂದೆ, "ಆ ಯುವಕನೂ ನಿನ್ನನ್ನು ಮದುವೆಯಾಗುವುದರ ಬಗ್ಗೆ ಅದನ್ನೇ ಹೇಳುತ್ತಿದ್ದಾನೆ!" (ನಗು)

ನಾನು ಅವಳಲ್ಲಿ ಕೇಳಿದೆ, "ಇದು ನಿಜಕ್ಕೂ ನಿನಗೆ ನನ್ನ ಮೇಲಿರುವ ವಿಶ್ವಾಸವೇ ಅಥವಾ ನಿನ್ನ ಲೋಭ ಮತ್ತು ಬಯಕೆಗಳು ನೀನು ಅಂತಹದ್ದರನ್ನು ನಂಬುವಂತೆ ಮಾಡುತ್ತಿರುವುದೇ?"

ಹೆಚ್ಚಾಗಿ ನಾವು ನಮ್ಮ ತೀವ್ರವಾದ ಬಯಕೆಗಳನ್ನು ನಮ್ಮ ತೀವ್ರವಾದ ವಿಶ್ವಾಸವೆಂದು ತಪ್ಪಾಗಿ ಅರ್ಥೈಸಿಕೊಳ್ಳುತ್ತೇವೆ ಹಾಗೂ ನಮ್ಮ ಬಯಕೆಗಳನ್ನು ಪೂರೈಸಿಕೊಳ್ಳಲು ಮತ್ತು ನಮ್ಮ ಕೆಲಸವನ್ನು ಸಾಧಿಸಲು ದೇವರನ್ನು ಕುಶಲತಾಪೂರ್ವಕವಾಗಿ ಬಳಸಿಕೊಳ್ಳಲು ಪ್ರಯತ್ನಿಸುತ್ತೇವೆ. ಕೇವಲ ನಿಮ್ಮ ಬಯಕೆಗಳ ಪೂರೈಕೆಗಾಗಿ ನೀವು ದೇವರಲ್ಲಿ ವಿಶ್ವಾಸವನ್ನಿರಿಸುವುದಾದರೆ, ಆಗ ಅದು ಕೆಲಸ ಮಾಡದು.

ಯಾವುದು ಹೆಚ್ಚಿನದು: ದೇವರಾ ಅಥವಾ ನಿಮ್ಮ ಬಯಕೆಯಾ? ಸುಮ್ಮನೆ ಇದರ ಬಗ್ಗೆ ಯೋಚಿಸಿ. ನೀವು ದೇವರನ್ನು, ಕೊಡುಕೊಳ್ಳುವಿಕೆಗಿರುವ ಚಲಾವಣೆಯ ನಾಣ್ಯದಂತೆ ಉಪಯೋಗಿಸಲು ಬಯಸುತ್ತೀರಿ, ಮತ್ತು ಅದನ್ನೇ ನೀವು ನಿಮ್ಮ ಗುರುವಿನೊಂದಿಗೆ ಮಾಡಲು ಬಯಸುತ್ತೀರಿ. ಜೀವನದಲ್ಲಿ ಎತ್ತರಕ್ಕೇರುವುದಕ್ಕೆ ಮತ್ತು ನಿಮ್ಮೊಳಗೆ ಆಳವಾಗಿ ಹೋಗುವುದಕ್ಕೆ ಸಹಾಯ ಮಾಡಲು ವಿಶ್ವಾಸ ಮತ್ತು ಭಕ್ತಿ ಬೇಕು.

ಕಷ್ಟಗಳು ಮತ್ತು ಅಹಿತಕರ ಸಮಯಗಳು ಪ್ರತಿಯೊಬ್ಬರ ಜೀವನದಲ್ಲೂ ಬರುತ್ತವೆ. ತಮ್ಮ ಜೀವನದಲ್ಲಿ ಸಮಸ್ಯೆಗಳಿರದ ಯಾರಾದರೂ ಇದ್ದಾರೆಯೇ? ಕೃಷ್ಣ ಪರಮಾತ್ಮನು ತನ್ನ ಜೀವಿತಾವಧಿಯಲ್ಲಿ ಹಲವಾರು ಅಡೆತಡೆಗಳನ್ನು ಎದುರಿಸಿದನು. ಭಗವಂತ ರಾಮನೂ ತನ್ನ ಜೀವನದಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸಿದನು. ಮಾಹಾತ್ಮಾ ಗಾಂಧಿ ಕೂಡಾ ತಮ್ಮ ಜೀವನದಲ್ಲಿ ಹಲವಾರು ತಡೆಗಳನ್ನು ಎದುರಿಸಿದರು. ಆದ್ದರಿಂದ ಜೀವನದಲ್ಲಿ ಕಷ್ಟಗಳು ಬರುತ್ತವೆ ಹೋಗುತ್ತವೆ. ಅಂತಹ ಪ್ರಕ್ಷುಬ್ಧ ಸಮಯದಲ್ಲಿ ನಿಮ್ಮ ವಿಶ್ವಾಸ ಮತ್ತು ಭಕ್ತಿಯು ಹಾಗೆಯೇ ಅಖಂಡವಾಗಿಯೂ ದೃಢವಾಗಿಯೂ ಉಳಿಯುವಾಗ, ಆ ಪರಿಸ್ಥಿತಿಗಳು ನಿಮಗೆ ಅಹಿತಕರವಾಗಿ ಅನ್ನಿಸುವುದಿಲ್ಲ. ಈ ಕಷ್ಟಕಾಲಗಳಲ್ಲಿ ವಿಶ್ವಾಸವು ನಿಮ್ಮ ಆಸರೆಯಾಗುತ್ತದೆ ಮತ್ತು ನಿಮ್ಮನ್ನು ಸ್ಥಿರವಾಗಿ ಇರಿಸುತ್ತದೆ. ಒಂದು ಸಂಪೂರ್ಣವಾದ ಕತ್ತಲಿನ ರಾತ್ರಿಯಲ್ಲಿ, ಒಂದು ಮಿಣುಕು ದೀಪ ಕೂಡಾ ನೀವು ನಿಮ್ಮ ದಾರಿಯನ್ನು ಕಂಡುಕೊಂಡು ಮುಂದೆ ನಡೆಯುವುದಕ್ಕೆ ಸಹಾಯ ಮಾಡಬಲ್ಲದು. ಆದರೆ ನೀವು ಬೆಳಕಿನ ಆ ಮೂಲವನ್ನೇ ನಂದಿಸಲು ಪ್ರಯತ್ನಿಸಿದರೆ, ಆಗ ಅದು ಒಳ್ಳೆಯದಲ್ಲ. ಹೀಗೆ ಮಾಡುವ ಜನರು ನಂತರ ಕಷ್ಟಕರ ಪರಿಸ್ಥಿತಿಗಳನ್ನು ನಿಭಾಯಿಸಲು ಮದ್ಯಪಾನ ಮೊದಲಾದಂತಹ ಇತರ ಮಾರ್ಗಗಗಳನ್ನು ಪ್ರಯತ್ನಿಸುತ್ತಾರೆ. ವಿಶ್ವಾಸವೆಂಬುದು ಒಂದು ದೊಡ್ಡ ಸಂಪತ್ತು ಮತ್ತು ಅದು ನಿಮಗೆ ಬಲವನ್ನು ನೀಡುತ್ತದೆ. ಕೇವಲ ಕೆಲವು ಸಣ್ಣ ವಿಷಯಗಳು ನಿಮಗೆ ಬೇಕಾದಂತೆ ನಡೆಯಲಿಲ್ಲವೆಂಬ ಕಾರಣಕ್ಕೆ, ನೀವು ನಿಮ್ಮ ವಿಶ್ವಾಸವನ್ನು ಆಗಾಗ ಮುರಿಯುವಷ್ಟು ದುರ್ಬಲ ಹಾಗೂ ಸೂಕ್ಷ್ಮಮಾಡಿಕೊಳ್ಳಬೇಕೆಂದಲ್ಲ.

ನೀನು ಬಯಸಿದುದು ಯಾವುದೋ ಒಂದು ನಡೆಯಲಿಲ್ಲವೆಂಬ ಕಾರಣಕ್ಕೆ ನಿನ್ನ ವಿಶ್ವಾಸವು ಬಲಹೀನವಾಗುತ್ತಿದೆ ಹಾಗೂ ವಿಫಲವಾಗುತ್ತಿದೆಯೆಂದು ನಿನಗನ್ನಿಸುವುದು ಒಳ್ಳೆಯದೆಂದು ನಾನು ಹೇಳಿದ್ದು ಅದಕ್ಕೇ. ಅದು ಪರವಾಗಿಲ್ಲ. ಕ್ರಮೇಣವಾಗಿ ನೀನು ಯಾರ ಮೇಲಾದರೂ ಅಥವಾ ಯಾವುದರ ಮೇಲಾದರೂ ನಿನ್ನ ವಿಶ್ವಾಸವನ್ನಿರಿಸುವೆ.

ಪ್ರಶ್ನೆ: ಗುರುದೇವ, ನಾವು ನಮ್ಮ ಮಕ್ಕಳನ್ನು ಆಧ್ಯಾತ್ಮಿಕವಾಗಿ ಬಲಶಾಲಿಗಳನ್ನಾಗಿ ಮಾಡುವುದು ಹೇಗೆ?
ಶ್ರೀ ಶ್ರೀ ರವಿ ಶಂಕರ್: ಮಕ್ಕಳು ಸ್ವಾಭಾವಿಕವಾಗಿ ಆಧ್ಯಾತ್ಮಿಕರಾಗಿರುತ್ತಾರೆ. ಅವರನ್ನು ಧೂಮಪಾನ, ಮದ್ಯಪಾನಗಳಂತಹ ಕೆಟ್ಟ ಅಭ್ಯಾಸಗಳು, ಹಿಂಸಾತ್ಮಕ ಚಟುವಟಿಕೆಗಳು ಹಾಗೂ ಹಿಂಸಾತ್ಮಕ ಆಟಗಳು ಮೊದಲಾದವುಗಳಿಂದ ದೂರವಿಡಿ. ನೀವಿದನ್ನು ಮಾಡಿದರೆ ಆಗ ಅವರು ಸ್ವಾಭಾವಿಕವಾಗಿಯೇ ಆಧ್ಯಾತ್ಮಿಕರಾಗಿರುತ್ತಾರೆ.

ಪ್ರಶ್ನೆ: ಗುರುದೇವ, ನಾನು ಮೋಕ್ಷವನ್ನು ಪಡೆಯುವುದು ಹೇಗೆ ಮತ್ತು ಧ್ಯಾನದಿಂದ ಒಬ್ಬನಿಗೆ ಏನು ಸಿಗುತ್ತದೆ? ನನ್ನೆಲ್ಲಾ ಸ್ನೇಹಿತರು ಹಲವು ಸಲ ನನಗೆ ಇದೇ ಪ್ರಶ್ನೆಯನ್ನು ಕೇಳುತ್ತಾರೆ.

ಶ್ರೀ ಶ್ರೀ ರವಿ ಶಂಕರ್: ಧ್ಯಾನವು ನಿಮ್ಮ ಶರೀರವನ್ನು ಬಲಶಾಲಿಯನ್ನಾಗಿಸುತ್ತದೆ ಮತ್ತು ಹುರುಪನ್ನು ತರುತ್ತದೆ. ಅದು ಬುದ್ಧಿಯನ್ನು ತೀಕ್ಷ್ಣಗೊಳಿಸುತ್ತದೆ ಮತ್ತು ಮನಸ್ಸಿಗೆ ಆನಂದವನ್ನು ತರುತ್ತದೆ. ನಿಮ್ಮ ವರ್ತನೆಯನ್ನು ಹಾಗೂ ನಿಮ್ಮ ಸುತ್ತಲಿನ ಜನರೊಂದಿಗೆ ನೀವು ವ್ಯವಹರಿಸುವ ರೀತಿಯನ್ನು ಸುಧಾರಿಸಲು ಹಾಗೂ ಹೆಚ್ಚಿಸಲು ಅದು ಸಹಾಯ ಮಾಡುತ್ತದೆ. ಅದು ಒತ್ತಡವನ್ನು ನಿವಾರಿಸುತ್ತದೆ. ಒಬ್ಬನಿಗೆ ಬೇರೇನು ಬೇಕು? ಮತ್ತು ಈ ಎಲ್ಲಾ ಲಾಭಗಳ ಹೊರತಾಗಿ, ದೇವರನ್ನು ಸಾಕ್ಷಾತ್ಕರಿಸಿಕೊಳ್ಳುವಲ್ಲಿ ಅದು ನಿಮಗೆ ಸಹಾಯ ಮಾಡುತ್ತದೆ. ದೇವರನ್ನು ಸಾಕ್ಷಾತ್ಕರಿಸಿಕೊಳ್ಳಲು ಹಾಗೂ ಪಡೆಯಲಿರುವ ಒಂದೇ ಮಾರ್ಗವೆಂದರೆ ಧ್ಯಾನ.

ಒಂದು ಮಾತಿದೆ, "ನಾನ್ಯ ಪಂಥಾ ವಿದ್ಯತೇ ಅಯನಾಯ" (ಪುರುಷ ಸೂಕ್ತ, ಋಗ್ವೇದದ ಶ್ಲೋಕ). ಇದರರ್ಥ: ದೇವರ ಸಾಕ್ಷಾತ್ಕಾರಕ್ಕೆ ಧ್ಯಾನವಲ್ಲದೆ ಬೇರೆ ದಾರಿಯಿಲ್ಲ. ದೇವರೊಂದಿಗೆ ಒಂದುಗೂಡಲು ಧ್ಯಾನವು ಮಾತ್ರ ಒಬ್ಬನಿಗೆ ಸಹಾಯ ಮಾಡಬಲ್ಲದು.

ಪ್ರಶ್ನೆ: ಗುರುದೇವ, ಆಧ್ಯಾತ್ಮದಲ್ಲಿ ನಂಬಿಕೆ ಮೊದಲು ಬರುತ್ತದೆ, ನಂತರ ಅನುಭವವಾಗುತ್ತದೆ, ಆದರೆ ಒಂದು ವೈಜ್ಞಾನಿಕ ಮನೋಭಾವವಿರುವ ಜನರಿಗೆ ಅದು ತದ್ವಿರುದ್ಧವೆಂಬುದಾಗಿ ನೀವು ಹೇಳಿರುವಿರಿ. ಇದು ಸ್ವಲ್ಪ ವಿರೋಧಾತ್ಮಕವೆಂದು ಅನ್ನಿಸುತ್ತದೆ ಮತ್ತು ನನಗದು ಅರ್ಥವಾಗಲಿಲ್ಲ. ದಯವಿಟ್ಟು ತಾವು ವಿವರಿಸುವಿರೇ?

ಶ್ರೀ ಶ್ರೀ ರವಿ ಶಂಕರ್: ಇಲ್ಲ, ನನಗನಿಸುತ್ತದೆ ನೀನೆಲ್ಲೋ ಅದನ್ನು ತಪ್ಪಾಗಿ ಅರ್ಥೈಸಿಕೊಂಡಿರುವೆ. ಅದು, ವಿಷಯಗಳನ್ನು ನೋಡುವ ರೀತಿಯಲ್ಲಿ ಪೌರಾಸ್ತ್ಯ ಮತ್ತು ಪಾಶ್ಚಿಮಾತ್ಯಗಳ ನಡುವೆಯಿರುವ ವ್ಯತ್ಯಾಸವಾಗಿದೆ. ಪೂರ್ವದಲ್ಲಿ, ನಾವು ಯಾವತ್ತೂ ಹೇಳುವುದೇನೆಂದರೆ ಮೊದಲು ಅನುಭವವಾಗಬೇಕು, ಆನಂತರ ಮಾತ್ರವೇ ನೀವು ಆ ಪರಿಕಲ್ಪನೆಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳುತ್ತೀರಿ ಮತ್ತು ಗ್ರಹಿಸಿಕೊಳ್ಳುತ್ತೀರಿ. ಆದರೆ ಪಾಶ್ಚಿಮಾತ್ಯದಲ್ಲಿ, ಮೊದಲು ನೀವು ವಿಷಯವನ್ನು ನಂಬಬೇಕು ಮತ್ತು ತಿಳಿದುಕೊಳ್ಳಬೇಕು, ಹಾಗೂ ನಂತರ ನಿಮಗೆ ಅನುಭವವಾಗುತ್ತದೆ. ಇವುಗಳು ಎರಡು ಬೇರೆ ಬೇರೆ ರೀತಿಗಳು.

ಅದು ಯಾಕೆಂದರೆ ಪಾಶ್ಚಿಮಾತ್ಯದಲ್ಲಿ ವಿಜ್ಞಾನ ಮತ್ತು ಆಧ್ಯಾತ್ಮಗಳಲ್ಲಿನ ಕಾರ್ಯಪ್ರಣಾಳಿಯು ವ್ಯತ್ಯಸ್ತವಾಗಿದ್ದು, ಅಲ್ಲಿ ಹಲವಾರು ಸಂಘರ್ಷಗಳಿವೆ. ಸ್ಪ್ಯಾನಿಷ್ ಅನ್ವೇಷಣೆ ನಡೆದಾಗ ಹಲವಾರು ವಿಜ್ಞಾನಿಗಳು ಹತ್ಯೆಗೊಳಗಾಗಿದ್ದು ಮತ್ತು ಚಿತ್ರಹಿಂಸೆಗೊಳಪಟ್ಟಿದ್ದು ಇದೇ ಕಾರಣಕ್ಕಾಗಿ. ಎರಡರ ಕಾರ್ಯಪ್ರಣಾಳಿಗಳು ಅಷ್ಟೊಂದು ಭಿನ್ನವಾಗಿದ್ದುದೇ ಅದಕ್ಕೆ ಕಾರಣ.
ಭಾರತದಲ್ಲಿ, ಒಬ್ಬನೇ ಒಬ್ಬ ವಿಜ್ಞಾನಿಯೂ ಯಾವತ್ತೂ ಮರಣದಂಡನೆಗೆ ಅಥವಾ ವಿಚಾರಣೆಗೆ ಒಳಗಾಗಲಿಲ್ಲ. ಯಾಕೆ ಹಾಗೆ? ಅದು ಯಾಕೆಂದರೆ, ಧರ್ಮ ಮತ್ತು ವಿಜ್ಞಾನ ಎರಡಕ್ಕೂ ಕಾರ್ಯಪ್ರಣಾಳಿಯು ಒಂದೇ ಆಗಿತ್ತು. ಇಲ್ಲಿ ಭಾರತದಲ್ಲಿ ನಾವು "ತತ್ವ ಜ್ಞಾನ" ಎಂದು ಹೇಳುತ್ತೇವೆ. ಅಂದರೆ, ಮೊದಲು ಆಧಾರವಾಗಿರುವ ಮೂಲಭೂತ ತತ್ವವನ್ನು ತಿಳಿದುಕೊಳ್ಳುವುದು. ಆದ್ದರಿಂದ ಮೊದಲು ನಾವು ಪಂಚಭೂತಗಳ; ಅಂದರೆ, ಪೃಥ್ವಿ, ಜಲ, ವಾಯು, ಅಗ್ನಿ ಮತ್ತು ಆಕಾಶಗಳ ಗುಣವನ್ನು ತಿಳಿದುಕೊಳ್ಳುತ್ತೇವೆ. ಅದರ ನಂತರ ನಾವು ಮನಸ್ಸು, ಬುದ್ಧಿ, ಸ್ಮರಣೆ ಶಕ್ತಿ, ಅಹಂಕಾರಗಳನ್ನು ಅರಿತುಕೊಳ್ಳುವತ್ತ ಸಾಗುತ್ತೇವೆ. ಬಳಿಕ ಕೊನೆಯದಾಗಿ ನಾವು ದೇವರನ್ನು ಅರಿತುಕೊಳ್ಳುವತ್ತ ಸಾಗುತ್ತೇವೆ.

ಇಲ್ಲಿ ನಾವು ಯಾವತ್ತೂ ಹೇಳುವುದೇನೆಂದರೆ, ಒಬ್ಬರು ಮೊದಲಿಗೆ ಅನುಭವಿಸಬೇಕೆಂದು. ನೀವು ಉಪನಿಷತ್ತುಗಳನ್ನು ಓದುವಾಗ ಇದು ನಿಮಗೆ ಹೆಚ್ಚು ಅರ್ಥವಾಗುತ್ತದೆ. ಉಪನಿಷತ್ತುಗಳು ನಿಮ್ಮನ್ನು ಒಂದು ಹಂತದಿಂದ ಇನ್ನೊಂದಕ್ಕೆ ಹೆಜ್ಜೆ ಹೆಜ್ಜೆಯಾಗಿ ಕರೆದೊಯ್ಯುತ್ತವೆ. ಪೌರಾಸ್ತ್ಯದಲ್ಲಿ ವಿಜ್ಞಾನ ಮತ್ತು ಆಧ್ಯಾತ್ಮಗಳು ಯಾವತ್ತೂ ಸಂಘರ್ಷದಲ್ಲಿ ಇರದೇ ಇದ್ದುದು ಇದೇ ಕಾರಣಕ್ಕಾಗಿ.