ಬುಧವಾರ, ಜನವರಿ 7, 2015

ಕಠಿಣ ಪರಿಸ್ಥಿತಿ ಸ್ಥೈರ್ಯವನ್ನು ಹೆಚ್ಚಿಸುತ್ತದೆ

೭ ಜನವರಿ ೨೦೧೫
ಡಾಲಸ್, ಅಮೇರಿಕಾ

ಪ್ರಶ್ನೆ: ನನ್ನ ಅತ್ತೆಯವರು ನಮ್ಮನ್ನು ಭೇಟಿ ಮಾಡಲು ಬರುವಾಗ, ನಾನು ಕೇಳಿರುವ ಎಲ್ಲಾ ಜ್ಞಾನವೂ ನನ್ನಿಂದ ಮಾಯವಾಗಿಬಿಡುವುದೆಂದು ತೋರುತ್ತದೆ. ಯಾವಾಗಲೂ ಒರಟಾದ ರೀತಿಯಲ್ಲಿ ವರ್ತಿಸುವ ಒಬ್ಬರನ್ನು ಮರೆತುಬಿಡುವುದು ಮತ್ತು ಕ್ಷಮಿಸುವುದು ಹೇಗೆ? ದಯವಿಟ್ಟು ಅತ್ತೆಯವರಿಗೆ ಸಲಹೆ ನೀಡಿ.

ಶ್ರೀ ಶ್ರೀ ರವಿ ಶಂಕರ್: ಕೇಳು, ನಿನ್ನ ತಾಯಿಯವರು ಹೇಗೆ ವರ್ತಿಸುತ್ತಾರೆಂದು ನೀನೊಮ್ಮೆ ನೋಡಬೇಕೆಂದು ನಾನು ಬಯಸುತ್ತೇನೆ. ಎಷ್ಟು ಸಲ ನೀನು ನಿನ್ನ ಸ್ವಂತ ತಾಯಿಯೊಂದಿಗೆ ಜಗಳ ಮಾಡಿದ್ದೀಯಾ ಮತ್ತು ಎಷ್ಟು ಸಲ ಅವರು ನಿನ್ನ ಮೇಲೆ ಹತಾಶರಾಗಿದ್ದರು? ನಿನಗೆ ನಿನ್ನ ತಾಯಿಯಿಂದ ಬೈಗುಳ ಸಿಕ್ಕಿಲ್ಲವೇ? ಯಾವುದೇ ಹುಡುಗಿ ಅಥವಾ ಹುಡುಗ ತನ್ನ ತಾಯಿಯಿಂದ ಬೈಯಿಸಿಕೊಳ್ಳದೆಯೇ ಬೆಳೆದಿರಬಹುದೆಂದು ನನಗನ್ನಿಸುವುದಿಲ್ಲ. ನನಗೆ ನನ್ನ ತಾಯಿಯವರಿಂದ ಬಹಳಷ್ಟು ಬೈಗುಳ ಸಿಕ್ಕಿದೆ. ನಾನು ಅವರಷ್ಟು ಚೆನ್ನಾಗಿ ಕಾರ್ಯಗಳನ್ನು ಮಾಡುವುದಿಲ್ಲವೆಂದೂ, ಅವರು ಯಾವತ್ತೂ ಹೆಚ್ಚು ಚೆನ್ನಾಗಿ ತಿಳಿದಿದ್ದರೆಂದೂ ಅವರು ಯಾವಾಗಲೂ ಅಂದುಕೊಳ್ಳುತ್ತಿದ್ದರು.

ಆಶ್ರಮವನ್ನು ನಡೆಸುವ ಬಗ್ಗೆ ಕೂಡಾ ಅವರು ಹೀಗೆಂದು ಹೇಳುತ್ತಿದ್ದರು, "ಇಲ್ಲ, ನೀನು ಆಶ್ರಮವನ್ನು ಸರಿಯಾಗಿ ನಡೆಸುತ್ತಿಲ್ಲ". ನನ್ನ ಅತ್ಯಂತ ದೊಡ್ಡ ವಿಮರ್ಶಕಿಯೆಂದರೆ ನನ್ನ ಸ್ವಂತ ತಾಯಿಯವರಾಗಿದ್ದರು. ಹೀಗೆ ಈ ಅನುಭವವಿದೆ. ನಿನ್ನ ತಾಯಿಯವರು ನಿನ್ನ ಬಗ್ಗೆ ವಿಮರ್ಶೆ ಮಾಡುವಾಗ, ನೀನು ಅವರೊಂದಿಗೆ ಜಗಳ ಮಾಡಿ ನಂತರ ಅದನ್ನು ಮರೆತು ಬಿಡುತ್ತೀಯಾ. ಅದು ನಿಜಕ್ಕೂ ನಿನ್ನನ್ನು ಮುಟ್ಟುವುದಿಲ್ಲ. ನೆನಪಿಟ್ಟುಕೋ, ನಿನ್ನ ತಾಯಿ ಮತ್ತು ನಿನ್ನ ಅತ್ತೆ ಇಬ್ಬರೂ ಒಂದೇ ವಯಸ್ಸಿನವರು, ಒಂದೇ ರೀತಿಯವರು ಮತ್ತು ಒಂದೇ ಗುಂಪಿಗೆ ಸೇರಿದವರು. ನಿನ್ನ ತಾಯಿಯವರು ನಿನಗೆ ಬೈಯುತ್ತಿದ್ದುದರಲ್ಲಿ ಕೇವಲ ೧೦% ದಷ್ಟು ಮಾತ್ರ ಅವರು ನಿನಗೆ ಬೈಯುತ್ತಾರೆ, ಮತ್ತೆ ಯಾಕೆ ಅದು ನಿನಗೆ ಆಳವಾಗಿ ನೋಯಿಸುತ್ತದೆ? ಹೀಗಾಗಿ, ಸುಮ್ಮನೆ ಅವರನ್ನು ಸ್ವೀಕರಿಸು. ನಿನಗೆ ಅವರನ್ನು ಬದಲಾಯಿಸಲು ಸಾಧ್ಯವಿಲ್ಲ.

ನೀನು ನಿನ್ನ ಜ್ಞಾನವನ್ನು ಇತರ ಸಮಯಗಳಲ್ಲಿ ಮರೆತರೆ ಅದು ಪರವಾಗಿಲ್ಲ. ಆದರೆ ನಿನ್ನ ಅತ್ತೆಯವರು ಬರುವಾಗ, ಆಗಲೇ ನಿನ್ನ ಎಲ್ಲಾ ಜ್ಞಾನವೂ ಬೇಕಾಗಿರುವುದು. ಆ ದಿನಗಳಲ್ಲಿ ಜ್ಞಾನದ ಮಾತುಗಳನ್ನು ಕೇಳುವುದನ್ನು ಮರೆಯಬೇಡ.
ಕಛೇರಿಯಲ್ಲಾಗಲೀ ಅಥವಾ ಮನೆಯಲ್ಲಾಗಲೀ ನಿರ್ವಹಿಸಲು ಕಠಿಣವಾಗಿರುವ ಜನರು, ನೀವು ನಿಮ್ಮ ಕುಶಲತೆಗಳನ್ನು ಬೆಳೆಸಿಕೊಳ್ಳುವಲ್ಲಿ ನಿಮಗೆ ಸಹಾಯ ಮಾಡುತ್ತಾರಷ್ಟೆ. ನೀವು ನಿಜವಾಗಿಯೂ ಅವರಿಗೆ ಧನ್ಯವಾದವನ್ನರ್ಪಿಸಬೇಕು. ಅವರು ನಿಮ್ಮನ್ನು ಹೆಚ್ಚು ಕುಶಲರನ್ನಾಗಿ, ಹೆಚ್ಚು ಪರಿಷ್ಕೃತರನ್ನಾಗಿ, ಹೆಚ್ಚು ಸಹಾನುಭೂತಿಯುಳ್ಳವರನ್ನಾಗಿ ಮಾಡುತ್ತಾರೆ ಮತ್ತು ನಿಮ್ಮ ಕೆಟ್ಟ ಮುಖವು ವ್ಯಕ್ತವಾಗುವುದಕ್ಕೆ ಬದಲಾಗಿ, ನಿಮ್ಮೆಲ್ಲಾ ಒಳ್ಳೆಯ ಗುಣಗಳು ವ್ಯಕ್ತವಾಗಲು ಆರಂಭವಾಗಬಹುದು.
ನೋಡಿ, ಇದು ಇರುವ ವ್ಯತ್ಯಾಸ. ನಿಮ್ಮಲ್ಲಿ ಜ್ಞಾನವಿದ್ದರೆ, ಕಠಿಣ ಪರಿಸ್ಥಿತಿಗಳಲ್ಲಿವಿವೇಕವು ಪ್ರಕಟಗೊಳ್ಳುತ್ತದೆ ಮತ್ತು ಅದರಿಂದಾಗಿ ಒಳ್ಳೆಯ ವಿಚಾರಗಳು ಪ್ರಕಟವಾಗುತ್ತವೆ. ನಿಮ್ಮಲ್ಲಿ ಕುಶಲತೆಗಳ ಕೊರತೆಯಿದ್ದರೆ, ಅದರಿಂದಾಗಿ ಅತ್ಯಂತ ಕೆಟ್ಟ ವಿಚಾರಗಳು ಹೊರಬರುತ್ತವೆ. ಹೀಗಾಗಿ ಈ ಒಂದು ವಿಷಯದಲ್ಲಿ ನಾವು ನಿಪುಣರಾಗಬೇಕು. ಏನು? ವ್ಯಕ್ತಪಡಿಸುವ ಮತ್ತು ಸಂಪರ್ಕಿಸುವ ಕುಶಲತೆಯಲ್ಲಿ ನಿಪುಣರಾಗಿ ಮತ್ತು ಹಾಗೆ ಮಾಡುವುದಕ್ಕಾಗಿ ಇದನ್ನು ಒಂದು ಅವಕಾಶವೆಂಬಂತೆ ಹಿಡಿದುಕೊಳ್ಳಿ.

ಪ್ರಶ್ನೆ: ಗುರುದೇವ, ನಾವು ಯಾರೆಂಬುದನ್ನು ಹಾಗೂ ನಾವು ಎಲ್ಲಿಂದ ಬಂದಿರುವೆವು ಎಂಬುದನ್ನು ತಿಳಿದುಕೊಳ್ಳದೆ ನಾವು ಈ ಪ್ರಪಂಚದಿಂದ ನಿರ್ಗಮಿಸಬಾರದೆಂದು ನೀವು ಹೇಳಿದ ಒಂದು ಬರಹವನ್ನು ನಾನೊಮ್ಮೆ ಓದಿದ್ದೆ. ನನ್ನ ಉದ್ದೇಶವನ್ನು ತಿಳಿಯಲು ದಯವಿಟ್ಟು ನನಗೆ ಮಾರ್ಗದರ್ಶನ ಮಾಡಿ. 

ಶ್ರೀ ಶ್ರೀ ರವಿ ಶಂಕರ್: ಆತ್ಮ-ಚಿಂತನೆಯ ಈ ಬಯಕೆ ಮತ್ತು "ನಾನು ಯಾರು?" ಎಂದು ತಿಳಿಯುವ ಇಚ್ಛೆಯೇ ನಮ್ಮನ್ನು ಮಾನವರನ್ನಾಗಿಸುತ್ತದೆ. ಇದು ಬಹಳ ಮುಖ್ಯ. ಈ ಪ್ರಶ್ನೆಯು ನಮ್ಮ ಮನಸ್ಸು ಅಚ್ಚರಿಗೊಳ್ಳುವಂತೆ ಮಾಡುತ್ತದೆ ಹಾಗೂ ನಮ್ಮ ಜೀವನಕ್ಕೆ ಗಹನತೆಯನ್ನೂ ವೈಶಾಲ್ಯತೆಯನ್ನೂ ನೀಡುತ್ತದೆ. ಹೀಗಾಗಿ ಮೊದಲು, ನಿನಗೆ ಈ ಪ್ರಶ್ನೆ ಬಂದುದಕ್ಕಾಗಿಯೇ ಸಂತೋಷ ಪಡು. ಮತ್ತೆ ನಿನ್ನಲ್ಲಿ ಸ್ವಲ್ಪ ತಾಳ್ಮೆ ಇರಬೇಕಾಗುತ್ತದೆ. ಅದು ಬಹಳ ಮುಖ್ಯ.
"ಚೆನ್ನಾಗಿ ಶುರುವಾದುದು ಅರ್ಧ ಮುಗಿದಂತೆಯೇ" ಎಂಬ ಗಾದೆ ಮಾತು ನಿಮಗೆ ತಿಳಿದಿದೆಯೇ? ಇದು ಅರ್ಧಕ್ಕಿಂತಲೂ ಹೆಚ್ಚಿನದು ಮುಗಿದಂತೆ, ಇದು ಮುಕ್ಕಾಲು ಅಂಶ ಮುಗಿದಂತೆ.

ಪ್ರಶ್ನೆ: ಒಮ್ಮೆ ನೀವು ಒಂದು ಕೋರ್ಸಿನಲ್ಲಿ ಹೀಗೆಂದು ಹೇಳಿದ್ದಿರಿ, "ಒಂದು ಕಾರಣಕ್ಕಾಗಿ ಧ್ಯಾನ ಮಾಡಬೇಡಿ", ಹಾಗಾದರೆ ಧ್ಯಾನ ಮಾಡುವುದು ಯಾಕೆ?

ಶ್ರೀ ಶ್ರೀ ರವಿ ಶಂಕರ್: ಮೊದಮೊದಲಿಗೆ ಯಾವುದಾದರೂ ಕಾರಣಕ್ಕಾಗಿ ಧ್ಯಾನ ಮಾಡಿದರೆ ಪರವಾಗಿಲ್ಲ. ಆದರೆ ನೀವು ಮುಂದೆ ಸಾಗಿದಂತೆ, ನೀವದನ್ನು ಬಿಟ್ಟುಬಿಡಬೇಕು. ಅದು ಹೇಗೆಂದರೆ, ರೈಲಿನೊಳಕ್ಕೆ ಅಥವಾ ವಿಮಾನದೊಳಕ್ಕೆ ಹೋಗಲು ನೀವು ನಿಮ್ಮ ಸಾಮಾನಿನ ಪೆಟ್ಟಿಗೆಯನ್ನು ಹೊರಬೇಕು. ಒಮ್ಮೆ ನೀವು ವಿಮಾನದೊಳಕ್ಕೆ ಹೋದ ಬಳಿಕ, ನೀವದನ್ನು ಸಾಮಾನಿರಿಸುವ ವಿಭಾಗದಲ್ಲಿ ಇಟ್ಟು ವಿಶ್ರಾಮ ಮಾಡಬೇಕು. ಅದಕ್ಕಾಗಿಯೇ ಈ ಆಧ್ಯಾತ್ಮಿಕ ಪಥದಲ್ಲಿ, ಬೇರೆ ಬೇರೆ ಸಮಯಗಳಲ್ಲಿ ಬೇರೆ ಬೇರೆ ಸೂಚನೆಗಳಿರುತ್ತವೆ. ಅವುಗಳೆಲ್ಲವೂ ಒಂದಕ್ಕೊಂದು ವಿರೋಧಾತ್ಮಕವಾಗಿ ತೋರಬಹುದು, ಆದರೆ ಅವುಗಳೆಲ್ಲವೂ ಸರಿ ಮತ್ತು ಅವುಗಳನ್ನು ಅನುಸರಿಸಬೇಕು. ಸತ್ಯವು ಗೋಲಾಕಾರದ್ದು. ಅದು ಸಂಕೀರ್ಣವಾದುದು, ಹಾಗೆಯೇ ಅದು ಸರಳವಾದುದು. ಹೀಗಾಗಿ, ಸೂಚನೆಗಳು ಬಹಳ ಗೊಂದಲಮಯವಾಗಿರಬಹುದು, ಆದರೆ ಅದು ಸರಿ.

ಪ್ರಶ್ನೆ: ಒಂದು ಜ್ಞಾನೋದಯಗೊಂಡ ಆತ್ಮವಾಗಿದ್ದುಕೊಂಡು ನಿಮಗೆ, ಯಾವುದೇ ವಿಚಲನೆಯಿಲ್ಲದೆ ಅಥವಾ ಓಡಾಡುತ್ತಿರುವ ಚಿಂತೆಗಳಿಲ್ಲದೆ ನಿಮ್ಮ ಗಮನವನ್ನು ೧೦೦% ಕೇಂದ್ರೀಕೃತಗೊಳಿಸಲು ಸಾಧ್ಯವಾಗುತ್ತದೆ. ಕೆಲಸದಲ್ಲಿ ಅಥವಾ ಶಾಲೆಯಲ್ಲಿ ಆ ರೀತಿ ಮಾಡಲು ನಾವು ಮಾಡಬಹುದಾದದ್ದು ಏನಾದರೂ ಇದೆಯೇ?

ಶ್ರೀ ಶ್ರೀ ರವಿ ಶಂಕರ್: ಸ್ಥಿರವಾಗಿರುವುದು, ಸ್ವಲ್ಪ ವೈರಾಗ್ಯ, ಸ್ವಲ್ಪ ಆಧ್ಯಾತ್ಮಿಕ ಸಾಧನೆ ಮತ್ತು ಸ್ವಲ್ಪ ವಿಶ್ವಾಸ, ಅಷ್ಟೇ. "ಎಲ್ಲಾ ಸರಿಹೋಗುತ್ತದೆ", ಆ ವಿಶ್ವಾಸವು ಮನಸ್ಸನ್ನು ಬಡಬಡಿಸಲು ಬಿಡುವುದಿಲ್ಲ. ಅಲ್ಲಿ ಇಲ್ಲಿ ಅದು ಬಡಬಡಿಸಿದರೂ, ಅದು ಬಹಳ ಬೇಗನೇ ಹಿಂತಿರುಗಿ ಬರುತ್ತದೆ.

ಪ್ರಶ್ನೆ: ಗುರುದೇವ, ಕೃಪೆ ಮತ್ತು ಸಮರ್ಪಣೆ ಇವುಗಳನ್ನು ನಾನು ಸಂಪೂರ್ಣವಾಗಿ ತಿಳಿದಿದ್ದೇನೆ ಮತ್ತು ನಾನು ಸಮರ್ಪಣೆ ಮಾಡಲು ಬಯಸುತ್ತೇನೆ. ಆದರೆ ನನಗೆ ಸಾಧ್ಯವಾಗುತ್ತಿಲ್ಲ. ಹೇಗೆಂದು ದಯವಿಟ್ಟು ನನಗೆ ತಿಳಿಸಿ.

ಶ್ರೀ ಶ್ರೀ ರವಿ ಶಂಕರ್: ಕೇಳು, ಸಮರ್ಪಣೆ ಇದೆಲ್ಲದರ ಬಗ್ಗೆ ಚಿಂತಿಸಬೇಡ. ಈ ಸಮರ್ಪಣೆ ಎಂಬ ಪದದೊಂದಿಗೆ ಯಾಕೆ ನೀನು ಹೋರಾಡುತ್ತಿರುವೆ? ಯಾವುದನ್ನೂ ಸಮರ್ಪಿಸಬೇಕಾಗಿಲ್ಲವೆಂದು ನಾನು ಹೇಳುತ್ತೇನೆ, ಎಲ್ಲವನ್ನೂ ಹಿಡಿದಿಟ್ಟುಕೋ. ನೀನು ಹೇಗಿರುವೆಯೋ ಹಾಗೆಯೇ ದೇವರು ನಿನ್ನನ್ನು ಪ್ರೀತಿಸುತ್ತಾರೆ ಮತ್ತು ನೀನು ಎಲ್ಲೇ ಇದ್ದರೂ ಹೇಗಿದ್ದರೂ ನೀನು ದೇವರೊಂದಿಗೆ ಇರುತ್ತೀಯಾ. ನೀನು ದೇವರಿಂದ ದೂರ ಹೋಗಲು ಸಾಧ್ಯವೇ ಇಲ್ಲ. ಹೀಗಾಗಿ ನಿನಗೆ ಸಮರ್ಪಿಸಲು ಏನಿದೆ? ಎಲ್ಲವೂ ಹೇಗಿದ್ದರೂ ಪ್ರಕೃತಿಗೆ ಸೇರಿದ್ದು; ದೇವರಿಗೆ ಸೇರಿದ್ದು. ಹೌದು, ನಿನ್ನ ನಕಾರಾತ್ಮಕತೆ ಮತ್ತು ನಿನ್ನ ಚಿಂತೆಗಳು ಅತಿಯಾದವೆಂದು ನಿನಗನ್ನಿಸುವಾಗ, ಮತ್ತು ನಿನಗೆ ಇನ್ನು ಮುಂದೆ ಅವುಗಳನ್ನು ಸಹಿಸಲು ಅಸಾಧ್ಯವಾದಾಗ, ಈ ಉಪಾಯವನ್ನು ನೀಡಲಾಯಿತು - ನೀನದನ್ನು ಸಮರ್ಪಿಸಬೇಕೆಂದು.

ನಾನು ಹೇಳುವುದೇನೆಂದರೆ, ಸಮರ್ಪಣೆ ಕೂಡಾ ಒಂದು ನಾಟಕ. ನೀನು ಸುಮ್ಮನೇ ಎಚ್ಚೆತ್ತುಕೊಂಡು ಇದನ್ನು ಅರಿಯಬೇಕು, "ಯಾವುದೂ ನನ್ನ ಸ್ವಂತದ್ದಲ್ಲ. ಎಲ್ಲವೂ ಹೇಗಿದ್ದರೂ ಒಂದು ದೈವಿಕತೆಗೆ ಸೇರಿದ್ದು". ಹೀಗಾಗಿ ಅದರ ಬಗ್ಗೆ ಚಿಂತೆ ಮಾಡಬೇಡ.
ನೀನು ಹತಾಶನಾದಾಗ ನೀನು, "ನಾನು ಬಿಟ್ಟುಕೊಡುತ್ತೇನೆ" ಎಂದು ಹೇಳುವೆ. "ನಾನು ಬಿಟ್ಟುಕೊಡುತ್ತೇನೆ" ಎಂದು ನೀನು ಸಂತೋಷವಾಗಿ ಹೇಳಲು ಸಾಧ್ಯವಾದರೆ, ಆಗ ನೀನು ಹತಾಶನಾಗುವುದೇ ಇಲ್ಲ. ಎಲ್ಲವೂ ಹೇಗಿದ್ದರೂ "ಮೇಲಿನಿಂದ" ನಡೆಯುತ್ತದೆ ಎಂಬುದನ್ನು ನೀನು ಸುಮ್ಮನೇ ಅರಿತುಕೊಳ್ಳುವೆ ಮತ್ತು ಅಷ್ಟೇ. ಹೇಗಿದ್ದರೂ, ಎಲ್ಲವೂ ಮೇಲಿರುವ ಒಬ್ಬನಿಗೆ ಅಥವಾ ನಿನ್ನೊಳಗೆ ಆಳದಲ್ಲಿರುವ ಒಬ್ಬನಿಗೆ ಸೇರಿದ್ದು, ಅಷ್ಟೇ. ಮುಖ್ಯವಾದ ವಿಷಯವೆಂದರೆ ವಿಶ್ರಾಮ ಮಾಡುವುದು ಮತ್ತು ನಿನ್ನಲ್ಲಿಯೇ ನೀನು ವಿರಮಿಸುವುದು.

ಪ್ರಶ್ನೆ: ಪ್ರೀತಿಯ ಗುರುದೇವ, ಈ ದಿನಗಳಲ್ಲಿ ಹಲವಾರು ಮಕ್ಕಳಲ್ಲಿ ಸ್ವಲೀನತೆ (ಆಟಿಸಂ) ಖಾಯಿಲೆಯಿರುವುದು ಪತ್ತೆಹಚ್ಚಲ್ಪಡುತ್ತಿದೆ. ಇದು ಯಾಕೆ ಹೀಗೆ?

ಶ್ರೀ ಶ್ರೀ ರವಿ ಶಂಕರ್: ಇಲ್ಲಿರುವ ವಿಜ್ಞಾನಿಗಳಲ್ಲಿ ಕೆಲವರು ಅದರ ಬಗ್ಗೆ ಸಂಶೋಧನೆ ಮಾಡಬೇಕೆಂದು ನಾನು ಬಯಸುತ್ತೇನೆ. ಈ ಆಟಿಸಂನ ಕಾರಣವೇನು? ಒಬ್ಬಳು ಮಹಿಳೆಯು ಗರ್ಭಿಣಿಯಾಗಿರುವಾಗ ಅವಳು ತಿನ್ನುವ ಆಹಾರವೇ ಅಥವಾ ಇದು ನಾವು ಸೇವಿಸುವ ಜಿ.ಎಮ್.ಒ. (ಜೆನೆಟಿಕಲ್ಲೀ ಮೋಡಿಫೈಡ್ ಆರ್ಗೇನಿಸಮ್: ತಳೀಯವಾಗಿ ಬಬದಲಾಯಿಸಲ್ಪಟ್ಟ ಜೀವಿ) ಮತ್ತು ಎಮ್.ಎಸ್.ಜಿ.(ಮೋನೋ ಸೋಡಿಯಮ್ ಗ್ಲುಟಮೇಟ್)ಯೇ? ನಾವು ಸೇವಿಸುವ ಈ ಎಲ್ಲಾ ಗೊಬ್ಬರಗಳು ಹಾಗೂ ಗೊಬ್ಬರಗಳ ಅಲ್ಪಸ್ವಲ್ಪ ಅವಶೇಷಗಳು ಇದಕ್ಕೆ ಕಾರಣವಾಗಿವೆಯೇ? ಬಹಳ ಅಲ್ಪವನ್ನು ಹೊಂದಿದ ಜನರಿರುವಂತಹ ಬಡದೇಶಗಳಲ್ಲಿ ನೀವಿದನ್ನು ಬಹಳವಾಗಿ ಕಾಣುವುದಿಲ್ಲ. ಇಲ್ಲಿ ನಮ್ಮಲ್ಲಿ ಎಲ್ಲವೂ ಇರುವಾಗ, ಮತ್ತೆ ಯಾಕೆ ಈ ಸಮಸ್ಯೆಯು ಬೆಳೆಯುತ್ತಿದೆ? ನಾವು ಇದರ ಬಗ್ಗೆ ಗಮನ ಹರಿಸಬೇಕು.

ಇದು ತ್ವರಿತ ಆಹಾರ(ಫಾಸ್ಟ್ ಫುಡ್)ದಿಂದಾಗಿಯೇ? ಇದು ಮೈಕ್ರೋವೇವ್ ಅವನ್‌ಗಳಿಂದಾಗಿಯೇ? ಯಾವುದು ಇದಕ್ಕೆ ಕಾರಣ? ಕೆಲವು ವಿಜ್ಞಾನಿಗಳು ಇದರ ಬಗ್ಗೆ ಸ್ವಲ್ಪ ಅಧ್ಯಯನ ಮಾಡಬೇಕೆಂದು ನಾನು ಇಚ್ಛಿಸುತ್ತೇನೆ. ಇದೊಂದು ಒಳ್ಳೆಯ ಉಪಾಯವೆಂದು ನಿಮಗನ್ನಿಸುವುದಿಲ್ಲವೇ? ಒಂದು ಸ್ವತಂತ್ರವಾದ ಅಧ್ಯಯನವು ಸಹಾಯಕವಾಗಬಹುದು; ತನ್ನದೇ ಆದ ನಿಹಿತ ಸ್ವಾರ್ಥವಿರುವ ಒಂದು ಕಂಪೆನಿಯ ಮೂಲಕವಾಗಿಯಲ್ಲ.

ಪ್ರಶ್ನೆ: ನಮ್ಮ ಶರೀರದಲ್ಲಿ ನಮ್ಮ ಆತ್ಮವು ಎಲ್ಲಿದೆ?

ಶ್ರೀ ಶ್ರೀ ರವಿ ಶಂಕರ್: ಕೇಳು, ನೀನು ಆತ್ಮ, ಸರಿ ತಾನೆ? ಆತ್ಮವು ನಿನ್ನಿಂದ ಬೇರೆಯಾಗಿದೆಯೇ? ಮತ್ತು ನಿನಗೊಂದು ಶರೀರವಿದೆ. ಹೀಗಾಗಿ, ಅದನ್ನು ನೋಡಿ ನಿನ್ನ ಶರೀರದಲ್ಲಿ ನೀನು ಎಲ್ಲಿರುವೆಯೆಂದು ನೀನು ಯಾಕೆ ತಿಳಿಯಬಾರದು? ಈ ಪ್ರಶ್ನೆಯು ನಿನಗೊಂದು ಬಹಳ ಒಳ್ಳೆಯದಾದ ಮನೆಕೆಲಸವಾಗಬಲ್ಲದು. ನೀನು ಸುಮ್ಮನೆ ಕುಳಿತುಕೊಂಡು, "ನನ್ನ ಶರೀರದಲ್ಲಿ ನಾನು ಎಲ್ಲಿದ್ದೇನೆ?" ಎಂದು ಹೇಳಿದರೆ ಅದು ಬಹಳ ಒಳ್ಳೆಯದು.

ಪ್ರಶ್ನೆ: ಪ್ರೀತಿಯ ಗುರುದೇವ, ನಿಮ್ಮ ಭಕ್ತ ಹಾಗೂ ಯೇಸುಕ್ರಿಸ್ತನ ಭಕ್ತ ಇವೆರಡೂ ಏಕಕಾಲಕ್ಕೆ ಆಗಲು ಸಾಧ್ಯವಿದೆಯೇ?

ಶ್ರೀ ಶ್ರೀ ರವಿ ಶಂಕರ್: ಕೇಳು, ನೀನೊಬ್ಬ ಭಕ್ತನಾಗಿದ್ದರೆ ಅಷ್ಟು ಸಾಕು. ಒಂದೇ ಒಂದು ಪ್ರಜ್ಞೆಯಿರುವುದು, ಅಷ್ಟೇ. ಎಲ್ಲರಲ್ಲಿ ಒಬ್ಬರನ್ನು ಮತ್ತು ಒಬ್ಬರಲ್ಲಿ ಎಲ್ಲರನ್ನು ಕಾಣು. ಬಹಳ ಹಿಂದೆ, ೩೦ ವರ್ಷಗಳ ಮೊದಲು ಇಂಗ್ಲೇಂಡಿನಲ್ಲಿ ನನ್ನನ್ನು ಭೇಟಿಯಾದ ಒಬ್ಬರು ಕ್ಯಾಥೋಲಿಕ್ ಸನ್ಯಾಸಿನಿ ನನಗೆ ನೆನಪಿದ್ದಾರೆ. ಆಗ ಅವರಿಗೆ ಬಹಳ ವಯಸ್ಸಾಗಿತ್ತು ಮತ್ತು ಅವರು ಏನು ಹೇಳಿದರೆಂದು ನಿನಗೆ ಗೊತ್ತೇ? ಅವರಂದರು, "ಬೆಳಗ್ಗೆ ನೀವು ನೋಡುವ ಮೊದಲ ವ್ಯಕ್ತಿಯಲ್ಲಿ ನೀವು ಯೇಸುಕ್ರಿಸ್ತನನ್ನು ಕಾಣುವುದಿಲ್ಲವೆಂದಾದರೆ, ನೀವು ಅವನನ್ನು ಎಂದಿಗೂ ಕಾಣಲಾರಿರಿ".

ಹೀಗಾಗಿ, ಪ್ರೀತಿ, ಒಂದಾಗಿರುವಿಕೆ ಮತ್ತು ಸಹಾನುಭೂತಿ ಇದುವೇ ಇಡಿಯ ತತ್ವ ಹಾಗೂ ಆರ್ಟ್ ಆಫ್ ಲಿವಿಂಗ್ ಇದೇ ಆಗಿದೆ.

ಪ್ರಶ್ನೆ: ಗುರುದೇವ, "ಅಯಾಹುವಾಸ್ಕ" ಎಂಬ ಒಂದು ಔಷಧಿ (ಮಾದಕ ದ್ರವ್ಯ) ಇದೆಯೆಂದೂ ಅದು ಆಧ್ಯಾತ್ಮಿಕ ಪ್ರಗತಿಗೆ ನೆರವಾಗುವುದೆಂದೂ ನಾನು ಕೇಳಿದ್ದೇನೆ. ನಮ್ಮನ್ನು ದೇವರಿಂದ ದೂರವಿರಿಸುವ ಅಡೆತಡೆಗಳನ್ನು ಮತ್ತು ಭಯಗಳನ್ನು ಅದು ಹೊರಹಾಕುತ್ತದೆಯೆಂದು ತೋರುತ್ತದೆ. ಅದು ಹೆಚ್ಚಾಗಿ ದಕ್ಷಿಣ ಅಮೇರಿಕಾದಲ್ಲಿ ಸಿಗುತ್ತದೆ. ಅಂತಹ ಒಂದನ್ನು ನೀವು ಶಿಫಾರಸು ಮಾಡುವಿರೇ? ಅದೊಂದು ಪ್ರಾಕೃತಿಕವಾದ ಮೂಲಿಕೆ. 

ಶ್ರೀ ಶ್ರೀ ರವಿ ಶಂಕರ್: ಹೌದು, ಕೊಕೈನ್ ಕೂಡಾ ಪ್ರಾಕೃತಿಕವಾದುದೇ. ಅದು ಕೂಡಾ ಒಂದು ಮೂಲಿಕೆ, ಆದರೆ ಅದರಿಂದ ದೂರವಿರು.

ಮಾದಕದ್ರವ್ಯಗಳನ್ನು ಸೇವಿಸಿದ ಜನರನ್ನು ನೋಡು, ಅವರು ಭಾವಪರವಶತೆಯಲ್ಲಿರುವಂತೆ ಕಾಣುತ್ತಾರೆಯೇ? ಇಲ್ಲವೇ ಇಲ್ಲ. ನೀನು ಅವರನ್ನು ನೋಡಿದರೆ, ನಿನಗೆ ಅವರ ಮೇಲೆ ಕರುಣೆಯುಂಟಾಗುತ್ತದೆ. ಅವರೆಲ್ಲಾ ಶಕ್ತಿಯು ಬತ್ತಿಹೋಗುತ್ತದೆ. ಮತ್ತು ಮೇಲಾಗಿ, ಒಂದು ಸೂಕ್ಷ್ಮ ಮಟ್ಟದಲ್ಲಿ, ಅವರ ಪ್ರಭಾಮಂಡಲವು ಸಂಪೂರ್ಣವಾಗಿ ತುಂಡಾಗುತ್ತದೆ. ಮಾದಕ ದ್ರವ್ಯಗಳನ್ನುಪಯೋಗಿಸುವ ಜನರ ಸೂಕ್ಷ್ಮ ಶರೀರವು (ಪ್ರಾಣ ಶರೀರ)ಛಿದ್ರಛಿದ್ರವಾಗುತ್ತದೆ ಮತ್ತು ಅವರ ಪ್ರಭಾಮಂಡಲವೆಲ್ಲಾ ತುಂಡಾಗುತ್ತದೆ. ಹೀಗಾಗಿ, ಯಾವತ್ತೂ ಆ ವಸ್ತುಗಳನ್ನು ಉಪಯೋಗಿಸಬೇಡಿ. ನಿಮ್ಮ ಉಸಿರನ್ನು ಬಳಸಿ ಅಷ್ಟೆ.

ಪ್ರಾಣಾಯಾಮ, ಸುದರ್ಶನ ಕ್ರಿಯೆ ಮತ್ತು ಧ್ಯಾನಗಳೊಂದಿಗೆ ನೀವು ಎತ್ತರಕ್ಕೇರಬಹುದು ಮತ್ತು ಆರೋಗ್ಯವಂತರಾಗಬಹುದು, ಹಾಗೂ ಇದರೊಂದಿಗೆ ಹಲವಾರು ಜನರು ಮಾದಕದ್ರವ್ಯಗಳಿಂದ ಹೊರಬಂದಿದ್ದಾರೆ. ಇದನ್ನು ಮಾಡಲು ಹಣವನ್ನು ಖರ್ಚು ಮಾಡಬೇಕಾಗಿಲ್ಲವೆಂದು ಅವರು ಅರಿಯುತ್ತಾರೆ. ನೀವೆಲ್ಲೇ ಕುಳಿತು ಧ್ಯಾನ ಮಾಡಿದರೂ ನೀವು ಅತ್ಯಾನಂದದಲ್ಲಿರುತ್ತೀರಿ. ಇದೊಂದು ಬಹಳ ಒಳ್ಳೆಯ ವಿಷನಾಶಕವಾಗಿದೆ.

ನೀವು ಶಕ್ತಿ ಕ್ರಿಯೆ ಮಾಡಿಲ್ಲವಾದರೆ, ನೀವದನ್ನು ಮಾಡಬೇಕು. ೨೦ ನಿಮಿಷಗಳ ಶಕ್ತಿ ಕ್ರಿಯೆಯಲ್ಲಿ ನೀವು ನಿಮ್ಮನ್ನು ಶಕ್ತಿಯ ಒಂದು ಉನ್ನತವಾದ ಹಾಗೂ ಆಹ್ಲಾದಕರವಾದ ಸ್ಥಿತಿಯಲ್ಲಿ ಪಡೆಯುವಿರಿ.

ಪ್ರಶ್ನೆ: ಗುರುದೇವ, ಆತ್ಮ-ಪ್ರೇಮವು ಅಷ್ಟೊಂದು ಕಷ್ಟ ಯಾಕೆ?

ಶ್ರೀ ಶ್ರೀ ರವಿ ಶಂಕರ್: ಅದು ಕಷ್ಟ ಅಲ್ಲವೇ ಅಲ್ಲ. ಆತ್ಮವೇ ಪ್ರೇಮ, ನಿನಗೆ ಅರ್ಥವಾಗುತ್ತಿದೆಯೇ? ಬಾಲ್ಯದಿಂದಲೇ ನೀವು ಕೆಟ್ಟವರೆಂದು ನಿಮಗೆ ಹೇಳಲಾಯಿತು ಮತ್ತು ಆತ್ಮದ ವೈರಿಯಾಗಿರುವುದು ಮನಸ್ಸು. ಈ ಜ್ಞಾನದ ಮೂಲಕ ಮನಸ್ಸು, "ನಾನು ಪ್ರೇಮ ಮತ್ತು ನಾನು ನನ್ನನ್ನೇ ಪ್ರೀತಿಸುವ ಅಗತ್ಯವಿಲ್ಲ" ಎಂಬುದನ್ನು ಅರ್ಥಮಾಡಿಕೊಳ್ಳುತ್ತದೆ. ಒಂದು ಟಾರ್ಚನ್ನು ನೋಡಲು ನಿಮಗೊಂದು ಟಾರ್ಚಿನ ಅಗತ್ಯವಿಲ್ಲ. ಒಂದು ಮೇಣದಬತ್ತಿಯನ್ನು ನೋಡಲು ನಿಮಗೊಂದು ಮೇಣದಬತ್ತಿಯ ಅಗತ್ಯವಿದೆಯೇ? ಮೇಣದಬತ್ತಿಯೇ ತನ್ನನ್ನು ತೋರಿಸುತ್ತದೆ. ಅದೇ ರೀತಿಯಲ್ಲಿ, ನೀವು ಪ್ರೇಮವಾಗಿರುವಿರಿ. ನೀವು ಕುಳಿತುಕೊಂಡು, "ನಾನು ನನ್ನನ್ನು ಪ್ರೀತಿಸುತ್ತೇನೆ" ಎಂದು ಹೇಳಬೇಕಾದ ಅಗತ್ಯವಿಲ್ಲ.

ನೀವು ಹೇಗೇ ಇದ್ದರೂ, ಅದೆಲ್ಲವನ್ನೂ ದೇವರಿಗೆ ಅರ್ಪಿಸಿ; ನಿಮ್ಮ ಯೋಚನೆಗಳು, ನಿಮ್ಮ ಭಾವನೆಗಳು, ನಿಮ್ಮ ಮನಸ್ಸು - ಸಕಾರಾತ್ಮಕ ಅಥವಾ ನಕಾರಾತ್ಮಕ, ಅದು ಹೇಗೇ ಇರಲಿ, ಅದೆಲ್ಲವನ್ನೂ ಅರ್ಪಿಸಿ ಮುಕ್ತವಾಗಿರಿ. ಇದು ನಿಮ್ಮ ಮನಸ್ಸಲ್ಲ, ಇವುಗಳು ನಿಮ್ಮ ಯೋಚನೆಗಳಲ್ಲ ಎಂಬುದನ್ನು ತಿಳಿಯಿರಿ. ನಿಜವಾಗಿ, ನಿಮಗಿದರ ಅನುಭವವಾಗಿರಬಹುದು - ಕೆಲವೊಮ್ಮೆ ಯಾವುದೇ ಕಾರಣವಿಲ್ಲದೆ ನಿಮಗೆ ಕೋಪ ಬರುತ್ತದೆ ಅಥವಾ ಅಸಮಾಧಾನವಾಗುತ್ತದೆ. ಕೆಲವು ಜನರೊಂದಿಗೆ ಇರುವುದರಿಂದಲೇ ಅಥವಾ ಒಂದು ನಿರ್ದಿಷ್ಟ ಸ್ಥಳದಲ್ಲಿರುವುದರಿಂದಲೇ ಇದ್ದಕ್ಕಿದ್ದಂತೆ ನಿಮಗೆ ಕೋಪ ಬರುತ್ತದೆ. ನಿಮ್ಮಲ್ಲಿ ಎಷ್ಟು ಮಂದಿಗೆ ಇದರ ಅನುಭವವಾಗಿದೆ? ಇದ್ದಕ್ಕಿದ್ದಂತೆ ನಿಮಗೆ ಕೋಪ ಬರುತ್ತದೆ. ಅದು ನಿಮ್ಮದಲ್ಲ. ಆ ಸ್ಥಳದಲ್ಲಿ ಈ ಕಂಪನಗಳಿದ್ದವು ಮತ್ತು ನೀವು ಹೋದಾಗ, ನೀವದನ್ನು ಪ್ರತಿಫಲಿಸಲು ತೊಡಗಿದಿರಿ.

ಹಲವು ಸಲ ನೀವು ಏನನ್ನಾದರೂ ಹೇಳಲು ಬಯಸುವುದಿಲ್ಲ, ಆದರೆ ಕೆಲವು ಜನರ ಕಂಪನಗಳು ನೀವದನ್ನು ಹೇಳುವಂತೆ ಮಾಡುತ್ತದೆ ಮತ್ತು ನಂತರ ನೀವದರ ಬಗ್ಗೆ ಮರುಗುತ್ತೀರಿ. ನಿಮ್ಮಲ್ಲಿ ಎಷ್ಟು ಮಂದಿಗೆ ಈ ಅನುಭವವಾಗಿದೆ?

(ಸಭಿಕರಲ್ಲಿ ಹಲವರು ತಮ್ಮ ಕೈಗಳನ್ನು ಮೇಲೆತ್ತುತ್ತಾರೆ).

ಹೀಗೆ, ನೀವೊಂದು ದ್ವೀಪದಲ್ಲಿ ವಾಸಿಸುತ್ತಿಲ್ಲ. ನಾವು ಇತರರ ಮೇಲೆ ಪರಿಣಾಮ ಬೀರುತ್ತೇವೆ ಮತ್ತು ಇತರರ ಪರಿಣಾಮ ನಮ್ಮ ಮೇಲೆ ಆಗುತ್ತದೆ. ಇದು ನನ್ನ ಗಾಳಿಯೆಂದು ನೀವು ಹೇಳಲು ಸಾಧ್ಯವೇ? ಇಲ್ಲ, ನಿಮ್ಮ ಉಸಿರಿನಿಂದ ಹೊರಬರುವ ಗಾಳಿಯು ಇತರರ ಶ್ವಾಸಕೋಶದೊಳಕ್ಕೂ ಹೋಗುತ್ತದೆ. ನಾವು ಗಾಳಿಯನ್ನು ವಿನಿಮಯ ಮಾಡಿಕೊಳ್ಳುತ್ತೇವೆ. ನೀವು ನಿಮ್ಮ ಗಾಳಿಯನ್ನು ಕೂಡಾ ಕಾಪಾಡಿಕೊಳ್ಳಲು ಸಾಧ್ಯವಿಲ್ಲದಿರುವಾಗ, ಮನಸ್ಸು ಗಾಳಿಗಿಂತ ಸಾವಿರ ಪಾಲು ಸೂಕ್ಷ್ಮವಾದುದು. ಮತ್ತು ಖಂಡಿತವಾಗಿಯೂ ಯೋಚನೆಗಳು ನಿಮ್ಮ ಮೇಲೆ ಪರಿಣಾಮ ಬೀರುತ್ತವೆ ಹಾಗೂ ಇಲ್ಲಿಯೇ ಮಂತ್ರಗಳು ಬಹಳ ಉಪಯೋಗವಾಗುವುದು. ಸಾವಿರಾರು ವರ್ಷಗಳ ವರೆಗೆ ಜನರು ಈ ಮಂತ್ರಗಳನ್ನು ಪಠಿಸಿದ್ದಾರೆ, ಹೀಗಾಗಿ ನೀವು ಕುಳಿತುಕೊಂಡು ಕೆಲವು ನಿಮಿಷಗಳ ಕಾಲ "ಓಂ ನಮಃ ಶಿವಾಯ" ಎಂದು ಜಪಿಸಿದಾಗ, ಅದು ಹೇಗೋ ಮನಸ್ಸನ್ನು ಮತ್ತು ಶಕ್ತಿಯನ್ನು ಬಲಪಡಿಸುತ್ತದೆ ಹಾಗೂ ಇದು ನಿಮ್ಮನ್ನು ಖಿನ್ನತೆಯಿಂದ ದೂರವಿರಿಸುತ್ತದೆ.  

ನಿಮ್ಮ ಸೂಕ್ಷ್ಮ ಶರೀರವು ನಿಮ್ಮ ಭೌತಿಕ ಶರೀರಕ್ಕಿಂತ ದೊಡ್ಡದು. ನಿಮ್ಮ ಪ್ರಾಣ ಶರೀರವು ನಿಮ್ಮ ಭೌತಿಕ ಶರೀರಕ್ಕಿಂತ ಒಂದೂವರೆ ಅಡಿಗಳಷ್ಟು ದೊಡ್ಡದು. ನೀವು "ಫ್ಯಾಂಟಮ್(ಭ್ರಮೆ) ನೋವು" ಎಂಬುದನ್ನು ಕೇಳಿದ್ದೀರಾ? ಅದರಲ್ಲಿ, ಕೈ ಅಥವಾ ಕಾಲನ್ನು ಕತ್ತರಿಸಿ ತೆಗೆಯಲಾದ ಒಬ್ಬ ವ್ಯಕ್ತಿಗೆ, ಹಾಗೆ ತೆಗೆಯಲಾದ ಭಾಗದಲ್ಲಿ ನೋವಿನ ಅನುಭವವಾಗುತ್ತದೆ. ಇದಕ್ಕೇನು ಮಾಡುವುದೆಂದು ವೈದ್ಯರಿಗೆ ತಿಳಿಯುವುದಿಲ್ಲ. ಅಲ್ಲೊಂದು ಭೌತಿಕವಾದ ಕೈಯಿದ್ದರೆ, ನೀವು ಅದರ ಮೇಲೆ ಯಾವುದಾದರೂ ಮುಲಾಮು ಹಚ್ಚಬಹುದು. ಆದರೆ ಅಲ್ಲಿ ಕೈಯಿಲ್ಲ ಮತ್ತು ಅವರಿಗೆ ಅದರಲ್ಲೊಂದು "ಫ್ಯಾಂಟಮ್ ನೋವು" ಇದೆ. ಇದು ಪ್ರಾಣ ಶರೀರ ಅಥವಾ ಸೂಕ್ಷ್ಮ ಶರೀರ. ನೀವು ಪ್ರಾಣಾಯಾಮ, ಸುದರ್ಶನ ಕ್ರಿಯೆ ಮತ್ತು ಧ್ಯಾನ ಮಾಡುವಾಗ, ನೀವು ತಡವಿಲ್ಲದೆ ಕ್ಷಿಪ್ರವಾಗಿ ಅದರಿಂದ ಹೊರಬರಬಹುದು.

ಹೀಗೆ ನಮ್ಮ ಸೂಕ್ಷ್ಮ ಶರೀರವು ನಮ್ಮ ಭೌತಿಕ ಶರೀರಕ್ಕಿಂತ ದೊಡ್ಡದಾಗಿದೆ, ಮತ್ತು ಸೂಕ್ಷ್ಮ ಶರೀರವು ಕುಗ್ಗುವಾಗಲೇ ನಿಮಗೆ ಖಿನ್ನತೆಯುಂಟಾಗುವುದು. ಅದು ಸ್ವಲ್ಪ ಕುಗ್ಗುವಾಗ ನಿಮಗೆ ದುಃಖವುಂಟಾಗುತ್ತದೆ, ಅದು ಇನ್ನೂ ಹೆಚ್ಚು ಕುಗ್ಗುವಾಗ ನಿಮಗೆ ಖಿನ್ನತೆಯ ಅನುಭವವಾಗುತ್ತದೆ ಮತ್ತು ಅದು ಭೌತಿಕ ಶರೀರಕ್ಕಿಂತ ಚಿಕ್ಕದಾಗುವಾಗ ಆತ್ಮಹತ್ಯೆಯ ಪ್ರವೃತ್ತಿಗಳು ಬರುತ್ತವೆ. ಆತ್ಮಹತ್ಯೆಯ ಪ್ರವೃತ್ತಿ ಅಂದರೆ ಏನು? ಈ ಉಡುಪು ನನಗೆ ಅತಿಯಾಗಿ ಬಿಗಿಯಾದರೆ, ನಾನು ಅದರಿಂದ ಹೊರಬರಲು ಬಯಸುತ್ತೇನೆ. ನೋಡಿ, ನೀವು ನಿಮ್ಮ ಅಳತೆಗಿಂತ ಎರಡು ಅಥವಾ ಮೂರು ಅಳತೆಯಷ್ಟು ಚಿಕ್ಕದಾದ ಕೋಟನ್ನು ಧರಿಸಿದರೆ, ನಿಮಗೆ ಆರಾಮವಾಗಿರಲು ಸಾಧ್ಯವೇ? ನೀವೇನು ಮಾಡಲು ಬಯಸುತ್ತೀರಿ? ನೀವು ಅದರಿಂದ ಹೊರಬರಲು ಬಯಸುತ್ತೀರಿ. ಜನರಲ್ಲಿ ಆತ್ಮಹತ್ಯೆಯ ಪ್ರವೃತ್ತಿಯಿರುವಾಗ ಆಗುವುದು ಇದೇ. ಸೂಕ್ಷ್ಮ ಶರೀರವು ಕುಗ್ಗಿ ಭೌತಿಕ ಶರೀರಕ್ಕಿಂತ ಚಿಕ್ಕದಾಗಿದೆ, ಮತ್ತು ಅದಕ್ಕಾಗಿಯೇ ಆತ್ಮಹತ್ಯೆಯ ಪ್ರವೃತ್ತಿ ಬರುವುದು. ಆದರೆ ನೀವು ಸುದರ್ಶನ ಕ್ರಿಯೆ ಅಥವಾ ಧ್ಯಾನ ಅಥವಾ ಪ್ರಾಣಾಯಾಮ ಮಾಡಿದಾಗ ಸೂಕ್ಷ್ಮ ಶರೀರವು ದೊಡ್ಡದಾಗಿ ಸಾಮಾನ್ಯವಾಗುತ್ತದೆ ಮತ್ತು ಈ ಪ್ರವೃತ್ತಿಯು ಮಾಯವಾಗುತ್ತದೆ.

ನಿಮಗೆ ಗೊತ್ತಾ, ಇತ್ತೀಚೆಗೆ ನಾನು ಟಾಂಪಾಕ್ಕೆ ಹೋಗಿದ್ದಾಗ, ಒಬ್ಬರು ಮನಃಶಾಸ್ತ್ರಜ್ಞರು ನನ್ನಲ್ಲಿ ಏನು ಹೇಳಿದರೆಂದರೆ, ಪ್ರತಿ ೩೦ ಸೆಕೆಂಡುಗಳಿಗೆ ಒಬ್ಬ ವ್ಯಕ್ತಿಯು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆಂದು. ಅದು ಬಹಳ ಹೆಚ್ಚು. ನನಗೆ ಬಹಳ ಚಕಿತವಾಯಿತು. ಆಗ ನನಗನಿಸಿತು, ನಾವು ಈ ಜ್ಞಾನವನ್ನು ಜನರಿಗೆ ತಲುಪಿಸಬೇಕೆಂದು. ಅವರು ಯೋಗ, ಪ್ರಾಣಾಯಾಮ, ಸುದರ್ಶನ ಕ್ರಿಯೆ ಮತ್ತು ಧ್ಯಾನಗಳನ್ನು ಮಾಡಿದಾಗ ಸೂಕ್ಷ್ಮ ಶರೀರವು ಬಲಯುತವೂ ದೊಡ್ಡದೂ ಆಗುತ್ತದೆ. ಮೊದಲಿಗೆ ನಿಮಗೆ ಸಾಮಾನ್ಯವಾಗಿರುವ ಹಾಗೂ ಸಂತೋಷದ ಅನುಭವವಾಗುತ್ತದೆ, ನಂತರ ಸೂಕ್ಷ್ಮ ಶರೀರವು ಇನ್ನೂ ದೊಡ್ಡದಾಗುತ್ತದೆ ಮತ್ತು ನಿಮಗೆ ಹೆಚ್ಚಿನ ಸಂತೋಷದ ಅನುಭವವಾಗುತ್ತದೆ. ನಂತರ ಅದು ಇನ್ನೂ ದೊಡ್ಡದಾದ ಕಾರಣಾತ್ಮಕ (ಕಾಸಲ್)ಶರೀರದೊಂದಿಗೆ ಒಂದಾದರೆ, ಆಗ ನೀವು ಪರಮಸುಖಿಗಳಾಗುತ್ತೀರಿ ಮತ್ತು ಎಲ್ಲಾ ಸಮಯವೂ ಬಹಳ ಸಂತೋಷವಾಗಿರುವಿರಿ.