ಸೋಮವಾರ, ಜನವರಿ 12, 2015

ಗಾನದ ಮೂಲಕ ಜ್ಞಾನದ ವಿನಿಮಯ

೧೨ ಜನವರಿ ೨೦೧೫
ನಾಸಿಕ್, ಭಾರತ
ವೇಣುನಾದವು ಒಂದು ಐತಿಹಾಸಿಕ ಕಾರ್ಯಕ್ರಮ. ನಾಸಿಕ್ (ಮಹಾರಾಷ್ಟ್ರ) ನಗರದಲ್ಲಿ ೫೩೭೮ ಭಾರತೀಯ ಕೊಳಲು ವಾದಕರು, ಶ್ರೀ ರೋನು ಮಜುಂದಾರ್ ಅವರ ಮಾರ್ಗದರ್ಶನದಲ್ಲಿ , ಶ್ರೀ ಶ್ರೀ ರವಿ ಶಂಕರ್ ಹಾಗೂ ಪಂಡಿತ್ ಹರಿಪ್ರಸಾದ್ ಚೌರಸಿಯಾ ಅವರ ಸಮ್ಮುಖದಲ್ಲಿ ಪಾಲ್ಗೊಂಡರು. ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಶ್ರೀ ಶ್ರೀಯವರ ಸಂದೇಶವು ಕೆಳಕಂಡಂತಿದೆ.

ನೀವೆಲ್ಲರೂ ಈಗಷ್ಟೇ ಕೇಳಿದಂತೆ, ೫೧೦೦ ವರ್ಷಗಳ ಹಿಂದೆ ಈ ನೆಲದಲ್ಲಿ ಒಂದು ದೈವಿಕ ಕೊಳಲು ನುಡಿಸಲ್ಪಟ್ಟಿತು. ಅದರ ಇಂಪಾದ ಸ್ವರಗಳು ಈಗಲೂ ದೇಶದಾದ್ಯಂತ ಪ್ರತಿಧ್ವನಿಸುತ್ತಿವೆ. ಇವತ್ತು, ನಾಸಿಕ್ ನಗರದಲ್ಲಿ ೫೩೭೮ ಕಲಾವಿದರು ಕೊಳಲನ್ನು ನುಡಿಸಲು ಒಟ್ಟುಸೇರಿದ್ದಾರೆ ಮತ್ತು ಹಾಗೆ ಮಾಡುವುದರ ಮೂಲಕ ಅವರು ಒಂದು ನಿಜವಾದ ಐತಿಹಾಸಿಕ ಹೆಗ್ಗುರುತನ್ನು ಸೃಷ್ಟಿಸಿದ್ದಾರೆ.

ನಿಮಗೆ ಗೊತ್ತಾ, ಒಂದು ಕೊಳಲನ್ನು ಸಂಗೀತ ನುಡಿಸಲು ಬಳಸಬಹುದು ಮತ್ತು ಹಾಗೆಯೇ, ಒಬ್ಬರನ್ನು ಹೊಡೆದು ಓಡಿಸಲು ಕೂಡಾ ಬಳಸಬಹುದು (ನಗು). ನಮ್ಮ ಜೀವನ, ನಮ್ಮ ಸ್ವಂತ ಶರೀರ ಒಂದು ಕೊಳಲಿದ್ದಂತೆ. ನಾವು ಎಲ್ಲಾ ನಕಾರಾತ್ಮಕತೆಗಳನ್ನು, ರಾಗದ್ವೇಷಗಳನ್ನು  ಬಿಟ್ಟು ಒಳಗಿನಿಂದ ಟೊಳ್ಳು ಹಾಗೂ ಖಾಲಿಯಾಗುವಾಗ ನಮ್ಮೊಳಗೆ ಚೇತನವು ಉದಯಿಸುತ್ತದೆ ಮತ್ತು ಅರಳುತ್ತದೆ. ಮುಂದೆಂದೂ ನಮಗೆ ಒಂದು ಕೋಲನ್ನು ತೋರಿಸಬೇಕಾಗಿ ಬರುವುದಿಲ್ಲ.  (ಅಂದರೆ, ಚೇತನದ ಉದಯದೊಂದಿಗೆ ಒಬ್ಬನು ಸಹಜವಾಗಿ ಧರ್ಮದ ಪಥದಲ್ಲಿ ನಡೆಯುತ್ತಾನೆ ಮತ್ತು ಅವನನ್ನು ಶಿಕ್ಷಿಸಬೇಕಾಗಿ ಬರುವುದಿಲ್ಲ.)

ಕೊಳಲಿನೊಳಗೆ ಸ್ವಲ್ಪ ಮಣ್ಣು ಅಥವಾ ಕೊಳೆ ಸಿಕ್ಕಿಹಾಕಿಕೊಂಡಿದ್ದರೆ, ಆಗ ಅದು ಒಂದು ಇಂಪಾದ ದನಿಯನ್ನು ಉತ್ಪತ್ತಿ ಮಾಡುವುದಿಲ್ಲ. ಇಂಪಾದ ಸ್ವರಗಳನ್ನು ಉತ್ಪತ್ತಿ ಮಾಡಬೇಕಾದರೆ ಒಂದು ಕೊಳಲು, ಹೊರಗಿನಿಂದ ಸ್ವಚ್ಛವಾಗಿಯೂ ಹೊಳಪಾಗಿಯೂ ಇರುವಂತೆಯೇ ಒಳಗಿನಿಂದಲೂ ಸ್ವಚ್ಛವಾಗಿ, ಶುದ್ಧವಾಗಿ ಇರಬೇಕು. ಸಾಮರಸ್ಯವನ್ನು ಉತ್ಪತ್ತಿ ಮಾಡಲು ಸಾಧ್ಯವಾಗಬೇಕಾದರೆ ಒಂದು ಕೊಳಲು ಟೊಳ್ಳು ಮತ್ತು ಖಾಲಿಯಾಗಿರಬೇಕು.

ನಿಮಗೆ ಗೊತ್ತಾ, ಸಂಗೀತವು ನಮ್ಮ ಜೀವನದ ಒಂದು ಬಹಳ ಪ್ರಮುಖವಾದ ಅಂಶವಾಗಿದೆ. ನಾವು ಮಾತನಾಡಲು ಪ್ರಾರಂಭಿಸುವುದಕ್ಕೆ ಮೊದಲು ನಾವು ಹಾಡಲು ಪ್ರಾರಂಭಿಸುತ್ತೇವೆ. ಚಿಕ್ಕ ಮಕ್ಕಳು ಒಂದು ಭಾಷೆಯನ್ನು ಬಹಳ ತಡವಾಗಿ ಕಲಿಯುತ್ತಾರೆ, ಆದರೆ ಸಂಗೀತದ ಶಬ್ದಗಳನ್ನು ಅವರು ತಮ್ಮ ಜೀವನದಲ್ಲಿ ಆರಂಭದಲ್ಲೇ ಮಾಡಲು ತೊಡಗುತ್ತಾರೆ ಮತ್ತು ಆ ಶಬ್ದಗಳು ಸಂಗೀತಮಯವಾಗಿರುತ್ತವೆ, ಯಾಕೆಂದರೆ ಅಲ್ಲಿ ಸಂಪೂರ್ಣವಾದ ಸಾಮರಸ್ಯವಿರುತ್ತದೆ - ಒಳಗೂ ಸಾಮರಸ್ಯ ಮತ್ತು ನಮ್ಮ ಸುತ್ತಲೂ ಸಾಮರಸ್ಯ.

ಇವತ್ತು, ಜಗತ್ತು ಖಿನ್ನತೆ, ಭಯೋತ್ಪಾದನೆ, ಭಯ ಮತ್ತು ಅನಿಶ್ಚಿತತೆಗಳ ಮೂಲಕ ಹಾದುಹೋಗುತ್ತಿರುವಾಗ, ನಾವು ಎಚ್ಚೆತ್ತುಕೊಂಡು, ನಮ್ಮಲ್ಲಿ ಪ್ರತಿಯೊಬ್ಬರಲ್ಲೂ ಆಳವಾಗಿ ಸೇರಿಕೊಂಡಿರುವ ಮಾನವೀಯತೆಯನ್ನು ಜಾಗೃತಗೊಳಿಸುವ ಸಮಯ ಬಂದಿದೆ. ಸಂಗೀತವನ್ನು ಕಲಿಯಲು ಹಾಗೂ ಸಮಾಜ ಸೇವೆ ಮಾಡುತ್ತಾ ಸಮಯ ಕಳೆಯಲು ಹಾಗೂ ಆಧ್ಯಾತ್ಮಿಕ ಮತ್ತು ಧಾರ್ಮಿಕ ಜ್ಞಾನವನ್ನು ಮುಂದುವರಿಸುತ್ತಿರುವಂತೆಯೇ ಒಂದು ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಳ್ಳಲು ನಾವು ನಮ್ಮ ಮಕ್ಕಳಿಗೆ ಪ್ರೋತ್ಸಾಹ ಮಾಡುವ ಸಮಯ ಬಂದಿದೆ.

ಜಗತ್ತಿನಾದ್ಯಂತ ನಾವಿದನ್ನು ನಮ್ಮ ಕಾರ್ಯಕ್ರಮಗಳ ಮೂಲಕ ಮಾಡುತ್ತಾ ಇದ್ದೇವೆ. ದೇಶದ ಪುರಾತನ ಸಂಸ್ಕೃತಿ, ಶಾಸ್ತ್ರೀಯ ಮತ್ತು ಜಾನಪದ ಸಂಗೀತಗಳ ಸಂರಕ್ಷಣೆ ಹಾಗೂ ಪ್ರಚಾರಗಳನ್ನು ನಾವು ಯಾವತ್ತೂ ಪ್ರೋತ್ಸಾಹಿಸಿದ್ದೇವೆ. ಇವತ್ತು ಇದು ನಮ್ಮಲ್ಲಾಗುತ್ತಿರುವ ೧೧ನೆಯ ದೊಡ್ಡ ಕಾರ್ಯಕ್ರಮ. ಜಗತ್ತಿನಲ್ಲಿರುವ ಎಲ್ಲಾ ಜನರಿಗೆ ಶಾಂತಿ ಮತ್ತು ಸಂತೋಷಗಳನ್ನು ತರಲು ಇದರಲ್ಲಿ ೫೩೭೮ ವೇಣುವಾದಕರು ಒಟ್ಟಾಗಿ ಭಾಗವಹಿಸುತ್ತಿದ್ದಾರೆ.

ಇವತ್ತು ಭಯೋತ್ಪಾದನೆಯು ನಮ್ಮ ದೇಶದಲ್ಲಿ ವ್ಯಾಪಕವಾಗಿದೆ. ಹಾಗೆಯೇ ಇಡೀ ಜಗತ್ತಿನಲ್ಲಿ ಕೂಡಾ. ಇಂತಹ ಕಷ್ಟಕಾಲದಲ್ಲಿ ಹೆಚ್ಚಾಗಿ ಜನರು, "ಗುರುದೇವ, ಜಗತ್ತಿನಲ್ಲಿ ಅಷ್ಟೊಂದು ಒತ್ತಡವಿರುವಾಗ, ಅಷ್ಟೊಂದು ಜನರು ಒಂದು ಸೇರಿ ಕೊಳಲು ನುಡಿಸುವಂತೆ ನೀವು ಹೇಳಿರುವುದು ಯಾಕೆ?" ಎಂದು ಕೇಳುತ್ತಾರೆ.

ಸಂಸ್ಕೃತದಲ್ಲಿ ಒಂದು ಪ್ರಾಚೀನ ನಾಣ್ನುಡಿಯಿದೆ, "ಕಾವ್ಯಶಾಸ್ತ್ರವಿನೋದೇನ ಕಾಲೋ ಗಚ್ಛತಿ ಧೀಮತಾಮ್; ವ್ಯಸನೇನ ತು ಮೂರ್ಖನಾಂ ನಿದ್ರಯಾ ಕಲಹೇನ ವಾ" (ಹಿತೋಪದೇಶದಿಂದ).

ಇದರ ಅರ್ಥವೇನೆಂದರೆ, ಒಬ್ಬ ಬುದ್ಧಿವಂತ ವ್ಯಕ್ತಿಯ ಚಿಹ್ನೆಯೆಂದರೆ, ಅವನು ತನ್ನ ಸಮಯವನ್ನು ಕಲೆ, ಸಾಹಿತ್ಯ, ಸಂಗೀತಗಳನ್ನು ಕಲಿಯುತ್ತಾ ಹಾಗೂ ಅವುಗಳನ್ನು ಕರಗತ ಮಾಡಿಕೊಳ್ಳುತ್ತಾ ಮತ್ತು ಜ್ಞಾನದ ಚರ್ಚೆ ಮಾಡುತ್ತಾ ಕಳೆಯುತ್ತಾನೆ. ನಮ್ಮ ದೇಶದಲ್ಲಿ ಹಲವಾರು ಯುಗಗಳಿಂದ ಇದ್ದ ಸಂಪ್ರದಾಯ ಇದಾಗಿತ್ತು. ನಮ್ಮ ದೇಶದಲ್ಲಿ ನಾವು ಜೀವನದ ಬಗ್ಗೆ ಯಾವತ್ತೂ ಒಂದು ಬಹಳ ಸಮಗ್ರವಾದ ಹಾಗೂ ಸಂಪೂರ್ಣವಾದ ದೃಷ್ಟಿಯನ್ನು ಹೊಂದಿದ್ದೆವು. ಪ್ರತ್ಯೇಕ ಮತ್ತು ಸಂಬಂಧವಿಲ್ಲದ ವಿಭಾಗಗಳು ಅಥವಾ ಹಂತಗಳಾಗಿ ವಿಭಜನೆಯಾದ ದೃಷ್ಟಿಯಿಂದ ಅದನ್ನು ನೋಡಿಲ್ಲ. ನಾವು ಯಾವತ್ತೂ ಗಾನ, ಜ್ಞಾನ ಮತ್ತು ಧ್ಯಾನಗಳನ್ನು ಸೇರಿಸಿದ್ದೇವೆ. ನಿಜವಾಗಿ ಭಾರತೀಯನಾಗುವುದೆಂಬುದರ ಅರ್ಥ ಇದುವೇ.
ಇವತ್ತು, ಶಾಂತಿ ಮತ್ತು ಸಮೃದ್ಧಿಗಳ ಒಂದು ಸಂದೇಶವನ್ನು ಜಗತ್ತು ನಿರೀಕ್ಷಿಸುವುದು ಮತ್ತು ಹುಡುಕುವುದು ಭಾರತದಿಂದ. ಪ್ರೇಮ ಮತ್ತು ಶಾಂತಿಗಳ ಈ ಅನನ್ಯವಾದ ಸಂದೇಶವನ್ನು ಜಗತ್ತಿಗೆ ತಲುಪಿಸಲು ಭಾರತೀಯರಿಗೆ ಮಾತ್ರ ಸಾಧ್ಯ.
ಇವತ್ತು ಸ್ವಾಮಿ ವಿವೇಕಾನಂದರ ಜನ್ಮ ದಿನವಾಗಿದೆ. ಮಹಾನ್ ಆಧ್ಯಾತ್ಮಿಕ ಗುರುಗಳಲ್ಲಿ ಒಬ್ಬರಾದ ಮಹಾಋಷಿ ಮಹೇಶ್ ಯೋಗಿ ಅವರ ಜನ್ಮ ದಿನ ಕೂಡಾ ಇವತ್ತಾಗಿದೆ. ಅವರು ಧ್ಯಾನವನ್ನು ಜಗತ್ತಿನ ಎಲ್ಲಾ ಭಾಗಗಳಲ್ಲಿ ಹರಡಲು ಮತ್ತು ಜನಪ್ರಿಯಗೊಳಿಸಲು ಮಹತ್ತರವಾದ ಪ್ರಯತ್ನಗಳನ್ನು ಮಾಡಿದರು.

ಭಾರತೀಯ ಆಧ್ಯಾತ್ಮ ಮತ್ತು ಭಾರತೀಯ ಸಂಸ್ಕೃತಿಗಳನ್ನು ಜಗತ್ತಿನ ಎಲ್ಲಾ ಮೂಲೆಯಲ್ಲೂ ಪ್ರಚಾರ ಮಾಡಲು ಹಾಗೂ ಜನಪ್ರಿಯಗೊಳಿಸಲು ಸಹಾಯ ಮಾಡಿದ, ಬಹಳ ಗೌರವಾನ್ವಿತರಾದ ಹಾಗೂ ಮಹಾನ್ ವ್ಯಕ್ತಿಗಳಾಗಿದ್ದಾರೆ ಅವರಿಬ್ಬರೂ.
ಅವರ ಗೌರವಾರ್ಥವಾಗಿ ಹಾಗೂ ಅವರು ಮಾಡಿದ ಎಲ್ಲಾ ಕಾರ್ಯಕ್ಕೂ ನಮ್ಮ ಗೌರವವನ್ನು ಅವರಿಗೆ ಸಲ್ಲಿಸುವ ಸಲುವಾಗಿ ಇವತ್ತು ನಾವು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ.

ನಾಸಿಕ್ ನಗರವು ಕುಂಭ ನಗರಿ ಎಂದು ಕರೆಯಲ್ಪಡುತ್ತದೆ (ನಾಸಿಕ್ ನಗರದಲ್ಲಿ ಪ್ರತಿ ೧೨ ವರ್ಷಗಳಿಗೊಮ್ಮೆ ಪವಿತ್ರವಾದ ಮಹಾ ಕುಂಭ ಮೇಳ ನಡೆಯುವುದರಿಂದ). ಇಂದಿನಿಂದ ಇನ್ನು ಎಂಟು ತಿಂಗಳುಗಳ ನಂತರ ನಾವು ಕುಂಭ ರಾಶಿಯನ್ನು ಪ್ರವೇಶಿಸಲಿದ್ದೇವೆ.

ನಿಮಗೆ ಗೊತ್ತಾ, ನಾಸಿಕ್ ನಗರವು ಮೂರು ಪವಿತ್ರ ನದಿಗಳ; ಗೋದಾವರಿ, ಕಪಿಲಾ ಮತ್ತು ನಸರ್ದಿ ನದಿಗಳ ಸಂಗಮ ಸ್ಥಾನವೂ ಆಗಿದೆ. ಆದರೆ ಇವತ್ತು ಈ ಎಲ್ಲಾ ಮೂರು ನದಿಗಳು ಬಹಳಷ್ಟು ಮಾಲಿನ್ಯದಿಂದ ಬಳಲುತ್ತಿವೆ. ವಾಸ್ತವವಾಗಿ, ನಸರ್ದಿ ನದಿಯು ಒಂದು ನದಿಗಿಂತ ಹೆಚ್ಚಾಗಿ ಒಂದು ಚರಂಡಿಯಂತೆ ಕಾಣಿಸುತ್ತಿದೆ. ನಾವು ಈ ನದಿಗಳನ್ನು ಮತ್ತೊಮ್ಮೆ ಸ್ವಚ್ಛವಾಗಿಯೂ, ಶುದ್ಧವಾಗಿಯೂ ಮಾಡಬೇಕಾಗಿದೆ.

ನಗರದ ಎಲ್ಲಾ ಚರಂಡಿಗಳೂ ತಮ್ಮ ತ್ಯಾಜ್ಯಗಳನ್ನು ಈ ನದಿಗಳಿಗೆ ಬಿಡುತ್ತವೆ. ಋಷಿಗಳು ಮತ್ತು ಸಂತರು ಈ ಪವಿತ್ರ ನಗರಿಗೆ ಬಂದು ಇಂತಹ ನೀರಿನಲಿ ಮುಳುಗೇಳಲು ಬಯಸಬೇಕೆಂದು ನಾವು ನಿರೀಕ್ಷಿಸಲು ಹೇಗೆ ಸಾಧ್ಯ?

ಸ್ವಲ್ಪ ಹೊತ್ತು ಮುಂಚೆಯಷ್ಟೇ ಮಾಧ್ಯಮದವರು ನನ್ನನ್ನು ಭೇಟಿಯಾಗಿ ಈ ರೀತಿ ಕೇಳಿದರು, "ಗುರುದೇವ, ಇವತ್ತು ಈ ನದಿಗಳಿಗೆ ಬಂದು ಮುಳುಗೇಳಲು ನೀವು ಬಯಸುವಿರಾ?"

ನಾನು ಅವರಿಗಂದೆ, "ನದಿಗಳು ಎಷ್ಟೊಂದು ಕೊಳಕು ಮತ್ತು ಕಲುಷಿತಗೊಂಡಿದೆಯೆಂದರೆ ಅವುಗಳ ನೀರಿನಲ್ಲಿ ಕಾಲನ್ನೂರಲೂ ಅವುಗಳು ಯೋಗ್ಯವಲ್ಲ" ಎಂದು. ಈ ನದಿಗಳನ್ನು ಸ್ವಚ್ಛಗೊಳಿಸಿ ಅವುಗಳನ್ನು ಮತ್ತೆ ಶುದ್ಧೀಕರಿಸುವುದು ನಮ್ಮ ಜವಾಬ್ದಾರಿಯಾಗಿದೆ. ಈ ನದಿಗಳನ್ನು ಸ್ವಚ್ಛಗೊಳಿಸುವ ಈ ಸಂಕಲ್ಪವನ್ನು ನಾವೆಲ್ಲರೂ ತೆಗೆದುಕೊಳ್ಳೋಣ.

ಇವತ್ತಿನ ಈ ಸಂದರ್ಭದಲ್ಲಿ ಮಹಾರಾಷ್ಟ್ರದ ನಮ್ಮ ಸ್ವಯಂಸೇವಕರನ್ನು ನಾನು ಅಭಿನಂದಿಸಲು ಇಚ್ಛಿಸುತ್ತೇನೆ. ಜಲಮಾಲಿನ್ಯವನ್ನು ತೊಲಗಿಸುವ ಮತ್ತು ನದಿಗಳನ್ನು ಪುನಶ್ಚೇತನಗೊಳಿಸುವ ಸೇವಾ ಯೋಜನೆಗಳಲ್ಲಿ ಅವರು ನಿಜಕ್ಕೂ ಅಷ್ಟೊಂದು ಮಹತ್ತರವಾದ ಕೆಲಸವನ್ನು ಮಾಡುತ್ತಿದ್ದಾರೆ. ಮರಾಠವಾಡ ಮತ್ತು ವಿದರ್ಭ ಪ್ರದೇಶಗಳಲ್ಲಿ ಅವರು ಐದು ನದಿಗಳನ್ನು ಪುನಶ್ಚೇತನಗೊಳಿಸಿದ್ದಾರೆ. ಈಗ ನಾಸಿಕ್ ನಗರದ ಸರದಿ ಬಂದಿದೆ. ಮತ್ತೊಮ್ಮೆ ನಗರದ ಮೂರು ನದಿಗಳನ್ನು ಸ್ವಚ್ಛಗೊಳಿಸಿ, ಶುದ್ಧೀಕರಿಸಬೇಕಾಗಿದೆ, ಮತ್ತು ನಾವೆಲ್ಲರೂ ಈ ಯೋಜನೆಯಲ್ಲಿ ಸೇರಿಕೊಳ್ಳಬೇಕು.

ಈ ಯೋಜನೆಯನ್ನು ಒಂದು ತುರ್ತು ಆಧಾರದ ಮೇಲೆ ಬೆಂಬಲಿಸಿ ಸಹಾಯ ಮಾಡಬೇಕೆಂದು ಕೂಡಾ ನಾನು ಸ್ಥಳೀಯ ಆಡಳಿತ ಮತ್ತು ಕೇಂದ್ರ ಸರಕಾರದ ಅಧಿಕಾರಿಗಳಲ್ಲಿ ಮನವಿ ಮಾಡುತ್ತೇನೆ. ಈ ತೊಡಗುವಿಕೆಗಾಗಿ ಕೆಲಸ ಮಾಡಲು ರಾಜ್ಯ ಮತ್ತು ಕೇಂದ್ರ ಸರಕಾರಗಳೆರಡೂ ಕೈಜೋಡಿಸಬೇಕಾಗುತ್ತದೆ. ನಮ್ಮ ಮುಂದೆ ಎಂಟು ತಿಂಗಳುಗಳಿವೆ. ಖಂಡಿತವಾಗಿಯೂ ನಮಗೆ ಬಹಳಷ್ಟು ಒಳ್ಳೆಯ ಕೆಲಸವನ್ನು ಮಾಡಲು ಸಾಧ್ಯವಿದೆ. ನಮ್ಮ ಬಾಹ್ಯಾಕಾಶ ಉಪಗ್ರಹಗಳನ್ನುಪಯೋಗಿಸಿ ಮಂಗಳ ಗ್ರಹವನ್ನು ತಲಪಲು ನಮಗೆ ಸಾಧ್ಯವಾಗಿರುವಾಗ, ಈ ಯೋಜನೆಯನ್ನು ಕೂಡಾ ಯಶಸ್ವಿಯಾಗಿಸುವ ಸಾಮರ್ಥ್ಯವು ನಮ್ಮಲ್ಲಿ ಖಂಡಿತಾ ಇದೆ.

ಸಂತೋಷ ಮತ್ತು ಆಚರಣೆಯನ್ನು ಮತ್ತೊಮ್ಮೆ ಈ ನಗರಕ್ಕೆ ತರಲು ಹಾಗೂ ಈ ಮೂರು ನದಿಗಳನ್ನು ಪುನಶ್ಚೇತನಗೊಳಿಸಲು ಎಂಟು ತಿಂಗಳುಗಳು ಸಾಕು. ಇವತ್ತು ನಮ್ಮೊಂದಿಗೆ ಇಲ್ಲಿರುವ ನಾಸಿಕ್ ನಗರದ ಪುರಸಭಾಧ್ಯಕ್ಷರು ಹಾಗೂ ರಾಜ್ಯ ವಿಧಾನಸಭೆ ಮತ್ತು ಕೇಂದ್ರ ಸಂಸತ್ತಿನ ಸದಸ್ಯರಲ್ಲಿ ಕೂಡಾ  ಈ ವಿನಂತಿಯನ್ನು ಮಾಡಲು ನಾನು ಇಚ್ಛಿಸುತ್ತೇನೆ. ಈ ಯೋಜನೆಯಲ್ಲಿ ಮುಂದಾಳುಗಳಾಗಲು ಮುಂದೆ ಬಂದು, ಈ ಯೋಜನೆಯ ಯಶಸ್ಸಿಗೆ ಎಲ್ಲಾ ರೀತಿಯ ಬೆಂಬಲವನ್ನು ಒದಗಿಸಬೇಕೆಂದು ನಾನು ನಿಮ್ಮೆಲ್ಲರಲ್ಲಿ ಕೇಳಿಕೊಳ್ಳುತ್ತೇನೆ.      

ಇದನ್ನು ಕೇವಲ, ನಿಮಗಾಗಿಯಿರುವ ಒಂದು ಪವಿತ್ರವಾದ ತಪಸ್ಸೆಂದು ಯೋಚಿಸಿ. ಇದಕ್ಕಾಗಿ ನಿಮಗೆ ನಾಸಿಕದ ಎಲ್ಲಾ ನಾಗರಿಕರ ಬೆಂಬಲವಿದೆ. ಈ ತೊಡಗುವಿಕೆಗಾಗಿ ಪ್ರತಿಯೊಬ್ಬರೂ ಪ್ರತಿ ಭಾನುವಾರದಂದು ಮೂರರಿಂದ ನಾಲ್ಕು ಗಂಟೆಗಳನ್ನು ಬಿಡುವಾಗಿರಿಸಬೇಕು. ಕಸವನ್ನು ನದಿಯೊಳಕ್ಕೆ ಎಸೆಯುವುದನ್ನು ತಡೆಯಿರಿ. ನದಿದಡಗಳನ್ನು ಹೂದೋಟಗಳಂತೆ ಸ್ವಚ್ಛವಾಗಿಯೂ ಸುಂದರವಾಗಿಯೂ ಮಾಡೋಣ. ನದಿಗಳ ನೀರಿನೊಂದಿಗೆ ಬಂದು ಸೇರುವ ಚರಂಡಿಗಳನ್ನು ಸ್ವಚ್ಛಗೊಳಿಸಲು ನಗರದ ಜನರಿಗೆ ಸಾಧ್ಯವಿಲ್ಲ. ಇದು ಸ್ಥಳೀಯ ಆಡಳಿತದ ಜವಾಬ್ದಾರಿಯಾಗಿದೆ. ಇದಕ್ಕೆ ಅತೀ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡಿ ತುರ್ತು ಆಧಾರದ ಮೇಲೆ ಈ ಸಮಸ್ಯೆಯ ಮೇಲೆ ಕಾರ್ಯನಿರ್ವಹಿಸಬೇಕೆಂದು ಮತ್ತೊಮ್ಮೆ ನಾನು ಸ್ಥಳೀಯ ಆಡಳಿತ ಮಂಡಳಿಗಳಲ್ಲಿ ನಿವೇದಿಸುತ್ತೇನೆ. ಇಲ್ಲದಿದ್ದರೆ ನಾವೆಲ್ಲರೂ ಇದಕ್ಕಾಗಿ ಒಂದು ಶಾಂತಿಯುತ ಪ್ರತಿಭಟನಾ ನಡಿಗೆಯನ್ನು ಕೈಗೆತ್ತಿಕೊಳ್ಳುತ್ತೇವೆ. ಋಷಿಗಳು ಮತ್ತು ಸಂತರು ಮಹಾಕುಂಭಕ್ಕೆ ಇಲ್ಲಿಗೆ ಬಂದು ಗೋದಾವರಿ ನದಿಯ ನೀರಿನಲ್ಲಿ ಮುಳುಗಿ ಸ್ನಾನ ಮಾಡಿ ಇದನ್ನು ಮತ್ತೊಮ್ಮೆ ಪವಿತ್ರವೆಂದು ಪರಿಗಣಿಸುವುದಕ್ಕಾಗಿ, ಗೋದಾವರಿ ನದಿಯ  ನೀರು ಮತ್ತೊಮ್ಮೆ ಸ್ವಚ್ಛವಾಗಿಯೂ ಶುದ್ಧವಾಗಿಯೂ ಆಗಬೇಕಾಗಿದೆ. ಗೋದಾವರಿ ನದಿಯು ದಕ್ಷಿಣದ ಗಂಗಾನದಿಯೆಂದು ಕರೆಯಲ್ಪಡುತ್ತದೆ. ಹೀಗಾಗಿ ದಕ್ಷಿಣದ ಗಂಗೆಯ ನೀರನ್ನು ಶುದ್ಧೀಕರಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ.  

ಒಂದು ಪ್ರಾಚೀನವಾದ ಮಾತಿದೆ:

"ಅನಾಹತೆ ಪಾತ್ರಕರ್ಣೆ, ಅಭಗ್ನಶಬ್ದೆ ಸರಿದ್ರುತೆ I
ಶಬ್ದಬ್ರಹ್ಮಾಣಿ ನಿಷ್ಣಾತಃ ಪರಂ ಬ್ರಹ್ಮಾದಿಗಚ್ಛತಿ II"

ಇದರರ್ಥವೇನೆಂದರೆ, ನಾವು ಬ್ರಹ್ಮನ (ಚೇತನದ)ಶಬ್ದದಲ್ಲಿ ನಮ್ಮನ್ನು ಮುಳುಗಿಸಿ, ಅದರ ಮೇಲೆ ಆಳವಾಗಿ ಧ್ಯಾನ ಮಾಡಿದಾಗ, ತಕ್ಷಣವೇ ನಾವು ದೇವರೊಂದಿಗೆ, ಪರ-ಬ್ರಹ್ಮನೊಂದಿಗೆ (ಒಂದು ಚೇತನ)ಲೀನವಾಗುವುದರ ಕಡೆಗಿನ ಪ್ರಯಾಣವನ್ನು ಪ್ರಾರಂಭಿಸುತ್ತೇವೆ. ಇದು ಮನಸ್ಸನ್ನು ಶಾಂತಗೊಳಿಸಲು ಹಾಗೂ ಅದನ್ನು ಚಿಂತೆ ಮತ್ತು ಬಂಧನಗಳಿಂದ ಮುಕ್ತಗೊಳಿಸಲು ಸಹಾಯ ಮಾಡುವ ಒಂದು ಅನನ್ಯವಾದ ತಂತ್ರವಾಗಿದೆ. ಒಂದು ಒತ್ತಡ-ಮುಕ್ತ ಜೀವನ, ರೋಗ-ಮುಕ್ತ ಶರೀರ, ಪೂರ್ವಾಗ್ರಹ-ಮುಕ್ತ ಹಾಗೂ ತೀಕ್ಷ್ಣ ಬುದ್ಧಿಶಕ್ತಿ, ಮತ್ತು ಒಂದು ಆನಂದದಾಯಕ ಮನಸ್ಸು - ಇದು ಪ್ರತಿಯೊಬ್ಬ ವ್ಯಕ್ತಿಯ ಜನ್ಮಸಿದ್ಧ ಹಕ್ಕಾಗಿದೆ. ಇದನ್ನು ಸಾಧಿಸಲು ಹಲವಾರು ಮಾರ್ಗಗಳಿವೆ. ಇವುಗಳಲ್ಲಿ ಸಂಗೀತವು ಒಂದು ಅದ್ಭುತ ಮಾರ್ಗವಾಗಿದೆ. ನಾವು ಗಾನ, ಜ್ಞಾನ ಮತ್ತು ಧ್ಯಾನ ಇವು ಮೂರನ್ನೂ ಜೊತೆಯಾಗಿ ಜೀವನದಲ್ಲಿ ನಮ್ಮೊಂದಿಗೆ ತೆಗೆದುಕೊಳ್ಳಬೇಕು. ಮತ್ತು ನಾನು ಮೊದಲೇ ಹೇಳಿದಂತೆ, ನಾವೆಲ್ಲರೂ ಹೃದಯಪೂರ್ವಕವಾಗಿ ಸೇವೆಗಾಗಿ ಕೊಡುಗೆ ನೀಡಬೇಕು. ನೀವೆಲ್ಲರೂ ಅದನ್ನು ಮಾಡುವಿರಾ?

ನಮ್ಮ ಪ್ರಧಾನ ಮಂತ್ರಿಯವರು ಸ್ವಚ್ಛ ಹಾಗೂ ಆರೋಗ್ಯಕರ ಭಾರತಕ್ಕಾಗಿ ಸ್ವಚ್ಛ ಭಾರತ ಅಭಿಯಾನವೆಂದು ಕರೆಯಲ್ಪಡುವ ಒಂದು ಬೃಹತ್ ಪ್ರಚಾರವನ್ನು ಆರಂಭಿಸಿದ್ದಾರೆ. ನಮ್ಮ ದೇಶವನ್ನು ಸ್ವಚ್ಛವಾಗಿಸಲು ಅವರೊಂದು ಬಲವಾದ ದನಿಯನ್ನೆತ್ತಿದ್ದಾರೆ. ನಿಮ್ಮಲ್ಲಿ ಹಲವರು ಈಗಾಗಲೇ ಈ ಯೋಜನೆಗಳಲ್ಲಿ ತೊಡಗಿರುವಿರಿ, ಆದರೆ ಈಗ ನಿಮಗೆ ಇದಕ್ಕಾಗಿ ಬಲವಾದ ಬೆಂಬಲವಿದೆ. ಈ ಪ್ರಚಾರವನ್ನು ಬೆಂಬಲಿಸಲು ಹಾಗೂ ಚುರುಕುಗೊಳಿಸಲು ನಾವೆಲ್ಲರೂ ಸಹಾಯ ಮಾಡಬೇಕು.
ದೇಶದ ನೀರು ಸರಬರಾಜಿನ ಮೂಲಗಳಾದ ನದಿಗಳು ಸ್ವಚ್ಛ ಹಾಗೂ ಶುದ್ಧವಾಗುವಾಗ ನಮಗೆ ಹಲವಾರು ಲಾಭಗಳುಂಟಾಗುತ್ತವೆ. ಅದು ಹಲವಾರು ರೋಗಗಳನ್ನು ಕೊನೆಗಾಣಿಸುತ್ತದೆ. ಹೆಚ್ಚಾಗಿ ಹಳ್ಳಿಗಳಲ್ಲಿ, ಅದೇ ಕಲುಷಿತ ಮತ್ತು ಕೊಳೆಯಾದ ನೀರನ್ನು ಬೆಳೆಗಳಿಗೆ ಹಾಕಲು ಮತ್ತು ನೀರಾವರಿಗಾಗಿ ಉಪಯೋಗಿಸಲಾಗುತ್ತದೆ. ಇದು ಆಹಾರವನ್ನು ಕಲುಷಿತಗೊಳಿಸುತ್ತದೆ ಮತ್ತು ಅದನ್ನು ಅಶುದ್ಧಗೊಳಿಸುತ್ತದೆ. ಈ ಆಹಾರ ಧಾನ್ಯಗಳನ್ನು ನಾವು ಸೇವಿಸಿದಾಗ, ಅದು ನಮ್ಮ ಮನಸ್ಸು, ನಮ್ಮ ಯೋಚನೆಗಳು ಮತ್ತು ನಮ್ಮ ವರ್ತನೆಯ ಮೇಲೆ ಕೂಡಾ ಪರಿಣಾಮ ಬೀರುತ್ತದೆ. ಅದಕ್ಕಾಗಿಯೇ, "ಜೈಸಾ ಅನ್ನ್ ವೈಸಾ ಮನ್" (ಅಂದರೆ ಅನ್ನ ಹೇಗಿದೆಯೋ ಅದರಂತೆ ನಿಮ್ಮ ಮನಸ್ಸಿನ ಸ್ಥಿತಿ) ಎಂದು ಹೇಳಲಾಗಿರುವುದು. ಆದ್ದರಿಂದ ನಿಮ್ಮ ಯೋಚನೆಗಳು ಶುದ್ಧವಾಗಿರಬೇಕಾದರೆ, ನಿಮ್ಮ ಆಹಾರ ಕೂಡಾ ಶುದ್ಧವಾಗಿ ಹಾಗೂ ಆರೋಗ್ಯಕರವಾಗಿ ಇರಬೇಕು. ರಾಸಾಯನಿಕ-ಮುಕ್ತ ಕೃಷಿ ತಂತ್ರಗಳು, ನಮ್ಮ ವಾಯು ಮತ್ತು ಜಲ ಸಂಪನ್ಮೂಲಗಳನ್ನು ಸ್ವಚ್ಛ ಹಾಗೂ ಶುದ್ಧೀಕರಿಸುವಲ್ಲಿ ಮತ್ತಷ್ಟು ಸಹಾಯ ಮಾಡುತ್ತವೆ. ಈ ದಿನಗಳಲ್ಲಿ ನಾವು ಪ್ಲಾಸ್ಟಿಕ್‌ಗಳನ್ನು ತೆರೆದ ಜಾಗದಲ್ಲಿ ಸುಡುತ್ತೇವೆ ಮತ್ತು ಗಾಳಿಯು ಕಲುಷಿತಗೊಳ್ಳುತ್ತದೆ. ನಾವು ಪ್ಲಾಸ್ಟಿಕ್ಕನ್ನು ಸುಡಬಾರದು. ಒಂದು ತುಂಡು ಪ್ಲಾಸ್ಟಿಕ್ ಸುಡುವುದರಿಂದ ಉತ್ಪತ್ತಿಯಾಗುವ ವಿಷವು, ೧೦೦೦ ಜನರಲ್ಲಿ ಕ್ಯಾನ್ಸರನ್ನು ಪ್ರಚೋದಿಸಲು ಸಾಕು. ಕೇವಲ ಒಂದು ತುಂಡು ಪ್ಲಾಸ್ಟಿಕ್ಕನ್ನು ಸುಡುವುದರಿಂದ ಉತ್ಪತ್ತಿಯಾಗುವ ಅಪಾಯಕಾರಿ ಡಯಾಕ್ಸಿನ್‌ಗಳ ಪರಿಣಾಮ ಅಷ್ಟೊಂದಿರುತ್ತದೆ. ನಮ್ಮ ನಗರಗಳನ್ನು ಮತ್ತೊಮ್ಮೆ ಸ್ವಚ್ಛ ಹಾಗೂ ಹಸಿರಾಗಿಸಲು ನಾವೆಲ್ಲರೂ ಮುಂದೆ ಬರಬೇಕು. ನೀವೆಲ್ಲರೂ ಅದನ್ನು ಮಾಡುವಿರಾ?

ಇದೇ ವಿಷಯವನ್ನು ನಾನು ಶ್ರೀ. ಹನುಮಂತ್ ಗಾಯಕ್‌ವಾಡ್ ಅವರೊಂದಿಗೆ ಕೂಡಾ ಚರ್ಚಿಸುತ್ತಿದ್ದೆ. ಈ ಉದ್ದೇಶಕ್ಕಾಗಿ ಅವರು ದಣಿವಿಲ್ಲದೆ ಕೆಲಸ ಮಾಡುತ್ತಿದ್ದಾರೆ. ಈ ತೊಡಗುವಿಕೆಗೆ ನಗರದ ಮೇಯರ್, ರಾಜ್ಯದ ವಿಧಾನಸಭೆಯ ಸದಸ್ಯರು, ವಿವಿಧ ಆಧ್ಯಾತ್ಮಿಕ ಹಾಗೂ ಧಾರ್ಮಿಕ ಮುಖಂಡರು ಮತ್ತು ನಗರದ ಜನರನ್ನೊಳಗೊಂಡಂತೆ ಎಲ್ಲಾ ಜನರ ಬೆಂಬಲ ದೊರೆಯಲಿದೆಯೆಂದು ನಾನು ಅವರಿಗೆ ಹೇಳಿದೆ. ಇಲ್ಲಿ ಉಪಸ್ಥಿತರಿರುವ ಆಧ್ಯಾತ್ಮಿಕ ಹಾಗೂ ಧಾರ್ಮಿಕ ಮುಖಂಡರು ಕೂಡಾ ಜನರಿಗೆ ಆಶೀರ್ವದಿಸಿ, ಈ ಕಾರ್ಯಕ್ಕೆ ಬೆಂಬಲ ನೀಡುವರೆಂದು ನಾನು ಬಲವಾಗಿ ನಂಬುತ್ತೇನೆ. ಈ ವರ್ಷದ ಮಹಾ ಕುಂಭದ ಮೊದಲು ನಾವು ಈ ನಗರವನ್ನು ಹೊಳೆಯುವಂತೆ ಸ್ವಚ್ಛಗೊಳಿಸಬೇಕು.