ಶುಕ್ರವಾರ, ಫೆಬ್ರವರಿ 13, 2015

ಕಷ್ಟ ಅನುಭವಿಸಿದರೆ ಬದುಕು ಪಕ್ವವಾಗುತ್ತದೆ

೧೩ ಫೆಬ್ರುವರಿ ೨೦೧೫,
ಬೆಂಗಳೂರು, ಭಾರತ

ಪ್ರಶ್ನೆ: ಪ್ರಿಯ ಗುರುದೇವ, ನನ್ನ ಕಾರ್ಯಕ್ಷೇತ್ರದ ಚಟುವಟಿಕೆಗಳು ಗೊಂದಲ ಮೂಡಿಸುತ್ತಿವೆ. ನನ್ನ ಸಹೋದ್ಯೋಗಿಗಳಲ್ಲಿ ಅನೇಕರು ಮದ್ಯಪಾನ ಮಾಡುತ್ತಾರೆ, ಅನೈತಿಕ ಸಂಬಂಧಗಳಲ್ಲಿ ಮಗ್ನರಾಗಿರುತ್ತಾರೆ. ನಾನು ಅವರೊಂದಿಗೆ ಬೆರೆಯಲು ಪ್ರಯತ್ನಿಸಿದಾಗ ನನಗೆ ನಕಾರಾತ್ಮಕ ಕಂಪನಗಳು ಸಿಗುತ್ತವೆ ಮತ್ತು ನನ್ನ ಶಕ್ತಿಯು ಬರಿದಾಗುತ್ತದೆ. ನನಗೆ ಅವರಿಂದ ತಪ್ಪಿಸಿಕೊಳ್ಳಬೇಕೆಂದೆನಿಸುತ್ತದೆ. ನಾನು ಅವರನ್ನು ಸ್ವೀಕರಿಸುವುದು ಮತ್ತು ಅವರೊಂದಿಗೆ ಬೆರೆಯುವುದು ಹೇಗೆ?

ಶ್ರೀ ಶ್ರೀ ರವಿ ಶಂಕರ್: ಕಠಿಣ ಪರಿಸ್ಥಿತಿಗಳು ನಿನ್ನಲ್ಲಿರುವ ಕುಶಲತೆಗಳನ್ನು ಹೊರತರುತ್ತವೆ. ಒಂದು ತಾವರೆಯ ಎಲೆಯು ನೀರಿನಲ್ಲಿರುತ್ತದೆ ಮತ್ತು ಕೆಲವೊಮ್ಮೆ ನೀರು ಎಲೆಯ ಮೇಲೆ ಚೆಲ್ಲುತ್ತದೆ, ಆದರೆ ಆಗಲೂ ಎಲೆಯು ಒಣಗಿಕೊಂಡಿರುತ್ತದೆ, ಅದು ಎಲೆಗೆ ಅಂಟಿಕೊಳ್ಳುವುದಿಲ್ಲ.
ಅದೇ ರೀತಿಯಲ್ಲಿ, ನೀರು ಮತ್ತು ತುಪ್ಪ ಎರಡೂ ದ್ರವಗಳು, ಆದರೆ ತುಪ್ಪದ ಒಂದು ಹನಿಯು ನೀರಿನ ಮೇಲೆ ತೇಲುತ್ತದೆ, ಅದು ಮುಳುಗುವುದಿಲ್ಲ. ಅದೇ ರೀತಿ, ಒಂದು ನಕಾರಾತ್ಮಕ ವಾತಾವರಣದಲ್ಲಿ, ಒಂದು ತುಪ್ಪದ ಹನಿಯಂತಿರು. ಅಲ್ಲಿ ನೀನು ನಿನ್ನ ಸಮಗ್ರತೆಯನ್ನಿಟ್ಟುಕೊಂಡು ತೇಲು. ಒಳಕ್ಕೆ ಆಳಕ್ಕೆ ಮುಳುಗುವ ಒಂದು ಕಲ್ಲಿನಂತಿರಬೇಡ.

ಪ್ರಶ್ನೆ: ಕೆಲವು ವಾಸನೆಗಳು (ಪೂರ್ವಜನ್ಮದ ಅಚ್ಚುಗಳು) ನನಗೆ ತೊಂದರೆ ನೀಡುತ್ತಿವೆಯೆಂಬುದು ನನಗೆ ತಿಳಿದಿದೆ. ಪ್ರಗತಿ ಹೊಂದಲು ಅವುಗಳನ್ನು ನಿವಾರಿಸುವುದು ಮುಖ್ಯವೆಂಬುದು ನನಗೆ ತಿಳಿದಿದೆ. ಅವುಗಳನ್ನು ಗುರುತಿಸುವುದು ಮತ್ತು ನಿವಾರಿಸುವುದು ಹೇಗೆ?

ಶ್ರೀ ಶ್ರೀ ರವಿ ಶಂಕರ್: ನೀನು ಸರಿಯಾದ ಸ್ಥಳದಲ್ಲಿರುವೆ. ಸುಮ್ಮನೆ ವಿಶ್ರಾಮ ಮಾಡು. ಅದು ನಿನಗಾಗಿ ಮಾಡಲ್ಪಡುವುದು. ಕೆಲವನ್ನು ನೀನೇ ಆಗಿ ಮಾಡಬೇಕು ಮತ್ತು ಕೆಲವನ್ನು ಇತರರು ನಿನಗಾಗಿ ಮಾಡುವುದಕ್ಕೆ ನೀನು ಬಿಡಬೇಕು. ಎಲ್ಲವನ್ನೂ ನೀನೇ ಆಗಿ ಮಾಡುವೆಯೆಂದು ನೀನು ಹೇಳಲು ಸಾಧ್ಯವಿಲ್ಲ.
ಒಂದು ಶಸ್ತ್ರಚಿಕಿತ್ಸೆ ಮಾಡಬೇಕಾಗಿದ್ದರೆ, ಅದನ್ನು ನಿನ್ನ ಮೇಲೆ ಬೇರೊಬ್ಬರು ಮಾಡಲು ನೀನು ಅನುಮತಿಸಬೇಕು. ಅದೊಂದು ಮಸಾಜ್ ಆಗಿದ್ದರೆ, ಬೇರೊಬ್ಬರು ಅದನ್ನು ನಿನಗೆ ಮಾಡಲು ನೀನು ಅನುಮತಿಸಬೇಕಾಗುತ್ತದೆ. "ನಾನೇ ಮಸಾಜ್ ಮಾಡಿಕೊಳ್ಳುತ್ತೇನೆ’ ಎಂದು ನೀನು ಹೇಳಲು ಸಾಧ್ಯವಿಲ್ಲ.
ಆದರೆ, ನೀನು ತಿನ್ನಬೇಕಾಗಿದ್ದರೆ, ಅದನ್ನು ನೀನೇ ಮಾಡಬೇಕು. "ನನಗೆ ಬಾಯಾರಿಕೆಯಾಗುತ್ತಿದೆ, ಆದರೆ ಬೇರೊಬ್ಬರು ನನಗಾಗಿ ನೀರು ಕುಡಿಯಲಿ" ಎಂದು ನೀನು ಹೇಳಲು ಸಾಧ್ಯವಿಲ್ಲ. ನೀನೇ ಕುಡಿಯಬೇಕಾಗುತ್ತದೆ.
ಅದೇ ರೀತಿ, ನೀನು ಧ್ಯಾನ ಮಾಡಬೇಕು. ಮನಸ್ಸಿನಲ್ಲಿನ ಚಡಪಡಿಕೆ ಮತ್ತು ಏಕಾಗ್ರತೆಯ ಕೊರತೆ ಬರುವುದು, ನಮ್ಮ ಶಕ್ತಿ ಹಾಗೂ ನಮ್ಮ ಇಂದ್ರಿಯಗಳ ಅತಿಯಾದ ಬಳಕೆಯಿಂದಾಗಿ.
ನಿಮ್ಮಲ್ಲಿ ತುಂಬಾ ಏಕಾಗ್ರತೆಯನ್ನು ಹೊಂದಿದ್ದರೆ ಹಾಗೂ ಕೇಂದ್ರಿತರಾಗಿದ್ದರೆ, ಸುಮ್ಮನೆ ಹೋಗಿ ಒಂದು ಚಲನಚಿತ್ರ ನೋಡಿ ಮತ್ತು ೩ ಗಂಟೆಗಳ ಬಳಿಕ ನಿಮ್ಮ ಏಕಾಗ್ರತೆಯು ಹೋಗಿರುವುದನ್ನು ನೀವು ಗಮನಿಸುವಿರಿ. ನಿಮ್ಮಲ್ಲಿ ಎಷ್ಟು ಮಂದಿಗೆ ಈ ಅನುಭವವಾಗಿದೆ?
(ಸಭಿಕರಲ್ಲಿ ಹಲವರು ತಮ್ಮ ಕೈಗಳನ್ನು ಮೇಲೆತ್ತುತ್ತಾರೆ)
ಎರಡು ಗಂಟೆಗಳ ಕಾಲ ಕ್ರಿಕೆಟ್ ನೋಡಿ ಮತ್ತು ನಂತರ ನಿಮ್ಮ ಮನಸ್ಸು ಎಷ್ಟು ಉದ್ವಿಗ್ನವಾಗುವುದೆಂದು ನೋಡಿ; ವಾತದಲ್ಲಿ ಅಸಮತೋಲನವುಂಟಾಗುತ್ತದೆ ಮತ್ತು ಮನಸ್ಸಿಗೆ ಏಕಾಗ್ರತೆ ಬರುವುದಿಲ್ಲ. ಅದೇ ರೀತಿ, ನೀವೊಂದು ಮಹತ್ವಾಕಾಂಕ್ಷೆಯ ಯೋಜನೆಯ ಮೇಲೆ ಕೆಲಸ ಮಾಡುತ್ತಿದ್ದರೆ ಮತ್ತು ಯೋಜನೆಯ ಯಶಸ್ಸಿನ ಬಗ್ಗೆ ಆತಂಕವಿದ್ದರೆ, ಆಗ ನಿಮ್ಮ ಕೇಂದ್ರೀಕೃತೆಯು ಹೋಗುತ್ತದೆ. ನಿಮ್ಮ ಮನಸ್ಸು ಕದಡುತ್ತದೆ.
ನೀವು ಅತಿಯಾಗಿ ತಿಂದಿರುವಿರೆಂದು ಅಥವಾ ನಿಮಗೆ ಸಾಕಷ್ಟು ನಿದ್ರೆ ಸಿಗಲಿಲ್ಲವೆಂದು ಅಥವಾ ಏನನ್ನಾದರೂ ಕೂಡಲೇ ಸಾಧಿಸಬೇಕೆಂಬ ಆತಂಕವಿದೆಯೆಂದಿಟ್ಟುಕೊಳ್ಳಿ, ಆಗ ಮನಸ್ಸು ಏಕಾಗ್ರತೆಯಿಂದಿರುವುದಿಲ್ಲ. ನಮ್ಮ ಇಂದ್ರಿಯಗಳಲ್ಲಿ ಯಾವುದರದ್ದೇ; ಸ್ಪರ್ಶ, ವಾಸನೆ, ರುಚಿ, ಶ್ರವಣ ಮತ್ತು ದೃಶ್ಯ; ಅತಿಯಾದ ಬಳಕೆಯು ನೀವು ನಿಮ್ಮ ಏಕಾಗ್ರತೆಯನ್ನು ಕಳೆದುಕೊಳ್ಳುವಂತೆ ಮಾಡುತ್ತದೆ.
ಗೀತೆಯಲ್ಲಿ ಹೀಗೆಂದು ಹೇಳಲಾಗಿದೆ, ’ಎಲ್ಲಾ ಐದು ಇಂದ್ರಿಯಗಳನ್ನು ಸ್ವಲ್ಪಕಾಲ ಬಿಟ್ಟುಬಿಡಿ ಹಾಗೂ ನಂತರ ಮನಸ್ಸು ನಿಜವಾಗಿಯೂ ಕೇಂದ್ರೀಕೃತವಾಗುವುದನ್ನು ಮತ್ತು ನಿಮ್ಮ ಬುದ್ಧಿಯು ಲೇಸರಿನಂತೆ ತೀಕ್ಷ್ಣವಾಗುವುದನ್ನು ನೀವು ಗಮನಿಸುವಿರಿ.’
ಅದು ನೀವು ಒಂದು ಉನ್ನತ ಶಿಬಿರದ ಬಳಿಕ ನಿಮಗೇನನ್ನಿಸುವುದೋ ಹಾಗೆ, ಮನಸ್ಸು ಒಂದು ಸ್ಫಟಿಕದಷ್ಟು ಸ್ಪಷ್ಟವಾಗುವುದು. ನಿಮ್ಮಲ್ಲಿ ಎಷ್ಟು ಮಂದಿಗೆ ಧ್ಯಾನದಲ್ಲಿ ಈ ಅನುಭವವಾಗಿದೆ?
(ಸಭಿಕರಲ್ಲಿ ಅನೇಕರು ತಮ್ಮ ಕೈಗಳನ್ನು ಮೇಲೆತ್ತುತ್ತಾರೆ)
ನೀವು ನಿಮ್ಮ ಇಂದ್ರಿಯಗಳನ್ನು ಅವುಗಳ ಸಾಮರ್ಥ್ಯಕ್ಕಿಂತ ಹೆಚ್ಚಾಗಿ ಬಳಸಿದ ಕ್ಷಣ ನಿಮಗೆ ಬಲಗುಂದಿದ ಅನುಭವವಾಗುತ್ತದೆ. ನಿಮಗೆ ಬಲಗುಂದಿದಂತೆ ಅನ್ನಿಸುವಾಗ, ಮನಸ್ಸು ಎಲ್ಲಾ ಕಡೆ ಓಡುತ್ತದೆ. ಸಾಕಷ್ಟು ಪ್ರಾಣವಿರುವುದಿಲ್ಲ; ಸಾಕಷ್ಟು ಶಕ್ತಿಯಿರುವುದಿಲ್ಲ.

ಪ್ರಶ್ನೆ: ನನ್ನ ಸಂಗಾತಿಯು ನನಗೆ ಮೋಸ ಮಾಡಿದನು. ನಾನು ಅವನನ್ನು ಎದುರಿಸಿದಾಗ ಅವನು, ’ನೀನು ನನ್ನನ್ನು ಸ್ವಾಧೀನಪಡಿಸಿಕೊಂಡಿಲ್ಲ’ ಎಂದು ಹೇಳುತ್ತಾನೆ. ಅಂತಹ ಒಂದು ಪರಿಸ್ಥಿತಿಯಲ್ಲಿ ಏನು ಮಾಡುವುದು?

ಶ್ರೀ ಶ್ರೀ ರವಿ ಶಂಕರ್: ಅದೊಂದು ಬಹಳ ಕಠಿಣ ಪರಿಸ್ಥಿತಿ. ನನಗೆ ಯಾವುದೇ ಅನುಭವವಿಲ್ಲ, ನಾನು ಹೇಗೆ ನಿನಗೆ ಯಾವುದಾದರೂ ಉಪಾಯ ಅಥವಾ ಸಲಹೆಗಳನ್ನು ನೀಡಲು ಸಾಧ್ಯ? ಆದರೆ ನನಗೆ ನಿನ್ನ ಸಂಕಟ ಅರ್ಥವಾಗುತ್ತದೆ.
ಅವರು ಯಾಕೆ ನಿಮಗೆ ಮೋಸ ಮಾಡುತ್ತಾರೆಂದು ನಿಮಗೆ ಗೊತ್ತೇ? ಅದು ಯಾಕೆಂದರೆ, ಅವರು ನಿಮ್ಮ ಪ್ರೀತಿಗೆ ಬೆಲೆ ಕೊಡುತ್ತಾರೆ ಮತ್ತು ನಿಮ್ಮ ಪ್ರೀತಿಯನ್ನು ಕಳೆದುಕೊಳ್ಳುವ ಭಯ ಹೊಂದಿರುತ್ತಾರೆ.
ಯಾವಾಗೆಲ್ಲಾ ನಿಮಗೆ ನಿಕಟವಾದವರು ನಿಮಗೊಂದು ಸುಳ್ಳು ಹೇಳುತ್ತಾರೋ, ಅದು ಕೇವಲ, ಪ್ರೀತಿಯು ಸತ್ಯದ ಮೇಲೆ ಜಯ ಸಾಧಿಸುವುದರಿಂದಾಗಿ. ಸತ್ಯವು ಜಯಿಸಿದರೆ, ಅದು ಪ್ರೀತಿಯನ್ನು ಕಳೆದುಕೊಳ್ಳುವ ಭಯವಾಗಿದೆ. ಹೀಗಾಗಿ ಒಬ್ಬ ವ್ಯಕ್ತಿಯು ಸುಳ್ಳು ಹೇಳುವುದು ಯಾಕೆಂದರೆ, ಅವರು ಇನ್ನೊಬ್ಬ ವ್ಯಕ್ತಿಯ ಪ್ರೀತಿಯನ್ನು ಕಳೆದುಕೊಳ್ಳಲು ಬಯಸುವುದಿಲ್ಲವಾದ್ದರಿಂದ.
ಒಬ್ಬರು ನಿಮಗೆ ಮೋಸ ಮಾಡುತ್ತಿರುವಾಗ ಮತ್ತು ಅವರ ಮನಸ್ಸು ಬೇರೊಬ್ಬರ ಕಡೆ ಹೋಗುತ್ತಿರುವಾಗ, ನೀವೇನು ಮಾಡಬೇಕು? ಸುಮ್ಮನೆ ಪ್ರಾರ್ಥಿಸಿ, ತಾಳ್ಮೆಯಿಂದಿರಿ ಮತ್ತು ಅವರ ಮನಸ್ಸನ್ನು ಅರ್ಥ ಮಾಡಿಕೊಳ್ಳಿ. ಅವರಿಗೆ ಮೂರು ಎಚ್ಚರಿಕೆಗಳನ್ನು ಕೊಡಿ ಮತ್ತು ಆಗಲೂ ಅವರು ಕೇಳದಿದ್ದರೆ, ಆಗ ಕೆಲವು ತೀವ್ರ ಕ್ರಮಗಳನ್ನು ತೆಗೆದುಕೊಳ್ಳಿ.
ಬಹುತೇಕ ಪ್ರತಿಯೊಂದು ದೊಡ್ಡ ನಗರದ ನ್ಯಾಯಾಲಯಗಳಲ್ಲಿ ನಾವೊಂದು ಮಧ್ಯಸ್ಥಿಕೆಯ ಖಾನೆಯನ್ನು ರಚಿಸಿದ್ದೇವೆ. ಇಂತಹ ಮುಕದ್ದಮೆಗಳು ಬರುವಾಗ ಮತ್ತು ದಂಪತಿಗಳು ನಮ್ಮ ಶಿಕ್ಷಕರೊಂದಿಗೆ ಮಾತನಾಡಿದಾಗ, ಅವರು ಭಿನ್ನಾಭಿಪ್ರಾಯ ಪರಿಹಾರದಲ್ಲಿ ಸಹಾಯ ಮಾಡುತ್ತಾರೆ. ನಮ್ಮ ಶಿಕ್ಷಕರು ಅವರೊಂದಿಗೆ ಮಾತನಾಡುತ್ತಾರೆ ಮತ್ತು ಅವರು ಜೀವನವನ್ನು ಒಂದು ವಿಶಾಲ ದೃಷ್ಟಿಕೋನದಿಂದ ಅರ್ಥ ಮಾಡಿಕೊಳ್ಳುವಂತೆ ಮಾಡುತ್ತಾರೆ. ಆಗ ಇದ್ದಕ್ಕಿದ್ದಂತೆ ಅವರು ರಾಜಿಯಾಗುತ್ತಾರೆ.
ಮಧ್ಯಸ್ಥಿಕೆಯ ಶಾಖೆಗೆ ಕಳುಹಿಸಲ್ಪಟ್ಟ ಮುಕದ್ದಮೆಗಳಲ್ಲಿ ೮೦%ದಷ್ಟು, ಆರ್ಟ್ ಆಫ್ ಲಿವಿಂಗ್ ಸ್ವಯಂಸೇವಕರಿಂದ ಪರಿಹರಿಸಲ್ಪಡುತ್ತಿವೆಯೆಂಬುದಾಗಿ ದಿಲ್ಲಿಯ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳು ನಮಗೆ ಹೇಳಿದರು. ಇದೊಂದು ಸ್ವಾಗತಾರ್ಹ ಸಮಾಚಾರವಾಗಿದೆ.

ಪ್ರಶ್ನೆ: ಐ.ಎಸ್.ಐ.ಎಸ್. ಭಯೋತ್ಪಾದಕರು ಮುಗ್ಧ ಜನರನ್ನು ನಿರ್ದಯವಾಗಿ ಕೊಲ್ಲುತ್ತಿರುವಾಗ ದೇವರೆಲ್ಲಿದ್ದಾರೆ?

ಶ್ರೀ ಶ್ರೀ ರವಿ ಶಂಕರ್: ಅವನೆಲ್ಲೋ ನಿದ್ರಿಸುತ್ತಿರಬೇಕು. ನಾವು ಅವನನ್ನು ಎಚ್ಚರಿಸಬೇಕಾಗಿದೆ. ದೈವತ್ವವು ಪ್ರತಿಯೊಬ್ಬರಲ್ಲೂ ಇದೆ, ಅದು ನಿದ್ರಿಸುತ್ತಿದೆ; ವಿಶೇಷವಾಗಿ ಎಲ್ಲಿ ಐ.ಎಸ್.ಐ.ಎಸ್. ಘಟನೆಗಳು ನಡೆಯುತ್ತಿವೆಯೋ ಅಲ್ಲಿ.
ಇದು ನಿಜಕ್ಕೂ ನೋವಿನ ಸಂಗತಿ. ಇವತ್ತು ಕೂಡಾ ಪಾಕಿಸ್ತಾನದ ಪೇಶಾವರದಲ್ಲಿನ ಒಂದು ಮಸೀದಿಯಲ್ಲಿ ಒಂದು ದಾಳಿ ನಡೆಯಿತು. ಜನರು ಪ್ರಾರ್ಥಿಸುತ್ತಿದ್ದರು ಮತ್ತು ಅವರು ಹೋಗಿ ಅವರ ಮೇಲೆ ದಾಳಿ ಮಾಡಿದರು. ಇದು ಬಹಳ ದುರದೃಷ್ಟಕರ. ಜನರು ಬದಲಾಗುವರೆಂದು ನಾವು ಆಶಿಸೋಣ; ಅದಕ್ಕಾಗಿ ಪ್ರಾರ್ಥಿಸಿ.

ಪ್ರಶ್ನೆ: ಅಚ್ಚುಮೆಚ್ಚಿನ ಗುರುದೇವ, ಇಲ್ಲಿ ನಮ್ಮಲ್ಲಿ ಹಲವರಿಗೆ ವಾತ-ಪಿತ್ತದ ಅಸಮತೋಲನವಿದೆ. ಸುದರ್ಶನ ಕ್ರಿಯೆ ಮತ್ತು ಪ್ರಾಣಾಯಾಮಗಳು ಸಹಕಾರಿಯಾಗಬೇಕು, ಹಾಗಾದರೆ ನಮ್ಮಲ್ಲಿ ಈ ಅಸಮತೋಲನ ಯಾಕಾಗುತ್ತದೆ?

ಶ್ರೀ ಶ್ರೀ ರವಿ ಶಂಕರ್: ನೀವು ಪ್ರಯಾಣ ಮಾಡುವಾಗ ಹೀಗಾಗುವುದು ಸಹಜ. ಆಹಾರ, ಪರಿಸರ, ವಾತಾವರಣ ಇವುಗಳು ವಾತ-ಪಿತ್ತ-ಕಫ ಅಸಮತೋಲನವನ್ನು ಉಂಟುಮಾಡಬಹುದು.
ಮೂರು ದೋಷಗಳು, ಅಂದರೆ, ವಾತ, ಪಿತ್ತ ಮತ್ತು ಕಫಗಳು ನಿತ್ಯವಾದುದಲ್ಲ; ಅವುಗಳು ಮೋಡಗಳಂತೆ, ನೀರಿನಂತೆ. ನೀರು ಯಾವಾಗಲೂ ಸ್ಥಿರವಾಗಿರಲು ಸಾಧ್ಯವಿಲ್ಲ. ನೀರು ಅಲೆಗಳನ್ನು ಹೊಂದಿದೆ, ಅದು ದ್ರವವಾಗಿದೆ, ಅದು ಕ್ರಿಯಾತ್ಮಕವಾಗಿದೆ ಮತ್ತು ಬದಲಾಗುತ್ತಿರುತ್ತದೆ. ಅದೇ ರೀತಿಯಲ್ಲಿ, ಮೋಡಗಳು ಬದಲಾಗುತ್ತವೆ, ವಾಯು ಬದಲಾಗುತ್ತದೆ. ವಿಶ್ವದಲ್ಲಿರುವ ಎಲ್ಲವೂ ಬದಲಾಗುತ್ತಿದೆ ಮತ್ತು ದೋಷಗಳು ಕೂಡಾ ಬದಲಾಗುತ್ತಿರುತ್ತವೆ.

ಪ್ರಶ್ನೆ: ಒಮ್ಮೆ ನಾವು ಇಲ್ಲಿಗೆ ತಲಪಿದ ಬಳಿಕ ಸುಮ್ಮನೆ ವಿಶ್ರಾಮ ಮಾಡಬೇಕೆಂದು ನೀವು ನಮಗೆ ಹೇಳುತ್ತೀರಿ. ನಾನು ಒಪ್ಪುತ್ತೇನೆ ಮತ್ತು ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ನಾನು ನನ್ನ ಧರ್ಮವನ್ನು ಮಾಡುವೆನು. ನನ್ನನ್ನು ನೋಡಿಕೊಳ್ಳುವ ಹಾಗೂ ಈ ಎಲ್ಲಾ ನೋವು, ಬಯಕೆಗಳು ಮತ್ತು ಉಸಿರುಗಟ್ಟುವಿಕೆಗಳಿಂದ ನನ್ನನ್ನು ದೂರವಿರಿಸುವೆನೆಂಬ ಭಾಷೆಯನ್ನು ನೀವು ನೀಡುವಿರಾ? ಒಪ್ಪಂದವೇ?

ಶ್ರೀ ಶ್ರೀ ರವಿ ಶಂಕರ್: (ನಗು) ನಾನಿದನ್ನು ಪರಿಗಣಿಸುತ್ತೇನೆ! ಒಂದು ಒಪ್ಪಂದವು ಯಾವಾಗಲೂ ಎರಡೂ ಬದಿಗಿರುವಂತದ್ದು. ನನಗೆ ಆಶೀರ್ವಾದ ಮಾಡಿರೆಂದು ಜನರು ಹೇಳುತ್ತಾರೆ, ಆದರೆ ಅವರು ತಮ್ಮೊಂದಿಗೆ ಒಂದು ಸಣ್ಣ ಲೋಟವನ್ನು ತರುತ್ತಾರೆ. ನೀವು ಕೇವಲ ೧೦೦ ಮಿ.ಲೀ. ಹಾಲು ಹಿಡಿಸುವ ಒಂದು ಚಿಕ್ಕ ಲೋಟವನ್ನು ತಂದು, ೧ ಲೀಟರ್ ಹಾಲನ್ನು ನಿಮಗೆ ನೀಡಲು ನನ್ನಲ್ಲಿ ಹೇಳಿದರೆ, ನಾನದನ್ನು ನಿಮಗೆ ಹೇಗೆ ನೀಡಲು ಸಾಧ್ಯ? ನೀವೊಂದು ದೊಡ್ಡ ಪಾತ್ರೆಯನ್ನು ತರಬೇಕು.
೧೦ ಲೀಟರ್ ಹಿಡಿಸುವ ಒಂದು ಪಾತ್ರೆಯನ್ನು ನೀವು ತಂದರೆ, ನಾನು ನಿಮಗೆ ೧೦ ಲೀಟರ್ ನೀಡುವೆನು. ಹೀಗಾಗಿ ನೀವು ನಿಮ್ಮ ಸಾಮರ್ಥ್ಯವನ್ನು ವಿಸ್ತರಿಸಬೇಕಾಗಿದೆ. ಜೀವನವು ಸಾಮರ್ಥ್ಯಗಳು ಹಾಗೂ ಕೃಪೆಯ ಒಂದು ಸಮ್ಮಿಶ್ರಣವಾಗಿದೆ. ಜೀವನದಲ್ಲಿ ಸ್ವಪ್ರಯತ್ನ ಮತ್ತು ಕೃಪೆ ಎರಡೂ ಬೇಕು.

Link to go through this blog as a slide show:
http://www.speakingtree.in/public/spiritual-slideshow/seekers/self-improvement/tough-times-make-you-stronger