ಭಾನುವಾರ, ಫೆಬ್ರವರಿ 1, 2015

ಬದುಕಿನ ಅರ್ಥ

೧ ಫೆಬ್ರುವರಿ ೨೦೧೫
ಬೆಂಗಳೂರು, ಭಾರತ

ಪ್ರಶ್ನೆ: ಮುಂಬರುವ ತಲೆಮಾರುಗಳಲ್ಲಿ ಲೌಕಿಕತೆ, ಪ್ರತ್ಯೇಕತಾವಾದಿ ಪ್ರವೃತ್ತಿಗಳು, ಭ್ರಷ್ಟಾಚಾರ ಮತ್ತು ಅಪರಾಧಶೀಲತೆಗಳೊಂದಿಗೆ ಆಧ್ಯಾತ್ಮವು ಹೇಗೆ ಹೋರಾಡಲಿದೆ?

ಶ್ರೀ ಶ್ರೀ ರವಿ ಶಂಕರ್: ಅಪರಾಧಶೀಲತೆಯು ಅಸ್ತಿತ್ವದಲ್ಲಿರಲು ಕಾರಣವೇನೆಂಬುದು ನಿಮಗೆ ಗೊತ್ತಾ? ಅದು ಒತ್ತಡದಿಂದಾಗಿ. ಮತ್ತು ಒತ್ತಡಕ್ಕೆ ಕಾರಣವೇನು? ಅದು ಇರುವುದು ಯಾಕೆಂದರೆ, ಬಹಳ ಕಡಿಮೆ ಶಕ್ತಿ ಮತ್ತು ಅದಕ್ಕಿಂತಲೂ ಕಡಿಮೆ ಸಮಯದೊಂದಿಗೆ ಜನರು ಬಹಳಷ್ಟನ್ನು ಸಾಧಿಸಲು ಬಯಸುತ್ತಾರೆ. ಇದು ಒತ್ತಡ ಹಾಗೂ ಮನಸ್ತಾಪಗಳನ್ನು ಸೃಷ್ಟಿಸುತ್ತದೆ. ಧ್ಯಾನ ಮಾಡುವುದು ಹೇಗೆ, ಶಾಂತವಾಗಿರುವುದು ಹೇಗೆ ಮತ್ತು ತಮ್ಮೊಳಗೆಯೇ ಆನಂದವನ್ನು ಕಂಡುಕೊಳ್ಳುವುದು ಹೇಗೆಂಬುದನ್ನು ಯಾವತ್ತೂ ಅವರಿಗೆ ಕಲಿಸಲಾಗಿಲ್ಲ. ಜನರು ಅಪರಾಧಗಳಲ್ಲಿ ತೊಡಗುವುದು ಆನಂದದ ಹುಡುಕಾಟದಲ್ಲಿಯೇ. ಸಂತೋಷದ ಹುಡುಕಾಟದಲ್ಲಿಯೇ ಜನರು ಭ್ರಷ್ಟರಾಗುತ್ತಿರುವುದು. ಅದಕ್ಕೇ ಶಿಕ್ಷಣ ಮತ್ತು ಒಳ್ಳೆಯ ಸಂಸ್ಕೃತಿಯಲ್ಲಿ ಬೆಳೆಯುವುದು ಖಂಡಿತವಾಗಿಯೂ ಅಗತ್ಯ.

ನೋಡಿ, ನೀವೊಂದು ನಿರ್ದಿಷ್ಟವಾದ ಸಂಸ್ಕೃತಿಯಲ್ಲಿ ಬೆಳೆದಿರುತ್ತೀರಿ. ಮನೆಮಂದಿ ನಿಮಗೆ ಸಭ್ಯತೆ ಮತ್ತು ಒಳ್ಳೆಯ ನಡವಳಿಕೆಗಳನ್ನು ಕಲಿಸಿದ್ದಾರೆ. ಅವೆಲ್ಲವನ್ನು ಮಕ್ಕಳಿಗೆ ಕಲಿಸದಿರುವ ಇನ್ನೊಂದು ಮನೆಯನ್ನು ಸುಮ್ಮನೆ ಊಹಿಸಿಕೊಳ್ಳಿ. ಹೆತ್ತವರು ಯಾವಾಗಲೂ ಪರಸ್ಪರ ಜಗಳವಾಡುತ್ತಿದ್ದರು. ಅವರು ಒಬ್ಬರು ಇನ್ನೊಬ್ಬರೆಡೆಗೆ ಬಟ್ಟಲು ಮತ್ತು ಚಾಕುಗಳನ್ನು ಎಸೆಯುತ್ತಿದ್ದರು. ಇದು ಮಕ್ಕಳಲ್ಲಿ ಯಾವ ರೀತಿಯ ಸಂಸ್ಕಾರಗಳನ್ನು ಅಚ್ಚೊತ್ತಬಹುದು? ಅದೇ ಸಂಸ್ಕಾರಗಳನ್ನು ಅವರು ಪಡೆಯಬಹುದು. ಅವರು ಹೊರಹೋಗಿ ಪರಸ್ಪರರ ಕಡೆಗೆ ತಟ್ಟೆ ಮತ್ತು ಕಲ್ಲುಗಳನ್ನು ಎಸೆಯಬಹುದು.  

"ಹಿಂಸೆಯು ಅವಮಾನಕರ" ಎಂದು ನಿಮಗೆ ಕಲಿಸಲಾಗಿರುವ ಒಂದು ಪರಿಸರದಲ್ಲಿ ನೀವು ಬೆಳೆದಿದ್ದರೆ, ಆಗ ನೀವು ಹಿಂಸೆಯಲ್ಲಿ ಪಾಲ್ಗೊಳ್ಳಲಾರಿರಿ. ಆದರೆ, "ಹಿಂಸೆಯಲ್ಲಿ ಹೆಗ್ಗಳಿಕೆಯನ್ನು ಹೊಂದು. ಹೆಚ್ಚಿನ ಹಿಂಸೆಯು ನಿನ್ನನ್ನು ಒಬ್ಬ ಪೌರುಷ ಹೊಂದಿದ ವ್ಯಕ್ತಿಯನ್ನಾಗಿಸುತ್ತದೆ" ಎಂದು ನಿಮಗೆ ಕಲಿಸಲಾಗಿದ್ದಲ್ಲಿ, ಆಗ ನೀವು ಅದರಲ್ಲಿ ಪಾಲ್ಗೊಳ್ಳುವಿರಿ.

ಪ್ರಶ್ನೆ: ಸೆಲ್ ಟವರುಗಳಿಂದ ಬರುವ ವಿಕಿರಣಗಳ ಕೆಟ್ಟ ಪರಿಣಾಮಗಳ ಬಗ್ಗೆ ಬಹಳಷ್ಟು ಕೇಳಿಬರುತ್ತಿದೆ. ನಮ್ಮ ಮನೆಯಲ್ಲಿ, ಸೆಲ್ ಟವರುಗಳಿಂದ ಬರುವ ವಿಕಿರಣಗಳ ಮಟ್ಟವನ್ನು ನಾವು ಅಳತೆ ಮಾಡಿದಾಗ ಅದು ಅಪಾಯದ ವಲಯದಲ್ಲಿರಲಿಲ್ಲ. ಆದರೆ, ವೈ-ಫೈಯು ಹೊರಹೊಮ್ಮುತ್ತಿದ್ದ ವಿಕಿರಣಗಳು ಬಹಳ ಮಟ್ಟಿಗೆ ಅಪಾಯ ವಲಯದಲ್ಲಿತ್ತು. ದಯವಿಟ್ಟು ನೀವು ಇದರ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸುವಿರೇ ಮತ್ತು ಇದು ಮುಂದಕ್ಕೆ ಯಾವ ರೀತಿ ಸಾಗುವುದೆಂದು ನಿಮಗನಿಸುತ್ತದೆ?

ಶ್ರೀ ಶ್ರೀ ರವಿ ಶಂಕರ್: ವೈ-ಫೈಯು ಕಚೇರಿಯ ಸಮಯಕ್ಕೆ ಸೀಮಿತವಾಗಿರಬೇಕು. ಆನಂತರ ನೀವದನ್ನು ಸ್ವಿಚ್ ಆಫ್ ಮಾಡಬೇಕು. ಮನೆಯಲ್ಲಿಯೂ ಕೂಡಾ ಬಳಕೆಯ ನಂತರ ನೀವು ವೈ-ಫೈಯನ್ನು ಸ್ವಿಚ್ ಆಫ್ ಮಾಡಬೇಕು. ಅದೇ ರೀತಿ, ವೈ-ಫೈಯಿರದ ವಲಯಗಳಿರಬೇಕು. ಮಿತವಾದ ಪ್ರಮಾಣದಲ್ಲಿ ಅದು ಪರವಾಗಿಲ್ಲ.

ನಮ್ಮ ನರಮಂಡಲಕ್ಕೆ ಸ್ವಲ್ಪ ಸಮಯದ ಬಳಿಕ ಅದು ಅಭ್ಯಾಸವಾಗಿಬಿಡುತ್ತದೆ. ಹೊಂದಾಣಿಕೆಯು ನಮ್ಮ ನರಮಂಡಲದಲ್ಲಿ ಅಂತರ್ಗತವಾಗಿದೆ ಮತ್ತು ಇದು ಕೆಲಸ ಮಾಡುವುದು ಯಾವುದೇ ಒತ್ತಡವಿಲ್ಲದಿರುವಾಗ ಮಾತ್ರ. ನೀವು ಒತ್ತಡದಲ್ಲಿದ್ದರೆ, ನಿಮ್ಮ ಹೊಂದಾಣಿಕೆಯ ಸಾಮರ್ಥ್ಯವು ಕಡಿಮೆಯಾಗುತ್ತದೆ. ಮತ್ತು ಹೊಂದಾಣಿಕೆಯ ಸಾಮರ್ಥ್ಯ ಕಡಿಮೆಯಾಗುವಾಗ, ನೀವು ವಿಕಿರಣದ ಪ್ರಭಾವಗಳಿಗೆ ಮತ್ತು ರೋಗಗಳಿಗೆ ಇತರರಿಗಿಂತ ಎಷ್ಟೋ ಹೆಚ್ಚು ತುತ್ತಾಗುತ್ತೀರಿ. ಆದ್ದರಿಂದ ಒತ್ತಡದಿಂದ ಮುಕ್ತರಾಗುವ ಮೂಲಕ ನಿಮ್ಮ ಹೊಂದಾಣಿಕೆಯ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಿ. ನಿಮ್ಮನ್ನು ಸಂತೋಷವಾಗಿರಿಸಿಕೊಳ್ಳಿ ಮತ್ತು ಖಂಡಿತವಾಗಿಯೂ ಪ್ರಾಣಾಯಾಮ, ಯೋಗ, ಧ್ಯಾನಗಳನ್ನು ಮಾಡಿ ಹಾಗೂ ಆರೋಗ್ಯಕರ ಆಹಾರವನ್ನು ಸೇವಿಸಿ. ಇದೊಂದು ದೊಡ್ಡ ಮಟ್ಟಿಗೆ ಸಹಾಯ ಮಾಡಬಲ್ಲದು.

ಪ್ರಶ್ನೆ: ಗುರುದೇವ, ನಾನು ಅರ್ಜೆಂಟೀನಾದಿಂದ ಬಂದಿದ್ದೇನೆ. ಈಗ ವೈದ್ಯಕೀಯ ಚಿಕಿತ್ಸೆಗಳು ಬದಲಾಗುತ್ತಿವೆ. ಇದರ ಬಗ್ಗೆ ನಿಮಗೇನನ್ನಿಸುತ್ತದೆಯೆಂದು ನನಗೆ ತಿಳಿಯಬೇಕಿದೆ. ನಿಮ್ಮ ಪ್ರಕಾರ, ವೈದ್ಯರು ಏನನ್ನು ತಿಳಿಯಬೇಕಾಗಿದೆ? 

ಶ್ರೀ ಶ್ರೀ ರವಿ ಶಂಕರ್: ವೈದ್ಯರು ಒಂದು ಹೊಸ ಮಾದರಿಯನ್ನು ಹೊಂದಿರಬೇಕು. ತಾವು ೨೦ ವರ್ಷಗಳ ಮೊದಲು ಓದಿದುದರ ಬಗ್ಗೆ ಅವರು ಅಂಧಾಭಿಮಾನ ಹೊಂದಿರಲು ಸಾಧ್ಯವಿಲ್ಲ. ವೈದ್ಯಕೀಯ ಕ್ಷೇತ್ರವು ಬಹಳ ವೇಗವಾಗಿ ಬದಲಾಗುತ್ತಿದೆಯೆಂಬುದನ್ನು ಅವರು ತಿಳಿಯಬೇಕು. ಅಂತಿಮವಾದ ಚಿಕಿತ್ಸೆಯೆಂದು ಯಾವುದನ್ನು ಪರಿಗಣಿಸಲಾಗಿತ್ತೋ, ಅದನ್ನು ಇವತ್ತು ತಿರಸ್ಕರಿಸಲಾಗಿದೆ. ಯಾವುದು ಸರಿಯಾದ ವಿಧಾನವೆಂದು ಪರಿಗಣಿಸಲ್ಪಟ್ಟಿತ್ತೋ, ಇವತ್ತು ಅದು ತಪ್ಪಾದ ವಿಧಾನವಾಗಿದೆ.

ಮೊದಲನೆಯದಾಗಿ, ವೈದ್ಯಕೀಯ ವಿಜ್ಞಾನವು ಅಭಿವೃದ್ಧಿ ಹೊಂದುತ್ತಿದೆ, ಬೆಳೆಯುತ್ತಿದೆ ಮತ್ತು ಬದಲಾಗುತ್ತಿದೆ. ವೈದ್ಯರು ಇದನ್ನು ತಿಳಿದುಕೊಂಡರೆ, ಹಲವಾರು ವರ್ಷಗಳ ಮೊದಲು ತಾವು ಕಲಿತಿದ್ದರ ಮೂಲಕ ಯಾವುದು ತಮ್ಮ ಮನಸ್ಸಿನಲ್ಲಿ ಸಿಕ್ಕಿಹಾಕಿಕೊಂಡಿದೆಯೋ ಅದರ ಬಗ್ಗೆ ಅವರು ಅಂಧಾಭಿಮಾನವನ್ನು ಹೊಂದುವುದಿಲ್ಲ. ಎರಡನೆಯದಾಗಿ, ಒಂದು ಸಮಗ್ರವಾದ ವಿಧಾನವನ್ನು ಸ್ವೀಕರಿಸಬೇಕಾಗಿದೆ. ಸಾಮಾನ್ಯವಾಗಿ ಅಲೋಪತಿಯಲ್ಲಿ, ಅವರು ಕೇವಲ ಔಷಧಿಗಳನ್ನು ಮಾತ್ರ ಶಿಫಾರಸು ಮಾಡುತ್ತಾರೆ, ಅವರು ಪಥ್ಯ ಅಥವಾ ಜೀವನಶೈಲಿಯ ಬದಲಾವಣೆಗಳನ್ನು ಶಿಫಾರಸು ಮಾಡುವುದಿಲ್ಲ.

ಆಯುರ್ವೇದದಲ್ಲಿ ಇರುವಂತೆ ಸಮಗ್ರವಾದ ವಿಧಾನವು ಬೇಕಾಗಿದೆ. ಆಯುರ್ವೇದದ ವಿಚಾರ ಬಂದಾಗ ಕೂಡಾ, ನೀವು ಅದರ ಬಗ್ಗೆ ಅಂಧಾಭಿಮಾನವನ್ನು ಹೊಂದಿರಲು ಸಾಧ್ಯವಿಲ್ಲ. "ನಾನು ಆಯುರ್ವೇದವನ್ನು ಮಾತ್ರ ಬಳಸಲು ಬಯಸುತ್ತೇನೆ" ಎಂದು ಕೆಲವರು ಹೇಳುತ್ತಾರೆ. ನಿಮ್ಮಲ್ಲೊಂದು ವಿಶಾಲವಾದ ದೃಷ್ಟಿಕೋನವಿರಬೇಕು. ರೋಗಗಳು ಬರುವುದಕ್ಕಿಂತ ಮೊದಲೇ ಅವುಗಳನ್ನು ತಡೆಯುವುದಕ್ಕಾಗಿ, ತಡೆಗಟ್ಟುವ ಔಷಧಿಗಳಿಗೆ ಸಂಬಂಧಿಸಿದ ಶಿಕ್ಷಣಕ್ಕೆ ಆದ್ಯತೆ ಕೊಡಬೇಕು.  

ಪ್ರಶ್ನೆ: ನನ್ನ ಜೀವನದ ಉದ್ದೇಶವನ್ನು ನಾನು ತಿಳಿಯುವುದು ಹೇಗೆ?

ಶ್ರೀ ಶ್ರೀ ರವಿ ಶಂಕರ್: ನಿನ್ನ ಉದ್ದೇಶಕ್ಕೆ ಸರಿಹೊಂದದ ಎಲ್ಲಾ ವಿಷಯಗಳನ್ನು ಒಂದು ಪಟ್ಟಿ ಮಾಡು. ಜೀವನದ ಉದ್ದೇಶವು ಕೇವಲ ತಿನ್ನುವುದು ಮತ್ತು ಟಿವಿ ನೋಡುವುದಲ್ಲ. ಅದು ಇತರ ಜನರೊಂದಿಗೆ ಜಗಳ ಮಾಡುವುದಲ್ಲ. ಅದು, ನೀನು ಸಾಯುವ ವರೆಗೆ ನಿನ್ನ ಬ್ಯಾಂಕಿನಲ್ಲಿ ಹಣವನ್ನು ಠೇವಣಿ ಇಡುವುದಲ್ಲ. ಹಣ ಸಂಪಾದಿಸುವುದಕ್ಕೆ ನಾವು ನಮ್ಮ ಜೀವಮಾನವಿಡೀ ಕೆಲಸ ಮಾಡುತ್ತೇವೆ. ಅದನ್ನು ನಾವು ಬ್ಯಾಂಕಿನಲ್ಲಿ ಠೇವಣಿ ಇಡುತ್ತೇವೆ ಮತ್ತು ಒಂದು ಇಚ್ಛಾಪತ್ರ ಮಾಡುವ ಮೊದಲೇ ನಾವು ಸಾಯುತ್ತೇವೆ. ಆನಂತರ, ಸಂತೋಷವಾಗಿ ಜೊತೆಯಲ್ಲಿ ಜೀವಿಸಿದ್ದ ಮಕ್ಕಳು ಈ ಹಣಕ್ಕಾಗಿ ಜಗಳ ಮಾಡಲು ತೊಡಗುತ್ತಾರೆ. ಜಗತ್ತಿನಲ್ಲಿ ಆಗುವುದು ಇದೇ.

ನಿನ್ನ ಜೀವನದ ಉದ್ದೇಶವಾಗಿರದ ವಿಷಯಗಳು ಯಾವುವು? ಸುಮ್ಮನೆ ಒಂದು ಪಟ್ಟಿ ಮಾಡು. ಆಗ ನಿನಗೆ ತಿಳಿಯುವುದು ನಿಜವಾದ ಉದ್ದೇಶ ಏನೆಂಬುದು.

ಪ್ರಶ್ನೆ: ಗುರುದೇವ, ತಂಡದಲ್ಲಿರುವ ಒಬ್ಬರಿಗೆ ಯಾವುದೋ ವೈಯಕ್ತಿಕ ಕಾರಣದಿಂದಾಗಿ ಸರಿಯಾಗಿ ಕಾರ್ಯ ನಿರ್ವಹಿಸಲು ಸಾಧ್ಯವಿಲ್ಲದೇ ಹೋದರೆ, ಆಗ ತಮ್ಮ ಸಮಸ್ಯೆಗಳ ಹೊರತಾಗಿಯೂ ತಂಡಕ್ಕಾಗಿ ಕೆಲಸ ಮಾಡುವಂತೆ ನಾವು ಅವರನ್ನು ಪ್ರೇರೇಪಿಸುವುದು ಹೇಗೆ?

ಶ್ರೀ ಶ್ರೀ ರವಿ ಶಂಕರ್: ಯಾವುದೇ ಉಪಾಯವಿಲ್ಲ. ಅವರಿಗೊಂದು ವೈಯಕ್ತಿಕ ಸಮಸ್ಯೆಯಿರುವಾಗ ಅವರು ಅದರೊಂದಿಗೆ ಸಿಕ್ಕಿಹಾಕಿಕೊಳ್ಳುತ್ತಾರೆ ಮತ್ತು ಅವರು ಚೆನ್ನಾಗಿ ಕಾರ್ಯ ನಿರ್ವಹಿಸುವಂತೆ ಮಾಡಲು ನಿಮಗೆ ಸಾಧ್ಯವಿಲ್ಲ. ನೀವು ಕೇವಲ ಅವರಲ್ಲಿ ವಿಶ್ವಾಸವನ್ನು ತುಂಬಬಹುದು ಮತ್ತು, "ನೀನು ನಿನ್ನ ವೈಯಕ್ತಿಕ ಸಮಸ್ಯೆಯಿಂದ ಹೊರಬರುವೆ, ಕಡಿಮೆಪಕ್ಷ ನಿನ್ನ ವೃತ್ತಿಯ ಮೇಲಾದರೂ ಗಮನ ಹರಿಸು" ಎಂದು ಹೇಳಬಹುದು. ನೀವು ಅವರಿಗೆ ಹೀಗೆ ಹೇಳಬಹುದು, ಆದರೆ ಅದು ಎಷ್ಟರಮಟ್ಟಿಗೆ ಕೆಲಸ ಮಾಡುತ್ತದೆಯೆಂದು ನೀವು ನೋಡಬೇಕು.

ಪ್ರಶ್ನೆ: ಸಂಘಟಿತ (ಕಾರ್ಪೊರೇಟ್) ಜಗತ್ತಿಗೆ ಸೇರುತ್ತಿರುವ ಒಬ್ಬ ಹೊಸಬನಾಗಿ ನಾನು ಯಾವುದಕ್ಕೆ ಪ್ರಾಮುಖ್ಯತೆಯನ್ನು ಕೊಡಬೇಕು? ಸಂಬಳಕ್ಕೆಯೇ ಅಥವಾ ಇತರ ವಿಷಯಗಳಿಗೆಯೇ?

ಶ್ರೀ ಶ್ರೀ ರವಿ ಶಂಕರ್: ನಿನ್ನ ವಾಕ್ ಕುಶಲತೆಗಳನ್ನು ಉತ್ತಮಪಡಿಸು. ವ್ಯಾಪಾರದಲ್ಲಿರುವ ಯಾರಿಗೇ ಆದರೂ ಇದು ಬಹಳಷ್ಟು ಅಗತ್ಯವಿದೆ. ಒಬ್ಬ ವ್ಯಾಪಾರಿಯು ಆವೇಗಿಯೂ, ಮುಂಗೋಪಿಯೂ, ಮಿತಭಾಷಿಯೂ, ಸ್ನೇಹಭಾವವಿಲ್ಲದವನೂ, ವಿಶ್ವಾಸದ ಕೊರತೆಯಿರುವವನೂ ಆಗಿರಲು ಸಾಧ್ಯವಿಲ್ಲ. ಈ ವಿಷಗಳಿರುವಾಗ ಒಬ್ಬನಿಗೆ ಸರಿಯಾಗಿ ವ್ಯಾಪಾರ ಮಾಡಲು ಸಾಧ್ಯವಾಗಲಾರದು.