ಬುಧವಾರ, ಮಾರ್ಚ್ 18, 2015

ಬುದ್ಧಿಯ ಮೌಲ್ಯಮಾಪನ

೧೮ ಮಾರ್ಚ್ ೨೦೧೫
ಟೋಕಿಯೋ, ಜಪಾನ್
ಮಾರ್ಚ್ ೧೮, ೨೦೧೫ರಂದು ಶ್ರೀ ಶ್ರೀಯವರು ಟೋಕಿಯೋದ ಭಾರತೀಯ ದೂತಾವಾಸದಲ್ಲಿ ಸಮಗ್ರ ಪ್ರೇಕ್ಷಕರನ್ನುದ್ದೇಶಿಸಿ ಮಾತನಾಡಿದರು. ಅವರ ಪ್ರವಚನದ ಭಾಗ ಕೆಳಕಂಡಂತಿದೆ.

ಇಲ್ಲಿ ಉದಯ ಸೂರ್ಯನ ನಾಡಿನಲ್ಲಿ ಇರುವುದಕ್ಕೆ ಸಂತೋಷವಾಗುತ್ತಿದೆ. ನಿಜಕ್ಕೂ ಜಗತ್ತು ಇಲ್ಲಿಂದ ಆರಂಭವಾಗುತ್ತದೆ.
ನನ್ನ ಎಲ್ಲಾ ಕಾರ್ಯಕ್ರಮಗಳಲ್ಲಿ ಇರುವ ಒಂದು ನಿಯಮವೆಂದರೆ, ಎಲ್ಲರೂ ಮನೆಯಲ್ಲಿರುವಂತೆ ನಿರಾಳವಾಗಿರಬೇಕೆಂದು ನಾನು ಬಯಸುತ್ತೇನೆ. ಯಾವುದೇ ಔಪಚಾರಿಕತೆ ಇರಬಾರದು, ಯಾಕೆಂದರೆ ನಾವು ಹೃದಯದಿಂದ ಹೃದಯಕ್ಕೆ ಮಾತನಾಡುತ್ತೇವೆ. ಹೀಗಾಗಿ ಇದೊಂದು ಸ್ವಗತವಾಗಿರದು, ನಾವೊಂದು ಸಂವಾದವನ್ನು ಮಾಡೋಣ. ನಿಮ್ಮಲ್ಲಿ ಯಾವುದಾದರೂ ಪ್ರಶ್ನೆಗಳಿದ್ದರೆ ನೀವು ನನಗೆ ಕೇಳಬಹುದು, ನನ್ನಲ್ಲಿ ಯಾವುದಾದರೂ ಪ್ರಶ್ನೆಗಳಿದ್ದರೆ ನಾನು ನಿಮ್ಮನ್ನು ಕೇಳುವೆನು.

ನಿಮಗೆ ಗೊತ್ತೇ, ನಿಜವಾದ ಜ್ಞಾನವು, ಸೌಹಾರ್ದಯುತ ಮತ್ತು ಅನೌಪಚಾರಿಕ ವಾತಾವರಣವಿರುವಾಗ ಮಾತ್ರ ಆಗಲು ಸಾಧ್ಯ.

ನೀವೆಲ್ಲರೂ ನಿರಾಳವಾಗಿರುವಿರಾ?

(ಸಭಿಕರಲ್ಲಿ ಎಲ್ಲರೂ ತಮ್ಮ ಕೈಗಳನ್ನು ಮೇಲೆತ್ತುತ್ತಾರೆ).

ಇವತ್ತಿನ ವಿಷಯವೆಂದರೆ: ಬುದ್ಧಿಶಕ್ತಿ, ವಿಜ್ಞಾನ ಮತ್ತು ಸೃಜನಶೀಲತೆ.

ಬುದ್ಧಿಶಕ್ತಿ

ಬುದ್ಧಿಶಕ್ತಿಯ ಗುಣಗಳಲ್ಲಿ ಒಂದೆಂದರೆ ಎಚ್ಚರಿಕೆಯಿಂದಿರುವುದು. ’ನಾನು ಬುದ್ಧಿವಂತ ಆದರೆ ನಾನು ಸ್ವಲ್ಪ ತೂಕಡಿಸುತ್ತಿದ್ದೇನೆ’ ಎಂದು ನೀವು ಹೇಳಲು ಸಾಧ್ಯವಿಲ್ಲ. ಹೀಗೆ ಬುದ್ಧಿವಂತಿಕೆಯೆಂದರೆ ಎಚ್ಚರಿಕೆ.

ನೀವೆಲ್ಲರೂ ಈಗ ಎಚ್ಚರಿಕೆಯಲ್ಲಿರುವಿರಾ?

ನಾವು ಎಚ್ಚರಿಕೆಯಲ್ಲಿರುವಾಗ ಏನಾಗುತ್ತದೆ? ನಮ್ಮ ಗ್ರಹಿಕೆಯ ಶಕ್ತಿ ಮತ್ತು ನಮ್ಮ ಅವಲೋಕನ ಶಕ್ತಿಗಳು ಸುಧಾರಿಸುತ್ತವೆ ಹಾಗೂ ನಮ್ಮ ಅಭಿವ್ಯಕ್ತಿಯು ಪರಿಪೂರ್ಣವಾಗುತ್ತದೆ.

ಹಲವಾರು ಸಲ ಜನರು, "ಓ, ಯಾರೂ ನನ್ನನ್ನು ಅರ್ಥಮಾಡಿಕೊಳ್ಳುವುದಿಲ್ಲ" ಎಂದು ಹೇಳುತ್ತಾರೆ. ಇದಕ್ಕೆ ಬದಲಾಗಿ ಅವರು, "ನನಗೆ ನನ್ನನ್ನು ವ್ಯಕ್ತಪಡಿಸಲು ಸಾಧ್ಯವಾಗಿಲ್ಲ" ಎಂದು ಹೇಳಬೇಕು. ನಿಮ್ಮಲ್ಲಿ ವ್ಯಕ್ತಪಡಿಸುವ ಕೌಶಲ್ಯವಿದ್ದರೆ (ಅದು ಬುದ್ಧಿವಂತಿಕೆಯಿಂದ ಬರುತ್ತದೆ) ಆಗ ಅಲ್ಲಿ ಯಾವುದೇ ಅಪಾರ್ಥವಾಗಲು ಸಾಧ್ಯವಿಲ್ಲ. ಹೀಗೆ ಗ್ರಹಿಕೆ, ಅವಲೋಕನೆ ಮತ್ತು ಅಭಿವ್ಯಕ್ತಿ ಇವುಗಳೆಲ್ಲವೂ ಎಚ್ಚರಿಕೆಯಲ್ಲಿರುವುದರಿಂದ ಬರುತ್ತವೆ.

ಈಗ, ನೀವೊಂದು ದೀರ್ಘಾವಧಿಯವರೆಗೆ ನಿಮ್ಮನ್ನು ಬಹಳ ಎಚ್ಚರವಾಗಿರಿಸಿದರೆ ಏನಾಗುತ್ತದೆ? ನಿಮಗೆ ಆಯಾಸವಾಗುತ್ತದೆ ಮತ್ತು ಬಹಳ ದಣಿವೆನಿಸುತ್ತದೆ. ಹೀಗಾಗಿ, ಸದಾಕಾಲವೂ ಎಚ್ಚರವಾಗಿರುವುದು ನಿಮ್ಮ ಮೆದುಳಿನ ಸ್ವಭಾವವಲ್ಲ. ಹೀಗಾಗಿ, ನಮಗೆ ಬೇಕಾಗಿರುವುದೇನೆಂದರೆ ವಿಶ್ರಾಂತಿ. ಹೆಚ್ಚಾಗಿ ನಮಗೆ ತಿಳಿದಿರುವ ವಿಶ್ರಾಂತಿಯ ರೀತಿಯೆಂದರೆ, ಒಂದು ತಲೆದಿಂಬು ತೆಗೆದುಕೊಂಡು ನಿದ್ರಿಸಲು ಹೋಗುವುದು, ಅಷ್ಟೇ. ನಿದ್ರೆಯು ಅಗತ್ಯವಾಗಿದೆ, ಆದರೆ ಇನ್ನೊಂದು ರೀತಿಯ ವಿಶ್ರಾಂತಿಯಿದೆ. ಅದರಲ್ಲಿ ನೀವು ಎಚ್ಚರವಾಗಿರುತ್ತೀರಿ ಮತ್ತು ಅದೇ ವೇಳೆಗೆ ವಿರಮಿಸುತ್ತಿರುತ್ತೀರಿ. ಅದು ಸುಶಿಯಂತೆ (ಜಪಾನಿನ ಒಂದು ತಿನಿಸು); ಅಂದರೆ, ಸಮುದ್ರಕಳೆಯಲ್ಲಿ ಸುತ್ತಲ್ಪಟ್ಟ ಅನ್ನದಂತೆ. ಸಮುದ್ರಕಳೆಯು ತಣ್ಣಗಾಗಿರುತ್ತದೆ, ಆದರೆ ಅನ್ನವು ಬಿಸಿಯಾಗಿರುತ್ತದೆ (ಅದನ್ನು ಸುತ್ತಿದಾಗ). ಅದೇ ರೀತಿಯಲ್ಲಿ, ನಿಮ್ಮಲ್ಲಿ ಎಚ್ಚರಿಕೆ ಮತ್ತು ವಿಶ್ರಾಂತಿ ಇರುತ್ತವೆ, ಹಾಗೂ ಇದುವೇ ಧ್ಯಾನವಾಗಿದೆ.

ನೀವೆಲ್ಲರೂ ಇಲ್ಲಿದ್ದೀರಾ?

ಹೀಗೆ ನಾವು ಬುದ್ಧಿವಂತಿಕೆಗೆ ಮೂರು ಅಂಶಗಳನ್ನು ಲೆಕ್ಕ ಹಾಕಿದ್ದೇವೆ:

೧. ಎಚ್ಚರಿಕೆ
೨. ಸರಿಯಾದ ಗ್ರಹಿಕೆ ಮತ್ತು ಅವಲೋಕನ
೩. ಸರಿಯಾದ ಅಭಿವ್ಯಕ್ತಿ

ಬುದ್ಧಿವಂತಿಕೆಗೆ ಇನ್ನೊಂದು ಲಕ್ಷಣವಿದೆ, ಅದೇನೆಂದು ಈಗ ನೀವು ನನಗೆ ಹೇಳಿ ನೋಡೋಣ? ಇದೊಂದು ಸಂವಾದ, ಆದ್ದರಿಂದ ಈಗ ನೀವು ನನಗೆ ಹೇಳಿ, ಬುದ್ಧಿಯ ಇನ್ನೊಂದು ಲಕ್ಷಣ ಯಾವುದೆಂದು ನಿಮಗನಿಸುತ್ತದೆ?

ಸಭಿಕರು: ಪ್ರಜ್ಞಾವಂತರಾಗಿರುವುದು.

ಶ್ರೀ ಶ್ರೀ ರವಿ ಶಂಕರ್: ಅದು ಎಚ್ಚರಿಕೆ.

ಸಭಿಕರು: ಇತರರ ಕಡೆಗೆ ಕರುಣೆ.

ಶ್ರೀ ಶ್ರೀ ರವಿ ಶಂಕರ್: ಸರಿ, ಬೇರೇನು?

ಸಭಿಕರು: ಸಂತೋಷ, ಗಮನ, ತಾಳ್ಮೆ, ಜ್ಞಾನ, ನಗು ಮತ್ತು ದಕ್ಷತೆ.

ಶ್ರೀ ಶ್ರೀ ರವಿ ಶಂಕರ್: ಹೌದು, ದಕ್ಷತೆ. ಬೇರೇನು?

ಸಭಿಕರು: ಸೃಜನಶೀಲತೆ.

ಶ್ರೀ ಶ್ರೀ ರವಿ ಶಂಕರ್: ಸೃಜನಶೀಲತೆ! ಹೌದು, ಬುದ್ಧಿವಂತಿಕೆಯ ಇನ್ನೊಂದು ಅಂಶವೆಂದರೆ ಸೃಜನಶೀಲತೆ. ಸರಿ ಇನ್ನೂ ಒಂದು. ನಿಮ್ಮ ಬುದ್ಧಿವಂತಿಕೆಯನ್ನುಪಯೋಗಿಸಿ.

ಸಭಿಕರು: ಅದೇ ತಪ್ಪುಗಳನ್ನು ಪುನರಾವರ್ತಿಸದಿರುವುದು ಮತ್ತು ವರ್ತಮಾನದ ಕ್ಷಣದಲ್ಲಿರುವುದು. 

ಶ್ರೀ ಶ್ರೀ ರವಿ ಶಂಕರ್: ಬುದ್ಧಿವಂತಿಕೆಯ ಇನ್ನೊಂದು ಲಕ್ಷಣವೆಂದರೆ ಸಂಘರ್ಷವನ್ನು ಪರಿಹರಿಸುವ ಸಾಮರ್ಥ್ಯ! ಮೂರ್ಖರು ತಮ್ಮಲ್ಲಿ ಹಾಗೂ ಇತರರಲ್ಲಿ ಸಂಘರ್ಷವನ್ನು ಸೃಷ್ಟಿಸುತ್ತಾರೆ. ಒಬ್ಬ ಬುದ್ಧಿವಂತ ವ್ಯಕ್ತಿಯು ತನ್ನಲ್ಲಿ ಹಾಗೂ ತನ್ನ ಸುತ್ತುಮುತ್ತಲಿನಲ್ಲಿರುವ ಸಂಘರ್ಷಗಳನ್ನು ಪರಿಹರಿಸುವುದು ಹೇಗೆಂಬುದನ್ನು ತಿಳಿದಿರುತ್ತಾನೆ. ನೀವೇನು ಹೇಳುತ್ತೀರಿ, ಇದು ಸರಿಯೆಂದು ಅನಿಸುತ್ತಿದೆಯಾ?

ನಾನು ನಿಮಗೆ ಎರಡು ಕಥೆಗಳನ್ನು ಹೇಳಲು ಬಯಸುತ್ತೇನೆ:

೧. ಹಣವೇ ಅಥವಾ ಜ್ಞಾನವೇ? 

ಸ್ವಾಮಿ ವಿವೇಕಾನಂದರು ಇಂಗ್ಲೇಂಡಿಗೆ ಹೋದಾಗ, ಆ ಕಾಲದಲ್ಲಿ ಇಂಗ್ಲೇಂಡಿನಲ್ಲಿ ಬಹಳಷ್ಟು ಜನಾಂಗೀಯ ಭೇದಭಾವವಿತ್ತು. ಇದು ಎರಡನೇ ಜಾಗತಿಕ ಯುದ್ಧದ ಮೊದಲು.

ಅವರು ಕಲಿಯುತ್ತಿದ್ದ ಕಾಲೇಜಿನ ಉಪನ್ಯಾಸಕರು ಸ್ವಾಮಿ ವಿವೇಕಾನಂದರನ್ನು ಕೆರಳಿಸುವುದಕ್ಕಾಗಿ ಅವರಿಗೆ ಒಂದು ಪ್ರಶ್ನೆಯನ್ನು ಕೇಳಿದರು. ಅವರು ಹೀಗೆಂದು ಕೇಳಿದರು, "ನೀವು ರಸ್ತೆಯಲ್ಲಿ ನಡೆಯುತ್ತಿದ್ದೀರಿ ಎಂದಿಟ್ಟುಕೊಳ್ಳಿ. ಒಂದು ಬದಿಯಲ್ಲಿ ನಿಮಗೆ ಸ್ವಲ್ಪ ಹಣ ಸಿಗುತ್ತದೆ ಮತ್ತು ಇನ್ನೊಂದು ಬದಿಯಲ್ಲಿ ಜ್ಞಾನದ ಬಗೆಗಿನ ಪುಸ್ತಕ ಸಿಗುತ್ತದೆ. ಅವುಗಳಲ್ಲಿ ಒಂದನ್ನು ಆಯ್ದುಕೊಳ್ಳುವ ಆಯ್ಕೆಯನ್ನು ನಿಮಗೆ ಕೊಡಲಾಗುತ್ತದೆ, ನೀವು ಯಾವುದನ್ನು ಹೆಕ್ಕಿಕೊಳ್ಳುವಿರಿ?"

ಸ್ವಾಮಿ ವಿವೇಕಾನಂದರು, "ನಾನು ಹಣವನ್ನು ಆಯ್ದುಕೊಳ್ಳುವೆನು" ಎಂದು ಹೇಳಿದರು.

ಆಗ ಉಪನ್ಯಾಸಕರು ಅವರನ್ನು ಗೇಲಿ ಮಾಡುತ್ತಾ, "ನೋಡಿ, ಈ ವ್ಯಕ್ತಿ ಜ್ಞಾನಕ್ಕೆ ಯಾವುದೇ ಬೆಲೆಯನ್ನು ನೀಡುವುದಿಲ್ಲ; ಅವರು ಕೇವಲ ಹಣವನ್ನು ಆಯ್ದುಕೊಳ್ಳುವರು. ನಾನು ಪುಸ್ತಕವನ್ನು ಆಯ್ದುಕೊಳ್ಳುವೆನು, ನಾನು ಹಣವನ್ನು ಆಯ್ದುಕೊಳ್ಳೆನು" ಎಂದು ಹೇಳಿದರು.

ಸ್ವಾಮಿ ವಿವೇಕಾನಂದರು ಏನು ಹೇಳಿದರೆಂದು ನಿಮಗೆ ಗೊತ್ತೇ? ಅವರು ಬಹಳ ವಿನಯವಾಗಿ, "ಸರ್, ಒಬ್ಬ ವ್ಯಕ್ತಿಯು ತನ್ನಲ್ಲಿ ಯಾವುದಿಲ್ಲವೋ ಅದನ್ನು ಆಯ್ದುಕೊಳ್ಳುವನು" ಎಂದು ಹೇಳಿದರು.

ಇದು ಬುದ್ಧಿವಂತಿಕೆ!

೨. ಹಂದಿ ಮತ್ತು ಪಕ್ಷಿ

ಸ್ವಾಮಿ ವಿವೇಕಾನಂದರು ಒಂದು ಹೋಟೇಲಿಗೆ ಹೋದರು ಮತ್ತು ತಮ್ಮ ಉಪನ್ಯಾಸಕರು ಕುಳಿತಿದ್ದ ಮೇಜಿಗೆ ಹೋಗಿ ಕುಳಿತುಕೊಂಡರು. ಉಪನ್ಯಾಸಕರು ಸ್ವಾಮಿ ವಿವೇಕಾನಂದರಲ್ಲಿ, "ಒಂದು ಹಂದಿ ಮತ್ತು ಒಂದು ಪಕ್ಷಿ ಒಂದೇ ಮೇಜಿನಲ್ಲಿ ಕುಳಿತುಕೊಂಡು ತಿನ್ನಲು ಸಾಧ್ಯವಿಲ್ಲ" ಎಂದು ಹೇಳಿದರು.

ಸ್ವಾಮಿ ವಿವೇಕಾನಂದರು ಏನು ಹೇಳಿದರೆಂದು ನಿಮಗೆ ಗೊತ್ತೇ? ಅವರಂದರು, "ಸರ್, ನೀವು ಯಾವಾಗ ಬೇಕಾದರೂ ಹೇಳಿ, ನಾನು ಯಾವುದೇ ಕ್ಷಣದಲ್ಲಾದರೂ ಹಾರಿ ಹೋಗುವೆನು."

ಬುದ್ಧಿವಂತಿಕೆಗೆ ಪ್ರತಿಯೊಂದು ಸಂಘರ್ಷವನ್ನೂ ಹಾಸ್ಯವನ್ನಾಗಿ ತಿರುಗಿಸುವ ಸಾಮರ್ಥ್ಯವಿದೆ. ಹಾಸ್ಯವು ಬುದ್ಧಿವಂತಿಕೆಯ ಇನ್ನೊಂದು ಲಕ್ಷಣವಾಗಿದೆ. ನಿಮ್ಮಲ್ಲಿ ಹಾಸ್ಯವಿದ್ದರೆ ಯಾವುದೇ ಸಂಘರ್ಷದ ಪರಿಸ್ಥಿತಿಯನ್ನು ನೀವು ಜಯಿಸಬಲ್ಲಿರಿ.
ಬುದ್ಧಿವಂತಿಕೆಯ ಇನ್ನೊಂದು ಲಕ್ಷಣವೆಂದರೆ, ಒತ್ತಡದಲ್ಲಿ ಸಿಲುಕದಿರುವುದು, ಮತ್ತು ನೀವು ಒತ್ತಡದಲ್ಲಿ ಸಿಲುಕಿದರೆ, ಒತ್ತಡದಿಂದ ಹೊರಬರುವುದು ಹೇಗೆಂಬುದನ್ನು ತಿಳಿಯುವುದು. ಇದು ಬುದ್ಧಿವಂತಿಕೆ.

ಬುದ್ಧಿವಂತಿಕೆಯ ಬಗ್ಗೆ ನಾವೀಗ ಬಹಳಷ್ಟು ಕೇಳಿದೆವೆಂದು ನನಗನಿಸುತ್ತದೆ ಮತ್ತು ಇಲ್ಲಿ ಹಲವಾರು ಬುದ್ಧಿವಂತ ಜನರು ನಮ್ಮೊಂದಿಗಿದ್ದಾರೆ. ಬುದ್ಧಿವಂತಿಕೆಯೆಂದರೆ, ನಮ್ಮ ಮನಸ್ಸು ಮತ್ತು ನಮ್ಮ ಶರೀರಗಳನ್ನು ಎಷ್ಟು ಉಪಯೋಗಿಸಬೇಕೆಂಬುದನ್ನು ತಿಳಿದಿರುವುದು ಹಾಗೂ ಅವುಗಳನ್ನು ಅತಿಯಾಗಿ ಬಳಸದಿರುವುದು. ನಾವು ನಮ್ಮ ಮನಸ್ಸು ಮತ್ತು ಶರೀರಗಳನ್ನು ಮಿತಿಮೀರಿ ಬಳಕೆ ಮಾಡಿದರೆ ನಮ್ಮ ಶಕ್ತಿ ಕುಂದಿಹೋಗುತ್ತದೆ, ದಣಿವು ಮತ್ತು ಆಯಾಸವಾಗುತ್ತದೆ. ಬುದ್ಧಿವಂತಿಕೆಯೆಂದರೆ ನಡುದಾರಿಯ ಸಣ್ಣ ಗೆರೆಯಲ್ಲಿ ನಡೆಯುವುದು. ಅದನ್ನೇ ಭಗವಾನ್ ಬುದ್ಧನು ಹೇಳಿರುವುದು.

ವಿಜ್ಞಾನ:

ನಿಮಗೆ ಗೊತ್ತೇ, ಬುದ್ಧ ಎಂದರೆ, ಜ್ಞಾನೋದಯಗೊಂಡವನು ಎಂದು, ಹಾಗೆಯೇ ಅತೀ ಬುದ್ಧಿವಂತ ಎಂದು ಅರ್ಥ. ಸಂಸ್ಕೃತದಲ್ಲೂ ಬುದ್ಧಿಗೆ ಬುದ್ಧಿ ಎಂದು ಹೇಳುತ್ತಾರೆ. ’ಬುದ್ಧ’ ಎಂದರೆ, ಪರಿಪಕ್ವವಾದ ಬುದ್ಧಿಯನ್ನು ಹೊಂದಿದವನು, ಮತ್ತು ವಿಜ್ಞಾನವೆಲ್ಲಾ ಇರುವುದು ಬುದ್ಧಿಯ ಮೇಲೆಯೇ. ’ಏನಿದೆ’ ಎಂಬುದರ ಬಗೆಗಿನ ಹಂತಹಂತವಾದ ತಾರ್ಕಿಕ ತಿಳುವಳಿಕೆಯೇ ವಿಜ್ಞಾನವಾಗಿದೆ.

ಪೂರ್ವದಲ್ಲಿ ಮತ್ತು ದೂರಪ್ರಾಚ್ಯದಲ್ಲಿ ನಾವು ಯವತ್ತೂ ವಿಜ್ಞಾನವನ್ನು ಪ್ರೋತ್ಸಾಹಿಸಿದ್ದೇವೆ. ಶತಮಾನಗಳಿಂದ ಒಬ್ಬನೇ ಒಬ್ಬ ವಿಜ್ಞಾನಿಯೂ ಇಲ್ಲಿ ದಂಡಿಸಲ್ಪಟ್ಟಿಲ್ಲ. ಹೀಗಾಗಿ ತಾರ್ಕಿಕ ತಿಳುವಳಿಕೆಯನ್ನು ಪ್ರೋತ್ಸಾಹಿಸುವುದು ಮತ್ತು ಪ್ರಯೋಗ ಮಾಡುವುದೇ ವಿಜ್ಞಾನವಾಗಿದೆ. ವಿಜ್ಞಾನ ಮತ್ತು ಆಧ್ಯಾತ್ಮಗಳು ಯಾವತ್ತೂ ಪರಸ್ಪರ ಸಂಘರ್ಷದಲ್ಲಿಲ್ಲ, ಅವುಗಳು ಯಾವತ್ತೂ ಪರಸ್ಪರ ಪೂರಕವಾಗಿವೆ.

’ಇದು ಏನು?’ ಎಂಬುದು ವಿಜ್ಞಾನವಾಗಿದೆ ಮತ್ತು ’ನಾನು ಯಾರು?’ ಎಂಬುದು ಆಧ್ಯಾತ್ಮವಾಗಿದೆ. ವಸ್ತುವನ್ನು ವಿಶ್ಲೇಷಿಸುವುದು ವಿಜ್ಞಾನವಾಗಿದೆ ಮತ್ತು ವಿಷಯವನ್ನು ವಿಶ್ಲೇಷಿಸುವುದು ಆಧ್ಯಾತ್ಮವಾಗಿದೆ. ವಸ್ತು ಮತ್ತು ವಿಷಯಗಳ ಅಧ್ಯಯನವು ಯಾವತ್ತೂ ವಿರೋಧಾತ್ಮಕವಾಗಿಲ್ಲ; ಕನಿಷ್ಠಪಕ್ಷ ಪೂರ್ವದಲ್ಲಂತೂ ಅಲ್ಲ.

ಸೃಜನಶೀಲತೆ:

ವಿಜ್ಞಾನ ಮತ್ತು ಕಲೆಗಳು ಇವೆರಡರಲ್ಲೂ ಸಾಮಾನ್ಯವಾಗಿರುವುದೆಂದರೆ ಸೃಜನಶೀಲತೆ. ನಮ್ಮ ಮೆದುಳಿನಲ್ಲಿ ಒಂದು ಭಾಗವು (ಬಲ ಮೆದುಳು) ತರ್ಕಕ್ಕಾಗಿದೆ ಮತ್ತು ಇನ್ನೊಂದು ಭಾಗವು (ಎಡ ಮೆದುಳು) ಸಂಗೀತಕ್ಕಾಗಿದೆ. ಈಗ ಅವುಗಳೆರಡರಲ್ಲೂ ಇರುವ ಸಾಮಾನ್ಯ ಅಂಶ ಯಾವುದು? ಅದು ಸೃಜನಶೀಲತೆ, ಮತ್ತು ನೀವು ಒತ್ತಡದಲ್ಲಿರುವಾಗ ಸೃಜನಶೀಲತೆ ಬರುವುದಿಲ್ಲ, ಆದರೆ ಕೇಂದ್ರಿತವಾಗಿರುವುದರಿಂದ ಅದು ಬರುತ್ತದೆ. ನಾವು ಹೆಚ್ಚು ಕೇಂದ್ರಿತರಾದಷ್ಟೂ ಹೆಚ್ಚು ಸೃಜನಶೀಲತೆಯು ನಮ್ಮಿಂದ ಸಹಜವಾಗಿ ಹೊರಬರುತ್ತದೆ.

ಆದ್ದರಿಂದ, ನೀವೊಬ್ಬ ಚಿತ್ರಕಾರರಾಗಿದ್ದರೆ, ಇತರರ ಚಿತ್ರಕಲೆಗಳನ್ನು ನೋಡುತ್ತಾ ಹೋಗಬೇಡಿರೆಂದು ನಾನು ನಿಮಗೆ ಸಲಹೆ ನೀಡುತ್ತೇನೆ. ಆದರೆ ಅದಕ್ಕೆ ಬದಲಾಗಿ ಸಂಗೀತವನ್ನು ಆಲಿಸಿ. ಈ ಕಲ್ಪನೆಯು ಸಂಪೂರ್ಣವಾಗಿ ಕ್ರಾಂತಿಕಾರಿಯಾದುದಾಗಿರಲೂಬಹುದು ಯಾಕೆಂದರೆ, ಚಿತ್ರಕಾರರಾಗಿರುವವರಲ್ಲಿ ಹೆಚ್ಚಿನವರಿಗೆ, ಇತರ ಚಿತ್ರಕಾರರ ಕೆಲಸವನ್ನು ಅಧ್ಯಯನ ನಡೆಸಲು ಮಾತ್ರ ಕಲಿಸಲಾಗುತ್ತದೆ. ಸಂಗೀತವನ್ನಾಲಿಸುವಂತೆ ಅವರಿಗೆ ಹೇಳಲಾಗುವುದಿಲ್ಲ. ಆದರೆ ನನಗನಿಸುವುದೇನೆಂದರೆ, ನೀವು ಇತರ ಚಿತ್ರಗಳನ್ನು ನೋಡುವುದನ್ನು ನಿಲ್ಲಿಸಬೇಕು ಮತ್ತು ಸಂಗೀತವನ್ನು ಆಲಿಸಬೇಕು. ನಂತರ ನಿಮ್ಮ ಕುಂಚವನ್ನು ತೆಗೆದುಕೊಂಡು ಚಿತ್ರಿಸಲು ಪ್ರಾರಂಭಿಸಿ.

ನಾನು ಶಾಲೆಯಲ್ಲಿದ್ದಾಗ, ಇತರರಿಂದ ಬರೆಯಲ್ಪಟ್ಟ ಹಲವಾರು ಕವನಗಳನ್ನು ನಾನು ಓದಿದೆ. "ಓ, ನಾನು ಬರೆಯಲು ಬಯಸಿದ್ದೆ, ಆದರೆ ಯಾರೋ ಇದರ ಬಗ್ಗೆ ಈಗಾಗಲೇ ಬರೆದಿದ್ದಾರೆ" ಎಂದು ನಾನು ಯೋಚಿಸಿದೆ. ಆದ್ದರಿಂದ, ನೀವೊಬ್ಬ ಕವಿಯಾಗಿದ್ದರೆ, ಇತರರು ಬರೆದ ಕವನಗಳನ್ನು ಓದುವುದನ್ನು ನಿಲ್ಲಿಸಿ. ಇತರರು ಬರೆದ ಕವನಗಳನ್ನು ಓದುವುದನ್ನು ನಾನು ನಿಲ್ಲಿಸಿದ ನಂತರ ನಾನು ನನ್ನದೇ ಆದ ಕವನಗಳನ್ನು ಬರೆಯಲು ಪ್ರಾರಂಭಿಸಿದೆ. ನೀವೊಬ್ಬ ಸೃಜನಾತ್ಮಕ ಅಡಿಗೆಯವರಾಗಲು ಬಯಸಿದರೆ, ಆಗ ಅಡುಗೆ ಪುಸ್ತಕಗಳನ್ನು ಓದಲು ಹೋಗಬೇಡಿ. ನೀವು ನಿಮ್ಮದೇ ಆದ ಪ್ರಯೋಗಗಳನ್ನು ಮಾಡಿ. ನೀವು ಅಡಿಗೆಯಲ್ಲಿ ಸೃಜನಶೀಲರಾಗಲು ಬಯಸಿದರೆ, ಯಾವತ್ತೂ ಯಾವುದೇ ಅಡಿಗೆ ಪುಸ್ತಕವನ್ನು ಓದಬೇಡಿ. ಇದು ನಿಜಕ್ಕೂ ಫಲಪ್ರದವಾಗುವುದೆಂದು ನನಗನಿಸುತ್ತದೆ.

ಸೃಜನಶೀಲತೆಗಾಗಿ ಬಹಳ ಮುಖ್ಯವಾಗಿರುವ ಇನ್ನೊಂದು ಸಂಗತಿಯೆಂದರೆ ಅಂತಃಸ್ಫುರಣೆ. ಅಂತಃಸ್ಫುರಣೆಯನ್ನು ಹೊಂದಿರಲು ಹಾಗೂ ಸೃಜನಶೀಲರಾಗಿರಲು ನೀವು ಟೊಳ್ಳು ಮತ್ತು ಖಾಲಿಯಾಗಬೇಕು ಹಾಗೂ ಕೇಂದ್ರಿತರಾಗಿರಬೇಕು. ಯಾವುದೇ ವ್ಯಾಪಾರಿಗೂ ಕೂಡಾ ಅಂತಃಸ್ಫುರಣೆಯು ಬಹಳ ಮುಖ್ಯವಾಗಿದೆ. ನಿಮ್ಮ ಅಂತಃಸ್ಫುರಣೆಯನ್ನು ಆಧರಿಸಿ ಬಂಡವಾಳ ಹೂಡಿದಾಗ ನೀವು ಯಶಸ್ವಿಯಾಗುವಿರಿ. ವ್ಯಾಪಾರಕ್ಕೆ ನಿಮ್ಮಲ್ಲಿ ಅಂತಃಸ್ಫುರಣೆ ಬೇಕು, ರಾಜಕಾರಣಕ್ಕೆ ನಿಮ್ಮಲ್ಲಿ ಅಂತಃಸ್ಫುರಣೆ ಬೇಕು, ಸೃಜನಶೀಲತೆಗೆ ನಿಮ್ಮಲ್ಲಿ ಅಂತಃಸ್ಫುರಣೆ ಬೇಕು, ಸಂಶೋಧನೆ ಮತ್ತು ವಿಜ್ಞಾನಕ್ಕೆ ನಿಮ್ಮಲ್ಲಿ ಅಂತಃಸ್ಫುರಣೆ ಬೇಕು. ಮತ್ತೆ ಅಂತಃಸ್ಫುರಣೆಗೆ ನಿಮಗೇನು ಬೇಕು? ಧ್ಯಾನ!

ಚಲಿಸುವ ಚಿತ್ರಗಳ ರೂಪದಲ್ಲಿ ಈ ಬ್ಲಾಗ್ ವೀಕ್ಷಿಸಲು ಲಿಂಕ್:
http://www.speakingtree.in/public/spiritual-slideshow/seekers/self-improvement/the-measure-of-intelligence