ಮಂಗಳವಾರ, ಮಾರ್ಚ್ 24, 2015

ಮುಗುಳ್ನಗುತ್ತ ಸಮಸ್ಯೆಗಳನ್ನು ಎದುರಿಸೋಣ

೨೪ ಮಾರ್ಚ್ ೨೦೧೫
ಸಿಯೆಮ್ ರೀಪ್, ಕಂಬೋಡಿಯಾ


ಕೋಲಾಹಲಗಳ ನಡುವೆ ಶಾಂತಿಯನ್ನು ಕಂಡುಹಿಡಿಯುವುದು ಜೀವನದಲ್ಲಿನ ಸವಾಲಾಗಿದೆ. ನೋಡಿ, ಇಲ್ಲಿ ತುಂಬಾ ಗದ್ದಲವಿದೆ. ಹಿನ್ನೆಲೆಯಲ್ಲಿ ಅಷ್ಟೊಂದು ಗದ್ದಲವಿರುವುದರಿಂದ ನಿಮ್ಮಲ್ಲಿ ಎಷ್ಟು ಮಂದಿಗೆ ಕಿರಿಕಿರಿಯಾಗುತ್ತಿದೆ ಹೇಳಿ ನನಗೆ.

(ಸಭಿಕರಲ್ಲಿ ಕೆಲವರು ತಮ್ಮ ಕೈಗಳನ್ನು ಮೇಲೆತ್ತುತ್ತಾರೆ)

ನನಗನಿಸುತ್ತಿದೆ, ನಿಮ್ಮಲ್ಲಿ ಇನ್ನೂ ಹೆಚ್ಚಿನವರಿಗೆ ಹಾಗಾಗುತ್ತಿದೆ. ಸಭಿಕರಲ್ಲಿ ಕೆಲವರು ತಮ್ಮ ಕೈಗಳನ್ನು ಮೇಲೆತ್ತಲು ಹಿಂದುಮುಂದು ನೋಡುತ್ತಿದ್ದಾರೆ. ಈಗ, ಆರ್ಟ್ ಆಫ್ ಲಿವಿಂಗ್ ಇಲ್ಲಿ ಆರಂಭವಾಗುತ್ತದೆ; ಶಬ್ದವಿದ್ದರೂ ಅದನ್ನು ಸ್ವೀಕರಿಸುವುದು ಮತ್ತು ಶಾಂತಿಯಿಂದಿರುವುದು.

ನೀವು ಟ್ರಾಫಿಕ್‌ನಲ್ಲಿ ಸಿಕ್ಕಿಹಾಕಿಕೊಂಡಿದ್ದೀರೆಂದು ಇಟ್ಟುಕೊಳ್ಳೋಣ. ಈಗ ನಿಮಗೆ ಎರಡು ಆಯ್ಕೆಗಳಿವೆ:

೧. ನೀವು ಹತಾಶೆಗೊಳ್ಳುವುದು, ಅಥವಾ

೨. ನೀವು ನಿಮ್ಮ ಸಮಯವನ್ನು ಯೋಜನೆಗಳನ್ನು ಹಾಕುತ್ತಾ ಅಥವಾ ಓದುತ್ತಾ ಅಥವಾ ಯಾವುದಾದರೂ ಸಂಗೀತವನ್ನು ಆಲಿಸುತ್ತಾ ಕಳೆಯುವುದು.

ಜೀವನವು ಹಲವಾರು ಸವಾಲುಗಳನ್ನು ಒಡ್ಡುತ್ತದೆ. ಬುದ್ಧಿವಂತರ ವಿಧಾನವೆಂದರೆ ಪರಿಸ್ಥಿತಿಗಳನ್ನು ಸ್ವೀಕರಿಸುವುದು ಮತ್ತು ಒಂದು ಮುಗುಳ್ನಗೆಯೊಂದಿಗೆ ಅವುಗಳ ಮೂಲಕ ಸಾಗುವುದು.

ಜಗತ್ತಿನ ಈ ಭಾಗವು ಎಷ್ಟೊಂದು ಯಾತನೆಗಳಿಗೆ ಒಳಗಾಯಿತು ಎಂಬುದನ್ನು ನಾನು ಕೇಳಿದೆ. ಘಟನೆಗಳ ಬಗ್ಗೆ ಕೇಳುವಾಗ ಅದು ನಿಜಕ್ಕೂ ನನ್ನ ಹೃದಯವನ್ನು ಒಡೆಯುತ್ತದೆ. ಆದರೆ ಹಿಂದಿನದನ್ನು ಹೋಗಲು ಬಿಟ್ಟು ಒಂದು ಹೊಸತಾದ ದೃಢ ವಿಶ್ವಾಸದೊಂದಿಗೆ ಮುಂದುವರಿಯುವ ಸಮಯ ಇದಾಗಿದೆ ಮತ್ತು ಅದನ್ನೇ ನಾನು ಆರ್ಟ್ ಆಫ್ ಲಿವಿಂಗ್ (ಜೀವನ ಕಲೆ) ಎಂದು ಕರೆಯುತ್ತೇನೆ.

ನಾವು ಆನಂದದ ಅಲೆಗಳನ್ನು ಸೃಷ್ಟಿಸಬೇಕಾಗಿದೆ. ಬೌದ್ಧ ಧರ್ಮದಲ್ಲಿ ಒಂದು ಪ್ರಾರ್ಥನೆಯಿದೆ. ಅದು ಹೀಗೆಂದು ಹೇಳುತ್ತದೆ, ’ರಕ್ಖಂತು ಸಬ ದೇವತಾ’, ಇದರರ್ಥ: ಎಲ್ಲಾ ದೇವದೇವತೆಯರು ನಮ್ಮನ್ನು ರಕ್ಷಿಸಲಿ!

ಭಾರತದಲ್ಲಿ ನಾವು, ’ಸರ್ವೇ ಭವಂತು ಸುಖಿನಾಃ’ ಎಂದು ಹೇಳುತ್ತೇವೆ. ಇದರರ್ಥ: ಎಲ್ಲರೂ ಸಂತೋಷವಾಗಿರಲಿ! ಹೀಗಾಗಿ ಆನಂದದ ಒಂದು ಅಲೆಯನ್ನು ಸೃಷ್ಟಿಸುವುದು ನಾವೆಲ್ಲರೂ ಮಾಡಬೇಕಾಗಿರುವ ಒಂದು ಬಹಳ ಮುಖ್ಯವಾದ ವಿಷಯವಾಗಿದೆ. ನಿಮಗೆ ಹಾಗನಿಸುವುದಿಲ್ಲವೇ?

ನಿಮ್ಮ ಕುಟುಂಬದಲ್ಲಿ ಒಬ್ಬ ವ್ಯಕ್ತಿ ಸಂತೋಷವಾಗಿಲ್ಲದಿದ್ದರೂ ಕೂಡಾ, ನೀವು ಸಂಪೂರ್ಣವಾಗಿ ಸಂತೋಷವಾಗಿರಲು ಸಾಧ್ಯವೇ? ಸಾಧ್ಯವಿಲ್ಲ! ಹೀಗಾಗಿ ನಿಮ್ಮ ಸಂತೋಷವು ನಿಮ್ಮ ಕುಟುಂಬದ ಸಂತೋಷವನ್ನು ಅವಲಂಬಿಸಿದೆ. ಆದರೆ ಅಕ್ಕಪಕ್ಕದವರು ಸಂತೋಷವಾಗಿಲ್ಲದಿರುವ ಒಂದು ದೇಶದಲ್ಲಿ ಒಂದು ಸಂತೋಷವಾದ ಕುಟುಂಬವು ವಾಸಿಸಲು ಸಾಧ್ಯವಿದೆಯೇ? ಅದು ಕೂಡಾ ಸಾಧ್ಯವಿಲ್ಲ, ಯಾಕೆಂದರೆ ಅಕ್ಕಪಕ್ಕದವರ ಅಸಂತೋಷವು ಕೆಲವೊಮ್ಮೆ ನಿಮಗೆ ಸಮಸ್ಯೆಗಳನ್ನು ಸೃಷ್ಟಿಸಬಹುದು. ಆದುದರಿಂದ ಎಲ್ಲರೂ ಸಂತೋಷವಾಗಿರಲು, ನಾವು ಸಮಾಜದಲ್ಲೊಂದು ಸಕ್ರಿಯವಾದ ಪಾತ್ರವನ್ನು ವಹಿಸಬೇಕಾಗಿದೆ ಮತ್ತು ಆ ಸಕ್ರಿಯವಾದ ಪಾತ್ರ ಸಮಾಜ ಸೇವೆಯಾಗಿದೆ.

ನಾವದನ್ನು ಹೇಗೆ ಮಾಡಬಹುದು? ನಾವು ನಮ್ಮ ಆಂತರಿಕ ಶಾಂತಿಯನ್ನು ಕಂಡುಕೊಂಡಾಗ ನಾವದನ್ನು ಮಾಡಬಹುದು. ಇವತ್ತು, ತಂತ್ರಜ್ಞಾನದ ಈ ಯುಗದಲ್ಲಿ, ನಮ್ಮನ್ನು ನಾವು ಗುಣಪಡಿಸಿಕೊಳ್ಳಲು ನಾವು ದೀರ್ಘಕಾಲ ಕಾಯಬೇಕಾಗಿಲ್ಲ. ನಾವು ನಮ್ಮನ್ನು, ನಮ್ಮ ಮನಸ್ಸುಗಳನ್ನು, ನಮ್ಮ ಚಿತ್ತವನ್ನು ಉಸಿರಾಟದ ತಂತ್ರಗಳೊಂದಿಗೆ ಬಹಳ ತ್ವರಿತವಾಗಿ ಗುಣಪಡಿಸಿಕೊಳ್ಳಬಹುದು. ಧ್ಯಾನದೊಂದಿಗೆ ನಮ್ಮ ಮನಸ್ಸು ಸಕಾರಾತ್ಮಕತೆಯಿಂದ ಬೆಳಗಬಹುದು. ಹೀಗಾಗಿ ಇದು ಬಹಳ ಅಮೂಲ್ಯವಾದುದು.

ಜೀವನವು ಒಂದು ಮರದಂತೆ: ಹಳೆಯದು ಮತ್ತು ಹೊಸತರ ಒಂದು ಸಂಯೋಗ. ಬೇರುಗಳು ಹಳೆಯದು ಮತ್ತು ಶಾಖೆಗಳು ಹೊಸತು. ಜೀವನವು ಹಾಗಿರಬೇಕು. ನಮಗೆ ಪುರಾತನವಾದುದು ಹಾಗೂ ಆಧುನಿಕವಾದುದು ಎರಡೂ ಬೇಕು. ಕಾಂಬೋಡಿಯಾವು ಎರಡರಿಂದಲೂ ಹರಸಲ್ಪಟ್ಟಿದೆ: ಒಂದು ಪುರಾತನ ಸಂಸ್ಕೃತಿ ಮತ್ತು ಆಧುನಿಕ ತಂತ್ರಜ್ಞಾನ.

ಈ ದೇಶದ ಜನಸಂಖ್ಯೆಯಲ್ಲಿ ೬೦ ಶೇಕಡಾ ಯುವಜನತೆಯೆಂಬುದು ನನಗೆ ತಿಳಿದಿದೆ. ಹೀಗೆ ನಾವು ತಂತ್ರಜ್ಞಾನದಲ್ಲಿ, ಓದಿನಲ್ಲಿ, ಕುಶಲತೆಗಳಲ್ಲಿ   ಮುಂದುವರಿಯುತ್ತಿರುವ ಅದೇ ವೇಳೆಗೆ, ಪುರಾತನ ಸಂಸ್ಕೃತಿಯನ್ನು ಕೂಡಾ ಸಂರಕ್ಷಿಸುವುದು ಆವಶ್ಯಕವಾಗಿದೆ. ಇದನ್ನು ಮಾಡಲು ಕಾಂಬೋಡಿಯಾಕ್ಕೆ ಸಾಧ್ಯವಿದೆಯೆಂಬುದು ನನಗೆ ಖಾತ್ರಿಯಿದೆ, ಯಾಕೆಂದರೆ ಕಾಂಬೋಡಿಯಾದ ಪುರಾತನ ಸಂಸ್ಕೃತಿಯಲ್ಲಿ ಪ್ರವಾಸಿಗರು ಬಹಳಷ್ಟು ಆಸಕ್ತರಾಗಿದ್ದಾರೆ.  

ಹೃದಯವು ಯಾವತ್ತೂ ಹಳೆಯದಕ್ಕಾಗಿ ಹಾತೊರೆಯುತ್ತದೆ. ನಾವು ಯಾವುದರ ಮೇಲೆ ಹೆಮ್ಮೆ ಪಡುತ್ತೇವೆ? ನಾವು ಹಳೆಯ ಸ್ನೇಹದ ಮೇಲೆ ಹೆಮ್ಮೆ ಪಡುತ್ತೇವೆ. ’ಇವನು ನನ್ನ ಹಳೆಯ ಸ್ನೇಹಿತ’ ಎಂದು ನಾವು ಹೇಳುತ್ತೇವೆ, ಯಾಕೆಂದರೆ ಹೃದಯವು ಹಳೆಯದನ್ನು ಬಯಸುತ್ತದೆ. ಆದರೆ ಮನಸ್ಸು, ಯಾವುದು ಹೊಸತೋ ಅದನ್ನು ಬಯಸುತ್ತದೆ; ಇತ್ತೀಚಿನ ತಂತ್ರಜ್ಞಾನ, ಇತ್ತೀಚಿನ ಪ್ಯಾಷನ್ - ಇದರ ಕಡೆಗೆ ಮನಸ್ಸು ಓಡುತ್ತದೆ. ಮತ್ತು ನಮಗದು ಬೇಕು, ಆದರೆ ಅದೇ ವೇಳೆಗೆ ನಾವು ಹೃದಯವನ್ನು ಮರೆಯಬಾರದು. ಇವತ್ತು ನಾನು ಅರಮನೆಯನ್ನು ಸಂದರ್ಶಿಸಲು ಹೋದೆ. ಅಲ್ಲಿ ಅವರು ನನಗೆ ಎಲ್ಲಾ ಪುರಾತನ ವಸ್ತುಗಳನ್ನು ತೋರಿಸುತ್ತಿದರು. ಹಳೆಯದಾದುದನ್ನು, ಪುರಾತನವಾದುದನ್ನು ತನ್ನದಾಗಿಸುವಲ್ಲಿ ಒಂದು ಹೆಮ್ಮೆಯಿದೆ! ಹೀಗಾಗಿ ಯುವಕರು ಎರಡನ್ನೂ ಹೊಂದಿರುವುದು ಅಗತ್ಯವಾಗಿದೆ; ಹಳೆಯ ಕೌಟುಂಬಿಕ ಮೌಲ್ಯಗಳು ಮತ್ತು ನೈತಿಕತೆ ಹಾಗೂ ಅದೇ ವೇಳೆ ತಂತ್ರಜ್ಞಾನ, ವಿಜ್ಞಾನ, ನವೀನೀಕರಣ, ವ್ಯಾಪಾರ ಮೊದಲಾದವುಗಳಲ್ಲಿ ಪ್ರಗತಿ. ಹೀಗಾಗಿ, ನೈತಿಕತೆಯನ್ನು ಕಳೆದುಕೊಳ್ಳದೆಯೇ ಉದ್ಯಮಿಗಳಾಗಲು ಯುವಜನತೆಗೆ ಇಲ್ಲಿನ ವ್ಯಾಪಾರೀ ಸಮುದಾಯವು ಪ್ರೇರೇಪಣೆಯನ್ನು ನೀಡಬೇಕೆಂದು ನಾನು ಬಯಸುತ್ತೇನೆ.

ಯುವಕರು ವ್ಯಾಪಾರ ಮಾಡಿ ಬೇಗನೇ ಹಣ ಸಂಪಾದಿಸಲು ಬಯಸುತ್ತಾರೆ ಮತ್ತು ನೈತಿಕತೆಯ ಬಗ್ಗೆ ಕಾಳಜಿ ವಹಿಸಲು ಬಯಸುವುದಿಲ್ಲ. ಆದರೆ ನಾನು ನಿಮಗೆ ಹೇಳುವುದೇನೆಂದರೆ, ಆ ರೀತಿಯಲ್ಲಿ ಮೇಲಕ್ಕೇರಿದ ಮತ್ತು ಬಹಳ ಬೇಗನೇ ಕೆಳಕ್ಕೆ ಬಿದ್ದ ಜನರ ಬಗ್ಗೆ ನಾವು ಅವರಿಗೆ ಹೇಳಬೇಕು. ನೀವು ವ್ಯಾಪಾರದಲ್ಲಿ ನೈತಿಕತೆಯನ್ನು ಅನುಸರಿಸದಿದ್ದರೆ, ಪತನವು ಬಹಳ ತೀಕ್ಷ್ಣವಾಗಿಯೂ, ಬಹಳ ಕಠಿಣವಾಗಿಯೂ ಆಗುವುದು. ಹೀಗಾಗಿ, ವ್ಯಾಪಾರೀ ಸಮುದಾಯ ಮತ್ತು ಯುವ ಉದ್ಯಮಿಗಳಿಗೆ ನಾನು ಇದರ ಬಗ್ಗೆ ನೆನಪಿಸಲು ಇಚ್ಛಿಸುತ್ತೇನೆ.

ನೀವೆಲ್ಲರೂ ಕಾರ್ಪೊರೇಟ್ ಸೋಶಿಯಲ್ ರೆಸ್ಪಾಂಸಿಬಿಲಿಟಿ (ಸಿ.ಎಸ್.ಆರ್. ಅಂದರೆ ಸಾಮೂಹಿಕ(ಸಂಸ್ಥೆಯ) ಸಾಮಾಜಿಕ ಜವಾಬ್ದಾರಿ)ಯಲ್ಲಿ ತೊಡಗಿರುತ್ತೀರಿ ಎಂಬುದರ ಬಗ್ಗೆ ನನಗೆ ಖಾತ್ರಿಯಿದೆ. ಇಲ್ಲವೆಂದಾದಲ್ಲಿ, ನೀವೆಲ್ಲರೂ ಯಾವುದಾದರೂ ಸಿ.ಎಸ್.ಆರ್. ಚಟುವಟಿಕೆಯಲ್ಲಿ ತೊಡಗಬೇಕು. ಶಾಲೆಗಳನ್ನು ಪ್ರಾರಂಭಿಸಿ ಮತ್ತು ಮಕ್ಕಳಿಗೆ ಶಿಕ್ಷಣ ನೀಡಿ. ಇದು ನಾವೆಲ್ಲರೂ ಮಾಡಬೇಕಾದ ವಿಷಯವಾಗಿದೆ; ಜನತೆಯ ಶಿಕ್ಷಣಕ್ಕಾಗಿ ಕೊಡುಗೆಯನ್ನು ನೀಡಿ.

ಶಿಕ್ಷಣವೆಂದರೆ ಕೇವಲ ಮಾಹಿತಿಯಲ್ಲ, ಅದು ನಡತೆಯನ್ನು ನಿರ್ಮಿಸುವುದಾಗಿದೆ. ಅದೊಂದು ವ್ಯಕ್ತಿತ್ವವನ್ನು ನಿರ್ಮಿಸುವುದಾಗಿದೆ. ಪೂಜ್ಯ ಸನ್ಯಾಸಿಗಳು ಇಲ್ಲಿ ಉಪಸ್ಥಿತರಿದ್ದಾರೆ. ನಾವು ಮೌಲ್ಯಗಳನ್ನು, ನೈತಿಕತೆಯನ್ನು ಮತ್ತು ಧರ್ಮವನ್ನು ಸೃಷ್ಟಿಸಬೇಕಾಗಿದೆ ಎಂಬುದನ್ನು ಅವರೆಲ್ಲರೂ ಒಪ್ಪುವರೆಂಬ ಬಗ್ಗೆ ನನಗೆ ಖಾತ್ರಿಯಿದೆ.

ಪ್ರತಿದಿನವೂ, ಮನಸ್ಸನ್ನು ಶಾಂತಪಡಿಸುವುದಕ್ಕಾಗಿ ಸ್ವಲ್ಪ ಉಸಿರಾಟದ ವ್ಯಾಯಾಮ ಮತ್ತು ಹಾಗೆಯೇ ದಿನಕ್ಕೆ ಎರಡು ಸಾರಿ ಧ್ಯಾನ ಮಾಡುವುದು - ಇವುಗಳು ಆನಂದ, ಸಂತೋಷ, ಕರುಣೆ, ಪ್ರೀತಿ ಮತ್ತು ದೈವಿಕತೆಗಳಿಂದ ತುಂಬಿದ ಒಂದು ಜೀವನವನ್ನು ಜೀವಿಸಲು ನಿಮಗೆ ಸಾಧ್ಯವಾಗುವಂತೆ ಮಾಡುತ್ತವೆ.

ಮೂರು ವಿಷಯಗಳು ಮುಖ್ಯವಾಗಿವೆ:

೧. ಮನಸ್ಸಿನಲ್ಲಿ ಸ್ಪಷ್ಟತೆ

೨. ಹೃದಯದಲ್ಲಿ ಪರಿಶುದ್ಧತೆ ಮತ್ತು

೩. ಕಾರ್ಯದಲ್ಲಿ ಪ್ರಾಮಾಣಿಕತೆ

ಇದು ಧರ್ಮದ ಸಾರವಾಗಿದೆ ಮತ್ತು ಇದನ್ನೇ ಭಗವಾನ್ ಬುದ್ಧನು ಕಲಿಸಿದುದು. ಬುದ್ಧನು ಭಾರತದಲ್ಲಿ ನಡೆದಾಡಿದಾಗ, ಆ ದಿನಗಳಲ್ಲಿ ಜನರ ಬೌದ್ಧಿಕ ಮಟ್ಟ ಬಹಳ ಉನ್ನತವಾಗಿತ್ತು. ಅವರಿಗೆ ದೇವರ ಬಗ್ಗೆ ತಿಳಿದಿತ್ತು, ಅವರಿಗೆ ಎಲ್ಲದರ ಬಗ್ಗೆಯೂ ತಿಳಿದಿತ್ತು, ಆದರೆ ಕೇವಲ ಬೌದ್ಧಿಕವಾಗಿ ಮಾತ್ರ. ಭಗವಾನ್ ಬುದ್ಧನು ಏನು ಹೇಳಿದನೆಂದರೆ, "ನನ್ನಲ್ಲಿ ನಿಮಗಾಗಿ ಒಂದು ಸರಳ ತಂತ್ರವಿದೆ. ಕುಳಿತುಕೊಂಡು ನಿಮ್ಮ ಉಸಿರಾಟವನ್ನು ಗಮನಿಸಿ, ನಿಮ್ಮ ಶರೀರವನ್ನು ಗಮನಿಸಿ, ಶರೀರದಲ್ಲಿನ ಸಂವೇದನೆಗಳನ್ನು ಗಮನಿಸಿ ಮತ್ತು ನಿಮ್ಮ ನಿಜಸ್ವರೂಪವನ್ನು ತಲುಪಿ". ಇದನ್ನೇ ಕಲಿಸಲಾದುದು (ಮೂಲಭೂತವಾಗಿ ಧ್ಯಾನ), ಮತ್ತು ಧ್ಯಾನವು ವೇದಾಂತದ ಸಾರ ಕೂಡಾ ಆಗಿದೆ.

ಸಂಪೂರ್ಣ ವೈದಿಕ ಸಾಹಿತ್ಯವು ಒಂದು ವಿಷಯದ ಬಗ್ಗೆ ಮಾತನಾಡುತ್ತದೆ, ನಿಮ್ಮೊಳಗಿರುವ ಆ ದೈವತ್ವವನ್ನು ಕಂಡುಹಿಡಿಯಿರಿ, ಅದು ವೇದಾಂತವಾಗಿದೆ. ವಾಸ್ತವವಾಗಿ ಅದ್ವೈತ, ವೇದಾಂತ ಮತ್ತು ಬೌದ್ಧಧರ್ಮಗಳು ಒಂದೇ ಆಗಿವೆ, ಆದರೆ ಅವುಗಳನ್ನು ಬೇರೆ ಬೇರೆಯಾಗಿ ಕಾಣಲಾಗುತ್ತದೆ.

ಈ ದೇಶದ ಮಕ್ಕಳು ಇದಕ್ಕೆ ಅರ್ಹರಾಗಿದ್ದಾರೆ. ಅವರು ಯಾವುದಕ್ಕೆ ಅರ್ಹರಾಗಿದ್ದಾರೆ? ಒಂದು ಹಿಂಸಾ-ಮುಕ್ತ ಸಮಾಜ, ಒಂದು ರೋಗ-ಮುಕ್ತ ಶರೀರ, ಒಂದು ಗೊಂದಲ-ಮುಕ್ತ ಮನಸ್ಸು, ಒಂದು ತಡೆ-ಮುಕ್ತ ಬುದ್ಧಿ, ಒಂದು ಆಘಾತ-ಮುಕ್ತ ಸ್ಮರಣೆ ಮತ್ತು ಒಂದು ದುಃಖ-ಮುಕ್ತ ಆತ್ಮ. ಅದನ್ನೊಂದು ವಾಸ್ತವಿಕತೆಯನ್ನಾಗಿ ಮಾಡುವುದರ ಕಡೆಗೆ ನಾವೆಲ್ಲರೂ ಕೆಲಸ ಮಾಡೋಣ, ಮತ್ತು ಇದನ್ನು ಮಾಡುವುದಕ್ಕಾಗಿಯೇ ಆರ್ಟ್ ಆಫ್ ಲಿವಿಂಗ್ ಬದ್ಧವಾಗಿರುವುದು. ನಿಮ್ಮಲ್ಲಿ ಪ್ರತಿಯೊಬ್ಬರಿಗೂ ನನ್ನ ಶುಭ ಹಾರೈಕೆಗಳು.

ಈ ಕೆಲವು ಮಾತುಗಳೊಂದಿಗೆ ನಾನು ನಿಮಗೆಲ್ಲರಿಗೂ ಒಂದು ಸಮೃದ್ಧವಾದ, ಸಂತೋಷವಾದ ಹಾಗೂ ಜ್ಞಾನ-ಸಂಪನ್ನವಾದ ಜೀವನವನ್ನು ಹಾರೈಸುತ್ತೇನೆ. ಮಾನವತೆಯ ಸೇವೆ ಮಾಡುವುದಕ್ಕಾಗಿ ನಿಮಗೆಲ್ಲರಿರೂ ಒಳ್ಳೆಯ ಆರೋಗ್ಯ ಮತ್ತು ಒಂದು ಒಳ್ಳೆಯ ಹೃದಯವು ಅನುಗ್ರಹಿಸಲ್ಪಡಲಿ!

Link to go through this blog as a slide show:
http://www.speakingtree.in/spiritual-slideshow/seekers/self-improvement/smile-through-every-challenge/266684