ಸೋಮವಾರ, ಮಾರ್ಚ್ 30, 2015

ನೀವು ಯಾರು?

೩೦ ಮಾರ್ಚ್ ೨೦೧೫
ಸಿಂಗಾಪುರ

ನೀವೊಂದು ಹೊಸ ಜಾಗಕ್ಕೆ ಹೋಗುವಾಗ ಏನು ಮಾಡುತ್ತೀರಿ? ನೀವು ನಿಮ್ಮ  ಪರಿಚಯ ನೀಡುತ್ತೀರಿ. ನೀವು ಯಾರು, ನೀವೆಲ್ಲಿಂದ ಬಂದಿರುವಿರಿ ಎಂಬುದರ ಬಗ್ಗೆ ನೀವು ಮಾತನಾಡುತ್ತೀರಿ, ಅಲ್ಲವೇ? ಈಗ ನಾವು ಇದನ್ನು ಒಂದು ವಿಶಾಲ ದೃಷ್ಟಿಕೋನದಿಂದ ನೋಡೋಣ. ನಾವು ಯಾರು, ನಾವು ಎಲ್ಲಿಂದ ಬಂದಿರುವೆವು ಹಾಗೂ ಜೀವನವೆಂದು ಕರೆಯಲ್ಪಡುವ ಈ ಸಣ್ಣ ಪಯಣದ ಬಳಿಕ ನಾವು ಎಲ್ಲಿಗೆ ಹೋಗುವೆವು ಎಂಬುದು ನಮಗೆ ತಿಳಿದಿದೆಯೇ?
ಈ ಸಭಾಂಗಣವು ಬಹುಶಃ ಮುಂದಿನ ೩೦೦ ವರ್ಷಗಳವರೆಗೂ ಇಲ್ಲಿ ಉಳಿಯಬಹುದು, ಆದರೆ ಈ ಸಭಾಂಗಣದಲ್ಲಿ ಕುಳಿತಿರುವ ಶರೀರಗಳಲ್ಲಿ ಯಾವುದೂ ಅಷ್ಟು ದೀರ್ಘಕಾಲ ಇರಲಾರದು. ನಮ್ಮ ಸುತ್ತಲಿರುವ ವಸ್ತುಗಳಿಗೆ ಹೋಲಿಸಿದಾಗ, ನಮ್ಮ ಬಾಳಿಕೆ (ಇಲ್ಲಿ ಶರೀರವನ್ನು ಉಲ್ಲೇಖಿಸುತ್ತಾ) ಬಹಳ ಚಿಕ್ಕದಾಗಿದೆ. ನೀವು ಉಟ್ಟಿರುವ ಬಟ್ಟೆಗಳೂ ಕೂಡಾ, ಅದರೊಳಗಿರುವ ಶರೀರಕ್ಕಿಂತ ಉತ್ತಮವಾದ ಬಾಳಿಕೆಯನ್ನು ಹೊಂದಿವೆ. ನಾನು ಹೇಳುತ್ತಿರುವುದು ನಿಮಗೆ ಅರ್ಥವಾಗುತ್ತಿದೆಯೇ?

ಹೀಗಾಗಿ, ಜೀವನದಲ್ಲಿ ಕೆಲವೊಮ್ಮೆ, "ನನ್ನ ಮೂಲ ಯಾವುದು? ನಾನು ಎಲ್ಲಿಂದ ಬಂದಿರುವೆನು? ನಾನು ಇಲ್ಲಿ ಹಲವಾರು ವರ್ಷಗಳಿಂದ ಇರುವೆನು, ಆದರೆ ಅದಕ್ಕಿಂತಲೂ ಮೊದಲು ನಾನೆಲ್ಲಿದ್ದೆ? ನನ್ನ ಈಗಿನ ವಯಸ್ಸಿಗಿಂತಲೂ ಮೊದಲು ನಾನು ಅಸ್ತಿತ್ವದಲ್ಲಾದರೂ ಇದ್ದೆನೇ?" ಎಂಬುದರ ಬಗ್ಗೆ ವಿಚಾರ ಮಾಡಿ.

ಎಲ್ಲಾ ಗ್ರಂಥಗಳು ಮತ್ತು ತತ್ವಶಾಸ್ತ್ರಗಳ ಬಗ್ಗೆ ಮರೆತುಬಿಡಿ ಹಾಗೂ ಕೇವಲ ಈ ಪ್ರಶ್ನೆಯನ್ನು ನಿಮ್ಮೊಂದಿಗೆ ನೀವು ಕೇಳಿಕೊಳ್ಳಿ, 'ನನ್ನ ಮೂಲ ಯಾವುದು? ನಾನು ಎಲ್ಲಿಂದ ಬಂದಿರುವೆನು?' ನೀವು ಕೇವಲ ಈ ಪ್ರಶ್ನೆಯನ್ನು ಕೇಳಿಕೊಳ್ಳಬೇಕಾಗಿದೆ, ಬೇರೇನೂ ಅಲ್ಲ! ಅದು ಒಳಗಿನಿಂದ ಬರುವ ಒಂದು ನಿಜವಾದ ಪ್ರಶ್ನೆಯಾಗಿರಬೇಕು ಮತ್ತು ನಾನು ನಿಮಗೆ ಹೇಳುತ್ತಿದ್ದೇನೆ ಎಂಬ ಕಾರಣಕ್ಕಾಗಿಯಲ್ಲ.

ನಿಮಗೆ ಸಿಗುವ ಉತ್ತರವು ಉತ್ತೇಜನಕಾರಿಯಾಗಿರಬಹುದು, ಅದು ಬೆರಗುಗೊಳಿಸುವಂತಹದ್ದಾಗಿರಬಹುದು ಅಥವಾ ಅದು ಸಂಪೂರ್ಣವಾಗಿ ಗೊಂದಲಮಯವಾಗಿರಬಹುದು! ಎಲ್ಲಾ ಮೂರೂ ಒಳ್ಳೆಯದೆಂದು ನಾನು ಹೇಳುತ್ತೇನೆ. ಈ ವಿಚಾರಿಸುವಿಕೆಯು ಬುದ್ಧಿಯ ಒಂದು ಲಕ್ಷಣವಾಗಿದೆ.

ನನಗೆ ನೆನಪಿದೆ, ಮಕ್ಕಳಾಗಿದ್ದಾಗ ನಾನು ಮತ್ತು ನನ್ನ ತಂಗಿ ನಮ್ಮ ಹೆತ್ತವರೊಂದಿಗೆ ಪಾರ್ಕಿಗೆ ಹೋಗುತ್ತಿದ್ದೆವು ಮತ್ತು ನಾವು ಅವರಲ್ಲಿ, "ಮೋಡಗಳು ಎಲ್ಲಿಂದ ಬಂದವು?" ಎಂದು ಕೇಳುತ್ತಿದ್ದೆವು. ಸಾಧಾರಣವಾಗಿ ಅದಕ್ಕೆ ಅವರಲ್ಲಿ ಉತ್ತರವಿರುತ್ತಿರಲಿಲ್ಲ. "ಅದು ಎಲ್ಲಿಗೆ ಹೋಗುತ್ತಿದೆ?" ಎಂದು ನಾವು ಅವರಲ್ಲಿ ಕೇಳುತ್ತಿದ್ದೆವು. ಯಾಕೆಂದರೆ, ಮೋಡಗಳು ಚಲಿಸುತ್ತಿರುವುದನ್ನು ನಾವು ನೋಡುತ್ತಿದ್ದೆವು. ತಿಳಿಯುವುದೆಂಬುದು ಪ್ರತಿಯೊಂದು ಮಗುವಿನ ಮನಸ್ಸಿನಲ್ಲಿರುವ ಒಂದು ಸಹಜ ಪ್ರವೃತ್ತಿಯಾಗಿದೆ. ಮೂರು ವರ್ಷ ವಯಸ್ಸಿನಿಂದ ನಾವು ಪ್ರಶ್ನೆಗಳನ್ನು ಕೇಳತೊಡಗುತ್ತೇವೆ. ನಮ್ಮಲ್ಲಿ ಬುದ್ಧಿ ಎಂದು ಕರೆಯಲ್ಪಡುವ ಒಂದು ಸಹಜಶಕ್ತಿಯಿರುವುದನ್ನು ಪ್ರಶ್ನೆಗಳು ಸೂಚಿಸುತ್ತವೆ. ನಾವು ಮಕ್ಕಳನ್ನು ಪ್ರಶ್ನೆಗಳನ್ನು ಕೇಳುವುದರಿಂದ ದೂರವಿಡಬಾರದು. ಇನ್ನೂ ಹೆಚ್ಚು ಪ್ರಶ್ನೆಗಳನ್ನು ಕೇಳುವಂತೆ ನಾವು ಅವರನ್ನು ಪ್ರೋತ್ಸಾಹಿಸಬೇಕು.

ಕೇವಲ ಪ್ರಶ್ನೆಗಳನ್ನು ಕೇಳುವುದರಿಂದಲೇ ಮಕ್ಕಳು ತೃಪ್ತರಾಗುವುದನ್ನು ನೀವು ಅನೇಕ ಸಾರಿ ನೋಡುವಿರಿ; ನೀವು ಅವರಿಗೆ ಯಾವ ಉತ್ತರವನ್ನು ನೀಡುವಿರಿ ಎಂಬುದು ದೊಡ್ಡ ವಿಷಯವಲ್ಲ.  

ಒಬ್ಬ ಸಹೋದರ ಅಥವಾ ಸಹೋದರಿಯನ್ನು ಪಡೆದಾಗ ಮಕ್ಕಳು, "ಅಮ್ಮಾ, ಈ ಮಗು ಎಲ್ಲಿಂದ ಬಂತು?" ಎಂದು ಕೇಳುತ್ತಾರೆ. ಪಶ್ಚಿಮದಲ್ಲಿ ಜನರು, ಮಗುವನ್ನು 'ಸ್ಟಾಕ್ಸ್' ತಂದರೆಂದು ಹೇಳುತ್ತಾರೆ, ಮತ್ತು ಬೇರೆ ಬೇರೆ ಸಂಸ್ಕೃತಿಗಳಲ್ಲಿ ನಾವು ಬೇರೆ ಬೇರೆ ವಿವರಣೆಗಳನ್ನು ನೀಡುತ್ತೇವೆ. ಹೆತ್ತವರು ಏನನ್ನೇ ಹೇಳಿದರೂ ಪರವಾಗಿಲ್ಲ, ಮಗು ತೃಪ್ತವಾಗುವಂತೆ ತೋರುತ್ತದೆ. ನೀವಿದನ್ನು ಅನುಭವಿಸಿದ್ದೀರಾ?

ವಾಸ್ತವವಾಗಿ, ಪ್ರತಿಯೊಂದು ಮಗುವೂ ನಿಮ್ಮ ಬುದ್ಧಿಯನ್ನು, ನಿಮ್ಮ ಸಾಮಾನ್ಯ ಜ್ಞಾನವನ್ನು ಮತ್ತು ನಿಮ್ಮ ಅರಿವನ್ನು ಪರೀಕ್ಷೆ ಮಾಡುತ್ತಿರುತ್ತದೆ.

ಹೀಗೆ ನಾವು ಹುಟ್ಟುವಾಗ ಪಡಕೊಂಡು ಬಂದ, ವಿಚಾರಣೆ ಮಾಡುವ ಈ ಚೈತನ್ಯವನ್ನು ನಾವು ಜೀವನದುದ್ದಕ್ಕೂ ಉಳಿಸಿಕೊಳ್ಳಬೇಕು ಮತ್ತು ನಮ್ಮೊಂದಿಗೆ ಒಯ್ಯಬೇಕು. ಇದುವೇ ಆಧ್ಯಾತ್ಮಿಕತೆ ಮತ್ತು ಇದುವೇ ವಿಜ್ಞಾನ ಕೂಡಾ.
ವಿಜ್ಞಾನದಲ್ಲಿ ನೀವು, 'ಇದು ಏನು? ಇದು ಹೇಗೆ ಆಯಿತು?' ಎಂದು ಕೇಳುತ್ತೀರಿ, ಮತ್ತು ಆಧ್ಯಾತ್ಮದಲ್ಲಿ ನೀವು, 'ನಾನು ಯಾರು? ನಾನು ಎಲ್ಲಿಂದ ಬಂದಿರುವೆನು?' ಎಂದು ಕೇಳುತ್ತೀರಿ.

ವಿಷಯ ಮತ್ತು ವಸ್ತು ಇಲ್ಲದೆ ಯಾವುದೇ ಜ್ಞಾನವೂ ಸಂಪೂರ್ಣವಲ್ಲ.

ನೀವು ಹಳದಿ ಕನ್ನಡಕವನ್ನು ಧರಿಸುತ್ತೀರಿ ಎಂದಿಟ್ಟುಕೊಳ್ಳಿ, ಆಗ ನೀವು ನೋಡುವ ಎಲ್ಲವೂ ಹಳದಿಯಾಗಿ ಕಾಣಿಸುವುದು. ಆದರೆ ಎಲ್ಲವೂ ಹಳದಿಯೆಂದು ಹೇಳಲು ನಿಮಗೆ ಸಾಧ್ಯವಿಲ್ಲ. ನೀವು ಯಾವ ರೀತಿಯ ಕನ್ನಡಕವನ್ನು ಧರಿಸಿದ್ದೀರೆಂಬುದನ್ನು ನೀವು ನೋಡಬೇಕು. ಇದು ವಸ್ತುನಿಷ್ಠ ಜ್ಞಾನ.

ವಿಷಯ ಮತ್ತು ವಸ್ತುಗಳ ನಡುವಿನ ಸಂಬಂಧವು ಎಷ್ಟು ಅತೀವವಾದುದೆಂದರೆ, ಎಷ್ಟು ನಿಕಟವಾದುದೆಂದರೆ ಅವುಗಳು ಒಂದು ಇನ್ನೊಂದಿಲ್ಲದೆ ಉಳಿಯಲಾರವು. ಇದು ಜ್ಞಾನದ ಕ್ಷೇತ್ರವಾಗಿದೆ.

ಒಂದು ಆಧ್ಯಾತ್ಮಿಕ ಅನ್ವೇಷಣೆಯಿಲ್ಲದೆ ವಿಜ್ಞಾನವು ಅಪೂರ್ಣವಾಗಿದೆ ಮತ್ತು ಒಂದು ವೈಜ್ಞಾನಿಕ ಮನೋಭಾವವಿಲ್ಲದೆ ಆಧ್ಯಾತ್ಮಿಕ ಅನ್ವೇಷಣೆಯು ಒಂದು ಇಂಚಿನಷ್ಟೂ ಪ್ರಗತಿ ಹೊಂದಲಾರದು. ಒಂದು ವೈಜ್ಞಾನಿಕ ಮನೋಭಾವವು ಆಧ್ಯಾತ್ಮಿಕ ಅನ್ವೇಷಣೆಗಿರುವ ತಳಹದಿಯಾಗಿದೆ. ಆದುದರಿಂದ, ಆಧ್ಯಾತ್ಮ ಮತ್ತು ವಿಜ್ಞಾನ ಇವುಗಳೆರಡನ್ನೂ ತಿಳಿದುಕೊಳ್ಳುವುದು ಜ್ಞಾನವಾಗಿದೆ.

ಮತ್ತೆ ಈ ಪ್ರಶ್ನೆಗೆ ಮರಳಿ ಬರೋಣ, 'ನಾನು ಎಲ್ಲಿಂದ ಬಂದಿದ್ದೇನೆ?' ಯಾವತ್ತಾದರೂ ನೀವು ಇದರ ಬಗ್ಗೆ ಯೋಚಿಸಿದ್ದೀರಾ? ನೀವು ಇಲ್ಲಿಗೆ ಬರುವ ಮೊದಲು ನೀವು ಎಲ್ಲಿದ್ದಿರಿ? ಇದು ಅತೀಂದ್ರಿಯ ಸಾಮ್ರಾಜ್ಯದೊಳಕ್ಕಿರುವ ಒಂದು ಪಯಣವಾಗಿದೆ, ಅದು ಬಹಳ ನಿಜವಾದುದಾಗಬಹುದು; ನೀವೊಬ್ಬ ಸ್ನೇಹಿತನೊಂದಿಗೆ ಮಾತನಾಡುವುದು ಎಷ್ಟು ನಿಜವೋ ಅಷ್ಟು ನಿಜವಾದುದು.
ನಾನು ನಿಮಗೆ ಹೇಳುವುದೇನೆಂದರೆ, ನಾವು ಯಾರು ಮತ್ತು ನಾವು ಎಲ್ಲಿಂದ ಬಂದಿರುವೆವು ಎಂಬುದನ್ನು ಕಂಡುಹುಡುಕದೇ ನಾವು ಈ ಜಗತ್ತಿನಿಂದ ನಿರ್ಗಮಿಸಬಾರದು. ಇದು ಬಹಳ ಪ್ರಧಾನವಾದುದು. ವಿಚಾರಣೆಯ ಈ ಉತ್ಸಾಹವೇ ನಮ್ಮನ್ನು ಇನ್ನೊಂದು ಆಯಾಮದ ಕಡೆಗೆ ಮೇಲೆತ್ತುತ್ತದೆ; ಅದು ಖಿನ್ನತೆ, ಚಿಂತೆ ಮತ್ತು ಇತರ ಎಲ್ಲಾ ರೀತಿಯ ಮಾನಸಿಕ ಕೊರತೆಗಳಿಂದ ಮುಕ್ತವಾಗಿರುತ್ತದೆ.

ನಿಜವಾದ ಆಧ್ಯಾತ್ಮಿಕ ವಿಚಾರಣೆಯ ಅಡ್ಡ ಪರಿಣಾಮಗಳೆಂದರೆ, ಸಂತೋಷ, ವಿಶ್ವಾಸ ಮತ್ತು ಅಂತಃಸ್ಫುರಣೆ.
ಈ ಮೂರು ವಿಷಯಗಳು ಯಾರಿಗೆ ಬೇಡವೆಂದು ನನಗೆ ಹೇಳಿರಿ. ಈ ಮೂರು ವಿಷಯಗಳು ಬೇಡವಾಗಿರುವ ಯಾರೇ ಆದರೂ, ಯಾವುದೇ ರೀತಿಯ ಆಧ್ಯಾತ್ಮಿಕ ವಿಚಾರಣೆ ಅಥವಾ ಆಧ್ಯಾತ್ಮಿಕ ಅಭ್ಯಾಸಗಳಿಂದ ದೂರ ಉಳಿಯಬಹುದು.

ಜೀವನವನ್ನೊಂದು ವಿಶಾಲ ದೃಷ್ಟಿಕೋನದಿಂದ ನೋಡುವುದೇ ಅತೀಂದ್ರಿಯತೆ ಹಾಗೂ ಆಧ್ಯಾತ್ಮದ ಸಾರ.

ಅತೀಂದ್ರಿಯತೆಯೆಂದರೆ ಬೆಂಕಿಯ ಮೇಲೆ ನಡೆಯುವುದು ಅಥವಾ ಒಂದು ಕಾಲಿನ ಮೇಲೆ ನಿಲ್ಲುವಂತಹ ಏನಾದರೂ ವಿಚಿತ್ರ ಸಂಗತಿಗಳನ್ನು ಮಾಡುವುದಲ್ಲ. ನೀವು ಅವುಗಳಲ್ಲಿ ಯಾವುದನ್ನೂ ಮಾಡಬೇಕಾಗಿಲ್ಲ. ಕೇವಲ ಮೂಲದ ಒಂದು ವಿಚಾರಣೆ ಮಾಡಬೇಕಷ್ಟೆ.

ನಿನ್ನೆ ಒಬ್ಬನು ನನ್ನಲ್ಲಿ, 'ಯೋಚನೆಗಳು ಎಲ್ಲಿಂದ ಬರುತ್ತವೆ?' ಎಂದು ಕೇಳಿದನು. ನಾನಂದೆ, 'ನಿನಗೆ ಯೋಚನೆಗಳು ಬರುತ್ತವೆಯೇ?'

ಅವನಂದನು, 'ಹೌದು'.

ಆಗ ನಾನಂದೆ, 'ಕಂಡುಹಿಡಿ! ಅದು ನಿನ್ನ ವ್ಯಾಪ್ತಿಯೊಳಗೆಯೇ ಇದೆ'.

'ನನ್ನ ಮೂಲ ಯಾವುದು?' ಈ ಪ್ರಶ್ನೆಯು ನಿಮ್ಮನ್ನು ಕಾಡಬೇಕು. ಇದು ಬುದ್ಧಿಯ ಒಂದು ಲಕ್ಷಣವಾಗಿದೆ. ಬುದ್ಧಿಯ ಮೊದಲ ಲಕ್ಷಣವೆಂದರೆ, ಒಬ್ಬನು ಅಥವಾ ಒಬ್ಬಳು ತನ್ನ ಮೂಲದ ಬಗ್ಗೆ ವಿಚಾರಿಸುವಾಗ ಅದು. ಬುದ್ಧಿಯ ಎರಡನೆಯ ಲಕ್ಷಣವೆಂದರೆ, ಒಂದು ಪ್ರಶ್ನೆಯನ್ನು ಕೇಳುವಲ್ಲಿಯವರೆಗೆ ಏನನ್ನೂ ಹೇಳದಿರುವುದು - ಹೀಗೆಂದು ಹೇಳಲಾಗಿದೆ. ಖಂಡಿತವಾಗಿಯೂ, ನೀವು ಕಷ್ಟದಲ್ಲಿರುವಾಗ, ನೀವು ಸಮಸ್ಯೆಯಲ್ಲಿರುವಾಗ, ಮಾತನಾಡುವುದಕ್ಕಿಂತ ಮೌನವಾಗಿರುವುದು ಉತ್ತಮ.

ನಾವು ಜನರಲ್ಲಿ ಬಹಳ ನಿರರ್ಥಕವಾದ ಪ್ರಶ್ನೆಗಳನ್ನು ಕೇಳುತ್ತಿರುತ್ತೇವೆ. ಒಬ್ಬರು ಅನಾರೋಗ್ಯದಿಂದ ಆಸ್ಪತ್ರೆಯಲ್ಲಿರುತ್ತಾರೆ, ನೀವು "ನೀನು ಹೇಗಿದ್ದೀಯಾ?" ಎಂದು ಕೇಳುತ್ತೀರಿ.

ಅವರನ್ನುತ್ತಾರೆ, "ನಾನು ಚೆನ್ನಾಗಿದ್ದೇನೆ!" ಅವರು ಚೆನ್ನಾಗಿದ್ದರೆ, ಮತ್ತೆ ಅವರು ಯಾಕೆ ಆಸ್ಪತ್ರೆಯಲ್ಲಿದ್ದಾರೆ? ಅದೊಂದು ಸ್ಲಾಟ್ ಮೆಶೀನಿನಂತೆ, ನೀವೊಂದು ನಾಣ್ಯವನ್ನು ಹಾಕುತ್ತೀರಿ ಮತ್ತು ಏನಾದರೂ ಹೊರಬರುತ್ತದೆ. ನಮ್ಮ ಉತ್ತರಗಳು ಮತ್ತು ನಮ್ಮ ವಿಚಾರಣೆಗಳು ಕೂಡಾ ಹಾಗೆಯೇ. ಈ ಪ್ರಶ್ನೆಗಳಿಗೆ ಮತ್ತು ಈ ಉತ್ತರಗಳಿಗೆ ಇರುವ ಅರ್ಥ ಬಹಳ ಕಡಿಮೆ. ನಿಜವಾದ ಪ್ರಶ್ನೆಯೆಂದರೆ, 'ನನ್ನ ಮೂಲ ಯಾವುದು?' ಅದು ನಮ್ಮನ್ನು ಅಸ್ತಿತ್ವದ ಇನ್ನೊಂದು ಆಯಾಮಕ್ಕೆ ಸಾಗಿಸುತ್ತದೆ, ಅಲ್ಲಿ ನಾವು ಖಿನ್ನತೆಯನ್ನು ಯಾವುದೇ ತಡವಿಲ್ಲದೆಯೇ ತೊಡೆದುಹಾಕಲು ಸಾಧ್ಯವಿದೆ.

ಜೀವನವು ಉದಾತ್ತವಾದುದು, ನೀವು ನಿಮ್ಮ ಸುತ್ತಲಿರುವ ಕೆಲವು ಜನರೊಂದಿಗೆ ಇಲ್ಲಿ ಒಂದು ನಿರ್ದಿಷ್ಟ ಪಾತ್ರ ವಹಿಸುವುದಕ್ಕೆ ಮಾತ್ರ ಅದು ಸೀಮಿತವಾದುದಲ್ಲ. ನನ್ನ ಪ್ರೀತಿಪಾತ್ರರೇ, ನೀವು ಅದಕ್ಕಿಂತ ಎಷ್ಟೋ ಹೆಚ್ಚಿನವರು!