ಬುಧವಾರ, ಸೆಪ್ಟೆಂಬರ್ 19, 2012

ಗಣೇಶನ ಸಾಂಕೇತಿಕ ಸ್ವರೂಪ

19
2012
Sep
ಬೆ೦ಗಳೂರು, ಭಾರತ

ಣೇಶ ಎಂದರೆ ನಿರಾಕಾರ, ದೈವಿಕತೆ - ಭಕ್ತರ ಅನುಕೂಲಕ್ಕಾಗಿ ಬೃಹದಾಕಾರದೊಳಗೆ ಅಡಕಗೊಳಿಸಲ್ಪಟ್ಟಿರುವ ರೂಪ. ಗಣ ಎಂದರೆ ಗುಂಪು. ಬ್ರಹ್ಮಾಂಡವು ಅಣುಗಳ ಮತ್ತು ವಿವಿಧ ಶಕ್ತಿಗಳ ಒಂದು ಗುಂಪು. ಈ ಅನೇಕ ಘಟಕಗಳನ್ನು ಆಳುವ ಯಾವುದೇ ಪರಮ ತತ್ವವಿಲ್ಲದೇ ಇದ್ದರೆ ಈ ಬ್ರಹ್ಮಾಂಡವು ಗೊಂದಲಮಯವಾಗಿರುತ್ತಿತ್ತು. ಈ ಎಲ್ಲಾ ಅಣುಗಳ ಮತ್ತು ಶಕ್ತಿಗಳ ಈಶ್ವರನು ಗಣೇಶ. ಅವನು ಎಲ್ಲವನ್ನೂ ವ್ಯಾಪಿಸಿರುವ ಮತ್ತು ಈ ಬ್ರಹ್ಮಾಂಡದಲ್ಲಿ ವ್ಯವಸ್ಥೆಯನ್ನು ತರುವ ಪರಮ ಪ್ರಧಾನ ಚೈತನ್ಯ.


ಆದಿಶಂಕರರಿಂದ ಗಣೇಶ ತತ್ವವು ಬಹಳ ಸುಂದರವಾಗಿ ತಿಳಿಸಲ್ಪಟ್ಟಿದೆ. ಗಣೇಶನು ಗಜಾನನ (ಆನೆಯ ಮುಖದವ)ನೆಂದು ಪೂಜಿಸಲ್ಪಟ್ಟರೂ, ಆ ಸ್ವರೂಪವಿರುವುದು ಪರಬ್ರಹ್ಮ (ನಿರಾಕಾರ) ರೂಪವನ್ನು ವ್ಯಕ್ತಪಡಿಸಲಿಕ್ಕಾಗಿ. ಅವನು’ಅಜಂ ನಿರ್ವಿಕಲ್ಪಂ ನಿರಾಕಾರಮೇಕಂ’. ಅಂದರೆ ಗಣೇಶನು ಅಜಂ (ಜನ್ಮರಹಿತ), ಅವನು ನಿರ್ವಿಕಲ್ಪ(ಗುಣರಹಿತ), ಅವನು ನಿರಾಕಾರ (ಆಕಾರವರ್ಜಿತ) ಮತ್ತು ಅವನು ಸರ್ವವ್ಯಾಪಿ ಚೈತನ್ಯದ ಪ್ರತೀಕವಾಗಿದ್ದಾನೆ. ಈ ಬ್ರಹ್ಮಾಂಡಕ್ಕೆ ಹೇತುವಾಗಿರುವ ಶಕ್ತಿಯೇ ಗಣೇಶ. ಆ ಶಕ್ತಿಯಿಂದಲೇ  ಎಲ್ಲವೂ ಉದ್ಭವವಾಗುತ್ತದೆ ಮತ್ತು ಎಲ್ಲವೂ ಅದರಲ್ಲೇ ಲೀನವಾಗುತ್ತದೆ.

ಗಣೇಶನು ಹೇಗೆ ಗಜಮುಖನಾದನೆಂಬ ಕಥೆಯು ನಮ್ಮೆಲ್ಲರಿಗೂ ತಿಳಿದಿದೆಯಷ್ಟೇ. ಪಾರ್ವತಿಯು ಶಿವನೊಂದಿಗೆ ಸ೦ಭ್ರಮಿಸುತ್ತಿರುವಾಗ ಕೊಳೆಯಾದಳು. ಇದನ್ನರಿತಾಗ ಅವಳು ತನ್ನ ಶರೀರದ ಮೇಲಿನ ರಾಡಿಯನ್ನು ತೆಗೆದು ಅದರಿಂದ ಒಬ್ಬ ಹುಡುಗನನ್ನು ನಿರ್ಮಿಸಿದಳು. ನಂತರ ತಾನು ಸ್ನಾನ ಮಾಡುವಾಗ ಅಲ್ಲಿ ಕಾಯಲು ಅವನಿಗೆ ಹೇಳಿದಳು. ಶಿವನು ಮರಳಿದಾಗ, ಹುಡುಗನು ಅವನನ್ನು ಗುರುತಿಸಲಿಲ್ಲ ಮತ್ತು ಅವನ ಹಾದಿಯನ್ನು ತಡೆದನು. ಹಾಗಾಗಿ ಶಿವನು ಹುಡುಗನ ತಲೆಯನ್ನು ಕಡಿದು ಒಳಗೆ ಹೋದನು. ಇದನ್ನು ನೋಡಿದಾಗ ಪಾರ್ವತಿಯು ಆಘಾತಗೊಂಡಳು. ಅವಳು ಶಿವನಿಗೆ ಆತ ತಮ್ಮಿಬ್ಬರ ಮಗನೆಂದು ವಿವರಿಸಿ ಅವನನ್ನು ಹೇಗಾದರೂ ಕಾಪಾಡಬೇಕೆಂದು ಕೇಳಿಕೊಂಡಳು. ಆಗ ಶಿವನು ತನ್ನ ಸಹಾಯಕರಿಗೆ ಉತ್ತರ ದಿಕ್ಕಿಗೆ ತಲೆಮಾಡಿ ಮಲಗಿರುವವರೊಬ್ಬರ ತಲೆಯನ್ನು ತರಲು ಆದೇಶಿಸಿದನು. ಆ ಸಹಾಯಕರು ತಂದ ಒಂದು ಆನೆಯ ತಲೆಯನ್ನು ಶಿವನು ಆ ಹುಡುಗನ ಶರೀರಕ್ಕೆ ಜೋಡಿಸಿದಾಗ ಗಣೇಶನ ಜನ್ಮವಾಯಿತು.

ಈ ಕಥೆಯು ವಿಚಿತ್ರವೆನಿಸುತ್ತದೆಯೇ? ಪಾರ್ವತಿಯ ಶರೀರದಲ್ಲಿ ಕೊಳೆ ಏಕಾಗಬೇಕು? ಎಲ್ಲವನ್ನೂ ತಿಳಿದಿರುವ ಶಿವನಿಗೆ ತನ್ನ ಸ್ವಂತ ಮಗನ ಪರಿಚಯವಾಗಲಿಲ್ಲವೇ? ಶಿವ ಸದಾ ಧ್ಯಾನಸ್ಥ, ಶಾಂತಿಯ ಸ್ವರೂಪ, ತನ್ನ ಮಗನ ತಲೆಯನ್ನೇ ಕಡಿಯುವಷ್ಟು ಮುಂಗೋಪಿಯಾಗಿದ್ದನೇ? ಮತ್ತೆ ಗಣೇಶನಿಗೆ ಆನೆಯ ತಲೆಯೇಕೆ? ಇದಕ್ಕೆಲ್ಲಾ ಒಂದು ಇನ್ನೂ ಆಳವಾದ ಅರ್ಥವಿದೆ.

ಪಾರ್ವತಿಯು ಹಬ್ಬದ ಹುರುಪಿನ ಶಕ್ತಿಯ ಸಂಕೇತವಾಗಿದ್ದಾಳೆ. ಅವಳು ಕೊಳೆಯಾದಳೆಂದರೆ, ಉತ್ಸವಾಚರಣೆಯು ಸುಲಭದಲ್ಲೇ ರಾಜಸಿಕವಾಗಬಹುದು ಅಥವಾ ಉದ್ರಿಕ್ತವಾಗಬಹುದು ಮತ್ತು ನಿಮ್ಮನ್ನು ನಿಮ್ಮ ಕೇಂದ್ರದಿಂದ ವಿಚಲಿತಗೊಳಿಸಬಹುದು. ಕೊಳೆಯು ಅಜ್ಞಾನದ ಸಂಕೇತ, ಮತ್ತು ಶಿವನು ದಿವ್ಯವಾದ ಮುಗ್ಧತೆ, ಶಾಂತಿ ಮತ್ತು ಜ್ಞಾನದ ಸಂಕೇತ. ಹಾಗಾಗಿ ಗಣೇಶನು ಶಿವನ ಮಾರ್ಗವನ್ನು ತಡೆದಾಗ, ಅಜ್ಞಾನವು (ತಲೆಯ/ಬುದ್ಧಿಯ ಗುಣಸ್ಥಿತಿ) ಜ್ಞಾನವನ್ನು ಗುರುತಿಸುವುದಿಲ್ಲ. ಆಗ ಜ್ಞಾನವು ಅಜ್ಞಾನವನ್ನು ದಾಟಿ ನಡೆಯಬೇಕು. ಇದು ಶಿವನು ಆ ಹುಡುಗನ ತಲೆಯನ್ನು ಕಡಿದುದರ ಸಂಕೇತ.

ಮತ್ತೆ ಆನೆಯ ತಲೆಯೇಕೆ? ಆನೆಯು ಜ್ಞಾನಶಕ್ತಿ ಮತ್ತು ಕರ್ಮಶಕ್ತಿ ಎರಡನ್ನೂ ಪ್ರತಿನಿಧಿಸುತ್ತದೆ. ಆನೆಯ ಪ್ರಮುಖ ಗುಣಗಳೆಂದರೆ ವಿವೇಕ ಮತ್ತು ನಿರಾಯಾಸತ್ವ. ಆನೆಯ ಬೃಹತ್ತಾದ ತಲೆಯು ವಿವೇಕ ಮತ್ತು ಜ್ಞಾನವನ್ನು ಸೂಚಿಸುತ್ತದೆ. ಆನೆಗಳು ತಡೆಗಳ ಸುತ್ತ ಬಳಸಿ ನಡೆಯುವುದಿಲ್ಲ, ಅಲ್ಲದೇ ತಡೆಗಳಿಂದ ನಿಲ್ಲಿಸಲ್ಪಡುವುದೂ ಇಲ್ಲ. ಅವು ತಡೆಗಳನ್ನು ತೆಗೆದು ಮುನ್ನಡೆಯುತ್ತವೆ - ಇದು ನಿರಾಯಾಸತೆಯನ್ನು ಸೂಚಿಸುತ್ತದೆ. ನಾವು ಭಗವಾನ್ ಗಣೇಶನನ್ನು ಪೂಜಿಸಿದಾಗ ನಮ್ಮೊಳಗಿರುವ ಈ ಗಜಗುಣಗಳು ಬೆಳಗಿ ನಾವು ಈ ಗುಣಗಳ ಪ್ರಯೋಜನ ಪಡೆಯುತ್ತೇವೆ.

ಗಣೇಶನ ದೊಡ್ಡ ಹೊಟ್ಟೆಯು ಔದಾರ್ಯವನ್ನು ಮತ್ತು ಸಂಪೂರ್ಣ ಸ್ವೀಕಾರವನ್ನು ಪ್ರತಿನಿಧಿಸುತ್ತವೆ. ಗಣೇಶನ ಮೇಲ್ನೆತ್ತಿ, ಮುಮ್ಮುಖವಾಗಿರುವ ಕೈ ಅಭಯಹಸ್ತದ ಸಂಕೇತವಾಗಿದ್ದು, ’ಹೆದರದಿರು, ನಾನು ನಿನ್ನ ಜೊತೆಗಿದ್ದೇನೆ’ ಎಂದು ಅರ್ಥ ನೀಡುತ್ತದೆ. ಮತ್ತು ಅವನ ಹೊರಮುಖವಾಗಿರುವ ಕೆಳಗಿನ ಕೈಯು ನಿರಂತರವಾದ ಕೊಡುಗೆಯ ಸಂಕೇತ ಮತ್ತು ಶಿರ ಬಾಗಿಸಲು ಆಹ್ವಾನ ಕೂಡ. ಇದು ನಾವೆಲ್ಲರೂ ಒಂದು ದಿನ ಈ ಭೂಮಿಯಲ್ಲಿ ಲೀನವಾಗುತ್ತೇವೆಂಬ ಸಂಗತಿಯ ಚಿಹ್ನೆ. ಗಣೇಶನು ಏಕದಂತನೂ ಕೂಡ, ಇದು ಏಕ ಸೂಚಿತ್ವದ ಸಂಕೇತ. ಗಣೇಶನು ಧರಿಸುವ ಆಯುಧಗಳೂ ಸಾಂಕೇತಿಕ. ಅವನು ತನ್ನ ಕೈಗಳಲ್ಲಿ ಅಂಕುಶ (ಜಾಗೃತಿಯ ಸಂಕೇತ) ಮತ್ತು ಪಾಶ (ನಿಯತ್ರಣದ ಸಂಕೇತ)ವನ್ನು ಹಿಡಿದಿದ್ದಾನೆ. ಸ್ವ- ಜಾಗೃತಿಯಿಂದ ಬಹಳ ಶಕ್ತಿಯು ಹೊರಹುಮ್ಮುವುದು, ಇದರ ನಿಯಂತ್ರಣವಿಲ್ಲದಿದ್ದಲ್ಲಿ ಆ ಶಕ್ತಿಯು ಕಗ್ಗಂಟಾಗುವುದು.

ಮತ್ತೆ ಗಜಮುಖನಾದ ಭಗವಾನ್ ಗಣೇಶನು ಅಷ್ಟು ಚಿಕ್ಕದಾದ ಇಲಿಯ ಮೇಲೆ ಕುಳಿತು ಏಕೆ ಸಂಚರಿಸುತ್ತಾನೆ? ಇದು ಬಹಳ ಅಸಮಂಜಸವಲ್ಲವೇ?ಇದರಲ್ಲೂ ಬಹಳ ಆಳವಾದ ಸಾಂಕೇತಿಕತೆಯಿದೆ. ಕಟ್ಟಿಹಾಕುವಂಥ ಹಗ್ಗಗಳನ್ನು ಇಲಿಯು ಕಚ್ಚಿ ತಿಂದು ಒಗೆಯುತ್ತದೆ. ಹಲವಾರು ಪೊರೆಗಳ ಅಜ್ಞಾನವನ್ನೇ ಸೀಳಿ ನುಗ್ಗಬಲ್ಲ, ಪರಮ ಮೂಲವಾದ ಜ್ಞಾನ ಸ್ವರೂಪನಾದ ಗಣೇಶನ ಬಳಿ ಕರೆದೊಯ್ಯಬಲ್ಲ ಮಂತ್ರದಂತೆ ಇರುವುದು ಇಲಿ!

ನಮ್ಮ ಋಷಿಗಳು ಎಷ್ಟು ಆಳವಾದ ಜ್ಞಾನ ಹೊಂದಿದ್ದರೆಂದರೆ, ಅವರು ದೈವಿಕತೆಯನ್ನು ಪದಗಳಿಗಿಂತ ಹೆಚ್ಚು ಚಿಹ್ನೆಗಳ ಮೂಲಕ ವ್ಯಕ್ತಪಡಿಸುತ್ತಿದ್ದರು, ಏಕೆಂದರೆ ಸಮಯದೊಂದಿಗೆ ಪದಗಳು ಬದಲಾಗುತ್ತವೆ, ಆದರೆ ಚಿಹ್ನೆಗಳು ಬದಲಾಗದೆ ಉಳಿಯುತ್ತವೆ. ಸರ್ವ ವ್ಯಾಪಿಯನ್ನು ಗಣೇಶನ ರೂಪದಲ್ಲಿ ನಾವು ಅನುಭವಿಸುವಾಗ, ಈ ಸಾಂಕೇತಿಕತೆಯನ್ನು ನಾವು ಮನಸ್ಸಿನಲ್ಲಿಟ್ಟುಕೊಳ್ಳೋಣ, ಜೊತೆಗೇ ಗಣೇಶನು ನಮ್ಮೊಳಗೇ ಇದ್ದಾನೆಂದೂಸಂಪೂರ್ಣವಾಗಿ ಅರಿತಿರೋಣ. ನಾವು ಗಣೇಶ ಚತುರ್ಥಿಯನ್ನು ಆಚರಿಸುತ್ತಿರುವಂತೆ ಈ ವಿವೇಕವನ್ನು ಹೊಂದಿರಬೇಕು.