ಶನಿವಾರ, ಸೆಪ್ಟೆಂಬರ್ 22, 2012

ತೀವ್ರ ಅಂತಃ ಪರಿವರ್ತನೆ


ಆಚೆನ್, ಜರ್ಮನಿ
ಸೆಪ್ಟೆಂಬರ್ ೨೨, ೨೦೧೨

ಹಾಗಾದರೆ ಇವತ್ತಿನ ವಿಷಯ ಐ.ಟಿ - ಹೊಸ ಆಯಾಮಗಳು.
ನಿಮಗೆ ಗೊತ್ತಿದೆಯಾ, ನನಗೆ, ಐ.ಟಿ. ಎಂದರೆ ಇನ್ನರ್ ಟ್ರಾನ್ಸ್ಫಾರ್ಮೇಷನ್ (ಅಂತಃ ಪರಿವರ್ತನೆ) ಎಂದು ಅರ್ಥ. ಮತ್ತು ನೀವು ಐ.ಐ.ಟಿ ಎಂದು ಹೇಳಿದರೆ, ಅದರರ್ಥ ಇಂಟೆನ್ಸ್ ಇನ್ನರ್ ಟ್ರಾನ್ಸ್ಫಾರ್ಮೇಷನ್ (ತೀವ್ರ ಅಂತಃಪರಿವರ್ತನೆ).
ನಾವು, ತನ್ನಲ್ಲೇ ಒಂದು ಸಂಪೂರ್ಣ ತಂತ್ರಜ್ಞಾನವಾಗಿರುವ ನಮ್ಮ ಶರೀರದ ಬಗ್ಗೆ, ನಮ್ಮ ಮನಸ್ಸಿನ ಬಗ್ಗೆ, ನಮ್ಮ ಉಸಿರಿನ ಬಗ್ಗೆ ಮರೆಯುತ್ತೇವೆ. ಶರೀರವು ಒಂದು ಯಂತ್ರವಾಗಿದೆ ಮತ್ತು ಈ ಶರೀರವನ್ನು ನಿರ್ವಹಿಸುವ, ಈ ಶರೀರವನ್ನು ಬೆಳೆಸಲು ಸಹಾಯ ಮಾಡಿರುವ ಪ್ರಜ್ಞೆಯನ್ನು ನಾವು ನಿರ್ಲಕ್ಷಿಸಿದ್ದೇವೆ. ಅದರ ಕಡೆಗೆ ಕೂಡಾ ನಾವು ಗಮನ ನೀಡಬೇಕಾಗಿದೆ. ಆಗ ಜೀವನಕ್ಕೊಂದು ಹೊಸ ಆಯಾಮವು ತೆರೆದುಕೊಳ್ಳುತ್ತದೆ.
ಇವತ್ತು ಜಗತ್ತಿನಲ್ಲಿ ತಂತ್ರಜ್ಞಾನವು ಅಸ್ಥಿತ್ವದಲ್ಲಿರುವುದು ಪ್ರಜ್ಞೆಯ ಕಾರಣದಿಂದಾಗಿ. ಯಾರೋ ಒಬ್ಬರ ಮನಸ್ಸಿನಲ್ಲಿ ಆಲೋಚನೆಗಳು ಬರುತ್ತವೆ ಮತ್ತು ನಂತರ ಆ ಯೋಚನೆಗಳು ತಂತ್ರಜ್ಞಾನವಾಗಿ ಪ್ರಕಟಗೊಳ್ಳುತ್ತವೆ, ಮತ್ತು ಈ ಯೋಚನೆಗಳು ಬರುವುದು ಎಲ್ಲಿಂದ? ಮತ್ತು ಯೋಚನೆಗಳನ್ನು ವಾಸ್ತವವಾಗಿ ಅನುವಾದಿಸಲು ಸಹಾಯ ಮಾಡುವುದು ಯಾವುದು? ಅದು ಪ್ರಜ್ಞೆ.    
ಇವತ್ತು ನಮ್ಮಲ್ಲಿ ಸೆಲ್ ಫೋನುಗಳಿವೆ. ಆದರೆ ೨೦ರಿಂದ ೩೦ ವರ್ಷಗಳ ಹಿಂದೆ, ಸೆಲ್ ಫೋನುಗಳ ಬಗ್ಗೆ ನಮಗೆ ಯಾವುದೇ ಪರಿಕಲ್ಪನೆಯಿರಲಿಲ್ಲ. ಒಂದು ಸೆಲ್ ಫೋನನ್ನು ಮಾಡುವುದು ಹೇಗೆ - ಅಂತಹ ಒಂದು ಪರಿಕಲ್ಪನೆಯು ಯಾರದ್ದೋ ಪ್ರಜ್ಞೆಯೊಳಗೆ ಬಂತು, ಮತ್ತು ನಂತರ ಆ ಪರಿಕಲ್ಪನೆಯು ಪುನಃ ಪ್ರಜ್ಞೆಯಿಂದ ಆಭಿವೃದ್ಧಿಗೊಳಿಸಲ್ಪಟ್ಟಿತು. ಅಲ್ಲವೇ?!
ಪ್ರಪಂಚದಲ್ಲಿನ ಎಲ್ಲಾ ಸೃಜನಶೀಲತೆ, ಎಲ್ಲಾ ವೈಜ್ಞಾನಿಕ ಸಂಶೋಧನೆ, ಸಂಗೀತ, ಕಲೆ, ಫ್ಯಾಷನ್, ಚಲನಚಿತ್ರ, ಇವುಗಳೆಲ್ಲದರ ಎಲ್ಲಾ ಪ್ರಕಾರಗಳು ಮತ್ತು ಇತರ ಎಲ್ಲದಕ್ಕೂ ಕಾರಣವಾಗಿರುವ ಪ್ರಜ್ಞೆಗೆ ನಿಮ್ಮ ಗಮನದ ಆವಶ್ಯಕತೆಯಿದೆ.
ವೈಜ್ಞಾನಿಕ ಸಂಶೋಧನೆಗಳಾಗುವ, ಕಲೆ ಮತ್ತು ವಾಸ್ತುಶಿಲ್ಪವು ಅಭಿವೃದ್ಧಿ ಹೊಂದುವ ಅದೇ ಪ್ರಜ್ಞೆಯು, ಸಂತೋಷದ ಒಂದು ಭಂಡಾರ ಕೂಡಾ ಆಗಿದೆ. ಅದೇ ಪ್ರಜ್ಞೆಯು ಆರೋಗ್ಯವನ್ನು ಪ್ರಕಟಗೊಳಿಸಬಲ್ಲದು, ಸಂತೋಷವನ್ನು ಪ್ರಕಟಗೊಳಿಸಬಲ್ಲದು, ಪ್ರೀತಿ ಮತ್ತು ಸಹಾನುಭೂತಿಯನ್ನು ಪ್ರಕಟಪಡಿಸಬಲ್ಲದು. ನಮ್ಮ ಮೆದುಳು ಮತ್ತು ನಮ್ಮ ಶರೀರದ ವಿವಿಧ ಅಂಗಗಳಲ್ಲಿ ಕೆಲಸ ಮಾಡುತ್ತಿರುವ ಈ ಒಂದು ಪ್ರಜ್ಞೆಗೆ, ಹಲವಾರು ಸಾಮರ್ಥ್ಯಗಳಿವೆ. ಅದೇ ಪ್ರಜ್ಞೆಯು ಬಹಳ ತಾರ್ಕಿಕವಾಗಬಹುದು, ಅದು ತಿಳಿಯಬಲ್ಲದು, ಅದು ಗ್ರಹಿಸಬಲ್ಲದು, ಅದು ಸೃಷ್ಟಿಸಬಲ್ಲದು ಮತ್ತು ಅದು ಸಹಾನುಭೂತಿ, ಪ್ರೀತಿ, ಶಾಂತಿ ಹಾಗೂ ಆನಂದಗಳನ್ನು ಕೂಡಾ ಪ್ರಕಟಪಡಿಸಬಲ್ಲದು - ಸೆಲ್ ಫೋನಿನ ಹಾಗೆಯೇ.
ಒಂದು ಸೆಲ್ ಫೋನಿನಲ್ಲಿ ಎಷ್ಟೊಂದು ಕಾರ್ಯಗಳಿವೆಯೆಂದು (ಪ್ರೋಗ್ರಾಮ್) ನೋಡಿ. ಅಲ್ಲೊಂದು ಕ್ಯಾಮೆರಾವಿದೆ (ಶ್ರೀ ಶ್ರೀಯವರು ಸಭಿಕರ ಫೋಟೋಗಳನ್ನು ತೆಗೆಯುತ್ತಾರೆ). ನಂತರ ಟ್ವಿಟ್ಟರ್ ಇದೆ. ನಿಮಗೆ ನನ್ನ ಟ್ವಿಟ್ಟರ್ ಖಾತೆ ತಿಳಿದಿದೆಯೇ? @ಶ್ರೀಶ್ರೀಸ್ಪೀಕ್ಸ್ (@srisrispeaks). ಹಾಗೆ ಇದರಲ್ಲೊಂದು ಟ್ವಿಟ್ಟರ್ ಖಾತೆಯಿದೆ, ಇದರಲ್ಲಿ ಎಸ್.ಎಮ್.ಎಸ್. ಸೌಲಭ್ಯವಿದೆ, ಒಂದು ಟೆಲಿಫೋನ್ ಪುಸ್ತಕವಿದೆ ಮತ್ತೊಂದು ಸಂಗೀತ ವಾದಕ(ಮ್ಯೂಸಿಕ್ ಪ್ಲೇಯರ್)ವಿದೆ (ಶ್ರೀ ಶ್ರೀಯವರು ಸಂಗೀತ ವಾದಕದಲ್ಲಿ ಒಂದು ಸಂಗೀತವನ್ನು ಹಚ್ಚುತ್ತಾರೆ). ಈಗ, ಇದನ್ನು ನಿಲ್ಲಿಸುವುದು ಹೇಗೆಂಬುದು ಕೂಡಾ ನನಗೆ ತಿಳಿದಿರಬೇಕು (ಸಂಗೀತ ವಾದಕದ ಬಗ್ಗೆ). ನಾನು ಯಾವ ಗುಂಡಿಯನ್ನು ಅದುಮಬೇಕೆಂಬುದು ನನಗೀಗ ತಿಳಿಯಿತು. ಕೆಲವೊಮ್ಮೆ ನಮ್ಮ ಮನಸ್ಸು ಹಾಗಿರುತ್ತದೆ, ಅದು ತೊಡಗುತ್ತದೆ ಮತ್ತು ನಂತರ ಅದು ಮುಂದೆ ಮುಂದೆ ಹೋಗುತ್ತಾ ಇರುತ್ತದೆ ಮತ್ತು ಅದನ್ನು ನಿಲ್ಲಿಸುವುದು ಹೇಗೆಂಬುದು ನಮಗೆ ತಿಳಿದಿರುವುದಿಲ್ಲ, ಅಲ್ಲವೇ?!
ಒಂದು ಸೆಲ್ ಫೋನಿನಲ್ಲಿ ಹಲವಾರು ಅಪ್ಲಿಕೇಶನ್ಸ್ (ಸೌಲಭ್ಯಗಳು) ಇರುತ್ತವೆ, ಅಲ್ಲೊಂದು ಗಡಿಯಾರವಿದೆ! ಒಂದು ಸೆಲ್ ಫೋನಿನಲ್ಲಿ ಬಹು-ಕ್ರಿಯಾ ಸಾಮರ್ಥ್ಯಗಳು ಇರುತ್ತವೆ ಮತ್ತು ಹಾಗೆಯೇ ನಮ್ಮ ಮೆದುಳು ಹಾಗೂ ನಮ್ಮ ಜೀವನದಲ್ಲಿ ಇರುವುದು. ನಾವು ನಮ್ಮ ಪ್ರಜ್ಞೆಯನ್ನು ವಾಸ್ತವಿಕತೆಯ ವಿವಿಧ ಸ್ತರಗಳಿಗೆ ತೆರೆಯಬಹುದು. ಅಸ್ಥಿತ್ವದಲ್ಲಿರುವ ವಾಸ್ತವಿಕತೆಯು ಕೇವಲ ಇದೊಂದೇ ಅಲ್ಲ. ಆದುದರಿಂದ ನೀವು ಈ ಪ್ರಜ್ಞೆಯನ್ನು ಕೇವಲ ಕಲೆ ಅಥವಾ ಸಂಗೀತಕ್ಕಾಗಿ ಮಾತ್ರ ಕ್ರಿಯಾಶೀಲವಾಗಿಟ್ಟುಕೊಂಡಿದ್ದರೆ, ಮತ್ತು ಅಷ್ಟೇ ಆಗಿದ್ದರೆ, ಆಗ ಜೀವನವು ಸಂಪೂರ್ಣವಲ್ಲ. ಅಥವಾ ಅದು ಕೇವಲ ವಿಜ್ಞಾನ ಮತ್ತು ತರ್ಕಕ್ಕಾಗಿ ಆಗಿದ್ದರೆ, ಅದು ಸಂಪೂರ್ಣವಲ್ಲ.
ನೀವು ಕೇವಲ ಆನಂದವನ್ನು ಹೊಂದುವುದಕ್ಕೆ ಮತ್ತು ಸಂತೋಷವಾಗಿರುವುದಕ್ಕೆ ಮಾತ್ರ ಸಿದ್ಧರಿರುವುದಾದರೆ, ಆಗ ಜೀವನವು ಸಂಪೂರ್ಣವಲ್ಲ.
ಆದುದರಿಂದ, ಹೇಗೆ ನೀವು ಒಂದು ಸೆಲ್ ಫೋನಿನ ವಿವಿಧ ಕ್ರಿಯೆಗಳನ್ನು ಹಚ್ಚಬೇಕಾಗುವುದು ಮತ್ತು ನಿಲ್ಲಿಸಬೇಕಾಗುವುದೋ, ಅದೇ ರೀತಿಯಲ್ಲಿ ಪ್ರಕೃತಿಯು ನಮಗೆ ನೀಡಿರುವಂತಹ ಎಲ್ಲಾ ಸಾಮರ್ಥ್ಯಗಳನ್ನು ಹಚ್ಚುವ ಮತ್ತು ನಿಲ್ಲಿಸುವ ಸಾಮರ್ಥ್ಯವನ್ನು ನಾವು ಹೊಂದಬಹುದು.
ನಿಮ್ಮೊಳಗೆ ಒಂದು ನಿರ್ದಿಷ್ಟವಾದ ಸರಳತೆಯಿದೆ. ನಾವೆಲ್ಲರೂ ಆ ಮುಗ್ಧತೆ ಮತ್ತು ಸರಳತೆಯೊಂದಿಗೆ ಹುಟ್ಟಿದ್ದೇವೆ. ನಾವು ಬೆಳೆದಾಗ ಎಲ್ಲೋ ನಾವದನ್ನು ಕಳೆದುಕೊಂಡೆವು. ನಾವು ಬೆಳೆಯುತ್ತಿದ್ದಂತೆ ನಗುವುದನ್ನು ನಿಲ್ಲಿಸಿದೆವು, ಸಹಜತೆಯಿಂದಿರುವುದನ್ನು ನಾವು ನಿಲ್ಲಿಸಿದೆವು, ಸರಳತೆಯಿಂದಿರುವುದನ್ನು ನಾವು ನಿಲ್ಲಿಸಿದೆವು. ಅಲ್ಲವೇ!
ಆದುದರಿಂದ ಆವಶ್ಯಕವಾದುದೇನೆಂದರೆ ಎರಡೂ, ವಿವೇಚನೆ ಮತ್ತು ಸಂವೇದನಾಶೀಲತೆ.
ಸಂಪೂರ್ಣವಾಗಿ ತಾರ್ಕಿಕವಾಗಿರುವುದು, ತರ್ಕಬದ್ಧ ಚಿಂತನೆಯು ಮಾನವನಿಗೆ ಆವಶ್ಯಕವಾದುದು. ಯಾರೋ ಹೇಳುವರೆಂಬ ಕಾರಣಕ್ಕೆ ಯಾವುದನ್ನೂ ಒಪ್ಪಬೇಡಿ. ನಾವು ನಮ್ಮ ಬುದ್ಧಿಯನ್ನು ಉಪಯೋಗಿಸಬೇಕು. ಇದು ಮನುಷ್ಯರ ಮೊದಲನೆಯ ಕ್ರಿಯೆಯಾಗಿದೆ. ತರ್ಕಬದ್ಧವಲ್ಲದ, ಕಾರಣಕ್ಕೆ ಅಷ್ಟಾಗಿ ಸರಿಹೊಂದದ  ಯಾವುದನ್ನಾದರೂ ನಾವು ಸ್ವೀಕರಿಸಬಾರದು.
ಆದುದರಿಂದ ಮೊದಲನೆಯದಾಗಿ ತರ್ಕ, ಈ ಕ್ರಿಯೆಯು ಮುಖ್ಯವಾದುದು ಯಾಕೆಂದರೆ ಅದು ವಿವೇಚನೆಯನ್ನು ಸೃಷ್ಟಿಸುತ್ತದೆ.
ಈಗ, ಕೇವಲ ವಿವೇಚನೆಯು ಸಾಕಾಗುವುದಿಲ್ಲ, ನಿಮ್ಮಲ್ಲಿ ಸಂವೇದನಾಶೀಲತೆಯಿರಬೇಕು. ಸಂವೇದನಾಶೀಲತೆಯು ಹೃದಯದ ಒಂದು ವಿಷಯವಾಗಿದೆ. ನೀವು ಬಹಳ ತರ್ಕಬದ್ಧವಾಗಿರಬಹುದು ಆದರೆ ಇತರರ ದೃಷ್ಟಿಕೋನಗಳನ್ನು ಕೂಡಾ ನೀವು ಅರ್ಥಮಾಡಿಕೊಳ್ಳಬೇಕು. ಹಲವು ಸಲ, ಜನರು ಏನನ್ನು ಹೇಳುವರೋ, ಅವರು ಸರಿಯಾಗಿ ಅದೇ ರೀತಿಯಲ್ಲಿ ವರ್ತಿಸುತ್ತಾರೆ. ಅವರು ಬಹಳ ಸರಿಯಾಗಿರುತ್ತಾರೆ, ಆದರೆ ಅವರು ಇತರರನ್ನು ಸುಲಭವಾಗಿ ನೋಯಿಸಬಲ್ಲರು. ಬಹಳ ಕೋಪದಲ್ಲಿರುವ ಯಾರಾದರೂ ತಮ್ಮ ಕೋಪವನ್ನು ತರ್ಕದೊಂದಿಗೆ ಸಮರ್ಥಿಸಿಕೊಳ್ಳುತ್ತಾರೆ, ಆದರೆ ತಮ್ಮ ಕೋಪವು ಇನ್ನೊಬ್ಬ ವ್ಯಕ್ತಿಯನ್ನು ನೋಯಿಸುತ್ತಿದೆಯೆಂಬುದು ಅವರಿಗೆ ತಿಳಿದಿರುವುದಿಲ್ಲ. ಇನ್ನೊಬ್ಬ ವ್ಯಕ್ತಿಯನ್ನು ಮಾತ್ರವಲ್ಲ ಆದರೆ ತಮ್ಮನ್ನು ಕೂಡಾ. ಆದುದರಿಂದ ಎರಡನೆಯ ಮುಖ್ಯವಾದ ವಿಷಯವೆಂದರೆ ಸಂವೇದನಾಶೀಲರಾಗಿರುವುದು. ನಿಮಗೆ ಗೊತ್ತಿದೆಯಾ, ಒಬ್ಬರು ಮೂರ್ಖರಾಗಿರಬಹುದು, ಆದರೆ ನೀವವರನ್ನು ಒಬ್ಬ ಮೂರ್ಖನೆಂದು ಕರೆಯುವುದರಿಂದ, ಅವರ ಮೇಲೆ ರೇಗಾಡುವುದರಿಂದ, ಅವರನ್ನು ಬೈಯುವುದರಿಂದ ಸಹಾಯವಾಗುವುದಿಲ್ಲ. ನೀವು ಸಂವೇದನಾಶೀಲರಾಗಿರಬೇಕು.
ನಿಮಗೆ ಗೊತ್ತಾ, ಒಂದು ದಿನ, ಒಂದು ಕಾರ್ಯಕ್ರಮದಲ್ಲಿ ತಮ್ಮ ಕೆಲಸವನ್ನು ಚೆನ್ನಾಗಿ ಮಾಡಿರದ ಒಬ್ಬರನ್ನು ಒಬ್ಬಳು ಮಹಿಳೆಯು ಬೈಯುತ್ತಿದ್ದಳು. ಆಗ ನಾನು ಆ ಮಹಿಳೆಯನ್ನು ಕರೆದು ಹೇಳಿದೆ, "ಕೇಳು, ನಿನ್ನ ಬೈಗುಳದಿಂದಾಗಿ ಆ ವ್ಯಕ್ತಿಯು ಬದಲಾಗಿರುವನೆಂದು ನಿನಗೆ ಅನ್ನಿಸುತ್ತದೆಯೇ?"
ಆ ಮಹಿಳೆಯಂದಳು, "ಇಲ್ಲ."
ನಾನಂದೆ, "ಹಾಗಾದರೆ ಆ ಮಹಿಳೆಯ ಕಡೆಗೆ ಅಷ್ಟೊಂದು ಚೀರಾಡುವುದರ ಪ್ರಯೋಜನವೇನು? ನೀನು ನಿನ್ನ ಬಗ್ಗೆಯಿರುವ ಧಾರಣೆಯನ್ನೇ ಹಾಳುಮಾಡಿಕೊಂಡೆ. ನೀನು ಯಾರನ್ನಾದರೂ ಬೈಯುವ ಕ್ಷಣದಲ್ಲಿ, ನೀನು ಅವರಿಗೆ ಒಂದು ಫಲದಾಯಕ ಅಥವಾ ಸೃಜನಾತ್ಮಕ ಸಲಹೆಯನ್ನು ನೀಡುತ್ತಿರುವುದಾದರೂ ಸಹ, ಅವರದನ್ನು ದೂರಕ್ಕೆ ತಳ್ಳುತ್ತಾರೆ. ನೀನು ರೇಗಾಡುವುದರ ಉದ್ದೇಶವೆಂದರೆ ಆ ವ್ಯಕ್ತಿಯಲ್ಲಿ ವಿವೇಕವನ್ನು ತರುವುದು, ಮತ್ತು ರೇಗಾಡುವುದರಿಂದ ಅದನ್ನು ಸಾಧಿಸಲಾಗದಿರುವಾಗ, ಪ್ರಯೋಜನವೇನು?"
ಅವಳಂದಳು, "ನೀವು ಹೇಳುವುದು ಸರಿ! ನನ್ನ ಜೀವಮಾನವಿಡೀ ನಾನಿದನ್ನು ಮಾಡುತ್ತಿದ್ದೇನೆ ಮತ್ತು ನನ್ನ ಸುತ್ತಲೂ ಹಲವಾರು ಶತ್ರುಗಳನ್ನು ಸೃಷ್ಟಿಸಿದ್ದೇನೆ."
ನಾನಂದೆ, "ಅದಕ್ಕಾಗಿಯೇ, ಒಂದು ಕತ್ತೆಯು ಒಂದು ಕುದುರೆಯಂತೆ ಓಡಬೇಕೆಂದು ನೀನು ನಿರೀಕ್ಷಿಸಲು ಸಾಧ್ಯವಿಲ್ಲ." ನೀವೊಂದು ಕತ್ತೆಯ ಮೇಲೆ ಕುಳಿತುಕೊಂಡು, ಅದೊಂದು ಕುದುರೆಯಂತೆ ಓಡಬೇಕೆಂದು ನಿರೀಕ್ಷಿಸುವಿರಿ, ಅದು ಸಾಧ್ಯವಿಲ್ಲ. ಆದುದರಿಂದ ಒಂದು ಕತ್ತೆಯನ್ನು ಒಂದು ಕತ್ತೆಯಾಗಿ ಸ್ವೀಕರಿಸಿ ಮತ್ತು ಒಂದು ಕುದುರೆಯನ್ನು ಒಂದು ಕುದುರೆಯಾಗಿ. ಆಗ ಕೋಪವೆಲ್ಲಿರುತ್ತದೆ?! ಇದು ವಿವೇಚನೆ - ಇತರರ ಭಾವನೆಗಳು ಮತ್ತು ಅವರ ಆವಶ್ಯಕತೆಗಳ ಕಡೆಗೆ ಸಂವೇದನಾಶೀಲರಾಗಿರುವುದು. ಇದು ಹೃದಯದ  ಗುಣ.
ಅತಿಯಾಗಿ ಸಂವೇದನಾಶೀಲರಾಗಿರುವ ಜನರಿದ್ದಾರೆ. ಅವರು ತಮ್ಮ ತರ್ಕಬದ್ಧತೆಯನ್ನು ಕಳೆದುಕೊಳ್ಳುತ್ತಾರೆ. ಅವರೊಂದು ಭಾವನಾತ್ಮಕವಾಗಿ ಒದ್ದೆಯಾದ ಶ್ಯಾವಿಗೆಯಂತಾಗುತ್ತಾರೆ. ಇದು ಕೂಡಾ ಒಳ್ಳೆಯದಲ್ಲ. ನಿಮ್ಮಲ್ಲಿ ಸಂವೇದನಾಶೀಲತೆ ಮತ್ತು ವಿವೇಚನೆಗಳ ಸರಿಯಾದ ಸಂತುಲನವಿರಬೇಕು. ನೀವೇನು ಹೇಳುವಿರಿ? ನಾನು ಹೇಳುತ್ತಿರುವುದು ಸರಿಯೇ?!
(ಸಭಿಕರು: ಹೌದು)
ಆದುದರಿಂದ ವಿವೇಚನಾಯುಕ್ತರಾಗಿ ಮತ್ತು ಸಂವೇದನಾಶೀಲರಾಗಿರುವುದು! ಇದು ಪ್ರಜ್ಞೆಯ ತಂತ್ರಜ್ಞಾನದ ಒಂದು ಕ್ರಿಯೆ. ನಂತರ ಬರುವುದು ಜೀವನದಲ್ಲಿ ಪ್ರಸನ್ನತೆ. ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಒಂದಲ್ಲ ಒಂದು ಸಮಯದಲ್ಲಿ, ಕೆಲವು ಸೆಕೆಂಡುಗಳು ಅಥವಾ ಕೆಲವು ನಿಮಿಷಗಳ ವರೆಗಾದರೂ ಬಹಳ ಪ್ರಸನ್ನತೆಯನ್ನು ಅನುಭವಿಸಿರುತ್ತಾರೆ, ಮತ್ತು ನೀವು ಆ ಪ್ರಸನ್ನತೆಯನ್ನು ಅನುಭವಿಸುವಾಗ, ನೀವು ಮೌನವನ್ನು ಕೂಡಾ ಅನುಭವಿಸಿರುತ್ತೀರಿ ಹಾಗೂ ನೀವು ಬಹಳ ಆಧ್ಯಾತ್ಮಿಕತೆಯನ್ನು ಅನುಭವಿಸಿರುತ್ತೀರಿ; ಮೌನ ಮತ್ತು ಪ್ರಸನ್ನತೆಗಳ ಒಂದು ಆಳವಾದ ಭಾವ.
ನಮ್ಮ ಮೊಬೈಲ್ ಫೋನುಗಳಲ್ಲಿ ಹಲವುದರಲ್ಲಿ ಈ ಕ್ರಿಯೆಯು ಆರಿಸಲ್ಪಟ್ಟಿದೆ, ಅಥವಾ ನಾವದನ್ನು ಉಪಯೋಗಿಸಲೇ ಇಲ್ಲ. ನಮ್ಮ ಪ್ರಜ್ಞೆಯಲ್ಲಿ, ನಾವು ಈ ಕ್ರಿಯೆಯನ್ನು ಮುಟ್ಟಲೂ ಇಲ್ಲ - ಮತ್ತು ಅಲ್ಲಿಯೇ ಆರ್ಟ್ ಆಫ್ ಲಿವಿಂಗ್ ಬರುವುದು. ಅದು ನೀವು ಹೆಚ್ಚು ನಗಲು, ಹೆಚ್ಚು ಸೇವೆ ಮಾಡಲು ಸಹಾಯ ಮಾಡುತ್ತದೆ.
ನಿಮಗೆ ಗೊತ್ತಿದೆಯಾ, ಒಂದು ಶಿಶುವು ಒಂದು ದಿನಕ್ಕೆ ೪೦೦ ಸಾರಿ ನಗುವುದು. ಒಬ್ಬ ಹದಿಹರೆಯದವನು ಒಂದು ದಿನಕ್ಕೆ ಕೇವಲ ೧೭ ಸಾರಿ ಮಾತ್ರ ನಗುವನು, ಮತ್ತು ವಯಸ್ಕನು ನಗುವುದೇ ಇಲ್ಲ.
ಹೆಚ್ಚು ನಗುವುದು! ಆರ್ಟ್ ಆಫ್ ಲಿವಿಂಗ್ ನಿಮಗೆ ತರುವುದು ಅದನ್ನೇ! ನಗುನಗುತ್ತಾ ಸೇವೆ ಮಾಡುವುದು.
ವಿವೇಚನಾಯುಕ್ತರಾಗಿ ಮತ್ತು ಸಂವೇದನಾಶೀಲರಾಗಿರುವುದು.
ಮೌನ ಮತ್ತು ಪ್ರಸನ್ನತೆಯನ್ನು ಅನುಭವಿಸುವುದು.
ಅಷ್ಟೇ!

ಪ್ರಶ್ನೆ: ಪ್ರೀತಿಯ ಗುರುದೇವ, ಶಿಸ್ತು ಮತ್ತು ಸ್ವಾತಂತ್ರ್ಯದ ನಡುವೆ ಒಂದು ಸಂತುಲನವನ್ನು ಕಾಪಾಡಿಕೊಳ್ಳುವುದು ಹೇಗೆ?
ಶ್ರೀ ಶ್ರೀ ರವಿ ಶಂಕರ್: ಅವುಗಳು ವಿರೋಧಾತ್ಮಕಗಳಾಗಿ ತೋರುತ್ತವೆ ಆದರೆ ಅವುಗಳು ಪೂರಕವಾದವು ಎಂಬುದನ್ನು ನೀನು ತಿಳಿಯಬೇಕು. ಶಿಸ್ತು ನಮಗೆ ಸ್ವಾತಂತ್ರ್ಯವನ್ನು ತರುತ್ತದೆ. ಒಬ್ಬ ಮಗುವಾಗಿ, ನೀನು ಪ್ರತಿ ದಿನ ಬೆಳಗ್ಗೆಯೂ ಮತ್ತು ಪ್ರತಿ ರಾತ್ರಿಯೂ ನಿನ್ನ ಹಲ್ಲುಗಳನ್ನುಜ್ಜುವಂತೆ ನಿನ್ನನ್ನು ಶಿಸ್ತುಬದ್ಧನನ್ನಾಗಿರಿಸಲಾಯಿತು. ಆ ಶಿಸ್ತು, ಹಲ್ಲು ನೋವು ಮತ್ತು ದಂತಕ್ಷಯದಿಂದ ನಿನಗೆ ಸ್ವಾತಂತ್ರ್ಯವನ್ನು ತಂದಿತು, ಅಲ್ಲವೇ?!
ಟ್ರೆಡ್ ಮಿಲ್ಲಿನ ಮೇಲೆ ನಡೆಯುವ ಶಿಸ್ತು ನಿನ್ನಲ್ಲಿದ್ದರೆ, ಆಗ ಅದು ಕೊಬ್ಬು ಮತ್ತು ಇತರ ಸಮಸ್ಯೆಗಳಿಂದ ನಿನಗೆ ಮುಕ್ತಿಯನ್ನು ತರುತ್ತದೆ.

ಪ್ರಶ್ನೆ: ಎಲ್ಲವನ್ನೂ ಮೌನವಾಗಿಸಿದ ಬಳಿಕ ಬರುವುದು ಯಾವುದು? ಮತ್ತು ಅದು ಸತ್ತು ಹೋಗಿರುವುದಕ್ಕಿಂತ ವ್ಯತ್ಯಸ್ತ ಹೇಗೆ?
ಶ್ರೀ ಶ್ರೀ ರವಿ ಶಂಕರ್: ಅಗಾಧ ವ್ಯತ್ಯಾಸ! ಮೌನವು ಎಲ್ಲಾ ಸೃಜನಶೀಲತೆಯ ತಾಯಿಯಾಗಿದೆ. ಮೌನವು ಸೌಂದರ್ಯ ಮತ್ತು ಪ್ರೇಮದ ತಾಯಿಯಾಗಿದೆ. ಅಂತಃಸ್ಫುರಣೆ, ಶೋಧನೆ, ಕವಿತೆ, ಎಲ್ಲವೂ ಮೌನದಿಂದ ಹೊರಬರುತ್ತವೆ. ಸುದರ್ಶನ ಕ್ರಿಯೆ ಕೂಡಾ ಮೌನದಿಂದ ಹೊರಬಂತು.
ನಿಮ್ಮಲ್ಲಿ ಹೆಚ್ಚಿನವರು ಸುದರ್ಶನ ಕ್ರಿಯೆಯನ್ನು ಅನುಭವಿಸಿರುವಿರಿ ಎಂಬುದು ನನಗೆ ಗೊತ್ತು ಮತ್ತು ಅದರ ಬೆಲೆ ನಿಮಗೆ ತಿಳಿದಿದೆ.
ಈ ಸಲ ನಾನೊಂದು ಪ್ರವಾಸದಲ್ಲಿದ್ದೆ, ನಾನು ದಕ್ಷಿಣ ಭಾರತದಿಂದ ದಕ್ಷಿಣ ಆಫ್ರಿಕಾಕ್ಕೆ ಹೋದೆ ಮತ್ತು ನಂತರ ದಕ್ಷಿಣ ಅಮೇರಿಕಾ, ನಂತರ ಉತ್ತರ ಅಮೇರಿಕಾ ಹಾಗೂ ಈಗ ಯುರೋಪಿಗೆ. ಎಲ್ಲವೂ ಒಂದು ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ. ಮತ್ತು ನಿಮಗೆ ಗೊತ್ತಿದೆಯಾ, ನಾನು ಬ್ರೆಝಿಲ್ ಮತ್ತು ಅರ್ಜೆಂಟೀನಾಗಳಲ್ಲಿನ ಜೈಲುಗಳನ್ನು ಸಂದರ್ಶಿಸಿದೆ. ಅರ್ಜೆಂಟೀನಾದಲ್ಲಿ, ಆರ್ಟ್ ಆಫ್ ಲಿವಿಂಗ್ ಕೋರ್ಸ್ ಮತ್ತು ಸುದರ್ಶನ ಕ್ರಿಯೆಗಳನ್ನು ಮಾಡಿದ ೫೨೦೦ ಖೈದಿಗಳಿದ್ದರು ಹಾಗೂ ಅವರಲ್ಲಿ ಪ್ರತಿಯೊಬ್ಬರ ಕಣ್ಣುಗಳಲ್ಲೂ ಕಣ್ಣೀರಿತ್ತು. ಕಣ್ಣುಗಳು ಒದ್ದೆಯಾಗದ ಒಬ್ಬನೇ ಒಬ್ಬ ವ್ಯಕ್ತಿ ಕೂಡಾ ಅಲ್ಲಿರಲಿಲ್ಲ. ಅವರೆಲ್ಲರೂ ತಮ್ಮ ಜೀವನದಲ್ಲಿ ಅಷ್ಟೊಂದು ದೊಡ್ಡ ಪರಿವರ್ತನೆಯನ್ನು ಕಂಡುಕೊಂಡಿದ್ದರು. ಅವರಂದರು, "ಮೊದಲು ನಾವು ಹೊರಗಿದ್ದೆವು ಮತ್ತು ನಾವು ಸ್ವತಂತ್ರರಾಗಿರಲಿಲ್ಲ. ಈಗ ನಾವು ಜೈಲಿನ ಒಳಗಿದ್ದೇವೆ ಮತ್ತು ನಾವು ಸ್ವತಂತ್ರರಾಗಿದ್ದೇವೆ ಹಾಗೂ ನಾವು ಸಂತೋಷವಾಗಿದ್ದೇವೆ. ನಿಮಗೆ ಬಹಳಷ್ಟು ಧನ್ಯವಾದಗಳು. ಈ ಕೋರ್ಸ್ ನಮ್ಮ ಜೀವನವನ್ನು ಸಂಪೂರ್ಣವಾಗಿ ಬದಲಾಯಿಸಿದೆ."
ನಿಮಗೆ ಗೊತ್ತಿದೆಯಾ, ಪರಮೋಚ್ಛ ನ್ಯಾಯಾಲಯದ ನ್ಯಾಯಾಧೀಶರುಗಳು ಕೂಡಾ ಸೆರೆಮನೆಯನ್ನು ಸಂದರ್ಶಿಸಲು ನನ್ನೊಂದಿಗೆ ಬಂದರು ಮತ್ತು ಅವರಂದರು, "ಗುರುದೇವ, ಇಲ್ಲೇನಾಯಿತೋ ಅದು ನಂಬಲಸಾಧ್ಯ. ಇದು ಎಲ್ಲಾ ಸೆರೆಮನೆಗಳಲ್ಲೂ ಪುನರಾವರ್ತಿಸಬೇಕೆಂದು ನಾವು ಆಶಿಸುತ್ತೇವೆ."
ಖಂಡಿತಾ, ಈ ಪರಿವರ್ತನೆಯ ಕಡೆಗೆ ನೋಡಿ ವಿಶ್ವವಿದ್ಯಾಲಯವು ನನಗೊಂದು ಡಾಕ್ಟರೇಟನ್ನು ಕೂಡಾ ನೀಡಿತು. "ಒಂದು ದಿನದಲ್ಲಿ ನಾನು ವಿಶ್ವವಿದ್ಯಾಲಯದ ಹಳೆ ವಿದ್ಯಾರ್ಥಿಯಾದೆ" ಎಂದು ನಾನು ಹಾಸ್ಯ ಮಾಡುತ್ತಿದ್ದೆ.
ಇದನ್ನು ನಾನು ಯಾಕೆ ಹೇಳುತ್ತಿರುವೆನೆಂದರೆ, ಹಿಂಸೆಯಿಂದ ಮುಕ್ತವಾದ ಒಂದು ಸಮಾಜವನ್ನು ಸೃಷ್ಟಿಸಲು ನಮಗೆ ಸಾಧ್ಯವಿದೆ. ನನ್ನ ಕಲ್ಪನೆಯೆಂದರೆ, ಒಂದು ಹಿಂಸಾಮುಕ್ತವಾದ ಸಮಾಜ, ರೋಗಮುಕ್ತವಾದ ಶರೀರ, ಗೊಂದಲಮುಕ್ತವಾದ ಮನಸ್ಸು, ತಡೆಮುಕ್ತವಾದ ಬುದ್ಧಿ, ಆಘಾತಮುಕ್ತವಾದ ಸ್ಮರಣೆ ಮತ್ತು ದುಃಖಮುಕ್ತವಾದ ಆತ್ಮವನ್ನು ನೋಡುವುದು.
ಇವತ್ತು ಪ್ರಪಂಚದಲ್ಲಿ ಎಂತಹ ಹುಚ್ಚುತನ ನಡೆಯುತ್ತಿದೆಯೆಂಬುದನ್ನು ನೋಡಿ. ಕೇವಲ, ಯಾರೋ ಒಬ್ಬರು ಒಂದು ಚಲನಚಿತ್ರವನ್ನು ಮಾಡಿದರು ಎಂಬ ಕಾರಣಕ್ಕೆ, ದೇಶಗಳೆಲ್ಲಾ ಹೊತ್ತಿ ಉರಿಯುತ್ತಿವೆ. ಇದು ಹುಚ್ಚುತನವಲ್ಲವೇ! ಯಾಕೆ? ಅದು ಯಾಕೆಂದರೆ, ಬಹಳ ಅಗತ್ಯವಾಗಿರುವ ಅಹಿಂಸೆಯ ಶಿಕ್ಷಣವನ್ನು ಅವರಿಗೆ ನೀಡಲಾಗಿಲ್ಲ.

ಪ್ರಶ್ನೆ: ಒಬ್ಬರು ಗುರುವನ್ನು ಅನುಸರಿಸುವುದು ಇವತ್ತಿಗೂ ಕೂಡಾ ಆವಶ್ಯಕವೇ?
ಶ್ರೀ ಶ್ರೀ ರವಿ ಶಂಕರ್: ಈ ಪ್ರಶ್ನೆ ಯಾಕೆ? ಈ ಪ್ರಶ್ನೆಯನ್ನು ಕೇಳುವುದರ ಮೂಲಕ ನೀನು ನಿನ್ನನ್ನೇ ಒಂದು ಬಲೆಯಲ್ಲಿ ಬೀಳಿಸುತ್ತಿರುವೆ. ನಾನು ನಿನಗೊಂದು ಉತ್ತರವನ್ನು ಕೊಡುವಾಗ ಮತ್ತು ನೀನದನ್ನು ತೆಗೆದುಕೊಳ್ಳುವಾಗ, ಅದರರ್ಥ ನೀನು ಅದಾಗಲೇ ಅನುಸರಿಸುತ್ತಿರುವೆಯೆಂದು!
ನಾನು, "ಇಲ್ಲ, ಅನುಸರಿಸುವ ಅಗತ್ಯವಿಲ್ಲ" ಎಂದು ಹೇಳಿದರೆ ಮತ್ತು ನೀನು, "ಸರಿ, ನಾನು ಅನುಸರಿಸುವುದಿಲ್ಲ" ಎಂದು ಹೇಳಿದರೆ, ಆಗ ನೀನು ಅನುಸರಿಸಿದಂತಾಯಿತು.
ನಾನು "ಹೌದು" ಎಂದು ಹೇಳಿ ನೀನು ಅನುಸರಿಸಿದರೆ, ಅದರರ್ಥ ನೀನು ಅನುಸರಿಸಿದೆಯೆಂದು. ಆದುದರಿಂದ ನಾನು "ಇಲ್ಲ" ಎಂದು ಹೇಳುವುದು ಒಳ್ಳೆಯದು!
ಇದೊಂದು ಬಹಳ ಆಸಕ್ತಿಕರ ಪ್ರಶ್ನೆ, ಅಲ್ಲವೇ.
ನೋಡಿ, ಫುಟ್ಬಾಲ್ ಆಡಲು ನಿಮಗೊಬ್ಬರು ತರಬೇತಿದಾರರು ಬೇಕಾಗುವರು ಅಲ್ಲವೇ. ಪ್ರತಿಯೊಬ್ಬ ಸಾಕರ್ ಆಟಗಾರನಿಗೂ ಒಬ್ಬರು ತರಬೇತಿದಾರರು ಬೇಕಾಗುತ್ತಾರೆ. ಯಾವುದೇ ಆಟಕ್ಕಾಗಲೀ, ಯಾವುದೇ ಸಂಗೀತಕ್ಕಾಗಲೀ ನಿಮಗೊಬ್ಬರು ತರಬೇತಿದಾರರು ಬೇಕಾಗುತ್ತಾರೆ. ನೀವು ಶಾಲೆಗೆ ಹೋಗುವಾಗ ಮತ್ತು ಕೆಲವು ವಿಷಯಗಳಲ್ಲಿ ನೀವು ದುರ್ಬಲರಾಗಿರುವಾಗ ನಿಮಗೊಬ್ಬರು ತರಬೇತಿದಾರರು ಬೇಕಾಗುತ್ತಾರೆ. ಅದೇ ರೀತಿಯಲ್ಲಿ, ಆರಂಭದಲ್ಲಿ ಧ್ಯಾನ ಮತ್ತು ಯಾವುದೇ ಆಧ್ಯಾತ್ಮಿಕತೆಯನ್ನು ಕಲಿಯಲು ಸ್ವಲ್ಪ ಮಾರ್ಗದರ್ಶನ ಅಗತ್ಯವಾಗಿದೆ, ಅಲ್ಲವೇ! ಮತ್ತು ಅದಕ್ಕಾಗಿಯೇ ಅದು ಆವಶ್ಯಕ. ಮತ್ತು ಅದು ಆವಶ್ಯಕವಲ್ಲವೆಂದು ನಿನಗೆ ಅನ್ನಿಸಿದರೆ, ಆಗ ಅದು ನಿನಗೆ ಬಿಟ್ಟದ್ದು.

ಪ್ರಶ್ನೆ: ನಾನು ಮಾಡಿದ ತಪ್ಪಿನ ಕಡೆಗಿರುವ ತಪ್ಪಿತಸ್ಥ ಮನೋಭಾವದಿಂದ ನಾನು ನನ್ನನ್ನು ಬಿಡುಗಡೆಗೊಳಿಸುವುದು ಹೇಗೆ?
ಶ್ರೀ ಶ್ರೀ ರವಿ ಶಂಕರ್: ಧ್ಯಾನ!

ಪ್ರಶ್ನೆ: ಇಲ್ಲಿ ಯುರೋಪಿನಲ್ಲಿ ಬಗೆಹರಿಸಬೇಕಾಗಿರುವ ಪ್ರಮುಖ ಸಮಸ್ಯೆ ಯಾವುದು?
ಶ್ರೀ ಶ್ರೀ ರವಿ ಶಂಕರ್: ಯುರೋಪಿನ ಬಗ್ಗೆ ನಾನು ಕೇಳುತ್ತಿರುವುದೇನೆಂದರೆ, ಜನತೆಯಲ್ಲಿ ೩೦% ದಿಂದ ೪೦% ಖಿನ್ನತೆಗೊಳಗಾಗುತ್ತಿರುವರು. ಹಲವಾರು ಜನರು ಪ್ರೋಝಾಕ್ ತೆಗೆದುಕೊಳ್ಳುತ್ತಿರುವರು ಮತ್ತು ಹಲವಾರು ಮಕ್ಕಳು ಆಟಿಸಂಗೆ ಗುರಿಯಾಗುತ್ತಿರುವರು. ಇದು ಕಳವಳಪಡುವಂತಹ ಒಂದು ವಿಷಯ. ನಾವಿದರ ಬಗ್ಗೆ ಗಮನ ಹರಿಸಬೇಕು.
ಅದಕ್ಕಾಗಿಯೇ ಧ್ಯಾನ, ಸುದರ್ಶನ ಕ್ರಿಯೆ, ಆರೋಗ್ಯ ಮತ್ತು ಆನಂದ ಕಾರ್ಯಾಗಾರವಿರುವುದು. ನಾವು ಜೀವನದಲ್ಲಿ ಈ ವಿಷಯಗಳನ್ನು ಸ್ವೀಕರಿಸುವಾಗ, ನಾವೊಂದು ಹೆಚ್ಚು ಸಂತೋಷದಾಯಕ ಸಮಾಜವಾಗಬಹುದು. ಇವುಗಳೊಂದಿಗೆ ನಾವೊಂದು ಸಂತೋಷದ ಅಲೆಯನ್ನು ಸೃಷ್ಟಿಸಬಹುದೆಂದು ನನಗೆ ಖಾತ್ರಿಯಿದೆ.

ಪ್ರಶ್ನೆ: ನಾನು ವ್ಯಾಯಾಮಗಳನ್ನು ಮಾಡುತ್ತೇನೆ, ಆದುದರಿಂದ ನಾನು ನಿಯಂತ್ರಿತ ಉಸಿರಾಟದಲ್ಲಿರುವೆನು. ಆರ್ಟ್ ಆಫ್ ಲಿವಿಂಗ್ ಕೋರ್ಸ್ ಹೇಗೆ ವಿಶೇಷವಾದುದು? ಈ ಕೋರ್ಸುಗಳು ಏನನ್ನು ಮಾಡುವುವೋ ಅವುಗಳನ್ನು ವ್ಯಾಯಾಮವು ನನಗೆ ನೀಡಬಹುದೆಂದು ನನಗನ್ನಿಸುತ್ತದೆ. ಈ ಕೋರ್ಸುಗಳು ನನಗೆ ಹೇಗೆ ಸಹಾಯ ಮಾಡಬಲ್ಲವು ಎಂಬುದನ್ನು ನೀವು ದಯವಿಟ್ಟು ವಿವರಿಸುವಿರಾ?
ಶ್ರೀ ಶ್ರೀ ರವಿ ಶಂಕರ್: ಅದು ನಿನಗೆ ಹಲವಾರು ರೀತಿಗಳಲ್ಲಿ ಸಹಾಯ ಮಾಡಬಲ್ಲದು ಮತ್ತು ಅದಕ್ಕಾಗಿಯೇ ಅದು ಅಷ್ಟೊಂದು ಜನಪ್ರಿಯವಾಗಿರುವುದು. ಪ್ರಪಂಚದಾದ್ಯಂತ ಲಕ್ಷಾಂತರ ಜನರು ಅದನ್ನು ಮಾಡಬೇಕಾದರೆ, ಅದರಲ್ಲಿ ಏನೋ ಇರಬೇಕು.
ನಾನು ನಿನಗೆ ಹೇಳುತ್ತೇನೆ ಕೇಳು, ಅದು ಬಹಳ ಆಳವಾಗಿದೆ, ತೀಕ್ಷ್ಣವಾಗಿದೆ ಮತ್ತು ಅದೇ ಸಮಯದಲ್ಲಿ, ಸರಳವೂ ಆಗಿದೆ. ಅದು ಕೇವಲ ಒಂದು ವ್ಯಾಯಾಮವಲ್ಲ. ಅದು ಶಕ್ತಿಯ ಆಧ್ಯಾತ್ಮಿಕ ಮೇಲೆತ್ತುವಿಕೆಯೊಂದಿಗಿನ ಒಂದು ವ್ಯಾಯಾಮವಾಗಿದೆ. ಕೋರ್ಸ್ ಮುಗಿಸಿ ನೀನು ಹೊರನಡೆಯುವಾಗ, ಜೀವನಕ್ಕೊಂದು ಹೊಸ ಆಯಾಮವನ್ನು ಸೇರಿಸಿಕೊಂಡು, ನೀನೊಂದು ದೊಡ್ಡ ನಗೆಯೊಂದಿಗೆ ಮತ್ತು ನಿನ್ನ ಹೃದಯದಲ್ಲಿ ತೃಪ್ತಿಯೊಂದಿಗೆ ಹೋಗುವುದು ಖಚಿತವಾಗಿದೆ.
ನಿಮಗೆ ಗೊತ್ತಿದೆಯಾ, ನಮ್ಮ ಮನಸ್ಸುಗಳಲ್ಲಿ ಹಲವಾರು ಪೂರ್ವಾಗ್ರಹಗಳಿರುತ್ತವೆ. ನಾವು ಪೂರ್ವಾಗ್ರಹಗಳನ್ನು ಬಿಡಬೇಕು. ಮನಸ್ಸಿನಲ್ಲಿ ವಿವಿಧ ರೀತಿಯ ಪೂರ್ವಾಗ್ರಹಗಳಿರುತ್ತವೆ. ನೋಡಿ, ನಾವು ಪ್ರಪಂಚದ ಪ್ರತಿಯೊಂದು ಭಾಗದ ಆಹಾರವನ್ನೂ ಸ್ವೀಕರಿಸುತ್ತೇವೆ. ನಾವು ಪ್ರಪಂಚದ ಪ್ರತಿಯೊಂದು ಭಾಗದ ಸಂಗೀತವನ್ನೂ ಸ್ವೀಕರಿಸುತ್ತೇವೆ, ಆದರೆ ಜ್ಞಾನ ಮತ್ತು ಜನರೊಂದಿಗೆ ಒಂದಾಗುವ ವಿಷಯಕ್ಕೆ ಬಂದಾಗ, ನಮ್ಮಲ್ಲಿ ಸ್ವಲ್ಪ ಪೂರ್ವಾಗ್ರಹಗಳಿರುತ್ತವೆ. ನಾವು ಈ ಪಕ್ಷಪಾತ ಧೋರಣೆಯಿಂದ ಹೊರಬರಬೇಕು ಮತ್ತು ಎಲ್ಲರೂ ನನಗೆ ಸೇರಿದವರು, ಸಂಪೂರ್ಣ ಪ್ರಪಂಚವು ಒಂದು ಕುಟುಂಬ ಎಂದು ಭಾವಿಸಬೇಕು.