ಮಂಗಳವಾರ, ಸೆಪ್ಟೆಂಬರ್ 25, 2012

ಮಾಯಾವೃತರು ನಾವೆಲ್ಲ

                        ಸೆಪ್ಟೆಂಬರ್ ೨೬, ೨೦೧೨
ಅಮೃತಬಿ೦ದು’ ಸರಣಿಯ ಬರಹಗಳು

ಎ೦ಟನೆಯ ಕ೦ತು

ಮಾಯಾ ಲೋಕ
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ.೨೪/೦೪/೨೦೦೩ರ೦ದು ಪ್ರಕಟವಾಗಿತ್ತು)

’ಅವಿವೇಕೋ ಸೌಷುಪ್ತಿ ಮಾಯಾ’

ಜಾಗೃತ ಅವಸ್ಥೆ ಹಾಗೂ ಸ್ವಪ್ನಾವಸ್ಥೆಯ ಬಗ್ಗೆ ವಿಚಾರ ಮಾಡಿದೆವು. ಈಗ ನಿದ್ರಾವಸ್ಥೆ. ಎಂದರೆ ನಮ್ಮನ್ನು ಮುಸುಕಿರುವ ಮಾಯೆಯ ಬಗ್ಗೆ, ಅವಿವೇಕದ ಬಗ್ಗೆ ತಿಳಿದುಕೊಳ್ಳೋಣ. ಅರಿವು ಮೂಡದಿದ್ದರೆ ಮಾಯೆಯಿಂದ ಪಾರಾಗಲು ಸಾಧ್ಯವಿಲ್ಲ.

ಮಾಯಾ ಅಂದರೇನು? ನಿದ್ದೆ ಮಾಡುತ್ತೀರ ನೀವು. ಆಗ ಯಾವುದರ ಅರಿವೂ ಇರುವುದಿಲ್ಲ, ಅದು ಮಾಯಾ. ನಿದ್ರೆಯೆಂದರೆ ವಸ್ತುಸ್ಥಿತಿಯ ಪರಿಚಯವಿಲ್ಲದೇ ಇರತಕ್ಕಂಥಹುದು.

ನಮ್ಮ ಜೀವನವಿಡೀ ಒಂದು ದೀರ್ಘ ನಿದ್ರೆಯಂತಿದೆ. ಇದರಲ್ಲಿ ಎಚ್ಚೆತ್ತುಕೊಳ್ಳುವ ಘಳಿಗೆ ಬಹಳ ಕಡಿಮೆ. ನಿದ್ದೆಗಣ್ಣಿನಲ್ಲಿ ಮಕ್ಕಳು ಉಂಡು, ಕುಡಿದು ಮಲಗಿದಂತೆ. ಮಧ್ಯೆ ಮಧ್ಯೆ ನಮಗೆ ಅಲ್ಪಸ್ವಲ್ಪ ಎಚ್ಚರವಾದರೂ ಮತ್ತೆ ಮಗ್ಗಲು ಬದಲಿಸಿ ಮುಸುಕಿಟ್ಟು ಮಲಗಿಬಿಡುವಂತಿದೆ ನಿದ್ದೆಗಣ್ಣಿನ ನಮ್ಮ ಜೀವನ. ನಿದ್ರೆ ಎಂದರೆ ವಸ್ತುಸ್ಥಿತಿಯ ಪರಿಚಯವಿಲ್ಲದೇ ಇರುವಂಥಹುದು. ಅವಿವೇಕ! ನಿದ್ದೆಯಲ್ಲಿ ಹೊಸತೇನನ್ನೂ ಕಲಿಯಲಾಗುವುದಿಲ್ಲ. ಅಲ್ಲಿ ಅಭಾವವಿರುತ್ತೆ. ನಾವು ಮಾಡಿದ ತಪ್ಪನ್ನೇ ಮಾಡ್ತೀವಿ. ಹೊಸ ತಪ್ಪು ಮಾಡುವುದಿಲ್ಲ.

’ಅವಿವೇಕೋ ಮಾಯಾ ಸುಷುಪ್ತಿ’. ಮಾಯಾ ಅಂದರೇನು? ಯಾವುದು ಹೇಗಿಲ್ಲವೋ ಹಾಗೆ ಅದನ್ನು ತಿಳಿದುಕೊಳ್ಳುವುದು.

ಇಡೀ ಜೀವನದಲ್ಲಿ ನೋಡಿ - ಬೇರೆಯವರು ನನ್ನ ಬಗ್ಗೆ ಏನು ಅಂದ್ಕೋತಾರೆ ಅಂತ ನೀವೇ ಕಲ್ಪನೆ ಮಾಡಿಕೊಳ್ಳುತ್ತೀರ - ನಿಮ್ಮ ತಲೆಯಲ್ಲಿ.ಬೇರೆಯವರಿಗೆ ನಿಮ್ಮ ಬಗ್ಗೆ ಯೋಚನೆ ಮಾಡುವುದಕ್ಕೆ ಪುರುಸೊತ್ತೆಲ್ಲಿದೆ? ನಿಮ್ಮ ಮಾನ ಅಪಮಾನದ ಬಗ್ಗೆ ನೀವು ಕುಳಿತುಕೊಂಡು ಹಗಲು ರಾತ್ರಿಯಿಡೀ ಚಿಂತೆ ಮಾಡುತ್ತಾ ಇರುತ್ತೀರ. ಇದು ಮಾಯೆ. ನಾಳೆ ಈ ಬಗ್ಗೆ ಇನ್ನೂ ಆಳವಾಗಿ ತಿಳಿದುಕೊಳ್ಳೋಣ.

* * * * *

ನೀರ ಮೇಲಿನ ಗುಳ್ಳೆ
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ.೨೫/೦೪/೨೦೦೩ರ೦ದು ಪ್ರಕಟವಾಗಿತ್ತು)

ನಸ್ಸಿನ ಮಾಯೆಗೆ ಒಂದು ನಿದರ್ಶನ.

ಒಬ್ಬಾಕೆಯ ಮಗ ಅನ್ಯ ಜಾತಿಯ ಹುಡುಗಿಯನ್ನು ಮದುವೆ ಮಾಡಿಕೊಂಡುಬಿಟ್ಟ. ಹಿಂದೆ ಆಕೆ ಬೇರೆ ಎಲ್ಲರಿಗೂ ಹೇಳೋದು ’ನನ್ನ ಮಗ ತುಂಬಾ ಒಳ್ಳೆಯವನು, ಅಂಥ ಮಗ, ಇಂಥ ಮಗ, ನಾವು ಹಾಕಿದ ಗೆರೆ ದಾಟಲ್ಲ’ ಅಂತ. ಯಾಕೆ ಅಂದರೆ ಬೇರೆಯವರು    ತಮಗಿ೦ತ ಕೀಳು ಎ೦ಬ ದೃಷ್ಟಿಕೋನವನ್ನಿಟ್ಟುಕೊ೦ಡು ಆಕೆ ಆಲೋಚನೆ ಮಾಡುತ್ತಾ ಇದ್ದರು. ಈಗ ತನ್ನ ಮಗನೇ ಈ ತರಹ ಆದ ನಿಮಿತ್ತ ಭಾರೀ ದೊಡ್ಡ ಆಘಾತ ಆಯ್ತು!

ಈಗೇನಾಯ್ತು, ಅವರು ಮನೆಯಲ್ಲೇ ಬೀಗ ಹಾಕಿಕೊಂಡು ಇದ್ದರು. ಬೇರೆಯವರಿಗೆ ಹೇಗೆ ಮುಖ ತೋರಿಸುವುದು, ಬೇರೆಯವರ ಮದುವೆಗೆ ಹೋಗುವುದು ಹೇಗೆ? ಅವರು ಕೇಳಲ್ಲವಾ, ’ಏನ್ರೀ ಹೀಗಾಯ್ತಂತೆ’ ಅಂತ! ನಮ್ಮ ಕುಲ, ಮಾನ, ಮರ್ಯಾದೆ ಎಲ್ಲಾ ಹೋಯ್ತಲ್ಲ ಅಂತ ಬಿಕ್ಕಿಬಿಕ್ಕಿ ಅಳುತ್ತಿದ್ದರು. ಒಂದೆರಡು ದಿನ ಅಲ್ಲ, ವರ್ಷ ಆದರೂ ಆ ಹೆಂಗಸಿಗೆ ಮನೆ ಬಿಟ್ಟು ಬರಲು ಆಗಲಿಲ್ಲ. ’ಬೇರೆಯವರು ಏನೋ ಅಂದುಕೊಂಡುಬಿಡ್ತಾರೆ, ತನ್ನಬಗ್ಗೆ’ ಅಂತ. " ಅಮ್ಮಾ ನಿಮ್ಮ ಬಗ್ಗೆ ಬೇರೆಯವರು ಯೋಚನೆ ಮಾಡುವುದಕ್ಕೆ ಅವರಿಗೆ ಸಮಯಎಲ್ಲಿದೆಯಮ್ಮಾ? ಹಾಗೆ ನಿನ್ನ ನೋಡಿ ಏನಾದರೂ ಅಂದರೂ ಅಂದರು. ಅದರ ಬಗ್ಗೆ ನೀನ್ಯಾಕೆ ಅಷ್ಟು ಗೊಂದಲ ಎಬ್ಬಿಸಿಕೊಳ್ತೀಯಾ" - ಇದಕ್ಕೇ ಮಾಯಾ ಅನ್ನುವುದು.

ಬೇರೆಯವರು ನಮ್ಮ ಬಗ್ಗೆ ಏನು ಯೋಚನೆ ಮಾಡ್ತಾರೆ ಅಂತ ನಾವು ಕುಳಿತುಕೊಂಡು ಯೋಚನೆ ಮಾಡ್ತಾ ಇರೋದು.ಪ್ರತಿಯೊಬ್ಬರ ವಿಚಾರ, ಆಲೋಚನೆ ಎಷ್ಟು ಕ್ಷಣಿಕವಾಗಿರುತ್ತದೆ ನೋಡಿ, ನಿಮ್ಮನ್ನು ಯಾರೋ ಒಳ್ಳೆಯವರು ಅಂದುಕೊಂಡಿರುತ್ತಾರೆ. ಎಷ್ಟು ಹೊತ್ತಾಗಬೇಕಪ್ಪ ಅವರ ಅಭಿಪ್ರಾಯ ಬದಲಿಸಿಕೊಳ್ಳಲಿಕ್ಕೆ! ಕೆಲವೇ ಕ್ಷಣ! ಕೆಟ್ಟವರು ಅಂತಲೂ ಅನ್ನಬಹುದು. ಎಷ್ಟೋ ಜನ ಕೆಟ್ಟವರು ಅಂದಿರುತ್ತಾರೆ. ಅವರ ಅಭಿಪ್ರಾಯ ಬದಲಾಯಿಸಿಕೊಳ್ಳುವುದಕ್ಕೆ ಎಷ್ಟು ಹೊತ್ತು ಆಗಬೇಕು?ಬೇರೆಯವರ ಅಭಿಪ್ರಾಯ ನೀರಿನ ಮೇಲಿನ ಗುಳ್ಳೆಯ ಹಾಗೆ. ನಾವು ಅದರ ಮೇಲೆ ನಮ್ಮ ಜೀವನದ ಅಸ್ತಿಭಾರವನ್ನು ಇಟ್ಟುಕೊಂಡರೆ ಎಲ್ಲೂ ಇರುವುದಕ್ಕೆ ಸಾಧ್ಯವಿಲ್ಲ. ಆ ತರಹದ ಜೀವನ ಸ್ಥಾಯಿ ಹೇಗಾಗುತ್ತೆ?

’ಬೇರೆಯವರ ವಿಚಾರದ ಮೇಲೆ ನಮ್ಮ ಜೀವನವನ್ನು ಆಧರಿಸುವುದು ಮಾಯೆ, ಅವಿವೇಕ!’

* * * * *

ಮಾಯೆಯಿಂದ ವಿಮುಕ್ತಿ
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ.೨೬/೦೪/೨೦೦೩ರ೦ದು ಪ್ರಕಟವಾಗಿತ್ತು)

ಪ್ರತಿದಿನ ಈ ಪ್ರಪಂಚವನ್ನು ನೋಡುತ್ತಲೇ ಇರ್ತೀವಿ. ಆದರೂ ಏನೂ ಕಲಿಯುವುದೇ ಇಲ್ಲ. ಇದು ಅವಿವೇಕ. ಎಷ್ಟೋ ಜನ ಆಗಿಹೋಗಿದ್ದಾರೆ, ಎಷ್ಟೋ ಜನ ಸತ್ತಿದ್ದಾರೆ, ಹಾಗೇ ಸಾಯುತ್ತಾ ಇದ್ದರೆ, ನಾವೂ ಸಾಯ್ತೀವಿ ಒಂದು ದಿನ. ಇದು ಗೊತ್ತಿದ್ದೂ ಗೊತ್ತಿಲ್ಲದ ಹಾಗೆ ಇರ್ತೀವಿ. ಇದೇ ಮಾಯಾ, ಇದೇ ಅವಿವೇಕ, ನಿದ್ದೆ!

’ಅವಿವೇಕೋ, ಮಾಯಾ, ಸುಷುಪ್ತಿ, ತೃತೀಯ ಭೋಕ್ತಾ ವೀರೇಶಃ’.ಇಷ್ಟು ತಿಳಿದುಕೊಂಡುಬಿಟ್ಟರೆ ಸಾಕು. ’ಇದೆಲ್ಲಾ ಅವಿವೇಕ, ಮಾಯಾ’ ಎಂದುಕೊಂಡ ತಕ್ಷಣ, ತಿಳುವಳಿಕೆ ಬಂದ ತಕ್ಷಣ ಮಾಯೆ ದೂರವಾಗುತ್ತೆ. ಆ ನೀರಿನ ಕೆಳಗಿನ ಗುಳ್ಳೆ ನೀರಿನ ಮಟ್ಟಕ್ಕೆ ಬರುತ್ತಿದ್ದ ಹಾಗೇ ತನ್ನಷ್ಟಕ್ಕೇ ಮಾಯ ಆಗುವಂತೆ, ಮಾಯೆಯನ್ನು ಮಾಯೆ ಅಂತ ತಿಳಿದುಕೊಳ್ಳುವುದೇ ಜ್ಞಾನ. ಈ ಪ್ರಪಂಚದಲ್ಲಿ ಎಲ್ಲವೂ ಬದಲಾಗ್ತಿದೆ ಅಂತ ತಿಳಿದುಕೊಳ್ಳುವುದೇ ಜ್ಞಾನ. ಇದನ್ನು ಯಾಕೆ ನಾವು ತಿಳಿದುಕೊಳ್ಳುವುದಿಲ್ಲ? ನಿದ್ರೆ ಮಾಡ್ತಾ ಇದ್ದೀವಿ. ನಾವು ನಿದ್ರೆ ಮಾಡ್ತಾ ಇದ್ದೀವಿ ಅಂತ ನಮಗೆ ಗೊತ್ತಾದ ತಕ್ಷಣ ಎಚ್ಚರ ಆಗಿಬಿಡ್ತೀವಿ, ಆಗದೇ! ಎಚ್ಚರ ಉಂಟಾದ ತಕ್ಷಣವೇ, ಮಾಯೆ ಅಂತ ಅರಿತುಕೊಂಡ ತಕ್ಷಣವೇ ಮಾಯೆಯಿಂದ ಹೊರಗೆ ಬರುತ್ತೀವಿ. ನಮ್ಮ ಆತ್ಮ ಚೇತನಕ್ಕೆ ಮರಳಿ ಹೊರಟುಹೋಗ್ತೀವಿ ’ನಮಃ ಶ್ರೀ ಶಂಭವೇ ಸ್ವಾತ್ಮಾನಂದ ಪ್ರಕಾಶ ವಪುಷೇ!’

ನಾವು ತಪ್ಪು ಮಾಡಿದ್ದೀವಿ ಅಂತ ಜ್ಞಾನ ಉಂಟಾದಾಗ ತುಂಬಾ ಪಶ್ಚಾತ್ತಾಪ ಪಡ್ತೀವಿ. ಆಗ ನಾವು ಕ್ರೋಧದಿಂದ ತುಂಬಿಬಿಡ್ತೀವಿ. ನಮ್ಮನ್ನು ನಾವೇ ಹೀನಾಯ ಮಾಡಿಕೊಳ್ತೀವಿ, ಬೈದುಕೊಳ್ತೀವಿ; ಬೇರೆಯವರನ್ನು ಬೈಯುವುದಕ್ಕೆ ತಯಾರಾಗ್ತೀವಿ. ರೇಗಲು ಪ್ರಾರಂಭಿಸುತ್ತೀವಿ. ನಿನ್ನನ್ನು ನೀನು ತುಂಬಾ ಹೀನಾಯವಾಗಿ ಕಾಣ್ತಾ ಇದೀಯ, ನಿನ್ನ ಮೇಲೆ ನಿನಗೇ ಕೋಪ ಬಂದಿದೆ. ಒಳಗಿದೆ ಕೋಪದ ಬೆಂಕಿ, ಹೊರಗೆ ಇತರರನ್ನು ರೇಗುವುದು, ಬೈಯುವುದು ಅದರ ಶಾಖ ಮಾತ್ರ. ’ನಾನಿನ್ನೂ ಕಲಿತೇ ಇಲ್ಲವಲ್ಲ, ಎಷ್ಟು ಮಾಡಿದರೂ ಜೀವನದಲ್ಲಿ ಮುಂದುವರಿದೇ ಇಲ್ಲವಲ್ಲ’ ಅಂತ ನಿನ್ನ ಮೇಲೆ ನಿನಗೆ ಬೇಸರಿಕೆ. ಅದಕ್ಕೇ ಹೇಳುವುದು, ನೀನು ಧೈರ್ಯವಾಗಿರು.

’ತೃತೀಯ ಭೋಕ್ತಾ ವೀರೇಶಃ’ ಅಂತ ಹೇಳಿದರು. ವೀರೇಶ ಎಂದರೆ? ನಾಳೆ ತಿಳಿದುಕೊಳ್ಳೋಣ.

* * * * *

ವೀರೇಶ  
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ.೨೭/೦೪/೨೦೦೩ರ೦ದು ಪ್ರಕಟವಾಗಿತ್ತು)

’ತೃತೀಯ ಭೋಕ್ತಾ ವೀರೇಶಃ’ ಎಂದು ಹೇಳಿದರು.

ಇದು ಬಹಳ ಜಟಿಲವಾದ ಮುಖ್ಯವಾದ ಸೂತ್ರ. ನೀನು ನೂರು ಸಲ ಸೋತರೂ ನೂರ ಒಂದನೇ ಬಾರಿ ಗೆಲ್ಲಬಹುದು. ಅದರಿಂದ, ಗೆಲ್ಲುವ ಆಸೆಯನ್ನು ನೀನು ಬಿಡಬೇಡ, ಧೈರ್ಯವನ್ನು ಬಿಡಬೇಡ, ನೀನು ಗೆಲ್ತೀಯಾ. ಸೋಲುವುದಕ್ಕೆ ತಯಾರಾದರ್ರೆ ನೀನು ಗೆಲ್ಲುತ್ತೀಯ. ಸೋಲು ಒಪ್ಪಿಕೋ ಚೆನ್ನಾಗಿ. ಅದಕ್ಕೇ ’ವೀರೇಶ’ ಅಂದರು. ಅಂದರೆ ಸೋಲು ಒಪ್ಪಿಕೊಳ್ಳುವುದಕ್ಕೆ ತಯಾರಾಗಿರುವವನು ಅಂತ. ನಾವು ವಿರುದ್ಧವಾಗಿ ತಿಳಿದುಕೊಳ್ತೀವಿ. ಯಾರು ಸೋಲು ಒಪ್ಪಿಕೊಳ್ಳುವುದಿಲ್ಲವೋ ಅವನು ಗೆಲ್ತಾನೆ ಅಂತ. ಶುದ್ಧ ತಪ್ಪು! ಸೋಲು ಒಪ್ಪಿಕೊಂಡವನು ಶಾಂತವಾಗ್ತಾನೆ. ಯಾರು ಸೋಲು ಒಪ್ಪಿಕೊಳ್ಳುವುದಿಲ್ಲವೋ ಅವನು ಕುದೀತಾ ಇರ್ತಾನೆ, ಬೆಂಕಿಯಿಂದ, ಸೇಡಿನಿಂದ.

ಯಾರ ಮನಸ್ಸು, ಯಾರ ಬುದ್ಧಿ ಕುದಿಯುತ್ತಾ ಇದೆಯೋ, ಬೆಂದುಹೋಗಿದೆಯೋ ಅವನು ಸರಿಯಾಗಿ ಗೆಲ್ತಾನೆ ಅನ್ನೋದು ಆಗೋದೇ ಇಲ್ಲ. ಒಂದು ವೇಳೆ ಗೆದ್ದಂತೆ ಕಂಡುಬಂದರೂ, ಅವನದು ಹೊರಗಿನ ಗೆಲುವು ಅಷ್ಟೆ. ಅವನ ಮನಸ್ಸಿನಲ್ಲಿ ಸೋತೆ ಅನಿಸುತ್ತೆ. ಸೋಲು ಒಪ್ಪಿಕೊಳ್ಳಬೇಕು. ಸೋಲು ಒಪ್ಪಿಕೊಳ್ಳುವುದು ಅಂದರೇನು? ಧೈರ್ಯದಿಂದಿರಬೇಕು. ಸೋಲನ್ನು ಒಪ್ಪಿದವನೇ ಧೈರ್ಯದಿಂದಿರುವುದು ಸಾಧ್ಯ! ’ನಾನುಬ್ಈಗ ಸೋತೆ’ ಅಂತ ಅಂಗೀಕರಿಸಿದವನ ಮನಸ್ಸು ಶಾಂತವಾಗುತ್ತದೆ, ಸೇಡಿನಿಂದ ತುಂಬಿರುವುದಿಲ್ಲ. ಶಾಂತವಾಗಿರುವ ಮನಸ್ಸಿನಲ್ಲಿ ಧೈರ್ಯ ಉಂಟಾಗುತ್ತದೆ. ಅಶಾಂತವಾದ ಮನಸ್ಸಿನಲ್ಲಿ ಎಂದಿಗೂ ಧೈರ್ಯ ಬರುವುದೇ ಇಲ್ಲ. ’ತೃತೀಯ ಭೋಕ್ತಾ ವೀರೇಶಃ’ - ಜೀವನದಲ್ಲಿ ನಾವು ಯೋಗವನ್ನಂತೂ ಅನುಭವಿಸಿಲ್ಲ, ಭೋಗವನ್ನೂ ಅನುಭವಿಸಿಲ್ಲ. ಯೋಗದಲ್ಲೂ ತೃಪ್ತಿ, ಭೋಗದಲ್ಲೂ ತೃಪ್ತಿ ಸಿಗುತ್ತದೆ. ಆದರೆ ನಾವು ಭೋಗವನ್ನು ಕೂಡಾ ಅನುಭವಿಸಿಲ್ಲ!! ಲೋಭದ ಅರ್ಥವೇನು? ಸರಿಯಾಗಿ ಭೋಗಿಸಿಲ್ಲ! ಇದನ್ನು ಇನ್ನೂ ಚೆನ್ನಾಗಿ ತಿಳಿದುಕೊಳ್ಳೋಣ - ಮುಂದಿನ ದಿನಗಳಲ್ಲಿ.
* * * * *

ಅನುಭೋಗ - ತೃಪ್ತಿ
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ.೨೮/೦೪/೨೦೦೩ರ೦ದು ಪ್ರಕಟವಾಗಿತ್ತು)

ಒಂದು ಮಗುವನ್ನು ನೋಡಿ - ಒಂದು ಲಾಲಿಪಾಪ್ ತಿ೦ದ ನಂತರ ಆ ಮಗುವಿನ ಮುಖದಲ್ಲಿ ನೋಡಿ ಏನು ಖಳೆ, ಏನು ಆನಂದ! ಆ ಮಗುವಿನ ಕೈಗೆ ಒಂದು ಲಾಲಿಪಾಪ್ ಸಿಕ್ಕಿತು, ಅದನ್ನು ತಿಂದು ಮುಗಿಸಿತು ಅಷ್ಟೇ. ಅಷ್ಟಕ್ಕೇ ಆ ಮಗು ಸಂಪೂರ್ಣವಾಗಿ ಅದರ ಭೋಗ ಅನುಭವಿಸುತ್ತದೆ. ’ಎಷ್ಟು ತೃಪ್ತಿ’! ಆದರೆ, ರೆಸ್ಟರಾಂಟುಗಳಲ್ಲಿ ನೋಡಿ ದಿನಾ ಎಲ್ಲಾ ಜನ ಕುಳಿತು ತಿನ್ನುತ್ತಿರುತ್ತಾರೆ, ಆ ಮುಖದಲ್ಲಿ ತೃಪ್ತಿ ಇದೆಯಾ? ಹುಮ್ಮಸ್ಸು ಇದೆಯಾ? ಏನಿಲ್ಲ!

ಹಾಗೇ ಒಂದು ಮಗುವಿಗೆ ಒಂದು ಚಿಕ್ಕ ಹಾಡು, ಜೋಗುಳ ಹಾಡಿಬಿಡಿ. ಎಷ್ಟು ತಲ್ಲೀನವಾಗಿ ಮೈಮರೆತು ಆ ಸಂಗೀತ ಕೇಳ್ತಾ ಕೇಳ್ತಾ ನಿದ್ರೆ ಮಾಡಿಬಿಡುತ್ತೆ! ಆ ನಿದ್ರೆಯ ಮುಖದಲ್ಲೂ ಪ್ರಸನ್ನತೆಯಿದೆ. ಮಗು ನಿದ್ದೆ ಮಾಡಿ ಎದ್ದಿದೆ. ನಿದ್ರೆಯನ್ನು ಭೋಗಿಸಿದೆ, ಅನುಭವಿಸಿದೆ. ಮಗು ಎದ್ದ ತಕ್ಷಣ ಮುಖದಲ್ಲಿ ಒಂದು ಮುಗ್ಧತೆ, ಸಂತೋಷ, ಪ್ರೇಮ, ತೃಪ್ತಿ ಎಲ್ಲಾ ಕಾಣಿಸುತ್ತದೆ. ಅದೇ ನೀನೂ ನಿದ್ರೆ ಮಾಡ್ತೀಯಾ. ದಿನಾ ಎಲ್ಲಾ ನಿದ್ರೆ ಮಾಡಿ ಎದ್ದರೂ ಕೂಡಾ ಹಾಗೇ ಗೊಣಗಾಟ, ಏನಾದರೂ ಖಳೆ ಇದೆಯಾ ಆ ಮುಖದಲ್ಲಿ?ತುಂಬಾ ನಿದ್ರೆ ಮಾಡೋರ ಮುಖದಲ್ಲಿ ನೋಡಿ. ಎದ್ದ ತಕ್ಷಣ ಪ್ರಸನ್ನತೆ ಇದೆಯಾ, ತೃಪ್ತಿ ಇದೆಯಾ, ಸಂತೋಷ ಇದೆಯಾ? ಅಯ್ಯೋ ಏಳಬೇಕಲ್ಲಾ ಅಂತ ಏಳೋದು!

ಹಾಗೇ ನೋಡಿ, ಹೊಸದಾಗಿ ಮದುವೆಯಾದವರ ಮುಖದಲ್ಲಿನೋಡಿ. ಒಂದೆರಡು ದಿನ ಏನಾದರೂ ಖಳೆ ಇರಬಹುದು, ಮದುವೆಯ ಮುಂಚಿನ ದಿನಗಳಲ್ಲಿ. ಆದ ಮೇಲೆ ಭಯ, ಆತಂಕ, ಯೋಚನೆ, ತಾಪತ್ರಯ, ಒಂದು ತೃಪ್ತಿ ಇದೆಯಾ? ಆ ಭೋಗದ ತೃಪ್ತಿ ಇದೆಯಾ?

ಭೋಗದ ತೃಪ್ತಿ ಇದ್ದಿದ್ದರೆ ಪ್ರಪಂಚದಲ್ಲಿ ಇಷ್ಟೊಂದು ಹಿಂಸೆ, ಅತ್ಯಾಚಾರಗಳು ಆಗುತ್ತಾ ಇರಲಿಲ್ಲ! ಅತ್ಯಾಚಾರ ಹಿಂಸೆ ಮಾಡೋರ ಮುಖ ನೋಡಿ, ಬರೀ ಭೋಗದಲ್ಲೇ ಮುಳುಗಿರುತ್ತಾರೆ, ಅವರ ಮುಖದಲ್ಲಿ ಏನಾದರೂ ಖಳೆ ಇದೆಯಾ? ಸಂತೋಷ ಕಾಣಿಸುತ್ತಾ?ತೃಪ್ತಿ ಕಾಣಿಸುತ್ತಾ?

ರಾಜಕಾರಣಿಗಳನ್ನೇ ತೆಗೆದುಕೊಳ್ಳಿ. ತೃಪ್ತಿ ಇದೆಯಾ? ಪ್ರಸನ್ನತೆ? ಈ ಶಬ್ದಗಳಿಗೂ ಅವರಿಗೂ ತುಂಬಾ ದೂರ! ಹೀಗೇ ಸಾಧು, ಸನ್ಯಾಸಿ, ಮಹಾತ್ಮರು ಅನ್ನಿಸಿಕೊಂಡಿರುವವರ ಮುಖದಲ್ಲಿ, ಕಣ್ಣಲ್ಲಿ ಇಣುಕಿ ನೋಡಿ, ಎಲ್ಲಾದರೂ ತೃಪ್ತಿ ಇದೆಯಾ? ಶಾಂತಿ ಇದೆಯಾ?

ಅಧಿಕಾರದ ಲಾಲಸೆ, ಹಣಕಾಸಿನ ಲಾಲಸೆ, ಯಶಸ್ಸಿನ ಲಾಲಸೆ, ಶಿಷ್ಯರನ್ನು ಮಾಡಿಕೊಳ್ಳುವ ಉದ್ವೇಗ, ಈ ಎಲ್ಲಾ ತರಹದ ಲೋಭ!.. ಲೋಭದ ಅರ್ಥ ಏನು? ಸರಿಯಾಗಿ ಭೋಗಿಸಿಲ್ಲ!

ಊಟ ಸರಿಯಾಗಿ ಮಾಡದೇ ಇರುವವನಿಗೆ ಊಟದ ಚಿಂತೆ ಇಪ್ಪತ್ನಾಲ್ಕು ಘಂಟೆಯೂ ಇರುತ್ತೆ ಅಲ್ಲವೇ?