ಮಂಗಳವಾರ, ಫೆಬ್ರವರಿ 25, 2014

ಆಕಾರ, ನಿರಾಕಾರ

ಫೆಬ್ರುವರಿ ೨೫, ೨೦೧೪
ಬೆಂಗಳೂರು, ಭಾರತ

ಪ್ರಶ್ನೆ: ಗುರುದೇವ, ಸಾವಿನ ಬಳಿಕವೂ, ಆತ್ಮದ ರೂಪದಲ್ಲಿರುವ ಒಬ್ಬ ಮನುಷ್ಯನು ಒಂದು ಶರೀರಕ್ಕಾಗಿ ಹುಡುಕುತ್ತಿರುತ್ತಾನೆ. ಶರೀರಕ್ಕಾಗಿ ಅಷ್ಟೊಂದು ಮೋಹವಿರುವುದು ಯಾಕೆ?

ಶ್ರೀ ಶ್ರೀ ರವಿ ಶಂಕರ್: ಇದು ಯಾಕೆಂದರೆ, ಒಬ್ಬನ ಧರ್ಮವನ್ನು (ಒಬ್ಬನ ಕರ್ತವ್ಯಗಳು ಅಥವಾ ಕರ್ಮ) ಮಾಡಿಸಲಿರುವ ಸಾಧನವು ಶರೀರವಾಗಿದೆ. ’ಶರೀರ ಮಾಧ್ಯಮ್ ಧರ್ಮ ಖಲು ಸಾಧನಮ್’ ಎಂದು ಹೇಳಲಾಗಿದೆ. ಇದರರ್ಥ, ಒಬ್ಬನು ತನ್ನ ಕರ್ತವ್ಯಗಳನ್ನು ಅಥವಾ ತನ್ನ ಕರ್ಮವನ್ನು ಮಾಡಬೇಕಾದರೆ, ಅದನ್ನು ಭೌತಿಕ ಶರೀರದ ಮೂಲಕ ಮಾತ್ರ ಮಾಡಲು ಸಾಧ್ಯ. ಯಾರು ಅಶರೀರಿ - ಅಂದರೆ ಭೌತಿಕ ಶರೀರವಿಲ್ಲದವರಾಗಿರುವರೋ - ಅವರು ಅದನ್ನು ಮಾಡಲು ಸಾಧ್ಯವಿಲ್ಲ.

ದೇವತೆಗಳು ಕೂಡಾ ಮೋಕ್ಷವನ್ನು ಪಡೆಯುವುದಕ್ಕಾಗಿ ತಮ್ಮ ಧರ್ಮವನ್ನು ಮಾಡಲು ಒಂದು ಮಾನವ ರೂಪವನ್ನು ತೆಗೆದುಕೊಳ್ಳಬೇಕು ಎಂಬುದು ಅದೇ ಕಾರಣಕ್ಕಾಗಿ.

ಪ್ರಶ್ನೆ: ಗುರುದೇವ, ಗುರುಕುಲದ (ಆಶ್ರಮದಲ್ಲಿನ) ದೇವಸ್ಥಾನದಲ್ಲಿ ಪಂಚಮುಖಿ ಗಣಪತಿಯ ಒಂದು ಮೂರ್ತಿಯಿದೆ. ಪಂಚಮುಖಿಯ ಅರ್ಥವೇನು?

ಶ್ರೀ ಶ್ರೀ ರವಿ ಶಂಕರ್: ನಮ್ಮ ಶರೀರದಲ್ಲಿ ಐದು ಇಂದ್ರಿಯ ಜ್ಞಾನಗಳಿವೆ: ದೃಶ್ಯ, ವಾಸನೆ, ಸ್ಪರ್ಷ, ರುಚಿ ಮತ್ತು ಶ್ರವಣ ಜ್ಞಾನ, ಹಾಗೂ ಸೃಷ್ಟಿಯಲ್ಲಿ ಐದು ತತ್ವಗಳಿವೆ: ಭೂಮಿ, ಜಲ, ಅಗ್ನಿ, ವಾಯು ಮತ್ತು ಆಕಾಶ. ಐದು ಜ್ಞಾನಗಳು ಮತ್ತು ಐದು ತತ್ವಗಳಿವೆ, ಈ ರೀತಿಯಲ್ಲಿ ದೇವರಿಗೆ ಐದು ಮಗ್ಗಲುಗಳಿವೆ. ಈ ಐದರಲ್ಲಿರುವ ಯಾವುದೇ ತಡೆಯನ್ನು ನಿವಾರಿಸಬಲ್ಲ ಸಾಮರ್ಥ್ಯವಿರುವ ದೇವರ ಆ ರೂಪವು ಪಂಚಮುಖಿ ಗಣಪತಿ ಎಂದು ಕರೆಯಲ್ಪಡುತ್ತದೆ.  

ಈ ಸೃಷ್ಟಿಯಲ್ಲಿರುವ ಎಲ್ಲವೂ ಈ ಐದು ತತ್ವಗಳ ಗಣಗಳಿಂದ ಮಾಡಲ್ಪಟ್ಟಿದೆ. ಉದಾಹರಣೆಗೆ, ಜಲ ತತ್ವವು ಹಲವಾರು ವಿವಿಧ ರೂಪಗಳನ್ನು ಹೊಂದಿದೆ - ಹಾಲು, ಮೊಸರು, ಮೊದಲಾದವು.

ಅದೇ ರೀತಿಯಲ್ಲಿ, ವಾಯು ತತ್ವವು ಒಂದು ರೀತಿಯದ್ದು ಮಾತ್ರವಲ್ಲ. ಅಂಗಾರಾಮ್ಲ, ಆಮ್ಲಜನಕ ಮತ್ತು ಸಾರಜನಕ ಮೊದಲಾದಂತಹ ಹಲವಾರು ವಿವಿಧ ಅನಿಲಗಳಿರುವುದನ್ನು ನೀವು ಕಾಣಬಹುದು. ಹೀಗಾಗಿ, ವಿವಿಧ ಅನಿಲಗಳ ಈ ಗಣವು ಒಟ್ಟಾಗಿ ವಾಯು ತತ್ವವನ್ನು ರಚಿಸುತ್ತದೆ.

ಅದೇ ರೀತಿಯಲ್ಲಿ, ವಿವಿಧ ರೀತಿಯ ದ್ರವಗಳು (ಒಂದು ಗಣ) ಒಟ್ಟಾಗಿ ಜಲ ತತ್ವವನ್ನು ನಿರ್ಮಿಸುತ್ತವೆ. ನೀರು ಒಂದು ಗಣವನ್ನು, ವಾಯು ಒಂದು ಗಣವನ್ನು ಹೊಂದಿದೆ ಮತ್ತು ಅದೇ ರೀತಿಯಲ್ಲಿ ಭೂಮಿ ತತ್ವವು ತನ್ನೊಳಗೆ ಚಿನ್ನ, ಬೆಳ್ಳಿ, ತಾಮ್ರ, ಕಲ್ಲುಗಳು, ಮಣ್ಣು ಮೊದಲಾದ ವಿವಿಧ ಲೋಹಗಳು ಹಾಗೂ ಖನಿಜಗಳ ಒಂದು ಗುಂಪನ್ನು ಹೊಂದಿದೆ.

ಆಕಾಶ ತತ್ವವೂ ತನ್ನೊಳಗೆ, ಆಂತರಿಕ ಆಕಾಶ, ಬಾಹ್ಯಾಕಾಶ ಮೊದಲಾದ ತನ್ನದೇ ಆದ ಗುಂಪನ್ನು ಹೊಂದಿದೆ.

ಭಗವಾನ್ ಗಣಪತಿಯು ಈ ಎಲ್ಲಾ ಗಣಗಳು ಅಥವಾ ಗುಂಪುಗಳ ಒಡೆಯನಾಗಿರುವನು, ಮತ್ತು ಐದು ಪ್ರಮುಖ ಗಣಗಳಿರುವುದರಿಂದ, ಈ ನಿರ್ದಿಷ್ಟ ರೂಪವು ಪಂಚಮುಖಿ ಗಣಪತಿ ಎಂದು ಕರೆಯಲ್ಪಡುತ್ತದೆ.

ಇಲ್ಲಿನ ಮುಖ್ಯ ಸಾರವೆಂದರೆ, ನಿರ್ಗುಣ ಮತ್ತು ನಿರಾಕಾರನಾದ ದೇವರನ್ನು ಈ ರೂಪದಲ್ಲಿ ಪ್ರತಿನಿಧೀಕರಿಸಿ, ಪವಿತ್ರ ಮಂತ್ರಗಳನ್ನು ಉಚ್ಛರಿಸುವುದರೊಂದಿಗೆ ಪೂಜಿಸಲಾಗುತ್ತದೆ.

ಪ್ರಶ್ನೆ: ಗುರುದೇವ, ಒಬ್ಬ ವ್ಯಕ್ತಿಯು ಗುರುವಿನ ಪ್ರೇಮವನ್ನು ತನ್ನ ಪಾತ್ರತೆಗನುಸಾರವಾಗಿ ಪಡೆಯುತ್ತಾನೆಯೇ? ಅಥವಾ ಹೆಚ್ಚು ಅರ್ಹರಾಗಿರುವವರು ಅಥವಾ ಸಮರ್ಥರಾಗಿರುವವರು ನಿಮ್ಮನ್ನು ಹೆಚ್ಚು ವೇಗವಾಗಿ ತಲಪುತ್ತಾರೆಯೇ? 

ಶ್ರೀ ಶ್ರೀ ರವಿ ಶಂಕರ್: ಹಾಗೇನೂ ಇಲ್ಲ. ನೀನು ಈಗಾಗಲೇ ನನ್ನ ಬಳಿಗೆ ಬಂದಿರುವೆ. ಯಾರು ತಲುಪಿಲ್ಲವೋ ಅವರು, ನೀನು ಅವರನ್ನು ಇಲ್ಲಿಗೆ ಕರೆತರುವುದಕ್ಕಾಗಿ ಕಾಯುತ್ತಿದ್ದಾರೆ.

ಪ್ರಶ್ನೆ: ಗುರುದೇವ, ಭಗವದ್ಗೀತೆಯಲ್ಲಿ, ’ಸರ್ವಧರ್ಮಾನ್ ಪರಿತ್ಯಜ್ಯ ಮಾಮೇಕಂ ಶರಣಂ ವ್ರಜ. ಅಹಂ ತ್ವಾಂ ಸರ್ವಪಾಪೇಭ್ಯೋ ಮೋಕ್ಷಯಿಷ್ಯಾಮಿ ಮಾ ಶುಚಃ’ ಎಂದು ಬರೆಯಲಾಗಿದೆ. ಒಬ್ಬರು ಗುರುವಿಗಿಂತ ಮೊದಲು, ಧರ್ಮದ ವ್ಯಾಖ್ಯಾನವು ಬೇರೆಯಾಗುವುದೇ?

ಶ್ರೀ ಶ್ರೀ ರವಿ ಶಂಕರ್: ಹೌದು, ತಾನು ಹೇಳಲಿರುವುದೆಲ್ಲವನ್ನೂ ಹೇಳಿದ ಬಳಿಕ, ಭಗವದ್ಗೀತೆಯ ಕೊನೆಯಲ್ಲಿ ಕೃಷ್ಣ ಪರಮಾತ್ಮನು ಅರ್ಜುನನಲ್ಲಿ ಹೀಗೆಂದು ಹೇಳುತ್ತಾನೆ,

’ಸರ್ವಧರ್ಮಾನ್ ಪರಿತ್ಯಜ್ಯ ಮಾಮೇಕಂ ಶರಣಂ ವ್ರಜ. 
ಅಹಂ ತ್ವಾಂ ಸರ್ವಪಾಪೇಭ್ಯೋ ಮೋಕ್ಷಯಿಷ್ಯಾಮಿ ಮಾ ಶುಚಃ’  (೧೮.೬೬)

ನಿನ್ನ ಧರ್ಮ ಅಥವಾ ನಿನ್ನಲ್ಲಿರುವ ಬೇರೆ ಯಾವುದೇ ನಂಬಿಕೆಯನ್ನು ಬಿಟ್ಟುಬಿಡು ಮತ್ತು ನನ್ನಲ್ಲಿ ಸಂಪೂರ್ಣ ಶರಣಾಗತನಾಗು. ಓ ಅರ್ಜುನಾ, ನಾನು ನಿನ್ನನ್ನು ನಿನ್ನ ಎಲ್ಲಾ ಪಾಪಗಳು ಮತ್ತು ಯಾತನೆಗಳಿಂದ ಮುಕ್ತಗೊಳಿಸುವೆನು. ಧರ್ಮವು ಸಾಬೂನಿದ್ದಂತೆ. ಆದರೆ, ನೀವು ನಿಮ್ಮ ಬಟ್ಟೆಗಳನ್ನು ೧೦೦ ರೂಪಾಯಿ ಬೆಲೆಬಾಳುವ ಒಂದು ದುಬಾರಿ ಸಾಬೂನಿನಿಂದ ತೊಳೆದಿದ್ದೀರಿ ಎಂಬ ಕಾರಣ ಮಾತ್ರಕ್ಕೆ ನೀವು, ’ಓ, ನಾನು ಸಾಬೂನನ್ನು ನನ್ನ ಬಟ್ಟೆಯಲ್ಲಿ ಇಟ್ಟುಕೊಳ್ಳುತ್ತೇನೆ, ಯಾಕೆಂದರೆ ಇದು ಅಷ್ಟೊಂದು ದುಬಾರಿ ಸಾಬೂನು’ ಎಂದು ಹೇಳುವುದಿಲ್ಲ. ನೀವದನ್ನು ತೊಳೆಯಲೇಬೇಕು.

ಒಬ್ಬರು ಜೀವನದಲ್ಲಿ ಅಂತಹ ಮೋಹಗಳಿಂದ ಮತ್ತು ತೊಡಕುಗಳಿಂದ ಮೇಲಕ್ಕೆ ಸರಿಯುವ ಒಂದು ಹಂತ ಬರುತ್ತದೆ (ಇಲ್ಲಿ ಮತವನ್ನು ಉಲ್ಲೇಖಿಸುತ್ತಾ) ಮತ್ತು ಒಂದು ಶರಣಾಗತಿಯಾಗುತ್ತದೆ; ’ಓ ದೇವರೇ! ನಾನು ನಿನ್ನವನು ಮತ್ತು ನಿನ್ನವನು ಮಾತ್ರ’ ಎಂಬ ಈ ಆಳವಾದ ಭಕ್ತಿಯ ಭಾವನೆಯೊಂದಿಗೆ ದೇವರಿಗೆ ಸಂಪೂರ್ಣವಾಗಿ ಶರಣಾಗುವುದು. ಈ ಶ್ಲೋಕದಲ್ಲಿ ವಿವರಿಸಲಾಗಿರುವುದು ಇದನ್ನೇ.

ಕೃಷ್ಣ ಪರಮಾತ್ಮನು ಅರ್ಜುನನಿಗೆ ಇದನ್ನು ಹೇಳಲೇಬೇಕಾಗಿತ್ತು, ಇಲ್ಲದಿದ್ದರೆ, ಅವನು ಅರ್ಜುನನಿಗೆ ಯಾವುದೇ ಜ್ಞಾನವನ್ನು ನೀಡಿದ್ದರೂ, ಅವನು ಅದರೊಂದಿಗೇ ಸಿಕ್ಕಿಹಾಕಿಕೊಳ್ಳುತ್ತಿದ್ದ ಮತ್ತು ಬಿಟ್ಟುಬಿಡುತ್ತಿರಲಿಲ್ಲ.

ಕೃಷ್ಣ ಪರಮಾತ್ಮನು ಅರ್ಜುನನಿಗೆ ’ಈ ರೀತಿ ಮಾಡು’ ಎಂದು ಹೇಳುವ ಮೂಲಕ ಸಲಹೆ ನೀಡಿರುತ್ತಿದ್ದರೆ, ಅವನು ಅದನ್ನು ಸುಮ್ಮನೇ ಅನುಸರಿಸುತ್ತಿದ್ದ ಮತ್ತು ಅಷ್ಟನ್ನು ಮಾತ್ರ ಮಾಡುತ್ತಿದ್ದ. ಅರ್ಜುನನು ಸಿಕ್ಕಿಹಾಕಿಕೊಳ್ಳಬಾರದೆಂಬ ಕಾರಣಕ್ಕಾಗಿ, ಕೊನೆಯಲ್ಲಿ ಕೃಷ್ಣ ಪರಮಾತ್ಮನು ಅವನಲ್ಲಿ ಹೀಗೆಂದು ಹೇಳಿದನು, ’ಎಲ್ಲಾ ಧರ್ಮ ಅಥವಾ ನಂಬಿಕೆಯನ್ನು ಬಿಟ್ಟುಬಿಡು ಮತ್ತು ಸುಮ್ಮನೆ ಬಂದು ನನ್ನಲ್ಲಿ ಶರಣಾಗು. ನೀನೇ ನಿನ್ನನ್ನು ನಿನ್ನ ಪಾಪಗಳಿಂದ ಮುಕ್ತನಾಗಿಸಲು ಸಾಧ್ಯವಿಲ್ಲ. ನಿನ್ನ ಎಲ್ಲಾ ಪಾಪಗಳು ಮತ್ತು ಯಾತನೆಗಳಿಂದ ನಿನ್ನನ್ನು ನಾನು ಮುಕ್ತಗೊಳಿಸುವೆನು, ಹೀಗಾಗಿ ಸುಮ್ಮನೇ ನನ್ನ ಬಳಿಗೆ ಬಾ.’

ನೀವೊಂದು ಕೆಟ್ಟ ಕೆಲಸವನ್ನು ಮಾಡುತ್ತೀರಿ ಮತ್ತು ’ಓ! ನಾನು ಅಷ್ಟೊಂದು ಕೆಟ್ಟ ಕೆಲಸವನ್ನು ಮಾಡಿದೆ. ನಾನು ಅದರಿಂದ ಹೇಗೆ ಮುಕ್ತನಾಗಬಹುದು? ನಾನೇನು ಮಾಡಲಿ?’ ಎನ್ನುತ್ತಾ ಮರುಗುತ್ತಾ ಹೋಗುತ್ತೀರಿ ಎಂದಿಟ್ಟುಕೊಳ್ಳೋಣ.

ಪ್ರಯತ್ನಗಳನ್ನು ಮಾಡುವುದರಿಂದ ನೀವು ನಿಮ್ಮನ್ನು ನಿಮ್ಮ ಪಾಪಗಳಿಂದ ಮುಕ್ತಗೊಳಿಸಲು ಸಾಧ್ಯವಿಲ್ಲ. ಇದಕ್ಕಾಗಿಯೇ ಕೃಷ್ಣ ಪರಮಾತ್ಮನು, ’ನಿನ್ನ ಎಲ್ಲಾ ಪಾಪಗಳು ಮತ್ತು ದುಃಖಗಳನ್ನು ಹೊರಲು ನಾನು ಸಿದ್ಧನಾಗಿದ್ದೇನೆ, ಹೀಗಾಗಿ ಎಲ್ಲವನ್ನೂ ಸುಮ್ಮನೇ ಬಿಟ್ಟುಬಿಡು ಮತ್ತು ಬಂದು ನನ್ನಲ್ಲಿ ಶರಣಾಗು’ ಎಂದು ಹೇಳುವುದು.

ಪ್ರಶ್ನೆ: ಗುರುದೇವ, ನೀವು ಹದಿನಾರು ಕಲೆಗಳ ಬಗ್ಗೆ (ಹದಿನಾರು ಅಸಾಮಾನ್ಯ ಸಾಮರ್ಥ್ಯಗಳು ಅಥವಾ ದೈವಿಕ ಗುಣಗಳ ಬಗ್ಗೆ ಉಲ್ಲೇಖಿಸುತ್ತಾ) ಮಾತನಾಡಿರುವಿರಿ. ಇವುಗಳು ಯಾವುವು ಮತ್ತು ಅವುಗಳ ಪ್ರಾಮುಖ್ಯತೆಯೇನು?

ಶ್ರೀ ಶ್ರೀ ರವಿ ಶಂಕರ್: ’ಕಲೆ’ ಎಂಬ ಶಬ್ದವು ಸಾಮಾನ್ಯವಾಗಿ, ಚಂದ್ರನು ಒಂದು ದಿನದಲ್ಲಿ ಎಷ್ಟರ ಮಟ್ಟಿಗೆ ಹಿಗ್ಗುತ್ತಾನೆ (ಅಥವಾ ಕುಗ್ಗುತ್ತಾನೆ) ಎಂಬುದನ್ನು ಸೂಚಿಸುತ್ತದೆ. ಹೀಗಾಗಿ ಈ ತಿಳುವಳಿಕೆಯಿಂದ, ಚಂದ್ರನು ೧೬ ಬೇರೆ ಬೇರೆ ಕಲೆಗಳನ್ನು ಹೊಂದಿದ್ದಾನೆ(ಚಂದ್ರನ ವಿವಿಧ ಅವಸ್ಥೆಗಳು). ನೀವಿದನ್ನು ಒಂದು ಅಮವಾಸ್ಯೆಯಿಂದ ಮುಂದಿನ ಹುಣ್ಣಿಮೆಯವರೆಗೆ ಗಮನಿಸಬಹುದು.

ಹೀಗೆ ನೀವು ಒಂದು ಅಮವಾಸ್ಯೆಯಿಂದ ಮುಂದಿನ ಹುಣ್ಣಿಮೆಯವರೆಗೆ ದಿನಗಳನ್ನು ಲೆಕ್ಕ ಹಾಕಿದರೆ, ಅದು ೧೬ ಆಗಿರುತ್ತದೆ. ಮತ್ತು ಅಮವಾಸ್ಯೆಯಿಂದ ಹುಣ್ಣಿಮೆಯವರೆಗಿನ ಪರಿವರ್ತನೆಯು, ಸೊನ್ನೆಯಿಂದ (ಏನೂ ಇಲ್ಲದಿರುವಿಕೆಯಿಂದ) ಸಂಪೂರ್ಣತೆಯವರೆಗೆ ಚಲಿಸುವುದರ ಸಂಕೇತ ಕೂಡಾ ಆಗಿದೆ.

ಅಮವಾಸ್ಯೆಯ ದಿನದಂದು ನೀವು ಚಂದ್ರನನ್ನು ನೋಡುವುದೇ ಇಲ್ಲ ಮತ್ತು ಹುಣ್ಣಿಮೆಯ ದಿನದಂದು ನೀವು ಪೂರ್ಣ ಚಂದ್ರನನ್ನು ನೋಡುತ್ತೀರಿ. ಇದರರ್ಥ ಅಮವಾಸ್ಯೆಯ ದಿನ ಚಂದ್ರನು ಅಲ್ಲಿಲ್ಲ ಎಂದಲ್ಲ. ಇಲ್ಲ, ಆಗಲೂ ಅದು ಅಲ್ಲಿದೆ. ಹೀಗೆ ಈ ತಿಳುವಳಿಕೆಯ ಪ್ರಕಾರ, ಇವುಗಳು ಹದಿನಾರು ಕಲೆಗಳು ಎಂದು ಕರೆಯಲ್ಪಡುತ್ತವೆ. ಉದಾಹರಣೆಗೆ, ಸೂರ್ಯ ಗ್ರಹಣದ ದಿನ, ಚಂದ್ರ ಅಲ್ಲಿದೆ, ಆದರೆ ಅದು ಕಾಣಿಸುವುದಿಲ್ಲ, ಅಷ್ಟೇ.

ಹೀಗೆ, ’ಕಲೆ’ ಎಂಬ ಶಬ್ದವು, ಒಬ್ಬನ ಸಾಮರ್ಥ್ಯದ ಅಥವಾ ಒಬ್ಬನು ಎಷ್ಟರ ಮಟ್ಟಿಗೆ ಅರಳಿದ್ದಾನೆ ಅಥವಾ ಪ್ರಗತಿ ಹೊಂದಿದ್ದಾನೆ ಎಂಬ ಅಳತೆಯ ಒಂದು ಮಾಪಕವಾಗಿದೆ. ಹೀಗೆ, ಒಬ್ಬರು ಒಂದು ಅರ್ಧ-ಚಂದ್ರನಂತಿರಬಹುದು, ಬೇರೊಬ್ಬರು ಚಂದ್ರನ ಮುಕ್ಕಾಲು ಭಾಗವನ್ನು ತಲಪಿರಲೂಬಹುದು ಮತ್ತು ಹೀಗೆ.

ಪ್ರಾಚೀನ ದಿನಗಳಲ್ಲಿ, ಇದೊಂದು ಅಳತೆಯ ಮಾರ್ಗವಾಗಿತ್ತು.

ಆ ದಿನಗಳಲ್ಲಿ ಹೀಗೆಂದು ಹೇಳಲಾಗುತ್ತಿತ್ತು: ಒಂದು ಕಲ್ಲಿನಲ್ಲಿರುವ ಪ್ರಾಣವು ಒಂದು ಕಲೆಗೆ ಸಮಾನ, ಜಲ ತತ್ವಕ್ಕೆ ಎರಡು ಕಲೆಗಳಿವೆ ಎಂದು. ಅಗ್ನಿಗೆ ಮೂರು ಕಲೆಗಳಿವೆ, ವಾಯುವಿಗೆ ನಾಲ್ಕು ಮತ್ತು ಆಕಾಶಕ್ಕೆ ಐದು ಕಲೆಗಳಿವೆ. ಗಿಡಗಳಿಗೆ ಮತ್ತು ಮರಗಳಿಗೆ ಆರು ಕಲೆಗಳಿವೆಯೆಂದು ಹೇಳಲಾಗುತ್ತದೆ. ಪ್ರಾಣಿಗಳಿಗೆ ಏಳು ಕಲೆಗಳಿವೆ. ಮನುಷ್ಯರಿಗೆ ಎಂಟು ಕಲೆಗಳಿವೆ.

ಒಬ್ಬ ಮನುಷ್ಯನು ಅಸಾಧಾರಣನಾಗಿದ್ದರೆ, ಅವನಿಗೆ ಒಂಭತ್ತು ಕಲೆಗಳಿವೆಯೆಂದು ಹೇಳಲಾಗುತ್ತದೆ. ಭಗವಾನ್ ಪರಶುರಾಮನು ಒಂಭತ್ತು ಕಲೆಗಳನ್ನು ಹೊಂದಿದ್ದನೆಂದು ಹೇಳಲಾಗುತ್ತದೆ. ಭಗವಾನ್ ರಾಮನು ೧೨ ಕಲೆಗಳನ್ನು ಹೊಂದಿದ್ದಾನೆಂದು ಹೇಳುತ್ತಾರೆ. ಈ ವಿಷಯದಲ್ಲಿ ಭಗವಾನ್ ಹನುಮಂತನು ಅವನಿಗಿಂತ ಹೆಚ್ಚಿನವನು ಮತ್ತು ೧೪ ಕಲೆಗಳನ್ನು ಹೊಂದಿದ್ದನೆನ್ನಲಾಗುತ್ತದೆ. ಅದಕ್ಕಾಗಿಯೇ ಅವನಿಗೆ ಭಗವಾನ್ ರಾಮನಿಗೆ ಸಹಾಯ ಮಾಡಲು ಸಾಧ್ಯವಾಯಿತು.

ನಮಗಿಂತ ಹೆಚ್ಚು ಶಕ್ತಿಶಾಲಿಯಾದ ಒಬ್ಬ ವ್ಯಕ್ತಿಗೆ ಮಾತ್ರ ನಮಗೆ ಸಹಾಯ ಮಾಡಲು ಸಾಧ್ಯ.

ದೇವಿಯು ’ಷೋಡಶಕಲೆ’ ಎಂದು ಕರೆಯಲ್ಪಡುತ್ತಾಳೆ. ಇದರರ್ಥ, ಅವಳು ಎಲ್ಲಾ ದೈವಿಕ ಮತ್ತು ಶ್ರೇಷ್ಠ ಗುಣಗಳನ್ನು ಹೊಂದಿರುವಳೆಂದು ಮತ್ತು ಯಾವುದೇ ಕೊರತೆಯೂ ಇಲ್ಲವೆಂದು.

ಕೃಷ್ಣ ಪರಮಾತ್ಮನೂ ಎಲ್ಲಾ ೧೬ ಕಲೆಗಳನ್ನು ಹೊಂದಿರುವನೆಂದು ಹೇಳಲಾಗುತ್ತದೆ. ಅದಕ್ಕಾಗಿಯೇ ಅವನು ಸೋಲಹ್ ಕಲಾ ಸಂಪೂರ್ಣ ಅಥವಾ ಪೂರ್ಣ ಅವತಾರ ಎಂದು ಕರೆಯಲ್ಪಡುವುದು.

ಎಲ್ಲಾ ೧೬ ಕಲೆಗಳನ್ನು ಹೊಂದಿರುವುದೆಂದರೆ, ದೈವಿಕತೆಯ ಸಂಪೂರ್ಣ ಅರಳುವಿಕೆ ಹಾಗೂ ಪ್ರಕಟತೆಗೆ ಕಾರಣವಾಗಿರುವ ಎಲ್ಲಾ ೧೬ ಗುಣಗಳನ್ನು ಅಥವಾ ಚಿಹ್ನೆಗಳನ್ನು ಹೊಂದಿರುವುದು.

ನೀವು ದೇವಿಯನ್ನು ನೋಡಿದರೆ, ಒಂದು ಬದಿಯಲ್ಲಿ ಅವಳು ಬಹಳಷ್ಟು ಸುಂದರಳೂ, ಪ್ರೇಮ ಹಾಗೂ ಕೃಪೆಯಿಂದ ತುಂಬಿದವಳೂ ಆಗಿರುವಳು, ಆದರೆ ಇನ್ನೊಂದು ಬದಿಯಲ್ಲಿ, ಅವಳು ಕಾಳಿಮಾತೆಯೂ ಆಗಿರುವಳು (ಭಯಾನಕವೂ, ಹಿಂಸಾತ್ಮಕವೂ ಆಗಿರುವ ಒಂದು ಸ್ವರೂಪ).

ಅವಳು ಆಕರ್ಷಕಳೂ, ಪ್ರಶಾಂತಳೂ ಆಗಿರುವಳು, ಆದರೆ ಅದೇ ಸಮಯದಲ್ಲಿ, ಒಂದು ಬಹಳ ಭಯಾನಕವೂ ಹಿಂಸಾತ್ಮಕವೂ ಆದ ಮಗ್ಗಲು ಕೂಡಾ ಆಕೆಗಿದೆ. ದುರ್ಗಾದೇವಿಯು ಬಹಳ ಭಯಾನಕವೂ, ವಿಸ್ಮಯ ಹುಟ್ಟಿಸುವವಳೂ ಆದರೆ, ಲಕ್ಷ್ಮಿದೇವಿಯು ಬಹಳ ಶಾಂತಳೂ, ಆಕರ್ಷಕಳೂ ಆಗಿರುವಳು. ದೈವಿಕತೆಯ ಎಲ್ಲಾ ವಿರೋಧಾತ್ಮಕ ಅಂಶಗಳೂ ದೇವಿಯಲ್ಲಿ ಒಂದಾಗಿ ಬರುವುದನ್ನು ನೀವು ನೋಡಬಹುದು.

ಎಲ್ಲವನ್ನು ಅನುಗ್ರಹಿಸುವ ಲಕ್ಷ್ಮಿದೇವಿಯು ನಿರುಪದ್ರವಕಾರಿಯಾದ ಗೂಬೆಯ ಮೇಲೆ ಸವಾರಿ ಮಾಡುತ್ತಾಳೆ ಮತ್ತು ದುಷ್ಟತೆ ಹಾಗೂ ಅಜ್ಞಾನಗಳನ್ನು ಜಯಿಸುವ ದುರ್ಗಾದೇವಿಯು ಉಗ್ರವಾದ ಸಿಂಹದ ಮೇಲೆ ಸವಾರಿ ಮಾಡುತ್ತಾಳೆ. ಸುಮ್ಮನೇ ಕಲ್ಪಿಸಿಕೊಳ್ಳಿ, ಗೂಬೆ ಮತ್ತು ಸಿಂಹ ಇವುಗಳೆರಡನ್ನೂ ನೀವು ಎಲ್ಲಿ ನೋಡುವಿರಿ!

ಅದೇ ರೀತಿಯಲ್ಲಿ ಕೃಷ್ಣ ಪರಮಾತ್ಮನೂ ಕೂಡಾ ಎಲ್ಲಾ ಹದಿನಾರು ಕಲೆಗಳನ್ನು ಹೊಂದಿದ್ದನೆಂದು ಹೇಳಲಾಗುತ್ತದೆ. ಇದು ಯಾಕೆ ಹಾಗೆ? ಕೃಷ್ಣ ಪರಮಾತ್ಮನಲ್ಲಿ ನೀವು ಎಲ್ಲಾ ವಿಧದಲ್ಲೂ ದೈವಿಕತೆಯ ಸಂಪೂರ್ಣ ಹಾಗೂ ಒಟ್ಟಾದ ಅಭಿವ್ಯಕ್ತಿಯನ್ನು ನೋಡುವಿರಿ. ಅವನು ಅಷ್ಟೊಂದು ಪರಿಪೂರ್ಣನು.

ಅವನು ಕಳ್ಳರ ರಾಜನು. ಅವನು ಚಿಕ್ಕ ವಸ್ತುಗಳನ್ನು ಕದಿಯುವುದಿಲ್ಲ, ಅವನು ನಿಮ್ಮ ಮನಸ್ಸನ್ನೇ ಕದ್ದೊಯ್ಯುತ್ತಾನೆ. ಅದಕ್ಕಾಗಿಯೇ ಅವನು ಚಿತ್ತಚೋರ ಎಂದು ಕರೆಯಲ್ಪಡುವುದು.

ಗುಜರಾತಿನಲ್ಲಿ ಅವನು ರಣಚೋಡ್‌ರಾಯ (ರಣರಂಗವನ್ನು ಬಿಟ್ಟು ಓಡಿಹೋದವನು)ಎಂದು ಕೂಡಾ ಕರೆಯಲ್ಪಡುತ್ತಾನೆ. ಯುದ್ಧದ ಮಧ್ಯದಲ್ಲಿ ಅವನು ಯುದ್ಧಭೂಮಿಯಿಂದ ಓಡಿಹೋದನೆಂದು ಅವರು ಹೇಳುತ್ತಾರೆ. ಆದರೆ ಇನ್ನೊಂದು ಕಡೆಯಲ್ಲಿ ಅವನು, ಭೀಷ್ಮ ಪಿತಾಮಹರನ್ನು ಸೋಲಿಸಲು ಸುದರ್ಶನ ಚಕ್ರವನ್ನು ಎತ್ತಿದನು. ಹೀಗೆ ಅವನು ಬಹಳ ಧೈರ್ಯಶಾಲಿ ಮತ್ತು ಪರಾಕ್ರಮಿ ಕೂಡಾ ಆಗಿರುವನು.

ಹೀಗೆ, ಒಂದು ಕಡೆಯಲ್ಲಿ ಅವನು ಬಹಳ ಧೈರ್ಯಶಾಲಿಯಾಗಿರುವನು ಮತ್ತು ಇನ್ನೊಂದು ಬದಿಯಲ್ಲಿ ಅವನೊಬ್ಬ ಹೇಡಿಯಂತಿರುವನು. ಅವನು ಎಷ್ಟೊಂದು ಸಂಪೂರ್ಣನೆಂದು ಒಬ್ಬನಿಗೆ ಊಹಿಸಲೂ ಕೂಡಾ ಸಾಧ್ಯವಿಲ್ಲ. ಅವನು ವಿಧೇಯನೂ ಆಗಿರುವನು, ಆದರೆ ಅವನು ನಿಯಮಗಳನ್ನು ಮುರಿಯುವ ಒಬ್ಬನೂ ಆಗಿರುವನು.

ಸಾಧ್ಯವಿರುವ ಎಲ್ಲಾ ಮಗ್ಗಲುಗಳಲ್ಲಿಯೂ ಕೃಷ್ಣ ಪರಮಾತ್ಮನು ಪರಿಪೂರ್ಣನೂ, ಸಂಪೂರ್ಣನೂ ಆಗಿರುವನೆಂದು ಭಾಗವತದಲ್ಲಿ ಹಲವು ಕಡೆಗಳಲ್ಲಿ ಉಲ್ಲೇಖಿಸಲಾಗಿದೆ. ಕೃಷ್ಣ ಪರಮಾತ್ಮನೊಂದಿಗೆ ಒಬ್ಬನು ಪೈಪೋಟಿ ಮಾಡಬಾರದೆಂದು ಹೇಳಲಾಗಿರುವುದು ಅದಕ್ಕಾಗಿಯೇ. ಭಗವಾನ್ ಶ್ರೀರಾಮನ ಪಥವನ್ನು ಅನುಸರಿಸಿ ಮತ್ತು ಶ್ರೀಕೃಷ್ಣ ಪರಮಾತ್ಮ ಹೇಳುವುದನ್ನು ಕೇಳಿ. ಕೃಷ್ಣ ಪರಮಾತ್ಮನು ನಡೆದ ದಾರಿಯಲ್ಲಿ ನಡೆಯಬೇಡಿ. ನೀವು ಹೋಗಿ ಒಬ್ಬಳು ಸ್ತ್ರೀಯ ಬಟ್ಟೆಗಳನ್ನು ಕದ್ದರೆ, ನೀವೊಂದು ದೊಡ್ಡ ತೊಂದರೆಯಲ್ಲಿ ಸಿಕ್ಕಿಹಾಕುವಿರಿ.

ಪ್ರಶ್ನೆ: ಗುರುದೇವ, ಸ್ವಾವಲಂಬನೆಯೊಂದಿಗೆ ಅಹಂಕಾರವು ಹೆಚ್ಚಾಗುವುದೇ?

ಶ್ರೀ ಶ್ರೀ ರವಿ ಶಂಕರ್: ಸ್ವತಂತ್ರತೆಯ ಹೆಚ್ಚಳದೊಂದಿಗೆ ಅಥವಾ ಸ್ವಾವಲಂಬನೆಯೊಂದಿಗೆ ಅಹಂಕಾರವು ಹೆಚ್ಚಾಗಬೇಕೆಂದೇನೂ ಇಲ್ಲ. ಸ್ವಾವಲಂಬಿಗಳಾಗಿರುವುದರ ಹೊರತಾಗಿಯೂ ನಾವು ದೇವರ ಮೇಲೆ ಅವಲಂಬಿತರಾಗಿದ್ದೇವೆ; ನಾವು ಪರಮಾತ್ಮನ ಮೇಲೆ ಅವಲಂಬಿತರಾಗಿದ್ದೇವೆ ಎಂಬುದನ್ನು ನಾವು ಅರಿತುಕೊಳ್ಳಬೇಕು.

ಪ್ರಶ್ನೆ: ಗುರುದೇವ, ದಯವಿಟ್ಟು ನಮಗೆ ಮಾರ್ಗದರ್ಶನ ಮಾಡಿ. ಇತ್ತೀಚೆಗೆ ಪಾನ್ ಪರಾಗ್, ಗುಟ್ಕಾ, ತಂಬಾಕು ಮೊದಲಾದವುಗಳ ಬಳಕೆಯು ಮಕ್ಕಳಲ್ಲಿ, ದೊಡ್ದವರಲ್ಲಿ, ಹಾಗೆಯೇ ಮಹಿಳೆಯರಲ್ಲೂ ಕೂಡಾ ಬಹಳಷ್ಟು ಹೆಚ್ಚಿದೆ. ಇದನ್ನು ನಾವು ಹೇಗೆ ನಿಲ್ಲಿಸಬಹುದು?

ಶ್ರೀ ಶ್ರೀ ರವಿ ಶಂಕರ್: ಇದು ಪ್ರಾಥಮಿಕವಾಗಿ ತಾಯಂದಿರ ಜವಾಬ್ದಾರಿಯಾಗಿದೆ. ಆರಂಭದಿಂದಲೇ ತಾಯಂದಿರು ತಮ್ಮ ಮಕ್ಕಳ ಮೇಲೆ ನಿರ್ಬಂಧವನ್ನು ಹಾಕಿದರೆ, ಆಗ ಅವರು ಯಾವತ್ತೂ ಅಂತಹ ತಪ್ಪುದಾರಿಯನ್ನು ಅವಲಂಬಿಸುವುದಿಲ್ಲ.

ಸಾಧಾರಣವಾಗಿ ಏನಾಗುತ್ತದೆಯೆಂದರೆ, ಈ ದಿನಗಳಲ್ಲಿ ತಾಯಂದಿರು ಮಕ್ಕಳನ್ನು ಮುಕ್ತವಾಗಿ ಹೋಗಲು ಬಿಡುತ್ತಾರೆ.

ಬಾಲ್ಯದ ದಿನಗಳಲ್ಲಿಯೇ, ತಾಯಂದಿರು ಮತ್ತು ತಂದೆಯಂದಿರು ಮನೆಯಲ್ಲಿನ ಮಕ್ಕಳ ಮನಸ್ಸುಗಳಲ್ಲಿ ಅಂತಹ ತಡೆಗಳನ್ನು ಸೃಷ್ಟಿಸಬೇಕು. ತಾವು ತಂಬಾಕನ್ನು ಮುಟ್ಟಲೂಬಾರದೆಂದು ಮಕ್ಕಳು ಯೋಚಿಸುವಂತೆ ಮಾಡಬೇಕು.

ಶಾಖಾಹಾರಿ ಮನೆಗಳಲ್ಲಿ, ಯಾವುದೇ ರೀತಿಯ ಮಾಂಸಾಹಾರ, ಮೊಟ್ಟೆಗಳು, ಮಾಂಸ ಅಥವಾ ಮೀನನ್ನು ಮುಟ್ಟದಂತೆ ಹೆತ್ತವರು ಮಕ್ಕಳ ಮನಸ್ಸುಗಳಲ್ಲಿ ಬಹಳ ಆರಂಭದಿಂದಲೇ ಒಂದು ಕಟ್ಟುನಿಟ್ಟಾದ ತಡೆಗೋಡೆಯನ್ನು ಸೃಷ್ಟಿಸುತ್ತಾರೆ. ಚಿಕ್ಕ ವಯಸ್ಸಿನಲ್ಲೇ ಮಕ್ಕಳ ಮನಸ್ಸುಗಳಲ್ಲಿ ಇದೊಂದು ಕಟ್ಟುನಿಟ್ಟಾದ ಅಭ್ಯಾಸವಾದಾಗ, ಅವರು ಮಾಂಸಾಹಾರದ ಸನಿಹ ಕೂಡಾ ಹೋಗುವುದಿಲ್ಲ.

ಹೀಗಾಗಿ ಇದೇ ರೀತಿಯಲ್ಲಿ, ತಂಬಾಕು ಅಗಿಯುವುದರ, ಹೊಗೆಬತ್ತಿ ಸೇದುವುದರ ಮತ್ತು ಮದ್ಯಪಾನ ಮಾಡುವುದರ ವಿರುದ್ಧ ಹೆತ್ತವರು ಮಕ್ಕಳ ಮನಸ್ಸುಗಳಲ್ಲಿ ಕಟ್ಟುನಿಟ್ಟಾದ ತಡೆಗಳನ್ನು ಜಾರಿಗೊಳಿಸುವುದರ ಅಗತ್ಯವಿದೆ. ಇಲ್ಲಿ ಕುಳಿತಿರುವ ನಿಮ್ಮೆಲ್ಲರಲ್ಲೂ ನಾನು ಕೇಳಲು ಬಯಸುತ್ತೇನೆ. ಮಾದಕ ದ್ರವ್ಯ ಸೇವಿಸುವ ಅಥವಾ ಧೂಮಪಾನ ಮಾಡುವುದರ ವಿರುದ್ಧವಾಗಿ ನಿಮಗೆಲ್ಲರಿಗೂ ಎಚ್ಚರಿಕೆಯನ್ನು ನೀಡಲಾಗಿಲ್ಲವೇ? ಅಲ್ಲವೇ? ಮಾದಕ ದ್ರವ್ಯಗಳು ಮತ್ತು ಧೂಮಪಾನ ಮಾಡುವುದರ ವಿರುದ್ಧವಾಗಿ ಇಲ್ಲಿರುವ ಎಷ್ಟು ಮಂದಿ ತಮ್ಮ ಮನೆಗಳಲ್ಲಿ ತಮ್ಮ ಹೆತ್ತವರಿಂದ ಈ ಕಟ್ಟುನಿಟ್ಟಾದ ತಡೆಯನ್ನು ಪಡೆದಿದ್ದೀರಿ?

(ಸಭಿಕರಲ್ಲಿ ಹಲವರು ಕೈಗಳನ್ನು ಮೇಲೆತ್ತುತ್ತಾರೆ).

ನೋಡಿ! ಹಲವಾರು ಮಂದಿಗೆ ತಮ್ಮ ಆರಂಭದ ದಿನಗಳಿಂದಲೇ ಸರಿಯಾದ ಅಭ್ಯಾಸವನ್ನು ಅನುಸರಿಸುವಂತೆ ಮಾಡಲಾಗಿದೆ.

ಅಂತಹ ವಸ್ತುಗಳನ್ನು ಮುಟ್ಟದಂತೆ ಅಥವಾ ಬಳಸದಂತೆ ಅವರಿಗೆ ಬಾಲ್ಯದಲ್ಲಿಯೇ ಅಂತಹ ತಡೆಗಳನ್ನು ಮಾಡಲಾಗಿದೆ. ಮಕ್ಕಳ ಮೇಲೆ ಈ ತಡೆಗಳನ್ನು ಜಾರಿಗೊಳಿಸಲು ತಾಯಂದಿರಿಗೆ ಮಾತ್ರ ಸಾಧ್ಯ, ಇಲ್ಲದಿದ್ದರೆ ಮಕ್ಕಳನ್ನು ಇಲ್ಲಿಗೆ ಕರೆತನ್ನಿ ಮತ್ತು ಅವರು ಏಳರಿಂದ ಹತ್ತು ದಿನಗಳವರೆಗೆ ಕೋರ್ಸ್‌ಗಳನ್ನು ಮಾಡುವಂತೆ ಮಾಡಿ.  ಅವರ ಎಲ್ಲಾ ದುರಭ್ಯಾಸಗಳು ’ಸೋಹಂ’ನೊಂದಿಗೆ (ಸುದರ್ಶನ ಕ್ರಿಯೆಯನ್ನು ಉಲ್ಲೇಖಿಸುತ್ತಾ) ತೊಳೆದು ಹೋಗುವಂತೆ ನಾವು ಖಚಿತಪಡಿಸುವೆವು ಮತ್ತು ಅವರು ಶಕ್ತಿ ಕ್ರಿಯೆಯನ್ನು ಅಭ್ಯಾಸ ಮಾಡುವಂತೆ ಮಾಡಿ ಅವರನ್ನು ಶಕ್ತಿಶಾಲಿಗಳನ್ನಾಗಿಯೂ ಮಾಡುವೆವು.

ಪ್ರಶ್ನೆ: ಗುರುದೇವ, ಒಬ್ಬ ಧ್ಯಾನ ಮಾಡುವವನಾಗಿ, ಧ್ಯಾನವು ನನ್ನ ಸುತ್ತಲಿನ ಜನರ ಮೇಲೆ ಒಂದು ಪ್ರಭಾವ ಹೊಂದಿದೆ ಎಂಬುದು ನನಗೆ ತಿಳಿದಿದೆ. ಹಾಗಾದರೆ, ಧ್ಯಾನವು ಎಲ್ಲದಕ್ಕಿಂತ ದೊಡ್ಡ ಸೇವೆಯೇ?

ಶ್ರೀ ಶ್ರೀ ರವಿ ಶಂಕರ್: ಅದರರ್ಥ ನೀನು ಸುಮ್ಮನೆ ಕುಳಿತುಕೊಂಡು ಧ್ಯಾನ ಮಾಡಬೇಕು ಮತ್ತು ಯಾವುದೇ ಸೇವೆಯನ್ನೂ ಮಾಡುವುದು ಬೇಡವೆಂದೇ? ಇಲ್ಲ, ನಾನದನ್ನು ಒಪ್ಪುವುದಿಲ್ಲ. ನೀನು ಸೇವೆಯನ್ನು ಕೂಡಾ ಮಾಡಬೇಕು ಮತ್ತು ಧ್ಯಾನ ಕೂಡಾ ಆವಶ್ಯಕ.