ಶುಕ್ರವಾರ, ಫೆಬ್ರವರಿ 28, 2014

ಸೃಷ್ಟಿ ಮತ್ತು ಸೃಷ್ಟಿಕರ್ತ

ಫೆಬ್ರುವರಿ ೨೮, ೨೦೧೪
ಬೆಂಗಳೂರು, ಭಾರತ

ಪ್ರಶ್ನೆ: ಗುರುದೇವ, ಒಂದು ದಿನ ನೀವು, ಬಾಗಿಲು ಹಾಗೂ ಕಿಟಿಕಿಗಳು ಆಗೂ ಅವುಗಳೆಲ್ಲವನ್ನೂ ಮರವಾಗಿ ನೋಡುವ ಉದಾಹರಣೆಯೊಂದಿಗೆ ದ್ವೈತ ಮತ್ತು ಅದ್ವೈತಗಳ ಬಗ್ಗೆ ಮಾತನಾಡಿದಿರಿ. ಹಾಗಾದರೆ ಇದೇ ಉದಾಹರಣೆಯಲ್ಲಿ ವಿಶಿಷ್ಟಾದ್ವೈತದ (ವೇದಾಂತ ತತ್ವಜ್ಞಾನದ ಒಂದು ಉಪಶಾಖೆ) ತತ್ವಜ್ಞಾನವು ಎಲ್ಲಿ ಹೊಂದುತ್ತದೆ?

ಶ್ರೀ ಶ್ರೀ ರವಿ ಶಂಕರ್: ಎರಡೂ (ಸೃಷ್ಟಿ ಮತ್ತು ಚೇತನಗಳು, ದ್ವೈತ ಮತ್ತು ಅದ್ವೈತಗಳೆರಡೂ ಆಗಿರುವುದು) ನಿಜವೆಂದು ವಿಶಿಷ್ಟಾದ್ವೈತವು ಹೇಳುತ್ತದೆ. ಹೀಗೆ ವಿಶಿಷ್ಟಾದ್ವೈತದ ಪ್ರಕಾರ, ಅದು ಕೂಡಾ ಸರಿ ಮತ್ತು ಇದು ಕೂಡಾ ಸರಿ. ಅದ್ವೈತವು ಸಾಮಾನ್ಯವಾಗಿ ಇತರ ವಿಷಯಗಳನ್ನು ನಿಜವೆಂದು ಪರಿಗಣಿಸುವುದಿಲ್ಲ (ಅಂದರೆ ಸೃಷ್ಟಿಯಲ್ಲಿ ನಿಜಕ್ಕೂ ಎರಡಿಲ್ಲವೆಂದು ಅದ್ವೈತವು ಪ್ರತಿಪಾದಿಸುತ್ತದೆ).

ನಿಮಗೆ ಗೊತ್ತೇ, ಸೃಷ್ಟಿಯು ’ಸೃಷ್ಟಿಸಲ್ಪಟ್ಟಿತು’ ಎಂಬ ಇಡೀ ಕಲ್ಪನೆಯೇ ತಪ್ಪು. ಅದು ಸೃಷ್ಟಿಸಲ್ಪಟ್ಟಿತೆಂದು ಯಾರು ಹೇಳಿದರು? ಅದು ಯಾವತ್ತೂ ಸೃಷ್ಟಿಸಲ್ಪಡಲಿಲ್ಲ. ಒಂದು ಮರೀಚಿಕೆಯು ಯಾವತ್ತೂ ಸೃಷ್ಟಿಸಲ್ಪಡುವುದಿಲ್ಲ. ಒಂದು ಬಿಸಿಲ್ಗುದುರೆಯೆಂದರೆ, ಯಾವುದು ಇರುವಂತೆ ಕಾಣಿಸುವುದೋ, ಆದರೆ ವಾಸ್ತವವಾಗಿ ಇಲ್ಲವೋ ಅಂತಹ ಒಂದು ಭ್ರಮೆ.

ನೀರಿರುವ ಒಂದು ಗಾಜಿನ ಪಾತ್ರೆಯಲ್ಲಿ ನೀವೊಂದು ಪೆನ್ನನ್ನು ಹಾಕಿದರೆ, ಅದು ಬಾಗಿದಂತೆ ಕಾಣಿಸುತ್ತದೆ. ಈ ಬಾಗುವಿಕೆಯು ಯಾವಾಗ ಸೃಷ್ಟಿಸಲ್ಪಟ್ಟಿತು? ಅದು ಸೃಷ್ಟಿಸಲ್ಪಡಲಿಲ್ಲ. ಅದು ಕೇವಲ ಹಾಗೆ ಕಾಣಿಸುತ್ತದೆ. ಹೀಗೆ ಆ ಅರ್ಥದಲ್ಲಿ, ಯಾರೂ ಈ ವಿಶ್ವವನ್ನು ಸೃಷ್ಟಿಸಲಿಲ್ಲ.  ಅದು ಕೇವಲ ಇದೆ. ಅದು ಕೇವಲ ಆ ರೀತಿಯಲ್ಲಿರುವಂತೆ ಕಾಣಿಸುತ್ತದೆ. ಅದು ನಿಜವಲ್ಲ.
ಸೂರ್ಯನು ಅಸ್ತಮಿಸುವಾಗ, ಅದು ನಿಜವಾಗಿಯೂ ಅಸ್ತಮಿಸುವುದಿಲ್ಲ. ಅದು ಅಸ್ತಮಿಸುವಂತೆ ಕಾಣಿಸುತ್ತದೆ. ಅಷ್ಟೇ.

ಪ್ರಶ್ನೆ: ಪ್ರೀತಿಯ ಗುರುದೇವ, ಪ್ರಾಚೀನ ಭಾರತವು ಹಲವಾರು ಪುರಾತನ ಸಂಪ್ರದಾಯಗಳಿಗೆ ಸಾಕ್ಷಿಯಾಗಿತ್ತು. ಅವುಗಳು ಈಗ ಅಳಿದು ಹೋಗಿವೆ. ಅಂತಹ ಒಂದು ಪದ್ಧತಿಯೆಂದರೆ ದೇವದಾಸಿ ಪದ್ಧತಿ. ಈ ಪದ್ಧತಿಯು ಪ್ರಪಂಚಕ್ಕೆ ಭರತನಾಟ್ಯಂ, ಒಡಿಸ್ಸಿ ಮೊದಲಾದಂತಹ ಸಾಂಪ್ರದಾಯಿಕ ನೃತ್ಯ ರೂಪಗಳನ್ನು ನೀಡಿದೆ. ಭಾರತೀಯ ಶಾಸ್ತ್ರೀಯ ನೃತ್ಯ ರೂಪಗಳನ್ನು ಅಭ್ಯಸಿಸುವವರು, ಇವುಗಳು ಶರೀರ, ಮನಸ್ಸು ಮತ್ತು ಆತ್ಮಗಳ ಯೋಗವೆಂಬುದನ್ನು (ಇಲ್ಲಿ ಸಂಯೋಗ ಎಂದು) ತಿಳಿದಿರುವರು. ಭಾರತದಲ್ಲಿ ಕಲಾರೂಪಗಳು ಮತ್ತು ಆಧ್ಯಾತ್ಮದ ನಡುವೆ ಒಂದು ಸಂಬಂಧ ಇರುವುದಾಗಿ ತೋರುತ್ತದೆ. ತಾವು ದಯವಿಟ್ಟು ಅದರ ಬಗ್ಗೆ ಸ್ವಲ್ಪ ಮಾತನಾಡಬಲ್ಲಿರೇ?

ಶ್ರೀ ಶ್ರೀ ರವಿ ಶಂಕರ್: ಹೌದು, ಖಂಡಿತಾ. ಕಲೆ, ನೃತ್ಯ, ಸಂಗೀತ ಮತ್ತು ಆಧ್ಯಾತ್ಮಗಳು ಸಂಬಂಧ ಹೊಂದಿವೆ. ಆದರೆ ಮಧ್ಯಕಾಲೀನ ಯುಗಗಳಲ್ಲಿ, ಮೊಗಲರ ಆಳ್ವಿಕೆಯ ಕಾಲದಲ್ಲಿ, ಆ ಸಮಯದಲ್ಲಿ ಆಳುತ್ತಿದ್ದ ರಾಜರು ಇದನ್ನು ಬಹಳ ಒಳ್ಳೆಯದೆಂದು ಪರಿಗಣಿಸಿರಲಿಲ್ಲ. ವಿಶೇಷವಾಗಿ ಉತ್ತರ ಭಾರತದಲ್ಲಿ, ನರ್ತಕರು ಮತ್ತು ಈ ಕಲಾರೂಪಗಳನ್ನು ಅಭ್ಯಸಿಸುವವರನ್ನು ಅಸಡ್ಡೆಯಿಂದ ನೋಡಲಾಗುತ್ತಿತ್ತು. ಇದು ಮಧ್ಯ ಯುಗಗಳಲ್ಲಿ ಮಾತ್ರ ಆಯಿತು. ಅದರ ಮೊದಲು, ಸಂಗೀತಗಾರರು ಮತ್ತು ನರ್ತಕರು ಗೌರವಿಸಲ್ಪಡುತ್ತಿದ್ದರು.

ಆದರೆ ಅವರನ್ನು ಅಸಡ್ಡೆಯಿಂದ ಕಾಣುತ್ತಿದ್ದಾಗ, ನರ್ತಿಸುತ್ತಿದ್ದ ಮತ್ತು ತಮ್ಮ ಜೀವನವನ್ನು ನೃತ್ಯ ಹಾಗೂ ಸಂಗೀತಗಳಿಗೆ ಮುಡಿಪಾಗಿಟ್ಟಿದ್ದ ಸ್ತ್ರೀಯರನ್ನು ಒಂದು ವಿಧದಲ್ಲಿ ಪ್ರತ್ಯೇಕವಾಗಿರಿಸಲಾಯಿತು. ಜನರು ಅವರನ್ನು ವಿವಾಹವಾಗುತ್ತಿರಲಿಲ್ಲ ಮತ್ತು ಕುಟುಂಬದಲ್ಲಿ ಆ ಕ್ಷಮತೆಯಿರುವ ಜನರನ್ನು ಹೊಂದಿರುವುದು ಒಂದು ಒಳ್ಳೆಯ ವಿಷಯವೆಂದು ಪರಿಗಣಿಸಲಾಗುತ್ತಿರಲಿಲ್ಲ. ಹೀಗೆ ಅದು ತನ್ನದೇ ಆದ ಒಂದು ವರ್ಗವಾಯಿತು, ಮತ್ತು ನಂತರ ಅದು ದೇವದಾಸಿ ಎಂದು ಕರೆಯಲ್ಪಟ್ಟಿತು. ಅದು ದುರದೃಷ್ಟಕರ. ಆದರೆ ಆನಂತರ ಈ ಕಳಂಕವನ್ನು ತೆಗೆದುಹಾಕಲಾಯಿತು.

ನಿಮಗೆ ಗೊತ್ತೇ, ಭಾರತದ ಬಹಳ ಸುಪ್ರಸಿದ್ಧ ಗಾಯಕಿಯರಲ್ಲಿ ಒಬ್ಬರಾದ, ಭಾರತದ ಕೋಗಿಲೆ ಎಂದು ಕೂಡಾ ತಿಳಿಯಲ್ಪಡುವ ಶ್ರೀಮತಿ ಎಮ್.ಎಸ್.ಸುಬ್ಬಲಕ್ಷ್ಮಿಯವರು ಹಾಡಲು ಪ್ರಾರಂಭಿಸಿದಾಗ, ಬಹುತೇಕ ಇಡೀ ಸಮಾಜವು ಅವರನ್ನು ಬಹಿಷ್ಕೃತಗೊಳಿಸಿತು. ಒಬ್ಬ ವ್ಯಕ್ತಿಯು ಅವರನ್ನು ವಿವಾಹವಾದನು ಮತ್ತು ಸಂಗೀತದ ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸಿ ಅದಕ್ಕೆ ಸಲ್ಲತಕ್ಕ ಮರ್ಯಾದೆಯನ್ನು ತಂದು ಕೊಟ್ಟನು. ಶ್ರೀಮಾನ್ ಕಲ್ಕಿ ಸದಾಶಿವಮ್ ಅವರು ಒಬ್ಬ ಬಹಳ ಮಹಾನ್ ಚಿಂತಕರು ಹಾಗೂ ಪತ್ರಕರ್ತರು. ಎಮ್.ಎಸ್. ಸುಬ್ಬಲಕ್ಷ್ಮಿಯವರ ಮೊದಲು, ಸಂಗೀತ ಹಾಗೂ ನೃತ್ಯ ರೂಪಗಳು ತಮಗೆ ಸಿಗಬೇಕಾಗಿದ್ದ ಆ ಉನ್ನತ ಗೌರವವನ್ನು ಪಡೆದಿರಲಿಲ್ಲ.

ಖಂಡಿತಾ, ಗಾಯಕರನ್ನು ಮೆಚ್ಚಲಾಗುತ್ತಿತ್ತು, ಆದರೆ ಗಾಯಕಿಯರನ್ನಲ್ಲ. ಯಾರಾದರೂ ಸಿನೆಮಾಗಳಲ್ಲಿ ನಟಿಸಿದರೆ ಅಷ್ಟೇ, ಅವರ ಮರ್ಯಾದೆ ಆಗಲೇ ಅಲ್ಲಿಯೇ ಮುಗಿಯಿತು. ಸಿನೆಮಾಗಳಲ್ಲಿ ಅಭಿನಯಿಸುವುದಕ್ಕೆ ಕೂಡಾ ದೊಡ್ಡದೊಂದು ಕಳಂಕ ಅಂಟಿಕೊಂಡಿತ್ತು, ಆದರೆ ಅದೃಷ್ಟವಶಾತ್ ನಾವು, ಜನರು ಅಷ್ಟೊಂದು ಭೇದಭಾವವನ್ನು ಹೊಂದಿದ್ದ ಆ ಕತ್ತಲಿನ ಯುಗಗಳನ್ನು ದಾಟಿದ್ದೇವೆ.

ಪ್ರಶ್ನೆ: ಗುರುದೇವ, ಒಂದು ಕ್ರಿಯೆಯು ಪ್ರಜ್ಞೆಯ ಮೇಲೆ ಒಂದು ಅಚ್ಚನ್ನು ಬಿಟ್ಟುಹೋಗುವುದು ಯಾವಾಗ? 

ಶ್ರೀ ಶ್ರೀ ರವಿ ಶಂಕರ್: ಒಂದು ಕ್ರಿಯೆಯು ಅತಿಯಾಗಿ ಸುಖದಾಯಕವಾಗಿರುವಾಗ ಅಥವಾ ಅತಿಯಾಗಿ ನೋವುದಾಯಕವಾಗಿರುವಾಗ, ಅದೊಂದು ಗುರುತನ್ನು ಬಿಡುತ್ತದೆ.

ಪ್ರಶ್ನೆ: ಗುರುದೇವ, ಭಗವಂತ ಶಿವ ಮತ್ತು ರುದ್ರಾಕ್ಷ ಮಣಿಗಳ ನಡುವೆ ಒಂದು ಸಂಬಂಧವಿರುವುದಾಗಿ ತೋರುತ್ತದೆ. ರುದ್ರಾಕ್ಷವು ಹಲವು ಮುಖಗಳನ್ನು ಹೊಂದಿದೆ; ಒಂದು ಮುಖ, ಎರಡು ಮುಖಗಳು, ಹನ್ನೆರಡು ಮುಖಗಳು, ಹೀಗೆ. ಅದರ ಅರ್ಥವೇನು?

ಶ್ರೀ ಶ್ರೀ ರವಿ ಶಂಕರ್: ನೀನು ಅದರ ಬಗ್ಗೆ ಚಿಂತಿಸಬೇಡ. ಅದು ಕೇವಲ, ರುದ್ರಾಕ್ಷವನ್ನು ಮಾರುವವರಿಂದ ಬಳಸಲಾಗುವ ಒಂದು ಮಾರ್ಕೆಟಿಂಗ್ ತಂತ್ರವಾಗಿದೆ. ಏಕಮುಖವುಳ್ಳ ರುದ್ರಾಕ್ಷ ಮಣಿಯು, ಎರಡು ಮುಖವುಳ್ಳದ್ದಕ್ಕಿಂತ ದೊಡ್ಡದಾಗಿದೆ ಅಷ್ಟೇ.

ಮುಖ್ಯವಾದ ಸಂಗತಿಯೆಂದರೆ ನೀವು ಏಕಮುಖಿಯಾಗಿರಬೇಕು (ಭಕ್ತಿಯಲ್ಲಿ). ನೀವು ಧರಿಸುವ ರುದ್ರಾಕ್ಷಕ್ಕೆ ಒಂದೋ ಅಥವಾ ಹತ್ತೋ ಅಥವಾ ಹದಿನೈದು ಮುಖಗಳಿವೆಯೋ ಎಂಬುದಾಗಿ ಚಿಂತಿಸಬೇಡಿ. ನಾನಿದಕ್ಕೆ ಅಷ್ಟೊಂದು ಮಹತ್ವವನ್ನು ನೀಡುವುದಿಲ್ಲ ಮತ್ತು ನೀವೂ ಕೊಡುವುದನ್ನು ನಾನು ಬಯಸುವುದಿಲ್ಲ.

ರುದ್ರಾಕ್ಷವು ಒಳ್ಳೆಯದಾಗಿದ್ದರೆ ಮತ್ತು ಅದು ನಿಮ್ಮ ಶರೀರಕ್ಕೆ ಏನಾದರೂ ಒಳ್ಳೆಯದನ್ನು ಮಾಡುವುದಾದರೆ, ಆಗ ಅಷ್ಟು ಸಾಕು. ನಿಮಗೆ ಅದನ್ನು ಧರಿಸಬೇಕನ್ನಿಸಿದರೆ, ಅದನ್ನು ಧರಿಸಿ, ಅಲ್ಲದಿದ್ದರೆ, ನೀವು ಧರಿಸದಿದ್ದರೆ ಅದೇನೂ ಪರವಾಗಿಲ್ಲ.
ರುದ್ರಾಕ್ಷಗಳು ಜೀವನ್ಮರಣದ ಪ್ರಶ್ನೆಯಲ್ಲ. ನೀವೊಂದು ಹತ್ತು ಮಣಿಗಳ ಮಾಲೆಯನ್ನು ಧರಿಸಿದರೆ ನಿಮಗೆ ಜ್ಞಾನೋದಯವಾಗುವುದೆಂದೇನೂ ಇಲ್ಲ. ಕಾಗೆಗಳು ಕೂಡಾ ರುದ್ರಾಕ್ಷ ಮರದ ಮೇಲೆ ಕುಳಿತುಕೊಳ್ಳುತ್ತವೆ, ಅವುಗಳಿಗೆ ಜ್ಞಾನೋದಯವಾಗುವುದಿಲ್ಲ. ನಮ್ಮ ಆಶ್ರಮದಲ್ಲಿ ಕೆಲವು ಮರಗಳಿವೆ.

ಹೌದು, ಅದು ಕೆಲವು ಶಾರೀರಿಕ ಹಾಗೂ ಶಕ್ತಿಯುತ ಪರಿಣಾಮವನ್ನು ಹೊಂದಿದೆ, ಆದರೆ ನೀವದಕ್ಕೆ ಅತಿಯಾದ ಪ್ರಾಮುಖ್ಯತೆಯನ್ನು ಕೊಡಬೇಕಾಗಿಲ್ಲ.

ಪ್ರಶ್ನೆ: ಗುರುದೇವ, ಶಿವನ ಆಸನವು ನಿರ್ವಾಣ, ಅವನ ಉಪಸ್ಥಿತಿಯು ಪರಮಾನಂದ ಮತ್ತು ಅವನು ತನ್ನ ಸುತ್ತಲೂ ಸಂತೋಷವನ್ನು ಹರಡುವನೆಂದು ನಿನ್ನೆ ನಮಗೆ ಹೇಳಲಾಯಿತು. ದಯವಿಟ್ಟು ನೀವು ಇದನ್ನು ವಿವರಿಸಬಲ್ಲಿರಾ?

ಶ್ರೀ ಶ್ರೀ ರವಿ ಶಂಕರ್: ನೀನು ಯಾಕೆ ನನಗೆ ತೊಂದರೆಯನ್ನು ನೀಡುತ್ತಿರುವೆ? ನೀನದನ್ನು ಅರ್ಥಮಾಡಿಕೊಳ್ಳುವಂತೆ ನಾನು ನಿನ್ನನ್ನು ಪೀಡಿಸುವುದಿಲ್ಲ, ಹಾಗಾದರೆ ನಿನಗದನ್ನು ಅರ್ಥ ಮಾಡಿಸುವಂತೆ ನೀನು ಯಾಕೆ ನನ್ನನ್ನು ಪೀಡಿಸುವೆ?
ಇವುಗಳೆಲ್ಲಾ ನಿಮಗೆ ನೀಡಲಾಗಿರುವ ಸೂಕ್ತಿಗಳು ಮತ್ತು ಇವುಗಳನ್ನು ವಿಚಾರ ಮಾಡಲು ಹಾಗೂ ಅರ್ಥವನ್ನು ತಿಳಿಯಲಿರುವ ಬುದ್ಧಿಯನ್ನು ನಿಮಗೆ ನೀಡಲಾಗಿದೆ.

ಗುರುಗಳು ದೀರ್ಘವಾದ ಪ್ರವಚನಗಳನ್ನು ನೀಡಬೇಕಾಗಿಲ್ಲ. ಅವರು ನಿಮಗೆ ಕೇವಲ ಸಾರವನ್ನು ಮಾತ್ರ ನೀಡುವರು. ನೀವು ಅದನ್ನು ಮನನ ಮಾಡಿ,  ಅದರ ಮೇಲೆ ವಿಚಾರ ಮಾಡಬೇಕು ಹಾಗೂ ಅದು ನಿಮ್ಮೊಳಗೆ ತೆರೆದುಕೊಳ್ಳುವುದು.

ಪ್ರಶ್ನೆ: ಗುರುದೇವ, ಎಲ್ಲವನ್ನೂ ಬಿಟ್ಟುಬಿಡಿರೆಂದು ವೇದಾಂತವು ಹೇಳುತ್ತದೆ, ಆದರೆ ನಮ್ಮ ಧರ್ಮಗ್ರಂಥಗಳು ಎಲ್ಲವನ್ನೂ ಸ್ವೀಕರಿಸುವಂತೆ ಸಲಹೆ ನೀಡುತ್ತವೆ. ಉತ್ತಮವಾದ ಆಯ್ಕೆ ಯಾವುದು?

ಶ್ರೀ ಶ್ರೀ ರವಿ ಶಂಕರ್: ಬಿಟ್ಟುಬಿಡುವುದಕ್ಕಾಗಿ, ಮೊದಲಿಗೆ ನೀವು ಯಾವುದನ್ನಾದರೂ ಹಿಡಿದುಕೊಂಡಿರಬೇಕು. ಹೀಗಾಗಿ ಎರಡೂ ಸರಿ. ಒಬ್ಬನು ಬಸ್ಸಿನೊಳಕ್ಕೆ ಹತ್ತಲು ಹಾಗೂ ಇನ್ನೊಬ್ಬನು ಬಸ್ಸಿನಿಂದ ಇಳಿಯಲು ಹೇಳುತ್ತಿರುವುದಾದರೆ; ನೀವು ಬಸ್ಸಿನೊಳಕ್ಕೆ ಹತ್ತದೆ, ನಿಮಗೆ ಅದರಿಂದ ಇಳಿಯಲು ಸಾಧ್ಯವಿಲ್ಲ. ಹೀಗಾಗಿ ನೀವು ಎರಡನ್ನೂ ಮಾಡಬೇಕು.

ಪ್ರಶ್ನೆ: ಗುರುದೇವ, ಶಿವನು ಭೂತನಾಥನೆಂದು ಕರೆಯಲ್ಪಡುತ್ತಾನೆ ಹಾಗೂ ಅವನು ಭೂತಗಳು ಮತ್ತು ಆತ್ಮಗಳಿಂದ ಸುತ್ತುವರಿಯಲ್ಪಟ್ಟಿದ್ದಾನೆ. ಭೂತಗಳು ನಿಜಕ್ಕೂ ಅಸ್ತಿತ್ವದಲ್ಲಿವೆಯೇ?

ಶ್ರೀ ಶ್ರೀ ರವಿ ಶಂಕರ್: ಶಿವನು ಅಸ್ತಿತ್ವದಲ್ಲಿರುವನೇ ಎಂದು ನೀನು ನನ್ನಲ್ಲಿ ಕೇಳಿದರೆ, ನಾನು ಉತ್ತರಿಸಬಲ್ಲೆ, ಹೌದು! ಆದರೆ ಅವನ ಸುತ್ತಲಿರುವ ಭೂತಗಳ ಬಗ್ಗೆ ನನಗೆ ತಿಳಿಯದು (ನಗು).

ಹೌದು, ಭೂತಗಳು ಅಸ್ತಿತ್ವದಲ್ಲಿವೆ, ಆದರೆ ಅವುಗಳು ಅವನಿಂದ ಭಿನ್ನವಾಗಿಲ್ಲ. ಅವುಗಳು ಅವನಲ್ಲಿವೆ.

ಐದು ತತ್ವಗಳು ಪಂಚಭೂತಗಳೆಂದು ಕರೆಯಲ್ಪಡುತ್ತವೆ. ಹೀಗೆ, ವಾಯು, ಜಲ, ಅಗ್ನಿ, ಭೂಮಿ ಮತ್ತು ಆಕಾಶ ಇವುಗಳು ಒಟ್ಟಾಗಿ ಐದು ಭೂತಾತ್ಮಗಳು ಎಂದು ಕರೆಯಲ್ಪಡುತ್ತವೆ. ಕೆಲವು ಆತ್ಮಗಳು ಕೂಡಾ ಭೂತಗಳಾಗುತ್ತವೆ ಮತ್ತು ಅದು ಯಾಕೆಂದರೆ, ಶರೀರವನ್ನು ತ್ಯಜಿಸಿದ ಬಳಿಕವೂ ಅವುಗಳಿಗೆ ತಮ್ಮ ವಾಸನೆಗಳನ್ನು (ಮನಸ್ಸಿನ ರಾಗದ್ವೇಷಗಳಿಂದಾಗಿ ಇರುವ ಅಚ್ಚುಗಳು) ಬಿಟ್ಟುಬಿಡಲು ಸಾಧ್ಯವಾಗುವುದಿಲ್ಲ. ಅದು ಯಾಕೆಂದರೆ, ಆತ್ಮವು ಶರೀರವನ್ನು ಬಿಟ್ಟುಹೋದ ಬಳಿಕವೂ, ಅದುವೇ ಅನಂತ ಪ್ರಕಾಶ ಅಥವಾ ಚೇತನವೆಂಬ ಅರಿವಿನ ಉದಯವಾಗುವುದಿಲ್ಲ.

ಅದು ಹೇಗೆಂದರೆ, ಆಹಾರವು ಅವರ ಮುಂದಿದೆ ಹಾಗೂ ಅವರು ತಿನ್ನಲು ಯೋಚಿಸುತ್ತಿದ್ದಾರೆ, ಆದರೆ ಅವರಿಗದನ್ನು ನಿಜಕ್ಕೂ ತಿನ್ನಲು ಸಾಧ್ಯವಾಗುವುದಿಲ್ಲ.

’ಭೂತಕಾಲ’ ಎಂಬ ಶಬ್ದದ ಅರ್ಥ ಹಿಂದೆ ಆಗಿಹೋದುದು ಎಂದು. ಇದು ಯಾಕೆಂದರೆ, ಅದು ಈಗಾಗಲೇ ಆಗಿಹೋಗಿದೆ, ಆದರೂ ಒಬ್ಬನು ಅದರ ಅಚ್ಚುಗಳನ್ನು ಹಿಡಿದಿಟ್ಟುಕೊಂಡಿದ್ದಾನೆ ಮತ್ತು ಅದನ್ನು ಬಿಟ್ಟುಬಿಡಲು ಸಾಧ್ಯವಾಗುವುದಿಲ್ಲ. ಭೂತಗಳು ಕೂಡಾ ಆತ್ಮಗಳು, ಆದರೆ ಅವುಗಳು ತಮ್ಮ ಶಕ್ತಿಯನ್ನು ಕಳೆದುಕೊಂಡಿವೆ. ತಾವು ಆತ್ಮಗಳು ಎಂಬುದನ್ನು ಅವುಗಳು ಅರಿತುಕೊಂಡಿಲ್ಲವಾದ್ದರಿಂದ ಅವುಗಳು ಶಕ್ತಿಹೀನವಾಗಿವೆ. ಆತ್ಮವು ಆತ್ಮ-ಜ್ಞಾನವನ್ನು ಹೊಂದಿದಾಗ ಅದು ಶಕ್ತಿಶಾಲಿಯಾಗುತ್ತದೆ. ಅವುಗಳು ಇದನ್ನು ಅರಿತುಕೊಂಡಾಗ, ಅವುಗಳು ಭೂತಗಳಾಗಿ ಉಳಿಯುವುದಿಲ್ಲ.


ಪ್ರಶ್ನೆ: ಗುರುದೇವ, ಎಲ್ಲವೂ ಶಿವತತ್ವ ಎಂದು ನಿನ್ನೆ ನೀವು ಹೇಳಿದಿರಿ. ಹಾಗಾದರೆ ಕೃಷ್ಣನ ಭಕ್ತರಿಗೆ ನಿಮ್ಮ ಸಂದೇಶವೇನು? ಹಾಗೆಯೇ, ನಾನು ಶಿವನನ್ನು ಪ್ರಾರ್ಥಿಸುವುದಿಲ್ಲ, ಕೇವಲ ಕೃಷ್ಣನನ್ನು ಮಾತ್ರ. ಇದು ಸರಿಯೇ?

ಶ್ರೀ ಶ್ರೀ ರವಿ ಶಂಕರ್: ಕೃಷ್ಣ ಪರಮಾತ್ಮ ಮತ್ತು ಭಗವಾನ್ ಶಿವ ಇಬ್ಬರೂ ಒಂದೇ. ಭಗವದ್ಗೀತೆಯ ಹತ್ತನೆಯ ಅಧ್ಯಾಯ, ವಿಭೂತಿ ಯೋಗದಲ್ಲಿ ಕೃಷ್ಣ ಪರಮಾತ್ಮನೇ ಹೀಗೆಂದು ಹೇಳುತ್ತಾನೆ,

’ರುದ್ರಾಣಾಂ ಶಂಕರಶ್ಚಾಸ್ಮಿ ವಿತ್ತೇಶೋ ಯಕ್ಷ ರಕ್ಷಸಾಮ್ I
ವಸೂನಾಂ ಪಾವಕಶ್ಚಾಸ್ಮಿ ಮೇರುಃ ಶಿಖರಿಣಾಮಹಮ್ II’     (೧೦.೨೩)

’ರುದ್ರರಲ್ಲಿ ನಾನು ಭಗವಾನ್ ಶಿವನು’ ಎಂದು ಕೃಷ್ಣ ಪರಮಾತ್ಮನು ಹೇಳುತ್ತಾನೆ. ಮುಂದಿನ ಶ್ಲೋಕದಲ್ಲಿ ಅವನು ಹೀಗೆಂದು ಹೇಳುತ್ತಾನೆ,

’ಪುರೋಧಸಾಂ ಚ ಮುಖ್ಯಂ ಮಾಂ ವಿದ್ಧಿ ಪಾರ್ಥ ಬೃಹಸ್ಪತಿಮ್ I
ಸೇನಾನೀನಾಮಹಂ ಸ್ಕಂಧಃ ಸರಸಾಮಸ್ಮಿ ಸಾಗರಃ II’   (೧೦.೨೪)

’ಯುದ್ಧದ ಸೇನಾಪತಿಗಳಲ್ಲಿ ನಾನು ಭಗವಾನ್ ಕಾರ್ತಿಕೇಯನು’ ಎಂದು ಕೃಷ್ಣ ಪರಮಾತ್ಮನು ಹೇಳುತ್ತಾನೆ.
ಹೀಗೆ, ಕೃಷ್ಣ ಪರಮಾತ್ಮ ಮತ್ತು ಭಗವಾನ್ ಶಿವ ಇಬ್ಬರೂ ಒಂದೇ. ಯಾವುದೇ ವ್ಯತ್ಯಾಸವಿಲ್ಲ.

ಪ್ರಶ್ನೆ: ಗುರುದೇವ, ಪಥದ ಮೇಲೆ ಬಂದು ಆಮೇಲೆ ಬಿಟ್ಟುಬಿಡುವ ಹಲವಾರು ಜನರಿದ್ದಾರೆ. ಹಾಗಾಗುವುದು ಯಾಕೆ? ಅವರು ಅಷ್ಟೊಂದು ತೊಡಗಿಸಿಕೊಂಡಿರುತ್ತಾರೆ ಮತ್ತು ಇದ್ದಕ್ಕಿದ್ದಂತೆ ಅವರು ಬರುವುದನ್ನು ನಿಲ್ಲಿಸುತ್ತಾರೆ.

ಶ್ರೀ ಶ್ರೀ ರವಿ ಶಂಕರ್: ಎಷ್ಟು ಮಂದಿ ಹಾಗೆ ಮಾಡಿದ್ದಾರೆ? ಕೇವಲ ಕೆಲವೇ ಜನರಿರಬಹುದು ಮತ್ತು ಅದಕ್ಕೆ ಬೇರೆ ಬೇರೆಯ ಕಾರಣಗಳಿರಬಹುದು.

ಕೆಲವು ಜನರು, ಒಂದು ಹೋಟೇಲಿಗೆ ಹೋಗುವಂತೆ ಈ ಪಥದ ಮೇಲೆ ಬರುತ್ತಾರೆ. ನೀವೊಂದು ಹೋಟೇಲಿನಲ್ಲಿ ತಿಂದ ಬಳಿಕ, ನೀವು ಹೋಟೇಲಿನ ಬಗ್ಗೆ ಹಲವು ಗಂಟೆಗಳವರೆಗೆ ಯೋಚಿಸುವುದಿಲ್ಲ, ಸರಿಯಾ? ಹೀಗೆ, ಅವರಿಗೆ ಸಂತೃಪ್ತಿಯಾಗಿರುತ್ತದೆ ಮತ್ತು ಅವರು ಮರಳಿ ಬರುವುದಿಲ್ಲ.

ಇತರ ಜನರಿದ್ದಾರೆ, ಅವರು ಒಂದು ಕಷ್ಟಕಾಲದ ಮೂಲಕ ಹಾದುಹೋಗುತ್ತಿರಬಹುದು ಮತ್ತು ತಮ್ಮ ಕೆಟ್ಟ ಅಭ್ಯಾಸಗಳಿಂದಾಗಿ ಅವರು ಪಥವನ್ನು ಬಿಟ್ಟು ನಡೆಯುತ್ತಿರಲೂಬಹುದು. ಆದರೆ ಆಮೇಲೆ ಅವರು ಮರಳಿ ಬರುತ್ತಾರೆ ಕೂಡಾ. ೧೫, ೨೦ ಅಥವಾ ೨೫ ವರ್ಷಗಳ ಬಳಿಕವೂ ಜನರು ಪಥಕ್ಕೆ ಮರಳಿ ಬರುವುದನ್ನು ನಾನು ನೋಡಿದ್ದೇನೆ. ನಾವು ಅದರ ಬಗ್ಗೆ ಚಿಂತಿಸಬೇಕಾಗಿಲ್ಲ.

ನಿಮ್ಮ ಕೆಲಸವು ಹೊಲದಲ್ಲಿ ಬೀಜಗಳನ್ನು ಎಸೆಯುವುದು. ಎಲ್ಲೆಲ್ಲಾ ಅದು ಬೆಳೆಯುವುದೋ, ಅದು ಬೆಳೆಯುತ್ತದೆ. ಬೆಳೆದಿದೆಯೇ ಅಥವಾ ಇಲ್ಲವೇ ಎಂದು ಪ್ರತಿಯೊಂದು ಬೀಜವನ್ನೂ ನೋಡಿಕೊಂಡಿರಲು ನಿಮಗೆ ಸಾಧ್ಯವಿಲ್ಲ.

ಪ್ರಶ್ನೆ: ಗುರುದೇವ, ನಿನ್ನೆಯ ಮಹಾಶಿವರಾತ್ರಿ ಆಚರಣೆಗಳಲ್ಲಿ ನಾನಿದ್ದೆ ಮತ್ತು ಅಲ್ಲಿನ ಚೈತನ್ಯವು ನಂಬಲಸಾಧ್ಯವಾದುದಾಗಿತ್ತು. ನನ್ನ ಪ್ರಶ್ನೆಯೇನೆಂದರೆ, ಈ ಹಬ್ಬದಲ್ಲಿ ನಮ್ಮ ಇರುವಿಕೆಯಿಂದಾಗಿ, ವಿಶ್ವ ಅಥವಾ ಭೂಮಿಯ ಮೇಲೆ ಪರಿಣಾಮವಾಗುವುದಾದರೆ, ನಾವು ಒಬ್ಬಂಟಿಯಾಗಿದ್ದರೂ ಅಥವಾ ದೊಡ್ಡ ಜನಸಂಖ್ಯೆಯೊಂದಿಗಿದ್ದರೂ ಅನುಭವವು ಒಂದೇ ಆಗಿರುವುದೇ?

ಶ್ರೀ ಶ್ರೀ ರವಿ ಶಂಕರ್: ಯಾರು ಇಲ್ಲಿಗೆ ಬರಲು ಬಯಸಿದ್ದರೋ ಆದರೆ ಬರಲು ಸಾಧ್ಯವಾಗಿಲ್ಲವೋ, ಅಥವಾ ಅದರ ಬಗ್ಗೆ ಯೋಚಿಸಿದ್ದರೋ ಅಥವಾ ಅದರಲ್ಲಿ ಯಾವುದೇ ರೀತಿಯಲ್ಲಾದರೂ ಭಾಗವಹಿಸಿದ್ದರೋ, ಅವರೆಲ್ಲರೂ ಆಶೀರ್ವಾದವನ್ನು ಪಡೆಯುತ್ತಾರೆ. ಅದರ ಬಗ್ಗೆ ಯಾವುದೇ ಸಂಶಯವಿಲ್ಲ.