ಶುಕ್ರವಾರ, ಫೆಬ್ರವರಿ 28, 2014

ಮೋಕ್ಷದ ಹಾದಿ

ಫೆಬ್ರುವರಿ ೨೮, ೨೦೧೪
ಬೆಂಗಳೂರು, ಭಾರತ

ಪ್ರಶ್ನೆ: ಗುರುದೇವ, ಯೋಗಸೂತ್ರದಲ್ಲಿ ’ತೀವ್ರ ಸಂವೇಗನಂ ಆಸನ್ನಃ’ (ಜ್ವರತೆಯಿಲ್ಲದೆ ಹೃದಯಪೂರ್ಣವಾಗಿ ಮೋಕ್ಷವನ್ನು ಅನ್ವೇಷಿಸುವವರು ಮೋಕ್ಷವನ್ನು ಬೇಗನೇ ಗಳಿಸುತ್ತಾರೆ) ಎಂದು ಹೇಳಲಾಗಿದೆ. ಮೋಕ್ಷಕ್ಕಾಗಿ ಒಬ್ಬನಿಗೆ ವೇಗ ಬೇಕೇ ಅಥವಾ ಶಾಂತಿಯೇ?

ಶ್ರೀ ಶ್ರೀ ರವಿ ಶಂಕರ್: ಹೌದು, ನಿಮಗೊಂದು ತೀವ್ರ ಗತಿ ಬೇಕು. ಹೆಚ್ಚಾಗಿ ನಾವು ಏನಾದರೂ ಒಳ್ಳೆಯದನ್ನು ಮಾಡಬೇಕಾಗಿರುವಾಗ ನಾವು ’ಇನ್ಶಾ ಅಲ್ಲಾಃ!’ ಎಂದು ಹೇಳುತ್ತೇವೆ (’ದೇವರು ಹಾಗೇ ಇಚ್ಛಿಸಲಿ’ ಎಂಬ ಅರ್ಥದ ಉರ್ದು ಆಶಯ) ಮತ್ತು ನಾವು ಹೆಚ್ಚಾಗಿ, ’ದೇವರು ಇದು ಅತ್ಯುತ್ತಮವಾದುದೆಂದು ಯೋಚಿಸಿದರೆ ಅದು ಆಗುವುದು’, ಮೊದಲಾದವನ್ನು ಹೇಳುತ್ತೇವೆ. ಅದು ನಮಗಾಗಿಯೇ ಆಗಿರುವಾಗ; ನಮಗೊಂದು ಕಾರು ಅಥವಾ ಒಂದು ನೌಕರಿ ಬೇಕಾದರೆ, ಅದನ್ನು ಪಡೆಯಲು ನಾವು ನಮ್ಮ ಸಂಪೂರ್ಣ ಪ್ರಯತ್ನವನ್ನು ಹಾಕುತ್ತೇವೆ. ಹೀಗಿದ್ದರೂ, ಇತರ ವಿಷಯಗಳಿಗೆ ನಾವು, ದೇವರು ಇಚ್ಛಿಸಿದರೆ ಅದು ಆಗುವುದು ಎಂದು ಹೇಳುತ್ತೇವೆ.

ಅದು ಆಶ್ರಮಕ್ಕೆ ಬರುವ ಬಗ್ಗೆಯಾದರೆ ನೀವು ಅನುಕೂಲಕರವಾಗಿ, ’ಗುರುದೇವರು ಇಚ್ಛಿಸುವಾಗ ಅವರು ನನ್ನನ್ನು ಅಲ್ಲಿಗೆ ಕರೆಯುವರು’ ಎಂದು ಹೇಳುತ್ತೀರಿ. ನೀವು ಬರಬೇಡಿರೆಂದು ಅಥವಾ ಧ್ಯಾನ ಮಾಡುವುದು ಬೇಡವೆಂದು ನಾನು ಯಾವಾಗ ಹೇಳಿದ್ದೇನೆ? ಆದರೆ ನೀವು, ಕರೆಯು ಬರುವಾಗ ನಾನು ಅಲ್ಲಿರುವೆನು ಎಂದು ಹೇಳುತ್ತೀರಿ.

ನೀವೊಂದು ಸಿನೆಮಾ ಅಥವಾ ಒಂದು ಹೋಟೇಲಿಗೆ ಹೋಗಬೇಕಿದ್ದರೆ ಆಗ ನೀವು, ದೇವರು ಕರೆಯುವಾಗ ಮಾತ್ರ ನೀವು ಹೋಗುವುದೆಂದು ಹೇಳುವುದಿಲ್ಲ. ನಿಮ್ಮ ಸ್ವಂತ ಮನೋರಂಜನೆಗಾಗಿ, ನೀವು ನಿಮ್ಮದೇ ಇಚ್ಛೆಯಿಂದ ಅಂತಹ ಕೆಲಸ ಮಾಡುತ್ತೀರಿ, ಆದರೆ ನಿಮ್ಮ ಸಾಧನೆಯನ್ನು (ಆಧ್ಯಾತ್ಮಿಕ ಅಭ್ಯಾಸಗಳು) ಮಾಡುವ ವಿಷಯಕ್ಕೆ ಬಂದಾಗ, ದೇವರು ಇಚ್ಛಿಸುವಾಗ ಮಾತ್ರ ಅದು ಆಗುವುದು ಎಂದು ನೀವು ಹೇಳುತ್ತೀರಿ. ಇದನ್ನು ಮಾಡುವುದರಲ್ಲಿ ನಿಮ್ಮ ಮನಸ್ಸು ಬಹಳ ಬುದ್ಧಿಶಾಲಿಯಾಗಿದೆ.

ಜೀವನದಲ್ಲಿ ನೀವು ಯಾವುದನ್ನೆಲ್ಲಾ ಪಡೆಯಲು ಬಯಸುವಿರೋ, ಅದನ್ನು ಕರ್ಮ ಅಥವಾ ವಿಧಿಗೆ ಬಿಡಿ, ಆದರೆ ಮೋಕ್ಷವು ನಿಮ್ಮ ಕೈಗಳಲ್ಲಿದೆ ಮತ್ತು ನಿಮ್ಮ ಪುರುಷಾರ್ಥ (ಪ್ರಯತ್ನಗಳು) ವನ್ನು ಅವಲಂಬಿಸಿದೆ.

ಪ್ರಶ್ನೆ: ಗುರುದೇವ, ವಿರೋಧಾತ್ಮಕ ಮೌಲ್ಯಗಳು ಪೂರಕವಾಗಿರುವಾಗ, ಅದರರ್ಥ, ಹೆಚ್ಚು ಜನರು ಧ್ಯಾನ ಮಾಡುವಾಗ ಹೆಚ್ಚು ಜನರು ಅಸೂಯೆ ಮತ್ತು ಹಿಂಸೆಗಳಂತಹ ನಕಾರಾತ್ಮಕ ಪ್ರವೃತ್ತಿಗಳನ್ನು ವ್ಯಕ್ತಪಡಿಸುವರೆಂದೇ?

ಶ್ರೀ ಶ್ರೀ ರವಿ ಶಂಕರ್: ಅದು ತಿಳಿಯದು (ನಗು).

ಈ ಎಲ್ಲಾ ನಕಾರಾತ್ಮಕ ಭಾವನೆಗಳು ಪ್ರೀತಿಯ ವಿಕೃತಿಗಳಾಗಿವೆ. ಅವುಗಳು ಪ್ರೀತಿಯ ಸಂತತಿಗಳಾಗಿವೆ. ಪ್ರೀತಿಯಿಲ್ಲದಿದ್ದರೆ, ಅಲ್ಲಿ ಮಾತ್ಸರ್ಯವಿರಲು ಸಾಧ್ಯವಿಲ್ಲ. ಅಸೂಯೆಯಿದ್ದರೆ ಅದರರ್ಥ ಅಲ್ಲಿ ಪ್ರೀತಿಯಿದೆಯೆಂದು.

ದರ್ಪವೆಂದರೆ, ತನ್ನ ಮೇಲೆಯೇ ಅತಿಯಾದ ಪ್ರೀತಿಯಾಗಿದೆ. ಮಾತ್ಸರ್ಯವು ಇನ್ನೊಬ್ಬ ವ್ಯಕ್ತಿಯ ಮೇಲೆ ಅತಿಯಾದ ಪ್ರೀತಿಯಿರುವುದಾಗಿದೆ. ಕೋಪವೆಂದರೆ, ಇನ್ನೊಬ್ಬ ವ್ಯಕ್ತಿ ಅಥವಾ ವಸ್ತುವಿನ ಮೇಲೆ ಅತಿಯಾದ ಪ್ರೀತಿಯಿರುವುದಾಗಿದೆ. ಲೋಭವೆಂದರೆ, ವಸ್ತುಗಳ ಮೇಲೆ ಅತಿಯಾದ ಪ್ರೀತಿಯಿರುವುದಾಗಿದೆ.

ಕೋಪವೆಂಬುದು ತನ್ನದೇ ಆದ ಪರಿಕಲ್ಪನೆಗಳು ಮತ್ತು ಗ್ರಹಿಕೆಗಳ ಮೇಲೆ ಪ್ರೀತಿಯಿರುವಿಕೆಯಾಗಿದೆ. ಒಬ್ಬ ಕೋಪಿಷ್ಠ ವ್ಯಕ್ತಿಯು, "ವಿಷಯಗಳು ಹೀಗಿರಬೇಕೆಂದು ನಾನು ಗ್ರಹಿಸುತ್ತೇನೆ" ಎಂದು ಯೋಚಿಸುವನು, ಮತ್ತು ಅವುಗಳು ಹಾಗಿಲ್ಲವಾದರೆ, ಆಗ ಅವನು ಕೋಪಗೊಳ್ಳುತ್ತಾನೆ.
ಹೀಗೆ, ಬಹುತೇಕ ಪ್ರತಿಯೊಂದು ನಕಾರಾತ್ಮಕ ಭಾವನೆಯು ಪ್ರೀತಿಯ ಒಂದು ವಿಕೃತಿಯಾಗಿದೆ.

ಪ್ರಶ್ನೆ: ಗುರುದೇವ, ಶಾಂತಿಯು ನಮ್ಮ ಸ್ವಭಾವವಾಗಿದ್ದರೆ, ಆಗ ಹಿಂಸೆಯು ಏಳುವಂತೆ ಮಾಡುವುದು ಯಾವುದು?
ಶ್ರೀ ಶ್ರೀ ರವಿ ಶಂಕರ್: ಬಲಹೀನತೆ ಅಥವಾ ಭಯವು ಹಿಂಸೆಯ ಮೂಲವಾಗಿದೆ. ಅಳಿವು ಅಥವಾ ನಿರಾಕರಣೆಯ ಭಯವು ಹಿಂಸೆಗೆ ಕಾರಣವಾಗುತ್ತದೆ. ಒತ್ತಡವು ಹಿಂಸೆಯನ್ನು ಉಂಟುಮಾಡುತ್ತದೆ. ಒತ್ತಡವೆಂಬುದು ಕೂಡಾ ಒಂದು ರೀತಿಯ ಬಲಹೀನತೆಯಾಗಿದೆ. ಒತ್ತಡ ಅಥವಾ ಆಯಾಸ ಮತ್ತು ಶಕ್ತಿಯಿಲ್ಲದಿರುವುದು ಬಲಹೀನತೆಯಾಗಿದೆ ಹಾಗೂ ಅದು ಹಿಂಸೆಗೆ ಕಾರಣವಾಗುತ್ತದೆ. ತನ್ನ ಶಕ್ತಿಯ ಬಗೆಗಿನ ಅರಿವಿನ ಕೊರತೆಯು ಹಿಂಸೆಗೆ ಕಾರಣವಾಗುತ್ತದೆ. ಹಿಂಸೆಗೆ ಕಾರಣವಾಗುವ ವಿಷಯಗಳು ಯಾವುವು ಎಂಬುದರ ಬಗ್ಗೆ ನೀವು ಯೋಚಿಸಬಹುದು ಮತ್ತು ನೀವೊಂದು ದೊಡ್ಡ ಪಟ್ಟಿಯನ್ನು ಮಾಡಬಹುದು.

ಮೋಹ ಕೂಡಾ ಹಿಂಸೆಗೆ ಕಾರಣವಾಗುತ್ತದೆ. ವಿವೇಕವಿಲ್ಲದ ತೀವ್ರ ಅನುರಾಗವು ಹಿಂಸೆಯನ್ನು ಉಂಟುಮಾಡಬಲ್ಲದು. ನೀವು ಈ ಎಲ್ಲಾ ಕಥೆಗಳನ್ನು ವಾರ್ತಾಪತ್ರಿಕೆಯಲ್ಲಿ ಓದುತ್ತೀರಿ. ಮೊದಲು ಪರಸ್ಪರರನ್ನು ಪ್ರೇಮಿಸುವ ಇಬ್ಬರು ವ್ಯಕ್ತಿಗಳು ಆನಂತರ ಪರಸ್ಪರರ ಮೇಲೆ ಎಷ್ಟು ಹಿಂಸಾತ್ಮಕವಾಗುತ್ತಾರೆಂದರೆ, ಅವರು ಪರಸ್ಪರರನ್ನು ಕೊಲ್ಲುತ್ತಾರೆ. ಈ ವಿಷಯಗಳ ಬಗ್ಗೆ ನೀವು ಕೇಳಿಲ್ಲವೇ? ಜಗತ್ತಿನಾದ್ಯಂತ, ಪ್ರೀತಿಯಲ್ಲಿ ಸಿಲುಕುವುದು ಮತ್ತು ನಂತರ ಪರಸ್ಪರರನ್ನು ಇರಿದ ಜನರ ಬಗ್ಗೆ ನೀವು ಕೇಳುತ್ತೀರಿ. ಇದು ನಂಬಲಸಾಧ್ಯವಾಗಿದೆ. ಆದುದರಿಂದ ವಿವೇಕವು ಆವಶ್ಯಕವಾಗಿದೆ. ಕೇವಲ ಪ್ರೀತಿ ಅಥವಾ ಅನುರಾಗವು ಸಾಕಾಗುವುದಿಲ್ಲ.

ವಿವೇಕವಿಲ್ಲದ ಪ್ರೀತಿಯು ದುಃಖವಾಗಿದೆ. ನಿಮ್ಮಲ್ಲಿ ವಿವೇಕವಿಲ್ಲದಿದ್ದರೆ ಮತ್ತು ಸಮಚಿತ್ತರಾಗಿಲ್ಲದಿದ್ದರೆ, ಆಗ ಅದು ಹಿಂಸೆಯನ್ನು ಉಂಟುಮಾಡಬಲ್ಲದು. ಆದರೆ ನೀವು ಯಾವುದಕ್ಕಾದರೂ ಸಂಪೂರ್ಣವಾಗಿ ಮೀಸಲಾಗಿದ್ದರೆ, ಆಗ ಅದು ಬೇರೆ. ಆಗ ನೀವು ನಿಮ್ಮ ವಿವೇಕವನ್ನು ಕಳೆದುಕೊಳ್ಳುವುದಿಲ್ಲ.

ಈ ದಿನಗಳಲ್ಲಿ ನೀವು ವಾರ್ತಾಪತ್ರಿಕೆಯನ್ನು ಓದುವಾಗ ಅಥವಾ ಟಿವಿಯನ್ನು ಹಚ್ಚುವಾಗ, ಪ್ರತಿದಿನವೂ, ನಿಮಗೆ ಅಂತಹ ಕೆಲವು ಕಥೆಗಳು ಸಿಗುತ್ತವೆ ಮತ್ತು ವರದಿಯಾಗದೇ ಇರುವ ಇನ್ನೂ ಅನೇಕ  ಅಂತಹ ಘಟನೆಗಳು ಇರಬಹುದು.

ಪ್ರಶ್ನೆ: ಗುರುದೇವ, ನಿಮ್ಮ ವೃತ್ತಿಯಲ್ಲಿ, ಜನರು ನಿಮ್ಮ ಮೇಲೆ ಮೋಹಗೊಳ್ಳುವುದು ಒಂದು ದೊಡ್ಡ ಔದ್ಯೋಗಿಕ ಅಪಾಯವೇ? ನೀವದನ್ನು ಹೇಗೆ ನಿರ್ವಹಿಸುತ್ತೀರಿ? 

ಶ್ರೀ ಶ್ರೀ ರವಿ ಶಂಕರ್: ಅದನ್ನು ನನ್ನಲ್ಲಿ ಕೇಳಲೂಬೇಡ! (ನಗು). ಹಲವಾರು ಔದ್ಯೋಗಿಕ ಅಪಾಯಗಳಿವೆ. ಹಲವು ಸಲ ನಾನು ನಡೆಯುತ್ತಿರುತ್ತೇನೆ ಮತ್ತು ಒಬ್ಬರು ಹಿಂದಿನಿಂದ ನನ್ನ ಕಾಲುಗಳನ್ನು ಹಿಡಿಯುತ್ತಾರೆ. ಹಲವು ಸಲ ಮುಗ್ಗರಿಸಿ ಬೀಳದಂತೆ ನಾನು ನನ್ನನ್ನು ಸಂತುಲನದಲ್ಲಿರಿಸಬೇಕಾಗುತ್ತದೆ. ಜನರು ಹೇಳಿದ್ದನ್ನು ಕೇಳಬೇಕು. ನೋಡಿ ಈಗ ನೀವೆಲ್ಲರೂ ಕುಳಿತಿರುವಿರಿ.

ನಾನು ಹೋಗುವಾಗ ಕೂಡಾ, ನೀವು ಕುಳಿತುಕೊಂಡಿರಬೇಕು. ಯಾರೂ ಎದ್ದು ಓಡಬಾರದು. ನಾನದನ್ನು ಯಾವತ್ತೂ ಹೇಳುತ್ತಿರುತ್ತೇನೆ ಮತ್ತು ನೀವು ಎದ್ದು ನಿಲ್ಲುವಾಗಲೇ, ಕಳವು ಮಾಡಲು ಈ ಕಳ್ಳರಿಗೆ ನೀವೊಂದು ಅವಕಾಶವನ್ನು ಕೊಡುವುದು. ಅವರು ಗುಂಪುಗಳಲ್ಲಿ ಬರುತ್ತಾರೆ. ಒಬ್ಬನು ಇತರರನ್ನು ದೂಡುವನು ಮತ್ತು ಬಹಳಷ್ಟು ಭಕ್ತಿಯನ್ನು ತೋರಿಸುವಂತೆ ನಟಿಸುವನು ಹಾಗೂ ಆ ಸಮಯದಲ್ಲಿ ಇನ್ನೊಬ್ಬನು ಜೇಬುಗಳ್ಳತನ ಮಾಡುವನು.

ಅವರದೊಂದು ತಂಡವಿದೆಯೆಂಬುದಾಗಿ ನೀವು ಊಹಿಸಬಲ್ಲಿರಾ? ಅವರು ನಮ್ಮನ್ನು ಮಾನಸಿಕವಾಗಿ ಬಹಳ ಚೆನ್ನಾಗಿ ಅಧ್ಯಯನ ನಡೆಸಿದ್ದಾರೆ. ಜೈ ಜೈ ರಾಧಾರಮಣ ಹಾಡುತ್ತಿರುವಾಗ (ಆರ್ಟ್ ಆಫ್ ಲಿವಿಂಗ್ ಸತ್ಸಂಗಗಳನ್ನು ಮುಕ್ತಾಯಗೊಳಿಸುವ ಒಂದು ಭಕ್ತಿಗೀತೆ), ಎಲ್ಲರೂ ಸತ್ಸಂಗದ ಅತ್ಯಾನಂದದಲ್ಲಿ ಸಂಪೂರ್ಣವಾಗಿ ಮುಳುಗಿರುತ್ತಾರೆ, ಮತ್ತು ಆ ಸಮಯದಲ್ಲೇ ಅವರು ಒಬ್ಬರನ್ನು ದೂಡಿ ಹಿಂದಿನಿಂದ ಅವರ ಜೇಬಿಗೆ ಕನ್ನ ಹಾಕುವುದು.

ಅಂತಹ ಘಟನೆಗಳನ್ನು ತಡೆಗಟ್ಟಲು ನೀವೆಲ್ಲರೂ ಸಹಕರಿಸಬೇಕು ಮತ್ತು ಕುಳಿತುಕೊಂಡಿರಬೇಕು. ಹೇಗಿದ್ದರೂ, ನಾನು ಎಲ್ಲರನ್ನೂ ಭೇಟಿಯಾಗುತ್ತೇನೆ.

ಜನರು ಒಬ್ಬರ ಮೇಲೊಬ್ಬರು ಬಿದ್ದಾಗ ಮತ್ತು ಹಿರಿಯ ಹೆಂಗಸರು ಹಾಗೂ ಮಕ್ಕಳು ನೆಲದ ಮೇಲೆ ನೂಕಲ್ಪಟ್ಟಾಗ ನನಗೆ ಹಿತವಾಗುವುದಿಲ್ಲ. ಕೆಲವು ಜನರು ಮುಂದಕ್ಕೆ ಓಡುತ್ತಾರೆ ಮತ್ತು ಇತರರನ್ನು ಹಿಂದೆಹಾಕುತ್ತಾರೆ ಹಾಗೂ, "ಗುರುದೇವ, ದಯವಿಟ್ಟು ನನ್ನನ್ನು ಆಶೀರ್ವದಿಸಿ" ಎಂದು ಹೇಳುತ್ತಾ ಅವರಿಗಿಂತ ಮೊದಲು ನನ್ನ ಬಳಿಗೆ ಬರುತ್ತಾರೆ. ಆಗ ಅಲ್ಲೇನೋ ಸರಿಯಿಲ್ಲವೆಂದು ನನಗನಿಸುತ್ತದೆ. ಹೀಗೆ ಒಬ್ಬ ವ್ಯಕ್ತಿಯು ತಳ್ಳುತ್ತಾನೆ ಮತ್ತು ಮುಂದೆ ಬರಲು ಪ್ರಯತ್ನಿಸುತ್ತಾನೆ ಹಾಗೂ ಅಪರಾಧದಲ್ಲಿ ಅವನ ಸಂಗಾತಿಯು ಆಗ, ಈ ಗೊಂದಲದ ನಡುವೆ ಹಿಂದಿನಿಂದ ನಿಮ್ಮ ಜೇಬಿಗೆ ಕನ್ನ ಹಾಕುತ್ತಾನೆ.

ಈ ಹಳೆಕಾಲದ ಭಕ್ತರಲ್ಲಿ ಕೆಲವರು; ನೀವವರನ್ನು ಭಕ್ತರೆಂದು ಕೂಡಾ ಕರೆಯಲು ಸಾಧ್ಯವಿಲ್ಲದಿದ್ದರೂ ಸಹ; ಅವರು ಕೇಳುವುದೇ ಇಲ್ಲ. ಅವರು ಮುಂದೆ ಬಂದು ಕುಳಿತುಕೊಂಡು ಅವ್ಯವಸ್ಥೆಯನ್ನು ಸೃಷ್ಟಿಸಲು ಜನರ ಮೇಲಿನಿಂದ ಹಾರುತ್ತಾರೆ. ಏನು ಮಾಡಬೇಕೆಂದು ನನಗೆ ತಿಳಿಯದು (ಅಂತಹ ಜನರನ್ನು ಶಿಕ್ಷಿಸಬೇಕೆಂದು ಸಭಿಕರಲ್ಲಿ ಒಬ್ಬ ಸದಸ್ಯನು ಸಲಹೆ ನೀಡುತ್ತಾನೆ).

ಹೌದು, ಅವರಿಗೆ ಯಾವ ಶಿಕ್ಷೆ ನೀಡುವುದೆಂದು ನಾನು ಯೋಚಿಸುತ್ತಿದ್ದೇನೆ. ಅವರು ಅಶಿಸ್ತನ್ನು ಹರಡುತ್ತಾರೆ. ಒಬ್ಬರಿಗೆ ಇಲ್ಲವೆಂದು ಹೇಳುವುದು ಅಥವಾ ನಿಷ್ಠುರವಾಗಿರುವುದು ನನ್ನ ಸ್ವಭಾವದಲ್ಲಿಲ್ಲ, ಆದರೆ ಈ ಜನರು ನಾನಾಗಿಯೇ ಇರಲು ನನ್ನನ್ನು ಬಿಡುವುದಿಲ್ಲ. ಒಬ್ಬರನ್ನು ’ಮೂರ್ಖ’ ಎಂದು ಕರೆಯುವುದನ್ನು ಬಿಟ್ಟರೆ ಬೇರೆ ಯಾವ ಕೆಟ್ಟ ಪದಗಳನ್ನೂ ನಾನು ಯಾವತ್ತೂ ಬಳಸಿಲ್ಲ ಅಥವಾ ಯಾರನ್ನೂ ಬೈದಿಲ್ಲ. ಇದಕ್ಕಿಂತ ಹೆಚ್ಚು ಕಟ್ಟುನಿಟ್ಟಾಗಿರುವುದು ಹೇಗೆಂದು ನನಗೆ ತಿಳಿಯದು.

ಆದರೆ ಅವರು ನನ್ನ ಸಹನೆಯನ್ನು ಪರೀಕ್ಷಿಸುತ್ತಿದ್ದಾರೆ. ಅದು ಪರವಾಗಿಲ್ಲ. ಈ ಜಗತ್ತಿನಲ್ಲಿ ಎಲ್ಲಾ ರೀತಿಯ ಜನರಿದ್ದಾರೆ ಮತ್ತು ನಾವು ಎಲ್ಲರನ್ನೂ ಸ್ವೀಕರಿಸಬೇಕು.

ಪ್ರಶ್ನೆ: ಗುರುದೇವ, ತನ್ನನ್ನು ತಾನೇ ಸಂತೋಷವಾಗಿಟ್ಟುಕೊಳ್ಳುವುದು ಹೆಚ್ಚು ಮುಖ್ಯವೇ ಅಥವಾ ಸುತ್ತಲಿರುವ ಇತರರನ್ನು ಸಂತೋಷವಾಗಿಟ್ಟುಕೊಳ್ಳುವುದೇ?

ಶ್ರೀ ಶ್ರೀ ರವಿ ಶಂಕರ್: ನೋಡು, ಎರಡೂ ಮುಖ್ಯ. ನೀನೊಬ್ಬ ಸಂತ ಅಥವಾ ಸನ್ಯಾಸಿಯಾಗಿದ್ದರೆ, ಆಗ ನೀನು ಇತರರನ್ನು ಸಂತೋಷವಾಗಿಟ್ಟುಕೊಳ್ಳಬೇಕು. ಆದರೆ ನೀನೊಬ್ಬ ಸಂಸಾರಿಯಾಗಿದ್ದರೆ, ಆಗ ನೀನು ನಿನ್ನನ್ನು ಹಾಗೂ ಇತರರನ್ನು ಸಂತೋಷವಾಗಿಟ್ಟುಕೊಳ್ಳಬೇಕು.

ಒಂದು ಸೈಕಲ್ಲಿಗೆ ಎರಡು ಚಕ್ರಗಳಿರುವಂತೆ, ನೀವು ಎರಡನ್ನೂ ಸಂತುಲನದಲ್ಲಿಟ್ಟುಕೊಳ್ಳಬೇಕು. ನೀವು ಕೇವಲ ಇತರರನ್ನು ಸಂತೋಷವಾಗಿರಿಸಲು ಮಾತ್ರ ಪ್ರಯತ್ನಿಸುತ್ತಿದ್ದರೆ, ಆಗ ನೀವು ದುಃಖಗೊಳ್ಳುವಿರಿ ಮತ್ತು ನೀವು ದುಃಖಿತರಾಗಿದ್ದರೆ, ಆಗ ನೀವು ಇತರರನ್ನು ಹೇಗೆ ಸಂತೋಷವಾಗಿರಿಸುವಿರಿ?

ನೀವು ಕೇವಲ ನಿಮ್ಮನ್ನು ಮಾತ್ರ ಸಂತೋಷವಾಗಿಟ್ಟುಕೊಳ್ಳುವಲ್ಲಿ ಆಸಕ್ತರಾಗಿದ್ದರೆ, ಆಗ ನಿಮ್ಮ ಸುತ್ತಲಿರುವ ಜನರು ದುಃಖಗೊಳ್ಳುವರು ಮತ್ತು ಅವರು ದುಃಖಿತರಾಗಿದ್ದರೆ, ನೀವು ಹೇಗೆ ಸಂತೋಷವಾಗಿರುವಿರಿ? ಎರಡೂ ಪರಸ್ಪರ ಅವಲಂಬಿತವಾಗಿವೆ. ಹೀಗಾಗಿ ಮಧ್ಯದಾರಿಯನ್ನು ತೆಗೆದುಕೊಳ್ಳಿ ಮತ್ತು ಸಂತೋಷವಾಗಿರಿ ಹಾಗೂ ಇತರರನ್ನು ಸಂತೋಷವಾಗಿರಿಸಿ.

ನಿಮಗಾಗಿ ಸಮಯವನ್ನು ತೆಗೆದಿರಿಸಿ. ನಿಮ್ಮ ಸ್ವಂತ ಆರೋಗ್ಯದ ಕಡೆಗೂ ಕಾಳಜಿ ವಹಿಸಿ ಮತ್ತು ನಂತರ ನೀವು ಇತರರನ್ನು ಸಂತೋಷವಾಗಿರಿಸಬಹುದು. ಯಾವತ್ತೂ ನೀವು ಹೇಳಿದ್ದೇ ನಡೆಯಬೇಕೆಂದು ನೀವು ಹಠ ಮಾಡಬಾರದು. ಕೆಲವೊಮ್ಮೆ ನೀವು ಬಗ್ಗಬೇಕು ಮತ್ತು ಇತರರನ್ನು ಕೂಡಾ ಸಂತೋಷವಾಗಿರಿಸಬೇಕು. ನೀವು ಹೇಳುವುದನ್ನು ಅಥವಾ ನಂಬುವುದನ್ನು ಮಾತ್ರ ಅನುಸರಿಸಬೇಕೆಂದು ನೀವು ಯಾವಾಗಲೂ ಒತ್ತಾಯಪಡಿಸಬಾರದು. ಇಲ್ಲ, ಮಧ್ಯದಾರಿಯನ್ನು ಸ್ವೀಕರಿಸಿ. ಕೆಲವೊಮ್ಮೆ ಇತರರು ಹೇಳುವುದನ್ನು ಕೇಳಿ, ಮತ್ತು ಕೆಲವೊಮ್ಮೆ ನಿಮಗೇನನಿಸುವುದೋ ಅದನ್ನು ಕೂಡಾ ಅನುಸರಿಸಿ.

ಪ್ರಶ್ನೆ: ಗುರುದೇವ, ಪ್ರೇಮವು ಒಂದು ದೈವಿಕ ಗುಣವಾಗಿದೆ. ಪ್ರೇಮವು ನಮ್ಮನ್ನು ಮುಕ್ತಗೊಳಿಸಬಹುದು ಎಂಬುದಾಗಿ ಹೇಳಲಾಗಿದೆ, ಆದರೆ ಪ್ರೇಮವು ನಿಜವಾಗಿಯೂ ನಮ್ಮನ್ನು ಬಂಧಿಸುತ್ತದೆಯೆಂಬುದು ಕಾಣಿಸುತ್ತದೆ. ವಿವಾಹವನ್ನು ಕೂಡಾ ಒಂದು ಬಂಧನವಾಗಿ ಕಾಣಲಾಗುತ್ತದೆ. ಹಾಗಾದರೆ ಈ ಬಂಧನವು ಸುಂದರವಾಗಿರಲು ಹೇಗೆ ಸಾಧ್ಯ?

ಶ್ರೀ ಶ್ರೀ ರವಿ ಶಂಕರ್: ಸಂಬಂಧದಲ್ಲಿ ಸ್ವಾರ್ಥತೆ ಇಲ್ಲದಿರುವಾಗ ಅದು ಸುಂದರವಾಗಿರುತ್ತದೆ. ಸಂಬಂಧದಲ್ಲಿ ತ್ಯಾಗ ಮಾಡುವ ಇಚ್ಛೆ ಇರುವಾಗ, ಅದು ಸುಂದರವಾಗುತ್ತದೆ.

ಶ್ರೀರಾಮನಿಗೆ ತನ್ನ ಸಹೋದರ ಭರತನೊಂದಿಗಿದ್ದ ಸಂಬಂಧವನ್ನು ನೋಡು. ಅದು ಅಷ್ಟೊಂದು ಬಲವಾದ ಬಂಧನವಾಗಿತ್ತು, ಆದರೆ ಅವರಿಬ್ಬರೂ, ಇನ್ನೊಬ್ಬನಿಗಾಗಿ ಏನನ್ನು ಬೇಕಾದರೂ ತ್ಯಾಗ ಮಾಡುವ ಇಚ್ಛೆಯುಳ್ಳವರಾಗಿದ್ದರು. ಯಾವುದೇ ಸ್ವಾರ್ಥತೆಯಿರದ ಅಂತಹ ಒಂದು ಸಂಬಂಧವು ಸುಂದರವಾದುದು. ಅಂತಹ ಒಂದು ಸಂಬಂಧದಲ್ಲಿ ಬಹಳಷ್ಟು ಪ್ರೇಮ ಮತ್ತು ಶಾಂತಿಯಿರುತ್ತವೆ.

ಪ್ರಶ್ನೆ: ಎರಡು ವಿಷಯಗಳ ನಡುವೆ ಒಂದು ಸಂಘರ್ಷವಿರುವಾಗ ಮತ್ತು ಎರಡೂ ಸರಿಯೆಂದು ಅನ್ನಿಸುವಾಗ, ಆಯ್ಕೆ ಮಾಡುವುದು ಹೇಗೆ?

ಶ್ರೀ ಶ್ರೀ ರವಿ ಶಂಕರ್: ವಿಶ್ರಾಮ ಮಾಡು. ಗೊಂದಲವಿದ್ದರೆ, ವಿಶ್ರಾಮ ಮಾಡು. ಸರಿಯಾದುದು ಅದರಷ್ಟಕ್ಕೇ ಬರುವುದು. ಯಾವುದು ದೀರ್ಘ ಕಾಲಾವಧಿಯಲ್ಲಿ ಸಂತೋಷ ನೀಡುವುದೋ ಅದನ್ನು ಆಯ್ಕೆ ಮಾಡು. ಅಲ್ಪ ಕಾಲಾವಧಿಯಲ್ಲಿ ಅದು ಅಷ್ಟೊಂದು ಹಿತಕರವಾಗಿಲ್ಲದಿದ್ದರೂ ಸಹ ಪರವಾಗಿಲ್ಲ. ಯಾವುದು ನಿನಗೆ ತತ್ಕಾಲಿಕವಾಗಿ ಸಂತೋಷವನ್ನು ಕೊಡುವುದೋ, ಆದರೆ ದೀರ್ಘಕಾಲಾವಧಿಯಲ್ಲಿ ವೇದನೆಗೆ ಕಾರಣವಾಗುವುದೋ, ಅದೊಂದು ಒಳ್ಳೆಯ ಆಯ್ಕೆಯಲ್ಲ.

ಪ್ರಶ್ನೆ: ಗುರುದೇವ, ವರ್ತಮಾನದ ಕ್ಷಣದಲ್ಲಿ ಯಾವ ಆಯ್ಕೆಯನ್ನು ಮಾಡಬೇಕೆಂಬುದನ್ನು  ಅರಿತುಕೊಳ್ಳಲು ಒಬ್ಬನು ಆಯ್ಕೆರಹಿತವಾದ ಅರಿವಿನಲ್ಲಿರುವುದು ಹೇಗೆ?  

ಶ್ರೀ ಶ್ರೀ ರವಿ ಶಂಕರ್: ನಿನ್ನ ಮುಂದೆ ತಿನ್ನುವುದಕ್ಕಾಗಿ ಒಂದು ತುಂಡು ಇದ್ದಿಲು ಮತ್ತು ಒಂದು ಬಾಳೆಹಣ್ಣನ್ನು ಇಡಲಾಗಿದ್ದರೆ, ನಿನ್ನ ಆಯ್ಕೆಯೇನು? ಅಲ್ಲೊಂದು ಆಯ್ಕೆಯಿದೆಯೇ? ಅದರ ಬಗ್ಗೆ ವಿಚಾರ ಮಾಡು.

ಅದೊಂದು ಬಾಳೆಹಣ್ಣು ಅಥವಾ ಇದ್ದಿಲು ಎಂಬುದು ನಿನಗೆ ತಿಳಿಯದಿರುವಾಗ ಅಲ್ಲೊಂದು ಆಯ್ಕೆಯಿರುತ್ತದೆ. ಆದರೆ, ಬಾಳೆಹಣ್ಣು ತಿನ್ನಲು ಸಾಧ್ಯವಾದಂತಹದ್ದು ಮತ್ತು ಇನ್ನೊಂದು ಇದ್ದಿಲು ಎಂಬುದು ನಿನಗೆ ತಿಳಿದಿದ್ದರೆ, ಆಗ ಆಯ್ಕೆ ಎಲ್ಲಿರುವುದು?

ಜ್ಞಾನವು ವಿವೇಕವನ್ನು ತರುತ್ತದೆ, ಅದು ಸ್ಪಷ್ಟತೆಯನ್ನು ತರುತ್ತದೆ. ಗೊಂದಲವೆಂದರೆ, ವಿವೇಕದ ಕೊರತೆ ಮತ್ತು ಆ ಕ್ಷಣದಲ್ಲಿ ಸ್ಪಷ್ಟತೆಯಿಲ್ಲದಿರುವುದು. ಹಾಗಾದರೆ ವಿವೇಕವನ್ನು ತರುವುದು ಹೇಗೆ? ವಿಶ್ರಾಮ ಮಾಡಿ ಮತ್ತು ಧ್ಯಾನ ಮಾಡಿ.

ಪ್ರಶ್ನೆ: ಗುರುದೇವ, ೨೦ ನಿಮಿಷಗಳ ಧ್ಯಾನದಲ್ಲಿ, ನನಗೆ ಕೇವಲ ೧ ನಿಮಿಷ ಮಾತ್ರ ಧ್ಯಾನ ಮಾಡಲು ಸಾಧ್ಯವಾಗುತ್ತದೆ, ಉಳಿದ ಸಮಯ ನಾನು ನಿಮ್ಮೊಂದಿಗೆ ಮಾತನಾಡುತ್ತಿದ್ದೇನೆಂದು ನನಗನ್ನಿಸುತ್ತದೆ. ನಾನು ಕನಸು ಕಾಣುತ್ತಿದ್ದೇನೆಯೇ ಅಥವಾ ಆ ಸಮಯದಲ್ಲಿ ನೀವು ನಿಜಕ್ಕೂ ನನ್ನೊಂದಿಗೆ ಮಾತನಾಡುತ್ತಿರುತ್ತೀರೇ? ಅಲ್ಲಿ ಯಾರಾದರೂ ಇರುವರೇ ಎಂದು ನೋಡಲು ಕೆಲವೊಮ್ಮೆ ನಾನು ನನ್ನ ಕಣ್ಣುಗಳನ್ನು ಸ್ವಲ್ಪ ತೆರೆಯುತ್ತೇನೆ. 

ಶ್ರೀ ಶ್ರೀ ರವಿ ಶಂಕರ್: ಅದು ಪರವಾಗಿಲ್ಲ, ನೀನು ೨% ಧ್ಯಾನವನ್ನು (ಕಣ್ಣುಗಳನ್ನು ಶೇ. ೨ ರಷ್ಟು ಮಾತ್ರ ತೆರೆದುಕೊಂಡು ಮಾಡುವ ಒಂದು ವಿಧವಾದ ಧ್ಯಾನವನ್ನು ಉಲ್ಲೇಖಿಸುತ್ತಾ) ಮಾಡಬಹುದು.

ನೋಡು, ಕೆಲವೊಮ್ಮೆ, ಕಣ್ಣುಗಳನ್ನು ಮುಚ್ಚುವುದರೊಂದಿಗೆ ನಾವು ಕನಸು ಕಾಣಲು ತೊಡಗುತ್ತೇವೆ ಮತ್ತು ಮನೋರಾಜ್ಯವೆಂದು ಕರೆಯಲ್ಪಡುವ, ನಮ್ಮ ಮನಸ್ಸಿನ ಕಲ್ಪನಾಲೋಕದೊಳಕ್ಕೆ ಒಯ್ಯಲ್ಪಡುತ್ತೇವೆ. ಕಣ್ಣುಗಳು ತೆರೆದಿರುವುದರೊಂದಿಗೆ, ನಾವು ಹೊರಜಗತ್ತಿನಲ್ಲಿರುತ್ತೇವೆ. ಎರಡರ ನಡುವೆ ಇರುವುದು ಮೌನವಾಗಿದೆ. ಅತಿಯಾಗಿ ಹೊರಜಗತ್ತಿನದ್ದೂ ಅಲ್ಲ ಮತ್ತು ಅತಿಯಾಗಿ ಕಲ್ಪನೆ ಮಾಡಿಕೊಳ್ಳುವುದು ಕೂಡಾ ಅಲ್ಲ. ಇವುಗಳೆರಡರ ನಡುವೆ ನಾವು ಧ್ಯಾನ ಮಾಡಬೇಕು.