ಗುರುವಾರ, ಫೆಬ್ರವರಿ 27, 2014

ದೃಶ್ಯ, ದೃಷ್ಟ ಶಿವ

ಫೆಬ್ರುವರಿ ೨೭, ೨೦೧೪
ಬೆಂಗಳೂರು, ಭಾರತ

ವತ್ತು, ಮಹಾಶಿವರಾತ್ರಿಯ ಈ ಮಂಗಳಕರವಾದ ದಿನದಂದು ನೀವು ನಿಮ್ಮೊಂದಿಗೆ ಒಯ್ಯಬೇಕಾಗಿರುವ ವಿಷಯಗಳು ಕೇವಲ ಎರಡೇ. ಅವುಗಳು ತತ್‌ಕ್ಷಣವೇ ನಿಮ್ಮ ಮನಸ್ಸಿಗೆ ಶಾಂತಿ ಮತ್ತು ಸಂತೋಷವನ್ನು ತರುವುವು.

೧. ’ದೇವರು ನನ್ನೊಂದಿಗೆ ಎಲ್ಲಾ ಸಮಯಗಳಲ್ಲೂ ಇದ್ದಾನೆ ಮತ್ತು ಅವನು ನನ್ನೆಲ್ಲಾ ಆವಶ್ಯಕತೆಗಳನ್ನು ಪೂರೈಸುವನು’ ಎಂಬುದನ್ನು ತಿಳಿಯಿರಿ. ದೇವರಿರುವುದು ನಿಮ್ಮ ಆವಶ್ಯಕತೆಗಳನ್ನು ಪೂರೈಸುವುದಕ್ಕಾಗಿ ಮಾತ್ರ.

೨. ಈ ದೃಢ ವಿಶ್ವಾಸದೊಂದಿಗೆ, ವಿಶ್ರಾಮ ಮಾಡಿ ಮತ್ತು ಆತ್ಮನಲ್ಲಿ ವಿರಮಿಸಿ.

ಆಳವಾದ ವಿಶ್ರಾಂತಿಯ ಸ್ಥಿತಿಗೆ ಬರುವುದೇ, ಮಹಾಶಿವರಾತ್ರಿ ವಿಶೇಷ. ಮಹಾಶಿವರಾತ್ರಿಯು ಮನಸ್ಸು ಮತ್ತು ಚೇತನಕ್ಕೆ ಆಳವಾದ ವಿಶ್ರಾಂತಿಯನ್ನು ತರುತ್ತದೆ. ಮನಸ್ಸು ಯಾವತ್ತೂ ಯಾವುದಾದರೊಂದರ ಹಿಂದೆ ಓಡುತ್ತಿರುತ್ತದೆ ಅಥವಾ ಒಂದಲ್ಲೊಂದನ್ನು ಬಯಸುತ್ತಿರುತ್ತದೆ; ಅದೊಂದು ಆಧ್ಯಾತ್ಮಿಕ ವಿಷಯವೇ ಆಗಿರಲಿ ಅಥವಾ ಒಂದು ಪ್ರಾಪಂಚಿಕ ವಸ್ತುವೇ ಆಗಿರಲಿ. ಹೀಗಾಗಿ, ನಿಮಗೆ ಎರಡನ್ನೂ ಒದಗಿಸಲು ದೇವರಿದ್ದಾರೆ ಎಂಬುದನ್ನು ಸುಮ್ಮನೇ ನೆನಪಿನಲ್ಲಿಡಿ ಮತ್ತು ವಿಶ್ರಾಮ ಮಾಡಿ.

ನೀವು ದೇವರೊಂದಿಗೆ ಆ ಆಳವಾದ ಸಂಬಂಧವನ್ನು ಸ್ಥಾಪಿಸಬೇಕು ಮತ್ತು ’ದೇವರು ನನಗೆ ಸೇರಿದವರು’ ಎಂಬುದನ್ನು ನೆನಪಿನಲ್ಲಿಡಬೇಕು. ನಿಮಗೇನೆಲ್ಲಾ ಬೇಕೋ ಅದನ್ನು ಖಂಡಿತವಾಗಿಯೂ ನಿಮಗೆ ನೀಡಲಾಗುವುದು ಎಂಬ ಈ ದೃಢ ವಿಶ್ವಾಸವನ್ನು ಹೊಂದಿ. ಈ ವಿಶ್ವಾಸವು ಒಳಗಿನಿಂದ ಉದಯವಾದ ಕ್ಷಣವೇ, ಮನಸ್ಸು ಸ್ಥಿರವಾಗುತ್ತದೆ ಮತ್ತು ವಿಶ್ರಾಂತಿಯ ಒಂದು ಸ್ಥಿತಿಗೆ ಬರುತ್ತದೆ.

ನೀವು ಕೀರ್ತನೆಯನ್ನು ಮಾಡುವಾಗಲೂ ನಿಮಗೆ ಅದೇ ರೀತಿಯ ಶಾಂತಿ ಮತ್ತು ಆಳವಾದ ವಿಶ್ರಾಂತಿಯು ದೊರಕುತ್ತದೆ. ನಿಮಗೆ ಗೊತ್ತಾ, ಕೇವಲ ಒಂದು ಮೇಲ್ನೋಟಕ್ಕೆ, ತೋರಿಕೆಗಾಗಿ ಭಜನೆಗಳನ್ನು ಹಾಡುವುದು ಒಳ್ಳೆಯದಲ್ಲ. ನೀವು ಹಾಡುಗಳನ್ನು ಕೇಳುವಾಗ ಮತ್ತು ಅದರೊಂದಿಗೆ ನೀವು ಹಾಡುವಾಗ, ನೀವು ತುಂಬುಹೃದಯದಿಂದ ಮತ್ತು ದೇವರ ಕಡೆಗೆ ಒಂದು ಆಳವಾದ ಭಕ್ತಿಯ ಭಾವದಿಂದ ಹಾಗೂ ಪ್ರೇಮದಿಂದ ಹಾಡಬೇಕು. ನೀವು ದೇವರನ್ನು ಕೂಗಿ ಕರೆಯಬೇಕು.

ತುಂಬುಹೃದಯದಿಂದ ಹಾಡುತ್ತಾ, ಹಾಡಿನೊಂದಿಗೆ ಒಂದಾಗುವಾಗ, ಕ್ಷಣಮಾತ್ರದಲ್ಲಿ ನೀವು ದೇವರೊಂದಿಗೆ ಒಂದಾಗುತ್ತೀರಿ.
ಭಗವಾನ್ ಶಿವನು ಹೊರಗಡೆಯಿಲ್ಲ; ಅವನೊಂದು ದೇವಸ್ಥಾನದಲ್ಲಿ ಅಥವಾ ಹಿಮಾಲಯಗಳಲ್ಲೆಲ್ಲೋ ದೂರದಲ್ಲಿ ಕುಳಿತಿಲ್ಲ; ಅವನು ಮಾನಸರೋವರದಲ್ಲಿ ಅಥವಾ ಕೈಲಾಸ ಪರ್ವತದಲ್ಲಿಲ್ಲ. ಭಗವಾನ್ ಶಿವನು ನಿಮ್ಮೊಳಗೆ ಇದ್ದಾನೆ ಮತ್ತು ಅವನು ಎಲ್ಲೆಡೆಯೂ ಇದ್ದಾನೆ. ಕೇವಲ ಇದನ್ನು ತಿಳಿದುಕೊಳ್ಳಿ ಮತ್ತು ವಿಶ್ರಾಮ ಮಾಡಿ.

ಅವನು ಸರ್ವವ್ಯಾಪಿ, ನೀವು ಹೋಗುವ ಎಲ್ಲೆಡೆಗಳಲ್ಲೂ ನಿಮಗೆ ವ್ಯಕ್ತವಾಗಿ ಕಾಣಿಸುವುದು ಅವನೇ ಆಗಿರುವನು; ಅದು ಬೆಟ್ಟಗಳಿರಲಿ, ಗಿಡಗಳು, ಮರಗಳು ಮೊದಲಾದವುಗಳಿರಲಿ. ಅವನು ದೃಶ್ಯವೂ ದೃಷ್ಟಾನೂ (ನೋಡುವವನು) ಆಗಿರುವನು. ಇದರ ಬಗ್ಗೆ ನಿಮಗೆ ನೀವೇ ಮತ್ತೆ ಮತ್ತೆ ನೆನಪಿಸಿಕೊಳ್ಳಿ ಮತ್ತು ವಿಶ್ರಾಮ ಮಾಡಿ. ಅಲ್ಪ ಸಮಯದಲ್ಲೇ ನೀವು ಅಂತಹ ಒಂದು ಆಳವಾದ ಸಮಾಧಿಯ ಸ್ಥಿತಿಯನ್ನು ಹೊಂದುವುದು ನಿಮಗೆ ಕಾಣಿಸುವುದು ಮತ್ತು ನಿಮ್ಮ ಮನಸ್ಸಿಗೆ ಅಷ್ಟೊಂದು ಸಂತೋಷ ಹಾಗೂ ಶಾಂತಿ ಸಿಗುವುದು. ನೀವು ಒಳಗಿನಿಂದ ಎಷ್ಟೊಂದು ಸಂಪೂರ್ಣವಾಗಿ ಅರಳುವಿರೆಂದರೆ, ಬೇರೇನೂ ಇರುವುದಿಲ್ಲ. ಅಷ್ಟೇ.

ಮಹಾಶಿವರಾತ್ರಿಯಂದು ಇದನ್ನೇ ನೀವು ಮಾಡಬೇಕಾಗಿರುವುದು - ಸುಮ್ಮನೇ ವಿಶ್ರಾಮ ಮಾಡಿ ಮತ್ತು ನಿಮ್ಮಲ್ಲಿಯೇ ಆಳವಾದ ವಿಶ್ರಾಂತಿಯನ್ನು ಪಡೆಯಿರಿ.

ನೀವು ಜ್ಞಾನವನ್ನು ಕೇಳುವಾಗ, ಅದು ನಿಮ್ಮ ಮನಸ್ಸು ಹಾಗೂ ಬುದ್ಧಿಗಳನ್ನು ಶುದ್ಧಗೊಳಿಸುತ್ತದೆ. ಮನಸ್ಸು ತಾನು ಸಿಕ್ಕಿಹಾಕಿಕೊಳ್ಳುವ ಸಣ್ಣಪುಟ್ಟ ಆಸೆಗಳನ್ನು ಹಾಗೂ ಬಯಕೆಗಳನ್ನು ಬಿಟ್ಟುಬಿಡುತ್ತದೆ ಮತ್ತು ನಿಮ್ಮ ಮನಸ್ಸು ಶುದ್ಧಗೊಳ್ಳುತ್ತದೆ. ಇದಕ್ಕಾಗಿಯೇ ಪೂಜೆಯಾಗುತ್ತಿರುವಾಗ ಅಥವಾ ಪೂಜೆಯ ಬಳಿಕ ನಾವು ಭಜನೆಗಳನ್ನು ಕೂಡಾ ಹಾಡುವುದು. ಅದು ಎಷ್ಟೊಂದು ಸುಂದರ ಹಾಗೂ ಧ್ಯಾನಕ್ಕೆ ಕರೆದೊಯ್ಯುವುದೆಂದರೆ, ಅಂತಹ ಒಂದು ಪೂಜೆಯ ಬಳಿಕ ಮಾತನಾಡುವುದು ಒಬ್ಬರಿಗೆ ಕಷ್ಟವಾಗುತ್ತದೆ.

ಗುರುದೇವರು ಇವತ್ತು ಸ್ವಲ್ಪ ಜ್ಞಾನವನ್ನು ನೀಡಬೇಕೆಂಬ ಈ ಒಂದು ಬಯಕೆಯು ಇಲ್ಲಿರುವ ಹಲವರ ಹೃದಯಗಳಲ್ಲಿದೆ ಎಂಬುದು ನನಗೆ ಗೊತ್ತು. ಅಲ್ಲವೇ? ಇಲ್ಲಿ ನಿಮ್ಮಲ್ಲಿ ಎಷ್ಟು ಮಂದಿ ನಾನು ಏನಾದರೂ ಮಾತನಾಡಬೇಕೆಂದು ಬಯಸಿದ್ದಿರಿ?

(ಸಭಿಕರಲ್ಲಿ ಹೆಚ್ಚಿನವರು ತಮ್ಮ ಕೈಗಳನ್ನು ಮೇಲೆತ್ತುತ್ತಾರೆ)

ನಿಮಗೆ ಗೊತ್ತಾ, ನಾವು ಶಬ್ದಗಳ ಮೇಲೆ ಅತಿಯಾಗಿ ಅವಲಂಬಿತರಾಗಿದ್ದೇವೆ.

ಈಗ, ಜ್ಞಾನವು ಬುದ್ಧಿಯನ್ನು ಶುದ್ಧಗೊಳಿಸುವಂತೆಯೇ, ಭಜನೆಗಳನ್ನು ಹಾಡುವುದು ನಮ್ಮ ಭಕ್ತಿಯ ಭಾವನೆಯನ್ನು ಶುದ್ಧಗೊಳಿಸುತ್ತದೆ ಹಾಗೂ ಮೇಲಕ್ಕೇರಿಸುತ್ತದೆ. ನಿಮ್ಮ ಮನಸ್ಸು ಮತ್ತು ಭಾವನೆಗಳು ಎರಡೂ ಮೇಲಕ್ಕೆತ್ತಲ್ಪಟ್ಟಾಗ ಹಾಗೂ ಅಷ್ಟೊಂದು ಸಂಪೂರ್ಣವಾಗಿ ಅರಳಿದಾಗ, ನೀವು ಆತ್ಮನ ಅತ್ಯುನ್ನತ ಸ್ಥಿತಿಯನ್ನು ತಲಪಲು, ಎಲ್ಲವನ್ನೂ ದಾಟಿಹೋಗುತ್ತೀರಿ - ಅದುವೇ ಭಗವಾನ್ ಶಿವ, ಮತ್ತು ಅದುವೇ ನೀವು ಮತ್ತು ನಾನು ನಿಜಕ್ಕೂ ಆಗಿರುವುದು. ಆ ಸ್ಥಿತಿಯಲ್ಲಿರುವುದು ಅಥವಾ ಅದನ್ನು ತಲಪುವುದೇ ಮಹಾಶಿವರಾತ್ರಿಯ ಸಾರ.

ದೇವರೊಂದಿಗಿನ ಈ ಆಳವಾದ ಸಂಬಂಧವನ್ನು ಅನುಭವಿಸುವ ನಾಲ್ಕು ಹಂತಗಳಿವೆ. ಒಂದನೆಯದು ಸಾಮೀಪ್ಯ ಎಂದು ಕರೆಯಲ್ಪಡುತ್ತದೆ. ಇದರರ್ಥ, ನಾವು ದೇವರಿಗೆ ಬಹಳ ನಿಕಟರೂ, ಬಹಳ ಪ್ರಿಯರೂ ಆಗಿರುವೆವು ಎಂದು ಭಾವಿಸುವುದು.
ಈಗ, ನಿಮಗೆ ಈ ಅನುಭವವು ಯಾವಾಗ ಸಿಗುವುದು? ಈ ನಿಕಟತೆಯನ್ನು ನೀವು ನಾಳೆ, ನಾಡಿದ್ದು, ಹತ್ತು ದಿನಗಳ ಬಳಿಕ ಅಥವಾ ಕೆಲವು ತಿಂಗಳುಗಳ ಬಳಿಕ ಅನುಭವಿಸುವಿರೇ? ಇಲ್ಲ, ಈಗಲೇ, ಈ ಕ್ಷಣದಲ್ಲೇ, ನೀವು ದೇವರಿಗೆ ಅತೀ ನಿಕಟವಾಗಿರುವಿರಿ ಎಂದು ಭಾವಿಸಿ. ಇದನ್ನೇ ಒಬ್ಬರು ಗುರುಗಳು ಮಾಡುವುದು. ದೇವರೊಂದಿಗಿನ ಆ ಸಾಮೀಪ್ಯವನ್ನು, ಆ ನಿಕಟತೆಯನ್ನು ಅನುಭವಿಸಲು ಒಬ್ಬರು ಗುರುವು ನಿಮಗೆ ಸಹಾಯ ಮಾಡುವರು.

ಎರಡನೆಯ ಹಂತವೆಂದರೆ, ಸಾನ್ನಿಧ್ಯ - ಅಂದರೆ ದೇವರ ಇರುವಿಕೆಯನ್ನು ಅನುಭವಿಸುವುದು ಅಥವಾ ಪ್ರಾರ್ಥಿಸಿ ಕರೆಯುವುದು. ನೀವು ಧ್ಯಾನ ಮಾಡುವಾಗ, ನಿಮಗೆ ದೇವರ ಆ ಇರುವಿಕೆಯ ಅನುಭವವಾಗುತ್ತದೆ (ನಿಮ್ಮೊಳಗೆಯೇ). ಇದರರ್ಥ,  ದೇವರ ಅಸ್ತಿತ್ವದ ಬಗ್ಗೆ ನಿಮಗೆ ಅರಿವಾಗುತ್ತದೆ, ಇರುವಿಕೆಯನ್ನು ನೀವು ಅನುಭವಿಸುತ್ತೀರಿ.

ಉದಾಹರಣೆಗೆ, ಯಾವತ್ತೂ ನಾವು ಗಾಳಿಯಿಂದ ಆವರಿಸಲ್ಪಟ್ಟಿದ್ದೇವೆ, ಆದರೆ ಅದರ ಇರುವಿಕೆಯನ್ನು ನಾವು ಯಾವಾಗಲೂ ಅನುಭವಿಸುವುದಿಲ್ಲ. ನೀವೊಂದು ಆಳವಾದ ಉಸಿರನ್ನು ಒಳಕ್ಕೆಳೆದುಕೊಳ್ಳುವಾಗ, ನಿಮ್ಮ ಸುತ್ತಲೂ ಇರುವ ಗಾಳಿಯ ಇರುವಿಕೆಯು ನಿಮಗೆ ಅರಿವಾಗುತ್ತದೆ. ಅದೇ ರೀತಿಯಲ್ಲಿ, ನಾವು ಯಾವಾಗಲೂ ದೇವರಿಂದ ಆವರಿಸಲ್ಪಟ್ಟಿದ್ದೇವೆ, ಆದರೆ ಅವನ ಇರುವಿಕೆಯು ನಮಗೆ ಅನುಭವವಾಗುವುದಿಲ್ಲ. ದೇವರ ಇರುವಿಕೆಯನ್ನು ಅನುಭವಿಸಲು ನಾವು ಯಜ್ಞಗಳನ್ನು, ಪೂಜೆಗಳನ್ನು ಮಾಡುತ್ತೇವೆ ಹಾಗೂ ಈ ಎಲ್ಲಾ ವಿವಿಧ ಉತ್ಸವಗಳನ್ನು ಆಚರಿಸುತ್ತೇವೆ.

ಮುಂದಿನದು ಸಾರೂಪ್ಯ - ನಿಮ್ಮಲ್ಲಿಯೇ ಮತ್ತು ಎಲ್ಲೆಡೆಯಲ್ಲಿರುವ ಎಲ್ಲಾ ರೂಪಗಳಲ್ಲಿ ದೇವರನ್ನು ನೋಡುವುದು. ಇದರರ್ಥ, ’ದೇವರು ನನ್ನಲ್ಲಿರುವನು ಮತ್ತು ನಾನೇ ದೇವರು’ ಎಂಬ ಭಾವವನ್ನು ಅನುಭವಿಸುವುದು. ’ದೇವರು ನನ್ನ ರೂಪದಲ್ಲಿರುವನು ಮತ್ತು ನನ್ನ ಸುತ್ತಲಿರುವ ಎಲ್ಲಾ ರೂಪಗಳಲ್ಲಿರುವನು’ ಎಂಬುದನ್ನು ಅರಿತುಕೊಳ್ಳುವುದು. ರೂಪವಿಲ್ಲದಿದ್ದರೂ ಕೂಡಾ, ದೇವರು ಎಲ್ಲಾ ರೂಪಗಳಲ್ಲಿರುವನು.

ಅಂತಿಮವಾದ ಸ್ಥಿತಿಯು ಸಾಯುಜ್ಯ - ಅಂದರೆ ದೇವರೊಂದಿಗೆ ಸಂಪೂರ್ಣವಾಗಿ ಒಂದಾಗಿರುವುದನ್ನು ಅನುಭವಿಸುವುದು, ಎಷ್ಟೊಂದು ಪೂರ್ಣವಾಗಿ ಒಂದಾಗುವುದೆಂದರೆ, ನಿಮ್ಮ ಮತ್ತು ದೇವರ ನಡುವೆ ನಿಮಗೆ ಯಾವುದೇ ವ್ಯತ್ಯಾಸವೂ ಕಾಣಿಸುವುದಿಲ್ಲ. ಆ ಸ್ಥಿತಿಯಲ್ಲಿ ಅಲ್ಲಿ ಎರಡಿಲ್ಲ (ದ್ವಂದ್ವವಿಲ್ಲ), ಅಲ್ಲಿರುವುದು ಒಂದೇ ಒಂದು.

ಇದಾಗುವುದು ಆಳವಾದ ಅನುಭವದ ಮೂಲಕ ಮಾತ್ರ. ಒಬ್ಬರಿಗೆ ಅದನ್ನು ಶಬ್ದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ. ಆ ಸಂಪೂರ್ಣವಾದ ಐಕ್ಯತೆಯನ್ನು ಆಳವಾದ ಮೌನದಲ್ಲಿ,  ಆತ್ಮದ ಸ್ಥಿರತೆಯಲ್ಲಿ, ನೀವು ದೇವರೊಂದಿಗೆ ಸಂಪೂರ್ಣವಾಗಿ ಒಂದಾದಾಗ ಮಾತ್ರ ಅನುಭವಿಸಲು ಸಾಧ್ಯ.

ಹೀಗಾಗಿ ಇವತ್ತು, ನೀವು ಮೊದಲ ಎರಡು ಹೆಜ್ಜೆಗಳನ್ನು ತೆಗೆದುಕೊಳ್ಳಬೇಕು - ಮೊದಲನೆಯದು ಸಾಮೀಪ್ಯ, ಅಂದರೆ ದೇವರೊಂದಿಗೆ ಬಹಳ ನಿಕಟತೆಯನ್ನು ಅನುಭವಿಸುವುದು. ಎರಡನೆಯ ಹೆಜ್ಜೆಯೆಂದರೆ, ಸಾನ್ನಿಧ್ಯ - ಎಲ್ಲೆಡೆಯೂ ಎಲ್ಲದರಲ್ಲೂ ದೇವರ ಇರುವಿಕೆಯನ್ನು ಅನುಭವಿಸುವುದು.

ಇವುಗಳು ಜ್ಞಾನದ, ಸಮಾಧಿಯ ಮತ್ತು ಆತ್ಮಸಾಕ್ಷಾತ್ಕಾರದ ನಾಲ್ಕು ಘಟ್ಟಗಳಾಗಿವೆ. ಹೀಗೆ, ಆಳವಾದ ವಿಶ್ರಾಂತಿಯ ಒಂದು ಸ್ಥಿತಿಯಲ್ಲಿ, ನಾವು  ಸರ್ವಶ್ರೇಷ್ಠವಾದುದರೊಂದಿಗೆ, ಅಂದರೆ ಶಿವನೊಂದಿಗೆ ಒಂದಾಗುತ್ತೇವೆ.