ಮಂಗಳವಾರ, ಏಪ್ರಿಲ್ 8, 2014

’ರಾಮ’ನೆಂಬ ನಮ್ಮೊಳಗಿನ ದೈವೀ ಶಕ್ತಿ

ಎಪ್ರಿಲ್ ೮, ೨೦೧೪
ಕೋಲ್ಕತ್ತಾ, ಪಶ್ಚಿಮ ಬಂಗಾಳ

ಪ್ರಶ್ನೆ: ಗುರೂಜಿ, ರಾಮ ಎಂದರೆ ಅರ್ಥವೇನು?

ಶ್ರೀ ಶ್ರೀ ರವಿ ಶಂಕರ್: ರಾಮ ಎಂದರೆ ನಮ್ಮೊಳಗಿನ ಪ್ರಭೆ; ಆತ್ಮನ ಪ್ರಕಾಶ. ’ರವಿ’ ಎಂಬ ಪದಕ್ಕೂ ಅದೇ ಅರ್ಥ. ’ರ’ ಎಂದರೆ ಪ್ರಕಾಶ, ’ವಿ’ ಎಂದರೆ ವಿಶೇಷ. ಇದರರ್ಥ, ನಮ್ಮೊಳಗಿನ ಶಾಶ್ವತವಾದ ಈ ವಿಶೇಷ ಪ್ರಕಾಶ. ನಮ್ಮ ಹೃದಯದಲ್ಲಿನ ಪ್ರಕಾಶವು ರಾಮ ಎಂದು ಕರೆಯಲ್ಪಡುತ್ತದೆ.

ಹೀಗೆ ನಮ್ಮ ಆತ್ಮದ ಪ್ರಕಾಶವು ರಾಮ ಆಗಿದೆ.

’ರಾಮ ನವಮಿ’ಯ ಈ ದಿನವು, ಈ ದೈವಿಕವಾದ ಆಂತರಿಕ ಪ್ರಕಾಶದ ಜನ್ಮವನ್ನು ಆಚರಿಸುತ್ತದೆ. ಭಗವಾನ್ ರಾಮನು ದಶರಥ ರಾಜ ಮತ್ತು ಕೌಶಲ್ಯಾ ರಾಣಿಗೆ ಹುಟ್ಟಿದನು. ಕೌಶಲ್ಯಾ ಎಂದರೆ ಕುಶಲತೆ ಮತ್ತು ದಶರಥ ಎಂದರೆ ಹತ್ತು ರಥಗಳುಳ್ಳವನು. ನಮ್ಮ ಶರೀರದಲ್ಲಿ ಹತ್ತು ಇಂದ್ರಿಯಗಳಿವೆ - ಪಂಚ ಜ್ಞಾನೇಂದ್ರಿಯಗಳು ಮತ್ತು ಪಂಚ ಕರ್ಮೇಂದ್ರಿಯಗಳು (ಎರಡು ಕೈಗಳು, ಎರಡು ಕಾಲ್ಗಳು, ಜನನೇಂದ್ರಿಯ, ವಿಸರ್ಜನಾಂಗ ಮತ್ತು ಬಾಯಿ).

ಸುಮಿತ್ರ ಎಂದರೆ ಎಲ್ಲರೊಂದಿಗೂ ಸ್ನೇಹದಿಂದ ಇರುವವರು. ಕೈಕೇಯಿ ಎಂದರೆ, ಯಾವಾಗಲೂ ಎಲ್ಲರಿಗೂ ನಿಸ್ವಾರ್ಥವಾಗಿ ಕೊಡುವವರು.

ದಶರಥ ರಾಜನು ತನ್ನ ಮೂವರು ಪತ್ನಿಯರೊಂದಿಗೆ ಋಷಿಗಳ ಬಳಿಗೆ ಹೋದನು. ಋಷಿಗಳು ಅವರಿಗೆ ಪ್ರಸಾದವನ್ನು ನೀಡಿದಾಗ ಅದರ ಕೃಪೆಯಿಂದ ಭಗವಾನ್ ರಾಮ, ಲಕ್ಷ್ಮಣ, ಶತ್ರುಘ್ನ ಮತ್ತು ಭರತ ಹುಟ್ಟಿದರು.

ರಾಮ ಎಂದರೆ ಆಂತರಿಕ ಪ್ರಕಾಶ ಮತ್ತು ಲಕ್ಷ್ಮಣ ಎಂದರೆ ಅರಿವು. ಶತ್ರುಘ್ನ ಎಂದರೆ, ಯಾರಿಗೆ ಶತ್ರುಗಳಿಲ್ಲವೋ ಅವನು ಅಥವಾ ಯಾರು ಯಾವುದೇ ವಿರೋಧವನ್ನು ಎದುರಿಸುವುದಿಲ್ಲವೋ ಅವನು. ಭರತ ಎಂದರೆ ಪ್ರತಿಭಾನ್ವಿತನಾದ ಒಬ್ಬನು.
ಅಯೋಧ್ಯ (ಭಗವಾನ್ ರಾಮನ ಜನ್ಮಸ್ಥಳ) ಎಂದರೆ, ಯಾವುದನ್ನು ನಾಶಪಡಿಸಲು ಸಾಧ್ಯವಿಲ್ಲವೋ ಅದು. ಕಥೆಯ ಸಾರವು ಹೀಗಿದೆ: ನಮ್ಮ ಶರೀರವು ಅಯೋಧ್ಯೆಯಾಗಿದೆ. ನಮ್ಮ ಶರೀರದ ರಾಜನು ಐದು ಜ್ಞಾನೇಂದ್ರಿಯಗಳು ಮತ್ತು ಐದು ಕರ್ಮೇಂದ್ರಿಯಗಳು. ಶರೀರದ ರಾಣಿಯು ಕುಶಲತೆ ಆಗಿದೆ. ನಮ್ಮೆಲ್ಲಾ ಜ್ಞಾನಗಳು ಹೊರಮುಖವಾಗಿವೆ. ಕುಶಲತೆಯನ್ನು ಬಳಸಿ ನಾವು ಅವುಗಳನ್ನು ಒಳಮುಖವಾಗಿ ತರುತ್ತೇವೆ ಮತ್ತು ಆಗಲೇ ದೈವಿಕವಾದ ಶಾಶ್ವತ ಪ್ರಕಾಶ, ಅಂದರೆ ಭಗವಾನ್ ರಾಮನು ನಮ್ಮೊಳಗೆ ಉದಯಿಸುವುದು.

ಭಗವಾನ್ ರಾಮನು ನವಮಿಯಂದು ಜನಿಸಿದನು. ನವಮಿಯ (ಒಂಭತ್ತನೆಯ ದಿನದ) ಮಹತ್ವವನ್ನು ನಾನು ಬೇರೆ ಯಾವಾಗಲಾದರೂ ವಿವರಿಸುತ್ತೇನೆ.

ಮನಸ್ಸು (ಸೀತೆ), ಅಹಂಕಾರದಿಂದ (ರಾವಣ) ಅಪಹರಿಸಲ್ಪಟ್ಟಾಗ, ದೈವಿಕ ಪ್ರಕಾಶವು ಅರಿವಿನೊಂದಿಗೆ (ಲಕ್ಷ್ಮಣ) ಜೊತೆಯಾಗಿ, ಭಗವಾನ್ ಹನುಮಂತನ (ಪ್ರಾಣವನ್ನು ಸೂಚಿಸುತ್ತಾ) ಭುಜಗಳ ಮೇಲೆ ಅವಳನ್ನು ಮನೆಗೆ ಮರಳಿ ತಂದರು. ಈ ರಾಮಾಯಣವು ನಮ್ಮ ಶರೀರದಲ್ಲಿ ಸದಾಕಾಲ ನಡೆಯುತ್ತಾ ಇರುತ್ತದೆ.

ಪ್ರಶ್ನೆ: ಗುರುದೇವ, ಪ್ರೀತಿಯು ಒಂದು ಭಾವನೆಯಲ್ಲದಿದ್ದರೆ ಮತ್ತದು ಏನು?

ಶ್ರೀ ಶ್ರೀ ರವಿ ಶಂಕರ್: ಅದು ನಮ್ಮ ಅಸ್ತಿತ್ವವೇ ಆಗಿದೆ. ನಾನು ನಿಮಗೆ ಕೇವಲ ಮೂರು ವಿಷಯಗಳನ್ನು ಮಾತ್ರ ಹೇಳುತ್ತೇನೆ: ಹೃದಯದಲ್ಲಿ ಶುದ್ಧತೆ, ಮನಸ್ಸಿನಲ್ಲಿ ಸ್ಪಷ್ಟತೆ ಮತ್ತು ಕಾರ್ಯದಲ್ಲಿ ಪ್ರಾಮಾಣಿಕತೆ. ಇದು ಆಧ್ಯಾತ್ಮದ ಸಾರವಾಗಿದೆ. ನಿಮ್ಮಲ್ಲಿ ಈ ಮೂರು ಇದ್ದರೆ, ಹಲವಾರು ಸಮಸ್ಯೆಗಳು ಮೊಗ್ಗಾಗಿರುವಾಗಲೇ ಅಲ್ಲಿಯೇ ಆಗಲೇ ಕಿತ್ತು ಹಾಕಲ್ಪಡುತ್ತದೆ.

ಪ್ರಶ್ನೆ: ಗುರುದೇವ, ನಿಮ್ಮನ್ನು ಭೇಟಿಯಾದ ಬಳಿಕವೂ ಜನರು ನಿಷ್ಠುರವಾಗಿ ಹಾಗೂ ಮತ್ಸರದಿಂದ ವರ್ತಿಸುವುದನ್ನು ಮುಂದುವರಿಸುವುದು ಯಾಕೆ? ಇದಕ್ಕೆ ಕಾರಣವೇನು?

ಶ್ರೀ ಶ್ರೀ ರವಿ ಶಂಕರ್: ಇತರರ ಬಗ್ಗೆ ಚಿಂತಿಸುವುದು ಬೇಡವೆಂದು ನಾನು ನಿನಗೆ ಸಲಹೆ ನೀಡುವೆ. ಸುಮ್ಮನೆ ಊಹಿಸಿ ನೋಡು, ಅವರು ಈ ಪಥದ ಮೇಲೆ ಇರದಿರುತ್ತಿದ್ದರೆ, ಅವರು ಎಷ್ಟೊಂದು ನಿಷ್ಠುರರಾಗಿರುತ್ತಿದ್ದರು. ನಾನು ಅವರನ್ನು ಸ್ವೀಕರಿಸುತ್ತೇನೆ ಮತ್ತು ಸುಧಾರಿಸಲು ಅವರಿಗೆ ಸಾಕಷ್ಟು ಸಮಯವನ್ನು ನೀಡುತ್ತೇನೆ. ಸಮಯದೊಂದಿಗೆ ಜನರು ಬದಲಾಗುತ್ತಾರೆ. ಜನರು ಸುಧಾರಿಸುತ್ತಾರೆ. ಇತರರನ್ನು ನೋಡುವುದರಲ್ಲಿ ಮತ್ತು ಅವರನ್ನು ಗಮನಿಸುವುದರಲ್ಲಿ ನೀನು ಸಿಕ್ಕಿಹಾಕಿಕೊಳ್ಳಬಾರದು. ನೀನು ನಿನ್ನನ್ನೇ ನೋಡು. ಪಥದ ಮೇಲೆ ಬಂದ ಬಳಿಕ ನೀನು ಎಷ್ಟು ಬದಲಾಗಿರುವೆ ಎಂಬುದರ ಬಗ್ಗೆ ಸುಮ್ಮನೆ ಮೌನವಾಗಿ ಚಿಂತನೆ ಮಾಡು ಮತ್ತು ಗಮನಿಸು. ನೀನು ನಿನ್ನದೇ ಪ್ರಗತಿಯನ್ನು ನೋಡು. ಕೆಲವು ಜನರು ನಿಧಾನವಾಗಿ ಕಲಿಯುವವರಾಗಿರುತ್ತಾರೆ, ಕೆಲವರು ವೇಗವಾಗಿ ಕಲಿಯುವವರಾಗಿರುತ್ತಾರೆ. ಜೀವನದಲ್ಲಿ ಹೀಗೆ ಆಗುತ್ತದೆ.

ಪ್ರಶ್ನೆ: ಗುರುದೇವ, ಸೇಡು ಸಮರ್ಥನೀಯವೇ?

ಶ್ರೀ ಶ್ರೀ ರವಿ ಶಂಕರ್: ಸೇಡು ಎಂಬುದು ಅವಿವೇಕ ಮತ್ತು ಮೂರ್ಖತನದ ಒಂದು ಸಂಕೇತವಾಗಿದೆ. ಯಾವುದೇ ಸೇಡು ತೋರಿಸುವುದೇನೆಂದರೆ, ನೀವು ನಿಮ್ಮ ದೃಷ್ಟಿಯನ್ನು ಕಳಕೊಂಡಿರುವಿರೆಂದು, ನೀವು ಕುರುಡರಾಗಿರುವಿರೆಂದು.

ಪ್ರಶ್ನೆ: ಗುರುದೇವ, ನನ್ನ ಎಲ್ಲಾ ಬಯಕೆಗಳು ಪೂರೈಸಲ್ಪಡುತ್ತಿರುವುದು ಯಾಕೆ?

ಶ್ರೀ ಶ್ರೀ ರವಿ ಶಂಕರ್: ನೀನು ಏನನ್ನಾದರೂ ಬಯಸುವಾಗ ನಿನಗದು ಸಿಗುತ್ತದೆ. ಅದು ಸಹಜವೇ ಆಗಿದೆ. ಒಂದು ಕಂಪ್ಯೂಟರ್‌ನಲ್ಲಿ ನೀನೊಂದು ಗುಂಡಿಯನ್ನು ಅದುಮಿದಾಗ ಅದು ಕೆಲಸ ಮಾಡುವಂತೆಯೇ, ಅದೇ ರೀತಿಯಲ್ಲಿ, ನಿನ್ನ ಮನಸ್ಸಿನಲ್ಲೊಂದು ಬಯಕೆಯಿರುವಾಗ, ಅದು ಖಂಡಿತವಾಗಿಯೂ ಪ್ರಕಟವಾಗುತ್ತದೆ. ಅದು ಯಾಕೆ ಪೂರೈಸಲ್ಪಡುತ್ತದೆಯೆಂದು ಯಾರಾದರೂ ಕೇಳುತ್ತಿರುವುದು ಇದು ಮೊದಲ ಸಲವೆಂದು ನನಗನಿಸುತ್ತದೆ. ನಿನ್ನ ಬಯಕೆಗಳು ಪೂರೈಸಲ್ಪಡುವುದು ನಿನಗೆ ಅಷ್ಟೊಂದು ಒಗ್ಗಿ ಹೋಗಿದೆಯಾ? ನೀನೊಬ್ಬ ಅನ್ವೇಷಕನಾಗಿ, ನಿಯಮಿತವಾಗಿ ನಿನ್ನ ಸಾಧನೆಯ (ಆಧ್ಯಾತ್ಮಿಕ ಅಭ್ಯಾಸಗಳು) ಕಡೆಗೆ ಗಮನ ಹರಿಸಿದಾಗ, ನಿನ್ನ ಬಯಕೆಗಳು ತನ್ನಿಂತಾನೇ ಪೂರೈಸಲ್ಪಡಲು ತೊಡಗುವುದನ್ನು ನೀನು ನೋಡುವೆ. ಆಗ ನೀನು, ಅದು ಯಾಕೆ ಪೂರೈಸಲ್ಪಡುವುದೆಂದು ಕೇಳಲೂಬಹುದು ಮತ್ತು ಅದು ಸ್ವಲ್ಪ ಅಸ್ವಾಭಾವಿಕವಾದುದೆಂದು ಯೋಚಿಸಲೂಬಹುದು. ನಾನು ಹೇಳುವುದಾದರೆ, ಅದು ಸಂಪೂರ್ಣವಾಗಿ ಸ್ವಾಭಾವಿಕವಾದುದು. ನಿನಗದು ಅಭ್ಯಾಸವಾಗಿಬಿಡುತ್ತದೆ.

ಪ್ರಶ್ನೆ: ಗುರುದೇವ, ತಮ್ಮ ಹೆಣ್ಣು ಮಗುವಿನ ಸೂಕ್ತ ಮತ್ತು ಸುರಕ್ಷಿತವಾದ ಜೀವನಕ್ಕೆ ವಿವಾಹವು ಆವಶ್ಯಕವೆಂದು ಹಲವು ಹೆತ್ತವರು ನಂಬುತ್ತಾರೆ. ನಿಮಗೇನನ್ನಿಸುತ್ತದೆ? ಆರಾಮದಾಯಕವಾದ ಹಾಗೂ ಸುರಕ್ಷಿತವಾದ ಜೀವನಕ್ಕೆ ವಿವಾಹವು ಎಷ್ಟರ ಮಟ್ಟಿಗೆ ಆವಶ್ಯಕವಾದುದು?

ಶ್ರೀ ಶ್ರೀ ರವಿ ಶಂಕರ್: ಇಲ್ಲ, ವಿವಾಹವು ಕೇವಲ ಒಬ್ಬಳು ಹುಡುಗಿಯ ಸುರಕ್ಷತೆಗಾಗಿ ಮಾತ್ರ ಇರುವುದಲ್ಲ. ಅದೊಂದು ವೈಯಕ್ತಿಕ ಆಯ್ಕೆ ಕೂಡಾ ಆಗಿದೆ. ಆದರೆ ನಾನು ನಿನಗೆ ಒಂದು ವಿಷಯವನ್ನು ಹೇಳುತ್ತೇನೆ. ವಿವಾಹವಾದ ನಂತರ ಕೂಡಾ, ಸಂತೋಷವಾಗಿರು. ವಿವಾಹವಾದ ಹೊರತಾಗಿಯೂ ಕೆಲವು ಜನರು ದುಃಖಿತರಾಗಿದ್ದಾರೆ ಮತ್ತು ಕೆಲವರು ಅವಿವಾಹಿತರಾಗಿದ್ದುಕೊಂಡು ಕೂಡಾ ದುಃಖಿತರಾಗಿದ್ದಾರೆ.

ಪ್ರಶ್ನೆ: ಗುರುದೇವ, ನಾನು ಮೊದಲ ಬಾರಿಗೆ ಮತದಾರನಾಗಿದ್ದೇನೆ. ನನ್ನ ಕ್ಷೇತ್ರದ ನಾಯಕನು, ಒಬ್ಬರು ಬಯಸಬಹುದಾದಷ್ಟು ಪ್ರಬಲ ಅಭ್ಯರ್ಥಿಯಲ್ಲ. ಆದರೂ ನಾನು, ಆ ಪಕ್ಷದ ನಾಯಕರು ಚುನಾವಣೆಯಲ್ಲಿ ಗೆಲ್ಲಬೇಕೆಂದು ಬಯಸುತ್ತೇನೆ. ಹಾಗಾದರೆ ನಾನೇನು ಮಾಡುವುದು?

ಶ್ರೀ ಶ್ರೀ ರವಿ ಶಂಕರ್: ರಾಷ್ಟ್ರೀಯ ಚುನಾವಣೆಯ ವಿಷಯದಲ್ಲಿ ಸ್ಥಳೀಯ ಅಭ್ಯರ್ಥಿಯನ್ನು ನೋಡಿ ಮತದಾನ ಮಾಡುವುದು ಬೇಡವೆಂದು ನಾನು ಸಲಹೆ ನೀಡುತ್ತೇನೆ. ದೇಶದ ಪ್ರಧಾನ ಮಂತ್ರಿಯನ್ನಾಗಿ ಯಾರನ್ನು ಮಾಡಬೇಕೆಂದು ನೀವು ಬುದ್ಧಿವಂತಿಕೆಯಿಂದ ಮೌಲ್ಯಮಾಪನ ಮಾಡಬೇಕು.

ಪುರಸಭೆಯ ಚುನಾವಣೆಯ ವಿಷಯ ಬಂದಾಗ, ನೀವು ಅಭ್ಯರ್ಥಿಯ ಬಗ್ಗೆ ಎಲ್ಲವನ್ನೂ ತಿಳಿದುಕೊಳ್ಳಬೇಕು.

ಆದರೆ ರಾಷ್ಟ್ರೀಯ ಮಟ್ಟದಲ್ಲಿ, ರಾಷ್ಟ್ರದ ಹಿತಾಸಕ್ತಿಗಳ ಕಡೆಗೆ ನೋಡಿ. ಯಾರು ಹೃದಯದಿಂದ ಮಾತನಾಡುವರೋ ಅವರಿಗೆ ಮತ ಹಾಕಿ. ಬೇರೆ ಯಾರಿಂದಲೋ ಸಿದ್ಧಪಡಿಸಲ್ಪಟ್ಟ ಒಂದು ಭಾಷಣವನ್ನೋದುವ ಒಬ್ಬ ಪ್ರಧಾನ ಮಂತ್ರಿಯು ನಮಗೆ ಬೇಕಾಗಿಲ್ಲ. ಒಬ್ಬ ಪ್ರಬಲನಾದ ನಾಯಕ ಮತ್ತು ತನ್ನ ಮನಸ್ಸು ಹಾಗೂ ಅಭಿಪ್ರಾಯಗಳನ್ನು ನಿರ್ಭಯವಾಗಿ ವ್ಯಕ್ತಪಡಿಸುವ ಒಬ್ಬರು ನಮಗೆ ಬೇಕು.

ನೋಡಿ, ಒಂದು ರಾಜಕೀಯ ಪಕ್ಷ ಅಥವಾ ಇನ್ನೊಂದರ ಕಡೆಗೆ ಒಲವು ತೋರುವ ಅಥವಾ ಬೆಂಬಲಿಸುವ ಅಧಿಕಾರ ಪ್ರತಿಯೊಬ್ಬರಿಗೂ ಇದೆ. ಅದು ಪರವಾಗಿಲ್ಲ. ಆದರೆ ರಾಷ್ಟ್ರ ಮತ್ತು ಅದರ ಹಿತಾಸಕ್ತಿಗಳ ವಿಷಯದಲ್ಲಿ, ನೀವು ನಿಮ್ಮೆಲ್ಲಾ ರಾಜಕೀಯ ಮತ್ತು ಪ್ರಾದೇಶಿಕ ಆದ್ಯತೆಗಳನ್ನು ಬದಿಗಿಟ್ಟು, ಮೊದಲು ದೇಶದ ಬಗ್ಗೆ ಏಕಮನಸ್ಕತೆಯಿಂದ ಯೋಚಿಸಬೇಕು.

ತಾನು ನೀಡಿದ ಭರವಸೆಗಳನ್ನು ಯಾರು ನಿಜಕ್ಕೂ ಪೂರೈಸಬಲ್ಲರೋ ಮತ್ತು ಒಳ್ಳೆಯ ಕೆಲಸವನ್ನು ಮಾಡಬಲ್ಲರೋ ಅಂತಹ ಒಬ್ಬ ಪ್ರಬಲ ಅಭ್ಯರ್ಥಿಗಾಗಿ ಹುಡುಕಿ ಮತ್ತು ನಂತರ ಅದರಂತೆ ಅವರಿಗೆ ಮತ ನೀಡಿ. ಇತರರಿಗೆ ಕೂಡಾ ಇದನ್ನು ಹೇಳಿ ಮತ್ತು ಅವರು ಅದನ್ನು ಅರ್ಥೈಸಿಕೊಳ್ಳುವಂತೆ ಮಾಡಿ. ನಾನಿದನ್ನು ಯಾಕೆ ಹೇಳುತ್ತಿರುವೆನೆಂದು ನಾನು ಹೇಳುತ್ತೇನೆ.

ಇವತ್ತು ಒಂದು ಡಾಲರ್ ೬೫ ರೂಪಾಯಿಗಳಿಗೆ ಸರಿಸಮಾನವಾಗಿದೆ. ಕೇಂದ್ರದಲ್ಲಿ ಒಬ್ಬ ಬಲಹೀನ ವ್ಯಕ್ತಿಯು ಅಧಿಕಾರಕ್ಕೆ ಬಂದರೆ, ಒಂದು ಡಾಲರ್ ಬೆಲೆ ಬಲವಾಗಿ, ೧೦೦ ರೂಪಾಯಿಗಳಿಗೆ ಸಮಾನವಾಗುತ್ತದೆ. ಹೀಗಾಗಬೇಕೆಂದು ಇತರ ರಾಷ್ಟ್ರಗಳು ಬಯಸುತ್ತವೆ ಯಾಕೆಂದರೆ, ಆಗ ಭಾರತದಿಂದ ವಸ್ತುಗಳನ್ನು ಖರೀದಿಸುವುದು ಅಗ್ಗವಾಗುತ್ತದೆ. ಆದರೆ ಇಲ್ಲಿ, ನಮಗೆ ಎಲ್ಲವೂ ಹೆಚ್ಚು ದುಬಾರಿಯಾಗುತ್ತವೆ. ದೈನಂದಿನ ಪದಾರ್ಥಗಳ ಬೆಲೆಗಳು ಗಗನಕ್ಕೇರುತ್ತವೆ. ಕೇಂದ್ರದಲ್ಲಿ ಒಬ್ಬ ಪ್ರಬಲನಾದ ವ್ಯಕ್ತಿಯು ಅಧಿಕಾರಕ್ಕೆ ಬಂದರೆ, ಆಗ ರೂಪಾಯಿಯು ಶಕ್ತಿ ಗಳಿಸಿಕೊಂಡು, ಡಾಲರ್‌ನ ಖರೀದಿಸುವ ಶಕ್ತಿಯು ೪೦ ರೂಪಾಯಿಗಳಿಗೆ ಇಳಿಯಬಹುದೆಂದು ಇತರ ರಾಷ್ಟ್ರಗಳು ಹೆದರುತ್ತಿವೆ.

ನಮ್ಮ ರಾಷ್ಟ್ರದ ಆರ್ಥಿಕ ಸ್ಥಿತಿಯು ಬಲವಾಗುವುದು ನಿರ್ದಿಷ್ಟವಾದ ವಿದೇಶಗಳಿಗೆ ಬೇಕಾಗಿಲ್ಲ.

ಕಳೆದ ಐದು ವರ್ಷಗಳಲ್ಲಿ ನಮ್ಮಲ್ಲಿ ಕೋಟಿಗಟ್ಟಲೆ ರೂಪಾಯಿಗಳಷ್ಟು ಮೌಲ್ಯದ ೩೦ ಹಗರಣಗಳಾಗಿವೆ. ೧.೪ ಟ್ರಿಲಿಯನ್ ಡಾಲರ್ ಮೌಲ್ಯದ ಭಾರತೀಯ ಹಣವು ಅಕ್ರಮವಾದ ಕಪ್ಪುಹಣದ ರೂಪದಲ್ಲಿ ರಹಸ್ಯವಾಗಿ ನಮ್ಮ ದೇಶದಿಂದ ಹೊರಕ್ಕೆ ಕಳ್ಳಸಾಗಾಣಿಕೆ ಮಾಡಲ್ಪಟ್ಟಿದೆ ಎಂದು ಹೇಳಲಾಗುತ್ತದೆ.

ಒಮ್ಮೆ ನಾನು ವಿದೇಶ ಪ್ರವಾಸಕ್ಕೆ ಹೋಗಿದ್ದಾಗ, ಆ ದೇಶದ ಒಬ್ಬ ಸಜ್ಜನನು ನನ್ನಲ್ಲಿ, ಎರಡು ಬಿಲಿಯನ್ ಡಾಲರ್ ಮೌಲ್ಯದ ಭಾರತೀಯ ಹಣವು ತನ್ನ ದೇಶದ ಬ್ಯಾಂಕ್‌ನಲ್ಲಿ ಒಬ್ಬ ಭಾರತೀಯ ರಾಜಕಾರಣಿಯಿಂದ ಇರಿಸಲ್ಪಟ್ಟದ್ದಾಗಿ ಹೇಳಿದನು.
ಅವನು ನನ್ನಲ್ಲಿ ಕುತೂಹಲದಿಂದ, "ನಿಮ್ಮ ದೇಶದಲ್ಲಿ ಅಷ್ಟೊಂದು ಭ್ರಷ್ಟಾಚಾರವಿರುವುದನ್ನು ನೀವು ಹೇಗೆ ಸಹಿಸುತ್ತಿರುವಿರಿ?" ಎಂದು ಕೇಳಿದನು.
ಈಗ ನಾನು ಅವನಿಗೆ ಏನೆಂದು ಹೇಳಲು ಸಾಧ್ಯ! ಜನರು ಈಗ ಈ ಎಲ್ಲಾ ಸಮಸ್ಯೆಗಳ ಬಗ್ಗೆ ಹೆಚ್ಚು ಹೆಚ್ಚು ಜಾಗೃತರಾಗುತ್ತಿದ್ದಾರೆ ಮತ್ತು ಅವರು ಅಂತಹ ಭ್ರಷ್ಟ ಜನರನ್ನು ಕಂಬಿ ಎಣಿಸುವಂತೆ ಮಾಡುತ್ತಾರೆ ಎಂದು ನಾನು ಅವನಿಗೆ ಹೇಳಿದೆ. ಬದಲಾವಣೆಯ ಸಮಯ ಬಂದಿದೆ. ನಾವೆಲ್ಲರೂ ಇದನ್ನು ಮಾಡಬೇಕು. ಆಹಾರ ಧಾನ್ಯಗಳ ಬೆಲೆಗಳು ಪ್ರಪಂಚದ ಬೇರೆ ಎಲ್ಲೆಡೆಗಳಲ್ಲೂ ನಿಜಕ್ಕೂ ಇಳಿಯುತ್ತಿರುವಾಗ, ಅದು ಭಾರತದಲ್ಲಿ ಮಾತ್ರ ಯಾಕೆ ಏರುತ್ತಿದೆಯೆಂದು ಯಾರಿಗೂ ಅರ್ಥವಾಗುತ್ತಿಲ್ಲ! ಯಾವುದೇ ಅರ್ಥಶಾಸ್ತ್ರಜ್ಞರಿಗೂ ಇದು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದೆಲ್ಲವೂ ಭ್ರಷ್ಟಾಚಾರದಿಂದಾಗಿ.

ನಾವೊಂದು ಬೃಹತ್ತಾದ ತೈಲ ನಿಕ್ಷೇಪಗಳ ಸಂಪತ್ತಿನ ಮೇಲೆ ಕುಳಿತಿದ್ದೇವೆ ಮತ್ತು ಆದರೂ ನಾವು ತೈಲವನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ. ನಮ್ಮಲ್ಲಿ ಬಹಳಷ್ಟು ಕಬ್ಬಿಣದ ಅದಿರಿದೆ, ಆದರೂ ನಾವು ಉಕ್ಕನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ ಮತ್ತು ಅದೇ ರೀತಿಯಲ್ಲಿ ಚಿನ್ನ ಕೂಡಾ.

ಇದು ಬಹಳ ವಿವಾದಾತ್ಮಕವಾದುದು. ಈ ದೇಶಕ್ಕೆ ಅತ್ಯಗತ್ಯವಾಗಿ ಬದಲಾವಣೆಯು ಬೇಕಾಗಿದೆ ಎಂದು ನಾನು ಹೇಳುವುದು ಇದಕ್ಕೇ.

ಪ್ರಶ್ನೆ: ಗುರುದೇವ, ದೇಶದ ಸಂಸದೀಯ ವ್ಯವಸ್ಥೆಯು ಕೆಟ್ಟದಾಗಿರುವುದರಿಂದ ನಾವು ಮತದಾನ ಮಾಡಬಾರದೆಂದು ಕೆಲವು ಜನರು ಹೇಳುತ್ತಾರೆ. ಇದರ ಬಗ್ಗೆ ನಾವೇನು ಮಾಡುವುದು? ನಾವು ಮತದಾನ ಮಾಡಬಾರದೇ?

ಶ್ರೀ ಶ್ರೀ ರವಿ ಶಂಕರ್: ಮತದಾನ ಮಾಡಬಾರದೆಂದೂ, ’ನೋಟಾ’ (’ಅನ್ವಯಿಸುವುದಿಲ್ಲ’ ಎಂಬುದನ್ನು ಸೂಚಿಸುವ, ಅಂದರೆ ಯಾರಿಗೂ ಮತವಿಲ್ಲ ಎಂದು ಅರ್ಥ) ಆಯ್ಕೆಯನ್ನು ಮಾಡಬೇಕೆಂದೂ ಮಾವೋವಾದಿಗಳು ಹೇಳುತ್ತಿದ್ದಾರೆಂದು ನಾನು ಕೇಳಿದೆ. ನಿಮ್ಮ ಮತವನ್ನು ವ್ಯರ್ಥ ಮಾಡಬೇಡಿರೆಂದು ನಾನು ನಿಮ್ಮಲ್ಲಿ ಕೇಳಿಕೊಳ್ಳುತ್ತೇನೆ. ನಿಮ್ಮ ಮತವು ಬಹಳ ಮುಖ್ಯ.

ಭ್ರಷ್ಟರನ್ನು ಎದುರಿಸಲು ನಿಮಗೆ ಶಕ್ತಿಯಿಲ್ಲದಿರುವಾಗ, ನೀವು ಕಡಿಮೆ ಭ್ರಷ್ಟರಾಗಿರುವ ಜನರನ್ನು ಬಳಸಿ ಹೆಚ್ಚು ಭ್ರಷ್ಟರಾಗಿರುವ ಜನರನ್ನು ತೆಗೆದುಹಾಕಬೇಕು.

ಪ್ರಶ್ನೆ: ಗುರುದೇವ, ಹೆಚ್ಚಿನ ಪಕ್ಷಗಳು ತಮ್ಮ ಚುನಾವಣಾ ಅಭ್ಯರ್ಥಿಗಳನ್ನು ಕೇವಲ ಒಂದು ವಾರ ಮೊದಲು ಘೋಷಿಸಿವೆ. ಇದು ಸರಿಯೇ?

ಶ್ರೀ ಶ್ರೀ ರವಿ ಶಂಕರ್: ಅಲ್ಲ, ಇದು ತಪ್ಪು. ಇಲ್ಲಿ ಚುನಾವಣಾ ಸುಧಾರಣೆಗಳನ್ನು ಜಾರಿಗೆ ತರಬೇಕು ಮತ್ತು ಜನರಿಗೆ ಅಭ್ಯರ್ಥಿಗಳೊಂದಿಗೆ ಸಂವಾದ ಮಾಡಲು ಸಾಧ್ಯವಾಗಲು ಹಾಗೂ ಮತ ಹಾಕಲು ನಿರ್ಧರಿಸುವ ಮೊದಲು ಅವರ ಕೆಲಸವನ್ನು ನೋಡಲು, ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಚುನಾವಣೆಯ ಆರು ತಿಂಗಳು ಮೊದಲು ಪ್ರಕಟಿಸಬೇಕು.

ಪ್ರಶ್ನೆ: ಗುರುದೇವ, ಭಾರತದಲ್ಲಿ ಈಗಾಗಲೇ ಹಲವಾರು ವಿಶ್ವವಿದ್ಯಾಲಯಗಳಿವೆ, ಹೀಗಿರುವಾಗ ಶ್ರೀ ಶ್ರೀ ವಿಶ್ವವಿದ್ಯಾಲಯ ಯಾಕೆ?

ಶ್ರೀ ಶ್ರೀ ರವಿ ಶಂಕರ್: ಹಲವು ವಿದ್ಯಾರ್ಥಿಗಳು ವಿದೇಶಕ್ಕೆ ಹೋಗಿ ಏಟು ತಿನ್ನುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಒಂದು ವರ್ಷದಲ್ಲಿ, ೨೨ಕ್ಕಿಂತಲೂ ಹೆಚ್ಚು ಸಾವುಗಳು ಸಂಭವಿಸಿವೆ.

ಪೂರ್ವ ಮತ್ತು ಪಶ್ಚಿಮಗಳಲ್ಲಿ ಅತ್ಯುತ್ತಮವಾದುದನ್ನು ಇಲ್ಲಿಯೇ ಪಡೆಯಲು ಸಾಧ್ಯವಿರುವಾಗ ನಮ್ಮ ಜನರು ಜನಾಂಗೀಯ ತಾರತಮ್ಯವನ್ನು ಯಾಕೆ ಎದುರಿಸಬೇಕು?

ಹೀಗಾಗಿ ನಾವು ಈ ವಿಶ್ವವಿದ್ಯಾಲಯವನ್ನು ಮತ್ತು ಇದರ ಪ್ರಕಾರವಾಗಿ ಕೋರ್ಸಿನ ಪಠ್ಯಕ್ರಮಗಳನ್ನು ಸಂಘಟಿಸಿದೆವು. ನಾವು ನಿಜಕ್ಕೂ ಮತ್ತೊಮ್ಮೆ ನಲಂದ ಮತ್ತು ತಕ್ಷಶಿಲೆಗಳಂತಹ ವಿಶ್ವವಿದ್ಯಾಲಯಗಳನ್ನು ಸೃಷ್ಟಿಸಬಲ್ಲೆವು. ಅಲ್ಲಿ ಪ್ರಪಂಚದೆಲ್ಲೆಡೆಯಿಂದ ಜನರು ಬಂದು ಶಿಕ್ಷಣವನ್ನು ಪಡೆಯಬಹುದು.

ಪ್ರಶ್ನೆ: ಗುರುದೇವ, ನಾನು ದೇವರನ್ನು ಭೇಟಿಯಾಗುವಂತೆ ನೀವು ಮಾಡಬಲ್ಲಿರಾ?

ಶ್ರೀ ಶ್ರೀ ರವಿ ಶಂಕರ್: ಖಂಡಿತಾ, ನಾನಿಲ್ಲಿರುವುದು ಸರಿಯಾಗಿ ಅದನ್ನೇ ಮಾಡಲು. ಮೊದಲು, ಒಳಗಿನಿಂದ ಸಂಪೂರ್ಣವಾಗಿ ತೃಪ್ತನಾಗು ಮತ್ತು ಸಂತೋಷದಿಂದಿರು. ನಂತರ ನಿನಗೆ ಬೇಕಾಗಿರುವುದೆಲ್ಲಾ ನಿನಗೆ ಸಿಗುವುದು.


ಈ ಬರಹದ ’ಸ್ಪೀಕಿಂಗ್ ಟ್ರೀ’ ಲಿಂಕ್:
http://www.speakingtree.in/public/spiritual-slideshow/seekers/self-improvement/ramayana-values-remembered-during-election-season