ಸೋಮವಾರ, ನವೆಂಬರ್ 3, 2014

ಗೋಹತ್ಯೆಗೆ ಪೂರ್ಣವಿರಾಮ ಹಾಕಿ

ನವೆಂಬರ್ ೩, ೨೦೧೪
ದೆಹಲಿ, ಭಾರತ

ಲ್ಲಿ ಶ್ರೀಯುತ ಗೋಪಾಲ ಅವರು ನಿಜಕ್ಕೂ ತಮ್ಮ ಹೆಸರಿಗೆ ತಕ್ಕಂತೆ ಜೀವಿಸುತ್ತಿದ್ದಾರೆ - ಗೋಪಾಲ (ಶ್ರೀಕೃಷ್ಣ ಪರಮಾತ್ಮನ ಇನ್ನೊಂದು ಹೆಸರು, ದನಗಳನ್ನು ನೋಡಿಕೊಳ್ಳುವವನು ಎಂಬ ಅರ್ಥ). ಗೋವುಗಳ ಸಂರಕ್ಷಣೆಗಾಗಿ ಅವರು ತಮ್ಮನ್ನು ತಾವು ಮೀಸಲಾಗಿಟ್ಟಿದ್ದಾರೆ.

ಬಹಳ ದೀರ್ಘ ಕಾಲದಿಂದ ನಾನು ಇಲ್ಲಿಗೆ ಬರಲು ಬಯಸುತ್ತಿದ್ದೇನೆ, ಆದರೆ ಹೇಗೋ ಅದು ಕೂಡಿಬರುತ್ತಿರಲಿಲ್ಲ. ಇವತ್ತು ಮಧ್ಯಾಹ್ನ ೧:೪೫ಕ್ಕೆ ನಾನು ದಿಲ್ಲಿಯಿಂದ ಹೈದರಾಬಾದಿಗೆ ವಿಮಾನದಲ್ಲಿ ಪ್ರಯಾಣಿಸಬೇಕಾಗಿತ್ತು. ಇವತ್ತು ಸಂಜೆ ಅಲ್ಲಿ ಗೋಪಾಷ್ಟಮಿ (ಗೋವನ್ನು ತಾಯಿಯಾಗಿ ಗೌರವಿಸುವುದಕ್ಕಾಗಿ ಆಚರಿಸಲಾಗುವ ಭಾರತದ ಒಂದು ಸಾಂಪ್ರದಾಯಿಕ ಹಬ್ಬ) ಆಚರಣೆಯೊಂದಿಗೆ ಒಂದು ಸತ್ಸಂಗವಿದೆ ಹಾಗೂ ಗೋಶಾಲೆಯಲ್ಲಿ ಒಂದು ಕಾರ್ಯಕ್ರಮವಿದೆ. ಆದರೆ ಇವತ್ತು ಜೈಪುರ ಮಾರ್ಗವಾಗಿ ಹೈದರಾಬಾದಿಗೆ ಹೋಗುವ ದಾರಿಯಲ್ಲಿ ಗೋಶಾಲೆಯನ್ನು ಸಂದರ್ಶಿಸುವ ಅವಕಾಶ ನನಗೆ ಸಿಕ್ಕಿದೆ.
ನಾನು ಕಾರಿನಲ್ಲಿ ಪ್ರಯಾಣಿಸುವಾಗ, ಒಂದು ಹಸುವು ಪ್ಲಾಸ್ಟಿಕ್‌ನಿಂದ ಮಾಡಿದ ವಸ್ತುವನ್ನು ತಿನ್ನುವುದನ್ನು ನೋಡಿದಾಗಲೆಲ್ಲಾ ನನಗೆ ಬಹಳ ದುಃಖವಾಗುತ್ತಿತ್ತು. ಹಿಂದೆಯೂ ಕೂಡಾ, ಯಾವುದೇ ಹಸುವು ಪ್ಲಾಸ್ಟಿಕ್ಕನ್ನು ತಿನ್ನುವುದನ್ನು ನೋಡಿದಾಗಲೆಲ್ಲಾ ನನಗೆ ಯಾವತ್ತೂ ಹೀಗನಿಸುತ್ತಿತ್ತು. ನೀವು ದಿಲ್ಲಿ ನಗರಕ್ಕೆ ಹೋಗಿ ರಿಂಗ್ ರಸ್ತೆಯುದ್ದಕ್ಕೂ ಪ್ರಯಾಣಿಸಿದರೂ ಸಹ, ಹಲವಾರು ಹಸುಗಳು ಮಾರ್ಗ ಮಧ್ಯದಲ್ಲಿ ನಿಂತುಕೊಂಡು ಪ್ಲಾಸ್ಟಿಕ್ಕನ್ನು ಅಗಿಯುತ್ತಿರುವುದು ನಿಮಗೆ ಕಾಣಿಸುವುದು. ಅಂತಹ ಹಸುಗಳ ಆರೈಕೆಗಾಗಿ ಅವುಗಳನ್ನು ಗೋಶಾಲೆಗೆ ಕರೆದುಕೊಂಡು ಬರುವ ಪ್ರಯತ್ನವನ್ನು ನೀವು ಮಾಡಿರುವಿರೆಂಬುದನ್ನು ಕೇಳಿ ಇಂದು ನನಗೆ ಬಹಳ ಸಂತೋಷವಾಗುತ್ತಿದೆ. ಹಸುಗಳನ್ನು ಸಂರಕ್ಷಿಸುವ ಈ ಕಾರ್ಯವು ನಮ್ಮ ಅತ್ಯಂತ ಪ್ರಮುಖ ದೈವಿಕ ಕರ್ತವ್ಯಗಳಲ್ಲಿ ಒಂದಾಗಿದೆ.

ನೋಡಿ, ಶ್ರೇಷ್ಠ ಹಾಗೂ ಅತ್ಯುತ್ಕೃಷ್ಟವಾದುದೆಲ್ಲಾ ’ಗ’ ಎಂಬ ಶಬ್ದದಿಂದ ಆರಂಭವಾಗುತ್ತದೆ, ಉದಾಹಾಣೆಗೆ ಗುರು, ಗ್ಯಾನ್, ಗೀತಾ, ಗಂಗಾ, ಗತಿ, ಗಮನ (ಒಬ್ಬನ ಅಂತಿಮ ಗುರಿಯೆಡೆಗೆ ಚಲಿಸುವುದು), ಮೊದಲಾದವುಗಳು. ಅವುಗಳನ್ನೆಲ್ಲಾ ಗೌರವಿಸುವುದು ನಮ್ಮ ಕರ್ತವ್ಯವಾಗಿದೆ.

ಜನರು ಬೆಂಗಳೂರಿನಲ್ಲಿ ಆರ್ಟ್ ಆಫ್ ಲಿವಿಂಗ್ ಆಶ್ರಮದ ಪ್ರವಾಸ ಮಾಡುವಾಗ, ಗೋಶಾಲೆಯು ಬಸ್ ಪ್ರವಾಸದ ಒಂದು ಮುಖ್ಯ ಭಾಗವಾಗಿದೆ. ಆಶ್ರಮದಲ್ಲಿ ಈಗ ೩೦೦ ಹಸುಗಳಿವೆ. ದೊಡ್ಡ ಆಶ್ರಮಗಳಿರುವಲ್ಲೆಲ್ಲಾ, ಖಂಡಿತವಾಗಿಯೂ ಹಸುಗಳನ್ನು ಅವರು ಒಂದು ಒಳ್ಳೆಯ ಪರಿಸರದಲ್ಲಿ ಬೆಳೆಸುತ್ತಾರೆ. ಹೀಗಾಗಿ, ಗೋವುಗಳ ಸಂರಕ್ಷಣೆಯು ನಮ್ಮ ಜೀವನದ ಒಂದು ಪ್ರಧಾನವಾದ ಹಾಗೂ ಅವಿಭಾಜ್ಯ ಅಂಗವಾಗಿದೆ. ನೀವೆಲ್ಲರೂ ಗೋಶಾಲೆಗೆ ಭೇಟಿ ನೀಡುತ್ತಾ ಇರಬೇಕು ಹಾಗೂ ನೀವು ಬರುವಾಗ ಇಲ್ಲಿನ ಗೋವುಗಳಿಗೆ ಆಹಾರ ತಿನ್ನಿಸಬೇಕು.

’ಗೌ’ ಎಂಬ ಪದಕ್ಕೆ ನಾಲ್ಕು ಅರ್ಥಗಳಿವೆ; ಜ್ಞಾನ, ಗಮನ (ಮುಂದುವರಿಯು), ಪ್ರಾಪ್ತಿ ಮತ್ತು ಮೋಕ್ಷ. ಒಂದು ಗೋವು ಈ ಎಲ್ಲಾ ನಾಲ್ಕನ್ನು ಒದಗಿಸುತ್ತದೆ.

ಹಸುವಿನ ಹಾಲು ಮನಸ್ಸು ಹಾಗೂ ಬುದ್ಧಿಯನ್ನು ತೀಕ್ಷ್ಣಗೊಳಿಸಲು ಸಹಾಯ ಮಾಡುತ್ತದೆ. ಭಾರತೀಯ ಹಸುಗಳ ಹಾಲಿನಲ್ಲಿ ಒಂದು ಬಹಳ ವಿಶೇಷವಾದ ಪ್ರೊಟೀನ್ ಅಂಶವಿದೆ, ಅದು ಒಬ್ಬನ ಬುದ್ಧಿಯನ್ನು ವರ್ಧಿಸುವಲ್ಲಿ ಸಹಾಯ ಮಾಡುತ್ತದೆ. ಮುಂದಿನದ್ದು ಗಮನ - ಅಂದರೆ ಮುಂದುವರಿ ಎಂದು ಅರ್ಥ. ಒಂದು ಹಸುವು ನಮಗೆ ನೀಡುವ ಇತರ ಎಲ್ಲಾ ಉತ್ಪನ್ನಗಳು, ನಾವು ನಮ್ಮ ದೈನಂದಿನ ಜೀವನದಲ್ಲಿ ಮುಂದೆ ಸಾಗಲು ನಮಗೆ ಸಹಾಯ ಮಾಡುತ್ತವೆ. ಹೀಗೆ ಈ ನಾಲ್ಕನ್ನೂ ನಮಗೆ ನೀಡುವುದು ಹಸುವಾಗಿದೆ. ನಾವು ಇದಕ್ಕೆ ಗಮನ ನೀಡಬೇಕು ಮತ್ತು ಹಸುವನ್ನು ಗೌರವಿಸಬೇಕು.

ನೋಡಿ, ಕೇವಲ ಪೂಜೆ ಮಾಡುವುದರಿಂದ ಮತ್ತು ಹಸುವಿನ ಮುಂದೆ ನಮಸ್ಕಾರ ಮಾಡುವುದರಿಂದ ಪ್ರಯೋಜನವಾಗದು. ನೀವು ನಿಜವಾಗಿ ಹಸುವಿನ ಸೇವೆ ಮಾಡಬೇಕು. ಸಾಧಾರಣವಾಗಿ ನಾವೇನು ಮಾಡುತ್ತೇವೆಂದರೆ, ಹಸುವಿಗೆ ಹಾರವನ್ನು ಹಾಕಿ, ಕರ್ಪೂರದ ದೀಪವನ್ನು ಹಚ್ಚಿ ಅದನ್ನು ಹಸುವಿಗೆ ತೋರಿಸುವ ಮೂಲಕ ಒಂದು ಪೂಜೆ ಮಾಡುತ್ತೇವೆ. ಇದು ಸರಿಯಲ್ಲ, ಯಾಕೆಂದರೆ ಇದು ಹಸುವಿಗೆ ಭಯವನ್ನುಂಟುಮಾಡುತ್ತದೆ. ಹೀಗಾಗಿ, ನೀವು ನಿಜವಾಗಿಯೂ ಹಸುವಿನ ಸೇವೆ ಮಾಡಬೇಕು.
ನಿಮ್ಮ ಜೀವನವು ಈ ನಾಲ್ಕು ವಿಷಯಗಳಿಂದ ಸಂಪೂರ್ಣವಾಗಿ ಅರಳಬೇಕು - ದಯೆ, ಕರುಣೆ, ಸಹನಾಶೀಲತೆ ಮತ್ತು ಶಾಂತಿ. ಇತರರ ನೋವನ್ನು ಅನುಭವಿಸದೇ ಇರುವ ಒಂದು ಹೃದಯದಿಂದ ಏನು ಪ್ರಯೋಜನ? ಅಂತಹ ಹೃದಯವು ಇತರರಿಗೆ ಕೇವಲ ನೋವು ಮತ್ತು ಹಿಂಸೆಯನ್ನು ಮಾತ್ರ ತರಬಲ್ಲದು.

ಇವತ್ತು ಸಂಸತ್ತಿನ ಸಚಿವರೆಲ್ಲಾ ಕೂಡಾ ಇಲ್ಲಿದ್ದಾರೆ. ಇವತ್ತು ಭಾರತದಾದ್ಯಂತದ ಜನರು ಗೋಹತ್ಯೆಗೆ ಒಂದು ಕೊನೆಯನ್ನು ತರಲು ಬಯಸುತ್ತಿದ್ದಾರೆ.

ಭಾರತವು ಸ್ವಾತಂತ್ರ್ಯವನ್ನು ಗಳಿಸಿದಾಗ, ಪ್ರಾಣಿಗಳ ಸಂಖ್ಯೆಯು ೧೨೦ ದಶಲಕ್ಷಗಳಿಗೆ ಹತ್ತಿರವಾಗಿತ್ತು ಮತ್ತು ನಾವು ಸಂಖ್ಯೆಯಲ್ಲಿ ಕೇವಲ ೩೦ ದಶಲಕ್ಷಗಳಷ್ಟು ಇದ್ದೆವೆಂದು ಹೇಳಲಾಗುತ್ತದೆ. ಇವತ್ತು ಆ ಸಂಖ್ಯೆಯು ತಿರುಗುಮುರುಗಾಗಿದೆ. ಇವತ್ತು, ನಾವು ಸಂಖ್ಯೆಯಲ್ಲಿ ಸುಮಾರು ೧೨೦ ದಶಲಕ್ಷಗಳಷ್ಟಿದ್ದೇವೆ ಮತ್ತು ನಮ್ಮ ಪ್ರಾಣಿ ಸಂಖ್ಯೆಯು ಸುಮಾರು ೩೦ ದಶಲಕ್ಷಗಳಿಗೆ ಇಳಿದಿದೆ. ಈ ಅನುಪಾತವು ಒಳ್ಳೆಯದೇ ಅಲ್ಲ. ಇದು ಸರಿಯೆಂದು ನಿಮಗನಿಸುತ್ತದೆಯೇ? ಹೀಗಾಗಿ ನಾವೆಲ್ಲರೂ ನಮ್ಮ ಹಸುಗಳ ಸಂಖ್ಯೆಯನ್ನು ಹೆಚ್ಚಿಸುವ ಹಾಗೂ ಅವುಗಳ ಯೋಗಕ್ಷೇಮದ ನಿಟ್ಟಿನಲ್ಲಿ ಕಠಿಣ ಪರಿಶ್ರಮ ಪಡಬೇಕು. ಗೋಹತ್ಯೆಗೆ ಒಂದು ಪೂರ್ಣವಿರಾಮವನ್ನು ಹಾಕುವಂತೆ ನಾವು ನಮ್ಮ ಭಾರತ ಸರಕಾರಕ್ಕೆ ಮನವಿ ಮಾಡುವುದನ್ನು ಮುಂದುವರಿಸಬೇಕು.

ಈ ಸತ್ಸಂಗದ ಸಂದೇಶವನ್ನು ಚಲಿಸುವ ಚಿತ್ರಗಳ ಸಮೇತ ಆಂಗ್ಲ ಭಾಷೆಯಲ್ಲಿ ಅವಲೋಕಿಸಲು ಲಿಂಕ್:
http://www.speakingtree.in/public/spiritual-slideshow/seekers/self-improvement/treat-animals-with-dignity