ಗುರುವಾರ, ನವೆಂಬರ್ 13, 2014

ಸಂತೃಪ್ತ ರೈತನೇ ರಾಷ್ಟ್ರದ ಸಮೃದ್ಧಿಯ ಸಂಕೇತ

೧೩ ನವೆಂಬರ್ ೨೦೧೪
ಬೆಂಗಳೂರು, ಭಾರತ

ವತ್ತು, ದೇಶದ ಎಲ್ಲೆಡೆಗಳಿಂದ ಹಲವಾರು ರೈತರು ಇಲ್ಲಿ ಬೆಂಗಳೂರು ಆಶ್ರಮದಲ್ಲಿ ಸೇರಿದ್ದಾರೆ. ನಿಮಗೆಲ್ಲರಿಗೂ ತುಂಬು ಹೃದಯದ ಸ್ವಾಗತ!
ಒಂದು ದೇಶದ ರೈತರು ಸಂತೋಷವಾಗಿಯೂ ಸಮೃದ್ಧವಾಗಿಯೂ ಇದ್ದರೆ, ಆಗ ಖಂಡಿತವಾಗಿಯೂ ಆ ದೇಶದ ಜನರು ಕೂಡಾ ಸಂತೋಷವಾಗಿರುವರು. ಯಾವ ದೇಶದ ರೈತರು ಅಸಂತೋಷವಾಗಿರುವರೋ ಆ ದೇಶವು ಸಂತೋಷವಾಗಿಯೂ, ಆರೋಗ್ಯಕರವಾಗಿಯೂ ಇರಲಾರದು. ಹೀಗಾಗಿ ರೈತನು ಸಂತೋಷವಾಗಿಯೂ ತೃಪ್ತನಾಗಿಯೂ ಇರುವುದು ಬಹಳ ಅಗತ್ಯವಾಗಿದೆ. ಇದಕ್ಕೆ ಎರಡು ಮಾರ್ಗಗಳಿವೆ:

೧. ನಮ್ಮ ಅಂತರ್ಬಲವನ್ನು ಹೆಚ್ಚಿಸುವುದು ಮತ್ತು ನಮ್ಮ ಆತ್ಮವಿಶ್ವಾಸವನ್ನು ಜಾಗೃತಗೊಳಿಸುವುದು. ನಮ್ಮ ದಾರಿಯಲ್ಲಿ ಬರುವ ಎಲ್ಲಾ ಸಮಸ್ಯೆಗಳನ್ನು ಸಹಿಸಲು ನಾವು ಸಮರ್ಥರಾಗುವಂತೆ ಇದು ಮಾಡುತ್ತದೆ.

೨. ಕಷ್ಟಗಳಾಗದಿರಲೆಂದು, ಏನನ್ನಾದರೂ ಮಾಡುವ ಮೊದಲು ನಾವು ಎಚ್ಚರಿಕೆಯಿಂದ ಯೋಜನೆ ಮತ್ತು ಉಪಾಯಗಳನ್ನು ಮಾಡಬೇಕು.

ನೋಡಿ, ಕೆಲವು ವಿಷಯಗಳು ನಮ್ಮ ಕೈಯಲ್ಲಿರುತ್ತವೆ ಮತ್ತು ಕೆಲವನ್ನು ನಾವು ನಿಯಂತ್ರಿಸಲು ಸಾಧ್ಯವಿಲ್ಲ. ಆದುದರಿಂದ ನಮ್ಮ ಕೈಯಲ್ಲೇನಿದೆಯೋ ಅದನ್ನು ಉತ್ತಮಗೊಳಿಸಲು ನಾವು ಪ್ರಯತ್ನಿಸಬೇಕು. ನಮ್ಮ ನಿಯಂತ್ರಣವನ್ನು ಮೀರಿದುದನ್ನೆಲ್ಲಾ ನಾವು ಸುಮ್ಮನೇ ದೇವರಿಗೆ ಸಮರ್ಪಿಸಬೇಕು, ಎಲ್ಲವೂ ಚೆನ್ನಾಗಿ ನಡೆಯಲೆಂದು ಪ್ರಾರ್ಥಿಸಬೇಕು ಹಾಗೂ ಆತ್ಮವಿಶ್ವಾಸದೊಂದಿಗೆ ಮುನ್ನಡೆಯಬೇಕು. ಆಗ ನಿಮ್ಮೆಲ್ಲಾ ಕೆಲಸಗಳು ಈಡೇರಲು ತೊಡಗುವುದನ್ನು ನೀವು ನೋಡುವಿರಿ.

(ಶ್ರೀ ಶ್ರೀಯವರು ರೈತರಲ್ಲಿ: ಈ ಮೂರು ದಿನಗಳ ಕಾರ್ಯಾಗಾರದಲ್ಲಿ ನಾವು ಹಲವಾರು ವಿಷಯಗಳ ಬಗ್ಗೆ ಚರ್ಚಿಸೋಣ. ಇದೆಲ್ಲದರಿಂದ ನಿಮಗೆಲ್ಲರಿಗೂ ಬಹಳವಾಗಿ ಲಾಭವಾಗುವುದೆಂಬುದರ ಬಗ್ಗೆ ನನಗೆ ಖಾತ್ರಿಯಿದೆ. ನಿಮಗೆ ಲಾಭವಾದಾಗ ಹಾಗೂ ನೀವು ಸಮೃದ್ಧರಾದಾಗ ಈ ದೇಶದಲ್ಲಿನ ಹಲವು ನೂರಾರು ಸಾವಿರಾರು ಜನರು ಕೂಡಾ ಲಾಭ ಪಡೆಯುವರು. ನಿಮ್ಮ ಕಠಿಣ ಪರಿಶ್ರಮದಿಂದಾಗಿ ನಮ್ಮ ದೇಶದಲ್ಲಿ ಹಲವಾರು ಜನರಿಗೆ, ಜೀವನೋಪಾಯಕ್ಕೆ ಹಾಗೂ ತಮ್ಮ ಜೀವನವನ್ನು ಸುಗಮವಾಗಿ ನಡೆಸಲು ಸಾಧ್ಯವಾಗುತ್ತಿದೆ.)

ತಮ್ಮ ಊಟವನ್ನು ಪ್ರಾರಂಭಿಸುವ ಮೊದಲು ಒಂದು ಪ್ರಾರ್ಥನೆಯಾಗಿ ಒಂದು ಸಣ್ಣ ಮಂತ್ರವನ್ನು ಹೇಳಬೇಕೆಂದು ನಾನು ಹೋದಲ್ಲೆಲ್ಲಾ ಜನರಲ್ಲಿ ಯಾವಾಗಲೂ ಹೇಳುತ್ತಿರುತ್ತೇನೆ. ಅದು ’ಅನ್ನದಾತಾ ಸುಖೀ ಭವ’ ಎಂಬುದಾಗಿ. (ಈ ಊಟಕ್ಕೆ ಸಹಕರಿಸಿದವರೆಲ್ಲಾ ಸಂತೋಷವಾಗಿಯೂ ಸಮೃದ್ಧವಾಗಿಯೂ ಇರಲಿ).

ನಾವು ಚಿಕ್ಕ ಮಕ್ಕಳಾಗಿದ್ದಾಗ, ನಾವು ಊಟ ಪ್ರಾರಂಭಿಸುವುದಕ್ಕೆ ಮೊದಲು ಈ ಮಂತ್ರವನ್ನುಚ್ಛರಿಸುವಂತೆ ನನ್ನ ತಂದೆಯವರು ಯಾವತ್ತೂ ನಮಗೆ ಹೇಳುತ್ತಿದ್ದರು. ನಿಜ ಹೇಳಬೇಕೆಂದರೆ, ನಾವು ನಮ್ಮ ಊಟ ಮುಗಿಸಿದ ಬಳಿಕವೂ ಈ ಮಂತ್ರವನ್ನುಚ್ಛರಿಸುವಂತೆ ಅವರು ನಮ್ಮಲ್ಲಿ ಹೇಳುತ್ತಿದ್ದರು. ಅವರಿಂದ ಬೇರೆ ಯಾವುದೇ ಶ್ಲೋಕವನ್ನು ನಾನು ಯಾವತ್ತೂ ಕೇಳಲಿಲ್ಲ. ಅವರು ಯಾವತ್ತೂ ಈ ಮಂತ್ರಕ್ಕೆ ಪ್ರಾಮುಖ್ಯತೆ ನೀಡುತ್ತಿದ್ದರು. ನೀವು ಈ ಮಂತ್ರವನ್ನುಚ್ಛರಿಸುವಾಗ ನಿಜವಾಗಿ, ಆಹಾರವನ್ನು ಒದಗಿಸುವ ಮೂವರು ವ್ಯಕ್ತಿಗಳಿಗಾಗಿ ನೀವು ಪ್ರಾರ್ಥಿಸುತ್ತಿರುತ್ತೀರಿ. ಮೊದಲನೆಯ ವ್ಯಕ್ತಿಯೆಂದರೆ ಸ್ವಾಭಾವಿಕವಾಗಿ, ಆಹಾರ ಧಾನ್ಯಗಳನ್ನು ಬೆಳೆಸುವ ರೈತ. ಎರಡನೆಯ ವ್ಯಕ್ತಿಯೆಂದರೆ, ಈ ಆಹಾರ ಧಾನ್ಯಗಳನ್ನು ವ್ಯಾಪಾರ ಮಾಡಿ ನಮ್ಮ ಮನೆಗಳಿಗೆ ಅವುಗಳನ್ನು ತರುವ ವ್ಯಾಪಾರಿ. ವ್ಯಾಪಾರಿ ಯಾಕೆಂದು ನೀವು ಕೇಳಲೂಬಹುದು. ನೋಡಿ, ರೈತನು ಬೆಳೆಗಳನ್ನು ಬೆಳೆಯುತ್ತಾನೆ. ಆದರೆ ವ್ಯಾಪಾರಿಯು ಧಾನ್ಯಗಳನ್ನು ಮಾರುಕಟ್ಟೆಗಳಿಗೆ ತರದೇ ಇದ್ದರೆ, ಆಗ ರೈತ ಮತ್ತು ಜನರು, ಇಬ್ಬರೂ ಕಷ್ಟಕ್ಕೊಳಗಾಗುತ್ತಾರೆ.

ಆಹಾರ ಧಾನ್ಯಗಳನ್ನು ಶೇಖರಿಸಿಟ್ಟು ಅವುಗಳಿಗೆ ನ್ಯಾಯಯುತವಾದ ಬೆಲೆಯನ್ನು ನೀಡದೇ ಇರುವ ಅಥವಾ ಸಾಮಾನ್ಯ ಜನರಿಗೆ ಅವುಗಳನ್ನು ಬಹಳ ಅಧಿಕ ಬೆಲೆಗೆ ಮಾರುವ ಜನರು ಆಹಾರ ಧಾನ್ಯಗಳು ಹಾಳಾಗುವಂತೆ ಮಾಡುತ್ತಾರೆ. ನಿಮಗೆ ಗೊತ್ತಾ, ನಮ್ಮ ದೇಶದಲ್ಲಿ ಆಹಾರ ಧಾನ್ಯಗಳು ಹೇರಳವಾಗಿವೆ, ಆದರೆ ಆಹಾರ ಧಾನ್ಯಗಳ ಕಳಪೆ ವಿತರಣೆಯಿಂದಾಗಿ ಹಲವಾರು ಜನರು ಹಸಿವೆಯಿಂದಿರಬೇಕಾಗುತ್ತದೆ ಮತ್ತು ಅದೇ ವೇಳೆ ಆಹಾರ ಧಾನ್ಯಗಳು ಕೂಡಾ ಹಾಳಾಗುತ್ತವೆ (ಅಕ್ರಮಣ ಸಂಗ್ರಹಣೆಯಿಂದಾಗಿ).

ಟೊಮ್ಯಾಟೋಗಳ ಬೆಲೆಯು ಇದ್ದಕ್ಕಿದ್ದಂತೆ ಬಹಳ ಏರುವುದು ಮತ್ತು ಮುಂದಿನ ತಿಂಗಳುಗಳಲ್ಲಿ ಪುನಃ ಇದ್ದಕ್ಕಿದ್ದಂತೆ ಕೆಳಕ್ಕಿಳಿಯುವುದು ತಪ್ಪು ಚಟುವಟಿಕೆಗಳಿಂದಾಗಿ.  ನಿಮಗೆಲ್ಲರಿಗೂ ಇದರ ಅನುಭವವಾಗಿದೆಯೇ? ಈ ಅನುಭವವಾಗಿರುವವರೆಲ್ಲರೂ ನಿಮ್ಮ ಕೈಗಳನ್ನು ಮೇಲೆತ್ತಿ.

(ಸಭಿಕರಲ್ಲಿ ಅನೇಕರು ತಮ್ಮ ಕೈಗಳನ್ನು ಮೇಲೆತ್ತುತ್ತಾರೆ.)

ವ್ಯಾಪಾರಿಗಳು ಮತ್ತು ವರ್ತಕರು ತಮ್ಮ ಕೆಲಸವನ್ನು ಸರಿಯಾಗಿ ಮಾಡದಿದ್ದರೆ ಅಥವಾ ಅವರು ಅಸಂತುಷ್ಟರಾಗಿದ್ದರೆ, ನೀವೆಲ್ಲರೂ ಈ ನಷ್ಟದ ಹೊರೆಯನ್ನು ಹೊರಬೇಕಾಗುತ್ತದೆ.

ಅಸಂತೋಷವಾಗಿರುವವರು, ಅನಾರೋಗ್ಯದಿಂದಿರುವವರು ಅಥವಾ ಅತೃಪ್ತರಾಗಿರುವವರು ಮಾತ್ರ ಕೆಟ್ಟದ್ದನ್ನು ಮಾಡುತ್ತಾರೆ. ಅನಾರೋಗ್ಯವಾಗಿರುವ ಮತ್ತು ಅಸಂತೋಷವಾಗಿರುವವರೊಬ್ಬರು ಮಾತ್ರ ನಿಯಮಗಳು ಮತ್ತು ನಿಬಂಧನೆಗಳನ್ನು ಅನುಸರಿಸುವುದಿಲ್ಲ ಹಾಗೂ ಮೋಸದ ಚಟುವಟಿಕೆಗಳನ್ನು ಮಾಡುತ್ತಾರೆ. ಒಳಗಿನಿಂದ ತೃಪ್ತನಾಗಿರುವ ಒಬ್ಬ ವ್ಯಕ್ತಿಯು ಬೇರೊಬ್ಬರಿಗೆ ತೊಂದರೆಯನ್ನು ಸೃಷ್ಟಿಸುವ ಬಗ್ಗೆ ಯಾವತ್ತೂ ಯೋಚಿಸಲಾರ.

ಹೀಗೆ ಒಬ್ಬ ವ್ಯಾಪಾರಿಯು ಸಂತುಷ್ಟನಾಗಿರುವಾಗ ಹಾಗೂ ನಿಯಮ, ನಿಬಂಧನೆಗಳನ್ನು ನ್ಯಾಯಯುತವಾಗಿ ಅನುಸರಿಸುವಾಗ, ರೈತರನ್ನು ಶೋಷಿಸಲು ಅಥವಾ ವಂಚಿಸಲು ಅವನು ಬಯಸಲಾರ. ಇವತ್ತು, ನಮ್ಮ ರೈತರು ಶೋಷಣೆಗೊಳಗಾಗುತ್ತಿದ್ದಾರೆ. ನಿಮ್ಮಲ್ಲಿ ಎಷ್ಟು ಮಂದಿ ಇದನ್ನು ಒಪ್ಪುತ್ತೀರಿ?

(ಸಭಿಕರಲ್ಲಿ ಹಲವರು ತಮ್ಮ ಕೈಗಳನ್ನು ಮೇಲೆತ್ತುತ್ತಾರೆ.)

ನಿಮಗೆ ಗೊತ್ತಾ, ಭಾರತದಲ್ಲಿ ನಾವು ಬೆಳೆಯುವ ಸಕ್ಕರೆಯ ಬೆಲೆ ಒಂದು ಕಿಲೋಕ್ಕೆ ೧೨ ರೂಪಾಯಿಗಳು. ಆದರೆ ನಾವು ವಿದೇಶಗಳಿಂದ ಸಕ್ಕರೆಯನ್ನು ಆಮದು ಮಾಡುತ್ತೇವೆ ಮತ್ತು ಅದಕ್ಕೆ ಒಂದು ಕಿಲೋಕ್ಕೆ ೩೦ ರೂಪಾಯಿಗಳನ್ನು ನೀಡುತ್ತೇವೆ. ನಮ್ಮ ಭಾರತೀಯ ಸಕ್ಕರೆಯು ಆಮದು ಮಾಡಿಕೊಳ್ಳಲಾದ ಸಕ್ಕರೆಗಿಂತ ಸಿಹಿಯಲ್ಲಿ ಕಡಿಮೆಯಿದೆಯೇ? ಇದೆಲ್ಲಾ ಯಾಕಾಗುತ್ತಿದೆ?

ಕೆಲವು ಭ್ರಷ್ಟ ರಾಜಕಾರಣಿಗಳು ಕೆಲವು ಉದ್ಯಮಿಗಳೊಂದಿಗೆ ಸೇರಿಕೊಂಡು ಇಂತಹ ಅಕ್ರಮ ಚಟುವಟಿಕೆಗಳಲ್ಲಿ ತೊಡಗುತ್ತಾರೆ. ಹೀಗೆ ವ್ಯಾಪಾರಿಗಳು ಅಸಂತುಷ್ಟರಾಗಿದ್ದರೆ, ಆಗ ಕೂಡಾ ರೈತ ಮತ್ತು ಇಡೀ ಜನರು ಅಸಂತುಷ್ಟರಾಗುವರು ಹಾಗೂ ಕಷ್ಟಪಡಬೇಕಾಗುತ್ತದೆ.

ವ್ಯಾಪಾರಿಗಳು ಅಸಂತುಷ್ಟರಾಗಿರುವಾಗ ಹೆಚ್ಚು ಲಾಭ ಗಳಿಸುವುದಕ್ಕಾಗಿ ಅವರು ಆಹಾರ ಧಾನ್ಯಗಳ ಹಾಗೂ ಸಕ್ಕರೆಯ ಕಲಬೆರಕೆಗೆ ಮೊರೆಹೋಗುತ್ತಾರೆ ಮತ್ತು ಅವುಗಳನ್ನು ಜನರಿಗೆ ಮಾರುತ್ತಾರೆ. ನೀವು ಒಂದು ಕಿಲೋ ಅಕ್ಕಿಯನ್ನು ಖರೀದಿಸಿದರೆ ಅದರ ಪ್ಯಾಕೆಟ್‌ನಲ್ಲಿ ಸುಮಾರು ೧೦೦-೨೦೦ ಗ್ರಾಂಗಳಷ್ಟು ಕಲ್ಮಶಗಳು ಮತ್ತು ತರಿಗಳು ಇರುವುದು ನಿಮಗೆ ಕಂಡುಬರುತ್ತದೆ. ಈ ದಿನಗಳಲ್ಲಿ, ಹಾಲು, ಗೋಧಿಹಿಟ್ಟು ಮತ್ತು ತುಪ್ಪಗಳಲ್ಲೂ ಕಲಬೆರಕೆ ಮಾಡಲಾಗುತ್ತದೆ. ಅಂತಹ ಕಲಬೆರಕೆಯಲ್ಲಿ ತೊಡಗಿರುವ ಒಬ್ಬ ವ್ಯಾಪಾರಿಯು ಖಂಡಿತವಾಗಿಯೂ ಹೃದಯದಿಂದ ಅಸಂತುಷ್ಟನಾಗಿರುವ ಹಾಗೂ ಅತೃಪ್ತನಾಗಿರುವ ಒಬ್ಬ ವ್ಯಾಪಾರಿಯಾಗಿರುತ್ತಾನೆ. ಇದಕ್ಕಾಗಿಯೇ, ಆಹಾರೋತ್ಪನ್ನಗಳಲ್ಲಿ ಅವರು ಕಲಬೆರಕೆ ಮಾಡದಿರಲು ಹಾಗೂ ರೈತರು ಮಾರುಕಟ್ಟೆಯಿಂದ ತಮ್ಮ ನ್ಯಾಯಸಮ್ಮತವಾದ ಲಾಭಗಳ ಭಾಗವನ್ನು ಪಡೆಯುವಂತೆ ಅವರು ನೋಡಿಕೊಳ್ಳುವುದಕ್ಕಾಗಿ, ನಾವು ಅವರ ಸಂತೋಷಕ್ಕಾಗಿ ಹಾಗೂ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸಬೇಕು. ಒಬ್ಬ ವ್ಯಾಪಾರಿಯು ಲೋಭಿಯಾಗಬಾರದು ಮತ್ತು ಹೆಚ್ಚು ಹಣ ಗಳಿಸುವುದಕ್ಕಾಗಿ ಆಹಾರವನ್ನು ಅನ್ಯಾಯದ ಬೆಲೆಗೆ ಮಾರಾಟ ಮಾಡಬಾರದು. ತಾನು ಆಹಾರ ಧಾನ್ಯಗಳನ್ನು ರೈತರಿಂದ ಯಾವ ಬೆಲೆಗೆ ಖರೀದಿಸುವೆನೋ ಅದೇ ಬೆಲೆಗೆ ಮಾರಾಟ ಮಾಡುವುದಾಗಿ ಅವನು ಖಚಿತಪಡಿಸಿಕೊಳ್ಳಬೇಕು.

ಧರ್ಮಶಾಸ್ತ್ರಗಳಲ್ಲಿ ಬರೆಯಲ್ಪಟ್ಟ ಪ್ರಕಾರ, ಒಬ್ಬ ವ್ಯಾಪಾರಿಯು ಲಾಭದಲ್ಲಿ ೨೦% ವನ್ನು ತನಗಾಗಿ ಇಟ್ಟುಕೊಳ್ಳಬಹುದು, ಆದರೆ ಅದಕ್ಕಿಂತ ಹೆಚ್ಚಲ್ಲ. ಆದರೆ ಇವತ್ತು ಆಗುತ್ತಿರುವುದೇನೆಂದರೆ, ವ್ಯಾಪಾರಿಗಳು ಸ್ವಾರ್ಥಪರವಾಗಿ ಗಳಿಕೆಯ ೫೦% ಅಥವಾ ಹೆಚ್ಚನ್ನು ತಮಗಾಗಿ ತೆಗೆದಿರಿಸುತ್ತಾರೆ ಹಾಗೂ ರೈತರಿಗೆ ಬಹಳ ಕಡಿಮೆ ಬಿಡುತ್ತಾರೆ. ಇದು ಸರಿಯಲ್ಲ. ಬದಲಾಗಿ, ಕೆಲವು ಆಹಾರ ಧಾನ್ಯಗಳು ಅಥವಾ ಉತ್ಪನ್ನಗಳು ಮಾರುಕಟ್ಟೆಗಳಲ್ಲಿ ಹೆಚ್ಚು ಮಾರಾಟವಾದರೆ ಆಗ ವ್ಯಾಪಾರಿಯು, ರೈತರು ಕೂಡಾ ಲಾಭಗಳಲ್ಲಿ ಸಮಭಾಗವನ್ನು ಪಡೆಯುವಂತೆ ನೋಡಿಕೊಳ್ಳಬೇಕು.

ಈ ಮಂತ್ರದ ಮೂಲಕ ನಾವು ಯಾರ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸುವೆವೋ ಆ ಮೂರನೆಯ ವ್ಯಕ್ತಿಯೆಂದರೆ, ನಮಗಾಗಿ ಬಳಲದೆಯೇ ಅಡುಗೆ ಮಾಡುವ ಮನೆಯ ಮಹಿಳೆ. ಅವಳು ಅಸಂತುಷ್ಟಳಾದರೆ, ಆಗ ಮನೆಯೂ ಕೂಡಾ ಕಷ್ಟಪಡುತ್ತದೆ. ಮನೆಯ ಮಹಿಳೆಯು ಒಳಗಿನಿಂದ ತೃಪ್ತಳಾಗಿಲ್ಲದೆ ಮತ್ತು ಸಂತೋಷವಾಗಿಲ್ಲದೇ ಇದ್ದರೆ, ಆಗ ಅವಳು ಬೇಯಿಸಿದ ಆಹಾರವನ್ನು ಆನಂದಿಸಲು ಅಥವಾ ಜೀರ್ಣಿಸಲು ಯಾರಿಗೂ ಸಾಧ್ಯವಾಗದು. ಅಡುಗೆ ಮಾಡುವಾಗ ಅವಳು ದುಃಖದ ಕಣ್ಣೀರು ಹಾಕಿದರೆ, ಆಗ ಆ ಆಹಾರವನ್ನು ತಿನ್ನುವ ಗಂಡಸು ಕೂಡಾ ಕಣ್ಣೀರು ಹಾಕಬೇಕಾಗುತ್ತದೆ. ಆದುದರಿಂದ ಮನೆಯ ಮಹಿಳೆಯು ಸಂತೋಷವಾಗಿಯೂ ಆನಂದವಾಗಿಯೂ ಇರುವುದು ಬಹಳ ಅಗತ್ಯವಾಗಿದೆ. ಈ ಮಂತ್ರವನ್ನು ಒಂದು ಪ್ರಾರ್ಥನೆಯಾಗಿ ಉಚ್ಛರಿಸುವುದರ ಮೂಲಕ ಇದನ್ನೇ ನಾವು ಹೇಳುವುದು.

ನಿಜಕ್ಕೂ ನೀವಿದರ ಕಡೆಗೆ ನೋಡಿದರೆ, ನಿಜವಾದ ಅನ್ನದಾತನು ದೇವರಲ್ಲದೆ ಬೇರೆ ಯಾರೂ ಅಲ್ಲ, ಮತ್ತು ದೇವರು ಯಾವತ್ತೂ ಸಂತೋಷವಾಗಿಯೂ ತೃಪ್ತನಾಗಿಯೂ ಇರುತ್ತಾನೆ. ದೇವರು ಯಾವತ್ತಾದರೂ ಅಸಂತುಷ್ಟನಾಗುತ್ತಾನೆಯೇ? ಇಲ್ಲ! ಆದರೂ, ನಾವಿರುವ ಈ ಭೌತಿಕ ಜಗತ್ತಿನ ಮಟ್ಟದಲ್ಲಿ, ನಮಗೆ ಆಹಾರ ನೀಡಲು ನೆರವಾಗುವ ಈ ಮೂರು ವ್ಯಕ್ತಿಗಳ ಸಂತೋಷಕ್ಕಾಗಿ ಹಾಗೂ ಯೋಗಕ್ಷೇಮಕ್ಕಾಗಿ ನಾವು, ಸರ್ವಶ್ರೇಷ್ಠ ಪೋಷಕನಾದ ದೇವರಲ್ಲಿ ಪ್ರಾರ್ಥಿಸುತ್ತೇವೆ. ನಾವೆಲ್ಲರೂ ಇದನ್ನು ಪ್ರತಿದಿನವೂ ಹೇಳಬೇಕು; ನಮ್ಮ ಊಟದ ಮೊದಲು ಮತ್ತು ನಂತರ ಎರಡೂ ಸಲವೂ. ನೀವು ನಿಮ್ಮ ಆಹಾರ ಸೇವಿಸುವ ಮೊದಲು ಹಾಗೂ ಸೇವಿಸಿದ ಬಳಿಕ ಅವರನ್ನು ಆಶೀರ್ವದಿಸಿ.

ಪ್ರಪಂಚದಲ್ಲಿ ಅತೀ ಹೆಚ್ಚಿನ ಮಳೆಯನ್ನು ಪಡೆಯುವ ದೇಶಗಳಲ್ಲಿ ಭಾರತವೂ ಒಂದು. ಇಲ್ಲಿ ಬಹಳಷ್ಟು ಮಳೆಯಾಗುತ್ತದೆ, ಆದರೆ ಅದಕ್ಕೆ ಹೊರತಾಗಿಯೂ ನಾವು ನಮ್ಮ ಜಲ ಸಂಪನ್ಮೂಲಗಳನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ಈಗಲೂ ನಾವು ಹಲವಾರು ರಾಸಾಯನಿಕ ತ್ಯಾಜ್ಯಗಳನ್ನು ನಮ್ಮ ಜಲಾಶಯಗಳಿಗೆ ಬಿಡುತ್ತಿದ್ದೇವೆ.

ಪ್ರಪಂಚದಾದ್ಯಂತ ಹಲವು ರಾಷ್ಟ್ರಗಳಲ್ಲಿ ನಿಷೇಧಿಸಲ್ಪಟ್ಟ ರಾಸಾಯನಿಕಗಳು ಮತ್ತು ಕೃತಕ ಗೊಬ್ಬರಗಳು ಈಗಲೂ ನಮ್ಮ ಗದ್ದೆಗಳಲ್ಲಿ ಮತ್ತು ಜಮೀನುಗಳಲ್ಲಿ ಬಳಸಲ್ಪಡುತ್ತಿವೆ. ಈ ರಾಸಾಯನಿಕಗಳಿಗಾಗಿ ನಾವು ಎಷ್ಟೋ ಹೆಚ್ಚು ಹಣವನ್ನು ಹಾಳು ಮಾಡುತ್ತಿದ್ದೇವೆ ಹಾಗೂ ನಮ್ಮ ಮಣ್ಣಿನ ಸ್ವಾಭಾವಿಕ ಗುಣ ಮತ್ತು ಆರೋಗ್ಯವನ್ನು ಕೂಡಾ ನಾಶಪಡಿಸುತ್ತಿದ್ದೇವೆ. ನಮ್ಮ ಹಣದ ವಿಷಯದಲ್ಲಿ ನಾವು ನಷ್ಟವನ್ನನುಭವಿಸುವುದು ಮಾತ್ರವಲ್ಲದೆ, ನಮ್ಮ ಮಣ್ಣು ಮತ್ತು ಪ್ರಾಕೃತಿಕ ಸಂಪನ್ಮೂಲಗಳ ವಿಷಯದಲ್ಲಿಯೂ ಕೂಡಾ ನಾವು ನಷ್ಟವನ್ನನುಭವಿಸುತ್ತೇವೆ. ಈ ವಿಷಯಗಳ ಬಗ್ಗೆ ನಾವೊಂದು ಆಳವಾದ ಚರ್ಚೆಯನ್ನು ನಡೆಸಬೇಕಾಗಿದೆ.

(ಶ್ರೀ ಶ್ರೀಯವರು ರೈತರನ್ನು ಉದ್ದೇಶಿಸಿ: ಇಲ್ಲಿ ಆಶ್ರಮದಲ್ಲಿ ಈ ಕಾರ್ಯಾಗಾರದಲ್ಲಿ ಪಾಲ್ಗೊಳ್ಳಲು ಹಲವಾರು ತಜ್ಞರು ಹಾಗೂ ವಿಜ್ಞಾನಿಗಳು ಕೂಡಾ ಬಂದಿದ್ದಾರೆ. ಅವರೆಲ್ಲರೂ ನಿಮ್ಮೊಂದಿಗೆ ಮಾತನಾಡುವರು, ಮತ್ತು ನೀವು ಕೂಡಾ ಮುಕ್ತವಾಗಿ ಚರ್ಚೆ ಮಾಡಬೇಕು ಮತ್ತು ನಿಮ್ಮ ಸಮಸ್ಯೆಗಳನ್ನು ಮುಂದಿಡಬೇಕು. ನೀವು ನಿಮ್ಮದೇ ಮನೆಗೆ ಬಂದಿರುವಿರೆಂದು ಭಾವಿಸಿ. ನೀವೀಗ ನಿಮ್ಮ ಆಧ್ಯಾತ್ಮಿಕ ನಿವಾಸದಲ್ಲಿರುವಿರಿ. ಇದು ನಿಮ್ಮದೇ ಜಾಗ, ಆದುದರಿಂದ ಸಂತೋಷವಾಗಿರಿ ಮತ್ತು ಇಲ್ಲಿನ ನಿಮ್ಮ ವಾಸವನ್ನು ಆನಂದಿಸಿ. ಬೆಳಗಿನ ಹೊತ್ತು ಒಂದೆರಡು ಗಂಟೆಗಳ ಕಾಲ ಸ್ವಲ್ಪ ಯೋಗ, ಪ್ರಾಣಾಯಾಮ ಮತ್ತು ಧ್ಯಾನಗಳನ್ನು ಕೂಡಾ ಅಭ್ಯಾಸ ಮಾಡಿ. ನೀವು ಆರೋಗ್ಯಕರವಾಗಿಯೂ ಸ್ವಸ್ಥವಾಗಿಯೂ ಇರಲು ನಿಮಗೆ ಇವುಗಳೆಲ್ಲವನ್ನೂ ಕಲಿಸಲು ಇಲ್ಲಿ ಹಲವಾರು ಶಿಕ್ಷಕರಿದ್ದಾರೆ. ನೀವೆಲ್ಲರೂ ಆರೋಗ್ಯಕರವಾಗಿರುವಾಗ ದೇಶ ಕೂಡಾ ಆರೋಗ್ಯಕರವಾಗಿರುವುದು. ನೀವೆಲ್ಲರೂ ಆರೋಗ್ಯಕರವಾಗಿಯೂ ಸಂತೋಷವಾಗಿಯೂ ಇರುವಾಗ, ನೀವು ನಿಮ್ಮ ಹೊಲಗಳಲ್ಲಿ ಬೆಳೆಯುವ ಆಹಾರ ಧಾನ್ಯಗಳು, ದೇಶದಲ್ಲಿ ಅದನ್ನು ಸೇವಿಸುವವರೆಲ್ಲರಿಗೂ ಸಂತೋಷ ಮತ್ತು ಆರೋಗ್ಯವನ್ನು ತರುವುದು.)

ಚಲಿಸುವ ಚಿತ್ರಗಳ ರೂಪದಲ್ಲಿ, ಆಂಗ್ಲ ಭಾಷೆಯಲ್ಲಿ ಈ ಬ್ಲಾಗ್ ವೀಕ್ಷಿಸಲು ಲಿಂಕ್: http://www.speakingtree.in/public/spiritual-slideshow/seekers/self-improvement/nation-is-happy-if-its-farmers-are-happy/227388