ಗುರುವಾರ, ನವೆಂಬರ್ 13, 2014

ಸಾತ್ವಿಕ ಜಗತ್ತು

೧೩ ನವೆಂಬರ್ ೨೦೧೪
ಬೆಂಗಳೂರು, ಭಾರತ

ಸಂಪೂರ್ಣ ಜಗತ್ತು ತರಂಗಗಳಿಂದ ನಿರ್ಮಿಸಲ್ಪಟ್ಟಿದೆ, ಮತ್ತು ಈ ತರಂಗಗಳು ಸಾತ್ವಿಕವಾಗಿರುವಂತೆ ನಾವು ನೋಡಿಕೊಳ್ಳಬೇಕು.
ಒಬ್ಬ ವೈದ್ಯನು ಚೆನ್ನಾಗಿರುವಾಗ ಮತ್ತು ಎಲ್ಲರನ್ನೂ ಚೆನ್ನಾಗಿ ಶುಷ್ರೂಷಿಸುವಾಗ ಸಾಮಾನ್ಯವಾಗಿ ನಾವು ಆ ವೈದ್ಯನ ಕೈಗುಣ ಚೆನ್ನಾಗಿದೆಯೆಂದು ಹೇಳುತ್ತೇವೆ. ನೋಡಿ, ಎಲ್ಲಾ ವೈದ್ಯರು ಒಂದೇ ರೀತಿ, ಆದರೆ ಕೆಲವರು ತಮ್ಮ ರೋಗಿಗಳನ್ನು ಇತರರಿಗಿಂತ ಉತ್ತಮವಾಗಿ ಶುಶ್ರೂಷಿಸುತ್ತಾರೆ. ಅವರ ಕೈಗಳಲ್ಲಿ ಒಂದು ವಾಸಿಪಡಿಸುವ ಗುಣ ಇರುವಂತೆ ತೋರುತ್ತದೆ. ಯೋಚನೆಯ ಯಾವೆಲ್ಲಾ ಬೀಜಗಳನ್ನು ನಾವು ಪ್ರಜ್ಞೆಯೊಳಕ್ಕೆ ಬಿತ್ತುವೆವೋ, ನಮ್ಮ ಸುತ್ತಲಿರುವ ತರಂಗವು ಅದೇ ಆಗಿರುವುದು. ಅದಕ್ಕಾಗಿಯೇ ನಾವು ನಿಯಮಿತವಾಗಿ ಯೋಗ ಮತ್ತು ಪ್ರಾಣಾಯಾಮಗಳನ್ನು ಅಭ್ಯಾಸ ಮಾಡಬೇಕು. ಹೀಗಾಗಿ, ನಿಮಗೆಲ್ಲರಿಗೂ ನಿಮ್ಮ ಮನಸ್ಸು ಮತ್ತು ನಿಮ್ಮ ಜೀವದ ಗುಣಗಳನ್ನು ವರ್ಧಿಸಲು ಇದೊಂದು ಅದ್ಭುತ ಅವಕಾಶವಾಗಿದೆ.  

ಪ್ರತಿ ಶುಕ್ರವಾರದಂದು ಇಲ್ಲಿ ಆಶ್ರಮದಲ್ಲಿ ಲಕ್ಷ್ಮಿದೇವಿಯ ಗೌರವಾರ್ಥವಾಗಿ ನಾವೊಂದು ಸಣ್ಣ ಪೂಜೆಯನ್ನು ಮಾಡುತ್ತೇವೆ. ನಾಳೆ, ಪೂಜೆಯಲ್ಲಿ ಭಾಗವಹಿಸಲು ನಿಮ್ಮಲ್ಲಿ ಯಾರು ಇಚ್ಛಿಸುವಿರೋ ಅವರಿಗೆ ಹಾಗೆ ಮಾಡಲು ಸ್ವಾಗತವಿದೆ. ಮೊದಲಿಗೆ, ನಮ್ಮ ಹೊಲಗಳಲ್ಲಿ ಯಾವೆಲ್ಲಾ ಬೀಜಗಳನ್ನು ನಾವು ಬಿತ್ತುವೆವೋ ಅವುಗಳು ಬೆಳೆದು ಆಹಾರವನ್ನು ನೀಡಲಿಕ್ಕಾಗಿ ಹಾಗೂ ನಮ್ಮ ದೇಶದಲ್ಲಿ ಯಾರೂ ಹಸಿವಿನಿಂದ ಇರದೇ ಇರುವುದಕ್ಕಾಗಿ ನಮಗೆ ಕಾಲಕಾಲಕ್ಕೆ ಮಳೆಯನ್ನು ನೀಡಿ ಆಶೀರ್ವದಿಸಬೇಕೆಂದು ನಾವು ದೇವರನ್ನು ಪ್ರಾರ್ಥಿಸೋಣ.

ಪೂಜೆಯ ಬಳಿಕ ನಾವು ಇತರ ಸಭೆಗಳು ಮತ್ತು ಚಟುವಟಿಕೆಗಳನ್ನು ಮಾಡೋಣ. ಹೊಸತನ್ನೇನಾದರೂ ಪ್ರಾರಂಭಿಸುವ ಮೊದಲು ನಾವು ದೇವರನ್ನು ಪ್ರಾರ್ಥಿಸಬೇಕೆಂದು ಹೇಳಲಾಗಿದೆ. ಈ ಸಂಪ್ರದಾಯವು ಭಾರತದ ವಿಶೇಷತೆಯಾಗಿದೆ ಮತ್ತು ಅದು ಜಗತ್ತಿನ ಇತರ ಯಾವುದೇ ದೇಶದಲ್ಲೂ ಕಾಣಸಿಗುವುದಿಲ್ಲ. ನಾವು ಈ ಜಗತ್ತಿನಲ್ಲಿ ಜನ್ಮ ತಾಳಿದಾಗ, ನಮ್ಮೆಲ್ಲಾ ಆವಶ್ಯಕತೆಗಳಿಗಾಗಿ ನಾವು ನಮ್ಮ ಹೆತ್ತವರು ಮತ್ತು ಕುಟುಂಬದ ಮೇಲೆ ಬಹಳಷ್ಟು ಅವಲಂಬಿತರಾಗಿದ್ದೆವು ಎಂಬುದನ್ನು ನಾವು ಪ್ರಾರ್ಥಿಸುವಾಗ ನೆನಪಿಸಿಕೊಳ್ಳಬೇಕು. ನಮಗೆ ವಯಸ್ಸಾಗುವಾಗ, ಒಂದಲ್ಲ ಒಂದು ಕಾರಣಕ್ಕಾಗಿ ಮತ್ತೆ ನಾವು ನಮ್ಮ ಮಕ್ಕಳು ಮತ್ತು ಕುಟುಂಬದ ಮೇಲೆ ಅವಲಂಬಿತರಾಗುತ್ತೇವೆ. ಹೀಗೆ, ಬಾಲ್ಯದಲ್ಲಿ ಮತ್ತು ವೃದ್ಧಾಪ್ಯದಲ್ಲಿ ಎರಡು ಸಮಯದಲ್ಲೂ ನಾವು ಇತರರ ಮೇಲೆ ಅವಲಂಬನೆಯನ್ನು ಹೊಂದಿದ್ದೇವೆ. ನಮ್ಮ ಜೀವನದ ಈ ಎರಡು ಘಟ್ಟಗಳ ನಡುವೆಯೂ ನಾವು ಮಳೆ, ಸಮಾಜ, ಮೊದಲಾದ ಹಲವಾರು ವಿಷಯಗಳ ಮೇಲೆ ಅವಲಂಬಿತರಾಗಿದ್ದೇವೆ. ಹೀಗೆ ನಮ್ಮ ಜೀವನದುದ್ದಕ್ಕೂ ಯಾವುದಾದರ ಮೇಲಾದರೂ ಅಥವಾ ಯಾವುದಾದರೂ ವ್ಯಕ್ತಿಯ ಮೇಲಾದರೂ ನಾವು ಅವಲಂಬನೆಯ ಒಂದು ಭಾವವನ್ನು ಹೊಂದಿದ್ದೇವೆ. ಆದರೆ ಈ ಅವಲಂಬನೆಯು ನಿಜಕ್ಕೂ ನಮ್ಮೆಲ್ಲಾ ಅಗತ್ಯಗಳಿಗಾಗಿ ದೇವರ ಮೇಲಿರುವ ನಮ್ಮ ಅವಲಂಬನೆಯಾಗಿದೆ ಎಂಬುದನ್ನು ನಾವು ನೆನಪಿಸಿಕೊಂಡಾಗ, ಅವಲಂಬನೆಯ ಈ ಭಾವವು, ಬಲಹೀನತೆಯ ಒಂದು ಮೂಲಕ್ಕಿಂತ ಹೆಚ್ಚಿನ ಆಂತರಿಕ ಶಕ್ತಿಯ ಒಂದು ಮೂಲವಾಗುತ್ತದೆ. ಆಗ ಅಸಹಾಯಕತೆಯ ಕ್ಷಣಗಳಲ್ಲೂ ಕೂಡಾ ನಾವು ಶಕ್ತಿಯನ್ನು ಕಂಡುಕೊಳ್ಳಬಹುದು. ಇದು ದೇವರನ್ನು ಆರಾಧಿಸುವ ರಹಸ್ಯವಾಗಿದೆ.

ಹಿಂದಿಯಲ್ಲಿನ ಈ ಮಾತನ್ನು ನೀವು ಕೇಳಿರಬೇಕು, ’ನಿರ್ಬಲ್ ಕೆ ಬಲ್ ರಾಮ್’ (ನಿರ್ಬಲನ ಬಲವಾಗಿರುವನು ಭಗವಂತ). ಹೀಗಾಗಿ, ನೀವು ಬಲಹೀನರೆಂದು ಮೊದಲು ಒಪ್ಪಿಕೊಳ್ಳಿ ಮತ್ತು ನಂತರ, ನಿರ್ಬಲರ ಬಲವು ದೇವರೆಂಬುದನ್ನು ತಿಳಿಯಿರಿ. ನಿಮ್ಮಲ್ಲಿ ಈ ಬಲವಾದ ನಂಬಿಕೆಯಿರುವಾಗ, ನೀವು ಬಲಹೀನತೆ ಮತ್ತು ನಿಸ್ಸಹಾಯಕತೆಯನ್ನು ಅನುಭವಿಸುವುದು ಮುಂದುವರಿಯುವುದೇ? ಇಲ್ಲ, ಈ ಅರಿವು ಅಪಾರವಾದ ಶಕ್ತಿಯನ್ನು ತರುತ್ತದೆ ಹಾಗೂ ನಿಮ್ಮನ್ನು ಸ್ವಾವಲಂಬಿಯನ್ನಾಗಿಯೂ ಸ್ವತಂತ್ರರನ್ನಾಗಿಯೂ ಮಾಡುತ್ತದೆ. ನಮ್ಮ ರೈತರು ಸ್ವತಂತ್ರರಾಗಿಯೂ ಸ್ವಾವಲಂಬಿಗಳಾಗಿಯೂ ಆಗುವುದು ಬಹಳ ಅಗತ್ಯವಾಗಿದೆ.

ಹೇಳಿದ ಹಾಗೆ, ಇವತ್ತು ನಮ್ಮ ಆರ್ಟ್ ಆಫ್ ಲಿವಿಂಗ್ ಸ್ಥಾಪನೆ ವಾರ್ಷಿಕೋತ್ಸವವೂ ಆಗಿದೆ. ವಾಸ್ತವವಾಗಿ, ಈ ಜ್ಞಾನಕ್ಕೆ ನಿಜಕ್ಕೂ ಯಾವುದೇ ಆರಂಭವಿಲ್ಲ; ಅದು ಕಾಲಾತೀತವೂ, ಅನಾದಿಯೂ ಆಗಿದೆ. ಆದರೆ ಔಪಚಾರಿಕವಾಗಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆ ಮತ್ತು ವೇದ ವಿಜ್ಞಾನ ಮಹಾ ವಿದ್ಯಾಪೀಠವನ್ನು ನಾವು ಇವತ್ತು ಸ್ಥಾಪಿಸಿದೆವು, ಮತ್ತು ಸಂಸ್ಥೆಯು ನವೆಂಬರ್ ೧೩, ೧೯೮೧ರಂದು ನೋಂದಣಿಯಾಯಿತು. ಇವತ್ತು ಸೇವೆಯ ೩೩ ವರ್ಷಗಳನ್ನು ನಾವು ಪೂರ್ತಿಗೊಳಿಸಿದ್ದೇವೆ.
ಸಂಸ್ಥೆಯ ಮೊದಲ ಟ್ರಸ್ಟಿಗಳಲ್ಲಿ ಒಬ್ಬರು ನ್ಯಾಯಮೂರ್ತಿ ವಿ.ಆರ್.ಕೃಷ್ಣಯ್ಯ ಆಗಿದ್ದರು. ಇವತ್ತು ಅವರಿಗೆ ೧೦೦ ವರ್ಷಗಳು ತುಂಬಿವೆ. ಇವತ್ತು ಅವರ ೧೦೦ನೆಯ ಜನ್ಮದಿನವಾಗಿದೆ. ಅವರು ಭಾರತದ ಅತೀ ಹೆಚ್ಚು ಮೆಚ್ಚುಗೆ ಪಡೆದ ಕಾನೂನು ತಜ್ಞ ಹಾಗೂ ನ್ಯಾಯಲಯದ ನ್ಯಾಯಾಧೀಶರಾಗಿರುವರು. ಆ ದಿನಗಳಲ್ಲಿ ಅವರು ತಮ್ಮನ್ನು ತಾವು ಒಬ್ಬ ನಾಸ್ತಿಕರೆಂದು ಕರೆದುಕೊಳ್ಳುತ್ತಿದ್ದರು. ಆದರೆ ನಂತರ, ನನ್ನನ್ನು ಭೇಟಿಯಾದ ಬಳಿಕ, ನಾವು ಆಧ್ಯಾತ್ಮದ ಬಗ್ಗೆ ಹಲವಾರು ಚರ್ಚೆಗಳನ್ನು ಮಾಡುತ್ತಿದ್ದೆವು ಹಾಗೂ ನಿಧಾನವಾಗಿ ಅವರು ಕೂಡಾ ಆಸಕ್ತರಾದರು. ಆ ದಿನಗಳಲ್ಲಿ ನಾನು ನಡೆಸುತ್ತಿದ್ದ ಮಾರ್ಗದರ್ಶಿತ ಧ್ಯಾನಗಳಲ್ಲಿ ಅವರು ಉಪಸ್ಥಿತರಿರುತ್ತಿದ್ದರು, ಯಾಕೆಂದರೆ ಆ ಕಾಲದಲ್ಲಿ ಸುದರ್ಶನ ಕ್ರಿಯೆಯಿರಲಿಲ್ಲ, ಮತ್ತು ನಾನು ಧ್ಯಾನವನ್ನು ಮಾತ್ರ ಮಾಡಿಸುತ್ತಿದ್ದೆ. ಅವರು ನನ್ನೊಂದಿಗೆ ಬಹಳ ಸಮಯವನ್ನು ಕಳೆದರು. ನಂತರ, ಆಧ್ಯಾತ್ಮದಲ್ಲೇನೋ ನಿಜಕ್ಕೂ ಅದ್ಭುತವಾದುದೇನೋ ಇದೆ ಎಂದು ಅವರಿಗನ್ನಿಸಿತು, ಹಾಗೂ ಆ ನಂತರ ಅವರು ಒಬ್ಬ ಭಕ್ತರಾಗಿ ಮತ್ತು ಒಬ್ಬ ಆಸ್ತಿಕರಾಗಿ ತಮ್ಮ ಪಯಣವನ್ನು ಪ್ರಾರಂಭಿಸಿದರು. ಅವರೊಬ್ಬ ಬಹಳ ಉದಾತ್ತ ಹೃದಯದ ವ್ಯಕ್ತಿಯಾಗಿದ್ದರು.

ನಿಮಗೆ ಗೊತ್ತಾ, ಒಬ್ಬ ವ್ಯಕ್ತಿಯು ನಾಸ್ತಿಕನಾಗಿರಲಿ ಅಥವಾ ಒಬ್ಬ ಆಸ್ತಿಕನಾಗಿರಲಿ (ದೇವರ ಅಥವಾ ಆಧ್ಯಾತ್ಮದ), ಅವನು ದೃಢವಾಗಿರುವವರೆಗೆ ಮತ್ತು ತನ್ನ ಮಾತು ಮತ್ತು ಕೃತಿಯಲ್ಲಿ ಪ್ರಾಮಾಣಿಕನಾಗಿರುವಲ್ಲಿಯವರೆಗೆ, ಅವನು ಖಂಡಿತವಾಗಿಯೂ ಜೀವನದಲ್ಲಿ ಯಶಸ್ವಿಯಾಗುತ್ತಾನೆ, ಮತ್ತು ಸಮಯ ಮುಂದೆ ಹೋದಂತೆ, ನಿಧಾನವಾಗಿ ಮತ್ತು ಖಂಡಿತವಾಗಿಯೂ ಅವರು ಆಧ್ಯಾತ್ಮದಲ್ಲಿ ಒಂದು ಆಸಕ್ತಿಯನ್ನು ಬೆಳೆಸಿಕೊಳ್ಳಲು ಶುರುಮಾಡುತ್ತಾರೆ ಮತ್ತು ಬಲವಾದ ನಂಬಿಕೆಯುಳ್ಳವರಾಗುತ್ತಾರೆ. ನಾವಿದನ್ನು ಹಲವಾರು ಸಾರಿ ಗಮನಿಸಿದ್ದೇವೆ. ಒಬ್ಬ ವ್ಯಕ್ತಿಯು ಕೆಲವೊಮ್ಮೆ, "ಓ, ನಾನೊಬ್ಬ ನಾಸಿಕ" ಎಂದು ಹೇಳಲೂಬಹುದು, ಆದರೆ ಅವರದನ್ನು ಒಂದು ಬಹಳವಾದ ಬಾಹ್ಯ ಮಟ್ಟದಿಂದ ಹೇಳುತ್ತಾರೆ. ಕೆಳಗೆ ಆಳದಲ್ಲಿ, ತಮ್ಮ ಸೀಮಿತವಾದ ತಿಳುವಳಿಕೆಯನ್ನು ಮೀರಿದುದು ನಿಜಕ್ಕೂ ಏನೋ ಇದೆಯೆಂಬುದು ಅವರಿಗೂ ತಿಳಿದಿರುತ್ತದೆ. ಹೀಗಾಗಿ, ಅಂತಹ ಜನರು ನಿಧಾನವಾಗಿ ಮತ್ತು ಖಂಡಿತವಾಗಿಯೂ ಆಧ್ಯಾತ್ಮದ ಬೆಲೆಯನ್ನು ಅರ್ಥಮಾಡಿಕೊಳ್ಳುತ್ತಾರೆ.

ವಾಸ್ತವವಾಗಿ, ಆ ಕಾಲದಲ್ಲಿ ಒಂದು ಸಂಸ್ಥೆಯನ್ನು ಪ್ರಾರಂಭಿಸಲು ನನಗೆ ಮನಸ್ಸಿರಲಿಲ್ಲ. ಸಂಸ್ಥೆಯನ್ನು ಪ್ರಾರಂಭಿಸಲು ನನಗೆ ಸ್ಫೂರ್ತಿ ನೀಡಿದುದು ಮತ್ತು ಬೆಂಬಲಿಸಿದುದು ಈ ಕೆಲವು ಜನರಾಗಿದ್ದರು; ಪಿತಾಜಿ (ಗುರುದೇವರ ತಂದೆಯ ಒಂದು ಪ್ರೀತಿಪೂರ್ವಕವಾದ ಹೆಸರು), ನ್ಯಾಯಮೂರ್ತಿ ಕೃಷ್ಣಯ್ಯ, ನ್ಯಾಯಮೂರ್ತಿ ಭಗವತಿ, ಬೆಂಗಳೂರಿನ ಮೇಯರ್ ಆಗಿದ್ದ ಶ್ರೀ ಲಕ್ಷ್ಮಣ ರಾವ್ ಮತ್ತು ಆ ಸಮಯದಲ್ಲಿ ಕರ್ನಾಟಕದ ಮುಖ್ಯ ಕಾರ್ಯದರ್ಶಿಗಳಾಗಿದ್ದ ಶ್ರೀ ನರಸಿಂಹ ರಾವ್. ಈ ಐದು ಮಂದಿ ನನ್ನಲ್ಲಿ, "ಇಲ್ಲ, ನೀವು ಈ ಸಂಸ್ಥೆಯನ್ನು ಪ್ರಾರಂಭಿಸಬೇಕು" ಎಂದು ಹೇಳಿದರು. ೩೩ ವರ್ಷಗಳ ಹಿಂದೆ ಅವರು ಔಪಚಾರಿಕವಾಗಿ ಸಂಸ್ಥೆಯನ್ನು ನೋಂದಣಿಗೊಳಿಸಿದ ದಿನ ಇವತ್ತಾಗಿದೆ.

ಹೀಗೆ, ಇವತ್ತು ನಮ್ಮ ಆಶ್ರಮವು ತನ್ನ ಅಸ್ತಿತ್ವದ ೩೩ ವರ್ಷಗಳನ್ನು ಪೂರೈಸಿದೆ. ಆ ದಿನಗಳಲ್ಲಿ ಆಶ್ರಮವು ಇವತ್ತು ಕಾಣಿಸುವಂತೆ ಇರಲಿಲ್ಲ. ಆ ಮೊದಲಿನ ದಿನಗಳಲ್ಲಿ ಕೋಣೆಗಳು ಹಾಗೂ ವಸತಿಗೃಹಗಳು ಹುಲ್ಲು ಮತ್ತು ಮಣ್ಣಿನಿಂದ ಮಾಡಲ್ಪಟ್ಟ ಗುಡಿಸಲುಗಳಾಗಿದ್ದವು. ಆ ದಿನಗಳಲ್ಲಿ, ಸಿಮೆಂಟಿನಿಂದ ಮಾಡಲ್ಪಟ್ಟ ಒಂದೇ ಒಂದು ಗಟ್ಟಿಮುಟ್ಟಾದ ಮನೆಯಿರಲಿಲ್ಲ; ಎಲ್ಲರೂ ಗುಡಿಸಲುಗಳನ್ನು ಕಟ್ಟುತ್ತಿದ್ದರು. ಆದರೆ ಇವತ್ತಿನ ಬದಲಾವಣೆಯನ್ನು ನೋಡಿ. ಇವತ್ತು ಎಲ್ಲರೂ ಸಿಮೆಂಟಿನಿಂದ ಮಾಡಿದ ಬಲವಾದ ಮನೆಗಳನ್ನು ಕಟ್ಟುತ್ತಾರೆ. ಆ ದಿನಗಳಲ್ಲಿ, ಮಳೆ ಬರುವಾಗ ಹುಲ್ಲಿನ ಛಾವಣಿಯಿಂದ ನೆಲಕ್ಕೆ ನೀರು ಹನಿಹನಿಯಾಗಿ ಸೋರುತ್ತಿತ್ತು. ನಾನು ಯಾವತ್ತೂ ಸರಳತೆಯನ್ನು ಇಷ್ಟಪಡುತ್ತಿದ್ದೆ. ಹೆಚ್ಚಾಗಿ ನಾನು, ಮನೆಗಳು ಮತ್ತು ಗುಡಿಸಲುಗಳನ್ನು ಹಳೆ ಕಾಲದಲ್ಲಿ ಹೇಗಿತ್ತೋ ಹಾಗೆ, ತೆಂಗಿನ ನಾರು ಹಾಗೂ ಒಣಹುಲ್ಲುಕಡ್ಡಿಗಳಿಂದ ಕಟ್ಟಬೇಕೆಂದು ಹೇಳುತ್ತಿದ್ದೆ. ಆ ಸಮಯದಲ್ಲಿ ನನ್ನೊಂದಿಗೆ ಕೇವಲ ಸುಮಾರು ೧೦೦-೨೦೦ ಜನರು ಮಾತ್ರ ಇದ್ದರು. ನಿಮ್ಮಲ್ಲಿ ಕೆಲವರು ಈಗಲೂ ಇಲ್ಲಿ ಇವತ್ತು ಕುಳಿತಿರುವಿರಿ. ನಾವು ಬಾವಿಯಿಂದ ನೀರು ಸೇದುತ್ತಿದ್ದೆವು ಮತ್ತು ಆಶ್ರಮವನ್ನು ಬೆಳಗಲಿಕ್ಕಾಗಿ ಒಂದು ಜನರೇಟರ್ ವಿದ್ಯುತ್ತನ್ನು ಪೂರೈಸುತ್ತಿತ್ತು. ವಿದ್ಯುಚ್ಛಕ್ತಿಯು ಒಂದು ದಿನಕ್ಕೆ ಒಂದರಿಂದ ಎರಡು ಗಂಟೆಗಳಷ್ಟು ಕಾಲ ಮಾತ್ರ ಪೂರೈಕೆಯಾಗುತ್ತಿತ್ತು. ಆ ದಿನಗಳಲ್ಲಿ ಬಹಳಷ್ಟು ಮಳೆ ಬರುತ್ತಿತ್ತು ಮತ್ತು ಎಷ್ಟೊಂದು ಗಾಳಿ ಬೀಸುತ್ತಿತ್ತೆಂದರೆ, ಬಲವಾದ ಗಾಳಿಯೊಂದಿಗೆ ಎಲ್ಲವೂ ಹಾರಿಹೋಗುತ್ತಿತ್ತು. ಆಗ ನಾವು, ಇರಲಿಕ್ಕಾಗಿ ಹೆಚ್ಚು ಗಟ್ಟಿಯಾದ ಜಾಗಗಳನ್ನು ಮಾಡಬೇಕೆಂದು ಯೋಚಿಸಿದೆವು. ವಿದೇಶಗಳಿಂದ ಕೂಡಾ ಹಲವಾರು ಜನರು ನನ್ನನ್ನು ಭೇಟಿಯಾಗಲು ಬರತೊಡಗಿದರು. ಅವರಲ್ಲೊಬ್ಬರು ನನ್ನಲ್ಲಿ, "ಗುರುದೇವ, ಹಲವಾರು ಭಕ್ತರು ಆಶ್ರಮಕ್ಕೆ ಈಗ ಹರಿದುಬರುತ್ತಿದ್ದಾರೆ. ಈ ಎಲ್ಲಾ ಜನರು ಉಳಿದುಕೊಳ್ಳುವುದಕ್ಕಾಗಿ ನೀವು ನಿಜಕ್ಕೂ ಒಂದು ದೊಡ್ಡ ಧ್ಯಾನ ಮಂದಿರವನ್ನು ಬೇಗನೇ ಕಟ್ಟಿಸಬೇಕಾಗುವುದು. ಅವರಿಗೆ ಹೆಚ್ಚು ಸಮಯ ಗುಡಿಸಲುಗಳಲ್ಲಿ ಮತ್ತು ಟೆಂಟುಗಳಲ್ಲಿ ಇರಲು ಸಾಧ್ಯವಾಗದು" ಎಂದು ಹೇಳಿದರು.

ನಾನು ಸಮ್ಮತಿಸಿದೆ ಮತ್ತು ಕಟ್ಟಡ ನಿರ್ಮಾಣವನ್ನು ಪ್ರಾರಂಭಿಸಲು ಅವರಿಗೆ ಹೇಳಿದೆ. ಧ್ಯಾನ ಮಂದಿರದ ವಿನ್ಯಾಸವನ್ನು ನಾನೇ ಮಾಡಿದೆ ಹಾಗೂ ಅವರಿಗೆ ಸೂಚನೆಗಳನ್ನು ನೀಡಿದೆ. ಆ ಧ್ಯಾನ ಮಂದಿರವು ಈಗ, ಇವತ್ತು ನೀವು ಕುಳಿತಿರುವ ವಿಶಾಲಾಕ್ಷಿ ಮಂಟಪವಾಗಿದೆ.

ಸುಮಾರು ೧೦-೧೫ ವರ್ಷಗಳ ಬಳಿಕ ಹೆಚ್ಚು ಹೆಚ್ಚು ಗಟ್ಟಿಮುಟ್ಟಾದ ಮನೆಗಳು ನಿರ್ಮಾಣವಾಗತೊಡಗಿದವು. ನಾವು ನಮಗಾಗಿ ಗಟ್ಟಿಯಾದ ಮನೆಗಳನ್ನು ನಿರ್ಮಿಸುವುದಾದರೆ, ಆಗ ನಾವು ಹಳ್ಳಿಯ ಹಾಗೂ ಸುತ್ತುಮುತ್ತಲಿನ ಪ್ರದೇಶಗಳ ಜನರಿಗೂ, ಗಟ್ಟಿಯಾದ ಮನೆಗಳನ್ನು ಕಟ್ಟುವಲ್ಲಿ ಸಹಾಯ ಮಾಡಬೇಕೆಂದು ನಾನು ಹೇಳಿದೆ. ಇಲ್ಲಿ ವಾಸಿಸುವ ಎಲ್ಲರಿಗೂ ಕೂಡಾ ಒಂದು ಗಟ್ಟಿಯಾದ ಮನೆ ಸಿಗುವುದಾದರೆ ಮಾತ್ರ ಅಂತಹ ಕಟ್ಟಡ ನಿರ್ಮಾಣಕ್ಕೆ ನಾನು ಅನುಮತಿ ನೀಡುವೆನೆಂದು ಆ ಸಮಯದಲ್ಲಿ ನನ್ನೊಂದಿಗಿದ್ದ ಭಕ್ತರಲ್ಲಿ ನಾನು ಹೇಳಿದೆ. ಅವರೆಲ್ಲರೂ ಒಟ್ಟು ಸೇರಿ, ಆಶ್ರಮದ ಸಮೀಪ ಹಾಗೂ ಸುತ್ತಲೂ ಇರುವ ಎಲ್ಲರಿಗೂ ಕೂಡಾ ವಾಸಿಸಲಿಕ್ಕಾಗಿ ಗಟ್ಟಿಯಾದ ಮನೆಗಳು ಸಿಗುವಂತೆ ನೋಡಿಕೊಂಡರು. ಪ್ರತಿಯೊಂದು ಮನೆಯೂ ಒಂದು ಸರಿಯಾದ ಶೌಚಾಲಯವನ್ನು ಹೊಂದಿತ್ತು. ಆಶ್ರಮದ ಆವರಣದ ಹಿಂದೆ ವಾಸಿಸುವ ಜನರಿಗಾಗಿ ಒಂದು ಚಿಕ್ಕ ಉಪನಿವೇಶ(ಕೋಲೊನಿ)ವನ್ನು ಕೂಡಾ ನಾವು ಮಾಡಿಸಿದೆವು. ಮೊದಲು ಅವರು ಕೊಳೆಗೇರಿಗಳಲ್ಲಿ ವಾಸಿಸುತ್ತಿದ್ದರು. ಹೀಗಾಗಿ ಅದು, ಜನರ ಜೀವನಮಟ್ಟವನ್ನು ಸುಧಾರಿಸುವಲ್ಲಿ ನಿಜಕ್ಕೂ ಸಹಾಯಕವಾಯಿತು.