ಗುರುವಾರ, ನವೆಂಬರ್ 20, 2014

ಶಾಂತಿಯನ್ನು ನೆಲೆಗೊಳಿಸಲು ನಾವು ಒಂದಾಗೋಣ

೨೦/೧೧/೨೦೧೪
ರ್ಬಿಲ್, ಇರಾಕ್
ಸ್ವಲ್ಪ ಸಮಯ ತೆಗೆದುಕೊಂಡು, ಶಿಬಿರಗಳಲ್ಲಿರುವ ಜನರಿಗೆ ಭರವಸೆ ತುಂಬಲು ಹಾಗೂ ಅವರ ಮುಗುಳ್ನಗೆಯನ್ನು ಮರಳಿ ತರಲು ಶಿಬಿರಗಳಿಗೆ ಭೇಟಿ ನೀಡಿರೆಂದು ನಾನು ನಿಮ್ಮಲ್ಲಿ ಕೇಳಿಕೊಳ್ಳುತ್ತೇನೆ. ನಿನ್ನೆ ನಾನು ಕೆಲವು ಶಿಬಿರಗಳ ಮೂಲಕ ನಡೆದುಹೋದಾಗ ಜನರು, "ಇವತ್ತು ನಾವು ಸಂತೋಷಗೊಂಡಿದ್ದೇವೆ ಮತ್ತು ನಮಗೆ ಮುಗುಳ್ನಗಲು ಸಾಧ್ಯವಾಗುತ್ತಿದೆ" ಎಂದು ಹೇಳಿದರು. ಅದೊಂದು ಬಹಳ ಒಳ್ಳೆಯ ಭೇಟಿಯಾಗಿತ್ತು. 

ಎಲ್ಲಾ ದುಃಖಗಳ ಹೊರತಾಗಿಯೂ ಹಾಗೂ ವಿಪತ್ತಿನ ನಡುವೆಯೂ ಒಂದು ಮುಗುಳ್ನಗೆಯನ್ನು ತರುವುದು ನಮ್ಮಿಂದ ಸಾಧ್ಯವಾಗಬಲ್ಲ ಒಂದು ವಿಷಯವಾಗಿದೆ. ನಾವೆಲ್ಲರೂ ಗಮನ ಹರಿಸಬೇಕಾದಂಥ ಸಂಗತಿ ಇದು. ನಾವು ಗಮನ ಹರಿಸಬೇಕಾಗಿರುವ ಮುಂದಿನ ವಿಷಯವೆಂದರೆ, ತಡೆಯುವುದು. ಜನರು ಅಂತಹ ಪಡೆಗಳನ್ನು ಸೇರುವುದನ್ನು ನಾವು ಹೇಗೆ ತಡೆಗಟ್ಟಬಹುದು? ಈ ಪ್ರಪಂಚದ ಪ್ರತಿಯೊಂದು ಸರಕಾರದೊಂದಿಗೂ ನಾವು ಮಾತುಕತೆ ನಡೆಸಬೇಕಾಗುತ್ತದೆ ಹಾಗೂ ಅವರಲ್ಲಿ, ಶಾಂತಿಯನ್ನು ಕಟ್ಟುವ ಚಟುವಟಿಕೆಗಳು ಮತ್ತು ಶಾಂತಿ ಶಿಕ್ಷಣಗಳಿಗೆ ಸಮಯ ಮತ್ತು ಸಂಪನ್ಮೂಲಗಳನ್ನು ವ್ಯಯಿಸುವಂತೆ ಹೇಳಬೇಕು. ರಕ್ಷಣೆಗಾಗಿ ವ್ಯಯಿಸುವುದರಲ್ಲಿ ಒಂದು ಸಣ್ಣ ಭಾಗವನ್ನಾದರೂ ಶಾಂತಿ ಶಿಕ್ಷಣಕ್ಕಾಗಿ ವ್ಯಯಿಸಿದಲ್ಲಿ, ಯುವಕರು ಇಂತಹ ಒಂದು ಅಮಾನವೀಯ ವರ್ತನೆಯಲ್ಲಿ ತೊಡಗುವುದಕ್ಕೆ ಅದು ಅನುವು ಮಾಡಿ ಕೊಡದು.

ಈ ಎಲ್ಲಾ ತಪ್ಪು ಮಾರ್ಗದರ್ಶನ ಹೊಂದಿದ ಯುವಕರು ನಮ್ಮ ಸಮಾಜದ ನಡುವಿವನರು, ಅವರು ನಮ್ಮ ಸ್ವಂತ ಸಹೋದರರು. ಅವರಿಗೆ ಯಾಕೆ ತಪ್ಪು ಮಾರ್ಗದರ್ಶನ ನೀಡಲಾಯಿತು? ಅದು ಯಾಕೆಂದರೆ, ಶಾಂತಿಯ ಬಗ್ಗೆ ಅವರು ಯಾವುದೇ ಶಿಕ್ಷಣವನ್ನು ಪಡೆಯಲಿಲ್ಲ. ರಕ್ತಪಾತ ಮತ್ತು ಹಿಂಸಾಚಾರಗಳಲ್ಲಿ ತೊಡಗಿಸಿಕೊಂಡು, ತಾನು ದೇವರ ಕೆಲಸ ಮಾಡುತ್ತಿದ್ದೇನೆಂದು ಯೋಚಿಸುತ್ತಾ ಯಾವುದೇ ಮಗುವು ಈ ಭೂಮಿಯ ಮೇಲೆ ಬೆಳೆಯದಿರುವುದಕ್ಕೋಸ್ಕರ, ನಮ್ಮೆಲ್ಲಾ ಪಠ್ಯಕ್ರಮದಲ್ಲಿ ಶಾಂತಿ ಶಿಕ್ಷಣವನ್ನು ಸೇರ್ಪಡೆ ಮಾಡುವುದು ಈಗ ಖಂಡಿತವಾಗಿಯೂ ಅಗತ್ಯವಾಗಿದೆ.

ಶಾಂತಿ ಶಿಕ್ಷಣ, ಒಂದು ಬಹು-ಸಾಂಸ್ಕೃತಿಕ, ಬಹು-ಧಾರ್ಮಿಕ ಶಿಕ್ಷಣ ಮತ್ತು ತನ್ನ ಭಾವನೆಗಳು ಹಾಗೂ ಮನಸ್ಸಿನ ಆಘಾತಗಳನ್ನು ನಿರ್ವಹಿಸುವ ಶಿಕ್ಷಣವನ್ನು ಪರಿಚಯಿಸುವ ನೇತೃತ್ವನ್ನು ದಯವಿಟ್ಟು ತೆಗೆದುಕೊಳ್ಳಬೇಕಾಗಿ ನಾನು ಇಲ್ಲಿರುವ ಎಲ್ಲಾ ಶೈಕ್ಷಣಿಕ ತಜ್ಞರಲ್ಲಿ ವಿನಂತಿಸುತ್ತಿದ್ದೇನೆ.

ಮಾಡಲ್ಪಟ್ಟಿರುವ ಎಲ್ಲಾ ಒಳ್ಳೆಯ ಕೆಲಸಗಳನ್ನು ಪ್ರದರ್ಶಿಸುವಂತೆ ಹಾಗೂ ಹಲವಾರು ದೇಶಗಳಲ್ಲಿ ಬೇರೆ ಬೇರೆ ಸಮುದಾಯಗಳ ಜನರಿಂದ ತೋರಲ್ಪಟ್ಟ ಸಹಾನುಭೂತಿಯನ್ನು ಎತ್ತಿ ತೋರಿಸುವ ಮೂಲಕ ಸಮುದಾಯಗಳ ನಡುವಿನ ಭಿನ್ನಾಭಿಪ್ರಾಯಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಕೂಡಾ ಕೆಲಸ ಮಾಡಬೇಕೆಂದು ನಾನು ಮಾಧ್ಯಮಗಳ ಬಳಿ ವಿನಂತಿಸುತ್ತೇನೆ.
ಒತ್ತಡದಲ್ಲಿರುವಾಗ, ಅದನ್ನು ತೊಡೆದುಹಾಕಲು ಮಾರ್ಗಗಳಿವೆ; ಯಾವತ್ತೂ ಅವರು ಮನಸ್ಸು ಮತ್ತು ಹೃದಯಗಳಲ್ಲಿ ಒತ್ತಡದೊಂದಿಗೆ ಜೀವಿಸಬೇಕಾಗಿಲ್ಲ ಎಂದು ಜನರಲ್ಲಿ ಹೇಳಬೇಕಾಗಿಯೂ ನಾನು ಮಾಧ್ಯಮಗಳ ಬಳಿ ಕೇಳಿಕೊಳ್ಳುತ್ತೇನೆ. ಅಹಿಂಸಾ ಮಾರ್ಗವನ್ನು ಅನುಸರಿಸುವಂತೆ ಜನರನ್ನು ಪ್ರೋತ್ಸಾಹಿಸಬೇಕಾಗಿ ನಾನು ಮುಖ್ಯವಾಹಿನಿ ಮಾಧ್ಯಮಗಳ ಬಳಿ ವಿನಂತಿಸುತ್ತೇನೆ.

ಪತ್ರಿಕೋದ್ಯಮದಲ್ಲಿ ಎರಡು ಪ್ರಮುಖ ಅಂಶಗಳಿವೆ. ಒಂದನೆಯದೆಂದರೆ ವಾಸ್ತವವನ್ನು ಅದಿರುವಂತೆಯೇ ಜನರ ಮುಂದೆ ಬಿತ್ತರಿಸುವುದು. ಕೆಲವೊಮ್ಮೆ ಅದು ದುಃಖವನ್ನುಂಟು ಮಾಡುತ್ತದೆ. ಆದರೆ ಅದೇ ಸಮಯದಲ್ಲಿ, ಪ್ರತಿದಿನವೂ ಹಲವಾರು ಜನರು ಮಾಡುತ್ತಿರುವ ಒಳ್ಳೆಯ ಕೆಲಸಗಳೊಂದಿಗೆ ಅವರು ಅದನ್ನು ಸಮತೋಲನಗೊಳಿಸಬೇಕು.

ನೀವು ಶಿಬಿರಗಳಿಗೆ ಹೋದರೆ, ತಮ್ಮ ಶಿಕ್ಷಣ, ವೃತ್ತಿ ಮತ್ತು ಹಣ ಮಾಡುವುದರ ಕಡೆಗೆ ಗಮನ ನೀಡಿರಬಹುದಾದ, ತಮ್ಮ ಜೀವನದ ಉತ್ತುಂಗದಲ್ಲಿರುವ ಹಲವಾರು ಯುವಕರನ್ನು ನೀವು ನೋಡಬಹುದು. ಆದರೆ ಅದಕ್ಕೆ ಬದಲಾಗಿ, ಅವರು ಅದೆಲ್ಲವನ್ನೂ ತೊರೆದಿದ್ದಾರೆ ಮತ್ತು ಅಗತ್ಯವಿರುವವರಿಗೆ ಸಹಾಯ ಮಾಡುತ್ತಿದ್ದಾರೆ. ಜನರು ತಮ್ಮ ಜೀವನದಲ್ಲಿ ಏನಾದರೂ ಉತ್ತಮವಾದುದನ್ನು ಮಾಡುವುದಕ್ಕೆ ಸ್ಫೂರ್ತಿ ಪಡೆಯುವುದಕ್ಕೋಸ್ಕರ ಇಂತಹ ರೀತಿಯ ಸಮಾಚಾರಗಳನ್ನು ಎದ್ದು ತೋರಿಸಬೇಕು. ಖಿನ್ನತೆಯಲ್ಲಿ ಮುಳುಗುವುದರ ಬದಲಾಗಿ,  ಸಾಮಾಜಿಕ ಕಾರ್ಯಗಳನ್ನು ತೆಗೆದುಕೊಂಡು ಕಾರ್ಯಪ್ರವೃತ್ತರಾಗುವಂತೆ ಮಾಧ್ಯಮಗಳು ಜನರನ್ನು ಹುರಿದುಂಬಿಸಬಲ್ಲವು.

ಪ್ರಶ್ನೆ: ಪ್ರತಿಯೊಂದು ಧರ್ಮವೂ ಎರಡು ಅಂಶಗಳನ್ನು ಹೊಂದಿದೆ, ಒಂದು ಅಂಶವೆಂದರೆ ನಂಬಿಕೆಗಳು ಮತ್ತು ಇನ್ನೊಂದು ರೀತಿ-ರಿವಾಜುಗಳು. ಇದು ನಮಗೆ ತಿಳಿದಿದೆ. ಯಾವುದು ಜೋಡಿಸುವ ಮತ್ತು ಯಾವುದು ವಿಭಾಗಿಸುವ ಅಂಶ?

ಶ್ರೀ ಶ್ರೀ ರವಿ ಶಂಕರ್: ನಾನು ಹೇಳುವುದೇನೆಂದರೆ, ಧರ್ಮವು ಮೂರು ಅಂಶಗಳನ್ನು ಹೊಂದಿದೆ:

೧. ಮೌಲ್ಯಗಳು
೨. ಚಿಹ್ನೆಗಳು ಮತ್ತು
೩. ರೀತಿ-ರಿವಾಜುಗಳು ಮತ್ತು ಅಭ್ಯಾಸಗಳು

ಎಲ್ಲಾ ಧರ್ಮಗಳ ನಡುವೆ ಮೌಲ್ಯಗಳು ಒಂದೇ ಆಗಿ ತೋರುತ್ತದೆ. ಉದಾಹರಣೆಗೆ, ಸಹೋದರತ್ವ, ದೇವರ ಏಕತ್ವ, ಪ್ರೇಮ ಮತ್ತು ಕರುಣೆ, ಬಡ ಮತ್ತು ಅಗತ್ಯವಿರುವವರ ಸೇವೆ. ಇದು ಧರ್ಮದ ಆಧ್ಯಾತ್ಮಿಕ ಅಂಶವಾಗಿದೆ.

ಎರಡನೆಯದೆಂದರೆ, ಚಿಹ್ನೆ. ಪ್ರತಿಯೊಂದು ಧರ್ಮವೂ ಚಿಹ್ನೆಗಳನ್ನು, ಪವಿತ್ರ ಸ್ಥಳಗಳನ್ನು ಮತ್ತು ಗ್ರಂಥಗಳನ್ನು ಹೊಂದಿದೆ.
ಮೂರನೆಯದೆಂದರೆ, ರೀತಿ-ರಿವಾಜುಗಳು ಮತ್ತು ಅಭ್ಯಾಸಗಳು. ಹಲವಾರು ಬೇರೆ ಬೇರೆ ರಿವಾಜುಗಳಿರಬಲ್ಲವು.

ಸಾಮಾನ್ಯವಾಗಿ ಜನರು ಏನು ಮಾಡುತ್ತಾರೆಂದರೆ, ಅವರು ಮೌಲ್ಯಗಳನ್ನು ಬಿಡುತ್ತಾರೆ ಮತ್ತು ರಿವಾಜುಗಳು ಹಾಗೂ ಚಿಹ್ನೆಗಳಿಗೆ ಕಟ್ಟುಬೀಳುತ್ತಾರೆ. ಇಲ್ಲಿಯೇ ಸಂಘರ್ಷ ಉಂಟಾಗುವುದು. ಅದಕ್ಕಾಗಿಯೇ ನಾನು, "ಆಧ್ಯಾತ್ಮವು ಜನರನ್ನು ಒಂದುಗೂಡಿಸುತ್ತದೆ, ಆದರೆ ಧರ್ಮಗಳು ಜನರನ್ನು ವಿಭಜಿಸಬಲ್ಲವು" ಎಂದು ಹೇಳುವುದು.

ಪ್ರಪಂಚದ ಪ್ರಮುಖ ಧರ್ಮಗಳನ್ನು ನೀವು ನೋಡಿದರೆ, ಅಬ್ರಹಾಮಿಕ್ ಧರ್ಮಗಳು ಅದೇ ಮೂಲದಿಂದ ಬರುತ್ತವೆ ಎಂಬುದು ನಿಮಗೆ ಕಾಣಿಸುತ್ತದೆ. ಇದು, ಒಂದೇ ಕುಟುಂಬದ ಮೂವರು ಸಹೋದರರಂತೆ. ಆದರೆ, ಅಲ್ಲಿ ಬಹಳಷ್ಟು ಸಂಘರ್ಷಗಳಾಗಿವೆ.
ಶಿಂಟೋ, ಟಾವೋ, ಬೌದ್ಧ, ಹಿಂದೂ, ಸಿಖ್, ಜೈನ ಧರ್ಮಗಳಂತಹ ಇತರ ಧರ್ಮಗಳಲ್ಲಿ ಯಾವುದೇ ಸಂಘರ್ಷವಾಗಿಲ್ಲ.

ದೂರಪ್ರಾಚ್ಯದ ಆರು ಧರ್ಮಗಳು ಯಾವತ್ತೂ ಜೊತೆಯಾಗಿ ಅಸ್ತಿತ್ವದಲ್ಲಿದ್ದವು ಮತ್ತು ಅವರ ರೀತಿ-ರಿವಾಜುಗಳು ಸಂಪೂರ್ಣವಾಗಿ ಬೇರೆ ಬೇರೆ. ಹಿಂದೂ ಧರ್ಮದ ಒಳಗೆ ನೂರಾರು ಪಂಥಗಳಿವೆ, ಆದರೆ ಅವುಗಳೊಳಗೆ ಯಾವತ್ತೂ ಯಾವುದೇ ಸಂಘರ್ಷವಾಗಿಲ್ಲ. ಮೂಲಭೂತವಾದ ನಿಯಮವೆಂದರೆ ಪರಸ್ಪರರನ್ನು ಗೌರವಿಸುವುದು ಮತ್ತು ಆದರಿಸುವುದು. ಇಸ್ಲಾಂನಲ್ಲಿಯೂ ಅದೇ ರೀತಿಯಾಗಿತ್ತು. ಇಸ್ಲಾಂನಲ್ಲಿ ಐದು ಅಥವಾ ಇನ್ನೂ ಹೆಚ್ಚು ಬೇರೆ ಬೇರೆ ಪಂಥಗಳಿವೆ. ಅವರೆಲ್ಲರೂ ಶಾಂತಿಯುತವಾಗಿ ಜೊತೆಯಲ್ಲಿ ನೆಲೆಸಿದ್ದ ಕಾಲಘಟ್ಟಗಳು ಚರಿತ್ರೆಯಲ್ಲಿದ್ದವು. ಇರಾಕ್‌ನಲ್ಲಿ ಕೂಡಾ ಶಿಯಾ ಮತ್ತು ಸುನ್ನಿಗಳು ಜೊತೆಯಾಗಿ ನೆಲೆಸಿದ್ದರು.

ಕಲಹಗಳು ಉಂಟಾಗುವಾಗ, ಇತರ ಯಾವುದೇ ಗುರುತುಗಳಿಗಿಂತಲೂ, ಅದು ಒಂದು ಧರ್ಮದ ಹೆಸರಿಗೆ ಹೆಚ್ಚಾಗಿ ಅಂಟಿಕೊಳ್ಳುತ್ತದೆ ಮತ್ತು ತದನಂತರ ಇಡೀ ಸಮಸ್ಯೆಯು ಪ್ರಾರಂಭವಾಗುತ್ತದೆ. ಎಲ್ಲಾ ಧರ್ಮಗಳ ಜನರನ್ನು ಜೊತೆಗೂಡಿಸಬಲ್ಲ ಆಧ್ಯಾತ್ಮಿಕ ಮೌಲ್ಯಗಳ ಬಗ್ಗೆ ನಾವು ಹೆಚ್ಚು ಗಮನ ಹರಿಸಬೇಕು. ಜಪಾನಿನಲ್ಲಿ ಸಂಭವಿಸಿದ ಒಂದು ಘಟನೆಯ ಬಗ್ಗೆ ನಾನು ನಿಮಗೆ ಹೇಳಲು ಇಚ್ಛಿಸುತ್ತೇನೆ. ಒಮ್ಮೆ ರಾಷ್ಟ್ರಾಧ್ಯಕ್ಷ ನಿಕ್ಸನ್ (ಅಮೆರಿಕಾದ) ಅವರು ಜಪಾನಿಗೆ ಹೋದರು ಮತ್ತು ಅವರು ಎಲ್ಲಾ ಧಾರ್ಮಿಕ ಮುಖಂಡರನ್ನು ಭೇಟಿಯಾಗಲು ಬಯಸಿದರು. ಅವರ ಒಂದು ಭಾಗದಲ್ಲಿ ಒಬ್ಬರು ಬೌದ್ಧ ಸನ್ಯಾಸಿಗಳು ಕುಳಿತಿದ್ದರು ಮತ್ತು ಇನ್ನೊಂದು ಭಾಗದಲ್ಲಿ ಒಬ್ಬರು ಶಿಂಟೋ ಸಂತರು ಕುಳಿತಿದ್ದರು.

ನಿಕ್ಸನ್ ಅವರು ಶಿಂಟೋ ಸಂತರಲ್ಲಿ, "ಜಪಾನಿನಲ್ಲಿ ಶಿಂಟೋ ಅನುಯಾಯಿಗಳು ಎಷ್ಟು ಶೇಕಡಾ ಇದ್ದಾರೆ?" ಎಂದು ಕೇಳಿದರು.

ಅವರಂದರು, "ಶೇ. ೮೦".

ಅವರು ನಂತರ ಬೌದ್ಧ ಸನ್ಯಾಸಿಗಳ ಕಡೆಗೆ ತಿರುಗಿ ಅವರಲ್ಲಿ, "ಜಪಾನಿನಲ್ಲಿ ಬೌದ್ಧ ಅನುಯಾಯಿಗಳು ಎಷ್ಟು ಶೇಕಡಾ ಇದ್ದಾರೆ?" ಎಂದು ಕೇಳಿದರು.

ಅವರಂದರು, "ಶೇ. ೮೦".

ಅದು ಹೇಗೆ ಸಾಧ್ಯವೆಂಬುದಾಗಿ ಅಧ್ಯಕ್ಷರಿಗೆ ಅರ್ಥವಾಗಲಿಲ್ಲ, ಆದರೆ ಅದು ಸಾಧ್ಯವಿದೆ. ಅದೇ ರೀತಿಯಲ್ಲಿ, ನೀವು ಭಾರತಕ್ಕೆ ಬಂದರೆ, ಜೈನರು ಮತ್ತು ಹಿಂದೂಗಳು ಸಂಪೂರ್ಣವಾಗಿ ವ್ಯತ್ಯಸ್ತವಾದ ನಂಬಿಕೆಗಳನ್ನು ಮತ್ತು ರೀತಿ-ರಿವಾಜುಗಳನ್ನು ಹೊಂದಿದ್ದಾರೆ, ಆದರೆ ಅವರು ಅಷ್ಟೊಂದು ಸಾಮರಸ್ಯದಿಂದ ಜೊತೆಯಲ್ಲಿ ವಾಸಿಸುತ್ತಾರೆ. ಅದೇ ರೀತಿಯಲ್ಲಿ, ಸಿಕ್ಖರು ಮತ್ತು ಹಿಂದೂಗಳು ಪರಸ್ಪರರ ಹಬ್ಬಗಳಲ್ಲಿ ಭಾಗವಹಿಸುತ್ತಾರೆ ಮತ್ತು ಪರಸ್ಪರರನ್ನು ಗೌರವಿಸುತ್ತಾರೆ, ಆದರೆ ಯಾವತ್ತೂ ಅಲ್ಲಿ ಯಾವುದೇ ಸಂಘರ್ಷವಾಗಿಲ್ಲ. "ನಾನು ಮಾತ್ರ ಸ್ವರ್ಗಕ್ಕೆ ಹೋಗುತ್ತೇನೆ" ಎಂದು ಅವರು ಯಾವತ್ತೂ ಹೇಳಲಿಲ್ಲ.

ದೂರಪ್ರಾಚ್ಯದಿಂದ ಮಧ್ಯಪ್ರಾಚ್ಯವು ಕಲಿಯಬಹುದಾದುದು ಇದನ್ನೇ. ಅವರು ಯಾಝಿದಿಗಳಿರಲಿ, ಕ್ರಿಶ್ಚಿಯನ್ನರಾಗಿರಲಿ, ಮುಸ್ಲಿಮರಾಗಿರಲಿ; ಶಿಯಾಗಳು ಅಥವಾ ಸುನ್ನಿಗಳು, ಅಹ್ಮೆದಿಯಾ ಅಥವಾ ಸೂಫಿಗಳಾಗಿರಲಿ, ಅವರೆಲ್ಲರೂ ಜೊತೆಯಲ್ಲಿರಲು ಸಾಧ್ಯವಿದೆ. ಮುಖ್ಯವಾದುದೇನೆಂದರೆ, ವಿವಿಧತೆಯನ್ನು ಗೌರವಿಸುವುದು.

ಪ್ರಶ್ನೆ: ಅಪಹೃತಗೊಂಡವರನ್ನು, ವಿಶೇಷವಾಗಿ ಸ್ತ್ರೀಯರು ಮತ್ತು ಮಕ್ಕಳನ್ನು ಕಾಪಾಡುವಂತೆ ನೀವು ಪ್ರಪಂಚದ, ವಿಶೇಷವಾಗಿ ಅರಬ್ ಮತ್ತು ಮಧ್ಯಪ್ರಾಚ್ಯ ರಾಷ್ಟ್ರಗಳ ಧಾರ್ಮಿಕ ಮುಖಂಡರ ಮೇಲೆ ಒತ್ತಡ ಹೇರುವಿರಾ? ಅಮೇರಿಕಾದ ಸರಕಾರವು ನಮಗೆ ಆಹಾರವನ್ನು ಕಳುಹಿಸುವಂತೆ ನಾವು ವಿನಂತಿಸಿದಾಗ, ಅವರು ನಮಗೆ ನೀಡಿದ ಉತ್ತರವೆಂದರೆ, ಅಪಹೃತಗೊಂಡವರನ್ನು ಕಾಪಾಡುವಂತೆ ಇರಾಕ್ ಮತ್ತು ಇತರ ನೆರೆ ರಾಷ್ಟ್ರಗಳ ಸರಕಾರಗಳಿಗೆ ಅವರು ಬರೆಯಬೇಕಾಗಿ ಬಂತು ಎಂಬುದಾಗಿ. 

ಶ್ರೀ ಶ್ರೀ ರವಿ ಶಂಕರ್: ಇದು ಸರಕಾರಗಳ ನಡುವಿನದು. ಅವರದ್ದು ಹಲವಾರು ನಿಯಮಗಳಿವೆ. ಒಂದು ಸರಕಾರೇತರ ಸಂಸ್ಥೆ (ಎನ್.ಜಿ.ಒ.) ಆಗಿ, ನಾವೇನು ಮಾಡಬಲ್ಲೆವೋ ಅದನ್ನು ನಾವು ಮಾಡಬಲ್ಲೆವು. ಸರಕಾರದ ವಿದೇಶ ನೀತಿಗಳೊಳಕ್ಕೆ ಹಸ್ತಕ್ಷೇಪ ಮಾಡಲು ನಮಗೆ ಸಾಧ್ಯವಿಲ್ಲವೆಂದು ನನಗನಿಸುತ್ತದೆ. ಒಂದು ಸರಕಾರವು ಇನ್ನೊಂದರ ವಿರುದ್ಧ ನಿಲ್ಲುವಂತೆ ಮಾಡಲು ನಮಗೆ ಸಾಧ್ಯವಿಲ್ಲ; ಅದು ಸ್ನೇಹಪರತೆಯ ವಿರುದ್ಧವಾಗಿ ಕಾಣಿಸಿಕೊಳ್ಳುವಂತೆ ಮಾಡುತ್ತದೆ. ನಾನು ನಿಮಗೆ ಸಲಹೆ ನೀಡುವುದೇನೆಂದರೆ, ಬೇರೆ ಬೇರೆ ಸರಕಾರಗಳಿಗೆ ಪತ್ರ ಬರೆಯಿರಿ ಮತ್ತು ತುರ್ತು ಸಹಾಯ ಬೇಕಾಗಿರುವ ಸಮುದಾಯಗಳ ಮೇಲೆ ಹಾಗೂ ನಾವು ಆ ಸರಕಾರಗಳಿಂದ ನೇರವಾದ ಸಹಾಯವನ್ನು ಪಡೆಯಲು ಬಯಸುವೆವು ಎನ್ನುವುದರ ಮೇಲೆ ಅವರ ಗಮನ ತನ್ನಿರಿ.

ಪ್ರಶ್ನೆ: ಭಾರತದಲ್ಲಿ, ಒಂದು ಬಹಳ ಪ್ರಸಿದ್ಧವಾದ ನದಿಯಿದೆ. ಅದು ಕೀಟಾಣುಗಳಿಂದ ಕಲುಷಿತವಾಗಿದೆ ಮತ್ತು ಅಲ್ಲಿನ ಗುರುಗಳು ಹೇಳುವುದೇನೆಂದರೆ, ನೀವು ಹಿಂದೂ ಅಥವಾ ಬೌದ್ಧ ಧರ್ಮದಲ್ಲಿ ಆಸಕ್ತಿ ಹೊಂದಿರುವುದಾದರೆ, ಆಗ ಶಾಸ್ತ್ರಗಳ ಒಂದು ಭಾಗವಾಗಿ ನೀವು ಹೋಗಿ ಆ ಕೊಳಕು ನದಿಯಲ್ಲಿ ಸ್ನಾನ ಮಾಡಬೇಕೆಂದು. ಇದರ ಹಿಂದೆ ನಿಜಕ್ಕೂ ಏನಿದೆಯೆಂದು ನೀವು ನಮಗೆ ಹೇಳಬಲ್ಲಿರೇ?

ಶ್ರೀ ಶ್ರೀ ರವಿ ಶಂಕರ್: ಒಂದಾನೊಂದು ಕಾಲದಲ್ಲಿ ಗಂಗಾ ನದಿಯು ಬಹಳ ಶುದ್ಧವಾದ ನೀರನ್ನು ಹೊಂದಿತ್ತು, ಮತ್ತು ಬಹಳ ಪವಿತ್ರವೆಂದು ಪರಿಗಣಿಸಲಾಗುವ ಆ ಇಡೀ ನದಿಯನ್ನು ಶುಚಿಗೊಳಿಸುವ ಕೆಲಸವನ್ನು ಇವತ್ತು ನಮ್ಮ ಪ್ರಧಾನ ಮಂತ್ರಿಯವರು ಕೈಗೆತ್ತಿಕೊಂಡಿದ್ದಾರೆ. ಭಾರತದಲ್ಲಿ ನಾವು ನದಿಗಳನ್ನು, ಮರಗಳನ್ನು ಮತ್ತು ಪ್ರಾಣಿಗಳನ್ನು ಗೌರವಿಸುತ್ತೇವೆ. ಸಂಪೂರ್ಣ ಸೃಷ್ಟಿಯನ್ನು ಗೌರವಿಸುವುದು ಪ್ರಕೃತಿಯ ಒಂದು ಭಾಗವಾಗಿದೆ. ನೀರಿನಲ್ಲಿ ಒಂದು ಮುಳುಗು ಹಾಕಿ ಏಳಬೇಕೆಂದು ಅಥವಾ ಯೋಗ ಮತ್ತು ಧ್ಯಾನ ಮಾಡಲು ಒಬ್ಬರಿಗೆ ಅದೊಂದು ಪೂರ್ವಾಪೇಕ್ಷಿತವಾದುದು ಎಂದು ಯಾವುದೇ ಗ್ರಂಥದಲ್ಲೂ ಎಲ್ಲೂ ಹೇಳಿಲ್ಲ. ಇವುಗಳೆಲ್ಲವೂ ರೀತಿ-ರಿವಾಜುಗಳು. ನಾನು ಹೇಳಿದಂತೆ, ರೀತಿ-ರಿವಾಜುಗಳು ಮತ್ತು ಅಭ್ಯಾಸಗಳು ಬೇರೆ. ಕಾಲಾಂತರದಲ್ಲಿ ಜನರು ರೀತಿ-ರಿವಾಜುಗಳನ್ನು ಬೆಳೆಸಿಕೊಳ್ಳುತ್ತಾರೆ, ಆದರೆ ಮುಖ್ಯವಾದ ಸಂಗತಿಯೆಂದರೆ ಮೌಲ್ಯಗಳನ್ನು ಗೌರವಿಸುವುದು. ಮೌಲ್ಯಗಳು ಜ್ಞಾನವಾಗಿದೆ.

ಕವಿತೆಗಳಲ್ಲಿ ಎಂದಿನಿಂದಲೂ ಹೀಗೆಂದು ಹೇಳಲಾಗಿದೆ, "ಜ್ಞಾನವು ಒಂದು ನದಿಯಂತೆ. ಜ್ಞಾನವನ್ನು ನೀವು ಕ್ರೋಢೀಕರಿಸಿದರೆ ನೀವು ಸಂತೋಷವಾಗಿರುವಿರಿ, ನೀವು ಮುಕ್ತರಾಗುವಿರಿ", ಇದು ನಿಜವಾದ ಸಂದೇಶವಾಗಿದೆ. ಕಲುಷಿತವಾಗಿದೆಯೆಂದು ನೀನು ಹೇಳಿದ ಗಂಗಾ ನದಿಯ ಅರ್ಥ ಕೂಡಾ ಜ್ಞಾನವೆಂದು.

ಒಂದು ಉಪಮೆಯಾಗಿ ಹೀಗೆ ಹೇಳಲಾಗಿದೆ, "ನೀವು ಜ್ಞಾನದಲ್ಲಿ ಸ್ನಾನ ಮಾಡಿದರೆ, ಆಗ ನೀವು ಮುಕ್ತರಾಗುವಿರಿ (ಇಲ್ಲಿ ಮೋಕ್ಷ ಹೊಂದುವುದೆಂಬ ಅರ್ಥ)". ಆದರೆ ಜನರು ಅಕ್ಷರಶಃ ಅದನ್ನು,  ಅವರು ನದಿಯಲ್ಲಿ ಮಿಂದರೆ ಮಾತ್ರ ಅವರು ಮೋಕ್ಷ ಹೊಂದುತ್ತಾರೆ ಎಂಬುದಾಗಿ ತೆಗೆದುಕೊಳ್ಳುತ್ತಾರೆ. ಇದು ಪ್ರಾಸಂಗಿಕ ಅಥವಾ ಆಕಸ್ಮಿಕ, ಆದರೆ ಮೌಲ್ಯಗಳನ್ನು ಜೀವಿಸುವುದು ಸಾರವಾಗಿದೆ.

ಪ್ರಶ್ನೆ: ಯೋಗ ಎಂದರೇನು? ಶಾಂತಿಯನ್ನು ತರುವಲ್ಲಿ ಅದು ಹೇಗೆ ಸಹಾಯಕವಾಗಬಲ್ಲದು?

ಶ್ರೀ ಶ್ರೀ ರವಿ ಶಂಕರ್: ಯೋಗವೆಂದರೆ ಶರೀರ, ಮನಸ್ಸು ಮತ್ತು ಆತ್ಮವನ್ನು ಒಂದುಗೂಡಿಸುವ ಒಂದು ತಂತ್ರವಾಗಿದೆ. ಯೋಗವು ನಿಮ್ಮನ್ನು ಒತ್ತಡ ಹಾಗೂ ಬಿಗಿತಗಳಿಂದ ಬಿಡುಗಡೆಗೊಳಿಸುತ್ತದೆ. ಬಲಹೀನತೆ, ಕೋಪ, ಮಾತ್ಸರ್ಯ ಮತ್ತು ಎಲ್ಲಾ ನಕಾರಾತ್ಮಕ ಭಾವನೆಗಳನ್ನುಂಟು ಮಾಡುವುದು ಒತ್ತಡವಾಗಿದೆ. ಉಸಿರಾಟದ ತಂತ್ರಗಳು, ಧ್ಯಾನ ಮತ್ತು ಕೆಲವು ಸರಳವಾದ ವ್ಯಾಯಾಮಗಳನ್ನುಪಯೋಗಿಸಿ ನೀವು ಒತ್ತಡವನ್ನು ನಿವಾರಿಸಿಕೊಂಡಾಗ, ಅದು ನಿಮ್ಮ ಶರೀರ ಹಾಗೂ ಮನಸ್ಸುಗಳಿಗೆ ಸಹಕಾರಿಯಾಗುತ್ತದೆ ಮತ್ತು ಒಳಗಿನಿಂದ ಆರೋಗ್ಯ ಹಾಗೂ ಸಂತೋಷದ ಒಂದು ಭಾವನೆಯನ್ನು ಸೃಷ್ಟಿಸುತ್ತದೆ. ನೀವು ಚೆನ್ನಾಗಿಯೂ ಸಂತೋಷವಾಗಿಯೂ ಇದ್ದರೆ ನೀವು ಹಿಂಸಾಚಾರಿಗಳಾಗಿರುವುದಿಲ್ಲ. ಒಬ್ಬರು ಹಿಂಸಾತ್ಮಕ ಚಟುವಟಿಕೆಯಲ್ಲಿ ತೊಡಗಿಕೊಂಡಾಗ, ಹಿಂಸೆಯ ಹಿಂದೆ ಕೋಪ ಮತ್ತು ಹತಾಶೆಗಳಿವೆ ಎಂಬುದನ್ನು ತಿಳಿಯಿರಿ.

ಮಕ್ಕಳಾಗಿ ನಾವೆಲ್ಲರೂ ಯೋಗ ಮಾಡಿದ್ದೇವೆ. ಒಂದು ಮಗುವು ಹುಟ್ಟಿದಂದಿನಿಂದ ಅದಕ್ಕೆ ಮೂರು ವರ್ಷ ವಯಸ್ಸಾಗುವಲ್ಲಿಯವರೆಗೆ ನೀವು ಆ ಮಗುವನ್ನು ನೋಡಿದರೆ, ಅದು ಎಲ್ಲಾ ಯೋಗ ವ್ಯಾಯಾಮಗಳನ್ನು ಮಾಡಿರುತ್ತದೆ. ಒಂದು ಮಗುವು ಉಸಿರಾಡುವ ರೀತಿಯು, ಒಬ್ಬ ವಯಸ್ಕನು ಉಸಿರಾಡುವ ರೀತಿಗಿಂತ ಭಿನ್ನವಾಗಿದೆ. ಶರೀರ ಮತ್ತು ಭಾವನೆಗಳ ನಡುವಿನ ಕೊಂಡಿಯು ಉಸಿರಾಟವಾಗಿದೆ ಹಾಗೂ ಉಸಿರಾಟದ ಬಗ್ಗೆ ಗಮನ ಹರಿಸುವುದರ ಮೂಲಕ ನಿಮಗೆ ಭಾವನೆಗಳನ್ನು ಮೃದುವಾಗಿಸಲು ಹಾಗೂ ನಕಾರಾತ್ಮಕ ಭಾವನೆಗಳನ್ನು ನಿವಾರಿಸಲು ಸಾಧ್ಯವಾಗುತ್ತದೆ.