ಶುಕ್ರವಾರ, ಮಾರ್ಚ್ 16, 2012

ಅನ್ನದಾತ ಸುಖೀ ಭವಃ


16
2012............................... ಆಜಮ್‌ಗಢ, ಉತ್ತರ ಪ್ರದೇಶ, ಭಾರತ
Mar


ಇಂದು ಆಜಮ್‌ಗಢ್‍ಗೆ ಬಂದು ನಿಮ್ಮೆಲ್ಲರೊಂದಿಗಿರುವ ಅವಕಾಶ ನಮಗೆ ಒದಗಿದೆ. ತುಂಬಾ ಸಂತೋಷವಾಗಿದೆ!
ನಮ್ಮ ಸಂದೇಶ ಎಲ್ಲರಿಗೂ ತಿಳಿದಿದೆಯೇ ಎಂದು ಖಚಿತಪಡಿಸಿಕೊಳ್ಳುವುದು ಮತ್ತು ಯಾರ ಅರಿವಿಗೆ ಬಂದಿಲ್ಲವೋ ಅವರಿಗೆ ತಿಳಿಸುವುದು ನಮ್ಮ ಜವಾಬ್ದಾರಿಯಾಗಿದೆ.
ಸಮಾಜವು ಕ್ಷೀಣಿಸಿರುವುದು ದುರ್ಜನರಿಂದಲ್ಲ, ಸಜ್ಜನರು ಸುಮ್ಮನೆ ಕುಳಿತಿರುವುದರಿಂದ. ಹೃದಯಪೂರ್ವಕವಾಗಿ ಪರಸ್ಪರ ಕಾಳಜಿಯಿದ್ದರೆ, ನಾವು ಎಚ್ಚೆತ್ತುಕೊಳ್ಳಬೇಕಾಗಿದೆ.
ನಾಲ್ಕು ’ಅ’ಗಳ ಬಗ್ಗೆ ನಾವು ಮಾತನಾಡುತ್ತಿರುತ್ತೇವೆ – ಅಜ್ಞಾನ, ಅನ್ಯಾಯ, ಅಭಾವ ಮತ್ತು ಅಶುಚಿ. ಈ ನಾಲ್ಕು ವಿಷಯಗಳ ಬಗ್ಗೆ ನಾವು ಕೇಂದ್ರೀಕರಿಸಬೇಕಾಗಿದೆ:
ಮೊದಲನೆಯದಾಗಿ, ಅಜ್ಞಾನವನ್ನು ನಾಶಗೊಳಿಸಬೇಕಾಗಿದೆ. ಉತ್ತರ ಪ್ರದೇಶದಲ್ಲಿ ಶೇ.೧೦೦% ರಷ್ಟು ಸಾಕ್ಷರತೆಯ ಅವಶ್ಯಕತೆಯಿದೆ. ಪ್ರತಿಯೊಂದು ಮಗುವೂ ಶಾಲೆಗೆ ಹೋಗಿ ಒಳ್ಳೆಯ ಶಿಕ್ಷಣವನ್ನು ಪಡೆಯಬೇಕು, ಇದು ಬಹಳ ಮುಖ್ಯವಾದುದು.
ನಂತರ, ಅನ್ಯಾಯದ ವಿರುದ್ಧ ನಿಲ್ಲಬೇಕಾಗಿದೆ. ಜಾತಿ ಮತ್ತು ಧರ್ಮವನ್ನು ಆಶ್ರಯಿಸಿ ಅನ್ಯಾಯ ನಡೆದಾಗ ಅದರ ವಿರುದ್ಧ ನಿಲ್ಲಬೇಕಾಗಿದೆ. ಯಾರಾದರೂ ಶೋಷಣೆಗೆ ಒಳಗಾದರೆ, ಅವರ ಪರವಾಗಿ ನಿಲ್ಲುವುದು ಅವಶ್ಯಕ. ನಾವೆಲ್ಲರೂ ಅನ್ಯಾಯ ಮತ್ತು ಭ್ರಷ್ಟಾಚಾರವನ್ನು ವಿರೋಧಿಸುವುದು ಆವಶ್ಯಕವಾಗಿದೆ. ಇಲ್ಲಿ ಎಷ್ಟು ಜನರಿಗೆ ಭ್ರಷ್ಟಾಚಾರದಿಂದ ಬೇಸರವಾಗಿದೆ?
ಭ್ರಷ್ಟಾಚಾರದಿಂದ ಬೇಸರವಾಗಿದ್ದಾಗ, ನಾವು ಹೇಳುತ್ತೇವೆ, ‘ಸರಿ, ನಾವು ಸೋಲೋಣ. ನಾವೇನು ಮಾಡಲು ಸಾಧ್ಯ? ಬೇರೆ ದಾರಿಯಿಲ್ಲ. ಲಂಚಕೊಡದೇ ಕೆಲಸವಾಗದಿದ್ದರೆ, ಆಗ ಲಂಚ ಕೊಡಲೇಬೇಕಾಗುತ್ತದೆ .’ ಹೀಗೆ ಜನರು ಆಲೋಚಿಸುವುದು.
ಒಬ್ಬರೇ ಭ್ರಷ್ಟಾಚಾರದ ವಿರುದ್ಧ ಹೋರಾಡಲು ಸಾಧ್ಯವಿಲ್ಲವೆಂದು ನಮಗೆ ತಿಳಿದಿದೆ. ಒಬ್ಬನೇ ಒಬ್ಬ ವ್ಯಕ್ತಿ ಹೋರಾಡಲು ನಿಂತರೆ ಅನೇಕ ತೊಂದರೆಗಳನ್ನು ಅನುಭವಿಸಬೇಕಾಗಬಹುದು. ಅದು ಸಾಧ್ಯವಾಗದೇ ಇರಬಹುದು. ಆದರೆ ನಾವು ಮೂವತ್ತರಿಂದ ಐವತ್ತು ಜನರ ಗುಂಪಿನೊಂದಿಗೆ ಹೋರಾಟಕ್ಕೆ ನಿಂತರೆ, ಖಂಡಿತವಾಗಿಯೂ ಇದನ್ನು ನಿಯಂತ್ರಿಸಬಹುದು.
ಎಲ್ಲಿ ಸ್ವಂತಿಕೆಯ ಅಂತ್ಯವಾಗುವುದೋ ಅಲ್ಲಿಂದ ಭ್ರಷ್ಟಾಚಾರ ಪ್ರಾರಂಭವಾಗುವುದು. ಯಾವಾಗ ಬೇರೊಬ್ಬರು ಅಪರಿಚಿತರೆಂಬ ಭಾವನೆ ಬರುವುದೋ ಆಗಲೇ ಲಂಚಕೋರತನ, ಶೋಷಣೆ, ಅನ್ಯಾಯ ಇತ್ಯಾದಿ ಉಂಟಾಗುವುದು.
ಕೇವಲ ಕಾನೂನು ಮತ್ತು ಶಾಸನಗಳಿಂದ ಈ ಸಮಸ್ಯೆಯು ಬಗೆಹರಿಯುವುದಿಲ್ಲ. ಇದು ಜನರಲ್ಲಿ ಆಧ್ಯಾತ್ಮಿಕ ಪರಿವರ್ತನೆ ಮತ್ತು ಅವರಲ್ಲಿ ಸ್ವಂತಿಕೆಯ ಭಾವದಿಂದ ಮಾತ್ರ ಸಾಧ್ಯ. ಎಲ್ಲರನ್ನೂ ನಿಮ್ಮವರೆಂದೇ ಭಾವಿಸಿ. ಆಗ ಸಮಾಜದಿಂದ ಭ್ರಷ್ಟಾಚಾರ ನಿರ್ಮೂಲನೆಗೊಳ್ಳುವುದು.
ಈ ದೇಶದ ಜನರು ಭ್ರಷ್ಟಾಚಾರದ ವಿರುದ್ಧ ನಿಂತು, ’ಇಲ್ಲ, ನಾನು ಲಂಚಕೊಡುವುದಿಲ್ಲ ಅಥವಾ ತೆಗೆದುಕೊಳ್ಳುವುದಿಲ್ಲ’ ಎಂದಾಗಲೇ ಇದು ಸಾಧ್ಯವಾಗುವುದು.
ಆಧ್ಯಾತ್ಮದ ಅಲೆಯೊಂದು ದೇಶವನ್ನು ವ್ಯಾಪಿಸಿದಾಗ ಭ್ರಷ್ಟಾಚಾರವು ಕೊನೆಗೊಳ್ಳುವುದು. ಹಾಗಾದರೆ ಆಧ್ಯಾತ್ಮವೆಂದರೇನು? ಯಾವುದು ಸಮಾಜದಲ್ಲಿ ಪ್ರತಿಯೊಬ್ಬರಿಗೂ ತೃಪ್ತಿ, ಬಲ, ಶಾಂತಿ ತಂದುಕೊಡುವುದೋ ಮತ್ತು ಜನರಲ್ಲಿ ಸ್ವಂತಿಕೆಯ ಭಾವ ತರುವುದೋ ಅದೇ ಆಧ್ಯಾತ್ಮ.
ಯಾವುದು ಸ್ವಂತಿಕೆಯ ಭಾವವನ್ನು ವೃದ್ಧಿಸುವುದೋ, ಅದನ್ನೇ ಆಧ್ಯಾತ್ಮವೆನ್ನುವರು.
ಈಗ ಹೇಳಿ, ಯಾರೊಡನೆಯಾದರೂ ಸ್ವಂತಿಕೆಯ ಭಾವ ಹೊಂದಲು ಎಷ್ಟು ಸಮಯ ಬೇಕಾಗುವುದು? ಹೆಚ್ಚೇನು ಬೇಕಾಗಿಲ್ಲ.
ನೀವು ಯಾರನ್ನೋ ಭೇಟಿಯಾಗಿ, ಅವರನ್ನು ಮದುವೆಯಾದಾಗ ಅವರು ನಿಮ್ಮ ಕುಟುಂಬದ ಭಾಗವಾಗುವರು.
ನಿಮಗೆ ತಿಳಿಯದ ಮತ್ತೊಂದು ಕುಟುಂಬದ ಹುಡುಗನೊಬ್ಬ ಕೇವಲ ಒಂದು ಲಗ್ನಪತ್ರಿಕೆಯಿಂದ ನಿಮ್ಮ ಅಳಿಯನಾಗುವನು. ನಂತರ ಅವನ ಬಂಧುಗಳನ್ನೂ ನಮ್ಮವರೆಂದು ಭಾವಿಸುವೆವು. ಹಿಂದೆಂದೂ ಅವರನ್ನೂ ಭೇಟಿಯಾಗದೇ ಇರಬಹುದು. ಕೆಲವರು ಮುಂಬೈ, ಕೆಲವರು ಅಮೇರಿಕಾ ಮತ್ತು ಕೆಲವರು ಪ್ರಪಂಚದ ಇತರೆ ಭಾಗಗಳಿಂದ ಬಂದಿರಬಹುದು, ಆದರೂ ಅವರೊಂದಿಗೆ ಸಂಬಂಧವನ್ನು ಕಲ್ಪಿಸುತ್ತೇವೆ. ’ಇವರು ನಮ್ಮ ಮೈದುನನ ಅಕ್ಕನ / ತಂಗಿಯ ಮಗ’ ಎಂದು ಹೇಳುತ್ತೇವೆ.
ಅವರನ್ನು ಭೇಟಿ ಮಾಡುತ್ತೇವೆ, ಅವರೊಂದಿಗಿರುವ ನಮ್ಮ ಸಂಬಂಧವನ್ನು ತಿಳೀಯುತ್ತೇವೆ ಮತ್ತು ಅವರನ್ನು ಒಪ್ಪಿಕೊಳ್ಳುತ್ತೇವೆ. ಈಗ ಹೇಳಿ, ನಮ್ಮ ದೇಶದವರನ್ನು ಮತ್ತು ನಮ್ಮ ನೆರೆಹೊರೆಯವರನ್ನು ನಮ್ಮವರೆಂದು ಒಪ್ಪಿಕೊಳ್ಳಲು ನಾವೇಕೆ ಹಿಂಜರಿಯುತ್ತೇವೆ? ಇದೇ ಅಜ್ಞಾನ.
ವಿದೇಶದಲ್ಲಿ ಭಾರತೀಯನೊಬ್ಬನು ಇನ್ನೊಬ್ಬ ಭಾರತೀಯನನ್ನು ಕಂಡಾಗ ಉಭಯಕುಶಲೋಪರಿಯನ್ನು ವಿನಿಮಯ ಮಾಡಿಕೊಳ್ಳುವರು. ಆದರೆ ಮೂವತ್ತು ವರ್ಷಗಳ ಹಿಂದೆ ಹೀಗಿರಲಿಲ್ಲ. ಆಗಿನ ದಿನಗಳಲ್ಲಿ ವಿದೇಶದಲ್ಲಿ ಭಾರತೀಯನೊಬ್ಬನು ಇನ್ನೊಬ್ಬ ಭಾರತೀಯನನ್ನು ಕಂಡರೆ ಮುಖಾಮುಖಿಯಾಗಿಯೂ ನೋಡುತ್ತಿರಲಿಲ್ಲ. ಏಕೆ?  ಏಕೆಂದರೆ ಅವರು ಎಲ್ಲಿ ನಮ್ಮಿಂದ ಸಹಾಯ ಕೇಳುವರೋ ಎಂಬ ಭಯ. ಅನೇಕ ಜನರು ಇದನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. ಇದು ಅವರ ಅನುಭವವಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ವಾತಾವರಣ ಬದಲಾಗಿದೆ. ಅವರಿಗೆ ಭಾರತೀಯನೆಂದು ಹೇಳಿಕೊಳ್ಳಲು ಹೆಮ್ಮೆಯೆನಿಸುತ್ತದೆ.
ವಿಮಾನ ನಿಲ್ದಾಣದಲ್ಲಿ ಐಟಿ (ಮಾಹಿತಿ ತಂತ್ರಜ್ಞಾನ) ಕ್ಷೇತ್ರದ ಅನೇಕ ಯುವಕರನ್ನು ನಾವು ಭೇಟಿ ಮಾಡುತ್ತಿರುತ್ತೇವೆ. ಅನೇಕರು ಹೇಳುತ್ತಾರೆ, ’ಗುರೂಜೀ, ನೀವು ಚಮತ್ಕಾರ ಮಾಡಿದ್ದೀರ!’ ನಾನು ಕೇಳಿದೆನು, ’ನಾನೇನು ಮಾಡಿರುವೆನು?’
ಅವರೆಂದರು, ’ಗುರೂಜೀ, ಮೊದಲು ವಿಮಾನ ನಿಲ್ದಾಣಕ್ಕೆ ನಾವು ಕುರ್ತಾ ಧರಿಸುತ್ತಿದ್ದರೆ, ಜನರು ನಮ್ಮನ್ನು ವಿಚಿತ್ರವಾಗಿ ನೋಡುತ್ತಿದ್ದರು. ಈಗ ಎಂದಾದರೂ ಧೋತಿ-ಕುರ್ತಾ ಅಥವಾ ಪೈಜಾಮ-ಕುರ್ತಾ ಧರಿಸಿದರೆ ಜನರು ನಮ್ಮನ್ನು ಗೌರವಿಸುವರು.’
ಭಾರತವು ಪ್ರಾಚೀನ ಜ್ಞಾನವನ್ನು ಹೊಂದಿರುವ ಕಾರಣ ಗೌರವವನ್ನು ಪಡೆದಿದೆ, ಇದನ್ನೇ ಜನರು ಹೇಳುವುದು, ಇದು ಸತ್ಯ ಕೂಡ. ಆದರೆ ಇಂದು ಭಾರತವು ಪ್ರಾಚೀನ ಜ್ಞಾನದಿಂದಷ್ಟೇ ಅಲ್ಲದೇ ಐಟಿ ಉದ್ಯಮದಿಂದಲೂ ಗೌರವವನ್ನು ಪಡೆದಿದೆ. ನಮ್ಮ ದೇಶ ನಾಶವಾಗುತ್ತಿದ್ದರೆ ಅದಕ್ಕೆ ಕಾರಣ ಕಪ್ಪು ಹಣ ಮತ್ತು ಲಂಚಕೋರತನದಿಂದ ಮಾತ್ರ. ಇವೆರಡು ಪಿಡುಗುಗಳನ್ನು ನಮ್ಮ ದೇಶದಿಂದ ನಿರ್ಮೂಲನೆಗೊಳಿಸುವುದು ನಮ್ಮ ಕರ್ತವ್ಯವಾಗಿದೆ. ನಿಮಗೇನೆನಿಸುತ್ತದೆ?
ಜನರು ಹೇಳುತ್ತಾರೆ, ‘ಗುರೂಜೀ, ಆಧ್ಯಾತ್ಮದ ಪಥದಲ್ಲಿ ಕೇವಲ ಧ್ಯಾನವೊಂದನ್ನೇ ಕಲಿಸುವುದು ನಿಮ್ಮ ಕೆಲಸ. ಭ್ರಷ್ಟಾಚಾರದ ಬಗ್ಗೆ ಏಕೆ ಮಾತನಾಡುತ್ತೀರಿ?  ಈ ವಿಷಯಗಳಿಗೆಲ್ಲ ಏಕೆ ತಲೆ ಹಾಕುತ್ತೀರ?’ ನಾವೆಂದೆವು, ‘ಇತರರ ನೋವು ನಮ್ಮ ಹೃದಯವನ್ನು ನೋಯಿಸದಿದ್ದರೆ, ಜನರ ಬಗ್ಗೆ ಕಾಳಜಿಯಿರದಿದ್ದರೆ, ಅವರ ಬಳಿಗೆ ಹೋಗದಿದ್ದರೆ, ನಾವು ಆಧ್ಯಾತ್ಮದಲ್ಲಿದ್ದೂ ಏನು ಪ್ರಯೋಜನ? ಇಲ್ಲ, ನಾವು ಅಂತಹ ವ್ಯಕ್ತಿಯಲ್ಲ.
ನೀವೇನೆನ್ನುತ್ತೀರಿ, ನಾವು ಇದರ ಬಗ್ಗೆ ಮಾತನಾಡಬಾರದೇ?
ನಾನು ಹೇಳಿದೆ, ‘ನನ್ನ ಅಂತರಾತ್ಮ ಏನು ಹೇಳುತ್ತದೋ ಅದನ್ನೇ ಮಾಡುವೆ, ಜನರೇನು ಹೇಳಿದರೂ ಪರವಾಗಿಲ್ಲ.’
ಭ್ರಷ್ಟಾಚಾರದ ವಿರುದ್ಧ ನಿಲ್ಲಬೇಕು. ನಾವು ಲಂಚಕೊಡುವುದಿಲ್ಲ ಮತ್ತು ತೆಗೆದುಕೊಳ್ಳುವುದಿಲ್ಲವೆಂದು ಸಂಕಲ್ಪ ತೆಗೆದುಕೊಳ್ಳಬೇಕು. ಭಾರತವನ್ನು ಉನ್ನತಕೇರಿಸಬೇಕು; ಇದು ನಮ್ಮ ಕನಸು!
ಈ ದೇಶದ ಪ್ರತಿಯೊಬ್ಬ ಪ್ರಜೆಯ ಮುಖದ ಮೇಲೂ ಒಂದು ಮುಗುಳ್ನಗೆಯಿರಬೇಕು ಮತ್ತು ಅವರ ಕಂಬನಿಗಳೆಲ್ಲಾ ನಗುವಾಗಿ ಪರಿವರ್ತಿತವಾಗಬೇಕು. ಜನರೇನೆಂದರೂ, ನನ್ನ ಕಡೆಯ ಉಸಿರಿರುವವರೆಗೂ  ಇದಕ್ಕಾಗಿ ನಾನು ಶ್ರಮಿಸುತ್ತೇನೆ.
ಇದಕ್ಕಾಗಿ ನಾವೆಲ್ಲರೂ ಒಂದಾಗಿ ಶ್ರಮಿಸುವುದು ಅವಶ್ಯಕ. ಹೇಗೆ? ಅನ್ಯಾಯದ ವಿರುದ್ಧ ಎಲ್ಲರೂ  ಎದ್ದು ನಿಲ್ಲಬೇಕು.
ಮೂರನೆಯದಾಗಿ ಅಭಾವವನ್ನು (ಬಡತನವನ್ನು) ನಿರ್ಮೂಲನೆ ಮಾಡಬೇಕು.
ಚೀನಾ ದೇಶವನ್ನು ನೋಡಿ, ಬಹಳ ಕಾಲ ಆರ್ಥಿಕವಾಗಿ ನಮಗಿಂತ ಹಿಂದೆ ಇದ್ದು, ಈಗ ನಮಗಿಂತ ಮುಂದೆ ಸಾಗಿದೆ. ಕಾರಣ ಅವರು ಶ್ರಮವಹಿಸಿ ಕೆಲಸ ಮಾಡುತ್ತಾರೆ ಮತ್ತು ಯಾವುದೇ ಕೆಲಸವಾದರೂ ಸರಿ ತಮ್ಮ ಶೇ.೧೦೦% ಅನ್ನು ಶ್ರದ್ದೆಯಿಂದ ನೀಡುತ್ತಾರೆ.
ಕೆಳೆದ ವರ್ಷ ಚೀನಾದಿಂದ ಇಬ್ಬರು ಸಜ್ಜನರು ನಮ್ಮ ಬೆಂಗಳೂರು ಆಶ್ರಮಕ್ಕೆ ಬಂದಿಳಿದು, ‘ಗುರೂಜೀ, ದಯವಿಟ್ಟು ನಮ್ಮ ದೇಶಕ್ಕೆ ಬರುವ ಕೃಪೆ ಮಾಡಿ’ ಎಂದು ನಮ್ಮನ್ನು ಆಹ್ವಾನಿಸಿದರು.
‘ಆಗಲಿ, ನೀವಿಷ್ಟೊಂದು ಕೇಳಿಕೊಳ್ಳುತ್ತಿರುವಾಗ ನಾನು ಬರುತ್ತೇನೆ’ ಎಂದು ನುಡಿದೆ. ಅದಕ್ಕಾಗಿ ನಾವು ಭೇಟಿ ನೀಡುವ ದಿನ ಗೊತ್ತು ಮಾಡಿದೆವು.
ಮೂರು ತಿಂಗಳ ನಂತರ ಚೀನಾ ತಲುಪಿದ ಬಳಿಕ ಅಲ್ಲಿ ನೋಡಿದಾಗ ನಮಗೆ ಆಶ್ಚರ್ಯವಾಯಿತು, ಆ ಮೂರು ತಿಂಗಳೊಳಗಾಗಿ ಅಲ್ಲಿ ಆಶ್ರಮವೊಂದನ್ನು ನಿರ್ಮಿಸಿದ್ದರು!
ಇನ್ನೂರು ಎಕರೆ ಭೂಮಿಯಲ್ಲಿ ಒಂದು ಬೃಹತ್ ಆಶ್ರಮವನ್ನು ಕಟ್ಟಿದ್ದರು. ನಾನೂರು ಕೊಠಡಿಗಳನ್ನು ಕಟ್ಟಿದ್ದು, ಅನೇಖ ಮರಗಳನ್ನು ನೆಟ್ಟಿದ್ದರು. ಅದನ್ನು ನೋಡಿ ಅಚ್ಚರಿಯಾಯಿತು.
ನಮ್ಮ ದೇಶದಲ್ಲಿ, ಮೂರು ತಿಂಗಳಲ್ಲಿ, ಕಟ್ಟಡ ಬಿಡಿ, ಭೂಮಿಯ ಒಂದು ಸಣ್ಣ ನೋಂದಣಿ ಕೂಡ ಸಾಧ್ಯವಾಗುವುದಿಲ್ಲ.
ಮೂರು ತಿಂಗಳಲ್ಲಿ ಅವರು ಮಾಡಿದ ಕೆಲಸವನ್ನು ನೀವು ನಂಬಲು ಸಾಧ್ಯವಿಲ್ಲ. ಆಶ್ರಮವು ಬೀಜಿಂಗ್ ನಗರದ ಮತ್ತು ವಿಮಾನ ನಿಲ್ದಾಣದ ನಡುವೆ ಇದೆ. ಆದ್ದರಿಂದ ಅದು ವಿಮಾನ ನಿಲ್ದಾಣದಿಂದ ಹಾಗೂ ನಗರದಿಂದ ನಲವತ್ತೈದು ನಿಮಿಷಗಳ ಪ್ರಯಾಣವಾಗಿದೆ.
ಆಶ್ರಮದಲ್ಲಿ ಒಂದು ಚಿಕ್ಕ ತೊರೆಯನ್ನು ನಿರ್ಮಿಸಿ, ಅದರ ಇಕ್ಕೆಲಗಳಲ್ಲಿ ಒಂದು ಚಿಕ್ಕ ಸೇತುವೆಯನ್ನು ನಿರ್ಮಿಸಿದ್ದಾರೆ. ಇದನ್ನು ಮೂರು ದಿವಸಗಳಲ್ಲಿ ಕಟ್ಟಿದ್ದು, ನಾವು ಬಂದಾಗ, ‘ಗುರೂಜೀ, ಇದನ್ನು ನಿಮಗಾಗಿ ನಿರ್ಮಿಸಿರುವೆವು’ ಎಂದರು.
ನಿಮಗೆ ಶ್ರಮವಹಿಸಿ ದುಡಿಯುವುದನ್ನು ಕಲಿಯಲು ಆಸಕ್ತಿಯಿದ್ದರೆ, ಅದನ್ನು ಚೀನಿಗಳಿಂದ ಕಲಿಯಬೇಕು, ಅವರು ಅತ್ಯಂತ ಸಮರ್ಥರು.
ನಮ್ಮ ದೇಶದ ಎಲ್ಲಾ ಮೂರ್ತಿಗಳು ಚೀನಾದಿಂದ ಬರುತ್ತವೆ. ಪ್ಲಾಸ್ಟಿಕ್‍ನಿಂದ ತಯಾರಾದ ರಾಧಾ-ಕೃಷ್ಣ ಮತ್ತು ಗಣೇಶನ ಮೂರ್ತಿಗಳೆಲ್ಲಾ ಇಲ್ಲಿಂದಲೇ ಬರುವುದು. ಇದನ್ನು ನಾವು ಇಲ್ಲೇ ತಯಾರಿಸಬಹುದಲ್ಲವೇ?
ಚೀನಾದಲ್ಲಿ ಪ್ರತಿಯೊಂದು ಹಳ್ಳಿಯೂ ಪ್ರತ್ಯೇಕ ಜವಾಬ್ದಾರಿಯನ್ನು ತೆಗೆದುಕೊಂಡಿದೆ. ಒಂದು ಇಡೀ ಹಳ್ಳಿ ಬಟನ್‍ಗಳನ್ನು ಮಾಡುವುದರಲ್ಲಿ ಮಗ್ನರಾಗಿರುತ್ತದೆ. ಯಾವುದೇ ಮನೆಯನ್ನು ಪ್ರವೇಶಿಸಿದರೂ, ಪ್ರತಿಯೊಂದು ಮನೆಯಲ್ಲೂ ಒಂದು ಯಂತ್ರವನ್ನು ಕಾಣಬಹುದು. ಪ್ರತಿಯೊಬ್ಬನೂ ಬಟನ್‍ಗಳನ್ನು ಮಾಡುವುದರಲ್ಲಿ ನಿರತನಾಗಿರುತ್ತಾನೆ. ಇನ್ನೊಂದು ಹಳ್ಳಿಗೆ ಹೋದರೆ ಅಲ್ಲಿನ ಜನರು ಕೇವಲ ಸೂಜಿಗಳನ್ನು ತಯಾರಿಸುತ್ತಾರೆ. ಅಲ್ಲಿ ನಿಮಗೆ ಎಲ್ಲಾ ಅಳತೆಯ ಸೂಜಿಗಳು ಸಿಗುವುದು.
ಇಲ್ಲೂ ಕೂಡ ಅದೇ ರೀತಿಯಿತ್ತು. – ಆಗ್ರಾದಲ್ಲಿನ ಪೇಠ (ಒಂದು ಬಗೆಯ ಸಿಹಿ ಪದಾರ್ಥ), ಮಥುರೆಯ ಪೇಡ (ಸಿಹಿ ಪದಾರ್ಥ),  ಬನಾರಸ್ಸಿನ ಸೀರೆ, ಮಿರ್ಜಾಪುರ್ ನ ಕಾರ್ಪೆಟ್ ಗಳು ಮತ್ತು ಆಜಮ್‍ಗಢ್‍ನ ಕಪ್ಪು ಮಡಿಕೆಗಳು. ಇವೆಲ್ಲವೂ ಹಿಂದೆ ಪ್ರಸಿದ್ಧಿ ಹೊಂದಿತ್ತು. ಪ್ರತಿಯೊಂದು ಸ್ಥಳವು ಅದರದೇ ಆದ ವೈಶಿಷ್ಟ್ಯವನ್ನು ಪಡೆದಿತ್ತು. ಅದನ್ನು ಪುನಃ ಸ್ಥಾಪಿಸಲು ದೇಶದ ಎಲ್ಲೆಡೆ ಪ್ರಚಾರ ಮಾಡಬೇಕು. ಆಜಮ್‍ಗಢ್‍ನ ಕಪ್ಪು ಮಡಿಕೆಗಳು ಪ್ರಸಿದ್ಧಿ ಹೊಂದಿರುವುದೆಂದೂ ಎಲ್ಲ ಕಡೆ ತಿಳಿಸಬೇಕು.
ಈ ಕ್ಷೇತ್ರದಲ್ಲಿ ನಾವು ಹಿಂದುಳಿದಿದ್ದು, ಈಗ ಅದನ್ನು ಉದ್ಧರಿಸಬೇಕು. ಪ್ರತಿಯೊಂದು ಕ್ಷೇತ್ರದಲ್ಲೂ ಒಂದು ಪದಾರ್ಥವನ್ನು ತೆಗೆದುಕೊಂಡು ಅದರ ವ್ಯಾಪಾರವನ್ನು ಹೆಚ್ಚಿಸಿದರೆ, ನಮ್ಮ ದೇಶದಿಂದ ಬಡತನವನ್ನು ತೊಲಗಿಸಬಹುದು.
ಇಲ್ಲಿರುವ ಎಲ್ಲಾ ನಿರುದ್ಯೋಗಿ ಯುವಕರಿಗೆ ನಾವು ಕೇಳಿಕೊಳ್ಳುವುದೇನೆಂದರೆ ಸತ್ಸಂಗ ಮುಗಿದ ಕೂಡಲೇ ಹೊರಹೋಗದೇ ಈ ಕೇಂದ್ರದಲ್ಲಿ ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಿ. ನಮ್ಮ ಮಾನವ ಸಂಪನ್ಮೂಲ ಇಲಾಖೆಯು ನಿಮಗೆ ತರಬೇತಿ ನೀಡುವುದು. ನೀವೆಲ್ಲರೂ ನೌಕರಿಯಲ್ಲಿರಬೇಕೆಂದು ನಮ್ಮ ಆಶೆ. ಇದು ನಮ್ಮ ಗುರಿ.
ನಮ್ಮ ದೇಶದಲ್ಲಿ ಕೆಲಸಗಳಿಗೇನೂ ಕೊರತೆಯಿಲ್ಲ. ಅನೇಕ ಉದ್ಯಮಿಗಳು ಚೀನಾದಲ್ಲಿ ಕಾರ್ಖಾನೆಗಳನ್ನು ಸ್ಥಾಪಿಸುತ್ತಿದ್ದಾರೆ. ಅವರನ್ನು ಕೇಳಿದೆವು, ‘ನಿಮ್ಮ ಕಾರ್ಖಾನೆಯನ್ನು ಇಲ್ಲೇ ಏಕೆ ಸ್ಥಾಪಿಸುವುದಿಲ್ಲ? ನಮ್ಮ ದೇಶದಲ್ಲಿ ಎಷ್ಟೊಂದು ಬಡತನವಿದೆ, ನೀವು ಚೀನಾಗೆ ಹೋಗಿ ಕಾರ್ಖಾನೆ ಸ್ಥಾಪಿಸುತ್ತಿದ್ದೀರಿ.’
ಅವರು ಹೇಳುತ್ತರೆ, ‘ಗುರೂಜೀ, ಅಲ್ಲಿ ನಮಗೆ ಜನ ಸಿಗುತ್ತಾರೆ’ ಎಂದು.
ಅದಕ್ಕೆ ನಾವು, ‘ಜನರನ್ನು ಕಳುಹಿಸುವುದು ನಮ್ಮ ಕೆಲಸ; ನಿಮ್ಮ ಕಾರ್ಖಾನೆಯನ್ನು ಇಲ್ಲೇ ನಿರ್ಮಿಸಿ’ ಎಂದೆವು.
ನಾವಿದನ್ನು ಹೇಳುತ್ತಲೇ ಇರುತ್ತೇವೆ. ಈ ದೇಶಕ್ಕೆ ನೌಕರಿಯಿಲ್ಲದ, ಅದರೆ ಕೆಲಸ ಮಾಡಲು ಆಸಕ್ತಿಯಿರುವ ಯುವಕರ ಆವಶ್ಯಕತೆಯಿದೆ. ಭಾರತದಲ್ಲಿ ಎಷ್ಟೊಂದು ಕೆಲಸಗಳನ್ನು ಮಾಡಬಹುದು ಮತ್ತು ಆರ್ಥಿಕ ಕ್ರಾಂತಿಯನ್ನು ತರಬಹುದು.
ನಮ್ಮ ದೇಶದಲ್ಲಿ ಆಧ್ಯಾತ್ಮವು ಉತ್ಕೃಷ್ಟದಲ್ಲಿದ್ದಾಗ, ಆರ್ಥಿಕ ಸ್ಥಿತಿಯೂ ಬಲವಾಗಿತ್ತು. ಆಧ್ಯಾತ್ಮದ ಪತನವಾದಂತೇ ದೇಶದ ಆರ್ಥಿಕ ಪರಿಸ್ಥಿತಿಯೂ ಕೆಟ್ಟು ಹೋಯಿತು. ಸುಮಾರು ಇನ್ನೂರು ಮುನ್ನೂರು ವರ್ಷಗಳ ಹಿಂದೆ, ಭಾರತದಲ್ಲಿ ಜಗತ್ತಿನ ಮೂರನೆಯ ಒಂದನೇ ಭಾಗದಷ್ಟು ಸಂಪತ್ತಿತ್ತು. ಆಗಿನ ಕಾಲದಲ್ಲಿ ಆಧ್ಯಾತ್ಮವು ಶಿಖರದಲ್ಲಿತ್ತು. ಆದ್ದರಿಂದ ದೇಶದ ಆಧ್ಯಾತ್ಮ ಮತ್ತು ಆರ್ಥಿಕ ಪರಿಸ್ಥಿತಿಯ ನಡುವೆ ಯಾವ ಸಂಬಂಧವಿದೆಯೆಂದು ಯೋಚಿಸಬೇಡಿ. ಎಲ್ಲಿ ನಾರಾಯಣನೋ ಅಲ್ಲಿ ಲಕ್ಷ್ಮಿಯೂ (ಐಶ್ವರ್ಯದ ಸಂಕೇತ) ಬರುವಳು!
ನಂತರ ಅಶುಚಿತ್ವವನ್ನು ತೊಡೆದುಹಾಕಬೇಕು. ಇದೂ ಕೂಡ ನಮ್ಮ ಕರ್ತವ್ಯ.
ಪ್ರಪಂಚದ ಅತ್ಯಂತ ಕೊಳಕು ದೇಶಗಳಲ್ಲಿ ಭಾರತವೂ ಒಂದು ಎಂದು ಹೇಳಲಾಗಿದೆ. ಭಾರತ ದೇಶದಲ್ಲಿ ಸದಾ ಕೊಳಕನ್ನು ಕಾಣಬಹುದು, ಜನರು ಕೊಳಕಿನಲ್ಲೇ ಬದುಕುತ್ತಾರೆ ಮತ್ತು ಸಾಯುತ್ತಾರೆ ಎಂದು ಹೇಳುತ್ತಾರೆ.
ನಮ್ಮ ರಸ್ತೆಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದಿಲ್ಲ; ನಮ್ಮ ಮನೆಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದಿಲ್ಲ. ಕೆಲವು ಮನೆಗಳಲ್ಲಿ ತಿಂಗಳುಗಳ ಕಾಲ ವಾಷ್‍ಬೇಸಿನ್‍ಗಳನ್ನು ತೊಳೆಯುವುದಿಲ್ಲ. ಅಂಕಿ-ಅಂಶಗಳ ಅನುಸಾರ ಹೀಗೆ ಹೇಳಲಾಗುತ್ತದೆ. ಇದನ್ನು ತಪ್ಪೆಂದು ನಾವು ಸಾಬೀತುಪಡಿಸಲು ಬಯಸುತ್ತೇವೆ. ಆದ್ದರಿಂದ ಇವೆರಡಕ್ಕೂ ನಾವು ಪ್ರಾಮುಖ್ಯತೆಯನ್ನು ನೀಡೋಣ, ಆಂತರ್ಯದ ಶುದ್ಧತೆ ಹಾಗೂ ಬಹಿರಂಗ ಸ್ವಚ್ಛತೆ. ನಮ್ಮ ಮನೆಗಳನ್ನು ಮತ್ತು ರಸ್ತೆಗಳನ್ನು ಸ್ವಚ್ಛವಾಗಿಟ್ಟುಕೊಳ್ಳೋಣ.
ಇವತ್ತು ಲಕ್ಷಾಂತರ ಜನರು ಇಲ್ಲಿ ಸೇರಿದ್ದಾರೆ. ನಿಮ್ಮೆಲ್ಲರಿಂದ ಗುರು ದಕ್ಷಿಣೆಯನ್ನು ಕೇಳಲು  ಬಯಸುತ್ತೇನೆ. ಒಬ್ಬ ಗುರು ಅಥವಾ ಸನ್ಯಾಸಿ ಒಂದು ನಗರಕ್ಕೆ ಬಂದಾಗ ಅವರಿಗೆ ಗುರು ದಕ್ಷಿಣೆಯನ್ನು ನೀಡಲಾಗುವುದು. ಇದು ನಮ್ಮ ಸಂಪ್ರದಾಯ.
ಇಲ್ಲಿ ನೆರೆದಿರುವ ನಿಮ್ಮೆಲ್ಲರಿಂದ ಎರಡು ವಸ್ತುಗಳನ್ನು ಗುರು ದಕ್ಷಿಣೆಯಾಗಿ ಕೇಳಲು ಇಚ್ಛಿಸುತ್ತೇನೆ. ಮೊದಲನೆಯ ದಕ್ಷಿಣೆಯಾಗಿ ನಿಮ್ಮಲ್ಲೇನಾದರೂ ಬೇರೊಬ್ಬರ ಮೇಲಿರುವ ದ್ವೇಷ ಅಥವಾ ನೇತಾತ್ಮಕ ಭಾವನೆಗಳನ್ನು ನಮಗೆ ಕೊಟ್ಟು ಬಿಡಿ. ಯಾರನ್ನಾದರೂ ನೀವು ದ್ವೇಷಿಸುತ್ತಿದ್ದರೆ, ಸಿಹಿ ಹಂಚುವ ಮೂಲಕ ನಿಮ್ಮ ಬಾಂಧವ್ಯವನ್ನು ಸುಧಾರಿಸಿಕೊಳ್ಳಿ. ಇದು ಮೊದಲನೆಯ ದಕ್ಷಿಣೆ.
ನಮಗೆ ಎರಡನೆಯ ದಕ್ಷಿಣೆಯಾಗಿ ಬೇಕಾಗಿದೆ. ಪೊರಕೆಯೊಂದಿಗೆ ಗುಂಪುಗಳಲ್ಲಿ ಬಂದು ಆಜಮ್‍ಗಢ್‍ಅನ್ನು ಸ್ವಚ್ಛಗೊಳಿಸಬೇಕೆಂದು ನಾವು ಆಶಿಸುತ್ತೇವೆ. ಪ್ರತಿಯೊಬ್ಬರೂ ಆಜಮ್‍ಗಢ್‍ನ ರಸ್ತೆಗಳನ್ನು ಸ್ವಚ್ಛಗೊಳಿಸಲು ಹೋದರೆ, ಈ ಸ್ಥಳವು ನಳನಳಿಸುವುದು.
ಇದು ನಮ್ಮ ಎರಡನೆಯ ದಕ್ಷಿಣೆ, ಇದನ್ನು ನಮಗೆ ಕೊಡುವಿರಾ?
ಸ್ವಚ್ಛತೆಗಾಗಿ, ಒಂದು ತಿಂಗಳಲ್ಲಿ ಎರಡು ಗಂಟೆಯ ಸಮಯ ತೆಗೆದುಕೊಂಡರೂ ಸಾಕು. ಪ್ರತಿ ತಿಂಗಳು ರಸ್ತೆಗಳನ್ನು ಗುಡಿಸಲು ಎರಡು ಗಂಟೆಗಳ ಸಮಯ ತೆಗೆದುಕೊಳ್ಳಿ.
ಆದ್ದರಿಂದ ಎಲ್ಲಾ ವಿದ್ಯಾವಂತರು ತಮ್ಮ ಇಡೀ ಕುಟುಂಬದೊಂದಿಗೆ ಪೊರಕೆಗಳೊಂದಿಗೆ ರಸ್ತೆಗಳಿಗೆ ಬಂದು ಸ್ವಚ್ಛಗೊಳಿಸಬೇಕು. ಪ್ಲಾಸ್ಟಿಕ್ ಚೀಲಗಳನ್ನು ಮತ್ತು ಕಸವನ್ನು ನಿರ್ಮೂಲನೆಗೊಳಿಸಿ. ಎಲ್ಲಾದರೂ ಚರಂಡಿ ಅಥವಾ ಪೈಪುಗಳು ಕಟ್ಟಿಕೊಂಡಿದ್ದರೆ ಎಂಜಿನಿಯರ್‍ಗಳು ಮಾಸ್ಕ್ ಹಾಕಿಕೊಂಡು ಸೂಕ್ತ ಸಲಕರಣೆಗಳಿಂದ ಕಟ್ಟಿಕೊಂಡಿರುವ ಕಸವನ್ನು ತೆಗೆದುಹಾಕಿ. ಇದರಲ್ಲಿ ಭಾಗವಹಿಸುವುದು ಅಗತ್ಯ, ಅಗ ಬಹಳ ಕೆಲಸಗಳನ್ನು ಮಾಡಬಹುದು.
ಇದರ ಬಗ್ಗೆ ನಿಮಗೊಂದು ಕಥೆಯನ್ನು ಹೇಳುತ್ತೇನೆ. ೧೯೭೭ ಅಥವಾ ೧೯೭೮ರ ಆಸುಪಾಸಿನಲ್ಲಿ ನಾವು ಸ್ವಿಟ್ಜರ್ ಲ್ಯಾಂಡಿಗೆ ಭೇಟಿ ನೀಡಿದ್ದೆವು. ಒಂದು ದಿನ ವಾಯುವಿಹಾರಕ್ಕೆ ಹೊರಟೆವು. ಅಲ್ಲಿ ಸುತ್ತಮುತ್ತಲೂ ಪ್ರಶಾಂತ ವಾತಾವರಣಾವಿದ್ದು, ಹಿಮಾಚ್ಛಾದಿತ ಪರ್ವತಗಳಿದ್ದವು, ರಸ್ತೆಯು ಖಾಲಿಯಾಗಿತ್ತು. ಯಾರೋ ಕೊಟ್ಟಿದ್ದ ಚಿಕ್ಕ ಚಾಕ್‍ಲೇಟ್ ನನ್ನ ಕೈಯಲ್ಲಿತ್ತು. ಚಾಕ್‍ಲೇಟ್ ಅನ್ನು ತಿಂದು ಆ ಚಾಕ್‍ಲೇಟ್ ಪೇಪರ್ ಅನ್ನು ಅಲ್ಲೇ ರಸ್ತೆಯಲ್ಲಿ ಎಸೆದೆ. ಸ್ವಲ್ಪ ಸಮಯದ ನಂತರ ದೂರದಿಂದ ಒಂದು ಧ್ವನಿ ಕೇಳಿಸಿತು. ವಾಕಿಂಗ್ ಸ್ಟಿಕ್‍ನೊಂದಿಗೆ ಒಬ್ಬ ಮಹಿಳೆ ನಿಲ್ಲುವಂತೆ ನನ್ನತ್ತ ಕೈ ಬೀಸುತ್ತಿದ್ದಳು. ಅವಳು ಸುಮಾರು ೭೦ ಇಲ್ಲವೇ ೮೦ರ ವಯಸ್ಸಿನವಳು. ಏನೋ ತೊಂದರೆಯಿರಬಹುದೆಂದು ತಿಳಿದು ನಿಂತೆನು ಮತ್ತು ತಿರುಗಿ ಅವಳ ಕಡೆಗೆ ನೋಡಿದೆನು. ನನ್ನ ಕಡೆಗೆ ನಡೆದು ಬರುವಾಗ ರಸ್ತೆಗೆ ಎಸೆದಿದ್ದ ಆ ಕಾಗದವನ್ನು ತೆಗೆದು ಹತ್ತಿರದಲ್ಲೇ ಇದ್ದ ಕಸದ ತೊಟ್ಟಿಗೆ ಹಾಕಲು ಹೇಳಿದಳು.
ಅಲ್ಲಿ ಯಾರೂ ಇರಲಿಲ್ಲ, ಪೋಲೀಸ್ ಕೂಡ ಇರಲಿಲ್ಲ. ಸುಮ್ಮನೆ ವಾಕಿಂಗ್‍ಗೆಂದು ಹೊರಟಿದ್ದೆನು. ಆ ವೃದ್ಧೆಗೆ ನನ್ನ ಭಾಷೆ ತಿಳಿದಿರಲಿಲ್ಲ, ಆದರೂ ಆ ಚಾಕ್‍ಲೇಟ್ ಪೇಪರ್ ಅನ್ನು ರಸ್ತೆಗೆ ಬದಲಾಗಿ ಕಸದ ತೊಟ್ಟಿಗೆ ಹಾಕಲು ಸನ್ನೆಗಳ ಮೂಲಕ ತಿಳಿಸಿದಳು.
ಅಂದಿನಿಂದ ಇಂದಿನವರೆಗೂ ನಾನು ಯಾವ ವಸ್ತುವನ್ನೂ ಹಾಗೆ ಎಸೆದಿಲ್ಲ.
ಇಂತಹ ತಿಳುವಳಿಕೆ ನಮ್ಮ ಜನರಿಗೆ ಬಂದರೆ, ಭಾರತ ಅತ್ಯಂತ ಸ್ವಚ್ಛ ಸ್ಥಳವಾಗುವುದು.
ಸ್ವಚ್ಛ ಭಾರತದ ಕನಸು ನಮಗಿದೆ, ಆದ್ದರಿಂದಲೇ ಹೋದ ಕಡೆಯೆಲ್ಲಾ ಶುಚಿತ್ವದ ಕುರಿತು ಮಾತನಾಡುತ್ತೇನೆ.
ನಮ್ಮ ಸಂಸ್ಕೃತಿಯು ಶುಚಿತ್ವದ ಅರಿವನ್ನು ಅಳವಡಿಸಿಕೊಳ್ಳಬೇಕು.
ಭಾನುವಾರದಂದು ಇದನ್ನೇ ಮಾಡಿ ಎಂದು ಹೇಳುತ್ತಿರುವುದು. ಕೇವಲ ಎರಡು ಗಂಟೆಗಳ ಸಮಯ ಕೇಳುತ್ತಿದ್ದೇವೆ ಆಷ್ಟೇ, ಮತ್ತೇನನ್ನೂ ಅಲ್ಲ. ನಿಮ್ಮ ಪೊರಕೆಯೊಂದಿಗೆ ಆಚೆಗೆ ಬನ್ನಿ, ರೂಮಿನಲ್ಲಿರುವವರೆಲ್ಲರನ್ನೂ ಕರೆಯಿರಿ.
ಹೀಗೆ ಎಲ್ಲಾ ಜಾತಿ, ಪಾರ್ಟಿ, ವರ್ಗ ಹಾಗೂ ಧರ್ಮದವರು ನಮ್ಮ ಸಮಾಜವನ್ನು ಶುಚಿಯಾಗಿಡಲು ಸೇರಬಹುದು. ನಮ್ಮ ಸಮಾಜದಲ್ಲಿರುವ ಈ ಮೇಲು-ಕೀಳು ವರ್ಗಗಳ ಭೇದ ಅಂತ್ಯವಾಗುವುದು. ಸಮಾಜ ಸೇವೆಯು ನಮ್ಮನ್ನು ದೇವರ ಸಂಪರ್ಕಕ್ಕೆ ತರುವುದು.
ಸರಿ, ಈಗೊಂದು ಚಿಕ್ಕ ಧ್ಯಾನ ಮಾಡೋಣ. ಒಂದು ಗುಂಪಿನಲ್ಲಿ ಧ್ಯಾನ ಮಾಡಿದಾಗ, ನಿಮ್ಮ ಮನಸ್ಸಿನಲ್ಲಿ ಯಾವುದೇ ಸಂಕಲ್ಪ ಅಥವಾ ಆಸೆಯಿದ್ದರೆ ಅದು ಪೂರ್ಣಗೊಳ್ಳುವುದು. ಖಂಡಿತವಾಗಿ ನಿಮಗೆ ಆಶೀರ್ವಾದ ಸಿಗುವುದು.
(ಗುರೂಜೀ ಎಲ್ಲರಿಗೂ ಧ್ಯಾನಕ್ಕೆ ಮಾರ್ಗದರ್ಶನ ನೀಡಿದರು).
ನೋಡಿ, ಈಗಾಗಲೇ ನಿಮ್ಮಲ್ಲಿ ಅನೇಕರಿಗೆ ಮೂವತ್ತು, ನಲವತ್ತು ಅಥವಾ ಐವತ್ತು ವರ್ಷಗಳ ಆಯಸ್ಸು ಕಳೆದುಹೋಗಿದೆ. ಇನ್ನು ಹದಿನೈದು, ಇಪ್ಪತ್ತು ಅಥವಾ ಇಪ್ಪತ್ತೈದು ವರ್ಷಗಳ ಕಾಲ ನೀವಿಲ್ಲಿರುವಿರಿ. ಆಮೇಲೆ ಏನಾಗುವುದು, ಎಲ್ಲಿ ಹೋಗುವಿರಿ?
‘ನಾನು ಯಾರು?’ ‘ನಾನೆಲ್ಲಿಗೆ ಹೋಗುವೆ?’ ನಿಮ್ಮ ಮನಸ್ಸಿನಲ್ಲಿ ಇಂತಹ ಆಲೋಚನೆಗಳು ಅಥವಾ ಆತಂಕ ಏಳದಿದ್ದರೆ, ನಿಮ್ಮ ಜೀವನ ವ್ಯರ್ಥವೆಂದು ತಿಳಿಯಿರಿ. ಪ್ರಯೋಜನಕ್ಕೆ ಬಾರದ ಜೀವನ ಅದು. ನಿಮ್ಮ ಮನಸ್ಸಿನಲ್ಲಿ ಈ ರೀತಿಯಾದ ಪ್ರಶ್ನೆಗಳಿರಬೇಕು, ‘ನಾನು ಯಾರು?’ ‘ನನಗೇನು ಬೇಕು; ಇದಾದ ನಂತರ ನನಗೇನಾಗುವುದು?’
ಈ ಪ್ರಶ್ನೆಗಳಿಗೆ ಉತ್ತರ ಸಿಗದಿದ್ದರೂ ಪರವಾಗಿಲ್ಲ, ಇಂತಹ ಪ್ರಶ್ನೆಗಳೆದ್ದರೆ ಸಾಕು. ಇಲ್ಲಿ ಕುಳಿತಿರುವ ನಾವೆಲ್ಲರೂ ಅನೇಕ ಬಾರಿ ಹುಟ್ಟಿದ್ದೇವೆ ಮತ್ತು ಸತ್ತಿದ್ದೇವೆ. ನಮಗೆ ಸ್ಮೃತಿಯಲ್ಲಿದೆ, ನೀವೂ ಕೂಡ ಜ್ಞಾಪಿಸಿಕೊಳ್ಳಬಹುದು; ಅದು ಅಂತಹ ಕಷ್ಟಕರವಾದುದೇನಲ್ಲ. ಕೆಲವು ಕಾಲ ಧ್ಯಾನ ಮಾಡಿದರೆ ನಿಮಗೂ ತಿಳಿಯುವುದು ನೀವಿಲ್ಲಿಗೆ ಬಹಳ ಸಲ ಬಂದಿರುವಿರೆಂದು. ನಿಮ್ಮ ಮುಖದಿಂದ ಆ ಮುಗುಳ್ನಗೆಯನ್ನು ಯಾರೂ ಅಳಿಸಲಾರರು ಅಂತಹ ಅಂತಃಶಕ್ತಿ ನಿಮ್ಮಲ್ಲೇಳುವುದು; ದೇವರೊಂದಿಗೆ ಆ ಆಂತರಿಕ ಸಂಪರ್ಕ ನೆಲೆಸುವುದು. ಒಮ್ಮೆ ಈ ರೀತಿಯಾದರೆ, ಜೀವನದಲ್ಲಿ ಯಾವ ಕೊರತೆಯೂ ಇರುವುದಿಲ್ಲ.
ದೇವರು ನಿಮ್ಮಿಂದ ಹೊರಗೆ ಅಥವಾ ದೂರದಲಿಲ್ಲ. ಅವನು ಜನ್ಮವೆತ್ತಲಿಲ್ಲ, ಸಾಯಲಿಲ್ಲ. ಅವನು ಚಿರಂತನ. ಅವನು ವರ್ತಮಾನದಲ್ಲೂ ಇದ್ದಾನೆ, ಪ್ರತಿಯೊಂದು ಕಣಕಣದಲ್ಲೂ ಇದ್ದಾನೆ.
ಸ್ವಲ್ಪ ಸಮಯ ಎಲ್ಲದರಿಂದ ದೂರ ಸರಿದು ಮೌನವಾಗಿ ಕುಳಿತುಕೊಳ್ಳಬೇಕಷ್ಟೇ.
ಜೀವನದಲ್ಲಿ ತೃಪ್ತಿ ಹೊಂದಿರುವವರು ಮಾತ್ರ ಬೇರೆಯವರಿಗೆ ಸಂತೃಪ್ತಿ ತರಲು ಸಾಧ್ಯ. ನಿಮಗೆ ಬೇಕೆಂದಿರುವುದೆಲ್ಲಾ ದೊರೆತಿದೆಯೆಂದು ಭಾವಿಸಿದರೆ ಹಾಗೂ ನಿಮ್ಮ ಮನಸ್ಸು ತೃಪ್ತವಾಗಿದ್ದರೆ, ಆಗ ನಿಮ್ಮ ಮನಸ್ಸಿನಲ್ಲಿ ಯಾವುದೇ ಹಂಬಲವೆದ್ದರೂ ಫಲಕಾರಿಯಾಗುವುದು, ಹಾಗೂ ನಿಮ್ಮ ಆಶೀರ್ವಾದ ಶಕ್ತಿಯುತವಾಗುವುದು. ನಿಮ್ಮೆಲ್ಲಾ ಸಂಕಲ್ಪಗಳು ಪೂರ್ಣಗೊಳ್ಳುವುದು. ಇದು ವೈಜ್ಞಾನಿಕವಾಗಿಯೂ ಸತ್ಯ.
ನಮ್ಮ ದೇಶದಲ್ಲಿ ಯಾವುದಾದರೊಂದು ಒಳ್ಳೆಯ ಕೆಲಸ ಅಥವಾ ಹೊಸತನ್ನು ಪ್ರಾರಂಭಿಸುವ ಮುನ್ನ ಹಿರಿಯರಿಂದ ಆಶೀರ್ವಾದ ಪಡೆಯುವ ಸಂಪ್ರದಾಯವಿದೆ. ಏಕೆ ಗೊತ್ತೆ?
ಸಾಂಪ್ರದಾಯಿಕವಾಗಿ, ಹಿರಿಯರು ಸಮಾಧಾನಗೊಂಡಿದ್ದು ಸಂತೃಪ್ತರಾಗಿರಬೇಕು, ಅಂತಹವರು, ‘ಶುಭವಾಗಲಿ’ ಎಂದು ಹರಸಿದಾಗ ಆ ಗುಣಾತ್ಮಕ ಶಕ್ತಿಯು ನಮ್ಮ ಜೀವನದಲ್ಲಿ ಪ್ರವೇಶಿಸಿ ಎಲ್ಲವನ್ನೂ ಅಪೇಕ್ಷಿಸಿದಂತೆ ನೆರವೇರಿಸುವುದು.
ಈ ದಿನಗಳಲ್ಲಿ ಅಂತಹ ಹಿರಿಯರನ್ನು ಕಾಣಲಾರಿರಿ. ವಯಸ್ಸು ಹೆಚ್ಚಾದಷ್ಟು, ಅವರಲ್ಲಿ ಹೆಚ್ಚು ದುಃಖ, ಸಿಟ್ಟು ಮತ್ತು ನೋವನ್ನು ಕಾಣಬಹುದು.
ವಿದೇಶಗಳಲ್ಲಿ ಹಿರಿಯರಿಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡುವುದಿಲ್ಲವೆಂದು ನಿಮಗೆ ತಿಳಿದಿದೆ. ಅರವತ್ತು ವರ್ಷಗಳಾದ ಮೆಲೆ ಅವರನ್ನು ಮನೆಯಿಂದ ಹೊರಹಾಕಿದಂತೆಯೇ. ಮಕ್ಕಳು ಮದರ್ಸ್ ಡೇ ಅಥವಾ ಫಾದರ್ಸ್ ಡೇ ದಿನ ಬಂದು ಕಾರ್ಡ್ ಕೊಟ್ಟು ಇಲ್ಲವೇ ಅಂಚೆಯಲ್ಲಿ ಕಳುಹಿಸುತ್ತಾರೆ.
ಆದರೆ ಭಾರತದಲ್ಲಿ ಈ ಸಂಪ್ರದಾಯವಿಲ್ಲ. ನಮ್ಮ ಹಿರಿಯರನ್ನು ಗೌರವಿಸುತ್ತೇವೆ, ಅವರನ್ನು ಸದಾ ಆದರಿಸುತ್ತೇವೆ. ಇದಕ್ಕೆ ಕಾರಣವೇನೆಂದರೆ ನಮ್ಮ ಶರೀರದ ಮೂಲಕ ಮಾಡಲಾಗದ ಕೆಲಸಗಳನ್ನು ನಮ್ಮ ಆಲೋಚನೆಗಳ ಮುಖಾಂತರ ಮಾಡಬಹುದು. ಪ್ರಕೃತಿಯು ನಮ್ಮಲ್ಲೇ ಇಂತಹುದೊಂದು ಸಾಮರ್ಥ್ಯವನ್ನು ಇರಿಸಿದೆ.
ನಿಮ್ಮ ದೇಹದಲ್ಲಿ ಬಲವಿರುವ ತನಕ ಕೆಲಸ ಮಾಡಿ. ಕೆಲಸ ಮಾಡಲು ಆಗದೇ ಇದ್ದಾಗ, ಪ್ರಾರ್ಥಿಸಿ ಮತ್ತು ಎಲ್ಲರನ್ನೂ ಆಶೀರ್ವದಿಸಿ. ಆದರೆ ನಾವೇನು ಮಾಡುತ್ತೇವೆ, ನಮ್ಮ ಖಜಾನೆಯ ಕೀಲಿಯನ್ನು ಭದ್ರವಾಗಿ ಹಿಡಿದಿಟ್ಟುಕೊಂಡು, ಅದನ್ನು ಬಿಡಲಿಚ್ಛಿಸದೇ ಇರುವುದು.
ಸದಾ ಅಳುತ್ತಲೇ ಇರುವುದು. ಬೇರೊಬ್ಬರನ್ನು ತಪ್ಪೆಂದೆಣಿಸುವುದು. ಇಂತಹ ಹಿರಿಯರು ಏನನ್ನೂ ಮಾಡಲಾರರು. ವಯಸ್ಸಾದಂತೆ ಹೇಗೆ ಹಿರಿತನ ಬೆಳೆಸಿಕೊಳ್ಳುವುದೆಂಬುದೂ ಒಂದು ಕಲೆ.
ಒಂದು ನಿರ್ದಿಷ್ಟ ಸಮಯದ ನಂತರ ಮಕ್ಕಳಿಗೆ ಎಲ್ಲ್ಲಾ ಜವಾಬ್ದಾರಿಗಳನ್ನು ವಹಿಸಿ, ಅವರಿಗೆ ಮಾರ್ಗದರ್ಶನ ನೀಡುತ್ತಾ ನೀವು ಮುಕ್ತರಾಗಿ. ಧ್ಯಾನ ಮಾಡಿ. ನಿಮ್ಮ ಗಮನವನ್ನು ದೇವರಲ್ಲಿ ಕೇಂದ್ರೀಕರಿಸಿ. ಹೀಗೆ ಬದುಕಿದರೆ, ಆಗ ನಿಮ್ಮ ಜೀವನ ಪರಿಪೂರ್ಣಗೊಳ್ಳುವುದು. ಆದ್ದರಿಂದ, ಯಾರು ಸಂತೃಪ್ತರಾಗಿರುತ್ತಾರೋ ಅವರಿಗೆ ಹರಸುವ ಸಾಮರ್ಥ್ಯವಿರುವುದು.
ಇದರ ಅರ್ಥ ಒಂದು ನಿರ್ದಿಷ್ಟ ವಯಸ್ಸಿನ ನಂತರವೇ ನೀವು ತೃಪ್ತರಾಗುವಿರೆಂದಲ್ಲ. ಚಿಕ್ಕ ವಯಸ್ಸಿನಲ್ಲೂ ಕೂಡ ಸಂತುಷ್ಟರಾಗಿ, ಆನಂದವಾಗಿರಬಲ್ಲಿರಿ.
ನಿಮಗೆ ಹೇಳುತ್ತಿದ್ದೇನೆ, ನಮ್ಮ ೫೫ ವರ್ಷಗಳಲ್ಲಿ ಎಂದೂ ಯಾರನ್ನೂ ನಿಂದಿಸಿಲ್ಲ. ಯಾರನ್ನೂ ಕೆಟ್ಟ ಮಾತುಗಳಿಂದ ನಿಂದಿಸಿಲ್ಲ. ಅದನ್ನು ಸಾಧಿಸಿಲ್ಲ ಅಥವಾ ಅದಕ್ಕಾಗಿ ವಿಶೇಷ ಶ್ರಮ ಪಟ್ಟಿಲ್ಲ, ಅದು ನಮ್ಮ ಸಹಜ ಸ್ವಭಾವ.
ನಿಮ್ಮ ಮಾತು ಪರಿಶುದ್ಧವಾಗಿದ್ದಷ್ಟು ಇನ್ನೊಬ್ಬರಿಗೆ ಹರಸಲು ಹೆಚ್ಚು ಸಶಕ್ತರಾಗುವಿರಿ.
ಪ್ರತಿ ದಿನ ಬೆಳಿಗ್ಗೆ ಯಾರನ್ನದರೂ ಬೈದರೆ ಅಥವಾ ಕೆಟ್ಟ ಮಾತನ್ನಾಡಿದರೆ, ಅಗ ನಿಮ್ಮ ಮಾತಿನಲ್ಲಿ ಯಾವುದೇ ಶಕ್ತಿಯಿರುವುದಿಲ್ಲ. ಶುದ್ಧ ಹೃದಯ ಮತ್ತು ಸಂತೋಷದ ಮನಸ್ಸಿನಿಂದ ಹಿತವಾದ ಮಾತುಗಳನ್ನಾಡಿದರೆ, ಒಂದು ವಿಶಿಷ್ಟ ಶಕ್ತಿ ಉದ್ಭವಿಸುವುದು. ಆ ಶಕ್ತಿಯಿಂದ ನಮ್ಮ ಕೆಲಸಗಳಷ್ಟೇ ಅಲ್ಲದೇ ಬೇರೆಯವರ ಕೆಲಸಗಳಲ್ಲೂ ಸಹಾಯ ಹಸ್ತ ನೀಡಬಹುದು.
ಇದಕ್ಕೆ ಆಧಾರ ಧ್ಯಾನ. ನಾವು ಧ್ಯಾನ ಮಾಡಿದಾಗ ನಮ್ಮ ಮನಸ್ಸು ಉಲ್ಲಸಿತವಾಗುವುದು, ಬುದ್ಧಿ ತೀಕ್ಷ್ಣವಾಗುವುದು, ಏಕಾಗ್ರತೆ ವೃದ್ಧಿಸುವುದು ಹಾಗೂ ಎಲ್ಲವೂ ಶ್ರಮವಿಲ್ಲದೇ ನಡೆಯುವುದು.
ಇವತ್ತು ನೀವು ಧ್ಯಾನ ಮಾಡಿದರೆ ನಾಳೆ ನಿಮ್ಮ ಎಲ್ಲ ಕೆಲಸಗಳು ನಡೆಯುವುದೆಂದು ಹೇಳುತ್ತಿಲ್ಲ. ಇಲ್ಲ, ಹಾಗೆ ಹೇಳುತ್ತಿಲ್ಲ. ಇದು ಮಾಯಾಜಾಲವಲ್ಲ. ಆದರೆ ಧ್ಯಾನದಿಂದ ಖಂಡಿತವಾಗಲೂ ಸಹಾಯವಾಗುವುದು, ನಿಮ್ಮ ಕೆಲಸವು ಖಂಡಿತವಾಗಿ ಕೈಗೂಡುವುದು. ಇದನ್ನು ನಾವು ಗಮನಿಸಿದ್ದೇವೆ. ಆದ್ದರಿಂದ ನೀವೆಲ್ಲರೂ ಸಂತುಷ್ಟರಾಗಿರಬೇಕೆಂದು ಕೇಳಿಕೊಳ್ಳುತ್ತೇವೆ. ನೀವು ಸಂತುಷ್ಟರಾಗಿಲ್ಲದಿದ್ದರೆ, ಯಾರು ಸಂತೃಪ್ತರಾಗಿರುವರೋ ಅವರ ಹತ್ತಿರ ಹೋಗಿ ಆಶೀರ್ವಾದವನ್ನು ಪಡೆಯಿರಿ. ನಿಮನ್ನು ಹರಸಿರೆಂದು ಕೇಳಿ.
ಇಂದು ನೀವೆಲ್ಲರೂ ಇಲ್ಲಿ ಸೇರಿದ್ದೀರಿ. ನಿಮ್ಮೆಲ್ಲ ಸಮಸ್ಯೆ, ದುಃಖ ಮತ್ತು ಚಡಪಡಿಕೆಗಳನ್ನು ನಮ್ಮ ಬಳಿ ಬಿಟ್ಟು ಹೋಗಿ. ಅದನ್ನು ಸ್ವೀಕರಿಸಲು ನಾವು ಸಿದ್ಧರಿದ್ದೇವೆ. ಅವೆಲ್ಲವನ್ನೂ ಇಲ್ಲೇ ಬಿಟ್ಟು ಮುಗುಳ್ನಗೆಯೊಂದಿಗೆ ಮನೆಗೆ ಹೋಗಿ. ಇದೇ ನಮಗೆ ಬೇಕಾಗಿರುವುದು. ನಮ್ಮ ಪಾಪಗಳನ್ನು ನಾವೇ ತೊಡೆದುಹಾಕಲು ಸಾಧ್ಯವಿಲ್ಲ. ಅವುಗಳನ್ನು ಬೇರೆಯವರೇ ತೊಡೆದುಹಾಕಲು ಸಾಧ್ಯ.
ಇದನ್ನೇ ಶ್ರೀಕೃಷ್ಣನು ತನ್ನ ಶಿಷ್ಯರಿಗೆ ಹೇಳಿದನು, ‘ಅಹಂ ತ್ವಂ ಸರ್ವ-ಪಾಪೇಭ್ಯೋ ಮೋಕ್ಷಯಿಷ್ಯಾಮಿ ಮಾ ಸುಖಃ’; ದುಃಖಿಸಬೇಡಿ, ನಿಮ್ಮೆಲ್ಲ ಪಾಪಗಳನ್ನು ನಾನು ನಾಶ ಮಾಡುವೆನು. ದೃಢವಾಗಿರಿ ಮತ್ತು ಸಂಯಮವಿರಲಿ.
ಇದನ್ನೇ ಶ್ರೀಕೃಷ್ಣನು ಹೇಳಿರುವುದು ಮತ್ತು ಇದೇ ನಮ್ಮ ಪ್ರಾಚೀನ ಸಂಪ್ರದಾಯ.
ಗುರುವಿನ ಅವಶ್ಯಕತೆಯಿರುವುದೇತಕ್ಕೆ? ಏಕೆಂದರೆ ನಮ್ಮಿಂದ ನಿಭಾಯಿಸಲಾಗದ, ನಮ್ಮ ಮನಸ್ಸಿನಲ್ಲಿರುವ ಸಮಸ್ಯೆಗಳನ್ನು ಗುರುವಿನ ಚರಣಗಳಿಗೆ ಸಮರ್ಪಿಸಬಹುದಾಗಿದೆ.
ನಮ್ಮ ದೇಶದಲ್ಲಿ ಇಂತಹ ಸಂಪ್ರದಾಯವಿತ್ತು – ಮಾತಾ, ಪಿತಾ, ಗುರು ಮತ್ತು ದೇವರು.
ನಾವು ಮಕ್ಕಳಾಗಿದ್ದಾಗ ಏನು ಮಾಡುತ್ತಿದ್ದೆವು? ದುಃಖ ಬಂದಾಗ ’ಅಮ್ಮಾ’ ಎಂದು ಕರೆಯುತ್ತಾ, ಅಮ್ಮನ ಬಳಿ ಓಡುತ್ತಿದ್ದೆವು. ಹೌದೋ ಅಲ್ಲವೋ?
ಮಗುವಿಗೆ ಎಂದಾದರೂ ಏನಾದರೂ ತೊಂದರೆಯುಂಟಾದರೆ, ಅಮ್ಮನ ಬಳಿಗೆ ಓಡುತ್ತದೆ. ಅಮ್ಮನ ಹತ್ತಿರ ಏನಾದರೂ ಜಗಳವಾಡಿದ್ದರೆ, ಅಪ್ಪನ ಹತ್ತಿರ ಹೋಗುತ್ತದೆ.
ಶಾಲೆಯಲ್ಲಿ ಕಷ್ಟವೆನಿಸಿದರೆ ತರಗತಿಯ ಉಪಾಧ್ಯಾಯರ ಬಳಿ ಹೋಗುತ್ತಿದ್ದೆವು.
ಪ್ರತಿಯೊಂದು ಪರಿವಾರದಲ್ಲೂ ಒಬ್ಬ ಸನ್ಯಾಸಿ, ಒಬ್ಬ ಗುರು ಇರುತ್ತಿದ್ದನು. ಅವರ ಬಳಿ ಹೋಗಿ ನಮ್ಮ ತೊಂದರೆ ಅಥವಾ ಕಷ್ಟಗಳನ್ನು ಅವರ ಚರಣಗಳಲ್ಲಿ ಸಮರ್ಪಿಸಿ, ಮನಸ್ಸನ್ನು ಖಾಲಿ ಮಾಡಿಕೊಳ್ಳುತ್ತಿದ್ದೆವು.
ಗುರುವಿಲ್ಲದಿದ್ದರೆ, ಕುಲದೇವರಿರುತ್ತಿದ್ದರು. ಪ್ರತಿಯೊಂದು ಪರಿವಾರವೂ ತಮ್ಮದೇ ಕುಲದೇವತೆಯನ್ನು ಹೊಂದಿರುತ್ತಿದ್ದರು. ಹೀಗೆ ಕುಲದೇವರ ಹತ್ತಿರ ಹೋಗಿ ನಮ್ಮ ಸಮಸ್ಯೆಗಳನ್ನು ಅರ್ಪಿಸಿ ಮುಕ್ತರಾಗುತ್ತಿದ್ದೆವು.
ಇಂದು ಇವೆಲ್ಲ ಸಂಪ್ರದಾಯಗಳನ್ನು ಬಿಟ್ಟುಬಿಟ್ಟಿದ್ದೇವೆ. ಅದರಿಂದಾಗಿ ಈ ಆತ್ಮಹತ್ಯೆ, ಭ್ರೂಣಹತ್ಯೆ ಇತ್ಯಾದಿ ಪ್ರಾರಂಭಾವಾಗಿರುವುದು. ಇದಕ್ಕೆ ಕಾರಣ ನಾವು ಈ ನಾಲ್ಕನ್ನು ಬಿಟ್ಟಿರುವುದರಿಂದ - ಮಾತಾ, ಪಿತಾ, ಗುರು ಮತ್ತು ದೇವರು.
ಇದೇ ಸಮಾಜದಲ್ಲಿ ನಡೆಯುತ್ತಿರುವುದು. ಇದನ್ನು ಬದಲಾಯಿಸಬೇಕಾಗಿದೆ. ಇದನ್ನೇ ನಾವು ಬಯಸುವುದು. ನಿಮ್ಮೆಲ್ಲ ಕಷ್ಟಗಳನ್ನು ಇಲ್ಲಿಯೇ ಬಿಟ್ಟು ಹೋಗಿ. ನಮ್ಮ ಆಶೀರ್ವಾದ ನಿಮಗಿದೆಯೆಂದು ತಿಳಿಯಿರಿ. ಇದನ್ನೊಮ್ಮೆ ಪ್ರಯತ್ನಿಸಿ, ಎಂತಹ ಶಾಂತಿ ನಿಮ್ಮ ಜೀವನದಲ್ಲಿ ನೆಲೆಸುವುದೆಂದು ನಿಮಗೆ ಅನುಭವವಾಗುವುದು.
ಇನ್ನೊಂದು ವಿಷಯ ನಿಮಗೆ ತಿಳಿಸಬೇಕು. ರೈತರು ದುಃಖಿತರಾಗಿದ್ದರೆ, ಧಾನ್ಯಗಳನ್ನು ಸೇವಿಸುವ ಜನರೂ ಕೂಡ ದುಃಖತಪ್ತರಾಗುವರು. ಆದ್ದರಿಂದಲೇ ಊಟ ಮಾಡುವ ಮುನ್ನ ‘ಅನ್ನದಾತ ಸುಖೀ ಭವಃ’ ಎನ್ನಬೇಕು.
ಈ ಪ್ರಾರ್ಥನೆಯನ್ನು ಸದಾ ನೆನಪಿನಲ್ಲಿಟ್ಟುಕೊಂಡು ಆಹಾರವನ್ನು ಸೇವಿಸಿ. ಇದರ ಅರ್ಥ ಯಾರು ನಮಗೆ ಅನ್ನವನ್ನು ನೀಡುವರೋ ಅವರು ಸುಖವಾಗಿರಲಿ ಎಂದು. ಈ ಶ್ಲೋಕವನ್ನು ಪಠಿಸುವಾಗ ಮೂವರನ್ನು ಸ್ಮರಿಸುತ್ತೇವೆ – ರೈತ, ಮಧ್ಯವರ್ತಿ ಮತ್ತು ಅಡಿಗೆ ಮಾಡಿ ಬಡಿಸಿದ ಆ ಮನೆಯ ಗೃಹಿಣಿ. ಅವಳ ಕಣ್ಣಲ್ಲಿ ನೀರು ತಂದರೆ ನಿಮಗೆ ಆಹಾರ ಪಚನವಾಗುವುದಿಲ್ಲ. ಆಗ ಸಹಜವಾಗಿಯೇ ಜನರು ಅಸ್ವಸ್ಥರಾಗುವರು.
ಆದ್ದರಿಂದ ಪ್ರತಿದಿನ ‘ಅನ್ನದಾತ ಸುಖೀ ಭವಃ’ ಎಂದು ಪ್ರಾರ್ಥಿಸಬೇಕು.
ಪ್ರ: ಗುರುದೇವ್, ‘ಅಂತರ‍ಮುಖೀ ಸದಾ ಸುಖೀ’ ಎಂದು ನೀವು ಸದಾ ಹೇಳುತ್ತೀರ. ಇಂದಿನ ಜಗತ್ತಿನಲ್ಲಿ ಹೀಗಿರಲು ಸಾಧ್ಯವೇ?
ಶ್ರೀ ಶ್ರೀ ರವಿಶಂಕರ್:
ಇಲ್ಲಿ ಕೇಳಿ, ನೀವು ಈ ಜಗತ್ತಿನಲ್ಲಿದ್ದೀರ, ಆದರೂ ನಿತ್ಯ ಸ್ವಲ್ಪ ಸಮಯ ನಿದ್ದೆ ಹೋಗುತ್ತೀರ. ಹಾಗೆಯೇ, ಸ್ವಲ್ಪ ಸಮಯ ಧ್ಯಾನ ಮಾಡಿ, ಆಂತರ್ಯದೊಳಗೆ ಹೋಗಿ, ಆಗ ನಿಮ್ಮೊಳಗಿನಿಂದ ಎಂತಹ ಶಾಂತಿ ಉದಯಿಸುವುದೆಂದು ನಿಮಗೆ ತಿಳಿಯುವುದು. ನಿಮ್ಮ ದಿನ ನಿತ್ಯದ ಬದುಕಿಗೂ ಸಹಾಯಕವಾಗುವುದು. ಆದ್ದರಿಂದ ಇದು ಖಂಡಿತ ಸಾಧ್ಯ.
ಪ್ರ: ಗುರುದೇವ್, ನಾನು ನಿಮ್ಮ ಹಾಗೆ ಆಗಲು ಬಯಸುತ್ತೇನೆ. ಇದು ಸಾಧ್ಯವೇ?
ಶ್ರೀ ಶ್ರೀ ರವಿಶಂಕರ್:
ಖಂಡಿತ! ಸೇವೆ, ಸಾಧನೆ ಮತ್ತು ಸತ್ಸಂಗ ಮಾಡಿ.
ನಿಮಗೂ ನನಗೂ ಯಾವುದೇ ವ್ಯತ್ಯಾಸವಿಲ್ಲ. ನೀವು ನಾನೇ. ನಾವಿಲ್ಲಿಗೆ (ಭೂಮಿಗೆ) ಬಂದಾಗ ಎಲ್ಲರೂ ಒಂದೇ ತೆರನಾಗಿದ್ದೆವು. ಮಕ್ಕಳು ಜನಿಸಿದಾಗ ಒಂದೇ ರೀತಿಯಿರುತ್ತಾರೆ. ನಾನು ಮಗುವಿನ ಸ್ವಭಾವವನ್ನು ಕಳೆದುಕೊಂಡಿಲ್ಲ, ಆದರೆ ನೀವು ಬಹುಶಃ ಎಲ್ಲೋ ಕಳೆದುಕೊಂಡಿರಬೇಕು. ಆದರೆ ನೀವು ಹಿಂತಿರುಗಬಹುದು, ತೊಂದರೆಯೇನಿಲ್ಲ. ನಾನು ಇನ್ನೂ ಬೆಳೆಯದೇ ಇರುವ ಬಾಲಕನಂತೆ ಭಾವಿಸುತ್ತೇನೆ.
ಪ್ರ: ಗುರೂಜೀ, ಇತ್ತೀಚಿನ ದಿನಗಳಲ್ಲಿ, ವಿಶ್ವವಿದ್ಯಾನಿಲಯಗಳು ಮತ್ತು ಕಾಲೇಜುಗಳು ತಮ್ಮ ಗುಣಮಟ್ಟವನ್ನು ಕೆಳಗಿಳಿಸಿದೆ. ನಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣವನ್ನು ಒದಗಿಸಲು ನೀವೇಕೆ ಕಾಲೇಜು ಅಥವಾ ವಿಶ್ವವಿದ್ಯಾನಿಲಯವನ್ನು ಪ್ರಾರಂಭಿಸಬಾರದು?
ಶ್ರೀ ಶ್ರೀ ರವಿಶಂಕರ್:
ಹೌದು! ಒರಿಸ್ಸಾ ಸರ್ಕಾರವೂ ಇದನ್ನೇ ನಮಗೆ ಹೇಳಿತು. ಅದಕ್ಕೆ, ’ನಾವು ಸಿದ್ಧ’ ಎಂದೆವು. ಅದಕ್ಕಾಗಿ ಅವರು ಕಾಯ್ದೆಯನ್ನು ಹೊರಡಿಸಿ ವಿಶ್ವವಿದ್ಯಾನಿಲಯಕ್ಕಾಗಿ ಭೂಮಿಯನ್ನು ಮಂಜೂರು ಮಾಡಿದರು.
ಅದರ ಕುರಿತು ಕಾರ್ಯೋನ್ಮುಖರಾಗಿದ್ದೇವೆ; ಈ ವರ್ಷದಿಂದ ಒರಿಸ್ಸಾದ ಭೂಬನೇಶ್ವರದಲ್ಲಿ ಶುರುವಾಗಬಹುದು.
ಇದನ್ನೇಕೆ ಶುರು ಮಾಡುತ್ತಿದ್ದೇವೆಂದರೆ ಅನೇಕ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆಂದು ಆಸ್ಟ್ರೇಲಿಯಾ, ಲಂಡನ್ ಮತ್ತು ಅಮೇರಿಕಾಗೆ ಹೋಗುತ್ತಿದ್ದಾರೆ. ಅಲ್ಲಿ ಅನೇಕರು ಜನಾಂಗೀಯ ಭೇದಭಾವದಿಂದ ನರಳುತ್ತಾರೆ ಮತ್ತು ಹಿಂದಿರುಗಲು ಇಚ್ಛಿಸುತ್ತಾರೆ. ಆದ್ದರಿಂದ ಇಲ್ಲೇ ಏಕೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡಬಾರದೆಂದೆನಿಸಿತು. ಇದನ್ನು ಮನಸ್ಸಿನಲ್ಲಿಟ್ಟುಕೊಂಡು, ವಿಶ್ವವಿದ್ಯಾನಿಲಯವನ್ನು ಪ್ರಾರಂಭಿಸಿದ್ದೇವೆ, ಶಿಕ್ಷಣ ವ್ಯಸ್ಥೆಯು ಪರಿಣಾಮಕಾರಿಯಾಗಿರಲು ಪಾಶ್ಚಿಮಾತ್ಯ ಮತ್ತು ಪೌರವಾತ್ಯದಿಂದ ಉತ್ತಮವಾದುದನ್ನು ಆಯ್ದು, ಸಂಯೋಜಿಸಿದ್ದೇವೆ. ಆದ್ದರಿಂದ ವಿಜ್ಞಾನ ಮತ್ತು ವಿವೇಕ ಎರಡರ ಸಂಯೋಗ; ಕೇವಲ ಒಂದರಿಂದ ಸಾಧ್ಯವಿಲ್ಲ.
ನಮ್ಮ ವಿಶ್ವವಿದ್ಯಾನಿಲಯದಲ್ಲಿ ಪ್ರವೇಶ ಪಡೆಯಲು ಆಸಕ್ತಿಯುಳ್ಳವರಿಗೆ ಸ್ವಾಗತ.
ಈಗ ಕಟ್ಟಡವನ್ನು ನಿರ್ಮಿಸಿದ್ದಾರೆ, ಈ ವರ್ಷದ ಜುಲೈ ಅಥವಾ ಆಗಸ್ಟ್ ತಿಂಗಳಲ್ಲಿ ಪ್ರಾರಂಭವಾಗಬಹುದು.
ಪ್ರ: ಗುರೂಜೀ, ಉಪನಿಷತ್ತು ಮತ್ತು ಪುರಾಣಗಳ ನಡುವೆ ಇರುವ ವ್ಯತ್ಯಾಸವೇನು? ಯಾವುದನ್ನು ಓದಬೇಕು?
ಶ್ರೀ ಶ್ರೀ ರವಿಶಂಕರ್:
ಉಪನಿಷತ್ತು ಪರಿಶುದ್ಧ ಜ್ಞಾನ ಮತ್ತು ಪುರಾಣ ಕಥೆಗಳನ್ನೊಳಗೊಂಡಿದೆ. ಪುರಾಣವೆಂದರೇನು ನಿಮಗೆ ಗೊತ್ತೆ? ಅದರ ಅರ್ಥ ಆಧುನಿಕ ಅಥವಾ ನಾವಿನ್ಯತೆ. ಸಂಸ್ಕೃತದಲ್ಲಿ ಪುರಾಣದ ಅರ್ಥ ಹಿಂದಿ ಭಾಷೆಗಿಂತ ಭಿನ್ನವಾಗಿದೆ, ಅದಕ್ಕೆ ವಿರುದ್ಧವಾಗಿದೆ. ಹಿಂದಿಯಲ್ಲಿ ಪುರಾನ (ಹಳೆಯದು) ಎನ್ನುವುದು ಸಂಸ್ಕೃತದಲ್ಲಿ ಅಚ್ಚ ಹೊಸತು ಮತ್ತು ತಾಜಾ (ಪುರಾಣ) ಎಂದು. ಆದರಿಂದ ಪುರಾಣ ಎಂದರೆ ಜ್ಞಾನವನ್ನು ಹೊಸತಾಗಿ ಪ್ರಸ್ತುತಪಡಿಸುವುದು.
ಪ್ರ: ಗುರುದೇವ್, ಇಂದು ೧೦೦ನೇ ಶತಕ ಪೂರೈಸಿದ ಹಿನ್ನೆಲೆಯಲ್ಲಿ ಇಡೀ ದೇಶವೇ ಸಚಿನ್ ತೆಂಡುಲ್ಕರ್ ನ ಬಗ್ಗೆ ಹೆಮ್ಮೆಪಡುತ್ತಿದೆ. ಇದರ ಕುರಿತು ನಿಮಗೇನಾದರೂ ಹೇಳುವುದಿದೆಯೇ?
ಶ್ರೀ ಶ್ರೀ ರವಿಶಂಕರ್:
ಅವನಿಗೆ ಶುಭ ಕೋರಲು ಬಯಸುತ್ತೇನೆ. ಹಾಗೆಯೇ ಕ್ರಿಕೆಟ್ ಬೋರ್ಡ್, ಬಿಸಿಸಿಐ (ಬೋರ್ಡ್ ಫಾರ್ ಕಂಟ್ರೋಲ್ ಆಫ್ ಕ್ರಿಕೆಟ್ ಇನ್ ಇಂಡಿಯಾ)ದ ಸದಸ್ಯನಾಗುವಂತೆ ಕೋರುತ್ತೇವೆ.
ಈಗ ಈ ಮಂಡಳಿಯಲ್ಲಿ ಬಹಳಷ್ಟು ಮಂದಿ ಅರವತ್ತು ಅಥವಾ ಎಪ್ಪತ್ತು ವರ್ಷಗಳ ವಯೋವೃದ್ಧರಾಗಿದ್ದು, ಇಪ್ಪತ್ತು ವರ್ಷಗಳಿಗಿಂತ ಹೆಚ್ಚಿನ ಕಾಲದಿಂದ ಸದಸ್ಯರಾಗಿದ್ದಾರೆ. ಈ ಕ್ಷೇತ್ರದಲ್ಲಿ ಭ್ರಷ್ಟಾಚಾರ ಬಹಳ ಹೆಚ್ಚಿದೆ. ಇದನ್ನು ಸರಿಪಡಿಸಬೇಕಾಗಿದೆ.
ಯುವಕರನ್ನು ಕ್ರೀಡೆಯಲ್ಲಿ ಭಾಗವಹಿಸಲು ಪ್ರೋತ್ಸಾಹಿಸುವುದು ಬಹಳ ಮುಖ್ಯ. ಯುವಕರು ಕ್ರೀಡೆಗಳಲ್ಲಿ ಆಸಕ್ತಿ ತೋರಿಸಿದರೆ, ಚಟ ಮತ್ತು ಹಿಂಸೆಗಳಿಗೆ ತೊಡಗುವುದಿಲ್ಲ.
ಪ್ರ: ಗುರೂಜೀ, ನಾನೊಬ್ಬ ಮುಸ್ಲಿಮ್. ನಾನೂ ಕೂಡ ಸುದರ್ಶನ ಕ್ರಿಯೆಯನ್ನು ಕಲಿಯಬಹುದೇ? ಅದಕ್ಕೋಸ್ಕರ ನಾನೇನ್ನನ್ನಾದರೂ ಬಿಡಬೇಕೆ?
ಶ್ರೀ ಶ್ರೀ ರವಿಶಂಕರ್:
ಇಲ್ಲ, ಅದಕ್ಕಾಗಿ ನೀವೇನ್ನನ್ನೂ ಬಿಡುವ ಅಗತ್ಯವಿಲ್ಲ.
ಈಗಷ್ಟೇ ನಾವು ಪಾಕಿಸ್ತಾನದಿಂದ ಹಿಂತಿರುಗಿದ್ದೇವೆ. ಸಾವಿರಾರು ಜನ ಪಾಕಿಸ್ತಾನದಲ್ಲಿ ಈ ಕೋರ್ಸ್ ಅನ್ನು ಮಾಡಿದ್ದಾರೆ ಹಾಗೂ ಸುದರ್ಶನ ಕ್ರಿಯೆಯನ್ನು ಅಭ್ಯಾಸ ಮಾಡುತ್ತಿದ್ದಾರೆ. ಅಲ್ಲೊಂದು ಕೇಂದ್ರವನ್ನೂ ಸ್ಥಾಪಿಸಿದ್ದಾರೆ. ಸುಮಾರು ಒಂದು ಲಕ್ಷ ಜನ ಅಲ್ಲಿ ತರಬೇತಿ ಪಡೆದಿದ್ದಾರೆ, ಅವರೆಲ್ಲರೂ ಸಂತೋಷವಾಗಿದ್ದಾರೆ.
ಅಲ್ಲಿಗೆ ಹೋದಾಗ ಪಾಕಿಸ್ತಾನಕ್ಕೆ ಹೋಗಿದ್ದೇನೆಂದೆನಿಸಲಿಲ್ಲ. ಅವರು ನಮ್ಮನ್ನು ಹಾರ್ದಿಕವಾಗಿ ಹಾಗೂ ಭಾವಪೂರ್ವಕವಾಗಿ ಸ್ವಾಗತಿಸಿದರು. ಸುದರ್ಶನ ಕ್ರಿಯೆಯು ನಿಮ್ಮನ್ನು ಧರ್ಮದಿಂದಾಚೆಗೆ ಕೊಂಡೊಯ್ಯುವುದಿಲ್ಲ ಬದಲಿಗೆ ನಿಮ್ಮ ಪ್ರಾರ್ಥನೆಗೆ ಇನ್ನಷ್ಟು ಆಳವನ್ನು ತರುತ್ತದೆ. ಅಂತಹ ಆಂತರಿಕ ಸಂತೋಷವನ್ನು ನೀಡುತ್ತದೆ.
ಯೋಗ ಮತ್ತು ಸುದರ್ಶನ ಕ್ರಿಯೆ ನಿಮ್ಮನ್ನು ಸದೃಢಗೊಳಿಸುತ್ತದೆ ಮತ್ತು ಆರೋಗ್ಯವಂತರನ್ನಾಗಿಸುತ್ತದೆ. ಆದ್ದರಿಂದ ಎಲ್ಲ ಸಂಶಯಗಳನ್ನು ಬಿಟ್ಟುಬಿಡಿ.
ಇರಾಕ್, ಇರಾನ್ ಮತ್ತು ಇನ್ನೂ ಅನೇಕ ದೇಶಗಳಲ್ಲಿ ಜನರು ಸುದರ್ಶನ ಕ್ರಿಯೆಯನ್ನು ಮಾಡುತ್ತಿದ್ದಾರೆ ಹಾಗೂ ಅದರ ಲಾಭವನ್ನು ಪಡೆಯುತ್ತಿದ್ದಾರೆ. ಆಫ್ರಿಕಾದ ಅನೇಕ ಮಸೀದಿಗಳಲ್ಲಿಯೂ ಸಹ ಜೀವನ ಕಲೆ ಶಿಬಿರವನ್ನು ನಡೆಸುತ್ತಿದ್ದಾರೆ.
ಪ್ರ: ಗುರೂಜೀ, ಪ್ರತಿಯೊಂದು ಸಮಸ್ಯೆಯು ನಮ್ಮನ್ನು ಆಧ್ಯಾತ್ಮದೆಡೆಗೆ ಕರೆದುಕೊಂಡು ಹೋಗುವುದರಿಂದ ನಮ್ಮ ಕಷ್ಟಗಳಿಗೆ ಹೆಚ್ಚು ಗಮನಕೊಡಬೇಕೆಂಬುದು ನಿಜವೇ?
ಶ್ರೀ ಶ್ರೀ ರವಿಶಂಕರ್:
ಸುಖ್ ಮೇ ಸೇವಾ ದುಃಖ್ ಮೇ ತ್ಯಾಗ್.
ಸಂತೋಷವಾಗಿದ್ದಾಗ ಸೇವೆ ಮಾಡಿ. ದುಃಖದಲ್ಲಿದ್ದಾಗ ಅದನ್ನು ಸಮರ್ಪಿಸಿ .
ಸಮಸ್ಯೆಗಳು ನಿಮ್ಮ ಜೀವನಕ್ಕೆ ಆಳವನ್ನು ನೀಡುತ್ತದೆ. ಅದೇ ಸಂತೋಷವು ಪರರಿಗೆ ಸೇವೆ ಮಾಡಲು ಪ್ರೇರೇಪಿಸುತ್ತದೆ. ಆದ್ದರಿಂದ ಸುಖ ಮತ್ತು ದುಃಖ ಬರುತ್ತದೆ, ಹೋಗುತ್ತದೆ ಆದರೆ ನಮ್ಮ ಆಂತರ್ಯದ ಆ ದೈವೀಕ ಶಕ್ತಿಯೊಂದಿಗೆ ಸಂಪರ್ಕ ಹೊಂದಿದಾಗ ಹಾಗೂ ಆ ದೇವರು ನನ್ನವನೇ, ಅವನಿಲ್ಲೇ ಇದ್ದಾನೆ ಎಂಬ ವಿಶ್ವಾಸವಿದ್ದಾಗ, ದುಃಖವಾಗುವುದಿಲ್ಲ.
ಪ್ರ: ಗುರೂಜೀ, ಯೋಗವನ್ನು ಒಲಂಪಿಕ್ಸ್‍ಗೆ ತರಲು ಜನರು ಮಾತನಾಡುತ್ತಿದ್ದಾರೆ. ನಿಮಗೇನೆನಿಸುತ್ತದೆ? ಯೋಗವನ್ನು ಸ್ಪರ್ಧೆಯನ್ನಾಗಿಸಬೇಕೆ?
ಶ್ರೀ ಶ್ರೀ ರವಿಶಂಕರ್:
ಹೌದು, ಖಂಡಿತ. ಯಾವ ಕಾರಣದಿಂದಲಾದರೂ ಸರಿ, ಜನರು ಯೋಗಾಭ್ಯಾಸ ಮಾಡಿದರೆ, ನಮಗೆ ಸಂತೋಷ. ಅದು ಒಲಂಪಿಕ್ಸ್‍ನಲ್ಲಿನ ಸ್ಪರ್ಧೆಯಾದರೂ ಸರಿ, ಶಾಲೆಯ ಅಥವಾ ಯೋಗಥಾನ್ ಮೂಲಕವಾದರೂ ಸರಿ, ಯೋಗ ಮಾಡಿ. ಅದನ್ನು ಮಾಡಿದರೆ ಬಹಳ ಪ್ರಯೋಜನ ಪಡೆಯುತ್ತೀರ. ಯೋಗ ಮಾಡುವುದಕ್ಕೆ ಕಾರಣ ಯಾವುದಾದರೂ ಸರಿ, ಮಾಡಿದರೆ ಒಳ್ಳೆಯದು.