ಭಾನುವಾರ, ಮಾರ್ಚ್ 18, 2012

ಎಲ್ಲರನ್ನೂ ಆದರದಿಂದ ಸ್ವೀಕರಿಸುವ ಕಲೆ ಭಾರತದ ವಂಶವಾಹಿನಿಯಲ್ಲಿದೆ


18
2012............................... ಲಕ್ನೋ, ಉತ್ತರ ಪ್ರದೇಶ, ಭಾರತ
Mar


ಜೀವನದಲ್ಲಿ ವಿಶ್ವಾಸ ಬಹಳ ಮುಖ್ಯ. ಮೂರು ವಿಧವಾದ ಅಥವಾ ಮೂರು ಹಂತದ ವಿಶ್ವಾಸಗಳುಂಟು: ಮೊದಲಿಗೆ, ತನ್ನ ಮೇಲೆ ತನಗಿರುವ ವಿಶ್ವಾಸ ಅಂದರೆ ಆತ್ಮವಿಶ್ವಾಸ. ಎರಡನೆಯದಾಗಿ ಸಮಾಜದಲ್ಲಿ ಒಳ್ಳೆಯವರಿದ್ದಾರೆ ಎಂಬ ವಿಶ್ವಾಸ, ಸಮಾಜದ ನಿಯಮಗಳಲ್ಲಿ ವಿಶ್ವಾಸ. ಮೂರನೆಯದಾದ ಮತ್ತು ಅತ್ಯಂತ ಮುಖ್ಯವಾದ ವಿಶ್ವಾಸ, ಕಷ್ಟವೆನಿಸುವ ಆದರೆ ಸುಲಭವಾದ,  ದೈವಬಲದ ಮೇಲಿನ ವಿಶ್ವಾಸ.
ದೈವಿಕಶಕ್ತಿ ನಮ್ಮೆಲರಲ್ಲೂ ಇದೆ. ಅದು ಯಾವಾಗಲೋ ಅಸ್ತಿತ್ವದಲ್ಲಿದ್ದು, ಇಂದು ಇಲ್ಲವೆನ್ನುವಂತಿಲ್ಲ; ಆಗೊಂದು ಕಾಲದಲ್ಲಿ ಪೈಗಂಬರರು, ಸಾಧುಗಳು, ಮಹಾತ್ಮರು, ಅವತಾರ ಪುರುಷರಲ್ಲಿದ್ದು ಆದರೆ ಈಗಿಲ್ಲವೆಂಬುದಲ್ಲ! ಇಂದಿಗೂ ಇದೆ, ಈಗಲೂ ಇದೆ – ನಮ್ಮೊಳಗೇ ಆ ಬೆಳಕಿದೆ.
ಇದೊಂದೇ ಕಾರಣ ನಾವಿಲ್ಲಿಗೆ ಬರಲು – ಆ ದಿವ್ಯಬೆಳಕು ನಮ್ಮೆಲ್ಲರಲ್ಲೂ ಸದಾ ಕಾಲದಲ್ಲೂ ಇರುತ್ತದೆ, ನಮ್ಮ ತಾಯಿತಂದೆಯರು ನಮ್ಮನ್ನೆಷ್ಟು ಪ್ರೀತಿಸುತ್ತಿದ್ದರೂ ಸರಿ, ನಮ್ಮೊಂದಿಗಿರುವ ಆ ಪ್ರೀತಿ ಮತ್ತು ಬಾಂಧವ್ಯ ನೂರು ಪಟ್ಟು ಹೆಚ್ಚು ಬಲವಾಗಿದೆ, ಆ ವಿಶ್ವಾಸವನ್ನು ನಿಮ್ಮಲ್ಲಿ ಜಾಗೃತಗೊಳಿಸಲು ನಾವಿಲ್ಲಿಗೆ ಬಂದಿರುವೆವು. ಇದಕ್ಕಾಗಿ, ನೀವು ಬೇಕೆಂದರೆ, ಯಾವ ಕರಾರು ಪತ್ರಕ್ಕಾದರೂ ಸಹಿ ಮಾಡುವೆ. ಸ್ವಲ್ಪ ಸಮಯ ಶಾಂತವಾಗಿ ಕುಳಿತುಕೊಳ್ಳಿ. ಸ್ವಲ್ಪ ಕಾಲ ಆಲೋಚನೆಗಳಿಂದ, ಪ್ರಪಂಚದಿಂದ ಮತ್ತು ಪ್ರಾಪಂಚಿಕ ವಿಷಯಗಳಿಂದ ನಿಮ್ಮ ಮನಸ್ಸನ್ನು ಪ್ರತ್ಯೇಕಿಸಿಕೊಳ್ಳಿ ಹಾಗೂ ಅಂತರಂಗದಲ್ಲಿ ನೋಡಿ – ಬೆಳಕೊಂದು ಮೂಡುವುದು – ವಾವ್!!
ನಿಮ್ಮ ಅನುಭವಕ್ಕೆ ಬರುವುದು – ಜೀವನದುದ್ದಕ್ಕೂ ಇದನ್ನೇ ಹುಡುಕುತ್ತಿದ್ದೆ ಎಂದು. ಇದನ್ನೇ ಎಲ್ಲರೂ ಹೇಳುತ್ತಿದ್ದರು, ಹಾಡುತ್ತಿದ್ದರು, ನಂಬಿರುವುದು, ಅದು ನನ್ನಲ್ಲೇ ಇದೆ!
ಈ ಸತ್ಯವನ್ನು ಅರಿತ ನಂತರ ರೋಮಾಂಚನವಾಗುವುದು – ಆ ಆರಾಧ್ಯ ಜಗದೊಡೆಯನು, ನನ್ನೊಳಗೇ ಕುಳಿತಿದ್ದಾನೆ. ಈ ಅನುಭವವಾಗುವುದು. ಆಷ್ಟೇ! ಜಗತ್ತಿನ ಯಾವ ಶಕ್ತಿಯೂ ನಿಮ್ಮ ಮುಖದಿಂದ ಮುಗುಳ್ನಗೆಯನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ಎಂತಹ ಆನಂದ ನಿಮ್ಮಲ್ಲಿ ಹೊರಹೊಮ್ಮುವುದೆಂದರೆ ಬೇರೆಲ್ಲವೂ ಬಾಲಿಶವೆನಿಸುವುದು. ಜಾತಿ ಮತ್ತು ಧರ್ಮಗಳ ಹೆಸರಿನಲ್ಲಿ ನಡೆಯುವ ಈ ಜಗಳಗಳು ಆಟವೆಂದೆನಿಸುವುದು!
ಆದ್ದರಿಂದ, ಈ ಮೂರನೆಯ ಬಗೆಯ ವಿಶ್ವಾಸ ನಮ್ಮಲ್ಲಿ ಲವಲೇಶವಾದರೂ ಉದ್ಭವಿಸಿದರೆ, ನಮ್ಮ ಜೀವನ ಮಹತ್ತರವಾದ ಬದಲಾವಣೆಯನ್ನು ಹೊಂದುತ್ತದೆ. ಯಾವುದರ ಕೊರತೆಯೂ ತೋರುವುದಿಲ್ಲ, ಎಲ್ಲರೂ ನಮ್ಮವರೇ. ನಾವು ೧೫೨ ದೇಶಗಳನ್ನು ಸಂಚರಿಸಿದ್ದೇವೆ ಅದರೆ ಎಲ್ಲೂ ಅಪರಿಚಿತರೆಂದೆನಿಸಲಿಲ್ಲ. ಜನರೂ ಕೂಡ ನನ್ನನ್ನು ಅಪರಿಚಿತನಂತೆ ಕಾಣಲಿಲ್ಲ ಮತ್ತು ನಾವೂ ಕೂಡ ಅವರನ್ನು ನಮ್ಮಿಂದ ಬೇರೆಯೆಂದು ಕಾಣಲಿಲ್ಲ. ಇಡೀ ಜಗತ್ತು ಒಬ್ಬ ದೇವನಿಗೆ ಸೇರಿದ್ದು, ಹಾಗಾದಲ್ಲಿ ನಾವೆಲ್ಲರೂ ಪರಸ್ಪರ ಸಂಬಂಧಿತರಾದಾಗ ಹೇಗೆ ಅಪರಿಚಿತರಂತೆ ಕಾಣುವುದು? ಇದು ಸಹಜವಾಗಿ, ಸುಲಭವಾಗಿ ಉಂಟಾಗುತ್ತದೆ, ಇದನ್ನು ನಾವು ವಿಚಾರ ಮಾಡಿದಾಗ ತಿಳಿಯುತ್ತೇವೆ.
ಅದಕ್ಕೇ ನಾವು ಇದನ್ನು ಜೀವನ ಕಲೆ ಎಂದು ಕರೆದಿರುವುದು. ಇದನ್ನು ಪ್ರಾರಂಭಿಸಿ ಮೂವತ್ತು ವರ್ಷಗಳಾಗಿವೆ. ಎರಡು ತಿಂಗಳವರೆಗೆ ಸೂರ್ಯ ಉದಯಿಸದೇ ಇರುವ ಉತ್ತರ ಧೃವದ ಕಡೆಯ ನಗರಕ್ಕೆ ಹೋದರೂ, ಅಲ್ಲೂ ಸಹ ಸುದರ್ಶನ ಕ್ರಿಯೆಯನ್ನು ಕಲಿತಿರುವ  ಜನರನ್ನು ಕಾಣಬಹುದು. ದಕ್ಷಿಣ ಧೃವದಲ್ಲೂ, ಪ್ರಪಂಚದೆಲ್ಲೆಡೆಯೂ ಉಸಿರಾಟದ ಮೂಲಕ ತಮ್ಮ ಮನಸ್ಸನ್ನು ಪ್ರಶಾಂತಗೊಳಿಸಲು ಜನರು ಈ ಸರಳವಾದ ವಿಧಾನವನ್ನು ಕಲಿತಿದ್ದಾರೆ.
ನೀವು ಯಾವುದರಲ್ಲಿ ನಂಬಿಕೆಯಿಡುತ್ತೀರೋ, ಯಾವ ಧರ್ಮವನ್ನು ಅನುಸರಿಸುತ್ತೀರೋ, ಅಥವಾ ಯಾವ ಧರ್ಮಗ್ರಂಥವನ್ನು ಓದಿಕೊಂಡು ಜ್ಞಾನಿಗಳಾಗುತ್ತೀರೋ, ಒಂದು ವಿಷಯವನ್ನು ಮಾತ್ರ ನೀವು ಮರೆಯಬಾರದು, ನಾವೆಲ್ಲರೂ ಮಾನವರು ಮತ್ತು ಅತ್ಯಮೂಲ್ಯವಾದವರು.
ಇದನ್ನೇ ನಾವು ಜೀವನ ಕಲೆಯಲ್ಲಿ ತಿಳಿಸಿರುವುದು.
ಮೂರು ವಿಧವಾದ ವಿಶ್ವಾಸಗಳು, ಮೊದಲನೆಯದಾಗಿ ತನ್ನ ಮೇಲೆ ತನಗೇ ಇರುವಂತಹುದು, ಆತ್ಮವಿಶ್ವಾಸ; ಯಾವ ವ್ಯಕ್ತಿ, ‘ನಾನು ಯಾವುದನ್ನೂ ನಂಬುವುದಿಲ್ಲ’ ಎನ್ನುತ್ತಾನೋ, ಅವನು ಈ ಮಾತನ್ನು ಆತ್ಮವಿಶ್ವಾಸದಿಂದ ಹೇಳುತ್ತಾನೆ.
ತನ್ನ ಮಾತುಗಳ ಮೇಲೆ ನಂಬಿಕೆಯಿಟ್ಟಿರುವವನೇ ಇದನ್ನು ಹೇಳಲು ಸಾಧ್ಯ. ಆತ್ಮವಿಶ್ವಾಸವಿಲ್ಲದವನು ಒಂದು ಹೆಜ್ಜೆಯನ್ನೂ ಮುಂದಿಡಲಾರ. ನಾವಿಂದು ಬಡವರಲ್ಲಿ ಆತ್ಮವಿಶ್ವಾಸವನ್ನು ನೆಲೆಗೊಳಿಸಬೇಕು. ಬದತನವನ್ನು ನಿರ್ನಾಮ ಮಾಡಲು ಇದೊಂದೇ ಉಪಾಯವಿರುವುದು. ‘ನಾನು ಏನನ್ನಾದರೂ ಮಾಡಬಲ್ಲೆ’ ಎನ್ನುವ ಮನೋಭಾವ ಜನರಲ್ಲಿರಬೇಕು, ‘ಬೇರೆಯವರು ಸದಾ ನನಗೆ ಕೊಡುತ್ತಿರಬೇಕು’, ಇಲ್ಲ, ಇದಲ್ಲ!
ಪ್ರಥಮವಾಗಿ ಆತ್ಮವಿಶ್ವಾಸ; ಎರಡನೆಯದಾಗಿ ಪ್ರಪಂಚದಲ್ಲಿ ಸಜ್ಜನರಿದ್ದಾರೆ – ಕೆಲವರಲ್ಲ, ಅನೇಕರು! ಆದರೆ ಅವರ ಮೌನವೇ ಜಗತ್ತು ನಾಶವಾಗುತ್ತಿರಲು ಕಾರಣ. ಬಹಳ ಮಂದಿ ಸಜ್ಜನರಿದ್ದಾರೆ. ಜನರ ಒಳ್ಳೆಯತನದ ಮೇಲೆ ವಿಶ್ವಾಸವಿರಬೇಕು.
ನೋಡಿ, ಸಾಮಾನ್ಯವಾಗಿ ನಾವು ಯಾವುದರ ಬಗ್ಗೆ ಸಂಶಯಪಡುವುದು? ಪ್ರಾಮಾಣಿಕತೆಯನ್ನು ಸಂಶಯಿಸುವುದು, ಕಪಟತೆಯನ್ನಲ್ಲ. ಒಬ್ಬ ಪ್ರಾಮಾಣಿಕನು ಒಮ್ಮೆ ವಂಚಕನಾದರೂ ಸರಿ, ಅವನ ವಂಚನೆಯನ್ನೇ ನಂಬಲು ಉದ್ಯುಕ್ತವಾಗುತ್ತೇವೆ, ಅವನ ಪ್ರಾಮಾಣಿಕತೆಯನ್ನು ಅನುಮಾನಿಸುತ್ತೇವೆ.
ಯಾರಾದರೂ ನಿಮಗೆ, ‘ನಾನು ನಿನ್ನನ್ನು ಪ್ರೀತಿಸುತ್ತೇನೆ’ ಎಂದರೆ, ನೀವು ‘ನಿಜವಾಗಲೂ?’ ಎಂದು ಕೇಳುವಿರಿ. ಆದರೆ ಯಾರಾದರೂ, ‘ನಾನು ನಿನ್ನನ್ನು ದ್ವೇಷಿಸುತ್ತೇನೆ’ ಎಂದರೆ ಅದನ್ನು ತಕ್ಷಣ ನಂಬುತ್ತೀರ. ಸತ್ಯವಾದುದನ್ನು ಮತ್ತು ಒಳ್ಳೇಯದನ್ನು ಸದಾ ಸಂದೇಹದಿಂದ ನೋಡುತ್ತೇವೆ. ಅದಕ್ಕೇ ದೇವರ ಮೇಲೆ ಸಂಶಯಪಡುವುದು ಏಕೆಂದರೆ ಅದು ಸತ್ಯ. ಆದ್ದರಿಂದ ಯಾರು ಸಜ್ಜನರೋ ಅವರ ಬಗ್ಗೆ ವಿಶ್ವಾಸವಿರಬೇಕು, ಇಲ್ಲದಿದ್ದರೆ ಖಿನ್ನತೆಗೊಳಗಾಗುವರು. ‘ಎಲ್ಲರೂ ಕಳ್ಳರೇ, ಯಾರೂ ಸಾಧುವಲ್ಲ, ಯಾರೂ ಒಳ್ಳೆಯವರಲ್ಲ’ – ಇದನ್ನು ನೀವು ನಂಬಿದರೆ, ಭಯಗ್ರಸ್ತರಾಗಿ, ಒಂದು ಹೆಜ್ಜೆಯೂ ಮುಂದಿಡಲಾರಿರಿ.
ಇಡೀ ಸಮಾಜದ ಚೌಕಟ್ಟು ಸತ್ಯವನ್ನು ಆಶ್ರಯಿಸಿದೆ. ನೀವು ಹಣ ಸಂದಾಯ ಮಾಡುತ್ತೀರ ಎಂದು ನಂಬಿ ದೂರವಾಣಿ ಸಂಸ್ಥೆಯು ನಿಮಗೆ ಸಂಪರ್ಕವನ್ನು ನೀಡುತ್ತದೆ. ತಿಂಗಳ ಕೊನೆಯಲ್ಲಿ ನೀವು ಬಿಲ್ಲನ್ನು ಪಾವತಿಸುವಿರೆಂಬ ಒಡಂಬಡಿಕೆಯ ಮೇಲೆ ನಿಮಗೆ ವಿದ್ಯುತ್ ಸಂಪರ್ಕವನ್ನು ನೀಡಲಾಗಿದೆ. ಎಲ್ಲಾ ವ್ಯವಸ್ಥೆಗಳಿಗೂ ಆಧಾರ ವಿಶ್ವಾಸವೆಂದು ನೀವು ಗಮನಿಸಬಹುದು. ನ್ಯಾಯ ಒದಗಿಸುತ್ತಾರೆಂಬ ವಿಶ್ವಾಸದಿಂದ ಚುನಾವಣೆಯಲ್ಲಿ ಯಾರನ್ನೋ ಜಯಗೊಳಿಸಲು ಸಹಾಯ ಮಾಡುತ್ತೀರ. ಇಡೀ ಜೀವನ ಕೇವಲ ವಿಶ್ವಾಸದ ಅಲೆಯಷ್ಟೇ. ಇದು ವಿಶ್ವಾಸದ ಎರಡನೆಯ ವಿಧ.
ಮೂರನೆಯ ವಿಧದ ಕುರಿತು ನಾನಾಗಲೇ ಮಾತನಾಡಿರುವೆ. ಒಂದೇ ಒಂದು ಅಸ್ತಿತ್ವದಲ್ಲಿರುವುದು, ಅದು ನಮ್ಮ ಪರ ಅತೀವ ಕಾಳಜಿವಹಿಸುತ್ತದೆ. ನೋಡಿ, ನಾವು ಮಕ್ಕಳಾಗಿದ್ದಾಗ – ನಾವೀಗಲೂ ಮಗುವೇ! ಈಗಲೂ ನಾವು ಮಗುವೆಂದೇ ಭಾವನೆ; ನಾವೆಂದೂ ಬೆಳೆಯಲೇ ಇಲ್ಲ – ಆದರೆ ನಾವು ಮಕ್ಕಳಾಗಿದ್ದಾಗ ಏನಾದರೂ ತೊಂದರೆಯಾದರೆ, ಏನು ಮಾಡುತ್ತಿದ್ದೆವು? ಅಳುತ್ತಾ ಅಮ್ಮನ ಬಳಿಗೆ ಓಡುತ್ತಿದ್ದೆವು; ಹಾಗೆಯೇ ಸ್ವಲ್ಪ ದೊಡ್ಡವರಾದಾಗ, ಅಳುತ್ತಾ ಅಪ್ಪನ ಬಳಿಗೆ ಓಡುತ್ತಿದ್ದೆವು. ಅಂದರೆ ದುಃಖವಾದರೆ ತಾಯಿ ಅಥವಾ ತಂದೆಗೆ ಅದನ್ನು ಕೊಟ್ಟು ಖಾಲಿಯಾಗುತ್ತಿದ್ದೆವು. ಓಡಿ ಬಂದು ತಾಯಿಯ ಮಡಿಲಲ್ಲಿ ಕುಳಿತು, ಅಳು ನಿಲ್ಲಿಸಿ, ಮತ್ತೆ ನಗಲು ಪ್ರಾರಂಭಿಸಿ, ದುಃಖವನ್ನೆಲ್ಲ ಮರೆಯುತ್ತಿದ್ದೆವು. ದೊಡ್ಡವರಾದಂತೆ, ಶಾಲೆ ಮತ್ತು ಕಾಲೇಜಿನ ವೇಳೆಯಲ್ಲಿ ನಮ್ಮ ತಾಯಿ ಅಥವಾ ತಂದೆಯ ಹತ್ತಿರ ಹೇಳಲಾಗದೇ ಇದ್ದುದ್ದನ್ನು, ನಮ್ಮ ಅಧ್ಯಾಪಕರ ಅಥವಾ ಗುರುಗಳ ಬಳಿ ಹೋಗಿ, ನಮ್ಮ ಮನಸ್ಸಿನಲ್ಲಿದ್ದುದ್ದನ್ನು ಹೇಳಿ, ಹಗುರ ಮಾಡಿಕೊಳ್ಳುತ್ತಿದ್ದೆವು. ಇಂದು ಈ ಪ್ರಕ್ರಿಯೆಯನ್ನು ಮರೆತುಬಿಟ್ಟಿದ್ದೇವೆ.
ಹೀಗೆ ಪ್ರಾಚೀನ ಸಮಾಜದಲ್ಲಿದ್ದಂತಹ ವ್ಯವಸ್ಥೆಯಲ್ಲಿ ನಿಮ್ಮ ದುಃಖವನ್ನು ನಿಮ್ಮ ತಾಯಿ, ತಂದೆ, ದೈವ ಅಥವಾ ದೇವರಿಗೆ ಸಮರ್ಪಿಸಿ, ಖಾಲಿಯಾಗಿ ಮತ್ತು ಶಾಂತರಾಗಿ, ಸದಾ ಮುಗುಳ್ನಗುತ್ತಿರುವುದೇ ಎಲ್ಲಾ ಧರ್ಮಗಳ ಗುರಿ! ಆಧ್ಯಾತ್ಮವೆಂದರೆ ಇದೇನೆ. ಆಧ್ಯಾತ್ಮವೆಂದರೇನು? ಸುಮ್ಮನೆ ಒಂದು ಮೂಲೆಯಲ್ಲಿ ಕುಳಿತು ಏನನ್ನೋ ಮಾಡುವುದಲ್ಲ; ಆಧ್ಯಾತ್ಮವೆಂದರೆ ಸ್ವಂತಿಕೆಯ ಭಾವ; ಸ್ವಂತಿಕೆಯ ವಿಸ್ತರಣೆ.
ಎಲ್ಲಿ ಸ್ವಂತಿಕೆಯು ಅಂತ್ಯವಾಗುವುದೋ ಅಲ್ಲಿ ಲಂಚಕೋರತನ ಪ್ರಾರಂಭವಾಗುವುದು. ತಮ್ಮವರೊಡನೆಯೇ ಯಾರೂ ಭ್ರಷ್ಟರಾಗಿರುವುದಿಲ್ಲ. ಆದ್ದರಿಂದ ಕಾನೂನಿನಿಂದಲೇ ಭ್ರಷ್ಟಾಚಾರವನ್ನು ತೊಲಗಿಸಬಹುದೆಂದು ನಾವು ನಂಬುವುದಿಲ್ಲ. ಕಾನೂನು ಅತ್ಯಗತ್ಯ, ಕಠಿಣವಾದ ಕಾನೂನಿನ ಅವಶ್ಯಕತೆಯಿದೆ, ಆದರೆ ಅದರೊಂದಿಗೆ ಜನರಲ್ಲಿ ಸ್ವಂತಿಕೆಯ ಭಾವವಿರಬೇಕು. ‘ಎಲ್ಲರೂ ನಮ್ಮವರೇ.’ ಸ್ವಂತಿಕೆಯ ಅಲೆಯೊಂದು ಜಾಗೃತವಾಗಬೇಕು.
ಇದು ಭಾರತದ ವೈಶಿಷ್ಟ್ಯತೆಯಾಗಿದೆ – ಎಲ್ಲರನ್ನೂ ಒಪ್ಪಿಕೊಳ್ಳುವ ಮತ್ತು ಆದರದಿಂದ ಸ್ವೀಕರಿಸುವ ವಿಶಿಷ್ಟ ಕಲೆಯ ಅರಿವಿತ್ತು. ಎಲ್ಲೋ ಮಧ್ಯದಲ್ಲಿ ಅದನ್ನು ಕಳೆದುಕೊಂಡೆವು. ಇಂದಿಗೂ ಸಹ ಹಳ್ಳಿಗಳಲ್ಲಿ ಇದರ ಅಸ್ತಿತ್ವವಿದೆ.
ನಾವು ಸದಾ ಹೇಳುತ್ತಿರುತ್ತೇವೆ, ಈ ಪ್ರಪಂಚದಿಂದ ಕಲಿಯಲು ಬೇಕಾದಷ್ಟಿದೆಯೆಂದು. ಇಡೀ ಪ್ರಪಂಚವೇ ನಮ್ಮ ಪರಿವಾರ; ಕಲಿಯಲು ಬಹಳಷ್ಟಿದೆ. ಜಪಾನೀಯರಿಂದ ಏನು ಕಲಿಯಬೇಕಾಗಿದೆ, ನಿಮಗೆ ಗೊತ್ತೆ? ಸಂಘಟಿತ ಕಾರ್ಯ, ಅವರಿಂದ ಕಲಿಯಬೇಕಾಗಿದೆ. ಅಂತಹ  ಮಹತ್ಕಾರ್ಯವನ್ನು ನಿರ್ವಹಿಸುತ್ತಾರೆ, ಅದು ಅತ್ಯಂತ ಬಲಶಾಲಿಯಾಗಿದೆ!
ಹಾಗೆಯೇ ಜರ್ಮನ್‍ರಿಂದ ನಾವು ನಿಖರತೆಯನ್ನು ಕಲಿಯಬೇಕು. ಅವರೇನೇ ಮಾಡಿದರೂ, ಅದರಲ್ಲಿ ಒಂದು ನ್ಯೂನತೆಯನ್ನೂ ಕಂಡುಹಿಡಿಯಲಾರಿರಿ. ಅವರ ಯಂತ್ರೋಪಕರಣಗಳಲ್ಲಿ ಒಂದೂ ಕಣ್ತಪ್ಪಿ ನಡೆಯುವುದಿಲ್ಲ – ಅಂತಹ ನಿಖರತೆ. ಸಮಯವೆಂದರೆ, ಸರಿಯಾದ ಸಮಯಕ್ಕೆ ಆಗಮಿಸುತ್ತಾರೆ.
ಒಂದು ಸಲ ಜರ್ಮನಿಯಲ್ಲಿ ನಮ್ಮದೊಂದು ಕಾರ್ಯಕ್ರಮವಿತ್ತು. ಕಾರ್ಯಕ್ರಮವು ೭ ಗಂಟೆಗಿತ್ತು, ಅದಕ್ಕಾಗಿ ೧೦ ನಿಮಿಷ ಮುಂಚೆ ಆಗಮಿಸಿದೆ. ಮೊದಲೇ ಬಂದಿದ್ದರಿಂದ, ಆ ಭಾರಿ ಸಭಾಂಗಣದಲ್ಲಿ ಯಾರೂ ಇರಲಿಲ್ಲ, ಖಾಲಿಯಾಗಿತ್ತು! ನಮ್ಮನ್ನು ಆಹ್ವಾನಿಸಿದ್ದ ವ್ಯಕ್ತಿಯನ್ನು ಕೇಳಿದೆವು, ‘ಓಹ್, ಇಲ್ಲಿ ಯಾರೂ ಇಲ್ಲ? ನಾವು ಬಂದಿದ್ದರೂ, ಇಲ್ಲಿ ಯಾರೂ ಇಲ್ಲದೇ ಇರುವುದು, ಇದು ನಮಗೆ ಮೊದಲ ಬಾರಿ ಅನುಭವವಾಗುತ್ತಿರುವುದು.’ ಅದಕ್ಕವರು, ‘ಗುರೂಜೀ, ಕಾರ್ಯಕ್ರಮ ಪ್ರಾರಂಭವಾಗಲು ಇನ್ನೂ ೭ ನಿಮಿಷವಿದೆ’ ಎಂದರು. ೭ ಗಂಟೆಗೆ ಇನ್ನೂ ಒಂದು ನಿಮಿಷವಿದೆಯೆನ್ನುವ ವೇಳೆಗೆ ಸಭಾಂಗಣವು ಸಂಪೂರ್ಣವಾಗಿ ತುಂಬಿ ಹೋಯಿತು! ಎಲ್ಲರೂ ತಮ್ಮ ತಮ್ಮ ಆಸನಗಳಲ್ಲಿ ಕುಳಿತುಕೊಂಡರು. ಜರ್ಮನ್‍ರಿಂದ ನಾವು ನಿಖರತೆಯನ್ನು ಕಲಿಯಬೇಕು. ಸಮಯವೆಂದರೆ ಸಮಯ; ಮಾತಿಗೆ ದಿಟವಾಗಿ ನಡೆಯುವರು.
ಬ್ರಿಟಿಷರಿಂದ ಏನು ಕಲಿಯಬೇಕಾಗಿದೆ?  ಶಿಷ್ಟಾಚಾರ, ಸೌಜನ್ಯ ಹಾಗೂ ಸಭ್ಯತೆ; ಅವರು ಅತ್ಯಂತ ನಾಗರೀಕ ಜನರು. ತಳ್ಳುವುದು ಅಥವಾ ನೂಕುವುದು ಇಲ್ಲ, ಸರಾಗವಾಗಿ ಓಡಾಡುವರು. ನಾಗರೀಕತೆಯನ್ನು ಅವರಿಂದ ಕಲಿಯಬೇಕು.
ಅಮೇರಿಕದವರಿಂದ ಏನು ಕಲಿಯಬೇಕೆಂದು ತಿಳಿದಿದೆಯೇ? ಕ್ರಯ-ವಿಕ್ರಯದ ಕೌಶಲ್ಯ. ಅಮಾವಾಸ್ಯೆಯ ದಿನವೂ ಚಂದ್ರನನ್ನು ಮಾರಿಬಿಡುತ್ತಾರೆ! ಅಂತಹ ಕೊಳ್ಳುವ-ಮಾರುವ ನಿಪುಣತೆ ಅವರಲ್ಲಿದೆ!
ಎಲ್ಲಿ ಏನೂ ಇಲ್ಲವೋ, ಅಲ್ಲಿ ಯಾವುದನ್ನೋ ಸೃಷ್ಟಿಸಿ ಮಾರುತ್ತಾರೆ; ಅಮೇರಿಕನ್ನರ ಕ್ರಯ-ವಿಕ್ರಯದ ನೈಪುಣ್ಯ.
ಅಂತೆಯೇ, ಭಾರತೀಯರಿಂದ ಏನಾದರೂ ಕಲಿಯಬೇಕೆಂದರೆ, ಅದು ಮಾನವೀಯತೆ ಮತ್ತು ಸ್ವಂತಿಕೆಯ ಭಾವ. ಯಾವುದೇ ಹಳ್ಳಿಗೆ ಹೋಗಿ – ಒಂದು ಲೋಟ ಲಸ್ಸೀ (ಮಜ್ಜಿಗೆಯ ಪೇಯ) ಇದ್ದರೆ, ಅದರಲ್ಲಿ ಅರ್ಧ ನಿಮಗೆ ಕೊಟ್ಟು ಉಳಿದರ್ಧ ತಾವು ಕುಡಿಯುತ್ತಾರೆ. ಈ ಭಾವನೆ, ಸ್ವಂತಿಕೆಯ ಭಾವನೆಯನ್ನು ಭಾರತದ ಪ್ರತಿಯೊಂದು ಹಳ್ಳಿಯಲ್ಲೂ ಕಾಣುವಿರಿ. ಭಾರತೀಯನಾಗಿ ಇದನ್ನು ಕಲಿಯಬಹುದು. ಹಿರಿಯರನ್ನು ಗೌರವಿಸುವುದು ಭಾರತದ ವಿಶಿಷ್ಟ ಗುಣ.
ವಿದೇಶಗಳಲ್ಲಿ ಏನಾಗುತ್ತದೆಂದರೆ ಹಿರಿಯರನ್ನು ಮನೆಯಿಂದ ಹೊರಹಾಕುತ್ತಾರೆ. ಒಮ್ಮೊಮ್ಮೆ, ಅವರಿಗೆ ಕಾರ್ಡ್ ರವಾನೆಯಾಗುವುದು; ಫಾದರ್ಸ್ ಡೇ ಅಥವಾ ಮದರ್ಸ್ ಡೇ ಯಂದು ಕಾರ್ಡ್ ಹೋಗುವುದು. ಹಿರಿಯರನ್ನು ಗೌರವಿಸುವುದು – ಇದು ನಮ್ಮ ಸಂಸ್ಕೃತಿ.
ಎಲ್ಲಾ ಧರ್ಮಗಳಲ್ಲೂ, ಹಿಂದೂ, ಇಸ್ಲಾಂ, ಸಿಖ್ ಮತ್ತು ಕ್ರೈಸ್ತರಲ್ಲೂ ಕೂಡ, ಈ ಸಂಪ್ರದಾಯವಿದೆ, ‘ಹಿರಿಯರನ್ನು ಗೌರವಿಸುವುದು.’
ಇದರ ಹಿಂದೆ ವೈಜ್ಞಾನಿಕ ರಹಸ್ಯವಿದೆ, ನಿಮಗೆ ಗೊತ್ತೇ?
ಮನೆಯಲ್ಲಿ ವಿವಾಹವು ನಡೆಯುತ್ತಿದ್ದರೆ, ತುಂಬಾ ಹಿರಿಯ ವ್ಯಕ್ತಿಯಿಂದ ಆಶೀರ್ವಾದವನ್ನು ಪಡೆಯುತ್ತೀರ. ಅಲ್ಲವೇ? ಇದರಲ್ಲಿ  ವೈಜ್ಞಾನಿಕ ಸತ್ಯವಿದೆ; ಅದೇನೆಂದು ನಿಮಗೆ ಗೊತ್ತೇ?
ಯಾರು ಆಶೀರ್ವಾದ ಮಾಡಬಹುದೆಂದು ನಿಮಗೆಂದಾದರೂ ಕುತೂಹಲ ಮೂಡಿದೆಯೇ? ತನಗಾಗಿ ಏನೂ ಬೇಡವೆನ್ನುವವನು - ಆ ವ್ಯಕ್ತಿಯು ಇತರರನ್ನು ಹರಸಬಹುದು. ವ್ಯಕ್ತಿಯು ವಯಸ್ಸಾದಷ್ಟೂ ಹೆಚ್ಚು ತೃಪ್ತನಾಗಿರುತ್ತಾನೆ. ತನ್ನ ಎಲ್ಲ ಲೌಕಿಕ ಜವಾಬ್ದಾರಿಗಳನ್ನು ಪೂರ್ಣಗೊಳಿಸಿ, ಎಲ್ಲಾ ಆಸೆಗಳನ್ನು ಪೂರೈಸಿದ ಮೇಲೆ ಅವನು ಸಂತುಷ್ಟನಾಗಿರುತ್ತಾನೆ. ಈಗ ಅವನು ಬೇರೆಯವರನ್ನು ಹರಸಲು ಅರ್ಹ.
ಇದರ ಅರ್ಥ ವಯಸ್ಸಾಗುವ ತನಕ ನೀವು ಸಂತುಷ್ಟರಾಗಿರಬಾರದೆಂದಲ್ಲ, ಹಾಗೆ ಹೇಳುತ್ತಿಲ್ಲ.ಚಿಕ್ಕ ವಯಸ್ಸಿನಲ್ಲೇ ನೀವು ತೃಪ್ತರಾಗಿ, ಒಂದು ವಿಶಿಷ್ಟ ಶಕ್ತಿ ನಿಮ್ಮಲ್ಲಿ ಉದ್ಭವಿಸುತ್ತದೆ, ನಿಮ್ಮ ಕೆಲಸ ಅಷ್ಟೇ ಅಲ್ಲ – ದೈವವು ನಿಮ್ಮ ಕೆಲಸದ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತದೆ- ಪರರ ಆಸೆಗಳನ್ನು ಪೂರೈಸಲೂ ಕೂಡ ದೇವರು ನಿಮಗೆ ಶಕ್ತಿ ನೀಡುತ್ತಾನೆ. ಆದ್ದರಿಂದ ನೀವು ಹರಸಿದಾಗ, ಶೇ.೧೦೦% ರಷ್ಟು ಅದು ಫಲಿಸುವುದು ಖಚಿತ, ಅದರ ಜವಾಬ್ದಾರಿಯನ್ನು ಖಂಡಿತವಾಗಿ ವಹಿಸಿಕೊಳ್ಳಲಾಗುವುದು.
ಆದ್ದರಿಂದ ನಿಮ್ಮ ಮನಸ್ಸು ಸಂತೋಷವಾಗಿರಬೇಕು, ಸಂತೃಪ್ತವಾಗಿರಬೇಕು, ಮನಸ್ಸಿನಲ್ಲಿ ಯಾವುದೇ ಗೊಂದಲವಿರಬಾರದು, ಕೋಪವಿರಬಾರದು – ಇವ್ಯಾವುದೂ ಇರಬಾರದು, ಇದು ಸಣ್ಣ ವಿಷಯ.
ನಮ್ಮ ಐವತ್ತೈದು ವರ್ಷದಲ್ಲಿ, ಇವತ್ತಿನವರೆಗೂ ಒಂದು ಕೆಟ್ಟ ಶಬ್ದವನ್ನು ಉಪಯೋಗಿಸಿಲ್ಲ! ಇವತ್ತಿನವರೆಗೂ, ಒಂದು ಶಾಪ ನಮ್ಮಿಂದ ಬಂದಿಲ್ಲ; ಅದು ನಮ್ಮ ಸ್ವಭಾವವಲ್ಲ. ಕಠೋರ ಮಾತುಗಳನ್ನಾಡುವುದನ್ನು ನೀವು ನಿಲ್ಲಿಸಿದಾಗ, ಬೇರೆಯವರನ್ನು ಹರಸಲು ನಿಮ್ಮೊಳಗಿನಿಂದ ಬಲವನ್ನು ಪಡೆಯುವಿರಿ.
ವಯಸ್ಸು ಹೆಚ್ಚಾದಂತೆ, ಜೀವನದಲ್ಲಿ ನಮಗೆ ತೃಪ್ತಿ ಬರಬೇಕು. ಆದರೆ ಸಾಮಾನ್ಯವಾಗಿ, ಇಂದಿನ ದಿನಗಳಲ್ಲಿ ಇದನ್ನು ಹೆಚ್ಚು ನೋಡಲಾಗುತ್ತಿಲ್ಲ. ಹಿರಿಯರು ತಮ್ಮ ಕೊನೆಯ ಉಸಿರಿನವರೆಗೂ ಕೀಗಳನ್ನು ಹಿಡಿದುಕೊಂಡಿರುತ್ತಾರೆ. ತಮ್ಮ ಮಕ್ಕಳಿಗೆ ಅದನ್ನು ಕೊಡುವುದಿಲ್ಲ. ಬ್ಯಾಂಕಿನಲ್ಲಿ ಹಣವಿಟ್ಟು ಸಾಯುತ್ತಾರೆ, ಮತ್ತು ಮಕ್ಕಳು ಅದಕ್ಕಾಗಿ ಜಗಳವಾಡುತ್ತಾರೆ.
ಇದನ್ನು ಬದಲಾಯಿಸಬೇಕು. ಯುವಪೀಳಿಗೆಯು ಮುಂದೆ ಬರಲು ಪ್ರೋತ್ಸಾಹಿಸಬೇಕು.
ಉತ್ತರ ಪ್ರದೇಶದ ಮುಖ್ಯಮಂತ್ರಿಯು ಒಬ್ಬ ಯುವಕನೆಂದು ಕೇಳಿ ನಮಗೆ ಸಂತೋಷವಾಗಿದೆ, ಮತ್ತು ಸಾರ್ವಜನಿಕರು ಆಶಾಪೂರ್ಣರಾಗಿದ್ದಾರೆ. ೧೬ ಜಿಲ್ಲೆಗಳಿಗೆ ಭೇಟಿ ನೀಡಿ ಹಿಂದಿರುಗುತ್ತಿದ್ದೇವೆ. ಹಳ್ಳಿಗಳಲ್ಲಿ ತುಂಬಾ ಬಡತನವಿದೆ. ದೇಶದಲ್ಲಿ, ರಾಜ್ಯದಲ್ಲಿ ಬದಲಾವಣೆಯಾಗುವುದೆಂದು ಜನರು ಆಸೆಯಿಟ್ಟುಕೊಂಡಿದ್ದಾರೆ. ಎಲ್ಲರಿಗೂ, ಎಲ್ಲಾ ಜಾತಿ, ಧರ್ಮದವರಿಗೂ ನ್ಯಾಯ ಸಿಗುವುದೆಂದು ಜನರು ಆಶಿಸುತ್ತಿದ್ದಾರೆ – ಈ ಆಶೆಯಿಂದ ಜನರು ಕಾಯುತ್ತಿದ್ದಾರೆ. ನಮ್ಮ ಯುವ ಸಚಿವಾಲಯ ಸಮಿತಿಯು ಇದನ್ನು ಪೂರ್ಣಗೊಳಿಸುವುದೆಂದು ನಮಗೆ ಭರವಸೆಯಿದೆ – ಇದು ನಮ್ಮ ಭಾವನೆ. ಉತ್ತರ ಪ್ರದೇಶವನ್ನು ಇನ್ನೂ ಮುಂದಕ್ಕೆ ತೆಗೆದುಕೊಂಡು ಹೋಗಬೇಕೆಂದು ನಮ್ಮ ಪ್ರಾರ್ಥನೆ ಮತ್ತು ಹಾರೈಕೆ. ಬೆಳವಣಿಗೆಯಿದೆ, ಆದರೆ ಇನ್ನೂ ದೂರ ಸಾಗಬೇಕಾಗಿದೆ.
ಭ್ರಷ್ಟಾಚಾರವನ್ನು ತೊಲಗಿಸಬೇಕು, ಹಿಂಸಾಚಾರವನ್ನು ತೊಡೆದುಹಾಕಬೇಕು – ಸಮಾಜದಲ್ಲಿ ಯಾವುದೇ ಸ್ವರೂಪದಲ್ಲಿ ಅಥವಾ ರೀತಿಯಲ್ಲಿ ಹಿಂಸಾಚಾರವಿರಬಾರದು, ಮಹಿಳೆಯರ ವಿರುದ್ಧ ಹಿಂಸೆಯನ್ನು ನಿಲ್ಲಿಸಬೇಕು – ಇವೆಲ್ಲದರ ಹಿಂದಿರುವುದು, ಒತ್ತಡ. ಒತ್ತಡವನ್ನು ತೊಲಗಿಸಿದರೆ, ವ್ಯಕ್ತಿಯ ಮನಸ್ಸು ಶಾಂತಿಯಿರುತ್ತದೆ ಮತ್ತು ಹೃದಯವು ವಿಕಾಸಗೊಳ್ಳುತ್ತದೆ, ಆಗ ಸಮಾಜದ ಪಿಡುಗುಗಳು ಮಾಯವಾಗುತ್ತವೆ. ಇದನ್ನೇ ನಾವು ಹೇಳಬೇಕಾಗಿರುವುದು.
ಈಗ ತಿಳಿಯಿತೇ ಹೇಗೆ ಆಶೀರ್ವಾದವನ್ನು ತೆಗೆದುಕೊಳ್ಳುವುದು ಮತ್ತು ಕೊಡುವುದೆಂದು? ನೀವು ಸಂತೃಪ್ತರಾಗಿದ್ದಾಗ!
ಆಗಲಿ, ಇನ್ನೊಂದು ವಿಚಾರವನ್ನು ನಿಮಗೆ ತಿಳಿಸಬೇಕು.ಇವತ್ತು ರಾತ್ರಿ ಒಂದು ಪಟ್ಟಿ ಮಾಡಿ. ನಿಮ್ಮ ಅವಶ್ಯಕತೆಗಳೇನು ಮತ್ತು ಸಮಾಜದಲ್ಲಿ ಮತ್ತು ನಿಮ್ಮ ಜೀವನದಲ್ಲಿ ಯಾವ ಜವಾಬ್ದಾರಿಗಳನ್ನು ತೆಗೆದುಕೊಳ್ಳುತ್ತಿದ್ದೀರ? ನಿಮ್ಮ ಜವಾಬ್ದಾರಿಗಳ ಪಟ್ಟಿ ಮತ್ತು ನಿಮ್ಮ ಅವಶ್ಯಕತೆಗಳ ಪಟ್ಟಿ. ನಿಮ್ಮ ಜವಾಬ್ದಾರಿಗಳು ಹೆಚ್ಚಾಗಿದ್ದು ಅಗತ್ಯಗಳು ಕಡಿಮೆಯಿದ್ದರೆ, ನಿಮ್ಮ ಜೀವನ ಶಾಂತಿಯುತವಾಗಿರುತ್ತದೆ. ನಿಮ್ಮ ಆಗತ್ಯಗಳು ಹೆಚ್ಚಾಗಿದ್ದು, ಜವಾಬ್ದಾರಿಗಳು ಕಡಿಮೆಯಿದ್ದರೆ, ಅಗ ನಮ್ಮ ಜೀವನವು ದುಃಖದತ್ತ ಸಾಗುತ್ತದೆ. ಯಾರಿಗೆ ಸ್ವಂತ ಅಗತ್ಯತೆಗಳಿಲ್ಲವೋ ಆದರೆ ಸಮಾಜದ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾನೋ, ಅವನೇ ನಾಯಕ, ಸಮಾಜ ಸೇವಕ ಮತ್ತು ಅವನು ರಾಜಕಾರಣವನ್ನು ಸೇರಲು ಯೋಗ್ಯ – ತನಗಾಗಿ ಯಾವುದರ ಅವಶ್ಯಕತೆಯೂ ಇಲ್ಲದ, ಆದರೆ ಎಲ್ಲರಿಗೂ ಬಯಸುವವನು. ‘ಎಲ್ಲರ ಜವಾಬ್ದಾರಿ ನಾನು ವಹಿಸಿಕೊಳ್ಳುತ್ತೇನೆ’, ಇಂತಹ ಸೇವಾ ಮನೋಭಾವಿರುವವನು.
ಇದನ್ನು ನಾವೆಂದೂ ಗಮನಿಸುವುದಿಲ್ಲ; ಒಂದು ಸಾರಿ ಕುಳಿತು ಇದನ್ನು ಗಮನಿಸಬೇಕು.
ಎಲ್ಲರೂ ಸನ್ಯಾಸಿಗಳಾಗಬೇಕೆಂದು ನಾವು ಹೇಳುತ್ತಿಲ್ಲ;  ‘ನನಗೇನೂ ಬೇಡ’ ಎನ್ನಲು ಸಾಧ್ಯವಿಲ್ಲ. ಪರವಾಗಿಲ್ಲ, ನಿಮಗೇನು ಬೇಕೋ ಅದರ ಪಟ್ಟಿಯನ್ನು ಮಾಡಿ – ಕೇಳಿ, ನೀವೇನು ಕೇಳಿದರೂ ಸಿಗುವುದು, ಆದರೆ ಅದಕ್ಕೆ ತಕ್ಕಂತೆ ನಿಮ್ಮ ಜವಾಬ್ದಾರಿಗಳನ್ನೂ ಹೆಚ್ಚಿಸಿಕೊಳ್ಳಿ. ನಿಮ್ಮ ಬಗ್ಗೆ ಜವಾಬ್ದಾರಿ ತೆಗೆದುಕೊಳ್ಳುತ್ತಿರುವಿರಿ, ನಂತರ ನಿಮ್ಮ ಪರಿವಾರ, ನಿಮ್ಮ ಸಮುದಾಯ, ನಿಮ್ಮ ಸಮಾಜ – ಇನ್ನೂ  ವಿಸ್ತಾರಗೊಳಿಸಿ, ಇನ್ನೂ ವೃದ್ಧಿಸಿ. ಅದರಿಂದ ಎಷ್ಟು ಸಂತೋಷ ದೊರೆಯುವುದೆಂದು ನಿಮಗೇ ತಿಳಿಯುವುದು. ಇದು ಅತ್ಯಗತ್ಯ.
ಅಂತಿಮವಾಗಿ, ಅನೇಕರಿಗೆ ಜೀವನ ಕಲೆಯೆಂದರೆ ಏನೆಂದು ಅರ್ಥ ಮಾಡಿಕೊಳ್ಳಲಾಗುತ್ತಿಲ್ಲ –ಜೀವನ ಕಲೆಯೆಂದರೆ ಏನು? ‘ಇದರ ಬಗ್ಗೆ ಸ್ವಲ್ಪ ತಿಳಿಸಿ’ – ಕೆಲವರ ಮನಸ್ಸಿನಲ್ಲಿ ಈ ವಿಚಾರ ನಡೆಯುತ್ತಿರುತ್ತದೆ.
ಜೀವನ ಕಲೆಯಲ್ಲಿ ಐದು ಮೂಲ ತತ್ವಗಳಿವೆ, ಕೇವಲ ಐದು ತತ್ವಗಳು.
ಜೀವನದಲ್ಲಿ ಸಂತೋಷ ಬರುತ್ತದೆ, ದುಃಖ ಬರುತ್ತದೆ, ಸುಖ-ದುಃಖಗಳಲ್ಲಿ ಮನಸ್ಸನ್ನು ನಿಭಾಯಿಸುವುದು, ಸಮಚಿತ್ತತೆಯನ್ನು ಕಾಪಾಡುವುದು ಮೊದಲನೆಯ ಪಾಠ, ಮೊದಲನೆಯ ತತ್ವ. ಇದು ಅವಶ್ಯಕತೆಯೋ ಅಲ್ಲವೋ?  ನಮ್ಮ ಮನಸ್ಸನ್ನು ನಿಭಾಯಿಸುವುದು ಅಗತ್ಯ – ಸುಖದಲ್ಲಾಗಲಿ, ದುಃಖದಲ್ಲಾಗಲಿ, ಮನಸ್ಸನ್ನು ನಿಭಾಯಿಸುವುದು ಆವಶ್ಯಕ. ಮೊದಲನೆಯ ಸಂಗತಿ!
ವಿರೋಧಾತ್ಮಕವಾದಂತಹ ಸಂಗತಿಗಳು ನಡೆಯುವುದು – ಕೆಲವೊಮ್ಮೆ ಸೋಲು, ಕೆಲವೊಮ್ಮೆ ಗೆಲುವು; ಕೆಲವು ಸಾರಿ ಲಾಭ, ಇನ್ನು ಕೆಲವು ಸಾರಿ ನಷ್ಟ; ಕೆಲವು ಸಾರಿ ಸಂತೋಷ, ಕೆಲವು ಸಾರಿ ದುಃಖ. ಇವೆಲ್ಲ ಬಂದು ಹೋಗುತ್ತಿರುತ್ತದೆ. ಆದರೆ ಆಂತರಿಕವಾಗಿ ಒಡೆದು ಹೋದರೆ, ಮನಸ್ಸು ಪೂರ್ಣವಾಗಿ ಕುಸಿದು ಬಿದ್ದರೆ, ಆಗ ಏನು ಮಾಡಲೂ ಸಾಧ್ಯವಾಗುವುದಿಲ್ಲ. ಮನಸ್ಸನ್ನು ನಿಭಾಯಿಸುವ ಕಲೆಯೇ ಮೊದಲನೆಯ ಪಾಠ.
ಜೀವನ ಕಲೆಯ ಎರಡನೆಯ ತತ್ವವೆಂದರೆ, ವ್ಯಕ್ತಿಯು ಹೇಗೇ ಇರಲಿ ಅವನನ್ನು ಅಥವಾ ಅವಳನ್ನು ಇದ್ದ ಹಾಗೆಯೇ ಸ್ವೀಕರಿಸಿ. ನಮಗೆ ಎಲ್ಲರೂ ನಮ್ಮ ರೀತಿಯೇ ಇರಬೇಕೆಂದೆನಿಸುತ್ತದೆ. ಅದು ಹೇಗೆ ಸಾಧ್ಯ? ಅತ್ತೆಗೆ ಸೊಸೆ ತನ್ನ ಹಾಗೆಯೇ ಇರಬೇಕೆಂಬ ಆಸೆ. ‘ಯಾವುದನ್ನು ನಾನು ಸರಿಯೆಂದು ಹೇಳುವೆನೋ, ಅದನ್ನು ಅವಳು ಸ್ವೀಕರಿಸಬೇಕು.’
ತಂದೆಯು, ಮಗನು ತನ್ನ ಹಾಗೆಯೇ ನಡೆಯಬೇಕೆಂದು ಆಶಿಸುತ್ತಾನೆ.
ಇದರಿಂದ ಮನೆಯಲ್ಲಿ, ಸಮಾಜದಲ್ಲಿ ಸಂಘರ್ಷ ಶುರುವಾಗುತ್ತದೆ. ಆದ್ದರಿಂದಲೇ ನಾವು ಹೇಳುವುದು, ಜನರನ್ನು ಇದ್ದ ಹಾಗೆಯೇ ಸ್ವೀಕರಿಸಿ. ಅವರು ಬೆಳೆಯಲು ಸ್ವಲ್ಪ ಸಮಯ ಕೊಡಿ.  ಅವರದೇ ಗತಿಯಲ್ಲಿ  ಅವರು ಮುನ್ನಡೆಯುತ್ತಾರೆ. ಇದು ಎರಡನೆಯ ತತ್ವ.
ಮೂರನೆಯದಾಗಿ, ಇನ್ನೊಬ್ಬನು ನಿಮ್ಮ ಬಗ್ಗೆ ಏನು ಆಲೋಚಿಸುತ್ತಿದ್ದಾನೆಂದು ಚಿಂತಿಸಬೇಡಿ. ಈ ಜಗತ್ತಿನಲ್ಲಿ ಪ್ರತಿಯೊಬ್ಬನಿಗೂ ತನ್ನದೇ ಆದ ಆಲೋಚನಾ ಲಹರಿಯಿರುತ್ತದೆ, ತನ್ನದೇ ಅಭಿಪ್ರಾಯವನ್ನು ಹೊಂದಿರುತ್ತಾನೆ. ಅವನು ನಿಮ್ಮ ಬಗ್ಗೆ ಏನು ಬೇಕಾದರೂ ತಿಳಿದುಕೊಳ್ಳಲಿ ಬಿಡಿ.  ಚಿಂತಿಸಬೇಡಿ.  ಅವನು ಏನು ತಿಳಿದುಕೊಳ್ಳುತ್ತಾನೋ ಎಂದು ಯೋಚಿಸುತ್ತಾ ನೀವು ದುಃಖಪಡುವಿರಿ. ಎಷ್ಟು ಜನ ಈ ರೀತಿ ದುಃಖ ಪಡುವಿರಿ, ಬೇರೆಯವರ ಅಭಿಪ್ರಾಯಗಳ ಬಗ್ಗೆ ಚಿಂತಿಸುತ್ತಾ? ಉಪಯೋಗವಿಲ್ಲದ, ಕಾಲ ಹರಾಣ, ಬದುಕಿನಲ್ಲಿ ವ್ಯರ್ಥವಿದು. ಬದುಕು ಅತ್ಯಮೂಲ್ಯವಾದುದು. ಆದ್ದರಿಂದಲೇ, ನಾವು ಹೇಳುವುದು, ಬೇರೆಯವರ ಅಭಿಪ್ರಾಯಗಳಿಗೆ ಕಾಲ್ಚೆಂಡಾಗಬೇಡಿ. ಇದು ಮೂರನೆಯ ವಿಚಾರ.
ನಾಲ್ಕನೆಯದು, ನಾವು ತಪ್ಪು ಮಾಡಿದಾಗ ಏನು ಹೇಳುತ್ತೇವೆ, ‘ತಪ್ಪು ಆಗಿ ಹೋಯಿತು. ನಾನೇನು ಮಾಡಲು ಸಾಧ್ಯ?’ ಆದರೆ ಅದನ್ನು ಬೇರೆಯವರು ಮಾಡಿದರೆ, ನಾವು ಹೇಳುವುದು, ‘ಅವನು ಉದ್ದೇಶಪೂರ್ವಕವಾಗಿ ಮಾಡಿದ್ದಾನೆ.’ ಬೇರೆಯವರು, ತಪ್ಪುಗಳನ್ನು ತಿಳಿದೂ ಮಾಡಿರುವುದಾಗಿ ಭಾವಿಸುತ್ತೇವೆ. ಇದನ್ನು ಮಾಡಬೇಡಿ, ಕ್ಷಮಿಸಿ.
ಅವನು ಕ್ಷಮೆ ಕೇಳಿದಾಗ, ಆಗ ಕ್ಷಮಿಸುವೆನೆಂದು ಯೋಚಿಸಬೇಡಿ. ಅವರು ಕ್ಷಮೆ ಕೇಳಲಿ ಬಿಡಲಿ, ನಿಮ್ಮ ಮನಸ್ಸು ಮುಕ್ತವಾಗಲು ನಿಮ್ಮ ಪರವಾಗಿ ನೀವೇ ಕ್ಷಮಿಸಿ. ಆನಂದದಿಂದಿರುವಂತೆ ಎಲ್ಲವನ್ನೂ ನಿಭಾಯಿಸುವಿರಿ, ನಿಮಗೆ ಹಗುರವೆನಿಸುವುದು. ಇಲ್ಲದಿದ್ದರೆ, ಯಾರ ಕಡೆ ನಿಮ್ಮ ದ್ವೇಷವಿದೆಯೋ ಆ ವ್ಯಕ್ತಿಯಲ್ಲಿಯೇ ನಿಮ್ಮ ಮನಸ್ಸು ಹಗಲೂ ರಾತ್ರಿ ಮಗ್ನವಾಗಿರುತ್ತದೆ. ನೀವೂ ಅವರಂತೆಯೇ ಆಗುವಿರಿ. ಆದ್ದರಿಂದಲೇ ನಾವು ಹೇಳುವುದು, ಕ್ಷಮಿಸಿ,  ಬೇರೆಯವರು ಕ್ಷಮೆ ಕೇಳಲಿ ಬಿಡಲಿ – ನೀವು ನಿಮ್ಮ ಮನಸ್ಸನ್ನು ಕಾಪಾಡಿಕೊಳ್ಳಿ. ಕ್ಷಮೆ – ಇದೊಂದು ದೊಡ್ಡ ವಿಚಾರ, ಮುಖ್ಯವಾದ ವಿಷಯ. ನೀವು ಸಂತೋಷವಾಗಿರಬೇಕಾದರೆ ಜೀವನದಲ್ಲಿ ಕ್ಷಮೆಯೆಂಬುದನ್ನು ಬರಮಾಡಿಕೊಳ್ಳಬೇಕು.
ಮಹರ್ಷಿ ಅಷ್ಟಾವಕ್ರನು ಹೇಳಿದ್ದಾನೆ, ‘ಮೋಕ್ಷ ಬೇಕಾಗಿದ್ದರೆ, ಕರುಣೆ, ಕ್ಷಮೆ, ಪ್ರಾಮಾಣಿಕತೆ ಮತ್ತು ಸಂತೃಪ್ತಿಯನ್ನು ಆಚರಿಸಬೇಕು; ಇವುಗಳನ್ನು ಜೀವನದ ಅಮೃತದಂತೆ ಪರಿಗಣಿಸಿ.’
ಈಗ ನೀವು ಮಾಡಬಹುದೇ? ನಿಮಗೆ ಯಾರ ಮೇಲೆ ದ್ವೇಷ, ಹಗೆತನವಿದೆಯೋ ಅವರನ್ನು ಈಗಲೇ ಕ್ಷಮಿಸಬಹುದೇ? ಒಂದು ನಿಮಿಷ ಸಾಕು! ನೀವು ಮಾಡಬಹುದೇ? ಎಷ್ಟು ಜನರು ಇದನ್ನು ಮಾಡಲು ಸಾಧ್ಯ?
ನೋಡಿ ನಾವೆಷ್ಟು ಸಂತೋಷವಾಗಿಬಿಟ್ಟೆವು, ಮನಸ್ಸು ಎಷ್ಟು ಆನಂದವಾಗಿದೆ. ಕ್ಷಮಿಸಲು ನಿಮಗೆ ಕಷ್ಟವೆನಿಸಿದರೆ, ನಿಮಗಿನ್ನೊಂದು ಆಯ್ಕೆ ನೀಡುತ್ತೇನೆ. ಒಬ್ಬ ಗುರು ನಿಮ್ಮ ನಗರಕ್ಕೆ ಬಂದಾಗ ನಿಮ್ಮ ಕರ್ತವ್ಯವೇನು?  ದಕ್ಷಿಣೆ ಕೊಡುವುದು (ದಾನ ನೀಡುವುದು).
ದಕ್ಷಿಣೆಯ ರೂಪದಲ್ಲಿ ಎರಡು ವಸ್ತುಗಳನ್ನು ನಿಮ್ಮಿಂದ ಕೇಳಲು ಬಯಸುತ್ತೇನೆ – ಒಂದು, ನೀವು ಯಾರನ್ನಾದರೂ ದ್ವೇಷಿಸುತ್ತಿದ್ದರೆ ಆ ದ್ವೇಷವನ್ನು ದಕ್ಷಿಣೆಯಂತೆ ನಮಗೆ ಕೊಟ್ಟುಬಿಡಿ. ನೀವು ಅವರೊಂದಿಗೆ ಸಿಹಿ ಹಂಚಿಕೊಂಡು ನಿಮ್ಮ ಸಂಬಂಧವನ್ನು ಸುಧಾರಿಸಿಕೊಳ್ಳಿ. ಎರಡನೆಯದಾಗಿ, ನಿಮಗೇನಾದರೂ ಕಷ್ಟಗಳಿದ್ದರೆ ಅದನ್ನೂ ದಕ್ಷಿಣೆಯ ರೂಪದಲ್ಲಿ ನಮಗೆ ಕೊಡಿ.
ನಿಮ್ಮ ಚಿಂತೆಗಳನ್ನು ನಮಗೆ ಕೊಡಿ. ಇವೆರಡನ್ನೇ ದಕ್ಷಿಣೆಯನ್ನಾಗಿ ನಿಮ್ಮಿಂದ ನಾನು ಬಯಸುವುದು. ಜೀವನದಲ್ಲಿ ನೀವು ನಗುತ್ತಿರಿ, ಮುಂದೆ ನಡೆಯಿರಿ, ಸೇವೆಯಲ್ಲಿ ತೊಡಗಿರಿ ಮತ್ತು ಎಲ್ಲರ ಸೇವೆ ಮಾಡಿ. ಅದು ದೇವರ ಪೂಜೆ.
‘ಏನ ಕೇನ ಪ್ರಕಾರೇಣ ಯಸ್ಯ ಕಸ್ಯಾಪಿ ದೇಹಿನಃ ಸಂತೋಷಂ ಜನೇತ್ ಪ್ರಾಜ್ಞ್ಯಾ ತದೇವೇಶ್ವರ ಪೂಜನಮ್’
ಪೂಜೆಯೆಂದರೇನು? ಏನಾದರಾಗಲಿ, ಎಲ್ಲರ ಹೃದಯದಲ್ಲೂ ಆನಂದವನ್ನು, ತೃಪ್ತಿಯನ್ನು ಜಾಗೃತಗೊಳಿಸಿ – ಇದು ದೇವರ ಅತ್ಯುನ್ನತ ಪೂಜೆ. ನಮ್ಮ ಪೂರ್ವಿಕರು ಎಂತಹ ಸುಂದರ ವಿಚಾರವನ್ನು ತಿಳಿಸಿದ್ದಾರೆ!
ಹಾಗೂ ಐದನೆಯದಾಗಿ, ಜೀವನ ಕಲೆಯ ಐದನೆಯ ತತ್ವ ವರ್ತಮಾನದಲ್ಲಿರುವುದು. ಈಗ! ಈಗ! ಈಗ! ಹಿಂದಿನ ಸಮಯವು ಹೇಗೆ ಕಳೆಯಿತೋ, ಅದನ್ನು ವಿಶ್ಲೇಷಿಸಿ, ಅದಕ್ಕಾಗಿ ಅಳುವುದರಿಂದ ನಿಮಗೇನೂ ಸಿಗುವುದಿಲ್ಲ. ಭೂತದಲ್ಲಿ ಕಾಲ ಹರಣ ಮಾಡಬೇಡಿ. ನಾವು ಶೇ. ೭೦% ರಿಂದ ೮೦% ರಷ್ಟು ಸಮಯವನ್ನು ಕಳೆದುಹೋದ ವಿಷಯಗಳ ಕುರಿತು ವಿಶ್ಲೇಷಿಸುತ್ತೇವೆ, ‘ಏಕೆ ಹೀಗಾಯಿತು? ಹೇಗಾಯಿತು?’
ಕಳೆದುಹೋದುದರ ಬಗ್ಗೆ ಪಶ್ಚಾತ್ತಾಪ ಪಡುವುದು ಮೂರ್ಖತನ. ಭೂತದಿಂದ ಪಾಠವನ್ನು ಕಲಿಯುವುದು, ವರ್ತಮಾನದಲ್ಲಿ ಆನಂದವಾಗಿ ಮುಂದೆ ನಡೆಯುವುದು ಬುದ್ಧಿವಂತಿಕೆ.
ಇದು ಜೀವನ ಕಲೆ.
ಈಗ ನೀವು ಹೇಳಬಹುದು, ‘ಗುರೂಜೀ, ಇದು ಕೇಳಲು ತುಂಬಾ ಚೆನ್ನಾಗಿದೆ, ಆದರೆ ಜೀವನದಲ್ಲಿ ಅಳವಡಿಸಿಕೊಳ್ಳಲು ಕಷ್ಟವೆನಿಸುತ್ತದೆ.’
ಅದಕ್ಕೆ ನಾನು ಹೇಳುವುದು, ‘ಸುದರ್ಶನ ಕ್ರಿಯೆ, ಪ್ರಾಣಾಯಾಮ ಮಾಡಿ, ಹೇಗೆ ಇದು ಸುಲಭವಾಗಿ ವ್ಯಕ್ತವಾಗುವುದೆಂದು ನೋಡಿ.’
ಇಂದು ಜಗತ್ತಿನಾದ್ಯಂತ ಜನರು ಇದನ್ನು ಅಭ್ಯಾಸ ಮಾಡುತ್ತಿದ್ದಾರೆ, ಎಂತಹ ದೊಡ್ಡ ಪರಿವರ್ತನೆ ಅವರ ಜೀವನದಲ್ಲಾಗಿದೆ.
ನಾವು ಇರಾಕಿಗೆ ಮೂರು ಬಾರಿ ಹೋಗಿದ್ದೇವೆ. ಅಲ್ಲಿನ ಜನರು, ‘ಅಲ್ಲಿ ಕೆಂಪು ಪ್ರದೇಶವಿದೆ. ಅಲ್ಲಿಗೆ ಹೋಗಲು ನಿಮ್ಮನ್ನು ನಾವು ಬಿಡುವುದಿಲ್ಲ’ ಎಂದು ಹೇಳಿದರು. ಇರಾಕ್ ಸರ್ಕಾರವು ನಮಗೆ ೧೨ ರಕ್ಷಣಾ ವಾಹನಗಳನ್ನು ನೀಡಿತ್ತು – ೨ ಟ್ಯಾಂಕ್‍ಗಳು, ಮುಂದೆ ಒಂದು, ಹಿಂದೆ ಇನ್ನೊಂದು ಮತ್ತು ಸುತ್ತಲೂ ಶಸ್ತ್ರಧಾರಿಗಳಾದ ಗನ್‍ಮೆನ್‍ಗಳಿಂದ ಕೂಡಿದ್ದ ಕಾರ್‍ಗಳು. ‘ಸಾರ್ವಜನಿಕರನ್ನು ಭೇಟಿ ಮಾಡಲು ಇಲ್ಲಿಗೆ ಬಂದಿರುವೆನು. ಈ ರಕ್ಷಣಾದಳದೊಂದಿಗೆ ಕುಳಿತುಕೊಳ್ಳಲು ಬಂದಿಲ್ಲ’ ಎಂದು ನಾವು ಹೇಳಿದೆವು.
‘ನೀವು ಕೆಂಪು ಪ್ರದೇಶವೆಂದು ಕರೆಯುವ ಸ್ಥಳಕ್ಕೆ ನಾವು ಹೋಗಲು ಬಯಸುತ್ತೇವೆ.’
‘ಅಲ್ಲಿ ಭಾರೀ ಅಪಾಯವಿದೆ. ಅಲ್ಲಿಗೆ ಹೋಗಬೇಡಿ. ಅಲ್ಲಿಗೆ ಹೋಗಲು ನಿಮಗೆ ಅನುಮತಿ ನೀಡಲಾರೆವು’ ಎಂದರು.
ನಾವು ಒತ್ತಾಯ ಮಾಡಿದೆವು. ಕೆಲವು ಸಾರಿ ಒತ್ತಾಯ ಒಳ್ಳೆಯದು.  ನಾವು ಹೋಗಲೇಬೇಕೆಂದು ಒತ್ತಾಯಿಸಿದೆವು. ಕಡೆಗೆ ಅವರು, ‘ಆಗಲಿ, ಏನು ಮಾಡುವುದು?  ಈ ಅತಿಥಿಗಳು ಬಂದು ತುಂಬಾ ಒತ್ತಾಯಿಸುತ್ತಿದ್ದಾರೆ. ಹೋಗಲಿ’ ಎಂದರು. ನಾವು ಹೋದೆವು. ಅಲ್ಲಿ ಶಿಯಾ ಸಮಿತಿಯನ್ನು ಭೇಟಿ ಮಾಡಿದೆವು. ನಮ್ಮನ್ನು ಹಾರ್ದಿಕವಾಗಿ ಸ್ವಾಗತಿಸಿದರು. ಅಲ್ಲಿನ ಗಿರಿಜನರನ್ನು ಭೇಟಿ ಮಾಡಿ ಮಾತನಾಡಿದೆವು. ಅವರೆಂದರು, ‘ಗುರೂಜೀ, ಇದು ನಿಮ್ಮ ಎರಡನೆಯ ಮನೆ. ನಮ್ಮನ್ನು ಬಿಡಬೇಡಿ. ಇಲ್ಲೇ ಇದ್ದು ಬಿಡಿ.’ ಅತ್ಯಂತ ಪ್ರೀತಿಯಿಂದ ನಮ್ಮನ್ನು ಸ್ವಾಗತಿಸಿದರು.
ಒಂದು ಶಿಯಾ ಹಳ್ಳಿಯಿಂದ ಪರಿವಾರವುಳ್ಳ ೮೦೦೦ ಜನರನ್ನು ಹೊರಹಾಕಲಾಗಿತ್ತು. ಸುನ್ನಿ ಇಮಾಮ್‍ರವರೊಂದಿಗೆ ನಾವು ಆ ಶಿಯಾ ಹಳ್ಳಿಗೆ ಹೋಗಿ, ಎರಡೂ ಪಕ್ಷದವರನ್ನು ಕೂರಿಸಿ ಮಾತನಾಡಿಸಿದೆವು. ನಮಗೆ ಭಾಷೆ ಗೊತ್ತಿಲ್ಲ ಏಕೆಂದರೆ ಅಲ್ಲಿ ಎಲ್ಲರೂ ಅರಾಬಿಕ್ ಭಾಷೆ ಮಾತನಾಡುವುದು. ಆದ್ದರಿಂದ ನಾವು ಅನುವಾದಕರೊಂದಿಗೆ ಕೂತು, ಶಾಂತಿ ಪುನರ್‍ಸ್ಥಾಪಿಸಿ, ತೀರ್ಮಾನವೊಂದಕ್ಕೆ ಬರಲಾಯಿತು. ಜನರು ಹಳ್ಳಿಗೆ ಮರಳಿದರು.
ನಾವು ಹೇಳಿದೆವು, ‘ನೋಡಿ, ನೀವಿಬ್ಬರೂ ಒಬ್ಬ ಅಲ್ಲಾಹ್‍ನನ್ನೇ ನಂಬಿರುವುದು, ಅದೇ ಮುಹಮ್ಮದ್ ಪೈಗಂಬರರನ್ನು ನಂಬಿರುವುದು, ಮತ್ತೇಕೆ ಮೂರನೆಯವನಿಗಾಗಿ ಜಗಳವಾಡುವುದು?’
ಇರಾಕಿನಲ್ಲಿ ಏಳು ಲಕ್ಷ ಮಹಿಳೆಯರು ವಿಧವೆಗಳಾಗಿದ್ದಾರೆ. ಆ ದೃಶ್ಯವನ್ನು ನೋಡಿದರೆ ಯಾರ ಹೃದಯವೇ ಆಗಲಿ ಕರಗಿ ಹೋಗುತ್ತದೆ. ನಂತರ ಇರಾಕಿನಿಂದ ಐವತ್ತು ಹುಡುಗರು ಬಂದರು. ಬೆಂಗಳೂರಿನಲ್ಲಿ ಅವರನ್ನು ಶಾಂತಿ ದೂತರನ್ನಾಗಿ ತರಬೇತಿ ನೀಡಲಾಯಿತು. ಇರಾಕ್ ಸರ್ಕಾರವು, ‘ಗುರೂಜೀ, ಈ ಐವತ್ತು ಹುಡುಗರನ್ನು ಶಾಂತಿ ದೂತರನ್ನಾಗಿಸಿ. ನಮಗೆ ಕೇವಲ ಸಾಯುವ ಕಲೆಯೊಂದೇ ಗೊತ್ತು; ಜೀವನ ಕಲೆಯನ್ನು ತಿಳಿಯಲು ಬಯಸುತ್ತೇವೆ. ನೀವು ಕಲಿಸಿರಿ’ ಎಂದಿತು. ಆ ನಂತರದಿಂದ ಅಲ್ಲಿನ ಪರಿಸ್ಥಿತಿಯು ಭಾರೀ ಸುಧಾರಿಸಿದೆ! ಹೌದು, ನಾವು ಮಾಡಿದ್ದು ಕೇವಲ ಒಂದು ಹನಿಯಷ್ಟೇ, ಹೆಚ್ಚೇನಲ್ಲ, ಒಂದು ಹನಿಯಷ್ಟೇ. ಆದರೆ ಒಂದು ಹನಿಯೂ ಕೂಡ ಕೆಲವೊಮ್ಮೆ ಕೆಲಸ ಮಾಡುತ್ತದೆ.
ಆದ್ದರಿಂದಲೇ ನಾವು ಹೇಳುವುದು, ಇಲ್ಲಿ (ಭಾರತದಲ್ಲಿ) ನಮ್ಮ ವಂಶವಾಹಿನಿಯಲ್ಲೇ (ಡಿಎನ್ಎಯಲ್ಲೇ), ಶಾಂತಿ, ಸ್ನೇಹಪರತೆ –ಎಲ್ಲರನ್ನೂ ಆಲಂಗಿಸುವ ಕಲೆ ನಮ್ಮ ಭಾರತದ ವಂಶವಾಹಿನಿಯಲ್ಲಿದೆಯೆಂದು. ಅದಕ್ಕೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡಬೇಕು, ದೇಶದಲ್ಲಿ ಶಾಂತಿ ಕಾಪಾಡುತ್ತಾ ಅದನ್ನು ಬೇರೆಯವರಿಗೂ ಹಂಚಬೇಕು.
ಎಂಟು ವರ್ಷದ ಹಿಂದೆ ನಾವು ಲಕ್ನೌಗೆ ಹೋಗಿದ್ದೆವು. ಅಲ್ಲಿಗೆ ಭೇಟಿ ನೀಡಿದ ನಂತರ ಅದೇ ವರ್ಷ ಪಾಕಿಸ್ತಾನಕ್ಕೆ ಹೋದೆವು. ಈ ವರ್ಷ, ಪಾಕಿಸ್ತಾನಕ್ಕೆ ಭೇಟಿ ನೀಡಿದ ನಂತರ ಲಕ್ನೌಗೆ ಬಂದಿರುವೆವು. ಪಾಕಿಸ್ತಾನದಲ್ಲೂ, ನಮಗೆ ಭಾರೀ ಸ್ವಾಗತವನ್ನು ನೀಡಿದರು. ಅಲ್ಲಿ ಮೂರು ಕೇಂದ್ರಗಳನ್ನು ಸ್ಥಾಪಿಸಿದ್ದಾರೆ, ಸಾವಿರಾರು ಜನರು ಪ್ರಾಣಾಯಾಮ, ಯೋಗಾಸನ ಮತ್ತು ಸುದರ್ಶನ ಕ್ರಿಯೆಯನ್ನು ಕಲಿತು, ಪರಿಹಾರವನ್ನು ಮತ್ತು ಶಾಂತಿಯನ್ನು ಅನುಭವಿಸಿದ್ದಾರೆ. ಅಲ್ಲಿನ ಸುಪ್ರಸಿದ್ಧ ಮತ್ತು ಧಾರ್ಮಿಕ ವ್ಯಕ್ತಿಗಳೊಂದಿಗೆ ಸಂವಾದಿಸಿದೆವು. ಅವರೂ ಸಹ ನಮ್ಮನ್ನು ಬಹಳ ಪ್ರೀತಿಯಿಂದ ಸ್ವಾಗತಿಸಿದರು. ಬೇರೆ ದೇಶಕ್ಕೆ ಭೇಟಿ ನೀಡುತ್ತಿದ್ದೇನೆಂದು ನಮಗನಿಸಲಿಲ್ಲ. ಭಾರತದಂತೆಯೇ ಅನಿಸಿತು – ತುಂಬಾ ಪ್ರೀತಿ ಮತ್ತು ಉತ್ಸಾಹ. ಜನರು, ‘ಗುರೂಜೀ, ನಾವು ನಿಮಗೆ ಸೇರಿದವರು. ನಾವು ನಿಮ್ಮವರು, ಮತ್ತು ನೀವು ನಮ್ಮವರು’ ಎಂದರು.
ಈ ಭಾವನೆಯು ನಮ್ಮೆಲ್ಲರಲ್ಲೂ ಹುಟ್ಟಿನಿಂದಲೇ ಸ್ವಾಭಾವಿಕವಾಗಿ ಬಂದಿರುವುದು. ಹಾಗೆಂದ ಮಾತ್ರಕ್ಕೆ ದೇಶಪ್ರೇಮವಿರಬಾರದೆಂದಲ್ಲ. ದೇಶಪ್ರೇಮ ನಮ್ಮೊಳಗಿರಬೇಕು. ಆದ್ದರಿಂದಲೇ, ದೈವಪ್ರೇಮ ಹಾಗೂ ದೇಶಪ್ರೇಮವು ಒಟ್ಟಾಗಿ ಸಾಗುತ್ತದೆ.
ಆದ್ದರಿಂದ ನಾವು ಹೇಳುತ್ತಿರುವುದು, ಸೇವೆಯನ್ನು ಮಾಡುತ್ತಾ ನಿಮ್ಮ ದೇಶಪ್ರೇಮವನ್ನು ವ್ಯಕ್ತಪಡಿಸಿ. ಲಕ್ಷ ಜನರು ಇಲ್ಲಿ ನೆರೆದಿದ್ದೀರ, - ಲಕ್ನೌ ನಗರವನ್ನು ಸ್ವಚ್ಛಗೊಳಿಸಲು ಒಂದು ಭಾನುವಾರ ಎರಡು ಗಂಟೆಗಳನ್ನು ವಿನಿಯೋಗಿಸಿದರೆ, ಮುಂದಿನ ದಿನ ನಗರವು ಹೇಗೆ ಹೊಳೆಯುವುದೆಂದು ನಿಮಗೆ ಗೊತ್ತೇ? ಕೊಳಕೆಲ್ಲವನ್ನೂ ನಿರ್ಮೂಲನೆಗೊಳಿಸಲಾಗುವುದು. ಇದು ಕೇವಲ ಪುರಸಭೆಯ ಕೆಲಸವಲ್ಲ. ನಾವೆಲ್ಲರೂ ಕೈಯಲ್ಲಿ ಪೊರಕೆ ಹಿಡಿದು ಹೊರ ಬರಬಹುದು. ನೀವು ಮಾಡುತ್ತೀರ?
ಮುಂದಿನ ಭಾನುವಾರ ಬೆಳಿಗ್ಗೆ, ೮ ಗಂಟೆಗೆ ಹೊರ ಬಂದು ೧೦ ಗಂಟೆಯವರೆಗೆ ಎಲ್ಲರೂ ತಮ್ಮ ತಮ್ಮ ಸಮುದಾಯಗಳನ್ನು ಶುಚಿಗೊಳಿಸಿ. ಇದನ್ನು ಮಾಡಬಲ್ಲಿರಾ?
ನಿಮ್ಮ ಮನೆಗಳನ್ನು ಸ್ವಚ್ಛವಾಗಿಟ್ಟುಕೊಳ್ಳಿ, ರಸ್ತೆಗಳನ್ನು ಸ್ವಚ್ಛವಾಗಿಟ್ಟುಕೊಳ್ಳಿ, ಮತ್ತು ನಿಮ್ಮ ಗಲ್ಲಿಗಳನ್ನು ಸ್ವಚ್ಛವಾಗಿಟ್ಟುಕೊಳ್ಳಿ. ಆಂತರಿಕ ಶುದ್ಧತೆ ಹಾಗೂ ಬಹಿರಂಗ ಶುದ್ಧತೆ – ಇದು ನಮ್ಮ ಕರ್ತವ್ಯ ಮತ್ತು ಜವಾಬ್ದಾರಿ. ಅಶುಚಿತ್ವವನ್ನು ವಿರೋಧಿಸಬೇಕು.
ಹಾಗೆಯೇ, ಅಭಾವವನ್ನು ವಿರೋಧಿಸಬೇಕು. ದೇಶದ ಎಲ್ಲ ನಿರುದ್ಯೋಗಿ ಯುವಕರು ಉದ್ಯಮಿಗಳಾಗಬಹುದು. ಸಾಕಷ್ಟು ಕೆಲಸಗಳನ್ನು ಮಾಡಬಹುದು. ಅನೇಕ ಉದ್ದಿಮೆಗಳು ನಮ್ಮ ದೇಶದಿಂದ ಚೀನಾ ದೇಶಕ್ಕೆ ಸ್ಥಳಾಂತರಗೊಳ್ಳುತ್ತಿದೆ, ಏಕೆ? ಎಲ್ಲೋ ಒಂದು ಕಡೆ ನಾವು ನಮ್ಮ ಉದ್ಯಮಶೀಲತೆಯನ್ನು ಕಳೆದುಕೊಂಡಿದ್ದೇವೆ. ಸರ್ಕಾರ ನಮಗೆ ಕೆಲಸ ಕೊಡಬೇಕೆಂದು ಆಲೋಚಿಸುತ್ತೇವೆ. ಎಲ್ಲರಿಗೂ ಕೆಲಸ ನೀಡಲು ಸರ್ಕಾರಕ್ಕೆ ಹೇಗೆ ಸಾಧ್ಯವಾಗುತ್ತದೆ? ನಿಮ್ಮ ಕಾಲ ಮೇಲೆ ನೀವು ನಿಂತುಕೊಳ್ಳಿರಿ. ಇದಕ್ಕೆ ತರಬೇತಿಯ ಅಗತ್ಯವಿದೆಯೆಂದು ನಾವು ಬಲ್ಲೆವು.  ನಮ್ಮ ಜೀವನ ಕಲೆ ವ್ಯಕ್ತಿ ವಿಕಾಸ ಕೇಂದ್ರವು ಯುವಕರಿಗೆ ತರಬೇತಿ ನೀಡಲು ಸಿದ್ಧವಾಗಿದೆ.
ನೋಡಿ, ಈ ದೇಶದಲ್ಲಿ ನಾವು ಹಾರಾಡಿಸುವ ಗಾಳಿಪಟ, ಗಣೇಶ ಮತ್ತಿತರ ವಿಗ್ರಹಗಳು, ಎಲ್ಲಾ ಚೀನಾದಿಂದ ತಯಾರಾಗಿ ಇಲ್ಲಿಗೆ ತರಲಾಗುತ್ತದೆ. ಅವುಗಳನ್ನು ನಾವು ಇಲ್ಲೇ ತಯಾರಿಸಬಹುದು.
ಈ ದೇಶದಲ್ಲಿ ಪ್ರತಿಯೊಂದು ಪಟ್ಟಣವೂ ಒಂದೊಂದು ವಿಶೇಷತೆಯನ್ನು ಹೊಂದಿತ್ತು.  ಉದಾಹರಣೆಗೆ, ಲಕ್ನೌ ನಗರದ ಕುರ್ತಾ ಸುಪ್ರಸಿದ್ಧವಾಗಿದೆ; ಬಹಳ ಕಾಲದಿಂದಲೂ ಬನಾರಸ್ಸಿನ ಸೀರೆ, ಕಾಶ್ಮೀರದ ಶಾಲು, ಹಿಮಾಚಲದ ಸೇಬು, ಇವೆಲ್ಲಾ ತುಂಬಾ ಪ್ರಸಿದ್ಧ ಹೊಂದಿವೆ. ಪ್ರತಿ ರಾಜ್ಯದಲ್ಲಿರುವ ಇಂತಹ ವಿಶಿಷ್ಟತೆಯನ್ನು ಪ್ರೋತ್ಸಾಹಿಸಬೇಕು.
ಚೀನಾದಲ್ಲಿ, ಇಡೀ ಹಳ್ಳಿಯೊಂದರಲ್ಲಿ ಒಂದೇ ಒಂದು ವಸ್ತುವನ್ನು ತಯಾರಿಸುತ್ತಾರೆ. ಒಂದು ಹಳ್ಳಿಯಲ್ಲಿ ಕೇವಲ ಸೂಜಿಗಳನ್ನು ತಯಾರಿಸುತ್ತಾರೆ; ಇನ್ನೊಂದು ಹಳ್ಳಿಯಲ್ಲಿ ಬಟನ್ ಗಳನ್ನು ತಯಾರಿಸುತ್ತಾರೆ. ಈ ಪ್ರವೃತ್ತಿ ದೇಶದ ಆರ್ಥಿಕತೆ ಸ್ಥಿತಿಯನ್ನು ವರ್ಧಿಸುತ್ತದೆ. ನಾವೂ ಇದನ್ನು ಮಾಡಬೇಕು.
ಮುಂದೆ, ಪ್ರವಾಸೋದ್ಯಮ ಬಹಳ ಉತ್ತಮವಾದುದು. ಭಾರತದ ಅನೇಕ ಮಹರ್ಷಿಗಳು, ಮೊಹಮ್ಮದರು ಇಲ್ಲೇ ಉತ್ತರ ಪ್ರದೇಶದಲ್ಲಿ ಜನಿಸಿದವರು. ದೇವರಿಗೇ ಗೊತ್ತು ಏಕೆ ಎಲ್ಲರೂ ಉತ್ತರ ಪ್ರದೇಶವನ್ನು ಆಯ್ಕೆ ಮಾಡಿದರೆಂದು. ಶ್ರೀರಾಮ ಮತ್ತು ಶ್ರೀಕೃಷ್ಣ ಇಲ್ಲೇ ಜನಿಸಿದರು, ಹಗೆಯೇ ಅನೇಕ ಪ್ರಖ್ಯಾತ ಮಹಾತ್ಮರು ಇಲ್ಲಿಯೇ ಜನಿಸಿದರು. ಕಬೀರ್ ದಾಸರೂ ಸಹ ಇಲ್ಲೇ ಜನಿಸಿದರು ಮತ್ತು ಬುದ್ಧನೂ ಕೂಡ ಇಲ್ಲಿಯೇ ದೀರ್ಘ ಕಾಲ ಇದ್ದನು. ಆದರೆ ಈಗ ಈ ಯಾತ್ರಾ ಸ್ಥಳಗಳು ಮಲಿನವಾಗಿದೆ, ಕೊಳಕಾಗಿದೆ. ಈ ಸ್ಥಳಗಳನ್ನು ಸ್ವಚ್ಛಗೊಳಿಸಿ ಕಂಗೊಳಿಸುವಂತೆ ಮಾಡಲು ಪರಿಶ್ರಮಿಸಬೇಕು. ಸ್ವಲ್ಪ ಗಮನ ನೀಡಿದರೆ ಇದು ಅಂತರ್‍ರಾಷ್ಟ್ರೀಯ ತಾಣವಾಗಬಹುದು.
ಅನ್ಯಾಯದ ವಿರುದ್ಧ ಹೋರಾಡಬೇಕು. ನಾವೀಗಾಗಲೇ ಭ್ರಷ್ಟಾಚಾರದ ವಿರುದ್ಧ ನಿಲ್ಲಬೇಕೆಂದು ಹೇಳಿದ್ದೇವೆ. ಎಲ್ಲರೂ ಕೈ ಎತ್ತಿ ನಾವು ಲಂಚ ಕೊಡುವುದಿಲ್ಲ ಅಥವಾ ತೆಗೆದುಕೊಳ್ಳುವುದಿಲ್ಲವೆಂದು ಪ್ರಮಾಣ ಮಾಡಲು ಸಾಧ್ಯವೇ.
ಇಲ್ಲಿ ಕುಳಿತಿರುವರಲ್ಲಿ ಎಷ್ಟೋ ಜನ ಇಷ್ಟವಿಲ್ಲದ್ದಿದ್ದರೂ ಲಂಚ ತೆಗೆದುಕೊಳ್ಳುತ್ತಿದ್ದಾರೆ. ನಾವು ಹೇಳುತ್ತಿದ್ದೇವೆ, ಕೇವಲ ಒಂದು ವರ್ಷದ ತನಕ ಲಂಚ ತೆಗೆದುಕೊಳ್ಳಬೇಡಿ. ನಂತರ ಹೇಗಿರುತ್ತದೆಂದು ನೋಡೋಣ, ಒಂದು ವರ್ಷದ ಬಳಿಕ. ಒಂದು ವರ್ಷವಾದ ಮೇಲೆ ನಾವು ಹಿಂದಿರುಗಿ ಪುನಃ ಆ ಪ್ರಮಾಣವನ್ನು ಉಚ್ಚರಿಸುತ್ತೇವೆ. ಆದ್ದರಿಂದ, ಇಂದು ಲಂಚ ತೆಗೆದುಕೊಳ್ಳುವುದಿಲ್ಲವೆಂದು ಪ್ರತಿಜ್ಞೆ ಮಾಡಿ. ಲಂಚವಿಲ್ಲದೇ ಕೆಲಸ ಮಾಡಿ.
ನೀವು ಲಂಚ ತೆಗೆದುಕೊಳ್ಳಲು ಇಷ್ಟಪಡದ ಕಾರಣ ಹಿಂಜರಿಯುತ್ತಿದ್ದು, ಆದರೆ ಲಂಚ ಕೊಡುವವನು ಮಾತ್ರ ನಿಮ್ಮಲ್ಲಿಗೆ ಬಂದು ಟೇಬಲ್ ಕೆಳಗಿನಿಂದ ಕೊಡುತ್ತಿದ್ದರೆ, ಆಗೇನು ಮಾಡುವುದು?  ಇಲ್ಲಿ ಕುಳಿತಿರುವ ಎಲ್ಲಾ YES+ ಯುವಕರು ‘ನಾನು ಲಂಚ ಸ್ವೀಕರಿಸುವುದಿಲ್ಲ’ ಎಂದು ಉಲ್ಲೇಖಿತ ಕಾಗದದ ಪಟ್ಟಿಯನ್ನು ತಂದು ನಿಮ್ಮ ಡೆಸ್ಕ್ ಮೇಲೆ ಅಂಟಿಸುವರು. ಈ ಯುವಕರು ಪೇಪರ್ ಸ್ಟ್ರಿಪ್‍ಗಳನ್ನು ತಯಾರಿಸಿ ನಿಮ್ಮ ಟೇಬಲ್ ಗಳಿಗೆ ಅಂಟಿಸುತ್ತಾರೆ, ನೀವೇನೂ ತೊಂದರೆ ತೆಗೆದುಕೊಳ್ಳಬೇಕಾಗಿಲ್ಲ. ಅದನ್ನು ಜನರು ನೋಡಿದಾಗ, ನಿಮಗೆ ಲಂಚವನ್ನು ಕೊಡುವುದಿಲ್ಲ ಮತ್ತು ನೀವು ಮಾತನಾಡುವ ಅವಶ್ಯಕತೆಯೂ ಇರುವುದಿಲ್ಲ. ಈ ಕೆಲಸವಾಗಬೇಕು. ಸರಿಯೇ? ನಾವು ಅನ್ಯಾಯವನ್ನು ವಿರೋಧಿಸಬೇಕು.
ನಂತರ, ಜಾತಿ ಭೇಧವನ್ನು ತೊಡೆದುಹಾಕಬೇಕು. ಇದರಿಂದಾಗಿ ನಮ್ಮ ದೇಶ ಬಹಳ ನಷ್ಟಗಳನ್ನು ಅನುಭವಿಸಿದೆ. ಎಲ್ಲಾ ಸಾಧು-ಸಂತರು, ಸಾವಿರಾರು ಜನರು ಬೇರೆ ಬೇರೆ ಜಾತಿಗಳಿಗೆ ಸೇರಿದ್ದವರು. ಎಲ್ಲಾ ಜಾತಿಗಳ, ಕೆಳ ಜಾತಿಯಲ್ಲಿಯೂ ಕೇಡ, ಸಾಧು-ಸಂತರು ನಮ್ಮಲ್ಲಿದ್ದರು, ಆದ್ದರಿಂದ ನಾವು ಜಾತಿ ಭೇಧವನ್ನು ತ್ಯಜಿಸಬೇಕು. ನಾವು ಒಂದೇ ಜಾತಿಗೆ ಸೇರಿರುವರೆಂದು ತಿಳಿಯಿರಿ – ಮಾನವೀಯತೆ, ಸರಿಯೇ?
ಅಜ್ಞಾನದ ವಿರುದ್ಧ ನಿಲ್ಲಬೇಕು. ಯಾವ ಮೂಢನಂಬಿಕೆ ಅಥವಾ ಅಜ್ಞಾನವೂ ಇರಬಾರದು; ಇದನ್ನು ವಿರೋಧಿಸಬೇಕು.
ಈಗ ಸ್ವಲ್ಪ ಸಮಯ ನಾವು ಧ್ಯಾನ ಮಾಡೋಣ. ಅನೇಕ ಜನರು ಸೇರಿ ಗುಂಪಿನಲ್ಲಿ ಧ್ಯಾನ ಮಾಡಿದರೆ, ಅದನ್ನು ಯಜ್ಞ ಎನ್ನುತ್ತಾರೆ. ನಿಮಗೆ ಖಂಡಿತವಾಗಿಯೂ ಯಜ್ಞದ ಪ್ರತಿಫಲ ದೊರೆಯುವುದು. ನಿಮಗೇನಾದರೂ ಒಂದು ಆಸೆಯಿದ್ದರೆ, ಅದು ಖಂಡಿತ ಈಡೇರುವುದು.