ಗುರುವಾರ, ಮಾರ್ಚ್ 8, 2012

ದೈವದ ಚಿತ್ತ ಅದೆ೦ತು ನಿಮ್ಮತ್ತ ವಾಲುವುದೆ೦ದು ಕಾಣಲು ಅ೦ತರ್ಮುಖಿಯಾಗಿ

08
2012
Mar
ಆತ್ಮೋತ್ಸವ, ರತ್ಲಂ (ಮಧ್ಯ ಪ್ರದೇಶ)

ನನ್ನಾದರೂ ಕೊಂಡುಕೊಳ್ಳಲು ನೀವು ಒಂದು ಅಂಗಡಿಗೆ ಹೋಗುವಾಗ, ಅದೊಂದು ಪ್ಯಾಕೇಜಿನಲ್ಲಿ (ಕಟ್ಟಲ್ಪಟ್ಟು) ಬರುತ್ತದೆ. ಅದು ಪ್ಯಾಕೇಜ್ ಮಾಡಲ್ಪಟ್ಟಿರುತ್ತದೆ. ಈ ಪ್ಯಾಕೇಜ್ ಅವಶ್ಯಕ, ಆದರೆ ಅದು ವಸ್ತುವಲ್ಲ. ಪ್ಯಾಕ್ ಮಾಡಲ್ಪಟ್ಟಿರುವುದು ಆ ವಸ್ತು.

ಅದೇ ರೀತಿಯಲ್ಲಿ, ಔಪಚಾರಿಕತೆಗಳು ಕೇವಲ ಒಂದು ಪ್ಯಾಕೇಜ್. ಅದೊಂದು ಕಾಗದದ ಹೊದಿಕೆಯಂತೆ. ನಿಜವಾದ ಸಂಗತಿಯೆಂದರೆ ಆತ್ಮೀಯತೆ. ಒಂದು ಎಂಬ ಭಾವನೆ ಇಲ್ಲದಿದ್ದರೆ, ಆಗ ಅದನ್ನು ಸತ್ಸಂಗ ಅಥವಾ ಉತ್ಸವ ಎಂದು ಕರೆಯಲು ಸಾಧ್ಯವಿಲ್ಲ.

ನಾನು ಪ್ರಪಂಚದ ಸುತ್ತಲೂ ಸಂಚರಿಸಿದ್ದೇನೆ ಹಾಗೂ ಯಾವುದೇ ದೇಶದಲ್ಲಿಯೂ ಭಾರತದಲ್ಲಿರುವಂತೆ ಆಧ್ಯಾತ್ಮ ಮತ್ತು ಉತ್ಸವಗಳು ಆಳವಾಗಿ ಜೋಡಿಕೊಂಡಿಲ್ಲ ಎಂಬುದನ್ನು ಗಮನಿಸಿದ್ದೇನೆ. ಒಂದು ಕಡೆಯಲ್ಲಿ ಅವರು ಆಧ್ಯಾತ್ಮಿಕರಾಗಿರುತ್ತಾರೆ, ಅದೇ ಸಮಯದಲ್ಲಿ ಇನ್ನೊಂದು ಕಡೆಯಲ್ಲಿ ಅವರು ಪಾರ್ಟಿಗಳಿಗೆ ಹೋಗುತ್ತಾರೆ ಮತ್ತು ಮೋಜಿನಲ್ಲಿ ಭಾಗಿಯಾಗುತ್ತಾರೆ. ಹೇಗಾದರೂ, ಆಧ್ಯಾತ್ಮಿಕ ಕೂಟಗಳಲ್ಲಿ ಯಾವುದೇ ಮೋಜು ಅಥವಾ ಸಂತೋಷವಿರುವುದಿಲ್ಲ; ಅದೊಂದು ಬಹಳ ಗಂಭೀರವಾದ ವಿಷಯ. ಇದನ್ನು ನಾವು ಭಾರತದಲ್ಲಿ ಕೂಡಾ ಮಾಡುತ್ತೇವೆ - ಬಹಳ ಗಂಭೀರವಾಗುವುದು, ಆದರೆ ಅದು ಹಾಗಾಗಬಾರದು! ಹೋಳಿಯು ಮೋಜು ಮತ್ತು ವಿನೋದಗಳ, ಸಂತೋಷದ ಒಂದು ಹಬ್ಬವಾಗಿದೆ.
ನಿಮ್ಮಲ್ಲಿ ಎಲ್ಲರೂ ಹೋಳಿ ಆಡಿದ್ದೀರಾ? ನೀವು ಆಡಿರುವುದು ಯಾವ ಹೋಳಿಯನ್ನು? ನಾನು ಹೇಳುತ್ತಿರುವುದು, ನೀವು ಪರಸ್ಪರರ ಮೇಲೆ ಬಣ್ಣವನ್ನೆರಚುವ ಹೋಳಿಯನ್ನು ಮಾತ್ರವಲ್ಲ. ಅದು, ನಿಮ್ಮ ಆತ್ಮದ ಬಣ್ಣಗಳಿಂದ ನಿಮ್ಮ ಮೇಲೆ ಬಣ್ಣ ಬಳಿಯುವ ಒಂದು ಹಬ್ಬವಾಗಿದೆ. ಆತ್ಮದಲ್ಲಿ ಏಳು ಬಣ್ಣಗಳಿವೆ.
ನೀವು ಈ ಕೂಟಕ್ಕೆ ಬಹಳ ಒಳ್ಳೆಯ ಹೆಸರನ್ನು ನೀಡಿರುವಿರಿ - ಆತ್ಮೋತ್ಸವ! ಆತ್ಮವನ್ನು ಆಚರಿಸುವುದು ಆತ್ಮೋತ್ಸವವಾಗಿದೆ. ಬೆಂಗಳೂರು, ಭೋಪಾಲ ಅಥವಾ ಬೇರೆಲ್ಲಿಯಾದರೂ ಒಂದು ಪ್ರಮುಖ ಆಚರಣೆ ಆಗುವಾಗ, ರತ್ಲಂನ ಹಲವಾರು ಜನರು ಅದರಲ್ಲಿ ಭಾಗಿಯಾಗುತ್ತಿದ್ದರು ಮತ್ತು ನನ್ನಲ್ಲಿ ಕೇಳುತ್ತಿದ್ದರು, "ನೀವು ರತ್ಲಂಗೆ ಯಾವಾಗ ಬರುತ್ತೀರಿ?" ನೋಡಿ, ನಾನು ರತ್ಲಂಗೆ ಬಂದಿದ್ದೇನೆ!

ಆತ್ಮೀಯತೆಯು ಜೀವನದ ಸಾರವಾಗಿದೆ. ಆತ್ಮೀಯತೆಯಿರುವಾಗ, ವಿಷಯಗಳು ಮಬ್ಬಾಗಿ ಕಾಣಿಸುವುದಿಲ್ಲ. ಮಬ್ಬು ಇಲ್ಲದಿರುವಾಗ, ಅಲ್ಲಿ ಲೋಭವಿರುವುದಿಲ್ಲ. ನಿಮ್ಮ ಬಯಕೆಗಳು ನಿಮಗೆ ತೊಂದರೆಯನ್ನುಂಟು ಮಾಡದು. ಎಲ್ಲಾ ವಿಕಾರಗಳು ತೆಗೆದುಹಾಕಲ್ಪಡುತ್ತವೆ. ಯಾವುದೇ ವಿಕಾರದ ಮೂಲ ಕಾರಣವು ಜಡತ್ವವಾಗಿದೆ, ಅಂದರೆ, ನೀವು ಯಾವುದನ್ನೂ ಇಷ್ಟಪಡದಿರುವಾಗ. ಈ ಭಾವನೆ ಬರುವುದು ಜಡತ್ವದಿಂದ. ಎಲ್ಲಿ ಆತ್ಮೀಯತೆಯಿರುವುದೋ, ಅಲ್ಲಿ ಜಡತ್ವವು ಅಳಿಸಿ ಹಾಕಲ್ಪಡುತ್ತದೆ ಮತ್ತು ನೀವು ಉಲ್ಲಾಸವುಳ್ಳವರಾಗುವಿರಿ. ಆಗ ತನ್ನಿಂತಾನೇ ನೀವು ಮದ್ಯಪಾನ ವ್ಯಸನದಿಂದ ಹೊರಬರುವಿರಿ.

ಧ್ಯಾನ ಮತ್ತು ಸುದರ್ಶನ ಕ್ರಿಯೆಯನ್ನು ಮಾಡುತ್ತಿದ್ದಂತೆ, ತನ್ನಿಂತಾನೇ ತಮ್ಮ ಕೆಟ್ಟ ಚಟಗಳಿಂದ ಮುಕ್ತರಾಗುತ್ತಿರುವುದನ್ನು ಪ್ರಪಂಚದಾದ್ಯಂತ ಲಕ್ಷಗಟ್ಟಲೆ ಜನರು ಅನುಭವಿಸಿದ್ದಾರೆ.

ಪ್ರತಿಯೊಬ್ಬ ವ್ಯಕ್ತಿಯೂ, ಹುಟ್ಟುವಾಗ ಒಬ್ಬ ಒಳ್ಳೆಯ ವ್ಯಕ್ತಿಯಾಗಿರುತ್ತಾನೆ ಎಂಬುದು ನನಗೆ ಗೊತ್ತಿದೆ ಮತ್ತು ಅದರಲ್ಲಿ ಯಾವುದೇ ಸಂಶಯವಿಲ್ಲ. ಅವರಲ್ಲಿ ಒಳ್ಳೆಯ ಗುಣಗಳಿರುತ್ತವೆ. ವರ್ಷಗಳುರುಳುತ್ತಿದ್ದಂತೆ, ಅವರಲ್ಲಿರುವ ಈ ಒಳ್ಳೆಯ ಗುಣಗಳು ಮರೆಮಾಚಲ್ಪಡುತ್ತವೆ ಮತ್ತು ಎಲ್ಲಾ ವಿಕಾರಗಳು ಕಾಣಿಸಲು ತೊಡಗುತ್ತವೆ. ಇದರ ಹಿಂದಿರುವ ಕಾರಣವೆಂದರೆ ಆಧ್ಯಾತ್ಮಿಕ ಜ್ಞಾನ ಇಲ್ಲದಿರುವುದು ಮತ್ತು ಅಜ್ಞಾನ. ಜೀವನವನ್ನು ಹೇಗೆ ಜೀವಿಸಬೇಕೆಂಬುದನ್ನು ನಮಗೆ ಮನೆಯಲ್ಲಿಯೂ ಕಲಿಸಲಾಗುವುದಿಲ್ಲ, ಶಾಲೆಗಳಲ್ಲಿಯೂ ಕಲಿಸಲಾಗುವುದಿಲ್ಲ. ನಮ್ಮ ಮನಸ್ಸನ್ನು ಹೇಗೆ ನಿರ್ವಹಿಸಬೇಕೆಂಬುದು ನಮಗೆ ತಿಳಿಯದು. ನಮ್ಮನ್ನು ನಾವು ಹೇಗೆ ನಿರ್ವಹಿಸಬೇಕೆಂಬುದನ್ನು ಬಿಟ್ಟು ಉಳಿದೆಲ್ಲವನ್ನೂ ನಾವು ಕಲಿಯುತ್ತೇವೆ. ಇದನ್ನು ಕಲಿಯುವುದು ಬಹಳ ಅವಶ್ಯಕ.

(ಒಬ್ಬರು ಗುರೂಜಿಯವರಿಗೆ ಒಂದು ಹೂವಿನ ಹಾರವನ್ನು ಅರ್ಪಿಸುತ್ತಾರೆ ಮತ್ತು ಅವರು ಹೇಳುತ್ತಾರೆ:) ಈ ಹೂವಿನ ಹಾರದ ಹಿಂದೆ ಇರುವ ನಿಮ್ಮ ಭಾವನೆಗಳು ನನಗೆ ತಿಳಿದಿದೆ. ನಮಗೆ ನಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಸಾಧ್ಯವಾಗುವುದಿಲ್ಲ. ಆಗ ಹೂ ಒಂದು ಮಾಧ್ಯಮವಾಗುತ್ತದೆ. ಆದರೆ, ನಾನು ಹೇಳುವುದೇನೆಂದರೆ, ಇದರ ಅಗತ್ಯವಿಲ್ಲ. ನಿಮ್ಮ ಮುಖದ ಮೇಲೆ ಒಂದು ನಗುವಿದ್ದರೆ, ನನಗೆ ಅಷ್ಟೇ ಸಾಕು. ನೀವು ಅರಳಿಕೊಂಡಿದ್ದು, ನಿಮ್ಮ ಮುಖದ ಮೇಲೆ ಒಂದು ನಗುವಿದ್ದರೆ, ಅದು ಒಂದು ಹೂವಿಗಿಂತ ದೊಡ್ಡದು. ಅದು ನನಗೆ ಬಹಳಷ್ಟು ತೃಪ್ತಿಯನ್ನು ನೀಡುತ್ತದೆ.

ಹಾಗಾದರೆ, ನಾವು ಯಾವುದರ ಬಗ್ಗೆ ಮಾತನಾಡುತ್ತಿದ್ದೆವು? ಆತ್ಮೀಯತೆ! ಆತ್ಮೀಯತೆಯಿರಬೇಕು. ಎಲ್ಲಿ ಆತ್ಮೀಯತೆಯು ಕೊನೆಯಾಗುವುದೋ ಅಲ್ಲಿ ಭ್ರಷ್ಟಾಚಾರವು ಪ್ರಾರಂಭವಾಗುತ್ತದೆ. ಯಾರೂ ಯಾವತ್ತೂ ತಮ್ಮ ಸ್ವಂತದವರೊಂದಿಗೆ ಭ್ರಷ್ಟರಾಗಿ ಮತ್ತು ದುಷ್ಟರಾಗಿ ನಡೆದುಕೊಂಡಿಲ್ಲ. ನಾವಿದನ್ನು ಮಾಡುವುದು, ನಮ್ಮವರೆಂದು ನಾವು ಯಾರ ಬಗ್ಗೆ ಅಂದುಕೊಳ್ಳುವುದಿಲ್ಲವೋ ಅವರೊಂದಿಗೆ ಮಾತ್ರ.

ಆದುದರಿಂದ, ಇವತ್ತು ಸಮಾಜದಲ್ಲಿ ನಾವು ಶಾಂತಿಯನ್ನು ಪುನಃ ಸ್ಥಾಪಿಸಲು ಬಯಸುವುದಾದರೆ, ನಾವು ಆಧ್ಯಾತ್ಮದ ಒಂದು ಅಲೆಯನ್ನು ಸೃಷ್ಟಿಸಬೇಕು, ಸರಿಯಾ? ನಾವೆಲ್ಲರೂ ಈ ನಿಟ್ಟಿನಲ್ಲಿ ಕೆಲಸ ಮಾಡಬೇಕಾಗುತ್ತದೆ.

ನಮಗೊಂದು ಹಿಂಸಾರಹಿತ ಸಮಾಜ ಬೇಕು. ಕಳ್ಳತನವಿಲ್ಲದ, ಪರಸ್ಪರರ ವಿರುದ್ಧ ದ್ವೇಷವಿಲ್ಲದ ಮತ್ತು ಜನರ ನಡುವೆ ಒಂದು ನಿಕಟ ಸಂಪರ್ಕ ಇರುವ ಒಂದು ಸಮಾಜ. ಒಂದು ಕಾಲದಲ್ಲಿ ನಮ್ಮ ಸಮಾಜವು ಹೀಗಿತ್ತು. ಭಾರತದಲ್ಲಿ ಆಧ್ಯಾತ್ಮವು ಉತ್ತುಂಗದಲ್ಲಿದ್ದಾಗ, ಭಾರತದ ಆರ್ಥಿಕ ಸ್ಥಿತಿ ಕೂಡಾ ಬಹಳ ಉತ್ತಮವಾಗಿತ್ತು. ಆಧ್ಯಾತ್ಮದಲ್ಲಿ ಕುಸಿತ ಉಂಟಾದಾಗ, ನಾವು ಆರ್ಥಿಕವಾಗಿ ಕೂಡಾ ಕುಸಿದೆವು. ನಾವಿದನ್ನು ಎರಡೂ ರೀತಿಯಲ್ಲಿ ನೋಡಬಹುದು: ನಾವು ಆರ್ಥಿಕವಾಗಿ ಕುಸಿದೆವು, ಆದುದರಿಂದ ಆಧ್ಯಾತ್ಮದಲ್ಲಿ ಕೂಡಾ ಒಂದು ಕುಸಿತವು ಗಮನಕ್ಕೆ ಬಂತು. ಆದರೆ ನಾನು ಹೇಳುವುದಾದರೆ, ನಾವು ನಮ್ಮ ಸಮಾಜವನ್ನು ಮತ್ತೊಮ್ಮೆ ಆಧ್ಯಾತ್ಮದ ಒಂದು ಅಲೆಯಿಂದ ಆವರಿಸಿದರೆ; ನಾವು ಯೋಗ, ಉದ್ಯೋಗ ಮತ್ತು ಯಜ್ಞಗಳನ್ನು ಒಟ್ಟಾಗಿ ತೆಗೆದುಕೊಂಡರೆ ನಾವು ಮಹಾತ್ಮಾ ಗಾಂಧಿಯವರು ಹೇಳಿರುವಂತಹ ’ರಾಮ ರಾಜ್ಯ’ ವಿರುವ ಭಾರತವನ್ನು ಪುನಃ ಕಲ್ಪಿಸಿಕೊಳ್ಳಬಹುದು. ಆದುದರಿಂದ, ಇವತ್ತು ಆತ್ಮೋತ್ಸವದಲ್ಲಿ ನಾವು ಮೂರು ವಿಷಯಗಳನ್ನು ಮಾಡೋಣ: ಹಾಡು, ಜ್ಞಾನ ಮತ್ತು ಧ್ಯಾನ.

ಜೀವನದಲ್ಲಿ, ನೀವು ಒಬ್ಬಂಟಿಯಲ್ಲ ಮತ್ತು ನಿಮ್ಮೊಂದಿಗೆ ಒಬ್ಬರು ಇದ್ದಾರೆ ಎಂಬ ನಂಬಿಕೆಯನ್ನಿರಿಸಿ. ನಿಮ್ಮ ತೊಂದರೆಗಳು, ಸಮಸ್ಯೆಗಳು ಮತ್ತು ನೋವುಗಳು ಏನೇ ಇರಲಿ, ಅವುಗಳನ್ನು ಸುಮ್ಮನೇ ನನಗೆ ಸಮರ್ಪಿಸಿ. ಕೇವಲ ಇಷ್ಟನ್ನು ಹೇಳಿ, "ಗುರೂಜಿ, ನನಗೆ ಇದನ್ನು ಸಹಿಸಲು ಸಾಧ್ಯವಿಲ್ಲ, ದಯವಿಟ್ಟು ಇದನ್ನು ತೆಗೆದುಕೊಳ್ಳಿ." ಈ ರೀತಿಯಲ್ಲಿ ಯೋಚಿಸಿ ಅಥವಾ ಬರೆಯಿರಿ, ಕಳುಹಿಸಿರಿ - ನಿಮಗೆ ಬೇಕಾದ ಯಾವುದೇ ರೀತಿಯಲ್ಲಿ. ಆದರೆ ಎಲ್ಲಾ ಒತ್ತಡಗಳಿಂದ ಮುಕ್ತರಾಗಿ ನೀವು ಜೀವನದಲ್ಲಿ ಮುಂದೆ ಸಾಗಿ. ನನಗೆ ಬೇಕಾಗಿರುವುದು ಇದು.

ಮೌನವನ್ನು ಒಳಗೊಂಡಿರದ ಆಚರಣೆಯಿಂದೇನು ಪ್ರಯೋಜನ ಮತ್ತು ಒಂದು ಆಚರಣೆಯಾಗಿ ಪರಿವರ್ತನೆಯಾಗದ ಮೌನವೇನು? ಮೌನವು ಒಂದು ಆಚರಣೆಗೆ ಆಳವನ್ನು ನೀಡುತ್ತದೆ, ಅದೇ ವೇಳೆ ಆಚರಣೆಯು, ಮೌನದ ಆಂತರಿಕ ಶಕ್ತಿಯನ್ನು ತರುತ್ತದೆ. ಅದಕ್ಕಾಗಿಯೇ, ಸ್ವಲ್ಪ ಹೊತ್ತು ನಾವು ಧ್ಯಾನವನ್ನು ಅಭ್ಯಾಸ ಮಾಡಬೇಕು. ಅದು ಬಹಳ ಮುಖ್ಯ. ಅದು ನಿಮ್ಮ ಜ್ಞಾಪಕ ಶಕ್ತಿಯನ್ನು ತೀಕ್ಷ್ಣಗೊಳಿಸುತ್ತದೆ ಮತ್ತು ನಿಮ್ಮನ್ನು ಆರೋಗ್ಯವಾಗಿ ಇಡುತ್ತದೆ.

ನಿಮ್ಮಲ್ಲಿ ಎಷ್ಟು ಮಂದಿಗೆ ಶರೀರದಲ್ಲಿ ನೋವಿದೆ? ಅದು ಯಾಕೆಂದು ನಿಮಗೆ ಗೊತ್ತಿದೆಯಾ? ನಾವು ಮಣ್ಣಿಗೆ, ಕ್ರಿಮಿನಾಷಕಗಳು ಮತ್ತು ರಾಸಾಯನಿಕಗಳಂತಹ ವಿಷಯುಕ್ತ ಪದಾರ್ಥಗಳನ್ನು ಹಾಕುತ್ತೇವೆ. ಅದಕ್ಕಾಗಿ. ನಾವು ಮಣ್ಣಿಗೆ ರಾಸಾಯನಿಕ ಗೊಬ್ಬರಗಳನ್ನು ಹಾಕುತ್ತೇವೆ ಮತ್ತು ಬೆಳೆದ ಬೆಳೆಯನ್ನು ನಾವು ತಿಂದಾಗ, ನಮಗೆ ನಮ್ಮ ಶರೀರದಲ್ಲಿ ನೋವಿನ ಅನುಭವವಾಗುತ್ತದೆ.

ನಿಮಗೆ ಗೊತ್ತಿದೆಯಾ, ಹಿಂದೆ, ನಾವು ಮನೆಯಲ್ಲಿರಿಸುತ್ತಿದ್ದ ಅಕ್ಕಿ ಮತ್ತು ಗೋಧಿಗಳನ್ನು ಕೀಟಗಳು ತಿನ್ನುತ್ತಿದ್ದವು. ಅಲ್ಲವೇ? ಇದು ಈಗ ಆಗುವುದಿಲ್ಲ. ಅದರ ಅರ್ಥವೇನು? ನಾವು ತಿನ್ನುವ ಆಹಾರವನ್ನು ಕೀಟಗಳು ಕೂಡಾ ಇಷ್ಟಪಡುವುದಿಲ್ಲ. ಅದು ಯಾಕೆಂದರೆ, ಅದು ವಿಷಯುಕ್ತ ಪದಾರ್ಥಗಳನ್ನು ಒಳಗೊಂಡಿದೆ ಎಂಬುದು ಅವುಗಳಿಗೆ ಗೊತ್ತು. ನಾವು ಅಂತಹ ಆಹಾರವನ್ನು ತಿನ್ನುತ್ತೇವೆ ಮತ್ತು ನಂತರ ನಮಗೆ ಶರೀರದಲ್ಲಿ ಎಲ್ಲೆಡೆಯಲ್ಲಿಯೂ ನೋವಾಗುತ್ತದೆ. ಹಲವಾರು ಜನರು ಕ್ಯಾನ್ಸರಿನಿಂದ ಬಳಲುತ್ತಿದ್ದಾರೆ. ಅದಕ್ಕಾಗಿಯೇ ನಾವು ಸಾವಯವ, ರಾಸಾಯನಿಕ ಮುಕ್ತ ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕು ಮತ್ತು ಕೇವಲ ಅಂತಹ ಆಹಾರ ಪದಾರ್ಥಗಳನ್ನು ತಿನ್ನಬೇಕು. ಏನನ್ನು ತಿನ್ನಬೇಕೆಂಬುದು ನಮಗೆ ತಿಳಿದಿದ್ದರೆ, ಆಗ ರೋಗಗಳಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಬಹುದು. ಆದುದರಿಂದ, ನೀವು ನಿಮ್ಮ ಶರೀರವನ್ನು ಶುದ್ಧಗೊಳಿಸಲು ಬಯಸುವುದಿದ್ದರೆ, ಆಯುರ್ವೇದವನ್ನು ಉಪಯೋಗಿಸಿ. ಕಡಿಮೆಯೆಂದರೆ ವಾರಕ್ಕೆ ಒಂದು ಸಲವಾದರೂ ತ್ರಿಫಲ ಚೂರ್ಣವನ್ನು ತೆಗೆದುಕೊಳ್ಳಿ. ಇದು ನಿಮ್ಮ ಕರುಳನ್ನು ಶುಚಿಯಾಗಿ ಇರಿಸುತ್ತದೆ. ಆದುದರಿಂದ, ನಿಮ್ಮ ಶರೀರವನ್ನು ಶುದ್ಧಗೊಳಿಸಲು, ನೀವು ಆಯುರ್ವೇದವನ್ನು ಉಪಯೋಗಿಸಬೇಕು. ಪ್ರತಿದಿನವೂ ಸ್ವಲ್ಪ ಹೊತ್ತು ಪ್ರಾಣಾಯಾಮ ಮಾಡಿ. ಇದು ನಿಮ್ಮ ಶರೀರಕ್ಕೆ ಶಕ್ತಿಯನ್ನು ನೀಡುತ್ತದೆ ಮತ್ತು ನಿಮ್ಮ ಮನಸ್ಸು ಆಹ್ಲಾದಕರವಾಗಿರುವಂತೆ ಮಾಡುತ್ತದೆ. ಎಲ್ಲರೂ ಸಂಗೀತವನ್ನು ಕೇಳಬೇಕು. ಜನರು ಸಂಗೀತವನ್ನು ಕೇಳುತ್ತಾರೆ, ಆದರೆ ಗಮನವಿಟ್ಟು ಅಲ್ಲ. ಹಾಡುಗಳು ಸಾಗುತ್ತಾ ಇರುತ್ತವೆ, ಆದರೆ ನಿಮ್ಮ ಮನಸ್ಸು ಬೇರೆಲ್ಲೋ ತಿರುಗುತ್ತಿರುತ್ತದೆ ಅಥವಾ ನೀವು ಮಾತನಾಡುತ್ತಿರುತ್ತೀರಿ. ಇಲ್ಲ, ಇದು ಹಾಗಾಗಬಾರದು. ಸ್ವಲ್ಪ ಸಮಯ ಸಂಗೀತವನ್ನು ಕೇಳಿ. ಸಂಗೀತವು ನಿಮ್ಮ ಭಾವನೆಗಳಿಗೆ ಶುದ್ಧತೆಯನ್ನು ತರುತ್ತದೆ. ಜ್ಞಾನವು ಮನಸ್ಸನ್ನು ಶುದ್ಧಗೊಳಿಸುತ್ತದೆ. ದಾನವು ಸಂಪತ್ತನ್ನು ಶುದ್ಧಗೊಳಿಸುತ್ತದೆ ಮತ್ತು ತುಪ್ಪವು ನಮ್ಮ ಆಹಾರವನ್ನು ಶುದ್ಧಗೊಳಿಸುತ್ತದೆ.

ನೀವು ಭಜನೆ ಮತ್ತು ಭೋಜನದ ವಿಷಯದಲ್ಲಿ ಎಂದಿಗೂ ಸಂಕೋಚಪಡಬಾರದು. ಇಲ್ಲದಿದ್ದರೆ, ನೀವು ಶಾರೀರಿಕವಾಗಿಯೂ, ಆಧ್ಯಾತ್ಮಿಕವಾಗಿಯೂ ಹಸಿದುಕೊಂಡಿರುವಿರಿ.

ಪ್ರಶ್ನೆ: ಗುರೂಜಿ, ಜೀವನದ ಉದ್ದೇಶವೇನು?
ಶ್ರೀ ಶ್ರೀ ರವಿಶಂಕರ್: ಇದು ನಿನ್ನ ಮನಸ್ಸಿನಲ್ಲಿ ಎದ್ದ ಒಂದು ಬಹಳ ಒಳ್ಳೆಯ ಪ್ರಶ್ನೆ. ನಿನ್ನನ್ನು ಬಹಳ ಅದೃಷ್ಟಶಾಲಿಯೆಂದು ಪರಿಗಣಿಸು. ’ಜೀವನದ ಉದ್ದೇಶವೇನು?’ ಈ ಪ್ರಶ್ನೆಯು ನಿನ್ನ ಮನಸ್ಸಿನಲ್ಲಿ ಎದ್ದುದು ನಿನ್ನ ಅದೃಷ್ಟ. ನಾವು ಸುಮ್ಮನೇ ಜೀವನವನ್ನು ಜೀವಿಸುತ್ತಿರುತ್ತೇವೆ ಮತ್ತು ಜೀವನವು ನಿಜವಾಗಿಯೂ ಏನು ಎಂದು ಯೋಚಿಸುವುದೂ ಇಲ್ಲ. ಯಾರಿಗೆ ತಿಳಿದಿದೆಯೋ ಅವರು ಎಂದಿಗೂ ಹೇಳುವುದಿಲ್ಲ ಮತ್ತು ಯಾರು ಹೇಳುತ್ತಾರೋ ಅವರಿಗೆ ತಿಳಿದಿಲ್ಲ.

ಪ್ರಶ್ನೆ: ಗುರೂಜಿ, ದೇವರು ನಮ್ಮಲ್ಲಿ ವಾಸಿಸುತ್ತಿರುವುದಾದರೆ, ಮತ್ತೆ ಯಾಕೆ ನಾವು ಜೀವನದಲ್ಲಿ ದುಃಖವನ್ನು ಅನುಭವಿಸುತ್ತೇವೆ?
ಶ್ರೀ ಶ್ರೀ ರವಿಶಂಕರ್: ಅದು ಯಾಕೆಂದರೆ ನಾವು ದೇವರ ವಿರುದ್ಧ ದಿಕ್ಕಿಗೆ ಮುಖ ಮಾಡಿ ನಿಲ್ಲುತ್ತೇವೆ. ಸೂರ್ಯನು ಅಲ್ಲಿದ್ದಾನೆ, ಆದರೆ ನೀವು ಅವನ ಕಡೆಗೆ ಬೆನ್ನುಹಾಕಿ ನಿಂತರೆ, ಆಗ ನೀವು ನಿಮ್ಮ ಮುಂದೆ ನಿಮ್ಮ ನೆರಳನ್ನು ಕಾಣುವಿರಿ. ನಿಮ್ಮ ದುಃಖವು ಆ ನೆರಳಾಗಿದೆ. ಅದು ನಿಜವಲ್ಲ, ಆದರೆ ಒಂದು ನೆರಳು, ದೇವರ ಕಡೆಗೆ ನೀವು ಮುಖಮಾಡದಿರುವುದರ ನೆರಳು. ನಾವು ದೇವರಿಂದ ದೂರಕ್ಕೆ ತಿರುಗಿದರೆ, ನಾವು ನಮ್ಮ ಜೀವನದಲ್ಲಿ ದುಃಖವನ್ನು ಅನುಭವಿಸುತ್ತೇವೆ.

ಪ್ರಶ್ನೆ: ಗುರೂಜಿ, ಭಗವದ್ಗೀತೆ ಮತ್ತು ಮಹಾಭಾರತದ ನಡುವಿರುವ ವ್ಯತ್ಯಾಸವೇನು?
ಶ್ರೀ ಶ್ರೀ ರವಿಶಂಕರ್: ಭಗವದ್ಗೀತೆಯು ಮಹಾಭಾರತದಲ್ಲಿ ಒಂದು ಅಧ್ಯಾಯದ ಭಾಗ.

ಪ್ರಶ್ನೆ: ಗುರೂಜಿ, ಒಬ್ಬರು ಗುರು ಹಾಗೂ ಒಬ್ಬರು ಸದ್ಗುರುವಿನ ನಡುವಿರುವ ವ್ಯತ್ಯಾಸವೇನು?
ಶ್ರೀ ಶ್ರೀ ರವಿಶಂಕರ್: ಯಾವುದೇ ವ್ಯತ್ಯಾಸವಿಲ್ಲ, ಅವರಿಬ್ಬರೂ ಒಂದೇ. ತನ್ನಲ್ಲಿ ಸತ್ಯದ ಸದ್ಗುಣವಿಲ್ಲದವರೊಬ್ಬರನ್ನು ಗುರುವೆಂದು ಕರೆಯಲು ಸಾಧ್ಯವಿಲ್ಲ. ಅದೊಂದು ವಿಶೇಷಣ, ಬೇರೇನೂ ಅಲ್ಲ.

ಪ್ರಶ್ನೆ: ಗುರೂಜಿ, ಮನಸ್ಸಿನಲ್ಲಿ ಕೇವಲ ಒಂದು ಕುತೂಹಲವಿದೆ, ಯಶಸ್ಸು ಎಂದರೇನು ಮತ್ತು ನಾವು ಸಂಪೂರ್ಣವಾಗಿ ಯಶಸ್ವಿಯಾಗುವುದು ಹೇಗೆ?
ಶ್ರೀ ಶ್ರೀ ರವಿಶಂಕರ್: ಯಶಸ್ಸಿನ ಸಂಕೇತವೆಂದರೆ, ನಿನ್ನ ಮುಖದ ಮೇಲೆ ಒಂದು ಮುಗುಳ್ನಗು. ಏನಾದರೂ ಪರವಾಗಿಲ್ಲ ನೀನು ಮುಗುಳ್ನಗುತ್ತಿದ್ದರೆ, ಅದು ಯಶಸ್ಸಿನ ಸಂಕೇತ.

ಪ್ರಶ್ನೆ: ಗುರೂಜಿ, ನೀವು ನಕ್ಸಲರನ್ನು ಮತ್ತು ಭಯೋತ್ಪಾದಕರನ್ನು ಒಳ್ಳೆಯ ವ್ಯಕ್ತಿಗಳಾಗಿ ಬದಲಾಯಿಸಬಲ್ಲಿರೇ?
ಶ್ರೀ ಶ್ರೀ ರವಿಶಂಕರ್: ಖಂಡಿತಾ, ಹಲವರು ಪರಿವರ್ತನೆಗೊಂಡಿದ್ದಾರೆ! ನಕ್ಸಲರಲ್ಲಿ ಹಲವರು ಮುಖ್ಯವಾಹಿನಿಗೆ ಸೇರಿದ್ದಾರೆ ಮತ್ತು ಒಳ್ಳೆಯ ವ್ಯಕ್ತಿಗಳಾಗಿದ್ದಾರೆ. ಪ್ರತಿಸಲವೂ ಚುನಾವಣೆಯ ಸಂದರ್ಭದಲ್ಲಿ, ಜಾರ್ಖಂಡಿನಲ್ಲಿ ಬಹಳಷ್ಟು ಸಮಸ್ಯೆಗಳಾಗುತ್ತಿದ್ದವು. ಹಲವರು ತಮ್ಮ ಜೀವವನ್ನು ಕಳಕೊಳ್ಳುತ್ತಿದ್ದರು. ಆದರೆ ಈ ಸಲ ನೀವು ನೋಡಿದ್ದೀರಿ, ಹಿಂಸೆಯ ಒಂದೇ ಒಂದು ಘಟನೆಯೂ ವರದಿಯಾಗಲಿಲ್ಲ. ಚುನಾವಣೆಯಲ್ಲಿ ಹಲವಾರು ಒಳ್ಳೆಯ ಜನರು ಭಾಗವಹಿಸಿದರು. ಹಲವಾರು ನಕ್ಸಲರು, ಸಾವಿರಾರು ಸಂಖ್ಯೆಯಲ್ಲಿ, ಮುಖ್ಯವಾಹಿನಿಯನ್ನು ಸೇರಲು ಪ್ರಾರಂಭಿಸಿದರು.

ಪ್ರಶ್ನೆ: ಕರ್ಮ, ಧರ್ಮ ಮತ್ತು ಆಧ್ಯಾತ್ಮ, ಇವುಗಳಲ್ಲಿ ಯಾವುದಕ್ಕೆ ಜೀವನದಲ್ಲಿ ಅಗ್ರಗಣ್ಯ ಪ್ರಾಮುಖ್ಯತೆಯನ್ನು ನೀಡಬೇಕು?
ಶ್ರೀ ಶ್ರೀ ರವಿಶಂಕರ್: ನೀನು ಟಿವಿಯನ್ನು ಮೊದಲು ನೋಡುವಿಯೋ ಅಥವಾ ಮೊದಲು ಕೇಳಿ ನಂತರ ನೋಡುವೆಯೋ? ಅದು ಕೆಲಸ ಮಾಡುವುದೇ? ಇಲ್ಲ, ಅದು ಏಕಕಾಲಕ್ಕೆ ಸಾಗುತ್ತದೆ. ಧರ್ಮ, ಕರ್ಮ, ಆಧ್ಯಾತ್ಮ, ಅವುಗಳೆಲ್ಲಾ ಕೈ ಕೈ ಹಿಡಿದುಕೊಂಡು ಹೋಗುತ್ತವೆ.

ಪ್ರಶ್ನೆ: ಗುರೂಜಿ, ನಾವು ಆರ್ಟ್ ಆಫ್ ಲಿವಿಂಗನ್ನು ಪ್ರತಿನಿಧೀಕರಿಸುತ್ತೇವೆ. ಆದುದರಿಂದ, ಪ್ರಪಂಚವನ್ನು ಎದುರಿಸುವಾಗ ನಮ್ಮ ವರ್ತನೆ ಹೇಗಿರಬೇಕು?
ಶ್ರೀ ಶ್ರೀ ರವಿಶಂಕರ್: ನೀನೊಬ್ಬ ಒಳ್ಳೆಯ ವ್ಯಕ್ತಿಯಾಗಿರಬೇಕು, ಸತ್ಯತೆಯೊಂದಿಗೆ. ನಕಲಿಯಾಗಿರುವ ಒಬ್ಬನಲ್ಲ. ನೀನು ಒಳಗೂ ಹೊರಗೂ ಒಂದೇ ಆಗಿರಬೇಕು. ಇದರರ್ಥ, ಸತ್ಯದ ಬಗ್ಗೆ ಮಾತನಾಡುವಾಗ ನೀನು ಕೋಪಗೊಳ್ಳಬೇಕೆಂದಲ್ಲ. ಹೆಚ್ಚಾಗಿ, ಪರಿಪೂರ್ಣತೆಯನ್ನು ಬಯಸುವ ಜನರು ಮತ್ತು ಯಾರು ಪರಿಪೂರ್ಣರಾಗಿರುವರೋ ಅವರು ಬಹಳ ಕೋಪಗೊಳ್ಳುತ್ತಾರೆ. ಅಜ್ಞಾನದೊಂದಿಗೆ ವ್ಯವಹರಿಸುವುದು ಹೇಗೆಂಬುದನ್ನು ನಾವು ತಿಳಿದಿರಬೇಕು. ನೀವು ಪ್ರಾಮಾಣಿಕತೆಯಿಂದ ಒಂದು ಸಹಜವಾದ ಮತ್ತು ಸರಳವಾದ ಜೀವನವನ್ನು ಜೀವಿಸುತ್ತಿದ್ದರೆ, ಆಗ ನೀವು ಆರ್ಟ್ ಆಫ್ ಲಿವಿಂಗನ್ನು ಕಲಿತಿರುತ್ತೀರಿ.

ಪ್ರಶ್ನೆ: ಗುರೂಜಿ, ನಾವು ಮಾಡುತ್ತಿರುವುದು ಸರಿಯೇ ಅಥವಾ ಅಲ್ಲವೇ ಎಂಬುದನ್ನು ನಾವು ತಿಳಿಯುವುದು ಹೇಗೆ?
ಶ್ರೀ ಶ್ರೀ ರವಿಶಂಕರ್: ನಿನ್ನನ್ನೇ ಕೇಳು; ಅಂತರಾತ್ಮವನ್ನು ಕೇಳು. ನೀನು ಏನಾದರೂ ತಪ್ಪನ್ನು ಮಾಡಿದ್ದರೆ, ಅದು ನಿನ್ನನ್ನು ಚುಚ್ಚುತ್ತದೆ. ಆದರೆ ನೀನು ಏನಾದರೂ ಸರಿಯಾದುದನ್ನು ಮಾಡಿದ್ದರೆ, ನೀನು ನಿರ್ಭಯವಾಗಿರುವೆ. ನೀನು ಏನಾದರೂ ಸರಿಯಾದುದನ್ನು ಮಾಡುವಾಗ ನಿನ್ನಲ್ಲಿ ಯಾವುದೇ ಭಯವಿರುವುದಿಲ್ಲ. ನೀನೊಂದು ತಪ್ಪು ಕೆಲಸವನ್ನು ಮಾಡುವಾಗ, ನಿನಗೊಂದು ಚುಚ್ಚಿದ ಅನುಭವವಾಗುತ್ತದೆ, ಒಳಗಡೆ ಒಂದು ಕಿರಿಕಿರಿಯಾಗುತ್ತದೆ. ನಿನಗೆ ಸಮಸ್ಯೆಗಳು ಎದುರಾಗಲು ತೊಡಗುತ್ತವೆ.

ಪ್ರಶ್ನೆ: ಭ್ರಷ್ಟಾಚಾರ ಮತ್ತು ಭಯೋತ್ಪಾದನೆ ಕೊನೆಯಾಗುವುದು ಯಾವಾಗ? ಸನಾತನ ಧರ್ಮವು ಕೊನೆಯಾಗುವುದೇ?
ಶ್ರೀ ಶ್ರೀ ರವಿಶಂಕರ್: ಇಲ್ಲ, ಸನಾತನ ಧರ್ಮವು ಎಂದಿಗೂ ಕೊನೆಯಾಗದು. ಅದು ಬಹಳ ಪುರಾತನ ಕಾಲದಿಂದಲೂ ಅಭ್ಯಾಸ ಮಾಡಲ್ಪಡುತ್ತಿದೆ ಮತ್ತು ಹೀಗೆಯೇ ಮುಂದುವರಿಯುತ್ತದೆ. ಆರ್ಟ್ ಆಫ್ ಲಿವಿಂಗ್ ಸ್ಥಾಪನೆಯಾಗಿ ಮೂವತ್ತು ವರ್ಷಗಳಾದವು. ಇವತ್ತು, ಯೋಗ, ಪ್ರಾಣಾಯಾಮ ಮತ್ತು ಸುದರ್ಶನ ಕ್ರಿಯೆಯು ಪ್ರಪಂಚದಾದ್ಯಂತ ೧೫೨ ದೇಶಗಳಲ್ಲಿ ಅಭ್ಯಾಸ ಮಾಡಲ್ಪಡುತ್ತಿವೆಯೆಂದು ನಾವು ಹೇಳಬಹುದು. ನೀವು ದಕ್ಷಿಣ ಧ್ರುವದ ಕೊನೆಯ ನಗರವಾದ ಟಿಯೆರಾ ಡೆಲ್ ಫುಯೆಗೋಕ್ಕೆ ಹೋದರೆ, ಸಾವಿರಾರು ಜನರು ಪ್ರಾಣಾಯಾಮ ಮಾಡುವುದನ್ನು, ಧ್ಯಾನ ಮಾಡುವುದನ್ನು ಮತ್ತು ಶಾಖಾಹಾರಿಗಳಾಗಿ ಮಾರ್ಪಡುತ್ತಿರುವುದನ್ನು ಕಾಣಬಹುದು. ನೀವು ಉತ್ತರ ಧ್ರುವದ ಕೊನೆಯ ನಗರವಾದ ಟ್ರೋಮ್ಸೋಕ್ಕೆ ಹೋದರೆ, ಅಲ್ಲಿ ಎರಡು ತಿಂಗಳ ವರೆಗೆ ಸೂರ್ಯನ ಬೆಳಕಿರುವುದಿಲ್ಲ. ಸೂರ್ಯನೂ ಚಂದ್ರನೂ ಉದಯಿಸುವುದಿಲ್ಲ. ಜನರು ನನ್ನನ್ನು ಭೇಟಿಯಾಗಲು ವಿಮಾನ ನಿಲ್ದಾಣದಲ್ಲಿ ಕಾಯುತ್ತಿರುವುದನ್ನು ನೋಡಿ ನಾನು ಕೂಡಾ ಆಶ್ಚರ್ಯಗೊಂಡೆ. ಅವರಂದರು, "ನಾವು ಇಲ್ಲಿನ ವಿಶ್ವವಿದ್ಯಾನಿಲಯದಲ್ಲಿ ಸಾಧನೆ ಮಾಡುತ್ತಿದ್ದೇವೆ." ಇದು ಪ್ರಪಂಚದಾದ್ಯಂತ ಎಲ್ಲೆಡೆಯಲ್ಲಿಯೂ ಇದೆ.
ಮಾರ್ಚ್ ೧೧ರಂದು ನಾನು ಪಾಕಿಸ್ತಾನಕ್ಕೆ ಕೂಡಾ ತೆರಳಲಿದ್ದೇನೆ. ಕಳೆದ ಸಲ ನಾನು ಪಾಕಿಸ್ತಾನಕ್ಕೆ ಹೋದುದು ಏಳೂವರೆ ವರ್ಷಗಳ ಹಿಂದೆ. ನಾನು ಇಂದೋರಿಗೆ ಬಂದೆ ಮತ್ತು ನಂತರ ಪಾಕಿಸ್ತಾನಕ್ಕೆ ಹೋದೆ.
ಈ ಸಲ ಪುನಃ, ಮಧ್ಯಪ್ರದೇಶದಲ್ಲಿ ನಾನು ಇಂದೋರ್ ಮತ್ತು ರತ್ಲಂಗೆ ಬಂದಿದ್ದೇನೆ ಹಾಗೂ ಪಾಕಿಸ್ತಾನಕ್ಕೆ ಹೋಗಲಿದ್ದೇನೆ. ಅಲ್ಲಿ ಕೂಡಾ, ಸಾವಿರಾರು ಜನರು ಸಾಧನೆಯನ್ನು ಮಾಡುತ್ತಿದ್ದಾರೆ. ಅವರ ಊರಿಗೆ ಬರುವಂತೆ ಅವರು ನನ್ನಲ್ಲಿ ಬಹಳಷ್ಟು ವಿನಂತಿಗಳನ್ನು ಮಾಡುತ್ತಿದ್ದರು. ಅವರು ನಿಜವಾಗಿಯೂ, ನಾನು ಪಾಕಿಸ್ತಾನಕ್ಕೆ ಹೋಗಬೇಕೆಂದು ಬಯಸಿದ್ದರು ಮತ್ತು ಹಾಗಾಗಿ ನಾನು ಇಲ್ಲಿಂದ ಪಾಕಿಸ್ತಾನಕ್ಕೆ ತೆರಳಲಿದ್ದೇನೆ. ಈ ಪ್ರಪಂಚದ ಪ್ರತಿಯೊಂದು ಮೂಲೆಗೂ, ನಮ್ಮ ಜ್ಞಾನ ಮತ್ತು ಧ್ಯಾನ ಸಂಪ್ರದಾಯದ ಅವಶ್ಯಕತೆಯಿದೆ. ನಾವದನ್ನು ಒಂದು ಅರ್ಥಪೂರ್ಣ ರೀತಿಯಲ್ಲಿ ಪ್ರಸ್ತುತಪಡಿಸಬೇಕು. ನಾನು ಪಾಕಿಸ್ತಾನಕ್ಕೆ ಹೋದಾಗ, ಜನರು ನನ್ನಲ್ಲಿ ಈ ಪ್ರಶ್ನೆಯನ್ನು ಕೇಳಿದರು, "ನಿಮ್ಮ ದೇಶದಲ್ಲಿ ಜನರು ಹಲವಾರು ದೇವರುಗಳನ್ನು ಪೂಜಿಸುತ್ತಾರೆ, ಅದೇ ವೇಳೆ ನಮ್ಮ ದೇಶದಲ್ಲಿ ನಾವು ಕೇವಲ ಒಬ್ಬರನ್ನು ಪೂಜಿಸುತ್ತೇವೆ."
ನಾನಂದೆ, "ಇಲ್ಲ, ನಾವು ಕೂಡಾ ಕೇವಲ ಒಬ್ಬರು ದೇವರನ್ನು ಪೂಜಿಸುತ್ತೇವೆ, ಆದರೆ ಹೇಗೆಂದು ನಿಮಗೆ ಗೊತ್ತಾ? ಈಗ, ಒಂದೇ ಗೋಧಿ ಹಿಟ್ಟಿನಿಂದ ನೀವು ಸಮೋಸಾ, ಪರಾಟಾ, ಹಲ್ವಾ ಮತ್ತು ಇತರ ವ್ಯಂಜನಗಳನ್ನು ತಯಾರಿಸುತ್ತೀರಿ. ಅವೆಲ್ಲವೂ ಒಂದೇ ಗೋಧಿ ಹಿಟ್ಟಿನಿಂದ ಮಾಡಲ್ಪಡುತ್ತವೆ. ಕರಾಚಿ ಹಲ್ವಾ ಕೂಡಾ ಗೋಧಿ ಹಿಟ್ಟಿನಿಂದಲೇ ಮಾಡಲ್ಪಡುತ್ತದೆ."
ನಾನು ಅವರಲ್ಲಿ ಕೇಳಿದೆ, "ನೀವು ಯಾಕೆ ಅದೇ ಗೋಧಿಯಿಂದ ಅಷ್ಟೊಂದು ವ್ಯಂಜನಗಳನ್ನು ತಯಾರಿಸುತ್ತೀರಿ? ಅದೇ ರೀತಿಯಲ್ಲಿ, ಕೇವಲ ಒಬ್ಬನೇ ದೇವರಿದ್ದರೂ, ನಾವು ಅವನನ್ನು ಬೇರೆ ಬೇರೆ ರೀತಿಗಳಲ್ಲಿ ಪೂಜಿಸುತ್ತೇವೆ. ಒಬ್ಬನೇ ದೇವರಲ್ಲಿ ಬೇರೆ ಬೇರೆ ಗುಣಗಳಿವೆ ಮತ್ತು ಪ್ರತಿಯೊಂದು ಗುಣಕ್ಕೂ ನಾವೊಂದು ರೂಪವನ್ನು ನೀಡಿದ್ದೇವೆ. ಇಸ್ಲಾಂನಲ್ಲಿ ಅಲ್ಲಾನು ತೊಂಭತ್ತೊಂಭತ್ತು ಇತರ ಹೆಸರುಗಳಿಂದ ತಿಳಿಯಲ್ಪಟ್ಟಿದ್ದಾನೆ.
ಸನಾತನ ಧರ್ಮದಲ್ಲಿ ನೂರ ಎಂಟು ಹೆಸರುಗಳಿವೆ ಮತ್ತು ನಾವು ಅಷ್ಟು ರೂಪಗಳನ್ನು ಕೂಡಾ ಮಾಡಿದ್ದೇವೆ. ನೂರ ಎಂಟು ಕೂಡಾ ಅಲ್ಲ, ಸಾವಿರ ಹೆಸರುಗಳೆಂದು ನಾನು ಹೇಳುತ್ತೇನೆ, ’ಸಹಸ್ರ ನಾಮ್!’ ಆದರೆ ಒಬ್ಬನೇ ಒಬ್ಬ ದೇವರಿರುವುದು, ಒಬ್ಬ ’ನೂರ್’, ಒಬ್ಬ ’ಪರಮಾತ್ಮ’ ಮತ್ತು ನಾವು ಬೇರೆ ಬೇರೆ ಹೆಸರುಗಳಿಂದ, ರೂಪಗಳಿಂದ ಪೂಜಿಸುವುದು ಅವನನ್ನು ಮಾತ್ರ. ನಾನಿದನ್ನು ಅವರೊಂದಿಗೆ ಹಂಚಿದ ಬಳಿಕ ಅವರಿಗೆ ಬಹಳ ಸಂತೋಷವಾಯಿತು.
ಅವರಂದರು, "ನಾವಿದನ್ನು ಈ ರೀತಿಯಲ್ಲಿ ಎಂದಿಗೂ ಕೇಳಿರಲಿಲ್ಲ, ಈ ಜ್ಞಾನವನ್ನು ಗಳಿಸಲು ನಮಗೆ ಎಂದಿಗೂ ಸಾಧ್ಯವಾಗಿರಲಿಲ್ಲ. ನಾವು ಯಾವತ್ತೂ ನೀವು (ಇತರ ಧರ್ಮಗಳಿಗೆ ಸೇರಿದ ಜನರು) ನಮ್ಮಿಂದ ಬೇರೆಯವರೆಂದು ತಿಳಿದಿದ್ದೆವು."
ಸನಾತನ ಧರ್ಮವೇನು? ಪ್ರಾಚೀನ ಕಾಲದಿಂದ, ’ವಸುದೈವ ಕುಟುಂಬಕಂ’ ಎಂದು ಹೇಳಲಾಗಿದೆ. ಅಂದರೆ, ಈ ಪ್ರಪಂಚವು ನನ್ನ ಸ್ವಂತದ್ದು; ಈ ಪ್ರಪಂಚವು ಒಂದು ಕುಟುಂಬ (ಏಕ ಪ್ರಪಂಚ ಕುಟುಂಬ). ನೀವು ಇಂತಹ ಉದಾತ್ತ ಭಾವಗಳನ್ನು ಹೊಂದಿದ್ದರೆ, ನೀವು ನಿಮ್ಮನ್ನು ಧಾರ್ಮಿಕರೆಂದು ಕರೆದುಕೊಳ್ಳಬಹುದು.

ಪ್ರಶ್ನೆ: ಗುರೂಜಿ, ತಂತ್ರಜ್ಞಾನದ ಈ ಪೀಳಿಗೆಯಲ್ಲಿ, ಯುವಜನತೆಯಲ್ಲಿ ಆಧ್ಯಾತ್ಮಿಕತೆಯು ಕಳೆದು ಹೋಗುತ್ತಿದೆ.
ಶ್ರೀ ಶ್ರೀ ರವಿಶಂಕರ್: ಇಲ್ಲವೇ ಇಲ್ಲ. ನೋಡಿ, ಇಲ್ಲಿ ಹಲವಾರು ಯುವ ಜನರು ಕುಳಿತಿದ್ದಾರೆ!

ಪ್ರಶ್ನೆ: ಜನರು ಹಣದ ಹಿಂದೆ ಓಡುತ್ತಾರೆ. ಅಂತಹ ಪರಿಸ್ಥಿತಿಗಳಲ್ಲಿ , ನಾವು ಆಧ್ಯಾತ್ಮದೊಂದಿಗೆ ಸಂಪರ್ಕದಲ್ಲಿ ಉಳಿಯುವುದು ಹೇಗೆ? ನಾನು ಎಲ್ಲಿಂದ ಪ್ರಾರಂಭಿಸಬೇಕು?
ಶ್ರೀ ಶ್ರೀ ರವಿಶಂಕರ್: ಆಧ್ಯಾತ್ಮ ಮತ್ತು ಆರ್ಥಿಕ ವ್ಯವಸ್ಥೆಗಳು ಪರಸ್ಪರ ಶತ್ರುಗಳಲ್ಲ ಎಂಬ ವಿಷಯವನ್ನು ಮೊದಲು ತಿಳಿ. ಈ ವಿಷಯವನ್ನು ಸ್ವೀಕರಿಸು. ಆಧ್ಯಾತ್ಮವೆಂದರೆ, ನೀನು ಜೀವನದಲ್ಲಿ ಸಮೃದ್ಧಿ ಹೊಂದಲು ಸಾಧ್ಯವಿಲ್ಲ ಎಂದು ಯೋಚಿಸಬೇಡ. ಸಮೃದ್ಧನಾಗು, ಸಂಪತ್ತನ್ನು ಸಂಗ್ರಹಿಸು, ಅದರಲ್ಲೇನೂ ತೊಂದರೆಯಿಲ್ಲ, ಆದರೆ ಅದನ್ನು ಒಂದು ಧಾರ್ಮಿಕ ರೀತಿಯಲ್ಲಿ ಮಾಡು.

ಪ್ರಶ್ನೆ: ಗುರೂಜಿ, ಇವತ್ತು ಎಲ್ಲೆಡೆಗಳಲ್ಲೂ ಧಾರ್ಮಿಕ ಕೂಟಗಳು ಆಯೋಜಿಸಲ್ಪಡುತ್ತಿವೆ, ಆದರೆ ಧರ್ಮವು ಎಲ್ಲೋ ಕಾಣೆಯಾಗಿದೆ. ಕಾರಣವೇನಿರಬಹುದು?
ಶ್ರೀ ಶ್ರೀ ರವಿಶಂಕರ್: ನನಗೆ ಹಾಗನ್ನಿಸುವುದಿಲ್ಲ. ನೀನಿದನ್ನು ಆ ರೀತಿಯಲ್ಲಿ ನೋಡುತ್ತಿರುವೆಯಾದರೆ, ನಿನ್ನ ಕಣ್ಣುಗಳನ್ನು ಉಜ್ಜಿಕೋ. ಪ್ರಪಂಚದಲ್ಲಿ ಒಳ್ಳೆಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಕೆಟ್ಟದನ್ನು ಮಾಡುವವರು ಕಡಿಮೆ ಸಂಖ್ಯೆಯಲ್ಲಿ ಮಾತ್ರವಿದ್ದಾರೆ. ಹೀಗಾದರೂ, ಒಳ್ಳೆಯ ಜನರು ಮೌನವಾಗಿರುತ್ತಾರೆ, ಇದು ತಪ್ಪು. ಸಮಾಜವು ಒಂದು ಕುಸಿತವನ್ನು ಕಂಡಿದ್ದರೆ, ಅದು ಒಳ್ಳೆಯ ಜನರ ಮೌನದಿಂದಾಗಿ, ಅವರು ನಿಷ್ಕ್ರಿಯರಾಗಿದ್ದ ಕಾರಣದಿಂದ. ಕೆಟ್ಟ ಜನರು ಇರುವುದು ಕೆಲವರು ಮಾತ್ರ. ಒಳ್ಳೆಯ ಜನರು ಸಕ್ರಿಯರಾಗುವ ದಿನ, ಕೆಟ್ಟ ಜನರು ಮಟ್ಟ ಹಾಕಲ್ಪಡುತ್ತಾರೆ.

ಪ್ರಶ್ನೆ: ಗುರೂಜಿ, ೨೦೧೨ರ ಬಗ್ಗೆ ಬಹಳಷ್ಟು ಹೇಳಲಾಗಿದೆ. ಅಂತಹ ಒಂದು ಪರಿಸ್ಥಿತಿಯಲ್ಲಿ, ಭಾರತದ ಭವಿಷ್ಯವು ನಿಮಗೆ ಹೇಗೆ ಕಾಣಿಸುತ್ತಿದೆ?
ಶ್ರೀ ಶ್ರೀ ರವಿಶಂಕರ್: ಭಾರತದ ಭವಿಷ್ಯವು ಉಜ್ವಲವಾಗಿದೆ. ಜನರು ಈ ವರ್ಷ ಎಚ್ಚರಗೊಳ್ಳುತ್ತಾರೆ. ಇಲ್ಲಿ ಯುವಜನರು ಎಚ್ಚೆತ್ತುಕೊಳ್ಳುತ್ತಿರುವರು ಎಂಬುದರ ಬಗ್ಗೆ ನನಗೆ ಖಚಿತವಿದೆ. ಅದು ಚುನಾವಣೆಯಲ್ಲಿ ಕೂಡಾ ಕಂಡುಬರುತ್ತಿದೆ. ಜನರು ಎಚ್ಚೆತ್ತುಕೊಳ್ಳುತ್ತಿದ್ದಾರೆ ಮತ್ತು ಭ್ರಷ್ಟಾಚಾರದ ವಿರುದ್ಧ ತಮ್ಮ ಧ್ವನಿ ಎತ್ತುತ್ತಿದ್ದಾರೆ.

ಪ್ರಶ್ನೆ: ಗುರೂಜಿ, ಒಬ್ಬ ಪುರುಷ ಮತ್ತು ಒಬ್ಬಳು ಸ್ತ್ರೀಯ ನಡುವೆ ಅಷ್ಟೊಂದು ತಾರತಮ್ಯ ಯಾಕಿದೆ?
ಶ್ರೀ ಶ್ರೀ ರವಿಶಂಕರ್: ಒಬ್ಬರು ತಾರತಮ್ಯ ಮಾಡಬಾರದು. ದೇವರನ್ನು ’ಅರ್ಧನಾರೀಶ್ವರ’ ನನ್ನಾಗಿ ಕಾಣುವಂತಹ ಒಂದು ದೇಶ ಭಾರತ. ಅಂದರೆ, ಅರ್ಧ ಸ್ತ್ರೀ ಮತ್ತು ಅರ್ಧ ಪುರುಷ. ವಾಸ್ತವವಾಗಿ ಭಾರತದಲ್ಲಿ, ಸ್ತ್ರೀಯರು ಪುರುಷರಿಗಿಂತ ಒಂದು ಹೆಜ್ಜೆ ಮುಂದೆ ಎಂದು ಪರಿಗಣಿಸಲ್ಪಟ್ಟಿದ್ದಾರೆ. ಒಬ್ಬರು ದಂಪತಿಯನ್ನು ಉದ್ದೇಶಿಸುವಾಗ, ಸ್ತ್ರೀಯ ಹೆಸರನ್ನು ಮೊದಲು ಉಲ್ಲೇಖಿಸುವುದು; ಶ್ರೀಮತಿ ಮತ್ತು ಶ್ರೀ ಎಂದು. ಬೇರೆ ಕಡೆಗಳಲ್ಲಿ ಅದು ಮಿಸ್ಟರ್ ಮತ್ತು ಮಿಸೆಸ್ ಎಂದಿರುತ್ತದೆ. ಇಂಗ್ಲೀಷಿನಲ್ಲಿ ನೀವು ಮಿಸೆಸ್ ಆಂಡ್ ಮಿಸ್ಟರ್ ಎಂದು ಎಂದಿಗೂ ಹೇಳುವುದಿಲ್ಲ, ಬದಲಾಗಿ ಮಿಸ್ಟರ್ ಆಂಡ್ ಮಿಸೆಸ್ ಎಂದು. ಆದರೆ ಭಾರತದಲ್ಲಿ ನೀವು ಶ್ರೀಮತಿ ಮತ್ತು ಶ್ರೀ ಎಂದು ಹೇಳುತ್ತೀರಿ.

ಪ್ರಶ್ನೆ: ಗುರೂಜಿ, ಜೀವನದಲ್ಲಿ ಯಾವುದಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ಕೊಡಬೇಕು, ನಮಗೆ ಹತ್ತಿರವಿರುವ ಜನರ ಸಂತೋಷಕ್ಕೆಯೇ ಅಥವಾ ನಮ್ಮ ಸ್ವಂತ ಸಂತೋಷಕ್ಕೆಯೇ?
ಶ್ರೀ ಶ್ರೀ ರವಿಶಂಕರ್: ಅವುಗಳನ್ನು ನಿನ್ನ ಎರಡು ಕಣ್ಣುಗಳಾಗಿ ಪರಿಗಣಿಸು. ನೀನು ಸಂತೋಷವಾಗಿದ್ದರೆ, ಆಗ ಮಾತ್ರ ನೀನು ಇತರರನ್ನು ಸಂತೋಷವಾಗಿರಿಸಲು ಸಾಧ್ಯ, ಮತ್ತು ಇತರರನ್ನು ಸಂತೋಷಪಡಿಸುವುದರಲ್ಲಿ ನೀನು ನಿನ್ನ ಸಂತೋಷವನ್ನು ಕಂಡುಕೊಳ್ಳುವುದಾದರೆ, ಆಗ ನೀನು ಜೀವನದಲ್ಲಿ ಬಹಳಷ್ಟು ಪ್ರಗತಿ ಹೊಂದುವೆ.

ಪ್ರಶ್ನೆ: ಗುರೂಜಿ, ಜೀವನದಲ್ಲಿನ ಏಳು ಬೀಳುಗಳ ಸಂದರ್ಭಗಳಲ್ಲಿ, ಸಂತುಲನವನ್ನು ಕಾಪಾಡಿಕೊಳ್ಳಲು ಮತ್ತು ಸಂತೋಷವಾಗಿರಲು ನಾವು ಏನು ಮಾಡಬೇಕು?
ಶ್ರೀ ಶ್ರೀ ರವಿಶಂಕರ್: ಗಾನ, ಜ್ಞಾನ ಮತ್ತು ಧ್ಯಾನ.

ಪ್ರಶ್ನೆ: ಮೋಕ್ಷಕ್ಕಿರುವ ದಾರಿ ಯಾವುದು?
ಶ್ರೀ ಶ್ರೀ ರವಿಶಂಕರ್: ನೀನು ಸರಿಯಾದ ಜಾಗದಲ್ಲಿರುವೆ ಮತ್ತು ಸರಿಯಾದ ಮಾತನ್ನು ಕೇಳಿಸಿಕೊಳ್ಳುತ್ತಿರುವೆ. ಮೋಕ್ಷ ಹೊಂದಿದ ಒಬ್ಬರು ಮಾತ್ರ ನಿಮಗೆ ಮೋಕ್ಷ ನೀಡಬಲ್ಲರು. ನಾನು ಏನು ಹೇಳುತ್ತಿರುವೆನೆಂಬುದು ನಿನಗೆ ಅರ್ಥವಾಗುತ್ತಿದೆಯೇ?

ಪ್ರಶ್ನೆ: ಗುರೂಜಿ, ಯಾವ ವಯಸ್ಸಿಗೆ ನಿಮ್ಮಲ್ಲಿ ಆಧ್ಯಾತ್ಮದಲ್ಲಿ ಆಸಕ್ತಿ ಬಂತು?
ಶ್ರೀ ಶ್ರೀ ರವಿಶಂಕರ್: ಮೈ ಡಿಯರ್, ನಾನು ಹುಟ್ಟಿದಾಗ ನಾನದನ್ನು ಜೊತೆಯಲ್ಲೇ ತಂದೆ. ಇದು ನನ್ನ ಸ್ವಭಾವವಾಗಿತ್ತೆಂದು ನನಗನಿಸುತ್ತದೆ. ನನಗೆ ತಿಳಿಯದು, ಆದರೆ ನಾನು ಈ ಪ್ರಪಂಚದ ಬಗ್ಗೆ ತಿಳುವಳಿಕೆಯನ್ನು ಹೊಂದಿದ ಸಮಯದಿಂದ, ಇದು ಹೀಗೆಯೇ ಇದೆ. ಪ್ರಪಂಚವು ನನಗೆ ಹೊಸತಾಗಿಯೂ ಕಾಣಿಸುತ್ತದೆ, ಹಳತಾಗಿಯೂ ಕಾಣಿಸುತ್ತದೆ. ಎಲ್ಲರೂ ನನ್ನ ಸ್ವಂತದವರೆಂದು ಅನ್ನಿಸುತ್ತದೆ ಮತ್ತು ಯಾರೂ ನನಗೆ ಅಪರಿಚಿತರಲ್ಲ.

ಪ್ರಶ್ನೆ: ಗುರೂಜಿ, ತಪ್ಪು ದಾರಿಯಲ್ಲಿರುವ ಒಬ್ಬ ವ್ಯಕ್ತಿಯನ್ನು ಸರಿ ದಾರಿಗೆ ತರಲು ಸಾಕಷ್ಟು ಪ್ರಯತ್ನಗಳನ್ನು ಮಾಡಿದ ಬಳಿಕವೂ ನಾವು ಅದರಲ್ಲಿ ಸೋತರೆ, ಆಗ ನಾವು ಏನು ಮಾಡಬೇಕು?
ಶ್ರೀ ಶ್ರೀ ರವಿಶಂಕರ್: ತಪ್ಪು ದಾರಿಯಲ್ಲಿರುವ ವ್ಯಕ್ತಿಯನ್ನು ಸರಿ ದಾರಿಗೆ ತರಲು ಒಂದು ಪ್ರಯತ್ನ ಮಾಡು. ಪ್ರಯತ್ನವು ಫಲ ನೀಡದಿದ್ದರೆ, ಆಗ ಅವನಿಗಾಗಿ ಪ್ರಾರ್ಥಿಸು, ಅವನು ಖಂಡಿತವಾಗಿ ಸರಿ ದಾರಿಗೆ ಬರುತ್ತಾನೆ.
ಪ್ರಾರ್ಥನೆಯೆಂದರೆ ಒಂದು ಮೇಲ್ನೋಟಕ್ಕಿರುವ ಪ್ರಾರ್ಥನೆಯಲ್ಲ. ಅವನು ತಪ್ಪು ದಾರಿಯಲ್ಲಿ ನಡೆಯುತ್ತಿರುವುದನ್ನು ನೋಡಲು ಆಗುವ ನೋವನ್ನು ನೀನು ಅನುಭವಿಸಬೇಕು, ಮತ್ತು ಆ ನೋವನ್ನು ನಿನ್ನ ಬಳಿಯಲ್ಲಿಯೇ ಇಟ್ಟುಕೊಳ್ಳಬೇಡ. ಆ ನೋವನ್ನು ದೇವರಿಗೆ ಸಮರ್ಪಿಸು. ಒಂದು ಪ್ರಾರ್ಥನೆಯು ನಿನ್ನ ಹೃದಯದ ಆಳದಿಂದ ಏಳಬೇಕು, "ಈ ವ್ಯಕ್ತಿಯು ಬೇಗನೇ ಗುಣಮುಖನಾಗಲಿ", ಮತ್ತು ಅದು ಖಂಡಿತವಾಗಿ ನೆರವೇರುತ್ತದೆ. ಆಗಲೂ ಅದು ಪ್ರಯೋಜನವಾಗದಿದ್ದರೆ, ಆಗ ಅದು ಅವನ ಕರ್ಮ, ಅದನ್ನು ಮರೆತು ಬಿಡು!

ಪ್ರಶ್ನೆ: ಗುರೂಜಿ, ದೇವರು ನಿಜವಾಗಿಯೂ ಅಸ್ತಿತ್ವದಲ್ಲಿರುವನೇ? ಹೌದಾದರೆ, ನಾವು ಅವನನ್ನು ಅನುಭವಿಸುವುದು ಹೇಗೆ?
ಶ್ರೀ ಶ್ರೀ ರವಿಶಂಕರ್: ದೇವರು ಇದ್ದಾನೆ ಮತ್ತು ಅವನು ನಿನ್ನಲ್ಲಿ ಇದ್ದಾನೆ ಎಂದು ಹೇಳುವುದಕ್ಕಾಗಿ ನಾನು ಇಲ್ಲಿಗೆ ಬಂದಿದ್ದೇನೆ. ನಿಮಗೆ ಇದನ್ನು ಹೇಳಲಿಕ್ಕಾಗಿ ನಾನು ಇಲ್ಲಿಗೆ ಬಂದಿದ್ದೇನೆ. ಅವನನ್ನು ನೋಡಲು ಪ್ರಯತ್ನಿಸಬೇಡಿ. ಯಾರಾದರೂ ಬಂದು ನಿಮ್ಮಲ್ಲಿ, ದೇವರನ್ನು ನೋಡಲು ತಾನು ನಿಮಗೆ ಸಹಾಯ ಮಾಡುವುದಾಗಿ ಹೇಳಿದರೆ, ಅವನೊಬ್ಬ ಮೂರ್ಖನೆಂದು ಯೋಚಿಸಿ. ದೇವರು ಒಂದು ವಸ್ತುವೂ ಅಲ್ಲ, ಒಂದು ದೃಶ್ಯವೂ ಅಲ್ಲ, ಅವನು ನೋಡುಗನಲ್ಲಿ ಇದ್ದಾನೆ. ಅದಕ್ಕಾಗಿಯೇ, ಕೇವಲ ಧ್ಯಾನದಿಂದ ಮಾತ್ರ ನೀವು ದೇವರನ್ನು ಹೊಂದಲು ಸಾಧ್ಯ.
ಯಾರ ಮನಸ್ಸು ಬಹಿರ್ಮುಖವಾಗಿ ತಿರುಗಿರುವುದೋ ಅಂತಹ ವ್ಯಕ್ತಿಗೆ ಎಂದಿಗೂ ದೇವರನ್ನು ಹೊಂದಲು ಸಾಧ್ಯವಿಲ್ಲ. ಒಬ್ಬನು, ತಾನು ಭಗವಾನ್ ಹನುಮಂತನನ್ನು ನೋಡುವೆನೆಂದು ಅಂದುಕೊಳ್ಳುವುದಾದರೆ, ಆಗ ಅಲ್ಲಿ ಸ್ವಲ್ಪ ಭ್ರಮೆಯಿದೆ. ಅವನ ಮೆದುಳಿನಲ್ಲಿ ಏನೋ ತೊಂದರೆಯಿದೆ. ಯಾಕೆ? ಯಾಕೆಂದರೆ ನಿಮಗೆ ಎಂದಿಗೂ ನೋಡುವವನನ್ನು ಒಂದು ದೃಶ್ಯವನ್ನಾಗಿ ನೋಡಲು ಸಾಧ್ಯವಿಲ್ಲ. ಅವನು ಒಂದು ದೃಶ್ಯವೂ ಅಲ್ಲ, ಒಂದು ವಸ್ತುವೂ ಅಲ್ಲ, ಅವನು ನಮ್ಮಿಂದ ಬೇರೆಯೂ ಅಲ್ಲ. ಪರಮಾತ್ಮನು ಆತ್ಮನಲ್ಲಿ ಅಡಗಿದ್ದಾನೆ. ನೀವು ಧ್ಯಾನ ಮಾಡುವಾಗ ನಿಮಗೆ ಅನ್ನಿಸುತ್ತದೆ, "ವಾಹ್, ನಾನು ಎಲ್ಲೆಡೆಯೂ ಹುಡುಕಾಡುತ್ತಿದ್ದವನು ನನ್ನಲ್ಲಿಯೇ ಇದ್ದಾನೆ." ನಿಮಗೆ ಈ ಅನುಭವವಾಗುತ್ತದೆ. ಅದರ ನಂತರ, ಯಾರಿಗೂ ನಿಮ್ಮನ್ನು ಅಲ್ಲಾಡಿಸಲು ಸಾಧ್ಯವಾಗದು. ಯಾರಿಗೂ ನಿಮ್ಮ ಮುಖದಿಂದ ನಗುವನ್ನು ಅಳಿಸಿ ಹಾಕಲು ಸಾಧ್ಯವಾಗದು.
ಆದುದರಿಂದ, ದೇವರು ಇಲ್ಲಿದ್ದಾನೆ, ಈ ಕ್ಷಣದಲ್ಲಿಯೇ, ನಮ್ಮೊಳಗೆ. ಇದನ್ನು ತಿಳಿಯಿರಿ ಮತ್ತು ವಿಶ್ರಾಮ ಮಾಡಿ. ಇದನ್ನು ಸ್ವೀಕರಿಸಿಕೊಂಡು ವಿಶ್ರಾಮ ಮಾಡಿ.
ವಿಶ್ರಾಮ್ ಮೆ ರಾಮ್ ಹೈ! (ವಿಶ್ರಾಮದಲ್ಲಿ ರಾಮನಿದ್ದಾನೆ).

ಪ್ರಶ್ನೆ: ಗುರೂಜಿ, ಜೀವನದ ಸತ್ಯವೇನು? ಕೆಲವೊಮ್ಮೆ ನನಗನಿಸುತ್ತದೆ, ನಾನು ಒಂದು ಭ್ರಮೆಯ ಬಲೆಯಲ್ಲಿ ಜೀವಿಸುತ್ತಿದ್ದೇನೆಂದು!
ಶ್ರೀ ಶ್ರೀ ರವಿಶಂಕರ್: ಹೌದು, ಭ್ರಮೆಯಿಂದ ಹೊರಬರುವುದು ಜೀವನದ ಸತ್ಯವಾಗಿದೆ.

ಪ್ರಶ್ನೆ: ಗುರೂಜಿ, ನಾನು ಸಮಾಜಕ್ಕೆ ಹೇಗೆ ಕಾಣಿಕೆ ಸಲ್ಲಿಸಬಹುದು?
ಶ್ರೀ ಶ್ರೀ ರವಿಶಂಕರ್: ಇದೊಂದು ಬಹಳ ಒಳ್ಳೆಯ ಪ್ರಶ್ನೆ. ನೀನು ಏನು ಮಾಡಲು ಸಾಧ್ಯವಿದೆ ಎಂಬುದನ್ನು ನೀನು ಯೋಚಿಸು. ಎಲ್ಲಾ ಯುವಜನರು ಕೇವಲ ಆರು ತಿಂಗಳುಗಳ ಕಾಲ ನಮ್ಮೊಂದಿಗೆ ಕೈಜೋಡಿಸಬೇಕೆಂದು ನಾನು ಬಯಸುತ್ತೇನೆ ಮತ್ತು ನಾವು ಈ ದೇಶದಲ್ಲಿ ಎಲ್ಲೆಡೆಗಳಲ್ಲೂ ಕ್ರಾಂತಿಯ ಒಂದು ಅಲೆಯನ್ನು ತರೋಣ. ಆಗ ನೋಡಿ, ಹೇಗೆ ದೇಶವು ಬದಲಾಗುವುದೆಂದು. ಭಾರತವನ್ನು, ಈ ಪ್ರಪಂಚದಲ್ಲಿ ಅತ್ಯಂತ ಹೆಚ್ಚು ಮುಂದುವರಿದ ದೇಶವಾಗಿ ಕಾಣಬೇಕೆಂಬ ಒಂದು ಕನಸು ನನಗಿದೆ.  ಭಾರತವು ಶಕ್ತಿಶಾಲಿಯಾಗಿ, ಪ್ರಾಚೀನ ಕಾಲದಲ್ಲಿ ತಾನು ಒಮ್ಮೆ ಆಸ್ವಾದಿಸಿದ ಪ್ರತಿಷ್ಠೆ ಹಾಗೂ ಗೌರವಗಳನ್ನು ಪುನಃ ಪಡೆಯಬೇಕೆಂದು ನಾನು ಬಯಸುತ್ತೇನೆ. ನಿಮ್ಮಲ್ಲಿ ಎಷ್ಟು ಮಂದಿ ನನ್ನ ಜೊತೆಗಿದ್ದೀರಿ?
ಭಾರತವು ಒಂದು ಶಕ್ತಿಶಾಲಿ ದೇಶವಾಗಿ ಹೊರಹೊಮ್ಮಬೇಕು ಮತ್ತು ಯುವಜನತೆಯಲ್ಲಿ ಒಬ್ಬರೇ ಒಬ್ಬರೂ ಕೂಡಾ ನಿರುದ್ಯೋಗಿಯಾಗಿರುವುದನ್ನು ನಾನು ಬಯಸುವುದಿಲ್ಲ. ಇಲ್ಲಿರುವ ಯುವಜನರಲ್ಲಿ ಎಷ್ಟು ಮಂದಿ ನಿರುದ್ಯೋಗಿಗಳಾಗಿರುವಿರಿ? ನೀವು ಇಲ್ಲಿನ ಕೇಂದ್ರದಲ್ಲಿ ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕೆಂದು ನಾನು ಬಯಸುತ್ತೇನೆ. ಇವತ್ತು ಈ ದೇಶದಲ್ಲಿ ಮಾಡಲು ಬಹಳಷ್ಟಿದೆ. ಈ ದೇಶದಲ್ಲಿ ಪೈಪುಗಳ ದುರಸ್ತಿ ಮಾಡುವವರು, ವಾಹನ ಚಾಲಕರು, ಅಡುಗೆಯವರು ಮತ್ತು ವಿದ್ಯುತ್ ಕಾರ್ಮಿಕರು ಸಿಗುವುದು ಕಷ್ಟವಾಗಿದೆ. ಅಂತಹ ಜನರಿಗೆ ಬಹಳಷ್ಟು ಬೇಡಿಕೆಯಿದೆ. ನಾವು ನಿಮಗೆ ತರಬೇತಿಯನ್ನು ನೀಡುವೆವು.
ನಮ್ಮ ಶೈಕ್ಷಣಿಕ ವ್ಯವಸ್ಥೆಯು ಎಷ್ಟು ಹಳೆಯ ಶೈಲಿಯದ್ದು ಮತ್ತು ತಪ್ಪಾದುದು ಎಂದರೆ, ತಮ್ಮ ಶಿಕ್ಷಣ ಮುಗಿಸಿದ ಬಳಿಕ ಜನರು ನಿರುದ್ಯೋಗಿಗಳಾಗಿ ಉಳಿಯುತ್ತಾರೆ. ನಮ್ಮ ದೇಶದಲ್ಲಿ, ಶಿಕ್ಷಣ ಪಡೆಯದವರಿಗೆ ಉದ್ಯೋಗ ಸಿಗುತ್ತದೆ, ಅದೇ ವೇಳೆಯಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದವರಲ್ಲಿ ೫೯% ನಿರುದ್ಯೋಗಿಗಳಾಗಿದ್ದಾರೆ. ಅವರು ಈ ಎಲ್ಲಾ ವರ್ಷಗಳಲ್ಲಿ ಅಷ್ಟೊಂದು ಕಷ್ಟಪಟ್ಟು ಓದಿ ಸ್ನಾತಕೋತ್ತರ ಪದವಿಯನ್ನು ಗಳಿಸಿದರೂ, ಅವರಿಗೆ ಉದ್ಯೋಗ ಸಿಗುವುದಿಲ್ಲ. ಶಿಕ್ಷಣವು ಕೆಲಸವನ್ನು ಉದ್ದೇಶಿಸಿ ಇರಬೇಕು. ನಮ್ಮ ಶಿಕ್ಷಣವು ಹೇಗಿರಬೇಕೆಂದರೆ,  ನೈಪುಣ್ಯತೆ ಮತ್ತು ಔದ್ಯೋಗಿಕ ಕುಶಲತೆಗಳಿಗೆ ಸರಿಯಾದ ಗಮನವನ್ನು ನೀಡಬೇಕು. ಕಲಿಸುವಿಕೆಯು ಉದ್ಯೋಗ-ಸ್ನೇಹಿಯಾಗಿದ್ದರೆ, ಆಗ ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಮುಗಿಸಿದ ಕೂಡಲೇ, ಅವರಿಗೆ ನೌಕರಿ ದೊರೆಯುತ್ತದೆ. ನಾವು ಈ ಬದಲಾವಣೆಯನ್ನು ತರಬೇಕಾಗಿದೆ.
ಎಲ್ಲಾ ವೈದ್ಯರಲ್ಲೂ ನಾನು, ಒಂದು ವರ್ಷದಲ್ಲಿ ಮೂರು ಉಚಿತ ವೈದ್ಯಕೀಯ ಶಿಬಿರಗಳನ್ನು ನೀಡಬೇಕೆಂದು ವಿನಂತಿಸುತ್ತೇನೆ. ನೀವೊಬ್ಬರು ವಕೀಲರಾಗಿದ್ದರೆ, ನೀವು ಮೂರು ಮೊಕದ್ದಮೆಗಳನ್ನು ಉಚಿತವಾಗಿ ನಿರ್ವಹಿಸಬೇಕೆಂದು ನಾನು ಬಯಸುತ್ತೇನೆ. ಬಹಳ ಬಡವರಾಗಿರುವ ಹಾಗೂ ನಿಮ್ಮ ಶುಲ್ಕವನ್ನು ಪಾವತಿಸಲು ಶಕ್ತಿಯಿಲ್ಲದ ಜನರಿಗಾಗಿ, ನಾಲ್ಕು ತಿಂಗಳುಗಳಿಗೊಮ್ಮೆ ನೀವಿದನ್ನು ಮಾಡಿ. ನೀವಿದನ್ನು ಮಾಡಬಲ್ಲಿರಾ?
ಎಲ್ಲಾ ಶಾಲಾ ಶಿಕ್ಷಕರು, ಓದುವುದರಲ್ಲಿ ದುರ್ಬಲರಾಗಿರುವ ವಿದ್ಯಾರ್ಥಿಗಳಿಗೆ ಉಚಿತ ಮನೆಪಾಠವನ್ನು ನೀಡಬೇಕು. ಒಂದು ವರ್ಷಕ್ಕೆ ಮೂರು ವಿದ್ಯಾರ್ಥಿಗಳನ್ನು ಪರಿಗಣಿಸಿ, ಮತ್ತು ನೀವೊಬ್ಬ ವಿದ್ಯಾರ್ಥಿಯಾಗಿದ್ದರೆ, ಮತ ಚಲಾವಣೆಯ ಬಗ್ಗೆ ಜನರಲ್ಲಿ ಜಾಗೃತಿಯನ್ನು ಸೃಷ್ಟಿಸಿ. ಎಲ್ಲರಲ್ಲೂ ಹೋಗಿ ಮತ ಚಲಾಯಿಸಲು ಮತ್ತು ಭ್ರಷ್ಟಾಚಾರದ ವಿರುದ್ಧ ಮತ ಚಾಲಾಯಿಸಲು ಹೇಳಿ.

ಪ್ರಶ್ನೆ: ಗುರೂಜಿ, ರಾಮನ ಅವತಾರ, ಕೃಷ್ಣನ ಅವತಾರ ಮತ್ತು ನಿಮ್ಮ ಈಗಿನ ಅವತಾರಗಳ ನಡುವೆ ಯಾವ ವ್ಯತ್ಯಾಸವಿದೆಯೆಂದು ನಿಮಗೆ ಅನ್ನಿಸುತ್ತದೆ?
ಶ್ರೀ ಶ್ರೀ ರವಿಶಂಕರ್: ಮೈ ಡಿಯರ್, ವ್ಯತ್ಯಾಸವನ್ನು ಕಂಡುಹಿಡಿಯುವುದನ್ನು ನಾನು ನಿನಗೆ ಬಿಟ್ಟಿದ್ದೇನೆ. ನಾನು ಯಾಕೆ ನಿನಗೆ ಹೇಳಬೇಕು? ನಾನು ಕೇವಲ ನನ್ನಲ್ಲಿರುವವನನ್ನು, ನಿನ್ನಲ್ಲಿರುವವನನ್ನು ಮತ್ತು ಎಲ್ಲರಲ್ಲೂ ಇರುವವನನ್ನು ನೋಡುತ್ತೇನೆ.

ಪ್ರಶ್ನೆ: ಗುರೂಜಿ, ಜೀವನದಲ್ಲಿ ನಮಗೆ ನಿಜವಾಗಿಯೂ ಒಬ್ಬರು ಗುರುವಿನ ಅಗತ್ಯವಿದೆಯೇ?
ಶ್ರೀ ಶ್ರೀ ರವಿಶಂಕರ್: ಈ ಪ್ರಶ್ನೆಗೆ ನಿನಗೆ ಒಂದು ಉತ್ತರ ಬೇಕಾ? ಒಂದು ಪ್ರಶ್ನೆಗೆ ಉತ್ತರಿಸುವವರೊಬ್ಬರು ಗುರುವಾಗುತ್ತಾರೆ ಮತ್ತು ಕೇಳುವವನು ಒಬ್ಬ ಶಿಷ್ಯನಾಗುತ್ತಾನೆ. ಈ ಪ್ರಶ್ನೆಯನ್ನು ಕೇಳಿ ನೀನು ಸಿಕ್ಕಿಬಿದ್ದೆ. ನೀನು ಈ ಪ್ರಶ್ನೆಯನ್ನು ಕೇಳಿರುವುದರಿಂದ, "ನನಗೊಬ್ಬರು ಗುರು ಬೇಕು" ಎಂದು ನೀನು ಹೇಳಿರುವೆ! ಇದು, ನಿದ್ರಿಸುತ್ತಿರುವ ವ್ಯಕ್ತಿಯೊಬ್ಬನಲ್ಲಿ, "ನೀನು ನಿದ್ರಿಸುತ್ತಿರುವೆಯಾ?" ಎಂದು ಕೇಳಿದ ಹಾಗೆ. ಅವನು ಹೌದು ಎಂದರೂ ಇಲ್ಲವೆಂದರೂ, ಎರಡೂ ಒಂದೇ, ಅದರರ್ಥ ಅವನು ಎಚ್ಚರವಾಗಿರುವನೆಂದು. ಅದೇ ರೀತಿಯಲ್ಲಿ ನೀನು ಕೇಳುತ್ತಿರುವೆ, "ನಮಗೊಬ್ಬರು ಗುರು ಬೇಕೇ?" ನೀನು ಈ ಪ್ರಶ್ನೆಯನ್ನು ಕೇಳುತ್ತಿರುವುದರಿಂದ, ಅದರರ್ಥ ನಿನಗೆ ಬೇಕು ಎಂದು.

ಪ್ರಶ್ನೆ: ಗುರೂಜಿ, ನಾವು ಯಾವುದು ಹೇಳುವುದನ್ನು ಮೊದಲು ಕೇಳಬೇಕು - ನಮ್ಮ ಹೃದಯವೇ ಅಥವಾ ನಮ್ಮ ಮನಸ್ಸೇ?
ಶ್ರೀ ಶ್ರೀ ರವಿಶಂಕರ್: ನೀವು ವ್ಯಾಪಾರ ಮಾಡುವಾಗ, ನಿಮ್ಮ ಮನಸ್ಸನ್ನು ಕೇಳಿ. ನೀವು ಜೀವನವನ್ನು ಜೀವಿಸುವಾಗ ಅಥವಾ ಯಾವುದಾದರೂ ಸಮಾಜ ಸೇವೆಯನ್ನು ಮಾಡುವಾಗ ನಿಮ್ಮ ಹೃದಯವನ್ನು ಕೇಳಿ. ನೀವು ನಿಮ್ಮ ಕುಟುಂಬದವರ ಜೊತೆಯಲ್ಲಿರುವಾಗ ನಿಮ್ಮ ಹೃದಯವನ್ನು ಕೇಳಿ.