ಬುಧವಾರ, ಮಾರ್ಚ್ 28, 2012

ಸ೦ಗೀತ ಭಾವೋದ್ವೇಗಗಳನ್ನು ನಿವಾರಿಸುತ್ತದೆ



28
2012............................... ಬೆಂಗಳೂರು, ಭಾರತ
Mar

 
ಸಹಸ್ರ ವೀಣಾ ಝೇಂಕಾರ ಮಾನವ ಜನಾಂಗಕ್ಕೆ ಚಿರಪರಿಚಿತವಾದ ಅತ್ಯಂತ ಪ್ರಾಚೀನವಾದ ಸಂಗೀತ ವಾದ್ಯ, ವೀಣೆ. ಇಂದಿಗೂ ಅದು ಝೇಂಕರಿಸುತ್ತದೆ; ಸಾಮರಸ್ಯತೆಯನ್ನು ಪ್ರಚೋದಿಸಿ, ಆತ್ಮಗಳನ್ನು ಮಿಲನಗೊಳಿಸುತ್ತದೆ.
ಈ ದಿನ ೧೧೧೦ ವೀಣಾ ವಾದಕರು ನಮ್ಮೊಂದಿಗಿದ್ದಾರೆ, ಸ್ವರ ಮೇಳೈಸಿ ನುಡಿಸುತ್ತಾರೆ. ಇದು ತನ್ನದೇ ಆದ ರೀತಿಯಲ್ಲಿ ಸಾಧನೆಯಾಗಿದೆ. ನಮ್ಮ ಬೆನ್ನು ಹುರಿಯಲ್ಲಿರುವ ಮೂಳೆಗಳಂತೆ (೨೪ ಬೆನ್ನು ಮೂಳೆಗಳು), ವೀಣೆಯು ೨೪ ಮೇಳಗಳನ್ನು ಹೊಂದಿದೆ. ಮಾನವ ಶಾರೀರದಂತಿದೆ. ತಂತಿಗಳನ್ನು ಮೀಟಿದಾಗ ಅದು ಹೃದಯ ಮತ್ತು ಆತ್ಮವನ್ನು ಉನ್ನತಕ್ಕೇರಿಸುವುದು. 

ಆರ್ಟ್ ಆಫ಼್ ಲಿವಿ೦ಗ್ ಹಾಗೂ ರಂಜಿನಿ ಕಲಾಕೇಂದ್ರದ ಸಹಯೋಗದಲ್ಲಿ ಐತಿಹಾಸಿಕ ’ಸಹಸ್ರ ವೀಣಾ ಝೇಂಕಾರ” ಎಂಬ ಕಾರ್ಯಕ್ರಮ ಆಯೋಜಿತವಾಗಿತ್ತು. ಒಂದೇ ವೇದಿಕೆಯಲ್ಲಿ ೧೧೧೦ ವೀಣಾ ವಾದಕರ ಕಛೇರಿಯನ್ನು ಪ್ರಸ್ತುತಪಡಿಸಿದ್ದು ಆ ಕಾರ್ಯಕ್ರಮದ ವಿಶೇಷ. ಮಾರ್ಚ್ ೨೮, ೨೦೧೨ ರಂದು ಬೆಂಗಳೂರಿನ ಅರಮನೆಯ ಆವರಣದಲ್ಲಿ ನೆರವೇರಿದ ಈ ಕಾರ್ಯಕ್ರಮದಲ್ಲಿ ಪೂಜ್ಯ ಗುರೂಜಿ ಶ್ರೀ ಶ್ರೀ ರವಿಶಂಕರ್ ಉಪಸ್ಥಿತರಿದ್ದರು.

ಸಂಗೀತವು ಪ್ರತಿಯೊಬ್ಬ ಮಾನವನ ಒಂದು (ಅವಿಭಾಜ್ಯ) ಅಂಗ. ನೀವು ಸಂತೋಷವಾಗಿದ್ದಾಗ, ಸಂಗೀತವು ಬಹಳ ಸಹಜವಾಗಿರುತ್ತದೆ; ನೀವು ಸಹಜವಾಗಿ ಹಾಡುವಿರಿ. ದುಃಖದಲ್ಲಿದ್ದಾಗಲೂ ಸಂಗೀತವು ಚೆನ್ನಾಗಿರುತ್ತದೆ ಏಕೆಂದರೆ ಅದು ನಿಮ್ಮ ಹೃದಯವನ್ನು ಶಾಂತಗೊಳಿಸಿ, ಭಾವುಕತೆಯನ್ನು ಉಪಶಮನಗೊಳಿಸುತ್ತದೆ ಮತ್ತು ನಿಮ್ಮನ್ನು ಉನ್ನತಕ್ಕೇರಿಸುತ್ತದೆ. ಆದ್ದರಿಂದ ನೀವು ಸಂತೋಷವಾಗಿರುವಿರೋ ಅಥವಾ ದುಃಖಗೊಂಡಿರುವಿರೋ, ಸಂಗೀತದಿಂದ ವಿಮುಖರಾಗಲು ಸಾಧ್ಯವಿಲ್ಲ. ಸಂಗೀತವು ಅಂತರ್ಮುಖಿಯಾಗಿ ಹರಿಯುತ್ತದೆ ಮತ್ತು ವೀಣೆಯು ಧ್ಯಾನಸ್ಥ ಸಂಗೀತವನ್ನು ಹೊರಹೊಮ್ಮಿಸುತ್ತದೆ.
’ಶಬ್ದ ಬ್ರಹ್ಮಾಣಿ ನಿಷ್ಣಾತ ಪರಂ ಬ್ರಹ್ಮಾದಿಗಚ್ಛತಿ’ ಎಂದು ಹೇಳಲಾಗಿದೆ.
ಶಬ್ದ ಬ್ರಹ್ಮದಿಂದ ಪರಂ ಬ್ರಹ್ಮಕ್ಕೆ ಹೋಗಬೇಕಾದರೆ ನಾದ ಬ್ರಹ್ಮನ ಉಪಾಸನೆಯನ್ನು ಮಾಡಬೇಕಾಗಿದೆ. ಇದನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ. ಸ್ವಲ್ಪ ಸಮಯವಾದರೂ ಸಂಗೀತವನ್ನು ಆಲಿಸಿದರೆ, ದೈವೀಕತೆಯತ್ತ, ಶುದ್ಧ ಚೈತನ್ಯದತ್ತ ಕರೆದೊಯ್ಯುತ್ತದೆ. ಸಂಗೀತ, ಅದರಲ್ಲೂ ವಿಶೇಷವಾಗಿ ಶಾಸ್ತ್ರೀಯ ಸಂಗೀತಕ್ಕೆ ಈ ಸಾಮರ್ಥ್ಯವಿದೆ.

ಪ್ರಪಂಚದ ಅತ್ಯಂತ ಪ್ರಾಚೀನವಾದ ವಾದ್ಯ, ವೀಣೆ. ದೀರ್ಘ ಕಾಲದಿಂದ ಇಂದಿನವರೆಗೂ ಅದೇ ಮಾಂತ್ರಿಕತೆಯನ್ನು ಹೊಂದಿದೆ.
ಇಂದು ೧೧೧೦ ವೀಣಾ ವಿದ್ವಾಂಸರು ನಮ್ಮೊಂದಿಗಿದ್ದಾರೆ. ಅನೇಕ ಹೆಸರಾಂತ (ವೀಣೆಯ) ಗುರುಗಳು ತಮ್ಮ ಶಿಷ್ಯರೊಡನೆ ಇಲ್ಲಿಗೆ ಬಂದಿದ್ದಾರೆ. ಸಂಗೀತದಲ್ಲಿ ನಮ್ಮನ್ನು ಮಂತ್ರಮುಗ್ಧರನ್ನಾಗಿಸುತ್ತಾರೆ.

(ಕಲಾವಿದರ ವೀಣಾ ವಾದನದಿಂದ ಕಾರ್ಯಕ್ರಮವು ಮುಂದುವರೆಯಿತು. ಕೊನೆಯಲ್ಲಿ ಗುರೂಜೀಯವರು ಕಲಾವಿದರನ್ನು ಅಭಿನಂದಿಸಿ, ಸನ್ಮಾನಿಸಿದರು, ೩೦೦೦ ಕಲಾವಿದರೊಂದಿಗೆ ಇನ್ನೂ ದೊಡ್ಡ ಕಾರ್ಯಕ್ರಮವನ್ನೇರ್ಪಡಿಸಬೇಕೆಂದು ಪ್ರೋತ್ಸಾಹಿಸಿದರು).