ಮಂಗಳವಾರ, ಅಕ್ಟೋಬರ್ 2, 2012

ನಾನು ದೇವರನ್ನು ನಂಬಬೇಕೇ?


ಅಕ್ಟೋಬರ್ ೨, ೨೦೧೨
ಬೆಂಗಳೂರು ಆಶ್ರಮ, ಭಾರತ


ಪ್ರಶ್ನೆ: ಪ್ರೀತಿಯ ಗುರೂಜಿ, ದೇವರಿಗೆ ಆಧ್ಯಾತ್ಮಿಕತೆಯೊಂದಿಗಿರುವ ಸಂಬಂಧವೇನು? ನಾನು ದೇವರನ್ನು ನಂಬದೆಯೇ ಇದ್ದು, ಹಾಗಿದ್ದರೂ ಆಧ್ಯಾತ್ಮಿಕವಾಗಿರಲು ಸಾಧ್ಯವಿಲ್ಲವೇ?
ಶ್ರೀ ಶ್ರೀ ರವಿಶಂಕರ್: ಹೌದು!
ನಿನಗೆ ಗೊತ್ತಿದೆಯಾ, ಆರು ದರ್ಶನಗಳಲ್ಲಿ (ಭಾರತೀಯ ತತ್ವಜ್ಞಾನದ ಶಾಖೆಗಳು), ಮೊದಲ ಮೂರು ದರ್ಶನಗಳು; ನ್ಯಾಯ, ವೈಶೇಷಿಕ, ಸಾಂಖ್ಯ ಇವುಗಳು ದೇವರ ಬಗ್ಗೆ ಮಾತನಾಡುವುದು ಕೂಡಾ ಇಲ್ಲ.
ಗೌತಮ ಮಹರ್ಷಿಯ ನ್ಯಾಯ ದರ್ಶನವು ಜ್ಞಾನದ ಬಗ್ಗೆ ಹೇಳುತ್ತದೆ - ನಿಮ್ಮ ಜ್ಞಾನವು ಸರಿಯೇ ಅಲ್ಲವೇ ಎಂದು. ಜ್ಞಾನಕ್ಕಿರುವ ದಾರಿಗಳು ಸರಿಯೇ ಅಲ್ಲವೇ ಎಂಬುದನ್ನು ತಿಳಿಯುವುದು, ಇದು ನ್ಯಾಯ ದರ್ಶನ.
ಉದಾಹರಣೆಗೆ, ನಿಮ್ಮ ಇಂದ್ರಿಯಗಳಿಂದ ಸೂರ್ಯನು ಅಸ್ತಮಿಸುವುದನ್ನು ಮತ್ತು ಸೂರ್ಯನು ಉದಯಿಸುವುದನ್ನು ನೀವು ನೋಡುತ್ತೀರಿ. ಆದರೆ ನ್ಯಾಯ ದರ್ಶನ ಹೇಳುತ್ತದೆ, "ಇಲ್ಲ, ನೀವು ನೋಡುವುದನ್ನು ಮಾತ್ರ ನೀವು ನಂಬಲು ಸಾಧ್ಯವಿಲ್ಲ, ನೀವು ಅದರಾಚೆಗೆ ಹೋಗಬೇಕು ಮತ್ತು, ಸೂರ್ಯನು ನಿಜವಾಗಿ ಅಸ್ತಮಿಸುತ್ತಾನೆಯೇ ಅಥವಾ ಭೂಮಿಯು ತಿರುಗುತ್ತಿರುವುದೇ ಎಂಬುದನ್ನು ಕಂಡುಕೊಳ್ಳಬೇಕು."
ಭೂಮಿಯು ಸೂರ್ಯನ ಸುತ್ತಲೂ ಹೋಗುತ್ತಿದೆಯೆಂಬುದನ್ನು ಕೋಪರ್ನಿಕಸ್ಸನು ಕಂಡುಹಿಡಿದನು ಎಂದು ನಾವು ಯೋಚಿಸುತ್ತೇವೆ, ಆದರೆ ಅದು ಸಂಪೂರ್ಣವಾಗಿ ತಪ್ಪು. ಅವನು ಖಂಡಿತವಾಗಿ ಕಂಡುಹಿಡಿದನು, ಆದರೆ ಅದರ ಮೊದಲು, ಭಾರತದಲ್ಲಿ, ಭೂಮಿಯು ಸೂರ್ಯನ ಸುತ್ತಲೂ ಚಲಿಸುತ್ತಿದೆಯೆಂಬುದು ಜನರಿಗೆ ಬಹಳ ಸಮಯದ ಹಿಂದೆ ಅದಾಗಲೇ ತಿಳಿದಿತ್ತು. ನ್ಯಾಯ ದರ್ಶನವು ಅದೆಲ್ಲದರ ಬಗ್ಗೆ ಮಾತನಾಡುತ್ತದೆ. ಅದು ಗ್ರಹಿಕೆಯ ಬಗ್ಗೆ ಮತ್ತು ಗ್ರಹಿಕೆಯನ್ನು ತಿದ್ದುವುದರ ಬಗ್ಗೆ ಮಾತನಾಡುತ್ತದೆ!
ನಂತರ ವೈಶೇಷಿಕ ದರ್ಶನ - ಇದು, ವಿಶ್ವದಲ್ಲಿರುವ ಎಲ್ಲದರ ಒಂದು ಲೆಕ್ಕಾಚಾರ - ಪೃಥ್ವಿ, ಜಲ, ಅಗ್ನಿ, ವಾಯು, ಈಥರ್ ಮತ್ತು ನಂತರ ಎಲ್ಲಾ ವಸ್ತುಗಳು ಹಾಗೂ ವಿಷಯಗಳು, ಈ ಎಲ್ಲಾ ವಿಶ್ಲೇಷಣೆ. ಇದು ವೈಶೇಷಿಕ ದರ್ಶನ. ಇದರಲ್ಲಿ ಅವರು ಮನಸ್ಸು, ಪ್ರಜ್ಞೆ, ಬುದ್ಧಿ, ಸ್ಮರಣೆ ಇವೆಲ್ಲದರ ಬಗ್ಗೆ ಮಾತನಾಡುತ್ತಾರೆ.
ನಂತರ ಇರುವುದು ಸಾಂಖ್ಯ ದರ್ಶನ. ಹೀಗೆ, ಈ ಮೂರು ದರ್ಶನಗಳು ದೇವರ ಬಗ್ಗೆ ಮಾತನಾಡುವುದಿಲ್ಲ, ಆದರೆ ಅವುಗಳು ಪ್ರಜ್ಞೆಯ ಬಗ್ಗೆ ಮಾತನಾಡುತ್ತವೆ. ನಾಲ್ಕನೆಯ ದರ್ಶನವಾಗಿರುವ ಯೋಗ ಸೂತ್ರಗಳಲ್ಲಿ ಮಾತ್ರ ಅವರು ದೇವರ ಬಗ್ಗೆ ಒಂದು ವಿಚಾರವಾಗಿ ಮಾತನಾಡುತ್ತಾರೆ.
ಆದುದರಿಂದ ದೇವರನ್ನು ನೀನು ಬಲವಂತವಾಗಿ ನಂಬಬೇಕಾಗಿಲ್ಲ. ಆದರೆ ನೀನು ಯಾವುದರಲ್ಲಿಯಾದರೂ ನಂಬಿಕೆಯನ್ನಿರಿಸಬೇಕು. ಕಡಿಮೆಪಕ್ಷ ನೀನು ಪ್ರಜ್ಞೆಯಲ್ಲಾದರೂ ನಂಬಿಕೆಯನ್ನಿರಿಸಬೇಕು.
ಸಾಧಾರಣವಾಗಿ ನಾವು ದೇವರ ಬಗ್ಗೆ ಯೋಚಿಸುವಾಗ, ಸ್ವರ್ಗದಲ್ಲೆಲ್ಲೋ ಕುಳಿತಿರುವ ಒಬ್ಬರ ಬಗ್ಗೆ, ಸೃಷ್ಟಿಯನ್ನು ಸೃಷ್ಟಿಸಿದ ನಂತರ ಅದರಿಂದ ದೂರ ಹೋಗಿ, ಪ್ರತಿಯೊಬ್ಬರಲ್ಲೂ ತಪ್ಪನ್ನು ಕಂಡುಹುಡುಕುವ ಪ್ರಯತ್ನವನ್ನು ಪ್ರಾರಂಭಿಸಿದ ಒಬ್ಬರ ಬಗ್ಗೆ ಯೋಚಿಸುತ್ತೇವೆ. ನೀವೇನೇ ಮಾಡುತ್ತಿರಲಿ, ಒಂದು ಕೋಲನ್ನು ತೆಗೆದುಕೊಂಡು ನಿಮಗೆ ಶಿಕ್ಷೆ ನೀಡಲು ಅವನು ಪ್ರಯತ್ನಿಸುತ್ತಿರುತ್ತಾನೆ. ನಾವು ಯಾವತ್ತೂ ಇಂತಹ ರೀತಿಯ ದೇವರ ಬಗ್ಗೆ ಮಾತನಾಡಿಲ್ಲ. ದೇವರೇ ಅಸ್ತಿತ್ವ!
ಸಂಪೂರ್ಣ ವಿಶ್ವವು ಪ್ರೀತಿಯೆಂದು ಕರೆಯಲ್ಪಡುವ ಒಂದು ಪದಾರ್ಥದಿಂದ ಮಾಡಲ್ಪಟ್ಟಿದೆ, ಮತ್ತು ಅದುವೇ ದೇವರು!
ನಿಮ್ಮನ್ನು ದೇವರಿಂದ ಬೇರ್ಪಡಿಸಲು ಸಾಧ್ಯವಿಲ್ಲ. ದೇವರಿಂದ ಹೊರಗೆ ಯಾವುದೂ ಯಾವತ್ತಿಗೂ ಅಸ್ತಿತ್ವದಲ್ಲಿಲ್ಲ; ಎಲ್ಲವೂ ದೇವರೊಳಗೆಯೇ ಇರಬೇಕು. ಆದುದರಿಂದ ಅದು ಒಳ್ಳೆಯದು, ಕೆಟ್ಟದು, ಸರಿ, ತಪ್ಪು ಮತ್ತು ಅವುಗಳೆಲ್ಲವನ್ನು ಮೀರಿದುದು. ಹಿತಕರ ಮತ್ತು ಅಹಿತಕರ ಇವುಗಳಿಗೆಲ್ಲಾ ಯಾವುದೇ ಮಹತ್ವವಿಲ್ಲ.
ಅಸ್ತಿತ್ವದಲ್ಲಿರುವ ಆ ಒಂದು ವಿಷಯ, ಆ ಸಂಪೂರ್ಣ ಒಂದು; ನೀವದನ್ನು ಏನೆಂದಾದರೂ ಕರೆಯಬೇಕಿದ್ದರೆ, ನೀವದನ್ನು ದೇವರೆಂದು ಕರೆಯಬಹುದು, ಅಥವಾ ನೀವು ಚಿಂತಿಸಬೇಕಾಗಿಲ್ಲ, ಕೇವಲ ನಿಮ್ಮನ್ನು ನೀವೇ ತಿಳಿದುಕೊಳ್ಳಿ.

ಪ್ರಶ್ನೆ: ಗುರೂಜಿ, ಈ ವಾರ ಗಾಂಧಿ ಜಯಂತಿಯ ಗೌರವಾರ್ಥವಾಗಿ  ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ’ಶಾಂತಿ ಮತ್ತು ಆರೋಗ್ಯ ವಾರ’ ವನ್ನು ಆಚರಿಸುತ್ತಿದೆ. ಶಾಂತಿ ಮತ್ತು ಆರೋಗ್ಯದ ನಡುವಿನ ಸಂಬಂಧದ ಬಗ್ಗೆ ದಯವಿಟ್ಟು ನೀವು ಮಾತನಾಡುವಿರಾ?
ಶ್ರೀ ಶ್ರೀ ರವಿಶಂಕರ್: ಅದು ಬಹಳ ಸ್ಪಷ್ಟವಾಗಿದೆ, ನೀವು ಆರೋಗ್ಯವಾಗಿದ್ದರೆ, ನೀವು ಹೆಚ್ಚು ಶಾಂತರಾಗಿರುವಿರಿ.
ಆರೋಗ್ಯವು ಶಾಂತಿಯನ್ನು ಒಳಗೊಂಡಿದೆ. ನೀವು ಶಾಂತರಾಗಿಲ್ಲದಿದ್ದರೆ, ನೀವು ನಿಮ್ಮನ್ನು ಆರೋಗ್ಯವಂತರೆಂದು ಕರೆದುಕೊಳ್ಳಲು ಸಾಧ್ಯವಿಲ್ಲ. ಮನಸ್ಸಿಗೆ ತೊಂದರೆಯಾದರೆ, ಶರೀರಕ್ಕೆ ತೊಂದರೆಯಾಗುತ್ತದೆ.
ರೋಗವಿರುವುದು ಕೇವಲ ಶರೀರದಲ್ಲಲ್ಲ, ಅದು ಮನಸ್ಸಿನಲ್ಲೂ ಇರಬಹುದು, ಅದು ನಿಮ್ಮ ಬುದ್ಧಿಯಲ್ಲಿರಬಹುದು; ಅದು ನಿಮ್ಮ ಬುದ್ಧಿಯ ತಡೆಗಳಲ್ಲಿ ಮತ್ತು ನಿಮ್ಮ ಆತ್ಮದಲ್ಲಿನ ದುಃಖದಿಂದಾಗಿರಬಹುದು - ಇವುಗಳೆಲ್ಲಾ ಅನಾರೋಗ್ಯಕರವೆಂದು ಪರಿಗಣಿಸಲ್ಪಡುತ್ತವೆ. ಅದಕ್ಕೇ ಸ್ವಸ್ಥ  ಎಂಬ ಶಬ್ದಕ್ಕೆ ಅಷ್ಟೊಂದು ಆಳವಾದ ಅರ್ಥವಿರುವುದು.
ನೀವು ಬಾಲಿಗೆ ಹೋದರೆ, ಅವರು ’ಓಂ ಸ್ವಸ್ಥಿರಸ್ತು’ ಎಂದು ಹೇಳುತ್ತಾ ವಂದಿಸುತ್ತಾರೆ. ಅದು ನಾವು, ’ನಮಸ್ತೆ’ ಅಥವಾ ’ಹಲೋ’ ಎಂದು ಹೇಳುವಂತೆ. ಬಾಲಿಯಲ್ಲಿ ಅವರು, ’ಓಂ ಸ್ವಸ್ಥಿರಸ್ತು’ ಎಂದು ಹೇಳುತ್ತಾರೆ, ಅದರರ್ಥ ನೀನು ನಿನ್ನಲ್ಲೇ ಸ್ಥಾಪನೆಯಾಗುವಂತಾಗಲಿ.
ನೀವು ನಿಮ್ಮಲ್ಲೇ ಸ್ಥಾಪನೆಯಾಗುವುದೆಂದರೆ, ನೀವು ಶಾಂತರಾಗಿರುವುದು, ನಿಮ್ಮಲ್ಲಿ ಯಾವುದೇ ತಡೆಗಳಿಲ್ಲದಿರುವುದು, ನೀವು ನಿಮ್ಮ ಮನಸ್ಸಿನಲ್ಲಿ ಸ್ಪಷ್ಟತೆಯಿಂದಿರುವುದು, ನಿಮ್ಮಲ್ಲಿ ಯಾವುದೇ ನಕಾರಾತ್ಮಕ ಭಾವನೆಗಳಿಲ್ಲದಿರುವುದು ಮತ್ತು ನಿಮ್ಮ ಶರೀರವು ಆರೋಗ್ಯವಾಗಿರುವುದು. ಸಂಸ್ಕೃತದಲ್ಲಿ ಇವೆಲ್ಲವೂ ಜೊತೆಯಲ್ಲಿ ಸ್ವಸ್ಥ ; ಒಬ್ಬ ಆರೋಗ್ಯವಂತ ವ್ಯಕ್ತಿ ಎಂದು ಕರೆಯಲ್ಪಡುತ್ತದೆ.

ಪ್ರಶ್ನೆ: ಆರ್ಟ್ ಆಫ್ ಲಿವಿಂಗಿಗೆ ಬಂದ ಬಳಿಕ, ನನ್ನ ಕೆಲಸವೇನೇ ಇರಲಿ ಅದು ನೆರವೇರುತ್ತದೆ ಎಂಬ ನಂಬಿಕೆಯು ನನ್ನಲ್ಲಿ ಉಂಟಾಗಿದೆ. ಆದರೂ, ಕೆಲವೊಮ್ಮೆ ಅದು ಆಗುವುದಿಲ್ಲ. ಯಾಕೆ ಹಾಗೆ?
ಶ್ರೀ ಶ್ರೀ ರವಿಶಂಕರ್: ಹೌದು, ಕೆಲವು ಸಮಯಗಳಲ್ಲಿ ಹಾಗಾಗುತ್ತದೆ. ಅಂತಹ ಸಮಯಗಳಲ್ಲಿ, ಇನ್ನೂ ಉತ್ತಮವಾಗಿರುವುದೇನೋ ನಿಮಗಾಗಿ ಕಾದಿದೆಯೆಂಬುದನ್ನು ತಿಳಿಯಿರಿ.
ನೋಡಿ, ಜೀವನದಲ್ಲಿ, ಸಂತೋಷ ಮತ್ತು ದುಃಖ, ಏಳು ಮತ್ತು ಬೀಳು, ಗೌರವ ಮತ್ತು ಅಗೌರವ, ಈ ಎಲ್ಲಾ ವಿಷಯಗಳು ಆಗುತ್ತವೆ. ಆದರೆ ಇವುಗಳೆಲ್ಲದರ ಮಧ್ಯೆ ನಿಮ್ಮ ಸಮಚಿತ್ತತೆಯನ್ನು ಕಾಪಾಡುವುದು ಮುಖ್ಯವಾದುದು. ನೀವೆಷ್ಟು ಸಮಚಿತ್ತದವರೆಂದು ಹೇಳುವುದು ಯಾವುದೆಂದರೆ, ಕಷ್ಟದ ಸಮಯಗಳು.
ನಿಮಗೆ ಎಲ್ಲದರಲ್ಲಿಯೂ ಒಳ್ಳೆಯದಾಗುತ್ತಿರುವಾಗ, "ನನ್ನಲ್ಲಿ ಬಹಳ ನಂಬಿಕೆ ಮತ್ತು ಭಕ್ತಿಗಳಿವೆ" ಎಂದು ನೀವು ಹೇಳಬಹುದು, ಆದರೆ ಹಾಗೆ ಹೇಳುವುದರಲ್ಲಿ ಯಾವುದೇ ಶ್ರೇಷ್ಠತೆಯಿಲ್ಲ. ಆದರೆ ವಿಷಯಗಳು ಚೆನ್ನಾಗಿ ನಡೆಯದೇ ಇರುವಾಗ ಮತ್ತು ಆಗಲೂ ನಿಮಗೆ ನಿಮ್ಮ ನಂಬಿಕೆ ಹಾಗೂ ಭಕ್ತಿಗಳನ್ನು ಬಿಡದೇ ಇರಲು ಸಾಧ್ಯವಾದರೆ, ಆಗ ಅದು ನಿಜವಾದ ನಂಬಿಕೆ; ಬಲವಾದ ನಂಬಿಕೆ.
ನಿಮ್ಮ ನಂಬಿಕೆಯನ್ನು ಅಲ್ಲಾಡಿಸಲು ಪ್ರಕೃತಿಯು ನಿಮ್ಮ ದಾರಿಯಲ್ಲಿ ಹಲವಾರು ಘಟನೆಗಳನ್ನು ಒಡ್ಡಬಹುದು, ಆದರೆ ಆಗಲೂ ಸಹ ನಿಮ್ಮ ನಂಬಿಕೆಯು ಹಾಗೆಯೇ ಉಳಿದರೆ, ಆಗ ನೀವು ನಿಜವಾಗಿ ಒಬ್ಬ ಪರಿಪೂರ್ಣ ವ್ಯಕ್ತಿಯಾಗಿರುತ್ತೀರಿ, ಮತ್ತು ಅದರ ನಂತರ ವಿಷಯವು ಸರಾಗವಾಗುತ್ತದೆ. ಪ್ರಕೃತಿಯಲ್ಲಿ ಹಾಗಾಗುತ್ತದೆ.

ಪ್ರಶ್ನೆ: ನನ್ನಲ್ಲಿ ಹೆಚ್ಚು ಸಕಾರಾತ್ಮಕ ಗುಣಗಳನ್ನು ವರ್ಧಿಸಲು ನಾನು ಏನು ಮಾಡಬೇಕು?
ಶ್ರೀ ಶ್ರೀ ರವಿಶಂಕರ್: ಸಕಾರಾತ್ಮಕ ಗುಣಗಳನ್ನು ಸುಧಾರಿಸಲು ಹಾಗೂ ಅರಳಿಸಲು, ಸಾಧನೆ ಮತ್ತು ಸೇವೆ ಮಾಡು. ಸೇವೆ ಮಾಡುವಾಗ ಜನರು ನಿನ್ನನ್ನು ನಿಂದಿಸಿದರೆ, ಆಗ ಕೇವಲ ಅವರು ಹೇಳುವುದನ್ನು ಕೇಳು. ಅವರಿಗೆ ಹೇಳು, "ಮುಂದುವರಿಯಿರಿ ಮತ್ತು ನನ್ನನ್ನು ನಿಂದಿಸಿರಿ!"
ನೋಡಿ, ನಾವು ನಿಂದನೆಯನ್ನು ಕೂಡಾ ಸ್ವೀಕರಿಸಲು ಸಿದ್ಧರಾಗಿರುವಾಗಲೇ ನಮ್ಮ ಪ್ರಜ್ಞೆಯು ಅರಳಲು ಶುರುವಾಗುವುದು. ಆದರೆ ನಾವು, "ನೀನು ನನ್ನಲ್ಲಿ ಈ ರೀತಿ ಮಾತನಾಡಲು ಹೇಗೆ ಸಾಧ್ಯ? ನನ್ನನ್ನು ನಿಂದಿಸಬೇಡ" ಎಂದು ಹೇಳಿದರೆ, ಮತ್ತು ನಾವು ವಿರೋಧಿಸಿದರೆ, ಆಗ ಅರಳುವಿಕೆಯು ಸಂಭವಿಸುವುದಿಲ್ಲ.
ಆದುದರಿಂದ ಸಾಧನೆಯನ್ನು ಮಾಡುತ್ತಿರಿ ಮತ್ತು ಧ್ಯಾನ ಮಾಡಿ. ನಾವು ನಮ್ಮ ಅಭ್ಯಾಸಗಳನ್ನು ಮಾಡುತ್ತಿರುವಂತೆ, ನಮ್ಮ ಪ್ರಜ್ಞೆಯು ಅರಳುವುದು ಮುಂದುವರಿಯುತ್ತದೆ ಮತ್ತು ಎಲ್ಲಾ ಸಕಾರಾತ್ಮಕ ಗುಣಗಳು ಮುಂದೆ ಬರಲು ತೊಡಗುತ್ತವೆ.

ಪ್ರಶ್ನೆ: ಗುರೂಜಿ, ಲಕ್ಷಾಂತರ ಜನರ ಆದರ್ಶರಾಗಿರಲು ಹೇಗನಿಸುತ್ತದೆ?
ಶ್ರೀ ಶ್ರೀ ರವಿಶಂಕರ್: ಟೊಳ್ಳು ಮತ್ತು ಖಾಲಿ, ಮತ್ತು ಹೀಗಿದ್ದರೂ ಬಹಳ ಪೂರ್ಣ!

ಪ್ರಶ್ನೆ: ಗುರೂಜಿ, ಉಪನಯನ ಗುಂಪಿನೊಂದಿಗಿನ ನಿಮ್ಮ ಭೇಟಿಯಲ್ಲಿ ನೀವು ನಮ್ಮೊಡನೆ ಬ್ರಹ್ಮಯಜ್ಞವನ್ನು - ನಾಲ್ಕು ವೇದಗಳ ನಾಲ್ಕು ಮಂತ್ರಗಳನ್ನು ಕಲಿಯಲು ಹೇಳಿದ್ದೀರಿ. ಈ ಮಂತ್ರಗಳ ಅರ್ಥವನ್ನು ನೀವು ನಮಗೆ ದಯವಿಟ್ಟು ತಿಳಿಸುವಿರಾ?
ಶ್ರೀ ಶ್ರೀ ರವಿಶಂಕರ್: ಮಂತ್ರಗಳ ಅರ್ಥಕ್ಕಿಂತ ಮಂತ್ರಗಳ ಕಂಪನಗಳು ಹೆಚ್ಚು ಮುಖ್ಯವಾದುದು. ಈ ಮಂತ್ರಗಳು ಋಷಿಗಳಿಂದ ಬಂದವು. ಅವರು ಧ್ಯಾನದಲ್ಲಿ ಕುಳಿತುಕೊಂಡರು, ಮತ್ತು ಅವರಿಗೆ ಏನೋ ಸಿಕ್ಕಿತು, ಅವರದನ್ನು ಮನನ  ಮಾಡಿಕೊಂಡರು ಹಾಗೂ ಅದನ್ನು ಜನರಿಗೆ ತಿಳಿಸಿದರು. ಅದೊಂದು ಕಂಪನವಾಗಿ ಸ್ವೀಕರಿಸಲ್ಪಟ್ಟಿತು. ಅದನ್ನು, ಕುಳಿತುಕೊಂಡು ಬರೆಯುವಂತಹ ಒಂದು ಬೌದ್ಧಿಕ ಅರಿವಿನಿಂದ ಮಾಡಿದುದಲ್ಲ. ಈ ಮಂತ್ರಗಳು ಒಂದು ಅಂತಃಸ್ಫುರಣ ಹಂತದಿಂದ ಅಥವಾ ಶುದ್ಧವಾದ ಪ್ರಜ್ಞೆಯಿಂದ ಬಂದಿವೆ.
ನೋಡಿ, ನೀವು ಕುಳಿತುಕೊಂಡು ಯೋಚಿಸಿ, ಕೆಲಸ ಮಾಡಿ, ಕೆಲವು ಶಬ್ದಗಳನ್ನು ಜೋಡಿಸಿ ಅವುಗಳಿಗೆ ಅರ್ಥವನ್ನು ಕೊಟ್ಟರೆ, ಆಗ ಅದು ಬೇರೆ ವಿಷಯ. ಆದರೆ ನಿಮ್ಮೊಳಗಿನಿಂದ ಬರುವ ಒಂದು ವಿಷಯ, ಉದಾಹರಣೆಗೆ ಕವಿತೆ, ಒಂದು ಅಂತಃಸ್ಫುರಣೆಯಂತೆ; ಇದನ್ನು ಮುಂಬರುವ ಹಲವು ಪೀಳಿಗೆಗಳ ವರೆಗೆ ವಿಸ್ತರಿಸಬಹುದು ಮತ್ತು ಸಂಶೋಧಿಸಬಹುದು. ಪ್ರತಿಸಲವೂ ನೀವದನ್ನು ಅನ್ವೇಷಿಸುವಾಗ, ಅದರಿಂದ ಯಾವುದಾದರೂ ಹೊಸ ಅರ್ಥವು ಹೊರಬರುತ್ತದೆ ಮತ್ತು ಅದಕ್ಕೇ ಅವುಗಳನ್ನು ಮಂತ್ರಗಳೆಂದು ಕರೆಯುವುದು.
ಮನನಾತ್ ತ್ರಾಯತೆ ಇತಿ ಮಂತ್ರಃ  - ನೀವು ಕೇವಲ ಅದರಲ್ಲಿ ಆಶ್ರಯ ಪಡೆದಾಗ, ಅದು ನಿಮ್ಮ ಚೈತನ್ಯವನ್ನು ಮೇಲೆತ್ತುತ್ತದೆ. ಹೀಗೆ ಹೇಳಲಾಗಿದೆ.
ಮಂತ್ರಗಳಿಗೆ ಸ್ವಲ್ಪ ಅರ್ಥವಿದೆ, ಆದರೆ ಅರ್ಥವು ಕೇವಲ, ಬೃಹತ್ ಹಿಮಗುಡ್ಡದ ತುದಿಯಾಗಿದೆ. ಅರ್ಥವು ಅಷ್ಟೊಂದು ಪ್ರಾಮುಖ್ಯವಲ್ಲ. ಮಂತ್ರಗಳಲ್ಲಿ, ಮುಖ್ಯವಾಗಿರುವುದು ಅವುಗಳ ಕಂಪನಗಳು.

ಪ್ರಶ್ನೆ: ಗುರೂಜಿ, ನಾವು ಗಾಯತ್ರಿ ಮಂತ್ರವನ್ನು ಉಚ್ಛರಿಸುವಾಗ, ನಾವದನ್ನು ಎಷ್ಟು ಸಲ ಉಚ್ಛರಿಸುವೆವೆಂಬುದು ಪ್ರಧಾನವೇ? ನಾವು ಸ್ವಲ್ಪ ಹೆಚ್ಚು ಅಥವಾ ಸ್ವಲ್ಪ ಕಡಿಮೆ ಸಲ ಮಾಡಿದರೆ, ಅದರಿಂದೇನಾದರೂ ನಕಾರಾತ್ಮಕ ಪರಿಣಾಮಗಳಾಗುತ್ತವೆಯೇ ಅಥವಾ ಭಾವನೆಯು ಮಾತ್ರ ಪ್ರಮುಖವಾದುದೇ?
ಶ್ರೀ ಶ್ರೀ ರವಿಶಂಕರ್: ಹೌದು, ಭಾವನೆಯೊಂದಿಗೆ ಉಚ್ಛರಿಸು, ಅಷ್ಟು ಸಾಕು. ನಿನಗೆ ಯಾವುದೇ ಶಿಕ್ಷೆ ಲಭಿಸದು. ಯಾರಾದರೂ ಏನಾದರೂ ಹೇಳಿದರೆ, ನಿನಗೊಬ್ಬರು ವಕೀಲರಿರುವರೆಂದು ಅವರಿಗೆ ಹೇಳು. ಏನಾದರೂ ಆದರೆ ನಾನು ನಿನ್ನ ವಕೀಲನಾಗಿರುವೆನು.
ಏನಾದರೂ ಆಗಬಹುದು ಅಥವಾ ಸ್ತ್ರೀಯರು ಗಾಯತ್ರಿ ಮಂತ್ರವನ್ನು ಉಚ್ಛರಿಸಬಾರದೆಂಬ ತಪ್ಪು ತಿಳುವಳಿಕೆಯನ್ನು ಹಲವಾರು ಪಂಡಿತರು ಜನರಲ್ಲಿ ಸೃಷ್ಟಿಸುತ್ತಾರೆ. ಇದೆಲ್ಲಾ ತಪ್ಪು, ಹಾಗೇನೂ ಇಲ್ಲ. ಪ್ರೀತಿಯಿಂದ ಉಚ್ಛರಿಸಿ ಮತ್ತು ಭಯದಿಂದಲ್ಲ.

ಪ್ರಶ್ನೆ: ನಕಾರಾತ್ಮಕವಾಗಿ ಯೋಚಿಸದಿರಲು ನಾನು ಬಹಳ ಕಷ್ಟಪಟ್ಟು ಪ್ರಯತ್ನಿಸುತ್ತೇನೆ, ಆದರೂ ನನ್ನ ಮನಸ್ಸಿಗೆ ನಕಾರಾತ್ಮಕ ಯೋಚನೆಗಳು ಬರುತ್ತಿರುತ್ತವೆ. ನಾನೇನು ಮಾಡಬೇಕು?
ಶ್ರೀ ಶ್ರೀ ರವಿಶಂಕರ್: ನೀನು ನಕಾರಾತ್ಮಕ ಯೋಚನೆಗಳನ್ನು ವಿರೋಧಿಸುತ್ತಾ ಇದ್ದರೆ ಮತ್ತು ಅವುಗಳನ್ನು ದೂರ ತಳ್ಳಲು ಪ್ರಯತ್ನಿಸಿದರೆ, ಆಗ ಅವುಗಳು ನಿನ್ನನ್ನು ಒಂದು ಭೂತದಂತೆ ಹಿಂಬಾಲಿಸುತ್ತವೆ. ನಿನ್ನ ನಕಾರಾತ್ಮಕ ಯೋಚನೆಗಳೊಂದಿಗೆ ಕೈಕುಲುಕು. ಅವುಗಳಿಗೆ ಹೇಳು, "ಇಲ್ಲಿ ಬನ್ನಿ ಮತ್ತು ನನ್ನೊಂದಿಗೆ ಕುಳಿತುಕೊಳ್ಳಿ. ನಾನು ನಿಮ್ಮನ್ನು ಬಿಟ್ಟು ಹೋಗುವುದಿಲ್ಲ", ಮತ್ತು ಅವುಗಳು ಹೇಗೆ ಬೇಗನೇ ಮಾಯವಾಗುತ್ತವೆಯೆಂಬುದನ್ನು ನೀವು ನೋಡುವಿರಿ. ಯೋಚನೆಗಳು ನಿಮ್ಮನ್ನು ನೋಡಿ ಭಯಗೊಳ್ಳುತ್ತವೆ.
ನೀವು ನಕಾರಾತ್ಮಕ ಯೋಚನೆಗಳಿಂದ ಭಯಗೊಂಡರೆ, ಆಗ ಅವುಗಳು ನಿಮ್ಮನ್ನು ನಿಯಂತ್ರಿಸುತ್ತವೆ. ಆದರೆ ನೀವು ಅವುಗಳೊಂದಿಗೆ ಕೈಕುಲುಕಿದರೆ, ಆಗ ಅವುಗಳು ಮಾಯವಾಗುತ್ತವೆ.

ಪ್ರಶ್ನೆ: ಗುರೂಜಿ, ಒಂದು ಪಾಪ ಮತ್ತು ಒಂದು ತಪ್ಪಿನ ನಡುವಿರುವ ವ್ಯತ್ಯಾಸವೇನು, ಹಾಗೂ ಅವುಗಳೆರಡೂ ಕ್ಷಮಾರ್ಹವೇ?
ಶ್ರೀ ಶ್ರೀ ರವಿಶಂಕರ್: ಖಂಡಿತಾ, ಎರಡನ್ನೂ ಕ್ಷಮಿಸಬಹುದು.
ಒಂದು ಪಾಪದ ಹಿಂದೆ ಏನಾದರೂ ಉದ್ದೇಶವಿರಬಹುದು, ಆದರೆ ಒಂದು ತಪ್ಪಾಗುವುದು ನಿಮ್ಮ ಅರಿವಿಲ್ಲದೆ; ನಿಮ್ಮಲ್ಲಿ ಅರಿವಿಲ್ಲದಿರುವಾಗ. ಒಂದು ಪಾಪವನ್ನು ಮಾಡುವಾಗ, ಅದು ಸರಿಯಲ್ಲವೆಂಬುದು ನಿಮಗೆ ತಿಳಿದಿತ್ತು, ಆದರೂ ನೀವದನ್ನು ಮಾಡಿದಿರಿ. ಅದು ಇರುವ ವ್ಯತ್ಯಾಸವಾಗಿರಬಹುದು. ಆದರೆ ಹೇಗಾದರೂ, ಎರಡೂ ಹೊರಟುಹೋಗುತ್ತವೆ, ಆದುದರಿಂದ ಅದರ ಬಗ್ಗೆ ಚಿಂತಿಸಬೇಡ. ಅವುಗಳನ್ನು ಬಿಟ್ಟುಬಿಡಿ!

ಪ್ರಶ್ನೆ: ಗುರೂಜಿ, ಎಲ್ಲವನ್ನೂ ಮೊದಲೇ ಬರೆದಿಡಲಾಗಿದ್ದರೆ ಕರ್ಮವು ಕಾರ್ಯಕ್ಕೆ ಬರುವುದು ಎಲ್ಲಿ?
ಶ್ರೀ ಶ್ರೀ ರವಿಶಂಕರ್: ಎಲ್ಲವೂ ಬರೆಯಲ್ಪಟ್ಟಿದೆಯೆಂದು ನೀನು ಹೇಳುತ್ತಿರುವೆ, ಆದರೆ ಅದು ಹಾಗಲ್ಲ. ಕೆಲವು ವಿಷಯಗಳು ವಿಧಿ ಮತ್ತು ಕೆಲವು ಸ್ವತಂತ್ರ ಇಚ್ಛೆ. ಉದಾಹರಣೆಗೆ, ಮಳೆ ಸುರಿಯುತ್ತಿದೆ, ಅದು ವಿಧಿ. ಒದ್ದೆಯಾಗಬೇಕೇ ಬೇಡವೇ ಎಂಬುದು ನಿಮ್ಮ ಸ್ವತಂತ್ರ ಇಚ್ಛೆ; ಅದು ನಿಮ್ಮ ಆಯ್ಕೆ. ನೀವೊಂದು ಛತ್ರಿಯನ್ನು ಒಯ್ದರೆ, ನೀವು ಒದ್ದೆಯಾಗುವುದಿಲ್ಲ. ನೀವು ಹಾಗೆಯೇ ಹೋದರೆ, ನೀವು ಒದ್ದೆಯಾಗುವಿರಿ.
ಆದುದರಿಂದ ಎಲ್ಲವೂ ಪೂರ್ವ-ನಿರ್ಧರಿತವಲ್ಲ, ನಿಮಗೆ ಸ್ವಲ್ಪ ಸ್ವಾತಂತ್ರ್ಯವೂ ಇದೆ.

ಪ್ರಶ್ನೆ: ಗುರೂಜಿ, ಮಕ್ಕಳ ಪಾಲನೆಯ ವಿಷಯಕ್ಕೆ ಬರುವಾಗ ಯಾವುದು ಹೆಚ್ಚು ಮುಖ್ಯ, ಹಣವು ಒದಗಿಸಬಲ್ಲ ಎಲ್ಲಾ ಸುಖಗಳು ನನ್ನ ಮಕ್ಕಳಲ್ಲಿರುವುದನ್ನು ಖಾತ್ರಿಪಡಿಸುವುದೇ ಅಥವಾ ನನ್ನ ಸಮಯವೇ?
ಶ್ರೀ ಶ್ರೀ ರವಿಶಂಕರ್: ಕೇಳು, ನಿನ್ನ ಮನಸ್ಸಿನಲ್ಲೊಂದು ಸಂಘರ್ಷ ನಡೆಯುತ್ತಿದೆ ಯಾಕೆಂದರೆ, ನೀನು ಕೆಲಸಕ್ಕೆ ಹೋಗುತ್ತಿರುವೆ ಹಾಗೂ ನಿನ್ನ ಮಕ್ಕಳಿಗೆ ಸಮಯವನ್ನು ಕೊಡಲು ನಿನಗೆ ಸಾಧ್ಯವಾಗುತ್ತಿಲ್ಲ. ಅದು ಪರವಾಗಿಲ್ಲ, ನೀನು ಎಷ್ಟೇ ಸಮಯವನ್ನು ಕೊಡುತ್ತಿದ್ದರೂ, ಅದು ಉತ್ತಮ ಗುಣಮಟ್ಟದ ಸಮಯವೆಂಬುದನ್ನು ಖಾತ್ರಿಪಡಿಸಿಕೋ. ಅದು ಮುಖ್ಯ.

ಪ್ರಶ್ನೆ: ಗುರೂಜಿ, ನಾನು ಬಹಳ ಸುಲಭವಾಗಿ ಮರೆತು ಬಿಡುತ್ತೇನೆ, ನನ್ನ ಸ್ಮರಣ ಶಕ್ತಿಯನ್ನು ಉತ್ತಮಗೊಳಿಸುವುದು ಹೇಗೆ?
ಶ್ರೀ ಶ್ರೀ ರವಿಶಂಕರ್: ಶಂಖಪುಷ್ಪಿ, ಬ್ರಾಹ್ಮಿ ರಸಾಯನ, ಮೇಧ್ಯ ರಸಾಯನಗಳಂತಹ ಕೆಲವು ಆಯುರ್ವೇದದ ಪೂರಕಗಳನ್ನು ತೆಗೆದುಕೊಳ್ಳುವುದು ಒಳ್ಳೆಯದು. ಇವುಗಳು ಬಹಳ ಒಳ್ಳೆಯದು, ಮತ್ತು ಅವುಗಳು ಸ್ಮರಣ ಶಕ್ತಿಗೆ ಸಹಾಯ ಮಾಡುತ್ತವೆ.
ಯೂಟ್ಯೂಬ್ ಅಥವಾ ದೂರದರ್ಶನವನ್ನು ನೋಡುವುದರಲ್ಲಿ ಹೆಚ್ಚು ಹೊತ್ತನ್ನು ಕಳೆಯಬೇಡಿ. ನೀವು ಸ್ವಲ್ಪ ಸಮಯವನ್ನು ಅದರಲ್ಲಿ ಕಳೆಯಬಹುದು, ಆದರೆ ಬಹಳಷ್ಟು ಗಂಟೆಗಳನ್ನಲ್ಲ, ಅದು ಕೂಡಾ ಒಂದೇ ಸಾರಿಗೆ ಅಲ್ಲ.
ಕೆಲವೊಮ್ಮೆ ನೀವು ಇಂಟರ್ನೆಟ್ಟಿನಲ್ಲಿ ಕುಳಿತುಕೊಳ್ಳುತ್ತೀರಿ ಮತ್ತು ನೀವು ಐದರಿಂದ ಆರು ಗಂಟೆಗಳ ಕಾಲ ಮಾಡುತ್ತಾ ಇರುತ್ತೀರಿ. ಒಂದು ಸಿನೆಮಾದ ನಂತರ ಇನ್ನೊಂದರಂತೆ ನೀವು ನಾಲ್ಕರಿಂದ ಐದು ಗಂಟೆಗಳ ವರೆಗೆ ನೋಡುತ್ತಾ ಇರುತ್ತೀರಿ. ಹಾಗೆ ಮಾಡಬೇಡಿ.

ಪ್ರಶ್ನೆ: ಆತ್ಮೀಯ ಗುರೂಜಿ, ದೀರ್ಘಕಾಲದ ಮಾದಕದ್ರವ್ಯ ವ್ಯಸನದಿಂದ ಪಾರಾಗುವುದು ಹೇಗೆ?
ಶ್ರೀ ಶ್ರೀ ರವಿಶಂಕರ್: ನೀನದನ್ನು ಎಂದಿಗೂ ಮುಟ್ಟುವುದಿಲ್ಲವೆಂದು, ಇಲ್ಲಿಂದ ತೆರಳುವ ಮೊದಲು ಒಂದು ಆಣೆ ಮಾಡು ಅಷ್ಟೇ! ಮತ್ತು ನೀನು ಮಾತನಾಡುತ್ತಿರುವುದು ಬೇರೊಬ್ಬರ ಬಗ್ಗೆಯಾದರೆ, ಅವರನ್ನು ಇಲ್ಲಿಗೆ ಕರೆದು ತಾ. ಅವರು ಹಲವಾರು ಸುದರ್ಶನ ಕ್ರಿಯೆಗಳನ್ನು ಮಾಡಲಿ ಮತ್ತು ಅದು ಹೋಗುತ್ತದೆ.
ನೂರಾರು ಸಾವಿರಾರು ಜನರು, ಪ್ರಾಣಾಯಾಮ, ಸುದರ್ಶನ ಕ್ರಿಯೆ ಮತ್ತು ಸಹಜ ಸಮಾಧಿ ಧ್ಯಾನ ಮಾಡಲು ಶುರು ಮಾಡಿದಾಗ ಮಾದಕದ್ರವ್ಯವನ್ನು ಬಿಟ್ಟು ಬಿಟ್ಟಿದ್ದಾರೆ.

ಪ್ರಶ್ನೆ: ಗುರೂಜಿ, ಋಷಿಮುಖ ಪತ್ರಿಕೆಗಳಲ್ಲೊಂದರಲ್ಲಿ, ಭಗವಾನ್ ವಿಷ್ಣುವು ಭಗವಂತರ ಭಗವಂತನೆಂಬುದಾಗಿ ನಾನು ಓದಿದ್ದೆ. ಹಾಗಾದರೆ ಭಗವಾನ್ ಶಿವನು ಭಗವಾನ್ ವಿಷ್ಣುವಿನ ಗುರುವಾಗಲು ಹೇಗೆ ಸಾಧ್ಯ?
ಶ್ರೀ ಶ್ರೀ ರವಿಶಂಕರ್: ಹೌದು, ಭಗವಾನ್ ಶಿವ - ದೇವರ ದೇವ ಮಹಾದೇವ.
ನೋಡು, ಎಲ್ಲರೂ ಒಬ್ಬರೇ. ಹರಿ ಮತ್ತು ಹರ ಬೇರೆ ಬೇರೆಯಲ್ಲ, ಅವರು ಒಬ್ಬರೇ. ಶಿವ ಮತ್ತು ವಿಷ್ಣು ಒಬ್ಬರೇ.