ಶನಿವಾರ, ಮಾರ್ಚ್ 1, 2014

ಅಪ್ರಯತ್ನದ ಆಗುಹೋಗುಗಳು

ಮಾರ್ಚ್ ೦೧, ೨೦೧೪
ಬೆಂಗಳೂರು, ಭಾರತ

ಪ್ರಶ್ನೆ: ಗುರುದೇವ, ಅಕರ್ಮದಲ್ಲಿ ಕರ್ಮ ಮತ್ತು ಕರ್ಮದಲ್ಲಿ ಅಕರ್ಮ ಎಂದರೇನು?

ಶ್ರೀ ಶ್ರೀ ರವಿ ಶಂಕರ್: ಇದು ಬಹಳ ಸ್ಪಷ್ಟವಾಗಿದೆ. ಇದುವೇ ಇಡೀ ರಹಸ್ಯ.
ನೀನು ನೂರು ಶೇಕಡಾ ಗಮನವಿಟ್ಟು ಕರ್ಮವನ್ನು ಮಾಡುವಾಗ, ನಿನ್ನಲ್ಲಿರುವ ಏನೋ ಒಂದು ಹೀಗೆಂದು ಹೇಳುತ್ತದೆ, "ಇದನ್ನು ನಾನು ಮಾಡುತ್ತಿಲ್ಲ, ನಾನು ಕರ್ಮವನ್ನು ಮಾಡುತ್ತಿಲ್ಲ. ಅದು ಸುಮ್ಮನೆ ಸಂಭವಿಸುತ್ತಿದೆ.’ ನಿಮ್ಮಲ್ಲಿ ಎಷ್ಟು ಮಂದಿಗೆ ಈ ಅನುಭವವಾಗಿದೆ? (ಸಭಿಕರಲ್ಲಿ ಹಲವರು ತಮ್ಮ ಕೈಗಳನ್ನು ಮೇಲೆತ್ತುತ್ತಾರೆ). ಇದು ಕರ್ಮದಲ್ಲಿ ಅಕರ್ಮವನ್ನು ನೋಡುವುದಾಗಿದೆ.

ಕೆಲವೊಮ್ಮೆ ನೀವು ಕೋಪಗೊಳ್ಳುತ್ತೀರಿ ಅಥವಾ ನೀವು ಯಾವುದೋ ರೀತಿಯಲ್ಲಿ ವರ್ತಿಸುತ್ತೀರಿ ಮತ್ತು ನೀವದನ್ನು ಮಾಡುತ್ತಿಲ್ಲವೆಂದೂ, ಅದು ಆಗುತ್ತಿದೆಯೆಂದೂ ನಿಮಗನ್ನಿಸುತ್ತದೆ.

ಯಾರೋ ಒಬ್ಬರು ನಿಮ್ಮ ಮುಂದೆ ಬರುತ್ತಾರೆ ಮತ್ತು ನೀವದನ್ನು ಉದ್ದೇಶಪೂರ್ವಕವಾಗಿ ಮಾಡುತ್ತಿಲ್ಲವೆಂಬುದನ್ನು ಬಹಳ ಚೆನ್ನಾಗಿ ತಿಳಿದುಕೊಂಡೂ ನೀವು ಸುಮ್ಮನೆ ಉರಿದುಬೀಳುತ್ತೀರಿ. ಆ ವ್ಯಕ್ತಿಯಲ್ಲಿರುವ ಏನೋ ಒಂದು ನಿಮ್ಮಲ್ಲಿ ಏನೋ ಒಂದನ್ನು ಪ್ರಚೋದಿಸುತ್ತದೆ ಮತ್ತು ನೀವು ಆ ರೀತಿ ವರ್ತಿಸಲು ತೊಡಗುತ್ತೀರಿ. ನಿಮ್ಮಲ್ಲಿ ಎಷ್ಟು ಮಂದಿಗೆ ಈ ಅನುಭವವಾಗಿದೆ? (ಹಲವರು ಕೈಗಳನ್ನು ಮೇಲೆತ್ತುತ್ತಾರೆ).

"ಓ ದೇವರೇ, ನಾನಿದನ್ನು ಮಾಡಲು ಯಾವತ್ತೂ ಬಯಸಿರಲಿಲ್ಲ" ಎಂದು ನೀವು ಅಚ್ಚರಿಪಡುತ್ತೀರಿ! ಅದು ಕರ್ಮದಲ್ಲಿ ಅಕರ್ಮವನ್ನು ನೋಡುವುದಾಗಿದೆ.

ನೀವು ಕರ್ಮವನ್ನು ಮಾಡುವಿರಿ ಯಾಕೆಂದರೆ, ಆ ವ್ಯಕ್ತಿಯು ನಿಮ್ಮಿಂದ ಆ ಮಾತುಗಳನ್ನು ಅಥವಾ ಆ ಕರ್ಮವನ್ನು ಪಡೆಯಬೇಕಾಗಿತ್ತು.

ಹಾಗಾಗಿ ಅವನು ಕೇವಲ ಆ ಮಾತುಗಳನ್ನು ನಿಮ್ಮಿಂದ ಹೊರಕ್ಕೆ ಎಳೆದುಕೊಂಡನು, ಮತ್ತು ನೀವು ನಿಜಕ್ಕೂ ಯಾವತ್ತೂ ಅದನ್ನು ಹೇಳಲು ಬಯಸಿರಲಿಲ್ಲ. ಆ ಘಟನೆಯು ನಡೆಯಲೇಬೇಕಾಗಿತ್ತು ಮತ್ತು ಅದೊಂದು ಕರ್ಮವಾಗಿತ್ತು. ಇದು ಸ್ವಲ್ಪ ಉನ್ನತ ಮಟ್ಟದ ಜ್ಞಾನವಾಗಿದೆ.

ಈಗ, ಈ ಜ್ಞಾನವನ್ನು ನೀವು ಮಾಡುವ ಪ್ರತಿಯೊಂದು ತಪ್ಪುಗಳಿಗೂ ಅನ್ವಯಿಸಲು ಪ್ರಯತ್ನಿಸಬೇಡಿ. ನೀವು ಯಾರ ಮೇಲಾದರೂ ರೇಗಾಡಿ, "ನಾನು ಬೇಕೆಂದೇ ಮಾಡಲಿಲ್ಲ. ಅದು ಕರ್ಮವಾಗಿತ್ತು ಮತ್ತು ನೀವದನ್ನು ಪಡೆಯಲೇಬೇಕಾಗಿತ್ತು, ಹೀಗಾಗಿ ನಾನು ರೇಗಾಡಲೇಬೇಕಾಗಿತ್ತು!" ಎಂದು ಹೇಳಿದರೆ, ಇದು ಜ್ಞಾನದ ದುರುಪಯೋಗವಾಗಿದೆ. ಹಾಗೆ ಮಾಡಬೇಡಿ. ಆ ರೀತಿಯಲ್ಲಿ ಜ್ಞಾನವನ್ನು ದುರುಪಯೋಗ ಮಾಡಬೇಡಿ.

ಕೆಲವೊಮ್ಮೆ ಒಂದು ಕೃತ್ಯವನ್ನು ಮಾಡಲು ನಿಮಗೆ ಬಯಕೆಯಿಲ್ಲದಿದ್ದರೂ ನೀವದನ್ನು ಮಾಡುತ್ತೀರಿ. ನೀವದನ್ನು ಮಾಡಲು ಬಯಸುವುದಿಲ್ಲ, ಆದರೆ ನಿಮಗೆ ನಿಸ್ಸಹಾಯಕತೆಯ ಅನುಭವವಾಗುತ್ತದೆ ಮತ್ತು ನೀವು ಆ ಕೃತ್ಯವು ನಡೆಯುತ್ತಿರುವುದನ್ನು ಸುಮ್ಮನೆ ನೋಡುತ್ತಿರುತ್ತೀರಿ. ನೀವದನ್ನು ಮಾಡುತ್ತಿಲ್ಲವೆಂಬುದನ್ನು ನೀವು ನೋಡುತ್ತೀರಿ, ಆದರೂ ಒಂದು ಕೃತ್ಯವು ನಡೆಯುತ್ತಿದೆ, ಇದು ಕರ್ಮದಲ್ಲಿ ಅಕರ್ಮವನ್ನು ನೋಡುವುದಾಗಿದೆ.

ನೀವು ಕಣ್ಣುಗಳನ್ನು ಮುಚ್ಚಿಕೊಂಡು ಧ್ಯಾನ ಮಾಡುತ್ತಾ ಕುಳಿತಿದ್ದೀರಿ. ನೀವು ಏನನ್ನೂ ಮಾಡುತ್ತಿಲ್ಲ, ಆದರೂ ನೀವು ನಿಮ್ಮೊಳಗಿನಿಂದ ಉತ್ಪಾದಿಸುತ್ತಿರುವ ಕಂಪನವು ಪ್ರಪಂಚವನ್ನು ಬದಲಾಯಿಸುತ್ತಿದೆ. ಇದು ಅಕರ್ಮದಲ್ಲಿ ಕರ್ಮವಾಗಿದೆ.
ನೀವು ಕುಳಿತುಕೊಂಡು ಧ್ಯಾನ ಮಾಡುತ್ತಿರುವಿರಿ, ನೀವು ಕರುಣೆಯ ಅಲೆಗಳನ್ನು, ಶುದ್ಧವಾದ ಪ್ರೇಮ ಮತ್ತು ಭಕ್ತಿಯ ಅಲೆಗಳನ್ನು, ಸಾಮರಸ್ಯದ ಅಲೆಗಳನ್ನು ಹರಡುತ್ತಿರುವಿರಿ ಮತ್ತು ಆ ಸಾಮರಸ್ಯವು ಇತರರನ್ನು ಬಡಿಯುತ್ತಿದೆ ಹಾಗೂ ಅದು ಅವರ ಮನೋಭಾವಗಳನ್ನು ಬದಲಾಯಿಸುತ್ತಿದೆ, ಅದು ವಾತಾವರಣವನ್ನು ಬದಲಾಯಿಸುತ್ತಿದೆ, ಅದು ನಕಾರಾತ್ಮಕತೆಯನ್ನು ತೆಗೆದುಹಾಕುತ್ತಿದೆ, ಅದು ವಿಷಯಗಳನ್ನು ಹೆಚ್ಚು ಸಕಾರಾತ್ಮಕವನ್ನಾಗಿ ಮಾಡುತ್ತಿದೆ.

ನೀವು ಜನರಿಗೆ ಆಶೀರ್ವಾದ ನೀಡುತ್ತಿರುವಿರಿ. ನಿಮ್ಮ ಆಶೀರ್ವಾದದಿಂದ ವಿಷಯಗಳು ಬದಲಾಗುತ್ತಿವೆ. ಇದು ಅಕರ್ಮದಲ್ಲಿ ಕರ್ಮವಾಗಿದೆ. ನೀವು ಸಮಾಧಿಯಲ್ಲಿ ಕುಳಿತುಕೊಳ್ಳುತ್ತೀರಿ, ನೀವು ಆಳವಾದ ಧ್ಯಾನದಲ್ಲಿ ಕುಳಿತುಕೊಳ್ಳುತ್ತೀರಿ, ಆ ಸಮಾಧಿಯು ಖಂಡಿತವಾಗಿಯೂ ಪ್ರಪಂಚದಲ್ಲಿ ಬಹಳಷ್ಟು ಕರ್ಮವನ್ನು ಸೃಷ್ಟಿಸುತ್ತಿದೆ. ಅದು ಅಕರ್ಮದಲ್ಲಿ ಕರ್ಮವಾಗಿದೆ.
ಇದನ್ನು ವಿವರಿಸುವುದು ಬಹಳ ಕಷ್ಟ. ನಾನು ಯಾವುದೋ ಕೆಲವು ಉದಾಹರಣೆಗಳೊಂದಿಗೆ ಅದನ್ನು ವಿವರಿಸುವ ಒಂದು ಪ್ರಯತ್ನ ಮಾಡಿದ್ದೇನೆ.

ಪ್ರಶ್ನೆ: ಪ್ರೀತಿಯ ಗುರುದೇವ, ಸೃಷ್ಟಿ ಮತ್ತು ಪ್ರಳಯಗಳ ಹಿನ್ನೆಲೆಯಲ್ಲಿ ಎರಡು ಪದಗಳು ಹೆಚ್ಚಾಗಿ ಬಳಸಲ್ಪಡುತ್ತವೆ: ಮಹಾತತ್ವ ಮತ್ತು ತನ್ಮಾತ್ರ. ಇವುಗಳೆರಡೂ ಅರ್ಥಮಾಡಿಕೊಳ್ಳಲು ಕಷ್ಟವಾದಂತಹವು. ದಯವಿಟ್ಟು ನೀವು ಇದರ ಮೇಲೆ ಸ್ವಲ್ಪ ಪ್ರಕಾಶ ಬೀರಬಲ್ಲಿರೇ?

ಶ್ರೀ ಶ್ರೀ ರವಿ ಶಂಕರ್: ತನ್ಮಾತ್ರ ಎಂದರೆ, ನಮ್ಮ ಶರೀರದೊಳಗೆ ಆಗುವ ಯಾವುದೇ ಸಂವೇದನೆ ಅಥವಾ ಸಂಭವದ ಒಂದು ಅಳತೆ (ನಮ್ಮ ಪಂಚೇಂದ್ರಿಯಗಳಿಂದ ಗ್ರಾಹ್ಯವಾಗಬಹುದಾದಂತಹ ದೃಶ್ಯ, ಶಬ್ದ, ವಾಸನೆ, ರುಚಿ ಮತ್ತು ಸ್ಪರ್ಷಗಳ ಕನಿಷ್ಠ ಪ್ರಮಾಣ).

ಭೌತಿಕ ಶರೀರದ ಮಟ್ಟದಲ್ಲಿ ಪ್ರಕಟವಾಗುವ ಯಾವುದೇ ವಿಷಯದ ಒಂದು ಅಳತೆಯಾಗಿದೆ ಅದು. ಉದಾಹರಣೆಗೆ, ನಮ್ಮ ಕಣ್ಣುಗಳು, ನಮ್ಮ ಕಣ್ಣುಗಳನ್ನು ಪ್ರವೇಶಿಸುವ ಬೆಳಕಿನ ಸಹಾಯದಿಂದ ವಸ್ತುಗಳನ್ನು ನೋಡುತ್ತವೆ. ನಮ್ಮ ಕಣ್ಣುಗಳೊಳಗೆ ಬೆಳಕು ಇರುವ ಕಾರಣದಿಂದಲೇ ನಮಗೆ ವಸ್ತುಗಳನ್ನು ನೋಡಲು ಸಾಧ್ಯವಾಗುವುದು.

ಹೆಚ್ಚಾಗಿ ಜನರು ತಮ್ಮ ದೃಷ್ಟಿಶಕ್ತಿಯನ್ನು ಕಳೆದುಕೊಳ್ಳುವಾಗ, ಅವರ ಕಣ್ಣುಗಳು ಪ್ರಕಾಶವನ್ನು ಕಳಕೊಂಡಿವೆ ಎಂದು ಹೇಳಲಾಗುತ್ತದೆ. (ಅಂದರೆ, ಅವರಿಗೆ ನೋಡಲು ಸಹಾಯ ಮಾಡಲು, ಬೆಳಕು ಅವರ ಕಣ್ಣುಗಳನ್ನು ಪ್ರವೇಶಿಸುತ್ತಿಲ್ಲ) ಈಗ, ನೋಡಲು ಸಾಧ್ಯವಿರುವ ಬೆಳಕಿನ ಪ್ರಮಾಣವು ಬೇರೆ ಬೇರೆ ಜೀವಜಾತಿಗಳಲ್ಲಿ ವ್ಯತ್ಯಸ್ತವಾಗಿದೆ. ಒಂದು ಗೂಬೆಯು ಕತ್ತಲಿನಲ್ಲಿ ಅಥವಾ ಬಹಳ ಮಸುಕಾದ ಬೆಳಕಿನಲ್ಲಿ ಕೂಡಾ ನೋಡಬಲ್ಲದು, ಆದರೆ ನಮಗದು ಸಾಧ್ಯವಾಗಲಾರದು. ಒಂದು ಬೆಕ್ಕು ಕೂಡಾ ಕತ್ತಲಿನಲ್ಲಿ ಬಹಳ ಚೆನ್ನಾಗಿ ನೋಡಬಲ್ಲದು. ಹೀಗಾಗಿ ನಾವು, ಒಂದು ಗೂಬೆಯ ಅಥವಾ ಒಂದು ಬೆಕ್ಕಿನ ತನ್ಮಾತ್ರವು ನಮ್ಮದಕ್ಕಿಂದ ಎಷ್ಟೋ ಹೆಚ್ಚು ಎಂದು ಹೇಳುತ್ತೇವೆ. ಮಾನವರಾಗಿ, ಮಬ್ಬಾದ ಬೆಳಕಿನಲ್ಲಿ ನೋಡಲು ಸಾಧ್ಯವಿರುವ ನಮ್ಮ ತನ್ಮಾತ್ರವು ಬಹಳಷ್ಟು ಕಡಿಮೆಯಾಗಿದೆ. ಅದಕ್ಕಾಗಿಯೇ, ವಿದ್ಯುಚ್ಛಕ್ತಿ ಇಲ್ಲದಿರುವಾಗ ಅಥವಾ ಬೆಳಕು ಇಲ್ಲದಿರುವಾಗ ಕೂಡಾ ಒಂದು ಬೆಕ್ಕಿಗೆ ಯಾವುದನ್ನು ಎಲ್ಲಿಡಲಾಗಿದೆಯೆಂಬುದು ಸ್ಪಷ್ಟವಾಗಿ ನೋಡಲು ಸಾಧ್ಯವಾಗುವುದು.

ಅದೇ ರೀತಿಯಲ್ಲಿ, ವಾಸನೆಯ ಅರಿವಿನ ವಿಷಯಕ್ಕೆ ಬಂದಾಗ, ತನ್ಮಾತ್ರದಲ್ಲಿರುವ ಈ ವ್ಯತ್ಯಾಸವನ್ನು ನಾವು ಅರ್ಥ ಮಾಡಿಕೊಳ್ಳಬಹುದು. ಒಂದು ಆನೆಗೆ ಬಹಳ ಶಕ್ತಿಯುತವಾದ ಆಘ್ರಾಣಿಸುವ ಸಾಮರ್ಥ್ಯವಿದೆ (ಅಥವಾ ತನ್ಮಾತ್ರ).    
ಅದು ವಸ್ತುಗಳನ್ನು ದೂರದಿಂದಲೇ ಸ್ಪಷ್ಟವಾಗಿ ಆಘ್ರಾಣಿಸಬಲ್ಲದು ಮತ್ತು ಮುಂದೇನಿದೆ ಅಥವಾ ತನ್ನ ಕಡೆಗೆ ಏನು ಬರುತ್ತಿದೆ, ಯಾವ ದಿಕ್ಕಿನಿಂದ ಬರುತ್ತಿದೆ ಎಂಬುದನ್ನು ಸರಿಯಾಗಿ ನಿರ್ಣಯಿಸಬಲ್ಲದು. ಅದನ್ನು ಅದು ಮುಂಬರುವ ಹಲವಾರು ವರ್ಷಗಳವರೆಗೆ ನೆನಪಿನಲ್ಲಿಟ್ಟುಕೊಳ್ಳುತ್ತದೆ.

ಅದೇ ರೀತಿಯಲ್ಲಿ, ರುಚಿಯ ಅರಿವಿನೊಂದಿಗೆ ಸಂಬಂಧಪಟ್ಟ ಒಂದು ತನ್ಮಾತ್ರವಿದೆ. ಒಂದು ಆಹಾರವಸ್ತುವಿಗೆ ಅದರದ್ದೇ ಆದ ಒಂದು ರುಚಿಯಿರುತ್ತದೆ, ಆದರೆ ನಾವದನ್ನು ತಿನ್ನುವಾಗ ನಮಗೆ ಬೇರೆ ಬೇರೆ ರುಚಿಗಳ ಅನುಭವವಾಗುತ್ತದೆ. ಉದಾಹರಣೆಗೆ, ನೀವು ಸ್ವಲ್ಪ ಸಕ್ಕರೆಯನ್ನು ತಿಂದು, ನಂತರ ಚಹಾವನ್ನು ಕುಡಿದರೆ, ಆಗ ನಿಮಗೆ ಚಹಾದಲ್ಲಿನ ಸಿಹಿಯ ರುಚಿ ತಿಳಿಯುವುದಿಲ್ಲ. ಒಂದು ನಿರ್ದಿಷ್ಟ ಅನುಭವವು, ಅದಕ್ಕೆ ಸಂಬಂಧಿಸಿದ ತನ್ಮಾತ್ರಕ್ಕಿಂತ ಕಡಿಮೆಯಾಗಿದ್ದರೆ, ಆಗ ನಿಮಗೆ ಅದನ್ನು ಅನುಭವಿಸಲು ಮತ್ತು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ, ಆದರೆ ಅದು ಅದಕ್ಕೆ ಸಂಬಂಧಿಸಿದ ತನ್ಮಾತ್ರಕ್ಕಿಂತ ಅಧಿಕವಾಗಿದ್ದರೆ, ಆಗ ಅದನ್ನು ಸರಿಯಾಗಿ ಗ್ರಹಿಸಲು ನಿಮಗೆ ಸಾಧ್ಯವಾಗುವುದಿಲ್ಲ. ಹೀಗೆ ನೀವು ಮೊದಲು ಸಕ್ಕರೆಯನ್ನು ತಿಂದು ನಂತರ ಚಹಾವನ್ನು ಕುಡಿದಾಗ, ನಿಮಗೆ ಸಿಹಿ ತಿಳಿಯುವುದಿಲ್ಲ, ಯಾಕೆಂದರೆ ತನ್ಮಾತ್ರವು ಬದಲಾಗಿರುತ್ತದೆ. ಹೀಗೆ ತನ್ಮಾತ್ರವೆಂಬುದರ ಅರ್ಥ ಇದು.

ನಮ್ಮ ಇಂದ್ರಿಯಗಳು - ಕಣ್ಣುಗಳು, ಕಿವಿಗಳು, ನಾಲಿಗೆ, ಮೂಗು ಮತ್ತು ಚರ್ಮ - ಇವುಗಳು ಒಟ್ಟಾಗಿ ಐದು ಜ್ಞಾನೇಂದ್ರಿಯಗಳು ಎಂದು ಕರೆಯಲ್ಪಡುತ್ತವೆ ಮತ್ತು ಇವುಗಳಲ್ಲಿ ಪ್ರತಿಯೊಂದಕ್ಕೂ ಸಂಬಂಧಿಸಿದಂತೆ ಒಂದೊಂದು ತನ್ಮಾತ್ರವಿದೆ. ಈ ತನ್ಮಾತ್ರದ ಕಾರಣದಿಂದಲೇ ನಮಗೆ ನೋಡಲು, ಕೇಳಲು, ಆಘ್ರಾಣಿಸಲು, ರುಚಿನೋಡಲು ಮತ್ತು ಸ್ಪರ್ಷವನ್ನು ಅನುಭವಿಸಲು ಸಾಧ್ಯವಾಗುವುದು.

ಪ್ರಶ್ನೆ: ಗುರುದೇವ, ಭಾರತವು ಪ್ರಪಂಚದಲ್ಲಿನ ಅತ್ಯಂತ ಯುವ ದೇಶಗಳಲ್ಲೊಂದಾಗಿ ವೇಗವಾಗಿ ಹೊರಹೊಮ್ಮುತ್ತಿದೆ. ಯುವಕರ ಈ ಎಲ್ಲಾ ಶಕ್ತಿಯನ್ನು ದೇಶದ ಪ್ರಗತಿಯ ಕಡೆಗೆ ಪ್ರವಹಿಸುವಂತೆ ನಾವು ಮಾಡುವುದು ಹೇಗೆ? ತಮ್ಮ ಜೀವನದಲ್ಲಿ ಮುಂದೆ ಸಾಗುತ್ತಿರುವಾಗ ಈ ದೇಶದ ಯುವಜನತೆಯು ಮನಸ್ಸಿನಲ್ಲಿಟ್ಟುಕೊಳ್ಳಬೇಕಾದುದೇನು? 

ಶ್ರೀ ಶ್ರೀ ರವಿ ಶಂಕರ್: ಇದಕ್ಕಾಗಿಯೇ ನಾವು "ಒಂದು ಉತ್ತಮ ಭಾರತಕ್ಕಾಗಿ ಸ್ವಯಂಸೇವಕರಾಗಿ" (ವಾಲಂಟಿಯರ್ ಫಾರ್ ಎ ಬೆಟರ್ ಇಂಡಿಯಾ (ವಿ.ಬಿ.ಐ.))ನ್ನು ಸೃಷ್ಟಿಸಿದುದು. ನಿಮ್ಮಲ್ಲಿ ಎಲ್ಲರೂ ವಿ.ಬಿ.ಐ.ಯ ಸಕ್ರಿಯ ಸದಸ್ಯರಾಗಬೇಕು.

ದೇಶದ ಪ್ರತಿಯೊಂದು ಮೂಲೆಯಲ್ಲೂ ನಾವೆಲ್ಲರೂ ಒಂದು ಸಂತೋಷದ ಅಲೆಯನ್ನು ತರಬೇಕೆಂದು ನಾನು ಬಯಸುತ್ತೇನೆ. ಇದಕ್ಕಾಗಿ ನೀವೆಲ್ಲರೂ ಕೆಲಸ ಮಾಡಬೇಕು. ನಮ್ಮ ದೇಶದ ಜನಸಂಖ್ಯೆಯು ೧೨೦ ಕೋಟಿ. ಜನಸಂಖ್ಯೆಯ ಕೇವಲ ೧೦% ದಷ್ಟಾದರೂ ವಿ.ಬಿ.ಐ.ಯಲ್ಲಿ ಸಕ್ರಿಯವಾಗಿ ಪಾಲ್ಗೊಂಡರೆ, ಆಗ ನಮ್ಮ ಸಮಾಜದಲ್ಲಿ ಮತ್ತು ನಮ್ಮ ದೇಶದಲ್ಲಿ ಒಂದು ಬಹಳ ದೊಡ್ಡದಾದ ಪರಿವರ್ತನೆಯಾಗುವುದು. ಆದುದರಿಂದ ನಿಮ್ಮಲ್ಲಿ ಎಲ್ಲರೂ ಇದನ್ನೊಂದು ನಿಮಗಿರುವ ಗುರಿಯಾಗಿ ಮಾಡಿಕೊಳ್ಳಬೇಕು. ನಿಮ್ಮಲ್ಲಿ ಪ್ರತಿಯೊಬ್ಬರೂ ವಿ.ಬಿ.ಐ.ಯೊಳಕ್ಕೆ ೧೦,೦೦೦ ಹೊಸ ಸ್ವಯಂಸೇವಕರನ್ನು ತರಬೇಕು. ಇದು ಕಷ್ಟವೇ ಅಲ್ಲ. ಜನರು ಸಂತೋಷದ ಸಮೀಕ್ಷೆಯನ್ನು ಭರ್ತಿ ಮಾಡುವಂತೆ ಮಾಡಿ. ಮೂವರ ಗುಂಪುಗಳನ್ನಾಗಿ ಮಾಡಿ, ಜನರ ಬಳಿಗೆ ಹೋಗಿ ಮತ್ತು ಎಲ್ಲರೂ ಸಂತೋಷದ ಸಮೀಕ್ಷೆಯ ಅರ್ಜಿಗಳನ್ನು ಭರ್ತಿ ಮಾಡುವಂತೆ ಮಾಡಿ.

ನೀವು ೫,೦೦೦ ಅಥವಾ ೭,೦೦೦ ಸಮೀಕ್ಷೆಗಳನ್ನು ದಾಟಿದಾಗ, ಇದರ ಬಗ್ಗೆ ತಿಳಿಸುವ ಒಂದು ಇ-ಮೈಲ್‌ನ್ನು ನಮಗೆ ಕಳುಹಿಸಿ. ಮಹಿಳೆಯರೂ ಕೂಡಾ ಒಟ್ಟು ಸೇರಿ ಇದನ್ನು ಮಾಡಬಹುದು.

ಪ್ರತಿದಿನವೂ ಕನಿಷ್ಠಪಕ್ಷ ಒಂದು ಗಂಟೆಯನ್ನು ಸಮಾಜಕ್ಕಾಗಿ ಮತ್ತು ದೇಶಕ್ಕಾಗಿ ಅರ್ಪಿಸಬಲ್ಲ, ೧೦ ಕೋಟಿ ಕಂಕಣಬದ್ಧ ಸ್ವಯಂಸೇವಕರ ಒಂದು ಶಕ್ತಿಶಾಲಿ ಬಣವನ್ನು ನಾವು ಭಾರತಕ್ಕೆ ನೀಡಬಲ್ಲೆವಾದರೆ, ಆಗ ಈ ದೇಶದ ಸಂಪೂರ್ಣ ಮುಖವೇ ಬದಲಾಗುವುದು. ನಮ್ಮಲ್ಲಿ ಎಂತಹ ಮಹತ್ತರವಾದ ಜ್ಞಾನವಿದೆ, ಆದರೂ ನಾವು ದುಃಖಿತರಾಗಿದ್ದೇವೆ ಮತ್ತು ವಿಷಣ್ಣರಾಗಿದ್ದೇವೆ. ಹಾಗಾದರೆ ಅಂತಹ ಮಹತ್ತರವಾದ ಜ್ಞಾನದ ಉಪಯೋಗವಾದರೂ ಏನು? ನಾವೊಂದು ಮಹತ್ತರವಾದ ಸಂಪತ್ತಿನ (ಜ್ಞಾನದ) ಮೇಲೆ ಕುಳಿತಿದ್ದೇವೆ, ಆದರೂ ನಾವು ಸಣ್ಣಪುಟ್ಟ ವಿಷಯಗಳಿಗಾಗಿ ಅತ್ತು ಕರೆದು ಮಾಡುತ್ತೇವೆ.  

ನಮ್ಮ ದೇಶದ ಇವತ್ತಿನ ಪರಿಸ್ಥಿತಿಯ ಬಗ್ಗೆ ಸುಮ್ಮನೇ ಯೋಚಿಸಿ. ಮಧ್ಯಪೂರ್ವ ರಾಷ್ಟ್ರಗಳಲ್ಲಿ ಮತ್ತು ಮಲೇಷಿಯಾದಂತಹ ರಾಷ್ಟ್ರಗಳಲ್ಲಿ ತೈಲವು ಸಮೃದ್ಧವಾಗಿದೆ, ಆದರೂ ನಾವು ಈ ರಾಷ್ಟ್ರಗಳಿಗೆ ತೈಲ ಹಾಗೂ ಪೆಟ್ರೋಲಿಯಂಗಳನ್ನು ರಫ್ತು ಮಾಡುತ್ತಿದ್ದೇವೆ. ನಾವು ನಮ್ಮ ದೇಶದಲ್ಲಿ ತೈಲ ಮತ್ತು ಪ್ರಾಕೃತಿಕ ಅನಿಲದ ಒಂದು ದೊಡ್ಡ ಸಂಪತ್ತಿನ ಮೇಲೆ ಕುಳಿತಿದ್ದೇವೆ, ಆದರೂ ನಾವು ತೈಲದ ಆಮದಿಗಾಗಿ ಕೇಳಿಕೊಳ್ಳುತ್ತಾ ಭಿಕ್ಷುಕರಂತೆ ವರ್ತಿಸುತ್ತಿದ್ದೇವೆ. ಇದು ಸರಕಾರದ ಆಡಳಿತದಲ್ಲಿರುವ ಭ್ರಷ್ಟ ಜನರ ಕೆಲಸವಾಗಿದೆ.

ನಿನ್ನೆಯಷ್ಟೇ ನಾನು ಒಂದು ವಿಷಯದ ಬಗ್ಗೆ ಓದುತ್ತಿದ್ದೆ. ಕೇವಲ ಆರು ತಿಂಗಳ ಅವಧಿಯಲ್ಲಿ, ಭಾರತೀಯ ನೌಕಾಪಡೆಯಿಂದ ಹತ್ತು ದೊಡ್ಡ ಸಮುದ್ರ ಅಪಘಾತಗಳುಂಟಾಗಿವೆ. ಇತರ ಯಾವುದೇ ದೇಶದಲ್ಲಿ ಇಂತಹದ್ದೇನಾದರೂ ಸಂಭವಿಸುವುದನ್ನು ನೀವು ಯಾವತ್ತಾದರೂ ಕೇಳಿದ್ದೀರಾ? ಅಂತಹ ಅಪಘಾತಗಳು ಕೇವಲ ಆಕಸ್ಮಿಕವಾಗಿ ಸಂಭವಿಸುವುದಿಲ್ಲ (ಕೆಲವು ಭ್ರಷ್ಟ ಅಧಿಕಾರಿಗಳಿಂದ ನಡೆದ ಷಡ್ಯಂತ್ರದ ಕೆಲಸದ ಕಡೆಗೆ ಸೂಚಿಸುತ್ತಾ). ಅಂತಹ ಅಪಘಾತಗಳು ಸಂಭವಿಸುವಾಗ, ದೇಶದಲ್ಲಿ ಎಲ್ಲರೂ ನೌಕಾ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ ಮತ್ತು ಅಂತಹ ಒಂದು ಅಪಘಾತ ಏಕೆ ಸಂಭವಿಸಿತೆಂದು ಅವರನ್ನು ಪ್ರಶ್ನಿಸುತ್ತಾರೆ (ನಿರ್ಲಕ್ಷ್ಯತೆಯನ್ನು ಆಪಾದಿಸುವ ನೆಲೆಯಲ್ಲಿ). ಇಂತಹ ಹತ್ತು ಅಪಘಾತಗಳಾಗಿದ್ದರೂ ಸಹ ನಮ್ಮ ಮಂತ್ರಿಗಳು ಅಲ್ಲಿ ಕುಳಿತುಕೊಂಡು ಅದನ್ನು ನೋಡುವುದಲ್ಲದೆ ಅದರ ಬಗ್ಗೆ ಏನನ್ನೂ ಮಾಡುವುದಿಲ್ಲ. ಇದು ಬಹಳ ದುರದೃಷ್ಟಕರ.

ಇದು ಜಗತ್ತಿನ ಬೇರೆ ಯಾವುದಾದರೂ ದೇಶದಲ್ಲಿ ಆಗಿರುತ್ತಿದ್ದರೆ, ಜನರು ಅದರ ಬಗ್ಗೆ ಗಾಬರಿ ಮತ್ತು ಕೋಪಗೊಳ್ಳುತ್ತಿದ್ದರು. ಆದರೆ ನಮ್ಮ ದೇಶದಲ್ಲಿ, ನಮ್ಮ ಅಧಿಕಾರಿಗಳು ಮತ್ತು ನಮ್ಮ ಜನರು ಸುಮ್ಮನಾಗಿದ್ದಾರೆ.

ಸಮುದ್ರದಲ್ಲಿನ ಅಂತಹ ಅಪಘಾತಗಳಲ್ಲಿ ಎಷ್ಟು ಜೀವಗಳು ಕಳೆದುಹೋದವು ಎಂಬುದರ ಬಗ್ಗೆ ಯಾರಿಗೂ ಚಿಂತೆಯಿಲ್ಲ. ಅವರಿಗೆ ಆಸಕ್ತಿಯಿರುವುದೆಂದರೆ ತಮ್ಮ ಜೇಬುಗಳನ್ನು ಹಣದಿಂದ ತುಂಬಿಸಿಕೊಳ್ಳುವುದರ ಬಗ್ಗೆ ಮಾತ್ರ.

ನಮ್ಮಲ್ಲಿ ಕಲ್ಲಿದ್ದಲು ಮತ್ತು ಖನಿಜ ಸಂಪನ್ಮೂಲಗಳ ಒಂದು ದೊಡ್ಡ ಸಂಪತ್ತಿದೆ, ಆದರೂ ನಾವು ಕಲ್ಲಿದ್ದಲನ್ನು ಇತರ ದೇಶಗಳಿಂದ ಆಮದು ಮಾಡಿಕೊಳ್ಳುತ್ತಿದ್ದೇವೆ. ನಮ್ಮ ದೇಶವು ಬಾಕ್ಸೈಟ್ ಅದಿರಿನಲ್ಲಿ (ಅಲ್ಯುಮಿನಿಯಂನ್ನು ತಯಾರಿಸಲಾಗುವ ಅದಿರು) ಬಹಳ ಶ್ರೀಮಂತವಾಗಿದೆ, ಆದರೂ ನಾವು ಅದನ್ನು ಕೂಡಾ ಆಮದು ಮಾಡಿಕೊಳ್ಳುತ್ತಿದ್ದೇವೆ. ನಮ್ಮಲ್ಲಿ ಕಬ್ಬಿಣದ ಅದಿರಿನ ಎಂತಹ ದೊಡ್ಡ ಸಂಪತ್ತಿದೆ, ಅದರೂ ನಾವು ನಮ್ಮ ಶ್ರೀಮಂತ ಅದಿರು ನಿಕ್ಷೇಪಗಳನ್ನು ಇತರ ರಾಷ್ಟ್ರಗಳಿಗೆ ರಫ್ತು ಮಾಡಿ (ಕಡಿಮೆ ದರದಲ್ಲಿ), ಸಿದ್ಧವಾದ ಉಕ್ಕಿನ ಉತ್ಪನ್ನಗಳನ್ನು ಅವರಿಂದ ಆಮದು ಮಾಡಿಕೊಳ್ಳುತ್ತೇವೆ (ಹೆಚ್ಚಿನ ದರದಲ್ಲಿ). ಇದು ಅತ್ಯಂತ ದುರದೃಷ್ಟಕರವಾಗಿದೆ.

ನಮ್ಮ ದೇಶದಲ್ಲಿ ಪ್ರತಿಭಾವಂತ ವಿಜ್ಞಾನಿಗಳು ಮತ್ತು ಸಂಶೋಧಕರಿಗೇನೂ ಕೊರತೆಯಿಲ್ಲ. ನಮ್ಮ ದೇಶದಲ್ಲಿ ಎಲ್ಲೆಡೆಯೂ ಪ್ರತಿಭಾವಂತ ಜನರಿದ್ದಾರೆ. ಹೀಗಾಗಿ, ಒಂದು ದೊಡ್ಡ ಪರಿವರ್ತನೆಯನ್ನು ತರುವುದರಲ್ಲಿ ಈ ದೇಶದ ಯುವಜನತೆಯು ಬಹಳ ಸಮರ್ಥರಾಗಿದ್ದಾರೆ. ಒಟ್ಟಾಗಿ ಸೇರಿ, ಹೆಚ್ಚಿನ ಜನರನ್ನು ವಿ.ಬಿ.ಐ.ಗೆ ಕರೆತರಬೇಕೆಂದು ನಾನು ಯುವಜನರಲ್ಲಿ ಕೇಳಿಕೊಳ್ಳುತ್ತೇನೆ. ಮುಂಬರುವ ೩-೪ ವರ್ಷಗಳಲ್ಲಿ ಏನಾದರೂ ದೊಡ್ಡದನ್ನು ಮಾಡುವುದರ ಬಗ್ಗೆ ನಾವೆಲ್ಲರೂ ಯೋಚಿಸಬೇಕು. ನೀವೆಲ್ಲರೂ ನಾನು ಹೇಳುವುದನ್ನು ಒಪ್ಪುತ್ತೀರಾ? ನೀವೆಲ್ಲರೂ ಸೇರುವಿರಾ? ಹಾಗೆ ಮಾಡಿ.

ಪ್ರಶ್ನೆ: ಗುರುದೇವ, ಎಲ್ಲವೂ ಪೂರ್ವನಿರ್ಧಾರಿತವಾದರೆ, ಆಗ ಕ್ರಿಯೆ ಅಥವಾ ಸ್ವ-ಇಚ್ಛೆಯ ಪ್ರಯೋಜನವೇನು?

ಶ್ರೀ ಶ್ರೀ ರವಿ ಶಂಕರ್: ಎಲ್ಲವೂ ಪೂರ್ವನಿರ್ಧಾರಿತವಾಗಿದ್ದರೆ, ಆಗ ಸ್ವ-ಇಚ್ಛೆಯ ಉಪಯೋಗವೇ ಇರುತ್ತಿರಲಿಲ್ಲ. ಇಲ್ಲ, ನೀನು ನಿನ್ನ ವಿವೇಕವನ್ನು ಬಳಸಬೇಕು ಮತ್ತು ಕೆಲವು ವಿಷಯಗಳು ಪೂರ್ವನಿರ್ಧಾರಿತವಾದವು, ಆದರೆ ಸರಿಯಾದ ಆಯ್ಕೆಗಳನ್ನು ಮಾಡುವ ಹಾಗೂ ಒಂದು ನ್ಯಾಯದ ರೀತಿಯಲ್ಲಿ ಕೆಲಸ ಮಾಡುವ ಸ್ವೇಚ್ಛೆಯನ್ನು ಕೂಡಾ ನಿನಗೆ ಕೊಡಲಾಗಿದೆಯೆಂಬುದನ್ನು ನೀನು ಅರ್ಥಮಾಡಿಕೊಳ್ಳಬೇಕು. ಎಲ್ಲಿ ನೀನು ನಿನ್ನ ವಿವೇಕವನ್ನು ಬಳಸಲು ಸಾಧ್ಯವಿಲ್ಲವೋ ಅಲ್ಲಿ, ನಿರ್ದಿಷ್ಟ ವಿಷಯಗಳನ್ನು ಮಾಡುವುದಕ್ಕಾಗಿ ನಿಗದಿತ ದಾರಿಗಳಿವೆ. ಜೀವನವು ವಿಧಿ ಮತ್ತು ಸ್ವೇಚ್ಛೆ ಇವುಗಳೆರಡರ ಒಂದು ಸಂಯೋಗವಾಗಿದೆ. ಅದರಲ್ಲಿ ಕೆಲವನ್ನು ಬರೆಯಲಾಗಿದೆ (ಪೂರ್ವನಿರ್ಧಾರಿತ), ಆದರೆ ನೀನು ವರ್ತಿಸುವ ರೀತಿಯನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ಕೂಡಾ ನಿನಗೆ ನೀಡಲಾಗಿದೆ.

ಈ ಸತ್ಸಂಗದ ಪ್ರಶ್ನೋತ್ತರ ಮಾಲಿಕೆಯ ’ಸ್ಲೈಡ್ ಷೋ’ಗೆ ಲಿಂಕ್: http://goo.gl/j8mzqu