ಗುರುವಾರ, ಮಾರ್ಚ್ 25, 2010

ಸಂರಕ್ಷಣೆ ಮತ್ತು ಪರಿವರ್ತನೆ

ಬುಧವಾರ ಮಾರ್ಚ್ ೨೫, ೨೦೦೯

ಯಾವುದು ತಾತ್ಕಾಲಿಕವಾದುದೋ, ಸಣ್ಣದೋ, ಯಾವುದು ನಾಶವಾಗುತ್ತದೆಯೋ ಅದಕ್ಕೆ ರಕ್ಷಣೆ ಬೇಕು. ಬದಲಾಗಿ ಶಾಶ್ವತವಾದ, ದೊಡ್ಡ ಅಥವಾ ವಿಶಾಲವಾದ ಸಂಗತಿಗಳಿಗೆ ರಕ್ಷಣೆಯ ಅಗತ್ಯವಿಲ್ಲ.

ನಿಮ್ಮ ದೇಹಕ್ಕೆ ರಕ್ಷಣೆ ಬೇಕು; ಆತ್ಮಕ್ಕಲ್ಲ.

ನಿಮ್ಮ ಮನಸ್ಸಿಗೆ ರಕ್ಷಣೆ ಬೇಕು; ನಿಮ್ಮ ಆತ್ಮಕ್ಕಲ್ಲ.

ಸಂರಕ್ಷಣೆ ಎಂದರೇನು? ವಸ್ತು ಈಗ ಯಾವ ಸ್ಥಿತಿಯಲ್ಲಿದೆಯೋ ಅದೇ ಸ್ಥಿತಿಯಲ್ಲಿ ಇನ್ನೂ ಹೆಚ್ಚು ಕಾಲ ಅದು ಇರುವಂತೆ ನೋಡಿಕೊಳ್ಳುವುದು. ಸಂರಕ್ಷಣೆ ಪರಿವರ್ತನೆಯನ್ನು ತಡೆಹಿಡಿಯುತ್ತದೆ. ಸಂರಕ್ಷಿತ ವಾತಾವರಣದಲ್ಲಿ ಪರಿವರ್ತನೆ ಸಾಧ್ಯವಿಲ್ಲ. ಬೀಜವು ಮೊಳೆತು ಸಸಿಯಾಗಲು ಸಂರಕ್ಷಣೆ ಬೇಕು. ಸಸಿಯು ಬೆಳೆದು ಮರವಾಗಲು ಸಂರಕ್ಷಣೆ ಬೇಕು. ಸಂರಕ್ಷಣೆಯಿಂದ ಪರಿವರ್ತನೆಗೆ ಸಹಾಯ ದೊರೆಯಲೂ ಬಹುದು, ವಿಘ್ನ ಉಂಟಾಗಲೂ ಬಹುದು. ರಕ್ಷಣೆಯ ಜವಾಬ್ದಾರಿ ಹೊತ್ತವರಿಗೆ ಯಾವ ಮಟ್ಟದಲ್ಲಿ ರಕ್ಷಣೆ ಒದಗಿಸಬೇಕೆಂಬ ಕಲ್ಪನೆ ಇರಬೇಕು.
ಸತ್ಯಕ್ಕೆ ರಕ್ಷಣೆಯ ಅಗತ್ಯವಿಲ್ಲ. ಸಂರಕ್ಷಣೆ ಹಾಗೂ ಪರಿವರ್ತನೆಗಳೆರಡೂ ಕಾಲ ಹಾಗೂ ಅವಕಾಶದ ಪರಿಮಿತಿಗೆ ಒಳಪಟ್ಟಿರುತ್ತವೆ. ಕಾಲವನ್ನು ಅತಿಕ್ರಮಿಸಬೇಕಾದರೆ ಈ ನಿಯಮಗಳನ್ನು ಗೌರವಿಸಬೇಕಾಗುತ್ತದೆ.
ನಾವು ಸಂರಕ್ಷಣೆಗೊಳಗಾದವರು, ಅದೇ ಸಮಯಕ್ಕೆ ಪರಿವರ್ತನೆಗೆ ಸಹ ಒಳಗಾದವರು. ಇದೇ ಹರಿ, ಇದೇ ಹರ. ಹರಿಯು ಸಂರಕ್ಷಕ, ಹರನು ಪರಿವರ್ತನಕಾರಕ.

ಸಂರಕ್ಷಣೆಯು ನಾಶವಾಗತಕ್ಕಂತಹ ವಸ್ತುಗಳಿಗೆ ಸಂಬಂಧಿಸಿದ್ದು ಕಾಲಕ್ಕೆ ಅಧೀನವಾಗಿದೆ. ಒಬ್ಬ ವೈದ್ಯ  ಎಷ್ಟು ಸಮಯದವರೆಗೆ ಕಾಪಾಡಬಲ್ಲ? ಅವನು ಎಲ್ಲಿಯವರೆಗೆ ಗುಣಪಡಿಸಬಲ್ಲ? ಶಾಶ್ವತವಾಗಿಯಂತೂ ಅಲ್ಲ. ಶಾಂತಿ ಹಾಗೂ ಸಂತೋಷಗಳಿಗೆ ಸಂರಕ್ಷಣೆಯ ಅಗತ್ಯವಿಲ್ಲ. ಏಕೆಂದರೆ ಅವು ತಾತ್ಕಾಲಿಕವಾದವುಗಳಲ್ಲ.